ಬೆತ್ಲೆಹೇಮ್ ಮತ್ತು ಕ್ರಿಸ್ಮಸ್ ಇವುಗಳ ಕುರಿತ ಸತ್ಯವೇನು?
“ಬೆತ್ಲೆಹೇಮು. . . ಅನಂತ ಪ್ರೀತಿಯ ರುಜುವಾತು, ನಮ್ರತೆಯಲ್ಲಿ ಒಂದು ಪಾಠ.”—ಮರಿಯ ಟೆರಿಸ ಪೆಟ್ರೋಸಿ, ಬೆತ್ಲೆಹೇಮ್ ಪುಸ್ತಕದ ಲೇಖಕಿ.
ಬೆತ್ಲೆಹೇಮ್ ನಿಮಗೆ ಆ ಅರ್ಥದಲ್ಲಿದೆಯೆ? ಪ್ರಾಯಶಃ ಇರಬಹುದು. ಲೋಕಾದ್ಯಂತ, ಕೋಟ್ಯಂತರ ಯಥಾರ್ಥವಂತ, ಶಾಂತಿಪ್ರಿಯರು, ವಿಶೇಷವಾಗಿ ಕ್ರಿಸ್ಮಸ್ ಸಮಯದಲ್ಲಿ ಭಕ್ತಿಯಿಂದ ಬೆತ್ಲೆಹೇಮಿನ ಕಡೆಗೆ ನೋಡುತ್ತಾರೆ. ಮಧ್ಯಪೂರ್ವದ ಈ ಚಿಕ್ಕ ನಗರ, “ಸಮಾಧಾನದ ಪ್ರಭು”ವಾದ ಯೇಸು ಕ್ರಿಸ್ತನು ಹುಟ್ಟಿದ ಸ್ಥಳವೆಂದು ಅವರು ತಿಳಿದಿದ್ದಾರೆ. ಶತಮಾನಗಳಿಂದ ಯಾತ್ರಿಕರು ಕ್ರೈಸ್ತ ಪ್ರಪಂಚದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾದ ಇಲ್ಲಿಗೆ, ಪ್ರಾಯಶಃ ಅದನ್ನು ಪೂಜ್ಯಭಾವದಿಂದ ಕಾಣಲು ಗುಂಪು ಗುಂಪಾಗಿ ಬಂದಿದ್ದಾರೆ. ಯೇಸು ಕ್ರಿಸ್ತನ ಸಾಂಪ್ರದಾಯಿಕ ಜನನ ಸ್ಥಳವಾದ ಗ್ರಾಟೊ ಆಫ್ ನೆಟಿವಿಟಿ ಎಂಬುದೆ ಇದು. ಇದು ಚರ್ಚ್ ಆಫ್ ನೆಟಿವಿಟಿ ಎಂಬ ವಿಶಾಲ ಐತಿಹಾಸಿಕ ಕಟ್ಟಡ ಸಮೂಹದಲ್ಲಿದೆ.—ಯೆಶಾಯ 9:6; ಮತ್ತಾಯ 2:1.
ಯೇಸುವಿನ ಜನನದ ಪರಿಸ್ಥಿತಿಗಳ ಕುರಿತ ಸತ್ಯವೇನು? ದೃಷ್ಟಾಂತಕ್ಕೆ, ಅವನು ಹುಟ್ಟಿದ್ದು ಯಾವಾಗ? ಅವನು ಹುಟ್ಟಿದ್ದು ನಿಜವಾಗಿಯೂ ಈಗ ನೆಟಿವಿಟಿ ಗ್ರಾಟೊ ಎಂಬ ಸ್ಥಳದಲ್ಲಿಯೊ? ಮತ್ತು, ನೀವಾಗಲಿ, ಇನ್ನಾವನಾಗಲಿ ಅದನ್ನು ಪೂಜ್ಯಭಾವದಿಂದ ಕಾಣಬೇಕೊ?
“ನಾವು ಬೆತ್ಲೆಹೇಮಿನ ರಹಸ್ಯದ ಕುರಿತು ಯೋಚಿಸುವಾಗ, ನಮ್ಮ ಮನಸ್ಸಿನಲ್ಲಿ ಪ್ರಶ್ನೆ, ಸಂದೇಹಗಳು ಬರುವುದನ್ನು ತಡೆಯಲಾರೆವು.”—ಬೆತ್ಲೆಹೇಮ್, ಮರಿಯ ಟೆರಿಸ ಪೆಟ್ರೋಸಿ ಅವರಿಂದ.
‘ಪ್ರಶ್ನೆ, ಸಂದೇಹಗಳೇಕೆ?’ ಎಂದು ನೀವು ಕೇಳಬಹುದು. ಕ್ರಿಸ್ಮಸಿನ ಕುರಿತ ವಿವಿಧ ನಂಬಿಕೆಗಳು ಮತ್ತು ಈ ನಂಬಿಕೆಗಳಿಗೆ ಸಂಬಂಧಪಟ್ಟ ನಿವೇಶನಗಳು ನಿಜತ್ವಗಳ ಮೇಲೆ ಆಧಾರಗೊಂಡಿವೆಯಲ್ಲವೆ? ಆದರೆ ಇದು ನಿಜವೆ?
ಅವನು ಜನಿಸಿದ್ದು ಯಾವಾಗ?
