ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 8/1 ಪು. 28-32
  • ದೇವರ ಸ್ನೇಹಿತರು ಯಾರಾಗಬಲ್ಲರು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಸ್ನೇಹಿತರು ಯಾರಾಗಬಲ್ಲರು?
  • ಕಾವಲಿನಬುರುಜು—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಅವನು ನಿರ್ದೋಷಿಯೂ ನೀತಿವಂತನೂ ಆಗಿರಬೇಕು”
  • “ಹೃದಯಪೂರ್ವಕವಾಗಿ ಸತ್ಯವನ್ನಾಡುವವನು”
  • “ಅವನು ಚಾಡಿಯನ್ನು ಹೇಳದವನು”
  • “ಮತ್ತೊಬ್ಬರಿಗೆ ಅನ್ಯಾಯ ಮಾಡದವನೂ”
  • “ತನ್ನ ಆಪ್ತ ಪರಿಚಿತರ ವಿರುದ್ಧ ನಿಂದೆಯನ್ನು ಸ್ವೀಕರಿಸದವನೂ”
  • “ಭ್ರಷ್ಟರನ್ನು ಜರಿದುಬಿಟ್ಟವನೂ”
  • “ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಸನ್ಮಾನಿಸುವವನೂ”
  • “ನಷ್ಟವಾದರೂ ಪ್ರಮಾಣ ತಪ್ಪದವನೂ”
  • “ಅವನು ಸಾಲಕ್ಕೆ ಬಡ್ಡಿ ಕೇಳದವನೂ”
  • “ನಿರಪರಾಧಿಯ ಕೇಡಿಗಾಗಿ ಲಂಚ ತೆಗೆದುಕೊಳ್ಳದವನೂ”
  • “ಇಂಥವನು ಎಂದಿಗೂ ಕದಲುವದಿಲ್ಲ”
  • ಯಾವಾಗ್ಲೂ ಯೆಹೋವನ ಅತಿಥಿಗಳಾಗಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಒಳ್ಳೇ ಮಿತ್ರರನ್ನು ಆರಿಸಿಕೊಳ್ಳುವುದು ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ನೀವು ಯೆಹೋವನ ಸ್ನೇಹಿತರಾಗಲು ಸಾಧ್ಯನಾ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಸ್ನೇಹಿತರನ್ನು ನೀವು ಹೇಗೆ ಮಾಡಿಕೊಳ್ಳಬಹುದು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಇನ್ನಷ್ಟು
ಕಾವಲಿನಬುರುಜು—1991
w91 8/1 ಪು. 28-32

ದೇವರ ಸ್ನೇಹಿತರು ಯಾರಾಗಬಲ್ಲರು?

ನೀವು ದೇವರ ಸ್ನೇಹಿತರಾಗಬಲ್ಲಿರಿ. ಸುಮಾರು 4,000 ವರ್ಷಗಳ ಹಿಂದೆ ಅಬ್ರಹಾಮನೆಂಬ ಪುರುಷನು, ಯೆಹೋವ ದೇವರಲ್ಲಿ ನಂಬಿಕೆ ಇಟ್ಟನು. ಇದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು ಮತ್ತು ಆ ಮೂಲಪಿತೃವು “ಯೆಹೋವನ ಸ್ನೇಹಿತನು” ಎಂಬ ಹೆಸರನ್ನು ಪಡೆದನು. (ಯಾಕೋಬ 2:23) ಹೀಗೆ, ನಿಮಗೆ ಯೆಹೋವನಲ್ಲಿ ನಂಬಿಕೆ ಇದ್ದರೆ, ನೀವು ಸಹಾ ದೇವರ ಸ್ನೇಹಿತರಾಗಬಲ್ಲಿರಿ.

ಸ್ನೇಹಿತರನ್ನು ಅತಿಥಿಗಳಾಗಿ ಒಂದು ಊಟಕ್ಕೆ ಆಮಂತ್ರಿಸುವುದುಂಟು. ವಾಸ್ತವದಲ್ಲಿ, ಪ್ರಖ್ಯಾತ 23ನೇ ಕೀರ್ತನೆಯ ಭಾಗವು ದೇವರನ್ನು, ವಿನಯಶೀಲ ಅತಿಥೇಯನಾಗಿ ಪ್ರತಿನಿಧಿಸಿದೆ: “ವೈರಿಗಳ ಮುಂದೆಯೇ ನೀನು [ಯೆಹೋವ] ನನಗೋಸ್ಕರ ಔತಣವನ್ನು ಸಿದ್ಧಪಡಿಸುತ್ತೀ. . . . ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ.”—ಕೀರ್ತನೆ 23:5.

ಇನ್ನೊಂದು ಸಂದರ್ಭದಲ್ಲಿ, ಅದೇ ಕೀರ್ತನೆಗಾರ—ಪುರಾತನ ಇಸ್ರಾಯೇಲಿನ ಅರಸ ದಾವೀದನು—ಕೇಳಿದ್ದು: “ಯೆಹೋವನೇ, ನಿನ್ನ ಗುಡಾರದಲ್ಲಿ ಇಳುಕೊಂಡಿರುವುದಕ್ಕೆ ಯೋಗ್ಯನು ಯಾವನು? ನಿನ್ನ ಪರಿಶುದ್ಧ ಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು? (ಕೀರ್ತನೆ 15:1) ಸಾಂಕೇತಿಕವಾಗಿ ಇದರ ಅರ್ಥವು, ಯೆಹೋವನಿಗೆ ಸ್ವೀಕರಣೀಯವಾದ ಪ್ರಾರ್ಥನೆ ಮತ್ತು ಆರಾಧನೆಯಲ್ಲಿ ಹತ್ತರಿಸುವುದೇ ಆಗಿದೆ. ಇದು ಎಂಥಾ ಘನಗಾಂಭೀರ್ಯದ ಸುಯೋಗವು! ಆದರೆ, ಅಸಂಪೂರ್ಣರಾದ ಮಾನವರು ದೇವರ ಸ್ನೇಹಿತರಾಗಿ ಮತ್ತು ಅತಿಥಿಗಳಾಗಿ ಯೋಗ್ಯತೆ ಪಡೆಯಲು ಶಕ್ತರಾಗುವುದಾದರೂ ಹೇಗೆ?

15ನೇ ಕೀರ್ತನೆಯು ಈ ಪ್ರಶ್ನೆಯನ್ನು ಉತ್ತರಿಸುತ್ತದೆ. ಅದು, ದೇವರ ಸ್ನೇಹಿತರು ಮತ್ತು ಅತಿಥಿಗಳಾಗಲು ಅಪೇಕ್ಷಿಸುವವರಿಗಾಗಿ ಹತ್ತು ವಿಶಿಷ್ಟ ಆವಶ್ಯಕತೆಗಳನ್ನು ತಿಳಿಸುತ್ತದೆ. ನಾವೀ ಆವಶ್ಯಕತೆಗಳನ್ನು ಕೀರ್ತನೆ 15:2ನೇ ವಚನದಿಂದಾರಂಭಿಸಿ, ಒಂದೊಂದಾಗಿ ಚರ್ಚಿಸೋಣ.

