ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g04 10/8 ಪು. 24-27
  • ಬಿಯರ್‌—ಹೊಂಬಣ್ಣದ ಪಾನೀಯದ ಕಥೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬಿಯರ್‌—ಹೊಂಬಣ್ಣದ ಪಾನೀಯದ ಕಥೆ
  • ಎಚ್ಚರ!—2004
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬಿಯರ್‌ ತಯಾರಿಕೆಯು ಎಷ್ಟು ದೀರ್ಘ ಇತಿಹಾಸವನ್ನು ಹೊಂದಿದೆ?
  • ಅದು ನಿಮ್ಮ ಗ್ಲಾಸನ್ನು ತಲಪುವುದಕ್ಕೆ ಮೊದಲು
  • ಬಹುಮುಖಗಳುಳ್ಳ ಬಿಯರ್‌
  • ಮದ್ಯಪಾನೀಯಗಳ ವಿಷಯದಲ್ಲಿ ನಿಮಗೆ ದೈವಿಕವಾದ ನೋಟವಿದೆಯೊ?
    ಕಾವಲಿನಬುರುಜು—1996
  • ಮದ್ಯಪಾನ ನಿಜವಾಗಿಯೂ ನನ್ನನ್ನು ವ್ಯಸನಿಯಾಗಿ ಮಾಡಬಲ್ಲದೊ?
    ಎಚ್ಚರ!—1993
ಎಚ್ಚರ!—2004
g04 10/8 ಪು. 24-27

ಬಿಯರ್‌—ಹೊಂಬಣ್ಣದ ಪಾನೀಯದ ಕಥೆ

ಚೆಕ್‌ ರಿಪಬ್ಲಿಕ್‌ನಲ್ಲಿರುವ ಎಚ್ಚರ! ಲೇಖಕರಿಂದ

ಅನೇಕವೇಳೆ ತುಂಬ ದಾಹಗೊಂಡಿರುವ ವ್ಯಕ್ತಿಯೊಬ್ಬನ ಬಯಕೆ ಏನಾಗಿರುತ್ತದೆ? ಅನೇಕ ದೇಶಗಳಲ್ಲಿ, ಒಬ್ಬ ಕೂಲಿಯಾಳಾಗಿರಲಿ ಅಥವಾ ವಾಣಿಜ್ಯೋದ್ಯಮಿಯಾಗಿರಲಿ, ಅವನು ತನ್ನ ಅಚ್ಚುಮೆಚ್ಚಿನ ಒಂದು ಗ್ಲಾಸ್‌ ಹೊಂಬಣ್ಣದ ಪಾನೀಯವನ್ನು ಕುಡಿಯುವುದರ ಕುರಿತು ಆಲೋಚಿಸಬಹುದು. ಮೇಲೆ ನೊರೆಭರಿತವಾದ, ಆಹ್ಲಾದಕರವಾದ ಕಹಿ ರುಚಿಯಿಂದ ಕೂಡಿರುವ ಪಾನೀಯವು ಅವನ ಮನಸ್ಸಿಗೆ ಬರಬಹುದು. ಆಗ ಅವನು ತನ್ನಷ್ಟಕ್ಕೇ, ‘ಒಂದು ಗ್ಲಾಸ್‌ ತಣ್ಣನೆಯ ಬಿಯರ್‌ಗೆ ನಾನು ಎಷ್ಟೇ ಹಣವನ್ನು ತೆರಲು ಸಿದ್ಧ!’ ಎಂದು ಹೇಳಿಕೊಳ್ಳಬಹುದು.

ಬಿಯರ್‌ ಬಹುಮಟ್ಟಿಗೆ ಮಾನವಕುಲದಷ್ಟೇ ಪುರಾತನ ಇತಿಹಾಸವನ್ನು ಹೊಂದಿದೆ. ಅನೇಕ ಸಹಸ್ರಮಾನಗಳಿಂದ ಅದು ತನ್ನ ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ, ಮತ್ತು ಅನೇಕ ಪ್ರದೇಶಗಳಲ್ಲಿ ಸ್ಥಳಿಕ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ವಿಶೇಷವಾಗಿ, ಕೆಲವು ಐರೋಪ್ಯ ದೇಶಗಳಲ್ಲಿ, ಯಾರು ವಿಪರೀತ ಬಿಯರ್‌ ಸೇವಿಸುತ್ತಾರೋ ಅವರಿಗೆ ಇದು ಸಮಸ್ಯೆಗಳ ಮೂಲವಾಗಿ ಪರಿಣಮಿಸಿರುವುದು ವಿಷಾದಕರ ಸಂಗತಿಯಾಗಿದೆ. ಆದರೆ ಇದನ್ನು ಮಿತವಾಗಿ ಬಳಸುವಾಗ, ಇದರ ವಿಶಿಷ್ಟ ಗುಣಲಕ್ಷಣಗಳು ಹಾಗೂ ರುಚಿಯು, ಇದನ್ನು ಕುಡಿಯುವುದನ್ನು ತುಂಬ ಆಹ್ಲಾದಕರವಾದದ್ದಾಗಿ ಮಾಡುತ್ತದೆ. ಈ ಜನಪ್ರಿಯ ಪಾನೀಯದ ಇತಿಹಾಸವನ್ನು ನಾವೀಗ ಪರಿಶೀಲಿಸೋಣ.

ಬಿಯರ್‌ ತಯಾರಿಕೆಯು ಎಷ್ಟು ದೀರ್ಘ ಇತಿಹಾಸವನ್ನು ಹೊಂದಿದೆ?

