ಒಳ್ಳೆಯದು ಎಂದಾದರೂ ಕೆಟ್ಟದ್ದನ್ನು ಜಯಿಸೀತೇ?
ಸುಮಾರು ಎರಡು ಸಾವಿರ ವರ್ಷಗಳಷ್ಟು ಹಿಂದೆ, ನಿರಪರಾಧಿ ಮನುಷ್ಯನಾದ ಯೇಸು ಕ್ರಿಸ್ತನು, ಅವನ ಜೀವದ ವಿಚಾರಣೆಗೊಳಗಾಗಿದ್ದನು. ಅವನು ಸತ್ಯವನ್ನು ಆಡಿದರ್ದಿಂದ ಕೆಟ್ಟ ಜನರು ಅವನನ್ನು ನಾಶಗೈಯಲು ಹಂಚುಹೂಡುತ್ತಿದ್ದರು. ಅವನನ್ನು ಸುಳ್ಳಾಗಿ ದೇಶದ್ರೋಹದ ಆರೋಪಿಯನ್ನಾಗಿ ಮಾಡಲಾಗಿತ್ತು, ಮತ್ತು ಅವನ ಹತ್ಯೆಗಾಗಿ ಜನಸಮೂಹದವರು ಬೊಬ್ಬೆಹೊಡೆಯುತ್ತಿದ್ದರು. ಒಬ್ಬ ವಿನೀತ ಬಡಗಿಯ ಜೀವಕ್ಕಿಂತಲೂ ತನ್ನ ಸ್ವಂತ ರಾಜಕೀಯ ಪ್ರತಿಷ್ಠೆಯನ್ನು ಅಧಿಕವೆಂದು ಪರಿಗಣಿಸಿದ ರೋಮನ್ ಪ್ರಾಂತ್ಯಾಧಿಕಾರಿಯೊಬ್ಬನು ಕ್ರೂರ ಮರಣವನ್ನು ಯೇಸುವಿಗೆ ವಿಧಿಸಿದನು. ಹೊರಗಣ ತೋರಿಕೆಗೆಲ್ಲಾ, ಕೆಟ್ಟದ್ದು ಜಯಗಳಿಸಿತೆಂದು ಭಾಸವಾಗುತ್ತಿತ್ತು.
ಆದಾಗ್ಯೂ, ತನ್ನ ಹತ್ಯೆಯ ಮುಂಚಿನ ರಾತ್ರಿಯಲ್ಲಿ, ಯೇಸುವು ತನ್ನ ಶಿಷ್ಯರಿಗೆ ಅಂದದ್ದು: “ನಾನು ಲೋಕವನ್ನು ಜಯಿಸಿದ್ದೇನೆ.” (ಯೋಹಾನ 16:33) ಅವನ ಅರ್ಥವೇನಾಗಿತ್ತು? ಭಾಗಶಃ, ಲೋಕದಲ್ಲಿನ ಕೆಟ್ಟದ್ದು ಅವನನ್ನು ಕಹಿಮನೋಭಾವದವನಾಗಿ ಮಾಡಿದ್ದೂ ಇಲ್ಲ, ಯಾ ತದ್ರೀತಿಯಲ್ಲಿ ಮುಯ್ಯಿತೀರಿಸಲು ಅವನನ್ನು ಮಾಡಿದ್ದೂ ಇಲ್ಲ. ಲೋಕವು ಅವನನ್ನು ಒಂದು ಕೆಟ್ಟ ಪಡಿಯಚ್ಚಿನಲ್ಲಿ ತುರುಕಿಸಲಿಲ್ಲ. (ಹೋಲಿಸಿರಿ ರೋಮಾಪುರ 12:2, ಫಿಲಿಪ್ಸ್.) ಸಾಯುವಾಗಲೂ ಕೂಡ, ತನ್ನ ವಧಕಾರರ ಪರವಾಗಿ ಅವನು ಪ್ರಾರ್ಥಿಸಿದನು: “ತಂದೆಯೇ, ಅವರಿಗೆ ಕ್ಷಮಿಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು.”—ಲೂಕ 23:34.
