“ಪರದೈಸ”ದಲ್ಲಿ ಅವರು ನಿಜ ಆನಂದವನ್ನು ಕಂಡುಕೊಳ್ಳುತ್ತಿದ್ದಾರೆ
ಪರದೈಸ! ಆ ಶಬ್ದವು ಹವಾಯಿಯ ಕುರಿತು ಜನರು ಯೋಚಿಸುವಾಗ ಆಗಾಗ್ಗೆ ಮನಸ್ಸಿಗೆ ಬರುತ್ತದೆ—ಮತ್ತು ಸಕಾರಣಗಳಿಗಾಗಿಯೇ. ಇಲ್ಲಿ ಸಮೃದ್ಧವಾದ ಪೂರೈಕೆಯ ಸಮಶೀತೋಷ್ಣದ ಹವಾಮಾನ, ನೀಲಿ ಗಗನ, ತೊನೆದಾಡುವ ತಾಳೆ ಮರಗಳು, ಚೇತೋಹಾರಿ ಮಂದಮಾರುತಗಳು, ಮತ್ತು ಮರಳ ತೀರಗಳು—ಅನೇಕರು ಪರದೈಸದಂತಿದೆಯೆಂದೆಣಿಸುವ ಮೂಲಾಂಶಗಳು.
ಹತ್ತಿರ ಮತ್ತು ದೂರದಿಂದ ಜನರನ್ನು ಇಂಥ ವೈಶಿಷ್ಟ್ಯಗಳು ಆಕರ್ಷಿಸಿವೆ. ಅವರು ಏಶ್ಯಾ, ಫೆಸಿಫಿಕ್, ಅಮೆರಿಕಗಳು, ಮತ್ತು ಕೇರಿಬಿಯನ್ ದ್ವೇಪಗಳಂಥ ಸ್ಥಳಗಳಿಂದ ಮತ್ತು ಯೂರೋಪಿನಿಂದ ಸಹ ಬಂದಿರುತ್ತಾರೆ. ವರ್ಷವಿಡೀ ಇರುವ ಮಂದೋಷ್ಣಹವಾಗುಣಕ್ಕಾಗಿ ಅನೇಕರು ಇಲ್ಲಿಗೆ ಸ್ಥಲಾಂತರಿಸಿಕೊಂಡಿದ್ದಾರೆ. ಇತರರು ಆರ್ಥಿಕ ಭದ್ರತೆಯನ್ನು—ಮತ್ತು ಸಹಜವಾಗಿ ಸಂತೋಷವನ್ನು ಅನ್ವೇಷಿಸಿಕೊಂಡು ಬಂದಿರುತ್ತಾರೆ. ಸಂಸ್ಕೃತಿಗಳ ಮತ್ತು ಧಾರ್ಮಿಕ ಕಲ್ಪನೆಗಳ ವರ್ಣಮಯ ವೈವಿಧ್ಯತೆಯೊಂದಿಗೆ ರಾಷ್ಟ್ರೀಯತೆಗಳು ಮತ್ತು ಕುಲವರ್ಣೀಯ ಗುಂಪುಗಳು ಸಂಪೂರ್ಣವಾಗಿ ಬದಲಾವಣೆಹೊಂದುವದೆ ಇದರ ಫಲಿತಾಂಶ.
ಆದಾಗ್ಯೂ, ಈ ಚಿತ್ರಕ್ಕೆ ಇನ್ನೊಂದು ಪಕ್ಕವಿದೆ. ಭೂಮಿಯ ಇತರ ಅನೇಕ ಸುಂದರವಾದ ಸ್ಥಳಗಳಂತೆಯೇ, ಪಾತಕ, ಮಾದಕೌಷಧಗಳು, ಬಾಲಕರ ತಕ್ಷೀರುಗಳು, ಮಾಲಿನ್ಯತೆ, ಮತ್ತು ಒಬ್ಬನು ಎಲ್ಲಿಯೇ ವಾಸಿಸಿದರೂ, ಮಾನವ ಕುಟುಂಬಕ್ಕೆ ದಾಳಿಮಾಡುತ್ತಿರುವ ಇತರ ಅನೇಕ ಸಮಸ್ಯೆಗಳಿಂದ ಹವಾಯಿ ಬಾಧಿಸಲ್ಪಟ್ಟಿದೆ. ಮಾನವ ನಿರ್ಲಕ್ಷ್ಯತೆಯ ಮತ್ತು ಸ್ವಾರ್ಥತೆಯ ಮೂಲಕ, ಹವಾಯಿ ದ್ವೀಪಗಳು ಮೆಲ್ಲಮೆಲ್ಲನೆ ಅವುಗಳ ನೈಸರ್ಗಿಕ ಚೆಲುವನ್ನು ಕಳಕೊಳ್ಳುತ್ತಾ ಇವೆ. ಜನರು ಪರದೈಸ ಬಯಸುತ್ತಾರೆ. ಆದರೆ ಇಲ್ಲಿ ಜೀವಿಸುವ ಎಲ್ಲರೂ ಈ ದ್ವೀಪಗಳನ್ನು ಪರದೈಸವನ್ನಾಗಿ ಮಾಡಲು ಯಾ ಕಡಿಮೆ ಪಕ್ಷ ಹಾಗೆ ಇಡಲು ಗಮನ ಹರಿಸುವದಿಲ್ಲ. ಪರದೈಸವೊಂದನ್ನು ಮಾಡಲು ಸುಂದರವಾದ ಪ್ರಕೃತಿ ದೃಶ್ಯ ಮತ್ತು ಹಿತಕರವಾದ ಹವಾಮಾನಕ್ಕಿಂತಲೂ ಹೆಚ್ಚಿನದ್ದು ಬೇಕಾಗುತ್ತದೆ.
