ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 10/8 ಪು. 18-21
  • ಕಿಲಿಮಂಜಾರೊ ಆಫ್ರಿಕದ ಛಾವಣಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕಿಲಿಮಂಜಾರೊ ಆಫ್ರಿಕದ ಛಾವಣಿ
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಆಫ್ರಿಕದ “ಛಾವಣಿ”
  • ಅದರ ಭಾವೋತ್ತೇಜಕ ಶಿಖರಗಳು
  • ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಒಂದು ನಾಯಕಕೃತಿ
  • “ಕಿಲಿ”ಯನ್ನು ಆರೋಹಿಸುವುದು
  • ನಮ್ಮ ವಾಚಕರಿಂದ
    ಎಚ್ಚರ!—1998
  • ಪರ್ವತಗಳು ಸೃಷ್ಟಿಯ ಅನುಪಮ ಕೃತಿಗಳು
    ಎಚ್ಚರ!—1994
  • ಮೇಘವಲಯದಲ್ಲಿನ ಜೀವನ
    ಎಚ್ಚರ!—2004
  • ಕಡಿದಾದ ಬೆಟ್ಟಬಂಡೆಗಳ ದೊಂಬರು
    ಕಾವಲಿನಬುರುಜು—1997
ಇನ್ನಷ್ಟು
ಎಚ್ಚರ!—1997
g97 10/8 ಪು. 18-21

ಕಿಲಿಮಂಜಾರೊ ಆಫ್ರಿಕದ ಛಾವಣಿ

ಕೆನ್ಯದ ಎಚ್ಚರ! ಸುದ್ದಿಗಾರರಿಂದ

ಕೇವಲ 150 ವರ್ಷಗಳ ಹಿಂದೆ, ಆಫ್ರಿಕದ ಅಧಿಕಾಂಶ ಒಳನಾಡು ಅಜ್ಞಾತವಾಗಿತ್ತು. ಬಾಹ್ಯ ಜಗತ್ತಿಗೆ, ಈ ದೊಡ್ಡ ಭೂಖಂಡವು ಅನ್ವೇಷಿಸಲ್ಪಟ್ಟಿಲ್ಲದ್ದೂ ರಹಸ್ಯಗರ್ಭಿತವೂ ಆಗಿತ್ತು. ಪೂರ್ವ ಆಫ್ರಿಕದಿಂದ ಹೊರಬಿದ್ದ ಅನೇಕ ಕಥೆಗಳಲ್ಲಿ ಒಂದು ಕಥೆಯು ಯೂರೋಪಿಯನರಿಗೆ ವಿಶೇಷವಾಗಿ ವಿಚಿತ್ರವಾಗಿ ತೋರಿತು. ಯೋಹಾನಸ್‌ ರೇಪ್‌ಮಾನ್‌ ಮತ್ತು ಯೋಹಾನ್‌ ಎಲ್‌. ಕ್ರಾಪ್‌ಫ್‌ ಎಂಬ ಹೆಸರಿನ ಜರ್ಮನ್‌ ಮಿಷನೆರಿಗಳಿಂದ ಮಾಡಲ್ಪಟ್ಟ ಒಂದು ವರದಿ ಅದಾಗಿತ್ತು. ಇವರು, ತಾವು 1848ರಲ್ಲಿ ಸಮಭಾಜಕವೃತ್ತದ ಹತ್ತಿರ, ಅದರ ಶಿಖರವು ಹಿಮದಿಂದ ಬೆಳ್ಳಗಾಗಿರುವಷ್ಟು ಎತ್ತರವಾದ ಪರ್ವತವನ್ನು ನೋಡಿದ್ದೇವೆಂದು ಹೇಳಿದರು.

