ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 6/1 ಪು. 27-29
  • ಯೆಹೋವನು ಮನೇ ಕಟ್ಟದಿದ್ದರೆ . . . ’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ಮನೇ ಕಟ್ಟದಿದ್ದರೆ . . . ’
  • ಕಾವಲಿನಬುರುಜು—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮನೆಯನ್ನು ಕಟ್ಟುವುದು
  • ಸಾಫಲ್ಯವುಳ್ಳ ಕುಟುಂಬ-ಕಟ್ಟುವಿಕೆ
  • ಕೆಲಸದಲ್ಲೇ ತರಬೇತು
  • ಕುಟುಂಬ ಒಕ್ಕಟ್ಟಿನ ಗುರಿಯಿಡಿರಿ
  • ಆತ್ಮಿಕವಾಗಿ ಬಲವಾಗಿರುವ ಕುಟುಂಬವನ್ನು ಕಟ್ಟುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಕುಟುಂಬ ಪರಾಮರಿಕೆಯ ಜವಾಬ್ದಾರಿಗೆ ಹೆಗಲುಕೊಡುವುದು
    ಕಾವಲಿನಬುರುಜು—1998
  • ಕ್ರೈಸ್ತ ಕುಟುಂಬವು ಕಾರ್ಯಗಳನ್ನು ಒಡಗೂಡಿ ಮಾಡುತ್ತದೆ
    ಕಾವಲಿನಬುರುಜು—1993
  • ದೇವರ ಸೇವೆಯಲ್ಲಿ ಐಕ್ಯವಾಗಿರುವ ದೊಡ್ಡ ಕುಟುಂಬಗಳು
    ಕಾವಲಿನಬುರುಜು—1999
ಇನ್ನಷ್ಟು
ಕಾವಲಿನಬುರುಜು—1991
w91 6/1 ಪು. 27-29

ಯೆಹೋವನು ಮನೇ ಕಟ್ಟದಿದ್ದರೆ . . . ’

ನೀವೆಲ್ಲೇ ವಾಸಿಸಿರಿ, ನಿಮಗೆ ಮನೆಯಾಗಿ ಇರುವ ಒಂದು ಸ್ಥಳವು ಇದ್ದೇ ಇದೆ. ನಿವಾಸಗಳ ನಾವೀನ್ಯತೆಗಳಲ್ಲಿ ಮತ್ತು ಕಟ್ಟಡ ವಿಧಾನಗಳಲ್ಲಿ ಬಹಳಷ್ಟು ವಿವಿಧತೆಗಳಿವೆ. ಮಣ್ಣು ಮತ್ತು ತಡಿಕೆಗಳ ಮನೆಗಳು, ಉದ್ದವಾದ ಗುಡಿಸಲುಗಳು, ಮುಂತಯಾರಿಸಲ್ಪಟ್ಟ ಜಲ್ಲಿಗಾರೆಯ ಮನೆಗಳು— ಇವುಗಳ ಸಾಲಿಗೆ ಅಂತ್ಯವಿಲ್ಲದ್ದಾಗಿ ತೋರುತ್ತದೆ. ಬೇರೆಯವರು ಹೆಚ್ಚು ಗಟ್ಟಿಮುಟ್ಟಾದ ಬೀಡುಗಳಲ್ಲಿ ವಿರಮಿಸುವಾಗ, ಕೆಲವರು ಕೇವಲ ಹುಲ್ಲು ಗುಡಿಸಲುಗಳಲ್ಲೂ ಅಷ್ಟೇ ಆರಾಮದಿಂದಿರುತ್ತಾರೆ. ಅದು ಹಾಗೇಕೆ?

ಹಾಯಾಗಿರುವುದು, ಸಂತುಷ್ಟರಾಗಿರುವುದು ಹೆಚ್ಚಾಗಿ ಒಬ್ಬನಿಗಿರುವ ಸಹವಾಸದ ಮೇಲೆ ಆತುಕೊಂಡಿದೆ. (ಜ್ಞಾನೋಕ್ತಿ 18:24) ಲೋಕವು ನೀಡಬಲ್ಲ ಎಲ್ಲಾ ಮಿಂಚು-ಮಿರುಗುಗಳ ನಡುವೆಯೂ ಶಾಂತಿ ಮತ್ತು ನೆಮ್ಮದಿಗಾಗಿ ಒಬ್ಬನು ಸ್ವಾಭಾವಿಕವಾಗಿ ಹಿಂತೆರಳ ಬಯಸುವುದು ತನ್ನ ಮನೆಯೆಡೆಗೇ. ಆದರೂ, ಆಧುನಿಕ ಕಾಲದ ಗೃಹಜೀವನದ ವರದಿಗಳಿಂದ ತೀರ್ಮಾನಿಸುವಲ್ಲಿ, ಒಬ್ಬನು ಯಾವಾಗಲೂ ಶಾಂತಿ ಮತ್ತು ನೆಮ್ಮದಿಯನ್ನು ಮನೆಯಲ್ಲೇ ಕಾಣುವನೆಂಬ ಖಾತರಿಯು ಇರುವುದಿಲ್ಲ. ಬಹಳಷ್ಟು ಮಟ್ಟಿಗೆ ನಿಮ್ಮೊಂದಿಗೆ ಜೀವಿಸುವ ನಿಮ್ಮ ಕುಟುಂಬವು—ನಿಮ್ಮ ಮನೋಶಾಂತಿಯಲ್ಲಿ ಪಾಲಿಗರಾಗಬಹುದು ಅಥವಾ ಅದನ್ನು ಕೆಡಿಸಬಹುದು. ಹೀಗಿರಲಾಗಿ, ಒಂದು ಸಂತೋಷವುಳ್ಳ, ಶಾಂತಿಭರಿತ ಮನೆಯನ್ನು ಕಟ್ಟುವದರಲ್ಲಿರುವ ಒಳಗುಟ್ಟೇನು?