ಯೇಸುವಿನ ಜನ್ಮದಿನದ ಕುರಿತು ಮರಿಯ ಟೆರಿಸ ಪೆಟ್ರೋಸಿ ಪ್ರಶ್ನಿಸುವುದು: “ರಕ್ಷಕನು ನಿಷ್ಕೃಷ್ಟವಾಗಿ ಹುಟ್ಟಿದ್ದು ಯಾವಾಗ? ವರ್ಷವನ್ನು ಮಾತ್ರವಲ್ಲ, ಮಾಸ, ದಿವಸ ಮತ್ತು ತಾಸನ್ನೂ ತಿಳಿಯಲು ನಮಗೆ ಮನಸ್ಸಿದೆ. ಖಚಿತ ನಿಷ್ಕೃಷ್ಟತೆ ನಮಗೆ ಕೊಡಲ್ಪಟ್ಟಿರುವುದಿಲ್ಲ.” ಇದನ್ನು ದ ನ್ಯೂ ಕ್ಯಾಥಲಿಕ್ ಎನ್ಸೈಕ್ಲೊಪೀಡಿಯ ಬೆಂಬಲಿಸುತ್ತದೆ: “ಯೇಸು ಕ್ರಿಸ್ತನ ಜನನ ದಿನವನ್ನು ಕೇವಲ ಸರಿಸುಮಾರಾಗಿ ಲೆಕ್ಕ ಮಾಡಬಹುದು.” ಕ್ರಿಸ್ತನ ಜನನ ದಿನವೆಂದು ಹೇಳಲಾಗುವ ದಿವಸದ ಸಂಬಂಧದಲ್ಲಿ ಅದು ಹೇಳುವುದು: “ಡಿಸೆಂಬರ್ 25ನೆಯ ತಾರೀಕು ಕ್ರಿಸ್ತನ ಜನನಕ್ಕೆ ಸಂಬಂಧಿಸದೆ ರೋಮನರ ಸೂರ್ಯನ ಅಯನ ಸಂಕ್ರಾಂತಿ ಹಬ್ಬವಾದ ನಟಾಲಿಸ್ ಸೋಲಿಸ್ ಇನ್ವಿಕ್ಟಿ ಹಬ್ಬಕ್ಕೆ ಅನುರೂಪವಾಗಿದೆ.”
ಹಾಗಾದರೆ, ‘ಯೇಸು ಡಿಸೆಂಬರ್ 25ರಲ್ಲಿ ಹುಟ್ಟಿರದಿದ್ದರೆ ಇನ್ನು ಯಾವಾಗ ಹುಟ್ಟಿರಬೇಕು?’ ಎಂದು ನೀವು ಕೇಳಬಹುದು. ಮತ್ತಾಯ 26 ಮತ್ತು 27ನೆಯ ಅಧ್ಯಾಯಗಳಿಂದ ನಾವು, ಯೇಸು ಸಾ.ಶ. 33ರ ಎಪ್ರಿಲ್ 1ರಿಂದ ಆರಂಭವಾದ ಯೆಹೂದಿ ಪಸ್ಕದ ಸಮಯ ಸತ್ತನೆಂದು ತಿಳಿಯುತ್ತೇವೆ. ಇದಲ್ಲದೆ, ಯೇಸು ತನ್ನ ಶುಶ್ರೂಷೆಯನ್ನು ಆರಂಭಿಸಿದಾಗ ಸುಮಾರು 30 ವಯಸ್ಸಿನವನಾಗಿದ್ದನೆಂದು ಲೂಕ 3:21-23 ತಿಳಿಸುತ್ತದೆ. ಅವನ ಭೂಶುಶ್ರೂಷೆ ಮೂರುವರೆ ವರುಷಗಳ ಅವಧಿಯದ್ದಾದುದರಿಂದ ಮರಣ ಹೊಂದಿದಾಗ ಅವನು ಸುಮಾರು 33 1⁄2 ವಯಸ್ಸಿನವನಾಗಿದ್ದನು. ಆರು ಮಾಸಗಳ ಅನಂತರ, ಅಂದರೆ ಸುಮಾರು ಒಕ್ಟೋಬರ 1ರಂದು ಕ್ರಿಸ್ತನಿಗೆ ಪೂರ್ತಿ 34 ವಯಸ್ಸಾಗುತ್ತಿತ್ತು. ಯೇಸು ಯಾವಾಗ ಹುಟ್ಟಿದನೆಂದು ನೋಡಲು ನಾವು ಹಿಂದಕ್ಕೆ ಲೆಕ್ಕ ಹಾಕುವುದಾದರೆ ಡಿಸೆಂಬರ್ 25 ಯಾ ಜನವರಿ 6ನ್ನು ತಲುಪದೆ ಸಾ.ಶ.ಪೂ. 2ನೆಯ ಇಸವಿಯ ಸುಮಾರು ಒಕ್ಟೋಬರ್ 1ನ್ನು ತಲುಪುತ್ತೇವೆ.
