ಅಧ್ಯಾಯ 4
ಅಬ್ರಹಾಮನೊಂದಿಗೆ ದೇವರು ಮಾಡಿದ ಒಡಂಬಡಿಕೆ
ಭಕ್ತಿ ನಂಬಿಕೆಯಿದ್ದ ಅಬ್ರಹಾಮನು ದೇವರಿಗೆ ವಿಧೇಯನಾಗುತ್ತಾನೆ. ಅವನನ್ನು ಯೆಹೋವನು ಆಶೀರ್ವದಿಸಿ ಅವನ ವಂಶವನ್ನು ವೃದ್ಧಿಗೊಳಿಸುವನೆಂದು ಮಾತುಕೊಡುತ್ತಾನೆ
ನೋಹನ ಕಾಲದ ಜಲಪ್ರಳಯವಾಗಿ ಈಗಾಗಲೇ ಸುಮಾರು 350 ವರ್ಷಗಳು ಕಳೆದಿದ್ದವು. ಆ ಸಮಯದಲ್ಲಿ ಅಬ್ರಹಾಮ ಎಂಬ ಒಬ್ಬ ಮನುಷ್ಯನು ಊರ್ ಎಂಬ ಸಂಪದ್ಭರಿತ ಪಟ್ಟಣದಲ್ಲಿ ವಾಸಿಸುತ್ತಿದ್ದನು. ಊರ್ ಪಟ್ಟಣವನ್ನು ಈಗ ಇರಾಕ್ ದೇಶವೆಂದು ಕರೆಯಲಾಗುತ್ತದೆ. ಅಬ್ರಹಾಮನು ದೇವರಲ್ಲಿ ಬಹಳ ಭಕ್ತಿ ನಂಬಿಕೆಯಿಟ್ಟಿದ್ದ ವ್ಯಕ್ತಿಯಾಗಿದ್ದನು. ಒಮ್ಮೆ ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಿದನು.
ಅಬ್ರಹಾಮನು ತನ್ನ ಸ್ವಂತ ಊರನ್ನು ಬಿಟ್ಟು ಕಾನಾನ್ ಎಂಬ ದೂರದ ದೇಶಕ್ಕೆ ಹೋಗುವಂತೆ ಯೆಹೋವನು ಹೇಳಿದನು. ಯೆಹೋವನ ಮಾತಿಗೆ ಅಬ್ರಹಾಮನು ತಕ್ಷಣವೇ ವಿಧೇಯನಾದನು. ತನ್ನ ಪತ್ನಿ ಸಾರ, ಸೋದರಳಿಯ ಲೋಟ ಹಾಗೂ ಸೇವಕರನ್ನು ಜೊತೆಯಲ್ಲಿ ಕರೆದುಕೊಂಡು ಅವನು ಕಾನಾನಿಗೆ ಹೊರಟನು. ತುಂಬಾ ದೂರ ಪ್ರಯಾಣಿಸಿದ ನಂತರ ಅವನು ಕಾನಾನ್ ದೇಶವನ್ನು ತಲುಪಿ ಅಲ್ಲಿ ಡೇರೆಯಲ್ಲಿ ವಾಸಿಸಿದನು. ಯೆಹೋವನು ಅಬ್ರಹಾಮನೊಂದಿಗೆ ಒಡಂಬಡಿಕೆ ಮಾಡಿಕೊಂಡು ತಾನು ಅವನಿಂದ ಒಂದು ದೊಡ್ಡ ಜನಾಂಗವನ್ನು ಉಂಟುಮಾಡುವೆನೆಂದು ಮತ್ತು ಎಲ್ಲ ಜನಾಂಗಗಳು ಅವನ ಮೂಲಕ ಆಶೀರ್ವಾದ ಪಡೆದುಕೊಳ್ಳುವವೆಂದು ಮಾತುಕೊಟ್ಟನು. ಮಾತ್ರವಲ್ಲ, ಅವನ ಸಂತತಿಯು ಕಾನಾನ್ ದೇಶದಲ್ಲಿ ತುಂಬಿಕೊಂಡು ಅಲ್ಲಿ ವಾಸಿಸುವುದೆಂದೂ ವಾಗ್ದಾನ ಮಾಡಿದನು.
ಅಬ್ರಹಾಮ ಮತ್ತು ಲೋಟರಿಗೆ ಕುರಿದನಗಳು ಹೆಚ್ಚಾಗಿ ಭಾರಿ ಐಶ್ವರ್ಯವಂತರಾದರು. ಹಾಗಿದ್ದರೂ ಅಬ್ರಹಾಮನು ಕಿಂಚಿತ್ತೂ ಸ್ವಾರ್ಥಿಯಾಗಿರಲಿಲ್ಲ. ಆ ದೇಶದಲ್ಲಿ ಯಾವ ಸ್ಥಳವು ಇಷ್ಟವೋ ಅದನ್ನು ಆರಿಸಿಕೊಳ್ಳುವಂತೆ ಅವನು ಲೋಟನಿಗೆ ಬಿಟ್ಟುಕೊಟ್ಟನು. ಲೋಟನು ಯೊರ್ದನ್ ನದಿಯ ಸುತ್ತಲಿನ ಫಲವತ್ತಾದ ಪ್ರದೇಶವನ್ನು ಆರಿಸಿಕೊಂಡು ಅಲ್ಲಿ ವಾಸಿಸಲಾರಂಭಿಸಿದನು. ಅದು ಸೊದೋಮ್ ಪಟ್ಟಣದ ಹತ್ತಿರದಲ್ಲಿತ್ತು. ಸೊದೋಮ್ ಪಟ್ಟಣದ ಗಂಡಸರು ಅನೈತಿಕವಾದ ಕೆಟ್ಟ ಕೃತ್ಯಗಳನ್ನು ಮಾಡುತ್ತಿದ್ದರು. ಅದು ಯೆಹೋವ ದೇವರ ದೃಷ್ಟಿಯಲ್ಲಿ ಘೋರ ಪಾಪವಾಗಿತ್ತು.
