ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 10/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪ್ರೋಜೆಕ್ಟ್‌ ಟೈಗರ್‌ ತತ್ತರಿಸುತ್ತದೆ
  • ವೃದ್ಧರಾಗಿ ಕಂಡರೂ ಯುವಕರಾಗಿ ಸಾಯುತ್ತಾರೆ
  • ಚಿನ್ನಕ್ಕಾಗಿ ಗಣಿತೋಡುವ ಗೆದ್ದಲು
  • ಮಿಂಚಿನ ಗಂಡಾಂತರ
  • ಸೆಲ್ಯೂಲರ್‌ ಟೆಲಿಫೋನ್‌ ಶಿಷ್ಟಾಚಾರ
  • ಭೂಕಂಪಗಳನ್ನು ಮುಂತಿಳಿಸಲಾಗುವುದಿಲ್ಲ
  • ವಿದ್ಯುತ್‌ ಕಾರುಗಳು ಮತ್ತು ಪರಿಸರ
  • ಸಸ್ಯಗಳು ಸಿಡಿಮದ್ದುಗಳನ್ನು ಕಬಳಿಸುತ್ತವೆ
  • ಸಹಸ್ರವಾರ್ಷಿಕ ಹುಚ್ಚುತನ
  • ಎಚ್ಚರಿಕೆ: ಕಾಲಬಸ್‌ ಕೋತಿಗಳ ಅಡ್ಡದಾರಿ
  • ಹುಲಿ ಬಂತು! ಹುಲಿ!
    ಎಚ್ಚರ!—1996
  • ಇಂಟರ್‌ನೆಟ್‌ ಅಂಗೈಯಲ್ಲಿ ಪ್ರಪಂಚ ಆದರೆ ಎಚ್ಚರ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಇಂಟರ್‌ನೆಟ್‌ ಏಕೆ ಎಚ್ಚರಿಕೆಯಿಂದಿರಬೇಕು?
    ಎಚ್ಚರ!—1997
  • ನಿಜ ಭದ್ರತೆ ಹಿಡಿತಕ್ಕೆ ಸಿಕ್ಕದ ಒಂದು ಗುರಿ
    ಕಾವಲಿನಬುರುಜು—1996
ಇನ್ನಷ್ಟು
ಎಚ್ಚರ!—1997
g97 10/8 ಪು. 28-29

ಜಗತ್ತನ್ನು ಗಮನಿಸುವುದು

ಪ್ರೋಜೆಕ್ಟ್‌ ಟೈಗರ್‌ ತತ್ತರಿಸುತ್ತದೆ

ಇಸವಿ 1973ರಲ್ಲಿ, ಭಾರತದ ರಾಷ್ಟ್ರೀಯ ಮೃಗದ ಅಳಿವನ್ನು ತಡೆಗಟ್ಟಲು ಭಾರತದಲ್ಲಿ ಪ್ರೋಜೆಕ್ಟ್‌ ಟೈಗರ್‌ ಅನ್ನು ಪ್ರಾರಂಭಿಸಲಾಯಿತು. ಆ ಸಮಯದಲ್ಲಿ ಭಾರತದಲ್ಲಿದ್ದ ಹುಲಿಗಳ ಸಂಖ್ಯೆಯು, ಆಗಲೇ 1,827ರಷ್ಟು ಕಡಮೆಯಾಗಿತ್ತು. ಆ ಯೋಜನೆಯು ಅಂತಾರಾಷ್ಟ್ರೀಯ ಬೆಂಬಲ ಮತ್ತು ಗಮನಾರ್ಹ ಯಶಸ್ಸನ್ನು ಗಳಿಸಿತು. 1989ರೊಳಗಾಗಿ, ಭಾರತೀಯ ಹುಲಿಗಳ ಸಂಖ್ಯೆಯು 4,000ಕ್ಕಿಂತಲೂ ಹೆಚ್ಚಾಗಿತ್ತು. ಆದರೆ ಈಗ, ಇಂಡಿಯ ಟುಡೆ ಪತ್ರಿಕೆಗನುಸಾರ, ಹುಲಿಯು ಪುನಃ ಒಮ್ಮೆ ಅಪಾಯದಲ್ಲಿದೆ. ಭಾರತದಲ್ಲಿರುವ ಹುಲಿಗಳ ಸಂಖ್ಯೆಯು, 3,000ಕ್ಕಿಂತಲೂ ಕಡಮೆಯಾಗಿದೆ ಎಂದು ಅಂದಾಜುಮಾಡಲಾಗಿದೆ. ಯಾಕೆ? ಕಳ್ಳ ಬೇಟೆಗಾರರು, ಸರಾಸರಿಯಾಗಿ ಪ್ರತಿದಿನ ಕಡಿಮೆಪಕ್ಷ ಒಂದು ಹುಲಿಯನ್ನಾದರೂ ಕೊಲ್ಲುತ್ತಾರೆಂದು ಕೆಲವರು ಹೇಳುತ್ತಾರೆ. ಪ್ರೋಜೆಕ್ಟ್‌ ಟೈಗರ್‌ ಯೋಜನೆಯು, ಹುಲಿಗೆ ಸಂರಕ್ಷಣೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿತ್ತು. ಆದರೆ ಅದು ಹಾಗೆ ಮಾಡಲು ಶಕ್ತವಾಗಿಲ್ಲವೆಂದು ತೋರುತ್ತದೆ. “ಅನೇಕ ವೇಳೆ ಕಳ್ಳಬೇಟೆಗಾರರಿಂದ ಗುಂಡಿಕ್ಕಲ್ಪಡುವ ಅರಣ್ಯ ರಕ್ಷಕನು, ಎದೆಗುಂದಿದವನೂ ಅಸಜ್ಜಿತನೂ ಆಗಿರುತ್ತಾನೆ” ಎಂಬುದಾಗಿ ವರದಿಯು ಹೇಳುತ್ತದೆ. ಹುಲಿಗಾದರೊ, “ಅಸ್ತಿತ್ವವೇ ಅಳಿವಿಗೆ ಎಡೆಮಾಡಿಕೊಡುತ್ತಿದೆ.”

