ಬೈಬಲಿನ ದೃಷ್ಟಿಕೋನ
ಬೈಬಲು ಶಿಕ್ಷಣವನ್ನು ನಿರುತ್ತೇಜಿಸುತ್ತದೊ?
“ಶಿಕ್ಷಣವನ್ನು ನಿರ್ಲಕ್ಷಿಸುವುದು ಅಜ್ಞಾನಿಗಳು ಮಾತ್ರವೇ.” —ಪೂಬ್ಲೀಲ್ಯಸ್ ಸ್ಯೂಯೀರಸ್, ನೀತಿ ಗಾದೆಗಳು (ಇಂಗ್ಲಿಷ್), ಸಾ.ಶ.ಪೂ. ಮೊದಲನೆಯ ಶತಮಾನ.
“ಸುಜ್ಞಾನವನ್ನೂ ಬುದ್ಧಿಯನ್ನೂ ಭದ್ರವಾಗಿಟ್ಟು”ಕೊಳ್ಳಿ ಎಂದು ಬೈಬಲು ನಮ್ಮನ್ನು ಪ್ರಚೋದಿಸುತ್ತದೆ. (ಜ್ಞಾನೋಕ್ತಿ 3:21) ಜ್ಞಾನದ ದೇವರಾದ ಯೆಹೋವನು, ತನ್ನ ಆರಾಧಕರು ಶಿಕ್ಷಿತ ಜನರಾಗಿರುವಂತೆ ಬಯಸುತ್ತಾನೆ (1 ಸಮುವೇಲ 2:3; ಜ್ಞಾನೋಕ್ತಿ 1:5, 22) ಆದರೂ, ಬೈಬಲಿನಲ್ಲಿರುವ ಕೆಲವು ಹೇಳಿಕೆಗಳು ಪ್ರಶ್ನೆಗಳನ್ನು ಎಬ್ಬಿಸಬಹುದು. ಉದಾಹರಣೆಗಾಗಿ, ಅಪೊಸ್ತಲ ಪೌಲನು ತನ್ನ ಅತ್ಯುಚ್ಚ ಶಿಕ್ಷಣವನ್ನೂ ಒಳಗೂಡಿಸಿ, ತನ್ನ ಹಿಂದಿನ ಬೆನ್ನಟ್ಟುವಿಕೆಗಳಿಗೆ ಸೂಚಿಸುತ್ತಾ ಬರೆದುದು: “ಅದನ್ನು ಕಸವೆಂದೆಣಿಸುತ್ತೇನೆ.” (ಫಿಲಿಪ್ಪಿ 3:3-8) ಇನ್ನೊಂದು ಪ್ರೇರಿತ ಪತ್ರದಲ್ಲಿ ಅವನು ಒತ್ತಿಹೇಳಿದ್ದು: “ಇಹಲೋಕ ಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ.”—1 ಕೊರಿಂಥ 3:19.
ಹಾಗಾದರೆ, ಬೈಬಲು ಶಿಕ್ಷಣವನ್ನು ನಿರುತ್ತೇಜಿಸುತ್ತದೊ? ಕ್ರೈಸ್ತನೊಬ್ಬನು ಎಷ್ಟರ ಮಟ್ಟಿಗೆ ಐಹಿಕ ಶಿಕ್ಷಣವನ್ನು ಬೆನ್ನಟ್ಟಬೇಕು? ಕಾನೂನಿನಿಂದ ಅಗತ್ಯಪಡಿಸಲ್ಪಡುವ ಕನಿಷ್ಠ ಪ್ರಮಾಣದ ಶಿಕ್ಷಣವು ಸಾಕೊ, ಅಥವಾ ಹೆಚ್ಚಿನ ಶಿಕ್ಷಣವನ್ನು ಬೆನ್ನಟ್ಟಬೇಕೊ?
