ಟಾಸ್ಮೇನಿಯ ಸಣ್ಣ ದ್ವೀಪ, ಅಪೂರ್ವ ಕಥೆ
ಆಸ್ಟ್ರೇಲಿಯದ ಎಚ್ಚರ! ಸುದ್ದಿಗಾರರಿಂದ
“ಈ ಭೂಭಾಗವು, ನಾವು ದಕ್ಷಿಣ ಶಾಂತಸಾಗರದ ಪ್ರದೇಶದಲ್ಲಿ ಸಂಧಿಸಿರುವ ಪ್ರಥಮ ಭೂಭಾಗವಾಗಿದ್ದು, ಯಾವುದೇ ಯೂರೋಪಿಯನ್ ರಾಷ್ಟ್ರಕ್ಕೆ ಜ್ಞಾತವಾಗಿರದ ಕಾರಣ, ನಾವು ಅದಕ್ಕೆ [ನಮ್ಮ] ಸನ್ಮಾನ್ಯ ಮಹಾಮಂಡಲಾಧಿಪತಿಯ ಗೌರವಾರ್ಥವಾಗಿ ಆ್ಯನ್ಟೊನಿ ವ್ಯಾನ್ ಡೀಮನ್ಸ್ಲಂಟ್ ಎಂಬ ಹೆಸರನ್ನು ನೀಡಿದ್ದೇವೆ.” ಆಸ್ಟ್ರೇಲಿಯದ ಎರಡನೆಯ ಅತಿ ಹಳೆಯ ರಾಜ್ಯವಾದ ಟಾಸ್ಮೇನಿಯ ದ್ವೀಪವನ್ನು ನೋಡಿದ ಮರುದಿನ, ನವೆಂಬರ್ 25, 1642ರಲ್ಲಿ ಡಚ್ ನಾವಿಕ ಏಬಲ್ ಟಾಸ್ಮೇನ್ ಹೇಳಿದ ಮಾತುಗಳಿವು.a ಅಲ್ಲಿ ಟಾಸ್ಮೇನ್ ಯಾವ ಜನರನ್ನು ನೋಡಲಿಲ್ಲವಾದರೂ, ದೂರದ ಬೆಂಕಿಗಳ ಹೊಗೆಯನ್ನು ಮತ್ತು ಹತ್ತಿರದ ಮರಗಳಲ್ಲಿ 1.5 ಮೀಟರುಗಳಷ್ಟು ಅಂತರದಲ್ಲಿ ಮಾಡಲ್ಪಟ್ಟಿದ್ದ ಕೊಯ್ತಗಳನ್ನು ಮಾತ್ರ ನೋಡಿದನು. ಆ ಕೊಯ್ತಗಳನ್ನು ಮಾಡಿದವರು ಯಾರೇ ಆಗಿರಲಿ, ಅವರು ಮರಹತ್ತುವ ವಿಚಿತ್ರ ವಿಧಾನವನ್ನು ಅನುಸರಿಸಿದರು ಇಲ್ಲವೆ ದೈತ್ಯರಾಗಿದ್ದರೆಂದು ಅವನು ಬರೆದನು! ವಾಸ್ತವದಲ್ಲಿ, ಆ ಕೊಯ್ತಗಳು ಮರಹತ್ತಲಿಕ್ಕಾಗಿ ಮಾಡಲ್ಪಟ್ಟಿದ್ದವು.
ತರುವಾಯ, ಫ್ರಾನ್ಸಿನ ಮಾರ್ಯೊನ್ ಡ್ಯೂಫ್ರೆನ್ ಮತ್ತು ಇಂಗ್ಲೆಂಡಿನ ಟಬೈಅಸ್ ಫರ್ನೊ ಭೇಟಿನೀಡುವ ತನಕ, 130 ವರ್ಷಗಳ ವರೆಗೆ, ವ್ಯಾನ್ ಡೈಮನ್ಸ್ ದೇಶವು ಸಾಗರ ಸಂಶೋಧಕರ ಪ್ರವಾಸಿ ಕೈಪಿಡಿಯಿಂದ ಕಣ್ಮರೆಯಾಯಿತು. ಕ್ಯಾಪ್ಟನ್ ಜೇಮ್ಸ್ ಕುಕ್ 1777ರಲ್ಲಿ ಆಗಮಿಸಿ, ಡ್ಯೂಫ್ರೆನ್ನಂತೆ, ದ್ವೀಪದ ವಿಚಿತ್ರ ಜನರಾದ ಮೂಲನಿವಾಸಿ (ಆ್ಯಬರಿಜಿನೀಸ್)ಗಳೊಂದಿಗೆ ಸಂಪರ್ಕ ಬೆಳೆಸಿದನು. ಆದರೆ ಅವನ ಭೇಟಿಯು, ಒಂದು ದುರಂತದ ಆರಂಭವಾಗಿತ್ತು: “ಕೆಲವು ರಾಷ್ಟ್ರಗಳಿಗೆ [ಕುಕ್] ನಾಗರಿಕತೆ ಹಾಗೂ ಧರ್ಮದ ಪಥವನ್ನು ತೆರೆದನು, [ಆದರೆ] ಈ ಕುಲದ [ಮೂಲನಿವಾಸಿಗಳ] ವಿಷಯದಲ್ಲಿ ಅವನು ಮರಣದ ಮುನ್ಸೂಚಕನಾಗಿದ್ದನು” ಎಂಬುದಾಗಿ ಟಾಸ್ಮೇನಿಯದ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಜಾನ್ ವೆಸ್ಟ್ ಹೇಳುತ್ತಾರೆ. ಯಾವ ಸಂಗತಿಯು ಇಂತಹ ಒಂದು ದುರಂತಮಯ ಪರಿಣಾಮಕ್ಕೆ ನಡೆಸಿತು?
