ನೆನಪಿಸಿಕೂಳ್ಳುವ ಆ ದಿನ
“ನೀವು ನನ್ನಲ್ಲಿದ್ದು ಮನಶ್ಶಾಂತಿಯನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ.”—ಯೋಹಾನ 16:33.
1, 2. ಇತಿಹಾಸದಲ್ಲಿ ಯಾವ ಒಂದು ದಿನವು ಬೇರೆಲ್ಲಾ ದಿನಗಳಿಗಿಂತ ಎದ್ದುನಿಲ್ಲುತ್ತದೆ ಮತ್ತು ಏಕೆ?
ಶಾಂತಿಯ ಕುರಿತು ಇಂದು ಲೋಕಕ್ಕೆ ಹೆಚ್ಚನ್ನು ಹೇಳಲಿಕ್ಕದೆ. 2 ನೆಯ ಲೋಕ ಯುದ್ಧದ ಅಂತ್ಯದಲ್ಲಿ ಶಾಂತಿಯು ವಿ-ಇ ದಿನ ಮತ್ತು ವಿ-ಜೆ ದಿನದೊಂದಿಗೆa ಜತೆಗೂಡಿತ್ತು. ಪ್ರತಿ ವರ್ಷ ಕ್ರಿಸ್ಮಸ್, ‘ಭೂಮಿಯ ಮೇಲೆ ಶಾಂತಿಯ’ ಕುರಿತು ಜನರನ್ನು ಯೋಚಿಸುವಂತೆ ಮಾಡುತ್ತದೆ. (ಲೂಕ 2:14) ಆದರೆ ಇಡೀ ಮಾನವ ಇತಿಹಾಸದಲ್ಲಿ ಬೇರೆ ಎಲ್ಲಾ ದಿನಗಳಿಗಿಂತ ಎದ್ದು ಕಾಣುವ ಒಂದು ದಿನವು ಅಲ್ಲಿದೆ. ಮೇಲೆ ಉಲ್ಲೇಖಿಸಿದ ಮಾತುಗಳನ್ನು ಯೇಸು ಕ್ರಿಸ್ತನು ಯಾವ ದಿನದಲ್ಲಿ ಹೇಳಿದನೋ ಅದೇ ಆ ದಿನ. ಇಲ್ಲಿ ಭೂಮಿಯ ಮೇಲೆ ಮಾನವ ಕುಲವು ಅಸ್ತಿತ್ವದಲ್ಲಿದ್ದ ಸುಮಾರು 20 ಲಕ್ಷಕ್ಕಿಂತ ಹೆಚ್ಚು ದಿನಗಳಲ್ಲಿ ಮಾನವ ಕುಲದ ಪಥವನ್ನು ಅದರ ಶಾಶ್ವತ ಹಿತಕ್ಕಾಗಿ ಸಂಪೂರ್ಣವಾಗಿ ಬದಲಾಯಿಸಿದ್ದು ಆ ಒಂದು ದಿನವೇ.
2 ಬಹು ಮುಖ್ಯವಾದ ಆ ದಿನವು ಯೆಹೂದಿ ಕ್ಯಾಲೆಂಡರ್‌ನಲ್ಲಿ ನೈಸಾನ್ 14 ನೆಯ ದಿನವಾಗಿದೆ. ನಮ್ಮ ಸಾಮಾನ್ಯ ಶಕದ 33 ನೆಯ ವರ್ಷದಲ್ಲಿ ನೈಸಾನ್ 14, ಎಪ್ರಿಲ್ 1ರ ಸೂರ್ಯಾಸ್ತಮಾನದ ನಂತರ ಆರಂಭಿಸಿತು. ವಿಶೇಷ ಅರ್ಥವತ್ತಾದ ಆ ದಿನದ ಘಟನಾವಳಿಗಳನ್ನು ನಾವೀಗ ಚರ್ಚಿಸೋಣ.
ನೈಸಾನ್ 14!
3. (ಎ) ಆ ಕೊನೆಯ ತಾಸುಗಳ ಉಪಯೋಗವನ್ನು ಯೇಸು ಮಾಡಿದ್ದು ಹೇಗೆ?
3 ಸಂಜೆ ಮಬ್ಬಾದಾಗ, ಯೆಹೋವನು ಕಾಲಗಳನ್ನೂ ಸಮಯಗಳನ್ನೂ ನಿರ್ಧರಿಸುವಾತನೆಂಬದರ ಜ್ಞಾಪಕದೋಪಾದಿ, ಒಂದು ಸುಂದರವಾದ ಪೂರ್ಣ ಚಂದ್ರನು ಬೆಳಗುವ ಸಂಭವನೀಯತೆ ಅಲ್ಲಿದೆ. (ಅ.ಕೃತ್ಯಗಳು 1:7) ಮತ್ತು ಯೆಹೂದ್ಯರ ವಾರ್ಷಿಕ ಪಸ್ಕವನ್ನು ಆಚರಿಸಲು ಯೇಸು ಮತ್ತು ಆತನ ಹನ್ನೆರಡು ಮಂದಿ ಅಪೊಸ್ತಲರು ಕೂಡಿಬಂದ ಆ ಮೇಲ್ಮಾಳಿಗೆಯ ಕೋಣೆಯಲ್ಲಿ ಏನು ಸಂಭವಿಸುತ್ತಾ ಇದೆ? ಯೇಸು ‘ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಲು’ ಸಿದ್ಧತೆ ಮಾಡುತ್ತಿದ್ದಾಗ ಅವನು ತನ್ನವರನ್ನು ಕೊನೆಯ ತನಕ ಪ್ರೀತಿಸುತ್ತಾನೆ.’ (ಯೋಹಾನ 13:1) ಅವನು ಅದನ್ನು ಮಾಡುವುದು ಹೇಗೆ? ತನ್ನ ಮಾತುಗಳ ಮತ್ತು ಮಾದರಿಯ ಮೂಲಕವೇ; ಯೇಸು ತನ್ನ ಶಿಷ್ಯರ ಮನಸ್ಸಿನಲ್ಲಿ ಅವರು ಲೋಕವನ್ನು ಜಯಿಸಲು ಸಹಾಯವಾಗುವ ಗುಣಗಳನ್ನು ತುಂಬಿಸುವುದನ್ನು ಮುಂದರಿಸುತ್ತಾನೆ.
ದೀನತೆ ಮತ್ತು ಪ್ರೀತಿಯನ್ನು ಧರಿಸುವುದು
4. (ಎ) ಒಂದು ಮೂಲಭೂತ ಗುಣವನ್ನು ಯೇಸು ತನ್ನ ಶಿಷ್ಯರಿಗೆ ಪ್ರದರ್ಶಿಸಿದ್ದು ಹೇಗೆ? (ಬಿ) ದೀನತೆಯ ಮಹತ್ವವನ್ನು ಪೇತ್ರನು ಕಲಿತನೆಂದು ನಮಗೆ ತಿಳಿದಿರುವುದು ಹೇಗೆ?
