ಅಧ್ಯಾಯ 5
ಅಬ್ರಹಾಮನಿಗೂ ಅವನ ಕುಟುಂಬಕ್ಕೂ ದೈವಾನುಗ್ರಹ
ಅಬ್ರಹಾಮನ ವಂಶ ತುಂಬಾ ಅಭಿವೃದ್ಧಿಗೊಳ್ಳುತ್ತದೆ. ಈಜಿಪ್ಟ್ ದೇಶದಲ್ಲಿ ದೇವರು ಯೋಸೇಫನನ್ನು ಕಾಪಾಡುತ್ತಾನೆ
ಒಂದಲ್ಲ ಒಂದು ದಿನ ತನ್ನ ಪ್ರಿಯ ಕುಮಾರನು ಕಷ್ಟಕ್ಕೀಡಾಗಿ ಸಾಯುತ್ತಾನೆಂದು ಯೆಹೋವನಿಗೆ ಗೊತ್ತಿತ್ತು. ಈ ನಿಜಾಂಶದ ಸುಳಿವನ್ನು ಆದಿಕಾಂಡ 3:15 ರಲ್ಲಿರುವ ಪ್ರವಾದನೆಯು ಕೊಟ್ಟಿತು. ತಾನು ಅತಿಯಾಗಿ ಪ್ರೀತಿಸಿದ ತನ್ನ ಪ್ರಿಯ ಕುಮಾರನು ಸಾಯುವಾಗ ದೇವರಿಗೆ ಹೇಗಾಗಬಹುದು? ತನಗಾಗುವ ಅನಿಸಿಕೆಯನ್ನು ದೇವರು ನಮ್ಮಂಥ ಮಾನವರಿಗೆ ತಿಳಿಸಿಕೊಡಸಾಧ್ಯವಿತ್ತೋ? ನೈಜ ಘಟನೆಯೊಂದರ ಮೂಲಕ ಬೈಬಲ್ ಇದನ್ನು ನಮಗೆ ವಿವರಿಸುವುದನ್ನು ಗಮನಿಸಿ. ಅಬ್ರಹಾಮನಿಗೆ ಇದ್ದ ಒಬ್ಬನೇ ಮಗನಾದ ಇಸಾಕನನ್ನು ತನಗೆ ಬಲಿಯಾಗಿ ಅರ್ಪಿಸುವಂತೆ ದೇವರು ಕೇಳಿಕೊಳ್ಳುತ್ತಾನೆ.
ದೇವರು ಈ ಮುಂಚೆ ಅಬ್ರಹಾಮನಿಗೆ ಮಾಡಿದ ವಾಗ್ದಾನ ನಿಮಗೆ ನೆನಪಿರಬಹುದು. ಮುಂತಿಳಿಸಲ್ಪಟ್ಟ ವಿಮೋಚಕ ಅಥವಾ ಸಂತಾನ ಇಸಾಕನ ವಂಶದಲ್ಲಿ ಹುಟ್ಟುವನೆಂದು ಆತನು ಹೇಳಿದ್ದನು. ಹಾಗಾಗಿ, ಅಗತ್ಯ ಬಿದ್ದಲ್ಲಿ ದೇವರು ಇಸಾಕನನ್ನು ಪುನರುತ್ಥಾನಗೊಳಿಸುವನೆಂಬ ಪೂರ್ಣ ಭರವಸೆ ಅಬ್ರಹಾಮನಿಗಿತ್ತು. ಆದುದರಿಂದ ಅವನು ತನ್ನ ಮಗನಾದ ಇಸಾಕನನ್ನು ಬಲಿಕೊಡಲು ಸರ್ವ ಏರ್ಪಾಡನ್ನು ಮಾಡಿದನು. ಇನ್ನೇನು ಬಲಿಕೊಡಬೇಕು, ಅಷ್ಟರಲ್ಲಿ ದೇವರು ತನ್ನ ದೂತನ ಮೂಲಕ ಅಬ್ರಹಾಮನನ್ನು ತಡೆದನು. ಕಣ್ಮಣಿಯಂತಿದ್ದ ತನ್ನ ಅಮೂಲ್ಯ ಪುತ್ರನನ್ನೇ ಬಲಿಕೊಡಲು ಮುಂದಾದ ಅಬ್ರಹಾಮನ ನಂಬಿಕೆಯನ್ನು ದೇವರು ಮೆಚ್ಚಿದನು. ಮಾತ್ರವಲ್ಲ, ತಾನು ಹಿಂದೊಮ್ಮೆ ಮಾಡಿದ್ದ ವಾಗ್ದಾನವನ್ನು ಪುನಃ ಒಮ್ಮೆ ಹೇಳಿದನು.