ಉಷ್ಣವಲಯದ ಆಫ್ರಿಕದಲ್ಲಿ ಮಂಜುನೆತ್ತಿಯುಳ್ಳ ಒಂದು ಪರ್ವತವಿತ್ತೆಂಬ ಕಥೆಯನ್ನು ಸಂದೇಹಾಸ್ಪದವಾಗಿ ಪರಿಗಣಿಸಲಾಯಿತು ಮಾತ್ರವಲ್ಲ ಅದರ ಅಪಹಾಸ್ಯವನ್ನೂ ಮಾಡಲಾಯಿತು. ಆದರೂ, ಒಂದು ದೈತ್ಯಾಕಾರದ ಪರ್ವತದ ಕುರಿತಾದ ವೃತ್ತಾಂತಗಳು, ಭೂಗೋಳಶಾಸ್ತ್ರಜ್ಞರ ಮತ್ತು ಅನ್ವೇಷಕರ ಕುತೂಹಲ ಹಾಗೂ ಆಸಕ್ತಿಯನ್ನು ಕೆರಳಿಸಿದವು ಮತ್ತು ಅವರು ಕಟ್ಟಕಡೆಗೆ ಆ ಮಿಷನೆರಿಗಳ ವರದಿಗಳನ್ನು ದೃಢೀಕರಿಸಿದರು. ಪೂರ್ವ ಆಫ್ರಿಕದಲ್ಲಿ ಖಂಡಿತವಾಗಿಯೂ ಕಿಲಿಮಂಜಾರೊ ಎಂಬ ಹೆಸರಿನ, ಜ್ವಾಲಾಮುಖಿಯಿಂದಾದ ಮಂಜುನೆತ್ತಿಯುಳ್ಳ ಒಂದು ಪರ್ವತವಿತ್ತು. ಆ ಹೆಸರಿನ ಅರ್ಥ, “ಹಿರಿಮೆಯ ಪರ್ವತ” ಆಗಿದೆಯೆಂದು ಕೆಲವು ಬುಡಕಟ್ಟುಗಳ ಜನರು ತಿಳಿದುಕೊಂಡರು.

ಆಫ್ರಿಕದ “ಛಾವಣಿ”

ಇಂದು ಆ ಮಹಾ ಕಿಲಿಮಂಜಾರೊ, ಅದರ ಅಪ್ರತಿಮ ಸೌಂದರ್ಯ ಮತ್ತು ಭಾವೋತ್ತೇಜಕ ಎತ್ತರಕ್ಕಾಗಿ ಪ್ರಸಿದ್ಧವಾಗಿದೆ. ದೂರದಲ್ಲಿ ಘನಗಾಂಭೀರ್ಯದಿಂದ ಕಾಣಿಸಿಕೊಳ್ಳುವ ಮಂಜುನೆತ್ತಿಯುಳ್ಳ “ಕಿಲಿ”ಯ ಭವ್ಯವಾದ ಹಿನ್ನೆಲೆಯೊಂದಿಗೆ, ಮೇಯುತ್ತಿರುವ ಆನೆಗಳ ಒಂದು ಹಿಂಡು, ಆಫ್ರಿಕದ ಶುಷ್ಕ, ಧೂಳು ತುಂಬಿದ ಬಯಲುಸೀಮೆಗಳನ್ನು ದಾಟುತ್ತಿರುವಂತಹ ದೃಶ್ಯದಷ್ಟು ಚಿತ್ರಯೋಗ್ಯವಾದ ಮತ್ತು ಸ್ಮರಣಯೋಗ್ಯವಾದ ದೃಶ್ಯಗಳು ಕೊಂಚವೇ.

ಕಿಲಿಮಂಜಾರೊ, ಆಫ್ರಿಕ ಭೂಖಂಡದಲ್ಲೇ ಅತಿ ಎತ್ತರವಾದ ಪರ್ವತವಾಗಿದೆ ಮತ್ತು ಜಗತ್ತಿನಲ್ಲಿರುವ ಅತಿ ದೊಡ್ಡದಾದ ಸುಪ್ತ ಜ್ವಾಲಾಮುಖಿಗಳಲ್ಲಿ ಒಂದಾಗಿದೆ. ಅದು ಟಾನ್ಸೇನಿಯದಲ್ಲಿ, ಸಮಭಾಜಕವೃತ್ತದ ತುಸು ದಕ್ಷಿಣಕ್ಕೆ ಮತ್ತು ಕೆನ್ಯದ ಗಡಿಯ ಪಕ್ಕದಲ್ಲಿದೆ. ಇಲ್ಲಿ ಭೂಮಿಯು, 400 ಕೋಟಿ ಘನ ಮೀಟರುಗಳಿಗಿಂತ ಹೆಚ್ಚಿನ ಜ್ವಾಲಾಮುಖಿ ಪದಾರ್ಥವನ್ನು ಹೊರಚೆಲ್ಲುತ್ತಾ, ಶಿಖರಗಳು ಮೋಡಗಳಲ್ಲಿ ಅಡಗಿರುವ ಈ ಪರ್ವತವನ್ನು ರಚಿಸಿದೆ.

