ನದೀತೀರದ ರತ್ನಗಳು
ಸ್ಪೆಯ್ನ್‌ನ ಎಚ್ಚರ! ಸುದ್ದಿಗಾರರಿಂದ
ನಾನು ಒಂದು ನದಿ ಅಥವಾ ಕೊಳದ ಪಕ್ಕದಲ್ಲಿ ಸುತ್ತಾಡುತ್ತಿರುವಾಗಲೆಲ್ಲಾ, ನನ್ನ ಅಚ್ಚುಮೆಚ್ಚಿನ ರತ್ನಗಳಲ್ಲಿ ಒಂದಕ್ಕಾಗಿ—ಅದು ಕೆಂಪು, ನೀಲಿ, ಅಥವಾ ಹಸಿರು ಬಣ್ಣದ್ದಾಗಿರಬಹುದು—ತಪ್ಪದೆ ಹುಡುಕುತ್ತೇನೆ. ಕೆಲವೊಮ್ಮೆ ನಾನು ಎಲೆಯೊಂದರ ಮೇಲೆ ಒಂದು ರತ್ನವು ಅಚಲವಾಗಿ ಬಿದ್ದಿರುವುದನ್ನು ನೋಡುತ್ತೇನೆ; ಇನ್ನೊಂದು, ನೀರಿನ ಮೇಲೆ ಸುಳಿದಾಡುತ್ತಿರುವುದನ್ನು ಅಥವಾ ನನ್ನ ಮುಂದೆ ಥಟ್ಟನೆ ನುಗ್ಗುವುದನ್ನೂ ನಾನು ನೋಡಬಹುದು. ನಾನು ಹುಡುಕುವಂತಹ ರತ್ನವು, ಪೀಟಿಹುಳ (ಡ್ರಾಗನ್ ಫ್ಲೈ)—ಕೀಟ ಜಗತ್ತಿನ ಮಿಂಚಿನಂಥ “ಹೆಲಿಕಾಪ್ಟರ್”—ಆಗಿದೆ.
ಅನೇಕ ವರ್ಷಗಳ ಹಿಂದೆ, ಅಡವಿಯಲ್ಲಿ ನಿಧಾನಗತಿಯಲ್ಲಿ ಹರಿಯುತ್ತಿದ್ದ ಒಂದು ಹೊಳೆಯನ್ನು ಅನಿರೀಕ್ಷಿತವಾಗಿ ನೋಡಿದಾಗ, ಈ ಹಾರಾಡುವ ಅಮೂಲ್ಯ ಹರಳುಗಳು ಪ್ರಥಮ ಸಲ ನನ್ನ ಗಮನವನ್ನು ಸೆರೆಹಿಡಿದವು. ಹಲವಾರು ಡ್ರಾಗನ್ ಫ್ಲೈಗಳು—ಕೆಲವು ಉಜ್ವಲವಾದ ಲೋಹದಂತಹ ನೀಲಿ ಬಣ್ಣದವುಗಳು ಮತ್ತು ಇತರ ಹುಳುಗಳು ಬಹಳ ಪ್ರಕಾಶಮಾನವಾದ ಹಸುರು ಮಿಶ್ರ ಹಳದಿ ಬಣ್ಣದವುಗಳು—ಸೂರ್ಯನ ಬೆಳಕಿನಲ್ಲಿ ಒಳಗೂ ಹೊರಗೂ ಹಾರಾಡುತ್ತಾ ಇದ್ದವು. ಕಾಡಿನ ಬಯಲುಹಾದಿಯನ್ನು ಒಂದು ಚಿಕ್ಕ ನೃತ್ಯಮಂದಿರವಾಗಿ ಪರಿವರ್ತಿಸಿದ ಅವುಗಳ ವಾಯವೀಯ ನೃತ್ಯಗಳನ್ನು ಅವಲೋಕಿಸುತ್ತಾ, ನಾನು ಒಂದು ತಾಸನ್ನು ಕಳೆದೆ. ಅಂದಿನಿಂದ ಅವು ನನ್ನ ಕುತೂಹಲವನ್ನು ಕೆರಳಿಸಿವೆ.
