ನಿಮ್ಮ ಆಹಾರಪಥ್ಯ ಅದು ನಿಮ್ಮನ್ನು ಕೊಲ್ಲಸಾಧ್ಯವಿದೆಯೊ?
“ನಿಮ್ಮ ಪರಿಧಮನಿ (ಕಾರನರಿ ಆರ್ಟರಿ)ಯಲ್ಲಿ ಗಂಭೀರವಾದ ತಡೆಯುಂಟಾಗಿದೆ, ಸುಮಾರು 95% ಅಡಚಣೆಯುಂಟಾಗಿದೆ . . . ಭವಿಷ್ಯತ್ತಿನಲ್ಲಿ ಅತಿ ಬೇಗನೆ ನಿಮಗೆ ಹೃದಯಾಘಾತವಾಗುವುದು ಬಹಳ ಸಂಭವನೀಯ.”
ಮೂವತ್ತೆರಡು ವರ್ಷ ಪ್ರಾಯದ ಜೋನ ಎದೆ ನೋವಿಗೆ ಕಾರಣವನ್ನು ಕಂಡುಹಿಡಿಯಲಿಕ್ಕಾಗಿ, ಅವನ ತಪಾಸಣೆ ಮಾಡಿದ ಹೃದಯತಜ್ಞರೊಬ್ಬರು ಹೇಳಿದ ಈ ಮಾತುಗಳನ್ನು ನಂಬುವುದು ಜೋಗೆ ಅಸಾಧ್ಯವಾಗಿತ್ತು. ಯಾರು ಹೃದ್ರೋಗದಿಂದ ಸಾಯುವರೋ ಅವರಲ್ಲಿ ಬಹುಮಟ್ಟಿಗೆ ಅರ್ಧದಷ್ಟು ಜನರಿಗೆ, ತಮಗೆ ಹೃದ್ರೋಗವಿದೆಯೆಂಬ ಅರಿವು ಸಹ ಇರುವುದಿಲ್ಲ.
ಆದರೆ ಜೋನ ಈ ಸ್ಥಿತಿಗೆ ಯಾವುದು ಕಾರಣವಾಗಿತ್ತು? ‘32 ವರ್ಷಗಳ ವರೆಗೆ ನಾನು ಅಮೆರಿಕದ ಪ್ರಾತಿನಿಧಿಕ “ಮಾಂಸ ಹಾಗೂ ಹಾಲಿ”ನ ಆಹಾರಪಥ್ಯವನ್ನೇ ತಿಂದೆ’ ಎಂದು ಜೋ ಪ್ರಲಾಪಿಸುತ್ತಾನೆ. ‘ಅಮೆರಿಕದ ಆಹಾರಪಥ್ಯವು ನನ್ನ ಆರೋಗ್ಯಕ್ಕೆ ಅಪಾಯಕರವೆಂಬ ವಾಸ್ತವಾಂಶವು ಹೇಗೋ ಅಲಕ್ಷಿಸಲ್ಪಟ್ಟಿತು.’
ನಿಮ್ಮ ಆಹಾರಪಥ್ಯ ಹಾಗೂ ಹೃದ್ರೋಗ
ಜೋನ ಆಹಾರಪಥ್ಯದಲ್ಲಿ ಏನು ಹೆಚ್ಚುಕಡಿಮೆಯಾಗಿತ್ತು? ಮೂಲತಃ ಅದರಲ್ಲಿ ತುಂಬಾ ಹೆಚ್ಚು ಕೊಲೆಸ್ಟರಾಲ್ ಹಾಗೂ ಕೊಬ್ಬು—ವಿಶೇಷವಾಗಿ ಪೂರಿತ (ಸ್ಯಾಟ್ಯುರೇಟೆಡ್) ಕೊಬ್ಬು—ಇತ್ತು. ತನ್ನ ಯುವಪ್ರಾಯದಿಂದಲೂ, ಅವನು ಸೇವಿಸುತ್ತಿದ್ದ ಪ್ರತಿಯೊಂದು ಚಮಚ ಆಹಾರದಲ್ಲೂ ಪರಿಧಮನಿ ಹೃದ್ರೋಗವನ್ನು ವಿಕಸಿಸಿಕೊಳ್ಳುವ ಅಪಾಯಕ್ಕೆ ಜೋ ತನ್ನನ್ನು ಒಡ್ಡಿಕೊಳ್ಳುತ್ತಿದ್ದನು. ವಾಸ್ತವದಲ್ಲಿ, ಅತ್ಯಧಿಕ ಕೊಬ್ಬುಳ್ಳ ಆಹಾರಪಥ್ಯವು, ಅಮೆರಿಕದಲ್ಲಿ ಮರಣದ ಹತ್ತು ಪ್ರಮುಖ ಕಾರಣಗಳಲ್ಲಿ ಐದು ಕಾರಣಗಳಿಗೆ ಸಂಬಂಧಿಸಿದೆ. ಆ ಪಟ್ಟಿಯ ಅಗ್ರಸ್ಥಾನದಲ್ಲಿ ಪರಿಧಮನಿ ರೋಗವಿದೆ.
ಆಹಾರಪಥ್ಯ ಹಾಗೂ ಹೃದ್ರೋಗದ ನಡುವಿನ ಸಂಬಂಧವು, ಏಳು ದೇಶಗಳಲ್ಲಿ, 40ರಿಂದ 49 ವರ್ಷ ಪ್ರಾಯದ ಸುಮಾರು 12,000 ಪುರುಷರ ಕುರಿತಾಗಿ ನಡೆಸಲ್ಪಟ್ಟ ಅಧ್ಯಯನವೊಂದರಲ್ಲಿ ಕಂಡುಬರುತ್ತದೆ. ಹೃದಯಾಘಾತದ ಪ್ರಮಾಣದಲ್ಲಿದ್ದ ವಿಪರೀತ ಭಿನ್ನತೆಗಳು ವಿಶೇಷವಾಗಿ ಪ್ರಕಟಕರವಾಗಿವೆ. ಅಧ್ಯಯನವು ತೋರಿಸಿದ್ದೇನೆಂದರೆ, ತಮ್ಮ ಕ್ಯಾಲೊರಿಗಳಲ್ಲಿ 20 ಪ್ರತಿಶತದಷ್ಟು ಪೂರಿತ ಕೊಬ್ಬನ್ನು ಸೇವಿಸುವ ಫಿನಿಷ್ ಪುರುಷರ ರಕ್ತದ ಕೊಲೆಸ್ಟರಾಲ್ ಮಟ್ಟಗಳು ಅಧಿಕವಾಗಿದ್ದವು; ಅದೇ ಸಮಯದಲ್ಲಿ, ತಮ್ಮ ಕ್ಯಾಲೊರಿಗಳಲ್ಲಿ ಕೇವಲ 5 ಪ್ರತಿಶತದಷ್ಟು ಪೂರಿತ ಕೊಬ್ಬನ್ನು ಸೇವಿಸುವ ಜಪಾನಿ ಪುರುಷರಲ್ಲಿ, ರಕ್ತದ ಕೊಲೆಸ್ಟರಾಲ್ ಮಟ್ಟಗಳು ಕಡಿಮೆಯಾಗಿದ್ದವು. ಮತ್ತು ಜಪಾನಿ ಪುರುಷರಿಗಿಂತ ಫಿನಿಷ್ ಪುರುಷರಲ್ಲಿ ಹೃದಯಾಘಾತದ ಪ್ರಮಾಣವು ಆರು ಪಟ್ಟು ಹೆಚ್ಚಾಗಿತ್ತು!
