ನಮೀಬಿಯದಲ್ಲಿ—ತಿಳಿವಳಿಕೆಯನ್ನು ಹಂಚುವುದು
“ನನಗೆ ಗೊತ್ತಿಲ್ಲ” ಎಂಬ ಅಭಿವ್ಯಕ್ತಿಯನ್ನು ನೀವು ಎಷ್ಟು ಭಾಷೆಗಳಲ್ಲಿ ಕೇಳಿದ್ದೀರಿ? “ಹೈ ನೊಕುತ್ಸುವ,” ಎಂದಳು ಹರೇರೊ ಮಹಿಳೆ, ತನ್ನ ಸಾಂಪ್ರದಾಯಿಕ ಉದ್ದಂಗಿ ಮತ್ತು ಕೊಂಬಿನಾಕಾರದ ತಲೆಮುಸುಕಿನೊಂದಿಗೆ. “ನೈ ಯುಡೈಟ್ ಕ್ವಾ,” ಎಂದು ಪ್ರತಿವರ್ತಿಸಿದಳು ಕ್ವಾನ್ಯಾಮ ಹುಡುಗಿ, ಮಂದಹಾಸದೊಂದಿಗೆ. “ಕಾಂಡ್ಯುವೆಟ್ ಕ್ವಾ,” ಉತ್ತರಿಸಿದ ಎನ್ಡಾಂಗ ಹಳ್ಳಿಗ ಭುಜಹಾರಿಸುತ್ತಾ. “ಕಾಪೈ ನಾ ಕುಜ್ಯುವ,” ಎಂದು ಪ್ರತಿವರ್ತಿಸಿದ ಒಬ್ಬ ಕ್ವಾಂಗಲಿ ಆಡುಕಾಯುವವ.
ಈ ಎಲ್ಲಾ ವ್ಯಕ್ತಿಗಳು ಹೇಳುತ್ತಿದ್ದದ್ದು “ನನಗೆ ಗೊತ್ತಿಲ್ಲ” ಎಂಬದಾಗಿ. ಸುಮಾರು 8,24,000 ಚದರ ಕಿಲೊಮೀಟರ್ನ ಈ ವಿಶಾಲ ಕ್ಷೇತ್ರದಲ್ಲಿರುವ 13,70,000 ನಿವಾಸಿಗಳನ್ನು ತಲಪಲು ಪ್ರಯತ್ನಿಸಿದಾಗ ಯೆಹೋವನ ಸಾಕ್ಷಿಗಳು ನಮೀಬಿಯದಲ್ಲಿ ದುರ್ದಮವಾದ ಭಾಷಾ ಸಮಸ್ಯೆಗಳನ್ನು ಎದುರಿಸಿದರ್ದೆಂಬದನ್ನು ಇದು ಎಷ್ಟು ಚೆನ್ನಾಗಿ ಚಿತ್ರಿಸುತ್ತದೆ!
ಮತ್ತು ಆಶ್ಚರ್ಯವೇನೂ ಅಲ್ಲ! ನಮೀಬಿಯದ ಹರೇರೊ ಮತ್ತು ನಾಮಾ ಜನರು ಮಾತ್ರವಲ್ಲ ಒವೆಂಬೊ ಮತ್ತು ಕವೆಂಗೊ, ಟಿಸ್ವಾನ್, ಕೆಪ್ರಿವ್ಯನ್, ಹೈಂಬ್, ಬುಷ್ಮನ್, ಮತ್ತು ಡಮಾರದ ಜನರಿಗೆ ಸಹ ಅವರ ಸ್ವಂತ ಭಾಷೆಗಳಿವೆ. ವೈದೃಶ್ಯವಾಗಿ, ಸಾಕ್ಷಿಗಳು ಇಂಗ್ಲಿಷ್ ಮತ್ತು ಅಫ್ರಿಕಾನ್ಸ್ನ ಬೈಬಲ್ ಸಾಹಿತ್ಯದಿಂದ ಮಾತ್ರವೇ ಸನ್ನದ್ಧರಾಗಿದ್ದರು. ಸತ್ಯವು ಹೆಚ್ಚು ಜನರಿಗೆ ತಿಳಿಯಬೇಕಾದರೆ ಭಾಷಾಂತರದ ಕೆಲಸವು ಪ್ರಾಮುಖ್ಯವಾಗಿತ್ತೆಂಬದು ಸ್ಫುಟ. ಅಂದು ಯಾವುದು ನೈರುತ್ಯ ಆಫ್ರಿಕವಾಗಿತ್ತೋ ಅದರ ಪ್ರಧಾನ ಪಟ್ಟಣವಾದ ವಿಂಡೊಕ್ನಲ್ಲಿ ಅನೇಕ ವರ್ಷಗಳ ಹಿಂದೆ ಒಂದು ಅತಿ ಚಿಕ್ಕ ರೀತಿಯಲ್ಲಿ ಇದು ಪ್ರಾರಂಭಿಸಿತು.
