ಯುವ ಜನರು ಪ್ರಶ್ನಿಸುವುದು . . .
ಎಲ್ಲ ಸಮಯದಲ್ಲಿ ದೂಷಣೆಗೊಳಗಾಗುವುದನ್ನು ನಾನು ಹೇಗೆ ನಿಲ್ಲಿಸಬಲ್ಲೆ?
“ವಿಷಯಗಳ ಆಗುಹೋಗುಗಳಿಗೆ ನಾನು ಯಾವಾಗಲೂ ದೂಷಣೆಗೊಳಗಾಗುತ್ತಿದ್ದೆ. ಮನೆಗೆ ಬೀಗಹಾಕಿರದಿದ್ದರೆ ಅಥವಾ ಸ್ಟೋವ್ ಆನ್ ಆಗಿಯೇ ಇತ್ತೆಂದರೆ ಇಲ್ಲವೇ ಏನಾದರೂ ಇರಬೇಕಾದ ಜಾಗದಲ್ಲಿ ಇಲ್ಲದಿದ್ದರೆ ಅಥವಾ ಕೆಲಸವು ಮಾಡಲ್ಪಡದಿದ್ದರೆ, ಅದು ರಾಮೊನನ ತಪ್ಪಾಗಿತ್ತು!”—ರಾಮೊನ್.
ನೀವು ಒಬ್ಬ ಹದಿವಯಸ್ಕರಾಗಿರುವಾಗ, ಹೆಚ್ಚುಕಡಿಮೆ ಏನೇ ತಪ್ಪಾಗಲಿ ಅದಕ್ಕಾಗಿ ನೀವು ದೂಷಣೆಗೊಳಗಾಗುತ್ತೀರೆಂದು ಕೆಲವೊಮ್ಮೆ ತೋರಸಾಧ್ಯವಿದೆ. ಹಿಂದಿನ ಲೇಖನವೊಂದರಲ್ಲಿ, ಹೆತ್ತವರು ತಮ್ಮ ಮಕ್ಕಳನ್ನು ದೂಷಿಸುವುದರಲ್ಲಿ ಕೆಲವೊಮ್ಮೆ ತುಂಬ ಶೀಘ್ರರಾಗಿರುತ್ತಾರೆ ಎಂಬುದನ್ನು ನಾವು ಒಪ್ಪಿಕೊಂಡೆವು.a ಇದಕ್ಕೆ ಕಾರಣಗಳು ಸ್ವಾಭಾವಿಕ ಹೆತ್ತವರ ಆಸ್ಥೆಯಿಂದ ಹಿಡಿದು ಆಳವಾದ ಭಾವನಾತ್ಮಕ ಬೇಗುದಿಯ ತನಕ ಹರವು ಇರಸಾಧ್ಯವಿದೆ. ಕಾರಣವು ಏನೇ ಆಗಿರಲಿ, ನಿಮ್ಮ ತಪ್ಪು ಆಗಿರದ ವಿಷಯಗಳಿಗಾಗಿ ಹೊಣೆಗಾರರಾಗಿ ಮಾಡಲ್ಪಡುವುದು ವೇದನಾಮಯವೂ ಅವಮಾನಕರವೂ ಆದ ಸಂಗತಿಯಾಗಿರಸಾಧ್ಯವಿದೆ.
ಖಂಡಿತವಾಗಿಯೂ, ಒಬ್ಬ ಅಪರಿಪೂರ್ಣ ಮಾನವರೋಪಾದಿ, ನೀವು ಆಗಾಗ್ಗೆ ತಪ್ಪುಗಳನ್ನು ಮಾಡುವಿರಿ. (ರೋಮಾಪುರ 3:23) ಅದಕ್ಕೆ ಕೂಡಿಸಿ, ನೀವು ಎಳೆಯರಾಗಿರುವ ಕಾರಣ, ಸಂಬಂಧಸೂಚಕವಾಗಿ ಅನನುಭವಿಗಳಾಗಿದ್ದೀರಿ. (ಜ್ಞಾನೋಕ್ತಿ 1:4) ನೀವು ಆಗಾಗ್ಗೆ ತೀರ್ಮಾನ ಮಾಡುವುದರಲ್ಲಿ ತಪ್ಪುಗಳನ್ನು ಮಾಡುವುದು ಸಂಭವನೀಯ. ಆದುದರಿಂದ ನೀವು ತಪ್ಪುಮಾಡುವಾಗ, ನೀವು ಹೊಣೆಗಾರರಾಗಿ ಮಾಡಲ್ಪಡುವುದು ಉಚಿತವಾದದ್ದೇ.—ಪ್ರಸಂಗಿ 11:9.
