ಅಸ್ತವ್ಯಸ್ತವಾಗಿರುವ ಹವಾಮಾನ
ಅನೇಕ ವಿಧಗಳಲ್ಲಿ, ನಮ್ಮಲ್ಲಿ ಹೆಚ್ಚಿನವರು ಅಂಗಾರಾಧಾರಿತ (ಕಾರ್ಬನ್‌ಬೇಸ್ಡ್) ಇಂಧನಗಳ ಮೇಲೆ ಹೊಂದಿಕೊಂಡಿರುತ್ತೇವೆ. ಕಾರು ಮತ್ತು ಇತರ ವಾಹನಗಳನ್ನು ನಾವು ಗ್ಯಾಸಲೀನ್ ಅಥವಾ ಡೀಸೆಲ್‌ನ ಶಕ್ತಿಯಿಂದ ನಡಿಸುತ್ತೇವೆ. ಕಲ್ಲಿದ್ದಲು, ನೈಸರ್ಗಿಕ ಅನಿಲ ಅಥವಾ ಎಣ್ಣೆಯನ್ನು ಉಪಯೋಗಿಸುವ ಶಕ್ತಿಸ್ಥಾವರಗಳಿಂದ ಉತ್ಪಾದಿಸಲ್ಪಟ್ಟ ವಿದ್ಯುಚ್ಛಕ್ತಿಯನ್ನು ನಾವು ಬಳಸುತ್ತೇವೆ. ಅಡುಗೆಮಾಡಲು ಅಥವಾ ಬೆಚ್ಚಗಾಗಿಡಲು ನಾವು ಕಟ್ಟಿಗೆ, ಇದ್ದಲು, ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲನ್ನು ಸುಡುತ್ತೇವೆ. ಈ ಎಲ್ಲ ಕ್ರಿಯೆಗಳು ವಾತಾವರಣಕ್ಕೆ ಕಾರ್ಬನ್ ಡೈಆಕ್ಸೈಡನ್ನು ಕೂಡಿಸುತ್ತವೆ. ಈ ಅನಿಲವು, ಸೂರ್ಯನ ಶಾಖವನ್ನು ಹಿಡಿದಿಡುತ್ತದೆ.
ಶಾಖ ಹಿಡಿದಿಡುವ ಬೇರೆ ಹಸಿರುಮನೆಯ ಅನಿಲಗಳನ್ನೂ ನಾವು ವಾತಾವರಣಕ್ಕೆ ಕೂಡಿಸುತ್ತೇವೆ. ವ್ಯವಸಾಯದಲ್ಲಿ ಬಳಸಲ್ಪಡುವ ಸಾರಜನಕದ ಕೃತಕ ಗೊಬ್ಬರದಿಂದ, ವಾತಾವರಣಕ್ಕೆ ನೈಟ್ರಸ್ ಆಕ್ಸೈಡ್ ಬಿಡುಗಡೆ ಮಾಡಲ್ಪಡುತ್ತದೆ. ಅಕ್ಕಿ ಗದ್ದೆಗಳಿಂದ ಮತ್ತು ಪಶುಪೋಷಣ ಸ್ಥಳಗಳಿಂದ, ಮೆತೇನ್ ಅನಿಲ ಹೊರಸೂಸಲ್ಪಡುತ್ತದೆ. ಪ್ಲಾಸ್ಟಿಕ್ ಬುರುಗುಗಳ ತಯಾರಿಕೆಯಿಂದ ಮತ್ತು ಇತರ ಕೈಗಾರಿಕಾ ಕಾರ್ಯವಿಧಾನಗಳಿಂದ ಕ್ಲೋರೋಫ್ಲೋರೋಕಾರ್ಬನ್ (ಸಿಎಫ್‌ಸಿ)ಗಳು ಹೊರಬರುತ್ತವೆ. ಸಿಎಫ್‌ಸಿಗಳು ಶಾಖವನ್ನು ಹಿಡಿದಿಡಿಯುತ್ತವೆ ಮಾತ್ರವಲ್ಲ, ಭೂಮಿಯ ವಾಯುಮಂಡಲದ ಮೇಲಿನ ಸ್ತರವಾದ ಓಸೋನ್ ಪದರವನ್ನೂ ನಾಶಗೊಳಿಸುತ್ತವೆ.
ಈಗ ನಿಯಂತ್ರಿಸಲ್ಪಟ್ಟಿರುವ ಸಿಎಫ್‌ಸಿಗಳನ್ನು ಬಿಟ್ಟರೆ, ಶಾಖ ಹಿಡಿದಿಡುವ ಈ ಅನಿಲಗಳು ಎಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ವಾತಾವರಣದೊಳಕ್ಕೆ ಸೂಸಲ್ಪಡುತ್ತಿವೆ. ಇದಕ್ಕೆ ಆಂಶಿಕ ಕಾರಣವು, ಭೂಮಿಯಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಜೊತೆಗೆ, ಶಕ್ತಿಯ ಬಳಕೆಯಲ್ಲಿ ಹೆಚ್ಚಳ, ಕೈಗಾರಿಕಾ ಚಟುವಟಿಕೆ ಮತ್ತು ವ್ಯವಸಾಯವಾಗಿದೆ. ವಾಷಿಂಗ್ಟನ್‌ನಲ್ಲಿರುವ ಪರಿಸರ ಸಂರಕ್ಷಣೆಯ ಏಜೆನ್ಸಿಗನುಸಾರ, ಮಾನವರು ಈಗ ಪ್ರತಿ ವರುಷ ವಾತಾವರಣದೊಳಕ್ಕೆ 600 ಕೋಟಿ ಟನ್ನುಗಳಷ್ಟು ಕಾರ್ಬನ್ ಡೈಆಕ್ಸೈಡ್ ಮತ್ತು ಇತರ ಹಸಿರುಮನೆ ಅನಿಲಗಳನ್ನು ಚಿಮ್ಮುತ್ತಾರೆ. ಈ ಹಸಿರುಮನೆ ಅನಿಲಗಳು ಸುಮ್ಮನೆ ಮಾಯವಾಗಿ ಹೋಗುವುದಿಲ್ಲ; ಅವು ದಶಕಗಳಷ್ಟು ಕಾಲ ವಾತಾವರಣದಲ್ಲಿ ಬಳಸಾಡಬಲ್ಲವು.
ಸಾಮಾನ್ಯವಾಗಿ ವಿಜ್ಞಾನಿಗಳು ಎರಡು ವಿಷಯಗಳ ಕುರಿತು ತೀರ ನಿಶ್ಚಿತತೆಯಿಂದಿದ್ದಾರೆ. ಮೊದಲನೆಯದಾಗಿ, ಇತ್ತೀಚಿನ ದಶಕಗಳು ಮತ್ತು ಶತಮಾನಗಳಲ್ಲಿ, ವಾತಾವರಣದಲ್ಲಿರುವ ಕಾರ್ಬನ್ ಡೈಆಕ್ಸೈಡ್ ಮತ್ತು ಇತರ ಹಸಿರುಮನೆ ಅನಿಲಗಳ ಪ್ರಮಾಣವು ದಟ್ಟವಾಗಿದೆ. ಎರಡನೆಯದಾಗಿ, ಕಳೆದ ನೂರು ವರುಷಗಳಲ್ಲಿ, ಭೂಮಿಯ ಮೇಲ್ಮೈ ತಾಪಮಾನವು 0.3ರಿಂದ 0.6 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ.