“ವಿಂಡೊಕ್ನಲ್ಲಿ ನಮ್ಮ ಸಾಕ್ಷಿ ಕಾರ್ಯಕ್ಕೆ ಚರ್ಚು ಮತ್ತು ಪೊಲೀಸರಿಂದ ಕಟು ವಿರೋಧವಿತ್ತು,” ನೆನಪಿಸುತ್ತಾನೆ ಡಿಕ್ ವಾಲ್ಡ್ರ್ನ್. ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ನ ಒಬ್ಬ ಪದವೀಧರನಾಗಿ ಇವನು ತನ್ನ ಪತ್ನಿ ಕಾರೆಲ್ನೊಂದಿಗೆ 1953 ರಲ್ಲಿ ಈ ದೇಶಕ್ಕೆ ಬಂದನು. “ಕರಿಜನರು ವಾಸಿಸಿದ್ದ ಕ್ಷೇತ್ರಗಳೊಳಗೆ ಹೋಗಲು ನಮಗೆ ಬಿಡುತ್ತಿರಲಿಲ್ಲ, ಕರಿಯರೊಂದಿಗೆ ನಾವು ಮಾತಾಡುವುದನ್ನು ಕಂಡರೆ ಕೆಲವೊಮ್ಮೆ ನಮ್ಮನ್ನು ಪೀಡಿಸಲಾಗುತ್ತಿತ್ತು. ಕಟ್ಟಕಡೆಗೆ ನಿರಾತಂಕವಾಗಿ ಉಳಿಯುವಂತೆ ಬಿಡಲ್ಪಟ್ಟ ಒಂದು ಸ್ಥಳವಮ್ನ ನಾವು ಕಂಡುಕೊಂಡೆವು—ಗ್ಯಾಮೆನ್ಸ್ ನದಿಯ ಒಣತಳದಲ್ಲಿ! ಇದು ಊರಿನಿಂದ ತುಸು ಹೊರಗೆ ಇತ್ತು. ಜಾಲೀ ವೃಕ್ಷದ ಪೊದೆಗಳ ಕೆಳಗೆ ಮರೆಯಾಗಿ, ನಾವಲ್ಲಿ ಬೈಬಲ್ ಅಧ್ಯಯನಗಳನ್ನು ನಡಿಸಿದೆವು.”
