ನಿಮ್ಮ ನಂಬಿಕೆ ಮತ್ತು ಆತ್ಮಿಕಾರೋಗ್ಯವನ್ನು ಕಾಪಾಡಿರಿ
“ನೀನು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ ನನ್ನಿಂದ ಕೇಳಿದ ಸ್ವಸ್ಥ ಬೋಧನಾವಾಕ್ಯಗಳನ್ನು [ಆರೋಗ್ಯಕರವಾದ ಮಾತುಗಳ ಮಾದರಿಯನ್ನು, NW] ಮಾದರಿ ಮಾಡಿಕೊಂಡು ಅನುಸರಿಸು.”—2 ತಿಮೊಥಿ 1:13.
1. ಉತ್ತಮ ದೈಹಿಕ ಆರೋಗ್ಯ ಏಕೆ ಕಾಪಾಡಬೇಕಾದ ಸೊತ್ತಾಗಿದೆ?
ಉತ್ತಮ ಶಾರೀರಿಕ ಆರೋಗ್ಯ ಅಮೂಲ್ಯವಾದ ಸೊತ್ತು. ಆರೋಗ್ಯವಂತರಾಗಿರುವಾಗ ನಾವು ಅನೇಕ ವಿಷಯಗಳನ್ನು ಮಾಡಿ ಜೀವನದಲ್ಲಿ ಹೆಚ್ಚಿನ ಆನಂದವನ್ನು ಅನುಭವಿಸಬಲ್ಲೆವು. ಆದರೆ ನಾವು ಅಸ್ಥಿಗತ ರೋಗಿಗಳು ಯಾ ಶಕಿಹ್ತೀನರಾಗಿರುವಾಗ ಜೀವನ ಹೆಚ್ಚು ಕಷ್ಟಕರ. ಒಳ್ಳೆಯ ಆರೋಗ್ಯವನ್ನು ಕಾಪಾಡಬೇಕೆಂಬುದು ನಿಶ್ಚಯ. ಅನೇಕರು ತಮ್ಮ ಆರೋಗ್ಯವನ್ನು ಅಸಡ್ಡೆ ಮಾಡುತ್ತಾರೆ ಯಾ ಅವರು ತಮಗೆ ರೋಗ ಬರಿಸುವ ವಿಷಯಗಳನ್ನು ಮಾಡುತ್ತಾರೆ. ಆದರೆ ತಮ್ಮ ಜಾಗ್ರತೆ ವಹಿಸುವವರಿಗಾದರೊ ಸಾಮಾನ್ಯವಾಗಿ ಒಳ್ಳೆಯ ಆರೋಗ್ಯ ಮತ್ತು ಶಕ್ತಿ ಅವರ ಆಯುಷ್ಕಾಲದಲ್ಲಿ ಅಧಿಕಾಂಶ ಸಮಯ ದೊರೆಯುತ್ತದೆ.
2. (ಎ)ಆತ್ಮಿಕಾರೋಗ್ಯ ಶಾರೀರಿಕ ಆರೋಗ್ಯಕ್ಕಿಂತ ಹೆಚ್ಚು ಅಮೂಲ್ಯವೇಕೆ? (ಬಿ) ನಂಬಿಕೆಯಲ್ಲಿ ಆರೋಗ್ಯವಂತರಾಗಿರಲು ಏನು ಅಗತ್ಯ?
2 ಶಾರೀರಿಕ ಆರೋಗ್ಯಕ್ಕಿಂತ ಆತ್ಮಿಕ ಆರೋಗ್ಯ ಎಷ್ಟೊ ಹೆಚ್ಚು ಪ್ರಾಮಖ್ಯ. ಎಷ್ಟು ಉತ್ತಮ ದೈಹಿಕ ಆರೋಗ್ಯವಿದ್ದರೂ ಅದು ದೇವರ ನಿತ್ಯಜೀವದ ದಾನವನ್ನು ದೊರಕಿಸಲಾರದು. ಶುದ್ಧಾರಾಧನೆ ಮತ್ತು ಸೂಕ್ಷ್ಮ ಪರಿಜ್ಞಾನದ ಮೇಲೆ ಆಧಾರಿತವಾದ ನಂಬಿಕೆ ಉತ್ತಮ ಆತ್ಮಿಕಾರೋಗ್ಯವನ್ನು ಫಲಿಸುತ್ತದೆ. (ಯೋಹಾನ 17:3; ಇಬ್ರಿಯ 11:6; ಯಾಕೋಬ 1:27) ಅಪೊಸ್ತಲ ಪೌಲನು ಹೇಳಿದ್ದು: “ವೃದ್ಧರು ಮದ್ಯಾಸಕ್ತಿಯಿಲ್ಲದವರೂ ಗೌರವವುಳ್ಳವರೂ ಜಿತೇಂದ್ರಿಯರೂ ನಂಬಿಕೆ ಪ್ರೀತಿ ತಾಳ್ಮೆ ಇವುಗಳಲ್ಲಿ ಸ್ವಸ್ಥರೂ” ಆಗಿರಬೇಕು. (ತೀತ 2:2) ನಂಬಿಕೆಯಲ್ಲಿ ಆರೋಗ್ಯವಂತರಾಗಬೇಕೆಂದಿರುವವರು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಿ ಸದಾ ಎಚ್ಚರಿಕೆಯಿಂದಿರತಕ್ಕದ್ದು. ಸ್ವಸ್ಥ ಆತ್ಮಿಕಾರೋಗ್ಯಕ್ಕೆ ಅಪಾಯವು ನಮ್ಮೊಳಗಿಂದ ಇಲ್ಲವೆ ಹೊರಗಿನಿಂದ ಬರಬಹುದು. ಈ ರೋಗಪೀಡಿತ ಲೋಕದಲ್ಲಿ ನಾವು ನಂಬಿಕೆಯನ್ನೂ ಆತ್ಮಿಕ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕಾದರೆ ಈ ಅಪಾಯಗಳ ಪ್ರಜ್ಞೆ ನಮಗಿರತಕ್ಕದ್ದು.
ಈ ಜಗತ್ತು ಎಷ್ಟು ವ್ಯಾಧಿಗ್ರಸ್ತ?
3, 4. ಈ ಲೋಕದಲ್ಲಿ ಮತ್ತು ಜನರ ವರ್ತನೆಯಲ್ಲಿ ನೈತಿಕ ಕಾಯಿಲೆ ಹೇಗೆ ಪ್ರತಿಬಿಂಬಿತವಾಗಿದೆ?
3 ನೈತಿಕವಾಗಿ ಈ ಜಗತ್ತು ಅತಿ ವ್ಯಾಧಿಗ್ರಸ್ತವಾಗಿದೆ ಎಂಬುದಕ್ಕೆ ಸಂದೇಹವಿಲ್ಲ. ಈ ಜಗತ್ತಿನ ಸಕಲ ಅಂಗಗಳಲ್ಲಿ—ಅದರ ಧರ್ಮ, ಅದರ ರಾಜಕೀಯ ವ್ಯವಸ್ಥೆ ಮತ್ತು ಅದರ ವಾಣಿಜ್ಯ ಸಂಘ ಮತ್ತು ಮನೋರಂಜನೆಗಳಲ್ಲಿ—ನಾವು ಮಾರಕ ಕಾಯಿಲೆಯನ್ನು ನೋಡುತ್ತೇವೆ. ದೇವರನ್ನು ಮತ್ತು ಆತನು ಮಾನವ ಹಿತಕ್ಕಾಗಿ ಕೊಟ್ಟಿರುವ ನಿಯಮಗಳನ್ನು ಗೌರವಿಸುವವರು ವಿರಳ. ಮತ್ತು ಇತಿಹಾಸ ತೋರಿಸುವಂತೆ, ನೈತಿಕ ಕೊಳೆತವು ದೈಹಿಕ ರೋಗ ಮತ್ತು ಉಪದ್ರವಗಳ ಅಭಿವೃದ್ಧಿಗೆ ನಡೆಸುವುದು ಅನಿವಾರ್ಯ. ಆದರೆ ಹಾಸ್ಯವ್ಯಂಗ್ಯವಾಗಿ, ಈ ಕಾಯಿಲೆಯ ನೈತಿಕ ಸ್ಥಿತಿಯನ್ನು ಗುಣಪಡಿಸಲು ಅನೇಕರಿಗೆ ಮನಸ್ಸಿಲ್ಲ. ಏಕೆಂದರೆ ಅದನ್ನು ಆಗಿಸುವ ವಿಷಯಗಳನ್ನು ಅವರು ಪ್ರೀತಿಸುತ್ತಾರೆ.