ಹಾಗಾದರೆ, ನೀವು ನಿಜವಾಗಿಯೂ ಮಾಡಿರುವ ಯಾವುದೋ ಒಂದು ವಿಷಯಕ್ಕಾಗಿ ನೀವು ದೂಷಣೆಗೆ ಒಳಗಾಗಿರುವಾಗ ನೀವು ಹೇಗೆ ಪ್ರತಿಕ್ರಿಯಿಸಬೇಕು? ಏನೋ ಘೋರ ಅನ್ಯಾಯದ ಬಲಿಪಶುಗಳಾಗಿದ್ದಾರೋ ಎಂಬಂತೆ ನಡೆದುಕೊಳ್ಳಲು ಕೆಲವು ಯುವಕರು ಪ್ರಯತ್ನಿಸುತ್ತಾರೆ. ತಮ್ಮ ಹೆತ್ತವರು ಪ್ರತಿಯೊಂದು ವಿಷಯಕ್ಕೂ ತಮ್ಮನ್ನು ಯಾವಾಗಲೂ ದೂಷಿಸುತ್ತಾರೆ ಎಂದು ಅವರು ಹುಚ್ಚುಹುಚ್ಚಾಗಿ ಕೂಗಾಡುತ್ತಾರೆ. ಫಲಿತಾಂಶವೇನು? ನಿರಾಶೆಗೊಂಡ ಹೆತ್ತವರು ತಮ್ಮ ಮಕ್ಕಳು ತಿಳಿದುಕೊಳ್ಳುವಂತೆ ಮಾಡಲು ಇನ್ನೂ ಹೆಚ್ಚು ಕಟ್ಟುನಿಟ್ಟಿನ ಕ್ರಮಗಳನ್ನು ಉಪಯೋಗಿಸುತ್ತಾರೆ. ಬೈಬಲು ಈ ಬುದ್ಧಿವಾದವನ್ನು ನೀಡುತ್ತದೆ: “ಮೂರ್ಖರಾದರೋ ಜ್ಞಾನವನ್ನೂ ಶಿಕ್ಷೆಯನ್ನೂ ಅಸಡ್ಡೆಮಾಡುವರು. ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.” (ಜ್ಞಾನೋಕ್ತಿ 1:7, 8) ನೀವು ನಿಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಬೇಕಾದ ಬದಲಾವಣೆಗಳನ್ನು ಮಾಡುವಾಗ, ನೀವು ನಿಮ್ಮ ತಪ್ಪುಗಳಿಂದ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ.—ಇಬ್ರಿಯ 12:11.
ಹೆತ್ತವರೊಂದಿಗೆ “ಅಂತರಂಗದ ಮಾತು”
ಆದರೂ, ನಿಮ್ಮ ತಪ್ಪು ಆಗಿರದ ವಿಷಯಗಳಿಗಾಗಿ ನೀವು ದೂಷಣೆಗೆ ಒಳಗಾಗುವಾಗ ಅಥವಾ ದೂಷಣೆಯು ನಿರ್ದಾಕ್ಷಿಣ್ಯವಾದುದಾಗಿರುವಾಗ ವಿಷಯವು ಬೇರೆಯೇ ಆಗಿದೆ. ಗ್ರಾಹ್ಯವಾಗಿಯೇ, ನಿಮಗೆ ಕೋಪ ಹಾಗೂ ತೀವ್ರ ಅಸಮಾಧಾನವು ಆಗಬಹುದು. ಹೇಗೂ ನೀವು ದೂಷಣೆಗೆ ಒಳಗಾಗಲಿದ್ದೀರಿ ಎಂಬ ತೀರ್ಮಾನಕ್ಕೆ ಬರುತ್ತಾ, ನೀವು ಅಯೋಗ್ಯವಾಗಿ ವರ್ತಿಸುವಂತಹ ಪ್ರಲೋಭನೆಗೂ ಒಳಗಾಗಬಹುದು. (ಪ್ರಸಂಗಿ 7:7) ಆದರೂ, ರೇಗಿಸುವ ಕ್ರಿಯೆಗಳು ಪ್ರತಿಯೊಬ್ಬರನ್ನೂ ಘಾಸಿಗೊಳಿಸುತ್ತವೆ. (ಯೋಬ 36:18ನ್ನು ಹೋಲಿಸಿರಿ.) ವಿಷಯಗಳನ್ನು ನಿರ್ವಹಿಸಲಿಕ್ಕಾಗಿ ಒಂದು ಉತ್ತಮ ವಿಧವನ್ನು ಸೂಚಿಸುತ್ತಾ ಜ್ಞಾನೋಕ್ತಿ 15:22 ಹೇಳುವುದು: “ಅಂತರಂಗದ ಮಾತು ಇಲ್ಲದಿರುವಲ್ಲಿ ಯೋಜನೆಗಳ ಭಂಗಗೊಳ್ಳುವಿಕೆಯಿದೆ.” ನಿಮ್ಮ ಹೆತ್ತವರಿಂದ ನೀವು ಉಪಚರಿಸಲ್ಪಡುವ ರೀತಿಯನ್ನು ಪರಿವರ್ತಿಸುವ ಒಂದು ವಿಧವು, ನಿಮಗೆ ಅದರ ಕುರಿತಾಗಿ ಹೇಗೆ ಅನಿಸುತ್ತದೆ ಎಂಬುದನ್ನು ಅವರಿಗೆ ತಿಳಿಸುವುದೇ ಆಗಿದೆ.
