ಕಲಿಯುವ ಅಸಾಮರ್ಥ್ಯದೊಂದಿಗೆ ಜೀವಿಸುವುದು
ಆರು ವರ್ಷ ಪ್ರಾಯದ ಡೇವಿಡ್ಗೆ ದಿನದ ಅಚ್ಚುಮೆಚ್ಚಿನ ವೇಳೆಯು ಕಥಾ ಸಮಯ. ಅಮ್ಮ ಓದಿಹೇಳುವುದು ಅವನಿಗೆ ಇಷ್ಟ, ಮತ್ತು ಕೇಳಿದ್ದನ್ನು ಜ್ಞಾಪಿಸಿಕೊಳ್ಳುವುದರಲ್ಲಿ ಅವನಿಗೆ ಕಷ್ಟವೇ ಇಲ್ಲ. ಆದರೆ ಡೇವಿಡ್ಗೆ ಸಮಸ್ಯೆಯೊಂದಿದೆ. ಅವನು ತಾನೇ ಓದಲಾರನು. ವಾಸ್ತವವಾಗಿ, ಯಾವುದಕ್ಕೆ ದೃಷ್ಟಿಕೌಶಲ ಬೇಕೊ, ಆ ಕೆಲಸವು ಅವನನ್ನು ಭಗ್ನಗೊಳಿಸುತ್ತದೆ.
ಸಾರಳಿಗೆ ಶಾಲೆಯಲ್ಲಿ ಇದು ಮೂರನೆಯ ವರ್ಷವಾದರೂ ಅವಳ ಬರವಣಿಗೆ ಅಸಾಧಾರಣವಾಗಿ ಅವ್ಯವಸ್ಥಿತ. ಆಕೆಯ ಅಕ್ಷರರಚನೆಗಳು ನ್ಯೂನ ಮತ್ತು ಅವುಗಳಲ್ಲಿ ಕೆಲವು ಹಿಮ್ಮೊಗವಾಗಿ ಬರೆಯಲ್ಪಡುತ್ತವೆ. ತನ್ನ ಸ್ವಂತ ಹೆಸರನ್ನು ಬರೆಯುವುದೂ ಸಾರಳಿಗೆ ಕಷ್ಟಕರವಾಗಿರುವುದು ಅವಳ ಹೆತ್ತವರ ಚಿಂತೆಗೆ ಕೂಡಿಸುತ್ತದೆ.
ಜಾಶ್ ಹದಿಪ್ರಾಯದ ಎಳೆಯ. ಶಾಲೆಯಲ್ಲಿ ಗಣಿತವನ್ನು ಬಿಟ್ಟರೆ, ಬೇರೆಲ್ಲ ಪಾಠಗಳಲ್ಲಿಯೂ ಉತ್ತಮನು. ಸಂಖ್ಯಾ ಮೌಲ್ಯಗಳ ಕಲ್ಪನೆಯೇ ಅವನನ್ನು ಪೂರಾ ತಬ್ಬಿಬ್ಬಾಗಿಸುತ್ತದೆ. ಸಂಖ್ಯೆಗಳನ್ನು ಕೇವಲ ನೋಡುವುದೇ ಜಾಶ್ನನ್ನು ಕೋಪಕ್ಕೆಬ್ಬಿಸುತ್ತದೆ, ಮತ್ತು ತನ್ನ ಗಣಿತ ಮನೆಕೆಲಸವನ್ನು ಮಾಡಲು ಅವನು ಕುಳಿತುಕೊಳ್ಳುವಾಗ, ಅವನ ಮನೋವೃತ್ತಿ ಶೀಘ್ರವಾಗಿ ಅವನತಿಹೊಂದುತ್ತದೆ.
