ಯೆಹೋವನು ಕಾಲಗಳನ್ನೂ ಋತುಗಳನ್ನೂ ಬದಲಾಯಿಸುತ್ತಾನೆ—ರೊಮೇನಿಯದಲ್ಲಿ
ಬದಲಾವಣೆಯ ಗಾಳಿಯು 1989 ರಲ್ಲಿ ಇಡೀ ಪೂರ್ವ ಯೂರೋಪಿನಲ್ಲಿ ಬೀಸಿತು. ಕೆಲವು ತಿಂಗಳುಗಳೊಳಗೆ, ಅಜೇಯ ಕೋಟೆಗಳಂತೆ ಒಮ್ಮೆ ನಿಂತಿದ್ದ ಸರಕಾರಗಳು ಚದುರಾಟದ ಕಾಯಿಗಳಂತೆ ಉರುಳಿದವು. ರಾಜಕೀಯ ಪರಿವರ್ತನೆಯ ಜೊತೆಗೆ, ಸಾಮಾಜಿಕ, ಆರ್ಥಿಕ, ಮತ್ತು ಯೆಹೋವನ ಸಾಕ್ಷಿಗಳಿಗೆ ಹೆಚ್ಚಾಗಿ ಆಸಕ್ತಿಯಿರುವ, ಧಾರ್ಮಿಕ ಬದಲಾವಣೆಗಳು ಬಂದವು. ದೇಶದ ತರುವಾಯ ದೇಶದಲ್ಲಿ, ಯೆಹೋವನ ಸಾಕ್ಷಿಗಳಿಗೆ ಅಧಿಕೃತ ಮನ್ನಣೆಯು ಕೊಡಲಾಯಿತು, ಮತ್ತು ತಮ್ಮ ಧಾರ್ಮಿಕ ಚಟುವಟಿಕೆಯನ್ನು ಮುಂದುವರಿಸಲು ಅವರಿಗೆ ಸ್ವಾತಂತ್ರ್ಯವನ್ನು ಪುನಃಸ್ಥಾಪಿಸಲಾಯಿತು.
ಆದರೂ ರೊಮೇನಿಯದಲ್ಲಿ ವಿಷಯಗಳು ಭಿನ್ನವಾಗಿರುವವು ಎಂದು ತೋರಿತು. ಸರಕಾರಕ್ಕೆ ಜನರ ಮೇಲೆ ಎಷ್ಟೊಂದು ಬಿಗಿ ಹಿಡಿತವಿತ್ತೆಂದರೆ, ಬದಲಾವಣೆಯ ಗಾಳಿಗಳು ಕಡಮೆ ಪ್ರಭಾವವನ್ನು ಬೀರುವವೆಂದು ತೋರಿತು. ಅಲ್ಲಿಯ ಯೆಹೋವನ ಸಾಕ್ಷಿಗಳು ಬೇರೆ ಪೂರ್ವ ಯೂರೋಪಿಯನ್ ದೇಶಗಳಲ್ಲಿ ನಡೆಯುತ್ತಿದ್ದ ಸಂಗತಿಗಳ ಕುರಿತು ಕೇಳಿದಾಗ, ‘ಹರ್ಮಗೆದೋನಿನ ಮುಂಚೆ ನಾವು ಎಂದಾದರೂ ಆರಾಧನೆಯ ಸ್ವಾತಂತ್ರ್ಯವನ್ನು ಆನಂದಿಸುವೆವೊ?’, ಎಂದು ತಮ್ಮನ್ನು ತಾವೇ ಕೇಳಿಕೊಂಡರು. ಅವರ ಹೃದಯಗಳು, ತಾವು ತಮ್ಮ ಆತ್ಮಿಕ ಸಹೋದರ ಸಹೋದರಿಯರ ಜೊತೆಗೆ ಕ್ರಿಸ್ತೀಯ ಕೂಟಗಳಲ್ಲಿ ಕೂಡಿಬರುವ, ಸುವಾರ್ತೆಯನ್ನು ಬಹಿರಂಗವಾಗಿ ಸಾರುವ, ಮತ್ತು ತಮ್ಮ ಬೈಬಲ್ ಪ್ರಕಾಶನಗಳನ್ನು ಎಲ್ಲಾ ಸಮಯ ಅಡಗಿಸದೆ, ಮುಚ್ಚುಮರೆಯಿಲ್ಲದೆ ಅಭ್ಯಾಸಿಸುವ ಸಮಯಕ್ಕಾಗಿ ಹಂಬಲಿಸಿದವು. ಅದೆಲ್ಲವು ಕೇವಲ ಒಂದು ಸ್ವಪ್ನದಂತೆ ತೋರಿತು.
ಆಮೇಲೆ ಸ್ವಪ್ನವು ನಿಜವಾಯಿತು! ಅದು ಡಿಸೆಂಬರ್ 1989 ರಲ್ಲಿ ಸಂಭವಿಸಿತು. ಎಲ್ಲರ ಆಶ್ಚರ್ಯಕ್ಕೆ, ಚಾಷೆಸ್ಕೊ ಆಳಿಕೆಯು ಅನಿರೀಕ್ಷಿತವಾಗಿ ಉರುಳಿತು. ಇದ್ದಕ್ಕಿದ್ದಹಾಗೆ, ನಮ್ಮ ಸಹೋದರರು ಬಿಡುಗಡೆಯನ್ನು ಕಂಡರು. ಎಪ್ರಿಲ್ 9, 1990 ರಂದು, ರೊಮೇನಿಯದಲ್ಲಿ ಯೆಹೋವನ ಸಾಕ್ಷಿಗಳು ಒಂದು ಧಾರ್ಮಿಕ ಸಂಸ್ಥೆಯಾಗಿ ಶಾಸನಬದ್ಧವಾಗಿ ಅಂಗೀಕೃತರಾದರು. ಯೆಹೋವನು ಅಲ್ಲಿರುವ 17,000 ಸಕ್ರಿಯ ಸಾಕ್ಷಿಗಳಿಗೆ ಕಾಲ ಮತ್ತು ಋತುಗಳನ್ನು ಮಾರ್ಪಡಿಸಿದ್ದನು.—ದಾನಿಯೇಲ 2:21 ಹೋಲಿಸಿ.