ಮೊದಲಾಗಿ, ಬೈಬಲು ಯಾವುದನ್ನು “ತಕ್ಕ ಸಮಯ” (NW) ಎಂದು ಕರೆಯುತ್ತದೋ ಅದಕ್ಕಾಗಿ ಎದುರುನೋಡಿರಿ. (ಜ್ಞಾನೋಕ್ತಿ 15:23) ಬರಹಗಾರರಾದ ಕ್ಲೇಟನ್ ಬಾರ್ಬೋ ಸಲಹೆನೀಡುವುದು: “ಇಬ್ಬರೂ ಶಾಂತಚಿತ್ತರಾಗಿದ್ದು, ನಿಮಗೆ ತುಂಬ ಹಾಯೆನಿಸುತ್ತಿರುವಾಗ ಒಂದು ಸಮಯವನ್ನೂ ಸ್ಥಳವನ್ನೂ ಆರಿಸಿಕೊಳ್ಳಿರಿ.” ಬೈಬಲು ಮತ್ತೂ ಎಚ್ಚರಿಕೆಯನ್ನು ನೀಡುವುದು: “ಬಿರುನುಡಿಯು ಸಿಟ್ಟನ್ನೇರಿಸುವದು.” (ಜ್ಞಾನೋಕ್ತಿ 15:1) ಆದುದರಿಂದ ನಿಮ್ಮ ಸಮೀಪಿಸುವಿಕೆಯಲ್ಲಿ ದಯಾಪರರೂ ಗೌರವಪೂರ್ಣರೂ ಆಗಿರಲು ಪ್ರಯತ್ನಿಸಿರಿ, ಜಗಳಗಂಟಿಗರಾಗಿ ಅಲ್ಲ. ಸಹನೆಯನ್ನು ಕಳೆದುಕೊಳ್ಳುವುದರಿಂದ ದೂರವಿರಿ. (ಜ್ಞಾನೋಕ್ತಿ 29:11) ನಿಮ್ಮ ಹೆತ್ತವರ ಮೇಲೆ ಆಕ್ರಮಣಮಾಡುವ ಬದಲು (‘ಪ್ರತಿಯೊಂದಕ್ಕೂ ನೀವು ಯಾವಾಗಲೂ ನನ್ನನ್ನೇ ದೂಷಿಸುತ್ತೀರಿ!’) ಅವರ ನಿರಂತರ ದೂಷಿಸುವಿಕೆಯು ನಿಮಗೆ ಹೇಗನಿಸುವಂತೆ ಮಾಡುತ್ತದೆಂಬುದನ್ನು ವಿವರಿಸಲು ಪ್ರಯತ್ನಿಸಿರಿ. (‘ನಾನು ತಪ್ಪುಮಾಡಿರದ ವಿಷಯಗಳಿಗಾಗಿ ನಾನು ದೂಷಣೆಗೆ ಒಳಗಾಗುವಾಗ ನನ್ನ ಬಗ್ಗೆ ನನಗೇ ತೀರ ಕೆಡುಕೆನಿಸುತ್ತದೆ.’)—ಆದಿಕಾಂಡ 30:1, 2ನ್ನು ಹೋಲಿಸಿರಿ.
ಯಾವುದೋ ತಪ್ಪುತಿಳಿವಳಿಕೆಯಿಂದ ನಿಮ್ಮ ಹೆತ್ತವರು ಕೋಪಗೊಂಡಿರುವ ಆ ಸಮಯಗಳಿಗೂ ಇದನ್ನೇ ಹೇಳಸಾಧ್ಯವಿದೆ. ಯುವ ಯೇಸುವಿನ ಹೆತ್ತವರು ಯೇಸು ಎಲ್ಲಿದ್ದನೆಂಬುದನ್ನು ತಿಳಿಯದಿದ್ದ ಸಮಯದಲ್ಲಿ ಕ್ಷೋಭೆಗೊಂಡರು. ಆದರೆ ಯೇಸು ಅಳಲಿಲ್ಲ ಇಲ್ಲವೇ ದೂರಲಿಲ್ಲ. ಅವನು ಪರಿಸ್ಥಿತಿಯನ್ನು ಶಾಂತಚಿತ್ತನಾಗಿ ಸ್ಪಷ್ಟೀಕರಿಸಿದನು. (ಲೂಕ 2:49) ನೀವು ಸಂಕಟದಲ್ಲಿರುವಾಗ ಒಬ್ಬ ವಯಸ್ಕನ ಮಾದರಿಯಲ್ಲಿ ನಿಮ್ಮ ಸ್ವಂತ ಹೆತ್ತವರೊಂದಿಗೆ ವ್ಯವಹರಿಸಲು ಏಕೆ ಪ್ರಯತ್ನಿಸಬಾರದು? ಅವರು ನಿಮ್ಮ ಬಗ್ಗೆ ಕಾಳಜಿವಹಿಸುವ ಕಾರಣ ಅವರು ಕ್ಷೋಭೆಗೊಂಡಿದ್ದಾರೆಂಬುದನ್ನು ಗ್ರಹಿಸಿರಿ! ಗೌರವಪೂರ್ಣವಾಗಿ ಆಲಿಸಿರಿ. (ಜ್ಞಾನೋಕ್ತಿ 4:1) ಕಥೆಯ ನಿಮ್ಮ ಭಾಗವನ್ನು ಹೇಳಲು ಸಾಹಸಮಾಡುವ ಮೊದಲು ಅವರ ಕೋಪವು ತಣ್ಣಗಾಗುವ ತನಕ ಕಾಯಿರಿ.
