ನಿಮ್ಮ ಮೂತ್ರಜನಕಾಂಗಗಳು ಜೀವಪೋಷಕವಾದ ಒಂದು ಶೋಧಕ
ಐರ್ಲಂಡ್ನ ಎಚ್ಚರ! ಸುದ್ದಿಗಾರರಿಂದ
ಭೂಮಿ ಮತ್ತು ಮಾನವ ದೇಹಕ್ಕೆ ಸಾಮಾನ್ಯವಾಗಿರುವ ಯಾವುದೊ ವಿಷಯವಿದೆ: ಜೀವವನ್ನು ಪೋಷಿಸಲು, ಎರಡಕ್ಕೂ ಒಂದು ಶೋಧಕದ ಅಗತ್ಯವಿದೆ. ಭೂಮಿಗೆ ಸೂರ್ಯನಿಂದ ಬರುವ ಹಾನಿಕಾರಕ ಕಿರಣಗಳ ಸತತವಾದ ಸುರಿಮಳೆಯಿಂದ ಸಂರಕ್ಷಣೆಯ ಅಗತ್ಯವಿದೆ. ನಮ್ಮ ವಾಯುಮಂಡಲದ ಓಸೋನ್ ಪದರವು ಇವುಗಳನ್ನು ಸೋಸಿ, ಜೀವ ಪೋಷಕ ಬೆಳಕು ಭೂಮಿಯನ್ನು ತಲಪುವಂತೆ ಅನುಮತಿಸುತ್ತದೆ. ಮತ್ತು ನಿಮ್ಮ ದೇಹದ ಕುರಿತಾಗಿ ಏನು? ನಿಮ್ಮ ದೇಹದಲ್ಲಾಗುವ ಅನೇಕ ರಾಸಾಯನಿಕ ಪ್ರಕ್ರಿಯೆಗಳು, ನಿಮ್ಮ ರಕ್ತಪ್ರವಾಹದೊಳಗೆ ವಿಷಕಾರಿ ಮತ್ತು ಅನುಪಯುಕ್ತ ಪದಾರ್ಥಗಳನ್ನು ಬಿಡುಗಡೆ ಮಾಡುತ್ತವೆ. ಅಲ್ಲಿಯೆ ಉಳಿಯುವಂತೆ ಅನುಮತಿಸಲ್ಪಡುವಲ್ಲಿ, ಇವು ನಿಮಗೆ ಗಂಭೀರವಾದ ಸಮಸ್ಯೆಗಳನ್ನು—ಮರಣವನ್ನೂ—ಉಂಟುಮಾಡುವವು. ಇವುಗಳನ್ನು ಸತತವಾಗಿ ಸೋಸಿ, ತೆಗೆದುಹಾಕಬೇಕಾಗಿದೆ.
ಈ ಸೋಸುವಿಕೆಯು, ನಿಮ್ಮ ಮೂತ್ರಜನಕಾಂಗಗಳ ಪ್ರಧಾನ ಕಾರ್ಯಗಳಲ್ಲಿ ಒಂದಾಗಿದೆ. ಆದರೆ ಈ ಚಿಕ್ಕ ಅಂಗಗಳು, ಹಾನಿಕಾರಕ ಪದಾರ್ಥಗಳನ್ನು ಗುರುತಿಸಿ, ಬೇರ್ಪಡಿಸಿ, ತೆಗೆದುಹಾಕುವ ಸಮಯದಲ್ಲೇ ನಿಮ್ಮ ದೇಹಕ್ಕೆ ತಿನ್ನಿಸಿ, ಪೋಷಿಸುವಂತಹ ಅತ್ಯಾವಶ್ಯಕ ಅಂಶಗಳು ಉಳಿದುಕೊಳ್ಳುವುದನ್ನು ಹೇಗೆ ಖಚಿತಮಾಡಿಕೊಳ್ಳಬಲ್ಲವು? ಮತ್ತು ನಿಮ್ಮನ್ನು ಆರೋಗ್ಯವಂತರನ್ನಾಗಿ ಇಡಲು, ನೀವು ನಿಮ್ಮ ಮೂತ್ರಜನಕಾಂಗಗಳಿಗೆ ಹೇಗೆ ಸಹಾಯ ಮಾಡಬಲ್ಲಿರಿ?
ನಿಮ್ಮ ಮೂತ್ರಜನಕಾಂಗಗಳ ಒಳಗೆ ಏನಿದೆ?
ಮಾನವರಿಗೆ ಸಾಧಾರಣವಾಗಿ ಎರಡು ಮೂತ್ರಜನಕಾಂಗಗಳಿವೆ—ಬೆನ್ನಿನ ಕೆಳಭಾಗದಲ್ಲಿ ಬೆನ್ನು ಮೂಳೆಯ ಪ್ರತಿ ಪಕ್ಕದಲ್ಲೂ ಒಂದೊಂದು ಇರಿಸಲ್ಪಟ್ಟಿವೆ. ಪ್ರತಿಯೊಂದೂ ಸುಮಾರು ಹತ್ತು ಸೆಂಟಿಮೀಟರ್ಗಳಷ್ಟು ಉದ್ದ, ಐದು ಸೆಂಟಿಮೀಟರ್ಗಳಷ್ಟು ಅಗಲ, ಮತ್ತು ಎರಡೂವರೆ ಸೆಂಟಿಮೀಟರ್ಗಳಷ್ಟು ದಪ್ಪವಾಗಿದ್ದು, 110ರಿಂದ 170 ಗ್ರ್ಯಾಮ್ಗಳಷ್ಟು ತೂಕದ್ದಾಗಿರುತ್ತದೆ. ಮೂತ್ರಜನಕಾಂಗವನ್ನು ನೀಳವಾಗಿ ಭೇದಿಸಿದರೆ, ಜೊತೆಯಲ್ಲಿರುವ ರೇಖಾಕೃತಿಗಳಲ್ಲಿ ಕಂಡುಬರುವಂತೆ, ಅದು ಹಲವಾರು ಸ್ಫುಟವಾದ ವೈಶಿಷ್ಟ್ಯಗಳನ್ನು ಪ್ರಕಟಪಡಿಸುತ್ತದೆ.