“ಅವನು ನಿರ್ದೋಷಿಯೂ ನೀತಿವಂತನೂ ಆಗಿರಬೇಕು”

ಅಬ್ರಹಾಮನ ಸಂತತಿಯು ಸಮೃದ್ಧವಾಗಿ ಹೆಚ್ಚಿದ್ದು ಹೇಗಂದರೆ ಅಬ್ರಹಾಮನು ಯೆಹೋವನ ಮುಂದೆ ನೈತಿಕ ರೀತಿಯಲ್ಲಿ ದೋಷವಿಲ್ಲದೆ ನಡಕೊಂಡದ್ದರಿಂದಲೇ. (ಆದಿಕಾಂಡ 17:1, 2) “ನಡಕೊಳ್ಳುವದು” ಕೆಲವು ಸಾರಿ, ಜೀವನದಲ್ಲಿ ಒಂದು ನಿರ್ದಿಷ್ಟ ಮಾರ್ಗವನ್ನು ಬೆನ್ನಟ್ಟುವದು ಎಂಬ ಅರ್ಥವನ್ನು ಕೊಡುತ್ತದೆ. (ಕೀರ್ತನೆ 1:1; 3 ಯೋಹಾನ 3, 4) ದೇವರ ಸ್ನೇಹಿತರಿಗೆ ಮತ್ತು ಅತಿಥಿಗಳಿಗೆ, ಒಂದು ಧರ್ಮಕ್ಕೆ ಸೇರಿರುವದು, ಅದರ ಅಲಂಕಾರಿಕ ಕಟ್ಟಡಗಳಲ್ಲಿ ಆನಂದಪಡುವದು ಮತ್ತು ಅದರ ವಿಧಿವತ್ತಾದ ಆಚಾರಗಳಲ್ಲಿ ಪಾಲಿಗರಾಗುವುದಷ್ಟೇ ಸಾಕಾಗದು. “ಸ್ವಾಮೀ, ಸ್ವಾಮೀ” ಎಂದು ಹೇಳುವ ಅಥವಾ ದೇವರನ್ನು ತಿಳಿದಿದ್ದೇವೆಂದು ಹೇಳುವ ಎಲ್ಲರೂ ಆತನ ರಾಜ್ಯದ ಆಶೀರ್ವಾದಗಳನ್ನು ಆನಂದಿಸಲಾರರು. (ಮತ್ತಾಯ 7:21-23; ತೀತ 1:16) ಯೆಹೋವನ ಸ್ನೇಹಿತರು ಆತನ ಮುಂದೆ ‘ನಿರ್ದೋಷವಾಗಿ’ ನಡಕೊಳ್ಳುತ್ತಾರೆ ಮತ್ತು ಆತನ ಮಟ್ಟಗಳಿಗನುಸಾರ ‘ನೀತಿಯನ್ನು’ ಅಭ್ಯಾಸಿಸುತ್ತಾರೆ.—ಮೀಕ 6:8.

ಇದು ಎಲ್ಲಾ ತರದ ಅಪ್ರಾಮಾಣಿಕತೆಯನ್ನು, ಲೈಂಗಿಕ ಅನೈತಿಕತೆಯನ್ನು ಮತ್ತು ಭ್ರಷ್ಟಾಚಾರವನ್ನು ತಳ್ಳಿಹಾಕುತ್ತದೆ. ದೇವರು ತಾನೇ ಅದಕ್ಕೆ ಕಾರಣವನ್ನು ತಿಳಿಸುತ್ತಾ, ಅನ್ನುವುದು: “ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು.” (1 ಪೇತ್ರ 1:16) ನಿಮ್ಮ ಧರ್ಮವು, ದೇವರ ಉನ್ನತ ಮಟ್ಟಗಳನ್ನು ಪಾಲಿಸುತ್ತದೋ, ಆತನ ಆವಶ್ಯಕತೆಗಳಿಗೆ ಹೊಂದಿಕೊಳ್ಳಲು ನಿರಾಕರಿಸುವವರ ಬಹಿಷ್ಕಾರವನ್ನು ಕೂಡಾ ಮಾಡುತ್ತದೋ? ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನೀತಿಯುಳ್ಳ ನಡವಳಿಯನ್ನು ನೀವು ಒತ್ತಾಯಿಸುತ್ತೀರೋ? ಹಾಗಿದ್ದರೆ ನೀವು, ದೇವರ ಮಿತ್ರರು ಮತ್ತು ಅತಿಥಿಗಳಾಗುವುದಕ್ಕಿರುವ ಮುಂದಿನ ಆವಶ್ಯಕತೆಯನ್ನು ಮುಟ್ಟುವವರಾಗುವಿರಿ.

“ಹೃದಯಪೂರ್ವಕವಾಗಿ ಸತ್ಯವನ್ನಾಡುವವನು”

ದೇವರ ಸ್ನೇಹವು ನಮಗೆ ಬೇಕಾದರೆ ನಾವು ಸುಳ್ಳಾಡಬಾರದು ಅಥವಾ ವಂಚನೆಯ ತುಟಿಗಳಿಂದ ಹೊರಗೊಂದು ಮಾತಾಡಬಾರದು. (ಕೀರ್ತನೆ 12:2) ಕೇವಲ ತುಟಿಗಳಲ್ಲಿ ಮಾತ್ರವಲ್ಲ ‘ಹೃದಯದಿಂದ ನಾವು ಸತ್ಯವನ್ನು ಆಡಬೇಕು.’ ಹೌದು, ನಾವು ಅಂತರ್ಯದಲ್ಲಿ ಪ್ರಾಮಾಣಿಕರಾಗಿರಬೇಕು ಮತ್ತು ‘ನಿಷ್ಕಪಟವಾದ ನಂಬಿಕೆ’ಯ ರುಜುವಾತನ್ನು ಕೊಡಬೇಕು. (1 ತಿಮೊಥಿ 1:5) ಕೆಲವು ಜನರು ಮಾನ ಉಳಿಸಿಕೊಳ್ಳಲಿಕ್ಕಾಗಿ ಸುಳ್ಳಾಡುತ್ತಾರೆ ಅಥವಾ ಅರೆ ಸತ್ಯಗಳನ್ನು ನುಡಿಯುತ್ತಾರೆ. ಇತರರು ಶಾಲಾ ಪರೀಕ್ಷೆಗಳಲ್ಲಿ ಮೋಸ ಮಾಡುತ್ತಾರೆ ಅಥವಾ ತೆರಿಗೆಯನ್ನು ಸರಿಯಾಗಿ ವರದಿಸುವುದರಲ್ಲಿ ವಂಚಿಸುತ್ತಾರೆ. ಅಂಥ ಕ್ರಿಯೆಗಳು ಸತ್ಯದ ಪ್ರೀತಿಯ ಕೊರತೆಯನ್ನು ಬಯಲು ಪಡಿಸುತ್ತವೆ. ಸತ್ಯಪರತೆ ಮತ್ತು ಉದಾತ್ತ ಕೃತ್ಯಗಳು ದೇವರ ಸ್ನೇಹಿತರ ಹೃದಯದೊಳಗಿಂದಲೇ ಬರುತ್ತವೆ. (ಮತ್ತಾಯ 15:18-20) ಅವರು ವಕ್ರಬುದ್ಧಿಯವರಲ್ಲ ಅಥವಾ ವಂಚಿಸುವವರಲ್ಲ.—ಜ್ಞಾನೋಕ್ತಿ 3:32; 6:16-19.

