ಪುರಾತನದ ಸಮಯಗಳಲ್ಲಿ ಚೀಲಗಳು
ಆಧುನಿಕ ದಿನದ ಯೆಹೋವನ ಸಾಕ್ಷಿಗಳು ಉಪಯೋಗಿಸುವ ಸಾಧನಗಳಲ್ಲಿ ಒಂದು ಮುಖ್ಯವಾದ ವಸ್ತು ಚೀಲವಾಗಿದೆ. ಕ್ರೈಸ್ತ ಕೂಟಗಳಿಗೆ ಅಭ್ಯಾಸದ ಪುಸ್ತಕಗಳನ್ನು ಕೊಂಡೊಯ್ಯುವಾಗ ಮತ್ತು ಲೋಕವ್ಯಾಪಕ ಪ್ರಚಾರ ಕಾರ್ಯದಲ್ಲಿ ವಿತರಿಸಲಿಕ್ಕಾಗಿ ಪ್ರಕಾಶನಗಳನ್ನು ಕೊಂಡೊಯ್ಯಲು ಈ ಚೀಲಗಳನ್ನು ಉಪಯೋಗಿಸಲಾಗುತ್ತದೆ. ಬೈಬಲ್ ಸಮಯಗಳಲ್ಲಿ ಉಪಯೋಗಿಸುತ್ತಿದ್ದ ಚೀಲಗಳ ಕುರಿತಾಗಿ ಏನು? ಅವುಗಳು ವ್ಯಾಪಕವಾಗಿ ಉಪಯೋಗಿಸಲ್ಪಟ್ಟವೋ? ಅವು ಯಾವ ರೀತಿಯಲ್ಲಿದ್ದವು?
ಪುರಾತನ ಸಮಯಗಳಲ್ಲಿ, ವಿವಿಧ ಪ್ರಾಣಿಗಳ ಚರ್ಮದಿಂದ ಮತ್ತು ಹೆಣೆಯಲ್ಪಟ್ಟ ವಸ್ತುಗಳಿಂದ ಮಾಡಲ್ಪಟ್ಟ ಚೀಲಗಳು ನಾನಾ ರೀತಿಯಲ್ಲಿ ಉಪಯೋಗಿಸಲ್ಪಟ್ಟವು. ಅವುಗಳಲ್ಲಿ ದವಸಧಾನ್ಯಗಳು, ಇತರ ಆಹಾರಪದಾರ್ಥಗಳು, ತೂಕಭಾರಗಳು, ಆಭರಣಗಳು, ಚಿನ್ನ ಮತ್ತು ಬೆಳ್ಳಿಯ ಗಟ್ಟಿಗಳು, ಟಂಕ ಒತ್ತಲ್ಪಟ್ಟ ನಾಣ್ಯಗಳು, ನೀರು ಹಾಗೂ ದ್ರಾಕ್ಷಾರಸವನ್ನು ಸಹ ತುಂಬಿಡಲಾಗುತ್ತಿತ್ತು.—ಯೆಹೋಶುವ 9:4; ಮತ್ತಾಯ 9:17.
