ಬ್ರೆಸಿಲಿಯ—ನವೀನ, ಅಪೂರ್ವ, ಹಾಗೂ ವೇಗವಾಗಿ ಪ್ರಗತಿಹೊಂದುತ್ತಿರುವ ನಗರ
ಬ್ರೆಸಿಲ್ನ ಎಚ್ಚರ! ಸುದ್ದಿಗಾರರಿಂದ
ನಿಮ್ಮ ದೇಶದ ರಾಜಧಾನಿಯ ಮೂಲ ನಕ್ಷೆಯನ್ನು ಯಾರು ವಿನ್ಯಾಸಿಸಿದರೋ ಆ ವಿನ್ಯಾಸಕನನ್ನು ಸಂಪರ್ಕಿಸಲಿಕ್ಕಾಗಿ, ನೀವು ಲೋಕದಲ್ಲಿ ಎಲ್ಲಿ ಫೋನ್ಮಾಡಸಾಧ್ಯವಿದೆ? ರಾಜಧಾನಿಯ ಪ್ರಪ್ರಥಮ ಸರಕಾರಿ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ವಿನ್ಯಾಸಿಸಿದ ಹಾಗೂ ಅದರ ಮೇಲ್ವಿಚಾರಣೆಯನ್ನು ನೋಡಿಕೊಂಡ ವಾಸ್ತುಶಿಲ್ಪಿಯನ್ನು ನೀವು ಎಲ್ಲಿ ಭೇಟಿಮಾಡಸಾಧ್ಯವಿದೆ? ಮತ್ತು ಈ ರಾಜಧಾನಿಯಲ್ಲಿ ನೀವು ನಡೆಯುತ್ತಿರುವಾಗ, 40ಕ್ಕಿಂತಲೂ ಹೆಚ್ಚಿನ ಪ್ರಾಯದವರನ್ನು ನೀವು ನೋಡುವಲ್ಲಿ, ಅವರು ಆ ರಾಜಧಾನಿಯಲ್ಲಿ ಜನಿಸಿದವರಲ್ಲ ಎಂದು ಎಲ್ಲಿ ಖಡಾಖಂಡಿತವಾಗಿ ಹೇಳಬಲ್ಲಿರಿ? ಬ್ರೆಸಿಲ್ನ ರಾಜಧಾನಿಯಾದ ಬ್ರೆಸಿಲಿಯದಲ್ಲಿಯೇ. ಇದು ಹೆಚ್ಚು ಸಮೀಪದಿಂದ ನೋಡಲು ಯೋಗ್ಯವಾಗಿರುವಂತಹ ಒಂದು ನವೀನ, ಅಪೂರ್ವ ನಗರವಾಗಿದೆ.a
ದೀರ್ಘಕಾಲದ ಪ್ರಸ್ತಾವನೆ
ಸಾವ್ ಪೌಲೊದಿಂದ ಬ್ರೆಸಿಲಿಯಕ್ಕೆ ವಿಮಾನಮಾರ್ಗವಾಗಿ ಪ್ರಯಾಣಿಸಲು ಸುಮಾರು ಒಂದೂವರೆ ತಾಸು ಹಿಡಿಯುತ್ತದೆ. ಸಾವಕಾಶವಾಗಿ ಪ್ರಯಾಣಿಸಲಿಕ್ಕಾಗಿ ಬಸ್ಗಳಿದ್ದು, ಅಲ್ಲಿಗೆ ಹೋಗಲು ಸುಮಾರು 12 ತಾಸುಗಳು ಹಿಡಿಯುತ್ತವೆ. ನಾನು ಬಸ್ ಪ್ರಯಾಣವನ್ನು ಆಯ್ದುಕೊಂಡೆ. ಆ ನಗರದ ಇತಿಹಾಸದ ಕುರಿತು ಓದುವ ಮೂಲಕ ನಾನು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಅದು ನನಗೆ ಸಾಕಷ್ಟು ಸಮಯವನ್ನು ಒದಗಿಸಿತು.
ಹದಿನೆಂಟನೆಯ ಶತಮಾನದ ಕೊನೆಯಲ್ಲಿ, ಪೋರ್ಚುಗೀಸರ ಆಳಿಕೆಯ ವಿರುದ್ಧವಾಗಿ ನಡೆದ ಮೊತ್ತಮೊದಲ ವ್ಯವಸ್ಥಿತ ದಂಗೆಯ ಸಮಯದಂದಿನಿಂದ, ಬ್ರೆಸಿಲ್ನಲ್ಲಿ ಒಂದು ಹೊಸ ರಾಜಧಾನಿಯನ್ನು ನಿರ್ಮಿಸುವ ಬಯಕೆಯಿತ್ತು. 1822ರಲ್ಲಿ ಬ್ರೆಸಿಲ್ಗೆ ಸ್ವಾತಂತ್ರ್ಯ ಸಿಕ್ಕಿದ ಸ್ವಲ್ಪ ಸಮಯಾನಂತರ, ಬ್ರೆಸಿಲ್ನ ಸೂಸ್ ಬೊನೀಫಾಸಿಯೊ ಡೀ ಆ್ಯಂಡ್ರಾಡ ಇ ಸೆಲ್ವ ಎಂಬ ರಾಜ್ಯನೀತಿಜ್ಞನು, ಈ ಭಾವಿ ರಾಜಧಾನಿಗೆ ಬ್ರೆಸಿಲಿಯ ಎಂದು ಹೆಸರಿಡುವುದಾಗಿ ಸೂಚಿಸಿದ್ದನು. ಇಡೀ ದೇಶವನ್ನು ವರ್ಣಿಸಲಿಕ್ಕಾಗಿ, 17ನೆಯ ಶತಮಾನದ ನಕ್ಷೆಗಾರರು ಈ ಹೆಸರನ್ನು ತಮ್ಮ ನಕ್ಷೆಯಲ್ಲಿ ಈಗಾಗಲೇ ಉಪಯೋಗಿಸಿದ್ದರು.
ಇಸವಿ 1891ರಲ್ಲಿ, ಈ ದೇಶದ ಹೊಸ ಸಂವಿಧಾನವು, ಸೆಂಟ್ರಲ್ ಹೈಲ್ಯಾಂಡ್ ಪ್ಲೈನ್ನಲ್ಲಿರುವ ಹುಲ್ಲುಮೈದಾನದ 14,000 ಚದರ ಕಿಲೊಮೀಟರುಗಳಷ್ಟು ಪ್ರದೇಶವನ್ನು ಪ್ರತ್ಯೇಕವಾಗಿರಿಸಬೇಕೆಂದು ಹೇಳಿತು. ಆ ಬಯಲಿನಲ್ಲಿ, ಸುಮಾರು 1,000 ಕಿಲೊಮೀಟರುಗಳಷ್ಟು ದೂರದ ವರೆಗೆ ಹೊಸ ರಾಜಧಾನಿಯನ್ನು ನಿರ್ಮಿಸಬೇಕಾಗಿತ್ತು. ರಿಯೊ ಡಿ ಜನಾರಿಯೊದಿಂದ ರಾಜಧಾನಿಯನ್ನು ಸ್ಥಳಾಂತರಿಸುವುದು, ದೇಶದ ಒಳಭಾಗದ ಅಭಿವೃದ್ಧಿಯನ್ನು ಹೆಚ್ಚಿಸುವುದೆಂದು ರಾಜಕಾರಣಿಗಳು ವಾದಿಸಿದರು. ಅಂದಿನಿಂದ 50 ವರ್ಷಗಳು ಕಳೆದರೂ ಯಾವ ಬದಲಾವಣೆಯೂ ಆಗಲಿಲ್ಲ. ಕೊನೆಯದಾಗಿ, 1955ರಲ್ಲಿ, ಬ್ರೆಸಿಲಿಯದ ದೀರ್ಘಕಾಲದ ಪ್ರಸ್ತಾವನೆಯು ಕೊನೆಗೊಂಡಿತು, ಮತ್ತು ಬಹಳಷ್ಟು ಹುಮ್ಮಸ್ಸಿನಿಂದ ಮೊದಲ ಹಂತವು ಆರಂಭಗೊಳ್ಳಲಿತ್ತು.