ಟಾಸ್ಮೇನಿಯ “ಬ್ರಿಟಿಷ್ ಸಾಮ್ರಾಜ್ಯದ ಸೆರೆಮನೆ” ಆಗುತ್ತದೆ
ಗಡೀಪಾರು ಅಥವಾ ದೇಶಭ್ರಷ್ಟತೆಯು, ಬ್ರಿಟಿಷ್ ಸಾಮ್ರಾಜ್ಯದ ದಂಡನಾವಿಧಿಯಾಗಿತ್ತು ಮತ್ತು ಟಾಸ್ಮೇನಿಯ ಬ್ರಿಟನಿನ ದಂಡನೆಯ ವಸಾಹತುಗಳಲ್ಲೊಂದಾಯಿತು. 1803ರಿಂದ 1852ರ ವರೆಗೆ, ಸುಮಾರು 67,500 ಪುರುಷರು, ಸ್ತ್ರೀಯರು, ಮತ್ತು ಮಕ್ಕಳು ಸಹ—ಕೆಲವರು ಏಳು ವರ್ಷದಷ್ಟು ಎಳೆಯರು—ಸ್ತೋತ್ರಪಾಠಗಳ ಪುಸ್ತಕಗಳನ್ನು ಕದಿಯುವುದರಿಂದ ಹಿಡಿದು, ಬಲಾತ್ಕಾರಸಂಭೋಗದ ವರೆಗೆ ವ್ಯಾಪಿಸುವ ಅಪರಾಧಗಳಿಗಾಗಿ, ಇಂಗ್ಲೆಂಡ್ನಿಂದ ಟಾಸ್ಮೇನಿಯಕ್ಕೆ ಅಟ್ಟಲ್ಪಟ್ಟರು. ಆದರೆ ಹೆಚ್ಚಿನ ಖೈದಿಗಳು, ನೆಲಸಿಗರಿಗಾಗಿ ಇಲ್ಲವೆ ಸರಕಾರದ ಕಾರ್ಯಯೋಜನೆಗಳಲ್ಲಿ ಕೆಲಸಮಾಡಿದರು. “10 ಪ್ರತಿಶತಕ್ಕಿಂತ ಕಡಿಮೆ ಖೈದಿಗಳು . . . ಸುಧಾರಕ ವಸತಿಗೆ ಕಳುಹಿಸಲ್ಪಟ್ಟರು, ಮತ್ತು ಹಾಗೆ ಕಳುಹಿಸಲ್ಪಟ್ಟ ಅನೇಕರು ಸಂಕ್ಷಿಪ್ತ ಅವಧಿಗಳ ವರೆಗೆ ಮಾತ್ರ ಅಲ್ಲಿದ್ದರು” ಎಂದು ದಿ ಆಸ್ಟ್ರೇಲಿಯನ್ ಎನ್ಸೈಕ್ಲೊಪೀಡಿಯ ಹೇಳುತ್ತದೆ. ಟಾಸ್ಮೇನ್ ದ್ವೀಪಕಲ್ಪದಲ್ಲಿರುವ ಆರ್ಥರ್ ರೇವು ಪಟ್ಟಣವು, ಪ್ರಧಾನ ಸುಧಾರಕ ವಸತಿಯಾಗಿತ್ತು, ಆದರೆ ಅತ್ಯಂತ ಘಾತುಕರಾದ ಖೈದಿಗಳನ್ನು, ಮೆಕ್ವಾರಿ ಬಂದರಿಗೆ ಕಳುಹಿಸಲಾಯಿತು. ಆ ಬಂದರು, “ಚಿತ್ರಹಿಂಸೆಯ ಪ್ರಮುಖ ಸ್ಥಾನವಾಗಿ” ಪ್ರತಿಷ್ಠಾಪಿಸಲ್ಪಟ್ಟಿತ್ತು. ಬಂದರಿನ ಇಕ್ಕಟ್ಟಾದ ಪ್ರವೇಶಮಾರ್ಗವು, ನರಕದ ದ್ವಾರಗಳು ಎಂಬ ಕೇಡುಸೂಚಕ ಹೆಸರನ್ನು ಗಳಿಸಿತು.
ಇದು ಆಸ್ಟ್ರೇಲಿಯ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ, ಡಾ. ರೂಡಾಲ್ಫ್ ಬ್ರಾಶ್ ಈ ಆದಿಸ್ಥಿತಿಯ ವಸಾಹತಿನ ಮತ್ತೊಂದು ಪ್ರಮುಖ ಅಂಶವನ್ನು ವಿವರಿಸುತ್ತಾರೆ—ಅದರ ಆತ್ಮಿಕತೆ, ಇಲ್ಲವೆ ಆತ್ಮಿಕತೆಯ ಕೊರತೆ. ಅವರು ಬರೆಯುವುದು: “ಆರಂಭದಿಂದಲೂ, ಆಸ್ಟ್ರೇಲಿಯದಲ್ಲಿ [ನಿಶ್ಚಯವಾಗಿಯೂ ಟಾಸ್ಮೇನಿಯವನ್ನು ಸೇರಿಸಿ] ಧರ್ಮವನ್ನು ಅಲಕ್ಷಿಸಿ, ಕಡೆಗಣಿಸಲಾಯಿತು, ಮತ್ತು ಹೆಚ್ಚೆಂದರೆ ಅಧಿಕಾರರೂಢವ್ಯವಸ್ಥೆಯಿಂದ ಅದರ ಸ್ವಂತ ಲಾಭಕ್ಕಾಗಿ ಅದನ್ನು ಉಪಯೋಗಿಸಲಾಯಿತು ಮತ್ತು ದುರುಪಯೋಗಿಸಲಾಯಿತು. ಪ್ರಾರ್ಥನೆಮಾಡದೆಯೇ ವಸಾಹತನ್ನು ಸ್ಥಾಪಿಸಲಾಯಿತು ಮತ್ತು ಆಸ್ಟ್ರೇಲಿಯದಲ್ಲಿ ನಡೆಸಲ್ಪಟ್ಟ ಪ್ರಥಮ ಧಾರ್ಮಿಕ ಸಂಸ್ಕಾರವು ಒಂದು ಹಿಂದಾಲೋಚನೆಯಾಗಿತ್ತೆಂದು ತೋರುತ್ತದೆ.” ಉತ್ತರ ಅಮೆರಿಕದ ಯಾತ್ರಿಕರು ಚರ್ಚುಗಳನ್ನು ಕಟ್ಟಿದರಾದರೂ, “ದಕ್ಷಿಣ ಆಸ್ಟ್ರೇಲಿಯದ ಆದಿನಿವಾಸಿಗಳು, ಹಾಜರಾಗುವ ಬೇಸರದಿಂದ ತಪ್ಪಿಸಿಕೊಳ್ಳಲಿಕ್ಕಾಗಿ ತಮ್ಮ ಪ್ರಥಮ ಚರ್ಚನ್ನು ಸುಟ್ಟುಬಿಟ್ಟರು” ಎಂಬುದಾಗಿ ಟಾಸ್ಮೇನಿಯದ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕವು ಹೇಳುತ್ತದೆ.
ಈಗಾಗಲೇ ರೋಗಗ್ರಸ್ಥವಾಗಿದ್ದ ಈ ನೈತಿಕತೆಯು, ರಮ್ನ ಪುಷ್ಕಳತೆಯಿಂದ ಇನ್ನೂ ಹೆಚ್ಚು ಸೋಂಕಿತವಾಯಿತು. ನಾಗರಿಕ ಮತ್ತು ಸೈನಿಕನಿಗೆ—ಏಕರೂಪವಾಗಿ—ರಮ್, “ಸಂಪತ್ತು ಗಳಿಸುವ ನಿಶ್ಚಿತ ಮಾರ್ಗ”ವಾಗಿತ್ತೆಂದು ಇತಿಹಾಸಕಾರರಾದ ಜಾನ್ ವೆಸ್ಟ್ ಹೇಳುತ್ತಾರೆ.