ಒಂದು ದೀರ್ಘಾವಧಿಯ ಇತಿಹಾಸ
ಇಸವಿ 1911 ರಲ್ಲಿ, ಕ್ಯಾರಲ್ ಸಾಬೊ ಮತ್ತು ಯೊಸಿಫ್ ಕಿಸ್, ತಾವು ಬೈಬಲಿನ ಸತ್ಯಗಳನ್ನು ಕಲಿತು ತಮ್ಮ ಜೀವಿತಗಳನ್ನು ಯೆಹೋವನಿಗೆ, ಆತನ ಚಿತ್ತವನ್ನು ಮಾಡಲು ಸಮರ್ಪಿಸಿಕೊಂಡಂಥ ಅಮೆರಿಕವನ್ನು ಬಿಟ್ಟು ರೊಮೇನಿಯಗೆ ಹಿಂದಿರುಗಿದರು. ಅವರು ತಮ್ಮ ಸಹದೇಶೀಯರೊಡನೆ ಸುವಾರ್ತೆಯನ್ನು ಹಂಚಲು ಬಯಸಿದರು. ರೊಮೇನಿಯಕ್ಕೆ ಬಂದೊಡನೆಯೆ, ಅವರು ತಕ್ಷಣ ಸಾರಲು ಆರಂಭಿಸಿದರು. ಜಾಗತಿಕ ಯುದ್ಧ I ಆರಂಭವಾದಾಗ, ಅವರು ಏನು ಮಾಡುತ್ತಿದ್ದರೋ ಅದಕ್ಕಾಗಿ ಅವರು ಸೆರೆಹಿಡಿಯಲ್ಪಟ್ಟರು. ಆದರೂ, ಅವರು ಬಿತ್ತಿದಂತಹ ರಾಜ್ಯದ ಬೀಜಗಳು ಫಲವನ್ನು ಕೊಡಲಾರಂಭಿಸಿದವು. ಇಸವಿ 1920 ರೊಳಗಾಗಿ, ಕಾರ್ಯವು ಪುನಃ ಸಂಘಟಿತವಾದಾಗ, ರೊಮೇನಿಯದಲ್ಲಿ ಸುಮಾರು 1,800 ರಾಜ್ಯ ಪ್ರಚಾರಕರು ಇದ್ದರು.
ಆ ಸಮಯದೊಳಗಾಗಿ ಬಾಲ್ಕನ್ನಲ್ಲಿ ಉರಿಯುತ್ತಿದ ಕ್ರಾಂತಿಕಾರಕ ಆತ್ಮವು ರೊಮೇನಿಯದಲ್ಲಿ ಹೆಚ್ಚೆಚ್ಚಾಗಿ ಕಾಣತೊಡಗಿತು, ಮತ್ತು ಗಲಭೆಗಳು ಎಲ್ಲೆಡೆಯೂ ಹಬ್ಬಿದವು. ಕಠಿನ ಸಮಯಗಳಾದಾಗ್ಯೂ, ನಮ್ಮ ಆತ್ಮಿಕ ಸಹೋದರರು ಕೆಲಸವನ್ನು ಮುಂದುವರಿಸಿದರು. ವಾಚ್ ಟವರ್ ಸಂಸ್ಥೆಯು 1924 ರಲ್ಲಿ, ರೊಮೇನಿಯ, ಹಂಗೆರಿ, ಬಲ್ಗೇರಿಯಾ, ಯುಗೊಸ್ಲಾವಿಯಾ, ಮತ್ತು ಆ್ಯಲ್ಬೇನಿಯದಲ್ಲಿನ ಕೆಲಸವನ್ನು ನೋಡಿಕೊಳ್ಳಲು ಒಂದು ಕಚೇರಿಯನ್ನು ಕ್ಲೂಸ್ ನೆಪೋಕದಲ್ಲಿ, 26 ರೆಜೀನಾ ಮಾರಿಯಾ ಸ್ಟ್ರೀಟ್ನಲ್ಲಿ ತೆರೆಯಿತು.
ರಾಜಕೀಯ ಪರಿಸ್ಥಿತಿಯು ಬಹಳ ಬಿಗಿಯಾಯಿತು, ಮತ್ತು ಅಧಿಕಾರಿಗಳಿಂದ ಬರುವ ಕಷ್ಟಗಳ ಜೊತೆಗೆ, ಸಂಸ್ಥೆಯೊಳಗೂ ತೊಂದರೆಯಿತ್ತು. ಇಸವಿ 1930 ರ ವರ್ಷ ಪುಸ್ತಕ ವರದಿಸುವುದು: “ಸಂಸ್ಥೆಯು ಅಲ್ಲಿಗೆ ಕಳುಹಿಸಿದಂಥವನ ಅಪನಂಬಿಕೆಯ ಕಾರಣವಾಗಿ, ಗೆಳೆಯರು ಚೆದರಿ ಹೋಗಿದ್ದಾರೆ ಮತ್ತು ಅವರ ಭರವಸೆಗೆ ಬಹಳವಾಗಿ ಧಕ್ಕೆ ತಗಲಿದೆ. ಸಂಸ್ಥೆಯು ಆ ಸ್ಥಳದಲ್ಲಿ ಕೆಲಸವನ್ನು ಮತ್ತೆ ಪುನರುಜ್ಜೀವಗೊಳಿಸಲು ಕೆಲವೊಂದು ಅವಕಾಶವನ್ನು ಎದುರುನೋಡುತ್ತಿದೆಯಾದರೂ, ಸ್ಥಾನೀಯ ಅಧಿಕಾರಿಗಳು ಎಲ್ಲವನ್ನೂ ನಿಷೇಧಿಸುತ್ತಾರೆ, ಮತ್ತು ನಾವು ಕರ್ತನು ಒಂದು ಬಹು ಅನುಕೂಲವಾದ ಮಾರ್ಗವನ್ನು ತೆರೆಯುವ ವರೆಗೆ ಕಾಯಬೇಕು.” ತದನಂತರ, 1930 ರಲ್ಲಿ, ಮಾರ್ಟಿನ್ ಮಜರಾಶಿ ಎಂಬ, 1922 ರಲ್ಲಿ ದೀಕ್ಷಾಸ್ನಾನ ಪಡೆದ ಒಬ್ಬ ರೊಮೇನಿಯನ್ ಸಾಕ್ಷಿಯು, ಹೊಸ ಶಾಖಾ ಸೇವಕನಾಗಿ ನೇಮಕಗೊಂಡನು, ಮತ್ತು ಕಛೇರಿಯನ್ನು ಅನಂತರ 33 ಕ್ರಿಶಾನ ಸ್ಟ್ರೀಟ್, ಬುಕರೆಸ್ಟ್ಗೆ ಸ್ಥಳಾಂತರಗೊಳಿಸಲಾಯಿತು. ಒಂದು ದೀರ್ಘಾವಧಿಯ ಹೋರಾಟದ ಅನಂತರ, ಸಂಸ್ಥೆಯು ಕೊನೆಗೆ ರೊಮೇನಿಯದಲ್ಲಿ ಒಂದು ನ್ಯಾಯವಾದ ಸಂಸ್ಥೆಯಾಗಿ 1933 ರಲ್ಲಿ ದಾಖಲೆ ಪಡೆಯಿತು.
