ಹೃದಯ ಶಸ್ತ್ರಚಿಕಿತ್ಸಕರು ಎಚ್ಚರ! ಪತ್ರಿಕೆಯನ್ನು ಅಭಿನಂದಿಸುತ್ತಾರೆ
ಜನವರಿ 8, 1997ರ ಎಚ್ಚರ! ಪತ್ರಿಕೆಯು, “ಹೃದಯಾಘಾತ—ಏನು ಮಾಡಸಾಧ್ಯವಿದೆ?” ಎಂಬ ಶಿರೋನಾಮವುಳ್ಳ ಲೇಖನಮಾಲೆಯನ್ನು ಸಾದರಪಡಿಸಿತು. ಜರ್ಮನಿಯ ಪ್ರಮುಖ ಹೃದಯ ಬದಲಿ ಶಸ್ತ್ರಚಿಕಿತ್ಸಕರೂ, ಎದೆಗೂಡು ಮತ್ತು ಹೃದಯನಾಳರಚನಾ ಇಲಾಖೆಯ ಮುಖ್ಯಸ್ಥರೂ ಆದ ಡಾ. ಟೋಮಾಸ್ ಸ್ಟಾಗ್ಮಾನ್ ಅವರು, ಆ ಲೇಖನಗಳನ್ನು ಓದಿದರು ಮತ್ತು ಪ್ರಕಾಶಕರಿಗೆ ಈ ಕೆಳಗಿನಂತೆ ಬರೆದರು:
“ಹೃದ್ರೋಗ ಮತ್ತು ವಿಶೇಷವಾಗಿ ಹೃದಯಾಘಾತಗಳ ವಿಷಯದ ಕುರಿತಾದ ನಿಮ್ಮ ವರದಿಯನ್ನು ನಾನು ಆಸಕ್ತಿಯಿಂದ ಓದಿದೆ. ಈ ಕ್ಷೇತ್ರದಲ್ಲಿನ ಒಬ್ಬ ಪರಿಣತನೋಪಾದಿ, ಹೃದಯಾಘಾತಗಳ ವಿವರಣೆ ಮತ್ತು ಆ ವಿಷಯದ ಕುರಿತಾದ ನಿಮ್ಮ ಮಾಹಿತಿಯು—ಒಂದು ಕಡೆಯಲ್ಲಿ, ಹೃದ್ರೋಗವಿರುವ ವ್ಯಕ್ತಿಗತ ರೋಗಿಗಾಗಿ ಹೆಚ್ಚಿನ ವಿವೇಚನೆಯನ್ನು, ಇನ್ನೊಂದು ಕಡೆಯಲ್ಲಿ, ವೈದ್ಯಕೀಯ ಸತ್ಯಾಂಶಗಳ ಸರಿಯಾದ ವೃತ್ತಾಂತವನ್ನು ತೋರಿಸುತ್ತಾ—ಅತ್ಯುತ್ತಮವಾಗಿತ್ತು ಎಂದು ನಿಮಗೆ ಹೇಳಲು ನಾನು ಪ್ರಚೋದಿತನಾದೆ. ಆ ವಿವರಣೆಯು ಒಂದು ಬೋಧಪ್ರದವಾದ ಸಾರಾಂಶವನ್ನೂ ಸದೃಢವಾದ ಮಾಹಿತಿಯನ್ನೂ ಒದಗಿಸುತ್ತದೆ. ಹೃದಯಾಘಾತದ ರೋಗಲಕ್ಷಣಗಳ ಆರಂಭದ ಗ್ರಹಿಕೆಯ ವಿಷಯಕ್ಕೆ ನೀವು ಕೂಡಿಸಿದ ವಿಶೇಷ ಮಹತ್ವವು ಸಹ ಪ್ರಮುಖವಾದದ್ದಾಗಿತ್ತು.