ಡ್ರಾಗನ್ ಫ್ಲೈಗಳ ಕುರಿತಾಗಿ ನಾನು ಹೆಚ್ಚನ್ನು ಕಲಿತಷ್ಟು, ಅವುಗಳ ಸೌಂದರ್ಯ ಮತ್ತು ಮೌಲ್ಯವನ್ನು ನಾನು ಇನ್ನು ಹೆಚ್ಚು ಗಣ್ಯಮಾಡಲಾರಂಭಿಸಿದೆ. ಡ್ರಾಗನ್ ಫ್ಲೈಗಳು ಮತ್ತು ಡ್ಯಾಮ್ಸಲ್ ಫ್ಲೈ (ಕೆನ್ನೆನೊಣ)ಗಳ ನಡುವೆ ಒಂದು ವ್ಯತ್ಯಾಸವಿದೆಯೆಂಬುದು ನನ್ನ ಪ್ರಥಮ ಕಂಡುಹಿಡಿತವಾಗಿತ್ತು. ಡ್ರಾಗನ್ ಫ್ಲೈಗಳು ಶಕ್ತಿಶಾಲಿ ಹಾರಾಟಗಾರರು ಮತ್ತು ಸಾಮಾನ್ಯವಾಗಿ ಹೆಚ್ಚು ದೊಡ್ಡ ಗಾತ್ರದವುಗಳು ಆಗಿವೆ. ಆದರೆ ಡ್ಯಾಮ್ಸಲ್ ಫ್ಲೈಗಳು—ಅವುಗಳ ಹೆಸರು ಸೂಚಿಸುವಂತೆ—ಇನ್ನೂ ಹೆಚ್ಚಿನ ಪುಕ್ಕಲು ಹಾರಾಟದೊಂದಿಗೆ ಹೆಚ್ಚು ನಾಜೂಕು ಆಗಿರುತ್ತವೆ. ಒಂದು ಪ್ರಧಾನ ವ್ಯತ್ಯಾಸವು, ಅವು ತಮ್ಮ ರೆಕ್ಕೆಗಳನ್ನು ಎತ್ತಿಹಿಡಿಯುವ ವಿಧದೊಂದಿಗೆ ಸಂಬಂಧಿಸಿರುತ್ತದೆ. ವಿರಮಿಸುತ್ತಿರುವ ಒಂದು ಡ್ರಾಗನ್ ಫ್ಲೈ ಸಾಮಾನ್ಯವಾಗಿ ರೆಕ್ಕೆಗಳ ಎರಡೂ ಜೋಡಿಗಳನ್ನು ಸಮಮಟ್ಟದಲ್ಲಿ ಎತ್ತಿಹಿಡಿಯುತ್ತದೆ, ಆದರೆ ಒಂದು ಡ್ಯಾಮ್ಸಲ್ ಫ್ಲೈ ಅವುಗಳನ್ನು ತನ್ನ ದೇಹದ ಮೇಲೆ ಜೊತೆಯಾಗಿ ಮಡಚಿಕೊಳ್ಳುತ್ತದೆ.a
ಡ್ರಾಗನ್ ಫ್ಲೈಗಳು, ಗಾಳಿಯಿಂದ ಸೊಳ್ಳೆಗಳನ್ನು ಅಷ್ಟೊಂದು ಸುಲಭವಾಗಿ ಹೇಗೆ ಹಿಡಿಯಸಾಧ್ಯವಿದೆಯೆಂದು ನಾನು ಕುತೂಹಲಪಡಲಾರಂಭಿಸಿದೆ. ವೈಯಕ್ತಿಕವಾಗಿ ನಾನು, ಅಡಿಗೆಕೋಣೆಯ ಗೋಡೆಯ ಮೇಲೆ ಹಾಯಾಗಿ ಕುಳಿತುಕೊಂಡಿರುವ ಒಂದು ದೊಡ್ಡ ನೊಣವನ್ನು ಜಜ್ಜಿಬಡಿಯುವುದು ಬಹುಮಟ್ಟಿಗೆ ಅಸಾಧ್ಯವೆಂಬುದನ್ನು ಕಂಡುಕೊಳ್ಳುತ್ತೇನೆ. ‘ನನ್ನಲ್ಲಿರದಂತಹ ಯಾವ ವಿಷಯವು ಡ್ರಾಗನ್ ಫ್ಲೈನಲ್ಲಿದೆ?’ ಎಂದು ನನ್ನನ್ನೇ ಕೇಳಿಕೊಂಡೆ. ಎರಡು ವಿಷಯಗಳಿವೆ: ಗಾಳಿಯ ಮೇಲೆ ಪೂರ್ಣ ಪ್ರವೀಣತೆ, ಮತ್ತು ಒಬ್ಬ ಕಾವಲುಗಾರನು ತುಂಬ ಮತ್ಸರಪಡುವಂತೆ ಮಾಡಬಹುದಾದ ಕಣ್ಣುಗಳು.