ಎದ್ದುಬರುವ ಪ್ರಶ್ನೆಯೇನೆಂದರೆ, ಭೌಗೋಳಿಕ ಕಾವೇರುವಿಕೆ ಮತ್ತು ಮಾನವನಿರ್ಮಿತ ಹಸಿರುಮನೆ ಅನಿಲಗಳ ಶೇಖರಣೆಯ ಮಧ್ಯೆ ಸಂಬಂಧವಿದೆಯೆ? ಕೆಲವು ವಿಜ್ಞಾನಿಗಳು, ಪ್ರಾಯಶಃ ಇಲ್ಲವೆಂದು ಹೇಳುತ್ತಾರೆ. ತಾಪಮಾನದ ಹೆಚ್ಚಾಗುವಿಕೆಯು ಪ್ರಾಕೃತಿಕ ಬದಲಾವಣೆಯ ವ್ಯಾಪ್ತಿಯೊಳಗಡೆ ಬರುತ್ತದೆಂದು ಅವರು ಸೂಚಿಸುವುದಲ್ಲದೆ, ಸೂರ್ಯನು ಇದಕ್ಕೆ ಕಾರಣನಾಗಿರಬಹುದೆಂದು ಅವರು ಹೇಳುತ್ತಾರೆ. ಆದರೂ, ಅನೇಕ ವಾಯುಗುಣ ಪರಿಣತರು, ಹವಾಮಾನ ಬದಲಾವಣೆಯ ಸಂಬಂಧದಲ್ಲಿ, ಅಂತರಸರಕಾರೀ ಮಂಡಲಿಯ ವರದಿಯೊಂದರ ಮಾತುಗಳನ್ನು ಒಪ್ಪುತ್ತಾರೆ. ತಾಪಮಾನದಲ್ಲಿನ ಹೆಚ್ಚಳವು, “ಮೂಲದಲ್ಲಿ ಪೂರ್ಣವಾಗಿ ಪ್ರಕೃತಿಸಿದ್ಧವಾಗಿರುವುದು ಅಸಂಭವನೀಯ” ಎಂದು ಅದು ಹೇಳಿದ್ದಲ್ಲದೆ, “ಭೌಗೋಳಿಕ ಹವಾಮಾನದ ಮೇಲೆ, ಗೊತ್ತುಮಾಡಬಲ್ಲ ಮಾನವ ಪ್ರಭಾವವಿರುವುದನ್ನು ರುಜುವಾತು ಬಲವಾಗಿ ಸೂಚಿಸುತ್ತದೆ” ಎಂದು ಹೇಳಿತು. ಆದರೂ, ಮಾನವ ಚಟುವಟಿಕೆಗಳು ಭೂಗ್ರಹವನ್ನು ಬೆಚ್ಚಗಾಗಿಸುತ್ತಿವೆಯೊ ಮತ್ತು ವಿಶೇಷವಾಗಿ 21ನೆಯ ಶತಮಾನದಲ್ಲಿ ಲೋಕವು ಎಷ್ಟು ಬೇಗನೆ ಬೆಚ್ಚಗಾಗಬಹುದು ಹಾಗೂ ನಿಷ್ಕೃಷ್ಟವಾಗಿ ಪರಿಣಾಮಗಳೇನಾಗಿರಬಹುದು ಎಂಬುದರ ವಿಷಯದಲ್ಲಿ ಅನಿಶ್ಚಿತತೆಯು ಇನ್ನೂ ಉಳಿದಿದೆ.
ಅನಿಶ್ಚಿತತೆಗಳು ವಾಗ್ವಾದವನ್ನು ಉಂಟುಮಾಡುತ್ತವೆ
ವಾಯುಗುಣ ಶಾಸ್ತ್ರಜ್ಞರು ಭಾವೀ ಹಸಿರುಮನೆ ಪರಿಣಾಮದ ಕುರಿತು ಮುಂತಿಳಿಸುವಾಗ, ಅವರು ಲೋಕದ ಅತಿ ವೇಗದ ಮತ್ತು ಅತಿ ಶಕ್ತಿಶಾಲಿಯಾದ ಕಂಪ್ಯೂಟರ್‌ಗಳಲ್ಲಿರುವ ಹವಾಮಾನ ಮಾದರಿಗಳ ಮೇಲೆ ಆತುಕೊಳ್ಳುತ್ತಾರೆ. ಆದರೂ, ಭೂಮಿಯ ಹವಾಮಾನವನ್ನು ಭೂಮಿಯ ಆವರ್ತನ, ವಾತಾವರಣ, ಸಾಗರಗಳು, ನೀರ್ಗಲ್ಲು, ಭೂವೈಶಿಷ್ಟ್ಯಗಳು ಮತ್ತು ಸೂರ್ಯ—ಇವುಗಳ ಅತಿ ಜಟಿಲವಾದ ಪಾರಸ್ಪರಿಕ ಕ್ರಿಯೆಯು ನಿರ್ಧರಿಸುತ್ತದೆ. ಇಷ್ಟು ವಿಸ್ತಾರವಾದ ಪ್ರಮಾಣದಲ್ಲಿ, ಅನೇಕಾನೇಕ ಸಂಗತಿಗಳು ಭೂಮಿಯ ಹವಾಮಾನದ ಮೇಲೆ ಪ್ರಭಾವ ಬೀರುವುದರಿಂದ, ಇಂದಿನಿಂದ ಐವತ್ತೊ ನೂರೊ ವರುಷಗಳಲ್ಲಿ ಏನು ಸಂಭವಿಸಬಹುದೆಂದು ನಿಶ್ಚಿತತೆಯಿಂದ ಮುಂತಿಳಿಸುವುದು ಯಾವುದೇ ಕಂಪ್ಯೂಟರಿಗೂ ಅಸಾಧ್ಯ. ಸೈಅನ್ಸ್ ಪತ್ರಿಕೆ ಇತ್ತೀಚೆಗೆ ಗಮನಿಸಿದ್ದು: “ಮಾನವ ಚಟುವಟಿಕೆಗಳು ಭೂಗ್ರಹವನ್ನು ಬೆಚ್ಚಗಾಗಿಸಲು ಪ್ರಾರಂಭಿಸಿವೆ ಅಥವಾ ಹಸಿರುಮನೆಯ ಕಾವೇರುವಿಕೆಯು ಸಂಭವಿಸುವಾಗ ಅದು ಎಷ್ಟು ಕೆಟ್ಟದ್ದಾಗಿರಬಹುದೆಂಬ ವಿಷಯವು ಇನ್ನೂ ನಿಶ್ಚಯವಾಗಿ ಸ್ಪಷ್ಟವಾಗಿಲ್ಲವೆಂದು ಅನೇಕ ವಾಯುಗುಣ ಪರಿಣತರು ಎಚ್ಚರಿಕೆ ನೀಡುತ್ತಾರೆ.”