ಡಿಸೆಂಬರಿನಲ್ಲಿ, ಬೆತ್ಲೆಹೇಮ್ ಮತ್ತು ಸುತ್ತಲಿನ ಪ್ರದೇಶಗಳು ಚಳಿಗಾಲದ ಶೀತಲ ಹವಾಮಾನ, ಚಳಿಮಳೆ ಮತ್ತು ಕೆಲವೊಮ್ಮೆ ಹಿಮಪಾತಕ್ಕೂ ಬಲಿಬೀಳುತ್ತವೆ. ಆ ಸಮಯದಲ್ಲಿ ಕುರುಬರು ರಾತ್ರಿಯಲ್ಲಿ ಕುರಿಗಳೊಂದಿಗೆ ಅಲ್ಲಿ ಕಂಡು ಬರುವುದಿಲ್ಲ. ಈ ಹವಾಮಾನ ಇತ್ತೀಚಿನ ವಿಚಿತ್ರ ಘಟನೆಯಲ್ಲ. ಯೆಹೂದದ ಅರಸ ಯೆಹೋಯಾಕೀಮನು ಒಂಭತನ್ತೆಯ [ನವಂಬರ್-ಡಿಸೆಂಬರಿಗೆ ಅನುರೂಪವಾದ ಕಿಸ್ಲೆವ್] ತಿಂಗಳಲ್ಲಿ “ಚಳಿಗಾಲದ ಮನೆಯಲ್ಲಿ ಕೂತಿದ್ದನು; ಅವನ ಮುಂದೆ ಅಗ್ಗಿಷ್ಟಿಕೆಯು ಉರಿಯುತ್ತಿತ್ತು” ಎಂದು ಶಾಸ್ತ್ರವು ವರದಿ ಮಾಡುತ್ತದೆ. (ಯೆರೆಮೀಯ 36:22) ಬೆಚ್ಚಗಾಗಿರಲು ಅವನಿಗೆ ಶಾಖ ಬೇಕಾಗಿತ್ತು. ಇದಲ್ಲದೆ, ಎಜ್ರ 10:9,13ರಲ್ಲಿ ಈ ಕಿಸ್ಲೆವ್ ಮಾಸ, “ಮಳೆಗಾಲ; ಹೊರಗೆ ನಿಲ್ಲುವದು ಅಸಾಧ್ಯ” ಎಂಬುದಕ್ಕೆ ಸ್ಪಷ್ಟ ಪುರಾವೆ ನಮಗೆ ದೊರೆಯುತ್ತದೆ. ಇದೆಲ್ಲ, ಡಿಸೆಂಬರಿನಲ್ಲಿರುವ ಬೆತ್ಲೆಹೇಮಿನ ಹವಾಮಾನ ಯೇಸು ಕ್ರಿಸ್ತನ ಜನನದ ಸಂಬಂಧದಲ್ಲಿ ಬೈಬಲ್ ವರ್ಣಿಸುವ ಸಂಗತಿಗಳಿಗೆ ಹೊಂದಿಕೆಯಾಗಿರುವುದಿಲ್ಲವೆಂದು ಸೂಚಿಸುತ್ತದೆ.—ಲೂಕ 2:8-11.
ಯಾವ ಸ್ಥಳದಲ್ಲಿ?
ಯಾವ ‘ರಕ್ತಮಯ ಹೋರಾಟವು’ ಒಂದು ಲಕ್ಷಕ್ಕೂ ಹೆಚ್ಚು ಫ್ರೆಂಚ್ ಸೈನಿಕರನ್ನು ಆಹುತಿ ತೆಗೆದುಕೊಂಡಿತೊ ಆ ಕ್ರಿಮಿಯನ್ ಯುದ್ಧ (1853-56) ಪ್ರೇರಿಸಿದ ಆ ನಿವೇಶನದ ಯೋಗ್ಯ ವೀಕ್ಷಣವೇನು? ಆ ಸ್ಥಳ ನಿಜವಾಗಿಯೂ ಯೇಸುವಿನ ಜನ್ಮಸ್ಥಳವೆ?
ಒಂದನೆಯದಾಗಿ, ಬೈಬಲು ಯೇಸುವಿನ ಜನನದ ನಿಷ್ಕೃಷ್ಟ ಸ್ಥಳದ ಕುರಿತು ಹೇಳಿರುವುದಿಲ್ಲ. ಮತ್ತಾಯ ಮತ್ತು ಲೂಕ, ಯೇಸುವಿನ ಜನನ ಮೀಕ 5:2ರ “ಇಸ್ರಾಯೇಲನ್ನು ಆಳತಕ್ಕವನು” ಮತ್ತು ‘ಪುರಾತನ ಮೂಲವಿರುವವನು’ ಬೆತ್ಲೆಹೇಮಿನಿಂದ ಬರುವನೆಂಬ ಮೆಸ್ಸೀಯ ಸಂಬಂಧಿತ ಪ್ರವಾದನೆಯನ್ನು ದೃಢೀಕರಿಸುತ್ತಾರೆ. (ಮತ್ತಾಯ 2:1, 5; ಲೂಕ 2:4) ಈ ಎರಡು ಸುವಾರ್ತೆಗಳೂ ಕೊಂಚ ವಿವರಣೆಯನ್ನು ಮಾತ್ರ, ಅಂದರೆ, ಯೇಸು ಬೆತ್ಲೆಹೇಮಿನಲ್ಲಿ ಜನಿಸಿದನು, ಮತ್ತು ಲೂಕನಿಗನುಸಾರ, ಶಿಶುವನ್ನು ಬಟ್ಟೆ ಸುತ್ತಿ ಗೋದಲಿಯಲ್ಲಿ ಮಲಗಿಸಲಾಗಿತ್ತೆಂಬ ವಿವರಣೆಯನ್ನು ಮಾತ್ರ ಕೊಡುತ್ತವೆ.—ಲೂಕ 2:7.