ಡೇವಿಡ್, ಸಾರ ಮತ್ತು ಜಾಶ್—ಇವರಲ್ಲಿ ಇರುವ ಕುಂದು ಏನು? ಅವರು ಕೇವಲ ಸೋಮಾರಿಗಳೂ, ಹಟಮಾರಿಗಳೂ, ಪ್ರಾಯಶಃ ದಡ್ಡರೂ ಆಗಿದ್ದಾರೊ? ನಿಶ್ಚಯವಾಗಿ ಅಲ್ಲ. ಈ ಮಕ್ಕಳಲ್ಲಿ ಪ್ರತಿಯೊಬ್ಬರೂ ಬುದ್ಧಿಶಕ್ತಿಯಲ್ಲಿ ಸಾಮಾನ್ಯ ಮಟ್ಟದಿಂದ ಹಿಡಿದು ಸರಾಸರಿಗಿಂತ ಮೇಲ್ದರ್ಜೆಯವರು. ಆದರೂ ಇವರಲ್ಲಿ ಪ್ರತಿಯೊಬ್ಬರಿಗೆ ಒಂದು ಕಲಿಯುವ ಅಸಾಮರ್ಥ್ಯದ ಅಡಚಣೆಯೂ ಇದೆ. ಡೇವಿಡ್ಗೆ ಪದಾಂಧತೆ (ಡಿಸ್ಲೆಕ್ಸಿಯ) ಇದೆ. ಈ ಪದವನ್ನು ಅನೇಕ ವಾಚನ ಸಮಸ್ಯೆಗಳಿಗೆ ಅನ್ವಯಿಸಲಾಗುತ್ತದೆ. ಸಾರಳಿಗಿರುವ ಬರೆಯುವ ವಿಪರೀತ ತೊಂದರೆಯನ್ನು ಕಷ್ಟಲೇಖನ (ಡಿಸ್ಗ್ರಾಫಿಯ) ಎಂದು ಕರೆಯಲಾಗುತ್ತದೆ. ಮತ್ತು ಗಣಿತದ ಮೂಲ ಭಾವನಾರೂಪವನ್ನು ಗ್ರಹಿಸಲು ಜಾಶ್ಗಿರುವ ಅಸಾಮರ್ಥ್ಯವು ಕಷ್ಟಗಣನೆ (ಡಿಸ್ಕ್ಯಾಲ್ಕುಲಿಯ) ಎಂದು ಜ್ಞಾತವಾಗಿದೆ. ಇವು ಕೇವಲ ಮೂರು ಕಲಿಯುವ ಅಸಾಮರ್ಥ್ಯಗಳು. ಇನ್ನೂ ಅನೇಕ ಅಸಾಮರ್ಥ್ಯಗಳಿವೆ ಮತ್ತು ಇವೆಲ್ಲ ಅಮೆರಿಕದಲ್ಲಿ ಒಟ್ಟಿಗೆ ಕಡಮೆಪಕ್ಷ 10 ಪ್ರತಿಶತ ಮಕ್ಕಳಿಗೆ ತಟ್ಟುತ್ತವೆಂದು ಕೆಲವು ಪರಿಣತರು ಅಂದಾಜು ಮಾಡುತ್ತಾರೆ.
ಕಲಿಯುವ ಅಸಾಮರ್ಥ್ಯಗಳ ಅರ್ಥ ನಿರೂಪಿಸುವುದು
ಆಗಾಗ್ಗೆ, ಯುವಜನರಲ್ಲಿ ಹೆಚ್ಚಿನಂಶ, ಕಲಿಕೆಯು ಒಂದು ಸವಾಲಾಗಿದೆಯೆಂದು ಕಂಡುಕೊಳ್ಳುತ್ತಾರೆ ಎಂಬುದು ನಿಜ. ಆದರೆ ಸಾಧಾರಣವಾಗಿ, ಇದು ಕಲಿಯುವ ಅಸಾಮರ್ಥ್ಯವನ್ನು ಸೂಚಿಸುವುದಿಲ್ಲ. ಬದಲಿಗೆ, ಎಲ್ಲ ಮಕ್ಕಳಲ್ಲಿ ಕಲಿಯುವ ಬಲಗಳು ಮತ್ತು ಬಲಹೀನತೆಗಳಿವೆ ಎಂಬುದನ್ನು ಇದು ಪ್ರದರ್ಶಿಸುತ್ತದೆ, ಅಷ್ಟೆ. ಕೆಲವರಿಗೆ ಪ್ರಬಲವಾದ ಶ್ರವಣ ಕೌಶಲಗಳಿರುತ್ತವೆ; ಕೇಳುವ ಮೂಲಕ ಅವರು ಮಾಹಿತಿಯನ್ನು ತುಂಬ ಚೆನ್ನಾಗಿ ಹೀರಿಕೊಳ್ಳಬಲ್ಲರು. ಇತರರು ಹೆಚ್ಚಾಗಿ ದೃಷ್ಟಿಯಿಂದ ತಿಳಿದುಕೊಳ್ಳುವ ಪ್ರವೃತ್ತಿಯುಳ್ಳವರು; ಅವರು ಓದುವ ಮೂಲಕ ಹೆಚ್ಚನ್ನು ಕಲಿಯುತ್ತಾರೆ. ಆದರೂ ಶಾಲೆಯಲ್ಲಿ, ವಿದ್ಯಾರ್ಥಿಗಳು ಒಂದು ಕ್ಲಾಸ್ನಲ್ಲಿ ಗುಂಪಾಗಿರುತ್ತಾರೆ ಮತ್ತು ಕಲಿಸುವ ವಿಧಾನವು ಹೇಗೇ ಇರಲಿ, ಎಲ್ಲರೂ ಕಲಿಯುವಂತೆ ನಿರೀಕ್ಷಿಸಲಾಗುತ್ತದೆ. ಆದಕಾರಣ, ಕೆಲವರಿಗೆ ಕಲಿಯುವ ಸಮಸ್ಯೆಗಳು ಬರುವುದು ಅನಿವಾರ್ಯ.