ಆದರೆ, ಕೆಲವು ಸಂದರ್ಭಗಳಲ್ಲಿ ಆಹಾರದ ಅಭಾವವಿರುತ್ತಿತ್ತು. ಈ ಸಮಯಗಳಲ್ಲಿ, ಮುಕ್ತ ಕೈದಿಗಳು ಮತ್ತು ನೆಲಸಿಗರು, ಮೂಲನಿವಾಸಿಗಳು ಈಟಿಗಳಿಂದ ಬೆನ್ನಟ್ಟಿದ ಅದೇ ಕಾಡುಮೃಗದ ಬೇಟೆಯಾಡಲು ಬಂದೂಕುಗಳನ್ನು ಉಪಯೋಗಿಸಿದರು. ಒತ್ತಡಗಳು ಹೆಚ್ಚಾದುದು ಗ್ರಾಹ್ಯವೇ. ಈಗ ಆ ಸ್ಫೋಟಕ ಮಿಶ್ರಣದೊಳಗೆ ಬಿಳಿಯ ಕುಲಸಂಬಂಧಿತ ದುರಹಂಕಾರ, ರಮ್ನ ಪುಷ್ಕಳತೆ, ಮತ್ತು ಅಸಂಗತವಾದ ಸಾಂಸ್ಕೃತಿಕ ಭಿನ್ನತೆಗಳನ್ನು ಕೂಡಿಸಿರಿ. ಐರೋಪ್ಯರು ರೇಖನದಿಂದ ಮೇರೆಗಳನ್ನು ರೂಪಿಸಿ, ಬೇಲಿಗಳನ್ನು ಕಟ್ಟುತ್ತಾರೆ; ಮೂಲನಿವಾಸಿಗಳು ಅಲೆದಾಡುತ್ತಾ ಬೇಟೆಯಾಡಿ ಸಂಗ್ರಹಿಸುತ್ತಾರೆ. ಬೇಕಾದದ್ದು ಒಂದು ಕಿಡಿ ಮಾತ್ರವೇ.
ಒಂದು ಜನಾಂಗವು ಕಣ್ಮರೆಯಾಗುತ್ತದೆ
ಆ ಕಿಡಿಯು ಮೇ 1804ರಲ್ಲಿ ಹೊತ್ತಿಕೊಂಡಿತು. ಲೆಫ್ಟೆನಂಟ್ ಮೂರ್ನ ನೇತೃತ್ವದಲ್ಲಿ ಒಂದು ತಂಡವು, ಯಾವ ಕೆಣಕಾಟವೂ ಇಲ್ಲದೆ, ಬೇಟೆಯಾಡುತ್ತಿದ್ದ ಮೂಲನಿವಾಸಿ ಪುರುಷರು, ಸ್ತ್ರೀಯರು, ಮತ್ತು ಮಕ್ಕಳ ಒಂದು ದೊಡ್ಡ ಗುಂಪಿನ ಮೇಲೆ ಗುಂಡುಹಾರಿಸಿ, ಅನೇಕರನ್ನು ಕೊಂದಿತು ಹಾಗೂ ಗಾಯಗೊಳಿಸಿತು. ಈಟಿಗಳು ಮತ್ತು ಕಲ್ಲುಗಳಿಗೆ ಪ್ರತಿಯಾಗಿ ಗುಂಡುಗಳು ಎಂದು ಕರೆಯಲ್ಪಡುವ “ಕಪ್ಪು ಯುದ್ಧ”ವು ಆರಂಭಿಸಿತ್ತು.
ಅನೇಕ ಐರೋಪ್ಯರು ಮೂಲನಿವಾಸಿಗಳ ಕಗ್ಗೊಲೆಯಿಂದ ಹೇಸಿಗೆಪಟ್ಟುಕೊಂಡರು. ರಾಜ್ಯಪಾಲರಾದ ಸರ್ ಜಾರ್ಜ್ ಆರ್ಥರ್ ಎಷ್ಟೊಂದು ಕಷ್ಟಕ್ಕೀಡಾದರೆಂದರೆ, ‘ಮೂಲನಿವಾಸಿಗಳ ಮೇಲೆ ಸರಕಾರವು ವಿರುದ್ಧೇಚ್ಛೆಯಿಂದ ಹೇರಿದ ಬಾಧೆಗಳಿಗೆ ನಷ್ಟಭರ್ತಿ’ಮಾಡಲು ಅಗತ್ಯವಾಗಿದ್ದ ಏನನ್ನಾದರೂ ಮಾಡಲು ತಾವು ಸಿದ್ಧರೆಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ಹೀಗೆ, ಮೂಲನಿವಾಸಿಗಳನ್ನು “ಒಟ್ಟುಗೂಡಿಸಿ” ಅವರನ್ನು “ನಾಗರೀಕರಿಸುವ” ಕಾರ್ಯಕ್ರಮವನ್ನು ಅವರು ಆರಂಭಿಸಿದರು. “ಕಪ್ಪು ರೇಖೆ” ಎಂಬುದಾಗಿ ಕರೆಯಲ್ಪಟ್ಟ ಒಂದು ಕಾರ್ಯಾಚರಣೆಯಲ್ಲಿ, ಸುಮಾರು 2,000 ಸೈನಿಕರು, ನೆಲಸಿಗರು, ಮತ್ತು ಖೈದಿಗಳು, ಮೂಲನಿವಾಸಿಗಳನ್ನು ಹಿಡಿದು, ಸುರಕ್ಷಿತವಾದ ಸ್ಥಳದಲ್ಲಿ ಅವರನ್ನು ಪುನಃ ನೆಲೆಗೊಳಿಸುವ ಪ್ರಯತ್ನದಲ್ಲಿ ಪೊದೆಗಳನ್ನು ಭೇದಿಸಿಕೊಂಡು ಮುಂದೆ ಸಾಗಿದರು. ಆದರೆ ಆ ಕಾರ್ಯಾಚರಣೆಯು ಒಂದು ಅವಮಾನಕರವಾದ ಸೋಲಾಗಿತ್ತು; ಬಿಳಿಯರು ಒಬ್ಬಾಕೆ ಸ್ತ್ರೀ ಹಾಗೂ ಒಬ್ಬ ಹುಡುಗನನ್ನು ಮಾತ್ರ ಸೆರೆಹಿಡಿದರು. ಆಗ, ವೆಸ್ಲಿಯನ್ ಪಂಥದ ಒಬ್ಬ ಪ್ರಸಿದ್ಧ ವ್ಯಕ್ತಿಯಾದ ಜಾರ್ಜ್ ಎ. ರಾಬಿನ್ಸನ್, ಹೆಚ್ಚು ಸಮಾಧಾನಕರವಾದ ಸಮೀಪಿಸುವಿಕೆಯ ನೇತೃತ್ವ ವಹಿಸಿದನು ಮತ್ತು ಅದು ಪರಿಣಾಮಕಾರಿಯಾಗಿತ್ತು. ಮೂಲನಿವಾಸಿಗಳು ಅವನ ಮೇಲೆ ಭರವಸೆಯಿಟ್ಟು, ಟಾಸ್ಮೇನಿಯದ ಉತ್ತರದಲ್ಲಿರುವ ಫ್ಲಿಂಡರ್ಸ್ ದ್ವೀಪದಲ್ಲಿ ಪುನಃ ನೆಲೆಯೂರುವ ನೀಡಿಕೆಯನ್ನು ಸ್ವೀಕರಿಸಿದರು.
