ಪ್ರಮೋದವನಕ್ಕೆ ಹಿಂದಿರುಗುವ ದಾರಿ
ಪ್ರಮೋದವನಕ್ಕಾಗಿರುವ ಮಾನವ ಹಂಬಲಿಕೆ ಮತ್ತು ಅದನ್ನು ಪುನಃ ಸೃಷ್ಟಿಸಲು ಮಾಡಲ್ಪಟ್ಟ ದೊಡ್ಡ ಹಾಗೂ ಸಣ್ಣ ಪ್ರಯತ್ನಗಳ ನೋಟದಲ್ಲಿ, ಇಷ್ಟರೊಳಗಾಗಿ ಭೂಮಿಯು ಒಂದು ಸಾಕ್ಷಾತ್ತಾದ ಪ್ರಮೋದವನವಾಗಿರುತ್ತಿತ್ತೆಂದು ಒಬ್ಬನು ನೆನಸಬಹುದು. ಆದರೆ ಅದೊಂದು ಪ್ರಮೋದವನವಾಗಿರುವುದಿಲ್ಲ.
ಇದಕ್ಕೆ ಬದಲಾಗಿ ಮಾನವಜಾತಿಯು ಲೋಭಕ್ಕೆ ಆದ್ಯತೆಯನ್ನು ನೀಡಿದೆ. ಅದು ಅನೇಕ ವೇಳೆ ಪರಿಸರ ಹಾಗೂ ಜೀವಂತ ವಿಷಯಗಳ ಅದರ ವೈವಿಧ್ಯತೆಗೆ ನಷ್ಟವನ್ನು ತರುತ್ತಾ, ನಿಯಂತ್ರಿಸುತ್ತದೆ. ಪ್ರಾಪಂಚಿಕ ಸಂಪತ್ತು ಪ್ರಮುಖವಾಗಿರುವುದೆಂದು ನಂಬುತ್ತಾ, ಈ ಭೂಮಿಯು ಎಂದಾದರೂ ಏದೆನ್ನಂತಹ ಪ್ರಮೋದವನವಾಗಿ ರೂಪಾಂತರಗೊಳ್ಳುವುದೆಂಬ ಎಲ್ಲ ನಿರೀಕ್ಷೆಯನ್ನು ಅನೇಕ ಜನರು ಕಳೆದುಕೊಂಡಿದ್ದಾರೆ. ಅದಕ್ಕೆ ಬದಲಾಗಿ, ಪ್ರಮೋದವನಕ್ಕಾಗಿರುವ ತಮ್ಮ ಏಕೈಕ ನಿರೀಕ್ಷೆಯಾಗಿ ಅವರು ಸ್ವರ್ಗದಲ್ಲಿ ಮರಣೋತ್ತರ ಜೀವನಕ್ಕಾಗಿ ಎದುರುನೋಡುತ್ತಾರೆ. ಈ ನೋಟವು ಸೂಚಿಸುವುದೇನೆಂದರೆ, ಮೊದಲನೆಯದಾಗಿ, ಏದೆನ್ಗಾಗಿರುವ ನಮ್ಮ ಮಾನವ ಹಂಬಲಿಕೆಯು ನಿತ್ಯಕ್ಕೂ ನಿಷ್ಫಲಗೊಳ್ಳುವುದು ಮತ್ತು ಎರಡನೆಯದಾಗಿ, ದೇವರು ಈ ಗ್ರಹವನ್ನು ಮಾನವ ಹುಚ್ಚುತನ ಮತ್ತು ಲೋಭಕ್ಕೆ ಬಿಟ್ಟುಬಿಟ್ಟಿದ್ದಾನೆ. ವಿಷಯವು ಹೀಗಿದೆಯೊ? ಭವಿಷ್ಯತ್ತು ಏನನ್ನು ಕಾದಿರಿಸಿದೆ? ಮತ್ತು ಆ ಭವಿಷ್ಯತ್ತು ಎಲ್ಲಿರುವುದು?
