ಬೈಬಲಿನ ದೃಷ್ಟಿಕೋನ
ವರುಷ 2000 ಎಷ್ಟು ಗಮನಾರ್ಹವಾಗಿದೆ?
ಪಾಶ್ಚಿಮಾತ್ಯ ಹಾಗೂ ಇತರ ದೇಶಗಳಲ್ಲಿ ಯಾವುದು ವರ್ಷ 2000 ಆಗಿರುವುದೊ ಆ ವರ್ಷಕ್ಕೆ, ಹೆಚ್ಚಿನ ಜನರು ಯಾವುದೇ ಧಾರ್ಮಿಕ ವೈಶಿಷ್ಟ್ಯವನ್ನು ಕೊಡುವುದಿಲ್ಲ. ಉದಾಹರಣೆಗೆ, ಯೆಹೂದ್ಯರು, ಮುಸಲ್ಮಾನರು ಮತ್ತು ಹಿಂದುಗಳಿಗೆ, ಪಾಶ್ಚಿಮಾತ್ಯ ಕ್ಯಾಲೆಂಡರ್‌ಗಳಿಗೆ ಸರಿಹೋಲದ ತಮ್ಮದೇ ಆಗಿರುವ ಕ್ಯಾಲೆಂಡರ್‌ಗಳು ಇವೆ. ಧಾರ್ಮಿಕ ಹಾಗೂ ಸಾಂಪ್ರದಾಯಿಕ ತಾರೀಖುಗಳಿಗಾಗಿ, ಚೈನೀಸ್ ಜನರು ಚಾಂದ್ರಮಾನ ಕ್ಯಾಲೆಂಡರನ್ನು ಬಳಸುತ್ತಾರೆ. ಆದಕಾರಣ, ಇಂದು ಕೋಟಿಗಟ್ಟಲೆ ಜನರು, ಪ್ರಾಯಶಃ ಲೋಕದ ಜನಸಂಖ್ಯೆಯಲ್ಲಿ ಅಧಿಕಾಂಶ ಮಂದಿ, ವರ್ಷ 2000ಕ್ಕೆ ಯಾವುದೇ ವಿಶೇಷಾರ್ಥವನ್ನು ಕೊಡುವುದಿಲ್ಲ.a
ಆದರೂ, ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ, ಅನೇಕರು ಗ್ರೆಗೋರಿಯನ್ ಕ್ಯಾಲೆಂಡರ್‌ನಿಂದ ಗುರುತಿಸಲ್ಪಟ್ಟಿರುವಂತೆ, ಸಮೀಪಿಸುತ್ತಿರುವ ಮುಂದಿನ ಸಹಸ್ರ ವರ್ಷಕಾಲದ ಹೊಸ್ತಿಲನ್ನು ಕುತೂಹಲದಿಂದ ಕಾಯುತ್ತಾರೆ. ಕೆಲವರಿಗಂತೂ, ಇದು ಕೇವಲ ಕುತೂಹಲಕ್ಕಿಂತ ಹೆಚ್ಚಿನದ್ದಾಗಿದೆ. ವರ್ಷ 2000, ಇತಿಹಾಸದ ಸಂಧಿಕಾಲವಾಗಿ ಹೊಸ ಯುಗವನ್ನು ತರುತ್ತದೆಂಬುದು ಅವರ ವೀಕ್ಷಣೆ. ಬೈಬಲಿನಲ್ಲಿ ನಂಬಿಕೆಯಿಡುತ್ತೇವೆಂದು ಹೇಳಿಕೊಳ್ಳುವ ಅನೇಕರು, ಪ್ರವಾದನೆಗಳ ನೆರವೇರಿಕೆಯನ್ನು ವರ್ಷ 2000ದೊಂದಿಗೆ ಜೊತೆಗೂಡಿಸುತ್ತಾರೆ. ಕೆಲವರು ಮಹಾ ಪ್ರಮಾಣಗಳ ಅಧ್ಯಾತ್ಮಿಕ ಪ್ರಕಟನೆಗಳನ್ನು ನಿರೀಕ್ಷಿಸುತ್ತಾರೆ. ಇನ್ನಿತರರು ಘೋರ ದುರ್ಘಟನೆ—ಲೋಕಾಂತ್ಯ—ಆಗುವುದೆಂದು ಭಯಪಡುತ್ತಾರೆ. ಈ ನಿರೀಕ್ಷೆಗಳಿಗೆ ಬೈಬಲು ಯಾವ ಆಧಾರವನ್ನಾದರೂ ಒದಗಿಸುತ್ತದೊ?