ಆಸ್ಟ್ರೇಲಿಯದ ಇತಿಹಾಸ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಮಾರ್ಜರಿ ಬರ್ನಾರ್ಡ್, ರಾಬಿನ್ಸನ್ನ ಸಾಧನೆಯ ಕುರಿತು ಹೇಳುವುದು: “ವಾಸ್ತವದಲ್ಲಿ, ಬಹುಶಃ ಅವನಿಗೇ ಇದರ ಅರಿವು ಇರಲಿಲ್ಲವಾದರೂ, ಅವನ ಶಾಂತಿಸಂಧಾನವು ವಿಶ್ವಾಸಘಾತಕತನವಾಗಿತ್ತು. ಬಾಸ್ ಜಲಸಂಧಿಯಲ್ಲಿ, ತಮ್ಮ ಪೋಷಕನಂತಿದ್ದ ರಾಬಿನ್ಸನ್ನೊಂದಿಗೆ, ಆ ನತದೃಷ್ಟ ಸ್ವದೇಶಿಯರು ಫ್ಲಿಂಡರ್ಸ್ ದ್ವೀಪದಲ್ಲಿ ಬೇರ್ಪಡಿಸಲ್ಪಟ್ಟರು. ಅವರು ಕ್ಷಯಿಸಿ, ಸತ್ತುಹೋದರು.” ಬಂದೂಕುಗಳಿಂದ ಕೊಲ್ಲಲ್ಪಡುವ ಬದಲಿಗೆ ಅವರು ಬಿಳಿಯರ ಜೀವನ ಶೈಲಿ ಮತ್ತು ಆಹಾರಪಥ್ಯದಿಂದ ಕೊಲ್ಲಲ್ಪಟ್ಟರು. ಒಂದು ಗ್ರಂಥವು ಹೇಳುವುದೇನೆಂದರೆ, “ಟಾಸ್ಮೇನಿಯದ ಶುದ್ಧ ವಂಶದ ಕೊನೆಯ ಮೂಲನಿವಾಸಿಯು, 1905ರಲ್ಲಿ ಹೊಬರ್ಟ್ನಲ್ಲಿ ಸತ್ತುಹೋದ ಫ್ಯಾನಿ ಕಾಕ್ರೆನ್ ಸ್ಮಿತ್ ಆಗಿದ್ದಳು.” ಈ ವಿಷಯವಾಗಿ ಪರಿಣತರು ವಿಭಿನ್ನ ಅಭಿಪ್ರಾಯಗಳನ್ನು ಪಡೆದಿದ್ದಾರೆ. ಕೆಲವರು 1876ರಲ್ಲಿ ಹೊಬರ್ಟ್ನಲ್ಲಿ ಸತ್ತ ಒಬ್ಬ ಸ್ತ್ರೀ, ಟ್ರೂಗಾನಿನಿಗೆ ಸೂಚಿಸುತ್ತಾರೆ, ಇತರರು 1888ರಲ್ಲಿ ಕ್ಯಾಂಗರೂ ದ್ವೀಪದಲ್ಲಿ ಸತ್ತ ಒಬ್ಬ ಸ್ತ್ರೀಗೆ ಸೂಚಿಸುತ್ತಾರೆ. ಟಾಸ್ಮೇನಿಯದ ಮೂಲನಿವಾಸಿಗಳ ಮಿಶ್ರಿತ ವಂಶಸ್ಥರು ಇಂದು ಜೀವಂತರಾಗಿಯೂ ತೃಪ್ತರಾಗಿಯೂ ಇದ್ದಾರೆ. ಮಾನವಜಾತಿಯಿಂದ ಗೈಯಲ್ಪಟ್ಟ ಅಪಪ್ರಯೋಗಗಳ ಪಟ್ಟಿಗೆ ಸೇರಿಸಲಾಗಿ, ಸೂಕ್ತವಾಗಿಯೇ ಈ ಘಟನೆಯನ್ನು “ಟಾಸ್ಮೇನಿಯದ ಅತ್ಯಂತ ಮಹಾನ್ ದುರಂತ” ಎಂಬುದಾಗಿ ಕರೆಯಲಾಗಿದೆ. ಅಲ್ಲದೆ, “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು”ಮಾಡಿದ್ದಾನೆಂಬ ಬೈಬಲ್ ಸಂಬಂಧಿತ ಸತ್ಯವನ್ನು ಅದು ಒತ್ತಿಹೇಳುತ್ತದೆ.—ಪ್ರಸಂಗಿ 8:9.
ಟಾಸ್ಮೇನಿಯದ ದೃಷ್ಟಿಗೋಚರ ವೈಪರೀತ್ಯಗಳು
ಇಂದು ನೀವು ವಸ್ತುಸಂಗ್ರಹಾಲಯಗಳನ್ನು, ಗ್ರಂಥಾಲಯಗಳನ್ನು, ಇಲ್ಲವೆ ಸೆರೆಮನೆಯ ಅವಶೇಷಗಳನ್ನು ಭೇಟಿಮಾಡದಿದ್ದರೆ, ಈ ಸುಂದರವಾದ ದ್ವೀಪದ ಅಗ್ನಿದೀಕ್ಷೆಯ ವಿಷಯವಾಗಿ ನಿಮಗೆ ಯಾವ ಅರಿವೂ ಇರಲಿಕ್ಕಿಲ್ಲ. ಟಾಸ್ಮೇನಿಯ, ಭೂಮಧ್ಯ ರೇಖೆಯಿಂದ ಉತ್ತರದಲ್ಲಿ ರೋಮ್, ಸಪೊರೊ, ಮತ್ತು ಬಾಸ್ಟನ್ ಎಷ್ಟು ಅಂತರದಲ್ಲಿವೆಯೊ ದಕ್ಷಿಣದಿಂದ ಅಷ್ಟೇ ಅಂತರದಲ್ಲಿದೆ. ಮತ್ತು ಅದರ ಇತಿಹಾಸದಂತೆ—ದ್ವೀಪದಲ್ಲಿರುವ ಯಾವ ಸ್ಥಳವೂ ಸಮುದ್ರದಿಂದ 115 ಕಿಲೊಮೀಟರುಗಳಿಗಿಂತ ಹೆಚ್ಚು ದೂರದಲ್ಲಿಲ್ಲವಾದರೂ—ಅದರ ಪ್ರಕೃತಿ ಲಕ್ಷಣಗಳು ತೀಕ್ಷ್ಣ ವೈಪರೀತ್ಯಗಳುಳ್ಳವುಗಳಾಗಿವೆ.
