ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 2/1 ಪು. 15-21
  • ಒಂದು ಉದ್ದೇಶವಿರುವ ವಿದ್ಯೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಂದು ಉದ್ದೇಶವಿರುವ ವಿದ್ಯೆ
  • ಕಾವಲಿನಬುರುಜು—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪರಿಣಾಮಕಾರಿ ಶುಶ್ರೂಷಕರಾಗಲು ಕೌಶಲ್ಯಗಳು ಅವಶ್ಯ
  • ತಕ್ಕದಾದ ಶಾಲಾ ಶಿಕ್ಷಣದ ಪ್ರಯೋಜನಗಳು
  • ಯಥೋಚಿತ ಶಿಕ್ಷಣ
  • ಶಿಕ್ಷಣದ ಸಮತೂಕ ನೋಟ
  • ವೆಚ್ಚವನ್ನು ಲೆಕ್ಕಿಸುವುದು
  • ಏಕತ್ರಿತ, ಶಿಕ್ಷಿತ ಜನರು
  • ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ವಿವೇಕದಿಂದ ನಿರ್ಧಾರ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಬೈಬಲು ಶಿಕ್ಷಣವನ್ನು ನಿರುತ್ತೇಜಿಸುತ್ತದೊ?
    ಎಚ್ಚರ!—1998
  • ಶಿಕ್ಷಣ—ಯೆಹೋವನನ್ನು ಸ್ತುತಿಸಲು ಅದನ್ನು ಉಪಯೋಗಿಸಿರಿ
    ಕಾವಲಿನಬುರುಜು—1996
  • ಶಿಕ್ಷಣವನ್ನು ಅದರ ಸ್ಥಾನದಲ್ಲಿಡುವುದು
    ಎಚ್ಚರ!—1994
ಇನ್ನಷ್ಟು
ಕಾವಲಿನಬುರುಜು—1993
w93 2/1 ಪು. 15-21

ಒಂದು ಉದ್ದೇಶವಿರುವ ವಿದ್ಯೆ

“ಒಬ್ಬ ನೀತಿವಂತನಿಗೆ ಜ್ಞಾನವನ್ನು ಹಂಚು, ಅವನು ಕಲಿಕೆಯಲ್ಲಿ ವೃದ್ಧಿಯಾಗುವನು.”—ಜ್ಞಾನೋಕ್ತಿ 9:9, NW.

1. ಜ್ಞಾನದ ವಿಷಯದಲ್ಲಿ ಯೆಹೋವನು ತನ್ನ ಸೇವಕರಿಂದ ಏನನ್ನು ಅಪೇಕ್ಷಿಸುತ್ತಾನೆ?

“ದೇವರಾದ ಯೆಹೋವನು ಸರ್ವಜ್ಞನು.” (1 ಸಮುವೇಲ 2:3) ಆತನು ತನ್ನ ಸೇವಕರಿಗೆ ಶಿಕ್ಷಣ ಕೊಡುತ್ತಾನೆ. ಇಸ್ರಾಯೇಲಿನ ಕುರಿತು ಸಮಕಾಲೀನ ಜನರು ಏನು ಹೇಳುವರೆಂದು ಮೋಶೆ ಮುಂತಿಳಿಸಿದ್ದು: “ಈ ದೊಡ್ಡ ಜನಾಂಗವು ಜ್ಞಾನವಿವೇಕವುಳ್ಳ ಜನಾಂಗ ಎಂದು ಮಾತಾಡಿಕೊಳ್ಳುವರು.” (ಧರ್ಮೋಪದೇಶಕಾಂಡ 4:6) ಹಾಗೆಯೇ ನಿಜಕ್ರೈಸ್ತರು ಕೂಡ ಜ್ಞಾನವಂತರಾಗಿರಬೇಕು. ಅವರು ದೇವರ ವಾಕ್ಯದ ಅತ್ಯುತ್ತಮ ವಿದ್ಯಾರ್ಥಿಗಳಾಗಿರಬೆಕು. ಅಂಥ ಅಧ್ಯಯನದ ಉದ್ದೇಶವನ್ನು ತೋರಿಸುತ್ತಾ, ಅಪೊಸ್ತಲ ಪೌಲನು ಬರೆದದ್ದು: “ನಾವು . . . ನಿಮಗೋಸ್ಕರ ಪ್ರಾರ್ಥಿಸುವುದನ್ನು ಬಿಡದೆ ನೀವು ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರಬೇಕೆಂತಲೂ ನೀವು ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ ಅಭಿವೃದ್ಧಿಯಾಗುತ್ತಿರಬೇಕೆಂತಲೂ . . . ಬೇಡಿಕೊಳ್ಳುತ್ತೇವೆ.”—ಕೊಲೊಸ್ಸೆ 1:9, 10.

2. (ಎ) ದೇವರ ನಿಷ್ಕೃಷ್ಟ ಜ್ಞಾನವನ್ನು ಸಂಪಾದಿಸಿಕೊಳ್ಳುವಲ್ಲಿ ಯಾವುದು ಆವಶ್ಯಕವಾಗಿದೆ? (ಬಿ) ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು ಈ ವಿಷಯವನ್ನು ಹೇಗೆ ಪ್ರವರ್ತಿಸಿದೆ?

2 ದೇವರ ಮತ್ತು ಆತನ ಉದ್ದೇಶಗಳ ಒಂದು ನಿಷ್ಕೃಷ್ಟ ಜ್ಞಾನವನ್ನು ಸಂಪಾದಿಸಿಕೊಳ್ಳುವ ನೋಟದಿಂದ ಅಧ್ಯಯನ ಮಾಡುವುದಕ್ಕೆ ಕಡಮೆ ಪಕ್ಷ ಅಲ್ಪ ವಿದ್ಯಾಭ್ಯಾಸವಾದರೂ ಬೇಕಾಗಿದೆ. ಆದರೆ ದೇವರ ವಾಕ್ಯದ ಸತ್ಯವನ್ನು ಕಲಿತುಕೊಂಡಿರುವ ಅನೇಕ ಜನರು ಸರಿಯಾದ ಐಹಿಕ ವಿದ್ಯಾಭ್ಯಾಸವನ್ನು ಪಡೆಯಲು ಸ್ವಲ್ಪವೇ ಯಾ ಸಂದರ್ಭವೇ ಇಲ್ಲದ ದೇಶಗಳಲ್ಲಿ ಜೀವಿಸುತ್ತಾರೆ. ಅವರು ಅನನುಕೂಲತೆಯಲಿದ್ದರು. ಈ ಸಮಸ್ಯೆಯನ್ನು ಜಯಿಸಲು, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು ಅನೇಕ ವರ್ಷಗಳಿಂದ, ಎಲ್ಲಿ ಅಗತ್ಯವೋ ಅಲ್ಲಿ ಸಭೆಗಳೊಳಗೆಯೆ ಓದು ಬರಹದ ವರ್ಗಗಳನ್ನು ಸಂಘಟಿಸಬೇಕೆಂದು ತಿಳಿಸಿದೆ. ಮೂವತ್ತು ವರ್ಷಗಳಿಗಿಂತಲೂ ಹಿಂದೆ, ಬ್ರೆಸೀಲ್‌ನ ವಾರ್ತಾ ಪತ್ರಿಕೆ ಡಿಎರ್ಯೊ ಡಿ ಮೋಸಿ “ಅನಕ್ಷರತೆಯ ವಿರುದ್ಧ ಯೆಹೋವನ ಸಾಕ್ಷಿಗಳು ಯುದ್ಧ ಮಾಡುತ್ತಾರೆ” ಎಂಬ ಶಿರೋನಾಮವುಳ್ಳ ಲೇಖನವನ್ನು ಪ್ರಕಾಶಿಸಿತು. ಅದು ನಮೂದಿಸಿದ್ದು: “ಯೋಗ್ಯತೆ ಪಡೆದ ಶಿಕ್ಷಕನು . . . ತಾಳ್ಮೆಯಿಂದ ಇತರರಿಗೆ ಓದಲು ಮತ್ತು ಬರೆಯಲು ಕಲಿಸಲು . . . ಆರಂಭಿಸುತ್ತಾನೆ. ವಿದ್ಯಾರ್ಥಿಗಳು, ಅವರನ್ನು ದೇವರ ಶುಶ್ರೂಷಕರಾಗಿ ಪ್ರಚೋದಿಸುವ ಪರಿಸ್ಥಿತಿಗಳ ಕಾರಣದಿಂದ, ಭಾಷಣಗಳನ್ನು ಕೊಡುವಂತೆ ಭಾಷೆಯ ಅವರ ಜ್ಞಾನವನ್ನು ಬೆಳೆಸಲೇ ಬೇಕು.” ಇದು, ಲೋಕವ್ಯಾಪಕವಾಗಿ ಸಾವಿರಾರು ಜನರು ದೇವರ ವಾಕ್ಯದ ಉತ್ತಮ ವಿದ್ಯಾರ್ಥಿಗಳಾಗುವಂತೆ ಸಾಧ್ಯ ಮಾಡಿದೆ. ಅವರು ಈ ಬುನಾದಿ ಶಿಕ್ಷಣವನ್ನು ಮನಸ್ಸಿನಲ್ಲಿ ಒಂದು ಉನ್ನತ ಉದ್ದೇಶದೊಂದಿಗೆ ವಹಿಸಿಕೊಂಡರು.