ಅಪೂಸ್ತಲ ಪೌಲನ ಬರೆದದ್ದು: “ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ. ನೀವು ಪೂರ್ವ ಸ್ವಭಾವಗಳನ್ನು ಕೃತ್ಯಗಳ ಕೂಡ ತೆಗೆದಿಟ್ಟು ನೂತನ ಸ್ವಭಾವವನ್ನು ಧರಿಸಿಕೊಂಡಿದ್ದೀರಲ್ಲವೆ.” (ಕೊಲೊಸ್ಸೆ 3:9, 10) ಹೌದು, ಯಾರು ತಮ್ಮ ಹೃದಯದಲ್ಲಿ ನಿಜವಾಗಿ ಸತ್ಯವನ್ನೇ ಆಡುತ್ತಾರೋ ಅವರು “ನೂತನ ಸ್ವಭಾವವನ್ನು ಧರಿಸಿಕೊಂಡವರು” ಆಗಿದ್ದಾರೆ. ನೀವು ನಿಮ್ಮೊಂದಿಗೂ ಇತರರೊಂದಿಗೂ ಪೂರ್ಣ ಪ್ರಾಮಾಣಿಕರಾಗಿದ್ದು, ನಿಮ್ಮ ಹೃದಯದಲ್ಲಿ ಸತ್ಯವನ್ನೇ ಆಡುತ್ತೀರೋ? ಹಾಗಿದ್ದರೆ, ಇತರರ ಕುರಿತು ನೀವೇನನ್ನುತ್ತೀರೋ ಅದರ ಮೇಲೆ ಅದು ಪ್ರಭಾವಿಸಬೇಕು.

“ಅವನು ಚಾಡಿಯನ್ನು ಹೇಳದವನು”

ದೇವರ ಅತಿಥಿಗಳಾಗುವ ಆವಶ್ಯಕತೆಯನ್ನು ಮುಟ್ಟಬೇಕಾದರೆ ನಾವು, ಇತರರ ಕುರಿತು ನಿಂದಿಸಿ ಮಾತಾಡಬಾರದು. (ಕೀರ್ತನೆ 15:3) “ಚಾಡಿ ಹೇಳು” ಎಂದು ತರ್ಜುಮೆಯಾಗಿರುವ ಪದವು “ಕಾಲು” ಅಥವಾ “ಕಾಲುಹಾಕು” ಎಂಬದರ ಪದರೂಪವಾಗಿದ್ದು “ಅಲ್ಲಲ್ಲಿ ಹೋಗು” ಎಂಬರ್ಥ ಕೊಡುತ್ತದೆ. ಇಸ್ರಾಯೇಲ್ಯರಿಗೆ ಆಜ್ಞೆಕೊಟ್ಟದ್ದು: “ನಿಮ್ಮ ಜನರ ನಡುವೆ ಅಲಲ್ಲಿ ತಿರುಗುತ್ತಾ ಒಬ್ಬರ ಮೇಲೊಬ್ಬರು ಚಾಡಿ ಹೇಳಬಾರದು. ಮತ್ತೊಬ್ಬನಿಗೆ ಮರಣ ಶಿಕ್ಷೆಯಾಗಲೇ ಬೇಕೆಂದು ಛಲಹಿಡಿಯಬಾರದು. ನಾನು ಯೆಹೋವನು.” (ಯಾಜಕಕಾಂಡ 19:16, NW; 1 ತಿಮೊಥಿ 5:13) ನಾವು ಇನ್ನೊಬ್ಬನ ಕುರಿತಾಗಿ ಚಾಡಿಹೇಳಿ ಅವನ ಒಳ್ಳೇ ಹೆಸರಿಗೆ ಕುಂದನ್ನು ತರುವುದಾದರೆ, ದೇವರ ಸ್ನೇಹಿತರಾಗಿ ಇರಲಾರೆವು.

ದಾವೀದನು ಪ್ರಕಟಿಸಿದ್ದು: “ಗುಪ್ತದಲ್ಲಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಬಾಯಿಮುಚ್ಚಿಸುವೆನು.” (ಕೀರ್ತನೆ 101:5, NW) ಚಾಡಿಹೇಳುವವರಿಗೆ ಕಿವಿಗೊಡಲು ನಿರಾಕರಿಸುವ ಮೂಲಕ ನಾವು ಸಹ ಅವರ ಬಾಯಿ ಮುಚ್ಚಿಸಬಹುದು. ಒಬ್ಬ ವ್ಯಕ್ತಿಯ ಮುಖದೆದುರು ನಾವು ಹೇಳಲು ಸಿದ್ಧರಾಗಿರದ ಮಾತನ್ನು ಅವನ ಬೆನ್ನ ಹಿಂದೆ ನುಡಿಯದೆ ಇರುವದೇ ಉತ್ತಮ ಸೂತ್ರ. ಅಂಥಾ ಅಂಕೆಯ ಕೆಳಗೆ ನಮ್ಮ ನಾಲಿಗೆಯು ಇರುವದಾದರೆ ಅದು ಉತ್ತಮವೆ. ಆದರೂ, ನಮ್ಮ ಕ್ರಿಯೆಗಳನ್ನೂ ಅಂಕೆಯಲಿಡ್ಲುವುದು ಅದೆಷ್ಟು ಉತ್ತಮ!

“ಮತ್ತೊಬ್ಬರಿಗೆ ಅನ್ಯಾಯ ಮಾಡದವನೂ”

ಇಲ್ಲಿ ಯೇಸುವಿನ ಮಾತುಗಳು ಗಮನಕ್ಕೆ ಅರ್ಹವಾಗಿವೆ: “ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ದೇವರ ಅನುಗ್ರಹವನ್ನು ಆನಂದಿಸಬೇಕಾದರೆ ನಾವು ಕೆಟ್ಟದ್ದನ್ನು ನಡಿಸುವುದರಿಂದ ದೂರವಿರಬೇಕು. ಕೀರ್ತನೆಗಾರನು ಹೇಳಿದ್ದು: “ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆ ಮಾಡಿರಿ. ಆತನು ತನ್ನ ಭಕ್ತರ ಪ್ರಾಣಗಳನ್ನು ಕಾಯುವವನಾಗಿ ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.” (ಕೀರ್ತನೆ 97:10) ಹೀಗೆ ನಮಗೆ, ದೇವರ ಸಹಾಯ ಮತ್ತು ಸ್ನೇಹವು ಬೇಕಿದ್ದರೆ ಆತನ ಮಟ್ಟಗಳನ್ನು ನಾವು ಸ್ವೀಕರಿಸಲೇ ಬೇಕು.