ಆದರೂ, ಈ ಪರದೈಸದ ಆವರಣದಲ್ಲಿ ನಿಜ ಸಂತೋಷದಲ್ಲಿ ಆನಂದಿಸುತ್ತಿರುವ ಜನರ ಒಂದು ಬೆಳೆಯುತ್ತಿರುವ ಗುಂಪು ಅಲ್ಲಿ ಜೀವಿಸುತ್ತಿದೆ. ಅವರು ಬೈಬಲ್ ಸತ್ಯಗಳನ್ನು ತಮ್ಮದಾಗಿ ಮಾಡಿಕೊಳ್ಳುವ ಮತ್ತು ದೇವರ ಅದ್ಭುತಕರವಾದ ವಾಗ್ದಾನವನ್ನು ಹೃದಯದಾಳದಿಂದ ಸ್ವೀಕರಿಸುವ ವ್ಯಕ್ತಿಗಳಾಗಿದ್ದಾರೆ: “ಇಗೋ, ನೂತನಾಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.” ಅಪೊಸ್ತಲ ಪೇತ್ರನ ಈ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಈ ಜನರು ಸಂತೋಷದಿಂದ ಭವಿಷ್ಯದೆಡೆಗೆ ನೋಡುತ್ತಾರೆ: “ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (ಯೆಶಾಯ 65:17; 2 ಪೇತ್ರ 3:13) ಈ ಜನರು ಯಾರು? ಬೈಬಲಿನಲ್ಲಿ ಸಾದರಪಡಿಸಲ್ಪಟ್ಟ ಆಶ್ಚರ್ಯಕರ ನಿರೀಕ್ಷೆಯನ್ನು ಅವರು ಕಲಿತದ್ದಾದರೂ ಹೇಗೆ? ಮತ್ತು ಅವರ ಜೀವಿತಗಳಲ್ಲಿ ಯಾವ ಬದಲಾವಣೆಗಳು ತರಲ್ಪಟ್ಟಿವೆ?
ಮರಣದ ಭಯವನ್ನು ಜಯಿಸಿದ್ದು
ಈಸಾಬೇಲ್ ಮತ್ತು ಅವಳ ಗಂಡ ಜೋರ್ಜ್ ಫಿಲಿಪಿನೊ ಮೂಲದಿಂದ ಬಂದವರು. ತನ್ನ ಹೆತ್ತವರ ರೋಮನ್ ಕ್ಯಾಥೊಲಿಕ್ ಧರ್ಮವನ್ನು ಅನುಸರಿಸುವಂತೆ ಅವಳು ಬೆಳಸಲ್ಪಟ್ಟವಳಾದರೂ, ಅವಳೆಂದೂ ಬೈಬಲನ್ನು ಕಂಡಿರಲಿಲ್ಲ. ಮಾನವಾತ್ಮವು ಅಮರ್ತ್ಯ ಎಂದು ಈಸಾಬೇಲಳಿಗೆ ಕಲಿಸಲಾಗಿತ್ತು. ಈ ಸುಳ್ಳು ತತ್ವಕ್ಕೆ ಅವಳ ಪ್ರತಿವರ್ತನೆಯೇನು? ಒಳ್ಳೇದು, ಸಾಯುವ ಯೋಚನೆಯಿಂದಲೇ ಅವಳು ಬೆಚ್ಚಿಬೀಳುತ್ತಿದ್ದಳು ಯಾಕಂದರೆ ಒಂದು ಶವಪೆಟ್ಟಿಗೆಯಲ್ಲಿ ಸದಾಕಾಲಕ್ಕೂ ಸಜೀವವಾಗಿ ಹೂಣಲ್ಪಡುವ ಮತ್ತು ಆತ್ಮವು ಪಾರಾಗಲು ಶಕ್ತವಾಗದೆ ಇರುವ ಸಾಧ್ಯತೆಗಳ ಅಭಿಪ್ರಾಯವು ಅವಳಲ್ಲಿತ್ತು. ಆದರೂ, ಈಸಾಬೇಲಳು 1973 ರಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಳು. ಮಾನವಾತ್ಮವು ಅಮರ್ತ್ಯವಲ್ಲ ಮತ್ತು ಪುನರುತ್ಥಾನದ ಮೂಲಕ ದೇವರು ಮರಣವನ್ನು ಇಲ್ಲದಂತೆ ಮಾಡುವನು ಎಂಬುದನ್ನು ಕಲಿತಾಗ, ಅವಳು ಸಂತೋಷಭರಿತಳಾದಳು ಮತ್ತು ಬಹಳಷ್ಟು ಭಾರ ಕಡಿಯೆಯಾದಂಥ ಅನಿಸಿಕೆವುಂಟಾಯಿತು. (ಯೆಹೆಜ್ಜೇಲ 18:4, 20; ಯೋಹಾನ 5:28, 29) ಬೈಬಲ್ ಸತ್ಯವು ಅವಳಲ್ಲಿ ಅಂಥ ಪ್ರಭಾವವನ್ನು ಹಾಕಿದ್ದರಿಂದ, ಅವಳು ತೀವ್ರವಾಗಿ ಪ್ರಗತಿಮಾಡಿದಳು.