ಒಂದು ಸ್ಪರ್ಧೆ ಮತ್ತು ಒಂದು ನಕ್ಷೆ
ಆ ವರ್ಷದಲ್ಲಿ, ಚುನಾವಣೆಯಲ್ಲಿ ನನಗೆ ಮತ ನೀಡಿ ಗೆಲ್ಲಿಸುವುದಾದರೆ, ಅಧ್ಯಕ್ಷನೋಪಾದಿ ನನ್ನ ಐದು ವರ್ಷಾವಧಿಯು ಮುಗಿಯುವುದರೊಳಗೆ ಹೊಸ ರಾಜಧಾನಿಯ ಕನಸು ನನಸಾಗುವುವದೆಂದು, ಅಧ್ಯಕ್ಷ ಪದವಿಯ ಅಭ್ಯರ್ಥಿಯಾದ ಸೂಸಿಲಿನೂ ಕೂಬಿಚೆಕ್ ಪ್ರತಿಜ್ಞೆಮಾಡಿದನು. 1956ರ ಏಪ್ರಿಲ್ ತಿಂಗಳಿನಲ್ಲಿ, ಕೂಬಿಚೆಕ್ನನ್ನು ಚುನಾಯಿಸಲಾಯಿತು.
ಕೆಲವೇ ತಿಂಗಳುಗಳಿಗೆ ಮೊದಲು, ಸರಕಾರವು ಒಂದು ಸ್ಪರ್ಧೆಯನ್ನು ಏರ್ಪಡಿಸುವ ಘೋಷಣೆ ಮಾಡಿತ್ತು: ಬ್ರೆಸಿಲ್ನಲ್ಲಿರುವ ವಾಸ್ತುಶಿಲ್ಪಿಗಳು, ಇಂಜಿನಿಯರುಗಳು, ಹಾಗೂ ನಗರದ ನಕ್ಷೆಗಳನ್ನು ಮಾಡುವವರನ್ನು, ಹೊಸ ರಾಜಧಾನಿಗಾಗಿ ವಿನ್ಯಾಸರಚನೆಯ ನಕ್ಷೆಯೊಂದನ್ನು ರೂಪಿಸುವಂತೆ ಆಮಂತ್ರಿಸಲಾಯಿತು. ಕೆಲವು ತಿಂಗಳುಗಳೊಳಗೆ, 26 ಅಭ್ಯರ್ಥಿಗಳು ತಮ್ಮ ಆದರ್ಶ ರಾಜಧಾನಿಯ ವಿನ್ಯಾಸವನ್ನು ಕಳುಹಿಸಿದರು. 1957ರ ಮಾರ್ಚ್ ತಿಂಗಳಿನಲ್ಲಿ, ಅಂತಾರಾಷ್ಟ್ರೀಯ ನ್ಯಾಯದರ್ಶಿಗಳ ಮಂಡಲಿಯು ಈ ಸ್ಪರ್ಧೆಯಲ್ಲಿ ಗೆದ್ದವನ ಹೆಸರನ್ನು ಪ್ರಕಟಿಸಿತು: ನಗರದ ನಕ್ಷೆಗಾರನಾದ ಲೂಸ್ಯೂ ಕಾಸ್ಟ.
ದಾಖಲಾಗಿದ್ದ ಇತರ ಅಭ್ಯರ್ಥಿಗಳಿಗೆ ಅಸದೃಶವಾಗಿ, ಕಾಸ್ಟನ ನಕ್ಷೆಯು ಕೆಲವೊಂದು ರೂಪರೇಖೆಗಳು ಹಾಗೂ ಸಾಧಾರಣ ಲಿಪಿಯಲ್ಲಿ ಗೀಚುಹಾಕಿದ್ದ ಬರವಣಿಗೆಯಿರುವ ಬೆರಳೆಣಿಕೆಯಷ್ಟು ಪುಟಗಳಿಂದ ಕೂಡಿತ್ತು—ಇಡೀ ನಗರವು ಕಾಗದದಲ್ಲಿ ರೇಖಿಸಲ್ಪಟ್ಟು, ಒಂದು ಮನಿಲಾ ಲಕೋಟೆಯಲ್ಲಿತ್ತು! ಅತಿ ಚಿಕ್ಕ ರೂಪರೇಖೆಯನ್ನು ಕಳುಹಿಸಿರುವುದಕ್ಕಾಗಿ ಅವನು ನ್ಯಾಯದರ್ಶಿಗಳ ಮಂಡಲಿಯ ಬಳಿ ಕ್ಷಮೆಯಾಚಿಸಿದನು. ಇದಲ್ಲದೆ ಅವನು ಹೇಳಿದ್ದು: “ಇದು ಸರಿಯಾಗಿಲ್ಲವೆಂದು ತೋರುವಲ್ಲಿ, ಇದನ್ನು ಎಸೆದುಬಿಡುವುದು ಸುಲಭ, ಮತ್ತು ಇದರಿಂದ ನನ್ನ ಸಮಯವನ್ನು ಅಥವಾ ಬೇರೊಬ್ಬರ ಸಮಯವನ್ನು ನಾನು ವ್ಯರ್ಥವಾಗಿ ಹಾಳುಮಾಡಿದಂತಾಗುವುದಿಲ್ಲ.” ಆದರೂ, ನ್ಯಾಯದರ್ಶಿಗಳ ಮಂಡಲಿಗೆ ಅವನ ನಕ್ಷೆಯೇ ಇಷ್ಟವಾಯಿತು ಮತ್ತು ಅದನ್ನು “ಸ್ಪಷ್ಟವಾದ, ನೇರವಾದ, ಹಾಗೂ ತುಂಬ ಸರಳವಾದ” ನಕ್ಷೆಯೆಂದು ತೀರ್ಮಾನಿಸಿತು. ಅವನ ನಕ್ಷೆಯು ಏನನ್ನು ಪ್ರಸ್ತಾಪಿಸಿತ್ತು, ಮತ್ತು ಅವನ ನಕ್ಷೆಯಿಂದ ಒಂದು ಬಯಲು ಪ್ರದೇಶವು ಹೇಗೆ ಕಾಂಕ್ರೀಟ್ ನಗರವಾಗಿ ಮಾರ್ಪಟ್ಟಿತು?