ಪರಿಣಾಮಕಾರಿ ಶುಶ್ರೂಷಕರಾಗಲು ಕೌಶಲ್ಯಗಳು ಅವಶ್ಯ

3, 4. (ಎ) ನಿಜ ಕ್ರೈಸ್ತರು ಯಾಕೆ ವಿದ್ಯಾಭ್ಯಾಸದಲ್ಲಿ ಅಭಿರುಚಿಯುಳ್ಳವರಾಗಿದ್ದಾರೆ? (ಬಿ) ಇಸ್ರಾಯೇಲಿನಲ್ಲಿ ಯಾವ ಸನ್ನಿವೇಶವಿತ್ತು ಮತ್ತು ಇಂದು ನಮ್ಮ ಸಭೆಗಳೊಳಗೆ ಯಾವ ಬುನಾದಿ ಶಿಕ್ಷಣವು ಕಡೆಗಣಿಸಲಾಗದಂಥದ್ದಾಗಿದೆ?

3 ನಿಜ ಕ್ರೈಸ್ತರು ವಿದ್ಯಾಭ್ಯಾಸದಲ್ಲಿ ಅಭಿರುಚಿಯುಳ್ಳವರಾಗಿದ್ದಾರೆ, ಯೆಹೋವನ ಹೆಚ್ಚು ಪರಿಣಾಮಕಾರಿ ಸೇವಕರಾಗುವ ಉದ್ದೇಶದಿಂದಲೇ ವಿನಹ ವಿದ್ಯೆಯಲ್ಲಿ ಸಂತೋಷಿಸುವ ಉದ್ದೇಶದಿಂದಲ್ಲ. ಕ್ರಿಸ್ತನು ಎಲ್ಲಾ ಕ್ರೈಸ್ತರಿಗೆ ಕೊಟ್ಟ ನಿಯೋಗವು “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶಮಾಡಿರಿ [ಕಲಿಸಿರಿ, NW].” (ಮತ್ತಾಯ 28:19, 20) ಇತರರಿಗೆ ಕಲಿಸಲು, ಅವರು ತಾವೇ ಮೊದಲು ಕಲಿಯಬೇಕು, ಮತ್ತು ಇದಕ್ಕೆ ಒಳ್ಳೇ ಅಧ್ಯಯನ ವಿಧಾನಗಳ ಅಗತ್ಯವಿದೆ. ಅವರಿಗೆ ಶಾಸ್ತ್ರವಚನಗಳನ್ನು ಜಾಗರೂಕತೆಯಿಂದ ಶೋಧಿಸುವ ಕೌಶಲ್ಯ ಇರಲೇಬೇಕು. (ಅ. ಕೃತ್ಯಗಳು 17:11) ಅವರ ನಿಯೋಗವನ್ನು ನೆರವೇರಿಸಲು, ಅವರು ಸರಾಗವಾಗಿ ಓದುವ ಅಗತ್ಯವೂ ಇದೆ.—ನೋಡಿರಿ ಹಬಕ್ಕೂಕ 2:2; 1 ತಿಮೊಥೆಯ 4:13.

4 ನಾವು ಮೊದಲಿನ ಲೇಖನದಲ್ಲಿ ನೋಡಿರುವಂತೆ, ಪ್ರಾಚೀನ ಇಸ್ರಾಯೇಲಿನಲ್ಲಿ ಸಾಮಾನ್ಯವಾಗಿ ಎಳೆಯರಿಗೆ ಕೂಡ ಓದುವುದು ಮತ್ತು ಬರೆಯುವುದು ಗೊತ್ತಿತ್ತು ಎಂದು ನಂಬಲು ಒಳ್ಳೇ ಕಾರಣಗಳಿವೆ. (ನ್ಯಾಯಸ್ಥಾಪಕರು 8:14; ಯೆಶಾಯ 10:19) ಕ್ರೈಸ್ತ ಶುಶ್ರೂಷಕರು ಇಂದು ಮನೆಯಿಂದ ಮನೆಗೆ ಸಾಕ್ಷಿ ಕೊಡುವಾಗ ನೀಟಾದ ಟಿಪ್ಪಣಿಗಳನ್ನು ಮಾಡುವುದು ಅವಶ್ಯ. ಅವರು ಪತ್ರಗಳನ್ನು ಬರೆಯುತ್ತಾರೆ, ಕೂಟಗಳಲ್ಲಿ ಟಿಪ್ಪಣಿಗಳನ್ನು ಮಾಡುತ್ತಾರೆ, ಮತ್ತು ಅವರ ಅಧ್ಯಯನದ ವಿಷಯದ ಟಿಪ್ಪಣಿ ಬರೆಯುತ್ತಾರೆ. ಇದೆಲ್ಲಾದಕ್ಕೂ ಸ್ಪಷ್ಟವಾಗಿದ ಕೈಬರವಣಿಗೆಯ ಅಗತ್ಯವಿದೆ. ಕ್ರೈಸ್ತ ಸಭೆಯೊಳಗೆ ದಾಖಲೆಗಳನ್ನಿಡುವುದು ಕಡಿಮೆ ಪಕ್ಷ ಅಂಕ ಗಣಿತದ ಬುನಾದಿ ಜ್ಞಾನವನ್ನು ಕೇಳಿಕೊಳ್ಳುತ್ತದೆ.

ತಕ್ಕದಾದ ಶಾಲಾ ಶಿಕ್ಷಣದ ಪ್ರಯೋಜನಗಳು

5. (ಎ) “ಶಾಲೆ” ಎಂಬ ಪದದ ಮೂಲವು ಏನಾಗಿರುತ್ತದೆ? (ಬಿ) ಯಾವ ಸಂದರ್ಭಗಳನ್ನು ಯುವಜನರು ಸ್ವಾಧೀನಪಡಿಸಿಕೊಳ್ಳಬೇಕು?

5 “ಶಾಲೆ” ಎಂಬ ಪದವು ಮೂಲದಲ್ಲಿ “ಬಿಡುವು” ಯಾ ಕಲಿಕೆಯಂಥ, ಕೆಲವು ಗಂಭೀರ ಚಟುವಟಿಕೆಗಳಿಗೆ ಬಿಡುವಿನ ಉಪಯೋಗ ಎಂಬ ಅರ್ಥ ಬರುವ ಸ್ಕೋಲಿ ಎಂಬ ಗ್ರೀಕ್‌ ಪದದಿಂದ ಬರುತ್ತದೆ. ಅದು ನಂತರ ಅಂಥ ಕಲಿಕೆಯು ಎಲ್ಲಿ ಮಾಡಲ್ಪಡುತ್ತದೋ ಆ ಸ್ಥಳವನ್ನು ಸೂಚಿಸಿತು. ಇದು ಸೂಚಿಸುತ್ತದೇನಂದರೆ, ಒಂದು ಸಮಯದಲ್ಲಿ, ಸುಯೋಗವನ್ನು ಹೊಂದಿದ ವರ್ಗಕ್ಕೆ—ಗ್ರೀಸ್‌ ಮತ್ತು ಹೆಚ್ಚಿನ ದೇಶಗಳಲ್ಲಿ—ಮಾತ್ರ ಕಲಿಯಲು ಬಿಡುವಿತ್ತು. ಕಾರ್ಮಿಕ ವರ್ಗ ಸಾಮಾನ್ಯವಾಗಿ ಅಜ್ಞಾನದಲ್ಲಿತ್ತು. ಇಂದು, ಹೆಚ್ಚಿನ ದೇಶಗಳಲ್ಲಿ ಮಕ್ಕಳಿಗೆ ಮತ್ತು ಯುವಜನರಿಗೆ ಕಲಿಯಲು ಸಮಯವನ್ನು ಕೊಡಲಾಗುತ್ತದೆ. ಯುವ ಸಾಕ್ಷಿಗಳು ಬುದ್ಧಿವಂತರಾಗಲು ಮತ್ತು ಯೆಹೋವನ ಸಮರ್ಥ ಸೇವಕರಾಗಲು ನಿಶ್ಚಯವಾಗಿಯೂ ತಕ್ಕ ಸಮಯವನ್ನು ಕೊಂಡುಕೊಳ್ಳಲೇಬೇಕು.—ಎಫೆಸ 5:15, 16.

6, 7. (ಎ) ಯೋಗ್ಯ ರೀತಿಯ ಶಾಲಾ ಶಿಕ್ಷಣದ ಕೆಲವು ಪ್ರಯೋಜನಗಳು ಯಾವುವು? (ಬಿ) ವಿದೇಶಿ ಭಾಷೆಯನ್ನು ಕಲಿಯುವುದು ಯಾವ ವಿಧಗಳಲ್ಲಿ ಉಪಯುಕ್ತವಾಗಬಹುದು? (ಸಿ) ಶಾಲೆ ಮುಗಿಸಿದ ಮೇಲೆ ಅನೇಕ ಯುವ ಜನರೊಳಗೆ ಇಂದು ಯಾವ ಪರಿಸ್ಥಿತಿ ಇದೆ?