ಮನೆಯನ್ನು ಕಟ್ಟುವುದು

“ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವುದು ವ್ಯರ್ಥ” ಎಂಬದಾಗಿ ಕೀರ್ತನೆ 127ರ ಮೊದಲನೆಯ ವಚನವು ತಿಳಿಸುತ್ತದೆ. ಸತ್ಯ ದೇವರಾದ ಯೆಹೋವನ ಆರಾಧನೆಗಾಗಿ ಮನೆಯನ್ನು ಕಟ್ಟುವುದರಲ್ಲಿ ಭಾಗವಹಿಸುವವರು, ಇದನ್ನು ಸತ್ಯವಾಗಿ ಕಾಣುತ್ತಾರೆ. ಉತ್ತಮ ರಾಜ್ಯ ಸಭಾಗೃಹಗಳನ್ನು ಶೀಘ್ರವಾಗಿ ಕಟ್ಟಲು ಕುಶಲ ಕೆಲಸಗಾರರು ತಮ್ಮ ಸಮಯ ಮತ್ತು ಪ್ರಯತ್ನಗಳನ್ನು ಸ್ವಯಂಸೇವೆಯಲ್ಲಿ ಕೊಡುತ್ತಾರಾದರೂ, ಸಾಫಲ್ಯದ ಖಾತರಿಯನ್ನು ಕೊಡುವಂಥಾದ್ದು ಯೆಹೋವನ ಆಶೀರ್ವಾದವೇ. ಅಲ್ಲಿ ಅಸಾಮಾನ್ಯವಾದ ಸಂಗತಿಯೊಂದು ಕಾರ್ಯನಡಿಸುತ್ತದೆಂಬದನ್ನು ಪ್ರೇಕ್ಷಕರು ಕೂಡಾ ಆಗಿಂದಾಗ್ಯೆ ಕಾಣಬಲ್ಲರು. ಉದಾಹರಣೆಗೆ, ಇಂಗ್ಲೆಂಡಿನ ಕಾಲ್ಚೆಸ್ಟರಲ್ಲಿ, ಅಂಥ ಒಂದು ಕಟ್ಟಡದ ಕುರಿತು ವರದಿಸುವಾಗ ಪತ್ರಿಕೆಯೊಂದು ವರದಿಸಿದ್ದು: “ಯೆಹೋವನು ಮೇಲ್ಛಾವಣಿಯನ್ನು ಏರಿಸಿದನು.”

ಆದರೂ, ಅಕ್ಷರಶಃ ಕಟ್ಟಡ ಯೋಜನೆಗಳಲ್ಲದ, ಬೇರೆ ಪ್ರಯತ್ನಗಳಲ್ಲಿನ ಸಾಫಲ್ಯ ಸಹಾ ಯೆಹೋವನ ಆಶೀರ್ವಾದದ ಮೇಲೆ ಆಧರಿಸಿದೆ. ಕೀರ್ತನೆ 127ರ ಮೂರನೆಯ ವಚನದಲ್ಲಿ ಸೊಲೊಮೋನನು ಹೇಳಿದ ಮಾತುಗಳನ್ನು ಗಮನಿಸಿರಿ: “ಪುತ್ರ ಸಂತಾನವು ಯೆಹೋವನಿಂದ ಬಂದ ಸ್ವಾಸ್ಥ್ಯವು; ಗರ್ಭಫಲವು ಆತನ ಬಹುಮಾನವೇ.” ಯೆಹೋವನು ಕುಟುಂಬಗಳ ಸಂಬಂಧದಲ್ಲಿಯೂ ಉತ್ಕೃಷ್ಟ ವಾಸ್ತುಶಿಲ್ಪಿ, ಮತ್ತು ಹೆತ್ತವರಿಗೆ ಅವನ ಜೊತೆ ಕೆಲಸಗಾರರಾಗುವ ಅಥವಾ ಸಹೋದ್ಯೋಗಿಗಳಾಗಿರುವ ಆಶ್ಚರ್ಯಕರ ಸುಯೋಗವಿದೆ.a (ಇಬ್ರಿಯ 11:10) ಕ್ರೈಸ್ತ ಹೆತ್ತವರು ಈ ವಿಶೇಷ ಜೊತೆಗಾರಿಕೆಯ ಸದುಪಯೋಗವನ್ನು ಹೇಗೆ ಮಾಡಬಹುದು ಮತ್ತು ನಿರ್ಮಾಣಿಕನಾದ ಯೆಹೋವ ದೇವರಿಗೆ ಗೌರವವನ್ನು ತರುವಂಥಾ ಒಂದು ಸಂತೋಷವುಳ್ಳ, ಶಾಂತಿಭರಿತ ಕುಟುಂಬವನ್ನು ಯಶಸ್ವಿಯಾಗಿ ಹೇಗೆ ಕಟ್ಟಬಹುದು?