ಮೆಸಪೊಟೇಮ್ಯದ ಪುರಾತನ ಸುಮೇರಿಯನರ ಕ್ಷೇತ್ರದಲ್ಲಿ ಕಂಡುಬಂದ ಬೆಣೆಲಿಪಿ ಶಾಸನಗಳಿಂದ ಸೂಚಿಸಲ್ಪಟ್ಟಂತೆ, ಸಾ.ಶ.ಪೂ. ಮೂರನೆಯ ಸಹಸ್ರಮಾನದಷ್ಟು ಆರಂಭದಲ್ಲೇ ಅಲ್ಲಿ ಬಿಯರ್‌ ಲಭ್ಯವಿತ್ತು. ಅದೇ ಕಾಲಾವಧಿಯಲ್ಲಿ, ಈ ಪಾನೀಯವು ಬಾಬೆಲಿನವರಿಂದ ಹಾಗೂ ಐಗುಪ್ತ್ಯದವರಿಂದಲೂ ಉಪಯೋಗಿಸಲ್ಪಡುತ್ತಿತ್ತು. ಬಾಬೆಲಿನಲ್ಲಿ 19 ವಿಭಿನ್ನ ರೀತಿಯ ಬಿಯರ್‌ಗಳು ತಯಾರಿಸಲ್ಪಡುತ್ತಿದ್ದವು. ಮತ್ತು ಹಮ್ಮುರಾಬಿಯ ನಿಯಮಾವಳಿಯಲ್ಲಿ ಒಳಗೂಡಿದ್ದ ನಿಯಮಗಳಿಂದಲೂ ಬಿಯರ್‌ ತಯಾರಿಕೆಯು ನಿಯಂತ್ರಿಸಲ್ಪಟ್ಟಿತ್ತು. ಉದಾಹರಣೆಗೆ ಈ ನಿಯಮಗಳು ಬಿಯರ್‌ನ ಬೆಲೆ ಎಷ್ಟಾಗಿರಬೇಕೆಂಬುದನ್ನು ನಿಷ್ಕರ್ಷಿಸುತ್ತಿದ್ದವು, ಮತ್ತು ಈ ನಿಯಮಗಳ ಉಲ್ಲಂಘನೆಯು ಮರಣದಂಡನೆಗೆ ಅರ್ಹವಾಗಿತ್ತು. ಪುರಾತನ ಐಗುಪ್ತದಲ್ಲಿ ಬಿಯರ್‌ ತಯಾರಿಕೆಯು ವ್ಯಾಪಕವಾಗಿತ್ತು, ಮತ್ತು ಅದು ಅಚ್ಚುಮೆಚ್ಚಿನ ಪಾನೀಯವಾಗಿತ್ತು. ಅಲ್ಲಿನ ಪ್ರಾಕ್ತನಶಾಸ್ತ್ರದ ಭೂಶೋಧನೆಗಳು, ಬಿಯರ್‌ ತಯಾರಿಕೆಯ ಅತ್ಯಂತ ಪುರಾತನ ಲಿಖಿತ ಪಾಕವಿಧಾನವನ್ನು ಬಯಲುಪಡಿಸಿದವು.

ಬಿಯರ್‌ ತಯಾರಿಕೆಯ ಕಾರ್ಯವಿಧಾನವು ಕಾಲಕ್ರಮೇಣ ಯೂರೋಪಿಗೂ ಹಬ್ಬಿತು. ಸಾಮಾನ್ಯ ಶಕದ ಆರಂಭದಲ್ಲಿನ ಕೆಲವು ರೋಮನ್‌ ಇತಿಹಾಸಗಾರರು, ಕೆಲ್ಟರು, ಜರ್ಮನರು, ಮತ್ತು ಬೇರೆ ಕುಲಗಳ ಜನರು ಬಿಯರನ್ನು ಆಸ್ವಾದಿಸುತ್ತಿದ್ದರು ಎಂದು ತಿಳಿಸಿದರು. ನಾರ್ಡಿಕ್‌ ಕುಲದ ದಂತಕಥೆಗನುಸಾರ, ಕದನದಲ್ಲಿ ಕೊಲ್ಲಲ್ಪಟ್ಟ ವೀರರ ಆತ್ಮಗಳು ಭೋಗಪಡುವ ಸ್ವರ್ಗಮಂದಿರದಲ್ಲಿಯೂ ಪುರುಷರಿಗೆ ಯಥೇಚ್ಛವಾಗಿ ಬೀಯರ್‌ ಸಿಗುತ್ತದೆ ಎಂಬುದು ವೈಕಿಂಗ್‌ ಜನರ ನಂಬಿಕೆಯಾಗಿತ್ತು.

ಯೂರೋಪಿನಲ್ಲಿ ಮಧ್ಯಯುಗಗಳ ಸಮಯದಲ್ಲಿ, ಬಿಯರ್‌ ತಯಾರಿಕೆಯು ಅನೇಕವೇಳೆ ಸಂನ್ಯಾಸಿ ಮಠಗಳಲ್ಲಿ ಮಾಡಲ್ಪಡುತ್ತಿತ್ತು. ಐರೋಪ್ಯ ಸಂನ್ಯಾಸಿಗಳು ಹಾಪ್‌ಕಾಯಿಗಳನ್ನು ಸಂರಕ್ಷಕ ಪದಾರ್ಥವಾಗಿ ಉಪಯೋಗಿಸುವ ಮೂಲಕ ಈ ತಯಾರಿಕೆಯ ಪ್ರಕ್ರಿಯೆಯನ್ನು ಉತ್ತಮಗೊಳಿಸಿದರು. ಹತ್ತೊಂಬತ್ತನೆಯ ಶತಮಾನದ ಔದ್ಯೋಗೀಕರಣವು, ಬಿಯರ್‌ ತಯಾರಿಕೆಗಾಗಿ ಯಂತ್ರಗಳ ಬಳಕೆಯನ್ನು ಪರಿಚಯಿಸಿತು ಮತ್ತು ಈ ಜನಪ್ರಿಯ ಪಾನೀಯದ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಗಿ ಪರಿಣಮಿಸಿತು. ತದನಂತರ, ತುಂಬ ಪ್ರಾಮುಖ್ಯವಾದ ಕೆಲವು ವೈಜ್ಞಾನಿಕ ಶೋಧನೆಗಳು ಬೆಳಕಿಗೆ ಬಂದವು.

ಫ್ರೆಂಚ್‌ ರಸಾಯನ ವಿಜ್ಞಾನಿ ಹಾಗೂ ಸೂಕ್ಷ್ಮಜೀವಿ ವಿಜ್ಞಾನಿಯಾಗಿದ್ದ ಲೂಯಿ ಪಾಶ್ಚರನು, ಬಿಯರಿನ ಹುದುಗುವಿಕೆಯನ್ನು ಉಂಟುಮಾಡುತ್ತಿದ್ದ ಯೀಸ್ಟಿನಲ್ಲಿ ಸಜೀವ ಜೀವಾಣುಗಳು ಇವೆ ಎಂಬುದನ್ನು ಕಂಡುಹಿಡಿದನು. ಈ ಕಂಡುಹಿಡಿತವು, ಶರ್ಕರವು ಆಲ್ಕೊಹಾಲ್‌ ಆಗಿ ಮಾರ್ಪಡುವುದನ್ನು ನಿರ್ದಿಷ್ಟ ಮಟ್ಟದಲ್ಲಿ ನಿಯಂತ್ರಿಸಲು ಸಹಾಯಮಾಡಿತು. ಡ್ಯಾನಿಷ್‌ ಸಸ್ಯಶಾಸ್ತ್ರಜ್ಞನಾಗಿದ್ದ ಐಮೀಲ್‌ ಕ್ರೇಸ್ಟ್ಯನ್‌ ಹ್ಯಾನ್ಸನ್‌, ಬಿಯರ್‌ ತಯಾರಿಕೆಯ ಇತಿಹಾಸದಲ್ಲಿ ತುಂಬ ಗಣ್ಯಪುರುಷನಾಗಿ ಹೆಸರುವಾಸಿಯಾದನು. ತನ್ನ ಜೀವಮಾನದಾದ್ಯಂತ ಅವನು ಬೇರೆ ಬೇರೆ ರೀತಿಯ ಯೀಸ್ಟ್‌ಗಳ ಕುರಿತು ಸಂಶೋಧನೆ ನಡೆಸಿದನು ಮತ್ತು ಅವುಗಳನ್ನು ವರ್ಗೀಕರಿಸಿದನು. ಬೇರೆ ಕೆಲಸಗಳೊಂದಿಗೆ, ಬಿಯರ್‌ ತಯಾರಿಕೆಯಲ್ಲಿ ಉಪಯೋಗಿಸಲಿಕ್ಕಾಗಿ ವಿಶೇಷ ರೀತಿಯ ಯೀಸ್ಟನ್ನು ಉತ್ಪಾದಿಸುವುದು ಅವನ ಸಂಶೋಧನೆಯಲ್ಲಿ ಒಳಗೂಡಿತ್ತು. ಈ ರೀತಿಯಲ್ಲಿ, ಬಿಯರ್‌ ತಯಾರಿಕೆಯ ಉದ್ಯಮದಲ್ಲಿ ಹ್ಯಾನ್ಸನ್‌ ಅಕ್ಷರಾರ್ಥವಾಗಿ ಕ್ರಾಂತಿಕಾರಕ ಬದಲಾವಣೆಯನ್ನೇ ಉಂಟುಮಾಡಿದನು.