ಚೀಲಗಳು, ಹಣದ ಚೀಲಗಳು, ತೊಗಲು ಚೀಲಗಳು ಮತ್ತು ಗಂಟುಗಳನ್ನು ವರ್ಣಿಸಲು ಹೀಬ್ರು ಭಾಷೆಯು ತನ್ನ ಸಂಪದ್ಭರಿತ ಶಬ್ದಭಂಡಾರದಲ್ಲಿ ಅನೇಕ ವಿಧವಿಧವಾದ ಪದಗಳನ್ನು ಉಪಯೋಗಿಸುತ್ತದೆ. ಇಂಗ್ಲಿಷ್ ಪದವಾದ ಸ್ಯಾಕ್ (ಗೋಣಿಚೀಲ) ಎಂಬ ಪದವು ಹೀಬ್ರು ಪದವಾದ ಸಾಕ್‌ನಿಂದ ಬಂದಿದೆ; ಇದು ಬೈಬಲಿನಲ್ಲಿ ಗೋಣಿತಟ್ಟು ಮತ್ತು ಆಹಾರ, ದವಸಧಾನ್ಯಗಳಿಗಾಗಿ ಗೋಣಿಬಟ್ಟೆಯಿಂದ ಮಾಡಲ್ಪಟ್ಟ ಚೀಲಗಳ ಸಂಬಂಧದಲ್ಲಿ ಉಪಯೋಗಿಸಲಾಗಿದೆ. ಈ ಪದವು ಮತ್ತು “ಹರಡಿಸು” ಎಂಬರ್ಥದ ಕ್ರಿಯಾಪದದಿಂದ ಬರುವ ಆಮ್‌ಟಚಾತ್ ಎಂಬ ಹೀಬ್ರು ಪದವು, ಐಗುಪ್ತ್ಯಕ್ಕೆ ಯೋಸೇಫನ ಸಹೋದರರ ಭೇಟಿಯಲ್ಲಿ ಸಮಾನಾರ್ಥಕವಾಗಿ ಉಪಯೋಗಿಸಲಾಗಿದೆ. ಐಗುಪ್ತ್ಯದಿಂದ ದವಸಧಾನ್ಯಗಳನ್ನು ಸಾಗಿಸುತ್ತಿದ್ದ ಚೀಲಗಳಿಗೆ ಈ ಎರಡೂ ಪದಗಳು ಉಪಯೋಗಿಸಲ್ಪಟ್ಟಿವೆ. ಆಮ್‌ಟಚಾತ್ ಎಂಬ ಪದವು ಆ ಚೀಲದ ಆಕಾರವನ್ನು, ಸಾಕ್ ಪದವು ಅದನ್ನು ಯಾವುದರಿಂದ ಮಾಡಲಾಗಿದೆಯೋ ಆ ವಸ್ತುವನ್ನು ವರ್ಣಿಸುತ್ತದೆಂದು ತೋರಿಬರುತ್ತದೆ.—ಆದಿಕಾಂಡ 42:25, 27, 28, 35.
ದಾವೀದನ ಮತ್ತು ನಾಮಾನನ ಚೀಲ
ಗೊಲ್ಯಾತನನ್ನು ಎದುರಿಸಲು ಸಜ್ಜಾಗುತ್ತಿದ್ದಾಗ, ದಾವೀದನು ತನ್ನ ಕುರುಬರ ಚೀಲದಲ್ಲಿ ಐದು ಕಲ್ಲುಗಳನ್ನಿಟ್ಟನು. ಇದು ಒಂದು ರೀತಿಯ ಹೆಗಲ ಚೀಲವಾಗಿತ್ತೆಂದು ತೋರುತ್ತದೆ. (1 ಸಮುವೇಲ 17:40) ಆದರೂ, ಇಲ್ಲಿ ಉಪಯೋಗಿಸಲ್ಪಟ್ಟಿರುವ ಹೀಬ್ರು ಪದವಾದ ಕೆಲಿ, ಬರಿಯ ಒಂದು ಪಾತ್ರೆ ಅಥವಾ ಮಣ್ಣು, ಮರ, ಲೋಹ ಇಲ್ಲವೇ ಚರ್ಮದಿಂದ ಮಾಡಲ್ಪಟ್ಟ ಪಾತ್ರೆಯನ್ನು ಸೂಚಿಸಬಲ್ಲದು.
