ಲೋಕದ ಒಂದು ಅತಿ ದೊಡ್ಡ ಬಂದರಿನಲ್ಲಿ ಸಾರುವ ಪಂಥಾಹ್ವಾನ
ಯೂರೋಪಿನ ಅತ್ಯಂತ ಕಾರ್ಯಮಗ್ನವಾದ ರೈನ್ ನದಿಯು ಉತ್ತರ ಸಾಗರವನ್ನು ಪ್ರವೇಶ ಮಾಡುವಲ್ಲಿ ನೆಲೆಸಿರುವ ರಾಟರ್ಡಾಮ್, ಲೋಕದ ಅತ್ಯಂತ ದೊಡ್ಡ ಸಮುದ್ರ ರೇವುಗಳಲ್ಲೊಂದಾಗಿರುವ ಪ್ರಖ್ಯಾತಿಯನ್ನು ಪಡೆದಿದೆ. ಸುಮಾರು 500 ಹಡಗು ವ್ಯವಸ್ಥೆಗಳು ಇಲ್ಲಿಗೆ ಬರುತ್ತವಾದ್ದರಿಂದ ರಾಟರ್ಡಾಮ್ಗೆ ಲೋಕವ್ಯಾಪಕವಾಗಿ 800 ಕ್ಕಿಂತಲೂ ಹೆಚ್ಚು ಸ್ಥಳಗಳಿಗೆ ನೇರವಾದ ಸಂಪರ್ಕಗಳಿವೆ. ಅದು ನಿಜವಾಗಿಯೂ ಒಂದು ಅಂತರ್ರಾಷ್ಟ್ರೀಯ ಬಂದರು.
ಆದರೂ ಈ 650 ವರ್ಷ ಪುರಾತನದ ಡಚ್ಚ್ ರೇವು, ನೌಕಾ ಪಂಕ್ತಿಗಳ ಕೂಡುಹಾದಿಗಳಿಗಿಂತ ಹೆಚ್ಚಿನದ್ದಾಗಿದೆ. ಅದು ಜನರು ಸಂಧಿಸುವ ಸ್ಥಳವೂ ಆಗಿರುತ್ತದೆ. ಪ್ರತಿ ದಿನ ಮತ್ತು ರಾತ್ರಿಯಲ್ಲಿ ಲೋಕದ ಎಲ್ಲಾ ಮೂಲೆಗಳಿಂದ ನಾವಿಕರು ತಂಡ ತಂಡವಾಗಿ ಬರುತ್ತಲೇ ಇರುತ್ತಾರೆ. ಈ ನಾವಿಕರು ನೆದರ್ಲೆಂಡ್ಸ್ನ ಯೆಹೋವನ ಸಾಕ್ಷಿಗಳ ಗಮನಕ್ಕೆ ಬಾರದೆ ಇರಲಿಲ್ಲ. ಬೇರೆಲ್ಲೆಲ್ಲಿಯೂ ಇರುವ ಸಾಕ್ಷಿಗಳಂತೆ ಅವರು ಲೋಕದ ಅತ್ಯುತ್ತಮ ವಾರ್ತೆಯನ್ನು—ದೇವರ ರಾಜ್ಯವು ಬೇಗನೇ ಭೂಮಿಯನ್ನು—ಎಲ್ಲಾ ವಿಧದ ಜನರಿಗಾಗಿ, ನಾವಿಕರಿಗಾಗಿಯೂ—ಒಂದು ಪರದೈಸವನ್ನಾಗಿ ಮಾಡಲಿದೆ ಎಂದು ಸಾರುವುದಕ್ಕಾಗಿ ವಿವಿಧ ಮಾರ್ಗಗಳನ್ನು ಹುಡುಕುತ್ತಾರೆ.—ದಾನಿಯೇಲ 2:44; ಲೂಕ 23:43; 1 ತಿಮೊಥಿ 4:10.
“ಮಿಶನೆರಿ ನೇಮಕ ವಿಪರ್ಯಸ್ತದಲ್ಲಿ”
ಕೆಲವು ವರ್ಷಗಳ ಹಿಂದೆ ನೆದರ್ಲೆಂಡ್ಸ್ನ ವಾಚ್ ಟವರ್ ಸೊಸೈಟಿಯು, ಆರು ಮಂದಿ ಪೂರ್ಣ ಸಮಯದ ಸಾರುವವರನ್ನು ಅಥವಾ ಪಯನೀಯರರನ್ನು ರಾಟರ್ಡಾಮ್ನ ಬಂದರಿನಲ್ಲೆಲ್ಲಾ ಹಡಗಿನಿಂದ ಹಡಗಿಗೆ ಸಾರುವಂತೆ ಕೇಳಿಕೊಂಡಿತು. ಪಯನೀಯರರು ಆ ಸಂಧಿಯನ್ನು ತವಕದಿಂದ ತಕ್ಕೊಂಡರು. ಅವರು ರೇವು ಅಧಿಕಾರಿಯಿಂದ ಮಾಹಿತಿಯನ್ನು ಪಡಕೊಂಡರು, ಬಂದರುಕಟ್ಟೆಗಳನ್ನು ಪರಿಶೀಲಿಸಿದರು ಮತ್ತು ಇದೊಂದು ಪಂಥಾಹ್ವಾನದ ನೇಮಕವೆಂದು ಅವರಿಗೆ ಬೇಗನೇ ಮನವರಿಕೆಯಾಯಿತು.
“ಅದು ಒಂದು ಮಿಶನೆರಿ ಸೇವೆ ವಿಪರ್ಯಸ್ತದಲ್ಲಿ,” ಅನ್ನುತ್ತಾನೆ ಮಿನಾರ್ಡ್, ರೇವು ಸಾರುವಿಕೆಯ ಕೊಆರ್ಡಿನೇಟರ್. ಅವನ ಮಾತಿನ ಅರ್ಥವೇನು? “ಸಾಮಾನ್ಯವಾಗಿ ಮಿಶನೆರಿಯು ಜನರ ಬಳಿಗೆ ಹೋಗಲು ದೀರ್ಘ ಪ್ರಯಾಣ ಮಾಡುತ್ತಾನೆ, ಆದರೆ ನಮ್ಮ ವಿದ್ಯಮಾನದಲ್ಲಿ ಜನರು ದೀರ್ಘ ಪ್ರಯಾಣಮಾಡಿ ನಮ್ಮ ಬಳಿಗೆ ಬರುತ್ತಾರೆ.” ಅವನು ಮತ್ತೂ ಅನ್ನುವುದು, “ನಮ್ಮ ಸಾರುವ ಕ್ಷೇತ್ರವು ಬಹುಮಟ್ಟಿಗೆ ಪೂರಾ ರೀತಿಯಲ್ಲಿ ಅಂತರ್ರಾಷ್ಟ್ರೀಯವೇ ಆಗಿದೆ.” ರಾಟರ್ಡಾಮ್ ಎರೊಪೂರ್ಟ್ 1985 ರ ವರ್ಷಪುಸ್ತಕ ಹೇಳಿದ್ದೇನಂದರೆ, ಪಯನೀಯರರು ಈ ವಿಶೇಷ ಕಾರ್ಯವನ್ನು ಪ್ರಾರಂಭಿಸಿದ ವರ್ಷವಾದ 1983 ರಲ್ಲಿ, ರಾಟರ್ಡಾಮ್ ಬಂದರು 71 ವಿವಿಧ ದೇಶಗಳಿಂದ 30,820 ಸಮುದ್ರ-ಸಂಚಾರದ ಹಡಗುಗಳನ್ನು ಸೇರಿಸಿಕೊಂಡಿತು. ಇದು ಅಂತರ್ರಾಷ್ಟ್ರೀಯವೆ ಸರಿ!