ವೃದ್ಧರಾಗಿ ಕಂಡರೂ ಯುವಕರಾಗಿ ಸಾಯುತ್ತಾರೆ

ಈ ಕೆಳಗಿನ ವರದಿಗಳಿಂದ ಸೂಚಿಸಲ್ಪಟ್ಟಂತೆ, ಧೂಮಪಾನವು ಮುಪ್ಪಾಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸಬಹುದೆಂದು ಸಂಶೋಧಕರು ನಂಬುತ್ತಾರೆ. ಬ್ರಿಟನಿನ ಲ್ಯಾನ್ಸೆಟ್‌ ಪತ್ರಿಕೆಗನುಸಾರ, ದೀರ್ಘಾವಧಿಯ ಧೂಮಪಾನಿಗಳ ಕೂದಲು ಅಕಾಲಿಕವಾಗಿ ನರೆತುಹೋಗುವ ಸಾಧ್ಯತೆಯು ನಾಲ್ಕು ಪಟ್ಟು ಮತ್ತು ಬೋಳು ತಲೆಯವರಾಗುವ ಇಲ್ಲವೆ ಬೋಳಾಗುತ್ತಿರುವ ಸಾಧ್ಯತೆಯು ಎರಡು ಪಟ್ಟಾಗಿದೆ. ಇದರ ಕುರಿತು ವರದಿಸುತ್ತಾ, ಯುಸಿ ಬರ್ಕ್ಲಿ ವೆಲ್‌ನೆಸ್‌ ಲೆಟರ್‌ ಸೂಚಿಸಿ ಹೇಳಿದ್ದೇನೆಂದರೆ, ಧೂಮಪಾನಿಗಳಿಗೆ ಹೆಚ್ಚು ಸುಕ್ಕುಗಳಿರುತ್ತವೆ ಮತ್ತು ಧೂಮಪಾನ ಮಾಡದವರ ಹೋಲಿಕೆಯಲ್ಲಿ ಇವರು ತಮ್ಮ ಹಲ್ಲುಗಳನ್ನು ಕಳೆದುಕೊಳ್ಳುವ ಸಾಧ್ಯತೆಯು ಎರಡು ಪಟ್ಟಷ್ಟಿದೆ. ಆ ವರದಿಯು, ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌ನಲ್ಲಿ ಟಿಪ್ಪಣಿಮಾಡಲ್ಪಟ್ಟ ಇತ್ತೀಚಿನ ಒಂದು ಅಧ್ಯಯನವನ್ನು ಸೂಚಿಸುತ್ತದೆ. ಅದು ತೋರಿಸಿತೇನೆಂದರೆ, ದೀರ್ಘಕಾಲ ಧೂಮಪಾನ ಮಾಡುವ ಪುರುಷರಿಗೆ, ಧೂಮಪಾನ ಮಾಡದವರಿಗೆ ಅಸದೃಶವಾಗಿ 73ರ ವಯಸ್ಸನ್ನು ತಲಪುವ ಸಾಧ್ಯತೆಯು ಅರ್ಧದಷ್ಟು ಮಾತ್ರವಿದೆ. ಇದಕ್ಕೆ ಸೇರಿಸಿ, ಒಳ್ಳೆಯ ಗೃಹಕೃತ್ಯ ನಿರ್ವಹಣೆ (ಇಂಗ್ಲಿಷ್‌) ಎಂಬ ಪತ್ರಿಕೆಯು ವರದಿಸುವುದೇನೆಂದರೆ, “ಧೂಮಪಾನಿಗಳೊಂದಿಗೆ ಜೀವಿಸುವ ಧೂಮಪಾನ ಮಾಡದವರಿಗೆ, ಹೃದ್ರೋಗದಿಂದ ಕಷ್ಟಾನುಭವಿಸುವ ಸಾಧ್ಯತೆಯು 20 ಪ್ರತಿಶತ ಹೆಚ್ಚಾಗಿರುತ್ತದೆ.”