ಸಾಫಲ್ಯವುಳ್ಳ ಕುಟುಂಬ-ಕಟ್ಟುವಿಕೆ

ಸಾಫಲ್ಯವುಳ್ಳ ಕಟ್ಟುವಿಕೆಯಲ್ಲಿ ಒಂದು ಅತ್ಯಾವಶ್ಯಕ ಘಟಕವು, ಒಂದು ಸುದೃಢ ವಾಸ್ತುಶಿಲ್ಪ ಯೋಜನೆ ಅಥವಾ ನೀಲಿಪ್ರತಿ. ದೇವರ ಎಳೇ ಸ್ತುತಿಗಾರರನ್ನು ಕಟ್ಟಲು ಆತನ ಪ್ರೇರಿತ ವಾಕ್ಯವಾದ ಬೈಬಲಿಗಿಂತ ಮಿಗಿಲಾದ ನೀಲಿಪ್ರತಿ ಇಲ್ಲ. (2 ತಿಮೊಥಿ 3:16, 17) “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು” ಎಂದು ಬರೆದನು ಸೊಲೊಮೋನನು. (ಜ್ಞಾನೋಕ್ತಿ 22:6) ಅವನು “ನಡೆಯಬೇಕಾದ ಮಾರ್ಗ” ಯೆಹೋವನ ಮಾರ್ಗವೇ, ಮತ್ತು ಹೆತ್ತವರು ಅದನ್ನು ಅನುಸರಿಸುವಾಗ, ತಮ್ಮ ಎಳೆಯರಿಗೆ ದೇವರ ನಂಬಿಗಸ್ತ ಸೇವಕರಾಗಿ ಬೆಳೆಯುವ ಪ್ರತೀಕ್ಷೆಯನ್ನು ಅವರು ನೀಡುವವರಾಗಿದ್ದಾರೆ.

ಒಂದು ಸುದೃಢ ಕಟ್ಟಡಕ್ಕೆ ಒಳ್ಳೆಯ ಕಟ್ಟಡ ಸಾಮಗ್ರಿಗಳು ಬೇಕು. ತಾನು ಕಂಡ ಕೆಲವು ಕಟ್ಟಡಗಳು ನೂರಾರು ವರ್ಷಗಳಷ್ಟು ಹಳತೆಂದು ನಂಬಲು ಯೂರೋಪಿಗೆ ಬಂದ ಒಬ್ಬ ಆಫ್ರಿಕನ್‌ ಸಂದರ್ಶಕನಿಗೆ ಕಷ್ಟವಾಯಿತು. ಆ ಕಟ್ಟಡಗಳಲ್ಲಿ ಉಪಯೋಗಿಸಲ್ಪಟ್ಟ ಅಷ್ಟು ಬಾಳಿಕೆಯ ಸಾಮಾನುಗಳನ್ನು ಕಂಡದ್ದೇ ಅವನಿಗೆ ಹೊಸ ಸಂಗತಿ. ಇನ್ನೊಂದು ಕಡೆ, ಕಟ್ಟುವವರು ಸಾಮಗ್ರಿಗಳನ್ನು ಜಿಪುಣತನದಿಂದ ಉಪಯೋಗಿಸುವಾಗ, ಫಲಿತಾಂಶವು ಸಾಮಾನ್ಯವಾಗಿ ವಿಪತ್ಕಾರಕ, ಮರಣಕರವೂ ಹೌದು. ಮಕ್ಕಳನ್ನು ಬೆಳೆಸುವುದರಲ್ಲಿಯೂ ಇದು ಸತ್ಯವಾಗಿರಬಲ್ಲದು.