ಯೇಸುವು—ತಾನು ಸಾಯುವ ತನಕ,—ಕೆಟ್ಟದ್ದನ್ನು ಜಯಿಸಬಹುದೆಂದು ಪ್ರದರ್ಶಿಸಿದನು. ಕೆಟ್ಟದ್ದರ ವಿರುದ್ಧ ಅವರ ಸ್ವಂತ ಹೋರಾಟವನ್ನು ಹೋರಾಡುವಂತೆ ತನ್ನ ಹಿಂಬಾಲಕರಿಗೆ ಅವನು ಒತ್ತಾಯಿಸಿದನು. ಅವರದನ್ನು ಹೇಗೆ ಮಾಡಬಲ್ಲರು? ಯೇಸುವು ಮಾಡಿದಂತೆಯೇ, “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ” ಮತ್ತು “ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು” ಎಂಬ ಶಾಸ್ತ್ರೀಯ ಬುದ್ಧಿವಾದಕ್ಕೆ ಗಮನಕೊಡುವುದರ ಮೂಲಕ. (ರೋಮಾಪುರ 12:17, 21) ಆದರೆ ಅಂತಹ ಪಥಕ್ರಮವು ನಿಜವಾಗಿಯೂ ಸಫಲಗೊಳ್ಳುತ್ತದೋ?
ಡಕೌವ್ನಲ್ಲಿ ಕೆಟ್ಟದ್ದನ್ನು ಹೋರಾಡುವುದು
ಇಲ್ಸೆ, ಡಕೌವ್ನಲ್ಲಿ ಸೆರೆಮನೆವಾಸಿಯಾಗಿದ್ದ ಒಬ್ಬ ಜರ್ಮನ್ ಹೆಂಗಸಾಗಿದ್ದು, 14 ವರುಷ ಪ್ರಾಯದ ಒಬ್ಬ ರಶ್ಯನ್ ಹುಡುಗಿಗೆ ಒಂದು ಅಮೂಲ್ಯ ಕೊಡುಗೆ—ನಂಬಿಕೆ ಮತ್ತು ನಿರೀಕ್ಷೆಯ ಕೊಡುಗೆ—ಯನ್ನು ಕೊಟ್ಟಳು.
ಡಕೌವ್ ಒಂದು ಕುಖ್ಯಾತ ಕೂಟಶಿಬಿರವಾಗಿದ್ದು ಅಲ್ಲಿ ಸಾವಿರಾರು ಮಂದಿ ಸತ್ತಿದ್ದರು ಮತ್ತು ಈ ಎಳೇ ರಶ್ಯನ್ ಹುಡುಗಿಯ ಸಹಿತ ನೂರಾರು ಮಂದಿ ಭೀಕರ ವೈದ್ಯಕೀಯ ಪ್ರಯೋಗಗಳಿಗೆ ಒಳಪಟ್ಟಿದ್ದರು. ಡಕೌವ್ ಕೆಟ್ಟದ್ದರ ಸಾರವಾಗಿತ್ತೆಂದು ಭಾಸವಾಗುತ್ತಿತ್ತು. ಆದಾಗ್ಯೂ, ಅಂತಹ ಒಂದು ಬಂಜರು ನೆಲವೋ ಎಂಬಂತಹದರಲ್ಲಿ ಒಳ್ಳೆಯದು ಚಿಗುರಿತು ಮಾತ್ರವಲ್ಲ, ಬಹುಸಂಖ್ಯೆಯಲ್ಲಿ ವರ್ಧಿಸಿತು.