ವಾಚ್ ಟವರ್ ಪ್ರಕಾಶನಗಳು ಸ್ಥಳೀಕ ಭಾಷೆಗಳಿಗೆ ಮೊದಲಾಗಿ ಭಾಷಾಂತರಗೊಂಡದ್ದೂ ಅಲ್ಲಿಯೇ. ಕ್ವಾನ್ಯಾಮದಲ್ಲಿ ಕೆಲವು ಟ್ರ್ಯಾಕ್ಟ್ಗಳು ಮತ್ತು ನಾಮಾದಲ್ಲಿ “ರಾಜ್ಯದ ಈ ಸುವಾರ್ತೆ” ಕಿರುಪುಸ್ತಕ ಅವುಗಳಲ್ಲಿ ಸೇರಿದ್ದವು. ಒಬ್ಬ ಆಸಕ್ತ ವ್ಯಕ್ತಿಯು ಭಾಷಾಂತರಿಸಲು ಸಹಾಯಮಾಡುತ್ತಿದ್ದ ಈ ಕಿರುಪುಸ್ತಕದ ಸಂಬಂಧದಲ್ಲಿ ಸಹೋದರ ವಾಲ್ಡ್ರ್ನ್ ಒಂದು ವಿನೋದದ ಅನುಭವವನ್ನು ನೆನಪಿಸುತ್ತಾರೆ. “ಆದಾಮನು ಒಬ್ಬ ಪರಿಪೂರ್ಣ ಮನುಷ್ಯನು” ಎಂಬ ವಾಕ್ಯಕ್ಕೆ ನಾಮಾ ಸಮಾನಾರ್ಥವು ಸಿಕ್ಕಲಿಲ್ಲ. ಆದ್ದರಿಂದ ಆಸಕ್ತ ವ್ಯಕ್ತಿಯು ಹೇಳಿದ್ದು: “ಆದಾಮನು ಕೇವಲ ಒಂದು ಮಾಗಿದ ಪೀಚ್ ಹಣ್ಣಿನಂತಿದ್ದನು ಎಂದು ಬರೆಯಿರಿ. ಆಗ ನಾಮಾ ಜನರು ಅವನು ಪರಿಪೂರ್ಣನಾಗಿದ್ದನೆಂದು ತಿಳುಕೊಳ್ಳುವರು.” ನಮೀಬಿಯದ ಅನೇಕ ಸ್ಥಳೀಕ ಜನರ ನಡುವೆ ಶಾಸ್ತ್ರಗ್ರಂಥದ ತಿಳುವಳಿಕೆಯನ್ನು ಹಂಚುವುದರಲ್ಲಿ ಒಂದು ಪ್ರಾರಂಭವನ್ನು ಆಗ ಮಾಡಿದ್ದು ಇದೇ ವಿಧದಲ್ಲಿ.—ದಾನಿಯೇಲ 11:33 ಹೋಲಿಸಿರಿ.
ಒಂದು ಮೈಲುಗಲ್ಲನ್ನು ತಲಪುವುದು
ನಿತ್ಯಜೀವಕ್ಕೆ ನಡಿಸುವ ಸತ್ಯವು ಎಂಬ ಪುಸ್ತಕವು 1970 ರುಗಳ ಪ್ರಾರಂಭದಲ್ಲಿ ಎನ್ಡಾಂಗ ಮತ್ತು ಕ್ವಾನ್ಯಾಮಕ್ಕೆ ಭಾಷಾಂತರಗೊಂಡಾಗ, ಒಂದು ಮೈಲುಗಲ್ಲು ತಲಪಲ್ಪಟ್ಟಿತು. ವಿಂಡೊಕ್ನ ಸುಮಾರು 700 ಕಿಲೋಮೀಟರ್ ಉತ್ತರಕ್ಕಿರುವ ಓವಮ್ಬಾಲೆಂಡ್ನಲ್ಲಿರುವ ನಮೀಬಿಯನರ ದೊಡ್ಡ ಜನಸಮೂಹದಿಂದ ಆಡಲ್ಪಡುವ ಎರಡು ಪ್ರಾಮುಖ್ಯ ಭಾಷೆಗಳು ಇವಾಗಿವೆ. ಓವಮ್ಬಾಲೆಂಡ್ನ ಒಂದು ವಸಾಹತುವಾದ ಒಡಾನದ್ವಲ್ಲಿ ಆಗ ಒಂದು ಪಯನೀಯರ ಗೃಹವನ್ನು ಸ್ಥಾಪಿಸಲಾಯಿತು. ದ ವಾಚ್ಟವರ್ ನಲ್ಲಿ ಆಧಾರಿತವಾದ ಸಾಪ್ತಾಹಿಕ ಬೈಬಲ್ ಚರ್ಚೆಯಿಂದ ಈ ಕ್ಷೇತ್ರದ ಆಸಕ್ತ ಜನರು ಪ್ರಯೋಜನ ಹೊಂದುವಂತೆ ಸಹಾಯಮಾಡಲು, ಇಂಗ್ಲಿಷ್ ಅಧ್ಯಯನ ಲೇಖನಗಳ ಸಾರಾಂಶವನ್ನು ಎನ್ಡಾಂಗ ಮತ್ತು ಕ್ವಾನ್ಯಾಮಕ್ಕೆ ಭಾಷಾಂತರಿಸುವಂತೆ, ಓವಮ್ಬೊಲಾಂಡ್ನಲ್ಲಿ ಸೇವೆಮಾಡುತ್ತಿದ್ದ ವಿಶೇಷ ಪಯನೀಯರರನ್ನು ನೇಮಿಸಲಾಯಿತು.