ಯಾವುದೇ ಅಪಾಯವಿದೆಯೆಂಬುದರ ಅಲ್ಲಗಳೆಯುವಿಕೆಯನ್ನು ಅನಿಶ್ಚಿತತೆಗಳು ಸುಲಭವಾಗಿಸುತ್ತವೆ. ಭೌಗೋಳಿಕ ಕಾವೇರುವಿಕೆಯ ಕುರಿತು ಸಂದೇಹವುಳ್ಳ ವಿಜ್ಞಾನಿಗಳ ಜೊತೆಗೆ, ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದರಲ್ಲಿ ಆರ್ಥಿಕ ಅಭಿರುಚಿಯಿರುವ ಬಲಾಢ್ಯ ಉದ್ಯಮಗಳು, ನಮ್ಮ ಈಗಿನ ಜ್ಞಾನದ ಸ್ಥಿತಿಯು, ದುಬಾರಿಯಾಗಸಾಧ್ಯವಿರುವ ಸರಿಪಡಿಸುವ ಕೆಲಸವನ್ನು ಸಮರ್ಥಿಸುವುದಿಲ್ಲವೆಂದು ವಾದಿಸುತ್ತವೆ. ಎಷ್ಟೆಂದರೂ, ಭವಿಷ್ಯತ್ತು ಕೆಲವು ಜನರು ಯೋಚಿಸುವಷ್ಟು ಕೆಟ್ಟದಾಗಿರಲಿಕ್ಕಿಲ್ಲವೆಂದು ಅವರು ಹೇಳುತ್ತಾರೆ.
ವೈಜ್ಞಾನಿಕ ಅನಿಶ್ಚಿತತೆಗಳು ಕಾರ್ಯನೀತಿಗಳನ್ನು ರಚಿಸುವವರನ್ನು ಉದಾಸೀನತೆಗಿಳಿಸಬಾರದೆಂದು ಹೇಳುವ ಮೂಲಕ ಪರಿಸರವಾದಿಗಳು ಪ್ರತಿಭಟಿಸುತ್ತಾರೆ. ಭಾವೀ ಹವಾಮಾನವು ಕೆಲವರು ಭಯಪಡುವಷ್ಟು ಕೆಟ್ಟದ್ದಾಗಿರಲಿಕ್ಕಿಲ್ಲವೆಂಬುದು ನಿಜವಾದರೂ, ಪರಿಸ್ಥಿತಿಯು ಹೆಚ್ಚು ಕೆಟ್ಟದ್ದಾಗಿರುವ ಸಾಧ್ಯತೆಯೂ ಇದೆ! ಅಲ್ಲದೆ, ಭವಿಷ್ಯತ್ತಿನಲ್ಲಿ ಏನಾಗುವುದೆಂದು ನಿಶ್ಚಯವಾಗಿ ಗೊತ್ತಿಲ್ಲದಿರುವುದರಿಂದ, ಅಪಾಯವನ್ನು ಕಡಮೆಮಾಡಲು ಏನನ್ನೂ ಮಾಡದೆ ಇರಬೇಕೆಂದು ಅದು ಅರ್ಥೈಸುವುದಿಲ್ಲವೆಂಬುದು ಅವರ ತರ್ಕ. ಉದಾಹರಣೆಗೆ, ಧೂಮಪಾನ ಮಾಡುವುದನ್ನು ಬಿಟ್ಟುಬಿಡುವವರು, ತಾವು ಧೂಮಪಾನಮಾಡುತ್ತ ಹೋದರೆ, 30 ಅಥವಾ 40 ವರ್ಷಗಳ ಬಳಿಕ ತಮಗೆ ನಿಶ್ಚಯವಾಗಿ ಶ್ವಾಸಕೋಶದ ಕ್ಯಾನ್ಸರ್ ಬರುವುದೆಂಬುದಕ್ಕೆ ಅವರು ಪ್ರಥಮವಾಗಿ ವೈಜ್ಞಾನಿಕ ರುಜುವಾತನ್ನು ಕೇಳುವುದಿಲ್ಲ. ಅಪಾಯವನ್ನು ಗುರುತಿಸಿ, ಅದನ್ನು ಕಡಮೆ ಮಾಡುವ ಅಥವಾ ನಿವಾರಿಸುವ ಸಲುವಾಗಿ ಅವರು ಧೂಮಪಾನವನ್ನು ನಿಲ್ಲಿಸುತ್ತಾರೆ.
ಏನು ಮಾಡಲ್ಪಡುತ್ತ ಇದೆ?
ಭೌಗೋಳಿಕ ಕಾವೇರುವಿಕೆಯ ಸಮಸ್ಯೆಯ ಪ್ರಮಾಣದ ಕುರಿತು—ಆ ಸಮಸ್ಯೆಯೇ ಇದೆಯೊ ಎಂಬುದರ ಕುರಿತು ಸಹ—ಅಷ್ಟೊಂದು ಚರ್ಚೆಯಿರುವಾಗ, ಅದರ ಕುರಿತು ಏನು ಮಾಡಬೇಕೆಂಬ ವಿಷಯದಲ್ಲಿ ವಿವಿಧ ದೃಷ್ಟಿಕೋನಗಳಿರುವುದು ಆಶ್ಚರ್ಯವೇನಲ್ಲ. ವರುಷಗಳಿಂದಲೂ, ಪರಿಸರವಾದಿ ಗುಂಪುಗಳು ಮಾಲಿನ್ಯಮುಕ್ತ ಶಕ್ತಿಮೂಲಗಳ ವ್ಯಾಪಕ ಬಳಕೆಯನ್ನು ಪ್ರವರ್ಧಿಸಿವೆ. ಸೂರ್ಯ, ಗಾಳಿ, ನದಿಗಳು ಮತ್ತು ಹಬೆ ಹಾಗೂ ಬಿಸಿನೀರಿನ ಭೂಗತ ಜಲಾಶಯಗಳಿಂದ ಶಕ್ತಿಯನ್ನು ಬಳಸಸಾಧ್ಯವಿದೆ.