ನಾವಿಕರು ಯಾರನ್ನು ಬೇಗನೇ “ರೇವು ಮಿಶನೆರಿಗಳು” ಎಂದು ಕರೆಯ ತೊಡಗಿದರೋ ಆ ಪಯನೀಯರರು ಸಹ—ಅಂತರ್ರಾಷ್ಟ್ರೀಯ ಸ್ವಾದವನ್ನು ಪ್ರತಿಬಿಂಬಿಸುವುದು ಯುಕ್ತವಾದದ್ದೇ. ಗರ್ಟ್, ಪೀಟರ್ ಮತ್ತು ಅವನ ಪತ್ನಿ ಕರೆನ್, ಡಚ್ಚರು; ಡಾನೀಲ್ ಮತ್ತು ಮಿನಾರ್ಡ್ ಇಂಡೋನೇಷ್ಯದವರು; ಮತ್ತು ಸೊಲೊಮನ್ ಇತಿಯೋಪ್ಯದವನು. ಅವರ ಯೂರೋಪಿಯನ್, ಏಷ್ಯನ್ ಮತ್ತು ಆಫ್ರಿಕನ್ ಮೂಲಗಳು ಎಂಟು ಭಾಷಾ ತಡೆಗಟ್ಟುಗಳನ್ನು ದಾಟಶಕ್ತವಾಗಿವೆ, ಆದರೆ ಈ ಕಾರ್ಯದಲ್ಲಿ ಸಾಫಲ್ಯ ಪಡೆಯಲು ಅವರಿಗೆ ಎದುರಿಸಬೇಕಾದ ಬೇರೆ ತಡೆಗಟ್ಟುಗಳಿದ್ದವು.
“ಸೈಕಲ್ ಸವಾರಿ ಚರ್ಚು”
“ಒಬ್ಬನು ಬಂದರಿನೊಳಗೆ ಸೀದಾ ನಡೆದು, ನಡೆಹಲಗೆಯನ್ನು ಹತ್ತಿ, ಹಡಗನ್ನೇರಿಬಿಡಲು ಸಾಧ್ಯವಿಲ್ಲ” ಅನ್ನುತ್ತಾನೆ ಮುಂಚೆ ನಾವಿಕನಾಗಿದ್ದ 32 ವರ್ಷ ಪ್ರಾಯದ ಪೀಟರ್. “ಕ್ಷೇತ್ರಕ್ಕಾಗಿ ಪರವಾನಗಿ ಚೀಟಿಗಳು ಬೇಕು.” ಅಂದರೆ ಧಕ್ಕೆಗಳನ್ನು ಪ್ರವೇಶಿಸಲು ಪರವಾನಗಿ ಮತ್ತು ಹಡಗುಗಳನ್ನೇರಲು ಪರವಾನಗಿ ಇರಬೇಕು. “ಅದೆಲ್ಲಾ ತುಂಬಾ ಕಚೇರಿ ಕ್ರಮನಚ್ಚು,” ಮರುಕಳಿಸುತ್ತಾನೆ ಪೀಟರ್, “ಆದರೆ ನಮ್ಮ ಭಾವಚಿತ್ರಗಳು ಹಾಗೂ ಅಧಿಕೃತ ಚೀಟಿಗಳಿಂದ ಸಜ್ಜಾದ ಎಂಟು ಪರವಾನಗಿಗಳು ನಮಗೆ ದೊರೆತ ಮೇಲೆ, ನಾವು ಕಾರ್ಯಕ್ಕೆ ಹೊರಡಲು ಪೂರಾ ಸಿದ್ಧರಾದೆವು.” ಬಂದರುಕಟ್ಟೆಗಳ 37 ಕಿಲೊಮೀಟರ್ಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಯಿತು, ಇಬ್ಬರು ಪಯನೀಯರರು ಒಂದೊಂದು ವಿಭಾಗವನ್ನು ನೋಡಿಕೊಂಡರು.
ಅಷ್ಟೊಂದು ಹೆಚ್ಚು ದೇಶಗಳ ನಾವಿಕರಿಂದ ಆಡಲ್ಪಡುವ ಭಾಷಾ ಸಮುದಾಯವನ್ನು ನೀವು ನಿಭಾಯಿಸುವುದಾದರೂ ಹೇಗೆ? ಪಯನೀಯರರು 30 ಭಾಷೆಗಳಲ್ಲಿ ಬೈಬಲ್ ಸಾಹಿತ್ಯವನ್ನು ಸಂಗ್ರಹದಲ್ಲಿಟ್ಟರೂ ಮತ್ತು ಸಾಧ್ಯವಾದಷ್ಟು ಹೆಚ್ಚನ್ನು ಸೈಕಲ್ಗಳಲ್ಲಿ ಒಯ್ದರೂ, ಅದೆಂದೂ ಸಾಕಾಗುವಂತೆ ತೋರುತ್ತಿರಲಿಲ್ಲ. “ಯಾವ ಭಾಷೆಗಳು ನಮಗೆ ಬೇಕಾದೀತು ಎಂದು ನಿಶ್ಚಯವಾಗಿ ನಮಗೆ ಹೇಳಲು ಸಾಧ್ಯವೇ ಇಲ್ಲ,” ಎಂದು ವಿವರಿಸುತ್ತಾನೆ 30 ವರ್ಷ ವಯಸ್ಸಿನ ಸೊಲೊಮನ್ ನಸುನಗುತ್ತಾ. “ನೀವು ಯಾವ ಭಾಷೆಯನ್ನು ತರಲಿಲ್ಲವೋ ಅದೇ ಭಾಷೆಯಲ್ಲಿ ನಾವಿಕರಿಗೆ ಪುಸ್ತಕಗಳು ಬೇಕಾಗಿರುವ ಸಂದರ್ಭಗಳಾದರೋ ಅನೇಕ, ಮತ್ತು ತಮ್ಮ ಹಡಗು ಇನ್ನು ಸುಮಾರು ಮೂರು ತಾಸುಗಳೊಳಗೆ ಹೊರಡುತ್ತದೆ ಎಂದೂ ಅವರು ಹೇಳುತ್ತಾರೆ.” ನಾವಿಕರನ್ನು ನಿರಾಶೆಗೊಳಿಸಬಯಸದೆ, ಪಯನೀಯರಲ್ಲೊಬ್ಬನು ಧಾವಿಸಿ ಹೋಗಿ, ತಕ್ಕದಾದ ಪುಸ್ತಕಗಳನ್ನು ತೆಗೆದುಕೊಂಡು ಓಡಿಬಂದು, ಲವಲವಿಕೆಯ ನಾವಿಕರ ಕೈಗೆ ಕೊಡುತ್ತಾನೆ. “ಮೂರು ತಾಸಿನ ಸೈಕಲ್ ಸವಾರಿಯಷ್ಟು ದೂರದ ಬಂದರುಕಟ್ಟೆಯ ಭಾಗಗಳಲ್ಲಿ ಸಾರುತ್ತಿದ್ದ ಸಂದರ್ಭದಲ್ಲಿ ಇದೇ ಸಮಸ್ಯೆಯು ಉಂಟಾದಾಗ,” ಪೀಟರ್ ಅನ್ನುವುದು, “ಇನ್ನೊಂದು ವಿಧಾನವು ನಮಗೆ ಬೇಕಾಗಿತ್ತೆಂಬದು ಸ್ಫುಟ.”