ತೊಂದರೆಗಳು ಮುಂದುವರಿದವು
ರೊಮೇನಿಯದಲ್ಲಿನ ಸಾಕ್ಷಿಗಳ ಮೇಲೆ ತೀಕ್ಷೈವಾದ ಪರೀಕ್ಷೆಗಳು ಬರುವುದು ಮುಂದುವರಿಯಿತು. ಇಸವಿ 1936 ರ ವರ್ಷ ಪುಸ್ತಕ ವರದಿಸುವುದು: “ನಿಸ್ಸಂದೇಹವಾಗಿ ಭೂಮಿಯ ಯಾವ ಭಾಗದಲ್ಲಿಯೂ ರೊಮೇನಿಯಕ್ಕಿಂತ, ಹೆಚ್ಚು ತೊಂದರೆಗಳಲ್ಲಿ ಸಹೋದರರು ಕೆಲಸ ಮಾಡುವದಿಲ್ಲ.” ಈ ಎಲ್ಲಾ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ, 1937 ರ ಸೇವಾ ವರದಿಗಳು, ರೊಮೇನಿಯದಲ್ಲಿ 856 ಪ್ರಚಾರಕರಿರುವ 75 ಸಭೆಗಳನ್ನು ಉಲ್ಲೇಖಿಸಿದವು. ಸ್ಮಾರಕಾಚರಣೆಯಲ್ಲಿ, 2,608 ಜನರು ಹಾಜರಿದ್ದರು.
ಜಾಗತಿಕ ಯುದ್ಧ II ಆರಂಭವಾದಾಗ, ರೊಮೇನಿಯ ಪ್ರಭಾವರಹಿತವಾಗಿ ಉಳಿಯಲಿಲ್ಲ. ಸಪ್ಟಂಬರ 1940 ರಲ್ಲಿ, ಜನರಲ್ ಯಾನ್ ಆಂಚೊನೆಸ್ಕೂ ಸರಕಾರದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡು ಹಿಟ್ಲರನಿಗೆ ಸಮಾನವಾದ ಒಂದು ಆಳಿಕೆಯನ್ನು ಪ್ರಾರಂಭಿಸಿದನು. ಭೀಕರ ಕೃತ್ಯಗಳು ಸರ್ವಸಾಮಾನ್ಯವಾಗಿದ್ದವು. ನಮ್ಮ ನೂರಾರು ಸಹೋದರರು ಸೆರೆಹಿಡಿಯಲ್ಪಟ್ಟರು, ಹೊಡೆಯಲ್ಪಟ್ಟರು, ಮತ್ತು ಹಿಂಸಿಸಲ್ಪಟ್ಟರು. ಸಹೋದರ ಮಜರಾಶಿಯನ್ನು ಸಪ್ಟಂಬರ 1942 ರಲ್ಲಿ ಬಂಧಿಸಿದರೂ, ಅವರು ಸೆರೆಮನೆಯಿಂದ ಟ್ರಾನ್ಸಿಲೇನ್ವಿಯದಲ್ಲಿ ಕೆಲಸವನ್ನು ಸಂಘಟಿಸಲು ಸಮರ್ಥರಾಗಿದ್ದರು.
ಹಿಟ್ಲರನ ಸೈನಿಕರು 1944 ರಲ್ಲಿ ಇಡೀ ದೇಶದ ಮೇಲೆ ದಾಳಿಮಾಡಿದಾಗ, ಹಿಂಸೆಯು ಮುಂದುವರಿಯಿತು. ನಾಜಿ ಆಳಿಕೆಯ ಕೆಳಗಿದ್ದ ಪರಿಸ್ಥಿತಿಯನ್ನು ಬೂಕರೆಸ್ಟ್ನ ಒಂದು ವರದಿಯು ಹೀಗೆ ವರ್ಣಿಸಿತು: “ಈ ದೇಶದ ಯೆಹೋವನ ಸಾಕ್ಷಿಗಳು ಬಹಳ ಭಯಂಕರವಾಗಿ ಹಿಂಸಿಸಲ್ಪಟ್ಟರು. ಕಮ್ಯೂನಿಸ್ಟರ ಜೊತೆಗೆ ಬಂಧಿಸಲ್ಪಟ್ಟು, ಕಮ್ಯೂನಿಸ್ಟರಿಗಿಂತ ಅತಿ ಕೀಳಾದವರೆಂದು ಹಿಟ್ಲರನನ್ನು ಬೆಂಬಲಿಸುವ ಪಾದ್ರಿಗಳಿಂದ ಆಪಾದಿತರಾಗಿ, ನಮ್ಮಲ್ಲಿ ಅನೇಕರಿಗೆ 25 ವರ್ಷಗಳ ಸೆರೆಮನೆವಾಸ, ಜೀವಾವಧಿಯ ಶಿಕ್ಷೆ, ಯಾ ಮರಣ ದಂಡನೆಯನ್ನು ವಿಧಿಸಲಾಯಿತು.”
ಕಟ್ಟಕಡೆಗೆ ಯುದ್ಧವು ಸಮಾಪ್ತಿಗೊಂಡಿತು, ಮತ್ತು ಜೂನ್ 1, 1945 ರಂದು, ಬೂಕರೆಸ್ಟ್ನಲ್ಲಿರುವ ಸಂಸ್ಥೆಯ ಕಚೇರಿಯು ಚಟುವಟಿಕೆಯನ್ನು ಪುನಃ ಆರಂಭಿಸಿತು. ಕಾಗದವನ್ನು ಪಡೆಯುವುದು ಕಷ್ಟಕರವಾಗಿದ್ದರೂ, ದೃಢ ನಿಷ್ಠೆಯುಳ್ಳ ಕೆಲಸಗಾರರು 8,60,000 ಕ್ಕಿಂತಲೂ ಹೆಚ್ಚು ಪುಸ್ತಿಕೆಗಳನ್ನೂ ಮತ್ತು ರೊಮೇನಿಯನ್ ಹಾಗೂ ಹಂಗೇರಿಯನ್ ಭಾಷೆಗಳಲ್ಲಿ ದ ವಾಚ್ಟವರ್ ನ 85,000 ಕ್ಕಿಂತಲೂ ಹೆಚ್ಚು ಪ್ರತಿಗಳನ್ನು ಮುದ್ರಿಸಿದರು. ಯೆಹೋವನು ಅವರ ಕಠಿನ ಪರಿಶ್ರಮವನ್ನು ಧಾರಾಳವಾಗಿ ಆಶೀರ್ವದಿಸಿದನು. ಇಸವಿ 1946 ರೊಳಗಾಗಿ ಸುಮಾರು 1,630 ಹೊಸಬರು ದೀಕ್ಷಾಸ್ನಾನವನ್ನು ಪಡೆದಿದ್ದರು. ಆ ವರ್ಷದ ಅತ್ಯುಜಲ್ವ ಸಂಗತಿಯು, ಬೂಕರೆಸ್ಟ್ನಲ್ಲಿ ಸೆಪ್ಟಂಬರ 28 ಮತ್ತು 29 ರಂದು ಜರುಗಿದ ರಾಷ್ಟ್ರೀಯ ಅಧಿವೇಶನವಾಗಿತ್ತು. ಪಾದ್ರಿವರ್ಗವು ಕೈಹಾಕಿ ಈ ಅಧಿವೇಶನವನ್ನು ನಿಲ್ಲಿಸಲು ತಮಗೆ ಸಾಧ್ಯವಾದದ್ದನ್ನು ಮಾಡಿದರೂ, ಅವರು ಸಫಲರಾಗಲಿಲ್ಲ, ಮತ್ತು ಸುಮಾರು 15,000 ಜನರು ಬಹಿರಂಗ ಭಾಷಣಕ್ಕೆ ಹಾಜರಾದರು. ರೊಮೇನಿಯದ ಸಹೋದರರಿಗೆ ಇಂಥ ಒಂದು ಅಧಿವೇಶನವನ್ನು ನಡೆಸಲು ಸಾಧ್ಯವಾದದ್ದು ಇದೇ ಮೊದಲ ಬಾರಿ.