ಜೋರ್ಜನ ಕುರಿತಾಗಿ ವಿನು? ಅವನೂ ಕೂಡ ಬೈಬಲ್ ಚರ್ಚೆಗಳಲ್ಲಿ ಕುಳಿತನು, ಆದರೆ ಸಾಕ್ಷಿಗಳು ತಪ್ಪು ಎಂಬುದನ್ನು ರುಜುಮಾಡುವ ಉದ್ದೇಶ ಮಾತ್ರದಿಂದಲೇ. ಆದರೂ, ಅವನಿಗೂ, ಹೆಂಡತಿಗೂ ಕಲಿಸಿದ್ದರಲ್ಲಿ ಯಾವುದೇ ಅಂಸಗತವಾದುದನ್ನು ಅವನು ಕಂಡುಕೊಳ್ಳಶಕ್ತನಾಗಲಿಲ್ಲ. ವಾಸ್ತವದಲ್ಲಿ, ಅವರು ಅಭ್ಯಾಸವನ್ನು ಆರಂಭಿಸಿದ ಕೊಂಚಸಮಯದೊಳಗೆ, ರಕ್ತದ ಕುರಿತಾದ ಪ್ರಶ್ನೆಯು ಎಬ್ಬಿಸಲ್ಪಟ್ಟಿತು. ಅಷ್ಟರ ತನಕ ಜೋರ್ಜ್ ರಕ್ತದಿಂದ ತಯಾರಿಸಿದ ಆಹಾರವನ್ನು ತಿನ್ನುವ ಚಪಲತೆಯುಳ್ಳವನಾಗಿದ್ದನು. ಆದರೆ ರಕ್ತ ಭಜಿಸುವದನ್ನು ಬೈಬಲ್ ನೇರವಾಗಿ ಖಂಡಿಸುವದನ್ನು ಅವನು ಕಂಡುಕೊಂಡಾಗ, ಅವನದನ್ನು ತೊರೆದನು. (ಆದಿಕಾಂಡ 9:3, 4; ಯಾಜಕಕಾಂಡ 17:10-12; ಅ. ಕೃತ್ಯಗಳು 15:28, 29) ಬೈಬಲ್ ಅಭ್ಯಾಸದಲ್ಲಿ ಭಾಗವಹಿಸುವುದನ್ನು ಅವನು ಮುಂದುವರಿಸಿದನು ಮತ್ತು ಕಟ್ಟಕಡೆಗೂ ತಾನು ಸತ್ಯವನ್ನು ಕಂಡುಕೊಂಡದ್ದಕ್ಕಾಗಿ ಸಂತೋಷಿಸಿದನು. ಇಂದು ಜೋರ್ಜ್, ಈಸಾಬೇಲ್, ಮತ್ತು ಅವರ ನಾಲ್ವರು ಮಕ್ಕಳು ದೇವರ ಮಟ್ಟಗಳ ಪ್ರಕಾರ ಜೀವಿಸುವುದರಿಂದ ನಿಜ ಸಂತೋಷದಲ್ಲಿ ಆನಂದಿಸುತ್ತಿದ್ದಾರೆ.
ಸತ್ಕ್ರೈಸ್ತತ್ವದಿಂದ ಆಕರ್ಷಿಸಲ್ಪಟ್ಟದ್ದು
ಜೋರ್ಜ್ ಹೆಸರಿನ ಒಬ್ಬ ಜಪಾನೀಸ್ ಮನುಷ್ಯನು ಮತ್ತು ಅವನ ಪೋರ್ಚುಗೀಸ್ ಹೆಂಡತಿ, ಲಿಲಿಯಾನ್ ತಮ್ಮ 60 ರುಗಳ ವಯಸ್ಸಿನಲ್ಲಿದ್ದಾರೆ. ಅವರಿಬ್ಬರೂ ಹವಾಯಿಯಲ್ಲಿ ಹುಟ್ಟ ಬೆಳೆದವರು. ಅವನ ಹೆತ್ತವರಿಂದ ಜೋರ್ಜ್ಗೆ ಯಾವದೇ ಧಾರ್ಮಿಕ ಶಿಕ್ಷಣ ಕೊಡಲ್ಪಡಲಿಲ್ಲವಾದುದರಿಂದ, ಅವನು ಧರ್ಮವನ್ನೆಂದೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೂ, ಅವನು ಯಾವಾಗಲೂ ದೇವರನ್ನು ನಂಬುತ್ತಿದ್ದನು. ಇನ್ನೊಂದು ಪಕ್ಕದಲ್ಲಿ, ಲಿಲಿಯಾನ್ನ ಹೆತ್ತವರು ಒಬ್ಬ ರೋಮಾನ್ ಕ್ಯಾಥೋಲಿಕಳೋಪಾದಿ ಅವರ ಧರ್ಮದಲ್ಲಿ ಅವಳನ್ನು ಬೆಳಸಿದ್ದರು.