ಶಾಖವನ್ನು ಹಿಡಿದಿಡುವ ಅನಿಲಗಳ ಹೊರಸೂಸುವಿಕೆಯನ್ನು ಕಡಮೆ ಮಾಡಲು, ಸರಕಾರಗಳು ಕಾನೂನುಗಳನ್ನು ಹೊರಡಿಸುವಂತೆ ಸಹ ಪರಿಸರವಾದಿಗಳು ಪ್ರೇರಿಸಿದ್ದಾರೆ. ಸರಕಾರಗಳು ಒಪ್ಪಂದಗಳಿಗೆ ಸಹಿಹಾಕಿವೆ. ದೃಷ್ಟಾಂತಕ್ಕಾಗಿ, 1992ರಲ್ಲಿ, ಬ್ರಸಿಲ್‌ನ ರೀಯೋ ಡೇ ಸನೆರೊನಲ್ಲಿ ನಡೆದ ಅರ್ತ್ ಸಮಿಟ್ ಶೃಂಗಸಭೆಯಲ್ಲಿ, ಸುಮಾರು 150 ದೇಶಗಳಿಂದ ಬಂದ ಪ್ರತಿನಿಧಿಗಳು, ಹಸಿರುಮನೆ ಅನಿಲದ, ವಿಶೇಷವಾಗಿ ಕಾರ್ಬನ್ ಡೈಆಕ್ಸೈಡಿನ ಹೊರಸೂಸುವಿಕೆಯನ್ನು ಕಡಮೆಮಾಡಲು ತಮ್ಮ ಒಪ್ಪಿಗೆಯನ್ನು ಸ್ಥಿರೀಕರಿಸುವ ಕರಾರಿಗೆ ಹಸ್ತಾಕ್ಷರ ಹಾಕಿದರು. ವರ್ಷ 2000ದೊಳಗೆ, ಔದ್ಯಮೀಕೃತ ರಾಷ್ಟ್ರಗಳ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು 1990ರ ಮಟ್ಟಕ್ಕೆ ಇಳಿಸುವುದೇ ಗುರಿಯಾಗಿತ್ತು. ಕೆಲವು ರಾಷ್ಟ್ರಗಳು ಈ ಸಂಬಂಧದಲ್ಲಿ ಪ್ರಗತಿಯನ್ನು ಮಾಡಿವೆಯಾದರೂ, ಅಧಿಕ ಸಂಪದ್ಭರಿತ ರಾಷ್ಟ್ರಗಳು ತಮ್ಮ ಮಿತರೀತಿಯ ವಿಧಿವತ್ತಾದ ಪ್ರತಿಜ್ಞೆಯನ್ನು ಪೂರೈಸುವುದರ ಕುರಿತು ಲಕ್ಷ್ಯವನ್ನೂ ಕೊಡುವುದಿಲ್ಲ. ಹೆಚ್ಚಿನ ರಾಷ್ಟ್ರಗಳು ಕಡಮೆಮಾಡುವ ಬದಲು, ಹಿಂದೆಂದಿಗಿಂತಲೂ ಹೆಚ್ಚು ಹಸಿರುಮನೆ ಅನಿಲಗಳನ್ನು ಉತ್ಪಾದಿಸುತ್ತಿವೆ! ಉದಾಹರಣೆಗೆ, ಅಮೆರಿಕದಲ್ಲಿ ವರುಷ 2000ದೊಳಗೆ, ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯು 1990ರಲ್ಲಿ ಇದ್ದುದಕ್ಕಿಂತಲೂ 11 ಪ್ರತಿಶತ ಹೆಚ್ಚಾಗುವ ಸಾಧ್ಯತೆ ಇದೆಯೆಂದು ಅಭಿಪ್ರಯಿಸಲಾಗುತ್ತದೆ.
ತೀರ ಇತ್ತೀಚೆಗೆ, ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಮಾಡುವ ಪ್ರಯತ್ನಗಳು ನಡೆದಿವೆ. 1992ರ ಕರಾರಿನಲ್ಲಿದ್ದಂತೆ ಅನಿಲ ಪ್ರಮಾಣವನ್ನು ಕಡಮೆಮಾಡುವುದು ಸ್ವಇಚ್ಛೆಯದ್ದಾಗಿರುವ ಬದಲಿಗೆ, ಹಸಿರುಮನೆ ಹೊರಸೂಸುವಿಕೆಯ ಗುರಿಗಳನ್ನು ಕಡ್ಡಾಯಗೊಳಿಸುವ ಬೇಡಿಕೆಗಳು ಬರುತ್ತಿವೆ.
ಬದಲಾವಣೆಯ ಖರ್ಚು
ರಾಜಕೀಯ ನೇತಾರರು ತಾವು ಭೂಮಿಯ ಸ್ನೇಹಿತರಂತೆ ವೀಕ್ಷಿಸಲ್ಪಡಲು ಹಾತೊರೆಯುತ್ತಾರೆ. ಆದರೂ, ಆ ಬದಲಾವಣೆಯು ಆರ್ಥಿಕ ವ್ಯವಸ್ಥೆಯ ಮೇಲೆ ತರಬಹುದಾದ ಪರಿಣಾಮಗಳ ಮೇಲೂ ಅವರು ಕಣ್ಣಿಡುತ್ತಾರೆ. ದಿ ಇಕಾನಮಿಸ್ಟ್ ಪತ್ರಿಕೆಗನುಸಾರ, ಲೋಕದಲ್ಲಿ 90 ಪ್ರತಿಶತದಷ್ಟು ಭಾಗವು ಶಕ್ತಿಗಾಗಿ ಅಂಗಾರಾಧಾರಿತ ಇಂಧನದ ಮೇಲೆ ಹೊಂದಿಕೊಂಡಿರುವುದರಿಂದ, ಅದರ ಬಳಕೆಯನ್ನು ನಿಲ್ಲಿಸಿಬಿಡುವುದು ದೊಡ್ಡ ಬದಲಾವಣೆಗಳನ್ನು ತರುವುದು; ಮತ್ತು ಬದಲಾವಣೆಯ ಖರ್ಚಿನ ವಿಷಯದಲ್ಲಿ ತೀಕ್ಷ್ಣವಾದ ಚರ್ಚೆಯು ನಡೆಯುತ್ತಿದೆ.
ಹಸಿರುಮನೆ ಹೊರಸೂಸುವಿಕೆಯನ್ನು ವರ್ಷ 2010ರೊಳಗೆ 1990ರಲ್ಲಿ ಇದ್ದುದಕ್ಕಿಂತಲೂ 10 ಪ್ರತಿಶತ ಕಡಮೆಮಾಡಲು ಎಷ್ಟು ಖರ್ಚು ಹಿಡಿದೀತು? ಅದಕ್ಕೆ ಉತ್ತರವು, ನೀವು ಯಾರನ್ನು ಕೇಳುತ್ತೀರೊ ಅವರ ಮೇಲೆ ಹೊಂದಿಕೊಂಡಿದೆ. ಬೇರೆ ಯಾವುದೇ ದೇಶಕ್ಕಿಂತಲೂ ಹೆಚ್ಚು ಹಸಿರುಮನೆ ಅನಿಲಗಳನ್ನು ವಾತಾವರಣದೊಳಕ್ಕೆ ಚಿಮ್ಮುತ್ತಿರುವ ಅಮೆರಿಕದ ಅಭಿಪ್ರಾಯಗಳನ್ನು ಪರಿಗಣಿಸಿರಿ. ಅಂತಹ ಇಳಿತವು, ಅಮೆರಿಕದ ಆರ್ಥಿಕ ವ್ಯವಸ್ಥೆಗೆ ಪ್ರತಿ ವರ್ಷ ನೂರಾರು ಕೋಟಿ ಡಾಲರುಗಳ ನಷ್ಟವನ್ನು ತಂದು, 6,00,000 ಜನರಿಗೆ ಕೆಲಸನಷ್ಟವನ್ನು ಉಂಟುಮಾಡುವುದೆಂದು ಕೈಗಾರಿಕಾ ಪರಿಣತರು ಎಚ್ಚರಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಅದೇ ಗುರಿಯನ್ನು ಸಾಧಿಸುವುದರಿಂದ ಆರ್ಥಿಕ ವ್ಯವಸ್ಥೆಯು ನೂರಾರು ಕೋಟಿ ಡಾಲರುಗಳ ಉಳಿತಾಯ ಮಾಡಿ, 7,73,000 ಹೊಸ ಕೆಲಸಗಳನ್ನು ನಿರ್ಮಿಸಸಾಧ್ಯವಿದೆ ಎಂಬುದು ಪರಿಸರವಾದಿಗಳ ಹೇಳಿಕೆ.