ಪ್ರಮೋದವನ—ಸ್ವರ್ಗದಲ್ಲೊ ಭೂಮಿಯಲ್ಲೊ?
ಬಹುಮಟ್ಟಿಗೆ 2,000 ವರ್ಷಗಳ ಹಿಂದೆ, ಯೇಸು ಕ್ರಿಸ್ತನು ತನ್ನ ಪಕ್ಕದಲ್ಲಿ ಶೂಲಕ್ಕೇರಿಸಲ್ಪಟ್ಟ ಒಬ್ಬ ಪಶ್ಚಾತ್ತಾಪಿ ಕಳ್ಳನೊಂದಿಗೆ ಮಾತಾಡುವಾಗ ಹೇಳಿದ್ದು: “ನನ್ನ ಸಂಗಡ ಪರದೈಸಿನಲ್ಲಿರುವಿ.” (ಲೂಕ 23:43) ಆ ಕಳ್ಳನು ತನ್ನೊಂದಿಗೆ ಸ್ವರ್ಗಕ್ಕೆ ಹೋಗುವನೆಂಬುದನ್ನು ಯೇಸು ಅರ್ಥೈಸಿದನೊ? ಇಲ್ಲ.
ಆ ದುಷ್ಟನಿಗೂ ಅಂತಹ ವಿಚಾರ ಇದ್ದಿರಲಿಕ್ಕಿಲ್ಲ. ಯಾಕೆ ಇಲ್ಲ? ಯಾಕೆಂದರೆ ಅವನು ತನ್ನ ದಿನದಲ್ಲಿ ಅಸ್ತಿತ್ವದಲ್ಲಿದ್ದ, ಕೀರ್ತನೆ 37:29ರ ಮೊದಲ ಭಾಗದಂತಹ ಹೀಬ್ರೂ ಶಾಸ್ತ್ರಗಳಲ್ಲಿನ ಉದ್ಧೃತ ಭಾಗಗಳೊಂದಿಗೆ ಪರಿಚಿತನಾಗಿದ್ದಿರಬಹುದು: “ನೀತಿವಂತರೋ ದೇಶವನ್ನು [“ಭೂಮಿಯನ್ನು,” NW] ಅನುಭವಿಸು”ವರು. (ಓರೆಅಕ್ಷರಗಳು ನಮ್ಮವು.) ಅದೇ ಸತ್ಯವನ್ನು ಯೇಸು ಕಲಿಸಿದನು. ಅವನು ಪ್ರಕಟಿಸಿದ್ದು: “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.” (ಓರೆಅಕ್ಷರಗಳು ನಮ್ಮವು.) (ಮತ್ತಾಯ 5:5) ಈ ಶಾಸ್ತ್ರವಚನವು, ಕರ್ತನ ಪ್ರಾರ್ಥನೆ ಎಂಬುದಾಗಿ ಸಾಮಾನ್ಯವಾಗಿ ಕರೆಯಲ್ಪಡುವ ವಿಷಯದೊಂದಿಗೆ ಹೊಂದಿಕೊಳ್ಳುತ್ತದೆ. ಅದು ಹೇಳುವುದು: “ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.”—ಮತ್ತಾಯ 6:9, 10.
ಮಾನವ ಕುಟುಂಬಕ್ಕಾಗಿ ಮನೆಯಂತೆ ದೇವರು ಸ್ವರ್ಗವನ್ನಲ್ಲ ಭೂಮಿಯನ್ನು ಸೃಷ್ಟಿಸಿದನೆಂದು ಬೈಬಲ್ ಕಲಿಸುತ್ತದೆ. ಆತನ ವಾಕ್ಯವು ತಿಳಿಸುವುದೇನೆಂದರೆ, ಆತನು “ಭೂಲೋಕವನ್ನು . . . ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು.” (ಯೆಶಾಯ 45:18) ಎಷ್ಟು ಸಮಯದ ವರೆಗೆ? “ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ ಅದನ್ನು ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದ್ದೀ.” (ಕೀರ್ತನೆ 104:5) ಹೌದು, “ಭೂಮಿಯಾದರೋ ಶಾಶ್ವತವಾಗಿ ನಿಲ್ಲುವದು.”—ಪ್ರಸಂಗಿ 1:4.