ಸಿರಿಯದ ಸೇನಾಪತಿಯಾದ ನಾಮಾನನ ಭಯಂಕರ ಕುಷ್ಠರೋಗದ ವಾಸಿಮಾಡುವಿಕೆಯ ವೃತ್ತಾಂತದಲ್ಲಿ, ‘ಎರಡು ತಲಾಂತನ್ನು . . . ಎರಡು ಚೀಲಗಳಲ್ಲಿ ಹಾಕಿಸಿ ಆ ಚೀಲಗಳನ್ನೂ ಎರಡು ದುಸ್ತುಬಟ್ಟೆಗಳನ್ನೂ ಇಬ್ಬರು ಸೇವಕರ ಮೇಲೆ ಹೊರಿಸಿ’ ಲೋಭಿ ಗೇಹಜಿಯನನ್ನು ಕಳುಹಿಸಿಕೊಟ್ಟನು ಎಂದು ನಾವು ಓದುತ್ತೇವೆ. (2 ಅರಸುಗಳು 5:23) ಇಲ್ಲಿ ಚೀಲಕ್ಕೆ ಉಪಯೋಗಿಸಲ್ಪಟ್ಟಿರುವ ಹೀಬ್ರು ಪದವು ಚಾರಿಟ್ ಆಗಿದೆ. ಒಂದು ತಲಾಂತು 34 ಕಿಲೊಗ್ರ್ಯಾಮ್‌ಗಳಿಗೆ ಸಮಾನವಾಗಿದ್ದುದರಿಂದ, ಆ ಚೀಲವು ತಲಾಂತನ್ನು, ಅದರ ಜೊತೆಗೆ ದುಸ್ತುಬಟ್ಟೆಗಳನ್ನು ತುಂಬಿಸುವಷ್ಟು ದೊಡ್ಡದ್ದೂ ಗಟ್ಟಿಯಾದದ್ದೂ ಆಗಿದ್ದಿರಬಹುದೆಂಬುದು ಸ್ಪಷ್ಟ. ಅದನ್ನು ತುಂಬಿಸಿದಾಗ, ಪ್ರತಿಯೊಂದು ಚೀಲವು ಒಬ್ಬ ಮನುಷ್ಯನು ಒಯ್ಯಸಾಧ್ಯವಾದಷ್ಟು ದೊಡ್ಡದಾಗಿದ್ದುದರಲ್ಲಿ ಆಶ್ಚರ್ಯವಿಲ್ಲ. ಚಾರಿಟ್ ಸದಾ ದೊಡ್ಡ ಚೀಲವನ್ನೇ ಸೂಚಿಸುವುದಿಲ್ಲ. ಏಕೆಂದರೆ ಅದೇ ಪದವನ್ನು ಚೀಯೋನಿನ ಬಿಂಕದ ಪುತ್ರಿಯರ ಆಡಂಬರದ ಅಲಂಕಾರಿಕ ವಸ್ತುಗಳಾದ ಚೀಲಗಳಿಗೂ ಉಪಯೋಗಿಸಲಾಗಿದೆ.—ಯೆಶಾಯ 3:16, 22.
ವರ್ತಕನ ಚೀಲ
ಪೂರ್ವ ದೇಶಗಳಲ್ಲಿ ಇತ್ತೀಚಿನ ಸಮಯಗಳ ವರೆಗೆ ನಿಸ್ಸಂದೇಹವಾಗಿ ಉಪಯೋಗಿಸಲ್ಪಡುತ್ತಾ ಬಂದಿರುವಂತಹ ರೀತಿಯ ವರ್ತಕರ ಚೀಲಗಳಿಗೆ ಸೂಚಿಸಿರುವ ಹೀಬ್ರು ಪದವು ಕಿಸ್ ಆಗಿದೆ. ಈಗ ಉಪಯೋಗಿಸಲ್ಪಡುತ್ತಿರುವ ಚೀಲಗಳನ್ನು ನೋಡಿ ನಿರ್ಣಯಿಸುವಲ್ಲಿ, ಅವುಗಳನ್ನು ಪ್ರಾಯಶಃ ನೇಯ್ದ ಹತ್ತಿ, ಮೆದುವಾದ ಹುಲ್ಲುಕಡ್ಡಿ ಅಥವಾ ಚರ್ಮದಿಂದ ಮಾಡಲಾಗುತ್ತಿತ್ತು. ಉತ್ಪಾದನೆಗಳು, ದವಸಧಾನ್ಯಗಳು ಅಥವಾ ಅಮೂಲ್ಯವಾದ ಲೋಹಗಳನ್ನು ತೂಕಮಾಡಿ ನೋಡಬೇಕಾದಾಗ ವರ್ತಕರಿಗೆ ಅಗತ್ಯವಿದ್ದ ತೂಕಭಾರಗಳನ್ನು ಕೊಂಡೊಯ್ಯಲಿಕ್ಕಾಗಿ ಇವುಗಳು ಉಪಯೋಗಿಸಲ್ಪಡುತ್ತಿದ್ದವು. ಈ ಕಿಸ್ ಅನ್ನು ಸೂಚಿಸುತ್ತಾ, ಮೋಶೆಯ ನಿಯಮದಲ್ಲಿ ವಂಚನೆಯ ವ್ಯಾಪರದ ವಿರುದ್ಧವಾಗಿ ಒಂದು ಎಚ್ಚರಿಕೆಯು ಹೀಗೆ ಹೇಳಿತು: “ಹೆಚ್ಚುಕಡಮೆಯಾಗಿರುವ ಎರಡು ವಿಧವಾದ ತೂಕದ ಕಲ್ಲುಗಳನ್ನು ನಿಮ್ಮ ಚೀಲದಲ್ಲಿಟ್ಟುಕೊಳ್ಳಬಾರದು.” (ಧರ್ಮೋಪದೇಶಕಾಂಡ 25:13) ತನ್ನ ಪ್ರವಾದಿಯ ಮುಖಾಂತರ ಯೆಹೋವನು ಕೇಳಿದ್ದು: “ಕಳ್ಳತಕ್ಕಡಿಯೂ ಮೋಸದ ಕಲ್ಲಿನ ಚೀಲವೂ ಒಬ್ಬನಲ್ಲಿದ್ದರೆ ಅವನು ನಿರ್ದೋಷಿಯೋ?” (ಮೀಕ 6:11) ಹಣ ಅಥವಾ ಆಭರಣಗಳನ್ನು ಒಯ್ಯಲಿಕ್ಕಾಗಿ ಚೀಲ ಅಥವಾ ಹಣದ ಚೀಲವಾಗಿಯೂ ಕಿಸ್ ಅನ್ನು ಉಪಯೋಗಿಸಸಾಧ್ಯವಿದೆ.—ಯೆಶಾಯ 46:6.
ಕಟ್ಟಲ್ಪಟ್ಟ ಮತ್ತು ಮೊಹರುಹಾಕಲ್ಪಟ್ಟ ಗಂಟುಗಳು
ಹೀಬ್ರು ಪದವಾದ ಟ್ಸೆರಾರ್ ಎಂಬುದು “ಸುತ್ತು” ಎಂಬ ಅರ್ಥವುಳ್ಳ ಕ್ರಿಯಾಪದದಿಂದ ಬಂದಿದೆ. ಇದು ಕೇವಲ ಅದರ ಕತ್ತನ್ನು ಜೋಡಿಸಿ ಗಂಟಾಗಿಯಾಗಲಿ ಚೀಲವಾಗಿಯಾಗಲಿ ದಾರ ಅಥವಾ ಹಗ್ಗದಿಂದ ಕಟ್ಟಿದ ಚೀಲದ ಸಾಮಾನ್ಯ ರೂಪವನ್ನು ವರ್ಣಿಸುತ್ತದೆ. ಈ ರೀತಿಯ ಚೀಲದಲ್ಲಿ ಯೋಸೇಫನು ತನ್ನ ಸಹೋದರರು ಧಾನ್ಯ ಖರೀದಿಸಿದ ಹಣವನ್ನು ಹಿಂದಿರುಗಿಸಿದನು. ವೃತ್ತಾಂತವು ಪ್ರತಿ ಚೀಲದಲ್ಲಿದ್ದ “ಹಣದ ಗಂಟು”ಗಳ ಬಗ್ಗೆ ಮಾತಾಡುತ್ತದೆ. —ಆದಿಕಾಂಡ 42:35.