ಮೂತ್ರಜನಕಾಂಗವು ಕೆಲಸಮಾಡುವ ವಿಧವನ್ನು ಚಿತ್ರಿಸಿಕೊಳ್ಳಲು, ಒಂದು ಘಟನೆಗಾಗಿ ಒಳಬರುತ್ತಿರುವ ಸಾವಿರಾರು ಪ್ರೇಕ್ಷಕರುಳ್ಳ ಒಂದು ಕ್ರೀಡಾಂಗಣವನ್ನು ಊಹಿಸಿಕೊಳ್ಳಿರಿ. ಮೊದಲಾಗಿ, ಜನಸಮೂಹವು ಹಲವಾರು ಚಿಕ್ಕ ಸಾಲುಗಳಾಗಿ ವಿಂಗಡಗೊಳ್ಳಬೇಕು. ಅನಂತರ, ಪ್ರತಿಯೊಂದು ಸಾಲಿನಲ್ಲಿರುವ ಜನರು ಒಬ್ಬೊಬ್ಬರಾಗಿ ಭದ್ರತಾ ದ್ವಾರಗಳ ಮುಖಾಂತರ ದಾಟಿಹೋಗಬೇಕು. ಅಲ್ಲಿ ಟಿಕೀಟುಗಳಿಲ್ಲದ ವ್ಯಕ್ತಿಗಳನ್ನು ಹೊರಗೆ ಕಳುಹಿಸಲಾಗುತ್ತದೆ. ಟಿಕೀಟುಗಳಿರುವ ಪ್ರೇಕ್ಷಕರು ತಮ್ಮ ನೇಮಿತ ಆಸನಗಳಿಗೆ ಹೋಗುತ್ತಾರೆ.
ತದ್ರೀತಿಯಲ್ಲಿ, ನಿಮ್ಮ ರಕ್ತವನ್ನು ಉಂಟುಮಾಡುವ ಅನೇಕ ಘಟಕಾಂಶಗಳೆಲ್ಲವೂ, ನಿಮ್ಮ ಇಡೀ ದೇಹದಲ್ಲೆಲ್ಲಾ ಚಲಿಸುವ ಅಗತ್ಯವಿದೆ. ಆದರೆ, ಅವು ಹಾಗೆ ಮಾಡುವಾಗ, ದೊಡ್ಡದಾದ ರಕ್ತನಾಳಗಳಾದ ರೀನಲ್ ಅಪಧಮನಿಗಳ—ಪ್ರತಿಯೊಂದು ಮೂತ್ರಜನಕಾಂಗಕ್ಕೆ ಒಂದು—ಮೂಲಕ ನಿಮ್ಮ ಮೂತ್ರಜನಕಾಂಗಗಳನ್ನು ಪದೇ ಪದೇ ಹಾದುಹೋಗಬೇಕು. (ಪುಟ 24ರಲ್ಲಿರುವ ಚಿತ್ರವನ್ನು ನೋಡಿರಿ.) ಮೂತ್ರಜನಕಾಂಗವನ್ನು ಪ್ರವೇಶಿಸಿದ ಬಳಿಕ, ರೀನಲ್ ಅಪಧಮನಿಯು ಮೂತ್ರಜನಕಾಂಗದ ಆಂತರಿಕ ಹಾಗೂ ಬಾಹ್ಯ ಪದರುಗಳಲ್ಲಿ ಚಿಕ್ಕದಾದ ನಾಳಗಳಾಗಿ ಹರಡಿಕೊಳ್ಳುತ್ತದೆ. ಹೀಗೆ, ನಿಮ್ಮ ರಕ್ತದಲ್ಲಿರುವ ವಿವಿಧ ಘಟಕಾಂಶಗಳು, ಹೆಚ್ಚು ಚಿಕ್ಕದಾದ ಮತ್ತು ಹೆಚ್ಚು ಉತ್ತಮವಾಗಿ ನಿರ್ವಹಿಸಬಹುದಾದ “ಸಾಲು”ಗಳ ಮೂಲಕ ಸಾಗಿಸಲ್ಪಡುತ್ತವೆ.