ಯೆಹೋವ, ಕಾಲ ದಾಖಲೆಗಾರ
ಬೈಬಲಿನ ದೇವರನ್ನು, “ಮಹಾ ವೃದ್ಧ”ನಾಗಿ ವರ್ಣಿಸಲಾಗುತ್ತದೆ. (ದಾನಿಯೇಲ 7:9) ಆತನು ಕಾಲವನ್ನು, ತನ್ನ ಅನೇಕ ಸೃಷ್ಟಿಗಳಿಂದ—ಗ್ರಹಗಳ ಆವರ್ತದಿಂದ ಹಿಡಿದು ಪರಮಾಣುಗಳಿಗಿಂತಲೂ ಚಿಕ್ಕದಾದ ಕಣಗಳ ವರೆಗೆ—ವ್ಯಕ್ತವಾಗುವಂತೆ, ಪರಿಪೂರ್ಣ ನಿಷ್ಕೃಷ್ಟತೆಯಿಂದ ನಿಯಂತ್ರಿಸುತ್ತಾನೆ. ಆತನಿಗೆ ತಾನು ನಿಖರವಾಗಿ ಅಂಟಿಕೊಳ್ಳುವ ಸ್ವಂತ ಕಾರ್ಯತಖ್ತೆಯಿದೆ. “ಆತನು . . . ಅವರವರು ಇರತಕ್ಕ ಕಾಲಗಳನ್ನೂ ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ”ದ್ದಾನೆ, ಎಂದನ್ನುತ್ತದೆ ಬೈಬಲು. (ಅ. ಕೃತ್ಯಗಳು 17:26) ಯೆಹೋವನು ಒಬ್ಬ ನಿಷ್ಕೃಷ್ಟ ಕಾಲ ದಾಖಲೆಗಾರನು ಆಗಿದ್ದಾನೆ.
ಆದಕಾರಣ, ಬೈಬಲು ಕಾಲಗಣನೆಗೆ ನಿರ್ದಿಷ್ಟವಾದ ಗಮನವನ್ನು ಕೊಡುತ್ತದೆ. ಮಾನವ ಇತಿಹಾಸದ ಆರಂಭಕ್ಕೆ ಕ್ರಮಬದ್ಧವಾಗಿ ಹಿಂದೆ ಗುಣಿಸುವುದನ್ನು ಅನುಮತಿಸುವ ಮುಂದುವರಿಯುವ ದಾಖಲೆಯನ್ನು ಅದು ಒದಗಿಸುತ್ತದೆ. ಅಂತಹ ಕಾಲಗಣನೆಯು ಸಾ.ಶ.ಪೂ. 4026ನ್ನು, ದೇವರು ಆದಾಮನನ್ನು ಸೃಷ್ಟಿಸಿದ ವರುಷವಾಗಿ ಗುರುತಿಸುತ್ತದೆ. ಸುಮಾರು 2,000 ವರ್ಷಗಳ ಬಳಿಕ, ಅಬ್ರಹಾಮನು ಹುಟ್ಟಿದನು. ಯೇಸು ಜನಿಸಿದ ಸಮಯದಲ್ಲಿ ಇನ್ನೂ 2,000 ವರ್ಷಗಳು ದಾಟಿದ್ದವು.