ಮಂದಿರದ ಕಾಣಿಕೆಗಳ ಭಂಡಾರದಿಂದ ಪಡೆದುಕೊಂಡ ಹಣವು ಅಂತಹ ಗಂಟುಗಳಲ್ಲಿ ಕಟ್ಟಲ್ಪಡುತ್ತಿದ್ದವು ಮತ್ತು ಎಲ್ಲ ಗಂಟುಗಳಲ್ಲೂ ಒಂದೇ ಮೊತ್ತದ ಹಣವನ್ನು ಹಾಕಲಾಗುತ್ತಿತ್ತು. ಪುರಾತನ ಸಮಯಗಳಲ್ಲಿ, ತುಂಬ ಮೊತ್ತದ ಹಣವನ್ನು ಒಳಗೂಡುತ್ತಿದ್ದ ವ್ಯಾಪಾರ ವ್ಯವಹಾರಗಳಲ್ಲಿ ಕೆಲವೊಮ್ಮೆ ನಾಣ್ಯಗಳನ್ನು ತೂಕಮಾಡಿ, ಅಂತಹ ಗಂಟುಗಳಲ್ಲಿ ಅಥವಾ ಚೀಲಗಳಲ್ಲಿ ಹಾಕಿ ಅವುಗಳಿಗೆ ಮೊಹರು ಹಾಕಲಾಗುತ್ತಿತ್ತು. ಅವಶ್ಯವಿದ್ದಲ್ಲಿ ಆ ಚೀಲವನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ನಿಗದಿತ ಹಣದ ಮೊತ್ತದ ಗ್ಯಾರಂಟಿಯೊಂದಿಗೆ ಕೊಡಸಾಧ್ಯವಿತ್ತು. ಒಡೆಯಲ್ಪಡದ ಮೊಹರು ಗಂಟಿನಲ್ಲಿರುವ ಬೆಳ್ಳಿ, ಚಿನ್ನ, ಅಥವಾ ಇತರ ಲೋಹದ ಮೊತ್ತದ ರುಜುವಾತಾಗಿರಸಾಧ್ಯವಿತ್ತು. ಯೋಬ 14:17ರಲ್ಲಿ ಅಂತಹ ಒಂದು ಸಂಖ್ಯೆಯನ್ನು ಯೋಬನು ಸ್ಪಷ್ಟವಾಗಿ ಉಪಯೋಗಿಸುತ್ತಾ ದೇವರಿಗೆ ಹೀಗೆ ಹೇಳುವುದು: “ನನ್ನ ದ್ರೋಹವನ್ನು ಚೀಲದಲ್ಲಿಟ್ಟು ಮುದ್ರಿಸಿ ನನ್ನ ದೋಷವನ್ನು ಭದ್ರವಾಗಿ ಕಟ್ಟಿದ್ದೀ.” ದಾವೀದನನ್ನು ಯೆಹೋವನು ರಕ್ಷಿಸುವನೆಂಬ ಭರವಸೆಯು ಅಬಿಗೈಲಳಿಗಿತ್ತು. ದಾವೀದನನ್ನು ಶತ್ರುವು ಬೆನ್ನಟ್ಟುವಾಗ, ಅವನ ಪ್ರಾಣವು “ಯೆಹೋವನ ರಕ್ಷಣೆಯಲ್ಲಿರುವ ಜೀವನಿಕ್ಷೇಪದಲ್ಲಿ [“ಚೀಲ,” NW] ಭದ್ರವಾಗಿರಲಿ” ಎಂದು ಅವಳು ಹೇಳಿದಳು.—1ಸಮುವೇಲ 25:29.
ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ ಹಣದ ಚೀಲಗಳು
ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ ಹಣದ ಚೀಲಗಳು, ನಡುಕಟ್ಟಿನ ಚೀಲಗಳು ಮತ್ತು ಆಹಾರದ ತೊಗಲುಚೀಲಗಳು ಉಲ್ಲೇಖಿಸಲ್ಪಟ್ಟಿವೆ. ಕೈಚೀಲವು, ಚಿನ್ನ, ಬೆಳ್ಳಿ, ತಾಮ್ರ, ನಾಣ್ಯ ಅಥವಾ ಇತರ ವಸ್ತುಗಳನ್ನು ಕೊಂಡೊಯ್ಯಲು ಸ್ತ್ರೀಪುರುಷರಿಂದ ಉಪಯೋಗಿಸಲ್ಪಡುತ್ತಿದ್ದ ಚೀಲ ಅಥವಾ ತೊಗಲುಚೀಲವಾಗಿತ್ತು. (ಲೂಕ 10:4) ಸ್ತ್ರೀಯರಲ್ಲಿ ಕೆಲವೊಮ್ಮೆ ಅಲಂಕೃತ ಹಣದ ಚೀಲಗಳು ಅಥವಾ ಕೈಚೀಲಗಳು ಇದ್ದವು. ಇವು ಉದ್ದವಾಗಿದ್ದು, ದುಂಡನೆಯ ಆಕಾರವನ್ನು ಹೊಂದಿದ್ದವು. ಈ ರೀತಿಯ ಚೀಲಗಳಿಗೆ ಹೀಬ್ರುವಿನ ಚಾರಿಟ್ ಮತ್ತು ಕಿಸ್ ಪದಗಳು ಉಪಯೋಗಿಸಲ್ಪಟ್ಟವು. (ಯೆಶಾಯ 3:22; 46:6) ಹಿಂದೆ, ಚೀಲಗಳನ್ನು ಹದಮಾಡಲ್ಪಟ್ಟ ಚರ್ಮ, ಹೆಣೆದ ಹುಲ್ಲುಕಡ್ಡಿ ಅಥವಾ ಹತ್ತಿಯಿಂದ ಮಾಡಲಾಗುತ್ತಿತ್ತು. ಚರ್ಮದ ಪಟ್ಟಿಗಳು ಅಥವಾ ಇತರ ಹಗ್ಗಗಳಿಂದ ಅದರ ಬಾಯಿಯನ್ನು ಒಟ್ಟುಗೂಡಿಸಿ, ಕಟ್ಟಲಾಗುತ್ತಿತ್ತು.