ಆದರೆ ಬಿಯರ್‌ ತಯಾರಿಕೆಯು ಅಷ್ಟೊಂದು ಕಷ್ಟಕರವಾದ ಕೆಲಸವಾಗಿದೆಯೋ? ಇದನ್ನು ನಂಬುವುದು ಕಷ್ಟಕರವಾಗಿರಬಹುದು, ಆದರೆ ಇದು ನಿಜವಾಗಿಯೂ ಕಷ್ಟಕರವಾದ ಕೆಲಸವಾಗಿದೆ. ತುಂಬ ಸ್ವಾದಿಷ್ಟಕರವಾಗಿರುವ ಒಂದು ಗ್ಲಾಸ್‌ ಬಿಯರಿನ ಹಿಂದೆ ಅಡಗಿರುವ ರಹಸ್ಯವನ್ನು ನಾವೀಗ ಸಂಕ್ಷಿಪ್ತವಾಗಿ ಪರಿಗಣಿಸೋಣ.

ಅದು ನಿಮ್ಮ ಗ್ಲಾಸನ್ನು ತಲಪುವುದಕ್ಕೆ ಮೊದಲು

ಶತಮಾನಗಳಾದ್ಯಂತ ಬಿಯರ್‌ ತಯಾರಿಕೆಯ ಕಾರ್ಯವಿಧಾನವು ಗಮನಾರ್ಹವಾಗಿ ಬದಲಾವಣೆಹೊಂದಿತು ಮತ್ತು ಇಂದಿಗೂ ಪ್ರತಿಯೊಂದು ಬಟ್ಟಿಯಿಳಿಸುವ ಮನೆಯಲ್ಲೂ ಇದರ ವಿಧಾನವು ಭಿನ್ನ ಭಿನ್ನವಾಗಿರುತ್ತದೆ. ಆದರೆ, ಒಟ್ಟಿನಲ್ಲಿ ಬಹುಮಟ್ಟಿಗೆ ಎಲ್ಲಾ ಬಿಯರುಗಳಲ್ಲಿ ನಾಲ್ಕು ಮುಖ್ಯ ಪದಾರ್ಥಗಳು ಒಳಗೂಡಿರುತ್ತವೆ: ಬಾರ್ಲಿ, ಹಾಪ್‌ಕಾಯಿ, ನೀರು, ಮತ್ತು ಯೀಸ್ಟ್‌. ಬಿಯರ್‌ ತಯಾರಿಕೆಯ ಇಡೀ ಪ್ರಕ್ರಿಯೆಯನ್ನು ನಾಲ್ಕು ಮುಖ್ಯ ಹಂತಗಳಾಗಿ ವಿಭಾಗಿಸಸಾಧ್ಯವಿದೆ: ಮಾಲ್ಟಿಂಗ್‌ (ಮೊಳಕೆಬರಿಸುವಿಕೆ), ಮೊಳೆತ ಧಾನ್ಯದ ಕಷಾಯದ ತಯಾರಿಕೆ, ಹುದುಗೇಳಿಸುವಿಕೆ, ಮತ್ತು ಪಕ್ವವಾಗಿಸುವಿಕೆ (ಮ್ಯಾಟ್ಯುರೇಷನ್‌).

ಮಾಲ್ಟಿಂಗ್‌. ಈ ಹಂತದಲ್ಲಿ, ಬಾರ್ಲಿಯನ್ನು ವಿಂಗಡಿಸಿ ತೂಕಮಾಡಿ ಆರಿಸಿ ಸ್ವಚ್ಛಗೊಳಿಸಲಾಗುತ್ತದೆ. ತದನಂತರ, ಇದನ್ನು ನೀರಿನಲ್ಲಿ ನೆನೆಸಲಾಗುತ್ತದೆ​—⁠ಬಾರ್ಲಿಯು ಮೊಳಕೆಯೊಡೆಯಬೇಕಾದರೆ ಹೀಗೆ ಮಾಡುವ ಅಗತ್ಯವಿದೆ. ಐದರಿಂದ ಏಳು ದಿನಗಳ ನಡುವೆ, ಸುಮಾರು 14°C ಉಷ್ಣತೆಯಲ್ಲಿ ಮೊಳಕೆಯೊಡೆಯುವಿಕೆಯು ನಡೆಯುತ್ತದೆ. ಈ ಪ್ರಕ್ರಿಯೆಯ ಅಂತಿಮ ಉತ್ಪನ್ನವು ಹಸಿರು ಮಾಲ್ಟ್‌ ಆಗಿದ್ದು, ಇದನ್ನು ಒಣಗಿಸುವ ಕಾರ್ಯವಿಧಾನಕ್ಕಾಗಿ ಕಿಲ್ನ್‌ ಎಂಬ ಗೂಡೊಲೆಗಳಿಗೆ ಸ್ಥಳಾಂತರಿಸಲಾಗುತ್ತದೆ. ಮೊಳಕೆಯೊಡೆಯುವಿಕೆಯನ್ನು ನಿಲ್ಲಿಸಲಿಕ್ಕಾಗಿ ಹಸಿರು ಮಾಲ್ಟ್‌ನಲ್ಲಿರುವ ತೇವಾಂಶವನ್ನು 2-5 ಪ್ರತಿಶತಕ್ಕೆ ಇಳಿಸಲಾಗುತ್ತದೆ. ಕಿಲ್ನ್‌ನಿಂದ ಹೊರತೆಗೆದ ಬಳಿಕ, ಮಾಲ್ಟಿನಿಂದ ಮೊಳಕೆಗಳನ್ನು ಬೇರ್ಪಡಿಸಲಾಗುತ್ತದೆ, ಮತ್ತು ಮಾಲ್ಟನ್ನು ಯಂತ್ರದಲ್ಲಿ ಬೀಸಿ ಹಿಟ್ಟುಮಾಡಲಾಗುತ್ತದೆ. ಆಗ ಅದು ಮುಂದಿನ ಹಂತಕ್ಕೆ ಸಿದ್ಧವಾಗಿರುತ್ತದೆ.