ದೇವರನ್ನು ಸೇವಿಸುವ ಹೆಚ್ಚಿನ ಜನರಿಗಾಗಿ, ಈ ಭೂಮಿಯನ್ನು ಸದಾಕಾಲಕ್ಕೂ ಇರುವ ಅವರ ಮನೆಯಾಗಿ ಮಾಡುವುದು ದೇವರ ಉದ್ದೇಶವಾಗಿದೆ. ಇದರ ಕುರಿತು ದೇವರ ವಾಕ್ಯವಾದ ಬೈಬಲ್ ಹೇಗೆ ಹೇಳಿಕೆಯನ್ನೀಯುತ್ತದೆ ಎಂಬುದನ್ನು ಗಮನಿಸಿರಿ. ಕೀರ್ತನೆ 37:11 ಮುಂತಿಳಿಸುವುದು: “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” ಎಷ್ಟು ಸಮಯದ ವರೆಗೆ? ಕೀರ್ತನೆ 37:29 ಹೇಳುವುದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಓರೆಅಕ್ಷರಗಳು ನಮ್ಮವು.) ಆ ಸಮಯದಲ್ಲಿ ಹೀಗೆ ಪ್ರಕಟಿಸುವ ಶಾಸ್ತ್ರವಚನವು ನೆರವೇರುವುದು: “ನೀನು [ದೇವರು] ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು”—ಅಂದರೆ, ದೇವರ ಚಿತ್ತದೊಂದಿಗೆ ಸುಸಂಗತವಾಗಿರುವ ಇಷ್ಟವನ್ನು—“ನೆರವೇರಿಸುತ್ತೀ.”—ಕೀರ್ತನೆ 145:16.
ದೇವರ ಚಿತ್ತವನ್ನು ಮಾಡಲು ಇಷ್ಟವಿಲ್ಲದವರ ಕುರಿತೇನು? ಜ್ಞಾನೋಕ್ತಿ 2:21, 22 ಪ್ರಕಟಿಸುವುದು: “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.”
ಪ್ರಮೋದವನ ಪುನಸ್ಸ್ಥಾಪಿಸಲ್ಪಟ್ಟದ್ದು
ಈಗ ಬೇಗನೆ, ಈ ದುಷ್ಟ ಲೋಕದ ವಿರುದ್ಧ ದೇವರ ನ್ಯಾಯತೀರ್ಪುಗಳು ಜಾರಿಗೆ ತರಲ್ಪಡುವವು. (ಮತ್ತಾಯ 24:3-14; 2 ತಿಮೊಥೆಯ 3:1-5, 13) ಆದರೆ ಬರಲಿರುವ ಆ ನಾಶನದಿಂದ ದೇವರು ಜನರ ಒಂದು “ಮಹಾ ಸಮೂಹ”ವನ್ನು ಸಂರಕ್ಷಿಸಿ, ತನ್ನ ರಚನೆಯ ಹೊಸ ಲೋಕದೊಳಗೆ ಬರಮಾಡಿಕೊಳ್ಳುವನು.—ಪ್ರಕಟನೆ 7:9-17.
ಆಗ, ತನ್ನ ಮಾನವ ಪ್ರಜೆಗಳಿಗೆ, ಇಡೀ ಭೂಮಿಯನ್ನು ಮಾನವಜಾತಿಗಾಗಿ ಒಂದು ಪ್ರಮೋದವನ ಮನೆಯಾಗಿ ರೂಪಾಂತರಿಸಲಿಕ್ಕಿರುವ ಆನಂದಕರ ಕೆಲಸವನ್ನು ದೇವರು ನಿರ್ದೇಶಿಸುವನು. ಬೈಬಲ್ ವಾಗ್ದಾನಿಸುವುದು: “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು. . . . ಅರಣ್ಯದಲ್ಲಿ ಒರತೆಗಳು ಒಡೆಯುವವು, ಒಣನೆಲದಲ್ಲಿ ನದಿಗಳು ಹುಟ್ಟಿ ಹರಿಯುವವು.”—ಯೆಶಾಯ 35:1, 6.