ಪರ್ವತದ ಬೃಹತ್‌ಗಾತ್ರಕ್ಕೆ ಅದರ ಪ್ರತ್ಯೇಕತೆಯಿಂದ ಒತ್ತುಕೊಡಲ್ಪಟ್ಟಿದೆ. ಒಂಟಿಯಾಗಿ ಮತ್ತು ಬೇರೆಯಾಗಿ ನಿಲ್ಲುತ್ತಾ, ಅದು ಸಮುದ್ರ ಮಟ್ಟದಿಂದ ಸುಮಾರು 900 ಮೀಟರುಗಳಷ್ಟು ಎತ್ತರದಲ್ಲಿರುವ ಬಂಜರು ಮಸಾಯಿ ವನ್ಯಪ್ರದೇಶದಿಂದ, 5,895 ಮೀಟರುಗಳ ಒಂದು ಅಸಾಧಾರಣ ಎತ್ತರಕ್ಕೆ ಮೇಲೆದ್ದು ನಿಲ್ಲುತ್ತದೆ! ಕಿಲಿಮಂಜಾರೊವನ್ನು ಕೆಲವೊಮ್ಮೆ ಆಫ್ರಿಕದ ಛಾವಣಿಯೆಂದು ವರ್ಣಿಸಿರುವುದು ಆಶ್ಚರ್ಯಕರವಾದ ಸಂಗತಿಯೇನಲ್ಲ.

ಕಿಲಿಮಂಜಾರೊವನ್ನು “ವರ್ತಕರ ತಂಡದ ಪರ್ವತ” ಎಂದೂ ಕರೆಯಲಾಗುತ್ತಿತ್ತು. ಯಾಕಂದರೆ, ಪ್ರಜ್ವಲಿಸುತ್ತಿರುವ ಬಿಳಿ ಸನ್ನೆದೀಪದಂತೆ, ಅದರ ದೊಡ್ಡದಾದ ಹಿಮಬಯಲುಗಳು ಮತ್ತು ಹಿಮನದಿಗಳನ್ನು, ಯಾವುದೇ ದಿಕ್ಕಿನಿಂದ ನೂರಾರು ಕಿಲೊಮೀಟರುಗಳಷ್ಟು ದೂರದಲ್ಲಿ ವೀಕ್ಷಿಸಸಾಧ್ಯವಿತ್ತು. ಗತ ಶತಮಾನಗಳಲ್ಲಿ, ಮಂಜಿನಿಂದ ಆವೃತವಾದ ಅದರ ನೆತ್ತಿಯು, ಆಫ್ರಿಕದ ಅರಣ್ಯ ಒಳನಾಡಿನಿಂದ ಹೊರ ಬರುತ್ತಿದ್ದ, ದಂತ, ಚಿನ್ನ, ಮತ್ತು ದಾಸರ ಸರಕುಗಳ ಭಾರ ಹೊತ್ತಿದ ವರ್ತಕರ ತಂಡಗಳನ್ನು ಅನೇಕವೇಳೆ ಮಾರ್ಗದರ್ಶಿಸಿತು.

