ನಮ್ಮ ಮಹಾ ಸೃಷ್ಟಿಕರ್ತನಲ್ಲಿ ಉಲ್ಲಾಸಿಸುವುದು
“ಇಸ್ರಾಯೇಲ್ಯರು ತಮ್ಮ ಸೃಷ್ಟಿಕರ್ತನಲ್ಲಿ ಹೆಚ್ಚಳಪಡಲಿ [ಉಲ್ಲಾಸಿಸಲಿ, NW]; ಚೀಯೋನಿನವರು ತಮ್ಮ ರಾಜನಲ್ಲಿ ಹರ್ಷಿಸಲಿ.”—ಕೀರ್ತನೆ 149:2.
1. “ಕಟ್ಟಕಡೆಗೆ ಸ್ವಾತಂತ್ರ್ಯ” ಎಂಬ ಕೂಗುಗಳ ಮಧ್ಯೆಯೂ, ಮಾನವಕುಲದ ನಿಜ ಪರಿಸ್ಥಿತಿಯು ಏನಾಗಿದೆ?
ಇಂದಿನ ಲೋಕವು “ಪ್ರಸವ ವೇದನೆ” ಗಳಿಂದ ಬಾಧಿಸಲ್ಪಟ್ಟಿದೆ. ಒಂದನೆಯ ಲೋಕ ಯುದ್ಧದೊಂದಿಗೆ 1914 ರಲ್ಲಿ ಪ್ರಾರಂಭಿಸಿದ ಆ ವಿಪತ್ಕಾರದ ಯುಗದ “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಯ ಕುರಿತಾದ ತನ್ನ ಪ್ರವಾದನೆಯಲ್ಲಿ, ಯೇಸು ಉಪಯೋಗಿಸಿದ ಪದಸರಣಿಯು ಅದಾಗಿದೆ. (ಮತ್ತಾಯ 24:3-8) ಅನೇಕ ರಾಜನೀತಿಜ್ಞರು ಭವಿಷ್ಯತ್ತಿಗಾಗಿ ಅಂಧಕಾರವನ್ನಲ್ಲದೆ ಬೇರೇನನ್ನೂ ಕಾಣಲಾರರು. ಪೂರ್ವ ಯೂರೋಪಿನಲ್ಲಿ “ಕಟ್ಟಕಡೆಗೆ ಸ್ವಾತಂತ್ರ್ಯ” ಎಂಬ ಕೂಗುಗಳ ನಡುವೆಯೂ, ಆ ವಲಯದ ಒಂದು ಸಮಯದ ರಾಷ್ಟ್ರಪತಿಯು ಪರಿಸ್ಥಿತಿಯನ್ನು ಮೊತ್ತವಾಗಿ ಹೇಳಿದ್ದು: “ಜನಸಂಖ್ಯೆಯ ಸ್ಫೋಟನೆ ಮತ್ತು ಸಸ್ಯಾಗಾರ ಪರಿಣಾಮ, ಒಸೋನ್ ಮತ್ತು ಏಯ್ಡ್ಸ್, ನ್ಯೂಕ್ಲಿಯರ್ ಭಯವಾದದ ಬೆದರಿಕೆ ಮತ್ತು ಧನಿಕ ಉತ್ತರಾರ್ಧಗೋಲದ ಮತ್ತು ದರಿದ್ರ ದಕ್ಷಿಣಾರ್ಧಗೋಲದ ಮಧ್ಯೆ ನಾಟಕೀಯವಾಗಿ ವಿಸ್ತರಿಸುತ್ತಿರುವ ಅಂತರ, ಬರಗಾಲದ ಗಂಡಾಂತರ, ಭೂಗೃಹದ ಜೀವಾಸ್ತಿತ್ವ ಕ್ಷೇತ್ರದ ಮತ್ತು ಖನಿಜಜಲ ಮೂಲಸಂಪತ್ತಿನ ರೇಚಕ, ವಾಣಿಜ್ಯ ಟೆಲಿವಿಷನ್ ಸಂಸ್ಕೃತಿಯ ವಿಸ್ತಾರ್ಯ ಮತ್ತು ಬೆಳೆಯುತ್ತಿರುವ ಪ್ರಾದೇಶಿಕ ಯುದ್ಧಗಳ ಬೆದರಿಕೆ—ಇವೆಲ್ಲವು ಇತರ ಸಾವಿರಾರು ಬೇರೆ ವಿಷಯಗಳ ಸಂಯೋಗದೊಂದಿಗೆ ಮಾನವಕುಲಕ್ಕೆ ಒಂದು ಸಾಮಾನ್ಯ ಬೆದರಿಕೆಯನ್ನು ಪ್ರತಿನಿಧಿಸುತ್ತವೆ.” ಅಂತಿಮ ವಿಪತ್ತಿನ ಈ ಬೆದರಿಕೆಯನ್ನು ತೆಗೆದುಹಾಕಬಲ್ಲ ಯಾವ ಮಾನವ ಶಕ್ತಿಯಾದರೂ ಇರುವದಿಲ್ಲ.—ಯೆರೆಮೀಯ 10:23.
2. ಮಾನವಕುಲದ ಸಮಸ್ಯೆಗಳಿಗೆ ಕಾಯಂ ಪರಿಹಾರವು ಯಾರಲ್ಲಿದೆ, ಮತ್ತು ಯಾವ ಹೆಜ್ಜೆಯನ್ನು ಆತನು ಈವಾಗಲೇ ತಕ್ಕೊಂಡಿದ್ದಾನೆ?
2 ಆದರೂ ನಮ್ಮ ಸೃಷ್ಟಿಕರ್ತನಲ್ಲಿ ಒಂದು ಕಾಯಂ ಪರಿಹಾರವಿದೆಂಬದಕ್ಕಾಗಿ ನಾವು ಉಲ್ಲಾಸಪಡಸಾಧ್ಯವಿದೆ. ಯೇಸುವಿನ ಪ್ರವಾದನೆಯಲ್ಲಿ “ವಿಷಯಗಳ ವ್ಯವಸ್ಥೆಯ ಸಮಾಪ್ತಿಯು” ಆತನ ಅದೃಶ್ಯ “ಸಾನಿಧ್ಯ”ದೊಂದಿಗೆ ಜೋಡಿಸಲ್ಪಟ್ಟಿದೆ. (ಮತ್ತಾಯ 24:3, 37-39) “ನೂತನ ಭೂಮಂಡಲವನ್ನು” ನಿರ್ಮಿಸುವುದಕ್ಕೆ ಯೆಹೋವನು ಯೇಸುವನ್ನು ಮೆಸ್ಸೀಯ ರಾಜನಾಗಿ ತನ್ನ ಸಿಂಹಾಸನದಲ್ಲಿ ಕೂಡ್ರಿಸಿದ್ದಾನೆ. ಈ ಚಾರಿತ್ರಿಕ ಘಟನೆಯು ಪರಲೋಕದಲ್ಲಿ 1914 ರಲ್ಲಿ ನಡೆಯಿತು ಎಂದು ಪ್ರವಾದನಾ ರುಜುವಾತು ತೋರಿಸುತ್ತದೆ.a (2 ಪೇತ್ರ 3:13) ಸಾರ್ವಭೌಮ ಕರ್ತನಾದ ಯೆಹೋವನೊಂದಿಗೆ ಜೊತೆ ಅರಸನಾದ ಯೇಸು ಜನಾಂಗಗಳ ನ್ಯಾಯತೀರ್ಪು ಮಾಡುವುದಕ್ಕೆ ಮತ್ತು ನಮ್ರರಾದ ಕುರಿಸದೃಶ ಭೂಜನರನ್ನು ಮೊಂಡರಾದ ಆಡುಗಳಿಂದ ಪ್ರತ್ಯೇಕಮಾಡಲು ಈಗ ನಿಯೋಗವನ್ನು ಪಡೆದಿದ್ದಾನೆ. ಭಕ್ತಿಹೀನ “ಆಡುಗಳು” “ನಿತ್ಯ ಬೆಂಕಿಗಾಗಿ” ಮತ್ತು “ಕುರಿಗಳು” ರಾಜ್ಯದ ಭೂವಲಯದಲ್ಲಿ ನಿತ್ಯಜೀವಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ.—ಮತ್ತಾಯ 25:31-34, 36.
3. ಉಲ್ಲಾಸಪಡಲು ನಿಜ ಕ್ರೈಸ್ತರಿಗೆ ಯಾವ ಕಾರಣವಿದೆ?