ಸುವಾರ್ತಾ ಲೇಖಕರು ಹೆಚ್ಚು ವಿವರಣೆಯನ್ನು ಏಕೆ ಕೂಡಿಸಲಿಲ್ಲ? ಮರಿಯ ಟೆರಿಸ ಪೆಟ್ರೋಸಿ ಗಮನಿಸುವುದು: “ಸುವಾರ್ತಿಕರು ಈ ವಿವರಗಳನ್ನು, ಅವು ಅರ್ಥರಹಿತವೆಂದು ಎಣಿಸಿದರ್ದಿಂದಲೆ ಅಸಡ್ಡೆ ಮಾಡಿರಬೇಕು.” ವಾಸ್ತವವೇನಂದರೆ, ಯೇಸು ತಾನೆ ತನ್ನ ಜನನದ ವಿವರಗಳು ವಿಶೇಷ ರೀತಿಯಲ್ಲಿ ಅರ್ಥಗರ್ಭಿತವೆಂದು ಎಣಿಸಿರಲಿಲ್ಲವೆಂದು ಸ್ಪಷ್ಟವಾಗಿಗುತ್ತದೆ, ಏಕೆಂದರೆ ಅವನು ತನ್ನ ಜನನದ ತಾರೀಕನ್ನಾಗಲಿ ಜನ್ಮ ಸ್ಥಳದ ನಿಷ್ಕೃಷ್ಟ ನಿವೇಶನವನ್ನಾಗಲಿ ತಿಳಿಸಿದನೆಂದು ಒಮ್ಮೆಯೂ ಉಲ್ಲೇಖಿಸಲ್ಪಟ್ಟಿರುವುದಿಲ್ಲ. ಬೆತ್ಲೆಹೇಮಿನಲ್ಲಿ ಜನಿಸಿದರೂ ಅವನು ಅದನ್ನು ತನ್ನ ಮನೆಯಾಗಿ ಎಣಿಸಲಿಲ್ಲ. ಬದಲಿಗೆ ಗಲಿಲಾಯ ಪ್ರದೇಶವನ್ನು ‘ಅವನ ಊರಾಗಿ’ ಸೂಚಿಸಲಾಗಿದೆ.—ಮಾರ್ಕ 6:1, 3, 4; ಮತ್ತಾಯ 2:4, 5; 13:54.
ಯೋಹಾನ 7:40-42ರ ವಾಚನ, ಜನರು ಸಾಮಾನ್ಯವಾಗಿ ಅವನ ಜನ್ಮಸ್ಥಳದ ವಿಷಯ ಅಜ್ಞಾನಿಗಳಾಗಿದ್ದು ಅವನು ಗಲಿಲಾಯದಲ್ಲಿ ಹುಟ್ಟಿದವನೆಂದು ನೆನಸಿ “ಕ್ರಿಸ್ತನು ಗಲಿಲಾಯದಿಂದ ಬರುವುದು ಹೇಗೆ?” ಎಂದು ಪ್ರಶ್ನಿಸಿದರೆಂದು ತೋರಿಸುತ್ತದೆ. ಯೋಹಾನ 7:41ರಲ್ಲಿ ದಾಖಲೆಯಾಗಿರುವುದನ್ನು ಆಧಾರ ಮಾಡಿಕೊಂಡು, ದ ಚರ್ಚ್ ಆಫ್ ದ ನೆಟಿವಿಟಿ ತೀರ್ಮಾನಿಸುವುದು: “ಇಂಥ ಚರ್ಚೆಗಳ ಎದ್ದುಬರೋಣವು ತಾನೆ ಯೇಸು ಬೆತ್ಲೆಹೇಮಿನಲ್ಲಿ ಜನಿಸಿದ್ದನ್ನು ತಪ್ಪೆಂದು ತೋರಿಸುವುದಿಲ್ಲ; ಆದರೆ, ಕಡಮೆ ಪಕ್ಷ, ಅವನ ಜೊತೆಗಾರರಲ್ಲಿ ಅನೇಕರಿಗೆ ಅದು ತಿಳಿದಿರಲಿಲ್ಲವೆಂದು ತೋರಿಸುತ್ತದೆ.”
ಯೇಸು ತನ್ನ ಭೂಜೀವಿತ ಸಮಯದಲ್ಲಿ ತನ್ನ ಜನನದ ವಿವರಗಳನ್ನು ಜಾಹೀರು ಪಡಿಸಲಿಲ್ಲವೆಂಬುದು ವ್ಯಕ್ತ. ಅವನ ಜನ್ಮ ನಿವೇಶನಕ್ಕೆ ಯಾವ ಪ್ರಾಮುಖ್ಯತೆಯೂ ಕೊಡಲ್ಪಡಲಿಲ್ಲ. ಹಾಗಾದರೆ, ಜನ್ಮ ಕೊಡುವಂತೆ ಯೋಸೇಫನು ಮರಿಯಳನ್ನು ನೆಟಿವಿಟಿ ಗ್ರಾಟೊಗೆ ತಂದನೆಂಬ ನಂಬಿಕೆಗೆ ಆಧಾರವೇನು?
ಪೆಟ್ರೋಸಿ ಸರಳವಾಗಿ ಒಪ್ಪುವುದು: “ಈ ಗ್ರಾಟೊ ಬೆತ್ಲೆಹೇಮಿನ ನೆರೆಹೊರೆಯಲ್ಲಿರುವ ಅಸಂಖ್ಯಾತ ನೈಸರ್ಗಿಕ ಗುಹೆಗಳಲ್ಲಿ ಒಂದೊ ಇಲ್ಲವೆ ಒಂದು ತಂಗುದಾಣದ ಕೊಟ್ಟಿಗೆಯಾಗಿ ಉಪಯೋಗಿಸಲ್ಪಡುತ್ತಿದ್ದ ಗವಿಯೊ ಎಂದು ನಿಶ್ಚಯ ಹೇಳುವುದು ಅಸಾಧ್ಯ. ಆದರೂ, ಎರಡನೆಯ ಶತಕದ ಪೂರ್ವಾರ್ಧದಿಂದ ಬಂದಿರುವ ಸಂಪ್ರದಾಯ ಸ್ಪಷ್ಟವಾಗಿಗಿ ಇದೊಂದು ಗ್ರಾಟೊ-ಕೊಟ್ಟಿಗೆ ಎಂದು ತೋರಿಸುತ್ತದೆ.”— ಒತ್ತು ನಮ್ಮದು.