ಕೆಟ್ಟತನವನ್ನು ವರ್ಜಿಸುವದರಲ್ಲಿ, ವ್ಯಾಪಾರ ವ್ಯವಹಾರಗಳಲ್ಲಿ ಮತ್ತು ಇತರ ವಿಷಯಗಳಲ್ಲಿ ಇತರರಿಗೆ ತಪ್ಪು ಮಾಡದೆ ಇರುವುದೂ ಸೇರಿದೆ. ನಡೆಯಲ್ಲಿ ಯಾ ನುಡಿಯಲ್ಲಿ ಸಹವಾಸಿಗೆ ಹಾನಿಯಾಗುವ ಯಾವದನ್ನೂ ಮಾಡದೆ, ಅವನಿಗೆ ಒಳ್ಳೇದನ್ನೇ ಮಾಡುತ್ತಿರಬೇಕು. ಇದು ಜೀವಿತದ ಪ್ರತಿಯೊಂದು ವಿಷಯವನ್ನೂ ಸ್ಪರ್ಶಿಸ ಸಾಧ್ಯವಿದೆ. ಉದಾಹರಣೆಗೆ, ಮೋಟಾರು ಗಾಡಿ ನಡಿಸುವಾಗ, ರಸ್ತೆಯ ಬಲಬದಿಯನ್ನು ಸೌಜನ್ಯದಿಂದ ದಾರಿಹೋಕರಿಗೆ ಬಿಟ್ಟುಕೊಡಬಹುದು. ವೃದ್ಧರಿಗೆ ಸಹಾಯವನ್ನು, ಬಲಗುಂದಿದವರಿಗೆ ಉತ್ತೇಜನವನ್ನು, ದುಃಖಿತರಿಗೆ ಆದರಣೆಯನ್ನು ನಾವು ನೀಡಬಹುದು. ಈ ವಿಷಯದಲ್ಲಿ ಯೆಹೋವನು ಪ್ರಾಮುಖ್ಯ ಮಾದರಿಯನ್ನು ಒದಗಿಸುತ್ತಾನೆ. ಯೇಸುವಂದ ಹಾಗೆ ದೇವರು, “ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ. ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆ ಸುರಿಸುತ್ತಾನೆ.” (ಮತ್ತಾಯ 5:43-48) ಇತರರಿಗೆ ಒಳ್ಳೇದನ್ನು ಮಾಡುವ ಸಂಬಂಧದಲ್ಲಿ, ಕೀರ್ತನೆಗಾರನು ಮುಂದಕ್ಕೆ ಹೇಳುವ ವಿಷಯಕ್ಕೆ ಹೊಂದಿಕೊಳ್ಳುವುದೂ ಸೇರಿದೆ.

“ತನ್ನ ಆಪ್ತ ಪರಿಚಿತರ ವಿರುದ್ಧ ನಿಂದೆಯನ್ನು ಸ್ವೀಕರಿಸದವನೂ”

ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ, ಮತ್ತು ಸ್ನೇಹಿತರು ಈ ಚಿಕ್ಕಪುಟ್ಟ ತಪ್ಪುಗಳನ್ನು ಲಕ್ಷಕ್ಕೆ ತಾರದೆಇರಲು ಆರಿಸುವಾಗ ನಾವೆಷ್ಟು ಅಭಾರಿಗಳಾಗುತ್ತೇವೆ! ಒಬ್ಬ ಆಪ್ತ ಮಿತ್ರನು ನಮ್ಮ ಚಿಕ್ಕಪುಟ್ಟ ಆದರೆ ಸಂಕೋಚಕರವಾದ ಬಲಹೀನತೆಗಳನ್ನು ಇತರರಿಗೆ ರಟ್ಟುಮಾಡಿದಲ್ಲಿ, ನಾವು ಹತಾಶೆಗೊಳ್ಳುವೆವು. ಕೆಲವರು ಇದನ್ನು ಮಾಡುವುದು ತಮ್ಮ ಸ್ವಂತ ತಪ್ಪುಗಳಿಂದ ಗಮನವನ್ನು ಹರಿಸಲಿಕ್ಕಾಗಿ ಅಥವಾ ಇತರರಿಗಿಂತ ತಾವು ಶ್ರೇಷ್ಟರೆಂದು ತೋರಿಸಲಿಕ್ಕಾಗಿ. ಆದರೆ ದೇವರ ಸ್ನೇಹಿತರಾಗಿರಲು ಅಪೇಕ್ಷಿಸುವವರಿಗೆ ಅಂಥ ಕೃತ್ಯಗಳು ಒಪ್ಪಲಾರವು.

“ದೋಷವನ್ನು ಮುಚ್ಚಿಡುವವನು ಪ್ರೇಮವನ್ನು ಸೆಳೆಯುವನು; ಎತ್ತಿ ಆಡುತ್ತಿರುವವನು ಸ್ನೇಹವನ್ನು ಕಳೆದುಕೊಳ್ಳುವನು” ಎನ್ನುತ್ತದೆ ಜ್ಞಾನೋಕ್ತಿ 17:9. ಆದರೆ, ಗಂಭೀರವಾದ ಕೆಟ್ಟತನವನ್ನು ನಾವು ಮರೆಮಾಡಲು ಪ್ರಯತ್ನಿಸುವುದಿಲ್ಲ ನಿಶ್ಚಯ. (ಯಾಜಕಕಾಂಡ 5:1; ಜ್ಞಾನೋಕ್ತಿ 28:13) ಆದರೆ ದೇವರ ಮಿತ್ರರಾಗಿರಲು ನಾವು ಬಯಸುವುದಾದರೆ, ನಮ್ಮ ಪ್ರಾಮಾಣಿಕ ಪರಿಚಿತರ ಕುರಿತಾಗಿ ಹೇಳಲ್ಪಡುವ ನಿಂದಾತ್ಮಕ ಕಥೆಗಳನ್ನು ನಾವು ‘ನಂಬಲಾರೆವು’ ಅಥವಾ ಸತ್ಯವೆಂದು ಎಣಿಸಲಾರೆವು. (1 ತಿಮೊಥಿ 5:19) ಯೆಹೋವನ ಸ್ನೇಹಿತರು ದೇವರ ಸೇವಕರ ಕುರಿತು ಒಳ್ಳೇದನ್ನೇ ಆಡುವವರಲ್ಲದೆ ಕೆಟ್ಟಕಥೆಗಳನ್ನು ಹರಡಿಸುವವರಲ್ಲ, ಮತ್ತು ಹೀಗೆ, ಭಕ್ತಿಹೀನ ಜನರಿಂದ ಅವರು ಈವಾಗಲೇ ಸಹಿಸುತ್ತಿರುವ ನಿಂದಾತ್ಮಕ ಅಪವಾದಗಳ ಭಾರಕ್ಕೆ ಹೆಚ್ಚನ್ನು ಕೂಡಿಸಲಾರರು. ದೇವರ ಸ್ನೇಹಿತರು ಮತ್ತು ಅತಿಥಿಗಳು, ದಾವೀದನು ಕೀರ್ತನೆ 15:4ನೇ ವಚನದಲ್ಲಿ ತಿಳಿಸಿರುವ ಪ್ರಕಾರ, ತಮ್ಮ ಸಹವಾಸಗಳ ಕುರಿತೂ ಎಚ್ಚರದಿಂದಿರುವರು:

“ಭ್ರಷ್ಟರನ್ನು ಜರಿದುಬಿಟ್ಟವನೂ”

ಸ್ವಾರ್ಥಪರ ಪ್ರಯೋಜನಗಳನ್ನು ಹುಡುಕುತ್ತಾ, ಕೆಲವರು ಭ್ರಷ್ಟರಾಗಿದ್ದರೂ ಧನಿಕರೂ ಪ್ರಮುಖರೂ ಆದ ಜನರ ಸಹವಾಸವನ್ನು ಬಯಸುತ್ತಾರೆ. (ಯೂದ 16ನ್ನು ಹೋಲಿಸಿ.) ಆದರೆ ದುಷ್ಟರೊಂದಿಗೆ ನಾವು ಸಹವಾಸ ಮಾಡುವುದಾದರೆ ಯೆಹೋವನ ಮಿತ್ರರಾಗಿರಲಾರೆವು. ನಾವು ಕೆಡುಕನ್ನು ಎಷ್ಟು ಹೆಚ್ಚಾಗಿ ಹಗೆ ಮಾಡಬೇಕೆಂದರೆ ಅದನ್ನು ನಡಿಸುವವರ ಸಹವಾಸವನ್ನು ಕೂಡ ನಾವು ಮಾಡಬಯಸಬಾರದು. (ರೋಮಾಪುರ 12:9) ಇಸ್ರಾಯೇಲ್ಯರ ಅರಸನಾದ ಯೆಹೋರಾಮನು ಎಷ್ಟು ಕೆಟ್ಟವನಾಗಿದ್ದನೆಂದರೆ ಪ್ರವಾದಿ ಎಲೀಷನು ಅವನ ಕುರಿತು ಹೇಳಿದ್ದು: “ನಾನು ಸನ್ನಿಧಿ ಸೇವೆ ಮಾಡುತ್ತಿರುವ ಸೇನಾಧೀಶ್ವರನಾದ ಯೆಹೋವನಾಣೆ, ಯೆಹೂದ್ಯರ ಅರಸನಾದ ಯೆಹೋಷಾಫಾಟನು ನಿನ್ನ ಜೊತೆಯಲ್ಲಿರದಿದ್ದರೆ ನಾನು ನಿನ್ನನ್ನು ನೋಡುತ್ತಿದ್ದಿಲ್ಲ, ಲಕ್ಷಿಸುತ್ತಿದ್ದಿಲ್ಲ.” (2 ಅರಸು 3:14) ದೇವರ ಸ್ನೇಹಿತರಾಗಿರ ಬೇಕಾದರೆ ಪೌಲನ ಎಚ್ಚರಿಕೆಯನ್ನು ನಾವು ಪಾಲಿಸಲೇ ಬೇಕು: “ದುಸ್ಸಹವಾಸವು ಸದಾಚಾರವನ್ನು ಕೆಡಿಸುವುದು.”—1 ಕೊರಿಂಥ 15:33.

ಹೀಗೆ, ಯೆಹೋವನ ಸ್ನೇಹವನ್ನು ನಾವು ಬೆಲೆಯುಳ್ಳದೆಂದು ಎಣಿಸಿದರೆ, ದುರ್ನಡತೆಯ ಜನರೊಂದಿಗೆ ಸಹವಾಸ ಮಾಡಲು ನಿರಾಕರಿಸುವೆವು. ಅಗತ್ಯವಿರುವ ವ್ಯವಹಾರವನ್ನು ಮಾತ್ರವೇ ಅವರೊಂದಿಗೆ ಮಾಡುವೆವು. ದೇವರೊಂದಿಗೆ ಅವರಿಗಿರುವ ಸುಸಂಬಂಧಕ್ಕಾಗಿ ನಮ್ಮ ಮಿತ್ರರು ಆರಿಸಲ್ಪಡುವರೇ ಹೊರತು ಲೋಕದಲ್ಲಿ ಅವಗಿರುವ ಸ್ಥಾನಮಾನಗಳಿಗಾಗಿ ಅಲ್ಲ. ದೇವರಲ್ಲಿ ಭಯಭಕ್ತಿ ನಮಗಿರುವುದಾದರೆ, ನಾವು ನಮ್ಮ ಮಿತ್ರರನ್ನು ವಿವೇಕದಿಂದ ಆರಿಸಿಕೊಳ್ಳುವೆವು. ಈ ಸಂಬಂಧದಲ್ಲಿ, ಯೆಹೋವನ ಅತಿಥಿಗಳಿಂದ ಮುಟ್ಟಲ್ಪಡಬೇಕಾದ ಏಳನೆಯ ಆವಶ್ಯಕತೆಯನ್ನು ಗಮನಿಸಿರಿ.

“ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಸನ್ಮಾನಿಸುವವನೂ”

ದೇವರ ಮಿತ್ರರು ಮತ್ತು ಅತಿಥಿಗಳು ಆಗಿರಲಿಕ್ಕಾಗಿ, ನಾವು ಆತನಿಗೆ ಭಯಪಡಬೇಕು. ಜ್ಞಾನೋಕ್ತಿ 1:7 ಹೇಳುವುದು: “ಯೆಹೋವನ ಭಯವೇ ತಿಳುವಳಿಕೆಗೆ ಮೂಲವು.” ಯೆಹೋವನ ಭಯ ಎಂದರೇನು? ದೇವರ ಕಡೆಗೆ ಭಯಭಕ್ತಿಯ ಭಾವ ಮತ್ತು ಆತನನ್ನು ಅಸಂತೋಷಪಡಿಸೇವು ಎಂಬ ಹಿತಕರವಾದ ಭಯವೇ ಅದಾಗಿದೆ. ಇದರಿಂದ ನಿಜ ತಿಳುವಳಿಕೆ, ಜೀವ ರಕ್ಷಕ ಶಿಸ್ತು ಮತ್ತು ನಿಶ್ಚಿತ ಮಾರ್ಗದರ್ಶಕವಾದ ಸ್ವರ್ಗೀಯ ವಿವೇಕ ಲಭಿಸುತ್ತದೆ.