ಧೂಳಿನಲ್ಲಿ ಒಂದು “ವಿಮಾನ”
ಇದನ್ನು ಕಂಡುಹಿಡಿಯುವ ಒಂದು ಅತ್ಯುತ್ತಮ ವಿಧವು, ಮೂಸ್ಯೂ ನೀವೂ ಡಾ ಮೆಮೊರ್ಯ ಕಾಂಡಾಂಗ (ಕಾಂಡಾಂಗೊ ಸ್ಮರಣೆಯ ಸಜೀವ ಮ್ಯೂಸಿಯಮ್)ವನ್ನು ಭೇಟಿಮಾಡುವುದಾಗಿದೆ. ಆ ರಾಜಧಾನಿಯ ಮೊದಲ ಆಸ್ಪತ್ರೆಯಲ್ಲಿಯೇ ಮ್ಯೂಸಿಯಮ್ ಇರುವುದರಿಂದ, ಈ ಕಟ್ಟಡವು ಅಕ್ಷರಾರ್ಥವಾಗಿ ಬ್ರೆಸಿಲಿಯಾದ ತೊಟ್ಟಿಲಾಗಿದೆ. ಬ್ರೆಸಿಲಿಯದಲ್ಲಿ 40 ವರ್ಷಗಳ ಹಿಂದೆ ಜನಿಸಿದ ಮೊದಲ ಶಿಶುಗಳು, ತಮ್ಮ ಜೀವನಗಳನ್ನು ಆರಂಭಿಸಿದ್ದು ಇಲ್ಲಿಯೇ. ಆದರೆ, ಇಂದು ಆ ಹಿಂದಿನ ಆಸ್ಪತ್ರೆಯು, ಬ್ರೆಸಿಲಿಯದ ಜನನ ಹಾಗೂ ಬಾಲ್ಯಾವಸ್ಥೆಯ ಕಥೆಯನ್ನು ಹೇಳುತ್ತದೆ. ಮ್ಯೂಸಿಯಮ್ನಲ್ಲಿ ಒಂದು ಕಡೆ ಹೀಗೆ ಬರೆಯಲಾಗಿದೆ; ಇದು “ಧೂಳು, ಗುಡಾರ, ಹಾಗೂ ಕಾಂಕ್ರೀಟ್”ನ ಒಂದು ಕಥೆಯಾಗಿದೆ.
ಆ ಮ್ಯೂಸಿಯಮ್ನ ಸಿಬ್ಬಂದಿಯ ಸದಸ್ಯರಾದ ಲೌರೆಟೀ ಮಾಶಾಡೂ, ನನಗೆ “ಧೂಳಿ”ನ ಕಾಲಾವಧಿಯ ಪ್ರವಾಸವನ್ನು ಮಾಡಿಸಿದಳು. 1957ರಲ್ಲಿ ತೆಗೆಯಲ್ಪಟ್ಟಿದ್ದ ಒಂದು ಛಾಯಾಚಿತ್ರದ ಮುಂದೆ ಆಕೆ ನಿಲ್ಲುತ್ತಾಳೆ. ಅದು ಧೂಳು ತುಂಬಿದ್ದ ಎರಡು ರಸ್ತೆಗಳ ಚಿತ್ರವಾಗಿದ್ದು, ಅವು ಹುಲ್ಲುಮೈದಾನದ ಮೂಲಕ ಹಾದುಹೋಗಿ, ಮಧ್ಯೆ ಎಲ್ಲೋ ಒಂದು ಕಡೆ ಒಟ್ಟಿಗೆ ಸೇರುತ್ತಿವೆ. “ಈ ಛಾಯಾಚಿತ್ರವು, ನಗರದ ನಿರ್ಮಾಣ ಕಾರ್ಯದಲ್ಲಿನ ಪ್ರಥಮ ಹಂತವನ್ನು ತೋರಿಸುತ್ತದೆ” ಎಂದು ಆಕೆ ಹೇಳುತ್ತಾಳೆ. ತದನಂತರ, ಕಾಸ್ಟನ ರೂಪರೇಖೆಗಳಿಂದ ನಾವು ಕಂಡುಕೊಳ್ಳುವುದೇನೆಂದರೆ, ಆ ರಸ್ತೆಗಳಲ್ಲಿ ಒಂದನ್ನು ಅವನು ಸ್ವಲ್ಪ ಬಾಗಿಸಿದನು. ಆ ಬಳಿಕ, ಕಾಂಡಾಂಗಸ್b ಎಂಬ ಹೆಸರಿನ ಕಾರ್ಮಿಕರು, ಹುಲ್ಲುಮೈದಾನದಲ್ಲಿ ಈ ರಸ್ತೆಯನ್ನು ಒಂದು ಕಮಾನಿನ ಆಕಾರದಲ್ಲಿ ಕಟ್ಟಿದರು. ಇದರಿಂದ ಧೂಳಿನಲ್ಲಿ ಒಂದು ವಿಮಾನದ ಆಕಾರವು ಗೋಚರಿಸಿತು.
ಇಂದಿನ ವರೆಗೂ ಅದು ಬ್ರೆಸಿಲಿಯದ ಅಪೂರ್ವ ವಿನ್ಯಾಸರಚನೆಯಾಗಿ ಉಳಿದಿದೆ: ಒಂದು ವಿಮಾನವಾಗಿದ್ದು ಅದರ ಕಾಕ್ಪಿಟ್ (ಚಾಲಕನ ಜಾಗ) ಪೂರ್ವ ದಿಕ್ಕಿನ ಕಡೆಗೂ, ಅದರ ಕಮಾನಿನಾಕಾರದ ರೆಕ್ಕೆಗಳು ಉತ್ತರ ಹಾಗೂ ದಕ್ಷಿಣ ದಿಕ್ಕಿನ ಕಡೆಗೂ ಮುಖಮಾಡಿ ನಿಂತಿದೆ. ಸರಕಾರದ ಮೂರು ಶಾಖೆಗಳಿಗೆ ಸ್ಥಳಾವಕಾಶಮಾಡಿಕೊಟ್ಟಿರುವ ಕಟ್ಟಡಗಳು, ವಿಮಾನದ ಕಾಕ್ಪಿಟ್ನ ಜಾಗದಲ್ಲಿವೆ, ವ್ಯಾಪಾರ ಕ್ಷೇತ್ರವು ವಿಮಾನದ ಮಧ್ಯಭಾಗದಲ್ಲಿದೆ, ಮತ್ತು ವಾಸದ ಮನೆಗಳಿರುವ ಕ್ಷೇತ್ರಗಳು ಅದರ ರೆಕ್ಕೆ ಭಾಗಗಳಲ್ಲಿವೆ.