ಕೇವಲ ಸಂಪ್ರದಾಯ
ಮರಿಯ ಟೆರಿಸ ಪೆಟ್ರೋಸಿ ಮತ್ತು ಆರ್. ಡಬ್ಲ್ಯು. ಹ್ಯಾಮಿಲ್ಟನ್ ಮತ್ತು ಇನ್ನು ಅನೇಕ ಬೆತ್ಲೆಹೇಮ್ ಇತಿಹಾಸ ವಿದ್ಯಾರ್ಥಿಗಳು ಸೂಚಿಸುವುದೇನಂದರೆ ಸಾ.ಶ. ಎರಡನೆಯ ಶತಮಾನದ ಜಸ್ಟಿನ್ ಮಾರ್ಟರ್ ಎಂಬವನು, ಯಾವ ಗುಹೆಯಲ್ಲಿ ಎಂದು ನಿಶ್ಚಯವಾಗಿ ಹೇಳದೆ, ಒಂದು ಗ್ರಾಟೊದಲ್ಲಿ ಹುಟ್ಟಿದನೆಂದು ವಾದಿಸಿದವರಲ್ಲಿ ಪ್ರಥಮನು. ಜಸ್ಟಿನ್ ಮಾರ್ಟರನ ಹೇಳಿಕೆಯಿಂದ ಹ್ಯಾಮಿಲ್ಟನ್ ತೀರ್ಮಾನಿಸುವುದು: “ಇದೊಂದು ಪ್ರಾಸಂಗಿಕ ಹೇಳಿಕೆ, ಮತ್ತು ಸಂತ ಜಸ್ಟಿನನಿಗೆ ಒಂದು ನಿಶ್ಚಿತ ಗುಹೆ ಮನಸ್ಸಿನಲ್ಲಿತ್ತೆಂದು ಯಾ ಅವನು ಈಗಿನ ನೆಟಿವಿಟಿ ಗವಿಯನ್ನು ಸೂಚಿಸಿದನೆಂದು ಹೇಳುವುದು ಒಂದೇ ಒಂದು ಪದದಿಂದ ಹಿಂಡಿ ರುಜುವಾತನ್ನು ಪಡೆದಂತೆಯೆ.”
ಒಂದು ಪಾದ ಟಿಪ್ಪಣಿಯಲ್ಲಿ ಹ್ಯಾಮಿಲ್ಟನ್ ಬರೆಯುವುದು: “ಇದೇ ಸಮಯದಲ್ಲಿ ಬರೆದ ಅಪಾಕ್ರಿಫ ಪುಸ್ತಕವಾದ ‘ಬುಕ್ ಆಫ್ ಜೇಮ್ಸ್’ ಯಾ ‘ಪ್ರಾಟಿವ್ಯಾಂಜೆಲಿಯಂ’ ನಲ್ಲಿರುವ ಜನನ ವೃತ್ತಾಂತವೂ ಒಂದು ಗವಿಯ ಪರಿಚಯ ಮಾಡಿಸುತ್ತದಾದರೂ ಅದು ಬೆತ್ಲೆಹೇಮಿಗೆ ಅರ್ಧ ದೂರದಲ್ಲಿದೆ ಎಂದು ಹೇಳಿ ವರ್ಣಿಸುತ್ತದೆ. ಈ ಕಥೆಗೆ ಐತಿಹಾಸಿಕ ಮೌಲ್ಯವಿರುವುದಾದರೆ ಈ ಸಂಪ್ರದಾಯ ಅಂದಿನ ವರೆಗೆ ಯಾವ ಒಂದು ಗವಿಯನ್ನೂ ಸೂಚಿಸಿ ಹೇಳಿರುವುದಿಲ್ಲ ಮತ್ತು ನೆಟಿವಿಟಿ ಗವಿಯನ್ನು ನಿಶ್ಚಯವಾಗಿಯೂ ಸೂಚಿಸಲಿಲ್ಲ.”
ಮೂರನೆಯ ಶತಮಾನದ ಧಾರ್ಮಿಕ ಲೇಖಕರಾದ ಆರಿಗೆನ್ ಮತ್ತು ಯುಸೀಬಿಯಸ್ ಆಗ ಮಾಹಿತಿಯಲ್ಲಿದ್ದ ಸಂಪ್ರದಾಯವನ್ನು ಒಂದು ನಿಶ್ಚಿತ ನಿವೇಶನಕ್ಕೆ ಜೋಡಿಸುತ್ತಾರೆ. ಹ್ಯಾಮಿಲ್ಟನ್ ತರ್ಕಿಸುವುದು: “ಒಂದು ಕಥೆ ಒಮ್ಮೆ ಒಂದು ನಿಶ್ಚಿತ ಗವಿಗೆ ಅಂಟಿಕೊಳ್ಳುವಲ್ಲಿ ಅದು ಅಲ್ಲಿಂದ ಅಗಲುವುದು ಅಸಂಭವನೀಯ; ಮತ್ತು ಕ್ರಿ.ಶ. 200ರ ಬಳಿಕ ಭೇಟಿಗಾರರಿಗೆ ತೋರಿಸಲ್ಪಟ್ಟಿರುವ ಗವಿ ಈಗಿನ ನೆಟಿವಿಟಿ ಗವಿಗೆ ಸಮಾನವಾಗಿದೆ ಎಂದು ಊಹಿಸುವುದು ವಿಶ್ವಸನೀಯ.”
