ನೈಜಿರೀಯದ ಸುಪ್ರೀಂ ಕೋರ್ಟ್ ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ
ಹಳ್ಳಿಗರು ಒಬ್ಬ ರೈತನ ಕೊಯ್ಲನ್ನು ಸೂರೆಮಾಡುತ್ತಾರೆ. ಇತರರು ಇಟ್ಟಿಗೆಕಟ್ಟುವವನೊಬ್ಬನ ಮನೆಯನ್ನು ಮುತ್ತಿ ಅವನ ಸಲಕರಣೆಗಳನ್ನು ದೋಚಿಕೊಳ್ಳುತ್ತಾರೆ. ಇನ್ನೂ ಇತರರು ಒಬ್ಬ ಸ್ತ್ರೀಯು ಖರೀದಿಸುವುದನ್ನು ಮತ್ತು ಮಾರುವುದನ್ನು ತಡೆಗಟ್ಟುತ್ತಾರೆ. ಇಂತಹ ದುರಾಚಾರವೇಕೆ? ಏಕೆಂದರೆ ಅದಕ್ಕೆ ಗುರಿಯಾದವರು, ಎಲ್ಲರೂ ಯೆಹೋವನ ಸಾಕ್ಷಿಗಳು, ಏಜ್ ಗ್ರೇಡ್ ಸಂಘಗಳಲ್ಲಿ ಪಾಲು ತಕ್ಕೊಳ್ಳದವರಾಗಿದ್ದರು. ‘ಯಾವುದರಲ್ಲಿ?’ ಎಂದು ನೀವು ಸೋಜಿಗಪಡಬಹುದು.
ಏಜ್ ಗ್ರೇಡ್ ಸಂಘವು, ಸುಮಾರು ಒಂದೇ ಸಮಯದಲ್ಲಿ ಮತ್ತು ಒಂದೇ ಹಳ್ಳಿಯಲ್ಲಿ ಹುಟ್ಟಿದ ಜನರಿಂದ, ಸಾಮಾನ್ಯವಾಗಿ ಪುರುಷರಿಂದ, ಕೂಡಿರುತ್ತದೆ. ಪೂರ್ವ ನೈಜಿರೀಯದಲ್ಲಿ ಏಜ್ ಗ್ರೇಡ್ ಗುಂಪುಗಳು ಸಾಮಾನ್ಯವಾಗಿರುತ್ತವೆ. ಅವರು ಒಂದು ಸಾಮಾಜಿಕ ಯೋಜನೆಯನ್ನು ಯೋಜಿಸಬಹುದು, ಆದರೆ ಸದಸ್ಯರು ಪ್ರಾಪ್ತವಯಸ್ಕರಾಗಿದ್ದಾರೆಂದು ತೋರಿಸುವುದಕ್ಕೆ ಅವರು ಮೂರ್ತಿಪೂಜೆಯಲ್ಲಿ ಸಹ ಭಾಗವಹಿಸುತ್ತಾರೆ ಮತ್ತು ಪ್ರೇತಾರಾಧನೆಯ ಸಂಸ್ಕಾರಗಳನ್ನು ನಡಿಸುತ್ತಾರೆ. ಅಂಥ ಪದ್ಧತಿಗಳನ್ನು ನಿಜ ಕ್ರೈಸ್ತರಿಗೆ ಬೈಬಲ್ ಖಂಡಿಸುವ ಕಾರಣ, ಯೆಹೋವನ ಸಾಕ್ಷಿಗಳಿಗೆ ಅಂಥ ಗುಂಪುಗಳಲ್ಲಿ ಯಾವ ಪಾಲೂ ಇರುವದಿಲ್ಲ.—1 ಕೊರಿಂಥ 10:20, 21; 1 ಯೋಹಾನ 5:21.
