ಸ್ವಸ್ಥ ಮನಸ್ಸುಳ್ಳವರಾಗಿರ್ರಿ—ಅಂತ್ಯವು ಹತ್ತಿರವಾಗಿದೆ
“ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದುದರಿಂದ ಸ್ವಸ್ಥ ಮನಸ್ಸುಳ್ಳವರಾಗಿರ್ರಿ, ಪ್ರಾರ್ಥನೆಯ ನೋಟದೊಂದಿಗೆ ಎಚ್ಚರವಾಗಿರ್ರಿ.”—1 ಪೇತ್ರ 4:7, NW.
1. (ಎ) ಒಬ್ಬ ಧಾರ್ಮಿಕ ಮುಖಂಡನು ಮತ್ತು ಅವನ ಅನುಯಾಯಿಗಳು ಯಾವ ನಿರಾಶೆಯನ್ನು ಅನುಭವಿಸಿದರು? (ಬಿ) ಕೆಲವು ನಿರೀಕ್ಷಣೆಗಳು ನೆರವೇರದಿರುವ ಕಾರಣ, ಯಾವ ಪ್ರಶ್ನೆಗಳು ಕೇಳಲ್ಪಡಬಹುದು?
“ಈ ರಾತ್ರಿಯ ಕೊನೆಯ ಪ್ರಾರ್ಥನೆಯ ಸಮಯದಲ್ಲಿ ದೇವರಿಂದ ಒಂದು ಕರೆಯು ನನಗೆ ಸಿಕ್ಕಿತು. ಆತನು—1,16,000 ವ್ಯಕ್ತಿಗಳು ಪರಲೋಕಕ್ಕೆ ಏರಿಹೋಗುವರೆಂದೂ ಮತ್ತು 37 ಲಕ್ಷ ಮೃತ ವಿಶ್ವಾಸಿಗಳ ಸಮಾಧಿಗಳು ಆಕಾಶದೆಡೆಗೆ ತೆರೆಯುವವೆಂದೂ ಹೇಳಿದನು.” ಹೀಗಂದದ್ದು ಮಿಶನ್ ಫಾರ್ದ ಕಮ್ಮಿಂಗ್ ಡೇಸ್ನ ಒಬ್ಬ ಮುಖಂಡನು, ಅವರ ಮುಂತಿಳಿಸಲ್ಪಟ್ಟ ಮುಯ್ಯಿತೀರಿಸುವ ದಿನವಾದ ಅಕ್ಟೋಬರ 28, 1992 ರ ಹಿಂದಿನ ಸಂಜೆಯಲ್ಲಿ. ಆದರೆ ಅಕ್ಟೋಬರ 29 ಆಗಮಿಸಿದಾಗ, ಒಬ್ಬನೇ ಒಬ್ಬನಾದರೂ ಪರಲೋಕಕ್ಕೇರಿ ಹೋಗಿರಲಿಲ್ಲ, ಮೃತರ ಯಾವ ಸಮಾಧಿಗಳಾದರೂ ತೆರೆದದ್ದೂ ಇಲ್ಲ. ಸ್ವರ್ಗೀಯ ಪರಮಾನಂದದಲ್ಲಿ ದಿಢೀರನೇ ತಕ್ಕೊಳ್ಳಲ್ಪಡುವ ಬದಲಿಗೆ, ಕೊರಿಯದಲ್ಲಿ ವಾಸಿಸುತ್ತಿದ್ದ ಆ ವಿನಾಶಕಾಲ ವಿಶ್ವಾಸಿಗಳು ಕೇವಲ ಇನ್ನೊಂದು ಸಾಮಾನ್ಯ ದಿನವು ಉದಯಿಸುವುದನ್ನು ಕಂಡರು. ವಿನಾಶಕಾಲದ ಗೆರೆಗಳು ಆಗಮಿಸಿದವು ಮತ್ತು ದಾಟಿಹೋದವು, ಆದರೆ ವಿನಾಶದ ಕಾಲಜ್ಞಾನ ನುಡಿಯುವವರು ಧೈರ್ಯಗೆಡದೆ ಇದ್ದಾರೆ. ಕ್ರೈಸ್ತರಾದರೋ ಏನು ಮಾಡಬೇಕು? ಅಂತ್ಯವು ಬಹು ತರ್ವೆಯಾಗಿ ಆಗಮಿಸುತ್ತದೆಂದು ನಂಬುವುದನ್ನು ಅವರು ನಿಲ್ಲಿಸಬೇಕೋ?
2. ಭವಿಷ್ಯತ್ತಿನ ಒಂದು ನ್ಯಾಯತೀರ್ಪಿನ ದಿನದ ವಿಚಾರವನ್ನು ಅಪೊಸ್ತಲರಿಗೆ ಪ್ರಸ್ತಾಪಿಸಿದವನು ಯಾರು ಮತ್ತು ಯಾವ ಪರಿಸ್ಥಿತಿಗಳ ಕೆಳಗೆ ಅವರು ಇದರ ಕುರಿತು ಕಲಿತರು?
2 ಉತ್ತರವಾಗಿ, ಯೇಸು ತನ್ನ ಶಿಷ್ಯರೊಂದಿಗೆ ಖಾಸಗಿಯಾಗಿ ಸಂಭಾಷಣೆ ಮಾಡುತ್ತಿದ್ದ ಸಂದರ್ಭವನ್ನು ನಾವು ನೆನಪಿಗೆ ತರೋಣ. ಅಲ್ಲಿ ಗಲಿಲಾಯ ಸಮುದ್ರದ ಈಶಾನ್ಯದಲ್ಲಿರುವ ಕೈಸರೈಯದ ಫಿಲಿಪ್ಪಿ ಪ್ರಾಂತ್ಯದಲ್ಲಿ, ಘನಗಂಭೀರ ಹೆರ್ಮೋನ್ ಪರ್ವತವು ಒದಗಿಸುವ ಮನಮುಟ್ಟುವ ಹಿನ್ನೆಲೆಯೊಂದಿಗೆ, ಅವನು ಮುಚ್ಚುಮರೆಯಿಲ್ಲದೆ ತಾನು ಕೊಲ್ಲಲ್ಪಡುವನೆಂದು ಹೇಳುವುದನ್ನು ಅವರು ಕೇಳಿದರು. (ಮತ್ತಾಯ 16:21) ಇತರ ಅನುದೇಗ್ವದ ಮಾತುಗಳು ಹಿಂಬಾಲಿಸಲಿದ್ದವು. ಶಿಷ್ಯತನವೆಂದರೆ ಎಡೆಬಿಡದ ಒಂದು ಸ್ವ-ತ್ಯಾಗದ ಜೀವನವನ್ನು ಜೀವಿಸುವುದೆಂದು ಅವರಿಗೆ ವಿವರಿಸಿದ ಬಳಿಕ, ಯೇಸು ಎಚ್ಚರಿಸುವುದು: “ಮನುಷ್ಯಕುಮಾರನು ತನ್ನ ತಂದೆಯ ಪ್ರಭಾವದೊಡನೆ ತನ್ನ ದೂತರ ಸಮೇತವಾಗಿ ಬರುವನು. ಆಗ ಅವನು ಒಬ್ಬೊಬ್ಬನಿಗೆ ಅವನವನ ನಡತೆಗೆ ತಕ್ಕ ಫಲವನ್ನು ಕೊಡುವನು.” (ಮತ್ತಾಯ 16:27) ಯೇಸು ಒಂದು ಭವಿಷ್ಯತ್ತಿನ ಬರೋಣದ ಕುರಿತು ಮಾತನಾಡಿದನು. ಈ ಸಂದರ್ಭದಲ್ಲಿಯಾದರೋ, ಅವನು ನ್ಯಾಯಾಧೀಶನಾಗಿರುವನು. ಆ ಸಮಯದಲ್ಲಿ ಎಲ್ಲವೂ, ಒಬ್ಬ ವ್ಯಕ್ತಿಯು ಅವನನ್ನು ನಂಬಿಗಸ್ತಿಕೆಯಿಂದ ಹಿಂಬಾಲಿಸುವವನಾಗಿ ಅವನಿಂದ ಕಂಡುಬರುವನೋ ಇಲ್ಲವೋ ಎಂಬದರ ಮೇಲೆ, ಆಧಾರಿತವಾಗಿರುವುವು. ಆ ವ್ಯಕ್ತಿಯು ಲೌಕಿಕ ವಸ್ತುಗಳಲ್ಲಿ ಎಷ್ಟೇ ಅನಕೂಲಸ್ಥನಿರಲಿ, ಇಲ್ಲದಿರಲಿ, ಯೇಸುವಿನ ತೀರ್ಪು ಅವನ ನಡತೆಯ ಮೇಲೆ ಆಧಾರಿಸಿರುವುದು. ಈ ನಿಜ ಸಂಗತಿಯನ್ನು ಅವನ ಶಿಷ್ಯರು ಮನಸ್ಸಿನಲ್ಲಿ ದೃಢವಾಗಿ ಇಡಬೇಕಿತ್ತು. (ಮತ್ತಾಯ 16:25, 26) ಆದಕಾರಣ, ತನ್ನ ಮಹಿಮಾಭರಿತ ಆಗಮನವನ್ನು ಅದರ ನ್ಯಾಯತೀರ್ಪಿನೊಂದಿಗೆ ಎದುರುನೋಡುವಂತೆ ತನ್ನ ಶಿಷ್ಯರಿಗೆ ಹೇಳುವಾತನು ಯೇಸು ಕ್ರಿಸ್ತನು ತಾನೇ.