ವಾಕ್ಸ್ ಎಬೌಟ್ ದ ಸಿಟಿ ಎಂಡ್ ಎನ್ವೈರನ್ಸ್ ಆಫ್ ಜೊರೂಸಲೆಮ್ (1842) ಎಂಬ ಪುಸ್ತಕದಲ್ಲಿ ಡಬ್ಲ್ಯು. ಎಚ್. ಬಾರ್ಟ್ಲೆಟ್, ಈ ಗವಿಯ ವಿಷಯ ಹೀಗೆ ಊಹಿಸುತ್ತಾರೆ: “ಇದು ರಕ್ಷಕನ ಜನ್ಮ ಸ್ಥಳವೆಂಬ ಸಂಪ್ರದಾಯ, ಯಾರು ಪಕ್ಕದ ಕೋಣೆಯೊಂದರಲ್ಲಿ ಸತ್ತನೊ ಆ ಸಂತ ಜೆರೋಮನಿಂದ ಹೇಳಲ್ಪಟ್ಟಿದ್ದು ಗೌರವಾರ್ಹ ಪ್ರಾಚೀನತೆಯಿಂದ ಬಂದಿರುವುದಾದರೂ ಇದು ಸಂಭವನೀಯತೆಗೆ ವ್ಯತಿರಿಕ್ತವಾಗಿದೆ. ಪಲೆಸ್ತೀನದಲ್ಲಿ ಗುಹೆಗಳು ಒಮ್ಮೊಮ್ಮೆ ಕೊಟ್ಟಿಗೆಗಳಾಗಿ ಉಪಯೋಗಿಸಲ್ಪಡುವ ಸಂಭವವಿರಬಹುದಾದರೂ ಇದು ಅಂಥ ಉದ್ದೇಶಕ್ಕೆ ಅನುಕೂಲವಾಗಲು ನೆಲದಡಿಯಲ್ಲಿ ಆಳವಾದ ಭಾಗದಲ್ಲಿದೆ. ಮತ್ತು ಗಮನಾರ್ಹ ಶಾಸ್ತ್ರೀಯ ಘಟನೆಗಳ ದೃಶ್ಯಗಳನ್ನು ಗ್ರಾಟೊಗಳಲ್ಲಿ, ಪ್ರಾಯಶಃ ಅಂಥ ಸ್ಥಳಗಳ ಭಾವೋತ್ಪಾದಕತೆಯ ಕಾರಣ ಇಡುವ ಸನ್ಯಾಸಿಗಳ ಪ್ರವೃತ್ತಿಯನ್ನು ನಾವು ಪರಿಗಣಿಸುವಾಗ ಪೂರ್ವಭಾವನೆ ಈ ನಿವೇಶನಕ್ಕೆ ವಿರುದ್ಧವಾಗಿ ಹೋಗುವುದು ಹೆಚ್ಚುಕಡಮೆ ನಿರ್ಣಯಾತ್ಮಕ.”
ನಮಗೆ ದೊರಕಿರುವ ಐತಿಹಾಸಿಕ ರುಜುವಾತುಗಳಿಂದ, ಮತ್ತು ಹೆಚ್ಚು ಪ್ರಾಮುಖ್ಯವಾಗಿ, ಯೇಸುವಾಗಲಿ ಅವನ ಶಿಷ್ಯರಾಗಲಿ ಅವನ ಜನ್ಮ ಸ್ಥಳಕ್ಕೆ ಯಾವ ಪ್ರಾಮಖ್ಯತೆಯನ್ನೂ ಕೊಟ್ಟಿಲ್ಲದಿರುವ ಶಾಸ್ತ್ರೀಯ ನಿಜತ್ವದಿಂದ ನಾವೇನು ತೀರ್ಮಾನಿಸಬಹುದು? ಏನೆಂದರೆ, ಮಹಾ ಕಾನ್ಸ್ಟೆಂಟೀನನ ತಾಯಿ, ರಾಣಿ ಹೆಲೆನ, ಸಾ.ಶ. 326ರಲ್ಲಿ ನೆಟಿವಿಟಿ ಚರ್ಚಿನ ನಿವೇಶನವನ್ನು ನಿಶ್ಚಯಿಸಿದಾಗ, ಹ್ಯಾಮಿಲ್ಟನ್ ಹೇಳುವಂತೆ, ಅದನ್ನು ‘ದೀರ್ಘ ಸಂಪ್ರದಾಯ’ದ ಆಧಾರದ ಮೇರೆಗೆ ನಿಶ್ಚಯಿಸಿದಳೇ ಹೊರತು ಐತಿಹಾಸಿಕ ಯಾ ಬೈಬಲಿನ ರುಜುವಾತಿನ ಮೇಲೆ ಅಲ್ಲ.