ವಿಸ್ತರಿಸುವ ಆ ಪ್ರಮೋದವನದಲ್ಲಿ, ಇನ್ನು ಮುಂದೆ ಹಸಿವು, ಬಡತನ, ಹೊಲಸು ಕೇರಿಗಳು, ನಿರ್ಗತಿಕ ಜನರು, ಅಥವಾ ಪಾತಕ ತುಂಬಿದ ಕ್ಷೇತ್ರಗಳಿರವು. “ದೇಶದಲ್ಲಿ . . . ಬೆಳೆಯು ಸಮೃದ್ಧವಾಗಿರುವುದು.” (ಕೀರ್ತನೆ 72:16, NW) “ತೋಟದ ಮರಗಳು ಹಣ್ಣುಬಿಡುವವು; ಹೊಲಗಳು ಒಳ್ಳೆಯ ಬೆಳೆಕೊಡುವವು.” (ಯೆಹೆಜ್ಕೇಲ 34:27) “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು.” (ಯೆಶಾಯ 65:21, 22) “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರ ಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”—ಮೀಕ 4:4.
ಕೆಲವರು ಸ್ವರ್ಗಕ್ಕೆ ಹೋಗುವ ಕಾರಣ
ಹೆಚ್ಚಿನ ಜನರು ತಮ್ಮಲ್ಲಿ ಒಂದು ಭೌಮಿಕ ಪ್ರಮೋದವನಕ್ಕಾಗಿ ಹಂಬಲಿಕೆಯಿದೆ ಎಂಬುದನ್ನು ಬಹುಶಃ ಅಂಗೀಕರಿಸುವರು. ಅದು ಸ್ವಾಭಾವಿಕ, ಏಕೆಂದರೆ ದೇವರು ಎಂದಿಗೂ ಸ್ವರ್ಗಕ್ಕಾಗಿ ಒಂದು ಹಂಬಲಿಕೆಯನ್ನು ಅವರಲ್ಲಿ ನೆಡಲಿಲ್ಲ; ಸ್ವರ್ಗದಲ್ಲಿ ಜೀವನವು ಹೇಗಿದೆ ಎಂಬುದನ್ನು ಅವರು ಊಹಿಸಿಕೊಳ್ಳಲೂಸಾಧ್ಯವಿಲ್ಲ. ಉದಾಹರಣೆಗೆ, ತನ್ನ ಚರ್ಚ್ ಆಫ್ ಇಂಗ್ಲೆಂಡ್ನ ಪಾದ್ರಿಯೊಂದಿಗೆ ಮಾತಾಡುತ್ತಾ, ಪ್ಯಾಟ್—ಒಬ್ಬ ದೃಢನಿಷ್ಠೆಯ ಚರ್ಚ್ ಸದಸ್ಯೆಯಾಗಿದ್ದರೂ—ಹೇಳಿದ್ದು: “ಸ್ವರ್ಗಕ್ಕೆ ಹೋಗುವ ವಿಷಯದ ಬಗ್ಗೆ ನನ್ನಲ್ಲಿ ಯಾವ ಆಲೋಚನೆಗಳೂ ಇದ್ದದ್ದೇ ಇಲ್ಲ. ನಾನು ಅಲ್ಲಿಗೆ ಹೋಗಬಯಸುವುದಿಲ್ಲ, ಮತ್ತು ಅಲ್ಲಿ ನಾನು ಮಾಡುವುದಾದರೂ ಏನನ್ನು?”—ಹೋಲಿಸಿ ಕೀರ್ತನೆ 115:16.