ಇಲ್ಸೆ ಈ ಎಳೆಯ ಹದಿವಯಸ್ಸಿನ ಹುಡುಗಿಗಾಗಿ ಬಹಳ ಪರಿತಾಪಪಟ್ಟಳು ಯಾಕಂದರೆ ನಾಸೀ ಯೋಧರು ಅವಳ ತಾಯಿಯನ್ನು ಮೃಗೀಯ ರೀತಿಯಲ್ಲಿ ಬಲಾತ್ಕಾರ ಸಂಭೋಗ ಮಾಡುವುದನ್ನು ನೋಡುವಂತೆ ಕೂಡ ಅವಳನ್ನು ಬಲಾತ್ಕರಿಸಲಾಗಿತ್ತು. ಒಳ್ಳೇದರ್ದ ಮತ್ತು ಕೆಟ್ಟದ್ದರ ಕುರಿತಾಗಿ ಮತ್ತು ಪುನರುತ್ಥಾನದ ಒಂದು ಶಾಸ್ತ್ರೀಯ ನಿರೀಕ್ಷೆಯ ಕುರಿತಾಗಿ ಹುಡುಗಿಯೊಡನೆ ಮಾತಾಡಲು ಸಂದರ್ಭಗಳನ್ನು ಕಂಡುಕೊಳ್ಳಲು ಇಲ್ಸೆ, ತನ್ನ ಸ್ವಂತ ಜೀವವನ್ನು ಅಪಾಯಕ್ಕೊಡ್ಡಿದಳು. ದ್ವೇಷಿಸುವ ಬದಲು ತನ್ನ ಎಳೇ ಮಿತ್ರಳಿಗೆ ಪ್ರೀತಿಸಲು ಅವಳು ಕಲಿಸಿದಳು. ಮತ್ತು ಡಕೌವ್ನ ಎಲ್ಲಾ ಭೀಕರತೆಗಳನ್ನು ಪಾರಾಗಲು ಈ ರಶ್ಯನ್ ಹುಡುಗಿ ಶಕ್ತಳಾದದ್ದಕ್ಕಾಗಿ ಇಲ್ಸೆಗೆ ಉಪಕಾರಗಳು.
ಅವಳೇನು ಮಾಡಬೇಕಿತ್ತೋ ಅದನ್ನೇ ಇಲ್ಸೆ ಮಾಡಿದಳು ಯಾಕಂದರೆ ಕ್ರಿಸ್ತನ ನಿಸ್ವಾರ್ಥ ಮಾದರಿಯನ್ನು ಅನುಸರಿಸಲು ಅವಳು ಬಯಸಿದಳು. ಒಬ್ಬ ಯೆಹೋವನ ಸಾಕ್ಷಿಯೋಪಾದಿ, ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಸಲ್ಲಿಸಬಾರದು ಎಂದು ಅವಳು ಕಲಿಲಿದ್ದಳು, ಮತ್ತು ಇತರರೂ ಹಾಗೆ ಮಾಡುವಂತೆ ಸಹಾಯಿಸಲು ಅವಳ ನಂಬಿಕೆ ಅವಳನ್ನು ಪ್ರೇರಿಸಿತು. ಅವಳು ಡಕೌವ್ನಲ್ಲಿ ಬಾಧೆಪಟ್ಟಳಾದರೂ, ಕೆಟ್ಟ ಪ್ರಭುತ್ವದ ಮೇಲೆ ಅವಳೊಂದು ನೈತಿಕ ವಿಜಯವನ್ನು ಪಡೆದಳು. ಮತ್ತು ಇದರಲ್ಲಿ ಅವಳೊಬ್ಬಳೇ ಅಲ್ಲ.