ಟಾಸ್ಮೇನಿಯದ ಒಟ್ಟು ಕ್ಷೇತ್ರದಲ್ಲಿ, 44 ಪ್ರತಿಶತ ಕಾಡಾಗಿದ್ದು, 21 ಪ್ರತಿಶತ ರಾಷ್ಟ್ರೀಯ ಉದ್ಯಾನವನವಾಗಿದೆ. ಇವು ಅಪೂರ್ವವಾದ ಅನುಪಾತಗಳಾಗಿವೆ! ಪುಟ್ಟ ಟ್ಯಾಸ್ಸಿಯ ನಿಜಾಂಶ ಪುಸ್ತಕ (ಇಂಗ್ಲಿಷ್)ಕ್ಕನುಸಾರ, “ಪಾಶ್ಚಾತ್ಯ ಟಾಸ್ಮೇನಿಯದ ಲೋಕ ಪರಂಪರೆಯ ಕ್ಷೇತ್ರವು (ನಿಸರ್ಗ ಕ್ಷೇತ್ರವು), ಲೋಕದಲ್ಲಿನ ಹಾನಿಗೊಳಿಸಲ್ಪಡದ, ಕೊನೆಯ ಮಹಾ ಸಮಶೀತೋಷ್ಣದ ಅರಣ್ಯ ಕ್ಷೇತ್ರಗಳಲ್ಲೊಂದಾಗಿದೆ.” ಮಳೆ ಮತ್ತು ಹಿಮದಿಂದ ಪುನಃ ಭರ್ತಿಮಾಡಲ್ಪಟ್ಟ ಸರೋವರಗಳು, ನದಿಗಳು, ಮತ್ತು ಜಲಪಾತಗಳು—ಟ್ರೌಟ್ ಮೀನುಗಳಿಂದ ಸಂಪೂರಿತವಾಗಿದ್ದು—ಪೆನ್ಸಿಲ್ ಪೈನ್, ನೀಲಗಿರಿ ಮರ, ಮರ್ಟ್ಲ್ ಮರ, ಬ್ಲ್ಯಾಕ್ವುಡ್ ಮರ, ಸ್ಯಾಸಫ್ರಾಸ್ ಮರ, ಚರ್ಮವೃಕ್ಷ, ಸೆಲರಿ-ಟಾಪ್ಡ್ ಪೈನ್, ಮತ್ತು ಹೌನ್ ಪೈನ್—ಹೆಸರಿಸಲಿಕ್ಕೆ ಕೆಲವು ಮಾತ್ರ—ಕಾಡುಗಳನ್ನು ಪೋಷಿಸುತ್ತವೆ. ಮಧ್ಯ ಪಶ್ಚಿಮದ ಪ್ರಸ್ಥಭೂಮಿಯ ಉನ್ನತ ಮೈದಾನಗಳು ಮತ್ತು ಅನೇಕ ವೇಳೆ ಅದರ ಹಿಮಾವೃತ ಶಿಖರಗಳಿಂದ ಒದಗಿಸಲ್ಪಡುವ ನೀಳ ನೋಟಗಳು, ನಿಸರ್ಗ ಪ್ರೇಮಿಗಳನ್ನು ಪದೇ ಪದೇ ಆಕರ್ಷಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಆದರೆ “ಲೋಕ ಪರಂಪರೆಯ” ಸಂರಕ್ಷಣೆಯನ್ನು ವಿರೋಧವಿಲ್ಲದೆ ಪಡೆಯಲಾಗಲಿಲ್ಲ. ಮತ್ತು ಪರಿಸರದಲ್ಲಿ ಆಸಕ್ತರಾಗಿರುವ ಜನರು, ಗಣಿಕೆಲಸ, ಕಾಗದ ತಯಾರಿಕೆ, ಮತ್ತು ಜಲವಿದ್ಯುತ್ ಶಕ್ತಿಯ ಅಭಿರುಚಿಗಳಿಗೆ ವಿರುದ್ಧವಾಗಿ ಇನ್ನೂ ತಳಮಳಿಸುತ್ತಿದ್ದಾರೆ. ಗಣಿಕೆಲಸದ ಪಟ್ಟಣವಾದ ಕ್ವೀನ್ಸ್ಟೌನ್ನ ಚಂದ್ರನಂತಹ ಭೂದೃಶ್ಯವು, ಸಂಪನ್ಮೂಲಗಳ ವಿಚಾರಹೀನ ಶೋಷಣೆಯಿಂದಾದ ಪರಿಣಾಮಗಳ ಒಂದು ಕಠೋರ ಮರುಜ್ಞಾಪನವಾಗಿದೆ.
ಸ್ಥಳೀಯ ಪ್ರಾಣಿಗಳು ಕೂಡ—ಗಮನಾರ್ಹವಾಗಿ ತೈಲಸಿನ್, ಅಥವಾ ಟಾಸ್ಮೇನಿಯದ ಹುಲಿ, ಕಂದು ಬಣ್ಣದ ನಾಯಿಯಂತಹ ಹೊಟ್ಟೆಯ ಚೀಲವುಳ್ಳ ಸಸ್ತನಿ ಪ್ರಾಣಿ—ಕಷ್ಟಾನುಭವಿಸಿವೆ. ಅದರ ಬೆನ್ನು ಮತ್ತು ಹಿಂಭಾಗದ ಉದ್ದಕ್ಕೂ ಇರುವ ಕರಿಯ ಪಟ್ಟೆಗಳು, ಹುಲಿ ಎಂಬ ಹೆಸರನ್ನು ಅದಕ್ಕೆ ತಂದುಕೊಟ್ಟವು. ಅಸಂತೋಷಕರವಾಗಿ, ಈ ತೆಳುವಾದ, ನಾಚಿಕೆಸ್ವಭಾವದ ಮಾಂಸಾಹಾರಿ ಪ್ರಾಣಿಯು, ಕುಕ್ಕುಟ ಪಕ್ಷಿಗಳು ಮತ್ತು ಕುರಿಗಳ ಬೇಟೆಯಾಡಿತು. ಅದರ ನಾಶನಕ್ಕಾಗಿದ್ದ ಪ್ರೋತ್ಸಾಹ ಧನದ ಕಾರಣ, ಅದು 1936ರೊಳಗೆ ಅಳಿದುಹೋಯಿತು.