3. ತನ್ನ ಭವಿಷ್ಯತ್ತಿನ ಬರೋಣದ ನಿಶ್ಚಯತೆಯನ್ನು ಯೇಸು ಉದಾಹರಿಸಿದ್ದು ಹೇಗೆ?
3 ತದನಂತರ ಅವನೇನನ್ನುತ್ತಾನೋ ಅದು ಅವನ ಭವಿಷ್ಯತ್ತಿನ ಬರೋಣದ ನಿಶ್ಚಯತೆಯನ್ನು ಉದಾಹರಿಸುತ್ತದೆ. ಅಧಿಕಾರಯುಕ್ತನಾಗಿ ಅವನನ್ನುವುದು: “ನಿಮಗೆ ನಿಜವಾಗಿ ಹೇಳುತ್ತೇನೆ, ಇಲ್ಲಿ ನಿಂತವರೊಳಗೆ ಕೆಲವರು, ಮನುಷ್ಯಕುಮಾರನು ತನ್ನ ರಾಜ್ಯದೊಳಗೆ ಬರುವದನ್ನು ನೋಡುವ ತನಕ ಮರಣಹೊಂದುವದಿಲ್ಲ.” (ಮತ್ತಾಯ 16:28) ಈ ಮಾತುಗಳು ಆರು ದಿನಗಳ ತರುವಾಯ ನೆರವೇರಿದವು. ರೂಪಾಂತರಗೊಂಡ ಯೇಸುವಿನ ದಿವ್ಯ ದರ್ಶನವು ಅವನ ಆಪ್ತ ಶಿಷ್ಯರನ್ನು ಅಚ್ಚರಗೊಳಿಸುತ್ತದೆ. ಆತನ ಮುಖವು ಸೂರ್ಯನ ಹಾಗೆ ಪ್ರಕಾಶಿಸುವುದನ್ನು, ಮತ್ತು ಆತನ ವಸ್ತ್ರಗಳು ಬೆಳಕಿನಂತೆ ಬೆಳ್ಳಗಾಗುವುದನ್ನು ಅವರು ಕಾರ್ಯತಃ ಕಾಣುತ್ತಾರೆ. ಆ ರೂಪಾಂತರವು ಕ್ರಿಸ್ತನ ಮಹಿಮೆ ಮತ್ತು ರಾಜ್ಯದ ಒಂದು ಮುನ್ನೋಟವಾಗಿತ್ತು. ರಾಜ್ಯ ಪ್ರವಾದನೆಗಳ ಎಂಥ ಬಲವರ್ಧಕ ದೃಢೀಕರಣವಿದು! ಸ್ವಸ್ಥ ಮನಸ್ಸುಳ್ಳವರಾಗಿ ಇರುವಂತೆ ಶಿಷ್ಯರಿಗಾಗಿ ಎಂಥ ಪ್ರಬಲವಾದ ಪ್ರೋತ್ಸಾಹಕವು!—2 ಪೇತ್ರ 1:16-19.
ಸ್ವಸ್ಥ ಮನಸ್ಸುಳ್ಳವರಾಗಿರುವ ಜರೂರಿಯೇಕೆ
4. ಆತನ ಬರೋಣಕ್ಕೆ ಕ್ರೈಸ್ತರು ಆತ್ಮಿಕವಾಗಿ ಎಚ್ಚರವಾಗಿರಬೇಕು ಏಕೆ?
4 ಒಂದು ವರ್ಷಕ್ಕಿಂತಲೂ ಕಡಿಮೆ ಸಮಯದ ಅನಂತರ, ತನ್ನ ಶಿಷ್ಯರೊಂದಿಗೆ ಪುನಃ ಖಾಸಗಿ ಸಂಭಾಷಣೆಯಲ್ಲಿ, ಯೇಸು ಆಲಿವ್ ಬೆಟ್ಟದ ಮೇಲೆ ಕೂತಿರುವುದನ್ನು ನಾವು ಕಾಣುತ್ತೇವೆ. ಅವರು ಯೆರೂಸಲೇಮ್ ಶಹರದ ಮೇಲೆ ದಿಟ್ಟಿಸುನೋಡುವಾಗ, ತನ್ನ ಭವಿಷ್ಯತ್ತಿನ ಆಗಮನದ ಚಿಹ್ನೆಯೇನಾಗಿರುವುದೆಂದು ಆತನು ವಿವರಿಸುತ್ತಾನೆ ಮತ್ತು ಆ ಮೇಲೆ ಎಚ್ಚರಿಸುವುದು: “ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.” ಅವನ ಬರೋಣದ ಸಮಯವು ತಿಳಿಯದಿರುವುದರಿಂದ ಅವನ ಹಿಂಬಾಲಕರು ಎಡೆಬಿಡದೆ ಎಚ್ಚರವಾಗಿರಲೇ ಬೇಕು. ಅವರು ಅದಕ್ಕಾಗಿ ಸದಾ ಸಿದ್ಧರಾಗಿ ಇರಬೇಕಾಗಿದೆ.—ಮತ್ತಾಯ 24:42.
5. ಎಚ್ಚರಕ್ಕಾಗಿ ಅಗತ್ಯತೆಯನ್ನು ಹೇಗೆ ಉದಾಹರಿಸಬಹುದು?