ಸಂಸ್ಥೆಯು ಸ್ವಿಸ್ ಶಾಖೆಯಿಂದ ರೊಮೇನಿಯಕ್ಕೆ ಸಹೋದರ ಆಲ್ಫ್ರೆಟ್ ರೂಟಿಮಾನ್ರನ್ನು ಕಳುಹಿಸಿತು. ಆಗಸ್ಟ್ 1947 ರಲ್ಲಿ, ಮುಂದೆ ಏನು ಕಾದಿದೆಯೊ ಅದಕ್ಕೆ ಅವರನ್ನು ದೃಢಪಡಿಸಲು, 16 ಸ್ಥಳಗಳಲ್ಲಿ 4,500 ಕ್ಕಿಂತಲೂ ಹೆಚ್ಚು ಸಹೋದರರನ್ನು ಉದ್ದೇಶಿಸಿ ಮಾತಾಡಲು ಅವರಿಗೆ ಸಾಧ್ಯವಾಯಿತು. ಬೇಗನೆ ಒತ್ತಡಗಳು ಮತ್ತೆ ಸಾಕ್ಷಿಗಳ ಮೇಲೆ ಬರಲಿದ್ದವು, ಈ ಸಮಯ ಕಮ್ಯೂನಿಸ್ಟ್ ಆಳಿಕೆಯಿಂದ. ಫೆಬ್ರವರಿ 1948 ರಲ್ಲಿ ಅಧಿಕಾರಿಗಳು ನಮ್ಮ ಮುದ್ರಿಸುವ ಹಾಗೂ ಸಾರುವ ಚಟುವಟಿಕೆಯನ್ನು ಪ್ರತಿಬಂಧಿಸಿದರು. ಇದಾದಮೇಲೆ, ಆಗಸ್ಟ್ 1949 ರಲ್ಲಿ, 38 ಆಲ್ಯಾನ್ ಸ್ಟ್ರೀಟ್ನಲ್ಲಿದ್ದ ಕಚೇರಿಯ ಮೇಲೆ ದಾಳಿಮಾಡಲಾಯಿತು. ತರುವಾಯ ಸಹೋದರ ಮಜರಾಶಿಯನ್ನು ಸೇರಿಸಿ, ಅನೇಕ ಸಹೋದರರನ್ನು ಬಂಧಿಸಲಾಯಿತು. ಈ ಸಮಯ, ಸಾಮ್ರಾಜ್ಯವಾದಿಗಳೆಂದು ಆಪಾದಿಸಲ್ಪಟ್ಟು, ಅವರನ್ನು ಸೆರೆಮನೆಗಳಿಗೆ ಯಾ ಕಾರ್ಮಿಕ ಶಿಬಿರಗಳಿಗೆ ಕಳುಹಿಸಲಾಯಿತು. ಮುಂದಿನ 40 ವರ್ಷಗಳ ಕಾಲ, ಕೆಲಸವು ನಿಷೇಧಿಸಲ್ಪಟ್ಟಿತ್ತು, ಮತ್ತು ಯೆಹೋವನ ಸಾಕ್ಷಿಗಳು ಬಹಳ ಕಷ್ಟವನ್ನು ಅನುಭವಿಸಿದರು. ಸಂಸ್ಥೆಯೊಳಗೆ ಶತ್ರು ಪ್ರೇರಿತ ತೊಂದರೆಗಳು ಈ ಸಂಕಟಕ್ಕೆ ಹೆಚ್ಚನ್ನು ಕೂಡಿಸಿದವು. ಕೊನೆಗೆ, ಚಾಷೆಸ್ಕೂನ ಆಳಿಕೆಯು 1989 ರಲ್ಲಿ ಉರುಳಿತು, ಮತ್ತು ಅವರು ಸ್ವತಂತ್ರರಾದರು! ಈಗ ಅವರು ತಮ್ಮ ಸ್ವಾತಂತ್ರ್ಯದೊಂದಿಗೆ ಏನು ಮಾಡುವರು?
ಮತ್ತೆ ಬಹಿರಂಗವಾಗಿ ಸಾರುವುದು
ಸಾಕ್ಷಿಗಳು ಯಾವ ಸಮಯವನ್ನೂ ಹಾಳು ಮಾಡಲಿಲ್ಲ. ಅವರು ತತ್ಕ್ಷಣ ಮನೆಯಿಂದ ಮನೆಗೆ ಸಾರುವುದನ್ನು ಪ್ರಾರಂಭಿಸಿದರು. ಆದರೆ ಇದು ಅನೇಕ ವರ್ಷಗಳ ಕಾಲ ಧೈರ್ಯವಾಗಿ ಅನೌಪಚಾರಿಕ ಸಾಕ್ಷಿಕಾರ್ಯದ ಮೂಲಕ ಕೆಲಸವನ್ನು ಭೂಗತವಾಗಿ ನಡೆಸಿಕೊಂಡು ಹೋದವರಿಗೆ ಸುಲಭವಾಗಿರಲಿಲ್ಲ. ಅವರೀಗ ಬಹಿರಂಗವಾಗಿ ಸಾರಬಹುದಾದ್ದರಿಂದ ಗಾಬರಿಗೊಂಡರು. ಅವರಲ್ಲಿ ಅನೇಕರು ಇದನ್ನು ಮೊದಲು ಎಂದೂ ಮಾಡಿರಲಿಲ್ಲ, ಮತ್ತು ಅವರಲ್ಲಿ ಯಾರಾದರೂ ಮನೆಯಿಂದ ಮನೆಗೆ ಕೊನೆಯ ಬಾರಿ ಸಾರಿದ್ದು 1940 ಗಳ ಕೊನೆಯ ಭಾಗದಲ್ಲಿ. ಯಾವ ರೀತಿಯ ಫಲಿತಾಂಶಗಳನ್ನು ಅವರು ಪಡೆಯುತ್ತಿದ್ದಾರೆ? ನಾವು ನೋಡೋಣ.