ಗುಡಾರದಿಂದ ಕಾಂಕ್ರೀಟ್ನ ವರೆಗೆ
ನಿರ್ಮಾಣ ಕಾರ್ಯದ ಸ್ಥಳಕ್ಕೆ ಪ್ರಯಾಣಿಸಲಿಕ್ಕಾಗಿ, ಬ್ರೆಸಿಲ್ನಾದ್ಯಂತವಿರುವ ಕಾರ್ಮಿಕರು ಹೇಗೆ ತಮ್ಮ ಆಸ್ತಿಪಾಸ್ತಿಗಳನ್ನು ಮಾರಿದರು ಎಂಬುದನ್ನು, ಮ್ಯೂಸಿಯಮ್ನ “ಗುಡಾರ” ಹಾಗೂ “ಕಾಂಕ್ರೀಟ್” ವಿಭಾಗಗಳು ವಿವರಿಸುತ್ತವೆ. 1957ರ ಆಗಸ್ಟ್ ತಿಂಗಳಿನಲ್ಲಿ ಇಲ್ಲಿಗೆ ಬಂದ ಒಬ್ಬ ಕಾರ್ಮಿಕನು, ‘ನನ್ನ ತಂದೆ ಒಂದು ಟ್ರಕ್ಕನ್ನು ತಂದರು, ನಮ್ಮ ಇಡೀ ಕುಟುಂಬವನ್ನು, ಅಂದರೆ 20ಕ್ಕಿಂತಲೂ ಹೆಚ್ಚು ಜನರನ್ನು ಒಟ್ಟುಗೂಡಿಸಿ, ಇಲ್ಲಿಗೆ ಬರಲು 19 ದಿನಗಳ ವರೆಗೆ ಪ್ರಯಾಣಿಸಿದರು’ ಎಂದು ಜ್ಞಾಪಿಸಿಕೊಳ್ಳುತ್ತಾನೆ. ಇನ್ನಿತರರು ಬಸ್ ಅಥವಾ ಎತ್ತಿನ ಗಾಡಿ ಅಥವಾ ಲಿಫ್ಟ್ ಕೇಳುವ ಮೂಲಕ ಪ್ರಯಾಣಿಸಿದರು. ಒಟ್ಟಿಗೆ 60,000 ಕಾರ್ಮಿಕರು ಅಲ್ಲಿಗೆ ಬಂದುಮುಟ್ಟಿದರು.
ಈ ಕಾರ್ಮಿಕರ ತಂಡವು ಗುಡಾರಗಳಲ್ಲಿ ವಾಸಿಸುತ್ತಿತ್ತು. 1960ರ ಏಪ್ರಿಲ್ 21ನೆಯ ತಾರೀಖಿನಂದು ಆ ನಗರದ ಉದ್ಘಾಟನಾ ಸಮಾರಂಭವು ನಿಗದಿಪಡಿಸಲ್ಪಟ್ಟಿದ್ದರಿಂದ, ಈ ಕಾರ್ಮಿಕರ ತಂಡದ ಅಗತ್ಯವು ಜರೂರಿಯಾಗಿತ್ತು. ಇದರ ಅರ್ಥ, ಇಂಜಿನಿಯರುಗಳು, ತಂತ್ರಜ್ಞರು, ಹಾಗೂ ಕಾರ್ಮಿಕರು, ಒಂದು ರಾಜಧಾನಿ ನಗರವನ್ನು 1,000 ದಿನಗಳಲ್ಲೇ ಕಟ್ಟಿಮುಗಿಸಬೇಕಾಗಿತ್ತು—ಭಾರಿ ದೊಡ್ಡ ಕೆಲಸ! ಆದರೂ, ಉದ್ಘಾಟನಾ ಸಮಾರಂಭದ ದಿನಕ್ಕಿಂತ ಮುಂಚಿತವಾಗಿಯೇ ಕಾರ್ಮಿಕರು ನಿರ್ಮಾಣ ಕಾರ್ಯವನ್ನು ಮುಗಿಸಿದ್ದರು. ಲೋಕದ ಅತ್ಯಂತ ನವೀನ ರಾಜಧಾನಿಯು, ಹುಲ್ಲುಮೈದಾನದ ಧೂಳಿನಿಂದ ಉದ್ಭವಿಸಿತ್ತು.
ಪ್ರಪ್ರಥಮ ಹಾಗೂ ಏಕಮಾತ್ರ
ಬ್ರೆಸಿಲಿಯದಲ್ಲಿನ ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಹಾಗೂ ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ)ಯ ಕಚೇರಿಯಲ್ಲಿ, ಆ ನಗರಕ್ಕೆ ಹಾಗೂ ಅದನ್ನು ನಿರ್ಮಿಸಿದವರಿಗೆ ಈಗಲೂ ಪ್ರಶಂಸೆಯು ಕೊಡಲ್ಪಡುತ್ತಿದೆ. “ಕಾಸ್ಟನ ನಕ್ಷೆಯಷ್ಟು ಅಚ್ಚುಕಟ್ಟಾಗಿ ನಗರದ ನಕ್ಷೆಯನ್ನು ನಿಷ್ಠೆಯಿಂದ ಕಾರ್ಯರೂಪಕ್ಕೆ ತಂದಿರುವ ಯಾವ ಉದಾಹರಣೆಯೂ ಇಲ್ಲ” ಎಂದು ಯುನೆಸ್ಕೊದ ಸಾಂಸ್ಕೃತಿಕ ಪ್ರತಿನಿಧಿಯಾದ ಡಾ. ಬ್ರಾಯನ್ ಇ. ಬಿಕಾ ನನಗೆ ಹೇಳುತ್ತಾರೆ. “ಯುನೆಸ್ಕೊದ ವಿಶ್ವ ಸೊತ್ತಿನ ಪಟ್ಟಿಯಲ್ಲಿ, ಬ್ರೆಸಿಲಿಯವು 20ನೆಯ ಶತಮಾನದ, ಲೋಕದ ಪ್ರಪ್ರಥಮ ಹಾಗೂ ಏಕಮಾತ್ರ ನಗರವಾಗಿರುವುದಕ್ಕೆ ಅದು ಒಂದು ಕಾರಣವಾಗಿದೆ.”c
ಆ ಪಟ್ಟಿಯಲ್ಲಿ, ಇನ್ನೂ ನಿರ್ಮಾಣ ಕಾರ್ಯದಲ್ಲಿರುವ ನಗರವು ಬ್ರೆಸಿಲಿಯ ಮಾತ್ರವೇ ಆಗಿದೆ. ಇದು ಒಂದು ಪಂಥಾಹ್ವಾನವನ್ನು ಒಡ್ಡುತ್ತದೆ ಎಂದು ಡಾ. ಬಿಕಾ ಹೇಳುತ್ತಾರೆ. “ಈ ನಗರವು ಬದಲಾಗುತ್ತಿರುವುದರಿಂದ, ನಗರದ ಮೂಲ ನಕ್ಷೆಯನ್ನು ನಾವು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ?” ಬದುಕಿದ್ದಾಗ, ವಾಸ್ತುಶಿಲ್ಪಿ ಲೂಸ್ಯೂ ಕಾಸ್ಟ 95 ವರ್ಷ ಪ್ರಾಯದವನಾಗಿದ್ದರೂ, ಅವನು ಆ ಪಂಥಾಹ್ವಾನವನ್ನು ಎದುರಿಸಿದನು. ಅವನು ಹೊಸ ನಿರ್ಮಾಣ ಕಾರ್ಯಗಳ ಮೇಲೆ ಕಣ್ಣಿಟ್ಟನು, ಮತ್ತು ಅವು ತನ್ನ ವಿನ್ಯಾಸರಚನೆಯನ್ನು ಯಾರೂ ಹಾಳುಮಾಡದಂತೆ ಖಚಿತಪಡಿಸಿಕೊಂಡನು. ಉದಾಹರಣೆಗಾಗಿ, ಬ್ರೆಸಿಲಿಯದಲ್ಲಿ ರೈಲುಮಾರ್ಗವನ್ನು ನಿರ್ಮಿಸಲಿಕ್ಕಾಗಿ ಯೋಜನೆಗಳು ಹಾಕಲ್ಪಟ್ಟಿವೆ ಎಂಬುದು ಕಾಸ್ಟನಿಗೆ ಗೊತ್ತಾದಾಗ, ರೈಲುಗಳು ಭೂಗತ ಸುರಂಗಗಳಲ್ಲಿ ಸಂಚರಿಸಬೇಕೆಂದು ಅವನು ಒತ್ತಾಯಿಸಿದನು.