ಒಂದು ಸೀಮಿತ ಸಂಖ್ಯೆಯ ಮಾನವರು, 1,44,000 ಜನರು ಸ್ವರ್ಗಕ್ಕೆ ಹೋಗುತ್ತಾರೆಂದು ಬೈಬಲ್ ಕಲಿಸುತ್ತದೆ, ನಿಜ. (ಪ್ರಕಟನೆ 14:1, 4) ಅದು ಏಕೆಂದು ಸಹ ವಿವರಿಸುತ್ತದೆ: “ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದ್ದಿ, ಮತ್ತು ಅವರು ಭೂಮಿಯ ಮೇಲೆ ರಾಜರಾಗಿ ಆಳುವರು.” (ಪ್ರಕಟನೆ 5:9, 10, NW) ತಮ್ಮ ರಾಜನಾದ ಯೇಸು ಕ್ರಿಸ್ತನ ಜೊತೆಗೆ, ಇವರು “ರಾಜ್ಯ”ವನ್ನು—ಯಾವುದಕ್ಕಾಗಿ ಕ್ರೈಸ್ತರು ಪ್ರಾರ್ಥಿಸುತ್ತಾರೊ—ಭೂಮಿಯ ಹೊಸ ಸ್ವರ್ಗೀಯ ಸರಕಾರವನ್ನು ರಚಿಸುತ್ತಾರೆ. ಈ ಸರಕಾರವು ಭೂಮಿಯ ಮತ್ತು ಮಾನವಜಾತಿಯ ಸಂಪೂರ್ಣ ಪುನರ್ವಸತಿಯ ಮೇಲ್ವಿಚಾರಣೆಯನ್ನು ಮಾಡುವುದು.—ದಾನಿಯೇಲ 2:44; 2 ಪೇತ್ರ 3:13.
ಹಾಗಿದ್ದರೂ, ಸ್ವರ್ಗದಲ್ಲಿ ಜೀವಿಸುವ ಬಯಕೆಯು ಮಾನವರಲ್ಲಿ ಸ್ವಾಭಾವಿಕವಾಗಿ ಇರದಿರುವ ಕಾರಣ, ದೇವರ ಆತ್ಮದ ಒಂದು ಅಪೂರ್ವ ಕಾರ್ಯಾಚರಣೆಯು 1,44,000 ಮಂದಿಗೆ “ಸಾಕ್ಷಿಹೇಳು”ತ್ತದೆ. ಆ ಕಾರಣ ಅವರು ಈ ವಿಶೇಷ ‘ಮೇಲಣ ಕರೆ’ಯನ್ನು ಗ್ರಹಿಸಿಕೊಳ್ಳುತ್ತಾರೆ. (ರೋಮಾಪುರ 8:16, 17; ಫಿಲಿಪ್ಪಿ 3:14) ಆದರೆ ಸ್ಪಷ್ಟವಾಗಿ, ಪವಿತ್ರಾತ್ಮದ ಇಂತಹ ಕಾರ್ಯಾಚರಣೆಯು ಸಾಮಾನ್ಯವಾಗಿ ಮಾನವಜಾತಿಗೆ ಅಗತ್ಯವಾಗಿರುವುದಿಲ್ಲ, ಏಕೆಂದರೆ ಅವರ ಅನಂತ ಮನೆಯು ಒಂದು ಪ್ರಮೋದವನ ಭೂಮಿಯ ಮೇಲಿರಲಿದೆ.
ಒಂದು ಆತ್ಮಿಕ ಪ್ರಮೋದವನವು ದಾರಿಯನ್ನು ಸಿದ್ಧಗೊಳಿಸುತ್ತದೆ
ಭೂಮಿಯ ಮೇಲೆ ಪ್ರಮೋದವನದಲ್ಲಿ ಅನಂತ ಜೀವನಕ್ಕಾಗಿ ಒಬ್ಬನು ಅರ್ಹನಾಗುವುದು ಹೇಗೆ? ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ಶಾಂತಿಪೂರ್ಣ ಮಾನವ ಸಂಬಂಧಗಳನ್ನು ದೇವರ ಜ್ಞಾನದೊಂದಿಗೆ ಸಂಬಂಧಿಸುತ್ತಾ, ಯೆಶಾಯ 11:9 ಹೇಳುವುದು: “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”—ಹೋಲಿಸಿ ಯೆಶಾಯ 48:18.