ಸ್ಯಾಮುವೆಲ್ ಒಕೊಬು, ನೈಜಿರೀಯದ ಆಬಾ ಶಹರದಲ್ಲಿ ಚಿಪ್ಪಿಗನ ಕೆಲಸ ಮಾಡುತ್ತಿದ್ದನು. ಆಲಾಯಿಯ ಯುಮುಂಕಾಲು ಏಜ್ ಗ್ರೇಡ್ ಸಂಘದ ಸದಸ್ಯರು, 1978 ರ ಆರಂಭದಲ್ಲಿ, ಒಂದು ಆರೋಗ್ಯ ಕೇಂದ್ರವನ್ನು ಕಟ್ಟಲು ಸಹಾಯಕ್ಕಾಗಿ ಅವನು ಒಂದು “ತೆರಿಗೆ” ಕೊಡುವಂತೆ ತಗಾದೆ ಮಾಡಿತು. ಒಬ್ಬ ನಿಜ ಕ್ರೈಸ್ತನೋಪಾದಿ ಸ್ಯಾಮುವೆಲ್, ಬೇರೆ ಜನರಿಗೆ ಸಹಾಯ ಮಾಡಲು ಪರಿಶ್ರಮಪಡುತ್ತಾನಾದರೂ, ಏಜ್ ಗ್ರೇಡ್ ಗುಂಪಿನೊಂದಿಗೆ ಕೂಡಿಕೊಳ್ಳಲು ಅವನು ಮನಸ್ಸಾಕ್ಷಿಪೂರ್ವಕವಾಗಿ ನಿರಾಕರಿಸಿದನು. ಆ ವರ್ಷದ ಎಪ್ರಿಲ್ 22 ರಂದು, ಆ ಗುಂಪಿನ ಆರು ಮಂದಿ ಸದಸ್ಯರು ಅವನ ಅಂಗಡಿಯ ಒಳಗೆ ನುಗ್ಗಿ, ಅವನ ಹೊಲಿಗೆಯ ಯಂತ್ರವನ್ನು ಕಸಿದುಕೊಂಡು, ಅವನು ಹಣಕೊಡುವ ತನಕ ಅದನ್ನು ತಮ್ಮ ವಶದಲ್ಲಿಡುವರೆಂದು ಹೇಳಿದರು. ಅವರ ಸಂಘದ ಒಬ್ಬ ಸದಸ್ಯನು ಅವನಲ್ಲದರ್ದಿಂದ ತಾನೇನನ್ನೂ ಕೊಡುವ ಹಂಗಿನಲ್ಲಿಲ್ಲವೆಂದು ಸ್ಯಾಮುವೆಲ್ ಆಕ್ಷೇಪಿಸಿದನು. ತನ್ನ ಹೊಲಿಗೆಯ ಯಂತ್ರವನ್ನು ಹಿಂದೆಪಡೆಯಲು ಶಕ್ತನಾಗದಾಗ, ಸ್ಯಾಮುವೆಲ್ ವಿಷಯವನ್ನು ಕೋರ್ಟಿಗೊಯ್ದನು.
ಕೋರ್ಟಿನಿಂದ ಕೋರ್ಟಿಗೆ
ಮುಖ್ಯ ಮ್ಯಾಜಿಸ್ಟ್ರೆಟ್ನ ಕೋರ್ಟಿನಲ್ಲಿ, ಏಜ್ ಗ್ರೇಡ್ ಗುಂಪು ವಾದಿಸಿತ್ತೇನಂದರೆ, ಸ್ಯಾಮುವೆಲ್ ಅವನ ವಯಸ್ಸಿನ ಕಾರಣದಿಂದಾಗಿ ಯಾಂತ್ರಿಕವಾಗಿಯೇ ಅವರ ಸದಸ್ಯರಲ್ಲಿ ಒಬ್ಬನಾಗುತ್ತಾನೆ, ಅವರು ತಮ್ಮ ಮೇಲೆ ಹೊರಿಸಿಕೊಂಡ ಯಾವುದೇ ತೆರಿಗೆಯನ್ನು ಕೊಡಲು ಜವಾಬ್ದಾರನಾಗುತ್ತಾನೆ. ಅದಲ್ಲದೆ, ಒಬ್ಬ ಸದಸ್ಯನು ತೆರಿಗೆಯನ್ನು ಕೊಡದಿದ್ದರೆ, ಅವನು ಅದನ್ನು ಕೊಡುವ ತನಕ ಅವನ ಆಸ್ತಿಯನ್ನು ವಶಪಡಿಸಿಕೊಳ್ಳುವುದು ಸ್ಥಳೀಯ ಪದ್ಧತಿಯಾಗಿತ್ತು.