4 ಅಪೊಸ್ತಲರಿಗಿನ್ನೂ ಹೆಬ್ಬಯಕೆಯುಳ್ಳ ಮತ್ಸರ ಮತ್ತು ಹೆಮ್ಮೆಯ ಸ್ವಲ್ಪಾಂಶವನ್ನು ವರ್ಜಿಸಬೇಕಾದ ಅಗತ್ಯವಿತ್ತು. ಆದ್ದರಿಂದ ಯೇಸು ಕೈವಸ್ತ್ರವನ್ನು ತಕ್ಕೊಂಡು ಅವರ ಪಾದಗಳನ್ನು ತೊಳೆಯಲು ಪ್ರಾರಂಭಿಸಿದನು. ಇದು ಕ್ರೈಸ್ತ ಪ್ರಪಂಚದ ಪೋಪರು ರೋಮಿನಲ್ಲಿ ಪ್ರತಿವರ್ಷ ಅಭಿನಯಿಸುವಂತೆ, ದೀನತೆಯ ವಿಕಟಾನುಕರಣೆಯ ಪ್ರದರ್ಶನೆಯಲ್ಲ. ನಿಶ್ಚಯವಾಗಿಯೂ ಅಲ್ಲ! ನಿಜ ದೀನತೆಯು ‘ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸುವ ದೀನಭಾವ’ದಿಂದ ಹೊರಹೊಮ್ಮುವ ಸ್ವ-ತ್ಯಾಗವಾಗಿರುತ್ತದೆ. (ಫಿಲಿಪ್ಪಿ 2:2-5) ಮೊದಮೊದಲು ಪೇತ್ರನು ಅದರರ್ಥವನ್ನು ತಿಳಿಯಲು ತಪ್ಪುತ್ತಾನೆ, ತನ್ನ ಪಾದಗಳನ್ನು ಯೇಸು ತೊಳೆಯುವಂತೆ ಬಿಡುವುದಿಲ್ಲ. ಯೇಸು ಅವನನ್ನು ತಿದ್ದಲಾಗಿ, ಇಡೀ ದೇಹವನ್ನೇ ತೊಳೆಯುವಂತೆ ಹೇಳುತ್ತಾನೆ. (ಯೋಹಾನ 13:1-10) ಆದರೂ ಪೇತ್ರನು ಆ ವಸ್ತುಪಾಠವನ್ನು ಕಲಿತಿದಿರ್ದಬೇಕು. ಯಾಕಂದರೆ ವರ್ಷಗಳ ಅನಂತರ ಅವನು ಬೇರೆಯವರಿಗೆ ಸರಿಯಾದ ಸಲಹೆಯನ್ನು ಕೊಡುವುದನ್ನು ನಾವು ಕಾಣುತ್ತೇವೆ. (1 ಪೇತ್ರ 3:8, 9; 5:5) ಇಂದು ನಾವೆಲ್ಲರೂ ಕ್ರಿಸ್ತನಿಗಾಗಿ ದೀನತೆಯಲ್ಲಿ ದುಡಿಯುವುದು ಅದೆಷ್ಟು ಮಹತ್ವವು!—ಜ್ಞಾನೋಕ್ತಿ 22:4; ಮತ್ತಾಯ 23:8-12 ನ್ನೂ ನೋಡಿ.
5. ಇನ್ನೊಂದು ಮೂಲಭೂತ ಗುಣದ ಮಹತ್ವವನ್ನು ಯೇಸುವಿನ ಯಾವ ಆಜ್ಞೆಯು ತೋರಿಸಿತು?
5 ಆ ಹನ್ನೆರಡು ಮಂದಿಯಲ್ಲಿ ಒಬ್ಬನು ಯೇಸುವಿನ ಸೂಚನೆಯಿಂದ ಪ್ರಯೋಜನ ಪಡೆಯುವುದಿಲ್ಲ. ಅವನೇ ಯೂದ ಇಸ್ಕಾರಿಯೋತನು. ಪಸ್ಕದ ಊಟವು ಮುಂದರಿದಂತೆ ಯೇಸು ಆತ್ಮದಲ್ಲಿ ತತ್ತರಗೊಳ್ಳುತ್ತಾನೆ, ತನ್ನನ್ನು ಹಿಡುಕೊಡುವವನು ಯೂದನು ಎಂದು ಗುರುತು ಹೇಳುತ್ತಾನೆ ಮತ್ತು ಅವನನ್ನು ಕಳುಹಿಸಿ ಬಿಡುತ್ತಾನೆ. ಇದಾದ ಮೇಲೆ ಮಾತ್ರವೇ ಯೇಸು ತನ್ನ 11 ನಂಬಿಗಸ್ತ ಅಪೊಸ್ತಲರಿಗೆ ಅನ್ನುವುದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಇದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:34, 35) ಇದು ನಿಜವಾಗಿಯೂ ಯೇಸುವಿನ ಸ್ವಂತ ಅತಿ ಶ್ರೇಷ್ಠ ಮಾದರಿಯಿಂದ ಚಿತ್ರಿಸಲ್ಪಟ್ಟ ಒಂದು ಹೊಸ ಆಜ್ಞೆಯು! ಆತನ ಯಜ್ಞಾರ್ಪಣೆಯ ಮರಣದ ಗಳಿಗೆಯು ಹತ್ತಿರವಾಗುವಾಗ, ಯೇಸುವು ಮಹತ್ತಾದ ಪ್ರೀತಿಯನ್ನು ಪ್ರದರ್ಶಿಸುತ್ತಾನೆ. ಆ ಶಿಷ್ಯರಿಗೆ ಕಲಿಸಲು ಮತ್ತು ಉತ್ತೇಜನ ಕೊಡಲು ಪ್ರತಿಯೊಂದು ಅಮೂಲ್ಯ ನಿಮಿಷವನ್ನು ಉಪಯೋಗಿಸುತ್ತಾನೆ. ಅನಂತರ, ಪ್ರೀತಿಯ ಮಹತ್ವವನ್ನು ಆತನು ಒತ್ತಿಹೇಳುತ್ತಾ, ಅನ್ನುವುದು: “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನಾನು ಕೊಡುವ ಆಜ್ಞೆಯಾಗಿದೆ. ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವುದೂ ಇಲ್ಲ.”—ಯೋಹಾನ 15:12, 13.
“ಮಾರ್ಗವೂ ಸತ್ಯವೂ ಜೀವವೂ”
6. ತನ್ನ ಆಪ್ತ ಶಿಷ್ಯರ ಮುಂದೆ ಯೇಸು ಯಾವ ಗುರಿಯನ್ನು ಎತ್ತಿಹಿಡಿದನು?
6 ನಂಬಿಗಸ್ತರಾದ 11 ಮಂದಿಗೆ ಯೇಸು ಹೇಳುವುದು: “ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ. ನನ್ನ ತಂದೆಯ ಮನೆಯಲ್ಲಿ ಬಹಳ ಬಿಡಾರಗಳು ಅವೆ; ಇಲ್ಲದಿದ್ದರೆ ನಿಮಗೆ ಹೇಳುತ್ತಿದ್ದೆನು. ನಿಮಗೆ ಸ್ಥಳವನ್ನು ಸಿದ್ಧಮಾಡಲು ಹೋಗುತ್ತಿದ್ದೇನಲ್ಲಾ.” (ಯೋಹಾನ 14:1, 2) ಈ ಸ್ಥಳವು “ಪರಲೋಕ ರಾಜ್ಯದಲ್ಲಿ” ಇರಲಿಕ್ಕಿತ್ತು. (ಮತ್ತಾಯ 7:21) ನಿಷ್ಠೆಯುಳ್ಳ ಶಿಷ್ಯರ ಈ ಆಪ್ತ ಗುಂಪು ಅವರ ಗುರಿಯನ್ನು ಹೇಗೆ ಮುಟ್ಟಶಕ್ತರು ಎಂದು ಯೇಸು ತೋರಿಸುತ್ತಾನೆ. ಅವನನ್ನುವುದು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ.” (ಯೋಹಾನ 14:6) ಇದು ಯಾರು ಭೂಮಿಯಲ್ಲಿ ನಿತ್ಯಜೀವವನ್ನು ಪಡೆಯುವರೋ ಆ ಮಾನವರಿಗೆ ಸಹ ಅನ್ವಯಿಸುತ್ತದೆ.—ಪ್ರಕಟನೆ 7:9, 10; 21:1-4.
7-9. ತಾನು “ಮಾರ್ಗವೂ ಸತ್ಯವೂ ಜೀವವೂ” ಆಗಿದ್ದೇನೆಂದು ಯೇಸು ತನ್ನನ್ನು ವರ್ಣಿಸಿದ್ದು ಏಕೆ?
