ವ್ಯಾಟಿಕನ್ ಕೊಡೆಕ್ಸ್ನ ರಹಸ್ಯ
ಕೊಡೆಕ್ಸ್ ವ್ಯಾಟಿಕನಸ್ 1209, ವ್ಯಾಟಿಕನ್ ಲೈಬ್ರೆರಿಯ ಒಂದನೇ ಕ್ಯಾಟ್ಲಾಗ್ನಲ್ಲಿ ಕಂಡುಬರುತ್ತದೆ, ಇದು ತಯಾರಿಸಲ್ಪಟ್ಟದ್ದು 1475 ರಲ್ಲಿ. ಅದು ಅಲ್ಲಿಗೆ ಬಂದದ್ದು ಹೇಗೆಂಬದು ಯಾರಿಗೂ ತಿಳಿಯದು. ಇಂದಿನ ವರೆಗೆ ಪಾರಾಗಿ ಉಳಿದ ಮೂರು ಮಹಾ ಕೊಡೆಕ್ಸ್ಗಳಲ್ಲಿ ಅದು ಒಂದಾಗಿದ್ದು ತನ್ನ ಸಮಕಾಲೀನಗಳಾದ ನಾಲ್ಕನೆಯ ಶತಕದ ಸೈನೈಟಿಕಸ್ ಮತ್ತು ಐದನೆಯ ಶತಕದ ಅಲೆಕ್ಸಾಂಡ್ರಿನಸ್ ಕೋಡೆಕ್ಸ್ಗಳಿಗೆ ಸಮಾನವಾಗಿದೆ.
ಈ ವ್ಯಾಟಿಕನ್ ಹಸ್ತಾಕ್ಷರ ಗ್ರಂಥದ ಮಹತ್ವವು 16 ನೇ ಶತಕದ ಆದಿಭಾಗದ ಪಂಡಿತರಿಗೆ ಚೆನ್ನಾಗಿ ತಿಳಿದಿದ್ದರೂ, ಅದನ್ನು ಪರೀಕ್ಷಿಸಲು ಅನುಮತಿಯೆಂದೂ ಸಿಕ್ಕಿದ್ದು ತೀರಾ ಕೊಂಚಜನಕ್ಕೆ. ವ್ಯಾಟಿಕನ್ ಲೈಬ್ರೆರಿಯು ಈ ಹಸ್ತಪ್ರತಿಯ ತಾಳೆನೋಡುವಿಕೆಯ ಕೆಲವು ಪಠನಗಳನ್ನು 1669 ರಲ್ಲಿ ನಡಿಸಿದ್ದರೂ, ಅದು ಕಳೆದು ಹೋಯಿತು ಮತ್ತು 1819ರ ತನಕ ಪುನ: ಸಿಕ್ಕಿರಲಿಲ್ಲ.
ಫ್ರಾನ್ಸಿನ ಸಾಮ್ರಾಟ ನೆಪೋಲಿಯನ್ 1809 ರಲ್ಲಿ ರೋಮನ್ನು ಹಸ್ತಗತ ಮಾಡಿದಾಗ, ಈ ಕಿಮ್ಮತ್ತಿನ ಹಸ್ತ ಪ್ರತಿಯನ್ನು ಪ್ಯಾರಿಸ್ಗೆ ಒಯ್ದನು ಮತ್ತು ಅಲ್ಲಿ ಅದು ಲಿಯನಾರ್ಡ್ ಹಗ್ಗ್ ಎಂಬ ಪ್ರಸಿದ್ಧ ಪಂಡಿತರಿಂದ ಪರೀಕ್ಷಿಸಲ್ಪಟ್ಟಿತು. ಆದರೆ ನೆಪೋಲಿಯನ್ನ ಪತನದೊಂದಿಗೆ ಆ ಹಸ್ತ ಪ್ರತಿಯು ವ್ಯಾಟಿಕನ್ಗೆ 1815 ರಲ್ಲಿ ಹಿಂದಿರುಗಿಸಲ್ಪಟ್ಟಿತು. ಮುಂದಿನ 75 ವರ್ಷಗಳ ತನಕ ಅದು ಪುನಃ ಗೌಪ್ಯವಾಯಿತು, ವೆಟಿಕನ್ನಿಂದ ಅಡಗಿಸಲ್ಪಟ್ಟಿತು.