ಕೊನೆಯದಾಗಿ, ರಕ್ತವು ಚಿಕ್ಕ ಗುಚ್ಛಗಳ ಬಳಿ ಆಗಮಿಸುತ್ತದೆ. ಪ್ರತಿಯೊಂದು ಗುಚ್ಛದಲ್ಲಿ, ಗಟ್ಟಿಯಾಗಿ ಸುರುಳಿಸುತ್ತಲ್ಪಟ್ಟ ಸುಮಾರು 40 ಸೂಕ್ಷ್ಮವಾದ ರಕ್ತನಾಳಗಳಿವೆ. ಗ್ಲಾಮೆರುಲಸ್ ಎಂಬುದಾಗಿ ಕರೆಯಲ್ಪಡುವ ಪ್ರತಿಯೊಂದು ಗುಚ್ಛವು, ಬೌಮನ್ನನ ಕೋಶ ಎಂಬುದಾಗಿ ವಿದಿತವಾಗಿರುವ ಎರಡು ಪದರಿನ ಪೊರೆಯಿಂದ ಸುತ್ತುವರಿಯಲ್ಪಟ್ಟಿದೆ.a ಗ್ಲಾಮೆರುಲಸ್ ಮತ್ತು ಬೌಮನ್ನನ ಕೋಶವು, ಒಟ್ಟಿಗೆ, ನಿಮ್ಮ ಮೂತ್ರಜನಕಾಂಗದ ‘ಭದ್ರತಾ ದ್ವಾರ’ದ ಪ್ರಥಮ ಭಾಗ—ನೆಫ್ರಾನ್, ನಿಮ್ಮ ಮೂತ್ರಜನಕಾಂಗದ ಮೂಲಭೂತ ಸೋಸುವ ಘಟಕ—ವನ್ನು ನಿರ್ಮಿಸುತ್ತವೆ. ಪ್ರತಿಯೊಂದು ಮೂತ್ರಜನಕಾಂಗದಲ್ಲಿ ಹತ್ತು ಲಕ್ಷಕ್ಕಿಂತಲೂ ಹೆಚ್ಚಿನ ನೆಫ್ರಾನ್ಗಳಿವೆ. ಆದರೆ ಅವು ಎಷ್ಟು ಚಿಕ್ಕದಾಗಿವೆ ಎಂದರೆ, ಒಂದನ್ನು ಪರೀಕ್ಷಿಸಲು ನಿಮಗೆ ಒಂದು ಸೂಕ್ಷ್ಮದರ್ಶಕವು ಬೇಕಾಗುವುದು!—ಪುಟ 25ರಲ್ಲಿ ಮಹತ್ತರವಾಗಿ ವಿಸ್ತರಿಸಲ್ಪಟ್ಟ ಒಂದು ನೆಫ್ರಾನ್ನ ರೇಖಾಕೃತಿಯನ್ನು ನೋಡಿರಿ.
ನಿಮ್ಮ ರಕ್ತದ ಎರಡು ಹಂತಗಳ ಸೋಸುವಿಕೆ
ನಿಮ್ಮ ರಕ್ತಪ್ರವಾಹದಲ್ಲಿರುವ ರಕ್ತ ಕೋಶಗಳು ಮತ್ತು ಪ್ರೋಟೀನ್ಗಳು ಅತ್ಯಗತ್ಯವಾಗಿವೆ. ಅವು ನಿಮ್ಮ ದೇಹಕ್ಕೆ, ಆಮ್ಲಜನಕದ ಸರಬರಾಯಿ, ಸಂರಕ್ಷಣೆ, ಮತ್ತು ಹಾನಿಯ ದುರಸ್ತು ಮಾಡುವಂತಹ ಅತ್ಯಾವಶ್ಯಕ ಸೇವೆಗಳನ್ನು ಒದಗಿಸುತ್ತವೆ. ರಕ್ತ ಕೋಶಗಳು ಮತ್ತು ಪ್ರೋಟೀನ್ಗಳ ನಷ್ಟವನ್ನು ತಡೆಗಟ್ಟಲು, ಸೋಸುವಿಕೆಯ ಪ್ರಥಮ ಹಂತವು ಅವುಗಳನ್ನು ಬೇರೆ ಎಲ್ಲ ಘಟಕಾಂಶಗಳಿಂದ ಬೇರ್ಪಡಿಸುತ್ತದೆ. ವಿಶೇಷವಾದ ಈ ಕೆಲಸವು ಬೌಮನ್ನನ ಕೋಶಗಳ ಮೂಲಕ ಸಾಧಿಸಲ್ಪಡುತ್ತದೆ. ಆದರೆ ಹೇಗೆ?
ಗ್ಲಾಮೆರುಲಸ್ ಅನ್ನು ಪ್ರವೇಶಿಸುವ ರಕ್ತನಾಳಗಳು, ಬಹಳ ತೆಳುವಾದ ಗೋಡೆಗಳುಳ್ಳ ಲೋಮನಾಳಗಳಾಗಿ ಸೀಳುತ್ತವೆ. ಹೀಗೆ, ರಕ್ತದೊತ್ತಡವು ನಿಮ್ಮ ರಕ್ತಪ್ರವಾಹದಿಂದ ಒಂದಿಷ್ಟು ನೀರು ಮತ್ತು ಇತರ ಚಿಕ್ಕ ಅಣುಗಳನ್ನು, ಲೋಮನಾಳಗಳ ಸೂಕ್ಷ್ಮವಾದ ಪೊರೆಗಳ ಮುಖಾಂತರ ಹೊರಗೆ ತೆಗೆದು, ಬೌಮನ್ನನ ಕೋಶ ಮತ್ತು ಅದಕ್ಕೆ ಸೇರಿರುವ ಸುರುಳಿಯಾಕಾರದ ನಾಳದೊಳಕ್ಕೆ ಹೋಗುವಂತೆ ಒತ್ತಾಯಿಸಬಲ್ಲದು. ಈ ನಾಳವು ಸುರುಳಿ ಸುತ್ತಿಕೊಂಡಿರುವ (ಕಾನ್ವೊಲ್ಯೂಟೆಡ್) ನಾಳ ಎಂಬುದಾಗಿ ಕರೆಯಲ್ಪಡುತ್ತದೆ. ದೊಡ್ಡದಾದ ಪ್ರೋಟೀನ್ ಅಣುಗಳು ಮತ್ತು ಎಲ್ಲ ರಕ್ತ ಕೋಶಗಳು ರಕ್ತಪ್ರವಾಹದಲ್ಲಿ ಉಳಿದು, ಲೋಮನಾಳಗಳ ಮುಖಾಂತರ ಹರಿಯುವುದನ್ನು ಮುಂದುವರಿಸುತ್ತವೆ.