5 ಅವನ ಬರೋಣದ ವಿಧಾನದಲ್ಲಿ, ಕರ್ತನು ಒಬ್ಬ ಕಳ್ಳನನ್ನು ಹೋಲುತ್ತಾನೆ. ಅವನು ಮುಂದರಿಸುತ್ತಾ ಅನ್ನುವುದು: “ಕಳ್ಳನು ಬರುವ ಜಾವ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಾಹಾಕಗೊಡಿಸುತ್ತಿರಲಿಲ್ಲವೆಂದು ತಿಳುಕೊಳ್ಳಿರಿ.” (ಮತ್ತಾಯ 24:43) ಕನ್ನಗಳ್ಳನು ತಾನು ಯಾವಾಗ ಬರುವನೆಂದು ಮನೆಯವನಿಗೆ ತಿಳಿಸುತ್ತಾ ಒಂದು ಪ್ರಕಟಣೆಯನ್ನು ಮಾಡುವುದಿಲ್ಲ; ಅವನ ಮುಖ್ಯ ಶಸ್ತ್ರವು ಮುನ್ನೆಚ್ಚರಿಕೆ ಕೊಡದೆ ಬರುವುದೇ. ಆದುದರಿಂದ ಮನೆಯವನು ಸದಾ ಎಚ್ಚರಿಕೆಯಿಂದ ಇರಲೇಬೇಕು. ನಂಬಿಗಸ್ತ ಕ್ರೈಸ್ತನಿಗಾದರೋ ಬಳಲಿಹೋಗದ ಎಚ್ಚರವು ಯಾವುದೋ ಭಯಭರಿತ ಸಂಶಯದಿಂದಾಗಿ ಅಲ್ಲ. ಬದಲಿಗೆ, ಸಹಸ್ರ ವರ್ಷ ಕಾಲದ ಶಾಂತಿಯನ್ನು ತರುವುದಕ್ಕಾಗಿ, ಮಹಿಮೆಯಲ್ಲಿ ಕ್ರಿಸ್ತನ ಬರುವಿಕೆಯ ಆತುರಾಪೇಕ್ಷೆಯಿಂದ ಪ್ರಚೋದಿಸಲ್ಪಟ್ಟದ್ದಾಗಿದೆ.
6. ನಾವು ಸ್ವಸ್ಥ ಮನಸ್ಸುಳ್ಳವರಾಗಿರಲೇ ಬೇಕು ಏಕೆ?
6 ಈ ಎಲ್ಲಾ ಕಾಯುತ್ತಿರುವಿಕೆಯು ಇದ್ದಾಗ್ಯೂ, ಆತನು ಬರಲಿರುವ ಸರಿಯಾದ ದಿನವನ್ನು ಯಾರೂ ಮುಂಚಿತವಾಗಿ ಊಹಿಸಲು ಶಕ್ತರಿಲ್ಲ. ಯೇಸು ಅನ್ನುವುದು: “ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.” (ಮತ್ತಾಯ 24:44) ಆದಕಾರಣದಿಂದಲೇ ಮನೋಸ್ವಾಸ್ಥ್ಯದ ಅಗತ್ಯತೆ ಇದೆ. ಒಂದು ನಿರ್ದಿಷ್ಟ ದಿನದಲ್ಲಿ ಕ್ರಿಸ್ತನು ಬರುವುದಿಲ್ಲವೆಂದು ಕ್ರೈಸ್ತನೊಬ್ಬನು ನೆನಸಿದ್ದಾದರೆ, ಅವನು ಬರುವ ದಿನವು ಪ್ರಾಯಶಃ ಅದೇ ದಿನವಾಗಿರುವುದು! ನಿಶ್ಚಯವಾಗಿ, ಸದ್ಭಾವನೆಯುಳ್ಳ ನಂಬಿಗಸ್ತ ಕ್ರೈಸ್ತರು, ಅಂತ್ಯವು ಯಾವಾಗ ಬರುವುದೆಂದು ಮುಂತಿಳಿಸಲು ಗತಕಾಲದಲ್ಲಿ ಪ್ರಾಮಾಣಿಕತೆಯಿಂದ ಪ್ರಯತ್ನಿಸಿದ್ದರು. ಆದರೂ ಯೇಸುವಿನ ಎಚ್ಚರಿಕೆಯು ಪದೇ ಪದೇ ಸತ್ಯವಾಗಿ ರುಜುವಾಗಿತ್ತು. “ಇದಲ್ಲದೆ ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.”—ಮತ್ತಾಯ 24:36.
7. ಯೇಸುವಿನ ಒಬ್ಬ ಹಿಂಬಾಲಕರಾಗಿರಲು, ನಾವು ನಮ್ಮ ಜೀವಿತವನ್ನು ಹೇಗೆ ಜೀವಿಸಬೇಕು?
7 ಆದುದರಿಂದ ನಾವು, ಯಾವ ತೀರ್ಮಾನವನ್ನು ಮಾಡಬೇಕು? ಯೇಸುವಿನ ಹಿಂಬಾಲಕನಾಗಿರಲು, ಈ ದುಷ್ಟ ವ್ಯವಸ್ಥೆಯ ಅಂತ್ಯವು ಹತ್ತಿರವಿದೆಯೆಂದು ಯಾವಾಗಲೂ ನಂಬುತ್ತಲೇ ನಾವು ಜೀವಿಸಬೇಕಾಗಿದೆ.
8. ಅದರ ಅತ್ಯಾರಂಭದ ದಿನಗಳಿಂದ ಕ್ರೈಸ್ತತ್ವದ ಒಂದು ಲಕ್ಷಣವು ಏನಾಗಿರುತ್ತದೆ?
8 ಅಂಥ ಒಂದು ಮನೋಭಾವವು, ಐಹಿಕ ಇತಿಹಾಸಕಾರರು ಮತ್ತು ಬೈಬಲ್ ಪಂಡಿತರು ಅಂಗೀಕರಿಸುವ ಮೇರೆಗೆ, ಯಾವಾಗಲೂ ಕ್ರೈಸ್ತರ ಒಂದು ಲಕ್ಷಣವಾಗಿತ್ತು. ಉದಾಹರಣೆಗೆ, ಟ್ರಾನ್ಸ್ಲೇಟರ್ಸ್ ನ್ಯೂ ಟೆಸ್ಟಮೆಂಟ್ ನ ಸಂಪಾದಕರು, ತಮ್ಮ ಲಘು ಶಬ್ದಕೋಶದಲ್ಲಿ “ದಿನ” ಪದದ ಕೆಳಗೆ ಅನ್ನುವುದು: “ಹೊಸ ಒಡಬಂಡಿಕೆಯ ಕಾಲದ ಕ್ರೈಸ್ತರು, ಪ್ರಚಲಿತ ಲೋಕವು ಅದರ ಎಲ್ಲಾ ಕೆಡುಕು ಮತ್ತು ದುಷ್ಟತನದೊಂದಿಗೆ ಅಂತ್ಯಗೊಳಿಸಲ್ಪಡುವ ಮತ್ತು ಯೇಸುವು ಮಾನವ ಕುಲವೆಲ್ಲಾದರ ನ್ಯಾಯತೀರ್ಪಿಗಾಗಿ ಭೂಮಿಗೆ ಹಿಂತಿರುಗಿ, ಶಾಂತಿಯ ಹೊಸ ಯುಗವನ್ನು ಸ್ಥಾಪಿಸಿ, ಇಡೀ ಲೋಕದ ಮೇಲೆ ತನ್ನ ದೊರೆತನವನ್ನು ಪ್ರಾರಂಭಿಸಲು ಹಿಂತಿರುಗುವ ಆ ದಿನ (ಅಂದರೆ ಸಮಯ) ದ ನಿರೀಕ್ಷಣೆಯಲ್ಲಿ ಜೀವಿಸಿದ್ದರು.” ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಗಮನಿಸುವುದು: “ಕ್ರೈಸ್ತತ್ವದ ಅಸದೃಶ ಭೌಗೋಲಿಕ ವಿಸ್ತಾರ್ಯವು, ಕ್ರಿಸ್ತನ ಹಿಂತಿರುಗುವಿಕೆಯು ಹತ್ತಿರಕ್ಕೆ ಬಂದಿದೆ ಎಂಬ ನಿರೀಕ್ಷಣೆಯ ರೂಪದಲ್ಲಿ, ಅಂತ್ಯಕಾಲಕ್ಕಾಗಿ ಕ್ರಿಸ್ತೀಯ ನಿರೀಕ್ಷಣೆಗೆ ನೇರವಾಗಿ ಸಂಬಂಧಿಸಿದೆ. ಈ ಅಂತ್ಯಕಾಲಕ್ಕಾಗಿ ಕ್ರಿಸ್ತೀಯ ನಿರೀಕ್ಷಣೆಯಲ್ಲಿ, ಬರಲಿರುವ ದೇವರ ರಾಜ್ಯಕ್ಕಾಗಿ ಕೇವಲ ಒಂದು ನಕಾರಾತ್ಮಕ ಹಾರೈಕೆಯು ಎಂದೂ ಒಳಗೂಡಿರಲಿಲ್ಲ.”
