ಕ್ರೈಸ್ತ ಪ್ರಪಂಚವು ಆಫ್ರಿಕದಲ್ಲಿ ಬಿತ್ತಿರುವ ವಸ್ತು
ಚಾರ್ಲ್ಸ್ ಲವೀಸ್ರಿ ಎಂಬ ಒಬ್ಬ ಫ್ರೆಂಚ್ ಕ್ಯಾಥೊಲಿಕನು 1867 ರಲ್ಲಿ ಆಲ್ಜಿಯರ್ಸಿನ ಹೊಸದಾಗಿ ನೇಮಿಸಲ್ಪಟ್ಟ ಆರ್ಚ್ಬಿಷಪನಾಗಿ ಆಫ್ರಿಕಕ್ಕೆ ಬಂದನು. ಅವನಂದದ್ದು: “ಅಲೀರ್ಜಿಯ ಒಂದು ಮಹಾನ್ ಮತ್ತು ಕ್ರೈಸ್ತ ರಾಷ್ಟ್ರದ ಆರಂಭವಾಗುವಂತೆ ಮಾಡಲು ದೇವರು ಫ್ರಾನ್ಸ್ ದೇಶವನ್ನು ಆರಿಸಿಕೊಂಡಿದ್ದಾನೆ.”
ಲವೀಸ್ರಿಯ ಸ್ವಪ್ನ ಅಲ್ಜೀರಿಯವನ್ನು ಮೀರಿ ಹೋಗಿತ್ತು. ವಾಸ್ತವವೇನಂದರೆ, ಅವನು “ಮಧ್ಯ ಮತ್ತು ಉತ್ತರ ಆಫ್ರಿಕದ ಜೀವಿತವನ್ನು ಕ್ರೈಸ್ತ ಪ್ರಪಂಚದ ಜೀವಿತಕ್ಕೆ ಏಕೀಕರಿಸುವ” ಉದ್ದೇಶದಿಂದ ಮರುಭೂಮಿಯ ಆಚೆಗೂ ಮಿಷನೆರಿಗಳನ್ನು ಕಳುಹಿಸಿದನು.
ಈ ಮಧ್ಯೆ, ಆ ಭೂಖಂಡದ ಪಶ್ಚಿಮ, ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಪ್ರಾಟೆಸ್ಟಂಟ್ ಮಿಷನೆರಿಗಳು ಆಗಲೆ ಕೆಲಸ ಮಾಡುತ್ತಿದ್ದರು. ಅವರು ನಡುಕ, ಬೆವರು ಮತ್ತು ಮತಿವಿಭ್ರಮೆಗಳೇ ಮೊದಲಾದ ರೋಗಸೂಚನೆಗಳಿರುವ ಆವರ್ತಿಸಿ ಬರುತ್ತಿದ್ದ ಮಲೇರಿಯಂಥ ರೋಗಗಳಿಂದ ತುಂಬ ಕಷ್ಟಗಳನ್ನು ಸಹಿಸಿದರು. ಈ ಉಷ್ಣವಲಯದ ರೋಗಗಳಿಂದ ಬೇಗನೆ ಅಶಕ್ತರಾಗಿ, ಅವರಲ್ಲಿ ಅನೇಕರು, ಬಂದು ಮುಟ್ಟಿದ ಸ್ವಲ್ಪದರಲ್ಲೇ ಸತ್ತರು. ಆದರೂ ಇತರರು ಬರುತ್ತಾ ಇದ್ದರು. ಆ್ಯಡ್ಲೆ ಸೀವ್ಟನ್ಸನ್ ಹೇಳಿದ್ದು: “ಆಫ್ರಿಕದಲ್ಲಿ ಸಂಚಾರವನ್ನು ಮಾಡುವವರಿಗೆ ಮಿಷನೆರಿಗಳ ಕಲಿತನದ ಕುರಿತು ಸದಾ ನೆನಪು ಹುಟ್ಟಿಸಲಾಗುತ್ತದೆ. . . . ಅವರು ಪೀತಜ್ವರ, ಆಮಶಂಕೆ, ಪರ ಸತ್ವೋಪಜೀವಿಗಳೊಂದಿಗೆ ಹೋರಾಡಿದರು. . . . ನಾನು . . . ಅವರ ಸಮಾಧಿ ಶಿಲೆಗಳನ್ನು ಆಫ್ರಿಕದಲ್ಲೆಲ್ಲಿಯೂ ನೋಡಿದ್ದೇನೆ.”
ಮಿಷನೆರಿ ಫಲ
ಮಿಷನೆರಿಗಳು ಆಫ್ರಿಕವನ್ನು ಪ್ರವೇಶಿಸಿದಾಗ ಅಲ್ಲಿನ ಹೆಚ್ಚಿನ ಬಣಗಳು ಅನಕ್ಷರಸ್ಥವೆಂದು ಅವರು ಕಂಡು ಹಿಡಿದರು. ಕ್ರಿಶ್ಚಿಯಾನಿಟಿ ಇನ್ ಆಫ್ರಿಕ ಆ್ಯಸ್ ಸೀನ್ ಬೈ ಆಫ್ರಿಕನ್ಸ್ ಎಂಬ ತನ್ನ ಪುಸ್ತಕದಲ್ಲಿ, ರಾಮ್ ದೇಸಾಯಿ ಹೇಳುವುದು: “ಸುಮಾರು ಎಂಟು ನೂರು [ಆಫ್ರಿಕನ್] ಭಾಷೆಗಳಲ್ಲಿ, ಮಿಷನೆರಿಗಳು ಬರುವ ಮೊದಲು ಕೇವಲ ನಾಲ್ಕು ಬರವಣಿಗೆಯ ರೂಪದಲ್ಲಿದ್ದವು.” ಆದುದರಿಂದ ಮಿಷನೆರಿಗಳು ಈ ಅಲಿಖಿತ ಭಾಷೆಗಳನ್ನು ಬರೆಯುವ ವಿಧವನ್ನು ಕಂಡುಹಿಡಿದರು. ಆ ಬಳಿಕ ಅವರು ಪಠ್ಯ ಪುಸ್ತಕಗಳನ್ನು ತಯಾರಿಸಿ ಜನರಿಗೆ ಓದಲು ಕಲಿಸತೊಡಗಿದರು. ಇದಕ್ಕಾಗಿ ಅವರು ಆಫ್ರಿಕದಲ್ಲೆಲ್ಲೂ ಶಾಲೆಗಳನ್ನು ಕಟ್ಟಿದರು.