3 ಈ ವಿಧೇಯ ಕುರಿಗಳ ಮಹಾ ಸಮೂಹದಿಂದ ಜತೆಗೂಡಿದವರಾದ ಭೂಮಿಯಲ್ಲಿರುವ ಆತ್ಮಿಕ ಇಸ್ರಾಯೇಲ್ಯರ ಉಳಿಕೆಯವರಿಗೆ, ತನ್ನ ಮಹಾ ಉದ್ದೇಶಗಳನ್ನು ತನ್ನ ಪುತ್ರನ ರಾಜ್ಯದ ಮೂಲಕವಾಗಿ ಒಂದು ಪರಮಾವಧಿಗೆ ತರುತ್ತಾ ಇರುವ ಶಾಶ್ವತ ಅರಸನಾದ ಯೆಹೋವನಲ್ಲಿ ಹರ್ಷಿಸುವುದಕ್ಕೆ ಸಕಾರಣವದೆ. ಅವರು ಹೀಗನ್ನಬಲ್ಲರು: “ನಾನು ಯೆಹೋವನಲ್ಲಿ ಪರಮಾನಂದ ಪಡುವೆನು; ನನ್ನ ಆತ್ಮವು ನನ್ನ ದೇವರಲ್ಲಿ ಹಿಗ್ಗುವದು; . . . ಆತನು ನನಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸಿದ್ದಾನಲ್ಲಾ. ಭೂಮಿಯು ತನ್ನೊಳಗಿಂದ ಮೊಳಿಕೆಯನ್ನು ಹೊರಡಿಸುವಂತೆಯೂ ತೋಟವು ತನ್ನಲ್ಲಿ ಬಿತ್ತಿದ್ದನ್ನು ಮೊಳೆಯಿಸುವ ಹಾಗೂ ಕರ್ತನಾದ ಯೆಹೋವನು ಎಲ್ಲಾ ಜನಾಂಗಗಳ ಎದುರಿನಲ್ಲಿ ಧರ್ಮವನ್ನೂ ಸ್ತೋತ್ರವನ್ನೂ ಮೊಳೆಯಿಸುವನು.” (ಯೆಶಾಯ 61:10, 11) ಈ “ಮೊಳೆಯಿಸು” ವಿಕೆಯು, ಈಗ ಜನಾಂಗಗಳೊಳಗಿಂದ ಯೆಹೋವನ ಸ್ತುತಿಗಾಗಿ ಒಟ್ಟುಗೂಡಿಸಲ್ಪಡುತ್ತಿರುವ ಲಕ್ಷಾಂತರ ಜನರಲ್ಲಿ ರುಜುವಾತನ್ನು ಪಡೆದಿದೆ.
‘ಇದನ್ನು ಬಲುಬೇಗನೆ ಮಾಡುವುದು’
4, 5. (ಎ) ದೇವಜನರ ಒಟ್ಟುಗೂಡಿಸುವಿಕೆಯು ಹೇಗೆ ಮುಂತಿಳಿಸಲ್ಪಟ್ಟಿದೆ? (ಬಿ) ಯಾವ ಎದ್ದುಕಾಣುವ ಅಭಿವೃದ್ಧಿಯು 1992 ರ ಸೇವಾ ವರ್ಷದಲ್ಲಿ ಕಂಡು ಬಂದಿದೆ?
4 ಈ ಒಟ್ಟುಗೂಡಿಸುವಿಕೆಯು ಸೈತಾನನ ವ್ಯವಸ್ಥೆಯ ಅಂತ್ಯವು ಸಮೀಪವಾಗುತ್ತಿರುವಂತೆ ವೇಗವೃದ್ಧಿಯನ್ನು ಹೊಂದುತ್ತದೆ. ನಮ್ಮ ಮಹಾ ಸೃಷ್ಟಿಕರ್ತನು ಘೋಷಿಸುವುದು: “ನಿನ್ನ ಜನರೆಲ್ಲಾ ಸದ್ಧರ್ಮಿಗಳಾಗಿರುವರು; ನನ್ನ ಪ್ರಭಾವಕ್ಕೋಸ್ಕರ ನಾನು ನೆಟ್ಟ ಸಸಿಯಾಗಿಯೂ ನನ್ನ ಕೈ ಸೃಷ್ಟಿಸಿದ ಪ್ರಜೆಯಾಗಿಯೂ ಇರುವರು. . . . ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.” (ಯೆಶಾಯ 60:21, 22) ಈ ಬಲುಬೇಗದ ಕೆಲಸವು, ಈ ಪತ್ರಿಕೆಯ 12-15 ನೆಯ ಪುಟಗಳಲ್ಲಿ ಪ್ರಕಟಿಸಲ್ಪಟ್ಟಿರುವ ಯೆಹೋವನ ಸಾಕ್ಷಿಗಳ 1992 ರ ಸೇವಾ ವರ್ಷದ ಲೋಕವ್ಯಾಪಕ ವರದಿಯಲ್ಲಿ ಆಶ್ಚರ್ಯಕರವಾಗಿ ಪ್ರತಿಬಿಂಬಿಸಲ್ಪಟ್ಟಿದೆ.
5 ಈ ವರದಿಯಲ್ಲಿ ಎದ್ದುಕಾಣುವುದು ರಾಜ್ಯ ಪ್ರಚಾರಕರಲ್ಲಾದ ಹೊಸ ಉನ್ನತ ಸಂಖ್ಯೆ, 44,72,787 ವೃದ್ಧಿಯಾಗಿದೆ—1,93,967 ಪ್ರಗತಿ—ಕಳೆದ ವರ್ಷಕ್ಕಿಂತ 5.4 ಪ್ರತಿಶತ ಹೆಚ್ಚು. ಜನ ಸಮುದಾಯಗಳೇ ಬೈಬಲ್ ಸತ್ಯವನ್ನು ಸ್ವೀಕರಿಸುತ್ತವೆಂಬ ನಿಜತ್ವವನ್ನು 1992 ರಲ್ಲಿ ದೀಕ್ಷಾಸ್ನಾನವಾದ 3,01,002 ಉನ್ನತ ಸಂಖ್ಯೆಯು ಸಹ ತೋರಿಸುತ್ತದೆ. “ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ಕಗ್ಗತ್ತಲ ದಿನ” ದಲ್ಲಿ, “ಇಗೋ, ಪ್ರಬಲವಾದ ದೊಡ್ಡ ದಂಡು” ಮಿಡಿತೆಗಳ ತಂಡದೋಪಾದಿ ರಾಜ್ಯದ ಸಾಕ್ಷಿಯನ್ನು “ಭೂಲೋಕದ ಕಟ್ಟಕಡೆಯ ವರೆಗೆ” ಹಬ್ಬಿಸುತ್ತಿರುವುದಕ್ಕಾಗಿ ನಾವೆಷ್ಟು ಸಂತೋಷಿಸುತ್ತೇವೆ! (ಯೋವೇಲ 2:2, 25; ಅ. ಕೃತ್ಯಗಳು 1:8) ಎಲ್ಲಿ ವಾಚ್ ಟವರ್ ಸೊಸೈಟಿಯ ವಿಮಾನವು ಹಿಮಬದ್ಧ ಕ್ಷೇತ್ರಗಳಿಗೆ 50 ಕ್ಕಿಂತಲೂ ಹೆಚ್ಚು ಸಂದರ್ಶನಗಳನ್ನು ಮಾಡಿದೆಯೋ ಆ ಹಿಮಮಯ ಅಲಾಸ್ಕದಿಂದ ಹಿಡಿದು—ಬಿಸಿಲಬೇಗೆಯಿಂದ ಸುಟ್ಟು ಕಮರಿರುವ ಬಂಜರುಗಳಾದ ಮಾಲಿ, ಬುರ್ಕಿನೊ ಫಾಸೊ ಮತ್ತು ಚದರಿರುವ ಮೈಕ್ರೊನೇಸಿಯಾ ತನಕ, ಯೆಹೋವನ ಸೇವಕರು “ [ಆತನ] ರಕ್ಷಣೆಯು ಲೋಕದ ಕಟ್ಟಕಡೆಯ ವರೆಗೆ ವ್ಯಾಪಿಸುವಂತೆ ಅನ್ಯ ಜನಾಂಗಗಳಿಗೆ ಬೆಳಕಾಗಿ” ಹೊಳೆಯುತ್ತಾ ಇದ್ದಾರೆ.—ಯೆಶಾಯ 49:6.