ಸ್ವಸ್ಥ ಮನಸ್ಸುಳ್ಳವರಾಗಿರುವುದರ ಅರ್ಥವೇನು
9. ಮೆಸ್ಸೀಯನ ಕುರಿತು ಪೇತ್ರನ ನಿರೀಕ್ಷಣೆಗಳಲ್ಲಿ ಕೆಲವು ಸರಿಯಲ್ಲದ್ದಿದರೂ, ಅವನು ಭರವಸೆಯಿಂದ ಇರಶಕ್ತನಾದದ್ದು ಹೇಗೆ?
9 ಅಪೊಸ್ತಲ ಪೇತ್ರನು, ಯೇಸು ತನ್ನ ಅತ್ಯಾಪ್ತ ಶಿಷ್ಯರೊಂದಿಗೆ ಮಾಡಿದ ಆ ಆಪ್ತ ಸಂಭಾಷಣೆಗಳ ತರುವಾಯ ಸುಮಾರು 30 ವರ್ಷಗಳ ಅನಂತರ, ಅಂತ್ಯವು ಬರುವಂತೆ ಕಾಯುತ್ತಾ ಇರುವುದರಲ್ಲಿ ಬಳಲಿಹೋಗಲಿಲ್ಲ. ಮೆಸ್ಸೀಯನ ಕುರಿತು ಅವನ ಮತ್ತು ಅವನ ಜೊತೆ ಶಿಷ್ಯರ ಆರಂಭದ ನಿರೀಕ್ಷಣೆಗಳು ಸರಿಯಲ್ಲದ್ದಿದರೂ, ಯೆಹೋವನ ಪ್ರೀತಿ ಮತ್ತು ಶಕ್ತಿಯು ತಮ್ಮ ನಿರೀಕ್ಷೆಯ ಕೈಗೂಡಿಸುವಿಕೆಗೆ ಖಾತರಿಯನ್ನಿತ್ತಿದೆಂಬ ಭರವಸೆಯುಳ್ಳವನಾಗಿ ಅವನಿದ್ದನು. (ಲೂಕ 19:11; 24:21; ಅ. ಕೃತ್ಯಗಳು 1:6; 2 ಪೇತ್ರ 3:9, 10) ಗ್ರೀಕ್ ಶಾಸ್ತ್ರಗ್ರಂಥದಲ್ಲೆಲ್ಲೂ ಎಡೆಬಿಡದೆ ಕೇಳಿಬರುವ ಒಂದು ವಿಷಯವನ್ನು ವ್ಯಕ್ತಪಡಿಸುವಾಗ ಅವನಂದದ್ದು: “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ.” ಅನಂತರ ಅವನು ಜೊತೆ ಕ್ರೈಸ್ತರನ್ನು ಪ್ರೇರೇಪಿಸುವುದು: “ಆದುದರಿಂದ ಸ್ವಸ್ಥ ಮನಸ್ಸುಳ್ಳವರಾಗಿರ್ರಿ. ಪ್ರಾರ್ಥನೆಯ ನೋಟದೊಂದಿಗೆ ಎಚ್ಚರವಾಗಿರ್ರಿ.”—1 ಪೇತ್ರ 4:7, NW.
10. (ಎ) ಸ್ವಸ್ಥ ಮನಸ್ಸುಳ್ಳವರಾಗಿರುವುದು ಎಂಬದರ ಅರ್ಥವೇನು? (ಬಿ) ವಿಷಯಗಳನ್ನು ದೇವರ ಚಿತ್ತಕ್ಕೆ ಅವುಗಳ ಯೋಗ್ಯ ಸಂಬಂಧದಲ್ಲಿ ಕಾಣುವುದರಲ್ಲಿ ಏನು ಒಳಗೂಡಿದೆ?
10 “ಸ್ವಸ್ಥ ಮನಸ್ಸುಳ್ಳವರಾಗಿ” ಇರುವುದೆಂದರೆ ಲೌಕಿಕ ದೃಷ್ಟಿಕೋನದಿಂದ ಬುದ್ಧಿವಂತರಾಗಿರುವುದು ಎಂದರ್ಥವಲ್ಲ. ಯೆಹೋವನು ಅನ್ನುವುದು: “ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು, ವಿವೇಕಿಗಳ ವಿವೇಕವನ್ನು ನಿರಾಕರಿಸುವೆನು.” (1 ಕೊರಿಂಥ 1:19) ಪೇತ್ರನು ಉಪಯೋಗಿಸಿದ ಪದವು “ಸಮ ಮನಸ್ಸಿನವರಾಗಿರುವುದು” ಎಂಬ ಅರ್ಥವನ್ನು ಕೊಡಬಲ್ಲದು. ಈ ಆತ್ಮಿಕ ಸಮ ಮನಸ್ಸು ನಮ್ಮ ಆರಾಧನೆಯೊಂದಿಗೆ ಜೋಡಿಸಲ್ಪಟ್ಟಿದೆ. ಆದುದರಿಂದ, ದೃಢ ಮನಸ್ಸಿನವರಾಗಿರುವ ಮೂಲಕ, ನಾವು ವಿಷಯಗಳನ್ನು ಯೆಹೋವನ ಚಿತ್ತಕ್ಕೆ ಯೋಗ್ಯ ಸಂಬಂಧದಲ್ಲಿ ನೋಡುತ್ತೇವೆ; ಯಾವ ವಿಷಯಗಳು ಮಹತ್ವವಾದವುಗಳು ಮತ್ತು ಯಾವುವು ಅಲ್ಲ, ಎಂಬದನ್ನು ನಾವು ಕಾಣುತ್ತೇವೆ. (ಮತ್ತಾಯ 6:33, 34) ಅಂತ್ಯವು ಹತ್ತಿರವಿದ್ದಾಗ್ಯೂ, ಒಂದು ಹುಚ್ಚಾಬಟ್ಟೆಯ ಜೀವನ ಶೈಲಿಯಿಂದ ನಾವು ಕೊಚ್ಚಿಕೊಂಡು ಹೋಗುವುದಿಲ್ಲ; ನಾವು ಜೀವಿಸುತ್ತಿರುವ ಕಾಲಾವಧಿಗೆ ಉದಾಸೀನ ಭಾವದವರಾಗಿರುವುದೂ ಇಲ್ಲ. (ಹೋಲಿಸಿರಿ ಮತ್ತಾಯ 24:37-39.) ಬದಲಿಗೆ, ಮೊದಲಾಗಿ ದೇವರೆಡೆಗೆ (“ಪ್ರಾರ್ಥನೆಯ ನೋಟದೊಂದಿಗೆ ಎಚ್ಚರವಾಗಿದ್ದು”) ಮತ್ತು ನಂತರ ನಮ್ಮ ನೆರೆಯವರೆಡೆಗೆ (“ನಿಮ್ಮ ನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ”) ವ್ಯಕ್ತಪಡಿಸಲ್ಪಡುವ ವಿಚಾರದಲ್ಲಿ, ಪ್ರವೃತ್ತಿಯಲ್ಲಿ, ಮತ್ತು ನಡತೆಯಲ್ಲಿ ಮಿತ ಮತ್ತು ಸಮತೂಕದಿಂದ ಆಳಲ್ಪಡುತ್ತೇವೆ.—1 ಪೇತ್ರ 4:7, 8.