ಆದರೂ, ಪರಿಧಮನಿ ಹೃದ್ರೋಗವು ಈಗ ಜಪಾನಿನಲ್ಲಿ ಅಪರೂಪವೇನಲ್ಲ. ಕಳೆದ ಹಲವಾರು ವರ್ಷಗಳಲ್ಲಿ, ಪಾಶ್ಚಾತ್ಯ ಶೈಲಿಯ ಫಾಸ್ಟ್-ಫುಡ್ಗಳು ಅಲ್ಲಿ ಜನಪ್ರಿಯವಾಗಿವೆ; ಇದರಿಂದಾಗಿ ಪ್ರಾಣಿಜನ್ಯ ಕೊಬ್ಬಿನ ಬಳಕೆಯು 800 ಪ್ರತಿಶತಕ್ಕೇರಿದೆ. ಈಗ, ಅದೇ ಪ್ರಾಯದ ಅಮೆರಿಕನ್ ಹುಡುಗರಿಗಿಂತಲೂ ಜಪಾನೀ ಹುಡುಗರಲ್ಲಿ ರಕ್ತದ ಅತ್ಯಧಿಕ ಕೊಲೆಸ್ಟರಾಲ್ ಇದೆ! ಆಹಾರಪಥ್ಯದ ಕೊಬ್ಬು ಹಾಗೂ ಕೊಲೆಸ್ಟರಾಲ್ಗಳು, ಜೀವಕ್ಕೆ ಅಪಾಯವನ್ನುಂಟುಮಾಡುವ—ವಿಶೇಷವಾಗಿ ಹೃದ್ರೋಗ—ಸ್ಥಿತಿಗಳಿಗಾಗಿ ದೋಷಾರೋಪಿಸಲ್ಪಡುತ್ತವೆ ಎಂಬುದು ಸ್ಪಷ್ಟ.
ಕೊಲೆಸ್ಟರಾಲ್ನ ಪಾತ್ರ
ಕೊಲೆಸ್ಟರಾಲ್, ಜೀವಕ್ಕೆ ಅಗತ್ಯವಾಗಿರುವ, ಬಿಳಿಯ, ಮೇಣದಂತಹ ವಸ್ತುವಾಗಿದೆ. ಅದು ಎಲ್ಲಾ ಮಾನವರು ಹಾಗೂ ಪ್ರಾಣಿಗಳ ಜೀವಕೋಶಗಳಲ್ಲಿ ಕಂಡುಬರುತ್ತದೆ. ನಮ್ಮ ಪಿತ್ತಜನಕಾಂಗವು ಕೊಲೆಸ್ಟರಾಲನ್ನು ಉತ್ಪಾದಿಸುತ್ತದೆ. ಮತ್ತು ನಾವು ತಿನ್ನುವ ಆಹಾರದಲ್ಲೂ ಅದು ವಿಭಿನ್ನ ಪರಿಮಾಣಗಳಲ್ಲಿ ಕಂಡುಬರುತ್ತದೆ. ಕೊಲೆಸ್ಟರಾಲ್, ಕೊಬ್ಬುಗಳು, ಹಾಗೂ ಪ್ರೋಟೀನ್ಗಳಿಂದ ರಚಿತವಾಗಿದ್ದು, ಲೈಪೋಪ್ರೋಟೀನ್ಗಳೆಂದು ಕರೆಯಲ್ಪಡುವ ಜೀವಕಣಗಳಲ್ಲಿ, ರಕ್ತವು ಕೊಲೆಸ್ಟರಾಲನ್ನು ಜೀವಕೋಶಗಳಿಗೆ ಸಾಗಿಸುತ್ತದೆ. ರಕ್ತ ಕೊಲೆಸ್ಟರಾಲ್ನಲ್ಲಿ ಹೆಚ್ಚಿನದ್ದನ್ನು ಸಾಗಿಸುವಂತಹ ಎರಡು ರೀತಿಯ ಲೈಪೋಪ್ರೋಟೀನ್ಗಳು ಯಾವುವೆಂದರೆ, ಕಡಿಮೆ ನಿಬಿಡವಾದ ಲೈಪೋಪ್ರೋಟೀನ್ಗಳು (ಎಲ್ಡಿಎಲ್) ಹಾಗೂ ಹೆಚ್ಚು ನಿಬಿಡವಾದ ಲೈಪೋಪ್ರೋಟೀನ್ಗಳು (ಏಚ್ಡಿಎಲ್).
ಎಲ್ಡಿಎಲ್ಗಳಲ್ಲಿ ತುಂಬ ಕೊಲೆಸ್ಟರಾಲ್ ಇದೆ. ಅವು ರಕ್ತಪ್ರವಾಹದಲ್ಲಿ ಪರಿಚಲಿಸುವಾಗ, ಕೋಶಭಿತ್ತಿಗಳ ಮೇಲಿರುವ ಎಲ್ಡಿಎಲ್ ಗ್ರಾಹಕಗಳ ಮೂಲಕ ಜೀವಕೋಶಗಳೊಳಗೆ ಪ್ರವೇಶಿಸಿ, ಜೀವಕೋಶದಿಂದ ಉಪಯೋಗಿಸಲ್ಪಡಲಿಕ್ಕಾಗಿ ಒಡೆದು ಬೇರ್ಪಡಿಸಲ್ಪಡುತ್ತವೆ. ದೇಹದಲ್ಲಿರುವ ಅಧಿಕಾಂಶ ಜೀವಕೋಶಗಳಿಗೆ ಅಂತಹ ಗ್ರಾಹಕಗಳಿವೆ, ಮತ್ತು ಅವು ಸ್ವಲ್ಪ ಎಲ್ಡಿಎಲ್ ಅನ್ನು ಹೀರಿಕೊಳ್ಳುತ್ತವೆ. ಆದರೆ ಪಿತ್ತಜನಕಾಂಗವು ಹೇಗೆ ವಿನ್ಯಾಸಿಸಲ್ಪಟ್ಟಿದೆಯೆಂದರೆ, ಎಲ್ಡಿಎಲ್ ಗ್ರಾಹಕಗಳ ಮೂಲಕ ರಕ್ತಪ್ರವಾಹದಿಂದ ಎಲ್ಡಿಎಲ್ನ 70 ಪ್ರತಿಶತದಷ್ಟು ನಿರ್ಮೂಲನವು ಅಲ್ಲಿಯೇ ಸಂಭವಿಸುತ್ತದೆ.
