ಪಿಲ್ಗ್ರಿಮರು ಮತ್ತು ಪ್ಯೂರಿಟನರು ಅವರು ಯಾರಾಗಿದ್ದರು?
ಉತ್ತರ ಅಮೆರಿಕದ ಸಮುದ್ರತೀರದಲ್ಲಿರುವ ಮ್ಯಾಸಚೂಸೆಟ್ಸ್ನ ಪ್ಲಿಮತ್ ನಗರದಲ್ಲಿ ಒಂದು ದೊಡ್ಡ ಗ್ರ್ಯಾನೈಟ್ ಬಂಡೆ ಇದೆ. ಅದರ ಮೇಲೆ 1620 ಎಂಬ ಸಂಖ್ಯೆಯು ಕೆತ್ತಲ್ಪಟ್ಟಿದೆ. ಅದನ್ನು ಪ್ಲಿಮತ್ ರಾಕ್ ಎಂದು ಕರೆಯಲಾಗುತ್ತದೆ. ಇದು ಸುಮಾರು 400 ವರ್ಷಗಳ ಹಿಂದೆ ಯೂರೋಪಿಯನರ ಒಂದು ಗುಂಪು ಬಂದಿಳಿದಂಥ ಸ್ಥಳಕ್ಕೆ ಹತ್ತಿರದಲ್ಲಿದೆ ಎಂದು ವ್ಯಾಪಕವಾಗಿ ನಂಬಲಾಗುತ್ತದೆ. ನೀವು ‘ಪಿಲ್ಗ್ರಿಮ್ಸ್’ (ಯಾತ್ರಿಗಳು) ಇಲ್ಲವೆ ‘ಪಿಲ್ಗ್ರಿಮ್ ಫಾದರ್ಸ್’ (ಯಾತ್ರಿಕಪಿತೃಗಳು) ಎಂಬ ಹೆಸರಿನಿಂದ ಅವರ ಬಗ್ಗೆ ಕೇಳಿರಬಹುದು.
ಅನೇಕರಿಗೆ, ಅತಿಥಿಸತ್ಕಾರ ಸ್ವಭಾವದ ಪಿಲ್ಗ್ರಿಮರು ನಾಡಿನ ಮೂಲನಿವಾಸಿ ಅಮೆರಿಕನ್ ಸ್ನೇಹಿತರನ್ನು ಭಾರಿ ಕೊಯ್ಲಿನ ಊಟಗಳಿಗಾಗಿ ಆಮಂತ್ರಿಸುತ್ತಿದ್ದ ಕಥೆಗಳ ಬಗ್ಗೆ ಗೊತ್ತಿದೆ. ಆದರೆ ಈ ಪಿಲ್ಗ್ರಿಮರು ಯಾರಾಗಿದ್ದರು, ಮತ್ತು ಅವರು ಉತ್ತರ ಅಮೆರಿಕಕ್ಕೆ ಏಕೆ ಹೋದರು? ಇವುಗಳ ಉತ್ತರಗಳನ್ನು ಕಂಡುಹಿಡಿಯಲು ನಾವು ಇಂಗ್ಲೆಂಡಿನ ರಾಜನಾದ VIIIನೇ ಹೆನ್ರಿಯ ಸಮಯಕ್ಕೆ ಹಿಂದೆ ಹೋಗೋಣ.
ಇಂಗ್ಲೆಂಡಿನಲ್ಲಿ ಧಾರ್ಮಿಕ ಕ್ರಾಂತಿಗಳು
ಪಿಲ್ಗ್ರಿಮರು ಇಂಗ್ಲೆಂಡ್ನಿಂದ ಅಮೆರಿಕಕ್ಕೆ ಹೊರಡುವುದಕ್ಕೆ 100ಕ್ಕಿಂತಲೂ ಕಡಿಮೆ ವರ್ಷಗಳ ಹಿಂದೆ, ಇಂಗ್ಲೆಂಡ್ ಒಂದು ರೋಮನ್ ಕ್ಯಾಥೊಲಿಕ್ ದೇಶವಾಗಿತ್ತು. ಅಲ್ಲಿನ ರಾಜನಾದ VIIIನೇ ಹೆನ್ರಿ, ಪೋಪ್ನಿಂದ ‘ಧರ್ಮ ರಕ್ಷಕನು’ ಎಂಬ ಬಿರುದನ್ನು ಸಹ ಹೊಂದಿದ್ದನು. ಆದರೆ ಪೋಪ್ VIIನೇ ಕ್ಲೆಮೆಂಟ್, ರಾಜ ಹೆನ್ರಿಯ ಆರು ಮಂದಿ ಹೆಂಡತಿಯರಲ್ಲಿ ಮೊದಲನೆಯವಳಾದ ಆರಗಾನ್ನ ಕ್ಯಾಥರಿನ್ಳೊಂದಿಗಿನ ವಿವಾಹ ಸಂಬಂಧವನ್ನು ಅವನ ಇಚ್ಛೆಗನುಸಾರ ರದ್ದುಗೊಳಿಸಲು ನಿರಾಕರಿಸಿದಾಗ, ಪೋಪ್ ಮತ್ತು ರಾಜನ ಸಂಬಂಧದಲ್ಲಿ ಬಿರುಕುಹುಟ್ಟಿಕೊಂಡಿತು.