ಅಬ್ರಹಾಮನ ಸಂತತಿಯು ಆಕಾಶದ ನಕ್ಷತ್ರಗಳಂತೆ ಎಣಿಸಲಾರದಷ್ಟು ಹೆಚ್ಚಾಗುವುದೆಂದು ಯೆಹೋವನು ಪುನಃ ಒಮ್ಮೆ ಆಶ್ವಾಸನೆ ಕೊಟ್ಟನು. ದೇವರ ಆ ಮಾತಿನಲ್ಲಿ ಅಬ್ರಹಾಮನು ಪೂರ್ಣ ನಂಬಿಕೆಯಿಟ್ಟನು. ಆದರೇನು, ಅಬ್ರಹಾಮ ಸಾರರಿಗೆ ಮಕ್ಕಳಿರಲಿಲ್ಲ. ಅವರಿಗೆ ಒಬ್ಬ ಮಗನು ಹುಟ್ಟುವನೆಂದು ಯೆಹೋವನು ಹೇಳಿದನು. ಆಗ ಅಬ್ರಹಾಮನಿಗೆ 99 ವರ್ಷವಾಗಿತ್ತು ಹಾಗೂ ಸಾರಳಿಗೆ 90 ವರ್ಷ ತುಂಬುತ್ತಿತ್ತು. ದೇವರು ಹೇಳಿದಂತೆಯೇ ಆಯಿತು. ಸಾರಳಿಗೆ ಒಬ್ಬ ಮಗನು ಜನಿಸಿದನು. ಅವನಿಗೆ ಇಸಾಕ ಎಂದು ಹೆಸರಿಟ್ಟರು. ಅಬ್ರಹಾಮನಿಗೆ ಬೇರೆ ಮಕ್ಕಳಿದ್ದರೂ ಸಹ, ಏದೆನ್ ತೋಟದಲ್ಲಿ ದೇವರು ಮುಂತಿಳಿಸಿದ್ದ ವಿಮೋಚಕನು ಇಸಾಕನ ವಂಶದಲ್ಲೇ ಹುಟ್ಟಲಿದ್ದನು.
ಲೋಟನಾದರೋ ಈಗ ತನ್ನ ಕುಟುಂಬದೊಂದಿಗೆ ಸೊದೋಮ್ ಪಟ್ಟಣದಲ್ಲಿ ವಾಸಿಸುತ್ತಿದ್ದನು. ಆದರೆ ಅವನು ನೀತಿವಂತನಾಗಿದ್ದ ಕಾರಣ ಅಲ್ಲಿನ ಕೆಟ್ಟ ಜನರ ಸ್ವಭಾವವನ್ನು ಬೆಳೆಸಿಕೊಳ್ಳಲಿಲ್ಲ. ಆದುದರಿಂದ, ದೇವರು ಸೊದೋಮನ್ನು ನಾಶಮಾಡಲು ನಿರ್ಣಯಿಸಿದಾಗ, ಅದರ ಕುರಿತು ಲೋಟನಿಗೆ ತಿಳಿಸಲು ದೇವದೂತರನ್ನು ಕಳುಹಿಸಿದನು. ಲೋಟ ಮತ್ತು ಅವನ ಕುಟುಂಬದವರು ಸೊದೋಮನ್ನು ಬಿಟ್ಟು ಓಡಿಹೋಗುವಂತೆ ಆ ದೇವದೂತರು ಹೇಳಿದರು. ಅಲ್ಲದೆ ಹಿಂದೆ ತಿರುಗಿ ನೋಡಬಾರದೆಂಬ ಎಚ್ಚರಿಕೆಯನ್ನೂ ನೀಡಿದರು. ಅನಂತರ ದೇವರು ಸೊದೋಮ್ ಹಾಗೂ ಅದರ ಹತ್ತಿರದ ಗೊಮೋರ ಪಟ್ಟಣದ ಮೇಲೆ ಅಗ್ನಿಗಂಧಕದ ಮಳೆ ಸುರಿಯುವಂತೆ ಮಾಡಿದನು. ಆ ಪಟ್ಟಣಗಳಲ್ಲಿ ಇದ್ದವರೆಲ್ಲರೂ ನಾಶವಾದರು. ಲೋಟ ಮತ್ತು ಅವನ ಇಬ್ಬರು ಪುತ್ರಿಯರು ಮಾತ್ರ ಪಾರಾದರು. ಲೋಟನ ಹೆಂಡತಿ ದೇವರ ಮಾತನ್ನು ಮೀರಿ ಹಿಂದಿರುಗಿ ನೋಡಿದ ಕಾರಣ ಜೀವ ಕಳೆದುಕೊಂಡಳು. ಪ್ರಾಯಶಃ ತಾನು ಪಟ್ಟಣದಲ್ಲಿ ಬಿಟ್ಟುಬಂದಿದ್ದ ವಸ್ತುಗಳಿಗಾಗಿ ಅವಳು ಆಸೆಪಟ್ಟಿದ್ದಿರಬೇಕು.
—ಆದಿಕಾಂಡ 11:10–19:38ರ ಮೇಲೆ ಆಧಾರಿತವಾಗಿದೆ.