ಬೈಬಲ್ ಕಾಲಗಣನೆಯನ್ನು ಅಧ್ಯಯನಿಸುವ ಕೆಲವರು, ಭವಿಷ್ಯತ್ತಿನಲ್ಲಿ ನಿರ್ದಿಷ್ಟ ತಾರೀಖುಗಳನ್ನು ಸೂಚಿಸುವ ಸ್ವೇಚ್ಛಾನುಸಾರವಾದ ಸಮೀಕರಣಗಳನ್ನು ಪ್ರತಿಪಾದಿಸಿದ್ದಾರೆ. ಉದಾಹರಣೆಗೆ, ಆದಾಮ, ಅಬ್ರಹಾಮ ಮತ್ತು ಯೇಸು—ಇವರನ್ನು ಪ್ರತ್ಯೇಕಿಸಿದ ಸುಮಾರು 2,000 ವರ್ಷಗಳ ಕ್ರಮಾನುಗತ ಅವಧಿಗಳನ್ನು ಆಧಾರವಾಗಿ ಉಪಯೋಗಿಸುತ್ತ, ಯೇಸುವಿನ ಜನನಾನಂತರದ 2,000 ವರ್ಷಗಳ ಅಂತ್ಯದಲ್ಲಿ ಆಗುವ ಭಯಸೂಚಕ ಘಟನೆಯನ್ನು ಕೆಲವರು ಮುಂತಿಳಿಸುತ್ತಾರೆ. ಅದು ಬೈಬಲಿನ ಕಾಲಗಣನೆಯಲ್ಲಿ ಆಧಾರಿಸಲ್ಪಟ್ಟಿವೆಯೆಂದು ಹೇಳಲಾಗುವ ಅನೇಕ ಕಾಲಸೂತ್ರಗಳಲ್ಲಿ ಕೇವಲ ಒಂದು ಉದಾಹರಣೆಯಾಗಿದೆ.
ಯೆಹೋವ ದೇವರು ಕೆಟ್ಟತನವನ್ನು ತೆಗೆದುಹಾಕುವ ಮತ್ತು ಹೊಸ ಲೋಕವನ್ನು ತರುವ ಮೂಲಕ ಮಾನವ ವಿಚಾರಗಳಲ್ಲಿ ಹಸ್ತಕ್ಷೇಪಮಾಡುವ ಸಮಯದ ಕುರಿತು ಬೈಬಲ್ ಹೇಳುತ್ತದೆಂಬುದು ಒಪ್ಪತಕ್ಕ ವಿಷಯವೇ ಸರಿ. ಬೈಬಲ್ ಪ್ರವಾದನೆಯು, “ಅಂತ್ಯ ಸಮಯ,” “ವಿಷಯಗಳ ವ್ಯವಸ್ಥೆಯ ಸಮಾಪ್ತಿ” “ಕಡೇ ದಿವಸಗಳು” ಮತ್ತು “ಯೆಹೋವನ ದಿನ”ದ ಕುರಿತು ಮಾತಾಡುತ್ತದೆ. (ದಾನಿಯೇಲ 8:17; ಮತ್ತಾಯ 24:3; 2 ತಿಮೊಥೆಯ 3:1; 2 ಪೇತ್ರ 3:12) ಆದರೂ ಬೈಬಲಿನಲ್ಲಿ ಪ್ರವಾದಿಸಲಾಗಿರುವ “ಅಂತ್ಯವು,” ವರ್ಷ 2000ಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸಿರುವುದಿಲ್ಲ. ಗ್ರೆಗೋರಿಯನ್ ಕ್ಯಾಲೆಂಡರ್ ಲೆಕ್ಕಿಸಿರುವಂತೆ, ಎರಡನೆಯ ಸಹಸ್ರ ವರ್ಷಕಾಲದ ಅಂತ್ಯಕ್ಕೆ ವಿಶೇಷವಾದ ಗಮನಾರ್ಹತೆಯನ್ನು ಕೊಡುವ ಯಾವುದೇ ವಿಷಯವು ಶಾಸ್ತ್ರದಲ್ಲಿಲ್ಲ.
“ಅದು ಯಾವಾಗ ಆಗುವದು?”
ಯೇಸುವಿನ ಅಪೊಸ್ತಲರು ಯೇಸುವನ್ನು, “ಅದು ಯಾವಾಗ ಆಗುವದು? ನೀನು ಪ್ರತ್ಯಕ್ಷನಾಗುವದಕ್ಕೂ ಯುಗದ ಸಮಾಪ್ತಿಗೂ ಸೂಚನೆಯೇನು? ನಮಗೆ ಹೇಳು” ಎಂದು ಕೇಳಿದಾಗ, ದೇವರ ಕಾರ್ಯತಖ್ತೆಯಲ್ಲಿ ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸಿದರು. (ಮತ್ತಾಯ 24:3) ಇಂದು ಅನೇಕರು ಭವಿಷ್ಯತ್ತಿನ ವಿಷಯದಲ್ಲಿ ಅಂತಹದ್ದೇ ಕುತೂಹಲವನ್ನು ವ್ಯಕ್ತಪಡಿಸುತ್ತಾರೆ. ಅಂತಹ ಗಮನಾರ್ಹ ಬೈಬಲ್ ಪ್ರವಾದನೆಗಳ ಮತ್ತು ಅವುಗಳ ನೆರವೇರಿಕೆಯ ಸಮಯದ ಕುರಿತು ತೀವ್ರ ಆಸಕ್ತಿಯುಳ್ಳವರಾಗಿರುವುದು ಸ್ವಾಭಾವಿಕ. ಆದರೂ ಆ ವಿಷಯದ ಕುರಿತು ದೇವರ ಸ್ಥಾನವನ್ನು ಅಂಗೀಕರಿಸಿ, ಗೌರವಿಸುವುದು ವಿವೇಕಯುತವಾಗಿದೆ.