ಮನೋಹರವಾದ ನೋಟ
ಈಗ ನಗರದ ಪ್ರವಾಸವನ್ನು ಮಾಡುವ ಸಮಯವಾಗಿದೆ. ಮೊತ್ತಮೊದಲ ಬಾರಿಗೆ ನೀವು ಈ ನಗರವನ್ನು ಸಂದರ್ಶಿಸುತ್ತಿರುವುದಾದರೂ, ಇಲ್ಲಿನ ಸ್ಥಳಗಳನ್ನು ಕಂಡುಹಿಡಿಯುವುದು ನಿಮಗೆ ಹೆಚ್ಚು ಕಷ್ಟಕರವಲ್ಲ. ಇಲ್ಲಿ ಎರಡು ಮಖ್ಯ ರಸ್ತೆಗಳಿವೆ. ಈ ಎರಡು ರಸ್ತೆಗಳು ಸಂಧಿಸುವಂತಹ ಸ್ಥಳದಲ್ಲಿ ನಗರದ ಬಸ್ ಸ್ಟಾಪ್ ಇದೆ. ಒಂದು ರಸ್ತೆಯು ಪಶ್ಚಿಮದಿಂದ ಪೂರ್ವದ ಕಡೆಗೆ (“ವಿಮಾನ”ದ ಬಾಲದ ಭಾಗದಿಂದ ಕಾಕ್ಪಿಟ್ನ ವರೆಗೆ) ಹೋಗುತ್ತದೆ ಮತ್ತು ಈ ರಸ್ತೆಯಲ್ಲಿ ಹೋಟೆಲ್ಗಳು, ಚಿತ್ರಮಂದಿರಗಳು, ಬ್ಯಾಂಕ್ಗಳು, ಹಾಗೂ ಅಂಗಡಿಗಳು ಇವೆ. ಇನ್ನೊಂದು ರಸ್ತೆಯು ಉತ್ತರದಿಂದ ದಕ್ಷಿಣದ ಕಡೆಗೆ (ಒಂದು ರೆಕ್ಕೆಯ ತುದಿಯಿಂದ ಇನ್ನೊಂದು ರೆಕ್ಕೆಯ ತುದಿಯ ವರೆಗೆ) ಹೋಗುತ್ತದೆ ಮತ್ತು ವಾಸದ ಮನೆಗಳಿರುವ ಕ್ಷೇತ್ರಕ್ಕೆ ಕರೆದೊಯ್ಯುತ್ತದೆ.
ಬ್ರೆಸಿಲಿಯವು ಹೇಗೆ ಕಾಣುತ್ತದೆ ಎಂಬುದನ್ನು ನೋಡಲು, ಟೆಲಿವಿಷನ್ ಟವರ್ ಅತ್ಯುತ್ತಮವಾದ ಸ್ಥಳವಾಗಿದೆ. ಇದು 224 ಮೀಟರುಗಳಷ್ಟು ಎತ್ತರವಿದ್ದು, ವಿಮಾನದ ಮಧ್ಯಭಾಗದಲ್ಲಿ, ರೆಕ್ಕೆಗಳಿಗಿಂತ ಸ್ವಲ್ಪ ಹಿಂದೆ ಇದೆ. ಉಚಿತವಾದ ಲಿಫ್ಟ್ ನಿಮ್ಮನ್ನು ನೆಲದಿಂದ 75 ಮೀಟರುಗಳಷ್ಟು ಮೇಲಕ್ಕೆ ಕೊಂಡೊಯ್ಯುತ್ತದೆ ಮತ್ತು ಆ ನಗರದ ಮಧ್ಯ ಭಾಗದ ಮನೋಹರ ನೋಟವನ್ನು ನಿಮಗೆ ನೀಡುತ್ತದೆ. ಆ ಮಧ್ಯ ಭಾಗವನ್ನು ಪ್ಲಾನೂ ಪೀಲೊಟೂ ಎಂದು ಕರೆಯಲಾಗುತ್ತದೆ. ಆ ನಗರದಲ್ಲಿ ಬಹು ವಿಸ್ತಾರವಾಗಿದ್ದು, ಬರಿದಾಗಿರುವ ಮೈದಾನ ಪ್ರದೇಶಗಳನ್ನು ನೀವು ನೋಡುವಾಗ, ಆಕಾಶವನ್ನು ಮುಟ್ಟುತ್ತಿವೆಯೋ ಎಂಬಂತೆ ಅವು ತೋರುತ್ತವೆ ಮತ್ತು ನೀವು ಬ್ರೆಸಿಲಿಯದ ವಿಶಾಲ ಭೂಮಿಯನ್ನು ನೋಡಿ ಬೆರಗಾಗುತ್ತೀರಿ. ವಾಸ್ತವದಲ್ಲಿ, ರೊಬರ್ಟೂ ಬೂರ್ಲಿ-ಮಾರ್ಕ್ಸ್ ಎಂಬ ಭೂದೃಶ್ಯ ವಿನ್ಯಾಸಕನು, ಬ್ರೆಸಿಲಿಯದ ಮೈದಾನಗಳು ಹಾಗೂ ಉದ್ಯಾನವನಗಳನ್ನು ಎಷ್ಟು ವಿಸ್ತಾರವಾಗಿ ವ್ಯವಸ್ಥಾಪಿಸಿದ್ದಾನೆಂದರೆ, ಲೋಕದಲ್ಲಿರುವ ಇತರ ಯಾವುದೇ ರಾಜಧಾನಿಗಿಂತಲೂ ಈ ನಗರದಲ್ಲಿನ ನಿವಾಸಿಗೆ ಹೆಚ್ಚು ಹಸಿರು ಪ್ರದೇಶವು ಲಭ್ಯವಿದೆ ಎಂದು ಪ್ರತಿಪಾದಿಸಲಾಗುತ್ತದೆ.
ಪೂರ್ವ ದಿಕ್ಕಿನ ಕಡೆಗೆ ಒಂದು ದೊಡ್ಡ ಹುಲ್ಲಿನ ವಿಹಾರಮಾರ್ಗವಿದ್ದು, ಅದರ ಎರಡೂ ಕಡೆಗಳಲ್ಲಿ ರಸ್ತೆಗಳಿವೆ. ಆ ರಸ್ತೆಗಳುದ್ದಕ್ಕೂ ಒಂದೇ ರೀತಿಯ 17 ಕಟ್ಟಡಗಳಿವೆ. ಬಾಕ್ಸ್ ಆಕಾರದಲ್ಲಿರುವ ಈ ಕಟ್ಟಡಗಳಲ್ಲಿ, ಸರಕಾರದ ಬೇರೆ ಬೇರೆ ಇಲಾಖೆಗಳಿವೆ. ವಿಹಾರಮಾರ್ಗದ ಕೊನೆಯಲ್ಲಿ, ಬ್ರೆಸಿಲಿಯದ ಗುರುತಿನ ಚಿಹ್ನೆ ಕಂಡುಬರುತ್ತದೆ: ಅದು ಒಂದೇ ರೀತಿಯ ಎರಡು ಗುಮ್ಮಟಗಳು. ಒಂದು ನೇರವಾಗಿ ಮತ್ತು ಇನ್ನೊಂದು ತಲೆಕೆಳಗಾಗಿದೆ. ಇವು 28 ಮಹಡಿಗಳುಳ್ಳ ಎರಡು ಕಟ್ಟಡಗಳ ಮುಂದೆಯೇ ಇವೆ. ಈ ಕಟ್ಟಡಗಳಲ್ಲಿ ನ್ಯಾಷನಲ್ ಕಾಂಗ್ರೆಸ್, ಅಂದರೆ ಬ್ರೆಸಿಲ್ನ ಶಾಸನಸಭೆಯಿದೆ.