ರಾಜ ಹೆನ್ರಿ ತನ್ನ ಕುಟುಂಬದ ಸಮಸ್ಯೆಗಳಲ್ಲಿ ಮುಳುಗಿದ್ದಾಗ ಆಚೆ ಯೂರೋಪಿನ ಹೆಚ್ಚಿನ ಭಾಗದಾದ್ಯಂತ ಪ್ರಾಟೆಸ್ಟಂಟರ ಸುಧಾರಣಾ ಚಳುವಳಿಯು ರೋಮನ್ ಕ್ಯಾಥೊಲಿಕ್ ಚರ್ಚಿನಲ್ಲಿ ಕ್ರಾಂತಿಯನ್ನು ಎಬ್ಬಿಸಿತ್ತು. ಚರ್ಚು ತನಗೆ ಕೊಟ್ಟಿದ್ದ ಪ್ರತಿಷ್ಠಿತ ಸ್ಥಾನವನ್ನು ಕಳೆದುಕೊಳ್ಳಲು ಮನಸ್ಸಿಲ್ಲದ ಹೆನ್ರಿ, ಆರಂಭದಲ್ಲಿ ಈ ಸುಧಾರಣಾವಾದಿಗಳನ್ನು ಇಂಗ್ಲೆಂಡ್ನೊಳಗೆ ಬರದಂತೆ ತಡೆಗಟ್ಟಿದನು. ಆದರೆ ಅನಂತರ ಅವನು ಮನಸ್ಸನ್ನು ಬದಲಾಯಿಸಿಕೊಂಡನು. ಕ್ಯಾಥೊಲಿಕ್ ಚರ್ಚು ಅವನ ಮೊದಲ ವಿವಾಹವನ್ನು ರದ್ದುಗೊಳಿಸಲು ಒಪ್ಪಿಕೊಳ್ಳದೇ ಇದ್ದುದರಿಂದ ಈಗ ಅವನು ಕ್ಯಾಥೊಲಿಕ್ ಚರ್ಚನ್ನು ರದ್ದುಗೊಳಿಸಲಿದ್ದನು. 1534ರಲ್ಲಿ ಅವನು ಇಂಗ್ಲೆಂಡಿನಲ್ಲಿದ್ದ ಕ್ಯಾಥೊಲಿಕರ ಮೇಲೆ ಪೋಪ್ಗಿದ್ದ ಅಧಿಕಾರವನ್ನು ತೆಗೆದುಹಾಕಿದನು ಮತ್ತು ತಾನೇ ಚರ್ಚ್ ಆಫ್ ಇಂಗ್ಲೆಂಡಿನ ಪರಮೋಚ್ಛ ಅಧಿಕಾರಿಯೆಂದು ಘೋಷಿಸಿದನು. ತದನಂತರ ಸ್ವಲ್ಪ ಸಮಯದಲ್ಲೇ ಅವನು ಕ್ರೈಸ್ತ ಸಂನ್ಯಾಸಿಮಠಗಳನ್ನು ಮುಚ್ಚಿಸಿ, ಅವುಗಳ ವಿಸ್ತಾರವಾದ ಆಸ್ತಿಗಳನ್ನು ಮಾರಿಬಿಟ್ಟನು. ಹೆನ್ರಿ 1547ರಲ್ಲಿ ಸತ್ತುಹೋದಾಗ, ಇಂಗ್ಲೆಂಡ್ ಒಂದು ಪ್ರಾಟೆಸ್ಟಂಟ್ ರಾಷ್ಟ್ರವಾಗುವುದರ ಪಥದಲ್ಲಿತ್ತು.
ಹೆನ್ರಿಯ ಮಗನಾದ VIನೇ ಎಡ್ವರ್ಡ್, ಪೋಪ್ನೊಂದಿಗಿನ ಈ ಬೇರ್ಪಡುವಿಕೆಯನ್ನು ಮುಂದುವರಿಸಿಕೊಂಡು ಹೋದನು. 1553ರಲ್ಲಿ ಎಡ್ವರ್ಡ್ನ ಮರಣದ ಬಳಿಕ, ಮೇರಿ ರಾಣಿಯಾದಳು. ಇವಳು ರಾಜ ಹೆನ್ರಿಗೆ ಆರಗಾನ್ನ ಕ್ಯಾಥರಿನ್ಳಿಂದ ಹುಟ್ಟಿದ್ದ ಮಗಳಾಗಿದ್ದು ಅವಳೊಬ್ಬ ರೋಮನ್ ಕ್ಯಾಥೊಲಿಕಳಾಗಿದ್ದಳು. ಆ ದೇಶವು ಪುನಃ ಒಮ್ಮೆ ಪೋಪ್ನ ಅಧಿಕಾರಕ್ಕೆ ಅಧೀನವಾಗುವಂತೆ ಅವಳು ಪ್ರಯತ್ನಿಸಿದಳು. ಅವಳು ಅನೇಕ ಮಂದಿ ಪ್ರಾಟೆಸ್ಟಂಟರನ್ನು ಗಡೀಪಾರು ಮಾಡಿದಳು ಮತ್ತು 300ಕ್ಕಿಂತಲೂ ಹೆಚ್ಚು ಮಂದಿಯನ್ನು ಕಂಬಕ್ಕೆ ಜಡಿದು ಸುಟ್ಟುಹಾಕಿದಳು. ಇದರಿಂದಾಗಿ ಅವಳಿಗೆ ‘ಬ್ಲಡಿ ಮೇರಿ’ (ರಕ್ತಪಿಪಾಸಿ ಮೇರಿ) ಎಂಬ ಹೆಸರು ಬಂತು. ಆದರೆ ಬದಲಾವಣೆಯ ಅಲೆಯನ್ನು ಅವಳಿಂದ ಹತ್ತಿಕ್ಕಲಾಗಲಿಲ್ಲ. ಅವಳು 1558ರಲ್ಲಿ ಮರಣಹೊಂದಿದಳು. ಅವಳ ಉತ್ತರಾಧಿಕಾರಿಯಾದ ಮಲತಂಗಿ Iನೇ ಎಲಿಸಬೇತ್, ಅಂದಿನಿಂದ ಪೋಪ್ ಇಂಗ್ಲೆಂಡ್ನ ಧಾರ್ಮಿಕ ವಿಷಯಗಳಲ್ಲಿ ಯಾವುದೇ ರೀತಿಯಲ್ಲಿ ತಲೆಹಾಕದಂತೆ ಖಚಿತಪಡಿಸಿಕೊಂಡಳು.
ಆದರೆ, ಚರ್ಚ್ ಆಫ್ ರೋಮ್ನಿಂದ ಕೇವಲ ಬೇರ್ಪಟ್ಟರೆ ಮಾತ್ರ ಸಾಲದೆಂದು ಕೆಲವು ಪ್ರಾಟೆಸ್ಟಂಟರಿಗೆ ಅನಿಸಿತು. ರೋಮನ್ ಕ್ಯಾಥೊಲಿಕ್ ಧರ್ಮದ ಪ್ರತಿಯೊಂದು ಜಾಡನ್ನೂ ತೆಗೆದುಹಾಕಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಅವರು ಚರ್ಚಿನ ಆರಾಧನೆಯನ್ನು ಶುದ್ಧೀಕರಿಸಲು ಬಯಸುತ್ತಿದ್ದರು. ಆದುದರಿಂದಲೇ ಅವರನ್ನು ‘ಪ್ಯೂರಿಟನರು’ ಎಂದು ಕರೆಯಲಾಗುತ್ತಿತ್ತು. ಪ್ಯೂರಿಟನರಲ್ಲಿ ಕೆಲವರು, ಬಿಷಪರುಗಳ ಅಗತ್ಯವಿಲ್ಲ ಬದಲಾಗಿ ಪ್ರತಿಯೊಂದು ಸಭೆಯು ರಾಷ್ಟ್ರೀಯ ಚರ್ಚಿನಿಂದ ಪ್ರತ್ಯೇಕವಾಗಿ ಅದರದರ ನಿಯಂತ್ರಣಮಾಡಬೇಕೆಂಬ ಅಭಿಪ್ರಾಯದವರಾಗಿದ್ದರು. ಅವರನ್ನು ‘ಪ್ರತ್ಯೇಕತಾವಾದಿಗಳು’ (ಸೆಪರಟಿಸ್ಟ್ಸ್) ಎಂದು ಕರೆಯಲಾಗುತ್ತಿತ್ತು.