ಮೊದಲನೆಯ ಶತಮಾನದಲ್ಲಿ ಶಿಕ್ಷಣ
ಮೊದಲನೆಯ ಶತಮಾನದ ಕ್ರೈಸ್ತರ ನಡುವೆ, ಶಿಕ್ಷಣ ಸಂಬಂಧವಾದ ಬಹಳಷ್ಟು ವಿಧದ ಹಿನ್ನೆಲೆಗಳಿದ್ದವು. ಕೆಲವು ಅಗ್ರಗಣ್ಯ ಪುರುಷರು, ಗಲಿಲಾಯದ ಅಪೊಸ್ತಲರಾದ ಪೇತ್ರಯೋಹಾನರನ್ನು “ಶಾಸ್ತ್ರಾಭ್ಯಾಸ ಮಾಡದ ಸಾಧಾರಣ” ವ್ಯಕ್ತಿಗಳೋಪಾದಿ ದೃಷ್ಟಿಸಿದರು. (ಅ. ಕೃತ್ಯಗಳು 4:5, 6, 13) ಈ ಇಬ್ಬರು ಪುರುಷರು ಅನಕ್ಷರಸ್ಥರು ಅಥವಾ ಅಶಿಕ್ಷಿತರಾಗಿದ್ದರು ಎಂಬುದನ್ನು ಇದು ಅರ್ಥೈಸಿತೋ? ಇಲ್ಲ. ಅವರ ಶಿಕ್ಷಣವು, ಯೆರೂಸಲೇಮಿನಲ್ಲಿನ ಅತ್ಯುಚ್ಚ ವಿದ್ಯಾಭ್ಯಾಸದ ಹೀಬ್ರು ಶಾಲೆಗಳಿಂದ ಕಲಿತದ್ದಾಗಿರಲಿಲ್ಲ ಎಂಬುದನ್ನೇ ಅದು ಅರ್ಥೈಸಿತು. ತದನಂತರ, ಕ್ರೈಸ್ತತ್ವದ ಈ ಇಬ್ಬರು ಧೈರ್ಯಶಾಲಿ ಪ್ರತಿಪಾದಕರ ಬರಹಗಳು, ಅವರು ಸುಶಿಕ್ಷಿತರೂ, ಬುದ್ಧಿವಂತರೂ, ಸ್ಪಷ್ಟವಾದ ಶಾಸ್ತ್ರೀಯ ವಿವರಣೆಯನ್ನು ನೀಡಲು ಸಮರ್ಥರೂ ಆಗಿದ್ದರೆಂಬ ವಾಸ್ತವಾಂಶಕ್ಕೆ ರುಜುವಾತನ್ನು ಕೊಟ್ಟವು. ತಮ್ಮ ಕುಟುಂಬಗಳ ಪ್ರಾಪಂಚಿಕ ಆವಶ್ಯಕತೆಗಳನ್ನು ನೋಡಿಕೊಳ್ಳುವುದರಲ್ಲಿನ ಪ್ರಾಯೋಗಿಕ ಬೋಧನೆಯು ಅವರ ಶಿಕ್ಷಣದಲ್ಲಿ ಒಳಗೂಡಿತ್ತು. ಸುವ್ಯಕ್ತವಾಗಿಯೇ ಅವರು ಯಾವುದು ಒಂದು ಲಾಭಕರ ಮೀನುಗಾರಿಕೆಯ ವ್ಯಾಪಾರವಾಗಿತ್ತೋ ಆ ವ್ಯಾಪಾರದ ಸಹಭಾಗಿಗಳಾಗಿದ್ದರು.—ಮಾರ್ಕ 1:16-21; ಲೂಕ 5:7, 10.
ಇದಕ್ಕೆ ವ್ಯತಿರಿಕ್ತವಾಗಿ, ಸುವಾರ್ತೆಗಳಲ್ಲಿ ಒಂದನ್ನು ಹಾಗೂ ಅಪೊಸ್ತಲ ಕೃತ್ಯಗಳು ಪುಸ್ತಕವನ್ನು ಬರೆದ ಶಿಷ್ಯನಾದ ಲೂಕನು, ಹೆಚ್ಚು ಪ್ರೌಢ ಶಿಕ್ಷಣವನ್ನು ಪಡೆದುಕೊಂಡನು. ಅವನು ಒಬ್ಬ ವೈದ್ಯನಾಗಿದ್ದನು. (ಕೊಲೊಸ್ಸೆ 4:14) ಅವನ ವೈದ್ಯಕೀಯ ಹಿನ್ನೆಲೆಯು, ಅವನ ಪ್ರೇರಿತ ಬರಹಗಳಿಗೆ ವಿಶಿಷ್ಟ ಸ್ವರೂಪವನ್ನು ಕೊಡುತ್ತದೆ.—ನೋಡಿರಿ ಲೂಕ 4:38; 5:12; ಅ. ಕೃತ್ಯಗಳು 28:8.