ಅದರ ಭಾವೋತ್ತೇಜಕ ಶಿಖರಗಳು

ಕಿಲಿಮಂಜಾರೊ ಪರ್ವತವು ಜ್ವಾಲಾಮುಖಿಯಿಂದಾದ ಎರಡು ಶಿಖರಗಳಿಂದ ರಚಿಸಲ್ಪಟ್ಟಿದೆ. ಕೀಬೋ ಮುಖ್ಯವಾದ ಜ್ವಾಲಾಮುಖಿ ಶಿಖರವಾಗಿದೆ; ಅದರ ಸುಂದರವಾದ ಸಮರೂಪದ ಶಂಕುವಿನಾಕಾರವು, ಚಿರಸ್ಥಾಯಿ ಹಿಮ ಮತ್ತು ಮಂಜಿನಿಂದ ಆವರಿಸಲ್ಪಟ್ಟಿದೆ. ಪೂರ್ವ ದಿಕ್ಕಿನಲ್ಲಿ ಎರಡನೆಯ ಶಿಖರವಿದೆ. ಅದರ ಹೆಸರು ಮವೆನ್ಸೀ. ಅದು 5,150 ಮೀಟರುಗಳಷ್ಟು ಎತ್ತರವಾಗಿದ್ದು, ಕೀಬೋ ಹಾಗೂ ಮೌಂಟ್‌ ಕೆನ್ಯದ ನಂತರ ಮೂರನೆಯ ಅತ್ಯುಚ್ಚ ಪರ್ವತನೆತ್ತಿಯಾಗಿದೆ. ಕೀಬೋವಿನ ನಸುವೋರೆ, ಇಳಿಜಾರಿನ ಪಕ್ಕಗಳಿಗೆ ವೈದೃಶ್ಯವಾಗಿ, ಮವೆನ್ಸೀಯು, ಎಲ್ಲ ಪಾರ್ಶ್ವಗಳಲ್ಲಿ ಬಲು ಕಡಿದಾದ ಹರಿದ ಅಂಚುಳ್ಳ ಬಂಡೆ ಗೋಡೆಗಳೊಂದಿಗೆ, ಒಡ್ಡೊಡ್ಡಾದ ಮತ್ತು ಸುಂದರವಾಗಿ ಕೆತ್ತಲ್ಪಟ್ಟಿರುವ ಒಂದು ಶಿಖರವಾಗಿದೆ. ಕೀಬೋ ಮತ್ತು ಮವೆನ್ಸೀಯ ಶಿಖರಗಳು, 4,600 ಮೀಟರುಗಳಷ್ಟು ಎತ್ತರದಲ್ಲಿ, ಬಂಡೆಗಳಿಂದ ಚಲ್ಲಾಪಿಲ್ಲಿಯಾಗಿರುವ ಒಂದು ವಿಸ್ತಾರವಾದ, ಇಳಿಜಾರಿನ ಬಯಲಿನಿಂದ ಜೋಡಿಸಲ್ಪಟ್ಟಿವೆ. ಕೀಬೋವಿನ ಪಶ್ಚಿಮಕ್ಕೆ ಷೀರಾ ಇದೆ. ಅದು ಬಹಳ ಸಮಯದಿಂದ ಗಾಳಿ ಮತ್ತು ನೀರಿನಿಂದ ಸವೆದುಹೋಗಿರುವ ಒಂದು ಪುರಾತನ ಜ್ವಾಲಾಮುಖಿಯ ಕುಸಿಯಲ್ಪಟ್ಟ ಅವಶೇಷವಾಗಿದೆ. ಅದು ಈಗ ಸಮುದ್ರ ಮಟ್ಟದಿಂದ 4,000 ಮೀಟರುಗಳಷ್ಟು ಎತ್ತರದಲ್ಲಿ, ಉಸಿರುಹಿಡಿಯುವಂತಹ ಪಾಳುಭೂಮಿಯನ್ನು ರಚಿಸುತ್ತದೆ.

ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಒಂದು ನಾಯಕಕೃತಿ

ಕಿಲಿಮಂಜಾರೊವಿನ ಪರಿಸರವ್ಯವಸ್ಥೆಯು, ಔನ್ನತ್ಯ, ಮಳೆ, ಮತ್ತು ಸಸ್ಯಜೀವನದಿಂದ ನಿರ್ಧರಿಸಲ್ಪಟ್ಟಿರುವ ವಿಭಿನ್ನ ವಲಯಗಳಿಂದ ರಚಿಸಲ್ಪಟ್ಟಿದೆ. ಕೆಳಗಿನ ಇಳಿಜಾರುಗಳು, ಎಲ್ಲಿ ಆನೆಗಳು ಮತ್ತು ಕೋಣಗಳ ಹಿಂಡುಗಳು ಅಲೆದಾಡುತ್ತವೊ ಆ ಆದಿಸ್ಥಿತಿಯಲ್ಲಿರುವ ಉಷ್ಣವಲಯದ ಕಾಡುಗಳಿಂದ ಆವರಿಸಲ್ಪಟ್ಟಿವೆ. ಮಂಗಗಳ ಹಲವಾರು ಜಾತಿಗಳು, ಕಾಡಿನ ಮೇಲಾವರಣದಲ್ಲಿ ಉನ್ನತ ಸ್ಥಳದಲ್ಲಿ ವಾಸಿಸುತ್ತವೆ. ಮತ್ತು ಕೆಲವೊಮ್ಮೆ ಒಬ್ಬ ಭೇಟಿಕಾರನು, ನಾಚಿಕೆಸ್ವಭಾವದ ಪರ್ವತ ಪೊದೆಜಿಂಕೆ ಮತ್ತು ಕಾರ್ಮರಂಟ್‌ ಪಕ್ಷಿಗಳ ಒಂದು ಕ್ಷಣಿಕ ನಸುನೋಟವನ್ನು ಪಡೆಯಬಲ್ಲನು. ಇವು ದಟ್ಟವಾದ ಕುರುಚಲು ಸಸ್ಯಗಳಿಂದ ಸುಲಭವಾಗಿ ಮರೆಮಾಡಲ್ಪಡುತ್ತವೆ.