ಯೆಹೋವನು ತನ್ನ ಕುಮಾರನ ಮೂಲಕ ತನ್ನ ಉದ್ದೇಶಗಳನ್ನು ತಿಳಿಯಪಡಿಸಿ, ಈ ವಿವಾದಾಂಶದ ಕುರಿತು ನೇರವಾದ ಉತ್ತರವನ್ನು ಕೊಟ್ಟಿದ್ದಾನೆ. ಯೇಸುವಿನ ಸ್ವರ್ಗಾರೋಹಣಕ್ಕೆ ತುಸು ಮುಂಚಿತವಾಗಿ, ಅವನ ಶಿಷ್ಯರು ಪುನಃ ದೇವರ ವಾಗ್ದಾನಗಳ ನೆರವೇರಿಕೆಯ ಸಮಯದ ಕುರಿತು ಅವನನ್ನು ಕೇಳಿದರು. ಯೇಸು ಉತ್ತರಕೊಟ್ಟದ್ದು: “ತಂದೆಯು ಸ್ವಂತ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವುದು ನಿಮ್ಮ ಕೆಲಸವಲ್ಲ.” (ಅ. ಕೃತ್ಯಗಳು 1:7, ಓರೆಅಕ್ಷರಗಳು ನಮ್ಮವು.) ಇದಕ್ಕೆ ಮೊದಲಿನ ಒಂದು ಸಂದರ್ಭದಲ್ಲಿ, ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು. ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.”—ಮತ್ತಾಯ 24:36.
ವಿಶೇಷವಾಗಿ ಬೈಬಲ್ ಪ್ರವಾದನೆಗಳ ಭಾವೀ ನೆರವೇರಿಕೆಗಳ ಸಂಬಂಧದಲ್ಲಿ, “ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವುದು” ಮಾನವ ಅಧಿಕಾರದಲ್ಲಿಲ್ಲ ಎಂಬುದು ಸ್ಪಷ್ಟ. ಅಂತಹ ಮಾಹಿತಿಯನ್ನು ನಮಗೆ ತಿಳಿಯಪಡಿಸದಿರಲು ದೇವರು ಆರಿಸಿಕೊಂಡಿದ್ದಾನೆ. (ಮತ್ತಾಯ 24:22-44) ಆತನ ಇಷ್ಟಕ್ಕೆ ವಿರುದ್ಧವಾಗಿ, ನಮ್ಮಷ್ಟಕ್ಕೇ ‘ಆ ದಿನವನ್ನೂ ಗಳಿಗೆಯನ್ನೂ’ ಅರ್ಥಮಾಡಿಕೊಳ್ಳುವಲ್ಲಿ, ನಾವು ಯಾವ ವಿಧದಲ್ಲಾದರೂ ದೇವರ ಉದ್ದೇಶವನ್ನು ಪ್ರಭಾವಿಸಬಲ್ಲೆವೊ? ಇದು ಅಸಾಧ್ಯವೆಂಬುದು ಸುವ್ಯಕ್ತ. (ಅರಣ್ಯಕಾಂಡ 23:19; ರೋಮಾಪುರ 11:33, 34) ಬೈಬಲು ಹೇಳುವುದು: “ಯೆಹೋವನ ಆಲೋಚನೆಯೋ ಶಾಶ್ವತವಾಗಿಯೇ ನಿಲ್ಲುವದು.” (ಕೀರ್ತನೆ 33:11) ಆತನು ಸರ್ವಶಕ್ತ ದೇವರಾಗಿರುವುದರಿಂದ, ಆತನು ಸದಾ ಜಯಪ್ರದನಾಗಿರುತ್ತಾನೆ.—ಯೆಶಾಯ 55:8-11.