7 ಯೇಸು “ಮಾರ್ಗವೂ” ಆಗಿದ್ದಾನೆ. ದೇವರನ್ನು ಪ್ರಾರ್ಥನೆಯಲ್ಲಿ ಗೋಚರಿಸುವ ಒಂದು ಮತ್ತು ಕೇವಲ ಒಂದೇ ಮಾರ್ಗವು ಯೇಸು ಕ್ರಿಸ್ತನ ಮೂಲಕವಾಗಿ ಆಗಿದೆ. ಯೇಸುವಿನ ಹೆಸರಿನಲ್ಲಿ ಅವರು ಏನು ಕೇಳಿದರೂ ಅದನ್ನು ತಂದೆಯು ಅವರಿಗೆ ಕೊಡುವನು ಎಂದು ತನ್ನ ಶಿಷ್ಯರಿಗೆ ಯೇಸು ತಾನೇ ಆಶ್ವಾಸನೆ ಕೊಡುತ್ತಾನೆ. (ಯೋಹಾನ 15:16) ಪ್ರತಿಮೆಗಳಿಗೆ ಅಥವಾ ಧಾರ್ಮಿಕ “ಸಂತ”ರಿಗೆ ಮಾಡುವ ಪ್ರಾರ್ಥನೆಗಳು ಅಥವಾ ಮೇರಿ ಕನ್ಯೆಯ ಮೇಲಣ ಭಕ್ತಿಗೀತ ಅಥವಾ ಪುನರುಚ್ಚಿತ ಪಠನವು—ಇವುಗಳಲ್ಲಿ ಯಾವುವೂ ತಂದೆಯಿಂದ ಆಲೈಸಲ್ಪಡುವುದಿಲ್ಲ ಮತ್ತು ಸ್ವೀಕರಿಸಲ್ಪಡುವುದಿಲ್ಲ. (ಮತ್ತಾಯ 6:5-8) ಅದಲ್ಲದೆ, ಯೇಸುವಿನ ಕುರಿತು, ಅಪೊಸ್ತಲರ ಕೃತ್ಯಗಳು 4:12 ರಲ್ಲಿ ನಾವು ಓದುವುದು: “ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ.”
8 ಯೇಸು “ಸತ್ಯವೂ” ಆಗಿದ್ದಾನೆ. ಅಪೊಸ್ತಲ ಯೋಹಾನ ಅವನ ಕುರಿತು ಹೇಳಿದ್ದು: “ಆ ವಾಕ್ಯವೆಂಬವನು ಮಾಂಸವಾಗಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಏಕ-ಜಾತ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು.” (ಯೋಹಾನ 1:14, NW) ಯೇಸುವು ಹಿಬ್ರೂ ಶಾಸ್ತ್ರದ ನೂರಾರು ಪ್ರವಾದನೆಗಳ ಸತ್ಯತೆಯಾಗಿ ಪರಿಣಮಿಸಿದ್ದು ಅವನ್ನು ನೆರವೇರಿಸಿದ ಮೂಲಕವೇ. (2 ಕೊರಿಂಥ 1:20; ಪ್ರಕಟನೆ 19:10) ತನ್ನ ಶಿಷ್ಯರೊಂದಿಗೆ ಮತ್ತು ಆಲೈಸಿದ ಜನರ ಗುಂಪುಗಳೊಂದಿಗೆ ಮಾತಾಡಿದ ಮೂಲಕ ಮತ್ತು ವೈದಿಕರೊಂದಿಗೆ ನಡಿಸಿದ ವಾಗ್ವಾದಗಳಲ್ಲಿ ಮತ್ತು ತನ್ನ ಸಜೀವ ಮಾದರಿಯ ಮೂಲಕ ಆತನು ಸತ್ಯವನ್ನು ತಿಳಿಯಪಡಿಸಿದನು.
9 ಯೇಸು “ಜೀವವೂ” ಆಗಿದ್ದಾನೆ. ದೇವರ ಕುಮಾರನೋಪಾದಿ, ಯೇಸುವಂದದ್ದು: “ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು. ಮಗನಿಗೆ ಒಳಗಾಗದವನು ಜೀವವನ್ನು ಕಾಣುವುದೇ ಇಲ್ಲ; ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವುದು.” (ಯೋಹಾನ 3:36) ಯೇಸುವಿನ ಯಜ್ಞದಲ್ಲಿ ನಂಬಿಕೆಯು ನಿತ್ಯಜೀವಕ್ಕೆ ನಡಿಸುವುದು—ಅಭಿಷಿಕ್ತ ಕ್ರೈಸ್ತರ “ಚಿಕ್ಕ ಹಿಂಡಿ”ಗಾಗಿ ಪರಲೋಕದಲ್ಲಿ ಅಮರ ಜೀವನ ಮತ್ತು “ಬೇರೆ ಕುರಿಗಳ” ಒಂದು ಮಹಾ ಸಮೂಹಕ್ಕಾಗಿ ಪರದೈಸದಲ್ಲಿ ನಿತ್ಯಜೀವ.—ಲೂಕ 12:32; 23:43; ಯೋಹಾನ 10:16.
ಹಿಂಸೆಯನ್ನು ತಾಳಿಕೊಳ್ಳುವುದು
10. ‘ಲೋಕವನ್ನು ಜಯಿಸುವ’ ಅಗತ್ಯ ನಮಗಿದೆಯೇಕೆ, ಮತ್ತು ಈ ಸಂಬಂಧದಲ್ಲಿ ಯಾವ ಉತ್ತೇಜನವನ್ನು ಯೇಸು ಕೊಟ್ಟನು?
10 ಯೆಹೋವನ ನೂತನ ವ್ಯವಸ್ಥೆಯಲ್ಲಿ ಜೀವಿಸಲು ನಿರೀಕ್ಷಿಸುವವರೆಲ್ಲರು “ಕೆಡುಕನ ವಶದಲ್ಲಿ ಬಿದ್ದಿರುವ” ಅಂದರೆ ಪಿಶಾಚನಾದ ಸೈತಾನನ ಅಧಿಕಾರದ ಕೆಳಗಿರುವ ಲೋಕದೊಂದಿಗೆ ಹೋರಾಡಲೇಬೇಕು. (1 ಯೋಹಾನ 5:19) ಹೀಗಿರಲಾಗಿ ಯೋಹಾನ 15:17-19ರ ಯೇಸುವಿನ ಮಾತುಗಳು ಎಷ್ಟು ಪ್ರೋತ್ಸಾಹನೀಯವು! ಆತನು ಘೋಷಿಸುವುದು: “ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂತಲೇ ಇವುಗಳನ್ನು ನಿಮಗೆ ಆಜ್ಞಾಪಿಸುತ್ತೇನೆ. ಲೋಕವು ನಿಮ್ಮ ಮೇಲೆ ದ್ವೇಷ ಮಾಡುವುದಾದರೆ ಅದು ಮೊದಲು ನನ್ನ ಮೇಲೆ ದ್ವೇಷಮಾಡಿತೆಂದು ತಿಳಿದುಕೊಳ್ಳಿರಿ. ನೀವು ಲೋಕದ ಕಡೆಯವರಾಗಿರುತ್ತಿದ್ದರೆ ಲೋಕವು ನಿಮ್ಮ ಮೇಲೆ ತನ್ನವರೆಂದು ಮಮತೆ ಇಡುತ್ತಿತ್ತು. ಆದರೆ ನೀವು ಲೋಕದ ಕಡೆಯವರಲ್ಲದೆ ಇರುವುದರಿಂದಲೂ ನಾನು ನಿಮ್ಮನ್ನು ಲೋಕದೊಳಗಿಂದ ಆರಿಸಿ ತೆಗೆದುಕೊಂಡಿರುವುದರಿಂದಲೂ ಲೋಕವು ನಿಮ್ಮ ಮೇಲೆ ದ್ವೇಷ ಮಾಡುತ್ತದೆ.” ಈ 1992 ರ ವರ್ಷದ ತನಕವೂ ನಿಜ ಕ್ರೈಸ್ತರು ದ್ವೇಷಿಸಲ್ಪಟ್ಟಿದ್ದಾರೆ. ಮತ್ತು ಯಾರು ಯೆಹೋವನ ತ್ರಾಣವುಳ್ಳ ಹಸ್ತಗಳ ಕೆಳಗೆ ದೀನತೆಯಿಂದ ಬಲವನ್ನು ಪಡೆಯುತ್ತಾ, ದೃಢರಾಗಿ ನಿಂತಿರುತ್ತಾರೋ ಅವರ ಉತ್ತಮ ಮಾದರಿಯಲ್ಲಿ ನಾವೆಷ್ಟು ಉಲ್ಲಾಸ ಪಡೆಯುತ್ತೇವೆ! (1 ಪೇತ್ರ 5:6-10) ಮುಂದಿನ ಹೃದಯಪ್ರೇರಕ ಮಾತುಗಳಿಂದ ತನ್ನ ಚರ್ಚೆಯನ್ನು ಕೊನೆಗೊಳಿಸುವ ಯೇಸುವಿನಲ್ಲಿ ನಂಬಿಕೆಯನ್ನಿಡುವ ಮೂಲಕ, ನಾವೆಲ್ಲರೂ ಸಂಕಷ್ಟಗಳನ್ನು ತಾಳಿಕೊಳ್ಳಬಲ್ಲೆವು: “ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ.”—ಯೋಹಾನ 16:33.