ಒಬ್ಬ ಕ್ರೈಸ್ತನಾಗುವುದಕ್ಕೆ ಮೊದಲು ಅಪೊಸ್ತಲ ಪೌಲನು, ಆ ಸಮಯದ ಅತ್ಯಂತ ಬುದ್ಧಿವಂತ ವಿದ್ವಾಂಸರಲ್ಲಿ ಒಬ್ಬನಾದ ಗಮಲಿಯೇಲನ ಪರಾಮರಿಕೆಯ ಕೆಳಗೆ, ಯೆಹೂದಿ ಧರ್ಮಶಾಸ್ತ್ರದಲ್ಲಿ ಬೋಧನೆಯನ್ನು ಪಡೆದುಕೊಂಡಿದ್ದನು. (ಅ. ಕೃತ್ಯಗಳು 22:3) ಪೌಲನ ಶಿಕ್ಷಣವು, ಇಂದಿನ ವಿಶ್ವವಿದ್ಯಾನಿಲಯದ ಶಿಕ್ಷಣಕ್ಕೆ ಹೋಲಿಕೆಯುಳ್ಳದ್ದಾಗಿರಬಹುದು. ಅಷ್ಟುಮಾತ್ರವಲ್ಲದೆ, ಯೆಹೂದಿ ಸಮಾಜದಲ್ಲಿ, ತದನಂತರದ ವರ್ಷಗಳಲ್ಲಿ ಇನ್ನೂ ಉಚ್ಚ ಶಿಕ್ಷಣವನ್ನು ಬೆನ್ನಟ್ಟಲಿಕ್ಕಿರುವಾಗಲೂ, ಯುವ ಜನರು ಒಂದು ಉದ್ಯಮವನ್ನು ಕಲಿತುಕೊಳ್ಳುವುದು ಗೌರವಾರ್ಹವಾದದ್ದಾಗಿತ್ತು. ಸುವ್ಯಕ್ತವಾಗಿ ಪೌಲನು ಇನ್ನೂ ಚಿಕ್ಕ ಹುಡುಗನಾಗಿರುವಾಗಲೇ ಗುಡಾರಮಾಡುವ ಕೆಲಸದ ತರಬೇತಿಯನ್ನು ಪಡೆದುಕೊಂಡಿದ್ದನು. ಅಂತಹ ಕೌಶಲಗಳು, ತನ್ನ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸ್ವತಃ ಬೆಂಬಲಿಸಿಕೊಳ್ಳಲು ಅವನನ್ನು ಶಕ್ತನನ್ನಾಗಿ ಮಾಡಿದವು.
ಆದರೂ, ದೇವರ ಜ್ಞಾನದ ಅತಿಶಯವಾದ ಯೋಗ್ಯತೆಯ ಸಂಬಂಧದಲ್ಲಿ, ಐಹಿಕ ಶಿಕ್ಷಣವು—ಅದು ಅಗತ್ಯವಿರುವುದಾದರೂ—ಪರಿಮಿತ ಮೌಲ್ಯದ್ದಾಗಿದೆ ಎಂಬುದನ್ನು ಪೌಲನು ಗ್ರಹಿಸಿದನು. ಅದಕ್ಕನುಸಾರವಾಗಿ, ಬೈಬಲು ದೇವರ ಹಾಗೂ ಕ್ರಿಸ್ತನ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವುದರ ಮೇಲೆ ಹೆಚ್ಚಿನ ಪ್ರಮುಖತೆಯನ್ನು ಹಾಕುತ್ತದೆ. ಕ್ರೈಸ್ತರು ಇಂದು ಐಹಿಕ ಶಿಕ್ಷಣದ ಕುರಿತಾದ ಈ ವಾಸ್ತವಿಕ ನೋಟವನ್ನು ಅಳವಡಿಸಿಕೊಳ್ಳುವುದು ಒಳ್ಳೆಯದಾಗಿದೆ.—ಜ್ಞಾನೋಕ್ತಿ 2:1-5; ಯೋಹಾನ 17:3; ಕೊಲೊಸ್ಸೆ 2:3.