6 ಇತಿಹಾಸ, ಭೂಗೋಳ ಶಾಸ್ತ್ರ, ವಿಜ್ಞಾನ, ಇತ್ಯಾದಿಗಳ ಬುನಾದಿ ಜ್ಞಾನವು ಯುವ ಸಾಕ್ಷಿಗಳಿಗೆ ಸಮತೂಕದ ಶುಶ್ರೂಷಕರಾಗಲು ಅವಕಾಶ ಕಲ್ಪಿಸುವುದು. ಅವರ ಶಾಲಾ ಶಿಕ್ಷಣವು ಅನೇಕ ವಿಷಯಗಳನ್ನು ಮಾತ್ರವಲ್ಲ ಕಲಿಯುವ ಕಾರ್ಯಗತಿಯನ್ನು ಕೂಡ ಕಲಿಸುವುದು. ನಿಜ ಕ್ರೈಸ್ತರು ಶಾಲೆಯನ್ನು ಬಿಟ್ಟಾದ ಮೇಲೆ ಕಲಿಯುವುದನ್ನು ಮತ್ತು ಅಧ್ಯಯನ ಮಾಡುವುದನ್ನು ನಿಲ್ಲಿಸುವುದಿಲ್ಲ. ಹೇಗಾದರೂ, ಅವರ ವ್ಯಾಸಂಗದಿಂದ ಅವರು ಏನನ್ನು ಪಡೆಯುತ್ತಾರೋ ಅದು ಹೇಗೆ ಅಭ್ಯಾಸಿಸುವುದು ಎಂಬ ಅವರ ಜ್ಞಾನದ ಮೇಲೆ ಮಹತ್ತಾಗಿ ಹೊಂದಿಕೊಂಡಿರುವುದು. ಐಹಿಕ ಮತ್ತು ಸಭಾ ಶಾಲಾ ಶಿಕ್ಷಣಗಳೆರಡೂ ಅವರ ಆಲೋಚನಾ ಸಾಮರ್ಥ್ಯಗಳನ್ನು ವಿಕಸಿಸಲು ಅವರಿಗೆ ಸಹಾಯ ಮಾಡಬಲ್ಲದು. (ಜ್ಞಾನೋಕ್ತಿ 5:1, 2) ಅವರು ಓದುವಾಗ ಯಾವುದು ಪ್ರಾಮುಖ್ಯ, ಯಾವುದನ್ನು ಗಮನದಲ್ಲಿಡಬೇಕು ಮತ್ತು ಜ್ಞಾಪಿಸಿಕೊಳ್ಳುತ್ತಿರಬೇಕೆಂದು ವಿವೇಚಿಸಲು ಅವರು ಹೆಚ್ಚು ಒಳ್ಳೇದಾಗಿ ಶಕ್ತರಾಗುವರು.

7 ಉದಾಹರಣೆಗಾಗಿ, ವಿದೇಶದ ಭಾಷೆಯನ್ನು ಕಲಿಯುವುದು, ಯುವ ಜನರ ಮಾನಸಿಕ ಸಂಚಯನ ಶಕ್ತಿಯನ್ನು ವಿಕಸಿಸುವುದು ಮಾತ್ರವಲ್ಲದೆ ಅವರು ಯೆಹೋವನ ಸಂಸ್ಥಾಪನೆಗೆ ಹೆಚ್ಚು ಉಪಯುಕ್ತವಾಗುವಂತೆಯೂ ಮಾಡುವುದು. ವಾಚ್‌ ಟವರ್‌ ಸೊಸೈಟಿಯ ಕೆಲವೊಂದು ಬ್ರಾಂಚ್‌ಗಳಲ್ಲಿ, ಇಂಗ್ಲಿಷನ್ನು ಸರಾಗವಾಗಿ ಮಾತಾಡಲು ಯಾ ಓದಲು ಶಕ್ತರಾಗುವುದು ಪ್ರಯೋಜನಕಾರಿ ಎಂದು ಅನೇಕ ಯುವ ಸಹೋದರರು ಕಂಡುಕೊಂಡಿದ್ದಾರೆ. ಇನ್ನೂ ಹೆಚ್ಚಾಗಿ, ಎಲ್ಲಾ ಕ್ರೈಸ್ತ ಶುಶ್ರೂಷಕರು ಅವರ ಮಾತೃ ಭಾಷೆಯಲ್ಲಿ ಸ್ಫುಟೋಚ್ಚರಿತರಾಗಲು ಪ್ರಯತ್ನಿಸಬೇಕು. ರಾಜ್ಯದ ಸುವಾರ್ತೆಯು ಸ್ಪಷ್ಟ, ವ್ಯಾಕರಣದಲ್ಲಿ ಸರಿಯಾದ ರೀತಿಯಲ್ಲಿ ತಿಳಿಸಲು ಅರ್ಹವಾಗಿರುತ್ತದೆ. ಇಂದು ಲೋಕದಲ್ಲಿ ರುಜುವಾತುಗಳು ತೋರಿಸಿಕೊಡುವುದೇನಂದರೆ, ಅನೇಕ ಯುವ ಜನರಿಗೆ ಶಾಲೆಯನ್ನು ಮುಗಿಸಿದ ಮೇಲೆ ಬರೆಯಲು ಮತ್ತು ಸರಿಯಾಗಿ ಓದಲು ಮತ್ತು ಸುಲಭವಾದ ಅಂಕ ಗಣಿತವನ್ನು ಮಾಡಲು ಕೂಡ ಕಷ್ಟವಾಗುತ್ತದೆ; ಮತ್ತವರಿಗೆ ಇತಿಹಾಸ ಮತ್ತು ಭೂಗೋಳ ಶಾಸ್ತ್ರದ ಅತಿ ಅನಿಶ್ಚಿತವಾದ ಜ್ಞಾನ ಮಾತ್ರವಿದೆ.

ಯಥೋಚಿತ ಶಿಕ್ಷಣ

8. (ಎ) ಐಹಿಕ ಶಿಕ್ಷಣ ಮತ್ತು ತನ್ನನ್ನೇ ಬೆಂಬಲಿಸಲು ವ್ಯಕ್ತಿಗಿರುವ ಸಾಮರ್ಥ್ಯದ ವಿಷಯಕ್ಕೆ ಯಾವ ಶಾಸ್ತ್ರವಚನಗಳು ಅನ್ವಯಿಸುತ್ತವೆ?

8 ಆದುದರಿಂದ ಇದು, ಐಹಿಕ ಶಿಕ್ಷಣದ ಕಡೆಗೆ ಕ್ರೈಸ್ತ ಮನೋಭಾವವನ್ನು ಗಮನಿಸಲು ಒಂದು ತಕ್ಕದಾದ ಸಮಯವಾಗಿದೆ ಎಂದು ತೋರುತ್ತದೆ. ಈ ವಿಷಯಕ್ಕೆ ಯಾವ ಬೈಬಲ್‌ ಸೂತ್ರಗಳು ಸಂಬಂಧಿಸಿವೆ? ಮೊದಲಾಗಿ, ಹೆಚ್ಚಿನ ದೇಶಗಳಲ್ಲಿ “ಕೈಸರನಿಗೆ” ತಕ್ಕ ಅಧೀನತೆಯಲ್ಲಿ, ಕ್ರೈಸ್ತ ಹೆತ್ತವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಅವಶ್ಯ. (ಮಾರ್ಕ 12:17; ತೀತ 3:1) ಯುವ ಸಾಕ್ಷಿಗಳ ವಿಷಯದಲ್ಲಿಯಾದರೋ, ಅವರು ತಮ್ಮ ಶಾಲಾ ಕೆಲಸದಲ್ಲಿ ಕೊಲೊಸ್ಸೆ 3:23 ನ್ನು ಜ್ಞಾಪಿಸಿಕೊಳ್ಳಬೇಕು, ಅದು ಹೇಳುವುದು: “ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ.” ಒಳಗೂಡಿರುವ ಎರಡನೇ ಸೂತ್ರವು ಕ್ರೈಸ್ತರು ತಮ್ಮನ್ನು ತಾವೇ ಪೋಷಿಸಿಕೊಳ್ಳಲು ಶಕ್ತರಾಗಿರಬೇಕು; ಅವರು ಪೂರ್ಣ ಸಮಯದ ಪಯನೀಯರ್‌ ಶುಶ್ರೂಷಕರಾಗಿರುವಾಗಲೂ ಕೂಡ. (2 ಥೆಸಲೋನಿಕ 3:10-12) ಮದುವೆಯಾಗಿರುವಲ್ಲಿ, ಒಬ್ಬ ಪುರುಷನು ತನ್ನ ಹೆಂಡತಿ ಮತ್ತು ಹುಟ್ಟಬಹುದಾದ ಮಕ್ಕಳಿಗೆ ಯೋಗ್ಯ ರೀತಿಯಿಂದ ಒದಗಿಸುವುದರೊಂದಿಗೆ, ಅಗತ್ಯವಿರುವವರಿಗೆ ಮತ್ತು ಸ್ಥಳೀಕ ಮತ್ತು ಲೋಕ ವ್ಯಾಪಕ ಸಾರುವ ಕೆಲಸಕ್ಕೆ ಕೊಡಲು ಶಕ್ತನಾಗಿರಬೇಕು.—ಎಫೆಸ 4:28; 1 ತಿಮೊಥೆಯ 5:8.

9, 10. (ಎ) ಅನೇಕ ದೇಶಗಳಲ್ಲಿ ಯಾವುದು ಪ್ರವೃತ್ತಿಯಂತೆ ತೋರಿಬರುತ್ತದೆ? (ಬಿ) ಒಬ್ಬ ಪಯನೀಯರ ಶುಶ್ರೂಷಕನು ಯಾವದನ್ನು ಸಾಕಾಗುವ ವೇತನವೆಂದು ಪರಿಗಣಿಸಬಹುದು?