‘ಕಾಲಗಳನ್ನೂ ಸಮಯಗಳನ್ನೂ ತನ್ನ ಸ್ವಂತ ಅಧಿಕಾರದಲ್ಲಿ’ ಇಟ್ಟುಕೊಳ್ಳುವ ಶಕ್ತಿ ದೇವರಿಗಿದ್ದರೂ, ಅನೇಕರು ಊಹೆ ಕಟ್ಟಲು ಇಷ್ಟಪಡುತ್ತಾರೆ. ಕೆಲವರು ಸ್ವನಿಯಮಿತ ದುರ್ಗತಿ ಪ್ರವಾದಿಗಳಾಗುತ್ತಾರೆ. ಈ ಕಾರಣದಿಂದ ಅಪೊಸ್ತಲ ಪೌಲನು ಥೆಸಲೊನೀಕದವರಿಗೆ, ತಾರೀಖುಗಳ ಕುರಿತು ಊಹೆಕಟ್ಟುವವರಿಗೆ ಕಿವಿಗೊಡುವುದರಲ್ಲಿರುವ ಅಪಾಯದ ವಿಷಯದಲ್ಲಿ ನಿರ್ದಿಷ್ಟ ಸೂಚನೆಯನ್ನು ಕೊಟ್ಟನು. ಅವನು ಬರೆದುದು: “ಕರ್ತನ ದಿನವು ಈಗಲೇ ಹತ್ತಿರವಾಯಿತೆಂಬುದಾಗಿ ದೇವರಾತ್ಮಪ್ರೇರಿತವಾದ ನುಡಿ ಇದೆ ಎಂದಾಗಲಿ ಪೌಲನು ಹಾಗೆ ಹೇಳಿದನೆಂದಾಗಲಿ ಪೌಲನು ಹಾಗೆ ಬರೆದನೆಂದಾಗಲಿ ಯಾರಾದರೂ ಹೇಳಿದರೂ ನೀವು ಬೇಗನೆ ಬುದ್ಧಿಗೆಟ್ಟು ಚಂಚಲರಾಗಿ ಕಳವಳಪಡಬೇಡಿರಿ. ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ.”—2 ಥೆಸಲೊನೀಕ 2:1-3.
ಭವಿಷ್ಯತ್ತಿಗಾಗಿರುವ ದೇವರ ಉದ್ದೇಶಗಳು, ಪೂರ್ವನಿಶ್ಚಿತ ಸಮಯದಲ್ಲಿ, ಆತನು ನೇಮಿಸಿರುವ ದಿನ ಮತ್ತು ಗಳಿಗೆಯಲ್ಲಿ ಜಾರಿಗೆ ತರಲ್ಪಡುವುದು ನಿಶ್ಚಯವೆಂದು ಯೆಹೋವನ ಸಾಕ್ಷಿಗಳು ದೃಢವಾಗಿ ನಂಬುತ್ತಾರೆ. (ಹಬಕ್ಕೂಕ 2:3; 2 ಪೇತ್ರ 3:9, 10) ಮತ್ತು ಈ ಘಟನೆಗಳು ಅತಿ ಹತ್ತಿರದ ಭವಿಷ್ಯತ್ತಿನಲ್ಲಿಯೇ ಸಂಭವಿಸುವುವೆಂದು ನಾವು ನಂಬುತ್ತೇವೆ. (2 ತಿಮೊಥೆಯ 3:1-5) ಆದರೂ, ಇಂದು ಹೆಚ್ಚಾಗಿ ಹರಡುತ್ತಿರುವ ಕಲ್ಪನೆಗಳ ಕುರಿತು ನಾವು ಊಹೆಕಟ್ಟಿಕೊಳ್ಳುವುದೂ ಇಲ್ಲ, ಅವುಗಳನ್ನು ಬೆಂಬಲಿಸುವುದೂ ಇಲ್ಲ.b ನಿಶ್ಚಯವಾಗಿಯೂ, ವರ್ಷ 2000 ಆಗಿರಲಿ, 2001 ಆಗಿರಲಿ ಅಥವಾ ಮನುಷ್ಯರು ಕಲ್ಪಿಸಿರುವ ಇನ್ನಾವುದೇ ಸಮಯದ ಹೊಸ್ತಿಲಾಗಿರಲಿ, ಇವಕ್ಕೆ ಯೆಹೋವನ ಕಾರ್ಯತಖ್ತೆಯೊಂದಿಗೆ ಯಾವ ಸಂಬಂಧವೂ ಇರುವುದಿಲ್ಲ.