ಇನ್ನೊಂದು ಕಡೆಯಲ್ಲಿ ಏಚ್ಡಿಎಲ್ಗಳು, ಕೊಲೆಸ್ಟರಾಲ್ ತೃಷೆಯುಳ್ಳ ಅಣುಗಳಾಗಿವೆ. ರಕ್ತಪ್ರವಾಹದ ಮೂಲಕ ಹಾದುಹೋಗುವಾಗ, ಅವು ಮಿಕ್ಕ ಕೊಲೆಸ್ಟರಾಲನ್ನು ಹೀರಿಕೊಂಡು, ಅದನ್ನು ಪಿತ್ತಜನಕಾಂಗಕ್ಕೆ ರವಾನಿಸುತ್ತವೆ. ಪಿತ್ತಜನಕಾಂಗವು ಕೊಲೆಸ್ಟರಾಲನ್ನು ಒಡೆದು, ಅದನ್ನು ದೇಹದಿಂದ ವಿಸರ್ಜಿಸುತ್ತದೆ. ಹೀಗೆ ದೇಹವು, ಅದಕ್ಕೆ ಅಗತ್ಯವಿರುವ ಕೊಲೆಸ್ಟರಾಲನ್ನು ಉಪಯೋಗಿಸಿ, ಮಿಕ್ಕ ಕೊಲೆಸ್ಟರಾಲನ್ನು ಹೊರಹಾಕುವಂತೆ ಅದ್ಭುತಕರವಾಗಿ ವಿನ್ಯಾಸಿಸಲ್ಪಟ್ಟಿದೆ.
ರಕ್ತದಲ್ಲಿ ವಿಪರೀತ ಎಲ್ಡಿಎಲ್ ಇರುವಾಗ ಸಮಸ್ಯೆಯುಂಟಾಗುತ್ತದೆ. ಇದು ಅಪಧಮನಿಯ ಗೋಡೆಗಳ ಮೇಲೆ ತಳಿಗೆಕಣ (ಪ್ಲ್ಯಾಕ್) ಕಟ್ಟಿಕೊಳ್ಳುವ ಸಂಭವನೀಯತೆಯನ್ನು ಹೆಚ್ಚಿಸುತ್ತದೆ. ತಳಿಗೆಕಣ ಕಟ್ಟಿಕೊಂಡಾಗ, ಅಪಧಮನಿಗಳು ಕಿರಿದಾಗುತ್ತವೆ ಮತ್ತು ಅವುಗಳ ಮೂಲಕ ಹಾದುಹೋಗಸಾಧ್ಯವಿರುವ, ಆಮ್ಲಜನಕವನ್ನು ಸಾಗಿಸುವ ರಕ್ತದ ಪರಿಮಾಣವು ಕಡಿಮೆಯಾಗುತ್ತದೆ. ಈ ಸ್ಥಿತಿಯನ್ನು ಅಪಧಮನಿಕಾಠಿನ್ಯವೆಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯು ನಿಧಾನಗತಿಯಲ್ಲಿ ಹಾಗೂ ಯಾವುದೇ ರೋಗಲಕ್ಷಣಗಳನ್ನು ವ್ಯಕ್ತಪಡಿಸದೇ ಮುಂದುವರಿಯುತ್ತದೆ; ಸೂಕ್ಷ್ಮವಾಗಿ ಗ್ರಹಿಸುವಂತಹ ರೋಗಲಕ್ಷಣಗಳು ತೋರಿಬರಲು ದಶಕಗಳೇ ಹಿಡಿಯುತ್ತವೆ. ಒಂದು ರೋಗಲಕ್ಷಣವೇನೆಂದರೆ, ಜೋ ಅನುಭವಿಸಿದಂತಹ ಎದೆಸೆಳೆತ ಅಥವಾ ಎದೆ ನೋವೇ.
ಅನೇಕವೇಳೆ ರಕ್ತಗೆಡ್ಡೆಯಿಂದ ಪರಿಧಮನಿಗೆ ಸಂಪೂರ್ಣವಾದ ತಡೆಯುಂಟಾಗಿರುವಾಗ, ಆ ಅಪಧಮನಿಯಿಂದ ರಕ್ತವನ್ನು ಪಡೆದುಕೊಳ್ಳುವ ಹೃದಯದ ಭಾಗವು ಸಾಯುತ್ತದೆ. ಅನಿರೀಕ್ಷಿತವಾದ, ಅನೇಕವೇಳೆ ಮಾರಕವಾದ, ಹೃದಯದ ಸ್ನಾಯುವಿನ ಭಂಗ—ಹೆಚ್ಚಾಗಿ ಹೃದಯಾಘಾತವೆಂದು ವಿದಿತವಾಗಿದೆ—ವೇ ಇದರ ಫಲಿತಾಂಶವಾಗಿದೆ. ಪರಿಧಮನಿಗೆ ಸ್ವಲ್ಪ ಮಟ್ಟಿಗೆ ಅಡಚಣೆಯುಂಟಾಗುವುದು ಸಹ, ಹೃದಯದ ಅಂಗಾಂಶದ ಮರಣಕ್ಕೆ ನಡಿಸಬಲ್ಲದಾಗಿದ್ದು, ಇದು ಸ್ಪಷ್ಟವಾದ ಶಾರೀರಿಕ ಅಸ್ವಸ್ಥತೆಯಲ್ಲಿ ಗೋಚರಿಸದಿರಬಹುದು. ದೇಹದ ಇತರ ಭಾಗಗಳಲ್ಲಿನ ಅಪಧಮನಿಗಳಿಗೆ ಅಡಚಣೆಯುಂಟಾಗುವುದು, ಮಿದುಳುಲಕ್ವ, ಕಾಲುಗಳ ಅಂಗಕ್ಷಯ (ಗ್ಯಾಂಗ್ರೀನ್), ಹಾಗೂ ಮೂತ್ರಜನಕಾಂಗದ ಕಾರ್ಯವೈಫಲ್ಯವನ್ನೂ ಉಂಟುಮಾಡಬಲ್ಲದು.
ಎಲ್ಡಿಎಲ್ ಕೆಟ್ಟ ಕೊಲೆಸ್ಟರಾಲ್ ಎಂದೂ, ಏಚ್ಡಿಎಲ್ ಒಳ್ಳೆಯ ಕೊಲೆಸ್ಟರಾಲ್ ಎಂದೂ ಕರೆಯಲ್ಪಡುವುದು ಆಶ್ಚರ್ಯಕರವೇನೂ ಅಲ್ಲ. ರಕ್ತದಲ್ಲಿ ಅತ್ಯಧಿಕ ಮಟ್ಟದ ಎಲ್ಡಿಎಲ್ ಇದೆಯೆಂದೂ, ಕಡಿಮೆ ಮಟ್ಟದ ಏಚ್ಡಿಎಲ್ ಇದೆಯೆಂದೂ ಪರೀಕ್ಷೆಗಳು ತಿಳಿಯಪಡಿಸುವಲ್ಲಿ, ಹೃದ್ರೋಗದ ಅಪಾಯವು ಹೆಚ್ಚಾಗಿರುತ್ತದೆ.a ವ್ಯಕ್ತಿಯೊಬ್ಬನು ಎದೆಸೆಳೆತದಂತಹ ಗಮನಾರ್ಹ ರೋಗಲಕ್ಷಣಗಳನ್ನು ಅನುಭವಿಸುವ ಬಹಳ ಸಮಯಕ್ಕೆ ಮೊದಲೇ, ಸರಳವಾದ ರಕ್ತ ಪರೀಕ್ಷೆಯು ಅನೇಕವೇಳೆ ಸಮೀಪಿಸುತ್ತಿರುವ ಅಪಾಯವನ್ನು ಸೂಚಿಸುವುದು. ಆದುದರಿಂದ ನಿಮ್ಮ ರಕ್ತದ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಪ್ರಾಮುಖ್ಯ. ನಿಮ್ಮ ಆಹಾರಪಥ್ಯವು ಹೇಗೆ ಈ ಮಟ್ಟವನ್ನು ಬಾಧಿಸಬಲ್ಲದು ಎಂಬುದನ್ನು ನಾವು ಈಗ ನೋಡೋಣ.
ರಕ್ತದ ಕೊಲೆಸ್ಟರಾಲ್ ಮತ್ತು ಆಹಾರಪಥ್ಯ
ಪ್ರಾಣಿಗಳಿಂದ ಪಡೆದುಕೊಳ್ಳಲಾಗುವ ಆಹಾರಪದಾರ್ಥಗಳ ಸ್ವಾಭಾವಿಕ ಭಾಗವೇ ಕೊಲೆಸ್ಟರಾಲ್ ಆಗಿದೆ. ಮಾಂಸ, ಮೊಟ್ಟೆಗಳು, ಮೀನು, ಸಾಕುಪಕ್ಷಿಗಳು, ಹಾಗೂ ಹೈನಿನ ಎಲ್ಲ ಉತ್ಪನ್ನಗಳಲ್ಲಿ ಕೊಲೆಸ್ಟರಾಲ್ ಇದೆ. ಇನ್ನೊಂದು ಕಡೆಯಲ್ಲಿ, ಸಸ್ಯಜನ್ಯ ಆಹಾರಪದಾರ್ಥಗಳಲ್ಲಿ ಕೊಲೆಸ್ಟರಾಲ್ ಇರುವುದಿಲ್ಲ.
ತನಗೆ ಅಗತ್ಯವಿರುವ ಎಲ್ಲಾ ಕೊಲೆಸ್ಟರಾಲನ್ನು ದೇಹವೇ ಉತ್ಪಾದಿಸಿಕೊಳ್ಳುತ್ತದೆ, ಆದುದರಿಂದ ಆಹಾರದಲ್ಲಿ ಬಳಸುವ ಕೊಲೆಸ್ಟರಾಲ್ ಹೆಚ್ಚುವರಿಯಾಗಿದೆ. ನಮ್ಮ ಆಹಾರಪಥ್ಯದ ಕೊಲೆಸ್ಟರಾಲ್ನಲ್ಲಿ ಅಧಿಕಾಂಶ ಭಾಗವು, ಪಿತ್ತಜನಕಾಂಗದಲ್ಲಿ ತನ್ನ ಅಂತಿಮ ಘಟ್ಟವನ್ನು ತಲಪುತ್ತದೆ. ಸರ್ವಸಾಮಾನ್ಯವಾಗಿ, ಆಹಾರಪಥ್ಯದ ಕೊಲೆಸ್ಟರಾಲ್ ಪಿತ್ತಜನಕಾಂಗವನ್ನು ಪ್ರವೇಶಿಸಿದಂತೆ, ಪಿತ್ತಜನಕಾಂಗವು ಅದನ್ನು ಪರಿಷ್ಕರಿಸಿ, ತನ್ನ ಸ್ವಂತ ಕೊಲೆಸ್ಟರಾಲ್ನ ಉತ್ಪಾದನೆಯನ್ನು ಕಡಿಮೆಮಾಡುತ್ತದೆ. ಇದು, ರಕ್ತದಲ್ಲಿರುವ ಕೊಲೆಸ್ಟರಾಲ್ನ ಒಟ್ಟು ಮೊತ್ತವನ್ನು ಆವಶ್ಯಕತೆಗೆ ತಕ್ಕಂತೆ ಹೊಂದಿಸುತ್ತದೆ.
ಆದರೂ, ಆಹಾರಪಥ್ಯವು ಕೊಲೆಸ್ಟರಾಲ್ನಿಂದ ಬಹಳಷ್ಟು ಸಮೃದ್ಧವಾಗಿದ್ದು, ಪಿತ್ತಜನಕಾಂಗದಿಂದ ಅದನ್ನು ಆ ಕೂಡಲೆ ಪರಿಷ್ಕರಿಸಲು ಅಸಾಧ್ಯವಾಗಿರುವಲ್ಲಿ ಏನಾಗುತ್ತದೆ? ಕೊಲೆಸ್ಟರಾಲ್ ಅಪಧಮನಿಯ ಗೋಡೆಯ ಜೀವಕೋಶಗಳಿಗೆ ನೇರವಾಗಿ ಪ್ರವೇಶಿಸುವ ಸಂಭವನೀಯತೆಯು ಅಧಿಕಗೊಳ್ಳುತ್ತದೆ. ಹಾಗೆ ಆಗುವಾಗ, ಅಪಧಮನಿಕಾಠಿನ್ಯದ ಪ್ರಕ್ರಿಯೆಯು ಉಂಟಾಗುತ್ತದೆ. ಬಳಸಲ್ಪಡುವ ಆಹಾರಪಥ್ಯದ ಕೊಲೆಸ್ಟರಾಲ್ನ ಪರಿಮಾಣವನ್ನು ಲಕ್ಷಿಸದೆ, ದೇಹವು ಅದೇ ಪರಿಮಾಣದ ಕೊಲೆಸ್ಟರಾಲನ್ನು ಉತ್ಪಾದಿಸುತ್ತಾ ಹೋಗುವಾಗ, ಸನ್ನಿವೇಶವು ವಿಶೇಷವಾಗಿ ಅಪಾಯಕರವಾಗಿದೆ. ಅಮೆರಿಕದಲ್ಲಿ, 5 ಜನರಲ್ಲಿ ಒಬ್ಬನಿಗೆ ಈ ಸಮಸ್ಯೆಯಿದೆ.