9 ಈ ಬೈಬಲ್‌ ಸೂತ್ರಗಳನ್ನು ಗೌರವಿಸುವಂತೆ ಮತ್ತು ತನ್ನ ಕ್ರೈಸ್ತ ಹಂಗುಗಳನ್ನು ಪೂರೈಸುವಂತೆ ಒಬ್ಬ ಯುವ ಕ್ರೈಸ್ತನಿಗೆ ಎಷ್ಟು ಶಿಕ್ಷಣದ ಅಗತ್ಯವಿದೆ? ಇದು ದೇಶದಿಂದ ದೇಶಕ್ಕೆ ವ್ಯತ್ಯಾಸಗೊಳ್ಳುತ್ತದೆ. ಹೇಗೂ ಸಾಮಾನ್ಯವಾಗಿ, ತಕ್ಕ ವೇತನವನ್ನು ಸಂಪಾದಿಸಲು ಶಾಲಾ ಶಿಕ್ಷಣದ ಮಟ್ಟವು ಹಲವು ವರ್ಷಗಳ ಹಿಂದೆ ಇದ್ದದ್ದಕ್ಕಿಂತಲೂ ಈಗ ಹೆಚ್ಚಿರುವುದು ಅನೇಕ ದೇಶಗಳಲ್ಲಿ ಸಾಮಾನ್ಯ ಪ್ರವೃತ್ತಿಯಾಗಿರುವಂತೆ ಕಂಡುಬರುತ್ತದೆ. ಲೋಕದ ವಿವಿಧ ಭಾಗಗಳಿಂದ ವಾಚ್‌ ಟವರ್‌ ಸೊಸೈಟಿಯ ಬ್ರಾಂಚ್‌ಗಳಿಂದ ಪಡೆದ ವರದಿಗಳು ತೋರಿಸುತ್ತವೇನಂದರೆ ಅನೇಕ ಸ್ಥಳಗಳಲ್ಲಿ ಕೇವಲ ಕಾನೂನಿನಿಂದ ಅಗತ್ಯಗೊಳಿಸಲ್ಪಟ್ಟ ಕನಿಷ್ಠ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆಯೂ ಯಾ ಕೆಲವು ದೇಶಗಳಲ್ಲಿ ಮಾಧ್ಯಮಿಕ ಯಾ ಪದವಿಪೂರ್ವ ಶಾಲಾ ಶಿಕ್ಷಣವನ್ನು ಮುಗಿಸಿದರೂ ಕೂಡ ತಕ್ಕ ವೇತನದ ಕೆಲಸಗಳನ್ನು ಕಂಡುಕೊಳ್ಳುವುದು ಕಷ್ಟಕರವಾಗಿದೆ.

10 “ತಕ್ಕ ವೇತನ” ದ ಅರ್ಥವು ಏನಾಗಿದೆ? ಅದು ಹೆಚ್ಚು ಸಂಬಳದ ಕೆಲಸಗಳೆಂದು ಸೂಚಿಸುವುದಿಲ್ಲ. ವೆಬ್‌ಸ್ಟರ್ಸ್‌ ಡಿಕ್‌ಷನರಿಯು ಈ ಪೂರ್ವಾಪರದಲ್ಲಿ “ತಕ್ಕ” ಎಂಬ ಪದವನ್ನು “ಸಾಕಷ್ಟು, ತೃಪ್ತಿಕರ,” ವೆಂದು ನಿರೂಪಿಸುತ್ತದೆ. ಉದಾಹರಣೆಗಾಗಿ, ಸುವಾರ್ತೆಯ ಪಯನೀಯರ್‌ ಶುಶ್ರೂಷಕರಾಗ ಬಯಸುವವರಿಗೆ ಯಾವುದನ್ನು “ಸಾಕಷ್ಟು” ಎಂದು ಕರೆಯಬಹುದು? ಅವರ ಸಹೋದರರ ಮೇಲೆ ಯಾ ಕುಟುಂಬದ ಮೇಲೆ “ಒಂದು ದುಬಾರಿಯಾದ ಭಾರ” ಹಾಕುವುದನ್ನು ತಪ್ಪಿಸಲು ಅಂಥವರಿಗೆ ಸಾಮಾನ್ಯವಾಗಿ ಅಂಶ ಕಾಲಿಕ ಕೆಲಸದ ಅಗತ್ಯವಿದೆ. (1 ಥೆಸಲೋನಿಕ 2:9, NW) ಒಂದು ವೇಳೆ ಅವರು ಗಳಿಸುವುದು ಅವರ ಕ್ರೈಸ್ತ ಶುಶ್ರೂಷೆಯನ್ನು ಪೂರೈಸಲು ಸಾಕಷ್ಟು ಸಮಯ ಮತ್ತು ಬಲದ ಅವಕಾಶವನ್ನು ಕೊಟ್ಟು ಅವರನ್ನು ಯೋಗ್ಯ ರೀತಿಯಲ್ಲಿ ಜೀವಿಸಲು ಬಿಡುವುದಾದರೆ, ಅವರ ವೇತನವನ್ನು “ಸಾಕಷ್ಟು, ತೃಪ್ತಿಕರ,” ಎಂದು ಕರೆಯಬಹುದು.

11. ಕೆಲವು ಯುವಕರು ಪಯನೀಯರ ಸೇವೆಯನ್ನು ಯಾಕೆ ಬಿಟ್ಟಿರುತ್ತಾರೆ, ಯಾವ ಪ್ರಶ್ನೆಯು ಏಳುತ್ತದೆ?

11 ಇಂದು ಅನೇಕ ಬಾರಿ ಪರಿಸ್ಥಿತಿಯು ಏನಾಗಿರುತ್ತದೆ? ಕೆಲವು ದೇಶಗಳಲ್ಲಿ ಸದುದ್ದೇಶದ ಯುವಕರು ಕನಿಷ್ಠ ಅಗತ್ಯದ ಶಾಲಾ ಶಿಕ್ಷಣವನ್ನು ಪೂರೈಸಿದ ನಂತರ ಪಯನೀಯರರಾಗಲು ಶಾಲೆಯನ್ನು ಬಿಟ್ಟರೆಂದು ವರದಿಸಲಾಗಿದೆ. ಅವರಿಗೆ ಯಾವುದೇ ವೃತ್ತಿ ಯಾ ಐಹಿಕ ಅರ್ಹತೆಗಳು ಇರಲಿಲ್ಲ. ಅವರ ಹೆತ್ತವರು ಅವರಿಗೆ ಆರ್ಥಿಕ ಸಹಾಯ ನೀಡದೆ ಇರುತ್ತಿದ್ದಲ್ಲಿ, ಅವರು ಅಂಶಕಾಲಿಕ ಕೆಲಸವನ್ನು ಕಂಡುಕೊಳ್ಳಬೇಕಿತ್ತು. ಕೆಲವರು ಜೀವಿಸಲು ಬೇಕಾಗಿರುವಷ್ಟು ಹಣವನ್ನು ಸಂಪಾದಿಸಲು ಹೆಚ್ಚು ತಾಸು ದುಡಿಯಬೇಕಾಗಿದ್ದ ಕೆಲಸಗಳನ್ನು ಸ್ವೀಕರಿಸಬೇಕಾಗಿತ್ತು. ದೈಹಿಕವಾಗಿ ಬಳಲುವುದರಿಂದ, ಅವರು ಪಯನೀಯರ್‌ ಶುಶ್ರೂಷೆಯನ್ನು ಬಿಟ್ಟುಕೊಟ್ಟರು. ಅಂಥವರು ತಮ್ಮನ್ನು ತಾವೇ ಆರ್ಥಿಕವಾಗಿ ಬೆಂಬಲಿಸಲು ಮತ್ತು ಪಯನೀಯರ ಸೇವೆಯಲ್ಲಿ ಪುನಃ ಸೇರಲು ಏನು ಮಾಡಬಲ್ಲರು?

ಶಿಕ್ಷಣದ ಸಮತೂಕ ನೋಟ

12. (ಎ) ಶಿಕ್ಷಣದ ವಿಷಯದಲ್ಲಿ, ಕ್ರೈಸ್ತನು ಯಾವ ಎರಡು ವಿಪರೀತದ ದೃಷ್ಟಿಕೋನಗಳನ್ನು ತಡೆಯಬೇಕು? (ಬಿ) ಯೆಹೋವನ ಸಮರ್ಪಿತ ಸಾಕ್ಷಿಗಳಿಗಾಗಿ ಮತ್ತು ಅವರ ಮಕ್ಕಳಿಗಾಗಿ, ಶಿಕ್ಷಣವು ಯಾವ ಉದ್ದೇಶವನ್ನು ಪೂರೈಸಬೇಕು?