4 ಈ ಲೋಕ ಅದೆಷ್ಟು ವ್ಯಾಧಿಗ್ರಸ್ತವಾಗಿದೆ? ಅನೇಕರು ರೋಮಾಂಚಕ ವಿಷಯಗಳ ಬೆನ್ನು ಹಿಡಿದು ಯಾ ವಾಸ್ತವತೆಯಿಂದ ಪಲಾಯನ ಮಾಡುತ್ತಾ ಮದ್ಯಪಾನ ಮತ್ತು ಮಾದಕ ಪದಾರ್ಥಗಳ ದುರುಪಯೋಗವನ್ನು ಮಾಡುತ್ತಾ ತಮ್ಮ ಜೀವಗಳನ್ನು ಧ್ವಂಸ ಮಾಡಿದ್ದಾರೆ. ಹಿಂಸಾತ್ಮಕ ಕೃತ್ಯ ಎಲ್ಲೆಲ್ಲೂ ಇದೆ. ಜೀವ ಅಗವ್ಗಾಗಿದೆ. ಜೆಯ್ಲುಗಳು ಪಾತಕಿಗಳಿಂದ ತುಂಬಿ ಹರಿಯುತ್ತವೆ. ಅನೇಕ ದೇಶಗಳಲ್ಲಿ, ವಿವಾಹಗಳಲ್ಲಿ ಅರ್ಧಾಂಶ ವಿಚ್ಛೇದನದಲ್ಲಿ ಅಂತ್ಯಗೊಳ್ಳುತ್ತವೆ. ಹೆತ್ತವರಿಂದ ಯೋಗ್ಯ ಮೇಲ್ವಿಚಾರಣೆ ಪಡೆಯದ ಮಕ್ಕಳು ಅಪರಾಧಿಗಳಾಗಿ ಬೆಳೆಯುತ್ತಾರೆ. ಲೈಂಗಿಕ ದುರಾಚಾರ ಅತಿರೇಕವಾಗಿರುವುದರಿಂದ ಏಡ್ಸ್ ಮತಿತ್ತರ ರತಿ ರವಾನಿತ ರೋಗಗಳು ಶೀಘ್ರ ಹರಡುತ್ತಿವೆ.
5. ಪುರಾತನ ಯೆಹೂದದ ಸ್ಥಿತಿಯನ್ನು ಯೆಶಾಯನು ಹೇಗೆ ವರ್ಣಿಸಿದನು?
5 ದೇವರು, ಸನ್ಮಾರ್ಗ ತಪ್ಪಿದ ಯೆಹೂದಕ್ಕೆ ಯೆಶಾಯನು ಹೇಳುವಂತೆ ಪ್ರೇರಿಸಿದ ಮಾತುಗಳನ್ನು ಆತನು ಈ ಜಗತ್ತಿನ ವಿಷಯದಲ್ಲೂ ಹೇಳಬಲ್ಲನು: “ಪಾಷ್ಠಿ ಜನವೇ, ಅಧರ್ಮ ಭಾರ ಹೊತ್ತಿರುವ ಪ್ರಜೆಯೇ, ದುಷ್ಟ ಜಾತಿಯೇ, ದ್ರೋಹಿಗಳಾದ ಮಕ್ಕಳೇ, ನಿಮ್ಮ ಗತಿಯನ್ನು ಏನು ಹೇಳಲಿ! ಯೆಹೋವನನ್ನು ತೊರೆದಿದ್ದಾರೆ, ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ಧಿಕ್ಕರಿಸಿದ್ದಾರೆ. ಆತನಿಗೆ ಬೆನ್ನು ಮಾಡಿ ಬೇರೆಯಾಗಿದ್ದಾರೆ. ಏಕೆ ದ್ರೋಹವನ್ನು ಹೆಚ್ಚಿಸಿ ಹೆಚ್ಚಿಸಿ ಪೆಟ್ಟಿಗೆ ಗುರಿಯಾಗುತ್ತೀರಿ? ತಲೆಯೆಲ್ಲಾ ರೋಗ, ಹೃದಯವೆಲ್ಲಾ ದುರ್ಬಲ. ಅಂಗಾಲಿನಿಂದ ನಡುನೆತ್ತಿಯ ತನಕ ಪೆಟ್ಟು ಬಾಸುಂಡೆ ಮತ್ತು ಮಾಗದ ಗಾಯಗಳೇ ಹೊರತು ಏನೂ ಸೌಖ್ಯವಿಲ್ಲ.”—ಯೆಶಾಯ 1:4-6.
6. ಪುರಾತನ ಯೆಹೂದದಲ್ಲಿ ಮತ್ತು ನಮ್ಮ ದಿನಗಳಲ್ಲಿ, ಒಳ್ಳೆಯದನ್ನು ಮಾಡಲು ಕಲಿಯಿರಿ ಎಂಬ ಯೆಹೋವನ ಕರೆಗೆ ಯಾವ ಪ್ರತಿಕ್ರಿಯೆ ಇದೆ?
6 ಪಶ್ಚಾತ್ತಾಪ ಪಡುವಂತೆ ಮತ್ತು “ದುರಾಚಾರವನ್ನು ಬಿಡಿರಿ, ಸದಾಚಾರವನ್ನು ಅಭ್ಯಾಸ ಮಾಡಿರಿ” ಎಂದು ಯೆಹೂದಕ್ಕೆ ಯೆಹೋವನು ಕೊಟ್ಟ ಕರೆ, ಸಾಮಾನ್ಯವಾಗಿ ಆಲಿಸಲ್ಪಡದೆ ಹೋಯಿತು. (ಯೆಶಾಯ 1:16-20) ಇದು ಕ್ರಮೇಣ ಯೆರೂಸಲೇಮಿನ ನಾಶಕ್ಕೂ ಬಾಬೆಲಿನಲ್ಲಿ ಯೆಹೂದ್ಯರ ಸೆರೆವಾಸಕ್ಕೂ ನಡೆಸಿತು. ಆ ರೋಗಗ್ರಸ್ತ ರಾಷ್ಟ್ರದಲ್ಲಿ ಕೇವಲ ಕೆಲವೇ ನಂಬಿಗಸ್ತರು ದೇವರ ಆಶೀರ್ವಾದ ಮತ್ತು ಕರುಣೆಯನ್ನು ಪಡೆದರು. ತದ್ರೀತಿ, ಆಪಾದ ಮಸ್ತಕವಾಗಿ ರೋಗಗ್ರಸ್ತವಾಗಿರುವ ಈ ಜಗತ್ತಿನಲ್ಲಿ ಕೇವಲ ಕೆಲವೇ ಸದಾಚಾರಪ್ರಿಯರಿದ್ದಾರೆ. ಯೆಹೋವನ ಈ ನಂಬಿಗಸ್ತ ಸೇವಕರು ದೇವರ ವಾಗ್ದಾನಿತ ನೂತನ ಲೋಕದಲ್ಲಿ ಪರಿಪೂರ್ಣ ದೈಹಿಕ ಆರೋಗ್ಯ ಮತ್ತು ಅನಂತ ಜೀವನವನ್ನು ಪಡೆಯುವ ಪ್ರತೀಕ್ಷೆಯಿಂದ ಈಗ ನಂಬಿಕೆ ಮತ್ತು ಆತ್ಮಿಕಾರೋಗ್ಯವನ್ನು ಕಾಪಾಡಲು ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಮಾಡುತ್ತಾ ಇದ್ದಾರೆ.—2 ಪೇತ್ರ 3:13; ಪ್ರಕಟನೆ 21:1-4.