ಯೆಹೋವನಿಗೆ ಭಯಪಡುವವರು ಆತನ ನೀತಿಯ ಮಟ್ಟಗಳನ್ನು, ಅದರಿಂದ ನಿಂದೆಯು ಬಂದರೂ, ಅವಲಂಬಿಸುವರು. ಉದಾಹರಣೆಗಾಗಿ, ದೇವರಿಗೆ ಭಯಪಡುವವರು ಉದ್ಯೋಗಶೀಲರಾಗಿ ದುಡಿಯುವಾಗ, ತಮ್ಮ ಕೆಲಸದಲ್ಲಿ ಪ್ರಾಮಾಣಿಕರಾಗಿರುವಾಗ, ಅಥವಾ ಇತರರಿಗೆ ಆತ್ಮಿಕವಾಗಿ ಸಹಾಯ ಮಾಡಲು ಹುಡುಕುವಾಗ, ಅನೇಕರು ಕುಚೋದ್ಯ ಮಾಡುತ್ತಾರೆ. ಆದರೆ ಒಬ್ಬ ದೈವಿಕ ವ್ಯಕ್ತಿಯು ಅಂಥ ಪ್ರಾಮಾಣಿಕ ಜನರನ್ನು ಹೇಗೆ ವೀಕ್ಷಿಸುತ್ತಾನೆ? ‘ಯೆಹೋವನಿಗೆ ಭಯಪಡುವವರನ್ನು ಅವನು ಸನ್ಮಾನಿಸುತ್ತಾನೆ,’ ಮತ್ತು ಇದಕ್ಕಾಗಿ ಅವರೊಂದಿಗೆ ನಿಂದೆಯನ್ನು ಸಹಿಸಬೇಕಾದಾಗ್ಯೂ, ಅವರನ್ನು ಮಾನ್ಯರೆಂದೆಣಿಸುತ್ತಾನೆ. ದೇವರಿಗೆ ಭಯಪಡುವವರ ಕಡೆಗೆ ನಿಮಗೆ ಅಂಥ ಸನ್ಮಾನ ಇದೆಯೇ? ದೇವರ ಮೆಚ್ಚಿಗೆಯನ್ನು ಪಡೆಯುವ ಇನ್ನೊಂದು ಆವಶ್ಯಕತೆಯನ್ನು ತಿಳಿಸುತ್ತಾ, ಕೀರ್ತನೆಗಾರನು ಮತ್ತೂ ಅಂದದ್ದು:

“ನಷ್ಟವಾದರೂ ಪ್ರಮಾಣ ತಪ್ಪದವನೂ”

ಇಲ್ಲಿರುವ ತತ್ವವು, ದೇವರು ಮಾಡುವಂತೆ, ಕೊಟ್ಟ ವಚನಗಳನ್ನು ನಾವು ನೆರವೇರಿಸುವುದೇ ಆಗಿದೆ. (1 ಅರಸು 8:56; 2 ಕೊರಿಂಥ 1:20) ನಾವು ಏನನ್ನು ವಚನಿಸಿದ್ದೇವೋ ಅದನ್ನು ತದನಂತರ ಪೂರೈಸುವುದು ಅತಿ ಕಷ್ಟವಾಗಿ ಕಂಡುಬಂದರೂ, ನಾವು ಮನಸ್ಸು ಬದಲಿಸಬಾರದು ಮತ್ತು ಕೊಟ್ಟ ವಚನವನ್ನು ಹಿಂದೆ ತೆಗೆಯಬಾರದು. ಇಲ್ಲಿ, ಗ್ರೀಕ್‌ ಸೆಪ್ಟ್ಯುವಜಿಂಟ್‌, ಸಿರಿಯಕ್‌ ಪೆಶ್ಶಿಟ, ಮತ್ತು ಲ್ಯಾಟಿನ್‌ ವಲ್ಗೇಟ್‌ ವಚನಗಳು, “ನೆರೆಯವನಿಗೆ ಪ್ರಮಾಣಮಾಡಿದ” ಎಂದು ಹೇಳುತ್ತವೆ. ನಾವೇನಾದರೂ ಮಾಡುವಂತೆ ಪ್ರಮಾಣ ಮಾಡಿದರೆ ಅಥವಾ ಒಂದು ಯೋಗ್ಯ ಹರಕೆಯನ್ನು ಮಾಡಿದರೆ, ಅದನ್ನು ತೀರಿಸದೆ ಬಿಡಬಾರದು. (ಪ್ರಸಂಗಿ 5:4) ಆದರೆ ನಾವು ಕೊಟ್ಟ ವಚನವು ಒಂದು ಅಶಾಸ್ತ್ರೀಯ ವಿಷಯವೆಂದು ನಮಗೆ ತಿಳಿದುಬಂದರೆ, ನಾವದನ್ನು ಮಾಡಬಾರದು ನಿಶ್ಚಯ.

ಯೆಹೋಶುವನು ಗಿಬ್ಯೋನ್ಯರೊಂದಿಗೆ ಮಾಡಿದ ಒಡಂಬಡಿಕೆಯನ್ನು, ಅದನ್ನು ಮಾಡಿದ್ದರಲ್ಲಿ ಅವರು ಅವನನ್ನು ಮೋಸಗೊಳಿಸಿದ್ದರೆಂದು ತದನಂತರ ಅವನಿಗೆ ತಿಳಿದು ಬಂದರೂ, ಮುರಿಯಲಿಲ್ಲ. (ಯೆಹೋಶುವ 9:16-19) ಹೀಗೆ ನಾವು, ಕೊಟ್ಟ ಮಾತನ್ನು ತಪ್ಪದೆ ಪಾಲಿಸುವ ಪುರುಷರು, ಸ್ತ್ರೀಯರು ಮತ್ತು ಯುವ ಜನರು ಆಗಿರಬೇಕು. ಒಮ್ಮೆ ಇತರರಿಗೆ ವಚನ ಕೊಟ್ಟ ಮೇಲೆ, ಅನಂತರ ಹೆಚ್ಚು ಅಪ್ಪೀಲಿನ ಸಂದರ್ಭಗಳು ನಮಗೆ ತೆರೆದರೂ, ನಾವು ಅವರ ಕೈಬಿಡಬಾರದು. ಯೇಸುವಂದದ್ದು: “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ.” (ಮತ್ತಾಯ 5:37) ವಿಶೇಷವಾಗಿ ಯೆಹೋವನಿಗೆ ಸಮರ್ಪಿತರಾದ ಜನರು, ಯೆಹೋವನನ್ನು ಆತನ ಸಾಕ್ಷಿಗಳಾಗಿ ನಿರಂತರವೂ ಸೇವಿಸುವ ತಮ್ಮ ವಚನವನ್ನು ನೆರವೇರಿಸಲು ನಿರ್ಧಾರ ಮಾಡಿದವರಾಗಬೇಕು. ಕೊಟ್ಟ ವಚನಗಳನ್ನು ನೆರೆವೇರಿಸುವುದು ಮಾತ್ರವಲ್ಲ, ದಾವೀದನು 15ನೇ ಕೀರ್ತನೆ, 5ನೇ ವಚನದಲ್ಲಿ ಹೇಳಿರುವ ಪ್ರಕಾರ, ಆರ್ಥಿಕ ವಿಷಯಗಳಲ್ಲೂ ನಾವು ಪರಿಗಣನೆಯನ್ನು ತೋರಿಸುವವರಾಗಬೇಕು.