12 ಶಿಕ್ಷಣದ ಸಮತೂಕ ನೋಟವು ಸಹಾಯ ಮಾಡಬಹುದು. ಲೋಕದ ಅನೇಕ ಯುವ ಜನರಿಗೆ, ಶಿಕ್ಷಣವು ಸಮಾಜದ ಏಣಿಯಲ್ಲಿ ಮೇಲೇರಲು ಅವರಿಗೆ ಸಹಾಯಿಸುವ, ಪ್ರತಿಷ್ಠೆಯ ಚಿಹ್ನೆಯಾಗಿರುತ್ತದೆ, ಸಂಪದ್ಭರಿತ, ಪ್ರಾಪಂಚಿಕ ಜೀವನ ಶೈಲಿಯ ಕೀಲಿ ಕೈಯಾಗಿರುತ್ತದೆ. ಇನ್ನಿತರರಿಗೆ, ಶಾಲಾ ಶಿಕ್ಷಣವು, ಸಾಧ್ಯವಾದಷ್ಟು ಬೇಗನೇ ಮುಗಿಸಿ ಬಿಡುವ ಚಿಲ್ಲರ ಕೆಲಸವಾಗಿದೆ. ಈ ಎರಡು ನೋಟಗಳಲ್ಲಿ ಒಂದೂ ನಿಜ ಕ್ರೈಸ್ತರಿಗೆ ತಕ್ಕುದಲ್ಲ. ಹಾಗಾದರೆ, “ಸಮತೂಕದ ನೋಟ” ಎಂದು ಯಾವುದನ್ನು ಹೆಸರಿಸಬಹುದು? ಕ್ರೈಸ್ತರು ಶಿಕ್ಷಣವನ್ನು, ಆಶಿಸಿದ ಫಲಿತಾಂಶವನ್ನು ಗಿಟ್ಟಿಸಲು ಬಳಸುವ ವಿಧಾನವೆಂದು ಕಾಣಬೇಕು. ಈ ಕೊನೇ ದಿನಗಳಲ್ಲಿ, ಎಷ್ಟು ಹೆಚ್ಚು ಮತ್ತು ಎಷ್ಟು ಪರಿಣಾಮಕಾರಿಯಾಗಿ ಸಾಧ್ಯವೋ ಅಷ್ಟು ಯೆಹೋವನನ್ನು ಸೇವಿಸುವುದು ಅವರ ಉದ್ದೇಶವಾಗಿರುತ್ತದೆ. ಒಂದುವೇಳೆ, ಅವರು ಜೀವಿಸುವಂಥ ದೇಶದಲ್ಲಿ, ಕನಿಷ್ಠವಾದ ಯಾ ಹೈಸ್ಕೂಲು ದರ್ಜೆಯ ಶಿಕ್ಷಣವು ಕೂಡ ಅವರನ್ನೇ ಪಯನೀಯರರಾಗಿ ಸಂರಕ್ಷಣೆ ಮಾಡಲು ಸಾಕಾಗಲಾರದಂಥ ಆದಾಯದ ಉದ್ಯೋಗಗಳನ್ನು ಕಂಡುಕೊಳ್ಳುವಂತೆ ಮಾತ್ರವೆ ಅನುಮತಿಸುವುದಾದರೆ, ಆಗ ಸಂಪೂರಕ ಶಿಕ್ಷಣ ಯಾ ತರಬೇತಿಯನ್ನು ಪರಿಗಣಿಸಬಹುದು. ಇದು ಪೂರ್ಣ ಸಮಯದ ನಿರ್ದಿಷ್ಟ ಗುರಿಯೊಂದಿಗೆ.

13. (ಎ) ಫಿಲಿಪ್ಪೀನ್ಸ್‌ನಲ್ಲಿನ ಒಬ್ಬಾಕೆ ಸಹೋದರಿಗೆ ತನ್ನ ಕುಟುಂಬದ ಹಂಗುಗಳನ್ನು ಪೂರೈಸುತ್ತಿರುವಾಗಲೂ ಪಯನೀಯರ್‌ ಸೇವೆಯನ್ನು ಮುಂದರಿಸಿಕೊಂಡು ಹೋಗಲು ಹೇಗೆ ಸಾಧ್ಯವಾಯಿತು? (ಬಿ) ಯಾವ ಎಚ್ಚರಿಕೆಯು ಸಮಯೋಚಿತವಾಗಿದೆ?

13 ಕೆಲವರು ತಮ್ಮನ್ನು ಪೂರ್ಣ ಸಮಯದಲ್ಲಿ ತೊಡಗಿಸಿಕೊಳ್ಳಲು ಯಾ ಮತ್ತೆ ಆರಂಭಿಸಲು ಅವಕಾಶ ಕಲ್ಪಿಸುವಂಥ ಉದ್ಯೋಗ ಅವಕಾಶಗಳನ್ನು ತೆರೆಯುವ ತರಬೇತಿಯ ಪಾಠಕ್ರಮಗಳನ್ನು ತಕ್ಕೊಂಡಿರುತ್ತಾರೆ. ಫಿಲಿಪ್ಪೀನ್ಸ್‌ನ ಒಬ್ಬಾಕೆ ಸಹೋದರಿ ಕುಟುಂಬ ಪೋಷಕಳಾಗಿದ್ದರೂ, ಆಕೆಗೆ ಪಯನೀಯರ್‌ ಆಗಬೇಕಾಗಿತ್ತು. ಬ್ರಾಂಚ್‌ ವರದಿಸುವುದು: “ಪ್ರಮಾಣ ಪತ್ರ ಪಡೆದ ಸಾರ್ವಜನಿಕ ಅಕೌಂಟೆಂಟ್‌ ಆಗಿ ಅರ್ಹಳಾಗಲು ಆಕೆಯು ಅಧಿಕ ಶಿಕ್ಷಣವನ್ನು ಪಡಕೊಂಡದ್ದರಿಂದ ಆಕೆಗೆ ಇದನ್ನು ಮಾಡುವಂತೆ ಸಾಧ್ಯವಾಯಿತು.” ಅದೇ ಬ್ರಾಂಚ್‌ ವರದಿಯು ನಮೂದಿಸಿದ್ದು: “ವಿದ್ಯಾಭ್ಯಾಸವನ್ನು ಪಡೆದುಕೊಳ್ಳುತ್ತಾ ಅದೇ ಸಮಯದಲ್ಲಿ ಪಯನೀಯರಿಂಗ್‌ ಮಾಡಲು ತಮ್ಮ ಕಾರ್ಯತಖ್ತೆಯನ್ನು ಏರ್ಪಡಿಸಲು ಶಕ್ತರಾದ ಕೆಲವರು ನಮ್ಮಲ್ಲಿದ್ದಾರೆ. ಅವರು ಲೋಕದ ಬೆನ್ನಟ್ಟುವಿಕೆಗಳಲ್ಲಿ ಹೆಚ್ಚು ಮಹಾಕಾಂಕ್ಷಿಗಳಾಗುವುದಿಲ್ಲವಾದಲ್ಲಿ, ಸಾಮಾನ್ಯವಾಗಿ ಹೆಚ್ಚು ಶ್ರದ್ದಾನಿಷ್ಠೆಗಳುಳ್ಳ ಉತ್ತಮ ಪ್ರಚಾರಕರಾಗುವರು.” ಕೊನೆಯ ಹೇಳಿಕೆಯು ನಮಗೆ ಆಲೋಚಿಸಲು ಕಾರಣವನ್ನೀಯಬೇಕು. ಎಲ್ಲಿ ಅಗತ್ಯವೆಂದು ಕಂಡು ಬರುತ್ತದೋ ಅಲ್ಲಿ, ಹೆಚ್ಚಿನ ಶಾಲಾ ಶಿಕ್ಷಣದ ಉದ್ದೇಶವನ್ನು ಮರೆತುಬಿಡಲೇ ಬಾರದು ಯಾ ಪ್ರಾಪಂಚಿಕತೆಯ ಗುರಿಯಾಗಿ ಮಾರ್ಪಡಬಾರದು.

14, 15. (ಎ) ಶಿಕ್ಷಣದ ವಿಷಯದ ಸಂಬಂಧದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಮಾಡಬಾರದು ಯಾಕೆ? (ಬಿ) ಕೆಲವು ಜವಾಬ್ದಾರಿಯ ಸಹೋದರರು ಯಾವ ಐಹಿಕ ಶಿಕ್ಷಣವನ್ನು ಪಡೆದರು, ಆದರೆ ಇದಕ್ಕೆ ಯಾವದು ಸಮಕಾರಕವನ್ನೊದಗಿಸುತ್ತದೆ?

14 ಕೆಲವೊಂದು ದೇಶಗಳಲ್ಲಿ, ಒಬ್ಬ ಯುವ ಕ್ರೈಸ್ತನಿಗೆ ಪದವೀಧರನಾಗುವ ಸಮಯದೊಳಗೆ ಯಾವುದೇ ಉದ್ಯಮ ಯಾ ವೃತ್ತಗಾಗಿ ತಯಾರಿಸಬಹುದಾದ ಜೀವನೋಪಾಯದ ತರಬೇತಿಯನ್ನು ಮಾಧ್ಯಮಿಕ ಶಾಲೆಗಳು ಒದಗಿಸುತ್ತವೆ. ವಿಷಯವು ಹಾಗಿರದೇ ಇರುವಲಿಯ್ಲೂ ಕೂಡ, ಕೆಲವು ದೇಶಗಳಲ್ಲಿ ಸಾಹಸಿ ಯುವಜನರು ಕೇವಲ ಬುನಾದಿ ಶಾಲಾ ಶಿಕ್ಷಣದೊಂದಿಗೆ, ಪಯನೀಯರಿಂಗ್‌ ಮಾಡುವಂತೆ ಸಾಕಷ್ಟು ಗಳಿಸಲು ಸಾಧ್ಯಮಾಡುವಂಥ ಅಂಶ ಕಾಲಿಕ ಕೆಲಸವನ್ನು ಕಂಡುಕೊಳ್ಳುತ್ತಾರೆ. ಹೀಗೆ ಹೆಚ್ಚಿನ ಶಿಕ್ಷಣಕ್ಕೋಸ್ಕರವೇ ಆಗಲಿ ಯಾ ಅದರ ವಿರುದ್ಧವೇ ಆಗಲಿ ಕಟ್ಟುನಿಟ್ಟಿನ ನಿಯಮಗಳು ಇರುವುದಿಲ್ಲ.