ಈ ರೋಗಗ್ರಸ್ತ ಜಗತ್ತಿನಲ್ಲಿ ಆತ್ಮಿಕ ಅಪಾಯಗಳು
7. (ಎ) ನಮ್ಮ ನಂಬಿಕೆ ಮತ್ತು ಆತ್ಮಿಕಾರೋಗ್ಯವನ್ನು ಯಾವ ಅಪಾಯಗಳು ಕೇಡಿಗೊಳಪಡಿಸುತ್ತವೆ? (ಬಿ) ಆತ್ಮಿಕಾರೋಗ್ಯಕ್ಕೆ ಅಪಾಯ ತರುವ ಮೂರು ಪ್ರಧಾನ ಸಂಗತಿಗಳನ್ನು ನಿಭಾಯಿಸುವ ವಿಷಯ ಶಾಸ್ತ್ರಗಳೇನು ಹೇಳುತ್ತವೆ?
7 ಈ ಲೋಕದ ನೈತಿಕ ಕಾಯಿಲೆ ತೀರಾ ಅಂಟುಜಾಡ್ಯವಾಗಿರುವುದರಿಂದ ನಂಬಿಕೆ ಮತ್ತು ಆತ್ಮಿಕಾರೋಗ್ಯವನ್ನು ಕಾಪಾಡುವುದು ಪಂಥಾಹ್ವಾನವೇ ಸರಿ. ಕ್ರೈಸ್ತರಿಗೆ ತಮ್ಮ ಸ್ವಂತ ಪಿತ್ರಾರ್ಜಿತ ಅಪೂರ್ಣತೆಯ ವಿರುದ್ಧವೂ ಹೋರಾಡಲಿಕ್ಕಿದೆ. (ರೋಮಾಪುರ 7:21-25) ಇದಲ್ಲದೆ, “ಇಹಲೋಕಾಧಿಪತಿ” ಯಾದ ಸೈತಾನನಿಗೆ ಶರೀರದ ಬಲಹೀನತೆಗಳು ಗೊತ್ತು ಮತ್ತು ಅವನು ಶೋಧನೆಯಲ್ಲಿ ಪರಿಣತನು. (ಯೋಹಾನ 14:30; 1 ಯೋಹಾನ 5:19) ನಂಬಿಕೆ ಮತ್ತು ಆತ್ಮಿಕ ಆರೋಗ್ಯಕ್ಕೆ ಹಾನಿ ಮಾಡುವ ಈ ಮೂರು ಮುಖ್ಯ ಅಪಾಯಗಳು—ಶರೀರ, ಲೋಕ ಮತ್ತು ಪಿಶಾಚ—ಕಷ್ಟಸಾಧ್ಯವಾದವುಗಳು. ಆದರೆ, ನಾವು ಈ ಲೋಕದಲ್ಲಿ ಜೀವಿಸುವುದಾದರೂ “ಲೋಕದವರಲ್ಲ” ವಾಗದೆ ಇರುವುದು ಸಾಧ್ಯ. ನಾವು ‘ದೇವರಾತ್ಮದಲ್ಲಿ ನಡೆಯುತ್ತಾ ಯಾವ ಶಾರೀರಿಕ ಅಪೇಕ್ಷೆಗಳನ್ನೂ ಸಾಧಿಸದೆ” ಇರಬಲ್ಲೆವು. ಮತ್ತು ದೈವಿಕ ಸಹಾಯದಿಂದ ನಾವು “ಸೈತಾನನ ತಂತ್ರೋಪಾಯಗಳನ್ನು. . . ಎದುರಿಸಿ” ನಿಲ್ಲಬಲ್ಲೆವು. (ಯೋಹಾನ 17:15, 16; ಗಲಾತ್ಯ 5:16; ಎಫೆಸ 6:11; 2 ಕೊರಿಂಥ 2:11) ಆದರೆ ಈಗ ನಾವು, ನಂಬಿಕೆ ಮತ್ತು ಆತ್ಮಿಕ ಸ್ವಸ್ಥತೆಗೆ ಅಪಾಯ ತರುವ ಈ ಮುಖ್ಯ ಮೂರು ಸಂಗತಿಗಳನ್ನು ನಿಭಾಯಿಸುವುದು ಹೇಗೆ ಸಾಧ್ಯವೆಂದು ಪರಿಗಣಿಸೋಣ.
8. ಆತ್ಮಿಕಾರೋಗ್ಯದ ವಿರುದ್ಧ ಕೆಲಸ ನಡಿಸುವ ನಮ್ಮೊಳಗಿರುವ ಶಕ್ತಿಗಳನ್ನು ಯೇಸು ಹೇಗೆ ವರ್ಣಿಸುತ್ತಾನೆ?
8 ನಮ್ಮ ಅಪೂರ್ಣ ಮಾನವ ಪ್ರಕೃತಿಯೊಳಗೆ ಪಾಪವನ್ನು ಫಲಿಸಿ ನಮ್ಮನ್ನು ಆತ್ಮಿಕವಾಗಿ ಕಾಯಿಲೆ ಬೀಳಿಸಬಲ್ಲ ಶಕಿಗ್ತಳಿವೆ. (ಯಾಕೋಬ 1:14, 15) ಇದು ನಮ್ಮ ಸಾಂಕೇತಿಕ ಹೃದಯದೊಳಗಾದರೊ ವಿಶೇಷವಾಗಿ ಸತ್ಯ. ಯೇಸು ಹೇಳಿದ್ದು: “ಒಳಗಿನಿಂದ, ಅಂದರೆ ಮನುಷ್ಯರ ಮನಸ್ಸಿ [ಹೃದಯ, NW] ನೊಳಗಿಂದ ಸೂಳೆಗಾರಿಕೆ, ಕಳ್ಳತನ, ಕೊಲೆ, ಹಾದರ, ದ್ರವ್ಯಾಶೆ, ಕೆಡುಕುತನ, ಮೋಸ, ಬಂಡತನ, ಹೊಟ್ಟೇಕಿಚ್ಚು, ಬೈಗಳು, ಸೊಕ್ಕು, ಬುದ್ಧಿಗೇಡಿತನ, ಇವೇ ಮೊದಲಾದವುಗಳ ಕೆಟ್ಟ ಆಲೋಚನೆಗಳು ಹೊರಡುತ್ತವೆ. ಈ ಕೆಟ್ಟ ವಿಷಯಗಳೆಲ್ಲ ಒಳಗಿನಿಂದ ಹೊರಟು ಮನುಷ್ಯನನ್ನು ಹೊಲೆ ಮಾಡುತ್ತವೆ.”—ಮಾರ್ಕ 7:21-23.