‘ನಿಮ್ಮ ಸ್ವಂತ ಕಾರ್ಯವನ್ನು ರುಜುಪಡಿಸುವುದು’
ಕೆಲವು ಹೆತ್ತವರಾದರೋ ಮೊದಲ ಸ್ಥಾನದಲ್ಲೇ ತಮ್ಮ ಮಕ್ಕಳ ಬಗ್ಗೆ ತಪ್ಪು ತೀರ್ಮಾನಗಳಿಗೆ ಧುಮುಕಿಬಿಡಲು ಒಲವುಳ್ಳವರಾಗಿರುತ್ತಾರೆ ಏಕೆ? ನೇರವಾಗಿ ಹೇಳುವುದಾದರೆ, ಯುವ ವ್ಯಕ್ತಿಗಳೇ ಕೆಲವೊಮ್ಮೆ ತಮ್ಮ ಹೆತ್ತವರಿಗೆ ಸಂಶಯಿಸುವಂತೆ ಕಾರಣವನ್ನು ಕೊಡುತ್ತಾರೆ. ಜ್ಞಾನೋಕ್ತಿ 20:11 ಹೇಳುವುದು: “ಒಬ್ಬ ಹುಡುಗನಾದರೂ ಶುದ್ಧವೂ ಸತ್ಯವೂ ಆದ ನಡತೆಯಿಂದಲೇ ತನ್ನ ಗುಣವನ್ನು ತೋರ್ಪಡಿಸಿಕೊಳ್ಳುವನು.” ನಿಮ್ಮ ಹೆತ್ತವರೊಂದಿಗೆ ನೀವು ಯಾವ ಹೆಸರನ್ನು ಸ್ಥಾಪಿಸಿಕೊಂಡಿದ್ದೀರಿ? ನಿಮ್ಮ ‘ನಡತೆ’ ನೀವು ‘ಸತ್ಯವಂತರೂ’ ಜವಾಬ್ದಾರಿಯುಳ್ಳವರೂ ಇಲ್ಲವೇ ನಿರ್ಲಕ್ಷರೂ ಬೇಜವಾಬ್ದಾರರೂ ಆಗಿದ್ದೀರೆಂಬುದನ್ನು ತೋರಿಸಿವೆಯೋ? ಎರಡನೆಯದ್ದು ನಿಜವಾಗಿರುವಲ್ಲಿ, ಅವರು ನಿಮ್ಮ ಕುರಿತಾಗಿ ಆಗಾಗ ತಪ್ಪು ತೀರ್ಮಾನಗಳಿಗೆ ಧುಮುಕುವುದಾದರೆ ಆಶ್ಚರ್ಯಪಡಬೇಡಿರಿ. ಹಿಂದೆ ಉಲ್ಲೇಖಿಸಲ್ಪಟ್ಟ ಯುವ ವ್ಯಕ್ತಿಯಾದ ರಾಮೊನ್, ತನ್ನ ಹೆತ್ತವರ ಟೀಕೆಯ ಕುರಿತಾಗಿ “ನಾನು ಸ್ವತಃ ಪ್ರಾಮಾಣಿಕನಾಗಿರಬೇಕಿತ್ತು” ಎಂಬುದನ್ನು ಒಪ್ಪಿಕೊಂಡನು. “ಅವರ ಸಂಶಯಗಳಲ್ಲಿ ಕೆಲವೊಮ್ಮೆ ಸ್ವಲ್ಪ ಸತ್ಯವಿರುತ್ತದೆ.”
ಅದು ನಿಮ್ಮ ವಿದ್ಯಮಾನದಲ್ಲಿ ಸತ್ಯವಾಗಿರುವಲ್ಲಿ, ನೀವು ಮಾಡಸಾಧ್ಯವಿರುವ ಒಂದೇ ಒಂದು ವಿಷಯವೇನೆಂದರೆ ನಿಮ್ಮ ಗತಕಾಲದ ವಿಷಯಗಳನ್ನು ಅಳಿಸಿಹಾಕಿಬಿಡಲು ಪ್ರಯತ್ನಿಸುವುದೇ. ಭರವಸಯೋಗ್ಯ ಹಾಗೂ ಜವಾಬ್ದಾರ ನಡವಳಿಕೆಯ ಒಂದು ನಮೂನೆಯನ್ನು ಸ್ಥಾಪಿಸುವ ಮೂಲಕ, ನೀವು ಬದಲಾವಣೆಗಳನ್ನು ಮಾಡಿದ್ದೀರಿ ಮತ್ತು ನಿಮ್ಮ ಮೇಲೆ ಭರವಸೆಯನ್ನಿಡಸಾಧ್ಯವಿದೆ ಎಂಬುದನ್ನು ನೀವು ನಿಮ್ಮ ಹೆತ್ತವರಿಗೆ ಕ್ರಮೇಣ ಮನದಟ್ಟುಮಾಡಬಹುದು.