ಹೊಟ್ಟೆಯ ಚೀಲವುಳ್ಳ ಟಾಸ್ಮೇನಿಯದ ಮತ್ತೊಂದು ಅಪೂರ್ವವಾದ ಸಸ್ತನಿ ಪ್ರಾಣಿ, ಟಾಸ್ಮೇನಿಯನ್ ಡೆವಿಲ್ ಇನ್ನೂ ಅಸ್ತಿತ್ವದಲ್ಲಿದೆ. ತನ್ನ ಶಕ್ತಿಶಾಲಿ ದವಡೆಗಳು ಮತ್ತು ಹಲ್ಲುಗಳನ್ನು ಉಪಯೋಗಿಸುತ್ತಾ, ಆರರಿಂದ ಎಂಟು ಕಿಲೊಗ್ರಾಮ್ ತೂಕದ ಈ ಮಾಂಸಲ ಜಲಗಾರನು, ಸತ್ತ ಕ್ಯಾಂಗರುವಿನ ತಲೆಬುರುಡೆ ಸಹಿತ ಇಡೀ ದೇಹವನ್ನು ತಿನ್ನಬಲ್ಲನು.
ಟಾಸ್ಮೇನಿಯ, ಅದರ ಚಿಕ್ಕ ಬಾಲದ ಷಿಯರ್ವಾಟರ್ ಅಥವಾ ಮಟ್ಟನ್ಬರ್ಡ್ಗಾಗಿಯೂ ಪ್ರಸಿದ್ಧವಾಗಿದೆ. ತನ್ನ ವಲಸೆಹೋಗುವಿಕೆಯನ್ನು ಟಾಸ್ಮೇನಿಯದ ಸಮುದ್ರದಿಂದ ಆರಂಭಿಸಿ, ಕಾರ್ಯತಃ ಶಾಂತ ಸಾಗರದ ಪ್ರದಕ್ಷಿಣೆ ಮಾಡಿದ ನಂತರ, ಅದು ಪ್ರತಿವರ್ಷ ಅದೇ ಮರಳಿನ ನೆಲಗೂಡಿಗೆ ಹಿಂದಿರುಗುತ್ತದೆ—ಅದರ ವಿನ್ಯಾಸಕ ಹಾಗೂ ಸೃಷ್ಟಿಕರ್ತನಿಗೆ ನಿಜವಾಗಿಯೂ ಕೀರ್ತಿ ತರುವ ಅದ್ಭುತಕಾರ್ಯ.
ಅದರ ಸ್ವಂತ ರಾತ್ರಿಯ ತೋಪುಗಳ ಬಳಿಯಲ್ಲಿ, ಮತ್ತೊಂದು ಪಕ್ಷಿ—ನೀರಿನ ಅಡಿಯಲ್ಲಿ “ಹಾರುವ” ಪಕ್ಷಿ ಜೀವಿಸುತ್ತದೆ. ಯಕ್ಷ ಪೆಂಗ್ವಿನ್ ಎಂದು ಕರೆಯಲ್ಪಡುವ ಅದು, ಪ್ರೀತಿಯೋಗ್ಯವಾದ, ಒಂದು ಕಿಲೊಗ್ರಾಮ್ ತೂಕದ, ಚಿಕ್ಕ ಕೊಕ್ಕಿನ ತುಪ್ಪುಳು ಮೂಟೆಯಾಗಿದೆ. ಎಲ್ಲ ಪೆಂಗ್ವಿನ್ಗಳಲ್ಲೇ ಅತಿ ಚಿಕ್ಕದಾದ ಇದು, ಬಹಳಷ್ಟು ಸದ್ದುಮಾಡುವಂತಹದ್ದೂ ಆಗಿದೆ! ಅದರ ಚಲನವಲನಗಳು ತೀವ್ರತೆಯಲ್ಲಿ ಭಿನ್ನವಾಗಿದ್ದು, ಕೆಲವೊಮ್ಮೆ ಧ್ವನಿ ಮತ್ತು ದೇಹದ ಚಟುವಟಿಕೆಯು ಉದ್ವೇಗ ಸ್ಥಿತಿಯನ್ನು ತಲಪುತ್ತದೆ. ಪ್ರೀತಿಯ ಅನಿಸಿಕೆ ಆದಾಗ, ಒಂದು ಜೋಡಿಯು ಪರಸ್ಪರ ಇರುವ ತಮ್ಮ ಅಂಟಿಕೆಯನ್ನು ದೃಢಪಡಿಸಲು ಒಂದು ಯುಗಳನರ್ತನವನ್ನೂ ಪ್ರದರ್ಶಿಸಬಹುದು. ಆದರೆ ದುಃಖಕರವಾಗಿ ಅನೇಕ ಪಕ್ಷಿಗಳು, ಬೆಸ್ತರ ಕಿವಿರುಬಲೆಗಳು, ತೈಲ ಚೆಲ್ಲುವಿಕೆಗಳು, ಆಹಾರವೆಂದು ತಪ್ಪಾಗಿ ಎಣಿಸಲ್ಪಟ್ಟ ಪ್ಲ್ಯಾಸ್ಟಿಕ್ ವಸ್ತುಗಳು, ಅಥವಾ ನಾಯಿಗಳು ಮತ್ತು ಕಾಡು ಬೆಕ್ಕುಗಳಿಂದ ಕೊಲ್ಲಲ್ಪಡುತ್ತವೆ.