ಆರಂಭಿಸಲು ಒಂದು ಸೂಕ್ತವಾದ ಸ್ಥಳವು, 25 ಲಕ್ಷ ನಿವಾಸಿಗಳಿರುವ ರಾಜಧಾನಿ, ಬೂಕರೆಸ್ಟ್ ಆಗಿದೆ. ಎರಡು ವರ್ಷಗಳ ಹಿಂದೆ, ನಗರದಲ್ಲಿ ಕೇವಲ ನಾಲ್ಕು ಸಭೆಗಳಿದ್ದವು. ಈಗ ಹತ್ತು ಸಭೆಗಳಿವೆ, ಮತ್ತು 1992 ರ ಸ್ಮಾರಕಾಚರಣೆಗೆ 2,100 ಕ್ಕಿಂತಲೂ ಹೆಚ್ಚಿನ ಜನರು ಬಂದರು. ಅನೇಕ ಪ್ರಗತಿಪರ ಮನೆ ಬೈಬಲ್ ಅಭ್ಯಾಸಗಳನ್ನು ನಡೆಸುವದರಿಂದ, ಕೆಲವು ಹೊಸ ಸಭೆಗಳು ಬೇಗನೆ ರೂಪುಗೊಳ್ಳಬಹುದು.
ದೇಶದ ನೈರುತ್ಯ ಭಾಗದಲ್ಲಿ, ಸುಮಾರು 3,00,000 ನಿವಾಸಿಗಳುಳ್ಳ ಒಂದು ನಗರವು ಕ್ರೈಯೋವಾವಾಗಿದೆ. ಇಸವಿ 1990 ರ ತನಕ, ಇಡೀ ನಗರದಲ್ಲಿ ಕೇವಲ ಸುಮಾರು 80 ಸಾಕ್ಷಿಗಳಿದ್ದರು. ಆ ಮೇಲೆ ಪಯನೀಯರ್ ಹುರುಪಿನ ಕಾರಣ ಕೆಲಸವು ಮುಂದೆ ಸಾಗಿತು. ಇಸವಿ 1992 ರಲ್ಲಿಯೇ, 74 ವ್ಯಕ್ತಿಗಳು ದೀಕ್ಷಾಸ್ನಾನವನ್ನು ಪಡೆದರು, ಮತ್ತು 150 ಕ್ಕಿಂತಲೂ ಅಧಿಕ ಬೈಬಲ್ ಅಭ್ಯಾಸಗಳು ನಡೆಸಲಾಗುತ್ತಿವೆ. ಒಂದು ರಾಜ್ಯ ಸಭಾಗೃಹಕ್ಕೆ ಸೂಕ್ತವಾದ ಸ್ಥಳಕ್ಕಾಗಿ 200 ಕ್ಕಿಂತಲೂ ಅಧಿಕ ಪ್ರಚಾರಕರು ಆತುರತೆಯಿಂದ ಎದುರು ನೋಡುತ್ತಿದ್ದಾರೆ.
ಟರ್ಗು ಮೂರೆಶ್ನಲ್ಲಿ, ಚರ್ಚಿನ ಪಟ್ಟಿಗಳಿಂದ ಹೆಸರನ್ನು ತೆಗೆದುಹಾಕಲು ಒಬ್ಬಾಕೆ ಸಾಕ್ಷಿ ಸಹೋದರಿ ಮತ್ತು ಇಬ್ಬರು ಸಹೋದರರು ಅರ್ತೊಡಾಕ್ಸ್ ಪಾದ್ರಿಯ ಬಳಿ ಹೋದರು. ಅವರ ಭೇಟಿಯ ಉದ್ದೇಶವನ್ನು ತಿಳಿದ ಮೇಲೆ, ಪಾದ್ರಿಯು ಅವರನ್ನು ಒಳಗೆ ಆಮಂತ್ರಿಸಿದನು ಮತ್ತು ಅವರೊಂದು ಉತ್ತಮ ಚರ್ಚೆಯಲ್ಲಿ ಪಾಲ್ಗೊಂಡರು. ಆ ಮೇಲೆ ಪಾದ್ರಿಯು ಹೇಳಿದ್ದು: “ನಾನು ನಿಮ್ಮ ಮೇಲೆ ಅಸೂಯೆ ಪಡುತ್ತೇನೆ, ಆದರೆ ತಪ್ಪಾದ ರೀತಿಯಲ್ಲಲ್ಲ. ನೀವು ಮಾಡುತ್ತಿರುವಂತಹ ಕೆಲಸವನ್ನು ನಾವು ಮಾಡುತ್ತಿರಬೇಕು. ಅರ್ತೊಡಾಕ್ಸ್ ಚರ್ಚ್ ಒಂದು ಮಲಗಿರುವ ದೈತ್ಯನಾಗಿರುವುದು ತುಂಬಾ ಕೀಳ್ಮಟ್ಟದ ವಿಷಯವಾಗಿದೆ”! ಅವನು ನೀವು ತ್ರಯೈಕ್ಯವನ್ನು ನಂಬಬೇಕೊ? ಎಂಬ ಬ್ರೋಷರನ್ನು ಮತ್ತು ಕಾವಲಿನಬುರುಜು ವಿನ ಒಂದು ಪ್ರತಿಯನ್ನು ಸ್ವೀಕರಿಸಿದನು. ತಾನು ಇನ್ನು ಮುಂದೆ “ಮಲಗಿರುವ ದೈತ್ಯ” ನಿಗೆ ಸೇರಿಲ್ಲವೆಂಬುದಕ್ಕೆ ಸಹೋದರಿಯು ಸಂತೋಷಿಸುತ್ತಾಳೆ.—ಪ್ರಕಟನೆ 18:4.
ಇಂದು ಸತ್ಯವನ್ನು ಕಲಿಯುವವರಲ್ಲಿ ಹೆಚ್ಚಿನವರು ಯುವ ಜನರೆಂಬುದು ಗಮನಾರ್ಹವಾದದ್ದು. ಯಾಕೆ? ವ್ಯಕ್ತವಾಗಿ ಅವರು ಸರಕಾರದ ಬದಲಾವಣೆಯಿಂದ ಹೆಚ್ಚನ್ನು ಅಪೇಕ್ಷಿಸಿದರು, ಆದರೆ ಅವರು ಭ್ರಾಂತಿ ನಿವಾರಣೆ ಹೊಂದಿದ್ದರು. ನಮ್ಮ ಸಮಸ್ಯೆಗಳಿಗೆ ನಿರಂತರವಾದ ಪರಿಹಾರವನ್ನು ಯೆಹೋವನ ರಾಜ್ಯವು ಮಾತ್ರ ತರುವುದೆಂದು ಕಲಿಯಲು ಅವರು ಆನಂದಿಸುತ್ತಾರೆ.—ಕೀರ್ತನೆ 146:3-5.