ಒಂದು ಹೊಸ ಒಡಂಬಡಿಕೆಯನ್ನು ಪರಿಚಯಿಸುವುದು
11. ಒಂದು ಹೊಸ ಒಡಂಬಡಿಕೆಯ ಕುರಿತು ಯೆರೆಮೀಯನು ಏನನ್ನು ಪ್ರವಾದಿಸಿದ್ದನು?
11 ಆ ಸಂಜೆಯಲ್ಲಿ, ಪಸ್ಕದಾಚರಣೆಯು ಮುಕ್ತಾಯವಾದ ಮೇಲೆ, ಯೇಸು ಒಂದು ಹೊಸ ಒಡಂಬಡಿಕೆಯ ಕುರಿತು ಮಾತನಾಡುತ್ತಾನೆ. ಪ್ರವಾದಿ ಯೆರೆಮೀಯನು ಇದರ ಕುರಿತು ಶತಮಾನಗಳ ಮುಂಚೆ ಮುಂತಿಳಿಸುತ್ತಾ ಅಂದದ್ದು: “ಯೆಹೋವನು ಇಂತೆನ್ನುತ್ತಾನೆ—ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವುವು. . . . ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು. . . . ನಾನು ಅವರ ಅಪರಾಧಗಳನ್ನು ಕ್ಷಮಿಸಿ ಅವರ ಪಾಪಗಳನ್ನು ನನ್ನ ನೆನಪಿಗೆ ಎಂದಿಗೂ ತರುವುದಿಲ್ಲ” (ಯೆರೆಮೀಯ 31:31-34) ಸಾ.ಶ. 33ರ ನೈಸಾನ 14ರಂದು, ಈ ಹೊಸ ಒಡಂಬಡಿಕೆಯನ್ನು ಸ್ಥಿರೀಕರಿಸುವ ಒಂದು ಯಜ್ಞವು ಮಾಡಲ್ಪಡಲಿಕ್ಕಿತ್ತು.
12. ಹೊಸ ಒಡಂಬಡಿಕೆಯನ್ನು ಯೇಸು ಸ್ಥಾಪಿಸಿದ್ದು ಹೇಗೆ ಮತ್ತು ಅದು ಏನನ್ನು ಪೂರೈಸಿತು?
12 ಈ ಪಸ್ಕದೂಟವನ್ನು ಅವರೊಂದಿಗೆ ಮಾಡುವುದಕ್ಕೆ ತಾನು ಬಹಳವಾಗಿ ಅಪೇಕ್ಷಿಸಿದ್ದನೆಂದು ಯೇಸು 11 ಮಂದಿ ನಂಬಿಗಸ್ತ ಅಪೊಸ್ತಲರಿಗೆ ಹೇಳುತ್ತಾನೆ. ಬಳಿಕ ಆತನು ರೊಟ್ಟಿಯನ್ನು ತೆಗೆದುಕೊಂಡು, ದೇವರ ಸ್ತೋತ್ರ ಮಾಡಿ, ಮುರಿದು, ಅವರಿಗೆ ಕೊಡುತ್ತಾ ಅಂದದ್ದು: “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡಿರಿ.” ಇದೇ ರೀತಿಯಲ್ಲಿ ಅವನು ಕೆಂಪು ದ್ರಾಕ್ಷಾಮದ್ಯದ ಪಾತ್ರೆಯನ್ನು ಸಹಾ ಅವರಿಗೆ ದಾಟಿಸುತ್ತಾ, ಅಂದದ್ದು: “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.” (ಲೂಕ 22:15, 19, 20) ಆ ಹೊಸ ಒಡಂಬಡಿಕೆಯು, ಇಸ್ರಾಯೇಲ್ಯರ ನಿಯಮದೊಡಂಬಡಿಕೆಯನ್ನು ಸ್ಥಿರೀಕರಿಸುವುದರಲ್ಲಿ ಚಿಮುಕಿಸಲಾದ ಪಶು ರಕ್ತಕ್ಕಿಂತ ಎಪ್ಟೋ ಹೆಚ್ಚು ಮೂಲ್ಯವಾದ ಯೇಸುವಿನ “ಅಮೂಲ್ಯವಾದ ರಕ್ತ” ದಿಂದಲೇ ಕಾರ್ಯಸಾಧಕವಾಗಿ ಮಾಡಲ್ಪಟ್ಟಿತು. (1 ಪೇತ್ರ 1:19; ಇಬ್ರಿಯ 9:13, 14) ಹೊಸ ಒಡಂಬಡಿಕೆಯೊಳಗೆ ತಕ್ಕೊಳ್ಳಲ್ಪಟ್ಟವರು ಪಾಪಗಳ ಸಂಪೂರ್ಣ ಕ್ಷಮೆಯನ್ನು ಅನುಭವಿಸುತ್ತಾರೆ. ಆದಕಾರಣ, ಆತ್ಮಿಕ ಇಸ್ರಾಯೇಲಾಗಿ ಒಂದು ನಿತ್ಯವಾದ ಬಾಧ್ಯತೆಯನ್ನು ಪಡೆಯುವ 1,44,000 ಮಂದಿಯಲ್ಲಿ ಒಬ್ಬರಾಗುವುದಕ್ಕೆ ಅವರು ಯೋಗ್ಯತೆಯನ್ನು ಪಡೆಯಬಹುದು.—ಗಲಾತ್ಯ 6:16; ಇಬ್ರಿಯ 9:15-18; 13:20; ಪ್ರಕಟನೆ 14:1.
“ನನ್ನನ್ನು ನೆನಸಿಕೊಳ್ಳುವುದಕ್ಕೋಸ್ಕರ”
13. (ಎ) ಜ್ಞಾಪಕದ ಸಮಯದಲ್ಲಿ ನಾವು ಯಾವುದರ ಕುರಿತು ಧ್ಯಾನಿಸತಕ್ಕದ್ದು? (ಬಿ) ಯಾರು ಮಾತ್ರವೇ ಕುರುಹುಗಳಲ್ಲಿ ಪಾಲಿಗರಾಗಬೇಕು ಮತ್ತು ಏಕೆ?