ಕೂಡಲೇ ಕ್ರಮಕೈಕೊಳ್ಳಬೇಕೆಂಬ ಪರಿಸರವಾದಿ ಗುಂಪುಗಳ ಕರೆಗಳ ಎದುರಿನಲ್ಲೂ, ಭೌಗೋಳಿಕ ಕಾವೇರುವಿಕೆಯ ಬೆದರಿಕೆಯನ್ನು ಕುಗ್ಗಿಸಲು ಮತ್ತು ಅಗೆದು ತೆಗೆಯುವ ಉರುವಲಿನ ಉಪಯೋಗವನ್ನು ಬಿಟ್ಟುಬಿಡುವುದರಿಂದ ಆಗುವ ಆರ್ಥಿಕ ಪೆಟ್ಟನ್ನು ಅತಿಶಯಿಸಲು, ತಮ್ಮ ಗಣನೀಯ ಹಣ ಮತ್ತು ಪ್ರಭಾವವನ್ನು ಉಪಯೋಗಿಸುವ ಮೋಟಾರು ವಾಹನ ತಯಾರಕರು, ಎಣ್ಣೆ ಕಂಪೆನಿಗಳು ಮತ್ತು ಕಲ್ಲಿದ್ದಲು ಉತ್ಪಾದಕರಂತಹ ಹೆಸರಿಸಬಹುದಾದ ಕೆಲವೇ ಬಲಾಢ್ಯ ಉದ್ಯಮಗಳಿವೆ.
ವಾಗ್ವಾದವು ಮುಂದುವರಿಯುತ್ತ ಇದೆ. ಆದರೆ ಮಾನವರು ಹವಾಮಾನವನ್ನು ಬದಲಾಯಿಸುತ್ತಿದ್ದು, ಮಾತುಕತೆಯಲ್ಲದೆ ಮತ್ತೇನನ್ನೂ ಮಾಡದಿರುವಲ್ಲಿ, ಎಲ್ಲರೂ ಹವಾಮಾನದ ವಿಷಯ ಮಾತಾಡುತ್ತಾರೆಂಬುದು ನಿಜ, ಆದರೆ ಅದನ್ನು ಉತ್ತಮಗೊಳಿಸಲು ಏನನ್ನೂ ಮಾಡುವುದಿಲ್ಲ ಎಂಬ ಹೇಳಿಕೆಯು, ಅನಿಷ್ಟಸೂಚಕವಾದ ಹೊಸ ಅರ್ಥವನ್ನು ತೆಗೆದುಕೊಳ್ಳುವುದು.
[ಪುಟ 5 ರಲ್ಲಿರುವ ಚೌಕ]
ಕೀಓಟೋ ಕರಾರು
ಡಿಸೆಂಬರ್ 1997ರಲ್ಲಿ, ಜಪಾನಿನ ಕೀಓಟೋದಲ್ಲಿ, 161 ದೇಶಗಳಿಂದ ಬಂದಿದ್ದ 2,200ಕ್ಕಿಂತಲೂ ಹೆಚ್ಚು ಮಂದಿ ಪ್ರತಿನಿಧಿಗಳು, ಭೌಗೋಳಿಕ ಕಾವೇರುವಿಕೆಯ ಬೆದರಿಕೆಯ ಕುರಿತು ಏನಾದರೂ ಮಾಡಲಿಕ್ಕಾಗಿ, ಒಂದು ಒಪ್ಪಂದ ಅಥವಾ ಕರಾರನ್ನು ಮಾಡಲು ಕೂಡಿಬಂದರು. ಒಂದು ವಾರಕ್ಕಿಂತಲೂ ಹೆಚ್ಚು ಕಾಲದ ಚರ್ಚೆಯ ಬಳಿಕ, ವಿಕಾಸಗೊಂಡಿರುವ ದೇಶಗಳು, ವರುಷ 2012ದೊಳಗೆ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು 1990ರ ಮಟ್ಟಗಳಿಗಿಂತ ಸರಾಸರಿ 5.2 ಪ್ರತಿಶತದಷ್ಟು ಇಳಿಸಬೇಕೆಂದು ಪ್ರತಿನಿಧಿಗಳು ನಿರ್ಧರಿಸಿದರು. ಈ ಒಪ್ಪಂದವನ್ನು ಉಲ್ಲಂಘಿಸುವವರು ಕೊಡಬೇಕಾದ ದಂಡನೆಯನ್ನು ಆಮೇಲೆ ನಿರ್ಧರಿಸಲಾಗುವುದು. ಈ ಕರಾರಿಗೆ ಎಲ್ಲ ದೇಶಗಳು ಅಂಟಿಕೊಳ್ಳುವುವೆಂದು ಭಾವಿಸುವಲ್ಲಿ, 5.2 ಪ್ರತಿಶತದಷ್ಟು ಇಳಿತವು ಯಾವ ವ್ಯತ್ಯಾಸವನ್ನು ಉಂಟುಮಾಡುವುದು? ಅತಿ ಕೊಂಚವೆಂಬುದು ಸ್ಪಷ್ಟ. ಟೈಮ್ ಪತ್ರಿಕೆಯು ವರದಿಸಿದ್ದು: “ಕೈಗಾರಿಕಾ ಕ್ರಾಂತಿಯ ಆರಂಭದಂದಿನಿಂದ ವಾತಾವರಣದಲ್ಲಿ ಶೇಖರವಾಗುತ್ತಿದ್ದ ಹಸಿರುಮನೆ ಅನಿಲಗಳನ್ನು ಅರ್ಥಭರಿತವಾಗಿ ಕಡಮೆಮಾಡಬೇಕಾದರೆ 60% ಇಳಿತವು ಬೇಕಾದೀತು.”
[ಪುಟ 7ರಲ್ಲಿರುವಚೌಕ]
(For fully formatted text, see publication)
ಹಸಿರುಮನೆ ಪರಿಣಾಮ ಚಿತ್ರೀಕರಿಸಲ್ಪಟ್ಟದ್ದು
ಹಸಿರುಮನೆ ಪರಿಣಾಮ: ಭೂಮಿಯ ವಾತಾವರಣವು, ಹಸಿರುಮನೆಯ ಗಾಜಿನ ಹಾಳೆಗಳಂತೆ, ಸೂರ್ಯನ ಶಾಖವನ್ನು ಹಿಡಿದಿಡುತ್ತದೆ. ಸೂರ್ಯನ ಬೆಳಕು ಭೂಮಿಯನ್ನು ಬಿಸಿಮಾಡುತ್ತದಾದರೂ, ಉಂಟಾಗುವ—ರಕ್ತವರ್ಣಾತೀತ ವಿಕಿರಣದಿಂದ ಒಯ್ಯಲ್ಪಡುವ—ಶಾಖವು ವಾತಾವರಣದಿಂದ ಸುಲಭವಾಗಿ ಪಾರಾಗುವುದಿಲ್ಲ. ಬದಲಿಗೆ, ಹಸಿರುಮನೆ ಅನಿಲಗಳು ವಿಕಿರಣವನ್ನು ತಡೆಗಟ್ಟಿ, ಅದರಲ್ಲಿ ಕೆಲವನ್ನು ಭೂಮಿಯ ಕಡೆಗೆ ಹಿಂದಿರುಗಿಸುತ್ತ, ಹೀಗೆ ಭೂಮಿಯ ಮೇಲ್ಮೈಯ ಕಾವಿಗೆ ಕೂಡಿಸುತ್ತವೆ.