9. (ಎ) ಸಾಂಕೇತಿಕ ಹೃದಯದಲ್ಲಿ ಯಾವ ಬಯಕೆಗಳು ಬೇರೂರಿವೆ? (ಬಿ) ಜ್ಞಾನೋಕ್ತಿ 4:20-23ಕ್ಕನುಸಾರ ನಾವು ಹೃದಯವನ್ನು ಹೇಗೆ ಕಾಪಾಡಬಲ್ಲೆವು?
9 ಹೃದಯವು ಕೆಟ್ಟ ಆಸೆಗಳ ಉಗಮವಾದರೂ ದೇವಭಕ್ತಿಯ ಜನರಲ್ಲಿ ಇದು ದೇವರಿಗೆ ಪೂಜ್ಯಭಾವ ಮತ್ತು ಸಮರ್ಪಕ ವಿಷಯಗಳ ಪೀಠವಾಗಿದೆ. (ಮತ್ತಾಯ 23:37; ಎಫೆಸ 4:20-24) ನಮ್ಮ ಹೃದಯಗಳೊಳಗೆ ಏನು ತೆಗೆದುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮಲ್ಲಿ ಒಳ್ಳೆಯದು ಯಾ ಕೆಟ್ಟದ್ದು ಇರುತ್ತದೊ ಇಲ್ಲವೊ ಎಂಬುದು ಹೊಂದಿಕೊಂಡಿದೆ. ದೇವರ ವಾಕ್ಯ ಬುದ್ಧಿ ಹೇಳುವುದು: “ಕಂದಾ, ನನ್ನ ಮಾತುಗಳನ್ನು ಆಲಿಸು, ನನ್ನ ನುಡಿಗಳಿಗೆ ಕಿವಿಗೊಡು. ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದಿರಲಿ. ಅವುಗಳನ್ನು ನಿನ್ನ ಹೃದಯದೊಳಗೆ ಇಟ್ಟುಕೊ. ಅವುಗಳನ್ನು ಹೊಂದುವವರಿಗೆ ಅವು ಜೀವವು. ದೇಹಕ್ಕೆಲ್ಲಾ ಅವೇ ಆರೋಗ್ಯವು. ನಿನ್ನ ಹೃದಯವನ್ನು ಬಹು ಜಾಗ್ರತೆಯಿಂದ ಕಾಪಾಡಿಕೋ, ಅದರೊಳಗಿಂದ ಜೀವಧಾರೆಗಳು ಹೊರಡುವವು.—ಜ್ಞಾನೋಕ್ತಿ 4:20-23.
10. ಶಾರೀರಿಕ ಬಲಹೀನತೆಗಳು ನಮ್ಮ ಭಾವುಕತೆ ಮತ್ತು ಬಯಕೆಗಳನ್ನು ಹೇಗೆ ಪ್ರಭಾವಿಸುತ್ತವೆ?
10 ನಮ್ಮ ಶಾರೀರಿಕ ಬಲಹೀನತೆಗಳು ನಮ್ಮ ಭಾವುಕತೆ ಮತ್ತು ಬಯಕೆಗಳ ಮೇಲೆ ಪರಿಣಾಮ ಬೀರುತ್ತವೆ. ಒಮ್ಮೊಮ್ಮೆ ನಿರುತ್ತೇಜನ, ತಾಳ್ಮೆಗೆಡುವಿಕೆ ಮತ್ತು ಮನನೋವು ಯಾರಿಗಾಗುವುದಿಲ್ಲ? ಈ ಮಾಂಸಿಕ ಪ್ರವೃತ್ತಿಗಳನ್ನು ನಾವು ಒಡನೆ ಸರಿಪಡಿಸುವಲ್ಲಿ ಆತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳುವೆವು. ಆದರೆ, ಅಹಂಕಾರ, ಹೆಬ್ಬಯಕೆ ಬೇಗನೆ ಹೃದಯದಲ್ಲಿ ಬೇರೂರಬಲ್ಲದು. ಲೋಭ ಮತ್ತು ವಿಪರೀತ ಸುಖಾನುಭವ ಮತ್ತು ವಿಲಾಸದ ಅಪೇಕ್ಷೆ ಆಕ್ರಮಣ ಮಾಡಬಲ್ಲದು. ಮತ್ತು ದೇವರು ನಮ್ಮನ್ನು ನಿರ್ಮಿಸಿರುವುದಕ್ಕೆ ಸ್ವಾಭಾವಿಕವಾದ ಲೈಂಗಿಕಾಪೇಕ್ಷೆ ತಂತ್ರದಿಂದ ನಮ್ಮ ದಾರಿ ತಪ್ಪಿಸಬಲ್ಲದು. ಇಂಥ ಆತ್ಮಿಕ ಕಾಯಿಲೆ ನಮ್ಮೊಳಗೆ ಹರಡುವುದನ್ನು ತಡೆಯಲು ನಾವು ದಿನಂಪ್ರತಿ ನಮ್ಮ ಜೀವಿತದಲ್ಲಿ ದೇವರಾತ್ಮದ ಫಲವನ್ನು ಬೆಳೆಸಿ, “ಕೆಟ್ಟತನಕ್ಕೆ ಹೇಸಿಕೊಂಡು ಒಳ್ಳೇದನ್ನು ಬಿಗಿಯಾಗಿ” ಹಿಡಿದುಕೊಳ್ಳಲು ನಮ್ಮನ್ನು ತರಬೇತುಗೊಳಿಸುವ ಅವಶ್ಯವಿದೆ.—ರೋಮಾಪುರ 12:9; ಗಲಾತ್ಯ 5:22, 23.
ಆತ್ಮಿಕ ಕಾಯಿಲೆಯ ಹೊರಗಣ ಉಗಮಗಳು
11. (ಎ)ಯಾವ ಶಾರೀರಿಕ ಮನೋಭಾವ ಮತ್ತು ವರ್ತನೆಗಳು ತೀರಾ ಅಂಟು ಜಾಡ್ಯದಂತಿವೆ? (ಬಿ) ಯೇಸುವಿಗನುಸಾರ, ಯಾವ ವಿಷಯಗಳಲ್ಲಿ ನಾವು ನಮ್ಮ ಹೃದಯಗಳಿಗೆ ಗಮನ ಕೊಡಬೇಕು?
11 ಬಾಹ್ಯ ಮೂಲಗಳಿಂದಲೂ ಆತ್ಮಿಕ ಸೋಂಕು ಬರಬಲ್ಲದು. ಆತ್ಮಿಕವಾಗಿ ಮೃತರಾಗಿರುವವರಿಂದ ಇದು ನಮಗೆ ಹರಡಬಲ್ಲದು. (ಎಫೆಸ 2:1-3) ನಾವು ಅವರಿಗೆ ಅತಿ ಸನಿಹವಾಗಿರುವಲ್ಲಿ ಅವರ ಮನೋಭಾವ, ಜೀವನರೀತಿಗಳು ನಮಗೆ ತಟ್ಟಬಲ್ಲವು. ಐಹಿಕವಾಗಿ ಏಳ್ಗೆ ಪಡೆಯುವುದು, ಹಣಪ್ರೇಮ, ಪ್ರಾಪಂಚಿಕವಾಗಿ ಅತ್ಯುತ್ತಮವಾದುದನ್ನು ಅನುಭವಿಸುವುದು ಮತ್ತು ಸುಖಾನುಭವ—ಇವು ಈ ಲೋಕದ ಜನರ ಜೀವನಗಳಲ್ಲಿ ದೊಡ್ಡ ವಿಷಯಗಳು. ಆದರೆ ಈ ವಿಷಯಗಳ ಬಯಕೆ ಅಂಟುಜಾಡ್ಯದಂತಿದೆ. ಮತ್ತು ಇವುಗಳಿಗೆ ಪರಿಮಿತವಾದ ಮೈಒಡ್ಡುವಿಕೆಯೂ ನಮ್ಮನ್ನು ಆತ್ಮಿಕವಾಗಿ ನಿಧಾನಿಸಬಲ್ಲದು. ಯೇಸು ಎಚ್ಚರಿಸಿದ್ದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿ ಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವುದು.”—ಲೂಕ 21:34, 35.