13 ಯೇಸುವಿನ ಮರಣದ 1,960 ನೆಯ ವಾರ್ಷಿಕ ಜ್ಞಾಪಕ ದಿನವು ಏಪ್ರಿಲ್ 17, 1992 ಕ್ಕೆ ಬೀಳುತ್ತದೆ. ಆ ತಾರೀಕು ಹತ್ತರಿಸುತ್ತಾ ಬರುವಾಗ, ಯೇಸುವಿನ ಪರಿಪೂರ್ಣ ಯಜ್ಞವು ಪೂರೈಸುವ ಎಲ್ಲವುಗಳನ್ನು ನಾವು ನಮ್ಮ ಧ್ಯಾನಕ್ಕೆ ತರುವುದು ನಮಗೊಳ್ಳೆಯದು. ಈ ಏರ್ಪಾಡು ಯೆಹೋವನ ವಿವೇಕವನ್ನು ಮತ್ತು ಮಾನವ ಕುಲಕ್ಕಾಗಿ ಆತನಿಗಿರುವ ಆಳವಾದ ಪ್ರೀತಿಯನ್ನು ಮಹಿಮೆ ಪಡಿಸುತ್ತದೆ. ಯಾತನಾಮಯ ಮರಣವನ್ನು ಅನುಭವಿಸಬೇಕಾಗಿದ್ದರೂ, ಯೇಸುವಿನ ದೋಷರಹಿತ ಸಮಗ್ರತೆಯು, ದೇವರ ಮನುಷ್ಯ ಸೃಷ್ಟಿಯು ದೋಷಯುಕ್ತವಾಗಿದೆ ಮತ್ತು ಪರೀಕ್ಷೆಯ ಕೆಳಗೆ ಬಿದ್ದುಹೋಗುವಂಥಾದ್ದು ಎಂಬ ಸೈತಾನನ ಮೂದಲಿಸುವಿಕೆಯ ವಿರುದ್ಧ ಯೆಹೋವನ ನಿರ್ದೋಷೀಕರಣವನ್ನು ಮಾಡುತ್ತದೆ. (ಯೋಬ 1:8-11; ಜ್ಞಾನೋಕ್ತಿ 27:11) “ದೇವರಾದುಕೊಂಡ ಜನಾಂಗ, ರಾಜವಂಶಸ್ಥರಾದ ಯಾಜಕರು, ದೇವರ ಸಕ್ವೀಯ ಪ್ರಜೆಯೂ” ಆಗುವುದಕ್ಕೆ ಆರಿಸಿಕೊಳ್ಳುವ ಯೆಹೋವನ ಸಾಧನವಾದ ಈ ಹೊಸ ಒಡಂಬಡಿಕೆಯನ್ನು ಯೇಸು ತನ್ನ ರಕ್ತದ ಮೂಲಕ ಮಧ್ಯಸಿಕ್ಥೆ ಮಾಡುತ್ತಾನೆ. ಭೂಮಿಯಲ್ಲಿ ಇನ್ನೂ ಇರುವಾಗಲೇ, ಅವರು ‘ತಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತ’ನಾದ ಯೆಹೋವ ದೇವರ “ಗುಣಾತಿಶಯಗಳನ್ನು ಪ್ರಚಾರ” ಮಾಡುತ್ತಾರೆ. (1 ಪೇತ್ರ 2:9; ವಿಮೋಚನಕಾಂಡ 19:5, 6ಕ್ಕೆ ಹೋಲಿಸಿ.) ಯೋಗ್ಯವಾಗಿಯೇ, ಅವರು ಮಾತ್ರವೇ ಪ್ರತಿ ವರ್ಷ ಜ್ಞಾಪಕ ಕುರುಹುಗಳಲ್ಲಿ ಪಾಲಿಗರಾಗುತ್ತಾರೆ.
14. ಲಕ್ಷಾಂತರ ಮಂದಿ ಪ್ರೇಕ್ಷಕರು ಸಂಪದ್ಯುಕ್ತರಾಗುವುದು ಹೇಗೆ?
14 ಕಳೆದ ವರ್ಷದ ಜ್ಞಾಪಕಾಚರಣೆಯಲ್ಲಿ, ಭೂಸುತ್ತಲೂ 1,06,50,158 ಜನರು ಹಾಜರಿದ್ದರು ಆದರೆ ಅವರಲ್ಲಿ ಕೇವಲ 8,850 ಮಂದಿ—1 ಪ್ರತಿಶತದ ಹತ್ತನೆಯ ಒಂದಂಶಕ್ಕಿಂತಲೂ ಕಡಿಮೆ—ಕುರುಹುಗಳಲ್ಲಿ ಪಾಲಿಗರಾದರು. ಹೀಗಿರಲಾಗಿ, ಲಕ್ಷಾಂತರ ಪ್ರೇಕ್ಷಕರಿಗೆ ಈ ಆಚರಣೆಯ ಪ್ರಯೋಜನವಾದರೂ ಏನು? ಮಹಾ ಪ್ರಯೋಜನ ಅದರಲ್ಲಿದೆ! ಇವರು ಪಾಲಿಗರಾಗದಿದ್ದರೂ, ಯೆಹೋವನು ತನ್ನ ಮಗನ ಯಜ್ಞಾರ್ಪಣೆಯ ಮೂಲಕ ಪೂರೈಸುವ ಆಶ್ಚರ್ಯಕರ ವಿಷಯಗಳೆಲ್ಲವನ್ನು ಕೇಳುವಾಗ, ಈ ಮಹಾ ಭೌಗೋಲಿಕ ಬಾಂಧವ್ಯದ ಸಹವಾಸದಿಂದಾಗಿ ಅವರು ಆತ್ಮಿಕವಾಗಿ ಸಂಪದ್ಯುಕ್ತರಾಗುತ್ತಾರೆ.
15. ಅಭಿಷಿಕ್ತರಲದ್ಲಿರುವ ಬೇರೆಯವರು ಯೇಸುವಿನ ಯಜ್ಞದಿಂದ ಹೇಗೆ ಪ್ರಯೋಜನ ಪಡೆಯುತ್ತಾರೆ?
15 ಅದಲ್ಲದೆ, 1 ಯೋಹಾನ 2:1, 2 ರಲ್ಲಿ ಅಪೊಸ್ತಲನು ನಮಗೆ ತಿಳಿಸುವುದು: “ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ. ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಒಂದು ಪ್ರಾಯಶ್ಚಿತ್ತ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣ ಮಾಡುತ್ತಾನೆ.” ಹೌದು, ಯೇಸುವಿನ ಯಜ್ಞವು, ಪ್ರಥಮವಾಗಿ, ಹೊಸ ಒಡಂಬಡಿಕೆಯೊಳಗೆ ತಕ್ಕೊಳ್ಳಲ್ಪಟ್ಟ ಯೋಹಾನ ವರ್ಗಕ್ಕೆ ಪ್ರಯೋಜನಕರವಾಗಿದೆಯಾದರೂ, “ಸಮಸ್ತ ಲೋಕದ” ಪಾಪಗಳ ಕ್ಷಮೆಗಾಗಿಯೂ ಒದಗಿಸುವಿಕೆಯನ್ನು ಮಾಡುತ್ತದೆ. ಯಾವುದು ಪರದೈಸ ಭೂಮಿಯಲ್ಲಿ ನಿತ್ಯ ಜೀವದ ಸಂತೋಷದ ಪ್ರತೀಕ್ಷೆಯನ್ನು ಅವರಿಗಾಗಿ ತೆರೆಯುತ್ತದೋ, ಆ ಯೇಸು ಕ್ರಿಸ್ತನ ಸುರಿದ ರಕ್ತದಲ್ಲಿ ನಂಬಿಕೆ ಇಡುವ ಮಾನವ ಕುಲದ ಲೋಕದ ಬೇರೆ ಎಲ್ಲರ ಪಾಪಗಳಿಗಾಗಿಯೂ ಅದು “ಒಂದು ಪ್ರಾಯಶ್ಚಿತ್ತ ಯಜ್ಞವಾಗಿದೆ.”—ಮತ್ತಾಯ 20:28.
“ನನ್ನ ತಂದೆಯ ರಾಜ್ಯದಲ್ಲಿ”
16. (ಎ) ಯೇಸು ಮತ್ತು ಆತನ ಸಹಭಾದ್ಯರು ಈಗ ಯಾವುದರಲ್ಲಿ ಪಾಲುಗಾರರಾಗುವಂತೆ ಕಾಣುತ್ತಾರೆ? (ಬಿ) ಅಭಿಷಿಕ್ತ ಉಳಿಕೆಯವರಿಂದ ಮತ್ತು ಮಹಾ ಸಮೂಹದವರಿಂದ ಇಬ್ಬರಿಂದಲೂ ಇಂದು ಏನು ಅಪೇಕ್ಷಿಸಲ್ಪಡುತ್ತದೆ?