ಎ ಹಿಸ್ಟರಿ ಆಫ್ ಕ್ರಿಸ್ಟಿಆ್ಯನಿಟಿ ಎಂಬ ತನ್ನ ಪುಸ್ತಕದಲ್ಲಿ ಪೌಲ್ ಜಾನ್ಸನ್ ಗಮನಿಸಿದ್ದು “[ಯೆಹೋವನ ಸಾಕ್ಷಿಗಳು] ಯಾವುದನ್ನು ಅವರು ಪೂರ್ಣವಾಗಿ ಕೆಟ್ಟದ್ದು ಎಂದು ಖಂಡಿಸಿದ್ದರೋ ಆ ನಾಸೀ ಆಧಿಪತ್ಯದೊಂದಿಗೆ ಯಾವುದೇ ಸಹಕಾರವನ್ನು ನಿರಾಕರಿಸಿದರು. . . . ತೊಂಬತ್ತೇಳು ಪ್ರತಿಶತ ಒಂದಲ್ಲ ಒಂದು ರೀತಿಯ ಹಿಂಸೆಯಿಂದ ಬಾಧಿತರಾದರು.” ಅದೊಂದು ನಿರೀಕ್ಷಾಹೀನ ಹೋರಾಟವಾಗಿತ್ತೋ? ವ್ಯಾಲ್ಯುಸ್ ಆ್ಯಂಡ್ ವೈಒಲೆನ್ಸ್ ಇನ್ ಔಶ್ವಿಟ್ಸ್ ಪುಸ್ತಕದಲ್ಲಿ ಪೋಲೆಂಡಿನ ಸಮಾಜವಿಜ್ಞಾನಿ ಆನಾ ಪಾವೆಲ್ಶಿನ್ಸ್ಕ ಸಾಕ್ಷಿಗಳ ಕುರಿತು ಹೇಳಿದ್ದು: “ಸೆರೆವಾಸಿಗಳ ಈ ಚಿಕ್ಕ ಗುಂಪು ಒಂದು ದೃಢವಾದ ಭಾವನಾಶಾಸ್ತ್ರದ ಶಕ್ತಿಯಾಗಿತ್ತು ಮತ್ತು ನಾಸೀಸಮ್ನ ವಿರುದ್ಧದ ಅವರ ಹೋರಾಟದಲ್ಲಿ ಅವರು ಜಯಗಳಿಸಿದರು.”
ನಮ್ಮಲ್ಲಿ ಅನೇಕರಿಗಾದರೋ, ಹೊರಗಣ ಕೆಟ್ಟತನಕ್ಕಿಂತಲೂ ನಮ್ಮೊಳಗಿನ ಕೆಟ್ಟತನದ ವಿರುದ್ಧ ಹೋರಾಡುವುದು ಒಂದು ಮುಖ್ಯ ಕಾದಾಟವಾಗಿದೆ. ಇದು ನಮ್ಮೊಳಗಿನ ಒಂದು ಹೋರಾಟವಾಗಿದೆ.
ನಮ್ಮೊಳಗಿನ ಕೆಟ್ಟದ್ದನ್ನು ಜಯಿಸುವುದು
ಈ ಹೋರಾಟವನ್ನು ಅಪೊಸ್ತಲ ಪೌಲನು ಈ ರೀತಿಯಲ್ಲಿ ವರ್ಣಿಸಿದ್ದಾನೆ: “ನಾನೇನು ಮಾಡಲು ಬಯಸುತ್ತೇನೊ ಆ ಒಳ್ಳೇದನ್ನು ನಾನು ವಾಸ್ತವದಲ್ಲಿ ಮಾಡುತ್ತಾ ಇಲ್ಲ; ನಾನೇನು ಮಾಡಲು ಬಯಸುವುದಿಲ್ಲವೊ ಆ ಕೆಟ್ಟದ್ದನ್ನು ನಾನು ಮಾಡುತ್ತಾ ಇದ್ದೇನೆ.” (ರೋಮಾಪುರ 7:19, ದ ನ್ಯೂ ಟೆಸ್ಟಮೆಂಟ್, ವಿಲ್ಯಂ ಬಾರ್ಕ್ಲೇರಿಂದ.) ಪೌಲನು ಚೆನ್ನಾಗಿ ತಿಳಿದಿರುವಂತೆ, ಒಳ್ಳೇದನ್ನು ಮಾಡುವುದು ಯಾವಾಗಲೂ ಸ್ವಾಭಾವಿಕವಾಗಿ ಬರುವುದಿಲ್ಲ.