12. ಕೆಟ್ಟ ವಿಚಾರ ಮತ್ತು ಬೋಧನೆಗಳು ಆತ್ಮಿಕಾರೋಗ್ಯಕ್ಕೆ ಹೇಗೆ ಅಪಾಯಕರವಾಗಬಲ್ಲವು?
12 ಈ ಲೋಕದ ಕೆಟ್ಟ ವಿಚಾರ ಮತ್ತು ಬೋಧನೆಗಳೂ ನಮಗೆ ತಟ್ಟಬಲ್ಲವು. ಪೌಲನು ಎಚ್ಚರಿಸಿದ್ದು: “ಯಾಕಂದರೆ ಜನರು ಸ್ವಸ್ಥ ಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ. ಅವರು ತೀಟೇ ಕಿವಿಗಳುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲರಾದ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು. ಅವರು ಸತ್ಯ ಬೋಧನೆಗೆ ಕಿವಿಗೊಡದೆ ಕಲ್ಪನಾಕಥೆಗಳ್ನು ಕೇಳುವದಕ್ಕೆ ಹೋಗುವರು.” (2 ತಿಮೊಥಿ 4:3, 4) ಸುಳ್ಳು ಬೋಧಕರು ಅಂಗಕೊಳೆತದಂತಿದ್ದಾರೆ.(2 ತಿಮೊಥಿ 2:16, 17) ಅದು ನೆಲೆ ನಿಲ್ಲುವಲ್ಲಿ ನಿಮ್ಮ ಮಾಂಸದ ಒಂದು ಭಾಗ, ದೇಹದ ಆ ಭಾಗದಿಂದ ಜೀವದಾಯಕ ರಕ್ತ ತಡೆಯಲ್ಪಡುವ ಕಾರಣ ಸತ್ತು ಹೋಗುತ್ತದೆ.
13. ಆತ್ಮಿಕ ರೋಗವು ಅಂಗ ಕೊಳೆತದಂತೆ ನೆಲೆ ನಿಂತಿರುವಲ್ಲಿ ಏನು ಮಾಡಬೇಕು?
13 ಮತ್ತು ಈ ಅಂಗಕೊಳೆತ ಎಷ್ಟು ಬೇಗನೆ ಹರಡುತ್ತದೆ! ಮರಣವನ್ನು ತಡೆಹಿಡಿಯಲು ವೈದ್ಯರಿಗೆ ಶರೀರದ ಒಂದು ಭಾಗವನ್ನು ಕತ್ತರಿಸಬೇಕಾಗಿ ಬಂದೀತು. ಆದುದರಿಂದ, ಸಂದೇಹ, ಗೊಣಗುವಿಕೆ ಯಾ ಧರ್ಮಭ್ರಷ್ಟತೆ ನಿಮ್ಮನ್ನು ಆತ್ಮಿಕವಾಗಿ ಸೋಂಕುವ ಅಪಾಯವಿರುವಲ್ಲಿ ಅವನ್ನು ಬೇಗನೆ ಕತ್ತರಿಸಿ ಬಿಡಿರಿ! (ಮತ್ತಾಯ 5:29, 30 ಹೋಲಿಸಿ.) ಸಭಾಹಿರಿಯರಿಂದ ಸಹಾಯ ಪಡೆಯಿರಿ. ಪೌಲನು ವರ್ಣಿಸಿದ, “ಸ್ವಸ್ಥಮಾತುಗಳಿಗೂ. . . ಸಮ್ಮತಿಸದೆ ಹೋದ” ಕಾರಣ “ಕುತರ್ಕ ವಾಗ್ವಾದಗಳನ್ನು ಮಾಡುವ ಭ್ರಾಂತಿಯಲ್ಲಿ” ಇದ್ದವರಂತೆ ಆಗಬೇಡಿರಿ.—1 ತಿಮೊಥಿ 6:3, 4)
14. ಸಭೆಯ ಆತ್ಮಿಕಾರೋಗ್ಯವನ್ನು ಕಾಪಾಡಲಿಕ್ಕೆ ಏನು ಮಾಡುವುದು ಅಗತ್ಯವೆಂದು ಹಿರಿಯರು ಕಂಡು ಹಿಡಿದಾರು?
14 ಸಭಾ ಆತ್ಮಿಕಾರೋಗ್ಯವನ್ನು ರಕ್ಷಿಸಲು ಹಿರಿಯರು “ಆರೋಗ್ಯಕರವಾದ ಬೋಧನೆಯ ಮೂಲಕ ಬುದ್ಧಿಹೇಳಿ ವಿರೋಧಿಸುವವರಿಗೆ ತಪ್ಪು ಮನಗಾಣಿಸುವಿಕೆ ಮಾಡುವುದು” ಅಗತ್ಯ. (ತೀತ 1:9, 13, 16; 2:1) ಪ್ರಾಯಶಃ ಇಂಥ ವ್ಯಕ್ತಿಗಳನ್ನು ಆತ್ಮಿಕ ಸ್ಥಿತಿಗೆ ಪುನಃಸ್ಥಾಪಿಸ ಸಾಧ್ಯವಾಗಬಹುದು. (2 ತಿಮೊಥಿ 2:23-26) ಆದರೆ ಅವರು ಪಶ್ಚಾತ್ತಾಪಪಡದೆ ಸುಳ್ಳು ಬೋಧನೆಗಳನ್ನು ಬೆಳೆಸುವುದಾದರೆ? ಆಗ ಇಂಥವರನ್ನು ಸಂಪರ್ಕನಿಷೇಧದಲ್ಲಿಡತಕ್ಕದ್ದು. ಅವರನ್ನು ಬಹಿಷ್ಕರಿಸಲಾಗುತ್ತದೆ ಮತ್ತು ನಾವು, ಅವರ ಆತ್ಮಿಕ ಸೋಂಕು ನಮಗೆ ಹರಡದಂತೆ ಅವರಿಂದ ದೂರವಿರುತ್ತೇವೆ.—ರೊಮಾಪುರ 16:17, 18; 1 ಕೊರಿಂಥ 5:9-13; ತೀತ 3:9-11.
15. ದೇವಜನರ ಆತ್ಮಿಕಾರೋಗ್ಯವನ್ನು ಕೊರೆಯಲು ಯಾವ ಎರಡು ಪ್ರಧಾನ ವಿಷಯಗಳನ್ನು ಪಿಶಾಚನು ಉಪಯೋಗಿಸಿದ್ದಾನೆ?