16 ತನ್ನ ಅಪೊಸ್ತಲರನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತಾ, ಒಂದು ಸಾಂಕೇತಿಕ ರೀತಿಯಲ್ಲಿ ದ್ರಾಕ್ಷಾಮದ್ಯವನ್ನು ತನ್ನ ಶಿಷ್ಯರ ಸಂಗಡ ತಂದೆಯ ರಾಜ್ಯದಲ್ಲಿ ಹೊಸದಾಗಿ ಕುಡಿಯುವ ದಿನಕ್ಕೆ ಆತನು ಸೂಚಿಸುತ್ತಾನೆ. (ಮತ್ತಾಯ 26:29) ಆತನು ಅವರಿಗೆ ಹೇಳುವುದು: “ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು. ಆದದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿದ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ. ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ; ಮತ್ತು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳವರಿಗೆ ನ್ಯಾಯ ತೀರಿಸುವಿರಿ.” (ಲೂಕ 22:28-30) ಯೇಸು 1914 ರಲ್ಲಿ ರಾಜ್ಯಾಧಿಕಾರವನ್ನು ಪಡೆದಂದಿನಿಂದ, ಶತಮಾನಗಳಿಂದ ಒಟ್ಟುಗೂಡಿಸಲ್ಪಟ್ಟ ಕ್ರಿಸ್ತನ ಸಹಭಾದ್ಯರಲ್ಲಿ ಅಧಿಕ ಸಂಖ್ಯಾತರು, ಅವನೊಂದಿಗೆ “ಸಿಂಹಾಸನಗಳ ಮೇಲೆ ಕೂತುಕೊಳ್ಳಲು” ಆವಾಗಲೇ ಪುನರುತ್ಥಾನ ಪಡೆದಿರುವರೆಂದು ನಾವು ತೀರ್ಮಾನಿಸಬಹುದು. (1 ಥೆಸಲೋನಿಕ 4:15, 16) “ಮಹಾ ಸಂಕಟ”ದ “ಚತುರ್ದಿಕ್ಕುಗಳ ಗಾಳಿಗಳನ್ನು” ದೇವದೂತರು ಬಿಟ್ಟುಬಿಡುವ ಆ ದಿನವು ತೀವ್ರವಾಗಿ ಗೋಚರಿಸುತ್ತಿದೆ! ಅಷ್ಟರೊಳಗೆ, 1,44,000 ಆತ್ಮಿಕ ಇಸ್ರಾಯೇಲ್ಯರ ಮುದ್ರೆ ಒತ್ತಿಸುಏಕೆಯು ಮತ್ತು ಮಹಾ ಸಮೂಹದವರಾದ ಲಕ್ಷಾಂತರ ಜನರ ಒಟ್ಟುಗೂಡಿಸುವಿಕೆಯು ಮುಗಿದಿರುವುದು. ನಿತ್ಯ ಜೀವದ ಬಹುಮಾನವನ್ನು ಪಡೆಯುವುದಕ್ಕಾಗಿ ಇವರೆಲ್ಲರೂ, ಯೇಸುವಿನಂತೆ, ಸಮಗ್ರತೆಯನ್ನು ಕಾಪಾಡಬೇಕು.—ಪ್ರಕಟನೆ 2:10; 7:1-4, 9.
17. ಮತ್ತು ಚೌಕಟ್ಟು. (ಎ) ಅಭಿಷಿಕ್ತನೊಬ್ಬನು ಕರ್ತವ್ಯಭ್ರಷನ್ಟಾಗಿ ತಿರಸ್ಕರಿಸಲ್ಪಟ್ಟಲ್ಲಿ, ಅವನ ಸ್ಧಾನದಲ್ಲಿ ಯಾರು ನ್ಯಾಯಸಮ್ಮತವಾಗಿ ಭರ್ತಿಯಾಗುವನು? (ಬಿ) ಭೂಮಿಯಲ್ಲಿ ದೇವಪ್ರಭುತ್ವ ಸಂಸ್ಥೆಯ ಕಟ್ಟುವಿಕೆ ಮತ್ತು ತದನಂತರ ಅದರ ವೃದ್ಧಿಯ ಮೇಲೆ ಯಾವ ರಸಕರವಾದ ಬೆಳಕನ್ನು ವಾಚ್‌ಟವರ್ ಲೇಖನಗಳು 1938ರಿಂದ ಹಾಕಿವೆ?
17 ಒಂದುವೇಳೆ ಕೆಲವು ಅಭಿಷಿಕ್ತರು ಸಮಗ್ರತೆ ಪಾಲಕರಾಗಲು ತಪ್ಪಿದರೆ ಆಗೇನು? ಈ ಕಡೇ ಗಳಿಗೆಯಲ್ಲಿ ಅಂಥ ಕರ್ತವ್ಯಭ್ರಷ್ಟರ ಸಂಖ್ಯೆಯು ನಿಸ್ಸಂದೇಹವಾಗಿ ಕೊಂಚವಿರುವುದು. ಅಂಥ ಯಾವುದೇ ಸ್ಥಾನಕ್ಕೆ ಭರ್ತಿ ತರುವಿಕೆಯು ಹೊಸತಾಗಿ ದೀಕ್ಷಾಸಾನ ಪಡೆದವರಿಂದ ಅಲ್ಲ, ಬದಲಿಗೆ ಯಾರು ಅನೇಕ ವರ್ಷಗಳ ನಂಬಿಗಸ್ತ ಸೇವೆಯಿಂದಾಗಿ ಯೇಸುವಿನೊಂದಿಗೆ ಅವನ ಕಷ್ಟಗಳಲ್ಲಿ ಅಂಟಿಕೊಂಡಿರುವರೋ ಅಂಥವರಿಂದ ಬರುವುದೆಂಬದು ನ್ಯಾಯಸಮ್ಮತವು. ವಾಚ್‌ಟವರ್‌ನ ಮೂಲಕ 1920 ರ ಮತ್ತು 1930 ರ ವರ್ಷಗಳಲ್ಲಿ ಪ್ರಕಟವಾದ ಆತ್ಮಿಕ ಬೆಳಕಿನ ತೇಜೋಮಯ ಹೊಳಪುಗಳು ಅಭಿಷಿಕ್ತ ಉಳಿಕೆಯವರ ಒಟ್ಟುಗೂಡಿಸುವಿಕೆಯು ಆ ಸಮಯದಲ್ಲಿ ಕಾರ್ಯತಃ ಸಮಾಪ್ತಿಯಾಗಿತ್ತೆಂದು ಸೂಚಿಸುತ್ತದೆ. ಯಾರು ‘ಕುರಿಮರಿಯ ರಕ್ತದಿಂದ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರ ಮಾಡುತ್ತಾರೋ’ ಅವರಿಗೆ ಅಂದಿನಿಂದ ಒಂದು ಬೇರೆಯಾದ ಹರ್ಷಕರ ನಿರೀಕ್ಷೆಯು ಇದೆ. ಕ್ರಿಸ್ತನ ಮೂಲಕ ಯೆಹೋವನ ಆತ್ಮವು ಅವರನ್ನು ಪರದೈಸ ಭೂಮಿಯಲ್ಲಿ “ಜೀವಜಲದ ಒರತೆಗಳ ಬಳಿಗೆ” ನಡಿಸುವುದು.—ಪ್ರಕಟನೆ 7:10, 14, 17.
ಒಂದು ಅತಿ ಅತ್ಯಾಸಕ್ತಿಯ ಪ್ರಾರ್ಥನೆ
18. ಯೋಹಾನ 17ನೆಯ ಅಧ್ಯಾಯದ ಯೇಸುವಿನ ಪ್ರಾರ್ಥನೆಯಿಂದ ಯಾವ ಪ್ರಬಲವಾದ ಪಾಠಗಳನ್ನು ನಾವು ಕಲಿಯುತ್ತೇವೆ?