ಚಿನ್ನಕ್ಕಾಗಿ ಗಣಿತೋಡುವ ಗೆದ್ದಲು

ಇಸವಿ 1984ರಲ್ಲಿ, ಹಳ್ಳಿಗನೊಬ್ಬನು ಆಫ್ರಿಕನ್‌ ದೇಶವಾದ ನೈಜರ್‌ನಲ್ಲಿ ಚಿನ್ನವನ್ನು ಕಂಡುಕೊಂಡನು, ಮತ್ತು ತರುವಾಯ ಸಂಭವಿಸಿದ ಚಿನ್ನನುಗ್ಗಾಟವು ಅನೇಕ ದೇಶಗಳಿಂದ ಗಣಿಕೆಲಸಗಾರರನ್ನು ಈ ಕ್ಷೇತ್ರಕ್ಕೆ ತಂದಿತು. ಕೆನಡ ದೇಶದ ಭೂವಿಜ್ಞಾನಿಯಾದ ಕ್ರಿಸ್‌ ಗ್ಲೀಸನ್‌ ಜ್ಞಾಪಿಸಿಕೊಳ್ಳುವುದೇನೆಂದರೆ, ಪ್ರಾಚೀನ ಆಫ್ರಿಕನ್‌ ನಾಗರಿಕತೆಗಳು ಚಿನ್ನದ ಸಂಗ್ರಹಗಳನ್ನು ಗುರುತಿಸಲು ಗೆದ್ದಲು ದಿಬ್ಬಗಳನ್ನು ಉಪಯೋಗಿಸಿದವು. ಬಹಳ ದೊಡ್ಡದಾದ ದಿಬ್ಬಗಳನ್ನು—ಕೆಲವು 1.8 ಮೀಟರುಗಳಷ್ಟು ಎತ್ತರ ಹಾಗೂ 1.8 ಮೀಟರುಗಳಷ್ಟು ವ್ಯಾಸವುಳ್ಳವುಗಳು—ಕಟ್ಟುವ ಒಂದು ಜಾತಿಯ ಗೆದ್ದಲು ನೈಜರ್‌ನಲ್ಲಿದೆ. ನೀರಿನ ಅನ್ವೇಷಣೆಯಲ್ಲಿ ಗೆದ್ದಲುಗಳು ಗುಂಡಿಯನ್ನು ಕೊರೆದಂತೆ—ಕೆಲವೊಮ್ಮೆ 75 ಮೀಟರುಗಳಷ್ಟು ಆಳವಾಗಿ—ದಿಬ್ಬಗಳು ದೊಡ್ಡದಾಗುತ್ತವೆ ಎಂಬುದಾಗಿ ನ್ಯಾಷನಲ್‌ ಜಿಯೋಗ್ರ್ಯಾಫಿಕ್‌ ಪತ್ರಿಕೆಯು ವಿವರಿಸುತ್ತದೆ. ಎಲ್ಲಿ ಅಗೆಯಬೇಕೆಂಬುದನ್ನು ತನಗೆ ಅವು ತೋರಿಸುವವು ಎಂಬ ನಿರೀಕ್ಷೆಯಲ್ಲಿ, ಗ್ಲೀಸನ್‌ ಅನೇಕ ದಿಬ್ಬಗಳಿಂದ ಮಣ್ಣಿನ ನಮೂನೆ (ಸ್ಯಾಂಪಲ್‌)ಗಳನ್ನು ತೆಗೆದುಕೊಂಡನು. ಹೆಚ್ಚಿನ ನಮೂನೆಗಳಲ್ಲಿ ಚಿನ್ನವಿರಲಿಲ್ಲವಾದರೂ, ಕೆಲವು ನಮೂನೆಗಳಲ್ಲಿ ಚಿನ್ನವಿತ್ತು! “ಯಾವ ದಿಬ್ಬದಲ್ಲಿ ಒಂದಿಷ್ಟು ಚಿನ್ನವನ್ನು ಕಂಡುಕೊಳ್ಳಲಾಯಿತೊ ಆ ದಿಬ್ಬದಲ್ಲೆಲ್ಲ ಚಿನ್ನವಿತ್ತು” ಎಂಬುದನ್ನು ಅವನು ಕಂಡುಕೊಂಡನು. ಗೆದ್ದಲುಗಳು ನೀರಿಗಾಗಿ ಅಗೆದಂತೆ, ಅವು ಎದುರಿಸುವ ಎಲ್ಲ ವಸ್ತುಗಳು—ಚಿನ್ನವನ್ನು ಸೇರಿಸಿ—ಮೇಲ್ಮೈಗೆ ತರಲ್ಪಡುತ್ತವೆ ಎಂದು ತೋರಿಬರುತ್ತದೆ.

ಮಿಂಚಿನ ಗಂಡಾಂತರ

“ಮಾರಕವಾದ ಮಿಂಚಿನ ಹೊಡೆತಗಳು, ಜನರು ನೆನಸುವುದಕ್ಕಿಂತಲೂ ಹೆಚ್ಚು ಪುನರಾವರ್ತಕವಾಗಿವೆ” ಎಂದು ದಿ ಆಸ್ಟ್ರೇಲಿಯನ್‌ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಪ್ರತಿ ವರ್ಷ ಆಸ್ಟ್ರೇಲಿಯದಲ್ಲಿ ಮಿಂಚು, ಐದರಿಂದ ಹತ್ತು ಜನರನ್ನು ಕೊಲ್ಲುತ್ತದೆ ಮತ್ತು 100ಕ್ಕಿಂತಲೂ ಹೆಚ್ಚಿನ ಜನರಿಗೆ ಹಾನಿಯನ್ನುಂಟುಮಾಡುತ್ತದೆ ಎಂಬುದಾಗಿ ವರದಿಯು ವಿವರಿಸುತ್ತದೆ. “ಇನ್ನೇನು ಮಿಂಚಿನಿಂದ ಹೊಡೆಸಿಕೊಳ್ಳಲಿಕ್ಕಿದ್ದ ಕೆಲವು ಜನರು, ತಮ್ಮ ರೋಮವು ನೆಟ್ಟಗೆ ನಿಂತ ಅನಿಸಿಕೆ ತಮಗಾಯಿತೆಂದು ವರದಿಸಿದರೂ,” ಸನ್ನಿಹಿತವಾದ ಹೊಡೆತದ ಯಾವ ಎಚ್ಚರಿಕೆಯೂ ಇರುವುದಿಲ್ಲವೆಂದು, ಮೆಲ್ಬರ್ನ್‌ನಲ್ಲಿರುವ ಪವನಶಾಸ್ತ್ರ ಖಾತೆಯ ಫಿಲ್‌ ಆಲ್‌ಫರ್ಡ್‌ ಹೇಳುತ್ತಾರೆ. ಮಿಂಚಿನ ಹೊಡೆತದಿಂದ ತಪ್ಪಿಸಿಕೊಳ್ಳಲು, ಚಂಡಮಾರುತಗಳು ಸಂಭವಿಸುವಾಗ ಒಂದು ದೃಢವಾದ ಕಟ್ಟಡದಲ್ಲಿ ಇಲ್ಲವೆ ಲೋಹದ ರಚನೆಗಳಿಂದ ಪ್ರತ್ಯೇಕಿಸಲ್ಪಟ್ಟಿರುವ, ಗಡುಸಾದ ಛಾವಣಿಯುಳ್ಳ ವಾಹನದೊಳಗೆ ನೀವು ಆಶ್ರಯವನ್ನು ಪಡೆದುಕೊಳ್ಳಿರೆಂದು ಆಲ್‌ಫರ್ಡ್‌ ಶಿಫಾರಸ್ಸು ಮಾಡುತ್ತಾರೆ.