ನ್ಯಾಷನಲ್ ಕಾಂಗ್ರೆಸ್ ಕಟ್ಟಡದ ಆಕಾರವು, ನ್ಯೂ ಯಾರ್ಕಿನಲ್ಲಿರುವ ವಿಶ್ವ ಸಂಸ್ಥೆಯ ಮುಖ್ಯಕಾರ್ಯಾಲಯವನ್ನು ನಿಮ್ಮ ನೆನಪಿಗೆ ತರಬಹುದು. ಇದಕ್ಕೆ ಕಾರಣವಿದೆ. ವಿಶ್ವ ಸಂಸ್ಥೆಯ ಕಟ್ಟಡಗಳನ್ನು ಯೋಜಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದ ವಾಸ್ತುಶಿಲ್ಪಿಗಳಲ್ಲಿ ಒಬ್ಬನಾದ, ಬ್ರೆಸಿಲಿನ ಆಸ್ಕರ್ ನೀಮಾಯರ್, ಈ ನ್ಯಾಷನಲ್ ಕಾಂಗ್ರೆಸನ್ನು ಹಾಗೂ ಬ್ರೆಸಿಲಿಯದ ಇನ್ನಿತರ ದೊಡ್ಡ ಕಟ್ಟಡಗಳ ನಕ್ಷೆಯನ್ನು ವಿನ್ಯಾಸಿಸಿದ್ದನು. ವಿದೇಶಿ ಮಂತ್ರಿಮಂಡಲ (ಪಾಲಾಸ್ಯೂ ಇಟಾಮಾರಾಟೀ) ಮತ್ತು ನ್ಯಾಯ ಮಂತ್ರಿಮಂಡಲ (ಪಾಲಾಸ್ಯೂ ಡಾ ಸ್ಯೂಸ್ಟೀಸ)ಗಳಂತಹ ಅವನ ಅತ್ಯುತ್ತಮ ವಿನ್ಯಾಸಗಳಲ್ಲಿ ಕೆಲವು, ನ್ಯಾಷನಲ್ ಕಾಂಗ್ರೆಸ್ನ ಅವಳಿ ಗೋಪುರದ ಬಳಿ ಇವೆ.
ನೀವು ದಾರಿತಪ್ಪಲು ಸಾಧ್ಯವೇ ಇಲ್ಲ
ಬ್ರೆಸಿಲಿಯವು ಕೇವಲ ವಾಸ್ತುಶಿಲ್ಪದ ಕಟ್ಟಡಗಳುಳ್ಳ ಒಂದು ನಗರವಾಗಿರುವುದಿಲ್ಲ. ಇದು ಸಾವಿರಾರು ಜನರಿಗೆ ಒಂದು ಸುವ್ಯವಸ್ಥಿತ ನಿವಾಸ ಸ್ಥಳವೂ ಆಗಿದೆ. ನಾವು ನಗರದ ವಾಸದ ಮನೆಗಳ ವಿಭಾಗದಿಂದ ಹಾದುಹೋಗುವಾಗ, ಬ್ರೆಸಿಲಿಯದಲ್ಲಿ ವಾಸಿಸುತ್ತಿರುವ ಒಬ್ಬ ವಕೀಲನಾದ ಪೌಲೂ ಹೀಗೆ ಹೇಳುತ್ತಾನೆ: “ಬ್ರೆಸಿಲಿಯಕ್ಕೆ ಸ್ಥಳಾಂತರಿಸಿರುವ ಅಧಿಕಾಂಶ ಜನರು, ಈ ಕ್ರಮಬದ್ಧತೆಯನ್ನು ತುಂಬ ಇಷ್ಟಪಡುತ್ತಾರೆ. ಏಕೆಂದರೆ ಬೇರೆ ನಗರಗಳಲ್ಲಿ ಅವರಿಗೆ ರೂಢಿಯಾಗಿದ್ದ ಅವ್ಯವಸ್ಥೆಗಳಿಂದ ಇದು ಅವರಿಗೆ ಉಪಶಮನವನ್ನು ಕೊಡುತ್ತದೆ.”
ಬ್ರೆಸಿಲಿಯದ ನಿವಾಸಿಗಳು ಬಹುಮಹಡಿಗಳುಳ್ಳ ಕಟ್ಟಡಗಳಲ್ಲಿ ವಾಸಿಸುತ್ತಾರೆ. ಒಂದು ಅಂಗಣದ ಸುತ್ತಲೂ ನಿರ್ಮಿಸಲ್ಪಟ್ಟಿರುವ ಕಟ್ಟಡಗಳ ಗುಂಪು, ಒಂದು ಸೂಪರ್ಬ್ಲಾಕ್ ಆಗುತ್ತದೆ. ಸಾಲಾಗಿರುವ ಸೂಪರ್ಬ್ಲಾಕ್ಗಳು ಆ ನಗರದ ಉತ್ತರ ಹಾಗೂ ದಕ್ಷಿಣ ಭಾಗದ ರೆಕ್ಕೆಗಳಲ್ಲಿ ತುಂಬಿವೆ. ಮನೆಯ ವಿಳಾಸಗಳನ್ನು ಸುಲಭವಾಗಿ ಕಂಡುಹಿಡಿಯಬಹುದು. ಉದಾಹರಣೆಗಾಗಿ, “N-102-L,” ನಗರದ ಉತ್ತರ ಭಾಗದ ರೆಕ್ಕೆ, ಸೂಪರ್ಬ್ಲಾಕ್ 102, ವಾಸದ ಮನೆಗಳುಳ್ಳ ಕಟ್ಟಡ Lನಲ್ಲಿ ಕಂಡುಬರುತ್ತದೆ. ಮತ್ತು ನೀವು ರೆಕ್ಕೆಗಳ ತುದಿ ಭಾಗಕ್ಕೆ ಹೋಗುತ್ತಿದ್ದಂತೆ, ಬ್ಲಾಕ್ ನಂಬರ್ಗಳು (102ರಿಂದ 116ಕ್ಕೆ) ಹೆಚ್ಚಾಗುತ್ತವೆ ಎಂಬುದನ್ನು ನೀವು ಜ್ಞಾಪಕವಿಟ್ಟುಕೊಳ್ಳುವಲ್ಲಿ, ನೀವು ದಾರಿತಪ್ಪಲು ಸಾಧ್ಯವೇಇಲ್ಲ.