ಈಗ ಸೋಸುವಿಕೆಯು ಹೆಚ್ಚು ಆಯ್ಕೆಯುಳ್ಳದ್ದಾಗಿ ಪರಿಣಮಿಸುತ್ತದೆ. ನಿಮ್ಮ ದೇಹಕ್ಕೆ ಅಮೂಲ್ಯವಾಗಿರುವ ಯಾವುದೂ ತಪ್ಪಿಸಿಕೊಳ್ಳದಿರುವುದನ್ನು ನಿಮ್ಮ ಮೂತ್ರಜನಕಾಂಗಗಳು ಖಂಡಿತವಾಗಿಯೂ ಖಚಿತಪಡಿಸಿಕೊಳ್ಳಬೇಕು! ಈ ಹಂತದಲ್ಲಿ ನಾಳದ ಮುಖಾಂತರ ಹರಿದುಹೋಗುವ ದ್ರವವು ನೀರಿನಂತಹ ಮಿಶ್ರಣವಾಗಿದ್ದು, ಅದರಲ್ಲಿ ಅನುಪಯುಕ್ತ ಹಾಗೂ ಬೇಡವಾದ ಪದಾರ್ಥಗಳೊಂದಿಗೆ ಕರಗಿಹೋಗಿರುವ ಉಪಯೋಗಕರ ಅಣುಗಳು ಸೇರಿರುತ್ತವೆ. ನಾಳದ ಆಂತರಿಕ ಗೋಡೆಯ ಉದ್ದಕ್ಕೂ ಇರುವ ವಿಶೇಷವಾದ ಕೋಶಗಳು, ನೀರು, ಲವಣಗಳು, ಸಕ್ಕರೆಗಳು, ಖನಿಜಗಳು, ಜೀವಸ್ವತಗಳು, ಚೋದಕಸ್ರಾವಗಳು, ಮತ್ತು ಅಮೈನೊ ಆಮ್ಲಗಳಂತಹ ಉಪಯೋಗಕರ ಅಣುಗಳನ್ನು ಗುರುತಿಸುತ್ತವೆ. ನಾಳದ ಗೋಡೆಯೊಳಕ್ಕೆ ಪುನಃ ಹೀರಲ್ಪಡುವ ಮೂಲಕ ಇವು ಸಮರ್ಥವಾಗಿ ಕೀಳಲ್ಪಡುತ್ತವೆ ಮತ್ತು ನಿಮ್ಮ ರಕ್ತಪ್ರವಾಹವನ್ನು ಪುನಃ ಪ್ರವೇಶಿಸಲು, ಸುತ್ತಲೂ ಇರುವ ಲೋಮನಾಳಗಳ ಜಾಲದೊಳಕ್ಕೆ ಹಿಂದಿರುಗಿ ಕಳುಹಿಸಲ್ಪಡುತ್ತವೆ. ಚಿಕ್ಕ ಅಭಿಧಮನಿಗಳಾಗಿ ಪುನಃ ಈ ಲೋಮನಾಳಗಳು ಒಟ್ಟುಸೇರುತ್ತವೆ. ತದನಂತರ ಈ ಚಿಕ್ಕ ಅಭಿಧಮನಿಗಳು ಸೇರಿಕೊಂಡು, ರೀನಲ್ ಅಭಿಧಮನಿ ಎಂಬುದಾಗಿ ಕರೆಯಲ್ಪಡುವ ರಕ್ತನಾಳವಾಗುತ್ತದೆ. ಅದರ ಮೂಲಕ, ಈಗ ಸೋಸಿ, ಶುದ್ಧೀಕರಿಸಲ್ಪಟ್ಟ ನಿಮ್ಮ ರಕ್ತವು, ಮೂತ್ರಜನಕಾಂಗವನ್ನು ಬಿಟ್ಟು ನಿಮ್ಮ ದೇಹದಲ್ಲಿರುವ ಜೀವವನ್ನು ಪೋಷಿಸಲು ಮುಂದುವರಿಯುತ್ತದೆ.
ಅನುಪಯುಕ್ತ ಉತ್ಪನ್ನಗಳನ್ನು ವಿಸರ್ಜಿಸುವುದು
ಆದರೆ ನಾಳದಲ್ಲಿ ಉಳಿಯುವಂತಹ ದ್ರವದ ಕುರಿತೇನು? ಇದರಲ್ಲಿ ನಿಮ್ಮ ದೇಹಕ್ಕೆ ಬೇಡವಾದ ಪದಾರ್ಥಗಳಿವೆ ಎಂಬುದು ಸ್ಪಷ್ಟ. ದ್ರವವು ನಾಳದ ಉದ್ದಕ್ಕೂ ಹರಿದು, ಶೇಖರಿಸುವ ನಾಳ, ಅಥವಾ ಶೇಖರಿಸುವ ನಳಿಕೆಯ ಕಡೆಗೆ ಹರಿಯುವುದನ್ನು ಮುಂದುವರಿಸಿದಂತೆ, ನಾಳದ ಗೋಡೆಯಲ್ಲಿರುವ ಇತರ ಕೋಶಗಳು, ಅಮೋನಿಯ, ಪೊಟ್ಯಾಸಿಯಂ, ಯೂರಿಯ, ಯೂರಿಕ್ ಆಮ್ಲ ಮತ್ತು ಹೆಚ್ಚುವರಿಯಾದ ನೀರಿನ ಜೊತೆಗೆ, ಅದರೊಳಗೆ ಹೆಚ್ಚಿನ ಸ್ರವಣಗಳನ್ನು ಬಿಡುಗಡೆ ಮಾಡುತ್ತವೆ. ಈ ಅಂತಿಮ ಉತ್ಪನ್ನವೇ ಮೂತ್ರವಾಗಿದೆ.