ದೊಡ್ಡ ವಿಷಯಗಳು ಚಿಕ್ಕ ಸ್ಥಳಗಳಲ್ಲಿ ಸಂಭವಿಸುತ್ತಿವೆ
ಉತ್ತರ ರೊಮೇನಿಯದಲ್ಲಿ, ಒಕೋಲಿಶ್ ಒಂದು ಚಿಕ್ಕ ಹಳ್ಳಿಯಾಗಿದೆ. ಇಸವಿ 1920 ರಲ್ಲಿ, ಪಿಂಟೇಅ ಮೊಯಿಸ ಎಂಬ ಹೆಸರುಳ್ಳ ಒಬ್ಬ ಮನುಷ್ಯನು, ತಾನು ಯುದ್ಧ ಬಂದಿಯಾಗಿ ತೆಗೆದು ಕೊಂಡು ಹೋಗಲ್ಪಟ್ಟ ರಷ್ಯನ್ ಯುದ್ಧ ಭೂಮಿಯಿಂದ ಹಿಂದಿರುಗಿದನು. ಅವನು ಮೊದಲೊಬ್ಬ ಕ್ಯಾತೊಲಿಕನಾಗಿದ್ದನು ಆದರೆ ಅವನ ಹಿಂದಿರುಗುವಿಕೆಯ ಮುಂಚೆ, ಬ್ಯಾಪ್ಟಿಸ್ಟ್ ಚರ್ಚಿನ ಸದಸ್ಯನಾಗಿದ್ದನು. ಮೂರು ವಾರಗಳ ಅನಂತರ, ಆಗ ಬೈಬಲ್ ವಿದ್ಯಾರ್ಥಿಗಳೆಂದು ಗುರುತಿಸಲ್ಪಡುತ್ತಿದ್ದ ಯೆಹೋವನ ಸಾಕ್ಷಿಗಳು, ಅವನನ್ನು ಭೇಟಿಯಾದರು. ಆ ಭೇಟಿಯ ಅನಂತರ, ಅವನು ಘೋಷಿಸಿದ್ದು: “ನಾನೀಗ ದೇವರ ಬಗ್ಗೆ ಸತ್ಯವನ್ನು ಕಂಡುಕೊಂಡಿದ್ದೇನೆ!” ಇಸವಿ 1924 ರೊಳಗೆ ಒಕೊಲೀಶ್ನಲ್ಲಿ 35 ಜನರ ಒಂದು ಗುಂಪಿತ್ತು.
ಇಂದು, 473 ಸ್ಥಳೀಯ ಜನಸಂಖ್ಯೆಯಲ್ಲಿ, 170 ರಾಜ್ಯ ಪ್ರಚಾರಕರು ಅಲ್ಲಿದ್ದಾರೆ. ಪ್ರತಿ ಪ್ರಚಾರಕನಿಗೆ ತನ್ನ ಟೆರಿಟೊರಿಯಾಗಿ ಸುಮಾರು ಎರಡು ಮನೆಗಳ ನೇಮಕವಿದೆ, ಮತ್ತು ಅವರು ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಕೂಡ ಕೆಲಸ ಮಾಡುತ್ತಾರೆ. ಆದರೂ, ಅವರು ಆಶಾವಾದಿಗಳಾಗಿದ್ದಾರೆ. ಅವರು 400 ಜನರು ಕುಳಿತುಕೊಳ್ಳುವ ಒಂದು ಸುಂದರ ರಾಜ್ಯಗೃಹವನ್ನು ಈಗ ತಾನೇ ಕಟ್ಟಿದರು. ಎಲ್ಲಾ ಕೆಲಸವು ಸ್ಥಳೀಯ ಸಾಕ್ಷಿಗಳಿಂದ ಮಾಡಲಾಯಿತು.
ವಾಲಿಯ ಲಾರ್ಗವು 1914 ರಲ್ಲಿ ಸಹೋದರ ಸಾಬೊ ಹಾಗೂ ಕಿಸ್ ನೆಲಸಿದ ಸ್ಥಳವಾಗಿದೆ. ಇಸವಿ 1991 ರಲ್ಲಿ, ಅದರ 3,700 ನಿವಾಸಿಗಳಲ್ಲಿ, ಎಂಟು ಸಭೆಗಳು ಮತ್ತು 582 ರಾಜ್ಯ ಪ್ರಚಾರಕರು ಇದ್ದರು. ಇಸವಿ 1992 ರ ಸ್ಮಾರಕಾಚರಣೆಯಲ್ಲಿ, 1,082 ಜನರು ಹಾಜರಿದ್ದರು—ಈ ಕಣಿವೆಯ 3 ವ್ಯಕ್ತಿಗಳಲ್ಲಿ ಸುಮಾರು ಒಬ್ಬನು.
ವಿಶೇಷ ಪಯನೀಯರರು ದಾರಿಯನ್ನು ಸಿದ್ಧಪಡಿಸುತ್ತಾರೆ
ವಿಶೇಷ ಪಯನೀಯರರು ಸುಸಮಾಚಾರವನ್ನು ಅತಿ ಮೂಲೆಯಲ್ಲಿರುವ ಪ್ರದೇಶಗಳ ಜನರಿಗೆ ತೆಗೆದುಕೊಂಡು ಹೋಗುವುದರಲ್ಲಿ ಒಂದು ದೊಡ್ಡ ಪಾತ್ರವನ್ನು ವಹಿಸುತ್ತಾರೆ. ಸಾರುವ ಸ್ವಾತಂತ್ರ್ಯ ಕೊಡಲಾದ ಕೂಡಲೆ, ಯಾನೆಲ್ ಆಲ್ಬಾನ್ ಎರಡು ಪಟ್ಟಣಗಳಲ್ಲಿ, ಪ್ರತಿ ವಾರ ಎರಡು ದಿನಗಳನ್ನು ಆರ್ಷಾವದಲ್ಲಿ ಮತ್ತು ಐದು ದಿನಗಳನ್ನು ಟರ್ನೂ ಸೆವೆರಿನ್ನಲ್ಲಿ ಕಳೆಯುತ್ತಾ ಕೆಲಸವನ್ನು ಆರಂಭಿಸಿದನು.