ಎಯುಕೆನ್ಯೊa ಒಬ್ಬ ಎಳೆಯ ಸ್ಪ್ಯಾನಿಷ್ ಮನುಷ್ಯನಾಗಿದ್ದು, ಎರಡು ದೀರ್ಘ ವರ್ಷಗಳ ತನಕ ಕೆಟ್ಟ ಪ್ರವೃತ್ತಿಗಳ ವಿರುದ್ಧ ತನ್ನ ಒಂದು ಹೋರಾಟವನ್ನು ನಡಿಸಿದ್ದನು. “ನನ್ನೊಂದಿಗೆ ನಾನೇ ಅತಿ ಕಠಿಣವಾಗಿರಬೇಕಿತ್ತು,” ಎಂದವನು ವಿವರಿಸುತ್ತಾನೆ. “ಸಣ್ಣ ಪ್ರಾಯದಿಂದಲೇ ಅನೈತಿಕತೆಯವನಾಗಿರುವ ಒಂದು ಒಲವು ನನಗಿತ್ತು. ಒಬ್ಬ ಹದಿವಯಸ್ಕನೋಪಾದಿ, ನಾನು ಸಲಿಂಗರತಿಯ ಕಾಮಕೇಳಿಗಳಲ್ಲಿ ಸ್ವ-ಇಚ್ಛೆಯಿಂದ ಪಾಲಿಗನಾದೆನು, ಮತ್ತು ನಿಜಹೇಳಬೇಕಂದರೆ, ಅಂತಹ ಜೀವನಶೈಲಿಯಲ್ಲಿ ನಾನು ಆನಂದಿಸುತ್ತಿದ್ದೆನು.” ಕಟ್ಟಕಡೆಗೆ ಬದಲಾಯಿಸಲು ಬಯಸುವಂತೆ ಅವನನ್ನು ಮಾಡಿದ್ದು ಯಾವುದು?
“ದೇವರನ್ನು ಮೆಚ್ಚಿಸಲು ನಾನು ಬಯಸಿದ್ದೆ, ಮತ್ತು ನಾನು ಜೀವಿಸುವಂತಹ ರೀತಿಯನ್ನು ದೇವರು ಮೆಚ್ಚುವದಿಲ್ಲವೆಂದು ನಾನು ಬೈಬಲಿನಿಂದ ಕಲಿತೆ,” ಎನ್ನುತ್ತಾನೆ ಎಯುಕೆನ್ಯೊ. “ಆದುದರಿಂದ ನಾನು ಒಬ್ಬ ಭಿನ್ನ ತೆರದ ವ್ಯಕ್ತಿಯಾಗಿರಲು, ದೇವರ ಮಾರ್ಗದರ್ಶಿಕೆಗಳನ್ನು ಪರಿಪಾಲಿಸಲು ತೀರ್ಮಾನಿಸಿದೆ. ಪ್ರತಿ ದಿನ, ನನ್ನ ಮನಸ್ಸಿನೊಳಗೆ ಇನ್ನೂ ಮುತ್ತುತ್ತಾ ಇದ್ದ ನಕಾರಾತ್ಮಕ, ಹೊಲಸು ಆಲೋಚನೆಗಳ ವಿರುದ್ಧ ನಾನು ಸೆಣಸಬೇಕಾಗಿತ್ತು. ಈ ಹೋರಾಟದಲ್ಲಿ ಜಯಪ್ರದನಾಗಲು ನಾನು ದೃಢಮನಸ್ಕನಾಗಿದ್ದೆ, ಮತ್ತು ಎಡೆ ಬಿಡದೆ ದೇವರ ಸಹಾಯಕ್ಕಾಗಿ ಬೇಡಿದೆನು. ಎರಡು ವರ್ಷಗಳ ನಂತರ, ಅತ್ಯಂತ ಕೆಟ್ಟದ್ದು ನಿವಾರಣೆಗೊಂಡಿದೆಯಾದರೂ, ನನ್ನೊಂದಿಗೆ ನಾನು ಇನ್ನೂ ಕಟ್ಟುನಿಟ್ಟಾಗಿಯೇ ಇದ್ದೇನೆ. ಆದರೆ ಹೋರಾಟವು ಸಾರ್ಥಕತನದ್ದಾಗಿತ್ತು. ನನಗೆ ಈಗ ಸ್ವ-ಗೌರವವಿದೆ, ಒಳ್ಳೆಯ ವಿವಾಹಜೀವಿತವಿದೆ, ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ದೇವರೊಂದಿಗೆ ಒಂದು ಉತ್ತಮ ಸಂಬಂಧವಿದೆ. ನೀವು ನಿಜವಾಗಿ ಪ್ರಯತ್ನ ಮಾಡುವುದಾದರೆ—ಕೆಟ್ಟ ಆಲೋಚನೆಗಳನ್ನು ಅವು ಫಲ ಬಿಡುವ ಮೊದಲೇ ಹೋಗಲಾಡಿಸಬಹುದು ಎಂಬುದು ನನ್ನ ವೈಯಕ್ತಿಕ ಅನುಭವದಿಂದ ನನಗೆ ಗೊತ್ತಿದೆ.”