ರಾಣಿ ಎಲಿಸಬೇತಳ ಆಳ್ವಿಕೆಯ ಸಮಯದಲ್ಲಿ ಈ ವಾದಗ್ರಸ್ತ ಪ್ಯೂರಿಟನರು ಪ್ರಸಿದ್ಧರಾದರು. ಕೆಲವು ಮಂದಿ ಪಾದ್ರಿಗಳು ಹಾಕುತ್ತಿದ್ದ ವಿಧ್ಯುಕ್ತವಲ್ಲದ ಪೋಷಾಕು ರಾಣಿಯನ್ನು ಕೆರಳಿಸಿತು. ಅವರು ಒಂದು ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ಮಾಡಲು ಆಕೆ 1564ರಲ್ಲಿ ಕ್ಯಾಂಟರ್ಬರಿಯ ಆರ್ಚ್ಬಿಷಪನಿಗೆ ಅಪ್ಪಣೆಕೊಟ್ಟಳು. ಇದರಿಂದಾಗಿ, ಕ್ಯಾಥೊಲಿಕ್ ಪಾದ್ರಿಗಳ ಪೋಷಾಕುಗಳಿಗೆ ಪುನಃ ಹಿಂದೆ ಹೋಗಲಾಗುತ್ತಿದೆಯೆಂದು ಮುಂಗಂಡ ಪ್ಯೂರಿಟನರು ವಿಧೇಯರಾಗಲು ನಿರಾಕರಿಸಿದರು. ಬಿಷಪರು ಮತ್ತು ಆರ್ಚ್ಬಿಷಪರಿಂದ ಕೂಡಿದ ಹಿಂದಿನ ಪಾದ್ರಿಪ್ರಭುತ್ವದ ಬಗ್ಗೆ ಹೆಚ್ಚಿನ ವಾಗ್ವಾದವು ಆರಂಭವಾಯಿತು. ಎಲಿಸಬೇತಳು ಆ ಬಿಷಪರನ್ನು ಇಟ್ಟುಕೊಂಡಳು, ಮತ್ತು ಚರ್ಚಿನ ಮುಖ್ಯಸ್ಥೆಯಾಗಿ ಅವರು ತನಗೆ ನಿಷ್ಠೆಯನ್ನು ತೋರಿಸುತ್ತಾರೆಂದು ಪ್ರಮಾಣಮಾಡುವಂತೆ ಅಗತ್ಯಪಡಿಸಿದಳು.
ಪ್ರತ್ಯೇಕತಾವಾದಿಗಳಿಂದ ಪಿಲ್ಗ್ರಿಮರು
ಎಲಿಸಬೇತಳ ಅನಂತರ 1603ರಲ್ಲಿ Iನೇ ಜೇಮ್ಸ್ ಪಟ್ಟಕ್ಕೇರಿದನು. ಪ್ರತ್ಯೇಕತಾವಾದಿಗಳು ತನ್ನ ಅಧಿಕಾರಕ್ಕೆ ಅಧೀನರಾಗಿರಬೇಕೆಂದು ಅವನು ಅತೀವ ಒತ್ತಡವನ್ನು ಹೇರಿದನು. 1608ರಲ್ಲಿ ಸ್ಕ್ರೂಬಿ ಎಂಬ ಪಟ್ಟಣದಲ್ಲಿದ್ದ ಪ್ರತ್ಯೇಕತಾವಾದಿಗಳ ಸಭೆಯು, ಅವರಿಗೆ ಸ್ವಾತಂತ್ರ್ಯವನ್ನು ಕೊಡುವುದಾಗಿ ಹೇಳಿದ ಹಾಲೆಂಡ್ ದೇಶಕ್ಕೆ ಓಡಿಹೋಯಿತು. ಆದರೆ ಕಾಲಾನಂತರ, ಬೇರೆ ಧರ್ಮಗಳ ಕಡೆಗೆ ಡಚ್ ಜನರು ತೋರಿಸುತ್ತಿದ್ದ ಸಹಿಷ್ಣುತೆ ಮತ್ತು ಅವರ ಸಡಿಲು ನೈತಿಕತೆಯಿಂದಾಗಿ, ಈ ಪ್ರತ್ಯೇಕತಾವಾದಿಗಳಿಗೆ ಇಂಗ್ಲೆಂಡಿನಲ್ಲಾಗುತ್ತಿದ್ದ ಇರುಸುಮುರಿಸು ಇಲ್ಲಿಯೂ ಆಗತೊಡಗಿತು. ಆದುದರಿಂದ ಅವರು ಯೂರೋಪನ್ನು ಬಿಟ್ಟು ಉತ್ತರ ಅಮೆರಿಕಕ್ಕೆ ಹೋಗಲು ನಿರ್ಣಯಿಸಿದರು. ಪ್ರತ್ಯೇಕತಾವಾದಿಗಳ ಈ ಗುಂಪು ತಮ್ಮ ನಂಬಿಕೆಗಳಿಗಾಗಿ ತಮ್ಮ ನಾಡಿನಿಂದ ಬಹು ದೂರದ ವರೆಗೆ ಪ್ರಯಾಣಮಾಡಲು ತೋರಿಸಿದ ಸಿದ್ಧಮನಸ್ಸಿನಿಂದಾಗಿಯೇ ಅವರು ತದನಂತರ ‘ಪಿಲ್ಗ್ರಿಮ್ಸ್’ (ಯಾತ್ರಿಗಳು) ಎಂದು ಪ್ರಸಿದ್ಧರಾದರು.