ಹಲವಾರು ನೆಫ್ರಾನ್ಗಳಿಂದ ಬರುವ ಶೇಖರಿಸುವ ನಳಿಕೆಗಳು ಒಟ್ಟಿಗೆ ಸೇರಿ, ಪಿರಮಿಡ್ಗಳ ತುದಿಗಳಲ್ಲಿರುವ ತೆರಪುಗಳ ಮೂಲಕ ಮೂತ್ರವನ್ನು ಬಿಡುಗಡೆ ಮಾಡುತ್ತವೆ. ಮೂತ್ರವು ರೀನಲ್ ಪೆಲ್ವಿಸ್ನೊಳಗೆ ಹರಿಯುತ್ತದೆ ಮತ್ತು ಮೂತ್ರನಾಳ—ಮೂತ್ರಜನಕಾಂಗ ಮತ್ತು ಮೂತ್ರಕೋಶವನ್ನು ಸೇರಿಸುವ ನಾಳ—ದ ಮಾರ್ಗವಾಗಿ ಮುಂದುವರಿಯುತ್ತದೆ. ನಿಮ್ಮ ದೇಹದಿಂದ ವಿಸರ್ಜಿಸಲ್ಪಡುವ ಮೊದಲು, ಮೂತ್ರವು ನಿಮ್ಮ ಮೂತ್ರಕೋಶದೊಳಗೆ ಶೇಖರಿಸಿಡಲ್ಪಡುತ್ತದೆ.
ಅವುಗಳ ಸೂಕ್ಷ್ಮದರ್ಶಕೀಯ ಗಾತ್ರದ ಎದುರಿನಲ್ಲೂ, ನಿಮ್ಮ ಮೂತ್ರಜನಕಾಂಗಗಳಲ್ಲಿರುವ 20 ಲಕ್ಷಕ್ಕಿಂತಲೂ ಹೆಚ್ಚಾದ ನೆಫ್ರಾನ್ಗಳು ಬಹಳಷ್ಟು ಪ್ರಭಾವಕಾರಿ ಕೆಲಸವನ್ನು ಮಾಡುತ್ತವೆ. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ನೆಫ್ರಾನ್ಗಳು . . . 45 ನಿಮಿಷಗಳಿಗೊಮ್ಮೆ ರಕ್ತದಲ್ಲಿರುವ ಒಂದುಕಾಲು ಗ್ಯಾಲನ್ನಷ್ಟು ನೀರಿನ ಅಂಶವನ್ನು ಪೂರ್ತಿಯಾಗಿ ಸೋಸುತ್ತವೆ.” ವಿವಿಧ ಪದಾರ್ಥಗಳು ಪುನಃ ಹೀರಲ್ಪಟ್ಟು, ಅನೇಕ ಪ್ರಕ್ರಿಯೆಗಳು ಪೂರ್ಣಗೊಳ್ಳುವ ಸಮಯದೊಳಗೆ, ಒಂದು ಸಾಮಾನ್ಯ, ಆರೋಗ್ಯಕರ ದೇಹವು ಪ್ರತಿ 24 ಗಂಟೆಗಳಿಗೆ ಮೂತ್ರದ ರೂಪದಲ್ಲಿ ಸುಮಾರು ಎರಡು ಲೀಟರುಗಳಷ್ಟು ಅನುಪಯುಕ್ತ ಪದಾರ್ಥಗಳನ್ನು ವಿಸರ್ಜಿಸಬಲ್ಲದು. ಎಂತಹ ಶ್ರಮಶೀಲ ಹಾಗೂ ಆದ್ಯಂತವಾದ ಸೋಸುವ ವ್ಯವಸ್ಥೆ!
ನಿಮ್ಮ ಮೂತ್ರಜನಕಾಂಗಗಳ ಕಾಳಜಿ ವಹಿಸಿರಿ!
ನಿಮ್ಮ ಮೂತ್ರಜನಕಾಂಗಗಳು ಸ್ವತಃ ಶುಚಿಮಾಡಿಕೊಳ್ಳುವ ಮತ್ತು ಸ್ವತಃ ದುರಸ್ತಾಗಿಟ್ಟುಕೊಳ್ಳುವ ಅಂಗಗಳಾಗಿದ್ದು, ದೀರ್ಘ ಸಮಯದ ವರೆಗೆ ಕಾರ್ಯಮಾಡುವ ಸಾಮರ್ಥ್ಯ ಅವುಗಳಿಗಿದೆ. ಹಾಗಿದ್ದರೂ, ತಮ್ಮ ಕೆಲಸವನ್ನು ಮಾಡಲು ಅವುಗಳಿಗೆ ಸಹಾಯ ಮಾಡುವುದರಲ್ಲಿ ನಿಮಗೊಂದು ಪಾತ್ರವನ್ನು ನಿರ್ವಹಿಸಲಿಕ್ಕಿದೆ. ನಿಮ್ಮ ದೇಹವು ಆರೋಗ್ಯಕರವಾಗಿ ಉಳಿಯಲು, ಬಹಳಷ್ಟು ಪ್ರಮಾಣದ ನೀರು ನಿಮ್ಮ ಮೂತ್ರಜನಕಾಂಗಗಳ ಮುಖಾಂತರ ಹಾದುಹೋಗಬೇಕು. ನಿಶ್ಚಯವಾಗಿಯೂ, ಸಾಕಷ್ಟು ನೀರಿನ ಸೇವನೆಯು, ಮೂತ್ರಜನಕಾಂಗದ ಸೋಂಕುಗಳನ್ನು ಮತ್ತು ಮೂತ್ರಜನಕಾಂಗದ ಕಲ್ಲುಗಳ ರಚನೆಯನ್ನು ತಡೆಗಟ್ಟುವ ಒಂದು ಮುಖ್ಯ ವಿಧಾನವಾಗಿದೆ.b ನೀರನ್ನು ಕುಡಿಯುವುದು, ನಿಮ್ಮ ಪಚನ ಹಾಗೂ ಹೃದಯರಕ್ತನಾಳದ ವ್ಯವಸ್ಥೆಗಳಿಗೂ ಸಹಾಯ ಮಾಡುತ್ತದೆ ಎಂದು, ನ್ಯೂ ಯಾರ್ಕ್ನ ಲಾಂಗ್ ಐಲೆಂಡ್ ಕಾಲೆಜ್ ಹಾಸ್ಪಿಟಲ್ನಲ್ಲಿ, ಮೂತ್ರಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ. ಸಿ. ಗೊಡೆಕ್ ಸೂಚಿಸುತ್ತಾರೆ.