6, 7. ಇತ್ತೀಚಿನ ವರ್ಷಗಳಲ್ಲಿ ಘಟನೆಗಳ ಯಾವ ಅನಿರೀಕ್ಷಿತ ಬದಲಾವಣೆಯು ಕಂಡುಬಂತು ಮತ್ತು ಯೆಹೋವನ ಸೇವಕರು ಅದಕ್ಕೆ ಹೇಗೆ ಪ್ರತಿಕ್ರಿಯೆ ತೋರಿಸಿದ್ದಾರೆ?
6 ತನ್ನ ಜನರನ್ನು ರಕ್ಷಿಸುವುದರಲ್ಲಿ ಮತ್ತು ಪೋಷಿಸುವುದರಲ್ಲಿ ಯೆಹೋವನು ಒಂದು ದುರ್ಗವೂ ಬಲವಾದ ಕೋಟೆಯೂ ಆಗಿರುತ್ತಾನೆ. ಲೋಕದ ಅನೇಕ ಭಾಗಗಳಲ್ಲಿ ಯೆಹೋವನ ಸಾಕ್ಷಿಗಳಿಗೆ ದಶಾಬ್ದಗಳ ಕ್ರೂರ ದಬ್ಬಾಳಿಕೆ ಮತ್ತು ಹಿಂಸೆಯನ್ನು ಅನುಭವಿಸಲಿಕ್ಕಿತ್ತು. (ಕೀರ್ತನೆ 37:39, 40; 61:3, 4) ಆದರೆ ಇತ್ತೀಚೆಗೆ, ಒಂದು ಮಹತ್ಕಾರ್ಯದಿಂದಲೋ ಎಂಬಂತೆ, ಪ್ರತಿಬಂಧಗಳು ಮತ್ತು ತಡೆಗಟ್ಟುಗಳು ಕೆಲವು 21 ದೇಶಗಳಲ್ಲಿ ತೆಗೆದುಹಾಕಲ್ಪಟ್ಟವು, ಹೀಗೆ ನಮ್ಮ ಮಹಾ ಸೃಷ್ಟಿಕರ್ತನು ಕ್ರಿಸ್ತನನ್ನು ಭೂಮಿಯ ಮೇಲೆ ರಾಜನಾಗಿ ಪ್ರತಿಷ್ಠಾಪಿಸಿದ್ದಾನೆಂದು ಈಗ ದೇವಜನರು ಸ್ವತಂತ್ರರಾಗಿ ಘೋಷಿಸ ಶಕ್ತರಾಗಿದ್ದಾರೆ.—ಕೀರ್ತನೆ 2:6-12.
7 ಹೊಸದಾಗಿ ಕಂಡುಕೊಂಡ ತಮ್ಮ ಸ್ವಾತಂತ್ರ್ಯವನ್ನು ಯೆಹೋವನ ಸಾಕ್ಷಿಗಳು ಸದುಪಯೋಗ ಮಾಡುತ್ತಿದ್ದಾರೋ? ಬಲ್ಗೇರಿಯ, ರೊಮೇನಿಯ, ಮತ್ತು ಪೂರ್ವ ಯೂರೋಪಿನ ಹಿಂದಣ ಸೋವಿಯೆಟ್ ಯೂನಿಯನ್ ಮತ್ತು ಅಂಗೋಲ, ಬೆನಿನ್ ಮತ್ತು ಆಫ್ರಿಕದ ಮೊಸಾಂಬೀಕ್ ಇವುಗಳಲ್ಲಾದ ಅಭಿವೃದ್ಧಿಗಳನ್ನು ತಖ್ತೆಯಲ್ಲಿ ಗಮನಿಸಿರಿ. ಸಾಎರ್ನಲ್ಲಿಯೂ ಅಭಿವೃದ್ಧಿಯು ಅಸಾಧಾರಣವಾಗಿದೆ. ತಮ್ಮ ಹೃದಯಗಳಲ್ಲಿ ಸಂತೋಷದೊಂದಿಗೆ, ನಮ್ಮ ಬಂಧ ವಿಮೋಚಿತ ಸಹೋದರರು ಈ ಕರೆಗೆ ಉತ್ತರಕೊಡುತ್ತಾರೆ: “ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. . . . ಮಹತ್ಕಾರ್ಯಗಳನ್ನು ನಡಿಸುವದಕ್ಕೆ ಆತನೊಬ್ಬನೇ ಶಕ್ತನು; ಆತನ ಕೃಪೆಯು ಶಾಶ್ವತವಾದದ್ದು.” (ಕೀರ್ತನೆ 136:1, 4) ಈ ಕೃತಜ್ಞತೆಯು, ಉತ್ಸಾಹದ ಸೇವೆಯ ಮೂಲಕ ರಾಜ್ಯದ ಪಕ್ಕಕ್ಕೆ ಕುರಿಸದೃಶರಾದ ಬೇರೆ ಜನರನ್ನು ಒಟ್ಟುಗೂಡಿಸುವುದರಲ್ಲಿ ವ್ಯಕ್ತಪಡಿಸಲ್ಪಡುತ್ತದೆ.
8. ಯೆಹೋವನ ಸ್ತುತಿಗಾರರು ಪೂರ್ವ ಯೂರೋಪಿನಲ್ಲಿ “ಮೇಘದೋಪಾದಿ ಹಾರಿ ಬಂದದ್ದು” ಹೇಗೆ? ಆಫ್ರಿಕದಲ್ಲಿ?
8 ಕಳೆದ ಯೂರೋಪಿಯನ್ ಬೇಸಗೆಯಲ್ಲಿ, ಹಿಂದಣ ಕಮ್ಯೂನಿಸ್ಟ್ ದೇಶಗಳಲ್ಲಿ ನಡೆದ ಯೆಹೋವನ ಜನರ ಅಧಿವೇಶನಗಳಿಗೆ ಕೌತುಕಭರಿತ ಹಾಜರಿಗಳು ಸಿಕ್ಕಿದ್ದವು. ಜತೆಗೂಡಿರುವ ತಖ್ತೆಯು ತೋರಿಸುವ ಮೇರೆಗೆ, ಇನ್ನೂ ಹೆಚ್ಚು ಅಚ್ಚರಿಯ ಸಂಗತಿಯು ದೀಕ್ಷಾಸ್ನಾನವಾದವರ ಸಂಖ್ಯೆಗಳೇ. ತದ್ರೀತಿಯಲ್ಲಿ, ಆಫ್ರಿಕದ ಟೋಗೊದಲ್ಲಿ ದಶಂಬರ 10, 1991 ರಂದು ನಿಷೇಧವು ತೆಗೆಯಲ್ಪಟ್ಟಿತು. ಒಂದು ತಿಂಗಳ ನಂತರ ಒಂದು ರಾಷ್ಟ್ರೀಯ ಅಧಿವೇಶನ ನಡೆಯಿತು. ಕ್ಷೇತ್ರದಲ್ಲಿ ಪ್ರಚಾರಕರ ತಿಂಗಳ ಸರಾಸರಿಯಾದ 6,443 ಕ್ಕೆ ಹೋಲಿಸುವಲ್ಲಿ, ಈ ಅಧಿವೇಶನದಲ್ಲಿ ಹಾಜರಿಯಾದರೋ 25,467 ಕ್ಕೇರಿತು, 556 ಮಂದಿಗೆ ದೀಕ್ಷಾಸ್ನಾನವಾಯಿತು—ಇದು ಪ್ರಚಾರಕರ ಸಂಖ್ಯೆಯ 8.6 ಪ್ರತಿಶತವು. ಯೆಶಾಯ 60:8 ಚಿತ್ರಿಸುವ ಪ್ರಕಾರ, ಯೆಹೋವನ ಜನರ ಸಭೆಗಳಲ್ಲಿ ಯೆಹೋವನ ಹೊಸ ಸ್ತುತಿಗಾರರು, “ಮೇಘದೋಪಾದಿಯಲ್ಲಿಯೂ ಗೂಡುಗಳಿಗೆ ತರ್ವೆಪಡುವ ಪಾರಿವಾಳಗಳಂತೆಯೂ ಹಾರಿ” ಬರುತ್ತಿದ್ದಾರೆ.
9. ಇತ್ತೀಚೆಗೆ ಸ್ವತಂತ್ರಗೊಂಡ ದೇಶಗಳಲ್ಲಿ ಕ್ರೈಸ್ತರು ‘ಊಟಮಾಡಿ ತೃಪ್ತಿಗೊಳ್ಳುವಂತೆ’ ಯಾವ ಒದಗಿಸುವಿಕೆಗಳು ಮಾಡಲ್ಪಟ್ಟವು?
9 ಪೂರ್ವ ಯೂರೋಪ್ ಮತ್ತು ಆಫ್ರಿಕದಲ್ಲಿ ಆತ್ಮಿಕ ಆಹಾರಕ್ಕಾಗಿರುವ ಹಸಿವು ಸಹ ಉಪಶಮನಗೊಳಿಸಲ್ಪಡುತ್ತಿದೆ. ಆತ್ಮಿಕವಾಗಿ ಹಸಿದ ದೇಶಗಳಿಗೆ ಜರ್ಮನಿ, ಇಟೆಲಿ, ಮತ್ತು ದಕ್ಷಿಣ ಆಫ್ರಿಕದಲ್ಲಿರುವ ವಾಚ್ ಟವರ್ ಸೊಸೈಟಿಯ ಫ್ಯಾಕ್ಟರಿಗಳು ಸಾಹಿತ್ಯ ತುಂಬಿದ ಟ್ರಕ್ಬಂಡಿಗಳನ್ನು ಒಂದರ ಹಿಂದೊಂದರಂತೆ ಕಳುಹಿಸಿಕೊಟ್ಟಿವೆ. ಹಿಂದೆ ಅನೇಕ ಸಾಕ್ಷಿಗಳು ಬಳಸಿ-ಜೀರ್ಣವಾದ ಪತ್ರಿಕೆಗಳನ್ನು ಒಬ್ಬರಿಗೊಬ್ಬರು ಸಾಗಿಸಬೇಕಾಗಿತ್ತು, ಆದರೆ ಈಗ ಅವರಿಗೆ ಹೇರಳವಾದ ಆತ್ಮಿಕ ಅಹಾರವು ಸಿಗುತ್ತಾ ಇದೆ. ಈ ಪ್ರವಾದನೆಯ ನೆರವೇರಿಕೆಯಲ್ಲಿ ಭಾಗವಹಿಸುವುದಕ್ಕೆ ಅವರು ಹರ್ಷಿಸುತ್ತಿದ್ದಾರೆ: “ನೀವು ಹೊಟ್ಟೆತುಂಬಾ ಊಟಮಾಡಿ ತೃಪ್ತಿಗೊಂಡು ನಿಮಗಾಗಿ ಅದ್ಭುತ ಕಾರ್ಯಗಳನ್ನು ಮಾಡಿದ ನಿಮ್ಮ ದೇವರಾದ ಯೆಹೋವನ ಕಾರ್ಯವನ್ನು ಕೊಂಡಾಡುವಿರಿ.”—ಯೋವೇಲ 2:26.
ಅಧಿಕ ವ್ಯಾಪನೆಗಾಗಿ ಲಕ್ಷ್ಯಕೊಡುವುದು
10. ಸ್ಮಾರಕಾಚರಣೆಯ ಉನ್ನತ ಹಾಜರಿಯ ನೋಟದಲ್ಲಿ, ಆಸಕ್ತ ಜನರೆಲ್ಲರಿಗೆ ಯಾವ ಆಮಂತ್ರಣವನ್ನು ನೀಡಲಾಗಿದೆ?
10 ಯೇಸುವಿನ ಮರಣದ ಸ್ಮಾರಕಕ್ಕೆ ಲೋಕವ್ಯಾಪಕ ಹಾಜರಿಯಾದ 1,14,31,171 ಸಂಖ್ಯೆಯಾದರೋ ಖಂಡಿತವಾಗಿಯೂ ಆಶ್ಚರ್ಯಕರವು, ಇದು ಕಳೆದ ವರ್ಷಕ್ಕಿಂತ 7,81,013 ವೃದ್ಧಿ, ಅಥವಾ 7.3 ಪ್ರತಿಶತ ಹೆಚ್ಚು. ಹೊಸದಾಗಿ ಬಂದವರೇ, ನಿಮಗೆಲ್ಲರಿಗೂ ಸುಸ್ವಾಗತ! ಇಂಥ ಎಲ್ಲಾ ಹೊಸಾಸಕ್ತ ವ್ಯಕ್ತಿಗಳು ಯೆಹೋವನ ಸಾಕ್ಷಿಗಳಲ್ಲೊಬ್ಬರೊಂದಿಗೆ ಒಂದು ಮನೆ ಬೈಬಲಧ್ಯಯನದ ಪ್ರಯೋಜನವನ್ನು ಆನಂದಿಸಿದ್ದಾದರೆ ಅದೆಷ್ಟು ಉತ್ತಮವಾಗುತ್ತಿತ್ತು! (ಯೆಶಾಯ 48:17 ನೋಡಿರಿ.) ಈ ಅಧ್ಯಯನಗಳಲ್ಲಿ 42,78,127 ಪ್ರತಿ ತಿಂಗಳು ನಡಿಸಲ್ಪಡುತ್ತಿವೆಯೆಂದು ಸೇವಾ ವರ್ಷ ವರದಿಯು ತೋರಿಸುತ್ತದೆ, ಇದು ಒಂದು ಉತ್ತಮ 8.4 ಪ್ರತಿಶತ ಅಭಿವೃದ್ಧಿಯು. ಆದರೂ ಇನ್ನೂ ಹೆಚ್ಚು ಮಂದಿ ತಮಗಾಗಿ ಈ ಸೇವೆಯನ್ನು ದೊರಕಿಸಿಕೊಳ್ಳ ಸಾಧ್ಯವಿದೆ. ಆಸಕ್ತ ಜನರನ್ನು ಕ್ರಮವಾಗಿ ಸಂದರ್ಶಿಸಿ, ಮನೆಯಲ್ಲಿ ಒಂದು ಉಚಿತವಾದ ಬೈಬಲಧ್ಯಯನ ನಡಿಸುವುದಕ್ಕಾಗಿ ಮತ್ತು ಹೀಗೆ ನಿತ್ಯ ಜೀವಕ್ಕೆ ನಡಿಸುವ ದಾರಿಯಲ್ಲಿ ದೃಢವಾಗಿ ತಮ್ಮ ಕಾಲುಗಳನ್ನೂರುವಂತೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಸಂತೋಷಪಡುತ್ತಾರೆ. (ಯೋಹಾನ 3:16, 36) ಅಂಥ ಒಂದು ಅಧ್ಯಯನಕ್ಕಾಗಿ ಯಾಕೆ ವಿನಂತಿಸಬಾರದು? ಮತ್ತು ರಾಜ್ಯ ಸಭಾಗೃಹದಲ್ಲಿ ನಿಮಗೆ ಯಾವಾಗಲೂ ಒಂದು ಹೃತ್ಪೂರ್ವಕ ಸ್ವಾಗತವು ಕಾದಿದೆ ಎಂಬದನ್ನು ನೆನಪಿನಲ್ಲಿಡಿರಿ!—ಕೀರ್ತನೆ 122:1; ರೋಮಾಪುರ 15:7.
11, 12. (ಎ) ಕೆಲವು ದೇಶಗಳಲ್ಲಿ ಯಾವ ಸಮಸ್ಯೆಗಳು ಎದುರಾಗಿವೆ? (ಬಿ) ಹೆಚ್ಚು ಸಂಪನ್ನ ಮತ್ತು ಹೆಚ್ಚು ಬಡತನದ ದೇಶಗಳ ನಡುವೆ ಯಾವ ರೀತಿಯಲ್ಲಿ “ಒಂದು ಸಮಾನತ್ವವು” ಉಂಟಾಗುತ್ತಾ ಇದೆ?