ಪ್ರತಿಯೊಂದು ಬಾರಿ ಕೆಟ್ಟ ಆಲೋಚನೆಯು ತ್ಯಜಿಸಲ್ಪಟ್ಟಾಗ, ಪ್ರತಿಯೊಂದು ಬಾರಿ ಕೆಟ್ಟದ್ದರ ಪ್ರತಿಯಾಗಿ ಕೆಟ್ಟದ್ದನ್ನು ಮಾಡಲು ನಾವು ನಿರಾಕರಿಸಿದಾಗ, ಒಳ್ಳೆಯದು ಕೆಟ್ಟದ್ದನ್ನು ಜಯಿಸುತ್ತದೆ. ಆದರೂ, ಅಂತಹ ವಿಜಯಗಳು ಎಷ್ಟೇ ಪ್ರಾಮುಖ್ಯವಾಗಿದ್ದರೂ, ಕೆಟ್ಟದ್ದರ ಎರಡು ಪ್ರಮುಖ ಉಗಮಗಳನ್ನು ತೆಗೆಯುವುದಿಲ್ಲ. ನಾವೆಷ್ಟೇ ಶ್ರಮಪಟ್ಟು ಪ್ರಯತ್ನಿಸಿದರೂ, ಬಾಧ್ಯತೆಯಾಗಿ ಪಡೆದ ದುರ್ಬಲತೆಗಳನ್ನು ನಾವು ಪೂರ್ಣವಾಗಿ ಜಯಿಸಸಾಧ್ಯವಿಲ್ಲ, ಮತ್ತು ಸೈತಾನನು ಮಾನವ ಕುಲದ ಮೇಲೆ ಇನ್ನೂ ಕೆಟ್ಟ ಪ್ರಭಾವವನ್ನು ಬೀರುತ್ತಾ ಇದ್ದಾನೆ. ಆದುದರಿಂದ ಈ ಪರಿಸ್ಥಿತಿಯು ಎಂದಾದರೂ ಬದಲಾಗುವುದೋ?
ಪಿಶಾಚನನ್ನು ಇಲ್ಲದಂತೆ ಮಾಡುವುದು
ಯೇಸುವಿನ ಮರಣದ ತನಕ ನಂಬಿಗಸ್ತಿಕೆಯು ಸೈತಾನನಿಗೆ ಒಂದು ಪ್ರಧಾನ ಸೋಲು ಆಗಿತ್ತು. ಯೇಸುವಿನ ಯಥಾರ್ಥತೆಯನ್ನು ಮುರಿಯಲು ತನ್ನ ಪ್ರಯತ್ನದಲ್ಲಿ ಪಿಶಾಚನು ಪರಾಜಯಗೊಂಡನು, ಮತ್ತು ಆ ಪರಾಜಯವು ಸೈತಾನನ ಅಂತ್ಯದ ಆರಂಭವನ್ನು ಗುರುತಿಸಿತು. ಬೈಬಲ್ ವಿವರಿಸುವಂತೆ, “ತನ್ನ ಮರಣದಿಂದಲೇ . . . ಸೈತಾನನನ್ನು ಅಡಗಿಸಿಬಿಡುವದ”ಕ್ಕೆ ಯೇಸುವು ಮರಣವನ್ನು ಅನುಭವಿಸಿದನು. (ಇಬ್ರಿಯ 2:14) ಅವನ ಪುನರುತ್ಥಾನದ ಅನಂತರ, ಯೇಸುವು ತನ್ನ ಶಿಷ್ಯರಿಗೆ ಹೇಳಿದ್ದು: “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ.” (ಮತ್ತಾಯ 28:18) ಮತ್ತು ಈ ಅಧಿಕಾರವು ಸೈತಾನನ ಕಾರ್ಯಗಳನ್ನು ಇಲ್ಲಮೆಗೊಳಿಸಲು ಬಳಸಲ್ಪಡುತ್ತದೆ.
