ಅಂತರ್ರಾಷ್ಟ್ರೀಯ ಭದ್ರತೆಗಾಗಿ ಯೋಜನೆಗಳು ಯಶಸ್ವಿಯಾಗುವುವೋ?
“ಲೋಕವನ್ನು ನಾಲ್ವತ್ತಕ್ಕಿಂತಲೂ ಹೆಚ್ಚು ವರ್ಷಗಳಿಂದ ಬಿಗಿಹಿಡಿದಿದ್ದ ಶೀತಲ ಯುದ್ಧವು ದೇವರ ದಯೆಯಿಂದ ಅಂತ್ಯವಾದಂತೆ ಕಾಣುತ್ತದೆ” ಎನ್ನುತ್ತದೆ WCC (ವರ್ಲ್ಡ್ ಕೌನ್ಸಿಲ್ ಆಫ್ ಚರ್ಚಸ್) ಯ ಪತ್ರಿಕೆಯಾದ ವನ್ ವರ್ಲ್ಡ್. “ಮಧ್ಯ ಮತ್ತು ಪೂರ್ವ ಯೂರೋಪಿನಲ್ಲಿ ಗಮನಾರ್ಹ ಸಂಭವಗಳು . . . ಯೂರೋಪಿನಲ್ಲಿ ಮತ್ತು ಉಳಿದ ಲೋಕದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ಅನುಕೂಲಿಸುವಂತೆ ತೋರುತ್ತವೆ,” ಎಂದು WCC ಯ ಥಿಯೊಲಾಜಿಕಲ್ ಎಜ್ಯುಕೇಶನ್ ಕಾರ್ಯಕ್ರಮದ ಆ್ಯಂಗ್ಲಿಕನ್ ಲೇಖಕ ಜಾನ್ ಪೊಬೀ ಹೇಳಿದ್ದಾನೆ.
ಅಂತರ್ರಾಷ್ಟ್ರೀಯ ಭದ್ರತೆಗಾಗಿ ಮನುಷ್ಯ ಯೋಜನೆಯೊಂದಿಗೆ ದೇವರನ್ನು ಜತೆಗೂಡಿಸುವುದರಲ್ಲಿ WCC ಪ್ರತಿನಿಧಿಗಳು ಒಬ್ಬರೇ ಅಲ್ಲ. ಏಪ್ರಿಲ್ 1991ರಲ್ಲಿ, ಪರ್ಷಿಯನ್ ಕೊಲಿಯ್ಲ ಯುದ್ಧಾನಂತರ ತುಸು ಸಮಯದಲ್ಲಿ, ಪೋಪ್ ಜಾನ್ ಪೌಲರು ಸಂಯುಕ್ತ ರಾಷ್ಟ್ರ ಸಂಘದ ಆಗಿನ ಸೆಕ್ರಿಟರಿ-ಜನರಲ್ ಹವೀಯರ್ ಪೇರಸ್ ಡಕೇಯ್ವರ್ಗೆ ಕಳುಹಿಸಿದ ಒಂದು ಸಂದೇಶದಲ್ಲಿ ಹೇಳಿದ್ದು: “ಮಧ್ಯ ಪೂರ್ವ ಮತ್ತು ಪಶ್ಚಿಮದ ಕ್ಯಾಥ್ಲಿಕ್ ಚರ್ಚಿನ ಬಿಷಪರುಗಳಿಗೆ ಸಂಯುಕ್ತ ರಾಷ್ಟ್ರ ಸಂಘದ ಮೇಲೆ ಆತ್ಮವಿಶ್ವಾಸವಿದೆ. . . . ಸಂಯುಕ್ತ ರಾಷ್ಟ್ರ ಸಂಘದ ಮೂಲಕ ಮತ್ತು ಅದಕ್ಕೆ ಮೀಸಲಾದ ಸಂಘಟನೆಗಳ ಮೂಲಕ, ಯಾರನ್ನು ಇತ್ತೀಚಿಗಿನ ಯುದ್ಧವು ಅತ್ಯಾವಶ್ಯಕತೆಯ ಒಂದು ಸ್ಥಿತಿಗತಿಯಲ್ಲಿ ಹಾಕಿರುತ್ತದೋ ಅವರು ಅಂತರ್ರಾಷ್ಟ್ರೀಯ ಸಂವೇದನೆ ಮತ್ತು ಒಕ್ಕಟ್ಟನ್ನು ಕಾಣಲು ತಪ್ಪಲಾರರೆಂದು ಅವರು ನಿರೀಕ್ಷಿಸುತ್ತಾರೆ.”