ವಿಷಯವನ್ನು ಜಾಗರೂಕತೆಯಿಂದ ತೂಗಿನೋಡುವುದು
ಶೈಕ್ಷಣಿಕ ಅಥವಾ ವೃತ್ತಿಪರ ಅಧ್ಯಯನಗಳ ರೂಪದಲ್ಲಿ ಹೆಚ್ಚಿನ ಶಿಕ್ಷಣವನ್ನು ಬೆನ್ನಟ್ಟುವುದು, ತಮ್ಮ ಕುಟುಂಬದ ಪ್ರಾಪಂಚಿಕ ಆವಶ್ಯಕತೆಗಳನ್ನು ನೋಡಿಕೊಳ್ಳುವುದರಲ್ಲಿ ತಮಗೆ ಸಹಾಯ ಮಾಡಿದೆಯೆಂದು ಕೆಲವು ಕ್ರೈಸ್ತರು ಕಂಡುಕೊಂಡಿದ್ದಾರೆ. ಒಬ್ಬನು ತನ್ನ ಕುಟುಂಬವನ್ನು ನೋಡಿಕೊಳ್ಳುವುದು ಸೂಕ್ತವಾದದ್ದಾಗಿದೆ, ಏಕೆಂದರೆ ‘ಒಬ್ಬನ ಮನೆವಾರ್ತೆಗಾಗಿ ಒದಗಿಸುವಿಕೆಗಳನ್ನು ಮಾಡುವುದು’ (NW) ಒಂದು ಪವಿತ್ರವಾದ ಕರ್ತವ್ಯವಾಗಿದೆ. (1 ತಿಮೊಥೆಯ 5:8) ಇದನ್ನು ಮಾಡಲಿಕ್ಕಾಗಿ ಅಗತ್ಯವಾಗಿರುವ ಕೌಶಲಗಳನ್ನು ಸಂಪಾದಿಸುವುದು, ಪ್ರಾಯೋಗಿಕ ವಿವೇಕದ ವಿಷಯವಾಗಿದೆ.
ಹಾಗಿದ್ದರೂ, ಈ ಉದ್ದೇಶವನ್ನು ಪೂರೈಸಲಿಕ್ಕಾಗಿ ಮೂಲಭೂತ ಶಿಕ್ಷಣಕ್ಕಿಂತ ಹೆಚ್ಚನ್ನು ಪಡೆದುಕೊಳ್ಳುವ ಅಗತ್ಯವಿದೆಯೆಂದು ಭಾವಿಸುವವರು, ಅದರ ಪ್ರಯೋಜನಗಳನ್ನೂ ನಷ್ಟಗಳನ್ನೂ ತೂಗಿನೋಡಬೇಕಾಗಿದೆ. ಸಂಭಾವ್ಯ ಪ್ರಯೋಜನಗಳಲ್ಲಿ, ಸ್ವತಃ ತನಗೆ ಹಾಗೂ ಒಂದು ಕುಟುಂಬಕ್ಕೆ ಸಾಕಷ್ಟು ಮಟ್ಟಿಗೆ ಬೆಂಬಲಿಸುವಂತೆ ವ್ಯಕ್ತಿಯೊಬ್ಬನನ್ನು ಶಕ್ತನನ್ನಾಗಿ ಮಾಡುವ ಉದ್ಯೋಗವನ್ನು ದೊರಕಿಸಿಕೊಳ್ಳಲು ಸಿದ್ಧನಾಗಿರುವುದು, ಅದೇ ಸಮಯದಲ್ಲಿ ಕ್ರೈಸ್ತ ಶುಶ್ರೂಷೆಯನ್ನು ಹುರುಪಿನಿಂದ ಬೆನ್ನಟ್ಟುವುದೂ ಒಳಗೂಡಿದೆ. ಇದಕ್ಕೆ ಕೂಡಿಸಿ, ‘ಕಷ್ಟದಲ್ಲಿರುವರಿಗೆ ಕೊಡುವುದಕ್ಕೆ ಏನಾದರೂ ಇದ್ದವನಾಗಿದ್ದು’ ಪ್ರಾಪಂಚಿಕ ರೀತಿಯಲ್ಲಿ ಇತರರಿಗೆ ಸಹಾಯ ಮಾಡಲು ಅವನು ಶಕ್ತನಾಗಿರಬಹುದು.—ಎಫೆಸ 4:28.
ಕೆಲವು ಸಂಭಾವ್ಯ ನಷ್ಟಗಳು ಯಾವುವು? ದೇವರಲ್ಲಿ ಹಾಗೂ ಬೈಬಲಿನಲ್ಲಿನ ನಂಬಿಕೆಯನ್ನು ಶಿಥಿಲಗೊಳಿಸುವಂತಹ ಬೋಧನೆಗಳಿಗೆ ಒಡ್ಡಲ್ಪಡುವುದು ಇವುಗಳಲ್ಲಿ ಒಳಗೂಡಿರಬಹುದು. ಪೌಲನು ಕ್ರೈಸ್ತರಿಗೆ, “ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆ” ಮತ್ತು “ಮನುಷ್ಯರ ಸಂಪ್ರದಾಯಕ್ಕನುಸಾರವಾದ ತತ್ವಜ್ಞಾನ ಹಾಗೂ ಪೊಳ್ಳಾದ ವಂಚನೆ”ಯ ವಿಷಯದಲ್ಲಿ ಜಾಗರೂಕರಾಗಿರುವಂತೆ ಬುದ್ಧಿವಾದ ಹೇಳಿದನು. (1 ತಿಮೊಥೆಯ 6:20, 21; ಕೊಲೊಸ್ಸೆ 2:8) ಸ್ಪಷ್ಟವಾಗಿ, ಶಿಕ್ಷಣದ ಕೆಲವೊಂದು ರೂಪಗಳಿಗೆ ಒಡ್ಡಲ್ಪಡುವುದು, ಕ್ರೈಸ್ತನೊಬ್ಬನ ನಂಬಿಕೆಗೆ ಹಾನಿಕರವಾಗಿರಸಾಧ್ಯವಿದೆ. ಹೆಚ್ಚಿನ ತರಬೇತಿಯನ್ನು ಅಥವಾ ಅಧ್ಯಯನವನ್ನು ಪರಿಗಣಿಸುವವರು, ಅಂತಹ ಅಪಾಯಕರ ಪ್ರಭಾವಗಳ ಅಪಾಯದ ಅರಿವುಳ್ಳವರಾಗಿರಬೇಕು.