ಸಮಯ ಸಂದಂತೆ, ಇಸಾಕನಿಗೆ ಏಸಾವ ಮತ್ತು ಯಾಕೋಬ ಎಂಬ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಯಾಕೋಬನು ಏಸಾವನಂತಿರದೆ ದೇವರ ಪವಿತ್ರ ವಿಷಯಗಳಿಗೆ ಗೌರವ ತೋರಿಸುವವನಾಗಿದ್ದನು. ಇದಕ್ಕಾಗಿ ದೇವರು ಅವನನ್ನು ಬಹಳವಾಗಿ ಆಶೀರ್ವದಿಸಿದನು. ದೇವರು ಯಾಕೋಬನ ಹೆಸರನ್ನು ಇಸ್ರಾಯೇಲ್ ಎಂದು ಬದಲಾಯಿಸಿದನು ಮತ್ತು ಇಸ್ರಾಯೇಲನಿಗೆ ಹುಟ್ಟಿದ 12 ಮಕ್ಕಳು ಇಸ್ರಾಯೇಲ್ ಕುಲಗಳ ಕುಲಾಧಿಪತಿಗಳಾದರು. ಮುಂದೆ ಯಾಕೋಬನ ಕುಟುಂಬವು ಬೆಳೆದು ಒಂದು ದೊಡ್ಡ ಜನಾಂಗವಾಯಿತು. ಹೇಗೆ?
ಯಾಕೋಬನ ಆ 12 ಮಂದಿ ಗಂಡು ಮಕ್ಕಳಲ್ಲಿ ಹೆಚ್ಚಿನವರು ತಮ್ಮನಾದ ಯೋಸೇಫನ ಮೇಲೆ ಹೊಟ್ಟೆಕಿಚ್ಚು ಪಡಲಾರಂಭಿಸಿದರು. ಆಮೇಲೆ ಘಟನೆಗಳ ಸರಮಾಲೆಯೇ ಆರಂಭವಾಯಿತು. ದ್ವೇಷದ ಕಾರಣ ಅವರೆಲ್ಲರು ಸೇರಿ ಯೋಸೇಫನನ್ನು ಗುಲಾಮಗಿರಿಗೆ ಮಾರಿದರು. ಕೊಂಡುಕೊಂಡವರು ಅವನನ್ನು ಈಜಿಪ್ಟ್ ದೇಶಕ್ಕೆ ಕರೆತಂದರು. ದೇವರ ಮೇಲೆ ಸಂಪೂರ್ಣ ನಂಬಿಕೆಯಿಟ್ಟಿದ್ದ ಆ ಧೈರ್ಯವಂತ ಹುಡುಗನ ಮೇಲೆ ದೇವರ ಅನುಗ್ರಹವಿತ್ತು. ಹಾಗಾಗಿ, ಬಹಳ ಕಷ್ಟವನ್ನು ಅನುಭವಿಸಿದರೂ ಕೊನೆಗೆ ಈಜಿಪ್ಟಿನ ಅರಸನಾದ ಫರೋಹನು ಅವನನ್ನು ತನ್ನ ದೇಶದ ದೊಡ್ಡ ಅಧಿಕಾರಿಯನ್ನಾಗಿ ನೇಮಿಸಿದನು. ಅದೇ ಸಮಯದಲ್ಲಿ, ಬರಗಾಲವಿದ್ದ ಕಾರಣ ಯಾಕೋಬನು ತನ್ನ ಗಂಡುಮಕ್ಕಳನ್ನು ಆಹಾರ ತರುವಂತೆ ಈಜಿಪ್ಟಿಗೆ ಕಳುಹಿಸಿದನು. ಆಶ್ಚರ್ಯವೆಂದರೆ, ಅಲ್ಲಿ ಆಹಾರ ವಸ್ತುಗಳ ಉಸ್ತುವಾರಿ ವಹಿಸಿದ್ದವನು ಯೋಸೇಫನೇ ಆಗಿದ್ದನು. ತನ್ನ ಸಹೋದರರು ಈಗ ಒಳ್ಳೆಯವರಾಗಿದ್ದಾರೆಂದು ತಿಳಿದುಕೊಂಡ ಯೋಸೇಫನು ಅವರು ತನಗೆ ಹಿಂದೆ ಮಾಡಿದ ದ್ರೋಹವನ್ನೆಲ್ಲ ಮರೆತು ಅವರನ್ನು ಕ್ಷಮಿಸಿದನು. ಅವರ ಈ ಅನಿರೀಕ್ಷಿತ ಮಿಲನದ ನಂತರ, ಯಾಕೋಬನ ಇಡೀ ಕುಟುಂಬವು ಈಜಿಪ್ಟಿಗೆ ಬಂದು ವಾಸಿಸುವಂತೆ ಯೋಸೇಫನು ಏರ್ಪಾಡುಗಳನ್ನು ಮಾಡಿದನು. ಮಾತ್ರವಲ್ಲ, ಅತ್ಯುತ್ತಮ ಪ್ರದೇಶವೊಂದನ್ನು ಅವರಿಗೆ ನೀಡಲಾಯಿತು. ಅಲ್ಲಿ ಅವರ ವಂಶ ಬೆಳೆದು ತುಂಬಾ ಅಭಿವೃದ್ಧಿಯಾಯಿತು. ದೇವರು ತನ್ನ ಉದ್ದೇಶ ನೆರವೇರಿಸಲಿಕ್ಕಾಗಿಯೇ ಇದನ್ನೆಲ್ಲಾ ಮಾಡಿದನೆಂದು ಯೋಸೇಫನು ಅರ್ಥಮಾಡಿಕೊಂಡನು.
ವೃದ್ಧನಾದ ಯಾಕೋಬನು ಉಳಿದ ಜೀವಮಾನಕಾಲವೆಲ್ಲಾ ತನ್ನ ಕುಟುಂಬದೊಂದಿಗೆ ಈಜಿಪ್ಟಿನಲ್ಲೇ ಕಳೆದನು. ದೇವರು ವಾಗ್ದಾನಿಸಿದ ಸಂತಾನ ಅಥವಾ ವಿಮೋಚಕನು ತನ್ನ ಮಗನಾದ ಯೆಹೂದನ ವಂಶದಲ್ಲೇ ಹುಟ್ಟುವನೆಂದು ಹಾಗೂ ಆ ವಿಮೋಚಕನ ಆಳ್ವಿಕೆ ತುಂಬ ಪ್ರಭಾವವುಳ್ಳದ್ದು ಆಗಿರುವುದೆಂದು ಮುಂತಿಳಿಸಿ ಯಾಕೋಬನು ಮರಣ ಹೊಂದಿದನು. ಇದಾಗಿ ಅನೇಕ ವರ್ಷಗಳ ನಂತರ ಯೋಸೇಫನು ಸಹ ಮರಣ ಹೊಂದಿದನು. ಸಾಯುವ ಮೊದಲು, ಮುಂದೊಂದು ದಿನ ಯಾಕೋಬನ ಕುಟುಂಬವನ್ನು ದೇವರು ಈಜಿಪ್ಟಿನಿಂದ ಬೇರೆ ಕಡೆಗೆ ಕರೆದುಕೊಂಡು ಹೋಗುತ್ತಾನೆಂದು ಪ್ರವಾದನೆ ನುಡಿದನು.
—ಆದಿಕಾಂಡ ಅಧ್ಯಾಯ 20ರಿಂದ 50; ಇಬ್ರಿಯ 11:17-22 ರ ಮೇಲೆ ಆಧಾರಿತವಾಗಿದೆ.