1. ಸೂರ್ಯ
2. ಹಿಡಿದಿಡಲ್ಪಟ್ಟಿರುವ ರಕ್ತವರ್ಣಾತೀತ ವಿಕಿರಣ
3. ಹಸಿರುಮನೆ ಅನಿಲಗಳು
4. ಪಾರಾಗುತ್ತಿರುವ ವಿಕಿರಣ
[ಪುಟ 8ರಲ್ಲಿರುವಚೌಕ]
[For fully formatted text, see publication]
ಹವಾಮಾನವನ್ನು ನಿಯಂತ್ರಿಸುವ ಶಕ್ತಿಗಳು
ಭೌಗೋಳಿಕ ಕಾವೇರುವಿಕೆಯ ಪ್ರಚಲಿತ ಚರ್ಚೆಯನ್ನು ನಾವು ಅರ್ಥೈಸಿಕೊಳ್ಳಬೇಕಾದರೆ, ನಮ್ಮ ಹವಾಮಾನವು ಏನಾಗಿದೆಯೊ ಅದನ್ನು ಉಂಟುಮಾಡಿರುವ ಭಯಚಕಿತ ಶಕ್ತಿಗಳಲ್ಲಿ ಕೆಲವನ್ನು ತಿಳಿದುಕೊಳ್ಳುವುದು ಆವಶ್ಯಕ. ಕೆಲವು ಮೂಲ ವಿಷಯಗಳನ್ನು ನಾವು ಪರಿಗಣಿಸೋಣ.
1. ಸೂರ್ಯ—ಶಾಖ ಮತ್ತು ಬೆಳಕಿನ ಮೂಲ
ನಾವು ಸೂರ್ಯನೆಂದು ಕರೆಯುವ ಬೃಹದಾಕಾರದ ನ್ಯೂಕ್ಲಿಯರ್ ಕುಲುಮೆಯ ಮೇಲೆ, ಭೂಮಿಯ ಮೇಲಿನ ಜೀವವು ಹೊಂದಿಕೊಂಡಿದೆ. ಹತ್ತು ಲಕ್ಷ ಭೂಮಿಗಳಿಗಿಂತಲೂ ದೊಡ್ಡದಾಗಿರುವ ಸೂರ್ಯ, ಶಾಖ ಮತ್ತು ಬೆಳಕಿನ ಸದಾ ಭರವಸಾರ್ಹ ಸರಬರಾಯಿಯನ್ನು ಒದಗಿಸುತ್ತದೆ. ಸೂರ್ಯನ ಉತ್ಪಾದನೆಯಲ್ಲಿ ಇಳಿತವು, ನಮ್ಮ ಭೂಗ್ರಹವನ್ನು ನೀರ್ಗಲ್ಲಿನಿಂದ ಮುಚ್ಚಿಸುವುದು; ವೃದ್ಧಿಯು ಭೂಮಿಯನ್ನು ಚಿಟಪಟಗುಟ್ಟುವ ಕಾವಲಿಯಾಗಿಸುವುದು. ಭೂಮಿಯು ಸೂರ್ಯನಿಂದ 15 ಕೋಟಿ ಕಿಲೊಮೀಟರುಗಳಷ್ಟು ದೂರದಲ್ಲಿ ಸುತ್ತುವುದರಿಂದಾಗಿ, ಸೂರ್ಯನಿಂದ ಹೊರಡುವ 200 ಕೋಟಿಗಳಷ್ಟು ಶಕ್ತಿಯಲ್ಲಿ, ಕೇವಲ ಒಂದು ಭಾಗವನ್ನು ಪಡೆದುಕೊಳ್ಳುತ್ತದೆ. ಆದರೂ, ಜೀವವು ಹುಲುಸಾಗಿ ಬೆಳೆಯಲು ಸಾಧ್ಯವಿರುವ ಹವಾಮಾನವನ್ನು ಉತ್ಪಾದಿಸಲು, ಇದು ನಿಖರವಾದ ಪ್ರಮಾಣವಾಗಿದೆ.
2. ವಾತಾವರಣ —ಭೂಮಿಯ ಬೆಚ್ಚಗಿನ ಕಂಬಳಿ
ಭೂಮಿಯ ತಾಪಮಾನವನ್ನು ನಿರ್ಧರಿಸುವುದರಲ್ಲಿ ಸೂರ್ಯನು ಮಾತ್ರ ಭಾಗವಹಿಸುವುದಿಲ್ಲ; ನಮ್ಮ ವಾತಾವರಣ ಸಹ ಮಹತ್ವದ ಪಾತ್ರವನ್ನು ವಹಿಸುತ್ತದೆ. ಭೂಮಿಯೂ ಚಂದ್ರನೂ ಸೂರ್ಯನಿಂದ ಸಮಾನವಾದ ದೂರದಲ್ಲಿರುವುದರಿಂದ, ಅವೆರಡೂ ಸೂರ್ಯನಿಂದ ಪ್ರಮಾಣಾನುಗುಣವಾಗಿ ಸುಮಾರು ಒಂದೇ ಮೊತ್ತದ ಶಾಖವನ್ನು ಪಡೆಯುತ್ತವೆ. ಆದರೂ, ಭೂಮಿಯ ಸರಾಸರಿ ತಾಪಮಾನವು 15 ಡಿಗ್ರಿ ಸೆಲ್ಸಿಯಸ್ ಆಗಿರುವಾಗ, ಚಂದ್ರನಲ್ಲಿ ಅದು ಶೈತ್ಯದ ಸರಾಸರಿ ಋಣ 18 ಡಿಗ್ರಿ ಸೆಲ್ಸಿಯಸ್‌ಗಳಾಗಿರುತ್ತದೆ. ಈ ವ್ಯತ್ಯಾಸವೇಕೆ? ಭೂಮಿಗೆ ಒಂದು ವಾತಾವರಣವಿದೆ, ಚಂದ್ರನಿಗಿಲ್ಲ.