ಕ್ರಮಬದ್ಧತೆಯನ್ನು ಹಾಗೂ ಸೌಕರ್ಯಗಳನ್ನು ಕಾಪಾಡಿಕೊಳ್ಳಲಿಕ್ಕಾಗಿ, ವಾಸದ ಮನೆಗಳುಳ್ಳ ಕಟ್ಟಡಗಳು ಆರು ಮಹಡಿಗಳಿಗಿಂತ ಎತ್ತರವಿರುವುದಿಲ್ಲ. ಹೀಗೆ, ಅಂಗಣದಲ್ಲಿ ಆಡುತ್ತಿರುವ ಒಂದು ಮಗುವು, ಅದರ ತಾಯಿಯು ತನ್ನ ಕಟ್ಟಡದ ಕಿಟಕಿಯಿಂದ “ಮ್ಯಾನ್ವೆಲ್ ವೆನ್ ಕಾ!” (ಮ್ಯಾನ್ವೆಲ್ ಬಾ ಇಲ್ಲಿ!) ಎಂದು ಕರೆಯುವಾಗ, ಆ ಮಗು ಅದನ್ನು ಕೇಳಿಸಿಕೊಳ್ಳಸಾಧ್ಯವಿದೆ ಎಂದು ಶ್ರೀಮಾನ್ ಕಾಸ್ಟ ಹೇಳಿದರು.
ಹೆಚ್ಚುತ್ತಿರುವ ಸಮಸ್ಯೆಗಳು
ಬ್ರೆಸಿಲಿಯವು ನಕ್ಷೆಗನುಸಾರ ಕಟ್ಟಲ್ಪಟ್ಟಿರುವ ಒಂದು ನಗರವೆಂದು ಹೆಮ್ಮೆಪಡುವುದಾದರೂ, ಆ ನಗರದ ನೀಲಿಪ್ರತಿಯು, ಬ್ರೆಸಿಲಿಯವನ್ನು ಕಟ್ಟಿ ಪೂರ್ಣಗೊಳಿಸಿದ ಕಾರ್ಮಿಕರನ್ನು ಅಲಕ್ಷಿಸಿತು. ಹೊಸ ರಾಜಧಾನಿಯ ಉದ್ಘಾಟನಾ ಸಮಾರಂಭದ ಬಳಿಕ, ಅಲ್ಲಿನ ಕಾರ್ಮಿಕರು ತಮ್ಮ ಎಲ್ಲ ಸಾಮಾನುಗಳನ್ನು ಗಂಟುಕಟ್ಟಿಕೊಂಡು, ತಮ್ಮ ತಮ್ಮ ಮೂಲ ಸ್ಥಳಗಳಿಗೆ ಹಿಂದಿರುಗುವರೆಂದು ನೆನಸಲಾಗಿತ್ತು. ಆದರೆ ಆಸ್ಪತ್ರೆಗಳು, ಶಾಲೆಗಳು, ಅಥವಾ ಉದ್ಯೋಗಗಳು ಇಲ್ಲದಿರುವಂತಹ ಒಂದು ಸ್ಥಳಕ್ಕೆ ಹಿಂದಿರುಗುವುದು, ಈ ಕಾರ್ಮಿಕರಿಗೆ ಇಷ್ಟವಿರಲಿಲ್ಲ ಎಂಬುದು ಸುವ್ಯಕ್ತ. ಅವರು ಬ್ರೆಸಿಲಿಯದಲ್ಲೇ ಉಳಿಯಲು ಇಷ್ಟಪಟ್ಟರು—ಆದರೆ ಎಲ್ಲಿ?
ತಾವೇ ಕಟ್ಟಿದಂತಹ ತುಂಬ ದುಬಾರಿಯಾದ (ಬಹುಮಹಡಿಗಳುಳ್ಳ) ಮನೆಗಳನ್ನು ಬಾಡಿಗೆಗೆ ಪಡೆದುಕೊಳ್ಳಲು ಅವರು ಅಸಮರ್ಥರಾಗಿದ್ದರು. ಆದುದರಿಂದ ಅವರು ಬ್ರೆಸಿಲಿಯದ ಹೊರಗಿನ ಹಸಿರು ಪ್ರದೇಶದಲ್ಲಿ ನೆಲೆಸಿದರು. ಸ್ವಲ್ಪ ಸಮಯದಲ್ಲಿಯೇ, ಬ್ರೆಸಿಲಿಯಕ್ಕಿಂತಲೂ ದೊಡ್ಡದಾದ ಅನೇಕ ನಗರಗಳು ಅಲ್ಲಿ ಸ್ಥಾಪಿಸಲ್ಪಟ್ಟವು. ಇಂದು, ಯೋಜಿಸಲ್ಪಟ್ಟಿದ್ದ ನಗರದಲ್ಲಿ 4,00,000 ಜನರು ಮಾತ್ರ ವಾಸಿಸುತ್ತಾರೆ ಮತ್ತು ಬಹುಮಹಡಿಗಳುಳ್ಳ ಅನೇಕ ಮನೆಗಳು ಖಾಲಿಯಾಗಿಯೇ ಇವೆ; ಆದರೆ ನಗರದ ಹೊರಗೆ ತಮ್ಮಷ್ಟಕ್ಕೇ ಸ್ಥಾಪಿತವಾಗಿರುವ ಪಟ್ಟಣಗಳಲ್ಲಿ ಸುಮಾರು 20 ಲಕ್ಷ ನಿವಾಸಿಗಳು ನೆಲೆಸಿದ್ದಾರೆ. ನಗರದ ನಕ್ಷೆಯು ಸಮಾನತಾವಾದದ ಉದ್ದೇಶಗಳನ್ನು ಇಟ್ಟುಕೊಂಡಿತ್ತಾದರೂ, ಆದಾಯದಲ್ಲಿನ ಏರುಪೇರುಗಳು, ಜನಸಂಖ್ಯೆಯನ್ನು ಸಂಪೂರ್ಣವಾಗಿ ಪ್ರತ್ಯೇಕವಾದ ನಗರಗಳನ್ನಾಗಿ ವಿಂಗಡಿಸಿಬಿಟ್ಟಿವೆ.
ಅನಿರೀಕ್ಷಿತವಾದ ಜನಸಂಖ್ಯಾ ಸ್ಫೋಟ ಹಾಗೂ ವರ್ಗಭೇದದ ಪರಿಣಾಮವಾಗಿ, ಇನ್ನಿತರ ನಗರಗಳಲ್ಲಿ ಸಾಮಾನ್ಯವಾಗಿರುವ ದುಷ್ಕೃತ್ಯ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಇಲ್ಲಿಯೂ ಹೆಚ್ಚಿವೆ. ಬ್ರೆಸಿಲ್ನ ನವೀನ ರಾಜಧಾನಿಯಲ್ಲಿ ಸಮಸ್ಯೆಗಳು ಅಧಿಕಗೊಳ್ಳುತ್ತಿವೆ. ಸುವ್ಯವಸ್ಥಿತ ರಸ್ತೆಗಳು ಹಾಗೂ ಹೊಸ ವಾಸ್ತುಶಿಲ್ಪಗಳು, ಜನರ ಹೃದಯಗಳನ್ನು ಹಾಗೂ ನಡವಳಿಕೆಯನ್ನು ಬದಲಾಯಿಸಲಾರವು ಎಂಬುದು ಸ್ಪಷ್ಟ.