ಒಂದು ದಿನ ಬಂದರು ಕ್ಷೇತ್ರದಲ್ಲಿ ವಾಸಿಸುತ್ತಿದ್ದ ಕೆಲವು ಸಾಕ್ಷಿಗಳು, ಪ್ರತಿಯೊಂದು ಒಂದು ಬಟ್ಟೆ ಒಗೆಯುವ ತೊಟ್ಟಿಯಷ್ಟು ದೊಡ್ಡದ್ದದ ಎರಡು ಸೈಕಲ್ ಟ್ರೆಯ್ಲ್ರ್ಗಳನ್ನು ತಂದು ಪಯನೀಯರರನ್ನು ಅಚ್ಚರಿಗೊಳಿಸಿದರು. ಪಯನೀಯರರು ದೊರೆಯುವ ಎಲ್ಲಾ ಭಾಷೆಗಳ ಸಾಹಿತ್ಯದಿಂದ ಟ್ರೆಯ್ಲ್ರ್ಗಳನ್ನು ತುಂಬಿಸಿ, ತಮ್ಮ ಸೈಕಲ್ಗಳಿಗೆ ಅವನ್ನು ಕೊಕ್ಕೆ ಹಾಕಿ, ಬಂದರುಕಟ್ಟೆಗೆ ಮುಂದುವರಿದರು. ಬೇಗನೇ ಟ್ರೆಯ್ಲ್ರ್ ಒಂದು ಬಳಕೆಯ ನೋಟವಾಗಿ ಪರಿಣಮಿಸಿತು. “ಅವು ನಮ್ಮ ಪರಿಚಯದ ಬಿಲ್ಲೆಯಾಗಿ ಪರಿಣಮಿಸಿವೆ” ಎಂದನು ಪಯನೀಯರರಲ್ಲೊಬ್ಬನು. “ಗೇಟ್ ಕೀಪರ್ ನಾವು ಬರುವುದನ್ನು ಕಾಣುವಾಗ, ಗೇಟನ್ನು ತೆರೆದು, ನಮ್ಮನ್ನು ಒಳಗೆ ಬರುವಂತೆ ಸನ್ನೆ ಮಾಡುತ್ತಾ, “ಅಗೋ ಹೋಯಿತು ಸೈಕಲ್ ಸವಾರಿ ಚರ್ಚು!” ಎಂದು ಅಬ್ಬರಿಸುತ್ತಾನೆ. ಬೇರೆ ಸಮಯದಲ್ಲಿ, ಪಹರೆಯವನೊಬ್ಬನು “ಸೈಕಲ್ ಸವಾರಿ ಚರ್ಚ್” ತನ್ನ ಕಡೆಗೆ ಬರುವುದನ್ನು ಕಾಣುವಾಗ, ಗೇಟ್ ತೆರೆದು, “ಎರಡು ಪೋಲಿಶ್ ಮತ್ತು ಒಂದು ಚೈನೀಸ್” ಎಂದು ಕೂಗುತ್ತಾನೆ! ಅಂಥ ಸಹಾಯಕಾರಿ ಸೂಚನೆಗಳು ಪಯನೀಯರರಿಗೆ ಸರಿಯಾದ ಭಾಷೆಗಳಲ್ಲಿ ಸಾಹಿತ್ಯವನ್ನು ಹಡಗಿನೊಳಗೊಯ್ಯಲು ಶಕ್ತರನ್ನಾಗಿ ಮಾಡುತ್ತವೆ. ಆದರೆ ಅವರು ಸರಿಯಾದ ಸಮಯಕ್ಕೆ ಸಹ ಹೋಗಬೇಕು. ಯಾಕೆ?
ಸಮಯೋಚಿತ ಸಂದೇಶದೊಂದಿಗೆ ಕಾಲೋಚಿತ ಭೇಟಿಗಳು
ಪಯನೀಯರರು ಕಲಾಸಿಗಳೊಂದಿಗೆ ಬೆಳಿಗ್ಗೆ ಮತ್ತು ಮಧ್ಯಾಹ್ನ ಕಾಫಿ ಬಿಡುವುಗಳಲ್ಲಿ ಅಥವಾ ಅವರ ಊಟದ ವಿರಾಮದಲ್ಲಿ ಮಾತ್ರವೇ ಮಾತಾಡ ಸಾಧ್ಯವಿದೆ. ಅಡಿಗೆಯವನ ಕೆಲಸದ ತಾಸುಗಳು ಬೇರೆಯಾಗಿವೆ, ಮತ್ತು ಕ್ಯಾಪ್ಟನ್ ಮತ್ತು ಇತರ ಆಫೀಸರುಗಳು ದಿನವಿಡೀ ಸಿಗುತ್ತಾರೆ. ಅದಲ್ಲದೆ, ರಾಟರ್ಡಾಮ್ನಲ್ಲಿ ತಂಗುವ ಬ್ರಿಟಿಷ್ ಹಡಗುಗಳು ಬ್ರಿಟಿಷ್ ವೇಳೆ (ಡಚ್ಚ್ ಸಮಯಕ್ಕಿಂತ ಒಂದು ತಾಸು ವ್ಯತ್ಯಾಸ) ಯನ್ನು ಪಾಲಿಸುತ್ತವೆಂದು ಪಯನೀಯರರಿಗೆ ತಿಳಿಯಿತು. ಹೀಗೆ ಬ್ರಿಟಿಷ್ಯೇತರ ಕಲಾಸಿಗಳು ಕೆಲಸಕ್ಕೆ ಹಿಂತಿರುಗುವಾಗ, ಬ್ರಿಟಿಷ್ ಕಲಾಸಿಗಳು ಭೋಜನ ಶಾಲೆಗೆ ಹೊರಡುತ್ತಾರೆ. ಹಡಗುಕಟ್ಟೆಯ ಪಯನೀಯರನಿಗೆ ಒಂದು ಭರವಸಯೋಗ್ಯ ಕೈಗಡಿಯಾರ ಅತ್ಯಾವಶ್ಯವೆಂಬದು ವ್ಯಕ್ತ.
ಆದರೂ, ತಮ್ಮ ಬಿಡುವುಗಳನ್ನು ಬೈಬಲ್ ಚರ್ಚೆಗಳಿಗಾಗಿ ಉಪಯೋಗಿಸಲು ನಾವಿಕರು ಮನಸ್ಸುಮಾಡುತ್ತಾರೋ? “ಸಾಮಾನ್ಯವಾಗಿ ಅವರು ರಾಜ್ಯದ ಸಂದೇಶದೆಡೆಗೆ ತೆರೆದ-ಮನಸ್ಸುಳ್ಳವರಾಗಿರುವುದನ್ನು ನಾನು ಕಾಣುತ್ತೇನೆ,” ಎನ್ನುತ್ತಾನೆ 31 ವರ್ಷ ಪ್ರಾಯದ ಗರ್ಟ್. “ಪ್ರಾಯಶಃ ಮಾನವ ಸರಕಾರಗಳ ನ್ಯೂನತೆಯನ್ನು ಅವರು ಸಾಕ್ಷಾತ್ತಾಗಿ ಕಾಣುವುದೇ ಅದಕ್ಕೆ ಕಾರಣವಿರಬಹುದು.” ದೃಷ್ಟಾಂತಕ್ಕಾಗಿ, ಹೊಟ್ಟೆಗಿಲ್ಲದೆ ಬಳಲುತ್ತಿದ್ದ ಇಥಿಯೋಪ್ಯದವರಿಗಾಗಿ ಅವರು ಹಡಗಿನಿಂದ ಇಳಿಸಿದ್ದ ಧಾನ್ಯಗಳ ರಾಶಿಯು, ತಿಂಗಳುಗಳ ನಂತರ ಪುನಃ ಬಂದಾಗಲೂ ಅಲ್ಲಿಯೇ ಬಿದ್ದಿತ್ತೆಂದೂ, ಆದರೆ ಅಷ್ಟರೊಳಗೆ ಮಾತ್ರ ಆ ಧಾನ್ಯವು ಕೊಳೆತು ಹೋಗಿ ಇಲಿಗಳಿಂದ ತುಂಬಿಹೋಗಿತ್ತೆಂದೂ ಕೆಲವು ನಾವಿಕರು ಗರ್ಟ್ಗೆ ಹೇಳಿದರು. “ಹೆಚ್ಚಿನ ನಾವಿಕರು ರಾಜನೀತಿಯಲ್ಲಿ ನಿರೀಕ್ಷೆಯನ್ನು ಕಳಕೊಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ,” ಅನ್ನುತ್ತಾನೆ ಗರ್ಟ್. “ಹೀಗೆ ಮಾನವರೆಲ್ಲರಿಗಾಗಿ ಏಕ ಸರಕಾರದ ಬೈಬಲ್ ವಾಗ್ದಾನವು ಅವರಿಗೆ ಅಪ್ಪೀಲಾಗುತ್ತದೆ.”