ಅನೇಕ ಮಂದಿ ಪ್ರತ್ಯೇಕತಾವಾದಿಗಳು ಒಳಗೂಡಿದ್ದ ಈ ಪಿಲ್ಗ್ರಿಮರು ವರ್ಜಿನ್ಯ ಎಂಬ ಬ್ರಿಟಿಷ್ ನೆಲಸುನಾಡಿನಲ್ಲಿ ನೆಲೆಸಲು ಅನುಮತಿಪಡೆದುಕೊಂಡರು. ಅನಂತರ ಅವರು 1620ರ ಸೆಪ್ಟೆಂಬರ್ ತಿಂಗಳಿನಲ್ಲಿ, ಮೇಫ್ಲವರ್ ಎಂಬ ಹೆಸರಿನ ಹಡಗಿನಲ್ಲಿ ಉತ್ತರ ಅಮೆರಿಕಕ್ಕೆ ಹೊರಟರು. ಸರಿಸುಮಾರು 100 ಮಂದಿ ವಯಸ್ಕರು ಹಾಗೂ ಮಕ್ಕಳು, ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಎರಡು ತಿಂಗಳುಗಳ ಬಿರುಗಾಳಿಭರಿತ ಅವಧಿಯನ್ನು ಕಳೆದರು. ಅನಂತರ ಅವರು ಕೇಪ್ ಕಾಡ್ ಎಂಬಲ್ಲಿ ಬಂದು ತಲಪಿದರು. ಇದು ವರ್ಜಿನ್ಯದ ಉತ್ತರ ದಿಕ್ಕಿನಲ್ಲಿ ನೂರಾರು ಕಿಲೊಮೀಟರ್ ದೂರದಲ್ಲಿ ಇತ್ತು. ಅಲ್ಲಿ ಅವರು ‘ಮೇಫ್ಲವರ್ ಕಾಂಪ್ಯಾಕ್ಟ್’ ಅನ್ನು ಬರೆದರು. ಇದು, ಅವರು ಒಂದು ಸಮುದಾಯವನ್ನು ಸ್ಥಾಪಿಸಿ ಅದರ ನಿಯಮಗಳಿಗೆ ಅಧೀನರಾಗುವ ಅವರ ಆಸೆಯನ್ನು ತಿಳಿಸಿದ ಒಂದು ದಸ್ತಾವೇಜಾಗಿತ್ತು. ಅವರು 1620ರ ಡಿಸೆಂಬರ್ 21ರಂದು ಹತ್ತಿರದ ಪ್ಲಿಮತ್ನಲ್ಲಿ ನೆಲೆಸಿದರು.
ಅಮೆರಿಕ ಭೂಖಂಡದಲ್ಲಿ ಬದುಕಿನಾರಂಭ
ಈ ನಿರಾಶ್ರಿತರು ಉತ್ತರ ಅಮೆರಿಕಕ್ಕೆ ಬಂದು ತಲಪಿದಾಗ ಅಲ್ಲಿನ ಚಳಿಗಾಲಕ್ಕೆ ಸಿದ್ಧರಾಗಿ ಬಂದಿರಲಿಲ್ಲ. ಕೆಲವೇ ತಿಂಗಳುಗಳಲ್ಲಿ ಆ ಗುಂಪಿನಲ್ಲಿ ಅರ್ಧದಷ್ಟು ಜನರು ಸತ್ತುಹೋದರು. ಆದರೆ ವಸಂತಕಾಲ ಆಗಮಿಸಿದಾಗ ಅವರಿಗೆ ಉಪಶಮನ ಸಿಕ್ಕಿತು. ಬದುಕಿ ಉಳಿದವರು ಸೂಕ್ತವಾದ ಮನೆಗಳನ್ನು ಕಟ್ಟಿಕೊಂಡರು ಮತ್ತು ಸ್ಥಳಿಕ ಬೆಳೆಗಳನ್ನು ಬೆಳೆಸುವುದು ಹೇಗೆಂಬುದನ್ನು ಅಲ್ಲಿನ ಮೂಲನಿವಾಸಿ ಅಮೆರಿಕನರಿಂದ ಕಲಿತುಕೊಂಡರು. 1621ರ ಶರತ್ಕಾಲದಷ್ಟಕ್ಕೆ ಈ ಪಿಲ್ಗ್ರಿಮರು ಎಷ್ಟು ಧನಿಕರಾದರೆಂದರೆ, ದೇವರ ಆಶೀರ್ವಾದಕ್ಕಾಗಿ ಉಪಕಾರಹೇಳಲು ಅವರು ಸಮಯವನ್ನು ಬದಿಗಿರಿಸಿದರು. ಅಲ್ಲಿಂದಲೇ, ‘ಥ್ಯಾಂಕ್ಸ್ಗಿವಿಂಗ್’ (ಕೃತಜ್ಞತಾ ನಿವೇದನೆಯ ದಿನ) ಎಂಬ ಹಬ್ಬವು ವಿಕಸನಗೊಂಡಿತು. ಈಗ ಇದನ್ನು ಅಮೆರಿಕ ಮತ್ತು ಬೇರೆ ದೇಶಗಳಲ್ಲೂ ಆಚರಿಸಲಾಗುತ್ತದೆ. ಇನ್ನೂ ಕೆಲವು ವಲಸಿಗರು ಬಂದರು, ಮತ್ತು 15ಕ್ಕಿಂತ ಕಡಿಮೆ ವರ್ಷಗಳಲ್ಲಿ ಪ್ಲಿಮತ್ನ ಜನಸಂಖ್ಯೆಯು 2,000ಕ್ಕಿಂತ ಹೆಚ್ಚಾಯಿತು.
ಈ ಮಧ್ಯೆ, ಇಂಗ್ಲೆಂಡಿನಲ್ಲಿದ್ದ ಕೆಲವು ಪ್ಯೂರಿಟನರು ಸಹ ತಮ್ಮ ‘ವಾಗ್ದತ್ತ ದೇಶವು’ ಅಟ್ಲಾಂಟಿಕ್ನ ಆಚೆ ಇದೆಯೆಂದು ಪ್ರತ್ಯೇಕತಾವಾದಿಗಳಂತೆಯೇ ನಿರ್ಣಯಿಸಿದರು. 1630ರಲ್ಲಿ ಅವರೊಳಗಿಂದ ಒಂದು ಗುಂಪು, ಪ್ಲಿಮತ್ನ ಉತ್ತರದಲ್ಲಿರುವ ಒಂದು ಸ್ಥಳಕ್ಕೆ ಬಂದು, ಅಲ್ಲಿ ಮ್ಯಾಸಚೂಸೆಟ್ಸ್ ಬೇ ಕಾಲನಿಯನ್ನು ಸ್ಥಾಪಿಸಿತು. 1640ರಷ್ಟಕ್ಕೆ, ಈ ನ್ಯೂ ಇಂಗ್ಲೆಂಡ್ನಲ್ಲಿ ಸುಮಾರು 20,000 ಮಂದಿ ಇಂಗ್ಲಿಷ್ ವಲಸಿಗರು ವಾಸಿಸುತ್ತಿದ್ದರು. ಮ್ಯಾಸಚೂಸೆಟ್ಸ್ ಬೇ ಕಾಲನಿಯು 1691ರಲ್ಲಿ ಪ್ಲಿಮತ್ ಮೇಲೆ ನಿಯಂತ್ರಣವನ್ನು ಪಡೆದುಕೊಂಡ ಬಳಿಕ, ಪ್ರತ್ಯೇಕತಾವಾದಿ ಪಿಲ್ಗ್ರಿಮರು ಈಗ ನಿಜಾರ್ಥದಲ್ಲಿ ಪ್ರತ್ಯೇಕರಾಗಿ ಉಳಿಯಲಿಲ್ಲ. ಪ್ಯೂರಿಟನರು ನ್ಯೂ ಇಂಗ್ಲೆಂಡಿನ ಧಾರ್ಮಿಕ ಜೀವನದ ಮೇಲೆ ಪ್ರಾಬಲ್ಯವನ್ನು ಪಡೆದುದರಿಂದ ಈಗ ಬಾಸ್ಟನ್ ಎಂಬ ಸ್ಥಳವು ಆ ಪ್ರದೇಶದ ಆಧ್ಯಾತ್ಮಿಕ ಚಟುವಟಿಕೆಯ ಕೇಂದ್ರವಾಯಿತು. ಅವರು ತಮ್ಮ ಆರಾಧನೆಯನ್ನು ಹೇಗೆ ನಡೆಸುತ್ತಿದ್ದರು?