ಯೇಸು ತನ್ನ ಶಿಷ್ಯರನ್ನು ಯೂದಾಯಕ್ಕೆ ಸಾರುವುದಕ್ಕೆ ಕಳುಹಿಸಿಕೊಟ್ಟಾಗ, ಅವನು ಅವರಿಗೆ ನಡುಕಟ್ಟಿನ ಚೀಲ ಇಲ್ಲವೇ ಆಹಾರದ ಚೀಲವನ್ನು ತೆಗೆದುಕೊಂಡು ಹೋಗಬಾರದೆಂದು ಹೇಳಿದನು. ಜೊತೆ ಇಸ್ರಾಯೇಲ್ಯರ ಮೂಲಕ ಯೆಹೋವನು ಅವುಗಳನ್ನು ಅವರಿಗೆ ಒದಗಿಸುವನೆಂಬುದನ್ನು ಅವನು ಸೂಚಿಸಿದನು. (ಮತ್ತಾಯ 10:9, 10) ಆ ನಡುಕಟ್ಟಿನ ಚೀಲವು (ಅಕ್ಷರಾರ್ಥಕವಾಗಿ ‘ನಡುಕಟ್ಟು’; ಗ್ರೀಕ್ ಸೋನ್) ಹಣದ ಸೊಂಟಪಟ್ಟಿಯಾಗಿದ್ದಿರಬಹುದು. ಆ ನಡುಕಟ್ಟಿಗೆ ಒಂದೋ ಟೊಳ್ಳಾದ ಭಾಗವಿದ್ದು ಅದರಲ್ಲಿ ಹಣವನ್ನಿಡಲಾಗುತ್ತಿತ್ತು ಇಲ್ಲವೇ ನಡುಕಟ್ಟಿನ ಚೀಲವು ಬಟ್ಟೆಯಲ್ಲಿ ಮಾಡಲ್ಪಟ್ಟಿದ್ದು, ಪದರಗಳಾಗಿ ಅದನ್ನು ತೊಟ್ಟಿದ್ದರೇ ಹಣವನ್ನು ಪದರಗಳಲ್ಲಿ ಇಡಸಾಧ್ಯವಿತ್ತು.
ಆಹಾರದ ಚೀಲವೆಂದು ಅನುವಾದಿಸಲ್ಪಟ್ಟ ಗ್ರೀಕ್ ಪದವಾದ ಪೇರ, ದಾವೀದನು ಕುರುಬರ ಚೀಲವನ್ನು ಒಯ್ದಂತಹ ರೀತಿಯಲ್ಲಿಯೇ, ಪ್ರಯಾಣಿಕರು ಹೆಗಲ ಮೇಲೆ ಒಯ್ಯುತ್ತಿದ್ದ ಚೀಲವನ್ನು ಸೂಚಿಸುತ್ತದೆ ಎಂಬುದು ಖಂಡಿತ. ಅದರಲ್ಲಿ ಆಹಾರ, ಬಟ್ಟೆ ಮತ್ತು ಇತರ ಸಾಮಾನುಗಳನ್ನು ಇಡಲಾಗುತ್ತಿತ್ತು.