ಎಷ್ಟು ನೀರು? ಡಾ. ಗೊಡೆಕ್ ಮತ್ತು ಇತರ ಅನೇಕ ವೈದ್ಯರು ಶಿಫಾರಸ್ಸುಮಾಡುವುದೇನೆಂದರೆ, ಬೇರೆ ಆಹಾರಗಳು ಮತ್ತು ಪಾನೀಯಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನ ಕಡಿಮೆ ಪಕ್ಷ ಎರಡು ಲೀಟರುಗಳಷ್ಟು ನೀರನ್ನು ಕುಡಿಯಬೇಕು. “ಅಧಿಕಾಂಶ ಜನರು ನಿರ್ಜಲೀಕರಿಸಲ್ಪಟ್ಟಿದ್ದಾರೆ,” ಎಂದು ಡಾ. ಗೊಡೆಕ್ ಎಚ್ಚರ! ಪತ್ರಿಕೆಗೆ ಹೇಳಿದರು. ನಿಮ್ಮ ಮೂತ್ರಜನಕಾಂಗಗಳು ಇಲ್ಲವೆ ನಿಮ್ಮ ಹೃದಯವು ರೋಗಗ್ರಸ್ತವಾಗದೆ ಇರುವಷ್ಟು ಸಮಯ, ನೀರು ಅವುಗಳಿಗೆ ಒಳ್ಳೆಯದೆಂದು ಅವರು ಅಭಿಪ್ರಯಿಸಿದರು. “ಆದರೆ ನೀವು ಸಾಕಷ್ಟು ನೀರನ್ನು ಕುಡಿಯಬೇಕು. ಅಧಿಕಾಂಶ ಜನರು ಸಾಕಷ್ಟು ಕುಡಿಯುವುದಿಲ್ಲ,” ಎಂದು ಡಾ. ಗೊಡೆಕ್ ಹೇಳಿದರು.
ಕೆಲವರು, ನಿಂಬೆಯಂತಹ ಒಂದಿಷ್ಟು ಸುವಾಸನೆಯು ಸೇರಿಸಲ್ಪಟ್ಟ ನೀರನ್ನು ಹೆಚ್ಚು ರುಚಿಕರವಾಗಿ ಕಂಡುಕೊಳ್ಳುತ್ತಾರೆ. ಇತರರು ಚಿಲುಮೆಯ ನೀರಿನ ರುಚಿಯನ್ನು ಇಲ್ಲವೆ ಪಟುಗೊಳಿಸಿದ ಇದ್ದಿಲಿನ ಮುಖಾಂತರ ಸೋಸಲ್ಪಟ್ಟಿರುವ ನೀರನ್ನು ಹೆಚ್ಚು ಇಷ್ಟಪಡುತ್ತಾರೆ. ವಿಷಯವು ಏನೇ ಆಗಿರಲಿ, ಸಾಧಾರಣ ಇಲ್ಲವೆ ಬಹಳ ಮಿತವಾಗಿ ಸುವಾಸನೆ ಬೆರಸಲ್ಪಟ್ಟ ನೀರು, ನಿಮ್ಮ ಮೂತ್ರಜನಕಾಂಗಗಳಿಗೆ ಬೇರೆ ಯಾವುದೇ ಪಾನೀಯಕ್ಕಿಂತ ಹೆಚ್ಚು ಉತ್ತಮವಾಗಿದೆ. ವಾಸ್ತವದಲ್ಲಿ, ಹಣ್ಣಿನ ರಸಗಳು ಮತ್ತು ಸಿಹಿಮಾಡಲ್ಪಟ್ಟ ಪಾನೀಯಗಳಲ್ಲಿರುವ ಸಕ್ಕರೆಯು, ನೀರಿಗಾಗಿರುವ ದೇಹದ ಅಗತ್ಯವನ್ನು ಹೆಚ್ಚಿಸುತ್ತದೆ. ಮದ್ಯಸಾರ ಇಲ್ಲವೆ ಕ್ಯಾಫಿನ್ ಇರುವ ಪಾನೀಯಗಳು, ದೇಹದಿಂದ ನೀರು ನಷ್ಟವಾಗುವಂತೆ ಮಾಡುತ್ತವೆ.
ದಿನಕ್ಕೆ ಎರಡು ಲೀಟರುಗಳಷ್ಟು ನೀರನ್ನು ಕುಡಿಯುವ ಹವ್ಯಾಸವನ್ನು ರೂಢಿಸಿಕೊಳ್ಳುವುದು ನಿಶ್ಚಯವಾಗಿಯೂ ಒಂದು ಪಂಥಾಹ್ವಾನವಾಗಿರಬಲ್ಲದು. ಒಂದು ವಿಷಯವೇನೆಂದರೆ, ಸಾಮಾನ್ಯಕ್ಕಿಂತಲೂ ಹೆಚ್ಚು ಬಾರಿ ಟ್ಲಾಯೆಟ್ಗೆ ಹೋಗುವುದನ್ನು ಅನೇಕ ಜನರು ಅನನುಕೂಲ ಇಲ್ಲವೆ ಮುಜುಗರ ಉಂಟುಮಾಡುವುದಾಗಿ ಕಂಡುಕೊಳ್ಳುತ್ತಾರೆ. ಆದರೆ ಹೆಚ್ಚುವರಿ ಪ್ರಯತ್ನ ಮಾಡುವುದಕ್ಕಾಗಿ ನಿಮ್ಮ ದೇಹವು ನಿಮಗೆ ಆಭಾರಿಯಾಗಿರುವುದು. ನಿಮ್ಮ ಆರೋಗ್ಯವನ್ನು ಸಂರಕ್ಷಿಸಲು ಸಹಾಯ ಮಾಡುವುದಲ್ಲದೆ, ಸಾಕಷ್ಟು ನೀರನ್ನು ಕುಡಿಯುವುದು, ನಿಮ್ಮ ತೋರಿಕೆಯನ್ನೂ ಉತ್ತಮಗೊಳಿಸಬಲ್ಲದು. ಒಳ್ಳೆಯ ಪೌಷ್ಟಿಕ ಆಹಾರ ಮತ್ತು ಬಹಳಷ್ಟು ದ್ರವದ ಸೇವನೆಯು, ನಿಮ್ಮ ತ್ವಚ್ಛೆಯನ್ನು ಅಂದವಾಗಿ ಇಡುವುದರಲ್ಲಿ ಯಾವುದೇ ಬಾಹ್ಯ ತ್ವಚ್ಛೆ ತಯಾರಿಕೆಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ವೈದ್ಯರು ಸೂಚಿಸುತ್ತಾರೆ.