ಯಾನೆಲ್ ಅಲ್ಲಿಗೆ ತಲುಪಿದಾಗ ಆರ್ಷಾವದಲ್ಲಿ ಸಾಕ್ಷಿಗಳಿರಲಿಲ್ಲ. ಪ್ರಥಮ ವಾರದಲ್ಲಿ, ಅವನು ಒಬ್ಬ 14 ವರ್ಷ ವಯಸ್ಸಿನ ಹುಡುಗನೊಡನೆ ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಿದನು. ಹುಡುಗನು ಎರಡು ತಿಂಗಳುಗಳಲ್ಲಿ ಎಷ್ಟೊಂದು ಬದಲಾವಣೆಗಳನ್ನು ಮಾಡಿದನೆಂದರೆ ಒಬ್ಬ ಮಿತ್ರನು ಹಾಗೂ ಒಬ್ಬ ನೆರೆಯವನು ಕೂಡ ಅಭ್ಯಾಸಿಸಲು ಆರಂಭಿಸಿದರು. ಕ್ಯಾತೊಲಿಕ್ ನೆರೆಯವನಾಗಿದ್ದ, ರೋಲಂಟ್, ವಿಸ್ಮಯಕರ ಪ್ರಗತಿಯನ್ನು ಮಾಡಿದನು. ಕೇವಲ ಒಂದುವರೆ ತಿಂಗಳಿನ ಅನಂತರ, ಅವನು ಸಾರುವ ಕಾರ್ಯದಲ್ಲಿ ಯಾನೆಲ್ನ ಜೊತೆ ಒಡಗೂಡಿ ಹೋದನು, ಮತ್ತು ಐದು ತಿಂಗಳುಗಳಲ್ಲಿ ದೀಕ್ಷಾಸ್ನಾನವನ್ನು ಪಡೆದನು. ಅದೇ ಕ್ಷಣ ಅವನು ಪೂರ್ಣ ಸಮಯದ ಸೇವೆಯನ್ನು ಪ್ರವೇಶಿಸಿದನು. ಅವನ ತಾಯಿಯು ಕೂಡ ಅಭ್ಯಾಸಿಸಲು ಆರಂಭಿಸಿದರು ಮತ್ತು 1992 ರ “ಬೆಳಕು ವಾಹಕರು” ಜಿಲ್ಲಾ ಅಧಿವೇಶನದಲ್ಲಿ ದೀಕ್ಷಾಸ್ನಾನ ಪಡೆದರು. ಈಗ ಆರ್ಷಾವದಲ್ಲಿ ಹತ್ತು ಪ್ರಚಾರಕರು ಇದ್ದಾರೆ ಮತ್ತು ಅವರು 30 ಮನೆ ಬೈಬಲ್ ಅಭ್ಯಾಸಗಳನ್ನು ನಡೆಸುತ್ತಾರೆ.
ಯಾನೆಲ್ ಎಲ್ಲಿ ತಂಗಿದ್ದನೋ ಆ ಹೋಟಲಿನ ರಿಸೆಪ್ಷನಿಸ್ಟ್ ಆಗಿದ್ದ ಒಬ್ಬ ವ್ಯಕ್ತಿಯು, ಟರ್ನೂ ಸೆವೆರಿನ್ನಲ್ಲಿ ಸತ್ಯವನ್ನು ಸ್ವೀಕರಿಸಿದವರಲ್ಲಿ ಪ್ರಥಮನು. ಎರಡು ತಿಂಗಳುಗಳ ಅನಂತರ ಆ ಮನುಷ್ಯನು ದೀಕ್ಷಾಸ್ನಾನ ಪಡೆಯದ ಪ್ರಚಾರಕನಾದನು ಮತ್ತು ಮೂರು ತಿಂಗಳುಗಳಲ್ಲಿ ದೀಕ್ಷಾಸ್ನಾನವನ್ನು ಪಡೆದನು. ಈಗ ಅವನು ಅಲ್ಲಿ ಒಟ್ಟು 84 ಮನೆ ಬೈಬಲ್ ಅಭ್ಯಾಸಗಳನ್ನು ನಡೆಸುವ 32 ಪ್ರಚಾರಕರಲ್ಲಿ ಒಬ್ಬನಾಗಿದ್ದಾನೆ.
ಇನ್ನೊಬ್ಬ ವಿಶೇಷ ಪಯನೀಯರ್, ಗಾಬ್ರಿಯೆಲಾ ಜೇಕಾ, ನಮ್ಮ ಕೆಲಸವು ನಿಷೇಧದ ಕೆಳಗಿರುವಾಗಲೂ ಕೂಡ ಕ್ರಮದ ಪಯನೀಯರಾಗಿ ಸೇವೆ ಸಲ್ಲಿಸಿದಳು. ಹೆಚ್ಚಿನ ಅವಶ್ಯಕತೆಯಿರುವಲ್ಲಿ ಕೆಲಸ ಮಾಡುವುದು ಅವಳ ಬಯಕೆಯಾಗಿತ್ತು. ಆಕೆಗೊಂದು ವಿಶಾಲವಾದ ಟೆರಿಟೊರಿಯನ್ನು ಕೊಡಲಾಯಿತು. ಆಸಕ್ತ ವ್ಯಕ್ತಿಗಳನ್ನು ಪುನಃ ಭೇಟಿಯಾಗಲು ಅವಳು ಕೆಲವೊಮ್ಮೆ 100 ರಿಂದ 160 ಕಿಲೊಮೀಟರ್ ಪ್ರಯಾಣ ಮಾಡುತ್ತಿದ್ದಳು. ಆಕೆಯು ಕೆಲಸ ಮಾಡಿದ ಒಂದು ಪಟ್ಟಣವು, ಕೇವಲ ನಾಲ್ಕು ಪ್ರಚಾರಕರಿದ್ದ ಮಾಟ್ರುವಾಗಿತ್ತು. “ಮಾಟ್ರುವಿನಲ್ಲಿ ಹೆಚ್ಚಿನ ಚಟುವಟಿಕೆಯ ಕಾರಣವಾಗಿ, ಪಾದ್ರಿಗಳು ಮತ್ತು ಇತರ ಧಾರ್ಮಿಕ ಗುಂಪುಗಳು ನಮ್ಮನ್ನು ವಿರೋಧಿಸಲು ಪ್ರಾರಂಭಿಸಿದರು,” ಎಂದು ವರದಿಸಿದಳವಳು. “ಅವರು ನಗರಸಭಾಧ್ಯಕ್ಷನನ್ನು ಮತ್ತು ಪೋಲಿಸರನ್ನು, ನನಗೆ ಸ್ಥಳಕೊಡುತ್ತಿದ್ದ ಕುಟುಂಬಗಳ ಮೇಲೆ ಒತ್ತಡವನ್ನು ಹಾಕುವಂತೆ ಪ್ರಭಾವಿಸಿದರು. ಅವರು ನನ್ನನ್ನು ಹೊರಗೆ ಹಾಕಿದರು, ಆದುದರಿಂದ ಸುಮಾರು ಪ್ರತಿ ಎರಡು ತಿಂಗಳಿಗೊಮ್ಮೆ, ನಾನು ತಂಗಲಿಕ್ಕಾಗಿ ಒಂದು ಸ್ಥಳವನ್ನು ಹುಡುಕಬೇಕಿತ್ತು.”