ಕಾಡಿನ ಮೇಲ್ಭಾಗದಲ್ಲಿ ಪೊದೆ ವಲಯವಿದೆ. ಗಾಳಿ ಮತ್ತು ವಯಸ್ಸಿನಿಂದ ತಿರುಚಲ್ಪಟ್ಟಿರುವ ಹಳೆಯ ಒರಟೊರಟಾದ ಮರಗಳು, ಮುದುಕರ ನರೆತ ಉದ್ದ ಬೂದುಬಣ್ಣದ ಗಡ್ಡಗಳನ್ನು ಹೋಲುವ ಲೈಕನ್‌ನ ಎಳೆಗಳಿಂದ ಹೊದಿಸಲ್ಪಟ್ಟಿವೆ. ಇಲ್ಲಿ ಪರ್ವತದ ಮಗ್ಗುಲು ತೆರೆಯುತ್ತದೆ, ಮತ್ತು ದೈತ್ಯಾಕಾರದ ಹೊದರು ಹಸನಾಗಿ ಬೆಳೆಯುತ್ತದೆ. ನಡುನಡುವೆ ಉಜ್ವಲ ವರ್ಣಗಳ ಹೂವುಗಳ ಗೊಂಚಲುಗಳಿರುವ ಹುಲ್ಲಿನ ತೆಂಡೆಗಳು, ಗ್ರಾಮಪ್ರದೇಶವನ್ನು ಸುಂದರವಾಗಿ ಚಿತ್ರಮಯವನ್ನಾಗಿ ಮಾಡುತ್ತವೆ.

ಮರಗಳ ರೇಖೆಗಿಂತ ಇನ್ನೂ ಮೇಲಕ್ಕೆ, ಪಾಳುಭೂಮಿಗಳು ತೋರಿಬರುತ್ತವೆ. ಅಲ್ಲಿ ಮರಗಳಿಗೆ ಬದಲಾಗಿ, ನಾಲ್ಕು ಮೀಟರುಗಳಷ್ಟು ಎತ್ತರವಿರುವ ದೈತ್ಯ ಗ್ರೌನ್ಡ್‌ಸಲ್ಸ್‌ಗಳೆಂದು ಕರೆಯಲ್ಪಡುವ, ಅಸಾಮಾನ್ಯವಾಗಿ ತೋರುವಂತಹ ಗಿಡಗಳು ಮತ್ತು ದೊಡ್ಡ ಹೂಕೋಸುಗಳು ಅಥವಾ ಪಲ್ಲೆಹೂಗಳನ್ನು ಹೋಲುವಂತಹ ಲೊಬೇಲಿಯಗಳಿರುತ್ತವೆ. ಬಂಡೆಗಳು ಮತ್ತು ಶಿಲಾಮಯ ಸ್ತರಗಳ ಸುತ್ತಲೂ, ಒಣಹುಲ್ಲಿನಂತಿದ್ದು ಶುಷ್ಕವಾಗಿರುವಂತೆ ಅನಿಸುವ ನಿತ್ಯ ಹೂವುಗಳು ಬೆಳೆಯುತ್ತವೆ ಮತ್ತು ಇವು ಬೆಳ್ಳಿಯಂಥ ಬೂದುಬಣ್ಣದ ಭೂದೃಶ್ಯಕ್ಕೆ ಸ್ವಲ್ಪ ಬಣ್ಣವನ್ನು ಕೂಡಿಸುತ್ತವೆ.