ಡ್ರಾಗನ್ ಫ್ಲೈಯ ಹಾರಾಟ
ಒಂದು ಡ್ರಾಗನ್ ಫ್ಲೈಯನ್ನು ಹೆಲಿಕಾಪ್ಟರ್—ಸ್ಪೆಯ್ನ್‌ನಲ್ಲಿ ಒಂದು ಸಾಮಾನ್ಯವಾದ ಅಡ್ಡಹೆಸರು—ಎಂದು ಕರೆಯುವುದು ನಿಜವಾಗಿಯೂ ಕೀಳ್ಮಾಡುವಂತಹ ಹೋಲಿಕೆಯಾಗಿದೆ. ಅವುಗಳ ವಾಯವೀಯ ಚಳಕಗಳು ಎಷ್ಟು ತ್ವರಿತವಾಗಿವೆಯೆಂದರೆ, ಕೆಲವೊಮ್ಮೆ ಕಣ್ಣಿಗೆ ಅವುಗಳನ್ನು ಹಿಂಬಾಲಿಸಿಕೊಂಡು ಹೋಗುವುದು ಅಸಾಧ್ಯವಾಗಿರುತ್ತದೆ. ಕೆಲವು ಜಾತಿಗಳ ಹುಳುಗಳು ಸಂಕ್ಷಿಪ್ತ ನುಗ್ಗುವಿಕೆಗಳಲ್ಲಿ, ಪ್ರತಿ ತಾಸಿಗೆ ಸುಮಾರು 55 ಕಿಲೊಮೀಟರುಗಳಷ್ಟು ಅತ್ಯಂತ ಮೇಲ್ಮಟ್ಟದ ವೇಗವನ್ನು ತಲಪಬಲ್ಲವು. ಅವು ಒಂದೇ ಕ್ಷಣದಲ್ಲಿ, ಹಿಮ್ಮೊಗವಾಗಿ, ಮುಂದಕ್ಕೆ, ಅಥವಾ ಓರೆಯಾಗಿ ಸುಳಿದಾಡಬಲ್ಲವು ಅಥವಾ ಹಾರಾಡಬಲ್ಲವು ಕೂಡ. ಇನ್ನೂ ಹೆಚ್ಚಾಗಿ, ಒಂದು ಡ್ರಾಗನ್ ಫ್ಲೈ ಗಾಳಿಯಲ್ಲಿ ಒಂದು ಕಡಿದಾದ ತಿರುವನ್ನು ಮಾಡುವಾಗ, ಅದು 2.5 ಜಿ (ಗುರುತ್ವಾಕರ್ಷಣೆಯ ಏಕಮಾನ)ಗಳಷ್ಟು ಶಕ್ತಿಯನ್ನು ತಡೆದುಕೊಳ್ಳಬೇಕೆಂದು ವಿಜ್ಞಾನಿಗಳು ಲೆಕ್ಕಹಾಕುತ್ತಾರೆ.
ಡ್ರಾಗನ್ ಫ್ಲೈಗಳಿಗೆ ಸುಲಭವಾಗಿ ಬಾಗುವ, ಲೇಸ್‌ನಂತಹ ಎರಡು ಜೋಡಿ ರೆಕ್ಕೆಗಳಿವೆ. ಈ ರೆಕ್ಕೆಗಳು ನವಿರಾಗಿ ತೋರುವುದಾದರೂ, ಅವು ಒಂದು ಸೆಕೆಂಡಿಗೆ ಸುಮಾರು 40 ಬಾರಿ ಒಂದೇ ಸವನೆ ಬಡಿದುಕೊಳ್ಳಬಲ್ಲವು ಮತ್ತು ಕನಿಷ್ಠ ಪರಿಮಾಣದ ಹಾನಿಯೊಂದಿಗೆ ಏಟುಗಳನ್ನು ತಡೆದುಕೊಳ್ಳಬಲ್ಲವು. ಜೀವವಿಜ್ಞಾನಿ ರಾಬಿನ್ ಜೆ. ವೂಟನ್ ಅವುಗಳನ್ನು, “ಚತುರವಾದ ವಿನ್ಯಾಸದ ಚಿಕ್ಕ ಕೌಶಲಕೃತಿಗಳು” ಎಂದು ವರ್ಣಿಸುತ್ತಾನೆ.
“ಕೀಟ ರೆಕ್ಕೆಗಳ ಕಾರ್ಯವನ್ನು ನಾವು ಹೆಚ್ಚು ಉತ್ತಮವಾಗಿ ತಿಳಿದಷ್ಟು, ಅವುಗಳ ವಿನ್ಯಾಸಗಳು ಅಷ್ಟೇ ಹೆಚ್ಚು ನವಿರಾಗಿ ಮತ್ತು ಸುಂದರವಾಗಿ ತೋರಿಬರುತ್ತವೆ. . . . ಅವುಗಳಿಗೆ ಯಾವುದೇ ತಾಂತ್ರಿಕ ಸಮಾಂತರಗಳಿರುವಲ್ಲಿ ಅವು ಕೊಂಚವೆ.” ಪ್ರಸ್ತುತದಲ್ಲಿ, ವಾಯುಯಾನದ ಇಂಜಿನೀಯರ್‌ಗಳು ಡ್ರಾಗನ್ ಫ್ಲೈಗಳ ಹಾರಾಟ ತಾಂತ್ರಿಕತೆಗಳನ್ನು ಅಧ್ಯಯನಿಸುತ್ತಿರುವುದು ಆಶ್ಚರ್ಯಕರ ಸಂಗತಿಯಲ್ಲ.
ತಲೆತುಂಬ ಕಣ್ಣುಗಳು
ಡ್ರಾಗನ್ ಫ್ಲೈಯ ಹಾರಾಟವು ಅಸಾಮಾನ್ಯವಾದದ್ದು ಆಗಿರುವುದಾದರೆ, ಅದರ ದೃಷ್ಟಿಶಕ್ತಿಯು ಅಷ್ಟೇ ಅಸಾಮಾನ್ಯವಾದುದಾಗಿದೆ. ಎರಡು ದೊಡ್ಡದಾದ ಸಂಯುಕ್ತ ಕಣ್ಣುಗಳು ಡ್ರಾಗನ್ ಫ್ಲೈಯ ತಲೆಯನ್ನು ಬಹುಮಟ್ಟಿಗೆ ಮುಚ್ಚಿಬಿಡುತ್ತವೆ. ಈ ಕಣ್ಣುಗಳಲ್ಲಿ ಪ್ರತಿಯೊಂದಕ್ಕೆ, ಸುಮಾರು 30,000 ಷಟ್ಕೋಣೀಯ ಘಟಕಗಳಿವೆ. ಇವುಗಳಲ್ಲಿ ಪ್ರತಿಯೊಂದು, ಮಿದುಳಿಗೆ ಒಂದು ಪ್ರತ್ಯೇಕವಾದ ಬಿಂಬವನ್ನು ರವಾನಿಸುವುದರಿಂದ, ಇವು ಒಂದು ಕಣ್ಣಿನೊಳಗೆ ಪುಟ್ಟ ಕಣ್ಣುಗಳಂತಿವೆ. ಆದರೆ, ಒಂದು ಡ್ರಾಗನ್ ಫ್ಲೈ ಒಂದೇ ಸಮಯದಲ್ಲಿ ಸಾವಿರಾರು ವಿಭಿನ್ನ ಚಿತ್ರಗಳನ್ನು ನೋಡುತ್ತದೆಂದು ಇದರ ಅರ್ಥವಲ್ಲ. ನಾವು ನೋಡುವಂತೆ, ಒಂದು ಸಂಪೂರ್ಣ ಚಿತ್ರವನ್ನು ನೋಡುವ ಬದಲಿಗೆ, ಅದು ಚಲನವಲನಗಳು, ನಮೂನೆಗಳು, ವ್ಯತ್ಯಾಸಗಳು, ಮತ್ತು ಆಕಾರಗಳನ್ನು ಗ್ರಹಿಸುತ್ತದೆ.
ಆ ಎಲ್ಲಾ ಬಿಂಬಗಳ ವಿಶ್ಲೇಷಣೆಯು ಅಗತ್ಯ. ಹೀಗೆ, ಒಂದು ಡ್ರಾಗನ್ ಫ್ಲೈಯ ಮಿದುಳಿನ 80 ಪ್ರತಿಶತ ಭಾಗವು, ದೃಶ್ಯ ಮಾಹಿತಿಯನ್ನು ನಿರ್ಧರಿಸಲು ಮೀಸಲಾಗಿದೆ. ಕೆಲವೇ ದೃಷ್ಟಿ ವ್ಯವಸ್ಥೆಗಳು ಇಷ್ಟು ಸೂಕ್ಷ್ಮಸಂವೇದನೀಯವಾಗಿವೆ—ಒಂದು ಡ್ರಾಗನ್ ಫ್ಲೈ, ಸೊಳ್ಳೆಯೊಂದು ಸುಮಾರು 20 ಮೀಟರ್‌ಗಳಷ್ಟು ದೂರದಲ್ಲಿರುವಾಗಲೇ ಅದನ್ನು ಪತ್ತೆಹಚ್ಚಬಲ್ಲದು. ಒಬ್ಬ ಮಾನವ ಪ್ರೇಕ್ಷಕನು ಪುಟ್ಟ ನೊಣಗಳನ್ನು ನೋಡಲಾರದಷ್ಟು ಮಬ್ಬಾದ ಬೆಳಕಿರುವಂತಹ, ಮುಂಗತ್ತಲಿನ ಸಮಯದಲ್ಲೂ ಉಷ್ಣವಲಯದ ಡ್ರಾಗನ್ ಫ್ಲೈಗಳು ಅವುಗಳನ್ನು ಸುಲಭವಾಗಿ ಸೆರೆಹಿಡಿಯುತ್ತವೆ.