18 ಯೇಸು ತನ್ನ ಶಿಷ್ಯರೊಂದಿಗಿನ ತನ್ನ ಜ್ಞಾಪಕಾಚರಣೆಯ ಕೂಟವನ್ನು ಯೋಹಾನ 17:1-26 ರಲ್ಲಿ ದಾಖಲೆಯಾದ ಒಂದು ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯಿಂದ ಕೊನೆಗೊಳಿಸುತ್ತಾನೆ. ತಾನು ಕೊನೆಯ ವರೆಗೆ ಸಮಗ್ರತೆಯನ್ನು ಕಾಪಾಡಿಕೊಳ್ಳುವಾಗ ತಂದೆಯು ಅವನನ್ನು ಮಹಿಮೆ ಪಡಿಸುವಂತೆ ಅವನು ಮೊದಲಾಗಿ ಬೇಡುತ್ತಾನೆ. ಈ ರೀತಿಯಲ್ಲಿ ಯೆಹೋವನು ಸಹಾ ಮಹಿಮೆಪಡಿಸಲ್ಪಡುವನು, ಅವನ ನಾಮವು ಪವಿತ್ರ ಮಾಡಲ್ಪಡುವುದು—ಎಲ್ಲಾ ನಿಂದೆಯಿಂದ ಮುಕ್ತವಾಗುವುದು. ಯಾಕಂದರೆ ನಿಶ್ಚಯವಾಗಿಯೂ, ಅತ್ಯಂತ ತೀಕ ಪರೀಕ್ಷೆಯ ಕೆಳಗೆ ಸಹ ದೇವರ ಮಾನವ ಸೃಷ್ಟಿಯು ನಿರ್ದೋಷಿಯಾಗಿ ಉಳಿಯಶಕ್ತವಾಗಿದೆ ಎಂಬದನ್ನು ಪರಿಪೂರ್ಣ ಮನುಷ್ಯ ಯೇಸುವು ರುಜುಪಡಿಸಿ ತೋರಿಸಿದನು. (ಧರ್ಮೋಪದೇಶಕಾಂಡ 32:4, 5; ಇಬ್ರಿಯ 4:15) ಅಷ್ಟಲ್ಲದೆ, ಯೇಸುವಿನ ಯಜ್ಞಾರ್ಪಣೆಯ ಮರಣವು ಆದಾಮನ ಸಂತತಿಗೆ ಒಂದು ಮಹಾ ಸಂದರ್ಭವನ್ನು ತೆರೆಯುತ್ತದೆ. ಯೇಸು ಅನ್ನುವುದು: “ಒಬ್ಬನೇ ಸತ್ಯದೇವರಾದ ನಿನ್ನ ಮತ್ತು ನೀನು ಕಳುಹಿಸಿದ ಯೇಸು ಕ್ರಿಸ್ತನ ಜ್ಞಾನವನ್ನು ಪಡೆಯುವುದೇ ನಿತ್ಯಜೀವವು.” ಯೆಹೋವ ದೇವರ ಕುರಿತಾದ ಮತ್ತು ಯೆಹೋವ ದೇವರ ನಿರ್ದೋಷೀಕರಣಕ್ಕಾಗಿ ಮತ್ತು ಮಾನವ ಕುಲದ ರಕ್ಷಣೆಗಾಗಿ ತನ್ನ ಜೀವವನ್ನು ಕೊಟ್ಟ ದೇವರ ಕುರಿಮರಿಯಾದ ಆತನ ಪುತ್ರನ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆಯುವುದು ಅದೆಷ್ಟು ಅತ್ಯಾವಶ್ಯಕವು! (ಯೋಹಾನ 1:29; 1 ಪೇತ್ರ 2:22-25) ನಿಮ್ಮೆಲ್ಲವನ್ನು ಯೆಹೋವನಿಗಾಗಿ ಮತ್ತು ಆತನ ಅಮೂಲ್ಯ ಸೇವೆಗಾಗಿ ಸಮರ್ಪಿಸುವಷ್ಟರ ಮಟ್ಟಿಗೆ ನೀವು ಆ ಅತ್ಯಂತ ಪ್ರೀತಿಯುಕ್ತ ಯಜ್ಞವನ್ನು ಗಣ್ಯಮಾಡುತ್ತೀರೋ?
19. ಉಳಿಕೆಯವರು ಮತ್ತು ಮಹಾ ಸಮೂಹದವರು ಅಮೂಲ್ಯ ಐಕ್ಯತೆಯನ್ನು ಹೇಗೆ ಆನಂದಿಸಬಹುದು?
19 ಅದಲ್ಲದೆ, ತನ್ನ ಶಿಷ್ಯರು ಲೋಕದ ಭಾಗವಾಗಿ ಇರದಂತೆ, ದೇವರ ವಾಕ್ಯವನ್ನು ಸತ್ಯವೆಂದು ಪಾಲಿಸುವಂತೆ ಮತ್ತು ತಂದೆ ಮತ್ತು ಮಗನೊಂದಿಗೆ ಅಮೂಲ್ಯವಾದ ಐಕ್ಯತೆಯನ್ನು ಕಾಪಾಡಿಕೊಳ್ಳುವಂತೆ ಅವರನ್ನು ಕಾಯಬೇಕೆಂದು ತನ್ನ ಪವಿತ್ರ ತಂದೆಗೆ ಯೇಸು ಪ್ರಾರ್ಥಿಸುತ್ತಾನೆ. ಲೋಕದ ಕಡೆಗೆ, ಅದರ ಹಿಂಸಾಚಾರದ ಕಡೆಗೆ ಮತ್ತು ಅದರ ದುಷ್ಟತನದ ಕಡೆಗೆ ತಾಟಸ್ಥ್ಯವನ್ನು ತೋರಿಸುವ ಅದೇ ಸಮಯದಲ್ಲಿ, ಅಭಿಷಿಕ್ತ ಉಳಿಕೆಯವರು ಮತ್ತು ಮಹಾ ಸಮೂಹದವರು ಪ್ರೀತಿಯ ಬಂಧಗಳಲ್ಲಿ ಐಕಮತ್ಯದಿಂದ ಒಟ್ಟಾಗಿ ಸೇವೆ ಸಲ್ಲಿಸುತ್ತಿರುವಾಗ ಆ ಪ್ರಾರ್ಥನೆಯು, ಈ ಪ್ರಚಲಿತ ದಿನದ ತನಕವೂ ಆಶ್ಚರ್ಯಕರವಾಗಿ ಉತ್ತರಿಸಲ್ಪಟ್ಟಿದೆ ಎಂದು ಕಾಣುವುದಿಲ್ಲವೇ? ಆತನ ತಂದೆಗೆ ಯೇಸುವಿನ ಸಮಾಪ್ತಿಯ ಮಾತುಗಳು ಅದೆಷ್ಟು ಮೂಲ್ಯವಾದವುಗಳು! “ನಾನು ಅವರಿಗೆ ನಿನ್ನ ಹೆಸರನ್ನು ತಿಳಿಸಿದ್ದೇನೆ, ಇನ್ನೂ ತಿಳಿಸುವೆನು,” ಎಂದನು ಯೇಸು, ಯಾಕಂದರೆ “ನೀನು ನನ್ನ ಮೇಲೆ ಇಟ್ಟಿರುವ ಪ್ರೀತಿಯು ಅವರಲ್ಲಿ ಇರಬೇಕೆಂದೂ ಮತ್ತು ನಾನೂ ಅವರಲ್ಲಿ ಇರಬೇಕೆಂದೇ.”—ಯೋಹಾನ 17:14, 16, 26.
20. ಸಾ.ಶ. 33 ರ ನೈಸಾನ್ 14, ನಿಶ್ಚಯವಾಗಿಯೂ ನೆನಪಿಸಿಕೊಳ್ಳುವ ಆ ದಿನವಾಗಿದೆ ಏಕೆ?