ಇನ್ನೂ ಹೆಚ್ಚು ಮೇಲಕ್ಕೆ, ಪಾಳುಭೂಮಿಗಳು, ಉನ್ನತ ಪರ್ವತ ಪ್ರದೇಶಕ್ಕೆ ಎಡೆಮಾಡಿಕೊಡುತ್ತವೆ. ಆ ಕ್ಷೇತ್ರವು, ಕಡುಕಂದು ಮತ್ತು ಬೂದುಬಣ್ಣದ ಛಾಯೆಗಳೊಂದಿಗೆ, ಬಣ್ಣದಲ್ಲಿ ಮಬ್ಬಾಗಿರುತ್ತದೆ. ಈ ನಿಬಿಡವಲ್ಲದ, ಶುಷ್ಕ ಪರಿಸರದಲ್ಲಿ ಕೆಲವೇ ಗಿಡಗಳು ಬೆಳೆಯಬಲ್ಲವು. ಈ ಹಂತದಲ್ಲಿ, ಎರಡು ಪ್ರಮುಖ ಶಿಖರಗಳಾದ ಕೀಬೋ ಮತ್ತು ಮವೆನ್ಸೀ, ಶುಷ್ಕ ಮತ್ತು ಕಲ್ಲುಬಂಡೆಗಳಿಂದ ಆವೃತವಾಗಿರುವ, ಉನ್ನತ ಮಟ್ಟದ ಮರುಭೂಮಿಯಾಗಿರುವ ಜಮೀನಿನ ಒಂದು ದೊಡ್ಡ ಬೆನ್ನೇಣಿನಿಂದ ಜೋಡಿಸಲ್ಪಟ್ಟಿವೆ. ಇಲ್ಲಿ ತಾಪಮಾನಗಳು ವಿಪರೀತವಾಗಿವೆ. ಅವು ದಿನದಲ್ಲಿ 38 ಡಿಗ್ರಿ ಸೆಲ್ಸಿಯಸ್‌ನಷ್ಟು ಏರುತ್ತವೆ ಮತ್ತು ರಾತ್ರಿ ಸಮಯದಲ್ಲಿ ಘನೀಕರಣ ಬಿಂದುವಿಗಿಂತ ಕೆಳಗಿಳಿಯುತ್ತವೆ.

ಕೊನೆಗೆ ನಾವು ಶಿಖರ ವಲಯವನ್ನು ತಲಪುತ್ತೇವೆ. ಇಲ್ಲಿ ಗಾಳಿಯು ತಣ್ಣಗೆ ಮತ್ತು ತಿಳಿಯಾಗಿದೆ. ಕಡುನೀಲಿ ಆಕಾಶಕ್ಕೆ ವಿರುದ್ಧವಾಗಿ, ದೊಡ್ಡದಾದ ಹಿಮನದಿಗಳು ಮತ್ತು ಹಿಮಬಯಲುಗಳು ಬಿಳಿಯಾಗಿ ಮತ್ತು ಶುಭ್ರವಾಗಿ ತೋರುತ್ತವೆ. ಇದು ಪರ್ವತದ ಕಪ್ಪು ಕ್ಷೇತ್ರದೊಂದಿಗೆ ಸುಂದರ ವೈದೃಶ್ಯವಾಗಿರುತ್ತದೆ. ಗಾಳಿಯು ದಟ್ಟವಾಗಿರುವುದಿಲ್ಲ ಮತ್ತು ಸಮುದ್ರಮಟ್ಟದಲ್ಲಿ ಕಂಡುಕೊಳ್ಳುವಂತಹ ಆಮ್ಲಜನಕದ ಅರ್ಧದಷ್ಟನ್ನು ಹೊಂದಿದೆ. ಕೀಬೋವಿನ ಚಪ್ಪಟೆಯಾದ ಶಿಖರದ ಮೇಲೆ ಜ್ವಾಲಾಮುಖಿಯ ಕುಂಡವಿದೆ. ಅದು ಬಹುಮಟ್ಟಿಗೆ ಪರಿಪೂರ್ಣವಾಗಿ ಉರುಟಾಗಿದೆ ಮತ್ತು 2.5 ಕಿಲೊಮೀಟರುಗಳ ವ್ಯಾಸವನ್ನು ಹೊಂದಿರುತ್ತದೆ. ಪರ್ವತದ ಗರ್ಭದಲ್ಲೇ, ಕುಂಡದೊಳಗೆ ಬೂದಿಯ ಒಂದು ದೊಡ್ಡ ಗುಂಡಿಯಿದೆ. ಇದರ ಅಡ್ಡ ಅಳತೆಯು 300 ಮೀಟರುಗಳಾಗಿದೆ ಮತ್ತು ಜ್ವಾಲಾಮುಖಿಯ ಕಂಠದೊಳಗೆ 120 ಮೀಟರುಗಳಷ್ಟು ಆಳವಿದೆ. ಚಿಕ್ಕದಾದ ಹೊಗೆ ಕಾರುವ ರಂಧ್ರಗಳಿಂದ (ಹೊಗೆಕಿಂಡಿಗಳು), ಗಂಧಕವುಳ್ಳ ಬಿಸಿಯಾದ ಹಬೆಯು, ತೀರ ಚಳಿಯಾದ ಗಾಳಿಯೊಳಗೆ ನಿಧಾನವಾಗಿ ನುಸುಳುತ್ತದೆ. ಇದು ಆ ನಿದ್ರಿಸುತ್ತಿರುವ ದೈತ್ಯ ಜ್ವಾಲಾಮುಖಿಯೊಳಗಿನ ಗದ್ದಲಕ್ಕೆ ಪ್ರಮಾಣವನ್ನು ನೀಡುತ್ತದೆ.