ಸೆಲ್ಯೂಲರ್‌ ಟೆಲಿಫೋನ್‌ ಶಿಷ್ಟಾಚಾರ

ಫಾರ್‌ ಈಸ್ಟರ್ನ್‌ ಇಕನಾಮಿಕ್‌ ರಿವ್ಯೂಗನುಸಾರ, ಪಾಕೆಟ್‌ ಸೈಸಿನ ಸೆಲ್ಯೂಲರ್‌ ಟೆಲಿಫೋನ್‌ಗಳ ಆಗಮನವು, ಕೆಲವು ಹಳೆಯ ಶೈಲಿಯ ಶಿಷ್ಟಾಚಾರಗಳ ಅಗತ್ಯವನ್ನು ಎತ್ತಿತೋರಿಸಿದೆ. ನಿಮ್ಮೊಂದಿಗೆ ಟೆಲಿಫೋನ್‌ನಲ್ಲಿ ಮಾತಾಡುತ್ತಿರುವ ವ್ಯಕ್ತಿ ಹಾಗೂ ನಿಮ್ಮ ಸುತ್ತಲೂ ಇರಬಹುದಾದವರಿಗೆ—ಇಬ್ಬರಿಗೂ—ಗೌರವ ಹಾಗೂ ಪರಿಗಣನೆಯನ್ನು ತೋರಿಸುವಂತೆ, ಹಾಂಗ್‌ ಕಾಂಗ್‌ ವ್ಯಾಪಾರ ಸಮಾಲೋಚಕಿ ಟೀನ ಲಿಯೂ ಉತ್ತೇಜಿಸುತ್ತಾಳೆ. ಸ್ಪಷ್ಟವಾಗಿ ಆದರೆ ಗಟ್ಟಿಯಾಗಿ ಮಾತಾಡದಂತೆ ಮತ್ತು ಫೋನನ್ನು ಬಳಸುತ್ತಿರುವಾಗ, ತಿನ್ನುತ್ತಾ ಅಥವಾ ಕುಡಿಯುತ್ತಾ ಇರಬಾರದೆಂದು ಅವಳು ಸಲಹೆ ನೀಡುತ್ತಾಳೆ. ವ್ಯಾಪಾರ ಕೂಟಗಳ ಸಮಯದಲ್ಲಿ ಸ್ವೀಕರಿಸಲ್ಪಡುವ ಕರೆಗಳನ್ನು ಕಡಮೆಗೊಳಿಸುವುದನ್ನು ಮತ್ತು ಕರೆಗಳನ್ನು ಬೇರೆ ಕಡೆಗೆ ನಿರ್ದೇಶಿಸುವುದನ್ನು, ಇಲ್ಲವೆ ಆಸ್ಪತ್ರೆಗಳು, ಗ್ರಂಥಾಲಯಗಳು ಮತ್ತು ಸಭಾಂಗಣಗಳಂತಹ ಸ್ಥಳಗಳಲ್ಲಿ ಫೋನು ಕಂಪನ ಸೂಚನೆಯನ್ನು ಕೊಡುವಂತೆ ತಿರುಗಿಸಿಡುವುದನ್ನು ಸಹ ಶಿಫಾರಸ್ಸು ಮಾಡುತ್ತಾಳೆ. ಸಾಮಾಜಿಕ ಗೋಷ್ಠಿಗಳ ಸಮಯದಲ್ಲಿ ಫೋನ್‌ ಕರೆಗಳಿಗೆ ಉತ್ತರನೀಡುವುದು, ತಾವು ಅಲಕ್ಷಿಸಲ್ಪಡುತ್ತಿದ್ದೇವೆಂದು ಮಿತ್ರರು ಇಲ್ಲವೆ ಸಂಬಂಧಿಕರು ಭಾವಿಸುವಂತೆ ಮಾಡಬಲ್ಲದು. “ಒಬ್ಬ ಸ್ತ್ರೀಯೊಂದಿಗೆ ಇರುವಾಗ, ಫೋನಿನಲ್ಲಿ ಮಾತಾಡುವ ಪುರುಷನು, ಅವನು ಆಕೆಗೆ ಕೊಟ್ಟ ಹೂವುಗಳ ಪ್ರಭಾವವು ಕಳೆದುಹೋಗುವ ಮೊದಲು ಕರೆಯನ್ನು ಮುಗಿಸುವುದು ಒಳ್ಳೆಯದು,” ಎಂಬುದಾಗಿ ರೆಸ್ಟೊರಂಟ್‌ನಲ್ಲಿ ಊಟಮಾಡುತ್ತಿರುವ ವಿಷಯದಲ್ಲಿ ಲಿಯೂ ಹೇಳಿಕೆ ನೀಡುತ್ತಾಳೆ.