ಪ್ಯೂರಿಟನರ ಆರಾಧನೆ
ಅಮೆರಿಕ ಭೂಖಂಡಕ್ಕೆ ಆಗಮಿಸಿದ ಬಳಿಕ ಪ್ಯೂರಿಟನರು ಮಾಡಿದ ಮೊದಲ ಕೆಲಸ, ತಮ್ಮ ಕೂಟಗಳನ್ನು ನಡೆಸಲಿಕ್ಕಾಗಿ ಮರದಿಂದ ಮನೆಗಳನ್ನು ಕಟ್ಟುವುದೇ ಆಗಿತ್ತು. ಪ್ರತಿ ಭಾನುವಾರ ಬೆಳಗ್ಗೆ ಅವರು ಆ ಮನೆಗಳಲ್ಲಿ ಕೂಡಿಬರುತ್ತಿದ್ದರು. ಹವಾಮಾನವು ಒಳ್ಳೇದಾಗಿದ್ದಾಗ, ಒಳಗಿನ ವಾತಾವರಣವನ್ನು ಸಹಿಸಸಾಧ್ಯವಿತ್ತು. ಆದರೆ ಚಳಿಗಾಲದಲ್ಲಿ ನಡೆಯುತ್ತಿದ್ದ ಕೂಟಗಳು, ಪ್ಯೂರಿಟನರಲ್ಲಿ ಕಲ್ಲಿನಂತೆ ಗಡುಸಾಗಿರುತ್ತಿದ್ದ ವ್ಯಕ್ತಿಗಳ ಸಹನೆಯ ಶಕ್ತಿಯನ್ನೂ ಪರೀಕ್ಷಿಸುತ್ತಿತ್ತು. ಏಕೆಂದರೆ ಆ ಕೂಟದ ಮನೆಗಳಲ್ಲಿ ಶಾಖವನ್ನು ಕೊಡುವಂಥ ಸಲಕರಣೆಗಳಿರಲಿಲ್ಲ. ಕೂಟಕ್ಕೆ ಬಂದಿದ್ದು ಚಳಿಯಿಂದ ನಡುಗುತ್ತಿದ್ದವರು ಸ್ವಲ್ಪ ಸಮಯದೊಳಗೆ ಮರಗಟ್ಟಿಹೋಗುತ್ತಿದ್ದರು. ಪ್ರವಚನಮಾಡುತ್ತಿದ್ದವರು ಹೆಚ್ಚಾಗಿ ಕೈಗವಸುಗಳನ್ನು ಧರಿಸುತ್ತಿದ್ದರು. ಇದರಿಂದಾಗಿ, ಅವರು ಹಾವಭಾವಗಳನ್ನು ಮಾಡುವಾಗ ಅವರ ಕೈಗಳು ಕೋಣೆಯೊಳಗಿನ ಕಡು ಶೀತದ ಗಾಳಿಯಿಂದಾಗಿ ಕಲ್ಲಾಗದಂತೆ ರಕ್ಷಿಸುತ್ತಿದ್ದರು.
ಈ ಪ್ಯೂರಿಟನರು, ತಮ್ಮ ನಂಬಿಕೆಗಳನ್ನು ಫ್ರೆಂಚ್ ಪ್ರಾಟೆಸ್ಟಂಟ್ ಸುಧಾರಕ ಜಾನ್ ಕ್ಯಾಲ್ವಿನ್ನ ಬೋಧನೆಗಳ ಮೇಲಾಧರಿಸಿದರು. ಅವರು ‘ದೈವನಿಯತಿ’ ಎಂಬ ಬೋಧನೆಯನ್ನು ಸ್ವೀಕರಿಸುತ್ತಾ, ದೇವರು ಯಾರನ್ನು ರಕ್ಷಿಸುವನು ಮತ್ತು ಯಾರನ್ನು ನಿತ್ಯ ಬೆಂಕಿಯಿರುವ ನರಕಕ್ಕೆ ದೊಬ್ಬುವನೆಂಬುದನ್ನು ಮೊದಲೇ ನಿರ್ಣಯಿಸಿಕೊಂಡಿರುತ್ತಾನೆಂದು ನಂಬುತ್ತಿದ್ದರು. ಜನರು ಏನೇ ಮಾಡಲಿ, ಅವರು ದೇವರ ಈ ನಿರ್ಣಯವನ್ನು ಬದಲಾಯಿಸಲಾರರೆಂದು ಅವರು ನೆನಸುತ್ತಿದ್ದರು. ಸತ್ತ ಅನಂತರ ಒಬ್ಬ ವ್ಯಕ್ತಿಯು ಪರಲೋಕದಲ್ಲಿನ ಮಂದಮಾರುತಗಳಲ್ಲಿ ಆನಂದಿಸುವನೊ ಇಲ್ಲವೆ ನರಕದಲ್ಲಿ ಸದಾ ದೀಪದಬತ್ತಿಯಂತೆ ಉರಿಯುತ್ತಾ ಇರುವನೊ ಎಂಬುದನ್ನು ಅವನು ತಿಳಿಯಲು ಸಾಧ್ಯವಿರಲಿಲ್ಲ.