11 ಉತ್ತಮವಾದ ರಾಜ್ಯ ಸಭಾಗೃಹಗಳಿರುವ ಆ ಸಭೆಗಳು ಹೇರಳವಾಗಿ ಆಶೀರ್ವದಿಸಲ್ಪಟ್ಟಿವೆ. ಎಲ್ಲಿ ನಿಷ್ಠೆಯುಳ್ಳ ಸಾಕ್ಷಿಗಳು ಚಿಕ್ಕ ಚಿಕ್ಕ ಗುಂಪುಗಳಾಗಿ ಗುಪ್ತವಾಗಿ ಕೂಡಿಬರುತ್ತಾ, ಅನೇಕ ವರ್ಷಗಳ ನಿಷೇಧವನ್ನು ತಾಳಿಕೊಂಡಿದ್ದರೋ ಆ ದೇಶಗಳಲ್ಲಾದರೋ ಪರಿಸ್ಥಿತಿಯು ಬೇರೆಯಾಗಿದೆ! ಅಂಥ ಅನೇಕ ದೇಶಗಳಲ್ಲಿ, ಅವರೀಗ ಸ್ವತಂತ್ರರಾಗಿರುವುದಾದರೂ, ಇರುವ ರಾಜ್ಯ ಸಭಾಗೃಹಗಳಾದರೋ ಕೆಲವೇ. ಉದಾಹರಣೆಗಾಗಿ, ಒಂದು ಆಫ್ರಿಕನ್ ದೇಶದಲ್ಲಿ 93 ಸಭೆಗಳಿಗೆ ಕೇವಲ ಮೂರು ರಾಜ್ಯ ಸಭಾಗೃಹಗಳ ಸೌಕರ್ಯವಿದೆ. ಹೀಗೆ ಕೂಟಗಳು ಸಾಮಾನ್ಯವಾಗಿ ದೊಡ್ಡ ತೆರಪು ಜಮೀನುಗಳ ಮೇಲೆ ನಡಿಸಲ್ಪಡುತ್ತವೆ. 150 ಮಂದಿಯ ಒಂದು ಸಭೆಯ ಈ ಕೂಟಗಳಿಗೆ 450 ರಷ್ಟು ಜನರ ಕ್ರಮದ ಹಾಜರಿಯು ದೊರೆಯುತ್ತಿರಲೂ ಬಹುದು.
12 ಪೂರ್ವ ಯೂರೋಪಿನಲ್ಲಿ ಆಸ್ತಿಯನ್ನು ಖರೀದಿಸುವುದು ಅಥವಾ ಕಟ್ಟಡ ಕಟ್ಟುವುದು ಹೆಚ್ಚಾಗಿ ಕಷ್ಟಕರವು, ಆದರೆ ಸ್ವಲ್ಪ ಪ್ರಗತಿಯು ಮಾಡಲ್ಪಡುತ್ತಿದೆ. ಪೋಲೆಂಡ್ನಲ್ಲಿ ಒಂದು ಉತ್ತಮವಾದ ಹೊಸ ಬ್ರಾಂಚ್ ಸೌಕರ್ಯದ ಪ್ರತಿಷ್ಠೆಯು ನವಂಬರ 28, 1992 ರಂದು ಜರಗಿತ್ತು. ಯೆಹೋವನ ಸಾಕ್ಷಿಗಳ ಲೋಕ-ವ್ಯಾಪಕ ಕಾರ್ಯಕ್ಕಾಗಿ ಉದಾರ ದಾನಗಳು, ಹಾಲ್ಗಳನ್ನು ಮತ್ತು ಇತರ ಸೌಕರ್ಯಗಳನ್ನು ಕಟ್ಟಲು ಸಹಾಯಕ್ಕಾಗಿ ಉಪಯೋಗಿಸಲ್ಪಡುತ್ತಿವೆ. ಹೀಗೆ, ಅನಾನುಕೂಲತೆಯಿರುವ ದೇಶಗಳಲ್ಲಿರುವ ಸಭೆಗಳ ಆತ್ಮಿಕ ಕೊರತೆಗಳಿಗಾಗಿ ಒದಗಿಸುವುದರಲ್ಲಿ ತಮ್ಮ ಭೌತಿಕ “ಸಮೃದ್ಧಿಯ” ಅನುಕೂಲತೆಗಳಿಂದ ದಾನಕೊಡುವ ಸಹೋದರರ ಔದಾರ್ಯತೆಯಿಂದಾಗಿ “ಒಂದು ಸಮಾನತ್ವವು” ಉಂಟಾಗುತ್ತದೆ.—2 ಕೊರಿಂಥ 8:13, 14.
ಒಂದು ನೂರು ಕೋಟಿ ತಾಸುಗಳು!
13. ಸಾರುವಿಕೆ ಮತ್ತು ಕಲಿಸುವಿಕೆಯಲ್ಲಿ, 1992 ರಲ್ಲಿ ಎಷ್ಟು ತಾಸುಗಳು ವ್ಯಯಿಸಲ್ಪಟ್ಟವು, ಮತ್ತು ಇದರಲ್ಲಿ ಯಾರ ಪ್ರಯತ್ನಗಳು ಪ್ರತಿಬಿಂಬಿತವಾಗಿವೆ?
13 ನೀವು ಒಂದು ನೂರು ಕೋಟಿ ತಾಸುಗಳೊಂದಿಗೆ ಏನು ಮಾಡುವಿರಿ? ನಿತ್ಯ ಜೀವವನ್ನು ಪಡೆಯುವವರೆಲ್ಲರು ಅಷ್ಟು ತಾಸುಗಳನ್ನು ಮತ್ತು ಅದಕ್ಕಿಂತಲೂ ಹೆಚ್ಚನ್ನು ಯೆಹೋವನ ಫಲದಾಯಕ, ಸಂತೃಪ್ತಿಕರ ಸೇವೆಯಲ್ಲಿ ಕಳೆಯಶಕ್ತರಾಗಿರುವರು. ಆದರೆ ಅಷ್ಟೆಲ್ಲಾ ತಾಸುಗಳನ್ನು ಒಂದು ವರ್ಷದೊಳಕ್ಕೆ ತುರುಕಿಸುವುದನ್ನು ಊಹಿಸಿಕೊಳ್ಳಿರಿ! ಯೆಹೋವನ ಜನರು 1992 ರಲ್ಲಿ ಅದನ್ನೇ ಪೂರೈಸಿರುತ್ತಾರೆ. ರಾಜ್ಯದ ಪ್ರಚಾರಕರೆಲ್ಲರ ವೈಯಕ್ತಿಕ ವರದಿಗಳನ್ನು ಒಟ್ಟು ಕೂಡಿಸುವಾಗ, ಹೊಸ ಉನ್ನತ ಸಂಖ್ಯೆಯಾದ 102,49,10,434 ತಾಸುಗಳು—ಅವುಗಳನ್ನು ವ್ಯಯಿಸುವ ಅತ್ಯುತ್ತಮ ವಿಧಾನದಲ್ಲಿ—“ಬಹಿರಂಗವಾಗಿಯೂ ಮನೆಮನೆಯಲ್ಲಿಯೂ . . . ಕಲಿಸುತ್ತಾ”—ನಮ್ಮ ಮಹಾ ಸೃಷ್ಟಿಕರ್ತನನ್ನು ಸ್ತುತಿಸುವುದರಲ್ಲಿ ವ್ಯಯಿಸಲ್ಪಟ್ಟಿವೆ. (ಅ. ಕೃತ್ಯಗಳು 20:20, NW) ಸರಾಸರಿಯಲ್ಲಿ, 42,89,737 ಸಾಕ್ಷಿಗಳು ಪ್ರತಿ ತಿಂಗಳು ವರದಿ ಮಾಡುತ್ತಿದ್ದರು. ಅವರು ಸಮಾಜದ ಎಲ್ಲಾ ಅಂತಸ್ತುಗಳಿಂದ ಬಂದವರಾಗಿದ್ದಾರೆ. ರಾಜ್ಯದ ಕಾರ್ಯಕ್ಕೆ ಅವರು ನೆರವಾಗಬಲ್ಲ ಸಮಯದಲ್ಲಿ ಕೆಲವರು ಸೀಮಿತವುಳ್ಳವರಾಗಿದ್ದಾರೆ. ಇವರಲ್ಲಿ ಮನೆವಾರ್ತೆಗಾಗಿ ಒದಗಿಸಲೇಬೇಕಾದ ಕುಟುಂಬ ತಲೆಗಳು, ವೃದ್ಧರು, ಮತ್ತು ಆರೋಗ್ಯ ಸಮಸ್ಯೆಯಿರುವ ಅನೇಕರು, ಹಾಗೂ ಇನ್ನೂ ಶಾಲೆಗೆ ಹೋಗುತ್ತಿರುವ ಮಕ್ಕಳು ಸೇರಿರುತ್ತಾರೆ. ಆದರೂ, ಪ್ರತಿಯೊಬ್ಬನಿಂದ ಮಾಡಲ್ಪಟ್ಟ ವರದಿಯು ಯೆಹೋವನೆಡೆಗೆ ಪ್ರೀತಿಯ ಒಂದು ಬೆಲೆಯುಳ್ಳ ಪ್ರತಿಫಲನವಾಗಿರುತ್ತದೆ.—ಲೂಕ 21:2-4 ಹೋಲಿಸಿರಿ.
14. ಯುವ ಜನರು ‘ತಮ್ಮ ಮಹಾ ಸೃಷ್ಟಿಕರ್ತನನ್ನು ಸ್ಮರಿಸುವುದು’ ಹೇಗೆ?