ನದೀತೀರದಲ್ಲಿರುವ ಸಸ್ಯಗಳ ಮಧ್ಯದಿಂದ ಒಂದು ಡ್ರಾಗನ್ ಫ್ಲೈಯ ಕ್ಷಿಪ್ರವಾದ, ಥಟ್ಟನೆ ಮುನ್ನುಗ್ಗುವ ಹಾರಾಟವು, ಕ್ಷಣಾರ್ಧದ ನೂರಾರು ನಿರ್ಣಯಗಳನ್ನು ಅವಶ್ಯಪಡಿಸುತ್ತದೆ. ಅದು ಈ ಕಷ್ಟಸಾಧ್ಯ ಕೆಲಸವನ್ನು ನಿರ್ವಹಿಸಬಲ್ಲದು ಯಾಕಂದರೆ ಅದು ಒಂದು ಸೆಕೆಂಡಿಗೆ ಸುಮಾರು ನೂರು ವಿಭಿನ್ನ ಬಿಂಬಗಳನ್ನು ನೋಡಸಾಧ್ಯವಿದೆ. ಇದು ನಾವು ನೋಡಸಾಧ್ಯವಿರುವುದಕ್ಕಿಂತಲೂ ಐದು ಪಟ್ಟು ಹೆಚ್ಚು. ಹೀಗೆ, ಒಂದು ಸೆಕೆಂಡಿಗೆ 24 ಬಿಂಬಗಳನ್ನು ರಚಿಸುವ ಒಂದು ಚಲನಚಿತ್ರವು, ಒಂದು ಡ್ರಾಗನ್ ಫ್ಲೈಗೆ, ಸ್ತಬ್ಧ ಛಾಯಾಚಿತ್ರಗಳ ಸರಣಿಯಾಗಿ ಮಾತ್ರ ತೋರುವುದು.
ಜೀವನ ಶೈಲಿಯ ಬದಲಾವಣೆ
ಒಂದು ಡ್ರಾಗನ್ ಫ್ಲೈ ಅದರ ಜೀವನವನ್ನು ಆರಂಭಿಸುವಾಗ, ಅದು ಕಟ್ಟಕಡೆಗೆ ಆಗಲಿರುವ ಆಕರ್ಷಕ ನಿಪುಣ ಹಾರಾಟಗಾರನ ಯಾವ ಸೂಚನೆಯೂ ಇರುವುದಿಲ್ಲ. ಮೊಟ್ಟೆಯಿಂದ ಹೊರಗೆ ಬಂದ ಅನಂತರ, ಆ ಜಲಚರ ಮರಿಹುಳು, ಅದು ಎಟುಕುವಷ್ಟು ಹತ್ತಿರ ಬರುವ ಯಾವುದೇ ಆಹಾರವನ್ನು ಫಕ್ಕನೆ ಕಸಿದುಕೊಳ್ಳಲು ಕಾಯುತ್ತಾ, ಒಂದು ಕೊಳ ಅಥವಾ ಹೊಳೆಯಲ್ಲಿ ಹೆಚ್ಚುಕಡಿಮೆ ಅಚಲವಾಗಿ ಉಳಿಯುತ್ತದೆ. ಚರ್ಮದ ಅನೇಕ ಮಾರ್ಪಾಟುಗಳ ಅನಂತರ—ಕೆಲವು ಜಾತಿಗಳ ವಿಷಯದಲ್ಲಿ ಹಲವಾರು ತಿಂಗಳುಗಳು ಅಥವಾ ವರುಷಗಳ ಅನಂತರವೂ—ಮರಿಹುಳು ಒಂದು ಜವುಗು ಸಸ್ಯದ ಮೇಲೆ ಹತ್ತುತ್ತದೆ. ಅಲ್ಲಿ, ಒಂದು ಅಸಾಮಾನ್ಯವಾದ ರೂಪಾಂತರವು ಸಂಭವಿಸುತ್ತದೆ.
ಮುಂಡ ಭಾಗದ ಉದ್ದಕ್ಕೂ ಚರ್ಮವು ಸೀಳುತ್ತದೆ, ಮತ್ತು ಪೂರ್ಣವಾಗಿ ಬೆಳೆದಿರುವ ಡ್ರಾಗನ್ ಫ್ಲೈ ಹೊರನುಸುಳುತ್ತದೆ. ಒಂದು ಚಿಟ್ಟೆಯಂತೆ, ಹೊಸತಾಗಿ ಹೊರಬಂದಿರುವ ವಯಸ್ಕ ಡ್ರಾಗನ್ ಫ್ಲೈ, ತನ್ನ ರೆಕ್ಕೆಗಳು ಒರಟಾಗುವ ಮತ್ತು ಒಂದು ಹೊಸ ಜೀವನವು ಆರಂಭವಾಗುವ ಮುಂಚೆ ಕೆಲವು ತಾಸುಗಳ ವರೆಗೆ ಕಾಯಬೇಕು. ಕೆಲವು ದಿನಗಳೊಳಗೆ, ಅದರ ಸಹಜಪ್ರವೃತ್ತಿಯ ವಿವೇಕವು, ಅದು ಯಶಸ್ವಿಯಾಗಿ ಬೇಟೆಯಾಡಲು ಮತ್ತು ಹಾರಾಟದ ಕ್ಲಿಷ್ಟತೆಗಳ ಪ್ರವೀಣತೆ ಪಡೆಯಲು ಅದನ್ನು ಶಕ್ತಗೊಳಿಸುತ್ತದೆ.
ಬೇಗನೆ, ಆ ಎಳೆಯ ಡ್ರಾಗನ್ ಫ್ಲೈ, ಹಾರಾಡುತ್ತಿರುವಾಗಲೇ ನೊಣಗಳನ್ನು ಮತ್ತು ಸೊಳ್ಳೆಗಳನ್ನು ಹಿಡಿಯುವುದರಲ್ಲಿ ನಿಪುಣವಾಗುತ್ತದೆ. ಪ್ರತಿ ದಿನ, ಅದರ ಸ್ವಂತ ತೂಕದಷ್ಟೇ ಭಾರವುಳ್ಳ ಕೀಟಗಳನ್ನು ಕಬಳಿಸುತ್ತಾ, ಅದು ಒಂದು ಅತ್ಯಮೂಲ್ಯ ಸೇವೆಯನ್ನು ಮಾಡುತ್ತದೆ. ಆಹಾರದ ಖಾತರಿಯುಳ್ಳ ಸರಬರಾಯಿಯನ್ನು ಖಚಿತಪಡಿಸಿಕೊಳ್ಳಲು, ಅನೇಕ ಗಂಡು ಡ್ರಾಗನ್ ಫ್ಲೈಗಳು, ಅವು ಉತ್ಸುಕತೆಯಿಂದ ಕಾವಲುಕಾಯುವ ಚಿಕ್ಕ ಟೆರಿಟೊರಿಗಳನ್ನು ತಮ್ಮದಾಗಿ ಸಾಧಿಸುತ್ತವೆ.
ಡ್ರಾಗನ್ ಫ್ಲೈಗಳ ಕೆಲವು ಜಾತಿಗಳು, ಆ್ಯಫಿಡ್ (ಗಿಡಹೇನು)ಗಳನ್ನು ಅಥವಾ ಜೀರುಂಡೆಗಳನ್ನು ಬೇಟೆಯಾಡುತ್ತವೆ, ಇತರ ಜಾತಿಗಳು ಚಿಕ್ಕ ಕಪ್ಪೆಗಳನ್ನು ಹಿಡಿಯುತ್ತವೆ, ಮತ್ತು ಉಷ್ಣವಲಯದ ಒಂದು ಡ್ಯಾಮ್ಸಲ್ ಫ್ಲೈ ಜೇಡರಹುಳುಗಳನ್ನೂ ತಿನ್ನುತ್ತದೆ. ಅದು ಒಂದು ದೊಡ್ಡ ವರ್ತುಲ ಜೇಡರಹುಳುವಿನ ಬಲೆಯ ಸುತ್ತಲೂ ಸುಳಿದಾಡಿ, ಆ ಜೇಡರಬಲೆಯ ಒಡೆಯನು ಬಿಟ್ಟುಹೋಗಿರುವ ಆಹಾರದ ತುಣುಕುಗಳನ್ನು ತಿನ್ನಲು ಆ ಬಲೆಗೆ ಭೇಟಿನೀಡುವ ಚಿಕ್ಕ ಜೇಡರಹುಳುಗಳನ್ನು ಫಕ್ಕನೆ ಹಿಡಿದುಬಿಡುತ್ತದೆ.