ಅದಲ್ಲದೆ, 1975 ರ ಹೆಲ್ಸಿಂಕಿ ಒಪ್ಪಂದ ಮತ್ತು 1986 ರ ಸ್ಟಾಕ್ಹಾಮ್ ಪ್ರಮಾಣಪತ್ರವನ್ನು ಸೂತ್ರೀಕರಿಸಿದ ಮತ್ತು ಸಹಿಮಾಡಿದ 35 ರಾಷ್ಟ್ರಗಳಲ್ಲಿ ವ್ಯಾಟಿಕನ್ ಒಂದಾಗಿತ್ತು. ಸಂಯುಕ್ತ ರಾಷ್ಟ್ರ ಸಂಘವು 1986 ನ್ನು “ಅಂತರ್ರಾಷ್ಟ್ರೀಯ ಶಾಂತಿ ವರ್ಷ”ವಾಗಿ ಘೋಷಿಸಿದಾಗ, “ಶಾಂತಿಗಾಗಿ ಪ್ರಾರ್ಥನೆಯ ಜಾಗತಿಕ ದಿನ”ದ ಆಚರಣೆಯಲ್ಲಿ ಭಾಗವಹಿಸುವುದಕ್ಕೆ ಲೋಕದ ಪ್ರಧಾನ ಧರ್ಮಗಳ ಪ್ರತಿನಿಧಿಗಳನ್ನು ಆಮಂತ್ರಿಸಿದ ಮೂಲಕ ಪೋಪರು ಪ್ರತಿಕ್ರಿಯೆ ತೋರಿಸಿದರು. ಅಕ್ಟೋಬರ 1986 ರಲ್ಲಿ ಬೌದ್ಧ, ಹಿಂದೂ, ಇಸ್ಲಾಂ, ಶಿಂಟೋ, ಆ್ಯಂಗ್ಲಿಕನ್, ಲ್ಯೂತರನ್, ಗ್ರೀಕ್ ಆರ್ತೊಡಕ್ಸ್, ಜ್ಯೂವಿಶ್ ಮತ್ತು ಇತರ ನಂಬಿಕೆಗಳ ಪ್ರತಿನಿಧಿಗಳು ಇಟಲಿಯ ಎಸ್ಸಿಸ್ಸೀಯಲ್ಲಿ ಒಂದಾಗಿ ಕೂಡಿ ಲೋಕ ಶಾಂತಿಗಾಗಿ ಪ್ರಾರ್ಥಿಸುವುದರಲ್ಲಿ ತಮ್ಮ ಸರದಿಗಳನ್ನು ತಕ್ಕೊಂಡರು.
ಕೆಲವು ವರ್ಷಗಳ ಅನಂತರ, ಕ್ಯಾಂಟರ್ಬರಿಯ ಆ್ಯಂಗ್ಲಿಕನ್ ಆರ್ಚ್ಬಿಷಪರು ರೋಮಿನಲ್ಲಿ ಕೊಟ್ಟ ಒಂದು ಭಾಷಣದಲ್ಲಿ ಮೇಲಿನ ಸಂದರ್ಭವನ್ನು ಮರುಕಳಿಸಿದರು. “ಎಸ್ಸಿಸ್ಸೀಯಲ್ಲಿ,” ಅವರಂದದ್ದು, “ರೋಮಿನ ಬಿಷಪರು [ಪೋಪರು] ಕ್ರೈಸ್ತ ಚರ್ಚುಗಳನ್ನು ಒಂದುಗೂಡಿಸ ಶಕ್ತರಾದದ್ದನ್ನು ನಾವು ಕಂಡೆವು. ಮಾನವ ಕುಲದ ಶಾಂತಿ ಮತ್ತು ಹಿತ-ಚಿಂತನೆಗಾಗಿ ನಾವು ಒಟ್ಟುಗೂಡಿ ಪ್ರಾರ್ಥಿಸ ಶಕ್ತರಾದೆವು, ಒಟ್ಟುಗೂಡಿ ಮಾತಾಡ ಶಕ್ತರಾದೆವು ಮತ್ತು ಒಟ್ಟುಗೂಡಿ ಕಾರ್ಯನಡಿಸ ಶಕ್ತರಾದೆವು. . . . ಲೋಕ ಶಾಂತಿಗಾಗಿ ಪ್ರಾರ್ಥನೆಯ ಆ ಮೊದಲ ಹೆಜ್ಜೆಯಲ್ಲಿ, ‘ಇಗೋ, ಒಂದು ಹೊಸ ವಿಷಯವನ್ನು ಮಾಡುತ್ತಿದ್ದೇನೆ’ ಎಂದು ಹೇಳಿದ ದೇವರ ಸನ್ನಿಧಾನದಲ್ಲಿ ನಾನಿದ್ದೇನೋ ಎಂಬ ಅನಿಸಿಕೆ ನನಗಾಯಿತು.”