ಮೊಳೆತ ಧಾನ್ಯದ ಕಷಾಯದ ತಯಾರಿಕೆ. ಮಾಲ್ಟಿನ ಹಿಟ್ಟನ್ನು ನೀರಿನೊಂದಿಗೆ ಮಿಶ್ರಗೊಳಿಸಿ ನೀರುಹಿಟ್ಟನ್ನು ತಯಾರಿಸಲಾಗುತ್ತದೆ; ತದನಂತರ ಇದನ್ನು ನಿಧಾನವಾಗಿ ಬಿಸಿಮಾಡಲಾಗುತ್ತದೆ. ನಿರ್ದಿಷ್ಟ ತಾಪಮಾನಗಳಲ್ಲಿ ಕಿಣ್ವಗಳು ಪಿಷ್ಟಗಳನ್ನು ಸರಳ ಸಕ್ಕರೆಗಳಾಗಿ ಮಾರ್ಪಡಿಸಲು ಆರಂಭಿಸುತ್ತವೆ. ಈ ಹಂತವನ್ನು ಮುಗಿಸಲು ನಾಲ್ಕು ತಾಸುಗಳಿಗಿಂತಲೂ ಹೆಚ್ಚು ಸಮಯ ಹಿಡಿಯುತ್ತದೆ ಮತ್ತು ಕಷಾಯವು ತಯಾರಾಗುತ್ತದೆ. ತದನಂತರ ಇದರಲ್ಲಿರುವ ಕಶ್ಮಲ ಪದಾರ್ಥಗಳನ್ನು ತೆಗೆಯಲಿಕ್ಕಾಗಿ ಇದನ್ನು ಸೋಸಲಾಗುತ್ತದೆ. ಅನಂತರ ಈ ಕಷಾಯವನ್ನು ಕುದಿಸಲಾಗುತ್ತದೆ; ಇದು ಕಿಣ್ವಗಳ ಚಟುವಟಿಕೆಯನ್ನು ನಿಲ್ಲಿಸುತ್ತದೆ. ಕಷಾಯವು ಕುದಿಯುತ್ತಿರುವಾಗ, ಬಿಯರಿನ ವಿಶೇಷ ಕಹಿ ರುಚಿಯನ್ನು ಬರಿಸಲಿಕ್ಕಾಗಿ ಅದಕ್ಕೆ ಹಾಪ್‌ಕಾಯಿಗಳನ್ನು ಸೇರಿಸಲಾಗುತ್ತದೆ. ಸುಮಾರು ಎರಡು ತಾಸುಗಳ ವರೆಗೆ ಕುದಿಸಿದ ಬಳಿಕ, ಅಗತ್ಯವಿರುವಷ್ಟು ತಾಪಮಾನಕ್ಕೆ ಈ ಕಷಾಯವನ್ನು ತಣ್ಣಗಾಗಿಸಲಾಗುತ್ತದೆ.

ಹುದುಗೇಳಿಸುವಿಕೆ. ಬಿಯರ್‌ ತಯಾರಿಕೆಯ ಪ್ರಕ್ರಿಯೆಯಲ್ಲಿ ಬಹುಶಃ ಇದು ಅತಿ ಪ್ರಾಮುಖ್ಯವಾದ ಹಂತವಾಗಿದೆ. ಕಷಾಯದಲ್ಲಿರುವ ಸರಳ ಸಕ್ಕರೆಗಳು, ಯೀಸ್ಟಿನ ಸಹಾಯದಿಂದ ಆಲ್ಕೊಹಾಲ್‌ ಮತ್ತು ಕಾರ್ಬನ್‌ ಡೈಆಕ್ಸೈಡಾಗಿ ಮಾರ್ಪಡಿಸಲ್ಪಡುತ್ತವೆ. ಹುದುಗೇಳಿಸುವಿಕೆಗೆ ತಗಲುವ ಸಮಯ​—⁠ಕಡಿಮೆಪಕ್ಷ ಒಂದು ವಾರದಷ್ಟು ಸಮಯ​—⁠ಮತ್ತು ಈ ಪ್ರಕ್ರಿಯೆಯ ತಾಪಮಾನವು ಯಾವ ರೀತಿಯ ಬೀಯರ್‌​—⁠ಏಲ್‌ ಅಥವಾ ಲ್ಯಾಗರ್‌​—⁠ತಯಾರಿಸಲ್ಪಡುತ್ತಿದೆಯೋ ಅದರ ಮೇಲೆ ಹೊಂದಿಕೊಂಡಿರುತ್ತದೆ. ತದನಂತರ ಹಸಿರು ಬಿಯರ್‌ ಎಂದು ಕರೆಯಲಾಗುವ ಇದನ್ನು ಪಕ್ವಗೊಳಿಸಲಿಕ್ಕಾಗಿ ಸಾರಾಯಿ ಉಗ್ರಾಣದಲ್ಲಿರುವ ಟ್ಯಾಂಕ್‌ಗಳಿಗೆ ಸ್ಥಳಾಂತರಿಸಲಾಗುತ್ತದೆ.

ಪಕ್ವವಾಗಿಸುವಿಕೆ. ಈ ಹಂತದಲ್ಲಿ ಬಿಯರ್‌ ತನ್ನ ಲಾಕ್ಷಣಿಕ ರುಚಿ ಹಾಗೂ ಪರಿಮಳವನ್ನು ಪಡೆದುಕೊಳ್ಳುತ್ತದೆ; ಸಹಜವಾಗಿಯೇ ಉತ್ಪಾದಿಸಲ್ಪಟ್ಟ ಕಾರ್ಬನ್‌ ಡೈಆಕ್ಸೈಡ್‌ ಸಹ ಬಿಯರ್‌ ಉಕ್ಕೇಳುವಂತೆ ಮಾಡುತ್ತದೆ. ಯಾವ ರೀತಿಯ ಬಿಯರ್‌ ಎಂಬುದರ ಮೇಲೆ ಹೊಂದಿಕೊಂಡು, ಮೂರು ವಾರಗಳಿಂದ ಹಿಡಿದು ಕೆಲವಾರು ತಿಂಗಳುಗಳಷ್ಟು ಬೇರೆ ಬೇರೆ ಕಾಲಾವಧಿಗಳಲ್ಲಿ ಬಿಯರ್‌ ಪಕ್ವಗೊಳ್ಳುತ್ತದೆ. ಅಂತಿಮವಾಗಿ, ಪೂರ್ಣವಾಗಿ ಸಿದ್ಧವಾದ ಬಿಯರನ್ನು ಪೀಪಾಯಿಗಳು ಅಥವಾ ಬಾಟಲ್‌ಗಳಲ್ಲಿ ತುಂಬಲಾಗುತ್ತದೆ ಮತ್ತು ಅದರ ಗಮ್ಯಸ್ಥಾನಕ್ಕೆ​—⁠ಬಹುಶಃ ಕೊನೆಗೆ ನಿಮ್ಮ ಮೇಜಿಗೆ​—⁠ತಲಪಲು ಸಿದ್ಧಾವಾಗಿರುತ್ತದೆ! ಆದರೆ ನೀವು ಯಾವ ರೀತಿಯ ಬಿಯರಿನ ರುಚಿನೋಡಲು ಬಯಸುತ್ತೀರಿ?