“ಅವನು ಸಾಲಕ್ಕೆ ಬಡ್ಡಿ ಕೇಳದವನೂ”

ವ್ಯಾಪಾರಕ್ಕಾಗಿ ಕೊಡಲ್ಪಟ್ಟ ಹಣದ ಸಾಲವನ್ನು ಬಡ್ಡಿಯೊಂದಿಗೆ ಹಿಂದೆ ಸಲ್ಲಿಸುವುದು ಯೋಗ್ಯವಾಗಿದೆ. ಆದರೆ ಇಲ್ಲಿ ದಾವೀದನು ಹೇಳಿರುವುದು ಬಡಜನರಿಗೆ ‘ಹಣ ಸಾಲ ಕೊಡುವ’ ವಿಷಯವಾಗಿ. ಮೋಶೆಯ ಧರ್ಮಶಾಸ್ತ್ರ,ದಲ್ಲಿ ನಮೂದಿಸಿದ್ದು: “ನನ್ನ ಜನರಲ್ಲಿ ಒಬ್ಬ ಬಡವನಿಗೆ ನೀನು ಸಾಲಕೊಟ್ಟರೆ ಅವನನ್ನು ಸಾಲಗಾರನಂತೆ ನಡಿಸಬಾರದು. ಅವನಿಂದ ಬಡ್ಡಿಯನ್ನು ಕೇಳಬಾರದು.” (ವಿಮೋಚನಕಾಂಡ 22:25; ಯಾಜಕಕಾಂಡ 25:35, 36) ಬಡಜನರ ಮೇಲೆ ದುಬಾರಿ ಬಡ್ಡಿ ಹಾಕಿ ಕಷ್ಟಕ್ಕೆ ಗುರಿಪಡಿಸಿದ್ದನ್ನು ನೆಹೆಮೀಯನು ಕಂಡುಕೊಂಡಾಗ, ಅಂಥಾ ದೋಚಿಕೊಳ್ಳುವಿಕೆಯನ್ನು ನಿಲ್ಲಿಸಿಬಿಟ್ಟನು.—ನೆಹೆಮೀಯ 5:1-13.

“ಬಡ್ಡಿ”ಗಾಗಿ ದಾವೀದನು ಪ್ರಯೋಗಿಸಿದ ಹಿಬ್ರೂ ಪದವು “ಕಚ್ಚು” ಎಂಬ ಪದದ ಇನ್ನೊಂದು ಪದರೂಪವಾಗಿದೆ. ದುರಾಶೆಯಿಂದ ದುಬಾರಿ ಬಡ್ಡಿ ಹಾಕುವ ಸಾಲಿಗರು ಬಡಜನರನ್ನು ಮತ್ತು ಅವರಿಗಿದ್ದ ಅಲ್ಪ ಸೊತ್ತನ್ನು ನುಂಗಿಹಾಕುತ್ತಿದ್ದರೆಂದು ಇದು ಸೂಚಿಸುತ್ತದೆ. ಬಡತನ-ಪೀಡಿತರಿಂದ ಹಿಂದಕ್ಕೆ ಏನನ್ನೂ ಅಪೇಕ್ಷಿಸದೆ ಸಹಾಯ ಮಾಡುವುದು ಎಷ್ಟೋ ಮೇಲು ಎಂಬದು ಸ್ಪಷ್ಟ. ಯೇಸು ಇದೇ ವಿಷಯವನ್ನು ತಿಳಿಸುತ್ತಾ ಅಂದದ್ದು: “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ಸಾಯಂಕಾಲದ ಊಟಕ್ಕೆ . . . ಬಡವರು ಊನರಾದವರು ಕುಂಟರು ಕುರುಡರು ಇಂಥವರನ್ನು ಕರೆ. ಅವರು ನಿನಗೆ ಪ್ರತಿಯಾಗಿ ಸಲ್ಲಿಸಲು ಏನೂ ಇಲ್ಲದವರಾಗಿದ್ದಾರೆ ಮತ್ತು ನೀನು ಧನ್ಯನಾಗುವಿ. ಯಾಕಂದರೆ ನೀತಿವಂತರ ಪುನುರುತ್ಥಾನದಲ್ಲಿ ನಿನಗೆ ಪ್ರತಿಫಲವು ಸಿಗುವುದು.” (ಲೂಕ 14:12-14, NW) ದೇವರ ಸ್ನೇಹಿತನಾಗಲು ಮತ್ತು ಅತಿಥಿಯಾಗಲು ಅಪೇಕ್ಷಿಸುವನು ತನ್ನ ನೆರೆಯವನ ಬಡತನದ ಅಯುಕ್ತ ದುರುಪಯೋಗವನ್ನು ಎಂದೂ ಮಾಡಲಾರನು ಮತ್ತು ಕೀರ್ತನೆಗಾರನು ಮುಂದಕ್ಕೆ ಅನ್ನುವ ವಿಷಯಕ್ಕೆ ಹೊಂದಿಕೆಯಾಗಿರುವನು.

“ನಿರಪರಾಧಿಯ ಕೇಡಿಗಾಗಿ ಲಂಚ ತೆಗೆದುಕೊಳ್ಳದವನೂ”

ಲಂಚಕ್ಕೆ ಭ್ರಷ್ಟಗೊಳಿಸುವ ಪ್ರಭಾವವಿದೆ. ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಲ್ಪಟ್ಟಿತ್ತು: “ನೀವು . . . ಲಂಚ ತೆಗೆದುಕೊಳ್ಳಬಾರದು. ಲಂಚವು ಬುದ್ಧಿವಂತರನ್ನು ಕುರುಡರನ್ನಾಗಿ ಮಾಡುತ್ತದೆ; ನಿರಪರಾಧಿಗಳ ನ್ಯಾಯವನ್ನು ಕೆಡಿಸುತ್ತದೆ.” (ಧರ್ಮೋಪದೇಶಕಾಂಡ 16:19) ಪ್ರಾಯಶಃ, ಕೋರ್ಟಿನ ಸಾಕ್ಷ್ಮಗಳನ್ನು ಬದಲಾಯಿಸುವ ಮೂಲಕ “ನಿರಪರಾಧಿ ಮನುಷ್ಯನಿಗೆ” ಕೇಡನ್ನು ಮಾಡಲು, ಲಂಚವನ್ನು ತಕ್ಕೊಳ್ಳುವುದು ವಿಶೇಷ ಕೆಟ್ಟತನವಾಗಿದೆ. ನಿರಪರಾಧಿಯಾದ ಯೇಸುವನ್ನು ಹಿಡುಕೊಡಲಿಕ್ಕಾಗಿ ಲಂಚವನ್ನು ತಕ್ಕೊಂಡದರಲ್ಲಿ ಇಸ್ಕಾರಿಯೋತ ಯೂದನು ಎಂಥ ನೀಚ ವ್ಯಕ್ತಿಯಾಗಿದ್ದನು!—ಮತ್ತಾಯ 26:14-16.

ಈ ವಿಷಯದಲ್ಲಿ ನಾವು ನಮ್ಮನ್ನು ನಿರ್ದೋಷಿಗಳಾಗಿ ಗಮನಿಸಬಹುದು. ಆದರೆ ಒಂದು ಸಂಕೋಚ ಪರಿಸ್ಥಿತಿಯೊಳಗಿಂದ ಹೊರಬರುವ ದಾರಿಯನ್ನು ಖರೀದಿಸಲು ನಾವೆಂದಾದರೂ ಶೋಧನೆಗೆ ಒಳಗಾಗಿದ್ದೇವೋ? ಪ್ರವಾದಿ ಸಮುವೇಲನು ಗುಪ್ತಧನ ಅಥವಾ ಲಂಚವನ್ನು ಎಂದೂ ಸ್ವೀಕರಿಸಿರಲಿಲ್ಲ. (1 ಸಮುವೇಲ 12:3, 4) ದೇವರ ಸ್ನೇಹಿತರು ಮತ್ತು ಆತಿಥಿಗಳು ನಾವಾಗಬೇಕಾದರೆ, ನಾವೆಲ್ಲರೂ ನಮ್ಮನ್ನು ಇದೇ ರೀತಿಯಲ್ಲಿ ನಡಿಸಿಕೊಳ್ಳತಕ್ಕದ್ದು.