ಇತರ ಧರ್ಮಗಳು ಎಸ್ಸಿಸ್ಸೀಯಲ್ಲಿ ಪ್ರತಿನಿಧಿಸಲ್ಪಟ್ಟಿರದಿದ್ದರೂ, ಅಂತರ್ರಾಷ್ಟ್ರೀಯ ಭದ್ರತೆಗಾಗಿ ಮನುಷ್ಯನ ಯೋಜನೆಗಳ ಕುರಿತು ಅವರೂ ಆಶಾವಾದಿಗಳಾಗಿದ್ದಾರೆ. ದಕ್ಷಿಣ ಆಫ್ರಿಕದ ಡಚ್ ರಿಫಾರ್ಮ್ಡ್ ಚರ್ಚ್ನ ಅಧಿಕೃತ ಪತ್ರಿಕೆಯಾದ ಡೀ ಕಾರ್ಕ್ಬುಅಡ ಅಂದದ್ದು: “ಒಂದು ಹೊಸ ಲೋಕ ವ್ಯವಸ್ಥೆಯೊಳಗೆ ಸ್ಥಳಾಂತರವನ್ನು ನಾವು ಅನುಭವಿಸುತ್ತಿದ್ದೇವೆ. ಕೆಲವೇ ವರ್ಷಗಳ ಹಿಂದೆ ಯಾವುದು ಗ್ರಹಿಸಲು ಕೂಡ ಅಶಕ್ತವಾಗಿತ್ತೋ ಅದೀಗ ನಮ್ಮ ಕಣ್ಣಮುಂದೆಯೇ ಸಂಭವಿಸುತ್ತಾ ಇದೆ. ಮಹತ್ತಾದ ಲೋಕ ರಂಗದಲ್ಲಿ ರಶ್ಯಾ ಮತ್ತು ಪಶ್ಚಿಮ ದೇಶಗಳ ನಡುವಣ ರಾಜಿಯು ವಿಸ್ತಾರ್ಯ ರಾಷ್ಟ್ರೀಯ ಪರಿಣಾಮಕಾರತೆಯನ್ನು ತರುವುದು. ನಮ್ಮ ವಿಭಾಗದ ಲೋಕದಲ್ಲಿ, ಸಾಮಾನ್ಯವಾಗಿ ಒಬ್ಬರನ್ನೊಬ್ಬರು ವಿರೋಧಿಸುವ ಪಕ್ಷಗಳೂ ಬದ್ಧ ವೈರಿಗಳೂ ಆಗಿರುವವರು ಒಬ್ಬರೊಂದಿಗೊಬ್ಬರು ಮಾತುಕತೆ ನಡಿಸುತ್ತಿದ್ದಾರೆ ಮತ್ತು ‘ಶಾಂತಿ’ಯ ಕಡೆಗೆ ಪ್ರಚೋದನೆಯು ಎಲ್ಲೆಲ್ಲಿಯೂ ಉದಯವಾಗುತ್ತಿದೆ. . . . ಒಂದು ಕ್ರೈಸ್ತ ದೃಷ್ಟಿಕೋನದಿಂದ, ಜನರ ನಡುವೆ ಶಾಂತಿಯನ್ನು ತರುವ ಎಲ್ಲಾ ಪ್ರಯತ್ನಗಳ ಸ್ವಾಗತಾರ್ಹವಾಗಿರಬೇಕು. ನಮ್ಮ ಕಾಲದಲ್ಲಿ ನಾವು ಶಾಂತಿಗಾಗಿ ಪ್ರಾರ್ಥನೆ ಮಾಡಬಲ್ಲೆವು.”