ಗರ್ಭದಾರಣೆಯಲ್ಲೇ ಮಕ್ಕಳಿಗೆ, ಪಾಪದಿಂದಾದ ಅಪೂರ್ಣತೆಯ ಗುಣಲಕ್ಷಣಗಳುಳ್ಳ ಅನುವಂಶಿಕ ಬಾಧ್ಯತೆಯು ಸಿಗುತ್ತದೆ. (ಕೀರ್ತನೆ 51:5) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಆರಂಭದಿಂದಲೇ ಅವರು ನ್ಯೂನತೆಯಿದ್ದವರು. ತಮ್ಮ ಮಕ್ಕಳಲ್ಲಿ ಬಾಳುವ, ದೈವಿಕ ಗುಣಗಳನ್ನು ಕಟ್ಟುವುದಕ್ಕೆ ಪ್ರಯಾಸ ಪಡುವ ಮೂಲಕ ಕ್ರೈಸ್ತ ಹೆತ್ತವರು ಇದನ್ನು ಪ್ರತಿಭಟಿಸ ಪ್ರಯತ್ನಿಸಬೇಕು. (1 ಕೊರಿಂಥ 3:10-15) ಇದನ್ನು ಮಾಡದ ಹೊರತು, ಬೇರೆ ಕ್ಷೇತ್ರಗಳಲ್ಲಿ ಅಂದರೆ ಅತ್ಯುತ್ತಮವಾದ ಆಹಾರ, ಬಟ್ಟೆ, ಮನೆಗಳನ್ನು ತಮ್ಮ ಮಗ ಯಾ ಮಗಳಿಗೆ ಒದಗಿಸುವುದರಲ್ಲಿ ಹೆತ್ತವರು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಲಿ, ಅವರ ಕಟ್ಟುವ ಕೆಲಸದಲ್ಲಿ ಯಾವ ಪ್ರಯೋಜನವೂ ಸಿಗದು.

ಆದ್ದರಿಂದಲೇ ಹೆತ್ತವರಿಗೆ, ವಿಶೇಷವಾಗಿ ತಂದೆಗಳಿಗೆ ದೇವರ ಉಪದೇಶವು ಹೀಗಿದೆ: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಯೆಹೋವನ ಶಿಸ್ತಿನಲ್ಲಿ ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಉಪದೇಶ ಮಾಡುತ್ತಾ ಅವರನ್ನು ಸಾಕಿಸಲಹಿರಿ.” (ಎಫೆಸ 6:4, NW) ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಅತ್ಯುತ್ತಮ ನೀಲಿಪ್ರತಿಗಳು ಮತ್ತು ಕಟ್ಟುವ ಸಾಮಗ್ರಿಗಳು ಒಳಗೂಡಿವೆ. ಅವುಗಳನ್ನು ಉಪಯೋಗಿಸುವಿಕೆಯು ಇಡೀ ಕುಟುಂಬಕ್ಕೆ ನಿತ್ಯ ಪ್ರಯೋಜನಗಳನ್ನು ತರುವುದು.

ಕೆಲಸದಲ್ಲೇ ತರಬೇತು

ಸುಸಜ್ಜಿತ ಯೋಜನೆಗಳನ್ನು ಮಾಡಿದಾಗ್ಯೂ, ಯಾವುದೇ ಕಟ್ಟುವಿಕೆಯ ಸಮಯದಲ್ಲಿ ಯಾವಾಗಲೂ ಅನಿರೀಕ್ಷಿತ ತಾಪತ್ರಯಗಳು ಬಂದೇ ಬರುತ್ತವೆ. ತದ್ರೀತಿಯಲ್ಲಿ, ಕುಟುಂಬ ಸದಸ್ಯರ ದಿನನಿತ್ಯದ ಜೀವಿತದಲ್ಲಿ ಅನಿರೀಕ್ಷಿತ ಸಮಸ್ಯೆಗಳನ್ನು ಹೆತ್ತವರು ಮುನ್ನೋಡಲು ಕಲಿಯಬೇಕು ಮತ್ತು ಅವುಗಳೊಂದಿಗೆ ವ್ಯವಹರಿಸಲು ಸಿದ್ಧರಿರಬೇಕು. ಇದನ್ನು ಮಾಡುವುದು ಹೇಗೆ?

ಹೆತ್ತವರಿಬ್ಬರ ನಡುವೆಯೂ ಉತ್ತಮ ಮಾತು ಸಂಸರ್ಗ ಅತ್ಯಾವಶ್ಯಕವು. ತಂದೆ ಮತ್ತು ತಾಯಿ ಪ್ರಾರ್ಥನಾಪೂರ್ವಕವಾಗಿ ಎಳೆಯರ ಪ್ರಗತಿಯನ್ನು ಒಟ್ಟುಗೂಡಿ ಚರ್ಚಿಸುವಾಗ, ಎಲ್ಲಿ ಹೊಗಳಿಕೆಯು ಸಲ್ಲಬೇಕೋ ಆ ಕೆಲವು ಕ್ಷೇತ್ರಗಳನ್ನು ಮತ್ತು “ಕಟ್ಟುವ” ಅಗತ್ಯವಿರುವ ಬೇರೆಯವುಗಳನ್ನು ಕಂಡುಕೊಳ್ಳುವರು. ಒಮ್ಮೆ ಅಂಥಾ ಬಲಹೀನತೆಗಳನ್ನು ಕಂಡುಕೊಂಡಾಗ ಹೆತ್ತವರು ಒಟ್ಟಾಗಿ ಕ್ರಿಯೆಗೈದು, ಅವುಗಳನ್ನು ನಿರ್ವಹಿಸಲು ತಕ್ಕದಾದ್ದ ಹೆಜ್ಜೆಗಳನ್ನು ಕೈಕೊಳ್ಳಬಲ್ಲರು.