14 ಒಂದು ಎಳೆಯ ಸಂತತಿಯು ಯೆಹೋವನ ಸೇವೆಯಲ್ಲಿ ಬೆಳೆಯುತ್ತಾ ಇದೆ ಮತ್ತು ಇವರಲ್ಲಿ ಹೆಚ್ಚಿನವರು ಪ್ರಸಂಗಿ 12:1ರ ಸೊಲೊಮೋನನ ಮಾತುಗಳ ಅನ್ವಯವನ್ನು ಮಾಡುತ್ತಾ ಇರುವುದು ಸಂತೋಷಕರವು: “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.” ಅವರು ತಮ್ಮ ಶಾಲಾಶಿಕ್ಷಣದಲ್ಲಿ ಶ್ರದ್ಧೆವಹಿಸುತ್ತಿದ್ದಾರೆ ಹಾಗೂ ದೇವಭಕ್ತ ಹೆತ್ತವರಿಂದ ಆತ್ಮಿಕ ವಿಷಯಗಳಲ್ಲಿ ತರಬೇತು ಹೊಂದುತ್ತಿದ್ದಾರೆ. ಇತ್ತೀಚಿನ ಅಧಿವೇಶನಗಳಲ್ಲಿ ಹದಿವಯಸ್ಕ ಎಳೆಯರ ಒಳ್ಳೇ ಸಂಖ್ಯೆಯು ಎದ್ದು ನಿಂತು, ದೀಕ್ಷಾಸ್ನಾನಕ್ಕಾಗಿ ತಮ್ಮನ್ನು ನೀಡಿಕೊಳ್ಳುವುದನ್ನು ಕಾಣುವುದು ಸಂತೋಷಕರವಾಗಿತ್ತು. ಕೆಲವು ತರದ ಉದ್ಯಮವನ್ನು ಅಥವಾ ಕಸಬನ್ನು ಕಲಿಯುವ ಮೂಲಕ, ಶಾಲೆಯಿಂದ ಉತ್ತೀರ್ಣರಾದಾಗ ಪಯನೀಯರರಾಗಲು ವ್ಯಾವಹಾರಿಕ ತಯಾರಿಯನ್ನು ಅವರು ಮಾಡುತ್ತಿರುವುದನ್ನು ತಿಳಿಯುವುದು ಸಹ ಸಂತೋಷಕರವು. ಹೀಗೆ ಅವರು ತಮ್ಮನ್ನು ಪೋಷಿಸಿಕೊಳ್ಳ ಶಕ್ತರಾಗುವರು, ಹೇಗೆ ಅಪೊಸ್ತಲ ಪೌಲನು ಆಗಿಂದಾಗ್ಯೆ ಗುಡಾರ ಮಾಡುವ ಕಸಬಿನ ಮೂಲಕ ಮಾಡಿದನೋ ಹಾಗೆ.—ಅ. ಕೃತ್ಯಗಳು 18:1-4.
15, 16. ಪಯನೀಯರರು ಮತ್ತು ಇತರ ಪೂರ್ಣ ಸಮಯದ ಸೇವಕರು ರಾಜ್ಯ ಕಾರ್ಯದ ಪ್ರಗತಿಗೆ ಹೇಗೆ ನೆರವಾಗಿದ್ದಾರೆ, ಮತ್ತು ಅವರಲ್ಲಿ ಕೆಲವರು ಯಾವ ಆಶೀರ್ವಾದದಲ್ಲಿ ಆನಂದಿಸಿದ್ದಾರೆ?
15 ರಾಜ್ಯ ಕಾರ್ಯದ ಪ್ರಗತಿಗೆ ಪಯನೀಯರರು ಮತ್ತು ಇತರ ಪೂರ್ಣ ಸಮಯದ ಸೇವಕರು ಎಂಥ ಪ್ರಚಂಡವಾದ ನೆರವನ್ನು ನೀಡುತ್ತಿದ್ದಾರೆ! ಈ ಕಳೆದ ವರ್ಷದಲ್ಲಿ ಪಯನೀಯರರ ದರ್ಜೆಗಳು ಒಂದು ಉನ್ನತ ಸಂಖ್ಯೆಯಾದ 9,31,521 ಕ್ಕೆ ವೃದ್ಧಿಯಾದವು. ಅವರು ಪ್ರತಿ ದಿನ ಮನೆಯಿಂದ ಮನೆಗೆ ಸಾರುವಾಗ ಮತ್ತು ಜನರ ಮನೆಗಳಲ್ಲಿ ಬೈಬಲಧ್ಯಯನಗಳನ್ನು ನಡಿಸುವಾಗ, ಶಾಸ್ತ್ರವಚನಗಳ ಮೇಲೆ ಅತಿ ಪರಿಣಾಮಕಾರಿಯಾಗಿ ತಮ್ಮನ್ನು ವ್ಯಕ್ತಪಡಿಸಲು ಶಕ್ತರಾಗುತ್ತಾರೆ. ಅದಲ್ಲದೆ, ಅನೇಕರು ಎರಡು ವಾರಗಳ ಪಯನೀಯರ ಸೇವಾ ಶಾಲೆಯನ್ನು ಹಾಜರಾಗಲು ಯೋಗ್ಯತೆ ಪಡೆದಿದ್ದಾರೆ, ಇದು ಅವರನ್ನು ದೇವರ ಕೆಲಸವನ್ನು ಮಾಡುವುದರಲ್ಲಿ ಹೆಚ್ಚಿನ ಕುಶಲತೆ ಮತ್ತು ಸಂತೋಷವನ್ನು ಬೆಳೆಸಿಕೊಳ್ಳಲು ಸಹಾಯಮಾಡುತ್ತದೆ.
16 ಈ ನಂಬಿಗಸ್ತ ಪಯನೀಯರರಲ್ಲಿ ಪ್ರತಿಯೊಬ್ಬರು ಯೆಶಾಯ 50:4 ರ ಮಾತುಗಳನ್ನು ಅನುಮೋದಿಸಬಲ್ಲರು: “ಬಳಲಿಹೋದವರನ್ನು ಮಾತುಗಳಿಂದ ಸುಧಾರಿಸುವದಕ್ಕೆ ನಾನು ಬಲ್ಲವನಾಗುವಂತೆ ಕರ್ತನಾದ ಯೆಹೋವನು ಶಿಕ್ಷಿತರ ನಾಲಿಗೆಯನ್ನು ನನಗೆ ದಯಪಾಲಿಸಿದ್ದಾನೆ.” ತಮ್ಮ ಸುತ್ತಲಿರುವ ಭ್ರಷ್ಟ ಲೋಕದಿಂದಾಗಿ ಬಳಲಿ ಹೋಗಿರುವ, ಆದರೆ ನಮ್ಮ ನಂಬಿಗಸ್ತ ಪಯನೀಯರರಿಂದ ನುಡಿಯಲ್ಪಡುವ ಮಾತುಗಳಿಂದ ಚೈತನ್ಯವನ್ನು ಪಡೆದಿರುವ ಅನೇಕಾನೇಕ ಮಂದಿ ಇಂದು ಇದ್ದಾರೆ.—ಹೋಲಿಸಿರಿ ಜ್ಞಾನೋಕ್ತಿ 15:23; ಯೆಹೆಜ್ಕೇಲ 9:4.
ಒಂದು ಪ್ರಚಂಡ ಕಟ್ಟುವ ಕಾರ್ಯಕ್ರಮ
17. ಆತ್ಮಿಕ ಕಟ್ಟುವಿಕೆ ಮಾತ್ರವಲ್ಲದೆ, ಯಾವ ಭೌತಿಕ ಕಟ್ಟುವಿಕೆಗಳು ಇತ್ತೀಚಿನ ವರ್ಷಗಳಲ್ಲಿ ತೋರಿಬಂದಿವೆ?