ಅಂತರ್ರಾಷ್ಟ್ರೀಯ ಭದ್ರತೆಗಾಗಿ ಮನುಷ್ಯನ ಈ ಯೋಜನೆಗಳನ್ನು ದೇವರು ಆಶೀರ್ವದಿಸುತ್ತಿದ್ದಾನೋ?
ಬೈಬಲ್ ಹೇಳುವುದೇನು?
ಮಾನವ ಪ್ರಯತ್ನಗಳ ಮೇಲೆ ಆತುಕೊಳ್ಳುವ ವಿಷಯದಲ್ಲಾದರೋ, ಬೈಬಲ್ ನೇರವಾದ ಎಚ್ಚರಿಕೆಯನ್ನು ಕೊಡುತ್ತದೆ: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ. ಅವನು ಸಹಾಯ ಮಾಡಶಕ್ತನಲ್ಲ. ಅವನ ಉಸಿರುಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವುವು.” (ಕೀರ್ತನೆ 146:3, 4) ಪ್ರಚಲಿತ ದಿನದ ಶಾಂತಿ ಪ್ರವರ್ಧಕ ಪ್ರಗತಿಯು ಉತ್ತೇಜನೀಯವಾಗಿ ಕಂಡುಬರಬಹುದು. ಆದರೆ ನಾವು ವಾಸ್ತವಿಕತೆಯುಳ್ಳವರಾಗಿರಬೇಕು. ಮನುಷ್ಯರ ಶಕ್ತಿಗಳು ಸೀಮಿತವಾಗಿವೆ. ಹೆಚ್ಚಾಗಿ, ನಡೆಯುವ ಫಟನೆಗಳು ಅವರಿಗಿಂತಲೂ ದೊಡ್ಡವು. ಚೆನ್ನಾಗಿ-ಯೋಚಿಸಿ ಮಾಡಿದ ಅವರ ಯೋಜನೆಗಳನ್ನು ಉರುಳಿಸಿ ಹಾಕುವ ಮರೆಯಾದ ಸೆಲೆಗಳನ್ನು, ಅಡಗಿರುವ ಶಕ್ತಿಗಳನ್ನು ಅವರು ವಿವೇಚಿಸಿ ತಿಳಿಯುವುದು ಬಹಳ ಅಪೂರ್ವ.
ಯೇಸುವಿನ ಸಮಯಕ್ಕೆ ಏಳುನೂರು ವರ್ಷಗಳ ಮುಂಚೆ, ಪ್ರವಾದಿಯಾದ ಯೆಶಾಯನ ಕಾಲದಲ್ಲಿ, ಯೆಹೂದಿ ಮುಖಂಡರು, ಇಂದು ಏನು ಸಂಭವಿಸುತ್ತದೋ ಅದಕ್ಕೆ ಸಮ ಹೋಲಿಕೆಯಲ್ಲಿ ನೆರೆಹೊರೆಯ ದೇಶಗಳೊಂದಿಗೆ ಅಂತರ್ರಾಷ್ಟ್ರೀಯ ಸಂಧಾನಗಳ ಮೂಲಕ ಭದ್ರತೆಗಾಗಿ ಯೋಜನೆಗಳನ್ನು ಮಾಡುತ್ತಿದ್ದರು. ಆ ದಿನಗಳಲ್ಲಿ ಸಹ ಧಾರ್ಮಿಕ ಮುಖಂಡರುಗಳು ರಾಜನೀತಿಜ್ಞರು ಮಾಡುತ್ತಿದ್ದ ಸಂಗತಿಗಳನ್ನು ಬೆಂಬಲಿಸುತ್ತಿದ್ದರು. ಆದರೆ ಯೆಶಾಯ ಎಚ್ಚರಿಸಿದ್ದು: “ಒಂದು ಹಂಚಿಕೆಯನ್ನು ಯೋಜಿಸಿರಿ, ಅದು ಮುರಿದು ಹೋಗುವುದು. ಏನೇ ಅಪ್ಪಣೆ ಮಾಡಿರಿ, ಅದು ನಿಲ್ಲದು.” (ಯೆಶಾಯ 8:10, NW) ಅವರ ಹಂಚಿಕೆಯು ವೈಫಲ್ಯಗೊಂಡು ದುರ್ದೆಶೆಯಲ್ಲಿ ಕೊನೆಗೊಂಡಿತು. ಇಂದು ಕೂಡ ಅದೇ ಸಂಗತಿಯು ಸಂಭವಿಸಬಲ್ಲದೋ?