ನಮ್ಮ ವಾತಾವರಣ—ಆಮ್ಲಜನಕ, ಸಾರಜನಕ ಮತ್ತು ಇತರ ಅನಿಲಗಳುಳ್ಳ ಭೂಮಿಯ ಸುತ್ತುಪಟ್ಟಿ—ಸೂರ್ಯನ ಕಾವಿನಲ್ಲಿ ಸ್ವಲ್ಪವನ್ನು ಹಿಡಿದಿಟ್ಟು ಉಳಿದುದನ್ನು ಪಾರಾಗಲು ಬಿಡುತ್ತದೆ. ಈ ಕಾರ್ಯವಿಧಾನವನ್ನು ಅನೇಕ ವೇಳೆ ಒಂದು ಹಸಿರುಮನೆಗೆ ಹೋಲಿಸಲಾಗುತ್ತದೆ. ನಿಮಗೆ ಪ್ರಾಯಶಃ ತಿಳಿದಿರುವಂತೆ, ಹಸಿರುಮನೆಯೆಂದರೆ, ಗಾಜಿನಿಂದ ಅಥವಾ ಪ್ಲಾಸ್ಟಿಕ್‌ನಿಂದ ಮಾಡಿರುವ ಗೋಡೆಗಳು ಮತ್ತು ಚಾವಣಿ ಇರುವ ಒಂದು ಕಟ್ಟಡ. ಸೂರ್ಯನ ಬೆಳಕು ಒಳಗೆ ಸುಲಭವಾಗಿ ಪ್ರವೇಶಿಸಿ, ಒಳಭಾಗವನ್ನು ಕಾಯಿಸುತ್ತದೆ. ಅದೇ ಸಮಯದಲ್ಲಿ, ಚಾವಣಿ ಮತ್ತು ಗೋಡೆಗಳು ಶಾಖವು ತಪ್ಪಿಸಿಕೊಳ್ಳುವುದನ್ನು ನಿಧಾನಿಸುತ್ತವೆ.
ತದ್ರೀತಿಯಲ್ಲಿ, ನಮ್ಮ ವಾತಾವರಣವು ಸೂರ್ಯನ ಬೆಳಕು ಭೂಮಿಯ ಮೇಲ್ಮೈಯನ್ನು ಕಾಯಿಸಲಿಕ್ಕಾಗಿ ಹಾದುಹೋಗುವಂತೆ ಬಿಡುತ್ತದೆ. ಸರದಿಯಾಗಿ, ಭೂಮಿಯು ಶಾಖ ಶಕ್ತಿಯನ್ನು ವಾತಾವರಣಕ್ಕೆ ರಕ್ತವರ್ಣಾತೀತ ವಿಕಿರಣವಾಗಿ ಹಿಂದೆ ಕಳುಹಿಸುತ್ತದೆ. ಈ ವಿಕಿರಣದಲ್ಲಿ ಹೆಚ್ಚಿನದ್ದು ಅಂತರಿಕ್ಷಕ್ಕೆ ನೇರವಾಗಿ ಹೋಗುವುದಿಲ್ಲ, ಏಕೆಂದರೆ ವಾತಾವರಣದಲ್ಲಿರುವ ಕೆಲವೊಂದು ಅನಿಲಗಳು ಅದನ್ನು ಹೀರಿ, ಭೂಮಿಗೆ ಹಿಂದೆ ಕಳುಹಿಸಿ, ಹೀಗೆ ಭೂಮಿಯ ಕಾವೇರುವಿಕೆಗೆ ಕೂಡಿಸುತ್ತವೆ. ಈ ಕಾವೇರಿಸುವ ಕಾರ್ಯಗತಿಯನ್ನು ಹಸಿರುಮನೆ ಪರಿಣಾಮವೆಂದು ಕರೆಯಲಾಗುತ್ತದೆ. ನಮ್ಮ ವಾತಾವರಣವು ಈ ರೀತಿಯಲ್ಲಿ ಸೂರ್ಯನ ಶಾಖವನ್ನು ಹಿಡಿದಿಡದಿದ್ದರೆ, ಭೂಮಿಯು ಚಂದ್ರನಷ್ಟೇ ನಿರ್ಜೀವವಾಗಿರುವುದು.
3. ನೀರಿನ ಹಬೆ —ಅತ್ಯಾವಶ್ಯಕವಾದ ಹಸಿರುಮನೆ ಅನಿಲ
ನಮ್ಮ ವಾತಾವರಣದ ತೊಂಬತ್ತೊಂಬತ್ತು ಪ್ರತಿಶತವು, ಎರಡು ಅನಿಲಗಳಿಂದ ಮಾಡಲ್ಪಟ್ಟಿದೆ: ಸಾರಜನಕ ಮತ್ತು ಆಮ್ಲಜನಕ. ಭೂಮಿಯ ಮೇಲಿನ ಜೀವವನ್ನು ಬೆಂಬಲಿಸುವ ಜಟಿಲ ಚಕ್ರಗಳಲ್ಲಿ ಈ ಅನಿಲಗಳು ಮಹತ್ವದ ಭಾಗವನ್ನು ವಹಿಸುತ್ತವಾದರೂ, ಹವಾಮಾನದ ನಿಯಂತ್ರಣದಲ್ಲಿ ಅವು ಬಹುಮಟ್ಟಿಗೆ ನೇರವಾಗಿ ಯಾವ ಪಾತ್ರವನ್ನೂ ವಹಿಸುವುದಿಲ್ಲ. ಹವಾಮಾನ ನಿಯಂತ್ರಣದ ಕೆಲಸವು, ವಾತಾವರಣದಲ್ಲಿ ಉಳಿದ ಒಂದು ಪ್ರತಿಶತವಾಗಿರುವ ಶಾಖ ಹಿಡಿದಿಡುವ ಹಸಿರುಮನೆ ಅನಿಲಗಳ ಪಾಲಿಗೆ ಸೇರಿರುತ್ತದೆ. ಈ ಅನಿಲಗಳಲ್ಲಿ ನೀರಿನ ಹಬೆ, ಕಾರ್ಬನ್ ಡೈಆಕ್ಸೈಡ್, ನೈಟ್ರಸ್ ಆಕ್ಸೈಡ್, ಮೆತೇನ್, ಕ್ಲೋರೋಫ್ಲೋರೋಕಾರ್ಬನ್‌ಗಳು ಮತ್ತು ಓಸೋನ್ ಒಳಗೂಡಿರುತ್ತದೆ.
ಅತಿ ನಿರ್ಣಾಯಕವಾದ ಹಸಿರುಮನೆ ಅನಿಲವಾದ ನೀರಿನ ಹಬೆಯನ್ನು ಸಾಮಾನ್ಯವಾಗಿ ಅನಿಲವಾಗಿ ಭಾವಿಸಲಾಗುವುದೇ ಇಲ್ಲ. ಏಕೆಂದರೆ ನೀರು ದ್ರವರೂಪದಲ್ಲಿರುತ್ತದೆಂದು ನೆನಸುವುದು ನಮಗೆ ರೂಢಿಯಾಗಿಬಿಟ್ಟಿದೆ. ಆದರೂ ವಾತಾವರಣದಲ್ಲಿರುವ ನೀರಿನ ಹಬೆಯ ಪ್ರತಿಯೊಂದು ಕಣದಲ್ಲಿ ಶಾಖ ಶಕ್ತಿಯು ತುಂಬಿಕೊಂಡಿದೆ. ಉದಾಹರಣೆಗೆ, ಮೋಡದಲ್ಲಿರುವ ಹಬೆಯು ತಣ್ಣಗಾಗಿ ಸಾಂದ್ರೀಕರಿಸುವಾಗ, ಶಾಖವು ಬಿಡುಗಡೆಯಾಗುತ್ತಾ, ಪ್ರಬಲವಾದ ಸಂವಹನ ಪ್ರವಾಹಗಳು ಉಂಟಾಗುತ್ತವೆ. ನಮ್ಮ ವಾತಾವರಣದಲ್ಲಿನ ನೀರಿನ ಹಬೆಯ ಕ್ರಿಯಾತ್ಮಕ ಚಲನೆಯು, ಹವಾಮಾನ ಹಾಗೂ ವಾಯುಗುಣವನ್ನು ನಿರ್ಧರಿಸುವುದರಲ್ಲಿ ಸಂದಿಗ್ಧವಾದ ಹಾಗೂ ಜಟಿಲವಾದ ಪಾತ್ರವನ್ನು ವಹಿಸುತ್ತದೆ.