ಅಸಂತೋಷಕರವಾಗಿ, ನಮ್ಮ ದಾಹ ಕ್ರಿಯೆಯು ಅಸಂಪೂರ್ಣವಾಗಿದೆ, ಮತ್ತು ನಮಗೆ ವಯಸ್ಸಾದಂತೆ ಅದು ಇನ್ನೂ ಕಡಿಮೆ ಸೂಕ್ಷ್ಮಗ್ರಾಹಿಯಾಗಿ ಪರಿಣಮಿಸುತ್ತದೆ. ಹೀಗೆ, ನಮಗೆ ಎಷ್ಟು ನೀರಿನ ಅಗತ್ಯವಿದೆ ಎಂದು ನಮಗೆ ಹೇಳಲು ನಾವು ಕೇವಲ ದಾಹದ ಮೇಲೆ ಅವಲಂಬಿಸಸಾಧ್ಯವಿಲ್ಲ. ನೀವು ಸಾಕಷ್ಟು ನೀರನ್ನು ಕುಡಿಯುವ ವಿಷಯದಲ್ಲಿ ಹೇಗೆ ನಿಶ್ಚಿತರಾಗಿರಬಲ್ಲಿರಿ? ಕೆಲವರು ಎರಡು ಗ್ಲಾಸ್ಗಳಷ್ಟು ನೀರನ್ನು ಕುಡಿಯುವ ಮೂಲಕ ತಮ್ಮ ದಿನವನ್ನು ಆರಂಭಿಸುತ್ತಾರೆ, ಮತ್ತು ಅನಂತರ ಕ್ರಮವಾದ ಅಂತರಗಳಲ್ಲಿ ಮತ್ತೊಂದು ಗ್ಲಾಸ್ ನೀರನ್ನು ಅವರು ಕುಡಿಯುತ್ತಾರೆ. ಇತರರು ಕಣ್ಣಿಗೆ ಕಾಣುವಂತೆ ಮತ್ತು ಕೈಗೆ ಎಟಕುವಂತೆ ನೀರಿನ ಒಂದು ಪಾರದರ್ಶಕ ಸೀಸೆಯನ್ನು ಇಟ್ಟುಕೊಳ್ಳುತ್ತಾರೆ—ದಿನದ ಆದ್ಯಂತ ನಿಯತಕಾಲಿಕವಾಗಿ ಒಂದು ಗುಟುಕನ್ನು ಕುಡಿಯಲಿಕ್ಕಾಗಿರುವ ಒಂದು ಮರುಜ್ಞಾಪನ. ನೀವು ಬಳಸುವ ವಿಧಾನವು ಯಾವುದೇ ಆಗಿರಲಿ, ನಿರ್ಮಲ, ಶುದ್ಧವಾದ ನೀರನ್ನು ಬಹಳಷ್ಟು ಪ್ರಮಾಣದಲ್ಲಿ ಕುಡಿಯುವುದು, ನಿಮ್ಮ ಮೂತ್ರಜನಕಾಂಗಗಳಿಗೆ—ನಿಮ್ಮನ್ನು ಜೀವಂತವಾಗಿ ಇಡುವ ಅದ್ಭುತಕರ ಶೋಧಕ—ಗಣ್ಯತೆಯನ್ನು ತೋರಿಸುವ ಒಂದು ಉತ್ತಮ ವಿಧವಾಗಿದೆ.
[ಅಧ್ಯಯನ ಪ್ರಶ್ನೆಗಳು]
a 1840ಗಳ ಆದಿಭಾಗದಲ್ಲಿ, ಇಂಗ್ಲೆಂಡ್ನ ಶಸ್ತ್ರಚಿಕಿತ್ಸಕ ಹಾಗೂ ಊತಕಶಾಸ್ತ್ರಜ್ಞನಾದ ವಿಲಿಯಮ್ ಬೌಮನ್, ಈ ಸಣ್ಣ ಕೋಶವನ್ನು ಮತ್ತು ಅದರ ಕಾರ್ಯವನ್ನು ವರ್ಣಿಸಿದನು. ಅದಕ್ಕೆ ಅವನ ಹೆಸರನ್ನಿಡಲಾಯಿತು.
b ಅವೇಕ್! ಪತ್ರಿಕೆಯ ಸಂಚಿಕೆಗಳಾದ ಆಗಸ್ಟ್ 22, 1993, 20-22ನೆಯ ಪುಟಗಳು, ಮತ್ತು ಮಾರ್ಚ್ 8, 1986, 18ನೆಯ ಪುಟವನ್ನು ನೋಡಿರಿ.