“ಬ್ರೆಸಿಲ್ನ ಹೃದಯ”
ಬ್ರೆಸಿಲಿಯಕ್ಕೆ ಹೋಗುವ ದಾರಿಯುದ್ದಕ್ಕೂ ಕಂಡುಬರುವ ಬಿಲ್ಬೋರ್ಡ್ಗಳು, ಒಳಗೆ ಪ್ರವೇಶಿಸುತ್ತಿರುವ ಪ್ರಯಾಣಿಕರು ಈಗ “ಬ್ರೆಸಿಲ್ನ ಹೃದಯ”ವನ್ನು ಪ್ರವೇಶಿಸಲಿದ್ದಾರೆ ಎಂಬುದನ್ನು ಅವರಿಗೆ ನೆನಪು ಹುಟ್ಟಿಸುತ್ತವೆ. ಅನೇಕ ವಿಷಯಗಳಲ್ಲಿ, ಈ ಗುರಿನುಡಿಯು ಸತ್ಯವಾಗಿದೆ: ಬ್ರೆಸಿಲಿಯವು ಭೌಗೋಳಿಕವಾಗಿ ಆ ದೇಶದ ಮಧ್ಯ ಭಾಗದಲ್ಲಿ ಇಲ್ಲದಿರುವುದಾದರೂ, ಆ ದೇಶದಲ್ಲಿರುವ ಎಲ್ಲ ಪ್ರಮುಖ ನಗರಗಳಷ್ಟೇ ಸಮಾನ ದೂರದಲ್ಲಿದೆ. ಹಾಗಾದರೆ, ಆ ಗುರಿನುಡಿಯ ನಿಜವಾದ ಅರ್ಥವೇನು? ನಿಜವಾಗಿಯೂ ಬ್ರೆಸಿಲಿಯವು ಬ್ರೆಸಿಲ್ನ ಹೃದಯವಾಗಿದೆಯೊ? ಈ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಅಪೂರ್ವ ನಗರವನ್ನು ಭೇಟಿ ಮಾಡುವ ಮೂಲಕ ಮಾತ್ರವೇ ನಿಮ್ಮ ಪ್ರಶ್ನೆಗೆ ಉತ್ತರ ಸಿಗಬಲ್ಲದು. ಆದರೆ ಒಂದು ವಿಷಯವನ್ನು ಮನಸ್ಸಿನಲ್ಲಿಡಿರಿ, ಏನೆಂದರೆ ನೀವು ಬ್ರೆಸಿಲಿಯದ ವಿಷಯದಲ್ಲಿ ಆತುರದಿಂದ ನಿರ್ಧಾರಕ್ಕೆ ಬರಬೇಡಿ. ಆ ನಗರದಲ್ಲಿ ಸ್ವಲ್ಪ ಸಮಯವನ್ನು ಕಳೆಯಿರಿ, ಏಕೆಂದರೆ ಅಲ್ಲಿನ ನಿವಾಸಿಯೊಬ್ಬಳು ಹೇಳಿದಂತೆ, “ಬ್ರೆಸಿಲಿಯ ಸೆಡೂಸ್ ಗ್ರಾಡೂಆಲ್ಮೆಂಟ್.” (ಬ್ರೆಸಿಲಿಯವು ಕ್ರಮೇಣವಾಗಿ ಮನಸೆಳೆಯುತ್ತದೆ.)
[ಅಧ್ಯಯನ ಪ್ರಶ್ನೆಗಳು]
a ಇದರ ಮೂಲ ನಕ್ಷೆಯನ್ನು ವಿನ್ಯಾಸಿಸಿದ ಲೂಸ್ಯೂ ಕಾಸ್ಟ, ಈ ಲೇಖನವು ಸಿದ್ಧಪಡಿಸಲ್ಪಟ್ಟ ಬಳಿಕ ಸ್ವಲ್ಪ ಸಮಯದಲ್ಲೇ, ಅಂದರೆ ತನ್ನ 96ರ ಪ್ರಾಯದಲ್ಲಿ, 1998ರ ಜೂನ್ ತಿಂಗಳಿನಲ್ಲಿ ಮೃತಪಟ್ಟನು.
b ಇದು ಅಂಗೋಲ ಮೂಲದ (ಈ ಹಿಂದೆ ಆಫ್ರಿಕದವರು ಪೋರ್ಚುಗೀಸರನ್ನು ವರ್ಣಿಸಲಿಕ್ಕಾಗಿ ಉಪಯೋಗಿಸುತ್ತಿದ್ದ ಶಬ್ದ) ಒಂದು ಶಬ್ದವಾಗಿದ್ದು, ಅದು ಬ್ರೆಸಿಲಿಯದ ನಿರ್ಮಾಣ ಕಾರ್ಯದ ಕಾರ್ಮಿಕರ ಅಚ್ಚುಮೆಚ್ಚಿನ ಹೆಸರಾಗಿ ಪರಿಣಮಿಸಿತು.
c ಯುನೆಸ್ಕೊದಿಂದ ಸಂಗ್ರಹಿಸಲ್ಪಟ್ಟಿರುವ ಈ ಪಟ್ಟಿಯು, ಲೋಕದಾದ್ಯಂತವಾಗಿ “ಅಸಾಮಾನ್ಯವಾದ ನೈಸರ್ಗಿಕ ಅಥವಾ ಸಾಂಸ್ಕೃತಿಕ ಮಹತ್ವ”ಗಳುಳ್ಳ 552 ಸ್ಥಳಗಳನ್ನು ಉಲ್ಲೇಖಿಸುತ್ತದೆ.
[ಪುಟ 15 ರಲ್ಲಿರುವ ಚಿತ್ರ]
“ಧೂಳು, ಗುಡಾರ, ಹಾಗೂ ಕಾಂಕ್ರೀಟ್”ನ ಒಂದು ಕಥೆ
[ಕೃಪೆ]
Arquivo Público do Distrito Federal
[ಪುಟ 15 ರಲ್ಲಿರುವ ಚಿತ್ರ]
ಕಾಂಡಾಂಗಸ್ ಕಾರ್ಮಿಕರ ಮೆರವಣಿಗೆ
[ಕೃಪೆ]
Arquivo Público do Distrito Federal
[ಪುಟ 17 ರಲ್ಲಿರುವ ಚಿತ್ರ]
ಬ್ರೆಸಿಲಿಯದ ಮನೋಹರ ನೋಟ
1. ಸರಕಾರಿ ಇಲಾಖೆಗಳು
2. ಕಾಂಗ್ರೆಸ್ನ ಆಫೀಸ್ ಕಟ್ಟಡಗಳು
3. ಸುಪ್ರೀಮ್ ಕೋರ್ಟ್
4. ಮೂರು ಅಧಿಕಾರಗಳ ಪ್ಲಾಸ
5. ಮೇಲಧಿಕಾರಿಗಳ ಆಫೀಸುಗಳು
[ಕೃಪೆ]
Secretaria de Turismo, Brasília
[ಪುಟ 18 ರಲ್ಲಿರುವ ಚಿತ್ರ]
ಲೋಕದ ರಾಜಧಾನಿಗಳಲ್ಲೇ ಅತ್ಯಂತ ಹಸಿರು ಪ್ರದೇಶವುಳ್ಳ ರಾಜಧಾನಿ