ಹೌದು, ಸಂಭವಿಸಬಲ್ಲದು, ಯಾಕಂದರೆ ಅದೇ ಪ್ರವಾದಿಯ ಮೂಲಕ ದೇವರು ಭೂಮಿಗೆ ಭದ್ರತೆಯನ್ನು ತರುವ ತನ್ನ ಸ್ವಂತ ರೀತಿಯಿದೆ ಎಂಬದನ್ನು ಪ್ರಕಟಿಸಿದ್ದಾನೆ. ಅದು ಯಾವುದೇ ಮಾನವ ಸಂಘಟನೆಯ ಮೂಲಕವಾಗಿ ಅಲ್ಲ, ಬದಲಿಗೆ ಇಸ್ರಾಯೇಲ್ಯ ಅರಸ ದಾವೀದನ ಒಬ್ಬ ವಂಶಜನ ಮೂಲಕವಾಗಿ ಬರಲಿದೆ. (ಯೆಶಾಯ 9:6, 7) ಅರಸ ದಾವೀದನ ಈ ಉತ್ತರಾಧಿಕಾರಿಯು ಯೇಸು ಕ್ರಿಸ್ತನೇ; ಪೊಂತ್ಯ ಪಿಲಾತನಿಂದ ವಿಚಾರಣೆಗೆ ಒಳಪಟ್ಟಾಗ ತಾನೊಬ್ಬ ಅರಸನು ಎಂದವನು ಒಪ್ಪಿಕೊಂಡನಾದರೂ, ಹೇಳಿದ್ದು: “ನನ್ನ ರಾಜ್ಯವು ಈ ಲೋಕದ ಭಾಗವಲ್ಲ.” (ಯೋಹಾನ 18:36; ಲೂಕ 1:32) ವಾಸ್ತವದಲ್ಲಿ ಯೇಸುವಿನ ರಾಜ್ಯವು ಸ್ವರ್ಗೀಯವಾಗಿರಲಿಕ್ಕಿತ್ತು. ಮತ್ತು ಅದು ಮಾತ್ರವೇ,—ಸಂಯುಕ್ತ ರಾಷ್ಟ್ರ ಸಂಘವಾಗಲಿ ಅಥವಾ ಬೇರೆ ಯಾವುದೇ ಐಹಿಕ ರಾಜಕೀಯ ರಾಷ್ಟ್ರವಾಗಲಿ ಅಲ್ಲ—ಈ ಭೂಮಿಗೆ ಬಾಳುವ, ವಿಶ್ವಾಸಾರ್ಹವಾದ ಭದ್ರತೆಯನ್ನು ತರುವುದು.—ದಾನಿಯೇಲ 2:44.
“ಯುದ್ಧಗಳಾಗುವುದನ್ನೂ ಯುದ್ಧವಾಗುವ ಹಾಗಿದೆ ಎಂಬ ಸುದ್ಧಿ”ಯೊಂದಿಗೆ ‘ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ’ ಏಳುವಾಗ ಅವನ ರಾಜ್ಯವು ಸ್ವರ್ಗದಿಂದ ಆಳಲು ತೊಡಗುವುದೆಂದು ಯೇಸು ಕ್ರಿಸ್ತನು ಕಾಲಜ್ಞಾನ ನುಡಿದನು. ಆ ಪ್ರವಾದನೆಯ ನೆರವೇರಿಕೆಯು 1914 ನ್ನು ಅದು ಸಂಭವಿಸಿದ ವರ್ಷವಾಗಿ ಮತ್ತು ಅಂದಿನಿಂದ ದಾಟಿರುವ ವರ್ಷಗಳನ್ನು “ವಿಷಯ ವ್ಯವಸ್ಥೆಗಳ ಸಮಾಪ್ತಿ” ಅವಧಿಯಾಗಿ ಗುರುತಿಸುತ್ತದೆ.—ಮತ್ತಾಯ 24:3, 6-8.