“ಇಂಥವನು ಎಂದಿಗೂ ಕದಲುವದಿಲ್ಲ”

ಒಬ್ಬ ಉದಾತ್ತ ಪುರುಷನ ಹತ್ತುಮಡಿ ವರ್ಣನೆಯ ನಂತರ 15ನೇ ಕೀರ್ತನೆ, ಮೇಲಿನ ಮಾತುಗಳಿಂದ ಕೊನೆಗೊಳಿಸುತ್ತದೆ. ಅವು, ನಾವು ನಮ್ಮ ಧರ್ಮವನ್ನು ವಿಶೇಶ್ಲಿಸುವಂತೆ ಮಾಡಬಲ್ಲವು. ಅದು ಸತ್ಯ ನಂಬಿಕೆಯಾಗಿದ್ದರೆ, (1) ನಿರ್ದೋಷಿಗಳಾಗಿ ನಡೆದು ನೀತಿಯನ್ನು ಅಭ್ಯಾಸಿಸುವಂತೆ, (2) ಹೃದಯದಲ್ಲೂ ಸತ್ಯವನ್ನೇ ಆಡುವಂತೆ, (3) ಬೇರೆಯವರ ಕುರಿತು ಚಾಡಿ ಮಾತನ್ನು ನುಡಿಯದಂತೆ, ಮತ್ತು (4) ಯಾವುದೇ ಕೆಟ್ಟತನದಿಂದ ದೂರವಿರುವಂತೆ ನಮಗೆ ಕಲಿಸಬೇಕು. ದೇವರಿಗೆ ಸ್ವೀಕರಣೀಯವಾದ ಧರ್ಮವು (5) ನಮ್ಮ ಪ್ರಾಮಾಣಿಕ ಪರಿಚಿತರ ವಿರುದ್ಧ ಆಡಲ್ಪಡುವ ನಿಂದಾತ್ಮಕ ಮಾತುಗಳನ್ನು ನಂಬದಂತೆ, (6) ಭ್ರಷ್ಟರ ಸಹವಾಸವನ್ನು ವರ್ಜಿಸುವಂತೆ ಮಾಡುತ್ತದೆ. ನಿಜ ನಂಬಿಕೆಯು ನಮ್ಮನ್ನು (7) ಯೆಹೋವನಿಗೆ ಭಯಪಡುವವರನ್ನು ಸನ್ಮಾನಿಸುವಂತೆ, (8) ಕೊಟ್ಟ ವಚನವನ್ನು ಅದು ಯೋಗ್ಯವಾಗಿದ್ದರೆ ಪೂರೈಸುವಂತೆ, (9) ಬಡವರಿಗೆ ಕೊಟ್ಟ ಸಾಲದ ಮೇಲೆ ಬಡ್ಡಿ ತೆಗೆದುಕೊಳ್ಳದಂತೆ, (10) ನಿರಪರಾಧಿ ವ್ಯಕ್ತಿಯ ಕೇಡಿಗಾಗಿ ಎಂದೂ ಲಂಚ ತಕ್ಕೊಳ್ಳದಂತೆ ಪ್ರೇರೇಪಿಸುವುದು.

ಈ ವಿಷಯಗಳನ್ನು ಓದುವ, ಕೇಳುವ, ಮಾತಾಡುವ ಅಥವಾ ನಂಬುವವನು ಸಹಾ “ಎಂದಿಗೂ ಕದಲುವುದಿಲ್ಲ” ಎಂದು ದಾವೀದನು ಹೇಳುವುದಿಲ್ಲ. “ಈ ವಿಷಯಗಳನ್ನು ಮಾಡುವ” ವ್ಯಕ್ತಿಯು ಮಾತ್ರವೇ ಅದನ್ನು ಅನುಭವಿಸುವನು. ಕ್ರಿಯೆಗಳು ಬೆಂಬಲವಾಗಿ ಇರದ ನಂಬಿಕೆಯು ಸತ್ತದ್ದಾಗಿದೆ ಮತ್ತು ದೈವಿಕ ಅನುಗ್ರಹಕ್ಕೆ ಪಾತ್ರವಾಗದು. (ಯಾಕೋಬ 2:26) ಕೀರ್ತನೆ 15ರಲ್ಲಿ ತಿಳಿಸಿರುವ ಒಳ್ಳೇ ವಿಷಯಗಳನ್ನು ಮಾಡುವವರು ಎಂದಿಗೂ ಕದಲಲಾರರು, ಯಾಕಂದರೆ ಯೆಹೋವನು ಅವರನ್ನು ಸಂರಕ್ಷಿಸುವನು ಮತ್ತು ಸಮರ್ಥಿಸುವನು.—ಕೀರ್ತನೆ 55:22.

15ನೇ ಕೀರ್ತನೆಯಲ್ಲಿ ತಿಳಿಸಲಾದ ಹತ್ತು ವಿಷಯಗಳಿಗಿಂತ ಇನ್ನೂ ಹೆಚ್ಚಿನದಾದ ವಿಷಯಗಳು ಶುದ್ಧಾರಾಧನೆಯಲ್ಲಿವೆ ನಿಶ್ಚಯ. ಯೇಸುವಿನ ಹಿಂಬಾಲಕರು ದೇವರನ್ನು “ಆತ್ಮದಿಂದ ಮತ್ತು ಸತ್ಯದಿಂದ” ಆರಾಧಿಸುವ ಕುರಿತಾದ ಬೇರೆ ವಿಷಯಗಳನ್ನು ಅನಂತರ ಕಲಿತರು. (ಯೋಹಾನ 4:23, 24) ನೀವು ಸಹಾ ಕಲಿಯ ಬಲ್ಲಿರಿ, ಯಾಕಂದರೆ ಈ ವಿಷಯಗಳನ್ನು ಮಾಡುವ ಜನರು ಇಂದು ಅಸ್ತಿತ್ವದಲ್ಲಿದ್ದಾರೆ. ಯೆಹೋವನ ಈ ಸಾಕ್ಷಿಗಳೊಂದಿಗೆ ಕ್ರಮದ ಸಹವಾಸ ಮತ್ತು ಬೈಬಲ್‌ ಅಧ್ಯಯನವು ಐಹಿಕ ಪ್ರಮೋದವನದಲ್ಲಿ ಜೀವದ ನಿರೀಕ್ಷೆಯನ್ನು ಕಟ್ಟುವುದು. ಅಲ್ಲಿ ನೀವು ನಿರಂತರವೂ ದೇವರ ಅತಿಥಿಗಳಾಗಿ ಮತ್ತು ಸ್ನೇಹಿತರಾಗಿ ಇರಬಲ್ಲಿರಿ. (w89 9/15)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