ಭೂಕಂಪಗಳನ್ನು ಮುಂತಿಳಿಸಲಾಗುವುದಿಲ್ಲ

ಇತ್ತೀಚೆಗೆ, ಭೂಕಂಪ ಪರಿಣತರ ಒಂದು ಅಂತಾರಾಷ್ಟ್ರೀಯ ಗುಂಪು, ಭೂಕಂಪಗಳ ವೈಜ್ಞಾನಿಕ ದೃಢೀಕರಣವನ್ನು ಚರ್ಚಿಸಲು ಲಂಡನಿನಲ್ಲಿ ಕೂಡಿಬಂತು. ಅವರ ಅಂದಾಜು ಏನಾಗಿತ್ತು? “100 ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಅನೇಕ ಭೂವಿಜ್ಞಾನಿಗಳು, [ದೊಡ್ಡ ಭೂಕಂಪಗಳ] ಮೊದಲು ಗಮನಿಸಲು ಮತ್ತು ಗುರುತಿಸಲು ಸಾಧ್ಯವಿರುವ ಪೂರ್ವ ಸೂಚಕಗಳು ಸಂಭವಿಸಲೇಬೇಕೆಂದು ಮತ್ತು ಈ ಪೂರ್ವ ಸೂಚಕಗಳನ್ನು, ಎಚ್ಚರಿಕೆಗಳನ್ನು ಕೊಡಲು ಆಧಾರವಾಗಿ ಉಪಯೋಗಿಸಲು ಸಾಧ್ಯವೆಂದು ನೆನಸಿದ್ದಾರೆ” ಎಂಬುದಾಗಿ ಈಓಎಸ್‌ ಪ್ರಕಾಶನದಲ್ಲಿ, ಟೋಕಿಯೋ ವಿಶ್ವವಿದ್ಯಾನಿಲಯದ ಡಾ. ರಾಬರ್ಟ್‌ ಗೆಲರ್‌ ಬರೆಯುತ್ತಾರೆ. ಬದಲಿಗೆ, ಆಲೋಚನೆಯಲ್ಲಿ ಮೂಲಭೂತ ಹೊಂದಾಣಿಕೆಯು ಅಗತ್ಯವಾಗಿದೆ. ಏಕೆಂದರೆ, “ಒಂದೊಂದು ಭೂಕಂಪಗಳ ಸಂಭವವನ್ನು ಸಹಜವಾಗಿ ಮುಂತಿಳಿಸಲು ಸಾಧ್ಯವಿಲ್ಲವೆಂದು ತೋರುತ್ತದೆ.” ನಿಖರವಾದ ಮುಂತಿಳಿಸುವಿಕೆಗಳು ಸಾಧ್ಯವಿಲ್ಲದಿದ್ದರೂ, ವ್ಯಾಪಕವಾದ ಭೂಕಂಪದ ದಾಖಲೆಗಳಿರುವ ಕ್ಷೇತ್ರಗಳಿಗೆ ಭೂಕಂಪಗಳ ಸಂಭವನೀಯತೆ ಮತ್ತು ಸಂಭಾವ್ಯ ಗಾತ್ರವನ್ನು ವಿಜ್ಞಾನಿಗಳು ಅಂದಾಜುಮಾಡಬಲ್ಲರು. ಉದಾಹರಣೆಗೆ, ಅಮೆರಿಕದ ಭೂವಿಜ್ಞಾನ ಸಮೀಕ್ಷೆಯಿಂದ ತಯಾರಿಸಲ್ಪಟ್ಟ ಒಂದು ಹೊಸ ನಕ್ಷೆಯು, ಮುಂದಿನ 50 ವರ್ಷಗಳಲ್ಲಿ ಕಾಂಟಿನೆಂಟಲ್‌ (ಐರೋಪ್ಯ) ಅಮೆರಿಕದಲ್ಲಿ ಬಲವಾದ ಕಂಪನವು ಎಲ್ಲಿ ಸಂಭವಿಸಬಹುದೆಂದು ಸೂಚಿಸುತ್ತದೆ. ಈ ದತ್ತಾಂಶದ ಮೇಲೆ ಆಧರಿಸಿ, ಸರಕಾರಿ ನಿಯೋಗಗಳು ಸೂಚಿಸುವುದೇನೆಂದರೆ, ಕ್ಯಾಲಿಫೋರ್ನಿಯದ ಜನಸಂಖ್ಯೆಯಲ್ಲಿ 70 ಪ್ರತಿಶತಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯು ಗಂಡಾಂತರದ ಕ್ಷೇತ್ರಗಳಾಗಿರಬಹುದಾದ ಸ್ಥಳದಲ್ಲಿ ಜೀವಿಸುತ್ತದೆ.