ರಾಮೊನನ ಅನುಭವವು ಈ ಅಂಶವನ್ನು ದೃಷ್ಟಾಂತಿಸುತ್ತದೆ. ವಿಷಯಗಳನ್ನು ಮರೆತುಬಿಡುವ ಅವನ ಪ್ರವೃತ್ತಿಯ ಕಾರಣ, ಅವನ ಸ್ನೇಹಿತರು ಹಾಗೂ ಕುಟುಂಬವು ಅವನಿಗೆ ಸೌಜನ್ಯದಿಂದ ಮರೆಗುಳಿ ಎಂಬ ಅಡ್ಡಹೆಸರನ್ನಿಟ್ಟಿತು. “ಅಪ್ರೌಢ” ಅಥವಾ “ಬೇಜವಾಬ್ದಾರ” ಎಂಬಂಥ ಅಪ್ರಿಯವಾದ ಲೇಬಲ್ ಅನ್ನು ನಿಮ್ಮ ಹೆತ್ತವರು ನಿಮಗೆ ಕೊಟ್ಟಿದ್ದಾರೋ? ಬರಹಗಾರ್ತಿ ಕ್ಯಾತ್ಲೀನ್ ಮೆಕೈ ಗಮನಿಸುವಂತೆ, ಇಂಥ ಲೇಬಲ್ಗಳು “ಯಾವುದು ತಪ್ಪಾಗಿದೆ ಎಂಬುದನ್ನು ಎತ್ತಿತೋರಿಸಲು ಮತ್ತು ಹೀಗೆ ಹದಿವಯಸ್ಕ ವ್ಯಕ್ತಿಯು ಅದನ್ನು ನೋಡಿ, ಪರಿವರ್ತನೆ ಮಾಡಿಕೊಳ್ಳಸಾಧ್ಯವಾಗುವಂತೆ” ಕಾರ್ಯನಡಿಸುವುದೆಂದು ಹೆತ್ತವರು ನೆನಸಬಹುದು. ವಾಸ್ತವವಾಗಿಯಾದರೋ ಅಂಥ ಲೇಬಲ್ಗಳು ಅನೇಕ ವೇಳೆ ಆಳವಾದ ತೀವ್ರ ಅಸಮಾಧಾನವನ್ನು ಉಂಟುಮಾಡುತ್ತವೆ. ಆದರೂ, ರಾಮೊನನು ಆ ಅಡ್ಡಹೆಸರು ಒಂದು ಸರಿಯಾದ ವಿಷಯವನ್ನು ಹೇಳಿತು ಎಂಬುದನ್ನು ಗ್ರಹಿಸಿದನು. “ನನ್ನ ಮನಸ್ಸು ಯಾವಾಗಲೂ ಒಂದೇ ವಿಷಯದ ಮೇಲೆ ನೆಟ್ಟಿರುತ್ತಿತ್ತು, ಆದುದರಿಂದ ಕೀಲಿಕೈಗಳು ಅಥವಾ ನನ್ನ ಹೋಮ್ವರ್ಕ್ಗಳಂಥದ್ದನ್ನು ಕಳೆದುಕೊಳ್ಳುತ್ತಿದ್ದೆ ಹಾಗೂ ಸಣ್ಣಪುಟ್ಟ ಕೆಲಸಗಳನ್ನು ಮರೆತುಬಿಡುತ್ತಿದ್ದೆ” ಎಂದು ಅವನು ಒಪ್ಪಿಕೊಳ್ಳುತ್ತಾನೆ.
ಆದುದರಿಂದ ರಾಮೊನ್ ಬದಲಾವಣೆಗಳನ್ನು ಮಾಡಲು ಪ್ರಾರಂಭಿಸಿದ. “ನಾನು ಜವಾಬ್ದಾರಿಗಳ ಹಾಗೂ ಆದ್ಯತೆಗಳ ಕುರಿತಾಗಿ ತಿಳಿದುಕೊಳ್ಳಲು ಪ್ರಾರಂಭಿಸಿದೆ” ಎಂಬ ವಿಷಯವನ್ನು ಅವನು ಜ್ಞಾಪಿಸಿಕೊಳ್ಳುತ್ತಾನೆ. “ನಾನು ಒಂದು ತಖ್ತೆಯನ್ನು ಮಾಡಿ, ವೈಯಕ್ತಿಕ ಬೈಬಲ್ ಅಧ್ಯಯನವನ್ನು ತುಂಬ ಗಂಭೀರವಾಗಿ ತೆಗೆದುಕೊಳ್ಳಲು ಪ್ರಾರಂಭಿಸಿದೆ. ಯೆಹೋವನು ಚಿಕ್ಕಪುಟ್ಟ ವಿಷಯಗಳಿಗೂ ಹಾಗೂ ದೊಡ್ಡ ವಿಷಯಗಳಿಗೂ ಮಹತ್ತ್ವವನ್ನು ಕೊಡುತ್ತಾನೆಂಬುದನ್ನು ನಾನು ತಿಳಿದುಕೊಂಡೆ.” (ಲೂಕ 16:10) ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವ ಮೂಲಕ ರಾಮೊನ್ ಮರೆತುಹೋಗುವ ಸ್ವಭಾವಕ್ಕಾಗಿ ತಾನು ಗಳಿಸಿಕೊಂಡಿದ್ದ ಖ್ಯಾತಿಯನ್ನು ಕಟ್ಟಕಡೆಗೆ ತ್ಯಜಿಸಿಬಿಟ್ಟನು. ಅದನ್ನೇ ಮಾಡಲು ನೀವು ಏಕೆ ಪ್ರಯತ್ನಿಸಬಾರದು? ಮತ್ತು ಒಂದು ಲೇಬಲ್ ಅಥವಾ ಅಡ್ಡಹೆಸರು ನಿಮ್ಮನ್ನು ನಿಜವಾಗಿಯೂ ಕಾಡಿಸುವುದಾದರೆ, ನಿಮ್ಮ ಹೆತ್ತವರೊಂದಿಗೆ ಅದನ್ನು ಚರ್ಚಿಸಿರಿ. ಅದು ನಿಮ್ಮನ್ನು ಹೇಗೆ ಬಾಧಿಸುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬಹುದು.