ವಿಕಾಸವಾದದ ವಿರುದ್ಧ ಪುರಾವೆ
ವಿಕಾಸವಾದದ ಅನೇಕ ವಿಜ್ಞಾನಿಗಳು, ಡ್ರಾಗನ್ ಫ್ಲೈಗಳನ್ನು, ಅತಿ ಆರಂಭದ ಹಾರಾಡುವ ಕೀಟಗಳಾಗಿ ಪರಿಗಣಿಸುತ್ತಾರೆ. ಫ್ರಾನ್ಸ್‌ನಲ್ಲಿ ಕಂಡುಹಿಡಿಯಲ್ಪಟ್ಟ ಒಂದು ಪಳೆಯುಳಿಕೆಯು, 75 ಸೆಂಟಿಮೀಟರುಗಳ ರೆಕ್ಕೆವ್ಯಾಪ್ತಿಯಿದ್ದ ಒಂದು ಡ್ರಾಗನ್ ಫ್ಲೈಯ ರೆಕ್ಕೆಗಳ ಅಚ್ಚೊತ್ತುವಿಕೆಯಾಗಿದೆ! ಜೀವಿಸುತ್ತಿರುವ ಯಾವುದೇ ಡ್ರಾಗನ್ ಫ್ಲೈಯ ಗಾತ್ರಕ್ಕಿಂತ ಮೂರು ಪಟ್ಟು ಹೆಚ್ಚು ದೊಡ್ಡದ್ದಾಗಿದ್ದು, ಅದು ಜ್ಞಾತವಾಗಿರುವ ಅತಿ ದೊಡ್ಡ ಕೀಟವಾಗಿದೆ.
ನಾನು ಹೀಗೆ ಕೇಳಿಕೊಂಡೆ, ‘ಮನುಷ್ಯನಿಗೆ ಗೊತ್ತಿರುವ ಅತಿ ಜಟಿಲವಾದ ಹಾರಾಟ ಯಂತ್ರರಚನೆಗಳಲ್ಲಿ ಒಂದು, ಪರಿಪೂರ್ಣವಾಗಿ ವಿಕಾಸಗೊಂಡು ತೋರಿಬರುವುದು ಹೇಗೆ ಸಾಧ್ಯ?’ “ರೆಕ್ಕೆಯಿಲ್ಲದ ಮತ್ತು ರೆಕ್ಕೆಯಿರುವ ಸ್ಥಿತಿಯ ನಡುವೆ ಮಧ್ಯವರ್ತಿಯಾಗಿರುವ ಕೀಟಗಳ ಯಾವುದೇ ಪಳೆಯುಳಿಕೆಗಳು ಇಲ್ಲ” ಎಂದು ಅನ್ಯ ಸಾಮ್ರಾಜ್ಯ—ಕೀಟಗಳ ಜೀವಿತಗಳ ಕುರಿತ ಒಂದು ಪರಿಶೋಧನೆ (ಇಂಗ್ಲಿಷ್) ಎಂಬ ಪುಸ್ತಕವು ಒಪ್ಪಿಕೊಳ್ಳುತ್ತದೆ. ಡ್ರಾಗನ್ ಫ್ಲೈಗಳು ಬುದ್ಧಿಶಕ್ತಿಯುಳ್ಳ ಕುಶಲ ವಿನ್ಯಾಸಕನ ಕೈಕೆಲಸವಾಗಿವೆಯೆಂಬುದು ವ್ಯಕ್ತವಾಗುತ್ತದೆ.
ಡ್ರಾಗನ್ ಫ್ಲೈಗಳು, ಭೂಗೋಲದ ಬಹುಮಟ್ಟಿಗೆ ಪ್ರತಿಯೊಂದು ಭಾಗದಲ್ಲಿ ಸಫಲಪೂರ್ವಕವಾಗಿ ನೆಲಸುನಾಡನ್ನು ಸ್ಥಾಪಿಸಿವೆ. ಅವು, ಒಂದು ಉನ್ನತಪರ್ವತ ಪ್ರದೇಶದ ಸರೋವರ, ಸಮಭಾಜಕವೃತ್ತದ ಒಂದು ಜೌಗುಪ್ರದೇಶ ಅಥವಾ ಹೊರವಲಯದ ಒಂದು ಈಜುಕೊಳವನ್ನೂ ಒಂದು ಯೋಗ್ಯವಾದ ಇರುನೆಲೆಯಾಗಿ ಕಂಡುಕೊಳ್ಳುವವು.