15 ನಂಬಿಕೆ ಮತ್ತು ಆತ್ಮಿಕಾರೋಗ್ಯಕ್ಕಿರುವ ಮೊದಲನೆಯ ಅಪಾಯ ಮೂಲನು ಪಿಶಾಚನೆ. (ಎಫೆಸ 6:11, 12) ನಮ್ಮ ದಿನಗಳ ತನಕವೂ ಅವನು ಹಿಂಸೆ, ದೊಂಬಿ, ಹೊಡೆತ, ಸೆರೆವಾಸ ಮತ್ತು ಮರಣ ಭಯಗಳ ಸಮೇತ ಹಿಂಸೆ ಕೊಟ್ಟು ಯೆಹೋವನ ಜನರ ನಂಬಿಕೆಯನ್ನು ದುರ್ಬಲಗೊಳಿಸುವರೆ ಪ್ರಯತ್ನಿಸಿರುತ್ತಾನೆ. (ಪ್ರಕಟನೆ 2:10) ದೇವರ ಸೇವಕರುಗಳಲ್ಲಿ ಒಬ್ಬನ ಸಮಗ್ರತೆಯನ್ನು ಈ ತಂತ್ರಗಳಿಂದ ಸೈತಾನನು ಮುರಿಯುವುದು ವಿರಳವಾಗಿರುವುದರಿಂದ, ಕೆಲವರು ಬೀಳುವಂತೆ ಪ್ರಯತ್ನಿಸಲು, ಯಾವುದರ ದೇವರು ತಾನಾಗಿದ್ದಾನೊ ಆ ಲೋಕದ ಆಕರ್ಷಣೆಗಳನ್ನು ಅವನು ಉಪಯೋಗಿಸುತ್ತಾನೆ.—2 ಕೊರಿಂಥ 4:4; 11:3, 14.
16. ನಮ್ಮ ನಂಬಿಕೆ ಮತ್ತು ಆತ್ಮಿಕಾರೋಗ್ಯದ ಮೇಲೆ ಸೈತಾನನ ಆಕ್ರಮಣಗಳನ್ನು ತಡೆಯಲು ನಮಗೆ ಯಾವ ರಕ್ಷಣೋಪಾಯಗಳಿವೆ?
16 ನಾವು ಪಿಶಾಚನ ಆಕ್ರಮಣವನ್ನು ಹೇಗೆ ಎದುರಿಸಬಲ್ಲೆವು? ದೇವರಿಂದ ಬರುವ ಸರ್ವ ಆತ್ಮಿಕಾಯುಧಗಳನ್ನು ಧರಿಸಿಯೆ. ವಿಶೇಷವಾಗಿ ನಾವು, ಸೈತಾನನು ನಮ್ಮ ಕಡೆಗೆ ಎಸೆಯುವ ‘ಅಗ್ನಿಬಾಣಗಳನ್ನು ಆರಿಸಬಲ್ಲ ವಿಶಾಲವಾದ ನಂಬಿಕೆಯೆಂಬ ಗುರಾಣಿ’ಯನ್ನು ತೆಗೆದುಕೊಳ್ಳಬೇಕು. ನಾವು ಯೇಸುವಿನ ಮಾತುಗಳಿಗನುಸಾರ “ಶೋಧನೆಯೊಳಗೆ ಸೇರಿಸದೆ ಕೆಡುಕನಿಂದ ನಮ್ಮನ್ನು ತಪ್ಪಿಸು” ಎಂದೂ ಪ್ರಾರ್ಥಿಸಬೇಕು. (ಎಫೆಸ 6:11-18; ಮತ್ತಾಯ 6:13, NW) ನಾವು ಹಾಗೆ ಪ್ರಾರ್ಥಿಸಿ ಅದಕ್ಕನುಸಾರ ವರ್ತಿಸುವಲ್ಲಿ ಸೈತಾನನ ಸಕಲ ಅಗ್ನಿಬಾಣಗಳನ್ನು ಆರಿಸುವರೆ ನಮ್ಮ ಸ್ವರ್ಗೀಯ ಪಿತನಿಂದ ಸಹಾಯವನ್ನು ನಿರೀಕ್ಷಿಸಬಲ್ಲೆವು.
ನಂಬಿಕೆಯಲ್ಲಿ ಆರೋಗ್ಯದಿಂದಿರುವುದು
17. ಆತ್ಮಿಕಾರೋಗ್ಯವನ್ನು ಕಾಪಾಡಲು “ಹೊತ್ತುಹೊತ್ತಿಗೆ ಆಹಾರ”ವನ್ನು ತಕ್ಕೊಳ್ಳುವುದೂ ಕ್ರೈಸ್ತ ಚಟುವಟಿಕೆಗಳಲ್ಲಿ ಕ್ರಮವಾಗಿ ಭಾಗವಹಿಸುವುದೂ ಎಷ್ಟು ಪ್ರಾಮುಖ್ಯ?
17 ಉತ್ತಮ ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ರೋಗ ಬರುವುದನ್ನು ತಪ್ಪಿಸುವುದೇ ದೊಡ್ಡ ಸಂಗತಿ. ಪುಷ್ಟಿಯಾದ ಆಹಾರ, ಯೋಗ್ಯ ವ್ಯಾಯಾಮ ಮತ್ತು ಮನಸ್ಸು ಮತ್ತು ದೇಹದ ಸಾಮಾನ್ಯ ಪರಾಮರಿಕೆ ಇದಕ್ಕೆ ಜೀವದಾಯಕ. ಒಂದು ಆರೋಗ್ಯಕರವಾದ ದೇಹದಲ್ಲಿ ನೈಸರ್ಗಿಕ ರೋಗರಕ್ಷಣಾ ಶಕ್ತಿ ಹೆಚ್ಚು ಬಲವಾಗಿರುತ್ತದೆ. ತದ್ರೀತಿ, ಆತ್ಮಿಕಾರೋಗ್ಯವನ್ನು ಕಾಪಾಡಲು ದೇವರು ವಿಧಿಸುವ ಆಹಾರಕ್ರಮವನ್ನು ಅನುಸರಿಸುವುದು ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” “ಹೊತ್ತು ಹೊತ್ತಿಗೆ” ಕೊಡುವ ಆಹಾರವನ್ನು ಗಣ್ಯ ಮಾಡುವುದು ಜೀವದಾಯಕ. ಈ ಜಗತ್ತಿನ ಆತ್ಮಿಕ ರೀತಿಯ ಕಚಡ ಆಹಾರವನ್ನು ತಳ್ಳಿಹಾಕಿ ನಾವು ಬೈಬಲು ಮತ್ತು ಕ್ರಿಸ್ತೀಯ ಸಾಹಿತ್ಯಗಳನ್ನು ಅಧ್ಯಯನ ಮಾಡಿ ದೇವಜನರೊಂದಿಗೆ ಕ್ರಮವಾಗಿ ಕೂಡಿ ಬರಬೇಕು. (ಮತ್ತಾಯ 24:45-47; ಇಬ್ರಿಯ 10:24, 25) “ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕಿಯ್ತಿಂದ” ಮಾಡುವುದರಿಂದ ಬರುವ ವ್ಯಾಯಾಮವೂ ನಮಗೆ ಅಗತ್ಯ.—1 ಕೊರಿಂಥ 15:58.
18. “ಆರೋಗ್ಯಕರವಾದ ಮಾತುಗಳ ಮಾದರಿ” ಎಂದರೇನು, ಮತ್ತು ನಾವದನ್ನು ಹೃದ, ಮನಗಳಲ್ಲಿ ಏಕೆ ಇಟ್ಟುಕೊಳ್ಳಬೇಕು?