ಆದುದರಿಂದ, ಆಹಾರಪಥ್ಯದ ಕೊಲೆಸ್ಟರಾಲ್ನ ನಿಮ್ಮ ಸೇವನೆಯನ್ನು ಕಡಿಮೆಮಾಡುವುದು ವಿವೇಕಯುತವಾದ ಮಾರ್ಗಕ್ರಮವಾಗಿದೆ. ಆದರೆ ನಮ್ಮ ಆಹಾರಪಥ್ಯದ ಇನ್ನೊಂದು ಘಟಕವು, ರಕ್ತದ ಕೊಲೆಸ್ಟರಾಲ್ನ ಮಟ್ಟದ ಮೇಲೆ ಇನ್ನೂ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ—ಪೂರಿತ ಕೊಬ್ಬುಗಳೇ.
ಕೊಬ್ಬುಗಳು ಹಾಗೂ ಕೊಲೆಸ್ಟರಾಲ್
ಕೊಬ್ಬುಗಳಲ್ಲಿ ಎರಡು ವರ್ಗಗಳಿವೆ: ಪೂರಿತ ಹಾಗೂ ಅಪೂರಿತ ಕೊಬ್ಬು. ಅಪೂರಿತ ಕೊಬ್ಬುಗಳು, ಏಕಅಪೂರಿತ (ಮಾನೊಅನ್ಸ್ಯಾಟ್ಯುರೇಟೆಡ್)ವಾಗಿರಸಾಧ್ಯವಿದೆ ಅಥವಾ ಬಹುಅಪೂರಿತ (ಪಾಲಿಅನ್ಸ್ಯಾಟ್ಯುರೇಟೆಡ್) ಆಗಿರಸಾಧ್ಯವಿದೆ. ಪೂರಿತ ಕೊಬ್ಬುಗಳನ್ನು ಬಳಸುವುದು, ರಕ್ತದಲ್ಲಿನ ಕೊಲೆಸ್ಟರಾಲ್ನ ಮಟ್ಟವನ್ನು ಏರಿಸುವುದರಿಂದ, ಅವುಗಳ ಪೂರಿತ ಜೊತೆಗಿಂತಲೂ ಅಪೂರಿತ ಕೊಬ್ಬುಗಳು ನಿಮ್ಮ ಆರೋಗ್ಯಕ್ಕೆ ಹೆಚ್ಚು ಹಿತಕರ. ಪೂರಿತ ಕೊಬ್ಬುಗಳು ರಕ್ತದಲ್ಲಿನ ಕೊಲೆಸ್ಟರಾಲ್ನ ಮಟ್ಟವನ್ನು ಎರಡು ವಿಧಗಳಲ್ಲಿ ಏರಿಸುತ್ತವೆ: ಅವು ಪಿತ್ತಜನಕಾಂಗದಲ್ಲಿ ಹೆಚ್ಚು ಕೊಲೆಸ್ಟರಾಲನ್ನು ಉತ್ಪಾದಿಸಲು ಸಹಾಯ ಮಾಡುತ್ತವೆ, ಮತ್ತು ರಕ್ತದಿಂದ ಎಲ್ಡಿಎಲ್ನ ತೆಗೆದುಹಾಕುವಿಕೆಯ ವೇಗವನ್ನು ಕಡಿಮೆಗೊಳಿಸುತ್ತಾ, ಅವು ಪಿತ್ತಜನಕಾಂಗದ ಜೀವಕೋಶಗಳ ಮೇಲಿರುವ ಎಲ್ಡಿಎಲ್ ಗ್ರಾಹಕಗಳನ್ನು ನಿಗ್ರಹಿಸುತ್ತವೆ.
ಬೆಣ್ಣೆ, ಮೊಟ್ಟೆಯ ಹಳದಿ ಲೋಳೆ, ಹಂದಿಯ ಕೊಬ್ಬು, ಹಾಲು, ಐಸ್ ಕ್ರೀಮ್, ಮಾಂಸ ಹಾಗೂ ಸಾಕುಪಕ್ಷಿಗಳಂತಹ ಪ್ರಾಣಿಜನ್ಯ ಆಹಾರಪದಾರ್ಥಗಳಲ್ಲಿ, ಪೂರಿತ ಕೊಬ್ಬುಗಳು ಮೂಲತಃ ಕಂಡುಬರುತ್ತವೆ. ಚಾಕೊಲೆಟ್, ತೆಂಗಿನಕಾಯಿ ಹಾಗೂ ಅದರ ಎಣ್ಣೆಗಳು, ತರಕಾರಿ ಕೊಬ್ಬು, ಹಾಗೂ ತಾಳೆ ಎಣ್ಣೆಯಲ್ಲಿ ಸಹ ಅವು ಸೇರಿವೆ. ಪೂರಿತ ಕೊಬ್ಬುಗಳು ಕೊಠಡಿಯ ಉಷ್ಣತೆಯಲ್ಲಿ ಘನರೂಪದಲ್ಲಿರುತ್ತವೆ.
ಇನ್ನೊಂದು ಕಡೆಯಲ್ಲಿ, ಕೊಠಡಿಯ ಉಷ್ಣತೆಯಲ್ಲಿ ಅಪೂರಿತ ಕೊಬ್ಬುಗಳು ದ್ರವರೂಪದಲ್ಲಿರುತ್ತವೆ. ಪೂರಿತ ಕೊಬ್ಬುಗಳುಳ್ಳ ಆಹಾರಪದಾರ್ಥಗಳಿಗೆ ಬದಲಾಗಿ, ಏಕಅಪೂರಿತ ಕೊಬ್ಬುಗಳು ಅಥವಾ ಬಹುಅಪೂರಿತ ಕೊಬ್ಬುಗಳಿರುವ ಆಹಾರಪದಾರ್ಥಗಳನ್ನು ಉಪಯೋಗಿಸುವುದಾದರೆ, ಅವು ನಿಮ್ಮ ರಕ್ತದ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆಮಾಡಲು ಸಹಾಯ ಮಾಡಬಹುದು.b ಕಾರ್ನ್ ಎಣ್ಣೆ ಹಾಗೂ ಸೂರ್ಯಕಾಂತಿ ಬೀಜದ ಎಣ್ಣೆಯಲ್ಲಿ ಸಾಮಾನ್ಯವಾಗಿ ಇರುವ ಬಹುಅಪೂರಿತ ಕೊಬ್ಬುಗಳು, ಒಳ್ಳೆಯ ಹಾಗೂ ಕೆಟ್ಟ ಕೊಲೆಸ್ಟರಾಲನ್ನು—ಎರಡನ್ನೂ—ಕಡಿಮೆಮಾಡುತ್ತವೆ; ಆದರೆ ಆಲೀವ್ ಎಣ್ಣೆ ಹಾಗೂ ಕ್ಯಾನೊಲ ಎಣ್ಣೆಯಲ್ಲಿ ತುಂಬಾ ಸಮೃದ್ಧವಾಗಿರುವ ಏಕಅಪೂರಿತ ಕೊಬ್ಬುಗಳು, ಕೇವಲ ಕೆಟ್ಟ ಕೊಲೆಸ್ಟರಾಲನ್ನು ಕಡಿಮೆಮಾಡುತ್ತವಾದರೂ, ಒಳ್ಳೆಯ ಕೊಲೆಸ್ಟರಾಲಿಗೆ ಯಾವ ಹಾನಿಯನ್ನೂ ಉಂಟುಮಾಡುವುದಿಲ್ಲ.