ವಿದ್ಯುತ್‌ ಕಾರುಗಳು ಮತ್ತು ಪರಿಸರ

ಜರ್ಮನಿಯ ವಾಹನ ಕಂಪನಿಯು, ಪೆಟ್ರೋಲ್‌ ಉಪಯೋಗಿಸುವ ವಾಹನಗಳಿಗಿಂತ ಬ್ಯಾಟರಿಯಿಂದ ನಡೆಸಲ್ಪಡುವ ಕಾರುಗಳು ಪರಿಸರಕ್ಕೆ ಉತ್ತಮವೊ ಇಲ್ಲವೊ ಎಂಬುದನ್ನು ಕಂಡುಹಿಡಿಯಲು ಒಂದು ಅಧ್ಯಯನವನ್ನು ನಡೆಸಿತು. ಸ್ಯೂಟ್‌ಡಾಯ್ಚೆ ಟ್ಸೈಟುಂಗ್‌ ಎಂಬ ವಾರ್ತಾಪತ್ರಿಕೆಗನುಸಾರ, ಈ ಅಧ್ಯಯನವು 1992 ಮತ್ತು 1996ರ ನಡುವೆ 13 ಲಕ್ಷ ಕಿಲೊಮೀಟರುಗಳಷ್ಟು ದೂರ ಸಂಚರಿಸಿದ 100 ಚಾಲಕರನ್ನು ಒಳಗೊಂಡಿತು. ವಿದ್ಯುತ್ತಿನ ಕಾರುಗಳು ಸಂಚರಿಸಬಲ್ಲ ಅಂತರವು ಬಹಳ ಕಡಿಮೆಯಾಗಿರುವುದಾದರೂ ಅವುಗಳಿಗೆ ಹಲವಾರು ಪ್ರಯೋಜನಗಳಿವೆ ಎಂಬುದನ್ನು ಕಂಡುಕೊಳ್ಳಲಾಯಿತು: ಅವು ಎಲ್ಲಿ ಉಪಯೋಗಿಸಲ್ಪಟ್ಟವೊ ಅಲ್ಲಿ ಏನನ್ನೂ ನೇರವಾಗಿ ಹೊರಸೂಸದೆ, ನಿಶ್ಶಬ್ದವಾಗಿ ಚಲಿಸಿದವು. ಹಾಗಿದ್ದರೂ, ಒಂದು ಪ್ರಧಾನ ಸಮಸ್ಯೆಯಿಂದ ಈ ಪ್ರಯೋಜನಗಳು ಅತಿಶಯಿಸಲ್ಪಡಬಹುದು. ಉರುವಲುಗಳಿಂದ ಚಲಿಸುವ ವಾಹನಗಳಿಂದ ಬಳಸಲ್ಪಡುವುದಕ್ಕಿಂತಲೂ, ಬ್ಯಾಟರಿಗಳನ್ನು ಪುನಃ ಚಾರ್ಜ್‌ ಮಾಡಲು ಹೆಚ್ಚು ಮೂಲ ಶಕ್ತಿಯು—ಉಪಯೋಗದ ಮೇಲೆ ಅವಲಂಬಿಸಿ, 1.5ರಿಂದ 4 ಪಟ್ಟುಗಳಷ್ಟು ಹೆಚ್ಚು—ಬಳಸಲ್ಪಡುತ್ತದೆ ಮತ್ತು ಆ ಶಕ್ತಿಯನ್ನು ಹೇಗೆ ಉತ್ಪಾದಿಸಲಾಗುತ್ತದೆ ಎಂಬುದರ ಮೇಲೆ ಅವಲಂಬಿಸುತ್ತಾ, “ಪರಿಸರಕ್ಕೆ ಆಗುವ ಹಾನಿಯು ಪೆಟ್ರೋಲ್‌ ಉಪಯೋಗಿಸುವ ವಾಹನಗಳಿಗಿಂತ ಹೆಚ್ಚಾಗಿರ”ಸಾಧ್ಯವೆಂದು ವಾರ್ತಾಪತ್ರಿಕೆಯು ಹೇಳಿಕೆ ನೀಡುತ್ತದೆ.

ಸಸ್ಯಗಳು ಸಿಡಿಮದ್ದುಗಳನ್ನು ಕಬಳಿಸುತ್ತವೆ

ಸಕ್ಕರೆ ಬೀಟು ಸಸ್ಯಗಳಿಗೆ ಮತ್ತು ನಿಂತ ನೀರಿನಲ್ಲಿ ಬೆಳೆಯುವ ಒಂದು ಪ್ರಕಾರದ ಸಸ್ಯ ಜಾತಿಗೆ, ಹಳೆಯ ಶಸ್ತ್ರಾಸ್ತ್ರ ಸಂಗ್ರಹದ ನಿವೇಶನಗಳಲ್ಲಿನ ಮಣ್ಣು ಮತ್ತು ನೀರಿನಿಂದ ಸಿಡಿಮದ್ದುಗಳನ್ನು ಹೀರಿಕೊಳ್ಳುವ ಮತ್ತು ಅವುಗಳನ್ನು ಸುರಕ್ಷಿತವಾಗಿ ವಿಭಜಿಸುವ ಸಾಮರ್ಥ್ಯವಿದೆ ಎಂದು, ನ್ಯೂ ಸೈಎನ್‌ಟಿಸ್ಟ್‌ ಪತ್ರಿಕೆಯು ವರದಿಸುತ್ತದೆ. ಟೆಕ್ಸಸ್‌ನ ಹ್ಯೂಸ್ಟನ್‌ನಲ್ಲಿರುವ ರೈಸ್‌ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು, ಪೆರಿವಿಂಕಲ್‌ ಮತ್ತು ಪ್ಯಾರಟ್‌ ಫೆದರ್‌ ಎಂಬ ಒಂದು ಸಾಮಾನ್ಯ ಸಸ್ಯ ಜಾತಿಗೆ ಟಿಎನ್‌ಟಿಯನ್ನು ಸಿಂಪಡಿಸಿದರು. ಒಂದು ವಾರದೊಳಗೆ ಅವುಗಳ ಅಂಗಾಂಶಗಳಲ್ಲಿ ಸಿಡಿಮದ್ದುಗಳ ಯಾವ ಕುರುಹೂ ಉಳಿದಿರಲಿಲ್ಲ, ಮತ್ತು ಆ ಸಸ್ಯಗಳ ದಹನವು ಒಂದು ಸ್ಫೋಟನವನ್ನು ಉಂಟುಮಾಡಲಿಲ್ಲ. ಅದೇ ಸಮಯದಲ್ಲಿ, ಮೇರಿಲೆಂಡ್‌ ವಿಶ್ವವಿದ್ಯಾನಿಲಯದಲ್ಲಿನ ಸಂಶೋಧಕರು, ಸಾಮಾನ್ಯ ಸಕ್ಕರೆ ಬೀಟಿನ ಸಸ್ಯಜೀವಕೋಶಗಳು ಮತ್ತು ಉಪವಸ್ತುಗಳು, ನೈಟ್ರೊಗ್ಲಿಸರಿನ್‌ ಅನ್ನು ಹೀರಿಕೊಂಡು ಶಿಥಿಲಗೊಳಿಸಬಲ್ಲವೆಂಬುದನ್ನು ಕಂಡುಹಿಡಿದರು. ಸಸ್ಯಗಳು ಸೂಕ್ಷ್ಮಾಣುಜೀವಿಗಳಿಂದ ಯಾವ ಸಹಾಯವನ್ನೂ ಪಡೆದುಕೊಳ್ಳಲಿಲ್ಲವೆಂಬುದನ್ನು ರುಜುಮಾಡಲು, ಎರಡೂ ಗುಂಪಿನ ವಿಜ್ಞಾನಿಗಳು ಅವುಗಳನ್ನು ಕ್ರಿಮಿಶುದ್ಧಿಮಾಡಿದರು. “ಪ್ರಚಲಿತ ಸಮಯದಲ್ಲಿ, ಹಳೆಯ ಶಸ್ತ್ರಾಸ್ತ್ರ ಸಂಗ್ರಹಗಳ ನಿವೇಶನಗಳ ಮೇಲೆ ಕಟ್ಟಲಿಕ್ಕಾಗಿ ಅವುಗಳನ್ನು ಯೋಗ್ಯವಾಗಿಸುವುದು ಸಾಮಾನ್ಯವಾಗಿ ಬಹಳ ಅಪಾಯಕರವೂ ದುಬಾರಿಯೂ ಆಗಿದೆ. ಆದರೆ ಮಣ್ಣು ಮತ್ತು ನೀರಿನಿಂದ ಸಿಡಿಮದ್ದುಗಳನ್ನು ಹೊರತೆಗೆದು ಅವುಗಳನ್ನು ಸುರಕ್ಷಿತವಾಗಿ ವಿಭಜಿಸಿಲಿಕ್ಕಾಗಿ, ಅಗ್ಗವಾಗಿ ಬೆಳೆಸಲ್ಪಟ್ಟ ಸಸ್ಯಗಳು ಉಪಯೋಗಿಸಲ್ಪಟ್ಟಲ್ಲಿ ವಿಷಯವು ಭಿನ್ನವಾಗಿರುವುದು” ಎಂದು ಆ ಲೇಖನವು ಹೇಳುತ್ತದೆ. ಇದರ ಅಗತ್ಯ ಬಹಳವಾಗಿದೆ ಏಕೆಂದರೆ, “ಶಸ್ತ್ರಾಸ್ತ್ರ ಸಂಗ್ರಹದ ತ್ಯಜ್ಯನವಸ್ತುವನ್ನು ಸಮುದ್ರದಲ್ಲಿ ಹಾಕುವ ಸದ್ಯದ ರೂಢಿಯನ್ನು ನಿಲ್ಲಿಸಿಬಿಡಲಾಗುತ್ತಿದೆ.”