15 ಸಂಚರಣಾ ಮೇಲ್ವಿಚಾರಕರಾಗಿ, ಸೊಸೈಟಿಯ ಮುಖ್ಯ ಕಾರ್ಯಾಲಯಗಳಲ್ಲಿ, ಅಥವಾ ಬ್ರಾಂಚ್‌ಗಳೊಂದರಲ್ಲಿ ಜವಾಬ್ದಾರಿಯ ಸ್ಥಾನಗಳಲ್ಲಿ ಈಗ ಸೇವೆ ಸಲ್ಲಿಸುತ್ತಿರುವ ಅನೇಕರು ಕೇವಲ ಬುನಾದಿ ಶಿಕ್ಷಣ ಮಾತ್ರ ಹೊಂದಿದ್ದರು. ಕಲಿಯುವುದನ್ನು ಎಂದೂ ನಿಲ್ಲಿಸದೇ ಇದ್ದ, ತರಬೇತಿಯನ್ನು ಪಡೆಯುತ್ತಿದ್ದ, ಮತ್ತು ಮಹತ್ತಾದ ಜವಾಬ್ದಾರಿಗಳನ್ನು ವಹಿಸಿಕೊಡಲಾಗಿದ್ದ ಅವರು ನಂಬಿಗಸ್ತ ಪಯನೀಯರರಾಗಿದ್ದರು. ಅವರು ಮಾಡಿದ ಆರಿಸುವಿಕೆಗಳಿಗೋಸ್ಕರ ಅವರು ಮರುಗುವುದಿಲ್ಲ. ಅದರ ಬದಲಿಗೆ, ಅವರ ಸಮಕಾಲೀನರಾದ ಕೆಲವರು ವಿಶ್ವವಿದ್ಯಾಲಯದ ವ್ಯಾಸಂಗವನ್ನು ಆರಿಸಿಕೊಂಡರು ಮತ್ತು ನಂಬಿಕೆಯನ್ನು ನಾಶಪಡಿಸುವ ತತ್ವಜ್ಞಾನ ಮತ್ತು “ಇಹಲೋಕಜ್ಞಾನ” ದ ಮೂಲಕ ಸೋಲಿಸಲ್ಪಟ್ಟು, ಅವರ ಆತ್ಮಿಕ ಬೆಳವಣಿಗೆಯನ್ನು ನಿಲ್ಲಿಸಿದರು.—1 ಕೊರಿಂಥ 1:19-21; 3:19, 20; ಕೊಲೊಸ್ಸೆ 2:8.

ವೆಚ್ಚವನ್ನು ಲೆಕ್ಕಿಸುವುದು

16. (ಎ) ಮುಂದಿನ ಶಿಕ್ಷಣವು ಅಪೇಕ್ಷಿತವೊ ಎಂದು ಯಾರು ನಿರ್ಧರಿಸುತ್ತಾರೆ, ಮತ್ತು ಯಾವುದನ್ನು ಮನಸ್ಸಿನಲ್ಲಿ ಅಗ್ರಸ್ಥಾನದಲ್ಲಿಡಬೇಕು? (ಬಿ) ಯಾವುದನ್ನು ಪರಿಗಣನೆಗೆ ತಕ್ಕೊಳ್ಳಬೇಕು?

16 ಯುವ ಕ್ರೈಸ್ತನೊಬ್ಬನು ಮುಂದಿನ ಶಿಕ್ಷಣ ಯಾ ತರಬೇತಿಯನ್ನು ಪಡಕೊಳ್ಳಬೇಕೋ ಎಂದು ನಿರ್ಧರಿಸುವುದು ಯಾರು? ಶಿರಸ್ಸುತನದ ಬೈಬಲಿನ ಸೂತ್ರವು ಇಲ್ಲಿ ಕಾರ್ಯ ನಿರ್ವಹಿಸುತ್ತದೆ. (1 ಕೊರಿಂಥ 11:3; ಎಫೆಸ 6:1) ಇದರ ಆಧಾರದಲ್ಲಿ, ಒಂದು ಕಸಬು ಯಾ ವೃತ್ತಿ ಮತ್ತು ಅದಕ್ಕೆ ಎಷ್ಟು ವಿದ್ಯಾಭ್ಯಾಸದ ಅಗತ್ಯವಿದೆ ಎಂಬುದರ ಆರಿಸುವಿಕೆಯಲ್ಲಿ ಹೆತ್ತವರು ಖಂಡಿತವಾಗಿಯೂ ತಮ್ಮ ಮಕ್ಕಳಿಗೆ ಮಾರ್ಗದರ್ಶಿಸುವವರಾಗಿರುತ್ತಾರೆ. ಅನೇಕ ದೇಶಗಳಲ್ಲಿ ಶೈಕ್ಷಣಿಕ ಮತ್ತು ಔದ್ಯೋಗಿಕ ಆರಿಸುವಿಕೆಗಳನ್ನು ಮಾಧ್ಯಮಿಕ ವಿದ್ಯಾಭ್ಯಾಸದ ಆರಂಭದಲ್ಲಿಯೇ ಮಾಡಬೇಕಾಗಿರುತ್ತದೆ. ಕ್ರೈಸ್ತ ಹೆತ್ತವರು ಮತ್ತು ಯುವಕರು, ಮನಸ್ಸಿನಲ್ಲಿ ರಾಜ್ಯದ ಅಭಿರುಚಿಗಳನ್ನು ಅತ್ಯಂತ ಮೇಲಿಟ್ಟುಕೊಳ್ಳುವುದರೊಂದಿಗೆ, ಒಂದು ವಿವೇಕದ ಆರಿಸುವಿಕೆಯನ್ನು ಮಾಡುವುದರಲ್ಲಿ ಯೆಹೋವನ ಮಾರ್ಗದರ್ಶನೆಯನ್ನು ಹುಡುಕಬೇಕಾಗಿರುವ ಸಮಯವು ಅದೇ ಆಗಿರುತ್ತದೆ. ಯುವ ಜನರಿಗೆ ವಿವಿಧ ಒಲವುಗಳು ಮತ್ತು ಸಾಮರ್ಥ್ಯಗಳುಂಟು. ವಿವೇಕಿ ಹೆತ್ತವರು ಇವುಗಳನ್ನು ಗಮನಕ್ಕೆ ತಕ್ಕೊಳ್ಳುವರು. ಶ್ರಮದ ಕೆಲಸವೇ ಆಗಲಿ ಯಾ ಕಚೇರಿ ಕೆಲಸವೇ ಆಗಲಿ, ಎಲ್ಲಾ ಪ್ರಾಮಾಣಿಕ ಕೆಲಸವು ಗೌರವಾನಿತ್ವವಾಗಿದೆ. ಲೋಕವು ಕಚೇರಿ ಕೆಲಸವನ್ನು ಎತ್ತಿ ಹಿಡಿದು, ಒಬ್ಬನು ತನ್ನ ಕೈಗಳಿಂದ ಶ್ರಮದ ದುಡಿಮೆ ಮಾಡುವುದನ್ನು ಜರೆಯಬಹುದಾದರೂ, ಬೈಬಲ್‌ ಖಂಡಿತವಾಗಿಯೂ ಹಾಗೆ ಮಾಡುವುದಿಲ್ಲ. (ಅ. ಕೃತ್ಯಗಳು 18:3) ಹೀಗೆ ಇಂದು ಹೆತ್ತವರು ಮತ್ತು ಯುವ ಕ್ರೈಸ್ತರು, ಪ್ರಯೋಜನ ಮತ್ತು ಅಪ್ರಯೋಜನಗಳನ್ನು ಜಾಗ್ರತೆಯಿಂದ ಮತ್ತು ಪ್ರಾರ್ಥನಾಪೂರ್ವಕವಾಗಿ ತೂಗಿ ನೋಡಿದ ಮೇಲೆ, ಮಾಧ್ಯಮಿಕ ಶಾಲೆಯ ನಂತರದ ವಿದ್ಯಾಭ್ಯಾಸದ ಪರವಾಗಿ ಯಾ ವಿರುದ್ಧವಾಗಿ ನಿರ್ಣಯಿಸುವಾಗ, ಸಭೆಯಲ್ಲಿರುವ ಇತರರು ಅವರನ್ನು ಟೀಕಿಸಬಾರದು.

17. ಕೆಲವು ಸಾಕ್ಷಿ ಹೆತ್ತವರು ಅವರ ಮಕ್ಕಳಿಗೋಸ್ಕರ ಯಾವ ಆಯ್ಕೆಯನ್ನು ಮಾಡುತ್ತಾರೆ?