ಸಕಾಲದಲ್ಲಿ, ಪ್ಯೂರಿಟನ್ ಪಾದ್ರಿಗಳು ಪಶ್ಚಾತ್ತಾಪದ ಬಗ್ಗೆ ಸಾರಲಾರಂಭಿಸಿದರು. ದೇವರು ಕರುಣಾಮಯಿಯಾಗಿದ್ದರೂ, ಆತನ ನಿಯಮಗಳಿಗೆ ಅವಿಧೇಯರಾಗುವವರು ನೇರವಾಗಿ ನರಕಕ್ಕೆ ಹೋಗುವರೆಂದು ಅವರು ಎಚ್ಚರಿಸಿದರು. ಜನರನ್ನು ಹಿಡಿತದಲ್ಲಿಡಲಿಕ್ಕಾಗಿ ಆ ಪ್ರವಚನಗಾರರು ಒಂದರ್ಥದಲ್ಲಿ ನರಕದ ಬೆಂಕಿಗೆ ಉರುವಲು ಹಾಕುತ್ತಾ ಇದ್ದು, ಅದನ್ನು ಬಿಸಿಯಾಗಿಯೇ ಇಡುತ್ತಿದ್ದರು. 18ನೇ ಶತಮಾನದ ಜಾನಥನ್ ಎಡ್ವರ್ಡ್ಸ್ ಎಂಬ ಪ್ರವಚಕನು ಒಮ್ಮೆ, “ಕ್ರೋಧಿತನಾದ ದೇವರ ಕೈಯಲ್ಲಿರುವ ಪಾಪಿಗಳು” ಎಂಬ ವಿಷಯದ ಮೇಲೆ ಭಾಷಣವನ್ನು ಕೊಟ್ಟನು. ನರಕದ ಕುರಿತು ಅವನು ಕೊಟ್ಟ ವಿವರಣೆಗಳು ಎಷ್ಟು ಹೆದರಿಸುವಂಥದ್ದಾಗಿದ್ದವೆಂದರೆ, ಕೂಡಿಬಂದವರಲ್ಲಿ ಆ ಪ್ರಸಂಗಕ್ಕೆ ಕಿವಿಗೊಟ್ಟು ತಲ್ಲಣಗೊಂಡಿದ್ದವರಿಗೆ ಇತರ ಪಾದ್ರಿಗಳು ಭಾವನಾತ್ಮಕ ನೆರವನ್ನು ಕೊಡಬೇಕಾಯಿತು.
ಹೊರಗಿನ ಸ್ಥಳಗಳಿಂದ ಪ್ರವಚನಗಾರರು ಮ್ಯಾಸಚೂಸೆಟ್ಸ್ಗೆ ಬಂದು ಸಾರುತ್ತಿದ್ದಲ್ಲಿ ಅವರು ತಮ್ಮ ಜೀವವನ್ನು ಅಪಾಯದಲ್ಲಿ ಹಾಕುತ್ತಿದ್ದರು. ಉದಾಹರಣೆಗೆ, ಕ್ವೇಕರ್ ಪಂಥದ ಪ್ರವಚಕಳಾದ ಮೇರಿ ಡೈಯರ್ ಅನ್ನು ಮ್ಯಾಸಚೂಸೆಟ್ಸ್ನ ಅಧಿಕಾರಿಗಳು ಮೂರು ಸಲ ಅಲ್ಲಿಂದ ಹೊರಗಟ್ಟಿದ್ದರು. ಆದರೆ ಪ್ರತಿ ಸಲ ಅವಳು ವಾಪಸ್ಸು ಬಂದು ತನ್ನ ಅಭಿಪ್ರಾಯಗಳನ್ನು ಸಾರುತ್ತಿದ್ದಳು. ಕೊನೆಗೆ ಅವರು 1660ರ ಜೂನ್ 1ರಂದು ಅವಳನ್ನು ಗಲ್ಲಿಗೇರಿಸಿದರು. ಫಿಲಿಪ್ ರ್ಯಾಟ್ಕ್ಲಿಫ್ ಎಂಬವನು, ಪ್ಯೂರಿಟನ್ ಮುಖಂಡರು ತಮ್ಮ ವಿರೋಧಿಗಳನ್ನು ಎಷ್ಟು ‘ಹುರುಪಿನಿಂದ’ ದುರುಪಚರಿಸುತ್ತಿದ್ದರೆಂಬುದನ್ನು ಮರೆತಿದ್ದನೆಂದು ತೋರುತ್ತದೆ. ಅವನು ಸರಕಾರದ ವಿರುದ್ಧ ಮತ್ತು ಸೇಲಮ್ ಚರ್ಚಿನ ವಿರುದ್ಧ ಮಾಡಿದಂಥ ಭಾಷಣಗಳಿಗಾಗಿ ಅವನನ್ನು ಕೊರಡೆಗಳಿಂದ ಹೊಡೆಯಲಾಯಿತು ಮತ್ತು ದಂಡವಿಧಿಸಲಾಯಿತು. ಅವನು ಇದನ್ನು ಮರೆಯದಂತೆ, ಅನಂತರ ಅವನ ಕಿವಿಗಳನ್ನು ಕತ್ತರಿಸಿ ಅವನನ್ನು ಅಲ್ಲಿಂದ ಹೊರಗಟ್ಟಲಾಯಿತು. ಈ ರೀತಿಯಲ್ಲಿ ಪ್ಯೂರಿಟನರು ತೋರಿಸುತ್ತಿದ್ದ ಅಸಹಿಷ್ಣುತೆಯು ಜನರು ಮ್ಯಾಸಚೂಸೆಟ್ಸ್ ಅನ್ನು ಬಿಟ್ಟುಹೋಗುವಂತೆ ಮಾಡಿತು, ಮತ್ತು ಇದರಿಂದಾಗಿ ಬೇರೆ ನೆಲೆಸುನಾಡುಗಳು ಬೆಳೆದವು.