ನಿಶ್ಚಯವಾಗಿಯೂ ಕೊಬ್ಬುಗಳು ನಮ್ಮ ಆಹಾರಪಥ್ಯದ ಅತ್ಯಗತ್ಯ ಭಾಗವಾಗಿವೆ. ದೃಷ್ಟಾಂತಕ್ಕಾಗಿ, ಅವುಗಳಿಲ್ಲದೆ, ಎ, ಡಿ, ಇ, ಮತ್ತು ಕೆ ವಿಟಮಿನ್ಗಳನ್ನು ಹೀರಿಕೊಳ್ಳಲು ಸಾಧ್ಯವಿಲ್ಲ. ಹಾಗಿದ್ದರೂ, ದೇಹದ ಕೊಬ್ಬಿನ ಆವಶ್ಯಕತೆಗಳು ತೀರ ಕೊಂಚವಾಗಿವೆ. ತರಕಾರಿಗಳು, ಕಾಳುಗಳು, ಧಾನ್ಯಗಳು ಹಾಗೂ ಹಣ್ಣುಗಳ ಬಳಕೆಯಿಂದ ಅವುಗಳನ್ನು ಸುಲಭವಾಗಿ ಪಡೆದುಕೊಳ್ಳಸಾಧ್ಯವಿದೆ. ಆದುದರಿಂದ ಪೂರಿತ ಕೊಬ್ಬುಗಳ ಸೇವನೆಯನ್ನು ಮಿತಗೊಳಿಸುವುದು, ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ದೊರಕದಂತೆ ಮಾಡುವುದಿಲ್ಲ.
ಕೊಬ್ಬುಗಳನ್ನೂ ಕೊಲೆಸ್ಟರಾಲನ್ನೂ ಮಿತಗೊಳಿಸಬೇಕಾದ ಕಾರಣ
ಕೊಬ್ಬುಗಳು ಹಾಗೂ ಕೊಲೆಸ್ಟರಾಲ್ನಿಂದ ಸಮೃದ್ಧವಾಗಿರುವ ಒಂದು ಆಹಾರಪಥ್ಯವು, ರಕ್ತದ ಕೊಲೆಸ್ಟರಾಲನ್ನು ಯಾವಾಗಲೂ ಹೆಚ್ಚಿಸುತ್ತದೊ? ಹೆಚ್ಚಿಸಲೇಬೇಕೆಂದೇನಿಲ್ಲ. ಆರಂಭದ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟ ಥಾಮಸ್, ಎಚ್ಚರ! ಪತ್ರಿಕೆಯೊಂದಿಗೆ ನಡೆದ ತನ್ನ ಸಂದರ್ಶನದ ಬಳಿಕ, ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ನಿರ್ಧರಿಸಿದನು. ಅವನ ಕೊಲೆಸ್ಟರಾಲ್ ಮಟ್ಟಗಳು, ಅಪೇಕ್ಷಿತ ಪರಿಮಿತಿಗಳೊಳಗೆ ಇದ್ದವೆಂಬುದನ್ನು ಆ ಫಲಿತಾಂಶಗಳು ಪ್ರಕಟಪಡಿಸಿದವು. ಅವನ ಪಿತ್ತಜನಕಾಂಗವು, ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಶಕ್ತವಾಗಿತ್ತೆಂಬುದು ಸ್ಪಷ್ಟ.
ಆದರೂ, ಥಾಮಸ್ ಅಪಾಯದಿಂದ ಮುಕ್ತನೆಂಬುದನ್ನು ಇದು ಅರ್ಥೈಸುವುದಿಲ್ಲ. ಇತ್ತೀಚಿನ ಅಧ್ಯಯನಗಳು ಸೂಚಿಸುವುದೇನೆಂದರೆ, ಆಹಾರಪಥ್ಯದ ಕೊಲೆಸ್ಟರಾಲ್ ರಕ್ತದ ಕೊಲೆಸ್ಟರಾಲ್ನ ಮೇಲೆ ಯಾವ ಪರಿಣಾಮವನ್ನೂ ಬೀರದೆ, ಪರಿಧಮನಿ ಹೃದ್ರೋಗದ ಅಪಾಯವನ್ನು ತಂದೊಡ್ಡಬಹುದು. “ಕೊಲೆಸ್ಟರಾಲ್ ಸಮೃದ್ಧವಾಗಿರುವ ಆಹಾರಪದಾರ್ಥಗಳು, ಕಡಿಮೆ ರಕ್ತದ ಕೊಲೆಸ್ಟರಾಲ್ ಇರುವ ಜನರಲ್ಲಿ ಸಹ ಹೃದ್ರೋಗವನ್ನು ಪ್ರವರ್ಧಿಸುತ್ತವೆ” ಎಂದು, ನಾರ್ತ್ವೆಸ್ಟರ್ನ್ ವಿಶ್ವದ್ಯಾನಿಲಯದ ಡಾ. ಜೆರೆಮಾಯ ಸ್ಟ್ಯಾಮ್ಲರ್ ಹೇಳುತ್ತಾರೆ. “ಆದುದರಿಂದಲೇ, ರಕ್ತದ ಕೊಲೆಸ್ಟರಾಲ್ ಮಟ್ಟವು ಏನೇ ಆಗಿರಲಿ, ಕಡಿಮೆ ಕೊಲೆಸ್ಟರಾಲನ್ನು ಸೇವಿಸುವ ವಿಷಯಕ್ಕೆ ಎಲ್ಲಾ ಜನರು ವಿಶೇಷ ಪರಿಗಣನೆಯನ್ನು ಕೊಡಲೇಬೇಕು.”