ಜೋರ್ಜ್ ಬೈಬಲಿನ ಆಸಕ್ತ ವಾಚಕನಲ್ಲದಿದ್ದರೂ, ಅವನು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಸುಮಾರು 30 ವರ್ಷಗಳಿಂದ ಓದುತ್ತಿದ್ದನು. ಈ ರೀತಿಯಲ್ಲಿ ಅವನು ಬೈಬಲಿನ ಕುರಿತು ಬಹಳಷ್ಟನ್ನು ಕಲಿತಿದ್ದನು. ಆದಾಗ್ಯೂ, ಭಾರಿ ಧೂಮ್ರಪಾನಿಯೂ, ಕುಡುಕನೂ ಆಗಿದ್ದುದರಿಂದ, ಅವನ ಜೀವಿತದಲ್ಲಿ ಬದಲಾವಣೆ ಮಾಡುವುದರಲ್ಲಿ ಅವನು ಮಂದಗತಿಯವನಾಗಿದ್ದನು. ವರ್ಷಗಳು ಗತಿಸಿದಂತೆಯೇ, ಪತ್ರಿಕೆಗಳನ್ನು ಓದುವದನ್ನು ಮುಂದುವರಿಸಿದನು ಮತ್ತು ಆಗಾಗ್ಗೆ ರಾಜ್ಯ ಸಭಾಗೃಹದಲ್ಲಿ ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದನು. ಯಾಕೆ? ಕಾರಣವೇನಂದರೆ, ಅವನು ಹೇಳುವಂತೆ, ಬೈಬಲಿನಲ್ಲಿ ಖಂಡಿಸಲ್ಪಟ್ಟ ಅನೇಕ ಕೆಟ್ಟ ಸಂಗತಿಗಳನ್ನು ಗಮನ ಹರಿಸದೆ ಇರುವುದರಲ್ಲಿ “ಬೇರೆ ಧರ್ಮಗಳು ಬಹಳವಾಗಿ ಕಪಟತನದವುಗಳಾಗಿವೆ.” ಯೆಹೋವನ ಸಾಕ್ಷಿಗಳು ಭಿನ್ನರಾಗಿದ್ದಾರೆ ಎಂದು ಅವನು ನೋಡಶಕ್ತನಾಗಿದ್ದನು.
ಜೋರ್ಜನೆ ನಿಷ್ಠೆಯ ಹೆಂಡತಿ, ಲಿಲಿಯಾನ್, ಅವಳ ಹೆತ್ತವರ ಧರ್ಮದಿಂದ ಆಳವಾಗಿ ಪ್ರಭಾವಿಸಲ್ಪಟ್ಟಿದ್ದರೂ ಕೂಡ, ದೇವರ ವಾಕ್ಯದ ಸತ್ಯಕ್ಕೆ ಅವಳನ್ನು ಆಕರ್ಷಿಸಿದ್ದು ಯಾವುದು? ಒಳ್ಳೇದು, ರಾಜ್ಯ ಸಭಾಗೃಹದ ಕೂಟಗಳಿಗೆ ಹಾಜರಾಗುವಂತೆ ಅವಳ ಸ್ವಂತ ಸಹೋದರಿ ಅವಳನ್ನು ಆಮಂತ್ರಿಸಿದಳು. “ನಾನು ಒಂದು ಸಂತೋಷದ ಕೌಟುಂಬಿಕ ವಾತಾವರಣ ಮತ್ತು ಸ್ನೇಹಪರ ನಸುನಗೆಗಳಲ್ಲಿ ಆನಂದಿಸಿದೆನು,” ಲಿಲಿಯಾನ್ ನೆನಪಿಸುತ್ತಾಳೆ. ಯೆಹೋವನ ಜನರ ನಡುವೆ ಪ್ರದರ್ಶಿಸಲ್ಪಟ್ಟ ಅಪ್ಪಟವಾದ ಪ್ರೀತಿಯು, ಇದು ಸತ್ಯವೆಂದು ಅವಳಿಗೆ ಮನವರಿಕೆ ಮಾಡಿತು. (ಯೋಹಾನ 13:34, 35) ಅವಳು ಬೈಬಲ್ ಅಧ್ಯಯನವೊಂದನ್ನು ಸ್ವೀಕರಿಸಿದಳು, ಮತ್ತು ಅವಳ ಗಂಡನ ನಂತರ ಕೆಲವೇ ತಿಂಗಳುಗಳಲ್ಲಿ ಅವಳು ದೀಕ್ಷಾಸ್ನಾನ ಪಡೆದಳು.