ಇದರ ಅರ್ಥವೇನು? ಪ್ರಸ್ತುತ ಲೋಕ ವ್ಯವಸ್ಥೆಗೆ ಉಳಿದಿರುವ ಸಮಯವು ಸೀಮಿತವಾಗಿದೆ, ಮತ್ತು ಅದು ಬೇಗನೇ ದಾಟಿಹೋಗಲಿದೆ ಎಂದೇ ಅದರರ್ಥ. ಇದು ಒಂದು ಚಿಂತನೆಗೆ, ಖೇದಕ್ಕೆ ಕಾರಣವಾಗಿದೆಯೇ? ಈ ವ್ಯವಸ್ಧೆಯನ್ನು ಗುರುತಿಸಿರುವ ಕ್ರೂರತೆ, ಅನ್ಯಾಯ, ದಬ್ಬಾಳಿಕೆ, ಹೋರಾಟ ಮತ್ತು ಎಲ್ಲಾ ಕಷ್ಟಾನುಭವಗಳನ್ನು ನಾವು ಜ್ಞಾಪಿಸುವುದಾದರೆ, ಅದು ಹಾಗಿಲ್ಲ. ಯಾರ ಕುರಿತು ದೇವರ ವಾಕ್ಯವಾದ ಬೈಬಲ್ ಹೀಗನ್ನುತ್ತದೋ ಆ ಅಧಿಪತಿಯ ಕೆಳಗಿರುವುದು ನಿಜವಾಗಿಯೂ ಒಂದು ಉಪಶಮನವು: “ಅವನ ಮೇಲೆ ಜ್ಞಾನವಿವೇಕದಾಯಕ ಆತ್ಮ, ಆಲೋಚನಾ ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆಯನ್ನೂ ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವುದು.”—ಯೆಶಾಯ 11:2.
ಭೂಮಿಯಲ್ಲಿ ನಿಜ ಭದ್ರತೆ
ವಾಸ್ತವದಲ್ಲಿ, ಯೆಶಾಯನ ಪ್ರವಾದನೆಯು ಲೋಕವ್ಯಾಪಕ ಪ್ರಮಾಣದಲ್ಲಿ ದೇವರ ರಾಜ್ಯದ ಕೆಳಗೆ ನೆರವೇರುವ ತನಕ ಭೂಮಿಯ ಮೇಲೆ ನಿಜ ಭದ್ರತೆಯು ಇರಲಾರದು: “ಇಗೋ, ನೂತನಾಕಾಶವನ್ನೂ ನೂತನಭೂಮಿಯನ್ನೂ ಸೃಷ್ಟಿಸುವೆನು. ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.” (ಯೆಶಾಯ 65:17) ಈ ಲೋಕದ ಪರವಾಗಿ ಧಾರ್ಮಿಕ ಮುಖಂಡರುಗಳು ಎಷ್ಟೇ ಪ್ರಾರ್ಥನೆಗಳನ್ನು ಮಾಡಲಿ, ಶಾಂತಿ ಮತ್ತು ಭದ್ರತೆಯನ್ನು ತರುವ ದೇವರ ಮಾರ್ಗವನ್ನು ಅಂತರಾಷ್ಟ್ರೀಯ ಭದ್ರತೆಗಾಗಿರುವ ಮಾನವ ಯೋಜನೆಗಳು ಸ್ಧಾನಪಲ್ಲಟ ಮಾಡಶಕ್ತವಲ್ಲ.