ಅದು ಸ್ವಪಕ್ಷಪಾತದಂತೆ ತೋರುವಾಗ
ಕೆಲವೊಮ್ಮೆ ದೂಷಿಸುವುದರ ಹಿಂದೆ ಸ್ವಪಕ್ಷಪಾತವಿರುವಂತೆ ತೋರುತ್ತದೆ. ರಾಮೊನನು ಜ್ಞಾಪಿಸಿಕೊಳ್ಳುವುದು: “ನನ್ನ ಅಣ್ಣಂದಿರು ಅಥವಾ ಅಕ್ಕಂದಿರು ಮನೆಗೆ ತಡವಾಗಿ ಬರುತ್ತಿದ್ದರು ಆದರೆ ಅವರು ತಪ್ಪಿಸಿಕೊಳ್ಳುತ್ತಿದ್ದರು. ನಾನು ಮನೆಗೆ ತಡವಾಗಿ ಬರುತ್ತಿದ್ದೆ ಆದರೆ ನಾನು ಬಯ್ಯಿಸಿಕೊಳ್ಳುತ್ತಿದ್ದೆ.” ಆಲ್ಬರ್ಟ್ ಎಂಬ ಹೆಸರಿನ ಒಬ್ಬ ಗಯಾನದ ವ್ಯಕ್ತಿಯು ದೊಡ್ಡವನಾಗುತ್ತಿದ್ದಾಗ ಇಂಥದ್ದೇ ಭಾವನೆಗಳಿದ್ದುದನ್ನು ಜ್ಞಾಪಿಸಿಕೊಳ್ಳುತ್ತಾನೆ. ಅವನಿಗೆ ತನ್ನ ತಾಯಿಯು ತನ್ನ ಸಹೋದರನನ್ನು ಶಿಸ್ತುಪಡಿಸುತ್ತಿದ್ದುದಕ್ಕಿಂತಲೂ ಹೆಚ್ಚು ಕಠೋರವಾಗಿ ತನ್ನನ್ನು ಶಿಸ್ತುಪಡಿಸಿದಳೆಂದು ತೋರಿತು.
ಆದರೂ, ವಿಷಯಗಳು ಯಾವಾಗಲೂ ಅವು ತೋರುವಂತೆ ಇರುವುದಿಲ್ಲ. ಹೆತ್ತವರು ಅನೇಕ ವೇಳೆ ವಯಸ್ಕ ಮಕ್ಕಳಿಗೆ ಹೆಚ್ಚು ಸ್ವಾತಂತ್ರ್ಯವನ್ನು ನೀಡುತ್ತಾರೆ, ಸ್ವಪಕ್ಷಪಾತದ ಕಾರಣದಿಂದಲ್ಲ, ಬದಲಿಗೆ ಅವರು ಜವಾಬ್ದಾರರಾಗಿ ನಡೆದುಕೊಳ್ಳುವರೆಂದು ಅವರು ಭಾವಿಸುವುದರಿಂದಲೇ. ಅಥವಾ ವಿಶೇಷ ಸ್ಥಿತಿಗತಿಗಳು ಅದರಲ್ಲಿ ಒಳಗೂಡಿರಬಹುದು. ತನ್ನ ಸಹೋದರನು ಶಾರೀರಿಕ ಶಿಸ್ತುಪಡಿಸುವಿಕೆಯಿಂದ ಕ್ಷಮೆತೋರಿಸಲ್ಪಡುತ್ತಿದ್ದನು ಏಕೆಂದರೆ ಅವನು “ತೆಳ್ಳಗೆಯೂ ರೋಗಗ್ರಸ್ತನಾಗಿಯೂ” ಇದ್ದನೆಂಬುದನ್ನು ಆಲ್ಬರ್ಟ್ ಒಪ್ಪಿಕೊಳ್ಳುತ್ತಾನೆ. ಒಂದು ನಿರ್ದಿಷ್ಟ ಮಗುವಿಗಿರಬಹುದಾದ ವಿಶೇಷ ಅಗತ್ಯಗಳು ಅಥವಾ ಇತಿಮಿತಿಗಳನ್ನು ಹೆತ್ತವರು ಗ್ರಹಿಸುವುದು ಸ್ವಪಕ್ಷಪಾತವಾಗಿರುತ್ತದೋ?