17 ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಆತ್ಮಿಕ ಸಮೃದ್ಧಯು ಭೌತಿಕ ಬೆಳವಣಿಗೆಗೆ ಸಹ ಕರೆಕೊಡುತ್ತದೆ. ಮುದ್ರಣ ಸೌಕರ್ಯಗಳ ವಿಸ್ತರಣೆ, ಆಫೀಸುಗಳು, ಬೆತೆಲ್ ಮನೆಗಳು ಮತ್ತು ರಾಜ್ಯ ಸಭಾಗೃಹಗಳು ಮತ್ತು ಎಸೆಂಬ್ಲಿ ಹಾಲ್ಗಳ ಕಟ್ಟುವಿಕೆಯು ಆವಶ್ಯಕವಾಗುತ್ತವೆ. ಆದುದರಿಂದ ಒಂದು ಭೌತಿಕ ರೀತಿಯಲ್ಲಿ ಕಟ್ಟುವವರಾಗುವಂತೆ ಯೆಹೋವನ ಸಾಕ್ಷಿಗಳು ಆವಶ್ಯಪಡಿಸಲ್ಪಟ್ಟಿದ್ದಾರೆ. ತದ್ರೀತಿಯ ಕಟ್ಟುವ ಕೆಲಸವು ರಾಜ ಸೊಲೊಮೋನನ ದಿನಗಳಲ್ಲಿ ನಡೆದಿತ್ತು. ಸೊಲೊಮೋನನು ಯೆಹೋವನ ಆರಾಧನೆಗಾಗಿ ಕಟ್ಟಿದ ದೇವಾಲಯವು “ದೈವ ಪ್ರೇರಣೆಯಿಂದಾಗಿ ಅವನು ತಿಳುಕೊಂಡಿದ್ದ ಕಟ್ಟಡಗಳ ನಕ್ಷೆಗೆ” ಅನುಸಾರವಾಗಿದ್ದು, ಇದನ್ನು ಯೆಹೋವನು ಅವನ ತಂದೆಯಾದ ರಾಜ ದಾವೀದನಿಗೆ ಒದಗಿಸಿದ್ದನು. (1 ಪೂರ್ವಕಾಲ 28:11, 12, NW) ಹೀಗೆ ಸೊಲೊಮೋನನು ತನ್ನನ್ನು ಆಲೈಸಿದವರನ್ನು ಸುಜ್ಞಾನದ ಅಮೂಲ್ಯ ಮಾತುಗಳಿಂದ ಬಲಪಡಿಸಿದ್ದನು ಮಾತ್ರವೇ ಅಲ್ಲ, ಐಹಿಕ ಲೋಕದಿಂದ ಎಂದೂ ಗಳಿಸಲಾರದ ಒಂದು ಉತ್ಕೃಷ್ಟ ಭೌತಿಕ ಕಟ್ಟಡ ನಿರ್ಮಾಣವನ್ನೂ ನಿರ್ವಹಿಸಿದ್ದನು.—1 ಅರಸು 6:1; 9:15, 17-19.
18, 19. (ಎ) ಯಾವ ತೀವ್ರ ಪ್ರಗತಿಯ ಕಟ್ಟಡ ಯೋಜನೆಗಳು ಯೆಹೋವನ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿವೆ? (ಬಿ) ಯೆಹೋವನ ಆತ್ಮವು ಭೌತಿಕ ಹಾಗೂ ಆತ್ಮಿಕ ಕಟ್ಟುವಿಕೆಯಲ್ಲಿ ಹೇಗೆ ಪ್ರದರ್ಶಿಸಲ್ಪಟ್ಟಿದೆ?
18 ಇಂದು ಯೆಹೋವನ ಸಾಕ್ಷಿಗಳು ದೈವಿಕವಾಗಿ ಪ್ರೇರಿತವಾದ ವಾಸ್ತುಶಿಲ್ಪ ನಕ್ಷೆಯ ಮೂಲಕ ಕಟ್ಟಡ ಕಟ್ಟುವುದಿಲ್ಲ, ಆದರೆ ದೇವರ ಆತ್ಮವು ಅವರಲ್ಲಿ ನಿಜವಾಗಿಯೂ ಇದೆ. ಇಸ್ರಾಯೇಲ್ಯರ ದಿನಗಳಲ್ಲಿದ್ದ ಹಾಗೆ, ಇದು ಲೋಕದ ಜನರನ್ನು ಅಚ್ಚರಿಗೊಳಿಸುವ ರೀತಿಯಲ್ಲಿ ಕಟ್ಟಡ ಕಟ್ಟುವಂತೆ ಅವರನ್ನು ಪ್ರೇರೇಪಿಸುತ್ತದೆ. (ಜೆಕರ್ಯ 4:6) ಕಾಲವು ಸಂಕ್ಷೇಪವಾಗಿದೆ. ರಾಜ್ಯ ಸಭಾ ಗೃಹಗಳು ಮತ್ತು ಇತರ ಕಟ್ಟಡಗಳು ವಿಳಂಬವಿಲ್ಲದೆ ಬೇಕಾಗಿವೆ. ಕೆಲವು ದೇಶಗಳಲ್ಲಿ ಕ್ಷಿಪ್ರವಾಗಿ ಕಟ್ಟಲ್ಪಡುವ ರಾಜ್ಯ ಸಭಾಗೃಹಗಳು ದಿನದ ಸಾಮಾನ್ಯ ಕಾರ್ಯಕ್ರಮವಾಗಿವೆ. ಉದಾಹರಣೆಗೆ, ಕಳೆದ 10 ವರ್ಷಗಳಲ್ಲಿ ಕೆನಡಾ, ಎರಡು ದಿನಗಳಿಗಿಂತಲೂ ಕಡಿಮೆ ಸಮಯದಲ್ಲಿ 306 ರಾಜ್ಯ ಸಭಾಗೃಹಗಳನ್ನು ಕಟ್ಟಿದ ವರದಿ ಮಾಡಿದೆ. ಲೋಕ ವ್ಯಾಪಕವಾಗಿ ಯೆಹೋವನ ಕಾರ್ಯದ ತೀವ್ರ ವಿಸ್ತಾರ್ಯದ ಕಾರಣ, ಒಟ್ಟಿಗೆ 43 ಹೊಸ ಬ್ರಾಂಚ್ ಕಟ್ಟಡಗಳು ಅಥವಾ ಬ್ರಾಂಚ್ ವಿಸ್ತರಣಗಳು ಕಟ್ಟಲ್ಪಡುತ್ತಿವೆ ಅಥವಾ ಯೋಜಿಸಲ್ಪಡುತ್ತಿವೆ. ಅದಲ್ಲದೆ, ಬ್ರೂಕ್ಲಿನ್ನಲ್ಲಿ ಸುಮಾರು ಒಂದು ಸಾವಿರ ಬೆತೆಲ್ ಸ್ವಯಂಸೇವಕರಿಗಾಗಿ ವಸತಿಗೃಹಗಳಿರುವ 30-ಮಾಳಿಗೆಯ ಒಂದು ನಿವಾಸ ಗೃಹದ ಕಟ್ಟುವಿಕೆಯು ಮುಗಿಯುತ್ತಾ ಬಂದಿದೆ. ಅದಲ್ಲದೆ ನ್ಯೂ ಯಾರ್ಕ್ ರಾಜ್ಯದ ಪ್ಯಾಟರ್ಸನ್ ನಲ್ಲಿ, ವಾಚ್ ಟವರ್ ಸೊಸೈಟಿಯಿಂದ ಈ ತನಕ ಎಂದೂ ನಿರ್ವಹಿಸಲ್ಪಡದ ಭಾರೀ ಯೋಜನೆಯಾದ ಒಂದು ಬೈಬಲ್ ಶೈಕ್ಷಣಿಕ ಕೇಂದ್ರವು ನಿಯೋಜಿಸಿದಕ್ಕಿಂತ ಎಷ್ಟೋ ಹೆಚ್ಚು ವೇಗದಿಂದ ಮುಂದೊತ್ತುತ್ತಿದೆ.