ಸಹಸ್ರವಾರ್ಷಿಕ ಹುಚ್ಚುತನ

“ಸಂಪೂರ್ಣ ಯುದ್ಧದ ಶತಮಾನವಾಗಿ ಆರಂಭಗೊಂಡ 20ನೆಯ ಶತಮಾನವು, ಅಣುಶಕ್ತಿಯ ಯುಗವಾಗಿ ವಿಕಾಸಗೊಂಡು, ಮನೋರಂಜನೆಯ ಯುಗವಾಗಿ ಅಂತ್ಯಗೊಳ್ಳುತ್ತಿರುವಂತೆ ತೋರುತ್ತದೆ” ಎಂದು ನ್ಯೂಸ್‌ವೀಕ್‌ ಪತ್ರಿಕೆಯು ಹೇಳುತ್ತದೆ. 1999ರ ಹೊಸ ವರ್ಷದ ಮುನ್ನಾ ದಿನದ ಆಚರಣೆಗಳಿಗಾಗಿ “ವಿಶ್ವದ ಸುತ್ತಲೂ ಇರುವ ಹೊಟೆಲ್‌ಗಳು ಈಗಾಗಲೇ ಪೂರ್ತಿಯಾಗಿ ಬುಕ್‌ ಆಗಿವೆ.” ಹಾಗಿದ್ದರೂ, ಸಹಸ್ರವರ್ಷವು ಎಲ್ಲಿ ಆರಂಭವಾಗುತ್ತದೆ ಎಂಬ ವಿಷಯದ ಕುರಿತು ಒಂದು ವಾಗ್ವಾದವು ನಡೆಯುತ್ತಿದೆ. “ತೊಂದರೆಯು ಕಿರಿಬಾಟಿ ರಾಷ್ಟ್ರದಲ್ಲಿ ಆರಂಭವಾಯಿತು” ಎಂದು ಯು.ಎಸ್‌.ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ ಗಮನಿಸುತ್ತದೆ. “ಅಂತಾರಾಷ್ಟ್ರೀಯ ದಿನಾಂಕರೇಖೆಯು ದ್ವೀಪಗಳ ಸಾಲುಗಳ ಮಧ್ಯೆ ಹಾದುಹೋಗುತ್ತಿತ್ತು: ಪೂರ್ವ ಕಿರಿಬಾಟಿಯಲ್ಲಿ ಅದು ರವಿವಾರವಾಗಿದ್ದಾಗ, ಪಶ್ಚಿಮ ಕಿರಿಬಾಟಿಯಲ್ಲಿ ಅದು ಸೋಮವಾರವಾಗಿತ್ತು.” ಜನವರಿ 1, 1995ರಂದಿನಿಂದ, ದಿನಾಂಕರೇಖೆಯು ಅದರ ಅತೀವ ಪೂರ್ವದಲ್ಲಿರುವ ಕ್ಯಾರೊಲೈನ್‌ ದ್ವೀಪದ ಸುತ್ತಲೂ ಹೋಗಲಿತ್ತೆಂದು ಹೇಳುವ ಮೂಲಕ, ರಾಷ್ಟ್ರವು ಆ ಸಮಸ್ಯೆಯನ್ನು ಬಗೆಹರಿಸಿತು. ಹಾಗಾದರೆ ಹೊಸ ದಿನದ ಆರಂಭವನ್ನು ನೋಡುವ ಪ್ರಥಮ ಭೂರಾಶಿ, ಕಿರಿಬಾಟಿ ಎಂಬುದೇ ಇದರ ಅರ್ಥ. ಆದರೆ, ಟಾಂಗ ಮತ್ತು ನ್ಯೂ ಸೀಲೆಂಡ್‌ಗಳಂತಹ ಇತರ ರಾಷ್ಟ್ರಗಳು “ಪ್ರಥಮ” ಸ್ಥಾನಮಾನವನ್ನು ಬಯಸಿದವು. ರಾಯಲ್‌ ಗ್ರೀನ್‌ವಿಚ್‌ ಸಮೀಕ್ಷಾಮಂದಿರಕ್ಕನುಸಾರ, ಪ್ರಶ್ನೆಯು ಚರ್ಚಾಸ್ಪದವಾಗಿದೆ. “ಸೂರ್ಯನು ದಕ್ಷಿಣ ಧ್ರುವದ ಮೇಲೆ ಸೆಪ್ಟೆಂಬರ್‌ ವಿಷುವತ್ತಿನಿಂದ ಮಾರ್ಚ್‌ ವಿಷುವತ್ತಿನ ವರೆಗೆ ಪ್ರಕಾಶಿಸುವುದರಿಂದ, ಸಹಸ್ರವರ್ಷವು ಪ್ರಥಮವಾಗಿ ಭೂಮಿಯ ಅತೀವ ದಕ್ಷಿಣ ಬಿಂದುವಿನ ಮೇಲೆ ಆಗಮಿಸುತ್ತದೆ” ಎಂದು ವರದಿಯು ಹೇಳುತ್ತದೆ. ಹಾಗಿದ್ದರೂ, ಅದು ಇಸವಿ 2000ವಲ್ಲ, 2001, ಜನವರಿ 1ರ ತನಕ ಸಂಭವಿಸದು ಎಂಬುದಾಗಿ ಸಮೀಕ್ಷಾಮಂದಿರವು ಕೂಡಿಸುತ್ತದೆ.