ಕೋರ್ಟು ಸಮ್ಮತಿಸಲಿಲ್ಲ. ಫೆಬ್ರವರಿ 28, 1980 ರಲ್ಲಿ ಅದು ವಿಧಿಸಿತ್ತೇನಂದರೆ, ಏಜ್ ಗ್ರೇಡ್ ಗುಂಪಿನ ಒಬ್ಬ ಸದಸ್ಯನಾಗುವಂತೆ ಸ್ಯಾಮುವೆಲ್ನನ್ನು ಬಲಾತ್ಕರಿಸ ಸಾಧ್ಯವಿಲ್ಲ. ಮುಖ್ಯ ಮ್ಯಾಜಿಸ್ಟ್ರೆಟ್ ಹೇಳಿದ್ದು: “ಯಾವ ಒಂದು ಪದ್ಧತಿಯು ಸಹವಾಸದ ಒಂದು ಸ್ವತಂತ್ರ ಆಯ್ಕೆಯನ್ನು ಅಪಹರಿಸುತ್ತದೋ ಅದು ನೈಜಿರೀಯ ಗಣರಾಜ್ಯ ಸಂವಿಧಾನದ 37 ನೆಯ ಪ್ರ[ಕರಣ] ಕ್ಕೆ ವಿರುದ್ಧವಾಗಿದೆ, ಆದುದರಿಂದ, ನ್ಯಾಯಬದ್ಧತೆಯನ್ನು ಗಳಿಸಲಾರದು.”
ಏಜ್ ಗ್ರೇಡ್ ಗುಂಪು ಈ ತೀರ್ಮಾನವನ್ನು ಹೈಕೋರ್ಟಿಗೆ ಅಪ್ಪೀಲು ಮಾಡಿತು ಮತ್ತು ಗೆದ್ದಿತು. ಅದು ಅವನ ಊರಿನ ಸಾಮಾಜಿಕ ವಿಕಾಸಕ್ಕೆ ನೆರವಾಗುವ ಕೇವಲ ಒಂದು ವಿಧಾನವೆಂದು ತಿಳಿಸುತ್ತಾ, ಸ್ಯಾಮುವೆಲ್ ತೆರಿಗೆಯನ್ನು ಕೊಡುವಂತೆ ನ್ಯಾಯಾಧೀಶನು ಆಜ್ಞಾಪಿಸಿದನು.
ಅದು ಅನ್ಯಾಯವಾಗಿತ್ತೆಂದು ಕಂಡ ಸ್ಯಾಮುವೆಲ್ ಅನಂತರ ಅಪ್ಪೀಲು ಮಾಡಿದನು. ಅಪ್ಪೀಲ್ ಕೋರ್ಟ್ ಸ್ಯಾಮುವೆಲ್ ಪರವಾಗಿ ನಿರ್ಣಯಕೊಡುತ್ತಾ, ಹೈಕೋರ್ಟಿನ ತೀರ್ಮಾನವನ್ನು ವಿಪರ್ಯಸ್ತಮಾಡಿತು. ಸೋಲನ್ನೊಪ್ಪಿಕೊಳ್ಳಲು ಮನಸ್ಸಿಲ್ಲದೆ, ಏಜ್ ಗ್ರೇಡ್ ಗುಂಪು ಮೊಕದ್ದಮೆಯನ್ನು ನೈಜಿರೀಯದ ಸುಪ್ರೀಂ ಕೋರ್ಟಿಗೆ ಒಯ್ಯಿತು.