17 ಕ್ರೈಸ್ತ ಹೆತ್ತವರು ಅವರ ಮಕ್ಕಳಿಗೆ ಹೈಸ್ಕೂಲ್‌ ನಂತರ ಮುಂದಿನ ವಿದ್ಯಾಭ್ಯಾಸವನ್ನು ಒದಗಿಸುವುದನ್ನು ಜವಾಬ್ದಾರಿಯಿಂದ ನಿರ್ಣಯಿಸುತ್ತಾರಾದರೆ, ಅದು ಅವರ ಹಕ್ಕಾಗಿದೆ. ವ್ಯಾಸಂಗಗಳ ಕಾಲಾವಧಿಯು ಕಸಬು ಯಾ ವೃತ್ತಿಯ ಆರಿಸುವಿಕೆಗೆ ಅನುಗುಣವಾಗಿ ವ್ಯತ್ಯಾಸ ಹೊಂದುವುದು. ಆರ್ಥಿಕ ಕಾರಣದಿಂದ ಮತ್ತು ತಮ್ಮ ಮಕ್ಕಳನ್ನು ಆದಷ್ಟು ಬೇಗನೆ ಪೂರ್ಣ ಸಮಯದ ಸೇವೆಯಲ್ಲಿ ಸೇರಿಸುವುದಕ್ಕೋಸ್ಕರ, ಅನೇಕ ಕ್ರೈಸ್ತ ಹೆತ್ತವರು ಅವರಿಗೋಸ್ಕರ ಜೀವನೋಪಾಯದ ಯಾ ಕೈಗಾರಿಕಾ ಶಾಲೆಗಳಲ್ಲಿ ಅಲ್ಪಾವಧಿಯ ವ್ಯಾಸಂಗದ ಕಾರ್ಯಕ್ರಮಗಳನ್ನು ಆರಿಸಿಕೊಂಡಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಯುವಕರಿಗೆ ಅಭ್ಯಾಸಿಯಾಗಿ ಕೆಲಸ ಕಲಿಯುವಂಥ ಆವಶ್ಯಕತೆ ಇತ್ತು, ಆದರೂ ಇದನ್ನವರು ಯಾವಾಗಲೂ ಯೆಹೋವನಿಗೆ ಪೂರ್ಣ ಜೀವಿತದ ಸೇವೆಯ ಗುರಿಯೊಂದಿಗೆ ಮಾಡಿದ್ದಾರೆ.

18. ಹೆಚ್ಚಿನ ಪಾಠಕ್ರಮಗಳನ್ನು ತಕ್ಕೊಂಡಿರುವಲ್ಲಿ, ಯಾವುದನ್ನು ಮನಸ್ಸಿನಲ್ಲಿಡಬೇಕು?

18 ಒಂದುವೇಳೆ ಹೆಚ್ಚಿನ ವ್ಯಾಸಂಗದ ಪಾಠಕ್ರಮಗಳನ್ನು ತಕ್ಕೊಂಡಿರುವುದಾದರೆ, ನಿಶ್ಚಯವಾಗಿಯೂ ಅತಿ ಪಾಂಡಿತ್ಯದಿಂದ ಕಂಗೊಳಿಸುವ ಯಾ ಪ್ರತಿಷ್ಠೆಯ ಲೌಕಿಕ ಜೀವನೋಪಾಯಕ್ಕಾಗಿ ಹೆಣಗುವ ಉದ್ದೇಶದಿಂದ ಅದಿರಬಾರದು. ಪಾಠಕ್ರಮಗಳನ್ನು ಜಾಗ್ರತೆಯಿಂದ ಆರಿಸಿಕೊಳ್ಳಬೇಕು. ಈ ಪತ್ರಿಕೆ ಉಚ್ಚ ಶಿಕ್ಷಣದ ಅಪಾಯಗಳನ್ನು ಒತ್ತಿ ಹೇಳಿದೆ, ಮತ್ತು ತಕ್ಕಷ್ಟು ಆಧಾರದ ಮೇರೆಗೆ ಅದು ಹಾಗಿರುತ್ತದೆ, ಯಾಕಂದರೆ ಹೆಚ್ಚಿನ ಉಚ್ಚ ಶಿಕ್ಷಣವು ಬೈಬಲಿನ “ಸ್ವಸ್ಥಬೋಧನೆ” ಯನ್ನು ವಿರೋಧಿಸುತ್ತದೆ. (ತೀತ 2:1; 1 ತಿಮೊಥೆಯ 6:20, 21) ಅದೂ ಅಲ್ಲದೆ, 1960 ಗಳಿಂದ, ಮುಂದುವರಿದ ಕಲಿಯುವಿಕೆಗಾಗಿ ಇರುವ ಶಾಲೆಗಳು ನಿಯಮರಾಹಿತ್ಯ ಮತ್ತು ಅನೈತಿಕತೆಯ ಕೊಳೆಯ ಶಾಖವೇರಿದ ಪಾತಿಗಳಾಗಿರುತ್ತವೆ. ಆ ರೀತಿಯ ಪರಿಸರದಲ್ಲಿ ಒಳಸೇರುವುದನ್ನು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಬಲವಾಗಿ ನಿರುತ್ತೇಜಿಸಿದೆ. (ಮತ್ತಾಯ 24:12, 45) ಹೇಗೂ, ಒಪ್ಪಿಕೊಳ್ಳಲೇ ಬೇಕಾದದ್ದೇನಂದರೆ, ಈಗಿನ ಕಾಲದಲ್ಲಿ ಯುವಜನರು ಹೈಸ್ಕೂಲ್‌ ಮತ್ತು ಯಂತ್ರ ಶಿಲ್ಪ ಕಾಲೇಜುಗಳಲ್ಲಿ ಮತ್ತುಕೆಲಸದ ಸ್ಥಳಗಳಲ್ಲಿಯೂ ಕೂಡ ಇಂತಹದ್ದೇ ಅಪಾಯಗಳಿಗೆ ಎದುರಾಗುತ್ತಾರೆ.—1 ಯೋಹಾನ 5:19.a

19. (ಎ) ಸಂಪೂರಕ ಪಾಠಕ್ರಮಗಳನ್ನು ತಕ್ಕೊಳ್ಳಲು ನಿರ್ಧರಿಸುವವರಿಂದ ಯಾವ ಮುಂಜಾಗ್ರತೆಯು ತಕ್ಕೊಳ್ಳಲ್ಪಡಬೇಕು? (ಬಿ) ಕೆಲವರು ತಮ್ಮ ಶಿಕ್ಷಣವನ್ನು ಹೇಗೆ ಒಳ್ಳೇ ಪ್ರಯೋಜನಕ್ಕೆ ಬಳಸಿರುತ್ತಾರೆ?

19 ಸಂಪೂರಕ ಶಿಕ್ಷಣವನ್ನು ನಿರ್ಧರಿಸುವಲ್ಲಿ, ಸಾಧ್ಯವಾಗುವದಾದರೆ, ಒಬ್ಬ ಯುವ ಸಾಕ್ಷಿಯು, ಮನೆಯಲ್ಲಿ ಜೀವಿಸಿರುವಾಗಲೇ ಇದನ್ನು ತಕ್ಕೊಳ್ಳುವುದು ಹಿತಕರ. ಹೀಗೆ ಯಥಾ ಸ್ಥಿತಿಯ ಕ್ರೈಸ್ತ ಅಧ್ಯಯನದ ರೂಢಿ, ಕೂಟದ ಹಾಜರಿ, ಮತ್ತು ಸಾರುವ ಕಾರ್ಯವನ್ನು ಅವನು ಕಾಪಾಡಿಕೊಳ್ಳಶಕ್ತನಾಗುವನು. ಆರಂಭದಿಂದಲೂ ಬೈಬಲ್‌ ಸೂತ್ರಗಳ ಮೇಲೆ ಯೋಗ್ಯವಾದ ಸ್ಥಾನವನ್ನು ಕೂಡ ತೆಗೆದುಕೊಳ್ಳಬೇಕು. ದಾನಿಯೇಲ ಮತ್ತು ಅವನ ಮೂರು ಇಬ್ರಿಯ ಸಂಗಾತಿಗಳು ಬಾಬೆಲಿನಲ್ಲಿ ಮುಂದುವರಿದ ವ್ಯಾಸಂಗಗಳನ್ನು ಕೈಕೊಳ್ಳಲು ಒಪ್ಪಿಕೊಂಡಾಗ, ಅವರು ಪರದೇಶದಲ್ಲಿ ಬಂದಿವಾಸಿಗಳಾಗಿದ್ದರೆಂಬುದನ್ನು ನೆನಪು ಮಾಡಿಕೊಳ್ಳಬೇಕು, ಆದರೆ ಅವರು ತಮ್ಮ ಸಮಗ್ರತೆಯನ್ನು ಸುಸಂಗತವಾಗಿ ಕಾಪಾಡಿಕೊಂಡರು. (ದಾನಿಯೇಲ 1 ನೇ ಅಧ್ಯಾಯ) ಕೆಲವೊಂದು ದೇಶಗಳಲ್ಲಿ ಯುವ ಸಾಕ್ಷಿಗಳು ಆತ್ಮಿಕ ಅಭಿರುಚಿಗಳನ್ನು ಪ್ರಥಮವಾಗಿ ಇಡುವಾಗ, ಅಕೌಂಟೆಂಟ್‌ಗಳಾಗಿ, ಕಸಬುದಾರರಾಗಿ, ಅಧ್ಯಾಪಕರುಗಳಾಗಿ, ಭಾಷಾಂತರಗಾರರಾಗಿ, ವ್ಯಾಖ್ಯಾಕಾರರಾಗಿ ಪಾಠಕ್ರಮಗಳನ್ನು ಅಥವಾ ಅವರ ಪಯನೀಯರರಾಗಿರುವ ಆದ್ಯ ಜೀವನಗತಿಯಲ್ಲಿ ಅವರನ್ನು ತಕ್ಕದಾಗಿ ಬೆಂಬಲಿಸುವ ಇತರ ಉದ್ಯೋಗಗಳನ್ನು, ಅಂಶಕಾಲಿಕ ಕೆಲಸಕ್ಕಾಗಿ ತಮ್ಮನ್ನು ಸಜ್ಜುಗೊಳಿಸುವುದಕ್ಕಾಗಿ ತಕ್ಕೊಂಡಿರುತ್ತಾರೆ. (ಮತ್ತಾಯ 6:33) ಈ ಯೌವನಸ್ಥರಲ್ಲನೇಕರು ನಂತರ ಸಂಚರಣಾ ಮೇಲ್ವಿಚಾರಕರು ಯಾ ಬೆತೆಲ್‌ ಸ್ವಯಂಸೇವಕರಾಗಿದ್ದಾರೆ.