ದ್ವೀಪದ ಹೆಚ್ಚು ಪ್ರಶಾಂತವಾದ ರೂಪ
ಮಧ್ಯ ಪ್ರಸ್ಥಭೂಮಿಯ ಅಂಚಿನಿಂದ ಉತ್ತರ ಇಲ್ಲವೆ ಪೂರ್ವ ದಿಕ್ಕಿನೆಡೆಗೆ ನೋಡುವಾಗ, ನೀವು ಟಾಸ್ಮೇನಿಯದ ಹೆಚ್ಚು ಮನೋಹರವಾದ ಪಾರ್ಶ್ವವನ್ನು ನೋಡುವಿರಿ. ಅದರಲ್ಲಿ ಕೃಷಿಮಾಡಲ್ಪಟ್ಟ, ಚಾಕ್ಲೆಟ್ ಬಣ್ಣದ ಹೊಲಗಳು, ಡೊಂಕುಡೊಂಕಾಗಿ ಹರಿಯುವ ನದಿಗಳು ಮತ್ತು ಉಪನದಿಗಳು, ಸಾಲುಮರದ ದಾರಿಗಳು, ಮತ್ತು ಕುರಿ ಹಾಗೂ ದನಗಳು ಅಲ್ಲಲ್ಲಿ ಕಂಡುಬರುವ ಹಸುರು ಹುಲ್ಲುಗಾವಲುಗಳು ಸೇರಿವೆ. ಉತ್ತರಭಾಗದ ಪಟ್ಟಣವಾದ ಲಿಲೀಡೇಲ್ನ ಬಳಿ, ಜನವರಿಯಷ್ಟಕ್ಕೆ, ಪೂರ್ಣವಾಗಿ ಅರಳಿರುವ ಲ್ಯಾವಿಂಡರ್ ತೋಟಗಳು ಈ ಹಳ್ಳಿಯ ಚಿತ್ರಕಲೆಗೆ, ಮೋಹಗೊಳಿಸುವ ಪರಿಮಳದೊಂದಿಗೆ ತಿಳಿ ಧೂಮ್ರ ಬಣ್ಣವನ್ನು ಕೂಡಿಸುತ್ತವೆ.
ಟಾಸ್ಮೇನಿಯಕ್ಕೆ ಸೇಬು ದ್ವೀಪವೆಂಬ ಹೆಸರನ್ನು ಗಳಿಸಿಕೊಟ್ಟ ಸೇಬು ತೋಟಗಳಿಂದ, ಹತ್ತಿರದಲ್ಲಿಯೇ ಇರುವ ಡರ್ವಂಟ್ ನದಿಯ ಉದ್ದಕ್ಕೂ, ಸುಮಾರು 1,82,000 ಜನಸಂಖ್ಯೆಯೊಂದಿಗೆ ರಾಜಧಾನಿ ನಗರವಾದ ಹೊಬರ್ಟ್ ಚಾಚಿಕೊಂಡಿದೆ. ಅದು 1,270 ಮೀಟರುಗಳಷ್ಟು ಎತ್ತರವಾಗಿರುವ, ಮಂಕುಗವಿದ ವೆಲ್ಲಿಂಗ್ಟನ್ ಪರ್ವತದ ದೊಡ್ಡ ಆಕೃತಿಯಿಂದ ಆವರಿಸಲ್ಪಟ್ಟಿದೆ. ಮೋಡಗಳಿಲ್ಲದ ದಿನದಂದು, ಹೆಚ್ಚಾಗಿ ಹಿಮಾವರಿತವಾಗಿರುವ ಈ ಪರ್ವತವು ಕೆಳಗಿರುವ ನಗರದ ಪಕ್ಷಿನೋಟವನ್ನು ನೀಡುತ್ತದೆ. ಹೊಬರ್ಟ್ 1803ರಿಂದ—ಲೆಫ್ಟೆನಂಟ್ ಜಾನ್ ಬವನ್ ಮತ್ತು 35 ಕೈದಿಗಳನ್ನೊಳಗೊಂಡ 49 ಜನರ ಅವನ ಗುಂಪು, ಪ್ರಥಮ ಸಲ ರಿಸ್ಡನ್ ಕೋವ್ನ ಬಳಿ ಬಂದುಮುಟ್ಟಿದ ಸಮಯದಿಂದ—ನಿಜವಾಗಿಯೂ ಬದಲಾಗಿದೆ ಮತ್ತು ಬಹಳಷ್ಟು ಪ್ರಗತಿಯನ್ನು ಮಾಡಿದೆ. ಹೌದು, ಕ್ಯಾನ್ವಸ್ ಪಟಗಳೂ ಕಿರುಕಲು ದನಿಮಾಡುವ ಮರಕಟ್ಟುಗಳೂ ಗತಿಸಿಹೋಗಿರುವುದಾದರೂ, ವರ್ಷಕ್ಕೊಮ್ಮೆ ಸಿಡ್ನಿಯಿಂದ ಹೊಬರ್ಟ್ ವರೆಗೆ ನಡೆಸಲ್ಪಡುವ ಕಡುಕಷ್ಟದ ದೋಣಿ ಪಂದ್ಯವು—ನೇರವಾಗಿ ಹೊಬರ್ಟ್ನ ಮಧ್ಯಕ್ಕೆ—ಹುರಿದುಂಬಿಸುವ ಗುಂಪುಗಳನ್ನು ದಾಟಿ, ಬಹಳ ಜೋರಾಗಿ ಓಡುವ ವರ್ಣರಂಜಿತ ದೋಣಿಯ ಪಟಗಳು ಮತ್ತು ಅಖಂಡವಾದ ದೋಣಿಗಳು, ಆ ಹಿಂದಿನ ದಿನಗಳ ನೆನಪು ಹುಟ್ಟಿಸುತ್ತವೆ.
ಹಿಂಸೆಯ ದೇಶದಿಂದ ಆತ್ಮಿಕ ಪ್ರಮೋದವನಕ್ಕೆ
1994ರಲ್ಲಿ ಲಾನ್ಸೆಸ್ಟನ್ನಲ್ಲಿ ನಡೆದ ಯೆಹೋವನ ಸಾಕ್ಷಿಗಳ “ದಿವ್ಯ ಭಯ” ಎಂಬ ಜಿಲ್ಲಾ ಅಧಿವೇಶನದಲ್ಲಿ ಹಾಜರಿದ್ದ 2,447 ಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದ ಜೆಫ್ರಿ ಬಟರ್ವರ್ಥ್, ಹೀಗೆ ಜ್ಞಾಪಿಸಿಕೊಳ್ಳುತ್ತಾರೆ: “ಇಡೀ ಟಾಸ್ಮೇನಿಯದಲ್ಲಿ ಸುಮಾರು 40 ಸಾಕ್ಷಿಗಳಿದ್ದ ಸಮಯವನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ.” ಈಗ ಅಲ್ಲಿ ಸುಮಾರು 26 ಸಭೆಗಳು ಮತ್ತು 23 ರಾಜ್ಯ ಸಭಾಗೃಹಗಳಿವೆ.