ಪೀಟರ್ ಒಪ್ಪುತ್ತಾನೆ. “ಹತ್ತು ವರ್ಷಗಳ ಹಿಂದೆಯಾದರೋ ಅವನ ಕಲಾಸಿಗಳು ಅವನನ್ನು ಹಡಗಿನಿಂದ ಹೊರಗಟ್ಟಿಬಿಡುತ್ತಿದ್ದರೆಂದು ಒಬ್ಬ ಜರ್ಮನ್ ಕ್ಯಾಪ್ಟನ್ ಹೇಳಿದನು. ಆದರೆ ಇಂದಿನ ಬದಲಾಗುತ್ತಿರುವ ಲೋಕ ಪರಿಸ್ಥಿತಿಗಳು ಬೈಬಲಿನ ಕಾಲೋಚಿತ ಸಂದೇಶದಲ್ಲಿ ಅವರ ಆಸಕ್ತಿಯನ್ನು ಎಬ್ಬಿಸಿವೆ.” ಕೊರಿಯನ್ ಹಡಗಿನ ಒಬ್ಬ ಅಡಿಗೆಯವನು ಹೇಳಿದ್ದೇನಂದರೆ ಇರಾನ್-ಇರಾಖ್ ಯುದ್ಧದ ಸಮಯದಲ್ಲಿ ಅವನು ಕೆಲಸಮಾಡುತ್ತಿದ್ದ ಸೂಪರ್ ಟ್ಯಾಂಕರ್ ಪರ್ಶಿಯನ್ ಕೊಲಿಯ್ಲಲ್ಲಿ ರಾಕೆಟ್ ಹೊಡೆತದಿಂದಾಗಿ ಬೆಂಕಿಹತ್ತಿ ಉರಿಯತೊಡಗಿತು. ಅವನು ತಾನೆಂದಾದರೂ ಬದುಕಿ ಉಳಿದರೆ ದೇವರಿಗಾಗಿ ಹುಡುಕುವೆನೆಂದು ಶಪಧವಿತ್ತನಂತೆ. ಅವನು ಪಾರಾದನು. ತದನಂತರ ರಾಟರ್ಡಾಮ್ನಲ್ಲಿ ಪಯನೀಯರರು ಅವನನ್ನು ಭೇಟಿಯಾದಾಗ, ಕೊರಿಯನ್ ಭಾಷೆಯಲ್ಲಿ ಅವರು ತರಶಕ್ತರಾದ ಎಲ್ಲಾ ಸಾಹಿತ್ಯಕ್ಕಾಗಿ ಅವನು ಕೇಳಿಕೊಂಡನು.
ಹೆಚ್ಚಿನ ಹಡಗುಗಳು ಹಲವಾರು ದಿನಗಳ ತನಕ ಬಂದರದಲ್ಲಿ ಉಳಿಯುತ್ತವೆ. ಇದು ಪಯನೀಯರರಿಗೆ ಎರಡು, ಮೂರು ಅಥವಾ ಹೆಚ್ಚು ಸಲ ಕೆಲಸದ ವೇಳೆಯ ನಂತರ ಪುನಃ ಸಂದರ್ಶಿಸಿ ತಮ್ಮ ಬೈಬಲ್ ಚರ್ಚೆಗಳನ್ನು ಮುಂದುವರಿಸಲು ಅವಕಾಶ ಕೊಡುತ್ತದೆ. ಆದರೆ ಹಡಗಿನ ಇಂಜಿನ್ ಹಾಳಾಗುವಾಗ, ಅದು ಮೂರು ವಾರಗಳ ತನಕವೂ ಸ್ಥಾಯಿಯಾಗಿ ಉಳಿಯಬಹುದು. “ಅದು ಕಂಪೆನಿಗೆ ಕೆಡುಕು” ಎನ್ನುತ್ತಾನೆ ಒಬ್ಬ ಪಯನೀಯರ ಹಲ್ಲುಬಿಡುತ್ತಾ, “ಆದರೆ ನಮ್ಮ ಕೆಲಸಕ್ಕೆ ಒಳ್ಳೆಯದು.” ಅನಂತರ, ಬೈಬಲ್ ಚರ್ಚೆಗಳನ್ನು ಮುಂದುವರಿಸುವುದಲ್ಲದೆ, ಸೊಸೈಟಿಯ ಸ್ಲೈಡ್ ಕಾರ್ಯಕ್ರಮಗಳಲ್ಲಿ ಒಂದಾದ “ದ ಬೈಬಲ್—ಎ ಬುಕ್ ಫಾರ್ ದಿಸ್ ಜನರೇಶನ್” ನನ್ನು ಭೋಜನಶಾಲೆಯಲ್ಲಿ ತೋರಿಸಲು ಸಹ ಪಯನೀಯರರು ಏರ್ಪಡಿಸುತ್ತಾರೆ. ಕೆಲವು ನಾವಿಕರು ರಾಟರ್ಡಾಮ್ನಲ್ಲಿರುವ ಯೆಹೋವನ ಸಾಕ್ಷಿಗಳ ಅನೇಕ ವಿದೇಶಿ ಭಾಷಾಗುಂಪುಗಳ ಕೂಟಗಳಿಗೂ ಬರುತ್ತಾರೆ. ಇಂಜಿನ್ ಪುನಃ ದುರುಸ್ತಿಯಾಗುವ ತನಕ ಇದು ನಡಿಯುತ್ತದೆ. ಅನಂತರ ಬೈಬಲ್ಗಳು ಮುಚ್ಚಲ್ಪಡಬೇಕು. ಹಡಗನ್ನು ಕಟ್ಟಿಹಾಕಿದ ಹಗ್ಗಗಳನ್ನು ಬಿಡಲಾಗುತ್ತದೆ, ಮತ್ತು ಹಡಗು ರೇವಿನಿಂದ ಅಗೋಚರವಾಗಿ ಹೋಗುತ್ತದೆ, ಆದರೆ ಪಯನೀಯರರ ಮನಸ್ಸಿನಿಂದಲ್ಲ.
ಉತ್ತೇಜಕ ನಾವಿಕ ಕಥೆಗಳು
ವಾರ್ತಾಪತ್ರಿಕೆಗಳ ಪಟ್ಟಿಗಳು ಅಥವಾ ರೇವು ಅಧಿಕಾರಿಗಳ ಸಾರ್ವಜನಿಕ ಕಂಪ್ಯೂಟರ್ ವ್ಯವಸ್ಥೆಯ ಮೂಲಕ, ರೇವು ಪಯನೀಯರರು ತಾವು ಸಂದರ್ಶಿಸಿದ ಹಡಗುಗಳ ಬರುವಿಕೆ-ಹೋಗುವಿಕೆಗಳನ್ನು ಕಂಡುಹಿಡಿಯುತ್ತಾರೆ. ಅವುಗಳಲ್ಲಿ ಒಂದು ಪುನಃ ಬಂದ ಕೂಡಲೇ, ನಾವಿಕರನ್ನು ಸಂದರ್ಶಿಸಿ ಕೊನೆಯ ಭೇಟಿಯ ನಂತರ ಏನೆಲ್ಲಾ ಸಂಭವಿಸಿತೆಂದು ತಿಳಿಯಲು ಪಯನೀಯರರು ಆತುರಪಡುತ್ತಾರೆ. ನಾವಿಕರು ಎಂಥ ಉತ್ತೇಜಕ ಕಥೆಗಳನ್ನು ತಿಳಿಸುತ್ತಾರೆ!
ಒಬ್ಬ ನಾವಿಕನು ತನ್ನ ಹಡಗು ಸಮುದ್ರಕ್ಕಿಳಿದ ಮೇಲೆ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದ ಪ್ರತಿಗಳನ್ನು ತನ್ನ ಐದು ಮಂದಿ ಹಡಗು ಸಹಕರ್ಮಿಗಳಿಗೆ ನೀಡಿದನು, ಮತ್ತು ಅವರು ಆರು ಮಂದಿ ಒಂದು ಬೈಬಲಧ್ಯಯನ ನಡಿಸಿದರು. ಕುಟುಂಬ ಜೀವನದ ಕುರಿತಾದ ಅಧ್ಯಾಯವನ್ನು ಸಹ ಅವನು ಆಡಿಯೋ ಕ್ಯಾಸೆಟ್ನಲ್ಲಿ ರೆಕಾರ್ಡ್ ಮಾಡಿ ಎಲ್ಲಾ ಕಲಾಸಿಗಳ ಪ್ರಯೋಜನಕ್ಕಾಗಿ ಅದನ್ನು ಭೋಜನಶಾಲೆಯಲ್ಲಿ ನುಡಿಸಿದನು. ಸಮೀಪದ ಎಂಟ್ವರ್ಪ್ ಬಂದರಲ್ಲಿ ರಾಜ್ಯ ಸಭಾಗೃಹವನ್ನು ಹಾಜರಾದ ನಾವಿಕನೊಬ್ಬನು ಇನ್ನೊಂದು ಹಡಗಿನ ಭೋಜನ ಶಾಲೆಯ ಗೋಡೆಯ ಮೇಲೆ “ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹ” ಎಂದು ದೊಡ್ಡಕ್ಷರಗಳಲ್ಲಿ ಬರೆದ ಬ್ಯಾನರ್ನ್ನು ಹಾಕಿದನು. ಅನಂತರ ಒಂದು ಬೈಬಲ್ ಕೂಟವನ್ನು ನಡಿಸಿದಾಗ ಅವನು ತನ್ನ ಕಲಾಸಿ ಸದಸ್ಯರನ್ನು ಅಲ್ಲಿಗೆ ಹಾಜರಾಗಲು ಆಮಂತ್ರಿಸಿದನು. ಬ್ಯಾನರ್ ತೆಗೆಯುವ ಮೊದಲು, ಮುಂದಿನ ಕೂಟಕ್ಕೆ ಬರಲು ಸಹ ಕಲಾಸಿಗಳಿಗೆ ಆಮಂತ್ರಣ ಕೊಟ್ಟನು. ಮುಂದಿನ ವಾರ ಬ್ಯಾನರ್ ಮತ್ತು ಕಲಾಸಿಗಳು ಪುನಃ ಅದೇ ಸ್ಥಳದಲ್ಲಿ ಕೂಡಿದ್ದರು.