ಬಹುಮುಖಗಳುಳ್ಳ ಬಿಯರ್‌

ವಾಸ್ತವದಲ್ಲಿ, ಒಂದು ಬಿಯರಿನಿಂದ ಇನ್ನೊಂದು ಬಿಯರಿಗೆ ಗಮನಾರ್ಹ ವ್ಯತ್ಯಾಸವಿರಬಹುದು. ತೆಳುಬಣ್ಣದ ಅಥವಾ ತೀಕ್ಷ್ಣವಾದ, ಸಿಹಿಯಾದ ಇಲ್ಲವೆ ಕಹಿಯಾದ, ಹಾಗೂ ಬಾರ್ಲಿಯಿಂದ ಮಾಡಲ್ಪಟ್ಟ ಅಥವಾ ಗೋದಿಯಿಂದ ಮಾಡಲ್ಪಟ್ಟ ಬಿಯರನ್ನು ನೀವು ಆಸ್ವಾದಿಸಸಾಧ್ಯವಿದೆ. ಬಿಯರಿನ ರುಚಿಯು, ಉಪಯೋಗಿಸಲ್ಪಡುವ ನೀರಿನ ಗುಣಮಟ್ಟ, ಮಾಲ್ಟಿನ ಬಗೆ, ಉಪಯೋಗಿಸಲ್ಪಡುವ ಕಾರ್ಯವಿಧಾನ, ಮತ್ತು ಆ ಪ್ರಕ್ರಿಯೆಯಲ್ಲಿ ಉಪಯೋಗಿಸಲ್ಪಡುವ ಯೀಸ್ಟ್‌ಗಳನ್ನೂ ಒಳಗೊಂಡು ಹೀಗೆ ಅನೇಕ ಅಂಶಗಳ ಮೇಲೆ ಹೊಂದಿಕೊಂಡಿದೆ.

ತುಂಬ ಹೆಸರುವಾಸಿಯಾದ ಬಿಯರ್‌ಗಳಲ್ಲಿ ಒಂದು ಪಿಲ್ಸ್‌ನರ್‌ (ಅಥವಾ ಪಿಲ್ಸ್‌) ಆಗಿದ್ದು, ಇದು ಉತ್ತಮ ಗುಣಮಟ್ಟದ ತೆಳುಬಣ್ಣದ ಲ್ಯಾಗರ್‌ ಬಿಯರ್‌ ಆಗಿದೆ. ಲೋಕದಾದ್ಯಂತ ಇರುವ ನೂರಾರು ಬಿಯರ್‌ ಕಾರ್ಖಾನೆಗಳಲ್ಲಿ ಈ ರೀತಿಯ ಬಿಯರ್‌ ತಯಾರಿಸಲ್ಪಡುತ್ತಿದೆ. ಆದರೆ, ನಿಜವಾದ ಪಿಲ್ಸ್‌ನರ್‌ ಬಿಯರ್‌, ಚೆಕ್‌ ರಿಪಬ್ಲಿಕ್‌ನಲ್ಲಿರುವ ಪಿಲ್ಝನ್‌ ಅಥವಾ ಪಿಲ್ಸನ್‌ ಪಟ್ಟಣದಲ್ಲಿ ಮಾತ್ರ ತಯಾರಿಸಲ್ಪಡುತ್ತದೆ. ಇದರ ಉತ್ಪಾದನೆಯಲ್ಲಿನ ಯಶಸ್ಸಿಗೆ ಸಹಾಯಕವಾಗಿರುವ ನಿರ್ಧಾರಕ ಅಂಶವು ಇದರ ಕಾರ್ಯವಿಧಾನ ಅಷ್ಟೇಯಲ್ಲ ಇದರಲ್ಲಿ ಉಪಯೋಗಿಸಲ್ಪಡುವ ಕಚ್ಚಾವಸ್ತುಗಳು, ಅಂದರೆ ಮೃದುವಾದ ನೀರು, ಅತ್ಯುತ್ತಮ ಗುಣಮಟ್ಟದ ಮಾಲ್ಟ್‌, ಮತ್ತು ಸೂಕ್ತವಾದ ಯೀಸ್ಟ್‌ಗಳೂ ಇದಕ್ಕೆ ಕಾರಣವಾಗಿವೆ.​—⁠ಇದರ ಜೊತೆಯಿರುವ ಚೌಕವನ್ನು ನೋಡಿರಿ.

ಅತ್ಯುತ್ತಮ ರೀತಿಯ ಇನ್ನೊಂದು ಬಿಯರ್‌, ವೈಸ್‌ ಬಿಯರ್‌ ಆಗಿದೆ. ಇದು ಗೋದಿಯಿಂದ ತಯಾರಿಸಲ್ಪಟ್ಟಿದ್ದು, ವಿಶೇಷವಾಗಿ ಜರ್ಮನಿಯಲ್ಲಿ ಜನಪ್ರಿಯವಾಗಿದೆ. ಬ್ರಿಟಿಷರಲ್ಲಿ ವಿಶೇಷ ಮಾನ್ಯತೆ ಪಡೆದಿರುವ ಬಿಯರುಗಳು ಪೋರ್ಟರ್‌ ಮತ್ತು ಸ್ಟೌಟ್‌ ಆಗಿವೆ. ಪೋರ್ಟರ್‌ ಬಿಯರ್‌ ತುಂಬ ತೀಕ್ಷ್ಣವಾದ, ಮೇಲೆ ಹುದುಗೇಳಿಸಿರುವ ಬಿಯರ್‌ ಆಗಿದ್ದು, ಹುರಿದ ಮಾಲ್ಟ್‌ನಿಂದ ತಯಾರಿಸಲ್ಪಟ್ಟದ್ದಾಗಿದೆ. ಇದರಿಂದಾಗಿಯೇ ಈ ಪಾನೀಯಕ್ಕೆ ಗಾಢವಾದ ಕಡು ಬಣ್ಣವು ಬರುತ್ತದೆ. ಪೋರ್ಟರ್‌ ಬಿಯರ್‌ ಪ್ರಥಮವಾಗಿ 18ನೆಯ ಶತಮಾನದಲ್ಲಿ ಲಂಡನಿನಲ್ಲಿ ತಯಾರಿಸಲ್ಪಟ್ಟಿತು. ಸ್ಟೌಟ್‌ ಎಂಬುದು ಅತ್ಯಂತ ಗಡುಸಾದ ಹಾಗೂ ಕಡುಗಂದು ಬಣ್ಣದ ಬಿಯರ್‌. ಇದು ಐರ್ಲೆಂಡ್‌ನಲ್ಲಿ ತುಂಬ ಹೆಸರುವಾಸಿಯಾಗಿದೆ ಮತ್ತು ಜಗತ್ತಿನಲ್ಲಿ ಗಿನ್ನೆಸ್‌ ಕುಟುಂಬದಿಂದ ಹೆಸರುವಾಸಿಮಾಡಲ್ಪಟ್ಟಿದೆ. ಸ್ಟೌಟ್‌ ಬಿಯರ್‌ ಸಾಂಪ್ರದಾಯಿಕ ಪೋರ್ಟರ್‌ ಬಿಯರಿನ ಭಿನ್ನ ರೂಪವಾಗಿದೆ. ಸಾಮಾನ್ಯವಾಗಿ ಲ್ಯಾಕ್ಟೋಸ್‌ (ಹಾಲಿನಲ್ಲಿರುವ ಸಕ್ಕರೆ) ಇರುವ ಇಂಗ್ಲಿಷ್‌ ಸಿಹಿ ರುಚಿಯುಳ್ಳ ಸ್ಟೌಟ್‌ ಬಿಯರನ್ನು ನೀವು ಆಸ್ವಾದಿಸಸಾಧ್ಯವಿದೆ, ಅಥವಾ ಕಹಿ ರುಚಿಯುಳ್ಳದ್ದಾಗಿದ್ದು ಹೆಚ್ಚು ಆಲ್ಕೊಹಾಲ್‌ ಅಂಶವಿರುವ ಐರಿಷ್‌ ಸಪ್ಪೆ ಸ್ಟೌಟನ್ನು ಸಹ ಆಸ್ವಾದಿಸಸಾಧ್ಯವಿದೆ.