ಆಹಾರಪಥ್ಯದಲ್ಲಿನ ಕೊಬ್ಬಿನ ವಿಷಯವೂ ಇದರಲ್ಲಿ ಸೇರಿದೆ. ರಕ್ತದಲ್ಲಿ ತುಂಬ ಹೆಚ್ಚು ಕೊಬ್ಬು ಇರುವುದು—ಅದು ಆಹಾರದಲ್ಲಿರುವ ಪೂರಿತ ಕೊಬ್ಬಿನಿಂದಲೇ ಆಗಿರಲಿ ಅಥವಾ ಅಪೂರಿತ ಕೊಬ್ಬಿನಿಂದಲೇ ಆಗಿರಲಿ—ಕೆಂಪು ರಕ್ತ ಕಣಗಳನ್ನು ಗುಂಪುಗೂಡುವಂತೆ ಮಾಡುತ್ತದೆ. ಅಂತಹ ದಟ್ಟವಾದ ರಕ್ತವು, ಸಣ್ಣ ಲೋಮನಾಳಗಳ ಮೂಲಕ ಹಾದುಹೋಗುವುದಿಲ್ಲ; ಇದರಿಂದ ಅಂಗಾಂಶಗಳಿಗೆ ಅಗತ್ಯವಿರುವ ಪೋಷಕಾಂಶಗಳು ದೊರಕುವುದಿಲ್ಲ. ಅಪಧಮನಿಗಳುದ್ದಕ್ಕೂ ಚಲಿಸುವ ಗುಂಪುಗೂಡಿದ ಜೀವಕೋಶಗಳು, ಅಪಧಮನಿಯ ಗೋಡೆಗಳಿಗೆ ಆಮ್ಲಜನಕ ವಿತರಣೆಯನ್ನು ಸಹ ಭಂಗಗೊಳಿಸುತ್ತವೆ; ಇದರಿಂದ ಮೇಲ್ಮೈಯ ಹಾನಿಯು ಉಂಟಾಗಿ, ತಳಿಗೆಕಣ (ಪ್ಲ್ಯಾಕ್)ವು ಸುಲಭವಾಗಿಯೇ ರೂಪಗೊಳ್ಳಲು ಆರಂಭವಾಗಸಾಧ್ಯವಿದೆ. ಆದರೆ ವಿಪರೀತ ಪ್ರಮಾಣಗಳಲ್ಲಿ ಕೊಬ್ಬನ್ನು ಬಳಸುವುದರಲ್ಲಿ ಇನ್ನೊಂದು ಅಪಾಯವಿದೆ.
ಕ್ಯಾನ್ಸರ್ ಹಾಗೂ ಆಹಾರಪಥ್ಯ
“ಎಲ್ಲಾ ಕೊಬ್ಬುಗಳು—ಪೂರಿತ ಹಾಗೂ ಅಪೂರಿತ—ನಿರ್ದಿಷ್ಟ ರೀತಿಯ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯಲ್ಲಿ ಒಳಗೂಡಿವೆ” ಎಂದು ಡಾ. ಜಾನ್ ಎ. ಮಕ್ಡೂಗಲ್ ಹೇಳುತ್ತಾರೆ. ದೊಡ್ಡಕರುಳು ಮತ್ತು ಗುದನಾಳದ ಕ್ಯಾನ್ಸರ್ ಹಾಗೂ ಸ್ತನದ ಕ್ಯಾನ್ಸರ್ನ ಅಂತಾರಾಷ್ಟ್ರೀಯ ಸಂಭವದ ಕುರಿತಾದ ಒಂದು ಸಮೀಕ್ಷೆಯು, ಎಲ್ಲಿ ಆಹಾರಪಥ್ಯಗಳಲ್ಲಿ ಕೊಬ್ಬು ಅತ್ಯಧಿಕವಾಗಿದೆಯೋ ಆ ಪಾಶ್ಚಾತ್ಯ ದೇಶಗಳು ಹಾಗೂ ವರ್ಧಿಷ್ಣು ದೇಶಗಳ ನಡುವೆ ಗಾಬರಿಹುಟ್ಟಿಸುವಂತಹ ಭಿನ್ನತೆಗಳನ್ನು ತೋರಿಸಿತು. ಉದಾಹರಣೆಗಾಗಿ, ಅಮೆರಿಕದಲ್ಲಿ, ದೊಡ್ಡಕರುಳು ಮತ್ತು ಗುದನಾಳದ ಕ್ಯಾನ್ಸರ್, ಸ್ತ್ರೀಪುರುಷರಿಗೆ—ಇಬ್ಬರಿಗೂ—ಎರಡನೆಯ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿರುವಾಗ, ಸ್ತ್ರೀಯರಿಗಾದರೋ ಸ್ತನದ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ.
ಅಮೆರಿಕನ್ ಕ್ಯಾನ್ಸರ್ ಸೊಸೈಟಿಗನುಸಾರ, ಕ್ಯಾನ್ಸರ್ನ ಅಧಿಕ ಸಂಭವಗಳೊಂದಿಗೆ ಬೇರೆ ದೇಶಕ್ಕೆ ಹೋಗಿ ವಾಸಮಾಡುವ ಜನರ ಗುಂಪುಗಳು—ಅಲ್ಲಿನ ಹೊಸ ಜೀವನ ಶೈಲಿ ಹಾಗೂ ಆಹಾರಪಥ್ಯಕ್ಕೆ ಒಗ್ಗಿಕೊಳ್ಳಲು ಅವರಿಗೆ ತಗಲುವ ಸಮಯದ ಮೇಲೆ ಹೊಂದಿಕೊಂಡು—ಕಾಲಕ್ರಮೇಣ ಆ ದೇಶದ ಕ್ಯಾನ್ಸರ್ ಪ್ರಮಾಣವನ್ನು ವಿಕಸಿಸುತ್ತವೆ. “ಹವಾಯಿಗೆ ವಲಸೆಹೋದ ಜಪಾನಿ ವಲಸೆಗಾರರು, ಪಾಶ್ಚಾತ್ಯ ಕ್ಯಾನ್ಸರ್ ವಿಧಾನವನ್ನು ವಿಕಸಿಸಿಕೊಳ್ಳುತ್ತಿದ್ದಾರೆ: ದೊಡ್ಡಕರುಳು ಹಾಗೂ ಸ್ತನದ ಕ್ಯಾನ್ಸರ್ನ ಅಧಿಕ ಸಂಭವ, ಹಾಗೂ ಹೊಟ್ಟೆಯ ಕ್ಯಾನ್ಸರ್ನ ಕಡಿಮೆ ಸಂಭವ—ಜಪಾನೀ ವಿಧಾನಕ್ಕೆ ತದ್ವಿರುದ್ಧ” ಎಂದು ಕ್ಯಾನ್ಸರ್ ಸೊಸೈಟಿಯ ಪಾಕಶಾಸ್ತ್ರವು ಟಿಪ್ಪಣಿಮಾಡುತ್ತದೆ. ಸುವ್ಯಕ್ತವಾಗಿಯೇ, ಕ್ಯಾನ್ಸರ್ ಆಹಾರಪಥ್ಯದೊಂದಿಗೆ ಸಂಬಂಧವನ್ನು ಹೊಂದಿದೆ.