4. ಕಾರ್ಬನ್ ಡೈಆಕ್ಸೈಡ್—ಜೀವಕ್ಕೆ ಆವಶ್ಯಕ
ಭೌಗೋಳಿಕ ಕಾವೇರುವಿಕೆಯ ಕುರಿತ ಚರ್ಚೆಗಳಲ್ಲಿ ಅತಿ ಹೆಚ್ಚಾಗಿ ಮಾತಾಡಲಾಗುವ ಅನಿಲವು, ಕಾರ್ಬನ್ ಡೈಆಕ್ಸೈಡ್ ಆಗಿದೆ. ಕಾರ್ಬನ್ ಡೈಆಕ್ಸೈಡನ್ನು ಕೇವಲ ಮಲಿನಕಾರಕ ಅನಿಲವೆಂದು ಖಂಡಿಸುವುದು ತಪ್ಪು ಅಭಿಪ್ರಾಯವನ್ನು ಕೊಡುತ್ತದೆ. ಹಸಿರು ಸಸ್ಯಗಳು ತಮಗಾಗಿ ಯಾವುದರಿಂದ ಆಹಾರವನ್ನು ತಯಾರಿಸಿಕೊಳ್ಳುತ್ತವೊ, ಆ ದ್ಯುತಿಸಂಶ್ಲೇಷಣ ಕ್ರಿಯೆಯಲ್ಲಿ ಕಾರ್ಬನ್ ಡೈಆಕ್ಸೈಡ್ ಮಹತ್ವವುಳ್ಳ ಘಟಕಾಂಶವಾಗಿದೆ. ಮಾನವರೂ ಪ್ರಾಣಿಗಳೂ ಆಮ್ಲಜನಕವನ್ನು ಉಚ್ಛ್ವಸಿಸಿ ಕಾರ್ಬನ್ ಡೈಆಕ್ಸೈಡನ್ನು ನಿಶ್ವಸಿಸುತ್ತಾರೆ. ಸಸ್ಯಗಳು ಕಾರ್ಬನ್ ಡೈಆಕ್ಸೈಡನ್ನು ಒಳಸೇರಿಸಿಕೊಳ್ಳುತ್ತ ಆಮ್ಲಜನಕವನ್ನು ಹೊರಬಿಡುತ್ತವೆ. ವಾಸ್ತವವಾಗಿ, ಭೂಮಿಯಲ್ಲಿ ಜೀವಿಸುವುದನ್ನು ಸಾಧ್ಯವಾಗಿಸುವ ಸೃಷ್ಟಿಕರ್ತನ ಒದಗಿಸುವಿಕೆಗಳಲ್ಲಿ ಇದು ಒಂದಾಗಿದೆ.a ಆದರೂ, ವಾತಾವರಣದಲ್ಲಿ ವಿಪರೀತ ಕಾರ್ಬನ್ ಡೈಆಕ್ಸೈಡ್ ಇರುವುದು ಮಂಚದ ಮೇಲೆ ಇನ್ನೊಂದು ಕಂಬಳಿಯನ್ನು ಎಸೆದಂತಿರುವುದು. ಅದು ಹೆಚ್ಚು ಬೆಚ್ಚಗಿನ ಸ್ಥಿತಿಯನ್ನು ಉಂಟುಮಾಡಬಲ್ಲದು.
ಶಕ್ತಿಗಳ ಜಟಿಲ ಶ್ರೇಣಿ
ಸೂರ್ಯ ಮತ್ತು ವಾತಾವರಣವು ಮಾತ್ರ ಹವಾಮಾನವನ್ನು ನಿರ್ಧರಿಸುವುದಿಲ್ಲ. ಸಾಗರಗಳು ಮತ್ತು ಹಿಮಕವಚಗಳು, ಮೇಲ್ಮೈಯ ಖನಿಜಗಳು ಮತ್ತು ಸಸ್ಯಗಳು, ಭೂಮಿಯ ಪರಿಸರ ವ್ಯವಸ್ಥೆಗಳು, ಜೀವಭೂರಾಸಾಯನಿಕ ಕಾರ್ಯಗತಿಗಳ ಶ್ರೇಣಿ ಮತ್ತು ಭೂಮಿಯ ಕಕ್ಷಾಯಾಂತ್ರೀಯತೆಗಳು ಸಹ ಇದರಲ್ಲಿ ಸೇರಿವೆ. ಹವಾಮಾನದ ಅಧ್ಯಯನದಲ್ಲಿ ಹೆಚ್ಚುಕಡಮೆ ಭೂವಿಜ್ಞಾನಗಳೆಲ್ಲ ಸೇರಿವೆ.
ಸೂರ್ಯ
ವಾತಾವರಣ
ನೀರಿನ ಹಬೆ (H20)
ಕಾರ್ಬನ್ ಡೈಆಕ್ಸೈಡ್ (CO2)
[ಪಾದಟಿಪ್ಪಣಿ]
a ಭೂಮಿಯಲ್ಲಿ ಹೆಚ್ಚುಕಡಮೆ ಎಲ್ಲ ಜೀವವು ಇಂಗಾಲದ ಸಂಯುಕ್ತ ಮೂಲಗಳಿಂದ ಶಕ್ತಿಯನ್ನು ಪಡೆದುಕೊಳ್ಳುತ್ತ, ಹೀಗೆ ಪ್ರತ್ಯಕ್ಷವಾಗಿಯಾಗಲಿ ಪರೋಕ್ಷವಾಗಿಯಾಗಲಿ ಸೂರ್ಯನ ಬೆಳಕಿನ ಮೇಲೆ ಹೊಂದಿಕೊಂಡಿದೆ. ಆದರೂ, ಸಾಗರ ತಳದ ಕತ್ತಲೆಯಲ್ಲಿ ಅಜೈವಿಕ ರಾಸಾಯನಿಕ ಪದಾರ್ಥಗಳಿಂದ ಶಕ್ತಿಯನ್ನು ಪಡೆದುಕೊಂಡು, ಸಮೃದ್ಧಿಯಾಗಿ ಜೀವಿಸುವ ಜೀವಿಗಳಿವೆ. ದ್ಯುತಿಸಂಶ್ಲೇಷಣ ಕ್ರಿಯೆಯ ಬದಲಿಗೆ, ಈ ಜೀವಿಗಳು ರಾಸಾಯನಿಕ ಸಂಶ್ಲೇಷಣೆಯೆಂದು ಕರೆಯಲ್ಪಡುವ ಕಾರ್ಯವಿಧಾನವನ್ನು ಬಳಸುತ್ತವೆ.