ಬಿಯರ್‌, ಬಾಟಲ್‌ನಲ್ಲಿ ಸಿಗಲಿ ಅಥವಾ ಕ್ಯಾನ್‌ನಲ್ಲಿ ಸಿಗಲಿ ಅಥವಾ ಒಂದು ಪೀಪಾಯಿಯಿಂದ ನಲ್ಲಿಯ ಸಹಾಯದಿಂದ ಅದನ್ನು ತೆಗೆಯಬೇಕಾಗಿರಲಿ, ಬಿಯರನ್ನು ಆಸ್ವಾದಿಸುವವರಲ್ಲಿ ಅನೇಕರಿಗಾದರೋ ಪ್ರಾಮುಖ್ಯವಾಗಿರುವ ಇನ್ನೊಂದು ಅಂಶವು ಅದನ್ನು ಹೇಗೆ ಸೇವಿಸಲಾಗುತ್ತದೆ ಎಂಬುದೇ. ಅಮೆರಿಕನರು ಸಾಮಾನ್ಯವಾಗಿ ತುಂಬ ತಣ್ಣಗಿರುವ ಬಿಯರನ್ನು ಸೇವಿಸಲು ಇಷ್ಟಪಡುತ್ತಾರೆ. ಇನ್ನಿತರರು ಕೊಠಡಿಯ ತಾಪಮಾನವಿರುವ ಅಥವಾ ಸ್ವಲ್ಪಮಟ್ಟಿಗೆ ತಣ್ಣಗಿರುವ ಮತ್ತು ಬಾರಿನ ಸಾರಾಯಿ ಉಗ್ರಾಣದಲ್ಲಿ ದಾಸ್ತಾನುಮಾಡಲ್ಪಟ್ಟಿರುವ ಪೀಪಾಯಿಗಳಿಂದ ನೇರವಾಗಿ ಕೊಡಲ್ಪಡುವ ಬಿಯರನ್ನು ಇಷ್ಟಪಡುತ್ತಾರೆ.

ಬಿಯರ್‌ ಬಹುಮುಖಗಳುಳ್ಳ ಒಂದು ಪಾನೀಯ ಎಂಬುದಂತೂ ನಿಜ. ಇದನ್ನು ಮಿತವಾಗಿ ಕುಡಿಯುವ ಮೂಲಕ ನೀವು ಆರೋಗ್ಯದ ವಿಷಯದಲ್ಲಿ ಕೆಲವು ಪ್ರಯೋಜನಗಳನ್ನು ಪಡೆಯಬಹುದು. ವಾಸ್ತವದಲ್ಲಿ, ಇದರಲ್ಲಿ ರೈಬೋಫ್ಲೇವಿನ್‌, ಫೋಲಿಕ್‌ ಆಮ್ಲ, ಕ್ರೋಮಿಯಮ್‌, ಮತ್ತು ಸತುವಿನಂಥ ಪ್ರಾಮುಖ್ಯವಾದ ಬೇರೆ ಬೇರೆ ವಿಟಮಿನ್‌ಗಳು ಮತ್ತು ಖನಿಜ ಪದಾರ್ಥಗಳು ಒಳಗೂಡಿವೆ. ಕೆಲವು ಅಧಿಕೃತ ಮೂಲಗಳಿಗನುಸಾರ, ಮಿತವಾದ ಪ್ರಮಾಣದಲ್ಲಿ ಬಿಯರ್‌ ಅನ್ನು ಸೇವಿಸುವುದು ಹೃದ್ರೋಗ ಹಾಗೂ ಚರ್ಮದ ರೋಗಗಳನ್ನು ತಡೆಗಟ್ಟಲು ಸಹಾಯಮಾಡಸಾಧ್ಯವಿದೆ. ಲಭ್ಯವಿರುವ ಬ್ರ್ಯಾಂಡ್‌ಗಳು ಮತ್ತು ವಿಧಗಳಿಂದ ನೀವು ಒಂದು ಒಳ್ಳೇ ಆಯ್ಕೆಯನ್ನು ಮಾಡುವಲ್ಲಿ ಮತ್ತು ಅದರ ಬಳಕೆಯಲ್ಲಿ ಸಮತೂಕರಾಗಿರುವಲ್ಲಿ, ಈ ಸ್ವಾದಿಷ್ಟಕರವಾದ ಹಾಗೂ ಚೈತನ್ಯದಾಯಕ ಪಾನೀಯವನ್ನು ಖಂಡಿತವಾಗಿಯೂ ಆಸ್ವಾದಿಸಬಹುದು. ಆದುದರಿಂದ, ಮುಂದಿನ ಸಲ ನೀವು ಬಿಳಿಯ ನೊರೆಯ ಮುಕುಟವುಳ್ಳ ಹೊಂಬಣ್ಣದ ಪಾನೀಯವುಳ್ಳ ಒಂದು ಗ್ಲಾಸಿನ ಮುಂದೆ ಕುಳಿತುಕೊಳ್ಳುವಾಗ, ಅದರ ಹಿಂದಿರುವ ಮನಮೋಹಕ ಇತಿಹಾಸವನ್ನು ನೆನಪಿಗೆ ತಂದುಕೊಳ್ಳಿ! (g04 7/8)

[ಪುಟ 25ರಲ್ಲಿರುವ ಚೌಕ/ಚಿತ್ರ]

ಪ್ರಮುಖ ನಟರು

ಗತಸಮಯಗಳಲ್ಲಿ, ಬಿಯರ್‌ನ ಉತ್ಪಾದನೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ವೃತ್ತಿಪರರ ಕೈಚಳಕವು ಒಳಗೂಡಿತ್ತು. ಅವರಲ್ಲಿ ಕೆಲವರ ಕೆಲಸದ ಕುರಿತು ಇಲ್ಲಿ ಕೊಡಲ್ಪಟ್ಟಿದೆ.