ಮಿಷನೆರಿಗಳು ಆಸ್ಪತ್ರೆಗಳನ್ನೂ ಕಟ್ಟಿದರು. “ಮಾನವ ಹಿತ ಸಾಧನೆಯ ಸಂಬಂಧದಲ್ಲಿ ಅವರ ದಾಖಲೆಗೆ ಸಮಾನವಾದ ಸಂಘವೇ ಇಲ್ಲ,” ಎಂದು ಒಪ್ಪಿಕೊಳ್ಳುತ್ತಾರೆ, ರಾಮ್ ದೇಸಾಯಿ. ವೈದ್ಯಕೀಯ ಪರಾಮರಿಕೆಯಲ್ಲದೆ, ಆಫ್ರಿಕದ ಜನರು ಯೂರೋಪಿನ ಲೌಕಿಕ ಸರಕುಗಳನ್ನು ಕೋರಿದರು. ಕೆಲವು ಮಿಷನೆರಿಗಳು ವ್ಯಾಪಾರ ಕಟ್ಟೆಗಳನ್ನು, ಅವು ಮತಾಂತರಿಗಳನ್ನು ಆಕರ್ಷಿಸುವುದೆಂದು ನಂಬಿ, ನಿರ್ಮಿಸಿದರು. ದೃಷ್ಟಾಂತಕ್ಕೆ, ಸ್ವಿಟ್ಸರ್ಲೆಂಡಿನ ಬಾಸೆಲ್ ಮಿಷನ್, ಘಾನದಲ್ಲಿ ಒಂದು ವ್ಯಾಪಾರ ಸಂಸ್ಥೆಯನ್ನು ಸ್ಥಾಪಿಸಿತು. ಅಲ್ಲಿ ಕಕೇವೊ ಮರಗಳು ಚೆನ್ನಾಗಿ ಬೆಳೆಯುತ್ತವೆಂದು ಅವರು ಕಂಡುಹಿಡಿದರು, ಮತ್ತು ಇಂದು ಘಾನ ಲೋಕದ ಅತಿ ದೊಡ್ಡ ಕೋಕೊ ಉತ್ಪಾದಕರಲ್ಲಿ ಮೂರನೆಯದ್ದು.
ಕ್ರೈಸ್ತ ಪ್ರಪಂಚದ ಮಿಷನೆರಿಗಳ ಒಂದು ಎದ್ದು ಕಾಣುವ ಸಾಧನೆಯು, ಅವರ ಬೈಬಲ್ ಭಾಷಾಂತರಗಳೇ. ಆದರೂ ಬೈಬಲಿನ ಸಂದೇಶವನ್ನು ಹರಡಿಸುವುದು, ಇನ್ನೊಂದು ಗಂಭೀರವಾದ ಜವಾಬ್ದಾರಿಯನ್ನು ತರುತ್ತದೆ. ಕ್ರೈಸ್ತ ಅಪೊಸ್ತಲ ಪೌಲನು ಇದನ್ನು ಹೀಗೆ ಕೇಳಿ ತೋರಿಸಿದನು: “ಮತ್ತೊಬ್ಬನಿಗೆ ಉಪದೇಶ ಮಾಡುವ ನೀನು ನಿನಗೆ ಉಪದೇಶ ಮಾಡಿಕೊಳ್ಳದೆ ಇದ್ದೀಯೋ? ಕದಿಯಬಾರದೆಂದು ಬೋಧಿಸುವ ನೀನು ಕದಿಯುತ್ತೀಯೋ?” ಕ್ರೈಸ್ತತ್ವವನ್ನು ಬೋಧಿಸುವವರು ತಾವೇ ದೇವರ ವಾಕ್ಯದಲ್ಲಿ ನಮೂದಿಸಿರುವ ಶ್ರೇಷ್ಠ ಸೂತ್ರಗಳಿಗನುಸಾರ ಬದುಕಬೇಕು ಎಂದು ಬೈಬಲು ಎಚ್ಚರಿಸುತ್ತದೆ.—ರೋಮಾಪುರ 2:21, 24.
ಹಾಗಾದರೆ ಆಫ್ರಿಕಕ್ಕೆ ಕ್ರೈಸ್ತ ಪ್ರಪಂಚದ ಧರ್ಮ ಪ್ರಚಾರದ ವಿಷಯದಲ್ಲೇನು? ಅದು ಬೈಬಲಿನ ದೇವರನ್ನು ಗೌರವಿಸಿದೆಯೆ, ಅಥವಾ ಅದು ಕ್ರಿಸ್ತೀಯ ಬೋಧನೆಗಳನ್ನು ತಪ್ಪಾಗಿ ಪ್ರತಿನಿಧೀಕರಿಸಿದೆಯೆ?