11. (ಎ) “[ನಮ್ಮ] ಮನಸ್ಸನ್ನು ಪ್ರೇರಿಸುವ ಶಕ್ತಿಯಲ್ಲಿ ಹೊಸಬರಾಗಿ ಮಾಡ” ಲ್ಪಡುವುದು ಎಂಬದರ ಅರ್ಥವೇನು? (ಬಿ) ಹೊಸ ಮಾನಸಿಕ ಶಕ್ತಿಯು ಒಳ್ಳೇ ನಿರ್ಣಯವನ್ನು ಮಾಡುವಂತೆ ನಮಗೆ ಹೆಚ್ಚು ಸುಲಭವನ್ನಾಗಿ ಮಾಡುವುದು ಹೇಗೆ?
11 ಸ್ವಸ್ಥ ಮನಸ್ಸುಳ್ಳವರಾಗಿರುವುದರಲ್ಲಿ “ [ನಮ್ಮ] ಮನಸ್ಸನ್ನು ಪ್ರೇರಿಸುವ ಶಕ್ತಿಯಲ್ಲಿ ಹೊಸಬರಾಗಿ ಮಾಡಲ್ಪಡು” ವುದು ಸೇರಿರುತ್ತದೆ. (ಎಫೆಸ 4:23, NW) ಹೊಸಬರಾಗಿ ಮಾಡಲ್ಪಡುವುದು ಏಕೆ? ಏಕೆಂದರೆ ನಾವು ಅಸಂಪೂರ್ಣತೆಯನ್ನು ಬಾಧ್ಯವಾಗಿ ಪಡೆದಿದ್ದೇವೆ ಮತ್ತು ಪಾಪಪೂರ್ಣ ಪರಿಸರದಲ್ಲಿ ಜೀವಿಸುತ್ತೇವೆ, ನಮ್ಮ ಮನಸ್ಸು ಆತ್ಮಿಕತೆಗೆ ವಿರುದ್ಧವಾದ ಪ್ರವೃತ್ತಿಯಿಂದ ಪ್ರಭಾವಿಸಲ್ಪಟ್ಟಿದೆ. ಆ ಶಕ್ತಿಯು ಸದಾ ಆಲೋಚನೆಗಳನ್ನು ಮತ್ತು ಪ್ರವೃತ್ತಿಗಳನ್ನು ಒಂದು ಪ್ರಾಪಂಚಿಕವಾದ, ಸ್ವಾರ್ಥಪರ ದಿಕ್ಕಿಗೆ ತಳ್ಳುತ್ತದೆ. ಆದಕಾರಣ, ಒಬ್ಬನು ಕ್ರೈಸ್ತನಾಗುವಾಗ, ಅವನ ಯೋಚನೆಗಳನ್ನು ಯೋಗ್ಯ ದಿಕ್ಕಿಗೆ, ಆತ್ಮಿಕ ದಾರಿಗೆ, ಸ್ವ-ತ್ಯಾಗದ ಸಿದ್ಧತೆಯೆಡೆಗೆ ತಳ್ಳುವ ಒಂದು ಹೊಸ ಶಕ್ತಿಯು ಅಥವಾ ಒಂದು ಪ್ರಬಲ ಮಾನಸಿಕ ಭಾವವು ಅವನಿಗೆ ಅಗತ್ಯವಿದೆ. ಹೀಗೆ, ದೃಷ್ಟಾಂತಕ್ಕಾಗಿ, ವಿದ್ಯೆ, ವೃತ್ತಿ, ಉದ್ಯೋಗ, ಮನೋರಂಜನೆ, ಉಡುಪಿನ ಶೈಲಿ, ಯಾ ಬೇರೆ ಯಾವುದರಲ್ಲಾದರೂ ಒಂದು ಆಯ್ಕೆಯು ನೀಡಲ್ಪಟ್ಟಾಗ, ಅವನ ಮೊದಲಿನ ಪ್ರವೃತ್ತಿಯು ಅದನ್ನು ಶರೀರಭಾವದ, ಸ್ವಾರ್ಥಪರ ದೃಷ್ಟಿಕೋನದಿಂದ ನೋಡುವ ಬದಲಿಗೆ ಆತ್ಮಿಕ ನೋಟದಿಂದ ನೋಡುವುದಾಗಿರುವುದು. ಈ ಹೊಸ ಮಾನಸಿಕ ಭಾವವು, ಮನೋಸ್ವಾಸ್ಥ್ಯದಿಂದ ಮತ್ತು ಅಂತ್ಯ ಹತ್ತಿರವಿದೆಯೆಂಬ ಅರಿವಿನೊಂದಿಗೆ ವಿಷಯಗಳನ್ನು ನಿರ್ಣಯಿಸಲು ಹೆಚ್ಚು ಸುಲಭವನ್ನಾಗಿ ಮಾಡುತ್ತದೆ.
12. ನಾವು “ನಂಬಿಕೆಯಲ್ಲಿ . . . ಸ್ವಸ್ಥರೂ” ಆಗಿ ಹೇಗೆ ಉಳಿಯಬಲ್ಲೆವು?
12 ಸ್ವಸ್ಥ ಮನಸ್ಸುಳ್ಳವರಾಗಿರುವುದು, ಒಳ್ಳೇ ಆತ್ಮಿಕ ಆರೋಗ್ಯದಲ್ಲಿ ನಾವಿದ್ದೇವೆಂಬದಕ್ಕೆ ಸೂಚಕವಾಗಿದೆ. “ನಂಬಿಕೆಯಲ್ಲಿ . . . ಸ್ವಸ್ಥರೂ” ಆಗಿ ನಾವು ಹೇಗೆ ಉಳಿಯಬಲ್ಲೆವು? (ತೀತ 2:2) ನಮ್ಮ ಮನಸ್ಸನ್ನು ನಾವು ಯೋಗ್ಯ ರೀತಿಯ ಆಹಾರದಿಂದ ಉಣಿಸತಕ್ಕದ್ದು. (ಯೆರೆಮೀಯ 3:15) ದೇವರ ಪವಿತ್ರ ಆತ್ಮದ ಕಾರ್ಯಗತಿಯಿಂದ ಬೆಂಬಲಿಸಲ್ಪಟ್ಟ ದೇವರ ಸತ್ಯ ವಾಕ್ಯದ ಸಿಮ್ತಿತ ಪಥ್ಯವು, ನಮ್ಮ ಆತ್ಮಿಕ ಸಮತೂಕವನ್ನು ಕಾಪಾಡಲು ನಮಗೆ ಸಹಾಯಮಾಡುವುದು. ಆದುದರಿಂದ, ವೈಯಕ್ತಿಕ ಅಭ್ಯಾಸ, ಹಾಗೂ ಕ್ಷೇತ್ರ ಸೇವೆ, ಪ್ರಾರ್ಥನೆ, ಮತ್ತು ಕ್ರೈಸ್ತ ಸಹವಾಸದಲ್ಲಿ ಕ್ರಮಬದ್ಧತೆಯು ಅತ್ಯಾವಶ್ಯಕವು.