ನಿಶ್ಚಯವಾಗಿಯೂ ಈ ಜ್ಞಾನವು ಕೇವಲ ತಲೆಜ್ಞಾನವಾಗಿರುವುದಿಲ್ಲ. ಅದು ಒಬ್ಬನ ವ್ಯಕ್ತಿತ್ವವನ್ನು ಪ್ರಭಾವಿಸಿ, “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ”ಗಳಂತಹ ದೈವಿಕ ಗುಣಗಳನ್ನು ಪೋಷಿಸುತ್ತದೆ. (ಗಲಾತ್ಯ 5:22) ಈ ಗುಣಗಳನ್ನು ಬೆಳೆಸಿಕೊಳ್ಳಲು ಯೆಹೋವನ ಸಾಕ್ಷಿಗಳು ಶ್ರಮಿಸುತ್ತಾರೆ ಮತ್ತು ಹೀಗೆ ಈಗಲೂ, ಅವರು ಒಂದು ಹಿತಕರವಾದ ಆತ್ಮಿಕ ಪ್ರಮೋದವನದಿಂದ ಆಶೀರ್ವದಿಸಲ್ಪಟ್ಟಿದ್ದಾರೆ.—ಯೆಶಾಯ 65:13, 14.
ಅವರ ಆತ್ಮಿಕ ಪರಿಸ್ಥಿತಿಯು, ಹೆಚ್ಚೆಚ್ಚು ಭಕ್ತಿಹೀನತೆ ಮತ್ತು ಭ್ರಷ್ಟತೆಯಲ್ಲಿ ಮುಳುಗುವ ಲೋಕದ ಪರಿಸ್ಥಿತಿಗೆ ಎಷ್ಟು ಭಿನ್ನವಾಗಿದೆ! ಆದರೆ ಬೇಗನೆ, ಈ ದುಷ್ಟ ಲೋಕವು ದೇವರಿಂದ ನಾಶಗೊಳಿಸಲ್ಪಡುವುದು. ಈ ನಡುವೆ, ಯೆಹೋವನ ಸಾಕ್ಷಿಗಳು ತಾವು ಅನುಭವಿಸುವ ಆತ್ಮಿಕ ಪ್ರಮೋದವನವನ್ನು ಸಂದರ್ಶಿಸಲು—ಹೌದು, ವಿವರವಾಗಿ ಪರೀಕ್ಷಿಸಲು—ನಿಮ್ಮನ್ನು ಆಮಂತ್ರಿಸುತ್ತಾರೆ. ಈಗಲೇ, ಅದೃಶ್ಯ ಸ್ವರ್ಗೀಯ ರಾಜನಾದ ಯೇಸು, ಆ ಹೊಸ ಲೋಕದ ಭಾವೀ ನಿವಾಸಿಗಳನ್ನು ಭೂಪ್ರಮೋದವನ ಹಾಗೂ ಅನಂತ ಜೀವನದ ಇಕ್ಕಟ್ಟಾದ ದಾರಿಯುದ್ದಕ್ಕೂ ಶಾಂತವಾಗಿ ನಡಿಸುತ್ತಿರುವುದನ್ನು ನೀವು ಸ್ವತಃ ನೋಡಿರಿ!—ಮತ್ತಾಯ 7:13, 14; ಪ್ರಕಟನೆ 7:17; 21:3, 4.
[Picture on page 8, 9]
ಈ ಲೋಕದ ಅಂತ್ಯವನ್ನು ಪಾರಾಗುವವರು, ಭೂಮಿಯನ್ನು ಪ್ರಮೋದವನವಾಗಿ ರೂಪಾಂತರಿಸುವುದರಲ್ಲಿ ಪಾಲ್ಗೊಳ್ಳಲು ಸಂತೋಷಿಸುವರು