ಹಸ್ತಾಕ್ಷರ ಗ್ರಂಥದ ಲೋಕಪ್ರಸಿದ್ಧ ಪಂಡಿತರಲ್ಲಿ ಒಬ್ಬರಾದ ಕಾನ್ಸ್ಟೆಂಟೈನ್ ವಾನ್ ಟಿಷನ್ಡರ್ಫ್ರಿಗೆ ಇದರ ಪರೀಕ್ಷಣೆಯನ್ನು ಮಾಡುವ ಅನುಮತಿ ಸಿಕ್ಕಿದ್ದು 1843 ರಲ್ಲಿ, ಅದೂ ಕೇವಲ ಆರು ತಾಸುಗಳ ಪರವಾನಗಿ, ಹಲವಾರು ತಿಂಗಳುಗಳ ತನಕ ಕಾದನಂತರ. ಎರಡು ವರ್ಷಗಳು ಕಳೆದ ಬಳಿಕ, ಇಂಗ್ಲಿಷ್ ಪಂಡಿತ ಡಾ. ಎಸ್.ಪಿ. ಟ್ರೆಗಿಲಿಸ್ಗೆ ಆ ಕೊಡೆಕ್ಸ್ನ್ನು ನೋಡಲು ಅನುಮತಿ ಸಿಕ್ಕಿತು, ಆದರೆ ಅಧ್ಯಯನ ಮಾಡಬಾರದಿತ್ತು. ಅವರಂದದ್ದು: “ಆ ಹಸ್ತ ಪ್ರತಿಯನ್ನು ನಾವು ಹಲವು ಬಾರಿ ನೋಡಿದ್ದೇನೆ, ನಿಜ. ಆದರೆ ಅದನ್ನುಪಯೋಗಿಸಲು ಅವರು ಬಿಡಲಿಲ್ಲ, ಕಿಸೆ ಶೋಧಿಸದ ಹೊರತು ಅದನ್ನು ತೆರೆಯಲೂ ಬಿಡುತ್ತಿರಲಿಲ್ಲ, ಹೀಗೆ, ಲೇಖನಿ, ಶಾಯಿ ಮತ್ತು ಕಾಗದಗಳನ್ನು ಕಸಕೊಳ್ಳಲಾಗುತ್ತಿತ್ತು. ಅದೇ ಸಮಯ ಇಬ್ಬರು ಪ್ರಿಲಾಟಿ [ಪಾದ್ರಿಗಳು] ಒಂದೇ ಸವನೆ ಲ್ಯಾಟಿನ್ನಲ್ಲಿ ನನ್ನೊಡನೆ ಸಂಭಾಷಿಸುತ್ತಿದ್ದರು, ಯಾವುದಾದರೊಂದು ವಚನವನ್ನು ನಾನು ತೀರಾ ಹೆಚ್ಚು ಹೊತ್ತು ನೋಡಿದಲ್ಲಿ, ಪುಸ್ತಕವನ್ನು ನನ್ನಿಂದ ಕಸಿದುಕೊಳ್ಳುತ್ತಿದ್ದರು.”
ತನ್ನ ಈ ಅತ್ಯಮೂಲ್ಯ ಹಸ್ತ ಗ್ರಂಥವನ್ನು ಲೋಕಕ್ಕೆ ತೋರಿಸಲು ರೋಮನ್ ಕ್ಯಾಥ್ಲಿಕ್ ಚರ್ಚು ಅಷ್ಟು ವಿಮುಖವೇಕೆ?
ಗೌಪ್ಯವೇಕೆ?