ಹೆತ್ತವರಿಗೆ ಕೆಲವೊಮ್ಮೆ ತಮ್ಮ ಅಚ್ಚುಮೆಚ್ಚಿನವರಿರುತ್ತಾರೆ ಎಂಬುದು ಖಂಡಿತ. (ಆದಿಕಾಂಡ 37:3ನ್ನು ಹೋಲಿಸಿರಿ.) ರೋಗಗ್ರಸ್ತನಾದ ತನ್ನ ಸಹೋದರನ ಕುರಿತಾಗಿ ಆಲ್ಬರ್ಟ್ ಹೇಳುವುದು: “ಅವನ ಮೇಲೆ ಅಮ್ಮನಿಗೆ ವಿಶೇಷವಾದ ಮಮತೆಯಿತ್ತು.” ಸಂತೋಷಕರವಾಗಿ, ಕ್ರಿಸ್ತೀಯ ಪ್ರೀತಿಯು ವಿಸ್ತರಶೀಲದ್ದಾಗಿದೆ. (2 ಕೊರಿಂಥ 6:11-13) ಆದುದರಿಂದ ನಿಮ್ಮ ಹೆತ್ತವರಿಗೆ ನಿಮ್ಮ ಒಡಹುಟ್ಟಿದವರಲ್ಲಿ ಒಬ್ಬರ ಮೇಲೆ “ವಿಶೇಷವಾದ ಮಮತೆ”ಯಿರುವುದಾದರೂ ಅದು ನೀವು ಪ್ರೀತಿಸಲ್ಪಡುವುದಿಲ್ಲವೆಂಬುದನ್ನು ಅರ್ಥೈಸುವುದಿಲ್ಲ. ನಿಜವಾದ ವಿವಾದಾಂಶವೇನೆಂದರೆ, ಒಡಹುಟ್ಟಿದವರಲ್ಲಿ ಒಬ್ಬರ ಮೇಲಿರುವ ಕುರುಡು ಮಮತೆಯ ಕಾರಣ ಅವರು ನಿಮ್ಮನ್ನು ದೂಷಿಸುತ್ತಾ, ಅನ್ಯಾಯವಾಗಿ ಉಪಚರಿಸುತ್ತಿದ್ದಾರೋ? ವಿಷಯವು ಹಾಗೆ ತೋರುವಲ್ಲಿ, ನಿಮಗೆ ಹೇಗನಿಸುತ್ತದೆಂಬುದನ್ನು ಅವಶ್ಯವಾಗಿ ಅವರಿಗೆ ತಿಳಿಸಿರಿ. ಒಂದು ಶಾಂತಚಿತ್ತ, ಸಾಮಂಜಸ್ಯ ವಿಧದಲ್ಲಿ ಅವರು ಯಾವ ರೀತಿಯಲ್ಲಿ ಸ್ವಪಕ್ಷಪಾತವನ್ನು ತೋರಿಸಿದ್ದಾರೆಂದು ನಿಮಗೆ ಅನಿಸುತ್ತದೆಂಬುದರ ಕುರಿತಾಗಿ ನಿರ್ದಿಷ್ಟ ಉದಾಹರಣೆಗಳನ್ನು ಅವರಿಗೆ ನೀಡಿರಿ. ಪ್ರಾಯಶಃ ಅವರು ಕಿವಿಗೊಡುವರು.
ತೊಂದರೆಗೊಳಗಾದ ಕುಟುಂಬಗಳು
ಎಲ್ಲ ಸನ್ನಿವೇಶಗಳು ಪರಿವರ್ತಿಸಲು ಸುಲಭವಾಗಿರುವುದಿಲ್ಲ ಎಂಬುದು ಒಪ್ಪತಕ್ಕ ವಿಷಯವೇ. ಕೆಲವು ಹೆತ್ತವರಿಗೆ, ಅವಮಾನಿಸುವುದು ಮತ್ತು ದೂಷಿಸುವುದು ಆಳವಾಗಿ ಬೇರೂರಲ್ಪಟ್ಟ ಚಾಳಿಗಳಾಗಿರುತ್ತವೆ. ಇದು ವಿಶೇಷವಾಗಿ ಭಾವನಾತ್ಮಕ ಸಮಸ್ಯೆಗಳಿರುವ ಅಥವಾ ವ್ಯಸನದ ವಿರುದ್ಧ ಹೋರಾಡುತ್ತಿರುವ ಹೆತ್ತವರ ನಡುವೆ ಇರಬಹುದು. ಅಂಥ ಸಂದರ್ಭಗಳಲ್ಲಿ, ವಿಷಯಗಳನ್ನು ಸ್ಪಷ್ಟೀಕರಿಸಲು ಮಾಡುವ ಪ್ರಯತ್ನಗಳಿಂದ ಹೆಚ್ಚು ಪ್ರಯೋಜನವೇನೂ ಆಗಲಿಕ್ಕಿಲ್ಲ. ಇದು ನಿಮ್ಮ ವಿದ್ಯಮಾನದಲ್ಲಿ ನಿಜವಾಗಿ ತೋರುವಲ್ಲಿ, ನಿಮ್ಮ ಹೆತ್ತವರ ಸಮಸ್ಯೆಗಳು ನಿಮ್ಮ ನಿಯಂತ್ರಣಕ್ಕೆ ಮೀರಿದ್ದು, ಹೊರಗಿನ ಸಹಾಯದಿಂದ ಮಾತ್ರವೇ ಬಹುಶಃ ಪರಿಹರಿಸಲ್ಪಡಸಾಧ್ಯವಿದೆ ಎಂಬುದನ್ನು ಗ್ರಹಿಸಿರಿ. ನೀವು ಮಾಡಶಕ್ತರಾಗಿರಬಹುದಾದ ಅತ್ಯುತ್ತಮ ವಿಷಯವೆಂದರೆ, ಅವರಿಗೆ ಯೋಗ್ಯವಾದ ಸನ್ಮಾನವನ್ನೂ ಗೌರವವನ್ನೂ ನೀಡುವುದು ಹಾಗೂ ಅನಾವಶ್ಯಕವಾದ ಸಂಘರ್ಷಣೆಯಿಂದ ದೂರವಿರಲು ಪ್ರಯತ್ನಿಸುವುದೇ ಆಗಿದೆ. (ಎಫೆಸ 6:1, 2) ಜ್ಞಾನೋಕ್ತಿ 22:3 ಹೇಳುವುದು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.”b
ಅದೇ ಸಮಯದಲ್ಲಿ, ಸ್ವಲ್ಪ ಹೊರಗಿನ ಬೆಂಬಲವನ್ನು ಪಡೆದುಕೊಳ್ಳಿರಿ. ಒಬ್ಬ ಪ್ರೌಢ ವಯಸ್ಕನೊಂದಿಗೆ, ಪ್ರಾಯಶಃ ಒಬ್ಬ ಕ್ರೈಸ್ತ ಹಿರಿಯನೊಂದಿಗೆ ಮಾತಾಡಿರಿ. ಅಂಥ ಒಬ್ಬ ವ್ಯಕ್ತಿಯಿಂದ ನೀಡಲ್ಪಡುವ ಪ್ರೀತಿಪರ ಗಮನವು, ಯಾವಾಗಲೂ ನಿಮ್ಮದೇ ತಪ್ಪು ಎಂಬ ಭಾವನೆಯನ್ನು ನಿವಾರಿಸುವ ಸಂಬಂಧದಲ್ಲಿ ಹೆಚ್ಚಿನದ್ದನ್ನು ಮಾಡಸಾಧ್ಯವಿದೆ. ಅದೇ ಸಮಯದಲ್ಲಿ, “ದೇವರ ಸಮೀಪಕ್ಕೆ ಬನ್ನಿರಿ.” (ಯಾಕೋಬ 4:8) ಇತರರು ನಿಮ್ಮನ್ನು ಅನ್ಯಾಯವಾಗಿ ದೂಷಿಸಬಹುದಾದರೂ, “[ದೇವರು] ಯಾವಾಗಲೂ ತಪ್ಪುಹುಡುಕುವವನಲ್ಲ; ನಿತ್ಯವೂ ಕೋಪಿಸುವವನಲ್ಲ. ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:9, 14) ನೀವು ದೇವರ ದೃಷ್ಟಿಯಲ್ಲಿ ಅಮೂಲ್ಯರಾಗಿದ್ದೀರೆಂಬುದನ್ನು ತಿಳಿಯುವುದು ಅನ್ಯಾಯವಾದ ದೂಷಣೆಯನ್ನು ಸಹಿಸಿಕೊಂಡು ಹೋಗುವಂತೆ ನಿಮಗೆ ಸಹಾಯಮಾಡಬಲ್ಲದು.
[ಅಧ್ಯಯನ ಪ್ರಶ್ನೆಗಳು]
a ನಮ್ಮ 1997, ಆಗಸ್ಟ್ 8ರ ಸಂಚಿಕೆಯಲ್ಲಿ ಕಂಡುಬಂದಿರುವ “ಯುವ ಜನರು ಪ್ರಶ್ನಿಸುವುದು . . . ಅದು ಯಾವಾಗಲೂ ನನ್ನ ತಪ್ಪೇ ಏಕೆ?” ಎಂಬ ಲೇಖನವನ್ನು ನೋಡಿರಿ.
b “ಯುವ ಜನರು ಪ್ರಶ್ನಿಸುವುದು . . . ಮೌಖಿಕ ನಿಂದಿಸುವಿಕೆಯನ್ನು ನಾನು ಹೇಗೆ ನಿಭಾಯಿಸಬಲ್ಲೆ?” ಎಂಬ ನಮ್ಮ 1989, ಜೂನ್ 8ರ (ಇಂಗ್ಲಿಷ್) ಸಂಚಿಕೆಯಲ್ಲಿರುವ ಲೇಖನವನ್ನು ನೋಡಿರಿ. ಹಾಗೂ ನಮ್ಮ ಎಚ್ಚರ! ಪತ್ರಿಕೆಯ 1996, ನವೆಂಬರ್ 8ರ “ನೋಯಿಸುವ ನುಡಿಗಳಿಂದ ಗುಣವಾಗಿಸುವ ನುಡಿಗಳಿಗೆ” ಎಂಬ ಲೇಖನಮಾಲೆಯನ್ನೂ ನೋಡಿರಿ.
[ಪುಟ 28 ರಲ್ಲಿರುವ ಚಿತ್ರ]
ನಮ್ಮ ದೋಷಗಳನ್ನು ಒಪ್ಪಿಕೊಳ್ಳುವುದು ನಮ್ಮ ತಪ್ಪುಗಳಿಂದ ಪಾಠವನ್ನು ಕಲಿತುಕೊಳ್ಳಲು ನಮಗೆ ಸಹಾಯಮಾಡುತ್ತದೆ