ಮನೋಸ್ವಾಸ್ಥ್ಯವು ನಮ್ಮನ್ನು ಹೇಗೆ ಕಾಪಾಡುತ್ತದೆ
13. ಅವಿವೇಕದ ತಪ್ಪುಗಳನ್ನು ಮಾಡದಂತೆ ಮನೋಸ್ವಾಸ್ಥ್ಯವು ನಮಗೆ ಹೇಗೆ ಸಹಾಯಮಾಡುತ್ತದೆ?
13 ನಮ್ಮ ನಿತ್ಯಜೀವವನ್ನು ನಷ್ಟಗೊಳಿಸ ಶಕ್ತನಾದ ಒಂದು ಮೂಢ ಅಥವಾ ಅವಿವೇಕದ ತಪ್ಪನ್ನು ಮಾಡದಂತೆ ಮನೋಸ್ವಾಸ್ಥ್ಯವು ನಮ್ಮನ್ನು ಕಾಪಾಡಬಲ್ಲದು. ಇದು ಹೇಗೆ ಸಾಧ್ಯವು? ಅಪೊಸ್ತಲ ಪೌಲನು “[ಆ] ಮನಸ್ಸಿನ ನಿಯಮ”ದ ಕುರಿತು ಮಾತನಾಡುತ್ತಾನೆ. ನಂಬಿಕೆಯಲ್ಲಿ ಸ್ವಸ್ಥನಾಗಿರುವ ವ್ಯಕ್ತಿಗೆ, ಆ ಮನಸ್ಸಿನ ನಿಯಮವು ಆತನು ಉಲ್ಲಾಸಿಸುವ ಒಂದು ವಿಷಯದಿಂದ ಅಂದರೆ, “ದೇವರ ನಿಯಮ” ದಿಂದ ಪ್ರಭಾವಿಸಲ್ಪಡುತ್ತದೆ. “ಪಾಪದ ನಿಯಮವು” ಮನಸ್ಸಿನ ನಿಯಮಕ್ಕೆ ವಿರುದ್ಧವಾಗಿ ಕಾದಾಡುತ್ತದೆ ನಿಜ. ಆದರೂ, ಯೆಹೋವನ ಸಹಾಯದಿಂದಾಗಿ ಕ್ರೈಸ್ತನು ವಿಜೇತನಾಗಬಲ್ಲನು.—ರೋಮಾಪುರ 7:21-25.
14, 15. (ಎ) ಮನಸ್ಸನ್ನು ಹಿಡಿತದಲ್ಲಿಡಲು ಯಾವ ಎರಡು ಶಕ್ತಿಗಳು ಕಾದಾಟ ನಡಿಸುತ್ತವೆ? (ಬಿ) ಮನಸ್ಸು ಕಾದಾಟವನ್ನು ಹೇಗೆ ಜಯಿಸಬಲ್ಲದು?
14 ವಿಷಯಲೋಲುಪ ಜೀವನದಿಂದ ಕೇಂದ್ರಿತವಾಗಿರುವ, ಪಾಪಪೂರ್ಣ ಶರೀರದಿಂದ ಪ್ರಭಾವಿತವಾದ ಮನಸ್ಸು ಮತ್ತು ಯೆಹೋವನ ಸೇವೆಯಲ್ಲಿ ಸ್ವ-ತ್ಯಾಗದ ಜೀವಿತದ ಮೇಲೆ ಕೇಂದ್ರಿತವಾದ, ದೇವರ ಆತ್ಮದಿಂದ ಪ್ರಭಾವಿತವಾದ ಮನಸ್ಸು ಇವುಗಳ ನಡುವೆ ಒಂದು ತೀವ್ರ ವಿಪರ್ಯಸತ್ತೆ ಮಾಡುವ ಮೂಲಕ ಪೌಲನು ಮುಂದುವರಿಸುತ್ತಾನೆ. ರೋಮಾಪುರ 8:5-7 ರಲ್ಲಿ ಪೌಲನು ಬರೆಯುವುದು: “ಶರೀರ ಭಾವವನ್ನು ಅನುಸರಿಸುವವರು ಅದಕ್ಕೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ. ಪವಿತ್ರಾತ್ಮನನ್ನನುಸರಿಸುವವರು ಪವಿತ್ರಾತ್ಮನಿಗೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ. ಶರೀರಭಾವದವುಗಳ ಮೇಲೆ ಮನಸ್ಸಿಡುವದು ಮರಣ; ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದು ಜೀವವೂ ಮನಶ್ಶಾಂತಿಯೂ ಆಗಿದೆ. ಯಾಕಂದರೆ ಶರೀರಭಾವದವುಗಳ ಮೇಲೆ ಮನಸ್ಸಿಡುವದು ದೇವರಿಗೆ ಶತ್ರುತ್ವವು; ಅಂಥ ಮನಸ್ಸು ದೇವರ ನಿಯಮಕ್ಕೆ ಒಳಪಡುವದೂ ಇಲ್ಲ, ಒಳಪಡುವದಕ್ಕಾಗುವದೂ ಇಲ್ಲ.”
15 ಅನಂತರ 11 ನೆಯ ವಚನದಲ್ಲಿ, ಪವಿತ್ರಾತ್ಮದೊಂದಿಗೆ ಸಹಕರಿಸುವ ಮನಸ್ಸು ಹೇಗೆ ಕಾದಾಟವನ್ನು ಜಯಿಸುತ್ತದೆಂದು ಪೌಲನು ವಿವರಿಸುತ್ತಾನೆ: “ಯೇಸುವನ್ನು ಸತ್ತವರೊಳಗಿಂದ ಜೀವಿತನಾಗಿ ಎಬ್ಬಿಸಿದಾತನ ಆತ್ಮವು ನಿಮ್ಮಲ್ಲಿ ವಾಸವಾಗಿರುವ ತನ್ನ ಆತ್ಮದ ಮೂಲಕ ನಿಮ್ಮ ಮರ್ತ್ಯದೇಹಗಳನ್ನು ಸಹ ಬದುಕಿಸುವನು.”
16. ಮನೋಸ್ವಾಸ್ಥ್ಯವು ಯಾವ ಪ್ರಲೋಭನಗಳಿಂದ ನಮ್ಮನ್ನು ಕಾಪಾಡುತ್ತದೆ?
16 ಆದುದರಿಂದ ಸ್ವಸ್ಥ ಮನಸ್ಸುಳ್ಳವರಾಗಿರುವ ಮೂಲಕ, ಎಲ್ಲಾ ರೀತಿಯ ಸುಖಭೋಗಗಳು, ಪ್ರಾಪಂಚಿಕ ವಸ್ತುಗಳು, ಮತ್ತು ಲೈಂಗಿಕ ದುರ್ನಡತೆಗಳಲ್ಲಿ ಅಮೇಯ ವಿಷಯಲೋಲುಪತೆಯಿಂದ ಗುರುತಿಸಲ್ಪಟ್ಟ ಈ ಲೋಕದ ಸರ್ವವ್ಯಾಪಿ ಪ್ರಲೋಭನಗಳಿಂದ ನಾವು ತಪ್ಪುದಾರಿಗೆ ಎಳೆಯಲ್ಪಡೆವು. ನಮ್ಮ ಸ್ವಸ್ಥ ಮನಸ್ಸು, “ಜಾರತ್ವಕ್ಕೆ ದೂರವಾಗಿ ಓಡಿಹೋಗು” ವಂತೆ ಮತ್ತು ಅದರ ವಿಪತ್ಕಾರಕ ಫಲಿತಾಂಶಗಳನ್ನು ಪಾರಾಗುವಂತೆ ನಮಗೆ ಹೇಳುವುದು. (1 ಕೊರಿಂಥ 6:18) ನಮ್ಮ ಸ್ವಸ್ಥ ಮಾನಸಿಕ ಭಾವವು ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡಲು ನಮ್ಮನ್ನು ಪ್ರಚೋದಿಸುವುದು ಮತ್ತು ಯೆಹೋವನೊಂದಿಗೆ ನಮ್ಮ ಸಂಬಂಧವನ್ನು ನಿರ್ಬಲಗೊಳಿಸಬಹುದಾದ ಒಂದು ಐಹಿಕ ವೃತ್ತಿಯ ನೀಡುವಿಕೆಗಳಿಂದ ಶೋಧಿಸಲ್ಪಡುವಾಗ, ನಮ್ಮ ಯೋಚನೆಯನ್ನು ಕಾಯುವುದು.