“ಒಟ್ಟಿನಲ್ಲಿ ವೈದ್ಯಕೀಯ ವಿಜ್ಞಾನ ಹಾಗೂ ಸಮಾಜವು ಐಕ್ಯ ಪ್ರಯತ್ನಗಳನ್ನು ಮಾಡಿರುವುದಾದರೂ, ಪಾಶ್ಚಿಮಾತ್ಯ ದೇಶಗಳಲ್ಲಿ ಅಪಧಮನಿ ಮಾಂದ್ಯವು—ಮತ್ತು ವಿಶೇಷವಾಗಿ ಹೃದಯಾಘಾತ—ಮರಣದ ಅತ್ಯಂತ ಸಾಮಾನ್ಯ ಕಾರಣವಾಗಿದೆ. ದೈನಂದಿನ ಆಧಾರದ ಮೇಲೆ ರಕ್ತನಾಳಗಳಿಗೆ ಸಂಬಂಧಪಟ್ಟ ಅಪಧಮನಿ ಮಾಂದ್ಯ (ಕಠಿನವಾಗುವಿಕೆ, ಸಂಕೋಚನ, ನಾಳರಚನೆಯಲ್ಲಿನ ತಡೆಗಳು)ದಲ್ಲಿನ ಗಂಭೀರವಾದ ಬದಲಾವಣೆಗಳೊಂದಿಗೆ ವ್ಯವಹರಿಸುವ ಹಾಗೂ ಹೃದಯದ ಶಸ್ತ್ರಚಿಕಿತ್ಸೆಯ ಮೂಲಕ ಈ ರೋಗಗಳಿಗೆ ಚಿಕಿತ್ಸೆ ನೀಡುವ ಹೃದಯದ ಶಸ್ತ್ರಚಿಕಿತ್ಸಕನೋಪಾದಿ, ಜನರಿಗೆ—ಮತ್ತು ಸಂಭಾವ್ಯ ರೋಗಿಗೆ ಸಹ—ಸಾಕ್ಷ್ಯಾಧಾರವುಳ್ಳ ಹಾಗೂ ವಾಸ್ತವಿಕವಾದ ವಿವರಣೆಯು ಎಷ್ಟು ಪ್ರಾಮುಖ್ಯವಾಗಿದೆ ಎಂಬುದು ನನಗೆ ತಿಳಿದಿದೆ.
“ಈ ವಿಷಯದ ಕುರಿತಾದ ನಿಮ್ಮ ವರ್ಣನೆಗಾಗಿ, ಇದರೊಂದಿಗೆ ನಿಮ್ಮ ಲೇಖನವು ಸಾಧ್ಯವಿರುವಷ್ಟು ಅನೇಕ ಜನರಿಗೆ ಲಭ್ಯವಾಗುವಂತೆ ಮಾಡಲಿಕ್ಕಾಗಿರುವ ನಿರೀಕ್ಷೆಯೊಂದಿಗೆ, ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಲು ನನಗೆ ಅವಕಾಶವನ್ನು ಕೊಡಿ.”
ನೀವು ಎಚ್ಚರ! ಪತ್ರಿಕೆಯನ್ನು ಕ್ರಮವಾಗಿ ಓದಲು ಇಷ್ಟಪಡುವುದಾದರೆ ಅಥವಾ ಒಂದು ಉಚಿತ ಮನೆ ಬೈಬಲ್ ಅಧ್ಯಯನವನ್ನು ನಡೆಸಲು ಯಾರಾದರೂ ನಿಮ್ಮನ್ನು ಭೇಟಿಮಾಡುವಂತೆ ಬಯಸುವುದಾದರೆ, Praharidurg Prakashan Society, Plot A/35, Nr Industrial Estate, Nangargaon, Lonavla 410 401, Mah., India, ಇವರಿಗೆ, ಅಥವಾ 5ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದ್ದಾದ ವಿಳಾಸಕ್ಕೆ ಬರೆಯಿರಿ.