◼ ಮಾಲ್ಟ್‌ ತಯಾರಕ​—⁠ಇವನು ಬಿಯರ್‌ ತಯಾರಿಕೆಯ ನಾಟಕದಲ್ಲಿ ಪ್ರಥಮ ನಟ. ಬಾರ್ಲಿ ಅಥವಾ ಗೋದಿಯಿಂದ ಮಾಲ್ಟನ್ನು ತಯಾರಿಸುವುದು ಇವನ ನೇಮಕವಾಗಿತ್ತು. ಇವನು ಧಾನ್ಯದ ಮೊಳಕೆಯೊಡೆಯುವಿಕೆ ಹಾಗೂ ಹಸಿರು ಮಾಲ್ಟ್‌ನ ಕಿಲ್ನ್‌ ಕಾರ್ಯವಿಧಾನದ ಪಾರುಪತ್ಯವನ್ನು ಮಾಡುತ್ತಿದ್ದನು. ಇವನ ಮೇಲೆ ಗಂಭೀರವಾದ ಜವಾಬ್ದಾರಿಯ ಹೊರೆಯಿತ್ತು, ಏಕೆಂದರೆ ಉತ್ಪಾದಿಸಲ್ಪಡುವ ಬಿಯರಿನ ರುಚಿಯು ಮಾಲ್ಟಿನ ಗುಣಮಟ್ಟದ ಮೇಲೆ ಗಮನಾರ್ಹವಾದಷ್ಟು ಮಟ್ಟಿಗೆ ಹೊಂದಿಕೊಂಡಿರುತ್ತದೆ.

◼ ಬಟ್ಟಿಯಿಳಿಸುವವನು (ಮೇಲೆ ತೋರಿಸಲ್ಪಟ್ಟಿದೆ)​—⁠ಇವನು ಕುದಿಸುವಿಕೆಯ ಉಸ್ತುವಾರಿಮಾಡುವವನು. ಮೊದಲಾಗಿ, ಇವನು ಬೀಸಿದ ಹಿಟ್ಟನ್ನು ನೀರಿನೊಂದಿಗೆ ಮಿಶ್ರಮಾಡುತ್ತಿದ್ದನು, ಮತ್ತು ಈ ಮಿಶ್ರಣವನ್ನು ಕುದಿಸುತ್ತಿರುವಾಗ ಅದಕ್ಕೆ ಹಾಪ್‌ಕಾಯಿಯನ್ನು ಸೇರಿಸುತ್ತಿದ್ದನು. ಇವನ ಕೆಲಸದ ಅಂತಿಮ ಉತ್ಪನ್ನವೇ ಕಷಾಯ ಆಗಿತ್ತು.

◼ ಸಾರಾಯಿ ಉಗ್ರಾಣಾಧಿಕಾರಿ​—⁠ಇವನು ಬಟ್ಟಿಪಾತ್ರೆಯಲ್ಲಿರುವ ಬಿಯರಿನ ಹುದುಗೇಳಿಸುವಿಕೆಯನ್ನು ಮತ್ತು ಸಾರಾಯಿ ಉಗ್ರಾಣದಲ್ಲಿ ಅದರ ಪಕ್ವಗೊಳ್ಳುವಿಕೆಯನ್ನು ನೋಡಿಕೊಳ್ಳುತ್ತಿದ್ದ ಒಬ್ಬ ಅನುಭವಸ್ಥ ವಿಶೇಷಜ್ಞನಾಗಿದ್ದನು. ತದನಂತರ ಅವನು ಪರಿಪಕ್ವಗೊಂಡ ಬಿಯರನ್ನು ಚಿಕ್ಕ ಚಿಕ್ಕ ಪಾತ್ರೆಗಳಿಗೆ ಸ್ಥಳಾಂತರಿಸುತ್ತಿದ್ದನು.

[ಕೃಪೆ]

S laskavým svolením Pivovarského muzea v Plzni

[ಪುಟ 26ರಲ್ಲಿರುವ ಚೌಕ/ಚಿತ್ರಗಳು]

ಪಿಲ್ಸ್‌ನರ್‌—ಬಹಳಷ್ಟು ನಕಲುಮಾಡಲ್ಪಟ್ಟಿರುವ ಒರಿಜಿನಲ್‌

ಪಿಲ್ಸ್‌ನರ್‌ನ ಉತ್ಪಾದನೆಯು 1295ರಲ್ಲಿ ಆರಂಭಗೊಂಡಿತು. ಬೊಹಿಮಿಯದ ಅರಸನಾಗಿದ್ದ IIನೆಯ ವೆನ್‌ಸೆಸ್ಲಾಸನು ಪಿಲ್ಝನ್‌ ಪಟ್ಟಣವನ್ನು ಸ್ಥಾಪಿಸಿದನು, ಮತ್ತು ಸ್ವಲ್ಪ ಕಾಲಾನಂತರ ಪಿಲ್ಝನ್‌ನ ಪ್ರಜೆಗಳಲ್ಲಿ 260 ಮಂದಿಗೆ ಬಿಯರನ್ನು ತಯಾರಿಸುವ ಹಕ್ಕನ್ನು ನೀಡಿದನು. ಆರಂಭದಲ್ಲಿ ಈ ಪ್ರಜೆಗಳು ತಮ್ಮ ಮನೆಗಳಲ್ಲಿ ಮತ್ತು ಚಿಕ್ಕ ಪ್ರಮಾಣಗಳಲ್ಲಿ ಬಿಯರನ್ನು ತಯಾರಿಸುತ್ತಿದ್ದರು, ಆದರೆ ಸಮಯಾನಂತರ ಅವರು ವೃತ್ತಿ ಸಂಘಗಳನ್ನು ರಚಿಸಿದರು ಮತ್ತು ಬಿಯರ್‌ ಕಾರ್ಖಾನೆಗಳನ್ನು ಸ್ಥಾಪಿಸಿದರು. ಆದರೂ ಸಕಾಲದಲ್ಲಿ ಬೊಹಿಮಿಯದ ಆರ್ಥಿಕ ಸ್ಥಿತಿ ಹಾಗೂ ಸಂಸ್ಕೃತಿಯು ಅವನತಿಹೊಂದಿತು, ಮತ್ತು ಇದು ಬಿಯರ್‌ ತಯಾರಿಕೆಯನ್ನು ಬಾಧಿಸಿತು. ಆಗ ಬಿಯರ್‌ ತಯಾರಕರು ಅಂಗೀಕೃತ ಕಾರ್ಯವಿಧಾನವನ್ನು ಅಲಕ್ಷಿಸಿ, ತಮ್ಮ ಸ್ವಂತ ಪಾಕವಿಧಾನಗಳನ್ನು ಉಪಯೋಗಿಸಿ, ಬಿಯರ್‌ ಎಂದು ಕರೆಯಲ್ಪಡಲು ಅನುಚಿತವಾದಂಥ ರುಚಿಯಿಲ್ಲದ ಪಾನೀಯವನ್ನು ತಯಾರಿಸಿದರು.