ಜೋರ್ಜ್ ಈಗ ಧೂಮ್ರಪಾನ ಮಾಡುವುದಿಲ್ಲ, ಯಾ ಕುಡಿದು ಮತ್ತನಾಗುವುದಿಲ್ಲ ಮತ್ತು ಲಿಲಿಯಾನ್ ತನ್ನ ಎಲ್ಲಾ ಧಾರ್ಮಿಕ ವಿಗ್ರಹಗಳನ್ನು ಬಿಸಾಡಿಬಿಟ್ಟಿದ್ದಾಳೆ. ಪ್ರೀತಿಯಿಂದ ಭರಿತವಾದ ಹೃದಯಗಳಿಂದ, ತಾವೇನನ್ನು ಕಲಿತಿದ್ದರೋ ಅದನ್ನು ಅವರ 25 ಮೊಮ್ಮಕ್ಕಳು ಮತ್ತು 4 ಮರಿಮಕ್ಕಳ ಸಹಿತವಾಗಿ, ಇತರರೊಂದಿಗೆ ಹಂಚುತ್ತಿದ್ದಾರೆ. ಅವರ ಮುಖಗಳನ್ನು ಕೇವಲ ದೃಷ್ಟಿಸಿರಿ, ಮತ್ತು ಜೋರ್ಜ್ ಮತ್ತು ಲಿಲಿಯಾನ್ ಎಷ್ಟೊಂದು ಆನಂದಿತರಾಗಿದ್ದಾರೆಂದು ನೋಡಿರಿ!
ಶಾಂತಿ ಮತ್ತು ಸಂತೋಷ ಗಳಿಸಿದ್ದು
ಮಧ್ಯವಯಸ್ಸಿನ ಐರಿಷ್ ಮನುಷ್ಯ, ಪ್ಯಾಟ್ರಿಕ್ ಮತ್ತು ಅವನ ಯೆಹೂದಿ ಹೆಂಡತಿ, ನೀನಾ, ಇವರಿಬ್ಬರೂ ನೈರುತ್ಯ ಅಮೆರಿಕದಿಂದ ಹವಾಯಿಗೆ ಬಂದಿದ್ದರು. ಈ ಮುಂಚೆ ಅವರು ಮಾದಕೌಷಧದ, ಧಾರ್ಮಿಕ ಅನುಭವಾತ್ಮಕದ ಮತ್ತು ಸಡಿಲು ನೈತಿಕತೆಯ ಸ್ವಚ್ಛಂದ ಜೀವನಶೈಲಿಯೆಂದು ಕರೆಯಲ್ಪಡುವದರಲ್ಲಿ ಜೀವಿಸಿದ್ದರು. ಮಾದಕೌಷಧಗಳ, ಧ್ಯಾನ, ಮತ್ತು ಅವರ ಸ್ವಂತ ಗುರುವಿನ ಮೂಲಕ ಉನ್ನತ ಶ್ರೇಣಿಯ ಪ್ರಜ್ಞೆಯನ್ನು ಗಳಿಸಲು ಹೆಣಗುತ್ತಾ, ಒಂದು ಪಂಥದ ಸದಸ್ಯರೋಪಾದಿ ಹಲವಾರು ವರ್ಷಗಳನ್ನು ಸಹ ಅವರು ವ್ಯಯಿಸಿದ್ದರು. ಸಮಯ ಕಳೆದಂತೆ ಅಸೂಯೆ, ಕಚ್ಚಾಟ, ಮತ್ತು ‘ಉನ್ನತ ಶ್ರೇಣಿಯ ಪ್ರಜ್ಞೆ’ ಪಡೆದಿದ್ದೇವೆ ಎಂದು ವಾದಿಸುವ ಪಂಥ ಸದಸ್ಯರುಗಳ ನಿರಂತರ ಕಲಹಗಳಿಂದ ಪ್ಯಾಟ್ರಿಕ್ ಬೇಸತ್ತುಹೋದನು. ಅವನು ಗುಂಪನ್ನುತೊರೆದು, ಎಲ್ಲಿ ಒಮ್ಮೆ ಆತನು ಜೀವಿಸಿದ್ದನೋ ಅಲ್ಲಿ ಮನಶ್ಯಾಂತಿ ದೊರಕಬಹುದೆಂಬ ನಿರೀಕ್ಷೆಯಿಂದ, ಹವಾಯಿಗೆ ಹಿಂತೆರಳಿದನು. ತದನಂತರ, ಆಗಿನ ಅವನ ಸ್ನೇಹಿತೆ ನೀನಾ ಸಂದರ್ಶಿಸುವಂತೆ ಪ್ಯಾಟ್ರಿಕ್ನು ಅವಳಿಗೆ ಮನವರಿಕೆ ಮಾಡಿದನು. ಕೊನೆಗೆ ಅವರು ಮದುವೆಯಾಗಿ ಹವಾಯಿಯಲ್ಲಿಯೇ ನೆಲಸಿದರು.