ಕೆಲವು ನಾವಿಕರು ತಮ್ಮ ಪುಸ್ತಕಗಳನ್ನೆಂದೂ ಬದಿಗಿಡದೆ ಇರುವುದನ್ನು ಸಹ ಪಯನೀಯರರು ಕಂಡುಕೊಂಡಿದ್ದಾರೆ. “ವೆಸ್ಟ್ ಇಂಡಿಯನ್ ರೇಡಿಯೋ ಆಫೀಸರನಾದ ಐಸಕ್ನ ಕ್ಯಾಬಿನ್ಗೆ ನಾವು ಹೋದಾಗ, ಕೂತುಕೊಳ್ಳಲು ಸ್ಥಳ ಸಿಕ್ಕುವುದು ಕಷ್ಟದಲ್ಲಿ,” ತಿಳಿಸುತ್ತಾನೆ ಮಿನಾರ್ಡ್. “ಎಲ್ಲಾ ಕಡೆ ಸೊಸೈಟಿಯ ಪತ್ರಿಕೆಗಳು, ಪುಸ್ತಕಗಳು, ಮತ್ತು ಕನ್ಕಾರ್ಡನ್ಸ್ಗಳು—ಮತ್ತು ಅವು ತೆರೆದಿರುತ್ತವೆ.” ಐಸಕ್ ಪಯನೀಯರರ ಪುನಃ ಸಂದರ್ಶನೆಗಾಗಿ ಕಾಯುತ್ತಿದ್ದದರಿಂದ, ಬೈಬಲ್ ಪ್ರಶ್ನೆಗಳ ಒಂದು ಪಟ್ಟಿಯನ್ನೂ ಸಿದ್ಧಮಾಡಿಟ್ಟಿದ್ದನು.
ಕೆಲವು ನಾವಿಕರಾದರೋ ಪಯನೀಯರರು ಪುನಃಸಂದರ್ಶಿಸುವ ತನಕ ಕಾಯುವುದಿಲ್ಲ. ಒಂದು ರಾತ್ರಿ ಗರ್ಟ್ ಮಲಗಿಯಾದ ಮೇಲೆ ಫೋನ್ ಗಣಗಣಿಸಿತು.
“ಯಾರಪ್ಪಾ ಇದು” ಎಂದು ಗೊಣಗಿದ ಗರ್ಟ್, ರಿಸೀವರ್ಗಾಗಿ ತಡಕಾಡುತ್ತಾ.
“ಹಲ್ಲೋ, ನಾನು ನಿನ್ನ ಸ್ನೇಹಿತ!” ಎಂದಿತು ಗೆಲವಿನ ಸರ್ವ.
ಗರ್ಟ್ ಯೋಚಿಸ ಪ್ರಯತ್ನಿಸಿದ ಯಾರಿರಬಹುದು ಎಂದು.
“ನಿನ್ನ ಹಡಗಿನ ಸ್ನೇಹಿತ,” ಎಂದಿತು ಆ ದ್ವನಿ ಪುನಃ.
“ಈಗ ಬೆಳಗಾತ ಮೂರು ಗಂಟೆ!” ಎಂದ ಗರ್ಟ್
“ಹೌದು, ಆದರೆ ನನ್ನ ಹಡಗು ಪುನಃ ರಾಟರ್ಡಾಮ್ಗೆ ಬಂದೊಡನೆ ನಿನ್ನನ್ನು ಕರೆಯುವಂತೆ ಹೇಳಿದ್ದಿಯಲ್ಲಾ. ನಾನೀಗಲೇ ಬಂದೆನು!” ಆ ಮೇಲೆ ತುಸು ಹೊತ್ತಿನಲ್ಲೇ ಗರ್ಟ್ ದೇವರ ವಾಕ್ಯದಲ್ಲಿ ಆಸಕ್ತಿ ಇದ್ದ ಆ ತನ್ನ ಸ್ನೇಹಿತನನ್ನು ಭೇಟಿಯಾಗಲು ಹೊರಟನು.
“ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು”
ನಾವಿಕರು ಪಯನೀಯರರಿಗೆ ಬರೆದ ಪತ್ರಗಳಲ್ಲಿ ಸಹ ಬೈಬಲ್ ಸಾಹಿತ್ಯಕ್ಕಾಗಿ ಗಣ್ಯತೆ ವ್ಯಕ್ತಪಡಿಸಲ್ಪಟ್ಟಿದೆ. ಕೆಲವು ಉದ್ಧರಣೆಗಳನ್ನು ಕೆಳಗೆ ಕೊಡಲಾಗಿದೆ:
‘ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ನಾನು ಓದಲು ತೊಡಗಿದ್ದೇನೆ. . . . ಹಿಂದೆ ತಿಳಿಯದೆ ಇದ್ದ ಅನೇಕ ವಿಷಯಗಳು ನನಗೀಗ ತಿಳಿದಿವೆ. ನಮ್ಮ ಹಡಗು ರಾಟರ್ಡಾಮ್ಗೆ ಹಿಂತಿರುಗುವುದನ್ನು ನಿರೀಕ್ಷಿಸುತ್ತೇನೆ.’—ಆ್ಯಂಜೆಲೊ.
‘ನಾನು ಪುಸ್ತಕ ಓದಿದೆ, ನಿಮ್ಮ ಪತ್ರದಲ್ಲಿ ನೀವು ಉತ್ತರಿಸುವಂತೆ ನಾನು ಕೆಲವು ಪ್ರಶ್ನೆಗಳನ್ನು ಕಳುಹಿಸುತ್ತಿದ್ದೇನೆ.’—ಆಲ್ಬರ್ಟಾ.
‘ನಾನೀಗ ಬೈಬಲನ್ನು ಪ್ರತಿದಿನ ಓದುತ್ತೇನೆ. ನಿನ್ನ ಸ್ನೇಹಿತನಾಗಿರಲು ನನಗೆ ಸಂತೋಷ. ದೇವರ ಬಳಿಗೆ ನಡಿಸುವ ಸ್ನೇಹಿತರನ್ನು ಕಂಡುಕೊಂಡದ್ದು ನನ್ನ ಜೀವಿತದಲ್ಲಿ ಸಂಭವಿಸಿದ ಅತ್ಯುತ್ತಮ ಸಂಗತಿ.’—ನಿಕಿ.
ಅಂಥ ಹೃದಯಸ್ಪರ್ಶಿ ಪತ್ರಗಳು ಪ್ರಸಂಗಿ 11:1 ರಲ್ಲಿ ಬೈಬಲ್ ಏನನ್ನುತ್ತದೋ ಅದರ ಜ್ಞಾಪಕವನ್ನು ಪಯನೀಯರರಿಗೆ ಕೊಡುತ್ತದೆ: “ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು, ಬಹು ದಿನದ ಮೇಲೆ ಅದು ನಿನಗೆ ಸಿಕ್ಕುವದು.” ನಾವಿಕರಲ್ಲಿ ಕೆಲವರು ಯೆಹೋವನಿಗಾಗಿ ತಮ್ಮ ನಿಲುವನ್ನು ತಕ್ಕೊಂಡದ್ದನ್ನು ಕೇಳುವಾಗ, ಅವರು ವಿಶೇಷ ಉಲ್ಲಾಸವನ್ನು ಪಡೆಯುತ್ತಾರೆ.