ಆ ಸಮಯದಲ್ಲಿ ಯೂರೋಪ್‌ನಲ್ಲಿ ಎರಡು ರೀತಿಯ ಬಿಯರ್‌ ತಯಾರಿಸಲ್ಪಡುತ್ತಿತ್ತು. ವಿಶೇಷವಾಗಿ ಬೊಹಿಮಿಯದಲ್ಲಿ ಮೇಲೆ ಹುದುಗೇಳಿಸಿರುವ ಬಿಯರ್‌ ತಯಾರಿಸಲ್ಪಡುತ್ತಿತ್ತು; ಅದೇ ಸಮಯದಲ್ಲಿ ತಳದಲ್ಲಿ ಹುದುಗೇಳಿಸುವಂಥ, ಇನ್ನೂ ಹೆಚ್ಚು ಒಳ್ಳೇ ಗುಣಮಟ್ಟದ ಬಿಯರ್‌ ಬವೇರಿಯದಲ್ಲಿ ಬಹಳವಾಗಿ ಜನಪ್ರಿಯವಾಗಿತ್ತು. ಬವೇರಿಯದ ಲ್ಯಾಗರ್‌ ಬಿಯರ್‌ ಹಾಗೂ ಪಿಲ್ಝನ್‌ ಬಿಯರ್‌ಗಳ ನಡುವೆ ಅಪಾರ ಭಿನ್ನತೆಯಿತ್ತು.

ಆದರೆ 1839ರಲ್ಲಿ ಪ್ರಾಮುಖ್ಯವಾದ ಬದಲಾವಣೆಯುಂಟಾಯಿತು. ಪಿಲ್ಝನ್‌ನ ಪ್ರಜೆಗಳಲ್ಲಿ ಸುಮಾರು 200 ಮಂದಿ ಈ ಸನ್ನಿವೇಶದ ಕುರಿತು ಏನಾದರೂ ಕ್ರಮಕೈಗೊಳ್ಳಲು ನಿರ್ಧರಿಸಿದರು. ಅವರು ಬರ್ಜೆಸ್‌ ಬ್ರಿವರಿಯನ್ನು ಸ್ಥಾಪಿಸಿದರು; ಇಲ್ಲಿ ತಳದಲ್ಲಿ ಹುದುಗೇಳಿಸುವ ಅಥವಾ ಬವೇರಿಯನ್‌ ಶೈಲಿಯ ಬಿಯರ್‌ ಮಾತ್ರ ತಯಾರಿಸಲ್ಪಡಲಿಕ್ಕಿತ್ತು. ಬಟ್ಟಿಯಿಳಿಸುವ ಕ್ಷೇತ್ರದಲ್ಲಿ ಪ್ರಖ್ಯಾತನಾಗಿದ್ದ ಯೋಸಫ್‌ ಗ್ರೋಲ್‌ನನ್ನು ಬವೇರಿಯದಿಂದ ಕರೆಸಿಕೊಳ್ಳಲಾಯಿತು. ಆ ಕೂಡಲೆ ಅವನು ಬವೇರಿಯನ್‌ ಶೈಲಿಯ ಬಿಯರನ್ನು ತಯಾರಿಸಲು ಆರಂಭಿಸಿದನು. ಇದರ ಫಲಿತಾಂಶವು ತೀರ ಭಿನ್ನವಾಗಿತ್ತು, ಆದರೆ ಅವನು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಉತ್ತಮವಾಗಿತ್ತು. ಗ್ರೋಲ್‌ನ ಅನುಭವ ಮತ್ತು ಅದರೊಂದಿಗೆ ಸ್ಥಳಿಕ ಕಚ್ಚಾವಸ್ತುಗಳು ಜಗತ್ತನ್ನೇ ತನ್ಮಯಗೊಳಿಸಿದಂಥ ರೀತಿಯ ಬಿಯರನ್ನು ಸಿದ್ಧಪಡಿಸಲು ಸಹಾಯಮಾಡಿದವು. ಏಕೆ? ಏಕೆಂದರೆ ಇದು ಅಪೂರ್ವ ರುಚಿ, ಬಣ್ಣ, ಹಾಗೂ ಪರಿಮಳವನ್ನು ಹೊಂದಿತ್ತು. ಆದರೂ, ಪಿಲ್ಝನ್‌ ಬಿಯರ್‌ನ ಈ ಪ್ರಖ್ಯಾತಿಯು ಅದರದ್ದೇ ಆದ ಅನನುಕೂಲತೆಗಳನ್ನು ಹೊಂದಿತ್ತು. ಈ ವಿಕಸನದಿಂದ ಪ್ರಯೋಜನ ಪಡೆದುಕೊಳ್ಳಬೇಕೆಂಬ ಬಯಕೆಯಿಂದ, ಅನೇಕ ಬಿಯರ್‌ ತಯಾರಕರು ತಮ್ಮ ಉತ್ಪನ್ನಗಳಿಗೆ ಪಿಲ್ಸ್‌ನರ್‌ ಎಂಬ ಹೆಸರನ್ನು ಕೊಡಲಾರಂಭಿಸಿದರು. ಹೀಗೆ ಪಿಲ್ಸ್‌ನರ್‌ ಪ್ರಖ್ಯಾತಿ ಪಡೆಯಿತು ಮಾತ್ರವಲ್ಲ, ಹೊಂಬಣ್ಣದ ಪಾನೀಯಗಳಲ್ಲೇ ಅತಿ ಹೆಚ್ಚು ನಕಲುಮಾಡಲ್ಪಟ್ಟ ಪಾನೀಯವಾಗಿ ಪರಿಣಮಿಸಿತು.

[ಚಿತ್ರಗಳು]

ಯೋಸಫ್‌ ಗ್ರೋಲ್‌

ಪಿಲ್ಝನ್‌ ಬ್ರಿವರಿಯ ನೀರಿನ ಬುರುಜು

[ಕೃಪೆ]

S laskavým svolením Pivovarského muzea v Plzni

[ಪುಟ 24ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಪಿಲ್ಝನ್‌

[ಪುಟ 24, 25ರಲ್ಲಿರುವ ಚಿತ್ರ]

ಬ್ರೆಡ್‌ ಮತ್ತು ಬಿಯರ್‌ನ ತಯಾರಿಕೆಯನ್ನು ಚಿತ್ರಿಸುತ್ತಿರುವ ಈಜಿಪ್ಶಿಯನ್‌ ಮಾದರಿ

[ಕೃಪೆ]

Su concessione del Ministero per i Beni e le Attività Culturali - Museo Egizio - Torino

[ಪುಟ 27ರಲ್ಲಿರುವ ಚಿತ್ರಗಳು]

ಹಾಪ್‌ಕಾಯಿ, ಮಾಲ್ಟ್‌, ಮತ್ತು ಬಿಯರ್‌ ತಯಾರಿಸುವ ಕಾರ್ಖಾನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