ಶಾಂತಿ ಮತ್ತು ಸಂತೋಷದ ಅವರ ಅನ್ವೇಷಣೆಯು ಕಟ್ಟಕಡೆಗೆ ಯೆಹೋವನ ಸಾಕ್ಷಿಗಳೊಂದಿಗಿನ ಬೈಬಲ್ ಅಭ್ಯಾಸವೊಂದಕ್ಕೆ ನಡಿಸುವುದೆಂದು ಪ್ಯಾಟ್ರಿಕ್ ಮತ್ತು ನೀನಾ ನಿರೀಕ್ಷಿಸಿರಲಿಲ್ಲ. ಜೀವಮಾನಕಾಲದಲ್ಲಿಲ್ಲಾ ಕಟ್ಟಾ ನಿರೀಶ್ವರವಾದಿಯಾಗಿದ್ದ ನೀನಾಳು, ದುಷ್ಟತನ ಯಾಕೆ ಅಸ್ತಿತ್ವದಲ್ಲಿದೆ, ಮತ್ತು ಸಜ್ಜನರಿಗೆ ಕೆಟ್ಟ ಸಂಗತಿಗಳು ಯಾಕೆ ಸಂಭವಿಸುತ್ತವೆ ಎಂಬಂಥ ತಬ್ಬಿಬ್ಬುಮಾಡುವ ಪ್ರಶ್ನೆಗಳಿಗೆ ಬೈಬಲಿನ ತೃಪ್ತಿದಾಯಕ ಉತ್ತರಗಳನ್ನು ಕಾಣಲು ಆರಂಭಿಸಿದಳು. ಪ್ಯಾಟ್ರಿಕ್ನ ಹತ್ತು ವರ್ಷಗಳ ಸತ್ಯದ ಅನ್ವೇಷಣೆಯು ತದ್ರೀತಿಯಲ್ಲಿ ಒಂದು ಸಂತೋಷದ ಮುಕ್ತಾಯಕ್ಕೆ ತಲುಪಿತು. ಬಲುಬೇಗನೆ, ಅವನು ಮತ್ತು ನೀನಾ ಬೈಬಲಿನಿಂದ ಏನನ್ನು ಕಲಿಯುತ್ತಿದ್ದರೋ, ಇದು ಅವರ ನೈತಿಕ ಹೊರನೋಟವನ್ನು ಬದಲಾಯಿಸಲು ತೊಡಗಿಸಿತು. ದೀರ್ಘಕಾಲದ ಹಾಗೂ ಕಠಿಣಕರ ಹೋರಾಟದ ನಂತರ, ಪ್ಯಾಟ್ರಿಕ್ನು ಆಳವಾಗಿ ಬೇರೂರಿದ್ದ ಅವನ ತಂಬಾಕು ಚಟವನ್ನು ಜಯಿಸುವಂತೆ ಸಾಧ್ಯವಾಯಿತು. ಈಗ ಹೆಚ್ಚುಕಡಿಮೆ ಒಂದು ದಶಕದಿಂದಲೂ ಅವನು ಮತ್ತು ಅವನ ಪತ್ನಿ ದೇವರ ಮಟ್ಟಗಳಗನುಸಾರ ಶುದ್ಧ ನೈತಿಕ ಜೀವಿತಗಳನ್ನು ಜೀವಿಸುತ್ತಿದ್ದಾರೆ. ನಿರ್ಮಲ ಹೃದಯಗಳಿಂದ ಮತ್ತು ಶುದ್ಧ ಅಂತಃಕರಣಗಳಿಂದ, ಅವರು ಹುಡುಕುತ್ತಿದ್ದ ಶಾಂತಿಯಲ್ಲಿ ಅವರು ಆನಂದಿಸುತ್ತಿದ್ದರೆ.
ತ್ಯಾಗಗಳು ಮತ್ತು ಬಹುಮಾನಗಳು
“ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗುವದಕ್ಕೆ ಹೆಣಗಾಡಿರಿ. ಬಹುಜನ ಒಳಕ್ಕೆ ಹೋಗುವದಕ್ಕೆ ನೋಡುವರು, ಆದರೆ ಅವರಿಂದಾಗುವದಿಲ್ಲ.” (ಲೂಕ 13:24) ದೇವರನ್ನು ಸೇವಿಸುವುದು ಮತ್ತು ಶಾಸ್ತ್ರೀಯ ಮಟ್ಟಗಳಿಗನುಸಾರ ಜೀವಿಸುವುದು ಅಷ್ಟೇನೂ ಸುಲಭವಲ್ಲವೆಂದು ಯೇಸು ಕ್ರಿಸ್ತನ ಆ ಮಾತುಗಳು ಸ್ಪಷ್ಟವಾಗಿ ತೋರಿಸುತ್ತವೆ. ಹಾಗೆ ಮಾಡಲು ಬಯಸುವ ಪ್ರತಿಯೊಬ್ಬನೂ ಆವಶ್ಯಕವಾದ ಪ್ರಯತ್ನಗಳನ್ನು ಹಾಕುವುದು ಮಾತ್ರವಲ್ಲದೆ, ಆವಶ್ಯಕವಾದ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಈ ವರದಿಯಲ್ಲಿ ತಿಳಿಸಿದಂಥ ವ್ಯಕ್ತಿಗಳ ವಿಚಾರದಲ್ಲಿ ಇದು ಖಂಡಿತವಾಗಿ ಸತ್ಯ. ಆದರೆ ಎಷ್ಟೊಂದು ಆಶ್ಚರ್ಯಕರ ರೀತಿಯಲ್ಲಿ ಅವರು ಬಹುಮಾನಿಸಲ್ಪಟ್ಟಿರುತ್ತಾರೆ!