ರೋಮನ್ ಕ್ಯಾಥಲಿಕ್ ಚರ್ಚ್ಗೆ ಪವಿತ್ರ ಶಾಸ್ತ್ರದ ಲ್ಯಾಟಿನ್ ವಲ್ಗೇಟ್ ಭಾಷಾಂತರವು “ಅತ್ಯಂತ ಸರ್ವಶ್ರೇಷ್ಠ ಅಧಿಕಾರ”ವಾಗಿ ಉಳಿದದೆ. 1943 ರಲ್ಲಿ ಪ್ರಕಟಿತವಾದ, 12ನೇ ಪಾಯಸ್ರ ಡಿವೈನೋ ಅಫ್ಲಾಂಟೆ ಸ್ಪಿರಿಚು ಎಂಬ ಸರ್ವಾಜ್ಞೆ ಪತ್ರಕ್ಕನುಸಾರ ಜೆರೋಮನ ಈ ನಾಲ್ಕನೇ ಶತಕದ ಲ್ಯಾಟಿನ್ ಭಾಷಾಂತರವು “ನಂಬಿಕೆ ಮತ್ತು ನೈತಿಕತೆಯ ಯಾವುದೇ ತಪ್ಪಿನಿಂದ ಮುಕ್ತವಾಗಿದೆ” ಎಂಬದಾಗಿ ವೀಕ್ಷಿಸಲ್ಪಡುತ್ತದೆ. ವಲ್ಗೇಟ್ ಯಾವುದರಿಂದ ತರ್ಜುಮೆಯಾಗಿದೆಯೋ ಆ ಹಿಬ್ರೂ ಮತ್ತು ಗ್ರೀಕ್ ಮೂಲಗ್ರಂಥದ ಕುರಿತೇನು? ಅವು, ವಲೇಟ್ಗಿನ ಅಧಿಕಾರವನ್ನು “ಪುಷ್ಟೀಕರಿಸಲು” ಬೆಲೆಯುಳ್ಳವಾಗಿವೆ ಎಂದು ಸರ್ವಾಜ್ಞೆ ಪತ್ರ ಹೇಳುತ್ತದೆ. ಆದ್ದರಿಂದ, ಬೇರೆ ಯಾವುದೇ ಗ್ರೀಕ್ ಹಸ್ತ ಗ್ರಂಥವು, ವ್ಯಾಟಿಕನ್ ಕೊಡೆಕ್ಸ್ ಸಹಾ, ಲ್ಯಾಟಿನ್ ವಲ್ಗೇಟ್ನಷ್ಟು ಅಧಿಕಾರಯುಕ್ತವೆಂದು ಎಂದೂ ಪರಿಗಣಿಸಲಾಗಲಿಲ್ಲ. ರೋಮನ್ ಕ್ಯಾಥ್ಲಿಕ್ ಚರ್ಚಿನಿಂದ ತಕ್ಕೊಳ್ಳಲ್ಪಟ್ಟ ಈ ಸ್ಥಾನವು ಸಹಜವಾಗಿಯೇ ಸಮಸ್ಯೆಗಳನ್ನು ಉಂಟು ಮಾಡಿದೆ.
ಉದಾಹರಣೆಗಾಗಿ, 16 ನೇ ಶತಮಾನದ ಪಂಡಿತ ಇರೇಸ್ಮಸ್ ತನ್ನ ಗ್ರೀಕ್ “ಹೊಸ ಒಡಂಬಡಿಕೆ” ಯನ್ನು ಭಾಷಾಂತರಿಸಿದಾಗ, 1 ನೇ ಯೋಹಾನ 5ನೇ ಅಧ್ಯಾಯದಿಂದ 7 ನೇ ಮತ್ತು ಎಂಟನೇ ವಚನಗಳನ್ನು ವರ್ಜಿಸುವಂತೆ ವ್ಯಾಟಿಕನ್ ಕೊಡೆಕ್ಸ್ನ ಅಧಿಕಾರಿಗಳಿಗೆ ಅಪ್ಪೀಲು ಮಾಡಿದನು. ಇರೇಸ್ಮಸ್ ಹೇಳಿದ್ದು ಸರಿಯಾಗಿತ್ತು. ಆದರೆ 1897 ರಷ್ಟು ವಿಳಂಬದ ತನಕವೂ 13 ನೇ ಪೋಪ್ ಲಿಯೋ ವಲ್ಗೇಟ್ನ ಭ್ರಷ್ಟ ಲ್ಯಾಟಿನ್ ವಚನವನ್ನು ಸಮರ್ಥಿಸಿದನು. ಆಧುನಿಕ ರೋಮನ್ ಕ್ಯಾಥ್ಲಿಕ್ ತರ್ಜುಮೆಗಳ ಪ್ರಕಾಶನದ ಅನಂತರ ಮಾತ್ರ ಈ ಮೂಲ ತಪ್ಪನ್ನು ಅಂಗೀಕರಿಸಲಾಯಿತು.