“ಐಗುಪ್ತದೇಶದವರ ಸರ್ವವಿದ್ಯೆಗಳಲ್ಲಿಯೂ ಉಪದೇಶಹೊಂದಿ”ದ್ದ ಮೋಶೆಯು, ನಿಸ್ಸಂದೇಹವಾಗಿಯೂ ಬಹುದೇವತಾರಾಧನೆ, ದೇವರಿಗೆ ಅಪಕೀರ್ತಿ ತರುವಂತಹ ಬೋಧನೆಗಳನ್ನು ಒಳಗೊಂಡಿದ್ದ ಶಿಕ್ಷಣವನ್ನು ಪಡೆದುಕೊಂಡಿದ್ದರೂ, ಅವನು ಬಲವಾದ ನಂಬಿಕೆಯನ್ನು ಕಾಪಾಡಿಕೊಂಡನು. (ಅ. ಕೃತ್ಯಗಳು 7:22) ತದ್ರೀತಿಯಲ್ಲಿ, ಇಂದು ಕ್ರೈಸ್ತರು ತಮ್ಮನ್ನು ಯಾವುದೇ ಸನ್ನಿವೇಶದಲ್ಲಿ ಕಂಡುಕೊಂಡರೂ, ಯಾವುದೇ ಅಹಿತಕರ ಪ್ರಭಾವಗಳಿಗೆ ಬಲಿಯಾಗದಂತೆ ಜಾಗರೂಕರಾಗಿದ್ದಾರೆ.
ಹೆಚ್ಚಿನ ಶಿಕ್ಷಣವನ್ನು ಬೆನ್ನಟ್ಟುವುದರಲ್ಲಿರುವ ಇನ್ನೊಂದು ಸಂಭಾವ್ಯ ಅಪಾಯವು, ಜ್ಞಾನವು ಗರ್ವದಿಂದ ಬೀಗುತ್ತದೆ, ಅಥವಾ ಗರ್ವವನ್ನು ಉಂಟುಮಾಡುತ್ತದೆಂಬುದೇ. (1 ಕೊರಿಂಥ 8:1) ಅನೇಕರು ಸ್ವಾರ್ಥಪರ ಕಾರಣಗಳಿಗಾಗಿ ಶಿಕ್ಷಣದ ಮೂಲಕ ಜ್ಞಾನವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ, ಮತ್ತು ಸೂಕ್ತವಾದ ಹೇತುವಿನಿಂದ ಜ್ಞಾನವನ್ನು ಬೆನ್ನಟ್ಟುವುದು ಸಹ, ಶ್ರೇಷ್ಠತೆ ಹಾಗೂ ಸ್ವಪ್ರಾಮುಖ್ಯತೆಯ ಅನಿಸಿಕೆಗಳಲ್ಲಿ ಫಲಿಸಸಾಧ್ಯವಿದೆ. ಅಂತಹ ಮನೋಭಾವಗಳು ದೇವರನ್ನು ಅಪ್ರಸನ್ನಗೊಳಿಸುತ್ತವೆ.—ಜ್ಞಾನೋಕ್ತಿ 8:13.