ಅಹಂಕಾರದಿಂದಾಗಿ ಹಿಂಸಾಚಾರ
ತಾವು ದೇವರಿಂದ ‘ಚುನಾಯಿತರು’ ಎಂದು ನೆನಸುತ್ತಾ, ಅನೇಕ ಪ್ಯೂರಿಟನರು ಆ ದೇಶದ ಮೂಲನಿವಾಸಿಗಳನ್ನು ಅಲ್ಲಿನ ಅಕ್ರಮ ವಸತಿದಾರರೆಂಬಂತೆ ಕೀಳಾಗಿ ದೃಷ್ಟಿಸುತ್ತಿದ್ದರು. ಈ ಮನೋಭಾವವು ಪ್ಯೂರಿಟನರ ಮತ್ತು ಮೂಲನಿವಾಸಿಗಳ ನಡುವೆ ಅಸಮಾಧಾನವನ್ನು ಹುಟ್ಟಿಸಿತು ಮತ್ತು ಇದರಿಂದಾಗಿ ಮೂಲನಿವಾಸಿಗಳು ಆಕ್ರಮಣಮಾಡಲಾರಂಭಿಸಿದರು. ಆದುದರಿಂದ ಪ್ಯೂರಿಟನರ ಮುಖಂಡರು ಸಬ್ಬತ್ ದಿನಕ್ಕೆ ಸಂಬಂಧಪಟ್ಟ ನಿಯಮಗಳನ್ನು ಸಡಿಲಿಸಿ, ಪುರುಷರು ಆರಾಧನಾಸ್ಥಳಗಳಿಗೆ ಹೋಗುತ್ತಿರುವಾಗ ಬಂದೂಕುಗಳನ್ನೂ ಹೊತ್ತುಕೊಂಡು ಹೋಗಬಹುದೆಂದು ಅನುಮತಿಕೊಟ್ಟರು. ತದನಂತರ 1675ರಲ್ಲಿ ಪರಿಸ್ಥಿತಿಯು ಇನ್ನೂ ಹದಗೆಟ್ಟಿತು.
ತನ್ನ ಜನರ ಕ್ಷೇತ್ರವು ಕಬಳಿಸಲ್ಪಡುತ್ತಿರುವುದನ್ನು ನೋಡಿ ವಾಂಪನಾಓಗ್ ಅಮೆರಿಕನ್ ಇಂಡಿಯನರ, ರಾಜ ಫಿಲಿಪ್ಪನೆಂದು ಪ್ರಸಿದ್ಧನಾಗಿರುವ ಮೆಟಕಾಮೆಟನು ಪ್ಯೂರಿಟನರ ಪಾಳೆಯಗಳ ಮೇಲೆ ದಾಳಿಮಾಡಲಾರಂಭಿಸಿ, ಅವರ ಮನೆಗಳನ್ನು ಸುಟ್ಟುಹಾಕಿದನು ಮತ್ತು ಅಲ್ಲಿನ ನಿವಾಸಿಗಳ ಹತ್ಯೆಮಾಡಿದನು. ಇದಕ್ಕಾಗಿ ಪ್ಯೂರಿಟನರು ಸೇಡುತೀರಿಸಿದರು, ಮತ್ತು ಹೀಗೆ ಈ ಹೋರಾಟವು ಅನೇಕ ತಿಂಗಳುಗಳ ವರೆಗೆ ನಡೆಯಿತು. 1676ರ ಆಗಸ್ಟ್ ತಿಂಗಳಿನಲ್ಲಿ ಪ್ಯೂರಿಟನರು ರಾಜ ಫಿಲಿಪ್ಪನನ್ನು ರ್ಹೋಡ್ ದ್ವೀಪದಲ್ಲಿ ಸೆರೆಹಿಡಿದರು. ಅವರು ಅವನ ಶಿರಚ್ಛೇದನಮಾಡಿ, ದೇಹವನ್ನು ಎಳೆದು ತುಂಡರಿಸಿದರು. ನ್ಯೂ ಇಂಗ್ಲೆಂಡಿನ ಮೂಲನಿವಾಸಿಗಳ ಸ್ವತಂತ್ರ ಜೀವನ ಮತ್ತು ರಾಜ ಫಿಲಿಪ್ಪನು ಮಾಡಿದ ಯುದ್ಧವು ಹೀಗೆ ಕೊನೆಗೊಂಡಿತು.
ಹದಿನೆಂಟನೆಯ ಶತಮಾನದಲ್ಲಿ ಪ್ಯೂರಿಟನರು ತಮ್ಮ ಹುರುಪನ್ನು ಒಂದು ಹೊಸ ವಿಧಾನದಲ್ಲಿ ತೋರಿಸಲಾರಂಭಿಸಿದರು. ಮ್ಯಾಸಚೂಸೆಟ್ಸ್ನಲ್ಲಿದ್ದ ಕೆಲವು ಪಾದ್ರಿಗಳು ಇಂಗ್ಲಿಷರ ಆಳ್ವಿಕೆಯನ್ನು ಹೀಯಾಳಿಸಿ ಮಾತಾಡಿದರು ಮತ್ತು ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿದರು. ಕ್ರಾಂತಿಯ ಕುರಿತಾದ ಚರ್ಚೆಗಳಲ್ಲಿ ಅವರು ರಾಜಕೀಯ ಮತ್ತು ಧರ್ಮವನ್ನು ಬೆರೆಸಿದರು.
ಪ್ಯೂರಿಟನರು ಹೆಚ್ಚಾಗಿ ಪರಿಶ್ರಮಿ ಜೀವಿಗಳು, ಧೀರರು ಮತ್ತು ತಮ್ಮ ಧರ್ಮಕ್ಕೆ ನಿಷ್ಠರಾಗಿದ್ದ ಜನರಾಗಿದ್ದರು. ಈಗಲೂ ಜನರು ಒಳ್ಳೇ ಶೀಲವಂತ ನಡತೆ ಹಾಗೂ ಪ್ರಾಮಾಣಿಕತೆಯ ಬಗ್ಗೆ ಮಾತಾಡುವಾಗ ಅವರಿಗೆ ಸೂಚಿಸುತ್ತಾರೆ. ಆದರೆ ಯಥಾರ್ಥವಾಗಿ ಧರ್ಮವನ್ನು ಪಾಲಿಸುವುದರಿಂದ ಮಾತ್ರ ಒಬ್ಬನು ನಂಬುವಂಥ ಸುಳ್ಳು ಬೋಧನೆಗಳು ಸರಿಯಾಗಿ ಬಿಡುವುದಿಲ್ಲ. ಯೇಸು ಕ್ರಿಸ್ತನು ರಾಜಕೀಯ ಮತ್ತು ಧರ್ಮವನ್ನು ಬೆರೆಸುವುದರಿಂದ ದೂರವಿದ್ದನು. (ಯೋಹಾನ 6:15; 18:36) ಮತ್ತು ಪಾಶವೀಯ ನಡತೆಯು ಈ ಪ್ರಮುಖ ಸತ್ಯಕ್ಕೆ ವಿರೋಧದಲ್ಲಿದೆ: “ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು.”—1 ಯೋಹಾನ 4:8.