ತಾನು ಧರ್ಮದಲ್ಲಿಯಾಗಲಿ ಬೈಬಲಿನಲ್ಲಿಯಾಗಲಿ ಆಸಕ್ತಳಲ್ಲವೆಂದು ಹೇಳಿದ ಒಬ್ಬಾಕೆ ನಾಸ್ತಿಕಳೊಡನೆ, ಆರ್ಷಾವದಲ್ಲಿ ಒಂದು ಅಭ್ಯಾಸವನ್ನು ಗಾಬ್ರಿಯೇಲಾ ಪ್ರಾರಂಭಿಸಿದಳು. ಆದರೆ ಅಭ್ಯಾಸದ ಕೇವಲ ನಾಲ್ಕು ತಿಂಗಳುಗಳ ಅನಂತರ, ಆ ಹೆಂಗುಸು ಬೈಬಲಿನ ಪರವಾಗಿ ವಾದಿಸ ತೊಡಗಿದಳು. ಆಕೆಯ ಗಂಡನು ಅವಳನ್ನು ರಾತ್ರಿಯಲ್ಲಿ ಹೊರ ತಳ್ಳಿ ಬೀಗಹಾಕಿದರೂ, ಆಕೆಯನ್ನು ವಿವಾಹ ವಿಚ್ಛೇದ ಮಾಡಲು ಯಾ ಕೊಲ್ಲಲು ಬೆದರಿಸಿದರೂ, ಅವಳು ತನ್ನ ಸಮಗ್ರತೆಯನ್ನು ಕಾಪಾಡಿಕೊಂಡಳು. ಆಕೆಯು ದೀಕ್ಷಾಸ್ನಾನ ಪಡೆಯುವ ಮುಂಚೆಯೇ, ಹತ್ತು ಬೈಬಲ್ ಅಭ್ಯಾಸಗಳನ್ನು ನಡೆಸಿದಳು.
ಮುಂದೆ ಅದ್ಭುತಕರವಾದ ಪ್ರತೀಕ್ಷೆಗಳು
ಆಗಸ್ಟ್ 1992 ರಲ್ಲಿ, ರೊಮೇನಿಯ 286 ಸಭೆಗಳಲ್ಲಿ 24,752 ಪ್ರಚಾರಕರ ಉಚ್ಚಾಂಕವನ್ನು ಮುಟ್ಟಿತು. ಸ್ಮಾರಕಾಚರಣೆಯ ಹಾಜರಿಯು 66,000 ಕ್ಕಿಂತಲೂ ಅಧಿಕವಾಗಿತ್ತು. ಬೂಕರೆಸ್ಟ್ನಲ್ಲಿರುವ ಸಣ್ಣ ಶಾಖಾ ಕಚೇರಿಯಲ್ಲಿ, ತಮ್ಮ ಸಹೋದರರ ಆತ್ಮಿಕ ಆವಶ್ಯಕತೆಗಳನ್ನು ನೋಡಿಕೊಳ್ಳಲು 17 ಕೆಲಸಗಾರರು ತಮಗೆ ಸಾಧ್ಯವಾದದ್ದನ್ನು ಮಾಡುತ್ತಿದ್ದಾರೆ. ಅವರು ಇನ್ನು ಸ್ವಲ್ಪ ಕಾಲದಲ್ಲಿಯೇ ಒಂದು ದೊಡ್ಡ ಶಾಖೆಯ ನಿರ್ಮಾಣ ಕಾರ್ಯವು ಆರಂಭವಾಗುವುದನ್ನು ಎದುರುನೋಡುತ್ತಿದ್ದಾರೆ.
ರೊಮೇನಿಯದಲ್ಲಿರುವ ಯೆಹೋವನ ಸಾಕ್ಷಿಗಳು ಕಳೆದ ಕೆಲವು ವರ್ಷಗಳಲ್ಲಿ ನಡೆದ ಎಲ್ಲಾ ತೀವ್ರ ಬದಲಾವಣೆಗಳಿಂದ ಬೆರಗಾಗದೆ ಇರಲು ಸಾಧ್ಯವಿಲ್ಲ. ಯೆಹೋವ ದೇವರ ಬದಲಾಗದ ಉದ್ದೇಶ ಹಾಗೂ ಆತನ ಸರಿಯಾದ ಜ್ಞಾನಕ್ಕೆ ಜನರನ್ನು ಮಾರ್ಗದರ್ಶಿಸುವ ಮತ್ತು ಆತನ ಹೆಸರನ್ನು ಧರಿಸಿರುವ ಅಂತಾರಾಷ್ಟ್ರೀಯ ಸಭೆಯ ಒಂದು ಭಾಗವಾಗಿರಲು ಅವರು ಆತನಿಗೆ ಕೃತಜ್ಞತೆಯುಳ್ಳವರಾಗಿದ್ದಾರೆ. ಯಾತನೆ ಮತ್ತು ಹಿಂಸೆಯ ಇಷ್ಟೊಂದು ವರ್ಷಗಳ ಅನಂತರವೂ, ಯೆಹೋವನು ನಿಜವಾಗಿಯೂ ಕಾಲ ಮತ್ತು ಋತುಗಳನ್ನು ರೊಮೇನಿಯದಲ್ಲಿ ಬದಲಾಯಿಸಿದ್ದಾನೆಂಬುದಕ್ಕೆ ಅವರು ಆತನಿಗೆ ಎಷ್ಟೊಂದು ಉಪಕಾರವುಳ್ಳವರಾಗಿದ್ದಾರೆ!
[ಪುಟ 23ರಲ್ಲಿರುವಚಿತ್ರ]
(For fully formatted text, see publication)
ಹಂಗೆರಿ
ರೊಮೇನಿಯ
ಬೂಕರೆಸ್ಟ್
ಕ್ಲೂಸ್ ನೆಪೋಕ
ಕ್ರೈಯೋವಾ
ಟರ್ಗು ಮೂರೆಶ್
ಆರ್ಷಾವ
ಟರ್ನೂ ಸೆವೆರಿನ್
ಮಾಟ್ರು
ಟುರ್ಡಾ
ಬಲ್ಗೇರಿಯ
[ಪುಟ 24,25 ರಲ್ಲಿರುವಚಿತ್ರಗಳು]
1. ಸುಮಾರು 700 ಸಹೋದರರು 1947 ರಲ್ಲಿ ಕಾಡುಗಳಲ್ಲಿ ಕೂಡಿಬಂದರು
2. ಇಸವಿ 1946 ರಲ್ಲಿ ಒಂದು ಸಾರ್ವಜನಿಕ ಭಾಷಣಕ್ಕಾಗಿ ಕರಪತ್ರ
3. ಇಸವಿ 1992 ರಲ್ಲಿ ಅಲ್ಬಾ ಯುಲಿಯಾನಲ್ಲಿ ಸಮ್ಮೇಳನ
4. ಇಂದು ಕ್ಲೂಸ್ ನೆಪೋಕದಲ್ಲಿ ಸಾಕ್ಷಿಕಾರ್ಯ
5. ಟುರ್ಡಾವಿನ ಬಳಿ ರಾಜ್ಯ ಸಭಾಗೃಹ
6. ಬೂಕರೆಸ್ಟ್ನಲ್ಲಿ ಬೆತೆಲ್ ಕುಟುಂಬ