ಈ ಮಧ್ಯೆ, ಸ್ಯಾಮುವೆಲ್ನ ಹಳ್ಳಿಯಲ್ಲಿ ಗುಂಪಿನ ಸದಸ್ಯರು ಕಾರ್ಯತತ್ಪರರಾಗಿದ್ದರು. ಸಾಕ್ಷಿಗಳು ಎಲ್ಲಾ ಸಾಮಾಜಿಕ ಯೋಜನೆಗಳಿಗೆ ವಿರುದ್ಧವಾಗಿದ್ದಾರೆಂದು ವಾದಿಸುತ್ತಾ, ಆ ಕ್ಷೇತ್ರದಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಯನ್ನು ನಿಷೇಧಿಸುವಂತೆ ಹಳ್ಳಿಯ ಮುಖ್ಯಸ್ಥನನ್ನು ಅವರು ಮನಗಾಣಿಸಿದರು. ಊರಿನ ಡಂಗುರ ಹೊಡೆಯುವವನು, ಯೆಹೋವನ ಸಾಕ್ಷಿಗಳೊಂದಿಗೆ ಯಾರಾದರೂ ವ್ಯವಹಾರಮಾಡಿದರೆ ಅವರಿಗೆ ಜುಲ್ಮಾನೆ ಹಾಕಲಾಗುವುದೆಂದು ಸಾರಿದನು. ನೆರೆಕರೆಯ ಊರುಗಳ ಸಾಕ್ಷಿಗಳು ಅಡ್ಡಬಂದರು ಮತ್ತು ಹಳ್ಳಿಯ ಹಿರೀ ಪುರುಷರಿಗೆ ವಿಷಯವನ್ನು ಸ್ಪಷ್ಟೀಕರಿಸಿದರು. ಸಾಮಾಜಿಕ ವಿಕಾಸಕ್ಕೆ ದೇವಜನರು ಯಾವ ರೀತಿಯಲ್ಲೂ ವಿರುದ್ಧವಾಗಿರುವುದಿಲ್ಲ ಎಂದವರು ವಿವರಿಸಿದರು. ವಾಸ್ತವದಲ್ಲಿ ಸ್ಯಾಮುವೆಲ್, ಏಜ್ ಗ್ರೇಡ್ ಗುಂಪುಗಳಿಂದ ಯೋಜಿತವಲ್ಲದ ಸಾಮಾಜಿಕ ಯೋಜನೆಗಳಿಗೆ ತಾನು ನೆರವಾಗಿದ್ದೇನೆಂದು ರುಜುಪಡಿಸುವ ರಶೀದಿಗಳನ್ನು ಕೋರ್ಟಿನ ಮುಂದಿಟ್ಟಿದ್ದನು. ಆಗ ಹಳ್ಳಿಯ ಹಿರೀ ಪುರುಷರು ಸಾಕ್ಷಿಗಳಿಗೆ ಬಹಿಷ್ಕಾರಹಾಕುವ ತಮ್ಮ ನಿರ್ಣಯವನ್ನು ವಿಪರ್ಯಸ್ತಗೊಳಿಸಿದರು.
ಧಾರ್ಮಿಕ ಸ್ವಾತಂತ್ರ್ಯ ಜಯಿಸುತ್ತದೆ
ಅಕ್ಟೋಬರ 21, 1991 ರಲ್ಲಿ ನೈಜಿರೀಯನ್ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರು ಸರ್ವಾನುಮತದಿಂದ ಸ್ಯಾಮುವೆಲ್ನ ಪರವಾಗಿ ನ್ಯಾಯಕೊಟ್ಟರು. ನ್ಯಾಯಮೂರ್ತಿ ಪೌಲ್ ಎನ್ವುಕಡ್ ಇವರ ಮುಖ್ಯ ತೀರ್ಮಾನದ ಮೇಲೆ ವಿವರ ನೀಡುತ್ತಾ, ನ್ಯಾಯಮೂರ್ತಿ ಅಬುಬೇಕರ್ ವಾಲಿ ಇವರು ಹೇಳಿದ್ದು: “ಪ್ರತಿವಾದಿ [ಸ್ಯಾಮುವೆಲ್] ಸಲ್ಲಿಸಲು ವಿರೋಧಿಸಿದ್ದು ಸುಂಕ [ಹೊರಿಸಲ್ಪಟ್ಟ ತೆರಿಗೆ] ವನ್ನಲ್ಲ, ಬದಲಾಗಿ, ಯಾವುದೇ ಸಂಸ್ಥೆಯ, ಕ್ಲಬ್ನ ಅಥವಾ ಏಜ್ ಗ್ರೇಡ್ನ ಸದಸ್ಯನಾಗಿರುವುದನ್ನೇ, ಯಾಕಂದರೆ ಅದು ಯೆಹೋವನ ಸಾಕ್ಷಿ[ಗಳ] ಒಬ್ಬ ಸದಸ್ಯನಾಗಿರುವ ಅವನ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿದೆ.”