ನಾನು ಆಫ್ರಿಕದಲ್ಲಿನ ಉಷ್ಣವಲಯದ ಒಂದು ಸಮುದ್ರತೀರದಲ್ಲಿ, ಡ್ರಾಗನ್ ಫ್ಲೈಗಳ ಹಿಂಡುಗಳನ್ನು ಹಾಗೂ ತಮ್ಮ ಅಚ್ಚುಮೆಚ್ಚಿನ ಐರೋಪ್ಯ ಕೊಳವನ್ನು ಪಟ್ಟುಬಿಡದೆ ಗಸ್ತುತಿರುಗುವ ಒಂಟಿ ಎಂಪರರ್ ಡ್ರಾಗನ್ ಫ್ಲೈಗಳನ್ನು ನೋಡಿದ್ದೇನೆ. ಮತ್ತು ಫಿಲಿಪ್ಪೀನ್ಸ್‌ನಲ್ಲಿರುವ ಒಂದು ಪರ್ಣಭರಿತ ಕಮರಿಯ ಉದ್ದಕ್ಕೂ ನಾನು ತೋಡು ದೋಣಿಯಲ್ಲಿ ಪ್ರಯಾಣಿಸಿದಾಗ, ಉಜ್ವಲವಾದ ಡ್ಯಾಮ್ಸಲ್ ಫ್ಲೈಗಳು ನನ್ನ ಬರಿದಾದ ತೋಳುಗಳ ಮೇಲೂ ಇಳಿಯುತ್ತಾ, ಮೈಗಾವಲುಗಾರರಾಗಿ ಕಾರ್ಯನಡಿಸಿದವು.
ಡ್ರಾಗನ್ ಫ್ಲೈಗಳು, ಭೂಮಿಯ ಮೇಲಿರುವ ಅತಿ ಸಂಕೀರ್ಣವಾದ ಹಾರಾಟದ ಯಂತ್ರಗಳಲ್ಲಿ ಸೇರಿರುವುದಾದರೂ, ನಾನು ಯಾವಾಗಲೂ ಅವುಗಳ ಹಾರಾಟದ ಸಾಮರ್ಥ್ಯಗಳಿಗಿಂತ ಅವುಗಳ ಲಾವಣ್ಯ ಮತ್ತು ಸೌಂದರ್ಯದಿಂದ ಹೆಚ್ಚು ಪ್ರಭಾವಿತನಾಗಿದ್ದೇನೆ. ಅವುಗಳ ಉಪಸ್ಥಿತಿಯು ನಮ್ಮ ಕೊಳಗಳು ಮತ್ತು ನದೀತೀರಗಳಿಗೆ ಒಂದು ವಿಶೇಷ ಕಳೆಯನ್ನು ಕೂಡಿಸುತ್ತದೆ. ಅವು ಆದರ್ಶಪ್ರಾಯ ರತ್ನಗಳಾಗಿವೆ—ಆನಂದಿಸಲಿಕ್ಕಾಗಿ ಯಾವಾಗಲೂ ಇರುವಂತಹವುಗಳು.
[ಪಾದಟಿಪ್ಪಣಿ]
a ಆಗಾಗ್ಗೆ, ಡ್ರಾಗನ್ ಫ್ಲೈಗಳು, ತಮ್ಮ ರೆಕ್ಕೆಗಳನ್ನು ಕೆಳಮುಖವಾಗಿ ಓರೆಯಾಗಿರಿಸುತ್ತವೆ ಮತ್ತು ತಮ್ಮ ದೇಹವನ್ನು ಸೂರ್ಯನಿಗೆ ಮುಖಮಾಡಿ ಚಾಚುತ್ತವೆ. ಇದು ಸೂರ್ಯನಿಗೆ ಒಡ್ಡಲ್ಪಟ್ಟ ದೇಹದ ಭಾಗವನ್ನು ಕಡಿಮೆಗೊಳಿಸುವುದರಿಂದ, ತಂಪುಗೊಳ್ಳಲು ಅವು ಬಳಸುವ ಒಂದು ಭಂಗಿಯಾಗಿದೆ.
[Pictures on page 16, 17]
ಸಾಮಾನ್ಯವಾಗಿ, ತಮ್ಮ ರೆಕ್ಕೆಗಳನ್ನು ಸಮಮಟ್ಟದಲ್ಲಿ ಇಟ್ಟುಕೊಳ್ಳುವ ಡ್ರಾಗನ್ ಫ್ಲೈಗಳು, ತಮ್ಮ ದೇಹಗಳ ಮೇಲೆ ತಮ್ಮ ರೆಕ್ಕೆಗಳನ್ನು ಮಡಚಿಕೊಳ್ಳುವ ಡ್ಯಾಮ್ಸಲ್ ಫ್ಲೈಗಳಿಗಿಂತ ದೊಡ್ಡದ್ದಾಗಿರುತ್ತವೆ