ಎಲ್ಲಿ ಭಾಷಾಂತರವಾದ ವಾಚ್ಟವರ್ ಸಮಾಚಾರದ ಪ್ರತಿಗಳನ್ನು ಒಂದು ಹಳೇ ದ್ವಿಪ್ರತಿ ಯಂತ್ರದಲ್ಲಿ ಉತ್ಪಾದಿಸಲಾಗುತ್ತಿತ್ತೋ ಆ ಗ್ಯಾರೇಜಿನ ತಡಕೆಹಾಕಿ ಪ್ರತ್ಯೇಕಿಸಿದ ಒಂದು ಮೂಲೆಯೇ ಭಾಷಾಂತರ “ಆಫೀಸು” ಆಗಿತ್ತು. ಪರಿಸ್ಥಿತಿಗಳು ತುಸು ಹಳೆಯ ತರಹದ್ದೂ ಮತ್ತು ಬೇಸಗೆಯ ತಾಪಮಾನಗಳು ಸರಾಸರಿ 38 ಮತ್ತು 44 ಡಿಗ್ರಿ ಸೆಲ್ಸಿಯಸ್ಗೆ ಏರುತಿದ್ತದ್ದರಿಂದ, ಈ ಅತ್ಯಗತ್ಯದ ಕೆಲಸದ ಮೇಲೆ ಏಕಾಗ್ರತೆಯನ್ನಿಡುವುದು ಸುಲಭವಾಗಿರಲಿಲ್ಲ. ಆದರೂ, ಹೊಸ ಬ್ರೋಷರ್ಗಳು ಮತ್ತು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವು ಇಲ್ಲಿಯೇ ಭಾಷಾಂತರಗೊಂಡವು.
ಓವಮ್ಬಾಲೆಂಡ್ನಲ್ಲಿ ಮತ್ತು ನಮೀಬಿಯದ ಬೇರೆ ಕಡೆಗಳಲ್ಲಿ ಸಭೆಗಳು ರಚಿಸಲ್ಪಟ್ಟಂತೆ, ಎಷ್ಟು ಹೆಚ್ಚು ಪ್ರತಿವರ್ತನೆ ಸಿಕ್ಕಿತೆಂದರೆ ದೊಡ್ಡ ಮತ್ತು ಉತ್ತಮ ತರಹದ ಕಟ್ಟಡಗಳ ಅಗತ್ಯತೆ ಉಂಟಾಯಿತು. ಅದಲ್ಲದೆ, ದೇಶದ ಇತರ ಭಾಗಗಳ ಅಗತ್ಯತೆಗಳಿಗೆ ಗಮನವನ್ನು ಕೊಡಲಾಗುವಂತೆ ಒಂದು ಅಧಿಕ ಕೇಂದ್ರೀಕೃತ ಜಾಗವು ಅಪೇಕ್ಷಣೀಯವಾಗಿತ್ತು. ಈ ಮಧ್ಯೆ, ರಾಜ್ಯ-ಸಾರುವಿಕೆಯ ಕಾರ್ಯದ ವಿರುದ್ಧವಿದ್ದ ದುರಭಿಮಾನ ಕಡಿಮೆಯಾಗಿತ್ತು. ಆದ್ದರಿಂದ ವಿಂಡೊಕ್ನಲ್ಲಿ ಯೆಹೋವನ ಸಾಕ್ಷಿಗಳಲ್ಲೊಬ್ಬರಿಂದ ದಾನವಾಗಿ ನೀಡಲ್ಪಟ್ಟ ಒಂದು ದೊಡ್ಡ ಜಮೀನಿನ ಭಾಗದಲ್ಲಿ ಕಟ್ಟಡ ಕಟ್ಟಲು ಅನುಮತಿಯನ್ನು ಪಡೆಯಲಾಯಿತು. ಬೇಗನೇ, 40 ಕ್ಕಿಂತಲೂ ಹೆಚ್ಚು ಸ್ವಯಂಸೇವಕ ಕೆಲಸಗಾರರಿಗೆ ಕಟ್ಟಡದ ಕ್ಷೇತ್ರದಲ್ಲಿ ವಸತಿಯನ್ನು ನೀಡಲಾಯಿತು, ಮತ್ತು 1990ರ ಡಿಸೆಂಬರ್ನೊಳಗೆ ಭಾಷಾಂತರ ಆಫೀಸುಗಳು ಪೂರ್ತಿಗೊಂಡವು.