ಇದು, ಕ್ರಿಸ್ತನ ನಿಜ ಜನ್ಮ ನಿವೇಶನ ಅಜ್ಞಾತವೆಂಬ ಮುಂದಿನ ತೀರ್ಮಾನಕ್ಕೂ ನಡೆಸುತ್ತದೆ. ಆದುದರಿಂದ, ವಿಶ್ವಾಸಿಗಳು ನೆಟಿವಿಟಿ ಗ್ರಾಟೊಗಳಂಥ ಸ್ಥಳಗಳಿಗೆ ಯಾತ್ರೆ ಹೋಗಿ ಅವನ್ನು ಪೂಜ್ಯ ಭಾವದಿಂದ ಕಾಣುವುದು ನ್ಯಾಯಸಮ್ಮತವೆ? ಇಂಥ ವಿಷಯಗಳು ಕ್ರೈಸ್ತರಿಂದ ಕೇಳಲ್ಪಟ್ಟಿರುವಲ್ಲಿ ಯೇಸು ತಾನೆ ಈ ಜವಾಬ್ದಾರಿಯನ್ನು ತನ್ನ ಶಿಷ್ಯರಿಗೆ ತಿಳಿಸುತ್ತಿರಲಿಲ್ಲವೆ ಯಾ ತನ್ನ ಅಪೇಕ್ಷೆಯನ್ನು ಸೂಚಿಸುತ್ತಿರಲಿಲ್ಲವೆ? ಮಾನವ ಜಗತ್ತು ಇದನ್ನು ಓದುವಂತೆ ಇದು ದೇವರ ವಾಕ್ಯವಾದ ಬೈಬಲಿನಲ್ಲಿ ಬರೆಯಲ್ಪಡುತ್ತಿರಲಿಲ್ಲವೆ? ಪವಿತ್ರ ಶಾಸ್ತ್ರಗಳಲ್ಲಿ ಇಂಥ ಸಾಕ್ಷ್ಯಗಳ ಗಮನಾರ್ಹ ಗೈರುಹಾಜರಿಯಿರುವುದರಿಂದ, ಯಾವುದನ್ನು ಸ್ಮರಣಯೋಗ್ಯವೆಂದು ಯೇಸು ಎಣಿಸಿದನೆಂದು ನಾವು ಪ್ರಶ್ನಿಸುವುದು ಯೋಗ್ಯ.
ನಾವೆಷ್ಟೆ ಹುಡುಕಲಿ, ಯೇಸುವಿನ ಶಿಷ್ಯರು ತಲೆಮೊರೆಗಳಲ್ಲಿ ಸ್ಮರಿಸಿರುವ ಒಂದೇ ಒಂದು ಘಟನೆ ಅವನ ಯಜ್ಞಾರ್ಪಿತ ಮರಣವೆಂದು ಕಂಡುಹಿಡಿಯವೆವು. ಅವನು ವಸಂತಕಾಲದಲ್ಲಿ ತನ್ನ ಶಿಷ್ಯರೊಂದಿಗೆ ಕೊನೆಯ ಪಸ್ಕದೂಟವನ್ನು ಆಚರಿಸಿದ ಬಳಿಕ ಸ್ವಲ್ಪದರಲ್ಲಿ ಸತ್ತನು. ಆ ಸಂದರ್ಭದಲ್ಲಿ, ಅವನ ನಂಬಿಗಸ್ತ ಶಿಷ್ಯರು ಮ್ಯಾಟ್ಸಾತ್ ರೊಟ್ಟಿಯಂಥ ಹುಳಿರಹಿತ ರೊಟ್ಟಿ ಮತ್ತು ಕೆಂಪು ದ್ರಾಕ್ಷಾಮದ್ಯ ಸೇರಿರುವ ಸಾಂಕೇತಿಕ ಊಟವನ್ನು ಮಾಡಬೇಕೆಂದು ಅವನು ನಿರ್ದೇಶವಿತ್ತನು. ಎಪ್ರಿಲ್ 1, ಸಾ.ಶ. 33ರಲ್ಲಿ ಪ್ರಥಮವಾಗಿ ನಡೆದ ಈ ಸರಳ ಆಚರಣೆಯ ಸಂಬಂಧದಲ್ಲಿ ಅವನು ಆಜ್ಞಾಪಿಸಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.”—ಲೂಕ 22:19, 20.
ಯೇಸು ತಾನೆ ಕೊಟ್ಟ ಈ ಶಾಸ್ತ್ರಾಧಾರಿತ ಆಜೆಗ್ಞೆ ವಿಧೇಯತೆ ತೋರಿಸುತ್ತಾ ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ಕ್ರಿಸ್ತನ ಯಜ್ಞಾರ್ಪಿತ ಮರಣದ ಸ್ಮಾರಕವನ್ನು ವಾರ್ಷಿಕವಾಗಿ ಆಚರಿಸುತ್ತಾರೆ. ಅವರು ಈ ಕ್ರೈಸ್ತ ಕೂಟವನ್ನು ಯೆರೂಸಲೇಮಿನ ಮೇಲಂತಸ್ತಿನ ಕೊಠಡಿಯಂಥ ವಿಶೇಷ ಸ್ಥಳದಲ್ಲಿ ಆಚರಿಸುವುದಿಲ್ಲ. ಏಕೆಂದರೆ ಯೇಸು ಹಾಗೇನೂ ಸೂಚಿಸಲಿಲ್ಲ. ಆದರೆ ಲೋಕಾದ್ಯಂತ ಅವರು ತಮ್ಮ ರಾಜ್ಯ ಸಭಾಗೃಹಗಳಲ್ಲಿ ಮತ್ತು ತಮ್ಮ ವಠಾರದ ಇತರ ಯೋಗ್ಯ ಸ್ಥಳಗಳಲ್ಲಿ ಕೂಡಿಬರುತ್ತಾರೆ. ಮುಂದಿನ ಇಂಥ ಆಚರಣೆ ಎಪ್ರಿಲ್ 17, 1992ರಂದು ಸೂರ್ಯಾಸ್ತಮಾನದ ಬಳಿಕ ನಡೆಯುವುದು. ನಿಮ್ಮ ಮನೆಗೆ ಸಮೀಪವಿರುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಬರಲು ನಿಮಗೆ ಆಮಂತ್ರಣವಿದೆ.