17. ಒಬ್ಬಾಕೆ ಪಯನೀಯರ ಸಹೋದರಿಯು ಆರ್ಥಿಕ ಹಂಗುಗಳನ್ನು ಎದುರಿಸಿದಾಗ ಮನೋಸ್ವಾಸ್ಥ್ಯವನ್ನು ಹೇಗೆ ತೋರಿಸಿದಳು?
17 ದೃಷ್ಟಾಂತಕ್ಕಾಗಿ, ಆಗ್ನೇಯ ಏಷ್ಯಾದ ಉಷ್ಣವಲಯ ದೇಶವೊಂದರಲ್ಲಿ, ರಾಜ್ಯಾಭಿರುಚಿಗಳನ್ನು ಮನಸ್ಸಿನಲ್ಲಿ ಅತ್ಯಂತ ಮುಂದಿಟ್ಟ ಒಬ್ಬಾಕೆ ಯುವ ಸಹೋದರಿ ಇದ್ದಾಳೆ. ಆಕೆ ಪೂರ್ಣ ಸಮಯದ ಸೇವೆಗಾಗಿ ಪ್ರೀತಿಯನ್ನು ಬೆಳೆಸಿಕೊಂಡಿದ್ದಳು. ಆ ದೇಶದಲ್ಲಿ ಹೆಚ್ಚಿನ ಉದ್ಯೋಗಗಳು ಆರು ಅಥವಾ ಏಳು ದಿನಗಳ ಪೂರ್ಣ ಸಮಯದ ಕೆಲಸವನ್ನು ಆವಶ್ಯಪಡಿಸುತ್ತವೆ. ಯೂನಿವರ್ಸಿಟಿಯಿಂದ ಆಕೆ ಪದವೀಧರೆಯಾದ ಮೇಲೆ, ಆಕೆ ಕುಟುಂಬಕ್ಕಾಗಿ ತುಂಬಾ ಹಣವನ್ನು ಗಳಿಸುವಂತೆ, ಯೆಹೋವನ ಸಾಕ್ಷಿಯಲ್ಲದ ಅವಳ ತಂದೆಯು ಅವಳಿಂದ ಅಪೇಕ್ಷಿಸಿದ್ದನು. ಆದರೆ ಪಯನೀಯರ್ ಸೇವೆಮಾಡುವ ಬಲವಾದ ಅಪೇಕ್ಷೆಯು ಆಕೆಗಿದದ್ದರಿಂದ, ಅವಳೊಂದು ಅಂಶ-ಕಾಲಿಕ ಕೆಲಸವನ್ನು ಕಂಡುಕೊಂಡಳು ಮತ್ತು ಪಯನೀಯರ ಸೇವೆಯನ್ನು ಆರಂಭಿಸಿದಳು. ಇದು ಅವಳ ತಂದೆಯನ್ನು ಸಿಟ್ಟಿಗೆಬ್ಬಿಸಿತು, ಅವಳ ವಸ್ತುಗಳನ್ನೆಲ್ಲಾ ಬೀದಿಗೆ ಬಿಸಾಡುವನೆಂದು ಅವನು ಬೆದರಿಕೆ ಹಾಕಿದನು. ಜೂಜಾಡುತ್ತಿದ್ದ ಕಾರಣ ಅವನು ಬಹಳ ಸಾಲದಲ್ಲಿ ಮುಳುಗಿದ್ದನು, ಮತ್ತು ತನ್ನ ಮಗಳು ಅವನ ಸಾಲಗಳನ್ನು ತೀರಿಸಿಬಿಡುವಂತೆ ಅವನು ಅಪೇಕ್ಷಿಸಿದ್ದನು. ಅವಳ ತಮ್ಮನು ಒಂದು ಯೂನಿವರ್ಸಿಟಿಯಲ್ಲಿ ಕಲಿಯುತ್ತಿದ್ದನು ಮತ್ತು ಸಾಲಗಳ ಕಾರಣ ಅವನ ಪಾಠಶುಲ್ಕಕ್ಕೆ ತೆರಲು ಹಣವಿರಲಿಲ್ಲ. ಆಕೆ ಅವನಿಗೆ ಸಹಾಯ ಮಾಡಿದರೆ, ತನಗೆ ಕೆಲಸ ಸಿಕ್ಕಿದಾಗ ತಾನು ಕುಟುಂಬದ ಪಾಲನೆಯನ್ನು ಮಾಡುವನೆಂದು ಅವಳ ತಮ್ಮನು ವಚನವಿತ್ತನು. ತನ್ನ ತಮ್ಮನಿಗಾಗಿ ಪ್ರೀತಿ ಮತ್ತು ಪಯನೀಯರ ಸೇವೆಗಾಗಿ ಪ್ರೀತಿ ಇವುಗಳ ನಡುವೆ ಅವಳ ಹೃದಯವು ಹೋಳಾಯಿತು. ವಿಷಯವನ್ನು ಜಾಗ್ರತೆಯಿಂದ ಪರಿಗಣಿಸಿದ ಬಳಿಕ, ಪಯನೀಯರಿಂಗ್ ಮುಂದುವರಿಸಲು ಮತ್ತು ಒಂದು ಬೇರೆ ಕೆಲಸಕ್ಕಾಗಿ ನೋಡಲು ಅವಳು ನಿರ್ಧರಿಸಿದಳು. ಅವಳ ಪ್ರಾರ್ಥನೆಗಳಿಗೆ ಉತ್ತರವಾಗಿ ಒಂದು ಒಳ್ಳೆಯ ಕೆಲಸವನ್ನು ಅವಳು ಕಂಡುಕೊಂಡು, ತನ್ನ ಕುಟುಂಬಕ್ಕೆ ಮತ್ತು ತನ್ನ ತಮ್ಮನಿಗೆ ಹಣ ಸಹಾಯಮಾಡಲು ಮಾತ್ರವೇ ಅಲ್ಲ, ಅವಳ ಪ್ರಥಮ ಪ್ರೀತಿಯಾದ ಪಯನೀಯರ ಸೇವೆಯನ್ನು ಮುಂದುವರಿಸಲು ಸಹ ಅವಳು ಶಕ್ತಳಾದಳು.
ಮನೋಸ್ವಾಸ್ಥ್ಯವನ್ನು ಕಾಪಾಡುವುದರಲ್ಲಿ ಯೆಹೋವನ ಸಹಾಯ ಕೋರಿರಿ
18. (ಎ) ಕೆಲವು ಜನರು ನಿರುತ್ತೇಜಿತರಾಗಬಹುದೇಕೆ? (ಬಿ) ನಿರುತ್ತೇಜಿತರಾದವರನ್ನು ಯಾವ ಶಾಸ್ತ್ರವಚನಗಳು ಸಾಂತ್ವನಗೊಳಿಸಬಹುದು?