ಏಕತ್ರಿತ, ಶಿಕ್ಷಿತ ಜನರು

20. ಯೆಹೋವನ ಜನರೊಳಗೆ ಲೋಕ ಮಾಡುವ ಯಾವ ವ್ಯತ್ಯಾಸಕ್ಕೆ ಅವಕಾಶವಿಲ್ಲ?

20 ಯೆಹೋವನ ಜನರೊಳಗೆ, ಒಬ್ಬನ ಉದ್ಯೋಗವು ಶ್ರಮದ ಕೆಲಸ, ಕಚೇರಿ ಕೆಲಸ, ವ್ಯವಸಾಯ, ಯಾ ಚಾಕರಿಯೇ ಆಗಿರಲಿ, ಎಲ್ಲರು ಬೈಬಲಿನ ಒಳ್ಳೆಯ ವಿದ್ಯಾರ್ಥಿಗಳು ಮತ್ತು ಸಮರ್ಥ ಬೋಧಕರಾಗಿರುವುದು ಅಗತ್ಯ. ಓದುವುದು, ಅಧ್ಯಯನ ಮಾಡುವುದು, ಮತ್ತು ಕಲಿಸುವುದರಲ್ಲಿ ಎಲ್ಲರಿಂದ ಗಳಿಸಲ್ಪಟ್ಟಿರುವ ಕೌಶಲ್ಯಗಳು ಕೈ ದುಡಿತ ಮತ್ತು ಕಚೇರಿ ಕೆಲಸಗಾರರ ನಡುವೆ ಲೋಕ ಮಾಡುವ ವ್ಯತ್ಯಾಸವನ್ನು ಹೋಗಲಾಡಿಸಲು ಸಾಧಕವಾಗುತ್ತವೆ. ಇದು, ಎಲ್ಲಿ ಆತ್ಮಿಕ ಗುಣಗಳು ಅತಿ ಪ್ರಾಮುಖ್ಯವಾಗಿವೆಯೋ ಮತ್ತು ಎಲ್ಲರಿಂದಲೂ ಕೇಳಲ್ಪಡುತ್ತವೆಯೋ, ಆ ಬೆತೆಲ್‌ ಮನೆಗಳಲ್ಲಿ ಮತ್ತು ವಾಚ್‌ ಟವರ್‌ ಸೊಸೈಟಿಯ ಕಟ್ಟಡ ರಚನಾ ಸ್ಥಳಗಳಲ್ಲಿನ ಸ್ವಯಂಸೇವಕರೊಳಗೆ ವಿಶಿಷ್ಟವಾಗಿ ಗೋಚರವಾಗುವ ಐಕ್ಯತೆ ಮತ್ತು ಪರಸ್ಪರ ಗೌರವಕ್ಕೆ ಕಾರಣವಾಗಿ ಪರಿಣಮಿಸುತ್ತದೆ. ಇಂಥ ಸ್ಥಳಗಳಲ್ಲಿ ಅನುಭವಿ ಕಚೇರಿ ಸಿಬ್ಬಂದಿಗಳು ಕೈ ದುಡಿಮೆಯ ಕುಶಲತೆಯುಳ್ಳ ಕೆಲಸಗಾರರೊಂದಿಗೆ ಸಂತೋಷದಿಂದ ಕೆಲಸ ಮಾಡುತ್ತಾರೆ, ಮತ್ತು ಎಲ್ಲರು ಒಬ್ಬರಿಗೊಬ್ಬರು ಗಣ್ಯತೆಯ ಪ್ರೀತಿಯನ್ನು ಪ್ರದರ್ಶಿಸುತ್ತಾರೆ.—ಯೋಹಾನ 13:34, 35; ಫಿಲಿಪ್ಪಿ 2:1-4.

21. ಯುವ ಕ್ರೈಸ್ತರ ಗುರಿಯು ಏನಾಗಿರಬೇಕು?

21 ಹೆತ್ತವರೇ, ನೂತನ ಲೋಕದ ಸಮಾಜದ ಉಪಯುಕ್ತ ಸದಸ್ಯರಾಗುವ ಗುರಿಯ ಕಡೆಗೆ ನಿಮ್ಮ ಮಕ್ಕಳನ್ನು ಮಾರ್ಗದರ್ಶಿಸಿರಿ! ಯುವ ಕ್ರೈಸ್ತರೇ, ನಿಮಗಿರುವ ವಿದ್ಯಾ ಸುಯೋಗಗಳನ್ನು ಯೆಹೋವನನ್ನು ಸೇವಿಸಲು ನಿಮಗಿರುವ ಸುಯೋಗಗಳನ್ನು ಹೆಚ್ಚು ಪೂರ್ಣವಾಗಿ ಹಿಡಿಯಲು ಸಜ್ಜುಗೊಳಿಸುವ ಮಾಧ್ಯಮವಾಗಿ ಉಪಯೋಗಿಸಿರಿ! ಶಿಕ್ಷಿತರೋಪಾದಿ, ನೀವೆಲ್ಲರು ಈಗ ಮತ್ತು ದೇವರ ವಾಗ್ದಾನಿತ “ನೂತನ ಲೋಕ”ದಲ್ಲಿ ನಿತ್ಯನಿರಂತರದಲ್ಲಿಯೂ ದೇವಪ್ರಭುತ್ವ ಸಮಾಜದ ಸುಸಜ್ಜಿತ ಸದಸ್ಯರಾಗಿ ಪರಿಣಮಿಸುವಂತಾಗಲಿ.—2 ಪೇತ್ರ 3:13; ಯೆಶಾಯ 50:4; 54:13; 1 ಕೊರಿಂಥ 2:13.

[ಅಧ್ಯಯನ ಪ್ರಶ್ನೆಗಳು]

a  ವಾಚ್‌ಟವರ್‌ ಸಪ್ಟಂಬರ್‌ 1, 1975 ರ 542-4 ಪುಟಗಳನ್ನೂ ನೋಡಿರಿ.

ನಿಮ್ಮ ಜ್ಞಾಪಕಶಕ್ತಿಯನ್ನು ಪರೀಕ್ಷಿಸಿರಿ

▫ ನಿಜ ಕ್ರೈಸ್ತರು ಶಿಕ್ಷಣದಲ್ಲಿ ಯಾಕೆ ಆಸಕ್ತಿಯುಳ್ಳವರಾಗಿದ್ದಾರೆ?

▫ ಶಿಕ್ಷಣದ ಯಾವ ವಿಪರೀತದ ದೃಷ್ಟಿಕೋನಗಳನ್ನು ನಿಜಕ್ರೈಸ್ತರು ತಡೆಯುವರು?

▫ ಹೆಚ್ಚಿನ ವ್ಯಾಸಂಗದ ಯಾವ ಅಪಾಯಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು, ಮತ್ತು ಯಾವ ಮುನ್ನೆಚ್ಚರಿಕೆಗಳನ್ನು ತಕ್ಕೊಳ್ಳಬೇಕು?

▫ ಯೆಹೋವನ ಜನರೊಳಗೆ ಲೋಕ ಮಾಡುವ ಯಾವ ವ್ಯತ್ಯಾಸಕ್ಕೆ ಅವಕಾಶವಿಲ್ಲ?

[ಪುಟ 16 ರಲ್ಲಿರುವ ಚಿತ್ರ]

ಶ್ರದ್ಧೆಯಿಂದ ಅಭ್ಯಾಸಿಸುವುದರ ಮೂಲಕ, ಯುವ ಕ್ರೈಸ್ತರು ನೂತನ ಲೋಕದ ಸಮಾಜದ ಹೆಚ್ಚು ಉಪಯುಕ್ತ ಸದಸ್ಯರಾಗಬಹುದು

[ಪುಟ 19 ರಲ್ಲಿರುವ ಚಿತ್ರ]

ಮುಂದಿನ ಶಿಕ್ಷಣವನ್ನು ಆರಿಸುವಲ್ಲಿ, ಅದು ಯೆಹೋವನಿಗೆ ಉತ್ತಮವಾಗಿ ಸೇವಿಸುವ ಅಪೇಕ್ಷೆಯಿಂದ ಪ್ರೇರಿತವಾಗಿದ್ದಿರಬೇಕು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