ನ್ಯಾಯಮೂರ್ತಿ ಮುಂದುವರಿಸಿದ್ದು: “ನೈಜಿರೀಯನ್ ನಾಗರಿಕರೆಲ್ಲರಿಗೆ, 1963 ರ ಸಂವಿಧಾನ ಪ್ರಕರಣ 24(1), ಮನಸ್ಸಾಕ್ಷಿ, ವಿಚಾರ, ಮತ್ತು ಧರ್ಮ ಸ್ವಾತಂತ್ರ್ಯವನ್ನು ಕೊಟ್ಟಿದೆ. ಪ್ರತಿವಾದಿಗೆ ಏಜ್ ಗ್ರೇಡ್ಗೆ ಸೇರುವುದನ್ನು ನಿಷೇಧಿಸುವ ಅವನ ಧರ್ಮ, ವಿಚಾರ ಮತ್ತು ಮನಸ್ಸಾಕ್ಷಿಯ ತತ್ವಗಳನ್ನು ಪಾಲಿಸುವ ಹಕ್ಕು ಅವನಿಗಿದೆ. ಇದಕ್ಕೆ ವ್ಯತಿರಿಕ್ತವನ್ನು ಹೊರಿಸುವ ಯಾವುದೇ ಪದ್ಧತಿಯು ಸಂವಿಧಾನಕ್ಕೆ ವಿರುದ್ಧವಾಗಿದೆ, ಆದುದರಿಂದ ಆ ಮಟ್ಟಿಗೆ ನಿರರ್ಥಕವಾಗಿದೆ.”
ಸಾರಾಂಶದಲ್ಲಿ, ಸದಸ್ಯತನವು ಒಂದು ಸಾಮಾಜಿಕ ಪದ್ಧತಿಯಾಗಿರಬಹುದಾದರೂ, ಯಾವನೇ ಒಬ್ಬ ವ್ಯಕ್ತಿಯನ್ನು ಏಜ್ ಗ್ರೇಡ್ ಗುಂಪಿಗೆ ಸೇರಲು ನ್ಯಾಯಬದ್ಧವಾಗಿ ಒತ್ತಾಯಪಡಿಸ ಸಾಧ್ಯವಿಲ್ಲ ಎಂಬದಾಗಿ ನ್ಯಾಯಾಲಯವು ವಿಧಿಸಿತು. ಸಲ್ಲತಕ್ಕ ಹಣವು ಸಾಮಾಜಿಕ ವಿಕಾಸಕ್ಕಾಗಿ ಇದ್ದರೂ ಕೂಡ, ಒಬ್ಬನು ಯಾವುದರ ಸದಸ್ಯನಲ್ಲವೋ ಆ ಸಂಘವು ವ್ಯಕ್ತಿಯೊಬ್ಬನನ್ನು ಹಣ ಸಲ್ಲಿಸುವಂತೆ ನ್ಯಾಯಬದ್ಧವಾಗಿ ಒತ್ತಾಯಪಡಿಸ ಸಾಧ್ಯವಿಲ್ಲವೆಂದೂ ಅದು ವಿಧಿಸಿತು. ಹೀಗೆ ಚಿಕ್ಕ ವಿವರವಾಗಿ ತೋರುವ ಇದರಲ್ಲಿ, ನೈಜಿರೀಯದ ಎಲ್ಲರಿಗೆ ಧಾರ್ಮಿಕ ಸ್ವಾತಂತ್ರ್ಯವು ಎತ್ತಿಹಿಡಿಯಲ್ಪಟ್ಟಿತು.