ಕಿಲಿಮಂಜಾರೊವಿನ ದೈತ್ಯಾಕಾರ ಮತ್ತು ವಿಸ್ತಾರ್ಯವು, ಅದು ತನ್ನ ಸ್ವಂತ ವಾತಾವರಣವನ್ನು ಸೃಷ್ಟಿಸುವಂತೆ ಅನುಮತಿಸುತ್ತದೆ. ಹಿಂದೂ ಮಹಾಸಾಗರದಿಂದ, ಅರೆಬಂಜರು ತಗ್ಗುಪ್ರದೇಶಗಳಾಚೆಯಾಗಿ ಒಳನಾಡಿನೊಳಗೆ ಬೀಸಿರುವ ತೇವಗೂಡಿದ ಗಾಳಿಯು, ಪರ್ವತವನ್ನು ಬಡಿದು, ಅದು ಎಲ್ಲಿ ದ್ರವರೂಪವಾಗಿ ಮಳೆಯನ್ನು ಉತ್ಪಾದಿಸುತ್ತದೊ ಆ ಮೇಲಿನ ದಿಕ್ಕಿಗೆ ತಿರುಗಿಸಲ್ಪಡುತ್ತದೆ. ಇದು, ಆ ಪರ್ವತದ ಬುಡದ ಸುತ್ತಲೂ ಜೀವಿಸುತ್ತಿರುವ ಜನರನ್ನು ಪೋಷಿಸುವ ಕಾಫಿ ತೋಟಗಳಿಗಾಗಿ ಮತ್ತು ಆಹಾರದ ಫಸಲುಗಳಿಗಾಗಿ ಕೆಳಗಿನ ಇಳಿಜಾರುಗಳನ್ನು ಫಲಪ್ರದವನ್ನಾಗಿ ಮಾಡುತ್ತದೆ.

“ಕಿಲಿ”ಯನ್ನು ಆರೋಹಿಸುವುದು

ಕಿಲಿಮಂಜಾರೊವಿನ ಇಳಿಜಾರುಗಳು, ಅದರ ಹಿಮಾವೃತ ತುದಿಯನ್ನು ಸಮೀಪಿಸಲು ಪ್ರಯತ್ನಿಸುವ ಯಾವುದೇ ವ್ಯಕ್ತಿಯನ್ನು ಹಾನಿಗೊಳಪಡಿಸುವ ದುಷ್ಟಾತ್ಮಗಳ ಬೀಡಾಗಿತ್ತೆಂದು, ಕಿಲಿಮಂಜಾರೊವಿನ ಕ್ಷೇತ್ರದಲ್ಲಿ ಜೀವಿಸುತ್ತಿದ್ದ ಜನರು ಮೂಢನಂಬಿಕೆಯಿಂದ ನಂಬಿದರು. ಇದು, ಸ್ಥಳಿಕ ಜನರು ಅದರ ಶಿಖರವನ್ನು ತಲಪಲು ಪ್ರಯತ್ನಿಸುವುದರಿಂದ ಅವರನ್ನು ತಡೆಗಟ್ಟಿತು. 1889ರಲ್ಲಿ ಮಾತ್ರ ಇಬ್ಬರು ಜರ್ಮನ್‌ ಅನ್ವೇಷಕರು, ಆ ಪರ್ವತವನ್ನು ಹತ್ತಿ, ಆಫ್ರಿಕದಲ್ಲಿನ ಅತಿ ಎತ್ತರದ ಬಿಂದುವಿನ ಮೇಲೆ ನಿಂತರು. ಹತ್ತಲಿಕ್ಕಾಗಿ ಹೆಚ್ಚಿನ ನೈಪುಣ್ಯ ಮತ್ತು ಕೌಶಲವನ್ನು ಅಗತ್ಯಪಡಿಸುವ, ಎರಡನೆಯ ಶಿಖರವಾದ ಮವೆನ್ಸೀಯು 1912ರಲ್ಲಿ ಆರೋಹಿಸಲ್ಪಟ್ಟಿತು.