ಪೋಲಿಶ್ ನಾವಿಕ ಸ್ಟಾನಿಸ್ಲಾಫ್, ಉದಾಹರಣೆಗಾಗಿ, ಸೊಸೈಟಿಯ ಪುಸ್ತಕಗಳಿಂದ ಏನನ್ನು ಕಲಿತನೋ ಅದರಿಂದ ಅತ್ಯಾನಂದ ಪಟ್ಟನು. ಬೇಗನೇ ಬೈಬಲ್ ಸಾಹಿತ್ಯದ ಒಂದು ಚಿಕ್ಕ ಲೈಬ್ರೆರಿಯನ್ನು ಪಡಕೊಂಡು, ಸಮುದ್ರದಲ್ಲಿದ್ದಾಗ, ಅದರ ಪ್ರತಿಯೊಂದು ಪುಸ್ತಕವನ್ನು ಅಭ್ಯಾಸ ಮಾಡಿದನು. “ಪುನಃ ಅವನ ಪತ್ರ ಬಂದಾಗ,” ಮಿನಾರ್ಡ್ ಹೇಳುವುದು, “ತನಗೆ ದೀಕ್ಷಾಸ್ನಾನವಾದ ಕುರಿತು ಅವನು ಬರೆದಿದ್ದನು.”
ಒಳನಾಡಿನ ಹಡಗಿನ ನಾಯಕ ಫೋಕರ್ಟ್ ಎಂಬವನು ಮೊದಲಾಗಿ ರಾಜ್ಯ ಸಂದೇಶವನ್ನು ಕೇಳಿದ್ದು ರಾಟರ್ಡಾಮ್ನಲ್ಲಿ. ಪ್ರತಿ ಎರಡು ತಿಂಗಳಿಗೊಮ್ಮೆ ಅವನು ಒಂದು ವಾರಕ್ಕಾಗಿ ಬಂದರಿಗೆ ಹಿಂತಿರುಗುತ್ತಿದ್ದನು ಮತ್ತು ಸರಾಗವಾಗಿ ಏಳು ದಿನ ಬೈಬಲಭ್ಯಾಸ ಮಾಡುತ್ತಿದ್ದನು. ಅನಂತರ, ಅವನು ಇನ್ನೊಂದು ಎರಡು ತಿಂಗಳ ಸಂಚಾರಕ್ಕೆ ಹೋಗುವ ಮೊದಲು, ಅವನ ಹಡಗು ಹಾದಿಗಳಲ್ಲಿರುವ ರಾಜ್ಯ ಸಭಾಗೃಹಗಳ ವಿಳಾಸಗಳ ಪಟ್ಟಿಯನ್ನು ಪಯನೀಯರುಗಳು ಕೊಟ್ಟರು. ಫೋಕರ್ಟ್ ಹೋಲ್ಗಳನ್ನು ಸಂದರ್ಶಿಸಿದನು ಮತ್ತು ತನಗೆ ದೊರೆತ ಹೃತ್ಪೂರ್ವಕ ಸ್ವಾಗತದಿಂದ ಪ್ರೇರೇಪಿತನಾದನು. ಈ ಹಡಗಿನ ನಾಯಕನಿಗೆ ದೀಕ್ಷಾಸ್ನಾನವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ ಮತ್ತು ಈಗ ಅವನು ಯೆಹೋವನನ್ನು ಹುರುಪಿನಿಂದ ಸೇವಿಸುತ್ತಿದ್ದಾನೆ.
ಬ್ರಿಟಿಷ್ ನೌಕಾಸೇನೆಯ ಆಫೀಸರ್ ಮೈಕ್ ಎಂಬವನು ಹಿಂದೆ ಸಾಕ್ಷಿಗಳೊಂದಿಗೆ ತುಸು ಸಂಪರ್ಕ ಮಾಡಿದ್ದನು ಮತ್ತು ಸಮುದ್ರ ಪ್ರಯಾಣದಲ್ಲಿ ಬೈಬಲನ್ನು ಅಭ್ಯಸಿಸುತ್ತಿದ್ದನು. ಒಮ್ಮೆ ಅವನು ಕೆಲಸ ಮಾಡುತ್ತಿದ್ದ ಕಾವಲು ಹಡಗು ರಾಟರ್ಡಾಮ್ಲ್ಲಿ ಲಂಗರು ಹಾಕಿದಾಗ ಅವನು ತನ್ನ ಮಡಿಸಲಾಗುವ ಸೈಕಲನ್ನುಪಯೋಗಿಸಿ ಒಂದು ರಾಜ್ಯ ಸಭಾಗೃಹಕ್ಕೆ ಹಾಜರಾದನು. ಅಲ್ಲಿ ನೋಡಿದ ಪ್ರೀತಿ ಮತ್ತು ಐಕ್ಯತೆಯಿಂದ ಅವನು ಪ್ರಭಾವಿತನಾದನು ಮತ್ತು ತನ್ನ ಕೆಲಸ ಬಿಡಲು ನಿರ್ಧರಿಸಿದ್ದೇನೆಂದು ಮಿತ್ರರಿಗೆ ತಿಳಿಸಿದನು. ಒಳ್ಳೇ ಪೆನ್ಷನ್ ಪಡೆಯಲು ಇನ್ನು ಕೇವಲ ನಾಲ್ಕೇ ವರ್ಷ ಬಾಕಿ ಇದ್ದರೂ, ಅವನು ತನ್ನ ನಿರ್ಧಾರಕ್ಕೆ ಅಂಟಿಕೊಂಡನು ಮತ್ತು ಅನಂತರ ದೀಕ್ಷಾಸ್ನಾನ ಪಡಕೊಂಡನು.
ಮಿನಾರ್ಡ್ ಹೇಳುವುದು: “ಮೈಕ್, ಸ್ಟಾನಿಸ್ಲಾಫ್, ಫೋಕರ್ಟ್ ಮತ್ತು ಇತರರು ಯೆಹೋವನ ಸೇವೆ ಮಾಡಲು ತೋರಿಸಿದ ಅತ್ಯಾಸಕ್ತಿಯು, ಅವರಂಥ ನಾವಿಕರಿಗಾಗಿ ರೇವನ್ನು ಹುಡುಕುತ್ತಾ ಇರುವಂತೆ ನಮ್ಮನ್ನು ಪ್ರೇರೇಪಿಸುತ್ತದೆ.”
ನೀವು ಪಾಲಿಗರಾಗಬಲ್ಲಿರೋ?
ಲೋಕದ ಅತ್ಯಂತ ದೊಡ್ಡ ರೇವೊಂದರಲ್ಲಿ ಸುಮಾರು ಒಂದು ದಶಮಾನದ ಸಾರುವಿಕೆಯನ್ನು ಹಿನ್ನೋಡುವಲ್ಲಿ, ಆರು “ರೇವು ಮಿಶನೆರಿಗಳು” ಹೃದಯಪೂರ್ವಕವಾಗಿ ಒಪ್ಪಿದ್ದಾರೆ ಏನಂದರೆ—ನೇಮಕವು ಪಂಥಾಹ್ವಾನದ್ದಾಗಿತ್ತು ಆದರೆ ಪ್ರತಿಫಲದಾಯಕವು. “ಪ್ರತಿ ದಿನ ಸಾರಿದ ಮೇಲೆ,” ಮಿನಾರ್ಡ್ ಕೊನೆಗೆ ಹೇಳುವುದು, “ಆ ನಾವಿಕರಲ್ಲಿ ಕೆಲವರು ನಮ್ಮ ಸಂದರ್ಶನೆಗಾಗಿ ಕಾಯುತ್ತಾ ಇದ್ದರು ಎಂಬ ಅನಿಸಿಕೆಯೊಂದಿಗೆ ನಾವು ಸೈಕಲಲ್ಲಿ ಮನೆಗೆ ಹಿಂತಿರುಗುತ್ತೇವೆ.”