18 ನಂಬಿಕೆಯಲ್ಲಿ ಆರೋಗ್ಯವಂತರಾಗಿರುವಂತೆ ದೇವರ ಆತ್ಮಿಕ ಒದಗಿಸುವಿಕೆಗಳ ಪೂರ್ಣ ಪ್ರಯೋಜನವನ್ನು ತಕ್ಕೊಳ್ಳಿರಿ. ಪೌಲನು ತಿಮೊಥಿಗೆ ಹೇಳಿದಂತೆ: “ನೀನು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ ನನ್ನಿಂದ ಕೇಳಿದ ಆರೋಗ್ಯಕರವಾದ ಮಾತುಗಳ ಮಾದರಿಯನ್ನು ಅನುಸರಿಸು. ನಿನ್ನ ವಶಕ್ಕೆ ಕೊಡಲ್ಪಟ್ಟಿರುವುದನ್ನು ಶ್ರೇಷ್ಠವೆಂದು ತಿಳಿದು ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕ ಕಾಪಾಡು.” (2 ತಿಮೊಥಿ 1:13, 14, NW) ಯಾವ ಭಾಷೆಗೂ ಪದಗಳ ಒಂದು ಮಾದರಿ ಇದೆ. ತದ್ರೀತಿ, ಬೈಬಲ್ ಸತ್ಯದ “ಶುದ್ಧ ಭಾಷೆ”ಗೆ ರಾಜ್ಯದ ಮೂಲಕ ಯೆಹೋವನ ನಿರ್ದೋಷೀಕರಣವೆಂಬ ಮುಖ್ಯ ವಿಷಯದ ಮೇಲೆ ಪ್ರಧಾನವಾಗಿ ಆಧಾರಿತವಾದ ಮಾದರಿಯೊಂದಿದೆ. (ಚೆಫನ್ಯ 3:9) ನಾವು ನಮ್ಮ ನಂಬಿಕೆ ಮತ್ತು ಆತ್ಮಿಕಾರೋಗ್ಯವನ್ನು ಕಾಪಾಡಬೇಕಾದರೆ ಈ ಆರೋಗ್ಯಕರವಾದ ಮಾತುಗಳ ಮಾದರಿಯನ್ನು ಹೃದ, ಮನಗಳಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿರುವಲ್ಲಿ ನಮಗೆ ಅವುಗಳ ಗಮನಾರ್ಹತೆ ಕುಂದುತ್ತದೆ. ಇದು ಕೊರಿಂಥ ಸಭೆಯಲ್ಲಿ ನಡೆದಿದ್ದಿರಬೇಕು. ಏಕೆಂದರೆ ಅಲ್ಲಿ, ಆತ್ಮಿಕ ಗ್ರಹಿಕೆಯ ಕೊರತೆಯ ಕಾರಣ ಅವರು “ಬಲಹೀನರೂ ರೋಗಿಗಳೂ” ಆಗಿದ್ದರು.—1 ಕೊರಿಂಥ 11:29-32.
19. (ಎ) ಆತ್ಮಿಕ ಕಾಯಿಲೆ ನೆಲೆ ನಿಂತಿರುವಲ್ಲಿ ಏನು ಮಾಡಬೇಕು? (ಬಿ) ಆತ್ಮಿಕವಾಗಿ ರೋಗಿಯಾದ ವ್ಯಕ್ತಿಗೆ ಹಿರಿಯರೇನು ಮಾಡಬಲ್ಲರು?
19 ನಿಮ್ಮಲ್ಲಿ ಆತ್ಮಿಕ ರೋಗ ಬೆಳೆದು ಬಂದಿರುವಲ್ಲಿ ಏನು ಮಾಡಬೇಕು? ಪ್ರೀತಿಯ ಸಹಾಯ ನಿಶ್ಚಯವಾಗಿಯೂ ಅಗತ್ಯ ಮತ್ತು ಅದು ಲಭ್ಯ. ಏಕೆಂದರೆ ಯಾಕೋಬನು ಹೇಳುವುದು: “ನಿಮ್ಮಲ್ಲಿ ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯರನ್ನು ಕರೇ ಕಳುಹಿಸಲಿ; ಅವರು ಕರ್ತ [ಯೆಹೋವ, NW]ನ ಹೆಸರಿನಿಂದ ಅವನಿಗೆ ಎಣ್ಣೆಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ.” (ಯಾಕೋಬ 5:14) ಹೌದು, ಹಿರಿಯರನ್ನು ಭೇಟಿಯಾಗಿರಿ. ಆತ್ಮಿಕ ವೈದ್ಯರಾಗಿರುವ ಅವರು ಆತ್ಮಿಕ ರೋಗದ ಬುಡಕ್ಕೆ ತಲುಪಲು ನಿಮಗೆ ಸಹಾಯ ಮಾಡಬಲ್ಲರು. ಅವರು ದೇವರ ವಾಕ್ಯದ ರೋಗ ಪರಿಹಾರಕ ತೈಲವನ್ನು ಮೃದುವಾಗಿಯೂ ಕಾರ್ಯಸಾಧಕವಾಗಿಯೂ ಸವರುವರು. ನೀವು ಪಾಪ ಮಾಡಿರುವಲ್ಲಿ ಮತ್ತು ಪಶ್ಚಾತ್ತಾಪ ಪಟ್ಟಿರುವಲ್ಲಿ, ಯೆಹೋವನು ನಿಜವಾಗಿಯೂ ಕ್ಷಮಿಸುವನೆಂಬ ಖಾತ್ರಿ ನಿಮಗಿರಲಿ. (ಕೀರ್ತನೆ 103:8-14) ಹಿರಿಯರು ನಿಮ್ಮೊಂದಿಗೆ ಮತ್ತು ನಿಮ್ಮ ಪರವಾಗಿ ಪ್ರಾರ್ಥಿಸುವಾಗ ನಾವೇನು ನಿರೀಕ್ಷಿಸಬಹುದು? ಯಾಕೋಬನು ಉತ್ತರಿಸುವುದು: “ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವದು; ಕರ್ತ [ಯೆಹೋವ, NW]ನು ಅವನನ್ನು ಎಬ್ಬಿಸುವನು; ಮತ್ತು ಪಾಪ ಮಾಡಿದವನಾಗಿದ್ದರೆ ಅದು ಪರಿಹಾರವಾಗುವದು.”—ಯಾಕೋಬ 5:15.
ಆತ್ಮಿಕಾರೋಗ್ಯ ಅನಂತ ಜೀವನಕ್ಕೆ ನಡಿಸುತ್ತದೆ
20. (ಎ)ಆತ್ಮಿಕಾರೋಗ್ಯವನ್ನು ಕಾಪಾಡುವುದರ ಕುರಿತು ಪ್ರಥಮ ಶತಮಾನದ ಆಡಳಿತ ಮಂಡಲಿ ಯಾವ ಸಲಹೆ ನೀಡಿತು? (ಬಿ) ನೂತನ ಲೋಕದ ಆಶೀರ್ವಾದಗಳಿಗಾಗಿ ಕಾಯಲು ನಮಗೆ ಏನು ಸಹಾಯ ಮಾಡುವುದು?