ಆದರೆ ಪ್ರಾಯಶಃ ನಿಮ್ಮ ಕುಟುಂಬ ದೊಡ್ಡದು, ಮತ್ತು ನೀವು ಹೀಗೆ ನೆನಸಬಹುದು: ‘ನಮ್ಮ ಅನೇಕ ಮಕ್ಕಳ ವ್ಯಕ್ತಿಪರ ಅಗತ್ಯತೆಗಳಿಗೆ ನಮ್ಮ ಪ್ರಯತ್ನಗಳನ್ನು ಹೊಂದಿಸಿಕೊಳ್ಳುವುದು ಹೇಗೆ?’ ನಿಮ್ಮ ಮಕ್ಕಳು ಒಬ್ಬರಿಗೊಬ್ಬರು ಸಹಾಯ ಮಾಡುವಂತೆ ಕೆಲಸದಲ್ಲೇ ಸಹಾಯವನ್ನೂ ಏಕೆ ಕೊಡಬಾರದು? ಅನನುಭವಿಯು (ಅಪ್ರೆಂಟಿಸ್‌) ನುರಿತ ಕುಶಲಕರ್ಮಿಯೊಂದಿಗೆ ಒಂದು ಕೌಶಲ್ಯತೆಯನ್ನು ಕಲಿಯಲು ಹಲವಾರು ವರ್ಷ ಕೆಲಸ ಮಾಡುತ್ತಾನೆ. ಪ್ರಾಯಶಃ ನಿಮ್ಮ ಕುಟುಂಬ ಅಭ್ಯಾಸದಲ್ಲಿ, ನಿಮ್ಮ ಹದಿವಯಸ್ಕ ಮಕ್ಕಳು ತಮಗಿಂತ ಚಿಕ್ಕವರಿಗೆ ಕೆಲವು ನಿರ್ದಿಷ್ಟ ವಿಷಯಗಳನ್ನು ವಿವರಿಸುವಂತೆ ನೀವು ನೇಮಿಸಬಹುದು. ಪ್ರಾಮಾಣಿಕತೆ, ಮಿತ್ರರ ಆಯ್ಕೆ, ಶಾಲೆಯಲ್ಲಿ ಕೆಟ್ಟ ಪ್ರಭಾವಗಳನ್ನು ಎದುರಿಸುವುದು ಮುಂತಾದ ವಿಷಯಗಳನ್ನು ದೊಡ್ಡ ಮತ್ತು ಚಿಕ್ಕಮಕ್ಕಳಿಬ್ಬರೂ ಚೆನ್ನಾಗಿ ವಿವರಿಸಶಕ್ತರು. ದೊಡ್ಡ ಮಕ್ಕಳಿಗೆ ಅಂಥ ನಿಜ-ಜೀವಿತ ಯೋಜನೆಗಳನ್ನು ವಹಿಸಿಕೊಡುವ ಮೂಲಕ ಅವರು ತಮ್ಮ ವಿವೇಚನಾ ಶಕ್ತಿಯನ್ನು ಮತ್ತು ಕಲಿಸುವ ಕಲೆಯನ್ನು ಬೆಳೆಸಿಕೊಳ್ಳಲು ನೀವು ತರಬೇತು ಕೊಡುತ್ತೀರಿ ಮಾತ್ರವಲ್ಲ ಎಳೆಯ ಮಕ್ಕಳಿಗೂ ಅವರು ತಿಳಿಯಬೇಕಾದದ್ದನ್ನು ಕಲಿಸಿಕೊಡುತ್ತೀರಿ. (ಇಬ್ರಿಯ 5:14) ಇದು ನಿಮ್ಮ ಮಕ್ಕಳೊಳಗೆ ನಿಜ ಮೈತ್ರಿಯನ್ನು ಬೆಳೆಸಲು ಇನ್ನೂ ಅಧಿಕ ಪ್ರಯೋಜನಕಾರಿಯು.