ನಿಮ್ಮ ಕ್ಷೇತ್ರದ ಒಂದು ಬಂದರಿನಲ್ಲಿ ನಾವಿಕರು ಒಂದು ಸಂದರ್ಶನೆಗಾಗಿ ಕಾಯುತ್ತಿರಬಹುದೇ? ಈ ಪಂಥಾಹ್ವಾನದ ಆದರೆ ಪ್ರತಿಫಲದಾಯಕ ಕೆಲಸದಲ್ಲಿ ನೀವು ಪಾಲಿಗರಾಗುವಂತೆ ಪ್ರಾಯಶಃ ನಿಮ್ಮ ಸಭೆಯ ಹಿರಿಯರು ಏರ್ಪಾಡು ಮಾಡಶಕ್ತರಾಗಬಹುದು. (w92 4/15)
[ಪುಟ 20 ರಲ್ಲಿರುವ ಚೌಕ]
ನಿಷೇಧಿಸಲ್ಪಟ್ಟ ಕ್ಷೇತ್ರಗಳೊಳಗೆ ತಲಪುವುದು
ಎಲ್ಲಿ ಯೆಹೋವನ ಸಾಕ್ಷಿಗಳ ಕಾರ್ಯವು ನಿಷೇಧಿಸಲ್ಪಟ್ಟಿದೆಯೋ ಆ ದೇಶಗಳಿಂದ ಸುಮಾರು 2,500 ಕ್ಕಿಂತಲೂ ಹೆಚ್ಚು ಹಡಗುಗಳು ಇತ್ತೀಚಿಗಿನ ಒಂದು ವರ್ಷದಲ್ಲಿ ರಾಟರ್ಡಾಮ್ನಲ್ಲಿ ತಂಗಿದವು. ಮತ್ತು ರೇವು ಪಯನೀಯರರು ಇದನ್ನು, ಆ ಕ್ಷೇತ್ರಗಳೊಳಗೆ ಬೈಬಲ್ ಸಂದೇಶವನ್ನು ತಲಪಿಸುವ ಒಂದು ಸಂದರ್ಭವಾಗಿ ಕಂಡರು.
ಅವರು ಸಂದರ್ಶಿಸಿದ ಮೊತ್ತಮೊದಲಿನ ಏಷ್ಯಾದ ಹಡಗು ಒಂದರಲ್ಲಿ, ಪಯನೀಯರರು 23 ಪುಸ್ತಕಗಳ ತಮ್ಮ ಇಡೀ ಸಂಗ್ರಹವನ್ನು ನೀಡಿದ್ದರಿಂದ, ಕೆಲವು ಕಲಾಸಿಗಳಿಗೆ ಪುಸ್ತಕದ ಪ್ರತಿಯು ಸಿಕ್ಕದ ಕಾರಣ ಖೇಧವಾಯಿತು. ಇನ್ನೊಂದು ಏಷ್ಯನ್ ಹಡಗಿನ ಚಾಕರ ಹುಡುಗನು ಹೆಚ್ಚು ಮುಂಜಾಗ್ರತೆಯುಳ್ಳವನಾಗಿದ್ದನು. ಪಯನೀಯರನಿಂದ ಪುಸ್ತಕವನ್ನು ಪಡೆದ ನಂತರ, ವಿಳಾಸ ಬರೆದಿದ್ದ ಕಾಗದ್ದಿಂದ ಅದನ್ನು ಸುತ್ತಿ ಮತ್ತೆ ಹಿಂದೆ ಕೊಟ್ಟನು. ಪಯನೀಯರನಿಗೆ ವಿಷಯ ತಿಳಿಯಿತು. ಪುಸ್ತಕವನ್ನು ಅವನೊಂದಿಗೆ ಒಯ್ಯುವುದು ಹುಡುಗನಿಗೆ ತೀರಾ ಅಪಾಯಕರವಾಗಿತ್ತು. ಅದೇ ದಿನ ಅದು ಅಂಚೆಯ ಮೂಲಕ ದೂರ ಪೂರ್ವಕ್ಕೆ ರವಾನೆಯಾಯಿತು.
ಸ್ವದೇಶದ ಸಾಕ್ಷಿಗಳಿಗೆ ಬೇಕಾಗಿದ್ದ ಪುಸ್ತಕದ ಪಟ್ಟಿಯೊಂದಿಗೆ ಆಫ್ರಿಕದ ಹಡಗುವೊಂದರಲ್ಲಿ ಒಬ್ಬ ನಾವಿಕನು ಬಂದನು. ಅಂದಿನಿಂದ ಪ್ರತಿಸಲ ನಾವಿಕನು ಮನೆಗೆ ಹಿಂತಿರುಗುವಾಗ ಅವನ ಸೂಟ್ಕೇಸ್ ಸಾಹಿತ್ಯದಿಂದ ತುಂಬಿರುತ್ತಿತ್ತು. ಇನ್ನೊಂದು ಆಫ್ರಿಕನ್ ದೇಶದಿಂದ ಬಂದ ನಾವಿಕನಿಗೆ ಅವನೊಂದಿಗೆ ಅಭ್ಯಾಸಿಸುತ್ತಿದ್ದ ಪಯನೀಯರನು, ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಎಂಬ ಪುಸ್ತಕದ ಮೂರು ಪ್ರತಿಗಳನ್ನು ಮಾತ್ರವೇ ನೀಡಶಕ್ತನಾದಾಗ, ತೀವ್ರ ನಿರಾಶೆಗೊಂಡನು. “ಇದರಿಂದೇನೂ ಆಗದು!” ಎಂದು ಉದ್ಗರಿಸಿದನು ನಾವಿಕನು ನಿರಾಶೆಯಿಂದ ತೋಳುಗಳನ್ನೆತ್ತಿ. “ನನ್ನ ಸ್ವದೇಶದ ಸಹೋದರರಿಗೆ 1000 ಪ್ರತಿ ಬೇಕು!” ಅವನ ಸ್ವಂತ ಸುರಕ್ಷೆಗೋಸ್ಕರ ಅವನು ಪ್ರತಿ ಸಲ 20 ಪ್ರತಿಗಳನ್ನು ಮಾತ್ರ ಒಯ್ಯುವಂತೆ ಪಯನೀಯರರು ಅವನ ಮನವೊಪ್ಪಿಸಿದರು.
ಸಾಕ್ಷಿಗಳು ಅವರ ನಂಬಿಕೆಗಾಗಿ ಹಿಂಸಿಸಲ್ಪಡುತ್ತಿರುವ ಹಾಗೂ ಅನೇಕರು ತಮ್ಮ ಕೆಲಸ ಮತ್ತು ಸೊತ್ತನ್ನು ಕಳಕೊಂಡಿರುವ ಒಂದು ದೇಶದಿಂದ ಒಂದು ಹಡಗು ಬಂದಿದೆ ಎಂದು ಪಯನೀಯರಿಗೆ ತಿಳಿದ ಆ ಸಮಯವು ಪ್ರಾಯಶಃ ಅತ್ಯಂತ ಹೃದಯದ್ರಾವಕವಾಗಿತ್ತು. ಹಡಗಿನ ಪಾರುಪತ್ಯಗಾರನು ಒಬ್ಬ ಸಾಕ್ಷಿಯೆಂದು ಅವರಿಗೆ ತಿಳಿದಾಗ, ಅವರು ಕ್ಯಾಪ್ಟನ್ನನ್ನು ಭೇಟಿಯಾಗಿ, ಅವನ ಹಡಗಿನಲ್ಲಿ ಪರಿಹಾರ ಸಹಾಯವನ್ನು ಕಳುಹಿಸಲು ಅನುಮತಿ ಕೇಳಿದರು. ಕ್ಯಾಪ್ಟನ್ ಒಪ್ಪಿದನು. ಮತ್ತು ಕೆಲವೇ ದಿನಗಳಲ್ಲಿ, ಬಟ್ಟೆ, ಪಾದರಕ್ಷೆಗಳು ಮತ್ತು ಇತರ ವಸ್ತುಗಳನ್ನೊಳಗೊಂಡ ನೂರು ದೊಡ್ಡ ಬ್ಯಾಗ್ಗಳು ಆ ದೇಶದ ಸಾಕ್ಷಿಗಳಿಗಾಗಿ ಕಳುಹಿಸಲ್ಪಟ್ಟವು.