ಫರಿಸಾಯರನ್ನು ಪರಿಗಣಿಸಿರಿ. ಈ ಅಗ್ರಗಣ್ಯ ಧಾರ್ಮಿಕ ಪಂಥದ ಸದಸ್ಯರು, ತಮ್ಮ ಪಾಂಡಿತ್ಯ ಹಾಗೂ ತಾವು ನೆನಸಿದ್ದ ನೀತಿಯ ವಿಷಯದಲ್ಲಿ ದುರಹಂಕಾರಿಗಳಾಗಿದ್ದರು. ರಬ್ಬಿಸಂಬಂಧಿತ ಸಂಪ್ರದಾಯಗಳ ದೊಡ್ಡ ಸಂಗ್ರಹದ ಒಳ್ಳೆಯ ಜ್ಞಾನ ಅವರಿಗಿತ್ತು. ಮತ್ತು ಕಡಿಮೆ ಶಿಕ್ಷಣವಿದ್ದ ಸಾಮಾನ್ಯ ಜನರನ್ನು, ಅಜ್ಞಾನಿಗಳು, ತಿರಸ್ಕಾರಾರ್ಹರು, ಹಾಗೂ ಶಾಪಗ್ರಸ್ತರೆಂಬಂತೆ ದೃಷ್ಟಿಸುತ್ತಾ, ಅವರನ್ನು ತುಚ್ಛವಾಗಿ ಕಂಡರು. (ಯೋಹಾನ 7:49) ಇದಲ್ಲದೆ, ಅವರು ಹಣವನ್ನು ಪ್ರೀತಿಸಿದರು. (ಲೂಕ 16:14) ಕೆಟ್ಟ ಹೇತುಗಳಿಂದ ಬೆನ್ನಟ್ಟಲ್ಪಟ್ಟಾಗ, ಶಿಕ್ಷಣವು ಒಬ್ಬ ವ್ಯಕ್ತಿಯನ್ನು ಗರ್ವಿಯನ್ನಾಗಿ ಮಾಡಬಲ್ಲದು ಅಥವಾ ಅವನನ್ನು ಒಬ್ಬ ಹಣದ ಪ್ರೇಮಿಯಾಗುವಂತೆ ಮುನ್ನಡಿಸಬಲ್ಲದೆಂಬುದನ್ನು ಅವರ ಉದಾಹರಣೆಯು ತೋರಿಸುತ್ತದೆ. ಆದುದರಿಂದ, ಬೆನ್ನಟ್ಟಲಿಕ್ಕಾಗಿ ಯಾವ ವಿಧದ ಹಾಗೂ ಎಷ್ಟು ಪ್ರಮಾಣದ ಶಿಕ್ಷಣವನ್ನು ಪಡೆಯಬೇಕೆಂಬುದನ್ನು ನಿರ್ಧರಿಸುವುದರಲ್ಲಿ, ಕ್ರೈಸ್ತನೊಬ್ಬನು ತನ್ನನ್ನು ‘ನನ್ನ ಹೇತುಗಳೇನು?’ ಎಂದು ಪ್ರಶ್ನಿಸಿಕೊಳ್ಳುವುದು ಒಳ್ಳೆಯದಾಗಿರುವುದು.
ವೈಯಕ್ತಿಕ ಆಯ್ಕೆಯ ಒಂದು ವಿಷಯ
ಮೊದಲನೆಯ ಶತಮಾನದಲ್ಲಿ ಅದು ಸತ್ಯವಾಗಿದ್ದಂತೆಯೇ, ಇಂದು ಕ್ರೈಸ್ತರ ಮಧ್ಯೆ ಬೇರೆ ಬೇರೆ ರೀತಿಯ ಶೈಕ್ಷಣಿಕ ಹಿನ್ನೆಲೆಗಳು ಅಸ್ತಿತ್ವದಲ್ಲಿವೆ. ತಮ್ಮ ಹೆತ್ತವರ ಮಾರ್ಗದರ್ಶನದ ಕೆಳಗೆ ಯುವ ಜನರು, ಹೆಚ್ಚಿನ ಐಹಿಕ ಶಿಕ್ಷಣವನ್ನು ಬೆನ್ನಟ್ಟುವ ಆಯ್ಕೆಯನ್ನು ಮಾಡಬಹುದು. ತದ್ರೀತಿಯಲ್ಲಿ, ತಮ್ಮ ಕುಟುಂಬಗಳಿಗೆ ಒದಗಿಸುವ ಸಾಧನೋಪಾಯವನ್ನು ಉತ್ತಮಗೊಳಿಸುವುದರಲ್ಲಿ ಆಸಕ್ತರಾಗಿರುವ ವಯಸ್ಕರು, ಅಂತಹ ಹೆಚ್ಚಿನ ಶಿಕ್ಷಣವನ್ನು, ಅದನ್ನು ಸಾಧಿಸಲಿಕ್ಕಾಗಿರುವ ಒಂದು ಕಾರ್ಯಸಾಧ್ಯ ಸಾಧನವಾಗಿ ವೀಕ್ಷಿಸಬಹುದು.a ಸಾಂಪ್ರದಾಯಿಕ ಶೈಕ್ಷಣಿಕ ಶಿಕ್ಷಣದ ಕೆಲವು ಅಂಶಗಳು, ವೃತ್ತಿಪರವಾದ ಅಥವಾ ಉದ್ಯೋಗಸಂಬಂಧಿತ ಕೌಶಲಗಳಿಗೆ ಬದಲಾಗಿ, ಸರ್ವಸಾಮಾನ್ಯವಾದ ಬೌದ್ಧಿಕ ಸಾಮರ್ಥ್ಯವನ್ನು ವಿಕಸಿಸಿಕೊಳ್ಳುವುದರ ಮೇಲೆ ಒತ್ತನ್ನು ಹಾಕುತ್ತವೆ. ಹೀಗೆ, ಅಂತಹ ಒಂದು ಶಿಕ್ಷಣವನ್ನು ಗಳಿಸಿಕೊಳ್ಳುವುದರಲ್ಲಿ ಅತ್ಯಧಿಕ ಸಮಯವನ್ನು ವಿನಿಯೋಗಿಸಿದ ಬಳಿಕವೂ, ತನ್ನಲ್ಲಿ ವ್ಯಾಪಾರಸಂಬಂಧವಾದ ಕೌಶಲಗಳ ಕೊರತೆಯಿದೆಯೆಂದು ವ್ಯಕ್ತಿಯೊಬ್ಬನು ಕಂಡುಕೊಳ್ಳಬಹುದು. ಈ ಕಾರಣದಿಂದಲೇ ಕೆಲವರು, ಉದ್ಯೋಗ ಮಾರುಕಟ್ಟೆಯಲ್ಲಿನ ವಾಸ್ತವಿಕವಾದ ಬೇಡಿಕೆಗಳನ್ನು ಸುಲಭವಾಗಿ ಪೂರೈಸುವ ದೃಷ್ಟಿಯಿಂದ, ವೃತ್ತಿಪರ ಕಾರ್ಯಕ್ರಮಗಳಲ್ಲಿ ಅಥವಾ ತಾಂತ್ರಿಕ ಶಾಲೆಗಳಲ್ಲಿ ಅಭ್ಯಾಸಗಳನ್ನು ಬೆನ್ನಟ್ಟುವ ಆಯ್ಕೆಮಾಡುತ್ತಾರೆ.
ಯಾವುದೇ ವಿದ್ಯಮಾನದಲ್ಲಿ, ಅಂತಹ ನಿರ್ಣಯಗಳು ವೈಯಕ್ತಿಕ ಸ್ವರೂಪದವುಗಳಾಗಿವೆ. ಈ ವಿಷಯದಲ್ಲಿ ಕ್ರೈಸ್ತರು ಒಬ್ಬರು ಇನ್ನೊಬ್ಬರನ್ನು ಟೀಕಿಸಬಾರದು ಅಥವಾ ಖಂಡಿಸಬಾರದು. ಯಾಕೋಬನು ಬರೆದುದು: “ನಿನ್ನ ನೆರೆಯವನ ವಿಷಯದಲ್ಲಿ ತೀರ್ಪುಮಾಡುವದಕ್ಕೆ ನೀನು ಯಾರು?” (ಯಾಕೋಬ 4:12) ಕ್ರೈಸ್ತನೊಬ್ಬನು ಹೆಚ್ಚಿನ ಶಿಕ್ಷಣವನ್ನು ಬೆನ್ನಟ್ಟುವುದನ್ನು ಪರಿಗಣಿಸುತ್ತಿರುವಲ್ಲಿ, ಸ್ವಾರ್ಥಪರ, ಪ್ರಾಪಂಚಿಕ ಅಭಿರುಚಿಗಳು ಪ್ರಚೋದಕ ಶಕ್ತಿಗಳಾಗಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ಅವನು ತನ್ನ ಸ್ವಂತ ಹೇತುಗಳನ್ನು ಪರೀಕ್ಷಿಸಿಕೊಳ್ಳುವುದು ಒಳಿತಾಗಿರುವುದು.