ಒಂದು ವೇಳೆ ಒಂದೇ ಮಗುವಿರುವ ಒಂದು ಚಿಕ್ಕ ಕುಟುಂಬವು ನಿಮ್ಮದಾಗಿರಬಹುದು. ಆಗ ನಿಮ್ಮ ಪುಟ್ಟನನ್ನು ತಿಳಿಯುವ ಮತ್ತು ಅರ್ಥಮಾಡಿಕೊಳ್ಳುವ ಅನೇಕ ಸಂದರ್ಭಗಳು ನಿಮಗಿವೆ. ಆದರೆ ಅವನನ್ನು ಅತಿರೇಕ ಗಮನದ ಕೇಂದ್ರವಾಗಿ ಮಾಡುವ ಮೂಲಕ ನಿಮ್ಮ ಮಗುವನ್ನು ಕೆಡಿಸುವ ಅಪಾಯದ ಕುರಿತೂ ಎಚ್ಚರದಿಂದಿರ್ರಿ. ನೀವು ಮೂವರಿದ್ದೀರಿ, ಅಲ್ಲವೇ? ಆದ್ದರಿಂದ ವಿಷಯಗಳನ್ನು ಒಟ್ಟುಗೂಡಿ ಮಾಡಿರಿ. ಇದು ಅವನನ್ನು ಇತರರೊಂದಿಗೆ ಮಾತಾಡುವಂತೆ ಮತ್ತು ತನ್ನ ಗಮನವನ್ನು ಹೊರಗೆ ಹರಿಸುವಂತೆ ಕಲಿಸುವುದು, ಹೀಗೆ, ಸ್ವಾರ್ಥಪರನಾಗದಂತೆ ತಡೆಯುವುದು.

ಕುಟುಂಬ ಒಕ್ಕಟ್ಟಿನ ಗುರಿಯಿಡಿರಿ

ಕುಟುಂಬದ ಕಟ್ಟುವಿಕೆಗೆ, ಒಂದು ಬೈಬಲಭ್ಯಾಸದ ನಡಿಸುವಿಕೆ ಮತ್ತು ಸೂಚನೆ ಮತ್ತು ಶಿಸ್ತನ್ನು ಕೊಡುವಿಕೆಗಿಂತ ಅಧಿಕವಾದದ್ದು ಬೇಕು ಎಂಬದು ನಿಶ್ಚಯ. ಸೊಲೊಮೋನನು ಅಂದದ್ದು: “ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವುದಕ್ಕಿಂತ ಇನ್ನೇನೂ ಮನುಷ್ಯನಿಗೆ ಮೇಲಿಲ್ಲ.” (ಪ್ರಸಂಗಿ 2:24) ಒಂದು ರುಚಿಕರವಾಗಿ ತಯಾರಿಸಲ್ಪಟ್ಟ ಊಟದಲ್ಲಿ ನಿಮ್ಮ ಕುಟುಂಬವು ಆನಂದಿಸುತ್ತದೆಂಬದಕ್ಕೆ ಸಂಶಯವಿಲ್ಲ. ಕುಟುಂಬವಾಗಿ ಕೂಡಿ ಊಟ ಮಾಡುವಂತೆ ನೀವು ಏರ್ಪಡಿಸುತ್ತೀರೋ? ಕುಟುಂಬದ ವಿವಿಧ ಸದಸ್ಯರು ಕೆಲಸದಲ್ಲಿ, ಶಾಲೆಯಲ್ಲಿ ಅಥವಾ ಬೇರೆ ಕಡೆಗಳಲ್ಲಿ ದೂರವಿರುವಾಗ ಇದು ಯಾವಾಗಲೂ ಶಕ್ಯವಾಗಲಿಕ್ಕಿಲ್ಲ. ಆದರೆ, ಸಾಮಾನ್ಯವಾಗಿ ದಿನಕ್ಕೆ ಒಂದಾದರೂ ಊಟವನ್ನು ಕುಟುಂಬವು ಒಟ್ಟಾಗಿ ಉಣ್ಣ ಸಾಧ್ಯವಿದೆ. ಕುಟುಂಬ ಮೇಜಿನಲ್ಲಿ ಹಿತಕರವಾದ ವಾತಾವರಣವನ್ನು ನಿರ್ಮಿಸಲು ಯಾವುದು ನೆರವಾಗಬಲ್ಲದು?