19 ಲೋಕದ ಬಲ್ಲ ಕಟ್ಟಡ-ಕಟ್ಟುವ ಕಂಪೆನಿಗಳನ್ನು ಅಚ್ಚರಿಗೊಳಿಸುವ ಕಾರ್ಯ ಸಮರ್ಥತೆ ಮತ್ತು ಗುಣಮಟ್ಟದ ಕೆಲಸದಿಂದ ಈ ಯೋಜನೆಗಳು ಮುಂದರಿಯುತ್ತಾ ಇವೆ. ಏಕೆ? ಯೆಹೋವನ ಸಮರ್ಪಿತ ಸಾಕ್ಷಿಗಳಿಂದ ಮಾಡಲ್ಪಟ್ಟ ಪ್ರಚಂಡವಾದ ದಾನದ ಕಾರಣದಿಂದಲೇ. ಆತನ ಆತ್ಮವು ಅವರನ್ನು ಭೌತಿಕ ಬೆಂಬಲವನ್ನು ಕೊಡುವಂತೆ ಪ್ರೇರೇಪಿಸುತ್ತದೆ ಮಾತ್ರವಲ್ಲ ತಮ್ಮ ಸಮಯ ಮತ್ತು ಶಕ್ತಿಯನ್ನು ಹೃದಯಪೂರ್ವಕವಾಗಿ ಕೊಡುವಂತೆಯೂ ಮಾಡುತ್ತದೆ. ಕಟ್ಟಡ ನಿರ್ಮಾಣ ಸ್ಥಳವು ಒಳ್ಳೇ ತರಬೇತು ಹೊಂದಿದ, ಶ್ರದ್ಧಾಳು ಕೆಲಸಗಾರರಿಂದ ತುಂಬಿರುತ್ತದೆ. ಕಾರ್ಮಿಕರ ಮುಷ್ಕರಗಳು ಅಲ್ಲಿಲ್ಲ, ಕೆಲಸದಲ್ಲಿ ಕಾಲಹರಣವಿಲ್ಲ. ಯೆಹೋವನ ಆತ್ಮವು ಪ್ರೇರೇಪಣೆಯನ್ನು ಕೊಡುತ್ತದೆ, ಮೋಶೆಯ ಕಾಲದಲ್ಲಿ ಗುಡಾರವನ್ನು ಕಟ್ಟಿದವರನ್ನು ಮತ್ತು ಸೊಲೊಮೋನನ ದಿನಗಳಲ್ಲಿ ದೇವಾಲಯವನ್ನು ಕಟ್ಟಿದವರನ್ನು ಹೇಗೆ ಪ್ರೇರೇಪಿಸಿದ್ದನೋ ಹಾಗೆಯೇ. ಆತ್ಮಿಕತೆಯು ಈ ಕೆಲಸಗಾರರಿಂದ ಆವಶ್ಯಕವಾಗಿ ಬೇಕಾದ ಗುಣವಾಗಿದೆ.—ಹೋಲಿಸಿರಿ ವಿಮೋಚನಕಾಂಡ 35:30-35; 36:1-3; 39:42, 43; 1 ಅರಸು 6:11-14.
20. (ಎ) ಎಷ್ಟರ ಮಟ್ಟಿಗೆ ಸುವಾರ್ತೆಯು ಇನ್ನೂ ಸಾರಲ್ಪಡಲಿರುವುದು? (ಬಿ) ಯಾವ ಆಶೀರ್ವಾದಿತ ಪ್ರತೀಕ್ಷೆಗಳು ಯೆಹೋವನ ಜನರನ್ನು ಕಾದಿವೆ?
20 ದೇವಾಲಯದ ಕಟ್ಟುವಿಕೆಯ ಅನಂತರವೂ ಸೊಲೊಮೋನನು ತನ್ನ ಕಟ್ಟಡ ನಿರ್ಮಾಣ ಕಾರ್ಯಕ್ರಮವನ್ನು ಮುಂದುವರಿಸಿದ್ದನು. (2 ಪೂರ್ವಕಾಲ 8:1-6) ಆಧುನಿಕ ದಿನದ ಸಾಕ್ಷಿಗಳು ಎಷ್ಟರ ಮಟ್ಟಿಗೆ—ಹಾಲ್ಗಳ ಮತ್ತು ಇತರ ಸೌಕರ್ಯಗಳ ಸದೃಶ ಅಗತ್ಯತೆಯೊಂದಿಗೆ—ಮುಂದರಿಯುವರು ಎಂಬದು ನಮಗೆ ಗೊತ್ತಿಲ್ಲ. ಆದರೂ, ರಾಜ್ಯದ ಈ ಸುವಾರ್ತೆಯು ಯೆಹೋವನು ಆದೇಶಿಸುವ ಮಟ್ಟಿಗೆ ಸಾರಲ್ಪಟ್ಟಾಗ, ಅಂತ್ಯವು, “ಮಹಾ ಸಂಕಟವು” ಬರುವುದು ಎಂದು ನಮಗೆ ಗೊತ್ತಿದೆ. (ಮತ್ತಾಯ 24:14, 21) ದುರಾಶೆಯ ಮನುಷ್ಯರಿಂದ ಇನ್ನು ಮುಂದೆ ಧ್ವಂಸಗೊಳ್ಳದ ಒಂದು ಭೂಮಿಯ ಮೇಲೆ, ಯೆಹೋವನ “ನೂತನಾಕಾಶಮಂಡಲ ಮತ್ತು ನೂತನಭೂಮಂಡಲ” ಏರ್ಪಾಡು ಮಾನವಕುಲಕ್ಕೆ ಅಪರಿಮಿತ ಆಶೀರ್ವಾದಗಳನ್ನು ತರುವುದು. ಆದುದರಿಂದ ನಾವು, ನಮ್ಮ ಮಹಾ ಸೃಷ್ಟಿಕರ್ತನಿಗೆ ಎಲ್ಲಾ ಸ್ತುತಿಯನ್ನು ಸಲ್ಲಿಸುತ್ತಾ, ‘ದೇವರು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸು’ ವಂತಾಗಲಿ.—ಯೆಶಾಯ 65:17-19, 21, 25.
[ಅಧ್ಯಯನ ಪ್ರಶ್ನೆಗಳು]
a ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಾಶಿತ “ನಿನ್ನ ರಾಜ್ಯವು ಬರಲಿ,” ಪುಟಗಳು 105-17, 186-91 ನೋಡಿರಿ.
ನೀವು ವಿವರಿಸಬಲ್ಲಿರೋ?
▫ ನಮ್ಮ ಮಹಾ ಸೃಷ್ಟಿಕರ್ತನಲ್ಲಿ ಉಲ್ಲಾಸಿಸುವುದಕ್ಕೆ ಯಾವ ಕಾರಣಗಳು ನಮಗಿವೆ?
▫ ಯಾವ ಅಭಿವೃದ್ಧಿಗಳು 1992 ರ ಸೇವಾ ವರ್ಷದಲ್ಲಿ ವರದಿಮಾಡಲ್ಪಟ್ಟವು?
▫ ಹಿಂದೆ ಸಾಕ್ಷಿಕಾರ್ಯವು ನಿಷೇಧಿಸಲ್ಪಟ್ಟ ದೇಶಗಳಲ್ಲಿ, ಯಾವ ಹೇರಳವಾದ ಆಶೀರ್ವಾದಗಳು ವರದಿ ಮಾಡಲ್ಪಟ್ಟಿವೆ?
▫ ಯುವಕರು ಮತ್ತು ಪಯನೀಯರರು ಯೆಹೋವನ ಸಂಸ್ಥೆಯಲ್ಲಿ ಅಭಿವೃದ್ಧಿಗೆ ಹೇಗೆ ನೆರವಾಗಿದ್ದಾರೆ?
▫ ಯೆಹೋವನ ಜನರು ಭೌತಿಕ ಹಾಗೂ ಆತ್ಮಿಕ ಕಟ್ಟುವಿಕೆಯ ಕೆಲಸಗಳಲ್ಲಿ ಹೇಗೆ ಕಾರ್ಯಮಗ್ನರಿದ್ದಾರೆ?
[ಪುಟ 17 ರಲ್ಲಿರುವ ಚೌಕ]
ಕಳೆದ ವರ್ಷ ಲಕ್ಷಾಂತರ ದೀಕ್ಷಾಸ್ನಾನ ಅಭ್ಯರ್ಥಿಗಳು ಸಾರುವ ಮತ್ತು ಕಲಿಸುವ ಕಾರ್ಯದ ಮೇಲೆ ಯೆಹೋವನ ಆಶೀರ್ವಾದವನ್ನು ಪ್ರದರ್ಶಿಸಿದರು
[ಪುಟ 12-15ರಲ್ಲಿರುವಚಿತ್ರ]
ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ 1992 ನೆಯ ಸೇವಾ ವರ್ಷದ ವರದಿ
(See volume)
[ಪುಟ 10 ರಲ್ಲಿರುವ ಚಿತ್ರ]
ಯುವ ಜನರು ದೊಡ್ಡ ಸಂಖ್ಯೆಯಲ್ಲಿ ‘ತಮ್ಮ ಮಹಾ ಸೃಷ್ಟಿಕರ್ತನನ್ನು ಸ್ಮರಿಸುತ್ತಾ’ ಇದ್ದಾರೆ
[ಪುಟ 16 ರಲ್ಲಿರುವ ಚಿತ್ರ]
ಕಳೆದ ವರ್ಷ ಒಂದು ನೂರು ಕೋಟಿಗಿಂತಲೂ ಹೆಚ್ಚು ತಾಸುಗಳು ಸಾರುವ ಮತ್ತು ಕಲಿಸುವ ಕಾರ್ಯದಲ್ಲಿ ವ್ಯಯಿಸಲ್ಪಟ್ಟವು