ನಿಮ್ಮ ಧರ್ಮವು ನರಕಾಗ್ನಿ, ದೈವನಿಯತಿ ಅಥವಾ ಬೇರೆ ಬೈಬಲೇತರ ಬೋಧನೆಗಳನ್ನು ಕಲಿಸುತ್ತದೊ? ನಿಮ್ಮ ಧಾರ್ಮಿಕ ಮುಖಂಡರು ರಾಜಕೀಯ ಚಳುವಳಿಗಳಲ್ಲಿ ಸೇರುತ್ತಾರೊ? ದೇವರ ವಾಕ್ಯವಾಗಿರುವ ಬೈಬಲಿನ ಪ್ರಾಮಾಣಿಕ ಅಧ್ಯಯನವು, ನಿಜವಾಗಿಯೂ ಶುದ್ಧವಾಗಿರುವ ಮತ್ತು ದೇವರಿಗೆ ಸ್ವೀಕರಣೀಯವಾಗಿರುವ ‘ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿಯನ್ನು’ ಇಲ್ಲವೆ ಧರ್ಮವನ್ನು ಕಂಡುಹಿಡಿಯುವಂತೆ ನಿಮಗೆ ಸಹಾಯಮಾಡುವುದು.—ಯಾಕೋಬ 1:27. (g 2/06)
[[Box/Picture on page 29]
ಪ್ಯೂರಿಟನರು ಮತ್ತು ನರಕಾಗ್ನಿ
ನರಕಾಗ್ನಿಯ ಬಗ್ಗೆ ಸಾರುವ ಮೂಲಕ, ಪ್ಯೂರಿಟನರು ದೇವರ ವಾಕ್ಯಕ್ಕೆ ವಿರುದ್ಧವಾದದ್ದನ್ನು ಕಲಿಸಿದರು. ಸತ್ತವರು ಪ್ರಜ್ಞೆಯಿಲ್ಲದವರಾಗಿದ್ದಾರೆ ಎಂದು ಬೈಬಲ್ ಕಲಿಸುತ್ತದೆ. ಈ ಕಾರಣದಿಂದ ಅವರು ನೋವನ್ನಾಗಲಿ ಸುಖವನ್ನಾಗಲಿ ಅನುಭವಿಸಲಾರರು. (ಪ್ರಸಂಗಿ 9:5, 10) ಅದಲ್ಲದೆ, ಚಿತ್ರಹಿಂಸೆ ಕೊಡುವ ವಿಚಾರವು ಎಂದಿಗೂ ಸತ್ಯ ದೇವರ “ಮನಸ್ಸಿನಲ್ಲಿ ಹುಟ್ಟಲೂ ಇಲ್ಲ.” (ಯೆರೆಮೀಯ 19:5; 1 ಯೋಹಾನ 4:8) ಜನರು ತಮ್ಮ ಜೀವನಗಳನ್ನು ಬದಲಾಯಿಸುವಂತೆ ಆತನು ವಿನಂತಿಸುತ್ತಾನೆ, ಮತ್ತು ಪಶ್ಚಾತ್ತಾಪಪಡದ ತಪ್ಪಿತಸ್ಥರನ್ನು ಸಹ ಕರುಣಾಭರಿತ ರೀತಿಯಲ್ಲಿ ಉಪಚರಿಸುತ್ತಾನೆ. (ಯೆಹೆಜ್ಕೇಲ 33:11) ಈ ಶಾಸ್ತ್ರಾಧಾರಿತ ಸತ್ಯಗಳಿಗೆ ವಿರುದ್ಧವಾಗಿ, ಪ್ಯೂರಿಟನ್ ಪ್ರವಚನಗಾರರು ದೇವರು ಕ್ರೂರಿ ಹಾಗೂ ಸೇಡುತೀರಿಸುವವನು ಎಂಬ ಚಿತ್ರಣವನ್ನು ಕೊಟ್ಟರು. ವಿರೋಧಿಗಳ ಬಾಯಿಮುಚ್ಚಿಸಲು ಬಲತ್ಕಾರಪ್ರಯೋಗ ಮಾಡುವುದನ್ನು ಒಳಗೂಡಿದ್ದ ಒಂದು ಕಠೋರ ಜೀವನರೀತಿಯನ್ನು ಸಹ ಅವರು ಪ್ರವರ್ಧಿಸಿದರು.
[ಪುಟ 26ರಲ್ಲಿರುವ ಚಿತ್ರ]
ಪಿಲ್ಗ್ರಿಮರು ಉತ್ತರ ಅಮೆರಿಕದಲ್ಲಿ ಬಂದಿಳಿಯುತ್ತಿರುವುದು, 1620
[ಕೃಪೆ]
Harper’s Encyclopædia of United States History
[ಪುಟ 28ರಲ್ಲಿರುವ ಚಿತ್ರ]
ಮೊದಲ ಕೃತಜ್ಞತಾ ನಿವೇದನೆಯ ದಿನವನ್ನು ಆಚರಿಸುವುದು, 1621
[ಪುಟ 28ರಲ್ಲಿರುವ ಚಿತ್ರ]
ಮ್ಯಾಸಚೂಸೆಟ್ಸ್ನಲ್ಲಿ ಪ್ಯೂರಿಟನರ ಕೂಟದ ಸ್ಥಳ
[ಪುಟ 28ರಲ್ಲಿರುವ ಚಿತ್ರ]
ಜಾನ್ ಕ್ಯಾಲ್ವಿನ್
[ಪುಟ 28ರಲ್ಲಿರುವ ಚಿತ್ರ]
ಜಾನಥನ್ ಎಡ್ವರ್ಡ್ಸ್
[ಪುಟ 29ರಲ್ಲಿರುವ ಚಿತ್ರ]
ಚರ್ಚಿಗೆ ಹೋಗುತ್ತಿರುವ ಶಸ್ತ್ರಸಜ್ಜಿತ ಪ್ಯೂರಿಟನ್ ದಂಪತಿ
[ಪುಟ 27ರಲ್ಲಿರುವ ಚಿತ್ರ ಕೃಪೆ]
Library of Congress, Prints & Photographs Division
[ಪುಟ 28ರಲ್ಲಿರುವ ಚಿತ್ರ ಕೃಪೆ]
ಮೇಲೆ ಎಡಕ್ಕೆ: Snark/Art Resource, NY; ಮೇಲೆ ಬಲಕ್ಕೆ: Harper’s Encyclopædia of United States History; ಜಾನ್ ಕ್ಯಾಲ್ವಿನ್: Portrait in Paul Henry’s Life of Calvin, from the book The History of Protestantism (Vol. II); ಜಾನಥನ್ ಎಡ್ವರ್ಡ್ಸ್: Dictionary of American Portraits/Dover
[ಪುಟ 29ರಲ್ಲಿರುವ ಚಿತ್ರ ಕೃಪೆ]
ಫೋಟೋಗಳು: North Wind Picture Archives