ಸದಾಕಾಲಕ್ಕೂ ಬಾಳುವ ಚೀಲಗಳು
“ಮುತ್ತು [“ಮುತ್ತು ತುಂಬಿದ ಚೀಲ,” NW]ಗಳನ್ನು ಸಂಪಾದಿಸುವುದಕ್ಕಿಂತಲೂ ಜ್ಞಾನವನ್ನು [“ವಿವೇಕ,” NW] ಸಂಪಾದಿಸುವುದು” ಸಾರ್ಥಕವೆಂದು ಇಂದು ಲಕ್ಷಾಂತರ ಜನರು ತಿಳಿದುಕೊಂಡಿದ್ದಾರೆ. (ಯೋಬ 28:18) ಈ ವಿವೇಕವನ್ನು ಇತರರಿಗೂ ಹಂಚಲು ಯೆಹೋವನ ಸಾಕ್ಷಿಗಳು ತಮ್ಮ ಕ್ರೈಸ್ತ ಸೌವಾರ್ತಿಕ ಕಾರ್ಯದಲ್ಲಿ ನಿಜವಾದ ಚೀಲಗಳನ್ನು ಮತ್ತು ಕೈಚೀಲಗಳನ್ನು ಉಪಯೋಗಿಸುತ್ತಾರೆ. ಕೀರ್ತನೆಗಾರನಿಂದ ಮುಂತಿಳಿಸಲ್ಪಟ್ಟಿದ್ದನ್ನೇ ಅವರು ಮಾಡುತ್ತಿದ್ದಾರೆ. ಈ ಭೂಮಿಯನ್ನು ದೇವರ ರಾಜ್ಯವು ಪ್ರಮೋದವನಾಗಿ ಪುನಸ್ಥಾಪಿಸಲ್ಪಡುವ ಸುವಾರ್ತೆಯನ್ನು ಒಳಗೊಂಡ ದೇವರ ಸತ್ಯವಾಕ್ಯವಾದ “ಬೀಜ ತುಂಬಿದ ಚೀಲವನ್ನು” (NW) ಹೊತ್ತುಕೊಂಡು ಹೋಗುತ್ತಾರೆ. ಇತರ ಸತ್ಯಾನ್ವೇಷಕರು ಸಹ ದೈವಿಕ ವಿವೇಕವನ್ನು ಪಡೆದುಕೊಂಡಂತೆ, ಅವರು “ಹರ್ಷಿಸುತ್ತಾ” ತಮ್ಮ ಶ್ರಮಗಳಿಗೆ ದೊರೆತ ಪ್ರತಿಫಲವನ್ನು ಕೊಯ್ಯುತ್ತಾರೆ.—ಕೀರ್ತನೆ 126:6.
ಆತ್ಮಿಕ ವಿಷಯಗಳ ಅತ್ಯುತ್ಕೃಷ್ಟ ಮೌಲ್ಯವನ್ನು ಒತ್ತಿ ಹೇಳುತ್ತಾ ಯೇಸು ತನ್ನ ಶಿಷ್ಯರಿಗೆ ಪ್ರಚೋದಿಸಿದ್ದು: “ಹಳೇವಾಗದಂಥ ಹಮ್ಮೀಣಿಗಳನ್ನು [“ಚೀಲ,” NW] ಮಾಡಿಕೊಂಡು ಪರಲೋಕದಲ್ಲಿ ಲಯವಾಗದ ದ್ರವ್ಯವನ್ನು ಇಟ್ಟುಕೊಳ್ಳಿರಿ.” ಹೌದು, ಸ್ವರ್ಗೀಯ ನಿಧಿಯಿಂದ ತುಂಬಿರುವ ಹಣದ ಕೈಚೀಲ, ಚೀಲ, ಗೋಣಿಚೀಲ ಇಲ್ಲವೇ ಗಂಟು ನಿಜವಾದ ಭದ್ರತೆಯನ್ನು ಒದಗಿಸುವುದು ಮತ್ತು ಸದಾಕಾಲಕ್ಕೂ ಇರುವುದು.—ಲೂಕ 12:33.