[ಪುಟ 36 ರಲ್ಲಿರುವ ಚೌಕ]
ನೆಫ್ರಾನ್—ಸೋಸುವಿಕೆಯ ಮೂಲಭೂತ ಘಟಕ
ಪ್ರತಿಯೊಂದು ಮೂತ್ರಜನಕಾಂಗದಲ್ಲಿ ಹತ್ತು ಲಕ್ಷಕ್ಕಿಂತಲೂ ಹೆಚ್ಚಿನ ನೆಫ್ರಾನ್ಗಳು ಇವೆ. ಪ್ರತಿಯೊಂದು ನೆಫ್ರಾನ್ನೊಳಗೆ ಕಂಡುಕೊಳ್ಳಲ್ಪಡುವ ನಾಳಾಕಾರದ ವ್ಯವಸ್ಥೆಯ ಸರಾಸರಿಯು, ಸುಮಾರು ಮೂರು ಸೆಂಟಿಮೀಟರುಗಳಷ್ಟು ಉದ್ದ ಹಾಗೂ ಕೇವಲ 0.05 ಮಿಲಿಮೀಟರುಗಳಷ್ಟು ಅಗಲವಾಗಿದೆ. ಆದರೂ, ಒಂದೇ ಒಂದು ಮೂತ್ರಜನಕಾಂಗದ ಎಲ್ಲ ನಾಳಗಳನ್ನು ಅನಾವರಣಗೊಳಿಸುವುದು ಸಾಧ್ಯವಾಗಿರುತ್ತಿದ್ದರೆ, ಅವು ಸುಮಾರು 30 ಕಿಲೊಮೀಟರುಗಳಷ್ಟು ದೂರಕ್ಕೆ ವಿಸ್ತರಿಸುತ್ತಿದ್ದವು!
ಬೌಮನ್ ಕೋಶವು, ವಾಸ್ತವದಲ್ಲಿ ನೆಫ್ರಾನ್ನ ಸುರುಳಿ ಸುತ್ತಿಕೊಂಡಿರುವ ನಾಳದ ಅಧಿಕೃತ ಕೊನೆಯಾಗಿದೆ. ಈ ನಾಳವು, ಲೋಮನಾಳಗಳು ಎಂಬುದಾಗಿ ಕರೆಯಲ್ಪಡುವ ಬಹಳ ಸೂಕ್ಷ್ಮವಾದ ರಕ್ತನಾಳಗಳ ಒಂದು ಜಾಲದಿಂದ ಸುತ್ತುವರಿಯಲ್ಪಟ್ಟಿದೆ. ನಾಳವು ದೊಡ್ಡದಾದ ಶೇಖರಿಸುವ ನಳಿಕೆಯಲ್ಲಿ ಹೋಗಿ ಸೇರುತ್ತದೆ. ಈ ನಳಿಕೆಯು, ನೆಫ್ರಾನ್ನಿಂದ ಸೋಸಿ ತೆಗೆಯಲ್ಪಟ್ಟ ಅನುಪಯುಕ್ತ ಹಾಗೂ ವಿಷಕಾರಿ ಪದಾರ್ಥಗಳನ್ನು ಕೊಂಡ್ಯೊಯುತ್ತದೆ.
[Diagram on page 25]
ರೀನಲ್ ಅಭಿಧಮನಿಯು ಹೊಸದಾಗಿ ಸೋಸಲ್ಪಟ್ಟ ರಕ್ತವನ್ನು ದೇಹದೊಳಕ್ಕೆ ಕೊಂಡೊಯ್ಯುತ್ತದೆ
ರೀನಲ್ ಅಪಧಮನಿಯು ಸೋಸಲ್ಪಡದ ರಕ್ತವನ್ನು ಮೂತ್ರಜನಕಾಂಗಕ್ಕೆ ಕೊಂಡೊಯ್ಯುತ್ತದೆ
ರೀನಲ್ ಪಿರಮಿಡ್ಗಳು, ಮೂತ್ರವನ್ನು ರೀನಲ್ ಪೆಲ್ವಿಸ್ನೊಳಗೆ ಬಿಡುಗಡೆ ಮಾಡುವ ಶಂಕುವಿನಾಕಾರದ ರಚನೆಗಳಾಗಿವೆ
ಕಾರ್ಟಿಕ್ಸ್ (ತೊಗಟೆ)ನಲ್ಲಿ ಪ್ರತಿಯೊಂದು ನೆಫ್ರಾನ್ನ ಗ್ಲಾಮೆರುಲಸ್ ಇದೆ
ರೀನಲ್ ಪೆಲ್ವಿಸ್ ಮೂತ್ರವನ್ನು ಶೇಖರಿಸುವ ಮತ್ತು ಅದನ್ನು ಮೂತ್ರನಾಳಕ್ಕೆ ಸಾಗಿಸುವ ಒಂದು ನಳಿಕೆಯಾಗಿದೆ
ಮೂತ್ರನಾಳವು ಮೂತ್ರವನ್ನು ಮೂತ್ರಜನಕಾಂಗದಿಂದ ಮೂತ್ರಕೋಶಕ್ಕೆ ಸಾಗಿಸುತ್ತದೆ
[Diagram on page 25]
ನೆಫ್ರಾನ್ಗಳು—ಸುಮಾರು 20 ಲಕ್ಷ ಸೂಕ್ಷ್ಮದರ್ಶಕೀಯ ನಾಳಾಕಾರದ ಶೋಧಕಗಳು—ರಕ್ತವನ್ನು ಶುಚಿಗೊಳಿಸುತ್ತವೆ
ಬೌಮನ್ನನ ಕೋಶ
ಗ್ಲಾಮೆರುಲಸ್
ಮೂತ್ರವು ಸುರುಳಿ ಸುತ್ತಿಕೊಂಡಿರುವ ನಾಳದಿಂದ ಶೇಖರಿಸಲ್ಪಟ್ಟು, ಅನಂತರ ಮೂತ್ರಕೋಶಕ್ಕೆ ಹೋಗುತ್ತದೆ
ರಕ್ತನಾಳಗಳು