ಒಬ್ಬ ಸಹೋದರನು ಹಾಜರಿರುವ ಎಲ್ಲರ ಚರ್ಚೆಗಾಗಿ ಒಂದು ಬೈಬಲ್‌ ಪ್ರಶ್ನೆಯನ್ನು ಎಬ್ಬಿಸಲು ಆ ಸಂದರ್ಭವನ್ನು ಉಪಯೋಗಿಸುತ್ತಾನೆ. ಉತ್ತರ ಗೊತ್ತಿರದವರನ್ನು ಸಂಕೋಚಕ್ಕೆ ಹಾಕುವದರಿಂದ ಅವನು ದೂರವಿರುತ್ತಾನೆ ನಿಶ್ಚಯ. ಇತರರು ಕ್ಷೇತ್ರ ಸೇವಾ ಅನುಭವಗಳನ್ನು ತಿಳಿಸುತ್ತಾರೆ. ಆತ್ಮಿಕ ವಿಷಯಗಳಿಗೆ ಗಮನ ಕೊಡುವ ಮೂಲಕ ಊಟದ ಸಮಯಗಳು, ಇಡೀ ಕುಟುಂಬದ ಭಕ್ತಿವೃದ್ಧಿಯ ಸಂದರ್ಭಗಳಾಗಿ ಪರಿಣಮಿಸುತ್ತವೆ. (ರೋಮಾಪುರ 14:19 ನೋಡಿ.) ಲೋಕದ ಕೆಲವು ಭಾಗಗಳಲ್ಲಿ ಊಟದ ವೇಳೆ ಹೆಚ್ಚು ಸಂಭಾಷಿಸುವ ಪದ್ಧತಿ ಇಲ್ಲ ನಿಜ. ಆದರೂ, ಒಂದು ಸಂತೋಷದ ವಾತಾವರಣವನ್ನು ಕಾಪಾಡಲು ಮನಃಪೂರ್ವಕ ಪ್ರಯತ್ನವು ಅತ್ಯಾವಶ್ಯಕ. ಜ್ಞಾನೋಕ್ತಿ 15:17 ಅನ್ನುವುದು: “ದ್ವೇಷವಿರುವಲ್ಲಿ ಕೊಬ್ಬಿದ ದನದ ಮಾಂಸಕ್ಕಿಂತ ಪ್ರೇಮವಿರುವಲ್ಲಿ ಸೊಪ್ಪಿನ ಊಟವೇ ಉತ್ತಮ.”

ವಿರಾಮ ಮತ್ತು ಗತಿಯಲ್ಲಿ ಬದಲಾವಣೆಗೆ ಸಹಾ ಕ್ರೈಸ್ತ ಕುಟುಂಬ ಜೀವನದಲ್ಲಿ ಅದರ ಸ್ಥಾನವಿದೆ. ಸುಜ್ಞ ಹೆತ್ತವರು ಅಂಥ ಸಂದರ್ಭಗಳನ್ನು, ಒಂದು ಬಲವಾದ ದೇವಪ್ರಭುತ್ವ ಕುಟುಂಬವನ್ನು ಕಟ್ಟುವುದಕ್ಕೆ ಉಪಯೋಗಿಸುತ್ತಾರೆ. ಹೇಗೆ?

ಎಳೆಯರನ್ನು ತಮ್ಮ ತಮ್ಮ ಸ್ವಂತ ಅಭಿರುಚಿಗಳನ್ನು ಬೆನ್ನಟ್ಟುವಂತೆ ಬಿಡುವುದು ಸುಲಭವಾದರೂ, ಅದರಲ್ಲಿ ಅಪಾಯವಿದೆ. ಉದಾಹರಣೆಗೆ, ಎಳೆಯರನ್ನು ಜೀವ ಮತ್ತು ಅಂಗಗಳಿಗೆ ಹಾನಿಯಾಗುವಷ್ಟರ ಮಟ್ಟಿಗೆ ಆಟಗಳಲ್ಲಿ ಆಳವಾಗಿ ಒಳಗೂಡುವಂತೆ ಬಿಡುವುದು ಅದೆಷ್ಟು ಅವಿವೇಕ! (1 ತಿಮೊಥಿ 4:8) ಸಾಧ್ಯವಾದಷ್ಟು ಮಟ್ಟಿಗೆ ಕುಟುಂಬದ ಪ್ರತಿ ಸದಸ್ಯನು ಒಳಗೂಡುವಂಥಹ ಚಟುವಟಿಕೆಗಳನ್ನು ಆರಿಸಿಕೊಳ್ಳಿರಿ. ತಂದೆಯು ಅವರ ಅಭಿಪ್ರಾಯಗಳನ್ನು ಮತ್ತು ವಿಚಾರಗಳನ್ನು ಕೇಳಿಕೊಂಡು, ತಯಾರಿಯಲ್ಲಿ ಪ್ರತಿಯೊಬ್ಬನಿಗೆ ಏನಾದರೂ ಮಾಡಲು ನೇಮಿಸಿ ಕೊಡಬಹುದು.