ಉದಾಹರಣೆಗೆ, ಈಗಾಗಲೇ ಹೇಳಿದ ಪ್ಯಾಟ್ರಿಕ್ ಮತ್ತು ನೀನಾ ಕುರಿತು ಪರಿಗಣಿಸಿರಿ. ಬಹುಮೊತ್ತದ ಹಣವನ್ನು ಮಾಡುವ ಅವರ ಜೀವನ ಶೈಲಿಯಿಂದ, ಆಂಶಿಕ ಸಮಯ ಐಹಿಕ ಕೆಲಸದಿಂದ ಬೆಂಬಲಿಸಲ್ಪಡುವ ಪೂರ್ಣ ಸಮಯದ ಕ್ರೈಸ್ತ ಶುಶ್ರೂಷೆಯನ್ನು ಮಾಡಲು ತೀವ್ರ ಬದಲಾವಣೆಗಳನ್ನು ಅವರು ಮಾಡಿದರು. ಆದರೂ, ಅವರು ಮಾಡಿದ ಪ್ರಾಪಂಚಿಕ ತ್ಯಾಗಗಳಿಗಿಂತ ಆತ್ಮಿಕ ಸಂಪಾದನೆಯು ಎಷ್ಟೋ ಹೆಚ್ಚು ತೂಕದ್ದು ಎಂದವರಿಗೆ ಮನವರಿಕೆಯಾಗಿದೆ. ಮತ್ತು ಅವರು ನಿಜವಾಗಿಯೂ ಸಂತೋಷಿಗಳಾಗಿದ್ದಾರೆ.
ಅವರ ಪ್ರಾಯದ ಕಾರಣ, ಜೋರ್ಜ್ ಮತ್ತು ಲಿಲಿಯಾನ್ರಿಗೆ ಬದಲಾವಣೆಗಳು ಅಷ್ಟು ಸುಲಭವಾಗಿ ಆಗಲಿಲ್ಲ. ಕ್ರೈಸ್ತ ಕೂಟಗಳಲ್ಲಿ ಮತ್ತು ಶುಶ್ರೂಷೆಯಲ್ಲಿ ಪಾಲಿಗರಾಗಲು ಸಮಯ, ಗಮನ, ಮತ್ತು ದೈಹಿಕ ಪ್ರಯತ್ನಗಳ ಆವಶ್ಯಕತೆಯಿದೆ. ಆದಾಗ್ಯೂ, ಅವರಿಗೆ ಸಂತೋಷವಾಗುವಂತೆಯೇ, ಅವರ ಆರೋಗ್ಯವು ಸುಧಾರಿಸಿದೆ, ಮತ್ತು ಅವರು ಇಂದು ನಡಿಸುವ ಜೀವನವು ರೋಮಾಂಚಕರ, ಪೂರ್ಣವಾದ, ಮತ್ತು ಸಂತೋಷದ ಒಂದು ಜೀವಿತವೆಂದು ವರ್ಣಿಸಸಾಧ್ಯವಿದೆ.