ಈಗ ಈ ಆಧುನಿಕ ಕಟ್ಟಡದ ಆರಾಮಕರ ಆಫೀಸುಗಳಲ್ಲಿ ಮತ್ತು ಕೋಣೆಗಳಲ್ಲಿ, ಅನೇಕರಿಗೆ ತಿಳಿವಳಿಕೆಯನ್ನು ತರುತ್ತಿರುವ ಕೆಲಸವು ತ್ವರಿತವಾಗಿ ನಡಿಯುತ್ತಾ ಇದೆ. ಹರೇರೊ ಮತ್ತು ಕ್ವಾಂಗಲಿಯಲ್ಲಿ ಹೊಸ ಸಾಹಿತ್ಯವು ಎಡೆಬಿಡದೆ ಭಾಷಾಂತರವಾಗುತಲ್ತಿದೆ. ಎನ್ಡಾಂಗ ಮತ್ತು ಕ್ವಾನ್ಯಾಮ ಎಂಬ ದ್ವಿಭಾಷೆಯ ದ ವಾಚ್ಟವರ್ ನ ತಿಂಗಳ ಸಂಚಿಕೆಯಾದರೋ ಈಗ ಬಣ್ಣದಲ್ಲಿ ಪ್ರಕಟವಾಗುತ್ತದೆ. ಅದರಲ್ಲಿ ಎಲ್ಲಾ ಅಭ್ಯಾಸ ಲೇಖನಗಳು ಹಾಗೂ ಬೇರೆ ಸಮಾಚಾರವು ಅಡಕವಾಗಿವೆ. ಎಷ್ಟೋ ವರ್ಷಗಳ ಹಿಂದೆ ಒಣ ನದೀತಳದಲ್ಲಾದ ಆ ಚಿಕ್ಕ ಪ್ರಾರಂಭಕ್ಕಿಂತ ಇದು ಖಂಡಿತವಾಗಿಯೂ ಬಹು ಬೇರೆಯಾದ ವಿಷಯವು.
“ನನಗೆ ಗೊತ್ತಿಲ್ಲ” ಎಂಬದು ಈಗ ವಿರಳವಾಗಿ ಕೇಳಿಸುತ್ತದೆ. ಬದಲಾಗಿ, ನಮೀಬಿಯದ 600 ಕ್ಕಿಂತಲೂ ಹೆಚ್ಚು ಯೆಹೋವನ ಸಾಕ್ಷಿಗಳು ತಮ್ಮ ಸ್ವರ್ಗೀಯ ತಂದೆಗೆ ಆಳವಾಗಿ ಕೃತಜ್ಞರಾಗಿದ್ದಾರೆ, ಮತ್ತು ಅವರು ಈಗ ಹೀಗೆ ಹೇಳಶಕ್ತರಾಗಿದ್ದಾರೆ: “ನಿನ್ನ ವಾಕ್ಯವಿವರಣೆಯಿಂದ ಯುಕ್ತಿಹೀನರಿಗೆ [ಅನನುಭವಿಗಳಿಗೆ, NW] ಜ್ಞಾನೋದಯವಾಗುವದು.”.—ಕೀರ್ತನೆ 119:130.
[ಪುಟ 25 ರಲ್ಲಿರುವ ಚಿತ್ರಗಳು]
ಸುವಾರ್ತೆಯನ್ನು ಘೋಷಿಸುವುದು ಹರೇರೊ ಜನರ ನಡುವೆ
ನಮೀಬಿಯದ ಜನರ ಪ್ರಯೋಜನಕ್ಕಾಗಿ ಕ್ರೈಸ್ತ ಪ್ರಕಾಶನಗಳನ್ನು ಭಾಷಾಂತರಿಸುವುದು
ನಮೀಬಿಯದಲ್ಲಿ ಭಾಷಾಂತರ ಆಫೀಸುಗಳು