18 ಕ್ರಿಸ್ತನ ಕೆಲವು ಹಿಂಬಾಲಕರಿಗೆ ತಮ್ಮ ಮನೋಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಕಷ್ಟಕರವಾಗಿ ಕಾಣುತ್ತಿರಬಹುದು. ಯಾಕಂದರೆ ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ ಅವರು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಕಾಲ ಬಾಳುತ್ತಿರುವುದರಿಂದ ಅವರ ತಾಳ್ಮೆಯು ಕುಂದುತ್ತಾ ಇರಬಹುದು. ಅದರ ಕುರಿತು ಅವರು ನಿರುತ್ತೇಜಿತರಾಗಬಹುದು. ಆದರೂ, ಅಂತ್ಯವು ಬಂದೇ ಬರುವುದು. ಯೆಹೋವನು ಅದನ್ನು ವಾಗ್ದಾನಿಸುತ್ತಾನೆ. (ತೀತ 1:2) ಮತ್ತು ಆತನ ವಾಗ್ದತ್ತ ಭೂಪರದೈಸವೂ ಬರುವುದು. ಯೆಹೋವನು ಖಾತರಿ ಕೊಡುತ್ತಾನೆ. (ಪ್ರಕಟನೆ 21:1-5) ಹೊಸ ಲೋಕವು ಬರುವಾಗ, ತಮ್ಮ ಮನೋಸ್ವಾಸ್ಥ್ಯವನ್ನು ಕಾಪಾಡಿಕೊಂಡವರೆಲ್ಲರಿಗೆ ಒಂದು “ಜೀವವೃಕ್ಷವು” ಇರುವುದು.—ಜ್ಞಾನೋಕ್ತಿ 13:12.
19. ಮನೋಸ್ವಾಸ್ಥ್ಯವನ್ನು ಹೇಗೆ ಕಾಪಾಡಿಕೊಂಡಿರ ಸಾಧ್ಯವಿದೆ?
19 ನಮ್ಮ ಮನೋಸ್ವಾಸ್ಥ್ಯವನ್ನು ನಾವು ಹೇಗೆ ಕಾಪಾಡಿಕೊಳ್ಳಬಲ್ಲೆವು? ಯೆಹೋವನ ಸಹಾಯವನ್ನು ಕೋರಿರಿ. (ಕೀರ್ತನೆ 54:4) ಆತನಿಗೆ ಹತ್ತಿರವಾಗಿ ಉಳಿಯಿರಿ. ನಮ್ಮ ಆಪತ್ತೆಯನ್ನು ಯೆಹೋವನು ಅಪೇಕ್ಷಿಸುತ್ತಾನೆಂಬದಕ್ಕಾಗಿ ನಾವೆಷ್ಟು ಸಂತೋಷಿಸುತ್ತೇವೆ! “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು,” ಎಂದು ಬರೆಯುತ್ತಾನೆ ಶಿಷ್ಯ ಯಾಕೋಬನು. (ಯಾಕೋಬ 4:8) ಪೌಲನು ಅನ್ನುವುದು: “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರುಗಿ ಹೇಳುತ್ತೇನೆ. ನಿಮ್ಮ ಸೈರಣೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ. ಕರ್ತನು ಹತ್ತಿರವಾಗಿದ್ದಾನೆ. ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವ ವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವರ ಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:4-7) ಮತ್ತು ಈ ಮೃತಪ್ರಾಯ ವಿಷಯಗಳ ವ್ಯವಸ್ಥೆಯ ಹೊರೆಗಳು ಇನ್ನು ಮುಂದೆ ಹೊರಲು ತೀರಾ ದೊಡ್ಡದಾಗುವಾಗ, ಅವನ್ನು ಯೆಹೋವನ ಮೇಲೆ ಹಾಕಿರಿ ಮತ್ತು ಆತನು ತಾನೇ ನಿಮಗೆ ಆಸರೆಯಾಗಿರುವನು.—ಕೀರ್ತನೆ 55:22.
20. 1 ತಿಮೊಥೆಯ 4:10 ಕ್ಕೆ ಅನುಸಾರವಾಗಿ, ಯಾವ ಮಾರ್ಗದಲ್ಲಿ ನಾವು ಮುಂದುವರಿಯಬೇಕು?
20 ಹೌದು, ಅಂತ್ಯವು ಹತ್ತಿರವಾಗಿದೆ, ಆದುದರಿಂದ ಸ್ವಸ್ಥ ಮನಸ್ಸುಳ್ಳವರಾಗಿರ್ರಿ! ಅದು 1,900 ವರ್ಷಗಳ ಹಿಂದೆ ಉತ್ತಮ ಸಲಹೆಯಾಗಿತ್ತು; ಇಂದು ಅದು ಆವಶ್ಯಕ ಸಲಹೆಯಾಗಿದೆ. ಹೀಗೆ ಯೆಹೋವನು ನಮ್ಮನ್ನು ಸುರಕ್ಷಿತವಾಗಿ ತನ್ನ ಹೊಸ ಲೋಕದೊಳಗೆ ನಡಿಸುವುದನ್ನು ಮುಂದರಿಸುವಾಗ, ನಾವು ನಮ್ಮ ಸ್ವಸ್ಥ ಮನೋಶಕ್ತಿಗಳನ್ನು ಆತನ ಸ್ತುತಿಗಾಗಿ ಉಪಯೋಗಿಸುವುದನ್ನು ಮುಂದುವರಿಸೋಣ.—1 ತಿಮೊಥೆಯ 4:10.
ನೀವು ಹೇಗೆ ಉತ್ತರಿಸುವಿರಿ?
▫ ಮನೋಸ್ವಾಸ್ಥ್ಯ ಎಂದರೇನು?
▫ ಸ್ವಸ್ಥ ಮನಸ್ಸುಳ್ಳವರಾಗಿರುವುದೇಕೆ ಅಷ್ಟು ಜರೂರಿಯು?
▫ ನಮ್ಮ ಮನಸ್ಸನ್ನು ಪ್ರೇರಿಸುವ ಶಕ್ತಿಯಲ್ಲಿ ನಾವು ಹೇಗೆ ಹೊಸಬರಾಗಿ ಮಾಡಲ್ಪಡಬಲ್ಲೆವು?
▫ ನಮ್ಮ ಮನಸ್ಸುಗಳಲ್ಲಿ ಎಡೆಬಿಡದೆ ನಾವು ಯಾವ ಕಾದಾಟವನ್ನು ಹೋರಾಡಲೇಬೇಕು?
▫ ಮನೋಸ್ವಾಸ್ಥ್ಯವನ್ನು ನಾವು ಹೇಗೆ ಕಾಪಾಡುತ್ತೇವೆ?
[ಪುಟ 15 ರಲ್ಲಿರುವ ಚಿತ್ರ]
ಪ್ರಾರ್ಥನೆಯಲ್ಲಿ ದೇವರ ಸಮೀಪಕ್ಕೆ ಬರುವಿಕೆಯು, ಮನೋಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ನಮಗೆ ಸಹಾಯಮಾಡುತ್ತದೆ
[ಪುಟ 17 ರಲ್ಲಿರುವ ಚಿತ್ರ]
ಸ್ವಸ್ಥ ಮನಸ್ಸುಳ್ಳವರಾಗಿ ಇರುವುದರಿಂದ, ಈ ಲೋಕದ ಪ್ರಲೋಭನಗಳಿಂದ ನಾವು ತಪ್ಪುದಾರಿಗೆಳೆಯಲ್ಪಡೆವು