ಜೋರ್ಜ್ ಮತ್ತು ಈಸಾಬೇಲ್ಳ ಕುರಿತಾಗಿ, ಅವರ ದೊಡ ಪಂಥಾಹ್ವಾನವೆಂದರೆ ಅವರ ಮಕ್ಕಳನ್ನು ತರಬೇತುಗೊಳಿಸುವದು. ಮತ್ತು ಜೀವದ ಮಾರ್ಗದಲ್ಲಿರುವಂತೆ ಅವರಿಗೆ ಸಹಾಯ ಮಾಡುವುದೇ ಆಗಿದೆ. ಕ್ರೈಸ್ತ ಕೂಟಗಳಿಗೆ ನಾಲ್ಕು ಎಳೆಯರನ್ನು ಸಿದ್ಧಗೊಳಿಸುವದು ಯಾ ಕ್ರೈಸ್ತ ಶುಶ್ರೂಷೆಗೆ ಸಂಗಡ ಕರಕೊಂಡು ಹೋಗುವುದು ತಾನೇ ಬಹಳಷ್ಟು ಸಮಯ ಮತ್ತು ಪ್ರಯತ್ನವನ್ನು ಅಪೇಕ್ಷಿಸುತ್ತದೆ. ನಿರಂತರ ಒತ್ತಡ ಒಂದು ಬಿಂದುವಿನಲ್ಲಿ ಜೋರ್ಜ್ ಮತ್ತು ಈಸಾಬೇಲ್ ತಮ್ಮ ಹೆತ್ತವರ ಜವಾಬ್ದಾರಿಕೆಗಳಲ್ಲಿ ಸಡಿಲವಾಗಿರುವಂತೆ ಕಾರಣವಾಯಿತು. ಆದರೆ “ಸ್ವತ್ಯಾಗದ ಆತ್ಮವನ್ನು ನವೀಕರಿಸುವದು” ಎಂಬ ಬೈಬಲ್ ಭಾಷಣವೊಂದು, ‘ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಗೊಳಿಸುವಿಕೆಯಲ್ಲಿ ಅವರನ್ನು ಪಾಲಿಸುವಂತೆ’ ಬೇಕಾದ ಎಲ್ಲಾ ಗಮನ ಮತ್ತು ತರಬೇತಿಯನ್ನು ಅವರ ನಾಲ್ಕು ಮಕ್ಕಳಿಗೆ ಕೊಡಲು ಅವರ ಪ್ರಯತ್ನಗಳನ್ನು ಇಮ್ಮಡಿಗೊಳಿಸುವಂತೆ ಅವರನ್ನು ಪ್ರಚೋದಿಸಿತು. ಅಂಥ ಪ್ರಯತ್ನಗಳು ಸಮೃದ್ಧವಾಗಿ ಬಹುಮಾನಿಸಲ್ಪಟ್ಟವು ಎಂದು ಹೇಳುವುದು ಅನಾವಶ್ಯಕವೇ.—ಎಫೆಸೆ. 6:4.
ಈ ವ್ಯಕ್ತಿಗಳಿಗೆ ಮತ್ತು ಇತರ ಅನೇಕರಿಗೆ ನಿಜ ಸಂತೋಷವನ್ನು ತರುವುದು ಸುಂದರವಾದ ಪ್ರಕೃತಿ ದೃಶ್ಯ, ಹಿತಕರವಾದ ಹವಾಮಾನ, ಯಾ ಆರಾಮವಾದ ಜೀವನ ಗತಿಯಲ್ಲ. ಬದಲಾಗಿ, ದೇವರ ಚಿತ್ತಕ್ಕನುಸಾರ ಅವರ ಜೀವಗಳನ್ನು ಅವರು ಬಳಸುತ್ತಾರೆ ಮತ್ತು ಆತನ ವಾಕ್ಯವಾದ ಬೈಬಲಿನ ಮಟ್ಟಗಳಿಗನುಸಾರ ಜೀವಿಸುತ್ತಾರೆ ಎಂಬ ಆ ಜ್ಞಾನವು ತಾನೇ ಆಗಿದೆ. (ಪ್ರಸಂಗಿ 12:13) ಇನ್ನೂ ಹೆಚ್ಚಾಗಿ, ಭೂವ್ಯಾಪಕವಾಗಿ ಐಹಿಕ ಪರದೈಸವು ಪುನಃ ಸ್ಥಾಪಿಸಲ್ಪಟ್ಟಾಗ ಇರುವ ಆನಂದ ಸಮಯಗಳನ್ನು ಅವರು ಧ್ಯಾನಿಸುವಾಗ, ಅವರ ಹೃದಯಗಳಲ್ಲಿ ನಿಜ ಸಂತೋಷವು ಉಕ್ಕೇರುತ್ತದೆ.—ಲೂಕ 23:43.
[ಪುಟ 24 ರಲ್ಲಿರುವ ಚಿತ್ರ]
ಬೈಬಲನ್ನು ಓದುವುದರಲ್ಲಿ ಜೋರ್ಜ್, ಈಸಾಬೇಲ್ ಮತ್ತು ಅವರು ಮಕ್ಕಳು ಆನಂದವನ್ನು ಕಂಡುಕೊಳ್ಳುತ್ತಾರೆ
[ಪುಟ 25 ರಲ್ಲಿರುವ ಚಿತ್ರ]
ಕ್ರೈಸ್ತ ಶುಶ್ರೂಷೆಯಲ್ಲಿ ಜೋರ್ಜ್ ಮತ್ತು ಲಿಲಿಯಾನ್ ಸಂತೋಷವನ್ನು ಕಂಡುಕೊಳ್ಳುತ್ತಾರೆ
[ಪುಟ 26 ರಲ್ಲಿರುವ ಚಿತ್ರ]
ಪ್ಯಾಟ್ರಿಕ್ ಮತ್ತು ನೀನಾ ಯೆಹೋವನ ಸೇವೆಯಲ್ಲಿ ನಿಜ ಶಾಂತಿಯನ್ನು ಆನಂದಿಸುತ್ತಿದ್ದಾರೆ