ನಿಮ್ಮ ಆಹಾರಪಥ್ಯದಲ್ಲಿ ಸಂಪೂರ್ಣ ಕೊಬ್ಬು, ಪೂರಿತ ಕೊಬ್ಬು, ಕೊಲೆಸ್ಟರಾಲ್, ಮತ್ತು ಕ್ಯಾಲೊರಿಗಳು ಅತ್ಯಧಿಕವಾಗಿರುವುದಾದರೆ, ನೀವು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ. ಒಂದು ಒಳ್ಳೆಯ ಆಹಾರಪಥ್ಯವು ಒಳ್ಳೆಯ ಆರೋಗ್ಯಕ್ಕೆ ನಡಿಸಬಲ್ಲದು ಹಾಗೂ ಒಂದು ಕೆಟ್ಟ ಆಹಾರಪಥ್ಯದ ಅನೇಕ ಅಸ್ವಸ್ಥ ಪರಿಣಾಮಗಳನ್ನೂ ಅದು ಇಲ್ಲದಂತೆಮಾಡಬಲ್ಲದು. ಅನೇಕವೇಳೆ 40,000 ಅಥವಾ ಅದಕ್ಕಿಂತಲೂ ಹೆಚ್ಚು ಡಾಲರ್ಗಳಷ್ಟು ವೆಚ್ಚ ತಗಲುವ, ವೇದನಾಭರಿತ ಬೈಪಾಸ್ ಸರ್ಜರಿಯಂತಹ ಆಯ್ಕೆಗಳನ್ನು ಒಬ್ಬನು ಪರಿಗಣಿಸುವಾಗ, ಒಂದು ಒಳ್ಳೆಯ ಆಹಾರಪಥ್ಯವನ್ನು ಆರಿಸಿಕೊಳ್ಳುವುದು ಖಂಡಿತವಾಗಿಯೂ ಅಪೇಕ್ಷಣೀಯವಾದ ವಿಷಯವಾಗಿದೆ.
ನೀವು ತಿನ್ನುವ ಆಹಾರವನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳುವ ಮೂಲಕ, ನೀವು ತೂಕವನ್ನು ಕಡಿಮೆಮಾಡಸಾಧ್ಯವಿದೆ, ನಿಮ್ಮ ಅನಿಸಿಕೆಯನ್ನು ಉತ್ತಮಗೊಳಿಸಲು, ಹಾಗೂ ಕೆಲವೊಂದು ರೋಗಗಳಿಂದ ತಪ್ಪಿಸಿಕೊಳ್ಳಲು ಅಥವಾ ವಿಪರ್ಯಸ್ತಗೊಳಿಸಲು ಸ್ವತಃ ಸಹಾಯ ಮಾಡಿಕೊಳ್ಳಸಾಧ್ಯವಿದೆ. ಈ ವಿಷಯದ ಕುರಿತಾದ ಸಲಹೆಗಳನ್ನು, ಮುಂದಿನ ಲೇಖನದಲ್ಲಿ ಚರ್ಚಿಸಲಾಗಿದೆ.
[ಅಧ್ಯಯನ ಪ್ರಶ್ನೆಗಳು]
a ಕೊಲೆಸ್ಟರಾಲನ್ನು ಒಂದು ಡೆಸಿಲೀಟರಿಗೆ ಮಿಲಿಗ್ರ್ಯಾಮ್ಗಳಲ್ಲಿ ಅಳೆಯಲಾಗುತ್ತದೆ. ಸಂಪೂರ್ಣ ಕೊಲೆಸ್ಟರಾಲ್ನ ಅಪೇಕ್ಷಿತ ಮಟ್ಟವು—ರಕ್ತದಲ್ಲಿನ ಇತರ ಲೈಪೋಪ್ರೋಟೀನ್ಗಳಲ್ಲಿರುವ ಎಲ್ಡಿಎಲ್, ಏಚ್ಡಿಎಲ್, ಮತ್ತು ಕೊಲೆಸ್ಟರಾಲ್ನ ಒಟ್ಟು ಮೊತ್ತ—ಒಂದು ಡೆಸಿಲೀಟರಿಗೆ 200 ಮಿಲಿಗ್ರ್ಯಾಮ್ಗಳಿಗಿಂತಲೂ ಕಡಿಮೆಯಾಗಿದೆ. ಒಂದು ಡೆಸಿಲೀಟರಿಗೆ 45 ಅಥವಾ ಅದಕ್ಕಿಂತಲೂ ಹೆಚ್ಚು ಮಿಲಿಗ್ರ್ಯಾಮ್ಗಳಷ್ಟು ಏಚ್ಡಿಎಲ್ ಮಟ್ಟವು ಉಪಯುಕ್ತವೆಂದು ಪರಿಗಣಿಸಲಾಗುತ್ತದೆ.
b ಅಮೆರಿಕದವರಿಗಾಗಿರುವ 1995ರ ಆಹಾರಪಥ್ಯದ ಮಾರ್ಗದರ್ಶನಗಳು, ದೈನಂದಿನ ಕ್ಯಾಲೊರಿಗಳಲ್ಲಿ ಒಟ್ಟು 30 ಪ್ರತಿಶತಕ್ಕಿಂತಲೂ ಹೆಚ್ಚು ಕೊಬ್ಬನ್ನು ಸೇವಿಸಬಾರದೆಂದು ಶಿಫಾರಸ್ಸುಮಾಡುತ್ತದೆ ಮತ್ತು ಪೂರಿತ ಕೊಬ್ಬನ್ನು 10 ಪ್ರತಿಶತ ಕ್ಯಾಲೊರಿಗಳಿಗಿಂತಲೂ ಕಡಿಮೆಮಾಡಬೇಕೆಂದು ಶಿಫಾರಸ್ಸುಮಾಡುತ್ತದೆ. ಪೂರಿತ ಕೊಬ್ಬುಗಳ ಕ್ಯಾಲೊರಿಯ ಸೇವನೆಯಲ್ಲಿ 1-ಪ್ರತಿಶತ ಇಳಿತವು, ರಕ್ತದ ಕೊಲೆಸ್ಟರಾಲ್ ಮಟ್ಟದಲ್ಲಿ, ಸಾಮಾನ್ಯವಾಗಿ ಒಂದು ಡೆಸಿಲೀಟರಿಗೆ 3 ಮಿಲಿಗ್ರ್ಯಾಮ್ಗಳಷ್ಟು ಇಳಿತಕ್ಕೆ ನಡೆಸುತ್ತದೆ.
[Diagram on page 8]
ಪರಿಧಮನಿಗಳ ಛೇದನೋಟ: (1) ಪೂರ್ಣವಾಗಿ ತೆರೆದಿದೆ, (2) ಭಾಗಶಃ ತಡೆಯುಂಟಾಗಿದೆ, (3) ಬಹುಮಟ್ಟಿಗೆ ಸಂಪೂರ್ಣವಾಗಿ ತಡೆಯುಂಟಾಗಿದೆ