ಜೆಫ್ ಕೂಡಿಸುವುದು, “ಆದರೆ ಕಾಲಗಳು ಸದಾ ಇಷ್ಟು ಅನುಕೂಲಕರವಾಗಿರಲಿಲ್ಲ. ಉದಾಹರಣೆಗೆ, ಹಿಂದೆ 1938ರಲ್ಲಿ, ಟಾಮ್ ಕಿಟೊ, ರಾಡ್ ಮೆಕ್ವಿಲಿ, ಮತ್ತು ನಾನು—ಮೂವರೂ ಸ್ಯಾಂಡ್ವಿಚ್ ಜಾಹೀರಾತು ಪಟಗಳನ್ನು ಹಾಕಿಕೊಂಡು—‘ನಿಜತ್ವಗಳನ್ನು ಎದುರಿಸಿರಿ’ ಎಂಬ ಸಾರ್ವಜನಿಕ ಬೈಬಲ್ ಉಪನ್ಯಾಸವನ್ನು ಪ್ರಕಟಿಸುತ್ತಿದ್ದೆವು. ಅದು, ಲಂಡನ್ನಿಂದ ರೇಡಿಯೊ ನೆಟ್ವರ್ಕ್ ಮುಖಾಂತರ ಪ್ರಸಾರಗೊಳಿಸಲ್ಪಡಲಿದ್ದ ಸುಳ್ಳು ಧರ್ಮದ ಚುಚ್ಚುವ ಬಯಲುಗೊಳಿಸುವಿಕೆ ಆಗಿತ್ತು. ನಾನು ನನ್ನ ಸಂಗಾತಿಗಳನ್ನು ಸೇರಿದಾಗ, ಅವರು ಯುವ ಜನರ ಒಂದು ಗುಂಪಿನಿಂದ ಪೀಡಿಸಲ್ಪಡುತ್ತಿದ್ದರು. ಮತ್ತು ಪೊಲೀಸರು ಏನೂ ಮಾಡದೆ ನೋಡುತ್ತಾ ಇದ್ದರು! ಸಹಾಯ ಮಾಡಲು ನಾನು ಓಡಿದೆ ಮತ್ತು ಕೂಡಲೆ ಹೊಡೆಯಲ್ಪಟ್ಟೆ. ಆದರೆ ಒಬ್ಬ ಮನುಷ್ಯನು ನನ್ನ ಶರ್ಟಿನ ಹಿಂಭಾಗವನ್ನು ಹಿಡಿದು, ನನ್ನನ್ನು ದೂರ ಎಳೆದೊಯ್ದನು. ನನ್ನನ್ನು ಹೊಡೆಯುವ ಬದಲು, ಆ ಮನುಷ್ಯನು ಕಿರಿಚಿಕೊಂಡಿದ್ದು: ‘ಸಾಕ್ಷಿಗಳನ್ನು ಅವರ ಪಾಡಿಗೆ ಬಿಟ್ಟುಬಿಡಿ!’ ಅನಂತರ ತಗ್ಗುದನಿಯಲ್ಲಿ ಅವನು ನನಗೆ ಹೇಳಿದ್ದು: ‘ಗೆಳೆಯನೇ, ಹಿಂಸಿಸಲ್ಪಟ್ಟ ಅನುಭವ ನನಗೂ ಆಗಿದೆ, ನಾನು ಐರ್ಲೆಂಡಿನವನು.’”
ಯೆಹೋವನು ಆ ಆರಂಭದ ಪಯನೀಯರರನ್ನು ಆಶೀರ್ವದಿಸಿದನು. ಆದಕಾರಣ ದೇವರ ರಾಜ್ಯದ ಸುವಾರ್ತೆಯು ಇಂದು, 4,52,000 ಜನರಿರುವ ಈ ದ್ವೀಪದ ಎಲ್ಲ ಭಾಗಗಳಲ್ಲೂ ತಲಪಿದೆ. ಆದಿ ಖೈದಿಗಳು ಮತ್ತು ಮೂಲನಿವಾಸಿಗಳ ಅನೇಕ ವಂಶಸ್ಥರು, ಆ ಕ್ರೂರವಾದ ಹಿಂದಿನ ದಿನಗಳಲ್ಲಿ ಅಷ್ಟು ಅನ್ಯಾಯದಿಂದ ಸತ್ತ ಎಲ್ಲ ಕರಿಯರು ಮತ್ತು ಬಿಳಿಯರನ್ನು, ಶುದ್ಧೀಕರಿಸಲ್ಪಟ್ಟ ಭೂಮಿಯ ಮೇಲೆ ಪುನಃ ಸ್ವಾಗತಿಸುವುದಕ್ಕೆ ಎದುರುನೋಡುತ್ತಾರೆ. ಏಕೆಂದರೆ, ಬೈಬಲು “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನ”ವೊಂದನ್ನು ವಾಗ್ದಾನಿಸುತ್ತದೆ. (ಅ. ಕೃತ್ಯಗಳು 24:15) ಆ ಸನ್ನಿವೇಶವು ಎಷ್ಟು ಸಂಪೂರ್ಣವಾಗಿ ತಿದ್ದಲ್ಪಡುವುದೆಂದರೆ, “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.”—ಯೆಶಾಯ 65:17.
[ಅಧ್ಯಯನ ಪ್ರಶ್ನೆಗಳು]
a ಟಾಸ್ಮೇನಿಯ ಎಂಬ ಹೆಸರನ್ನು, 1855, ನವೆಂಬರ್ 26ರಂದು ಅಧಿಕೃತವಾಗಿ ಅಂಗೀಕರಿಸಲಾಯಿತು. ನ್ಯೂ ಸೌತ್ ವೇಲ್ಸ್ ಅತ್ಯಂತ ಹಳೆಯ ರಾಜ್ಯವಾಗಿದೆ.
[Pictures/Maps on page 19]
ಮೇಲೆ: ಕ್ರೇಡಲ್ ಪರ್ವತ ಮತ್ತು ಡೋವ್ ಸರೋವರ
ಮೇಲೆ ಬಲಬದಿಯಲ್ಲಿ: ಟಾಸ್ಮೇನಿಯನ್ ಡೆವಿಲ್
ಕೆಳಗೆ ಬಲಬದಿಯಲ್ಲಿ: ನೈರುತ್ಯ ಟಾಸ್ಮೇನಿಯದಲ್ಲಿರುವ ಮಳೆಕಾಡು
ಟಾಸ್ಮೇನಿಯ
ಆಸ್ಟ್ರೇಲಿಯ
[ಕೃಪೆ]
ಟಾಸ್ಮೇನಿಯನ್ ಡೆವಿಲ್ ಮತ್ತು ಟಾಸ್ಮೇನಿಯದ ನಕ್ಷೆ: Department of Tourism, Sport and Recreation – Tasmania; ಆಸ್ಟ್ರೇಲಿಯದ ನಕ್ಷೆ: Mountain High Maps® Copyright © 1995 Digital Wisdom, Inc.