[ಅಧ್ಯಯನ ಪ್ರಶ್ನೆಗಳು]
a ಪಾರಿಭಾಷಿಕ ದೃಷ್ಟಿಕೋನದಿಂದ ನೋಡುವುದಾದರೆ, ಮೂರನೆಯ ಸಹಸ್ರ ವರ್ಷಕಾಲವೆಂದು ಕರೆಯಲ್ಪಡುವ ವರ್ಷವು, ಜನವರಿ 1, 2001ರಂದು ಆರಂಭಗೊಳ್ಳುತ್ತದೆ. ಪ್ರಥಮ ಸಹಸ್ರ ವರ್ಷಕಾಲವು ಸೊನ್ನೆ ವರುಷದಿಂದ ಆರಂಭಗೊಳ್ಳಲಿಲ್ಲ, 1ನೆಯ ವರ್ಷದಿಂದ ಆರಂಭವಾಯಿತು. ಆದರೂ, ಸಾರ್ವಜನಿಕರು “ಮೂರನೆಯ ಸಹಸ್ರ ವರ್ಷಕಾಲ” ಎಂಬ ಪದಗಳನ್ನು ವರ್ಷ 2000ದೊಂದಿಗೆ ಜೊತೆಗೂಡಿಸುತ್ತಾರೆ. ಈ ಲೇಖನವು ವರ್ಷ 2000ದ ಕುರಿತ ಜನಪ್ರಿಯ ನಿರೀಕ್ಷಣೆಗಳ ಮೇಲೆ ಕೇಂದ್ರೀಕರಿಸುತ್ತದೆ.
b ಸೆಪ್ಟೆಂಬರ್ 1, 1997ರ ಕಾವಲಿನಬುರುಜು ಸಂಚಿಕೆಯು, ಪುಟಗಳು 21-2ರಲ್ಲಿ ಹೇಳಿದ್ದು: “ಯೆಹೋವನ ದಿನವು ಯಾವಾಗ ಬರುವುದೆಂಬುದನ್ನು ತಿಳಿದುಕೊಳ್ಳಲು ಯೆಹೋವನ ಸಾಕ್ಷಿಗಳು ಆತುರದಿಂದಿದ್ದರು. ಅವರ ಆತುರತೆಯ ಕಾರಣದಿಂದ ಅವರು ಕೆಲವೊಮ್ಮೆ ಅದು ಯಾವಾಗ ಬರಬಹುದೆಂದು ಅಂದಾಜುಮಾಡಲು ಪ್ರಯತ್ನಿಸಿದ್ದಾರೆ. ಆದರೆ ಹಾಗೆ ಮಾಡುವ ಮೂಲಕ, ಯೇಸುವಿನ ಆದಿಶಿಷ್ಯರಂತೆ ಅವರೂ ತಮ್ಮ ಯಜಮಾನನ, ‘ಆ ಕಾಲವು ಯಾವಾಗ ಬರುವದೋ . . . ಗೊತ್ತಿಲ್ಲ’ ಎಂಬ ಎಚ್ಚರಿಕೆಗೆ ಕಿವಿಗೊಡಲು ತಪ್ಪಿಹೋಗಿದ್ದಾರೆ. (ಮಾರ್ಕ 13:32, 33) ನಂಬಿಗಸ್ತ ಕ್ರೈಸ್ತರ ಸಮಯಕ್ಕೆ ಮುಂಚಿನ ನಿರೀಕ್ಷಣೆಗಳಿಗಾಗಿ ಕುಚೋದ್ಯಗಾರರು ಅವರನ್ನು ಗೇಲಿಮಾಡಿದ್ದಾರೆ. (2 ಪೇತ್ರ 3:3, 4) ಆದರೂ, ಯೆಹೋವನ ದಿನವು, ಆತನ ಕಾಲತಖ್ತೆಗನುಸಾರ ಬರುವುದು ಎಂದು ಪೇತ್ರನು ದೃಢಪಡಿಸುತ್ತಾನೆ.”