20 “ನಿಮಗೆ ಸುಕ್ಷೇಮವಿರಲಿ!” ಕ್ರೈಸ್ತರಿಗೆ “ಅವಶ್ಯವಿರುವ ಸಂಗತಿಗಳನ್ನು” ತಿಳಿಸಿದ ಪತ್ರವನ್ನು ಪ್ರಥಮ ಶತಮಾನದ ಆಡಳಿತ ಮಂಡಲಿ ಈ ಮೇಲಿನ ಮಾತುಗಳಿಂದ ಮುಗಿಸಿತು. ಅವರು “ವಿಗ್ರಹಗಳಿಗೆ ನೈವೇದ್ಯ ಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದದ್ದನ್ನೂ ಹಾದರವನ್ನೂ” ವಿಸರ್ಜಿಸಬೇಕಾಗಿತ್ತು. (ಅಪೊಸ್ತಲರ ಕೃತ್ಯ 15:28, 29) ಆತ್ಮಿಕ ಆರೋಗ್ಯಕ್ಕಿರುವ ಈ ಔಷಧ ಸೂಚಿ ಈಗಲೂ ಜಾರಿಯಲ್ಲಿದೆ. ಮತ್ತು ನಾವು ಹೊಸ ಲೋಕದ ಆಶೀರ್ವಾದಗಳಿಗಾಗಿ ಕಾಯುವಾಗ ರಾಜ್ಯದ ಸುವಾರ್ತೆಯನ್ನು ಆಸಕ್ತಿಯಿಂದ ಸಾರಿ ಈ ರೋಗಪೀಡಿತ ಲೋಕದಲ್ಲಿ ಯೆಹೋವನ ನಾಮವನ್ನು ಸಮರ್ಥಿಸುವಲ್ಲಿ ನಮ್ಮ ನಂಬಿಕೆ ಮತ್ತು ಆತ್ಮಿಕಾರೋಗ್ಯವನ್ನು ಕಾಪಾಡಬಲ್ಲೆವು. ಈ ರೀತಿಯ ಕಾರ್ಯಮಗ್ನತೆಯು ಅತಿ ಸಮೀಪದಲ್ಲಿರುವ ನೂತನ ಲೋಕದ ಆಶೀರ್ವಾದಗಳಿಗೆ ನಾವು ತಾಳ್ಮೆಗೆಡದಂತೆ ನಮ್ಮನ್ನು ಕಾಪಾಡುವುದು. ಹೌದು, “ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು. ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು.”—ಜ್ಞಾನೊಕ್ತಿ 13:12.
21. ಈ ರೋಗಪೀಡಿತ ಲೋಕದಲ್ಲಿ ನಂಬಿಕೆ ಮತ್ತು ಆತ್ಮಿಕಾರೋಗ್ಯವನ್ನು ಸಫಲವಾಗಿ ಕಾಪಾಡುವವರಿಗೆ ಯಾವ ಆಶೀರ್ವಾದಗಳು ಕಾದಿವೆ?
21 ಯೆಹೋವನನ್ನು ಪ್ರೀತಿಸುವವರಿಗೆ ಆತನು ಇಟ್ಟಿರುವ ಮಹಾಶೀರ್ವಾದಗಳನ್ನು ಕಳೆದುಕೊಳ್ಳಬೇಡಿರಿ. ಲೌಕಿಕ ಪ್ರಭಾವಗಳ ಸಕಲ ತಡೆಯುವಿಕೆ, ನಿಮ್ಮ ಶಾರೀರಿಕ ದುರ್ಬಲತೆಗಳೊಂದಿಗೆ ನಿಮ್ಮ ಹೋರಾಟ, ಸೈತಾನನ ಅಗ್ನಿಬಾಣಗಳ ಸಕಲ ತಿರುಗಿಸಿಬಿಡುವಿಕೆ ಆಗ ವ್ಯರ್ಥವಾಗಿರದು. ಯೆಹೋವನ ನೂತನ ಜಗತ್ತಿನಲ್ಲಿ ನೀವು ನಿಮ್ಮ ಸ್ವಂತ ಕಣ್ಣುಗಳಿಂದ “ಯಾವ ನಿವಾಸಿಯೂ ತಾನು ಅಸ್ವಸ್ಥನು” ಎಂದು ಹೇಳದಿರುವ ಸಮಯವನ್ನು ನೋಡುವಿರಿ. (ಯೆಶಾಯ 33:24) ಯಾರು ‘ನಮ್ಮ ವ್ಯಾಧಿಗಳನ್ನು ಅನುಭವಿಸಿ ನಮ್ಮ ಸಂಕಟವನ್ನು ಹೊತ್ತನೊ’ ಆ ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಮೂಲಕ ದೇವರು ಮಾಡಿದ ಒದಗಿಸುವಿಕೆಯ ಕಾರಣವೇ ಇದು ನಿಜವಾಗುವುದು. (ಮತ್ತಾಯ 8:17; ಯೆಶಾಯ 53:4) ಆಗ, ನೀವು ಸಾಂಕೇತಿಕ “ಜೀವಜಲದ ನದಿ”ಯಿಂದ ಕುಡಿದು ಯಾವುದರ ಎಲೆಗಳು “ಜನಾಂಗದವರನ್ನು ವಾಸಿಮಾಡುವದಕ್ಕೆ” ಇರುತ್ತವೊ ಆ “ಜೀವವೃಕ್ಷ”ದಿಂದ ತಿನ್ನುವಿರಿ. (ಪ್ರಕಟನೆ 22:1, 2) ಈ ರೋಗಪೀಡಿತ ಲೋಕದಲ್ಲಿ ನಂಬಿಕೆ ಮತ್ತು ಆತ್ಮಿಕಾರೋಗ್ಯವನ್ನು ಕಾಪಾಡಿದುದಕ್ಕೆ ಪರಿಪೂರ್ಣತೆ ಮತ್ತು ಸಂತೋಷದ ಅನಂತ ಜೀವನ ನಿಮ್ಮ ಪ್ರತಿಫಲವಾಗಿರುವುದು. (w89 10/1)
ಜ್ಞಾಪಕವಿದೆಯೆ?
▫ ಒಳ್ಳೆಯ ಶಾರೀರಿಕ ಆರೋಗ್ಯಕ್ಕಿಂತ ನಂಬಿಕೆಯಲ್ಲಿ ಆರೋಗ್ಯವಂತರಾಗಿರುವುದು ಏಕೆ ಹೆಚ್ಚು ಪ್ರಾಮುಖ್ಯ?
▫ ನಂಬಿಕೆ ಮತ್ತು ಆತ್ಮಿಕಾರೋಗ್ಯಕ್ಕೆ ಕೇಡು ತರುವ ಮೂರು ಪ್ರಧಾನ ಅಪಾಯಗಳಾವುವು?
▫ ಉತ್ತಮ ಆತ್ಮಿಕಾರೋಗ್ಯಕ್ಕೂ ಸಾಂಕೇತಿಕ ಹೃದಯಕ್ಕೂ ಯಾವ ಸಂಬಂಧವಿದೆ?
▫ ಒಬ್ಬನು ಆತ್ಮಿಕವಾಗಿ ರೋಗಿಯಾಗಿರುವಲ್ಲಿ ಏನು ಮಾಡತಕ್ಕದ್ದು?
[ಪುಟ 24 ರಲ್ಲಿರುವ ಚಿತ್ರಗಳು]
ರೋಗಪೀಡಿತ ಲೋಕದಲ್ಲಿಯೂ ಬಲವಾದ ನಂಬಿಕೆ ಮತ್ತು ಉತ್ತಮ ಆತ್ಮಿಕಾರೋಗ್ಯ ಇರುವುದು ಸಾಧ್ಯ
[ಪುಟ 26 ರಲ್ಲಿರುವ ಚಿತ್ರಗಳು]
ಉತ್ತಮ ಆತ್ಮಿಕಾರೋಗ್ಯ ಆಸಕ್ತಿಯ ಕ್ರೈಸ್ತ ಚಟುವಟಿಕೆ ಮತ್ತು ಸಕಾಲದಲ್ಲಿ ಕ್ರಮವಾಗಿ ಆತ್ಮಿಕಾಹಾರವನ್ನು ತೆಗೆದುಕೊಳ್ಳುವುದರ ಮೇಲೆ ಹೊಂದಿಕೊಂಡಿದೆ