ಇಂದು ಕಿಲಿಮಂಜಾರೊ ಆರೋಹಣದ ಅನುಭವವು, ಒಳ್ಳೆಯ ಆರೋಗ್ಯವಿರುವ ಯಾರಿಗೇ ಆಗಲಿ ಲಭ್ಯವಿದೆ ಮತ್ತು ಪೂರ್ವ ಆಫ್ರಿಕದ ಸಂದರ್ಶಕರಲ್ಲಿ ತೀರ ಜನಪ್ರಿಯವಾಗಿದೆ. ಟಾನ್ಸೇನಿಯದ ಉದ್ಯಾನವನದ ಅಧಿಕಾರಿಗಳು, ಆ ಪರ್ವತವನ್ನು ಆರೋಹಿಸಲು ಇಷ್ಟಪಡುವವರಿಗಾಗಿ ಸುವ್ಯವಸ್ಥಿತವಾದ ಏಪಾರ್ಡುಗಳನ್ನು ಮಾಡಿದ್ದಾರೆ. ಬಟ್ಟೆಬರೆ ಮತ್ತು ಸಲಕರಣೆಗಳನ್ನು ಬಾಡಿಗೆಗೆ ತೆಗೆದುಕೊಳ್ಳಸಾಧ್ಯವಿದೆ. ತರಬೇತಿಪಡೆದಿರುವ ಪೋರ್ಟರ್‌ಗಳು ಮತ್ತು ಮಾರ್ಗದರ್ಶಿಗಳು ಲಭ್ಯವಿದ್ದಾರೆ. ಮತ್ತು ಪರ್ವತಾರೋಹಣದ ಸಫಾರಿಯೊಂದರ ಆರಂಭದಿಂದ ಅಂತ್ಯದ ವರೆಗೆ, ಆರಾಮವಾದ ವಸತಿಸೌಕರ್ಯಗಳನ್ನು ನೀಡುವ ಹಲವಾರು ಲಾಡ್ಜ್‌ಗಳು ಇವೆ. ಪರ್ವತದ ವಿಭಿನ್ನ ಎತ್ತರಗಳಲ್ಲಿ ಚೆನ್ನಾಗಿ ಕಟ್ಟಲ್ಪಟ್ಟಿರುವ ಗುಡಿಸಲುಗಳಿವೆ. ಇವು ಆರೋಹಣ ಮಾಡುವವನಿಗೆ ಮಲಗುವ ಸೌಕರ್ಯಗಳನ್ನು ಮತ್ತು ಆಶ್ರಯವನ್ನು ಒದಗಿಸುತ್ತವೆ.

ಕಿಲಿಮಂಜಾರೊವನ್ನು ವೈಯಕ್ತಿಕವಾಗಿ ನೋಡುವುದು, ಭಾವೋತ್ತೇಜಕವಾದದ್ದಾಗಿದೆ ಹಾಗೂ ಚಿಂತನೆಯನ್ನು ಪ್ರೇರಿಸುವಂತಹದ್ದಾಗಿದೆ. ದೇವರ ಕುರಿತಾದ ಈ ಮಾತುಗಳನ್ನು ಒಬ್ಬನು ಸಿದ್ಧಮನಸ್ಸಿನಿಂದ ಒಪ್ಪಿಕೊಳ್ಳಬಲ್ಲನು: ‘ಆತನು ಬಲದಿಂದ ಪರ್ವತಗಳನ್ನು ಸ್ಥಿರವಾಗಿ ನಿಲ್ಲಿಸಿದ್ದಾನೆ.’ (ಕೀರ್ತನೆ 65:6) ಹೌದು, ಆಫ್ರಿಕದಲ್ಲಿ ಎತ್ತರವಾಗಿ ಮತ್ತು ಒಂಟಿಯಾಗಿರುವ ಕಿಲಿಮಂಜಾರೊ, ಆ ಮಹಾನ್‌ ಸೃಷ್ಟಿಕರ್ತನ ಶಕ್ತಿಗೆ ಒಂದು ಘನವಾದ ಪ್ರಮಾಣವಾಗಿ ಎದ್ದುನಿಲ್ಲುತ್ತದೆ.

[Map/Picture on page 20, 21]

(For fully formatted text, see publication)

ಆಫ್ರಿಕ

ಕೆನ್ಯ

ಕಿಲಿಮಂಜಾರೊ

ಟಾನ್ಸೇನಿಯ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