ಎಚ್ಚರಿಕೆ: ಕಾಲಬಸ್‌ ಕೋತಿಗಳ ಅಡ್ಡದಾರಿ

ದಕ್ಷಿಣ ಕೆನ್ಯದ ಕರಾವಳಿಯ ಬಳಿಯಲ್ಲಿರುವ ಡೀಆನೀ ಅರಣ್ಯ, ಕಾಲಬಸ್‌ ಕೋತಿಯು ಇನ್ನೂ ಹೆಚ್ಚಾಗುತ್ತಿರುವ ಪೂರ್ವ ಆಫ್ರಿಕದ ಕೆಲವು ಸ್ಥಳಗಳಲ್ಲಿ ಒಂದಾಗಿದೆ. ಪ್ರಾಣಿಗಳು ಎದುರಿಸುತ್ತಿರುವ ಸಮಸ್ಯೆಯು, ಆ ಕಾರ್ಯನಿರತ ಸಮುದ್ರ ತೀರದ ರಸ್ತೆಯನ್ನು ಸುರಕ್ಷಿತವಾಗಿ ದಾಟುವುದು ಹೇಗೆಂಬುದೇ ಆಗಿದೆ. ಒಂದು ಅಂದಾಜಿಗನುಸಾರ, ಕಾರುಗಳಿಂದ ಪ್ರತಿ ತಿಂಗಳು ಕಡಿಮೆಪಕ್ಷ 12 ಕೋತಿಗಳು ರಸ್ತೆಯಲ್ಲಿ ಕೊಲ್ಲಲ್ಪಡುತ್ತವೆ ಎಂಬುದಾಗಿ, ಪೂರ್ವ ಆಫ್ರಿಕನ್‌ ವನ್ಯಜೀವಿ ಸಂಸ್ಥೆಯ ಪತ್ರಿಕೆಯಾದ ಸ್ವಾರ ವರದಿಸುತ್ತದೆ. ಈ ಕಗ್ಗೊಲೆಯನ್ನು ಕಡಿಮೆಮಾಡಲು, ಚಿಂತಿತ ಡೀಆನೀ ನಿವಾಸಿಗಳ ಒಂದು ಗುಂಪು ಕ್ರಿಯೆಗೈಯಲು ನಿರ್ಧರಿಸಿತು. ಹೆಚ್ಚು ಜಾಗರೂಕರಾಗಿರುವಂತೆ ಚಾಲಕರನ್ನು ಪ್ರೇರಿಸುವುದರ ಜೊತೆಗೆ, ರಸ್ತೆಯಿಂದ ತುಂಬ ಎತ್ತರಕ್ಕೆ ಒಂದು ಹಗ್ಗದ ಸೇತುವೆಯನ್ನು ಅವರು ಇತ್ತೀಚೆಗೆ ಕಟ್ಟಿದರು. ಕೋತಿಗಳು ಸೇತುವೆಯನ್ನು ಉಪಯೋಗಿಸುತ್ತಿರುವ ದೃಶ್ಯವನ್ನು ಕಂಡು, ಅದರಿಂದ ಉತ್ತೇಜಿತರಾದ ನಿವಾಸಿಗಳು ಹೆಚ್ಚಿನ ಸೇತುವೆಗಳನ್ನು ನಿರ್ಮಿಸುವ ಯೋಜನೆಗಳನ್ನು ಮಾಡುತ್ತಿದ್ದಾರೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