ಯೇಸುವಿನ ಆಜೆಗ್ಞೆ ವಿಧೇಯರಾಗಿ ಈ ಪ್ರಧಾನ ಆಚರಣೆಗೆ ಹಾಜರಾಗಲು ನೀವು ಯೆರೂಸಲೇಮ್ ಯಾ ಬೆತ್ಲೆಹೇಮಿಗೆ ಹೋಗಬೇಕಾಗಿಲ್ಲ. ಯೇಸುವಾಗಲಿ ಶಿಷ್ಯರಾಗಲಿ ಕ್ರೈಸ್ತ ಆರಾಧನೆಯಲ್ಲಿ ಸ್ಥಳಗಳಿಗೆ ಪ್ರಾಮುಖ್ಯತೆ ಕೊಡಲಿಲ್ಲ. ಬದಲಾಗಿ, ಯೆರೂಸಲೇಮಿನ ಉತ್ತರಕ್ಕಿರುವ ಸಮಾರ್ಯದ ಬೆಟ್ಟವಾದ ಗೆರಿಜ್ಜೀಮಿನಲ್ಲಿ ತನ್ನ ಆರಾಧನೆಯನ್ನು ಕೇಂದ್ರವಾಗಿ ಮಾಡಿದ್ದ ಸಮಾರ್ಯದ ಹೆಂಗಸಿಗೆ ಯೇಸು ಹೇಳಿದ್ದು: “ಅಮ್ಮಾ, ನಾನು ಹೇಳುವ ಮಾತನ್ನು ನಂಬು; ಒಂದು ಕಾಲ ಬರುತ್ತದೆ; ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ ಈ ಬೆಟ್ಟಕ್ಕೂ ಹೋಗುವದಿಲ್ಲ, ಯೆರೂಸಲೇಮಿಗೂ ಹೋಗುವದಿಲ್ಲ. ಅದಿರಲಿ, ಸತ್ಯಭಾವದಿಂದ ದೇವಾರಾಧನೆ ಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ. ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ.”—ಯೋಹಾನ 4:21, 23.
ತಂದೆಯನ್ನು ಆತ್ಮ ಮತ್ತು ಸತ್ಯದಿಂದ ಆರಾಧಿಸುವವರು ಆರಾಧನೆಗಾಗಿ ಬೆತ್ಲೆಹೇಮಿನಂಥ ವಿಶೇಷ ನಿವೇಶನಗಳನ್ನಾಗಲಿ ವಿಗ್ರಹಗಳಂಥ ವಸ್ತುಗಳನ್ನಾಗಲಿ ನೋಡುವುದಿಲ್ಲ. ಅಪೊಸ್ತಲ ಪೌಲನು ಹೇಳಿದ್ದು: “ನಾವು ನೋಡುವವರಾಗಿ ನಡೆಯದೆ ನಂಬುವವರಾಗಿಯೇ ನಡೆಯುತ್ತೇವಾದದರಿಂದ ದೇಹದಲ್ಲಿ ವಾಸಿಸುವ ವರೆಗೂ ಕರ್ತನಿಗೆ ದೂರದಲ್ಲಿರುವ ಪ್ರವಾಸಿಗಳಾಗಿದ್ದೇವೆಂಬದನ್ನು ಬಲ್ಲೆವು.”—2 ಕೊರಿಂಥ 5:6, 7.
ಆದರೆ ನೀವಿನ್ನೂ, ನಾವು ಹೇಗೆ ದೇವರನ್ನು ಸ್ವೀಕಾರಯೋಗ್ಯವಾಗಿ ಆರಾಧಿಸಬಹುದೆಂದು ಚಿಂತನೆ ಮಾಡಬಹುದು. ಮಂದಿನ ಬಾರಿ ಒಬ್ಬ ಯೆಹೋವನ ಸಾಕ್ಷಿ ನಿಮ್ಮ ಮನೆಗೆ ಬಂದಾಗ ದಯವಿಟ್ಟು ಅವನನ್ನು ಅಥವಾ ಅವಳನ್ನು ಕೇಳಿರಿ. (w90 12/15)
[ಪುಟ 22 ರಲ್ಲಿರುವ ಚಿತ್ರ]
ಚಳಿಗಾಲದಲ್ಲಿ ಬೆತ್ಲೆಹೇಮಿನ ಬಳಿ ನೆಲವನ್ನು ಹಿಮ ಮುಚ್ಚಬಹುದು. ಕುರುಬರು ಕುರಿಗಳೊಂದಿಗೆ ಹೊರಗೆ ಮಲಗಿಯಾರೆ?
[ಕೃಪೆ]
Pictorial Archive (Near Eastern History) Est.
[ಪುಟ 23 ರಲ್ಲಿರುವ ಚಿತ್ರಗಳು]
ಬೆತ್ಲೆಹೇಮಿನ ನೆಟಿವಿಟಿ ಚರ್ಚ್ ಮತ್ತು ಅದರ ನೆಲದಡಿಯ ಗ್ರಾಟೊ
[ಕೃಪೆ]
Pictorial Archive (Near Eastern History) Est.
[ಕೃಪೆ]
Garo Nalbandian