ಪರಲೋಕದಿಂದ ಸೈತಾನನನ್ನು ಯೇಸುವು ಹೊರದೊಬ್ಬಲಿರುವ ಸಮಯವನ್ನು ಪ್ರಕಟನೆಯ ಪುಸ್ತಕವು ವರ್ಣಿಸುತ್ತದೆ. ಈ ಪ್ರಧಾನ ದುಷ್ಕರ್ಮಿಯು ಅವನ ದೆವ್ವಗಳ ಸಹಿತ ಭೂದೃಶ್ಯದೊಳಗೆ ನಿರ್ಬಂಧಿಸಲ್ಪಡಲಿದ್ದನು. ಅದರ ಫಲಿತಾಂಶವಾಗಿ, ಕೆಟ್ಟದ್ದು ವರ್ಧಿಸುವುದು ಎಂದು ಬೈಬಲು ಎಚ್ಚರಿಸುತ್ತದೆ: “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.”—ಪ್ರಕಟನೆ 12:7-9, 12.
ಬೈಬಲ್ ಪ್ರವಾದನೆಯು ತೋರಿಸುತ್ತದೇನಂದರೆ ಈ ಐತಿಹಾಸಿಕ ಘಟನೆಯು ಈಗಾಗಲೇ ಸಂಭವಿಸಿದೆ—ಸರಿಸುಮಾರು ಮೊದಲನೆಯ ಲೋಕ ಯುದ್ಧದ ಸಮಯದಲ್ಲಿ.b ನಮ್ಮ ಸಮಯಗಳಲ್ಲಿ ನಾವು ನೋಡಿರುವ ಕೆಟ್ಟತನದಲ್ಲಿ ಗುರುತಿಸಬಹುದಾದ ಅಭಿವೃದ್ಧಿಯ ಕಾರಣವನ್ನು ಅದು ವಿವರಿಸುತ್ತದೆ. ಆದರೆ ಬೇಗನೆ ಸೈತಾನನು ಇನ್ನು ಮುಂದೆ ಯಾರನ್ನೂ ಪ್ರಭಾವಿಸಲು ಶಕ್ತನಾಗದಂತೆ, ಪೂರ್ಣವಾಗಿ ನಿರ್ಬಂಧಿಸಲ್ಪಡಲಿರುವನು, ಆದುದರಿಂದ ಅವನು ಇನ್ನು ಮುಂದೆ ಯಾರನ್ನೂ ಪ್ರಭಾವಿಸಶಕ್ತನಾಗುವದಿಲ್ಲ.—ನೋಡಿರಿ ಪ್ರಕಟನೆ 20:1-3.
ಮಾನವಕುಲಕ್ಕೆ ಇದೆಲ್ಲವು ಯಾವ ಅರ್ಥದಲ್ಲಿರುವುದು?
“ಅವರು ಕೆಟ್ಟದ್ದನ್ನು ಮಾಡರು”
ದೇವರ ರಾಜ್ಯದ ಅರಸನೋಪಾದಿ, ಆತ್ಮಿಕ ಪುನರ್ಶಿಕ್ಷಣದ ಕಾರ್ಯಕ್ರಮವೊಂದನ್ನು ಸಂಸ್ಥಾಪಿಸಲು, ಯೇಸುವು ಬೇಗನೆ ತನ್ನ ‘ಅಧಿಕಾರವನ್ನು ಭೂಮಿಯ ಮೇಲೆ’ ಬಳಸುವನು. “ಭೂನಿವಾಸಿಗಳು ಧರ್ಮಜ್ಞಾನವನ್ನು ಪಡೆದುಕೊಳ್ಳುವರು.” (ಯೆಶಾಯ 26:9) ಪ್ರತಿಯೊಬ್ಬರಿಗೂ ಪ್ರಯೋಜನಗಳು ಸಿಗಲಿವೆಯೆಂಬುದು ವ್ಯಕ್ತ. ಬೈಬಲ್ ನಮಗೆ ವಾಗ್ದಾನಿಸುವುದು: “ಯಾರೂ ಕೇಡು ಮಾಡುವದಿಲ್ಲ; [“ಅವರು ಕೆಟ್ಟದ್ದನ್ನು ಮಾಡರು,” ಗ್ರೀನ್ರ ಇಂಟರ್ಲಿನಿಯರ್ ಹೀಬ್ರು⁄ಗ್ರೀಕ್ ಇಂಗ್ಲಿಷ್ ಬೈಬಲ್] ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”—ಯೆಶಾಯ 11:9.