ದೇವರ ರಾಜ್ಯವು ಬರಮಾಡಲಿರುವ ಲೋಕವ್ಯಾಪಕವಾದ ಶಾಶ್ವತ ಭದ್ರತೆಯು ಮಹಿಮಾಭರಿತವಾಗಿರುವುದು. ಬೈಬಲ್ನಲ್ಲಿ ಕಂಡುಬರುವ ವರ್ಣನೆಗಳಲ್ಲಿ ಕೇವಲ ಒಂದು ಇಲ್ಲಿದೆ: “ಅವರೋ ತಮ್ಮ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು. ಜನಾಂಗಕ್ಕೆ ವಿರುದ್ಧವಾಗಿ ಅವರು ಕತ್ತಿಯನ್ನೆತ್ತರು, ಇನ್ನು ಮುಂದೆ ಯುದ್ಧಾಭ್ಯಾಸವನ್ನೂ ಕಲಿಯರು. ಅವರಲ್ಲಿ ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರ ಗಿಡ, ಇವುಗಳ ನೆರಳಿನಲ್ಲಿ ಕಾರ್ಯತಃ ಕೂತುಕೊಳ್ಳುವನು. ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದದೆ.”—ಮೀಕ 4:3, 4, NW.
ಸ್ವತಃ ದೇವರಿಂದ ಭರವಸೆ ನೀಡಲ್ಪಟ್ಟ ಭದ್ರತೆಯು ಮಾತ್ರ ವಿಶ್ವಾಸಾರ್ಹವಾಗಿದೆ. ಆದ್ದರಿಂದ ಪ್ರಭುಗಳಲ್ಲಿ ನಿಮ್ಮ ಭರವಸವನ್ನಿಡುವ ಬದಲಾಗಿ, ದೇವರಲ್ಲಿ ಯಾಕೆ ನಿಮ್ಮ ಭರವಸವನ್ನಿಡಬಾರದು? ಆಗ ಕೀರ್ತನೆಗಾರನ ಮಾತುಗಳು ಸತ್ಯವೆಂಬದಾಗಿ ನೀವು ಕಾಣುವಿರಿ: “ಯಾವನಿಗೆ ಯಾಕೋಬನ ದೇವರು ಸಹಾಯಕನೋ ಯಾವನು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ ಅವನೇ ಧನ್ಯನು. ಭೂಮಿ, ಆಕಾಶ, ಸಾಗರ, ಚರಾಚರ ಇವುಗಳನ್ನು ನಿರ್ಮಿಸಿದವನೂ ವಾಗ್ದಾನಗಳನ್ನು ಯಾವಾಗಲೂ ನೆರವೇರಿಸುವವನೂ ಆತನೇ.”—ಕೀರ್ತನೆ 146:5, 6.. (w92 3/1)
[ಪುಟ 7 ರಲ್ಲಿರುವ ಚೌಕ]
ಕ್ಯಾಥ್ಲಿಕ್ ಚರ್ಚ್ ಮತ್ತು ಅಂತರ್ರಾಷ್ಟ್ರೀಯ ರಾಜನೀತಿ
“ಅವನ ‘ರಾಜ್ಯವು ಈ ಲೋಕದ್ದಲ್ಲ’ ಎಂದು ಕ್ರಿಸ್ತನು ಹೇಳಿದ್ದನಾದರೂ, ಉಚ್ಛಾಧಿಕಾರಗಳಲ್ಲಿರುವ ವೈದಿಕರು ಮತ್ತು ಪೋಪರಾಧಿಪತ್ಯವು ಒಂದು ಸಂಘಟನೆಯೋಪಾದಿ ಕಾನ್ಸಂಟೀನನ ಸಮಯದಿಂದ ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ರಾಜಕೀಯ ಹೋರಾಟಗಳಲ್ಲಿ ತೀವ್ರವಾಗಿ ಪಾಲಿಗರಾಗಿವೆ.”—ದಿ ಕ್ಯಾಥ್ಲಿಕ್ ಚರ್ಚ್ ಇನ್ ದ ವರ್ಲ್ಡ್ ಪಾಲಿಟಿಕ್ಸ್,” ಜೆಸಿಟ್ವ್ ಸಾಂಟಾ ಕ್ಲಾರಾ ಯೂನಿರ್ವಸಿಟಿಯ ಪ್ರೊಫೆಸರ್ ಎರಿಕ್ ಹ್ಯಾನ್ಸನ್ರಿಂದ.