ಶಿಕ್ಷಣದ ಕುರಿತು ಬೈಬಲು ಒಂದು ಸಮತೂಕದ ನೋಟವನ್ನು ಉತ್ತೇಜಿಸುತ್ತದೆ ಎಂಬುದು ಸುವ್ಯಕ್ತ. ಕ್ರೈಸ್ತ ಹೆತ್ತವರು ದೇವರ ಪ್ರೇರಿತ ವಾಕ್ಯದ ಮೇಲಾಧಾರಿತವಾದ ಆತ್ಮಿಕ ಶಿಕ್ಷಣದ ಅತಿಶಯವಾದ ಮೌಲ್ಯವನ್ನು ಗುರುತಿಸುತ್ತಾರೆ ಮತ್ತು ಆ ಹೆಚ್ಚಿನ ಶಿಕ್ಷಣದ ಕುರಿತು ತಮ್ಮ ಮಕ್ಕಳಿಗೆ ಸಮತೂಕದ ಸಲಹೆಯನ್ನು ಕೊಡುತ್ತಾರೆ. (2 ತಿಮೊಥೆಯ 3:16) ಜೀವಿತದ ಕುರಿತು ವಾಸ್ತವಿಕ ಅಭಿಪ್ರಾಯವಿದ್ದವರಾಗಿದ್ದು, ತಮ್ಮ ಬೆಳೆದ ಮಕ್ಕಳು ಸ್ವತಃ ತಮಗಾಗಿ ಹಾಗೂ ತಮ್ಮ ಭವಿಷ್ಯತ್ತಿನ ಕುಟುಂಬಗಳಿಗಾಗಿ ಒದಗಿಸುವುದಕ್ಕೆ ಅಗತ್ಯವಾಗಿರುವ ಕೌಶಲಗಳನ್ನು ಪಡೆದುಕೊಳ್ಳುವುದರಲ್ಲಿ ಐಹಿಕ ಶಿಕ್ಷಣದ ಮೌಲ್ಯವನ್ನು ಅವರು ಅಂಗೀಕರಿಸುತ್ತಾರೆ. ಆದುದರಿಂದ, ಹೆಚ್ಚಿನ ಶಿಕ್ಷಣವನ್ನು ಬೆನ್ನಟ್ಟಬೇಕೋ ಇಲ್ಲವೋ, ಮತ್ತು ಎಷ್ಟರ ಮಟ್ಟಿಗೆ ಬೆನ್ನಟ್ಟಬೇಕು ಎಂಬುದನ್ನು ನಿರ್ಧರಿಸುವುದರಲ್ಲಿ, ಪ್ರತಿಯೊಬ್ಬ ಕ್ರೈಸ್ತನೂ ಯೆಹೋವ ದೇವರ ಭಕ್ತಿಯ ಮೇಲಾಧಾರಿತವಾದ ಸದೃಢವಾದ ವೈಯಕ್ತಿಕ ನಿರ್ಣಯಗಳನ್ನು ಮಾಡಸಾಧ್ಯವಿದೆ. ಅದು “ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು; ಅದಕ್ಕೆ ಇಹಪರಗಳಲ್ಲಿಯೂ ಜೀವವಾಗ್ದಾನ ಉಂಟು.”—1 ತಿಮೊಥೆಯ 4:8.
[ಪಾದಟಿಪ್ಪಣಿ]
a ಈ ವಿಷಯದ ಕುರಿತಾದ ಹೆಚ್ಚು ವಿವರವಾದ ಮಾಹಿತಿಗಾಗಿ, ನವೆಂಬರ್ 1, 1992ರ ಕಾವಲಿನಬುರುಜು ಪತ್ರಿಕೆಯ 10-21ನೆಯ ಪುಟಗಳನ್ನು, ಹಾಗೂ ಯೆಹೋವನ ಸಾಕ್ಷಿಗಳು ಮತ್ತು ಶಿಕ್ಷಣ (ಇಂಗ್ಲಿಷ್) ಎಂಬ ಬ್ರೋಷರನ್ನು ನೋಡಿ. ಇವೆರಡೂ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿವೆ.
[ಪುಟ 26 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಸುಜ್ಞಾನವನ್ನೂ ಬುದ್ಧಿಯನ್ನೂ ಭದ್ರವಾಗಿಟ್ಟುಕೋ.”—ಜ್ಞಾನೋಕ್ತಿ 3:21
[ಪುಟ 27 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಹೆಚ್ಚಿನ ಶಿಕ್ಷಣವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕೋ ಇಲ್ಲವೋ ಎಂಬುದನ್ನು ಪರಿಗಣಿಸುವುದರಲ್ಲಿ, ಕ್ರೈಸ್ತನೊಬ್ಬನು ತನ್ನನ್ನು ‘ನನ್ನ ಹೇತುಗಳೇನು?’ ಎಂದು ಪ್ರಶ್ನಿಸಿಕೊಳ್ಳುವುದು ಒಳ್ಳೆಯದಾಗಿರುವುದು