ಕುಟುಂಬವಾದ ನೀವು ನಿಮ್ಮ ಪ್ರೀತಿಯಲ್ಲಿ ವಿಸ್ತಾರ್ಯಗೊಂಡು ಸಭೆಯ ಇತರ ಸದಸ್ಯರನ್ನು ನಿಮ್ಮ ಕುಟುಂಬ ಸಂತೋಷಗಳಲ್ಲಿ ಪಾಲಿಗರಾಗಲು ಅಮಂತ್ರಿಸಬಹುದೇ? ಸಭೆಯ ಹಳೆಯ ಸದಸ್ಯರು ಆಗಿಂದಾಗ್ಯೆ ಕುಟುಂಬದಾತ್ಮದಲ್ಲಿ ಭಾಗಿಗಳಾಗಲು ಆನಂದಿಸುತ್ತಾರೆ, ವಿಶೇಷವಾಗಿ ಅವರ ಸ್ವಂತ ಕುಟುಂಬಗಳು ಹತ್ತಿರವಿಲ್ಲದಾಗ ಅಥವಾ ಕ್ರೈಸ್ತ ತತ್ವಗಳಿಗನುಸಾರ ಜೀವಿಸದೆ ಇರುವಾಗ. (ಯಾಕೋಬ 1:27) ಅನೇಕ ಸಭೆಗಳಲ್ಲಿ ಏಕ-ಹೆತ್ತವ ಕುಟುಂಬಗಳಿವೆ. ದೇವಪ್ರಭುತ್ವ ತಲೆತನಕ್ಕೆ ತಕ್ಕದಾದ್ದ ಪರಿಗಣನೆ ಮತ್ತು ಕ್ರೈಸ್ತ ಔಚಿತ್ಯಕ್ಕೆ ಗೌರವದೊಂದಿಗೆ ಹಿರಿಯರು ಮತ್ತು ಇತರರು ಅಂಥ ಕುಟುಂಬ ಸದಸ್ಯರಿಗೆ ಆತ್ಮಿಕ ಆಶ್ರಯವನ್ನು ನೀಡಬಹುದು. (ಯೆಶಾಯ 32:1) “ತಂದೆಯಿಲ್ಲದ” ಅನೇಕ ಅನಾಥ ಬಾಲಕರು, ಬಲಿತ ಕ್ರೈಸ್ತರ ಪ್ರೀತಿಯ ಅಭಿರುಚಿಯ ಫಲಿತಾಂಶವಾಗಿ, ಸಮತೆಯುಳ್ಳ ಕುಟುಂಬ ತಲೆಗಳಾಗಿ ಪರಿಣಮಿಸಿದ್ದಾರೆ.—ಕೀರ್ತನೆ 82:3.

ಕ್ರೈಸ್ತ ಮನೆವಾರ್ತೆಯನ್ನು ಕಟ್ಟುವುದು ಒಂದು ಕಷ್ಟದ ಕೆಲಸ. ಆದರೆ ಯೆಹೋವನ ಸಹಾಯದಿಂದ, “ಪುತ್ರ ಸಂತಾನವು ಯೆಹೋವನಿಂದ ಬಂದ ಸ್ವಾಸ್ಥವು; ಗರ್ಭಫಲವು ಆತನ ಬಹುಮಾನವೇ” ಎಂಬದನ್ನು ನಿಜವಾಗಿಯೂ ನೀವು ಗಣ್ಯಮಾಡುವಿರಿ. (ಕೀರ್ತನೆ 127:1, 3) ಅವರು ಕ್ರೈಸ್ತ ಹೆತ್ತವರಿಗೆ ಮಾತ್ರವೇ ಅಲ್ಲ, ತಮ್ಮ ನಿರ್ಮಾಣಿಕನಾದ ಯೆಹೋವ ದೇವರಿಗೂ ಸ್ತುತಿಯ ಒಂದು ಉಗಮವಾಗಿರಬಲ್ಲರು. (w89 10/1)

[ಅಧ್ಯಯನ ಪ್ರಶ್ನೆಗಳು]

a  ವಾಸ್ತವದಲ್ಲಿ, “ಕಟ್ಟುವವರು” (ಕೀರ್ತನೆ 127 ವಚನ 1) ಮತ್ತು “ಪುತ್ರಸಂತಾನ” (ಕೀರ್ತನೆ 127 ವಚನ 3) ಎಂಬ ಪದಗಳಿಗೆ ಇಬ್ರಿಯ ಶಬ್ದಗಳು “ಕಟ್ಟುವದು” ಎಂಬ ಮೂಲಾರ್ಥವಿರುವದರಿಂದ ಬಂದಿವೆ ಎಂದು ಎಣಿಸಲಾಗುತ್ತದೆ. ಅದಕ್ಕೆ ಕೂಡಿಸಿ, “ಮನೇ” ಎಂಬ ಇಬ್ರಿಯ ಪದವನ್ನು ಒಂದು “ನಿವಾಸಿಸುವ ಸ್ಥಳ” ಇಲ್ಲವೇ ಒಂದು “ಕುಟುಂಬ”ಕ್ಕೆ ಸೂಚಿಸಲಾಗಿದೆ. (2 ಸಮುವೇಲ 7:11,16; ಮೀಕ 1:5) ಈ ರೀತಿಯಲ್ಲಿ, ಮನೆಯೊಂದನ್ನು ಕಟ್ಟುವದು, ಕುಟುಂಬವೊಂದನ್ನು ಬೆಳೆಸುವದಕ್ಕೆ ಜೋಡಿಸಲಾಗಿದೆ. ಇವೆರಡೂ ಹೊಣೆಗಳ ನಿರ್ವಹಣೆಗಳಲ್ಲಿ ಯೆಹೋವನ ಆಶೀರ್ವಾದವು ಆವಶ್ಯಕವಾಗಿರುತ್ತದೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