20 ಗೆತ್ಸೇಮನೆ ತೋಟಕ್ಕೆ ಹೋದ ಮೇಲೆ ಯೇಸು ತನ್ನ ಶಿಷ್ಯರೊಂದಿಗೆ ಇನ್ನೊಂದು ಸಂಕ್ಷಿಪ್ತ, ಬಲವರ್ಧಕ ಸಹವಾಸವನ್ನು ಮಾಡುತ್ತಾನೆ. ಅನಂತರ ಶತ್ರುಗಳು ಅವನ ಮೇಲೆ ಬೀಳುತ್ತಾರೆ! ಯೇಸುವಿನ ಶಾರೀರಿಕ ಯಾತನೆಗಳನ್ನು, ಯೆಹೋವನ ಮೇಲೆ ಹೊರಿಸಲ್ಪಟ್ಟ ನಿಂದೆಗಾಗಿ ಹೃದಯಬಿರಿಯುವ ದುಃಖ ಮತ್ತು ಅವೆಲ್ಲಾದರ ಮಧ್ಯೆ ಆತನ ಆದರ್ಶ ಸಮಗ್ರತೆ ಅವನ್ನು ವಿವರಿಸಲು ಮಾತುಗಳು ಸಾಲವು. ರಾತ್ರಿಯಿಡೀ ಮತ್ತು ಆ ದಿನದ ಹಗಲು ಹೊತ್ತಿನ ಹೆಚ್ಚಿನ ತಾಸುಗಳಲ್ಲಿ, ಯೇಸು ಕೊನೆಯ ತನಕ ತಾಳಿಕೊಳ್ಳುತ್ತಾನೆ. ತನ್ನ ರಾಜ್ಯವು ಈ ಲೋಕದ್ದಲ್ಲವೆಂದು ಅವನು ಸ್ವಷ್ಟವಾಗಿ ಪ್ರದರ್ಶಿಸುತ್ತಾನೆ. ಮತ್ತು ತನ್ನ ಕೊನೆಯುಸುರಿನಲ್ಲಿ ಅವನು ಕೂಗುವುದು: “ತೀರಿತು!” (ಯೋಹಾನ 18:36, 37; 19:30) ಆತನ ಲೋಕ ವಿಜಯವು ಸಂಪೂರ್ಣ. ಸಾ.ಶ. 33 ರ ನೈಸಾನ್ 14, ನೆನಪಿಸಿಕೊಳ್ಳುವ ಆ ದಿನವಾಗಿದೆ ನಿಶ್ಚಯ! (w92 3/1)
[ಅಧ್ಯಯನ ಪ್ರಶ್ನೆಗಳು]
a ಯೂರೋಪಿನಲ್ಲಿ ವಿಜಯ ದಿನ ಮತ್ತು ಜಾಪಾನಿನ ಮೇಲೆ ವಿಜಯ ದಿನ.
ನೀವು ಹೇಗೆ ಉತ್ತರಿಸುವಿರಿ?
▫ ದೀನತೆ ಮತ್ತು ಪ್ರೀತಿಯ ಕುರಿತು ಯೇಸು ಏನು ಕಲಿಸಿದನು?
▫ ಯೇಸು “ಮಾರ್ಗವೂ ಸತ್ಯವೂ ಜೀವವೂ” ಆದದ್ದು ಹೇಗೆ?
▫ ಹೊಸ ಒಡಂಬಡಿಕೆಯ ಉದ್ದೇಶವು ಏನು?
▫ ಅಭಿಷಿಕ್ತ ಉಳಿಕೆಯವರು ಮತ್ತು ಮಹಾ ಸಮೂಹದವರು ಯಾವ ಐಕ್ಯತೆ ಮತ್ತು ಪ್ರೀತಿಯಲ್ಲಿ ಪಾಲಿಗರಾಗಿದ್ದಾರೆ?
[ಪುಟ 20 ರಲ್ಲಿರುವ ಚೌಕ]
ಮಹಾ ಸೊಲೊಮೋನನ ಜ್ಞಾನ
ಜೂನ್ 1 ಮತ್ತು ಜೂನ್ 15, 1938ರ ವಾಚ್‌ಟವರ್ ಸಂಚಿಕೆಗಳ “ಸಂಸ್ಥೆ” ಎಂಬ ಶೀರ್ಷಿಕೆಯ ಲೇಖನಗಳು ಯೆಹೋವನ ಸಾಕ್ಷಿಗಳು ಈ ದಿನದ ತನಕವೂ ಪಾಲಿಸುವ ಮೂಲಭೂತ ದೇವಪ್ರಭುತ್ವ ಏರ್ಪಾಡನ್ನು ಸ್ಥಾಪಿಸಿದ್ದವು. ಅವು 1919 ರಲ್ಲಿ ಪ್ರಾರಂಭಿಸಿದ ಬೋಧನೀಯ ಮತ್ತು ಸಂಘಟನಾ ಮರು ಅಳವಡಿಸುವಿಕೆಗಳ ಒಂದು ಕಾಲಾವಧಿಯ ಒಂದು ಗಮನಾರ್ಹ ಶಿಖರವನ್ನೇರಿದ್ದವು. (ಯೆಶಾಯ 60:17) ಆ 20 ವರ್ಷಗಳ ಕಾಲಾವಧಿಯನ್ನು, ಸೊಲೊಮೋನನು ಯೆರೂಸಲೇಮಿನಲ್ಲಿ ದೇವಾಲಯ ಮತ್ತು ಅರಮನೆಯನ್ನು ಕಟ್ಟಿಸಿದ 20 ವರ್ಷಗಳ ಅವಧಿಗೆ ಹೋಲಿಸುತ್ತಾ, ವಾಚ್‌ಟವರ್ ಹೇಳಿದ್ದು: “ಸೊಲೊಮೋನನ ಕಟ್ಟಡಕಟ್ಟುವ ಕಾರ್ಯಕ್ರಮದ 20 ವರ್ಷಗಳ ಅನಂತರ . . . ಅವನು ದೇಶವಿಡೀ ಕಟ್ಟುವ ಕಾರ್ಯಕ್ರಮವನ್ನು ಕೈಕೊಂಡನು. (1 ಅರ. 9:10, 17-23; 2 ಪೂರ್ವ. 8:1-10) ಅನಂತರ ಶೆಬಾ ದೇಶದ ರಾಣಿಯು ‘ಸೊಲೊಮೋನನ ಜ್ಞಾನವನ್ನು ತಿಳುಕೊಳ್ಳುವುದಕ್ಕೆ ಭೂಮಿಯ ಕಟ್ಟಕಡೆಯಿಂದ ಬಂದಳು.’ (ಮತ್ತಾ. 12:42; 1 ಅರ. 10:1-10; 2 ಪೂರ್ವ. 9:1-9, 12) ಇದು ಈ ಪ್ರಶ್ನೆಯನ್ನು ಸೂಚಿಸುತ್ತದೆ: ಭೂಮಿಯಲ್ಲಿರುವ ಯೆಹೋವನ ಜನರಿಗೆ ಭವಿಷ್ಯದಲ್ಲಿ ಬೇಗನೇ ಏನು ಮಾಡಲಿದೆ? ಪೂರ್ಣ ಭರವಸದೊಂದಿಗೆ ನಾವು ಕಾದು ನೋಡೋಣ.” ಆ ಭರವಸವು ಅನುಚಿತವಾಗಿರಲಿಲ್ಲ. ದೇವಪ್ರಭುತ್ವ ಸಂಸ್ಥೆಯ ಕೆಳಗೆ ಒಂದು ವಿಸ್ತಾರವಾದ ವಿಶ್ವ-ವ್ಯಾಪಕ ಆತ್ಮಿಕ ಕಟ್ಟುವ ಕಾರ್ಯಕ್ರಮವು ನಾಲ್ವತ್ತು ಲಕ್ಷಕ್ಕಿಂತಲೂ ಹೆಚ್ಚು ಮಹಾ ಸಮೂಹದವರನ್ನು ಒಟ್ಟುಗೂಡಿಸಿತು. ಶೆಬಾ ದೇಶದ ರಾಣಿಯಂತೆ, ಇವರು ಮಹಾ ಸೊಲೊಮೋನನಾದ ಕ್ರಿಸ್ತ ಯೇಸುವಿನ—“ನಂಬಿಗಸ್ತನೂ ವಿವೇಕಿಯೂ ಆದ ಆಳಿನ” ಮೂಲಕ ಪ್ರವಹಿಸಲ್ಪಡುವ ಜ್ಞಾನವನ್ನು ಕೇಳಲು ಭೂಮಿಯ ಕಟ್ಟಕಡೆಯಿಂದ ಬಂದಿರುತ್ತಾರೆ.—ಮತ್ತಾಯ 24:45-47.