ಈಗಲೂ ಕೂಡ, ನಮ್ಮ ಅನೇಕ ಕೆಟ್ಟ ಪ್ರವೃತ್ತಿಗಳನ್ನು ಜಯಿಸಸಾಧ್ಯವಿದೆ. ಪೈಶಾಚಿಕ ಪ್ರಭಾವವು ಇನ್ನು ಮೇಲೆ ಇಲ್ಲವಾಗುವಾಗ, “ಕೆಟ್ಟದ್ದನ್ನು ಬಿಟ್ಟು ಒಳ್ಳೇದನ್ನು ಮಾಡಲು” ಖಂಡಿತವಾಗಿ ಅಧಿಕಾಧಿಕ ಸುಲಭವಾಗಲಿರುವುದು.—1 ಪೇತ್ರ 3:11.
ಒಳ್ಳೇದು ಕೆಟ್ಟದ್ದನ್ನು ಜಯಿಸುವುದು ಎಂಬ ಭರವಸೆಯಿಂದಿರಲು ನಮಗೆ ಪ್ರತಿಯೊಂದು ಕಾರಣವಿದೆ ಯಾಕಂದರೆ ದೇವರು ಒಳ್ಳೆಯವನು, ಮತ್ತು ಅವನ ಸಹಾಯದಿಂದ, ಯೇಸುವು ತನ್ನ ಸ್ವಂತ ಉದಾಹರಣೆಯಿಂದ ರುಜುಪಡಿಸಿದಂತೆಯೇ, ಒಳ್ಳೇದನ್ನು ಮಾಡಲು ಬಯಸುವವರು ಕೆಟ್ಟದ್ದನ್ನು ಜಯಿಸಬಲ್ಲರು. (ಕೀರ್ತನೆ 119:68) ಎಲ್ಲಾ ಸಮಯಗಳಿಗಾಗಿ ಕೆಟ್ಟದ್ದನ್ನು ನಿರ್ಮೂಲಗೊಳಿಸಲು ಬದ್ಧವಾಗಿರುವ ಒಂದು ಸರಕಾರವಾದ, ದೇವರ ರಾಜ್ಯದಿಂದ ಆಳಲ್ಪಡುವ ಶುಭ್ರಗೊಳಿಸಲ್ಪಟ್ಟ ಭೂಮಿಯೊಂದರಲ್ಲಿ ಜೀವಿಸಲಿಕ್ಕಾಗಿ, ಈಗ ಕೆಟ್ಟದ್ದರ ವಿರುದ್ಧ ಹೋರಾಡಲು ಇಚ್ಛಿಸುವವರು ಮುನ್ನೋಡಸಾಧ್ಯವಿದೆ. ಫಲಿತಾಂಶವನ್ನು ಕೀರ್ತನೆಗಾರನು ವರ್ಣಿಸುತ್ತಾನೆ: “ಕೃಪೆಯೂ ಸತ್ಯವೂ ಒಂದನ್ನೊಂದು ಕೂಡಿರುವವು; ನೀತಿಯೂ ಸಮಾಧಾನವೂ ಮುದ್ದಿಟ್ಟುಕೊಳ್ಳುವವು. ಸತ್ಯತೆಯು ಭೂಮಿಯಿಂದ ಹುಟ್ಟುವದು; ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವದು.”—ಕೀರ್ತನೆ 85:10, 11.
[ಅಧ್ಯಯನ ಪ್ರಶ್ನೆಗಳು]
a ಅವನ ನಿಜ ಹೆಸರಲ್ಲ.
b ಹೆಚ್ಚಿನ ವಿವರಗಳಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕದ ಪುಟ 20-22 ನೋಡಿರಿ.