[ಪುಟ 21 ರಲ್ಲಿರುವ ಚೌಕ]
ಹಡಗಿನಿಂದ ಹಡಗಿಗೆ ಸಾರುವುದು—ಒಬ್ಬ ಮಹಿಳೆಯ ನೋಟ
“ಮೊದಮೊದಲು ಪೀಟರ್ನೊಂದಿಗೆ ಹೋಗಲು ನಾನು ಶಂಕಿಸುತ್ತಿದ್ದೆನು,” ಮರುಕಳಿಸಿದಳು ಕಾರೀನ್, ಪಯನೀಯರರ ಸಂಗಡವಿದ್ದ ಒಬ್ಬಳೇ ಮಹಿಳೆ, “ಯಾಕಂದರೆ ನಾವಿಕರು ಹೆಚ್ಚಾಗಿ ಒರಟು ಸ್ವಭಾವದವರೂ ಕುಡುಕರೂ ಆಗಿದ್ದಾರೆಂಬ ಕಥೆಗಳನ್ನು ನಾನು ಕೇಳಿದ್ದೆ. ಆದರೆ ಅವರಲ್ಲಿ ಹೆಚ್ಚಿನವರು ಮರ್ಯಾದಾಪರರೆಂದು ನಾನು ಕಂಡುಕೊಂಡೆನು. ಒಮ್ಮೆ ಒಬ್ಬ ನಾವಿಕನಿಗೆ ನಾವು ವಿವಾಹಿತರೆಂದು ತಿಳಿದಾಗ, ಅವನು ತನ್ನ ಪತ್ನಿ ಮತ್ತು ಮಕ್ಕಳ ಒಂದು ಫೋಟೋ ಹೊರತೆಗೆದು ಆಗಾಗ್ಯೆ ತನ್ನ ಕುಟುಂಬದ ಕುರಿತು ಮಾತಾಡುತ್ತಾನೆ. ಈ ರೀತಿಯಲ್ಲಿ ನಾವು ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಎಂಬ ಪುಸ್ತಕದ ತುಂಬಾ ಪ್ರತಿಗಳನ್ನು ನೀಡಿದ್ದೇವೆ.”
ಗಂಡ ಹೆಂಡತಿಯಾಗಿ ಹಡಗನ್ನು ಸಂದರ್ಶಿಸುವುದರಿಂದ ಕಲಾಸಿಗಳ ಪತ್ನಿಯರನ್ನು ಮತ್ತು ದಾದಿಗಳಾಗಿ ಕೆಲಸ ಮಾಡುವ ಇತರ ಸ್ತ್ರೀಯರನ್ನು ಸಂಪರ್ಕಿಸುವುದಕ್ಕೆ ಹೆಚ್ಚು ಸುಲಭವಾಗುತ್ತದೆ. “ಸಾಮಾನ್ಯವಾಗಿ ಅವರು ಅಪರಿಚಿತರೊಂದಿಗೆ ಬೆರೆಯುವುದಿಲ್ಲ,” ಅನ್ನುತ್ತಾಳೆ ಕಾರೀನ್, “ಆದರೆ ನನ್ನನ್ನು ಗಮನಿಸುವಾಗ, ಸಂಭಾಷಣೆಯಲ್ಲಿ ತೊಡಗಲು ಹೆಚ್ಚು ಪ್ರವೃತ್ತಿ ತೋರಿಸುತ್ತಾರೆ.”
ಅವಳ ನೇಮಕದಲ್ಲಿ ಅತಿ ದೊಡ್ಡ ಪಂಥಾಹ್ವಾನ ಯಾವುದಾಗಿತ್ತು? “ನೂಲೇಣಿಗಳು,” ಉತ್ತರಿಸುತ್ತಾಳೆ ಕಾರೀನ್. “ಆ ಸಡಿಲವಾದ ಏಣಿಗಳನ್ನು ನಾನು ದ್ವೇಷಿಸಿದ್ದೆ.” ಅವಳ ಆ ಹೆದರಿಕೆ ಹೋಯಿತೋ? “ಹೌದು, ಒಮ್ಮೆ ನಾನದನ್ನು ಹತ್ತಲು ಹಿಂಜರಿದಾಗ, ಪರುಗೆಯ್ವ ಒಂದು ನಾವಿಕ ತಂಡವು ನಿಂತು ನೋಡುತ್ತಾ ಕೂಗಿ ಹೇಳಿದ್ದು: ‘ನೀನು ಹತ್ತ ಬಲ್ಲೆ. ದೇವರಲ್ಲಿ ಮಾತ್ರ ಭರವಸಬೇಕು.’ “ನಿಶ್ಚಯ,” ಕಾರೀನ್ ನಗುತ್ತಾ ಅನ್ನುವುದು, “ಆ ಟೀಕೆಯ ನಂತರ ಹತ್ತದ ಹೊರತು ನನಗೆ ಗತ್ಯಂತರವಿರಲಿಲ್ಲ.” ಅವಳ ಗಂಡ ಮೆಚ್ಚಿಕೆಯಿಂದ ಹೇಳುವುದು: “ನಾಲ್ಕು ವರ್ಷಗಳು ಮತ್ತು ಅನಂತರ ಅನೇಕಾನೇಕ ನೂಲೇಣಿಗಳು, ಅವನ್ನೀಗ ಅವಳು ನಾವಿಕಳಂತೆ ಹತ್ತುತ್ತಾಳೆ.”
ಕಾರೀನ್ ಮತ್ತು ಅವಳ ಗಂಡ ಪೀಟರ್ ಅಮೆರಿಕದಲ್ಲಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ನ 89 ನೆಯ ವರ್ಗವನ್ನು ಹಾಜರಾದರು. ಸಪ್ಟಂಬರ 28, 1990 ರಲ್ಲಿ, ಅವರು ತಮ್ಮ ಹೊಸ ನೇಮಕವಾದ ಈಕೆಡ್ವೋರ್ಗೆ, ಒಂದು ಬಂದರಿರುವ ದೇಶಕ್ಕೆ ಹೋದರು. ಅದು ಅವರಿಗೆ ಸ್ವಂತ ಮನೆಯಂತೆಯೇ ಭಾಸವಾಗಬೇಕು.
[ಪುಟ 22 ರಲ್ಲಿರುವ ಚೌಕ]
ನೀವೊಬ್ಬ ನಾವಿಕರೋ?
ನಿಮ್ಮ ಹಡಗು ಲೋಕದ ಪ್ರಧಾನ ಬಂದರುಗಳೊಂದರಲ್ಲಿ ತಂಗಿದಾಗ ಯೆಹೋವನ ಸಾಕ್ಷಿಗಳ ಇಂಗ್ಲಿಷ್-ಭಾಷೆಯ ಒಂದು ಕೂಟವನ್ನು ಹಾಜರಾಗಲು ನೀವು ಬಯಸುತ್ತೀರೋ? ಹಾಗಾದರೆ ಪ್ರಚಲಿತ ರಾಜ್ಯ ಸಭಾಗೃಹಗಳ ವಿಳಾಸಗಳ ಮತ್ತು ಕೂಟದ ವೇಳೆಗಳ ಈ ಪಟ್ಟಿಯನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳಿರಿ.
Hamburg, Schellingstr. 7-9; Saturday, 4:00 p.m.; phone: 040-4208413
Hong Kong, 26 Leighton Road; Sunday, 9:00 a.m.; phone: 5774159
Marseilles, 5 Bis, rue Antoine Maille; Sunday, 10:00 a.m.; phone: 91 79 27 89
Naples, Castel Volturno (40 km north of Naples), Via Napoli, corner of Via Salerno, Parco Campania; Sunday, 2:45 p.m.; phone: 081/5097292
New York, 512 W. 20 Street; Sunday, 10:00 a.m.; phone: 212-627-2873
Rotterdam, Putsestraat 20; Sunday, 10:00 a.m.; phone: 010-41 65 653
Tokyo, 5-5-8 Mita, Minato-ku; Sunday, 4:00 p.m.; phone: 03-3453-0404
Vancouver, 1526 Robson Street; Sunday, 10:00 a.m.; phone: 604-689-9796