ಆದರೆ, ಹತ್ತೊಂಭತ್ತನೇ ಶತಕದ ಪೂವಾರ್ಧದಲ್ಲಿ ಕೊಡೆಕ್ಸ್ ಸೈನೈಟಿಕಸ್ ಲೋಕಕ್ಕೆ ಪ್ರಕಟವಾದಾಗ, ತಮ್ಮ ಕೊಡೆಕ್ಸ್ ವ್ಯಾಟಿಕನಸ್ ಕಳೆಗುಂದುವ ಅಪಾಯದಲ್ಲಿದೆ ಎಂದು ರೋಮನ್ ಕಥೋಲಿಕ ಅಧಿಕಾರಿಗಳಿಗೆ ತಿಳಿದು ಬಂತು. ಶತಮಾನದ ಅಂತ್ಯದೊಳಗೆ, ಒಳ್ಳೇ ಛಾಯಚಿತ್ರಿತ ಪ್ರತಿಗಳು ಕೊನೆಗೆ ದೊರೆಯಲು ಆರಂಭಿಸಿದವು.
ಈ ಹಸ್ತಾಕ್ಷರ ಗ್ರಂಥದಲ್ಲಿ 759 ಹಾಳೆಗಳಿವೆ. ಆದಿಕಾಂಡದ ಹೆಚ್ಚಿನ ಭಾಗ, ಕೆಲವು ಕೀರ್ತನೆಗಳು ಮತ್ತು ಕ್ರೈಸ್ತ ಗ್ರೀಕ್ ಶಾಸ್ತ್ರದ ಸಮಾಪ್ತಿಯ ಭಾಗ ಅದರಲ್ಲಿ ಇಲ್ಲ. ಹರಿಣದ ಚರ್ಮವೆಂದು ನೆನಸಲಾದ, ಅತೀ ಉತ್ಕ್ರಷ್ಟ ಚರ್ಮ ಕಾಗದದ ಮೇಲೆ, ಸರಳವೂ ಸೊಗಸೂ ಆದ ಶೈಲಿಯಲ್ಲಿ ಅದು ಬರೆಯಲ್ಪಟ್ಟಿದೆ. ಅದರ ಅಧಿಕೃತ ಹೆಸರು ಕೊಡೆಕ್ಸ್ ಬಿ, ಮತ್ತು ಅದನ್ನಿಂದು ವ್ಯಾಟಿಕನ್ ಲೈಬ್ರೆರಿಯಲ್ಲಿ ಕಂಡುಕೊಳ್ಳಬಹುದು. ಅದೀಗ ಗೌಪ್ಯವಿಲ್ಲ, ಕಟ್ಟಕಡೆಗೆ ಅದರ ಮೂಲ್ಯತೆಯು ಪರಿಗಣಿಸಲ್ಪಟ್ಟು ಲೋಕದಲ್ಲೆಲ್ಲೂ ಅದು ಗಣ್ಯಮಾಡಲ್ಪಟ್ಟಿದೆ. (w89 5/1)
[ಪುಟ 29 ರಲ್ಲಿರುವ ಚಿತ್ರ]
ಮಹತ್ವದ ಕೊಡೆಕ್ಸ್ ವ್ಯಾಟಿಕನಸ್ 1209, ವ್ಯಾಟಿಕನ್ನಿಂದ ಶತಮಾನಗಳಿಂದ ಮರೆಮಾಡಲ್ಪಟ್ಟಿತ್ತು
[ಕೃಪೆ]
Facsimile from Codices E Vaticanis Selecti