ಆದರೂ ಕೆಲವು ತಜ್ಞರಿಗನುಸಾರ, ಬರಿಯ ಕಲಿಯುವ ಸಮಸ್ಯೆಗಳು ಮತ್ತು ಕಲಿಯುವ ಅಸಾಮರ್ಥ್ಯಗಳ ನಡುವೆ ವ್ಯತ್ಯಾಸವಿದೆ. ಕಲಿಯುವ ಸಮಸ್ಯೆಗಳನ್ನು ತಾಳ್ಮೆ ಮತ್ತು ಪ್ರಯತ್ನದ ಮೂಲಕ ಜಯಿಸಬಹುದೆಂದು ಹೇಳಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಕಲಿಯುವ ಅಸಾಮರ್ಥ್ಯಗಳು ಹೆಚ್ಚು ಆಳವಾಗಿ ಬೇರೂರಿರುವವುಗಳು ಎನ್ನಲಾಗುತ್ತದೆ. “ಕಲಿಯುವ ಅಸಾಮರ್ಥ್ಯವಿರುವ ಮಗುವಿನ ಮಿದುಳು ಕೆಲವು ವಿಧಗಳ ಮಾನಸಿಕ ಕೆಲಸಗಳನ್ನು ತಪ್ಪಾದ ರೀತಿಯಲ್ಲಿ ಗ್ರಹಿಸಿ, ಪರಿವರ್ತಿಸುವಂತೆ, ಅಥವಾ ಜ್ಞಾಪಿಸಿಕೊಳ್ಳುವಂತೆ ಕಾಣುತ್ತದೆ,” ಎಂದು ಡಾಕ್ಟರ್ಗಳಾದ ಪೌಲ್ ಮತ್ತು ಎಸ್ತರ್ ವೆಂಡರ್ ಬರೆಯುತ್ತಾರೆ.a
ಆದರೂ, ಒಂದು ಕಲಿಯುವ ಅಸಾಮರ್ಥ್ಯವು, ಮಗುವು ಮಾನಸಿಕವಾಗಿ ಬಲಹೀನವಾಗಿದೆ ಎಂದು ಅರ್ಥೈಸಬೇಕೆಂದಿಲ್ಲ. ಇದನ್ನು ವಿವರಿಸಲು ವೆಂಡರ್ ದ್ವಯರು, ಸ್ವರದ ತೀವ್ರತೆಯ ಮಟ್ಟದಲ್ಲಿರುವ ವ್ಯತ್ಯಾಸವನ್ನು ತಿಳಿಯಲಾರದ ನಾದ ಕಿವುಡರ ಕುರಿತ ಒಂದು ಸಾದೃಶ್ಯವನ್ನು ಕೊಟ್ಟರು. ವೆಂಡರ್ ದ್ವಯರು ಬರೆಯುವುದು: “ನಾದ ಕಿವುಡರು ಮಿದುಳು ಹಾನಿಯಾದವರಲ್ಲ ಮತ್ತು ಅವರ ಶ್ರವಣಶಕ್ತಿಯಲ್ಲಿ ನ್ಯೂನತೆಯೇನೂ ಇಲ್ಲ. ನಾದ ಕಿವುಡು, ಸೋಮಾರಿತನ, ನ್ಯೂನ ಬೋಧನೆ ಅಥವಾ ನ್ಯೂನ ಪ್ರಚೋದನೆಯ ಕಾರಣದಿಂದಲೇ ಇದೆಯೆಂದು ಯಾರೂ ಸೂಚಿಸರು.” ಕಲಿಯುವ ಅಸಾಮರ್ಥ್ಯವಿರುವವರ ಸಂಬಂಧದಲ್ಲಿಯೂ ಹಾಗೆಯೇ ಎನ್ನುತ್ತಾರವರು. ಅನೇಕ ವೇಳೆ, ಕ್ಲಿಷ್ಟತೆಯು ವಿದ್ಯೆಯ ಒಂದು ನಿರ್ದಿಷ್ಟ ಅಂಶದ ಮೇಲೆ ಕೇಂದ್ರೀಕರಿಸುತ್ತದೆ.
ಕಲಿಯುವ ಅಸಾಮರ್ಥ್ಯವಿರುವ ಅನೇಕ ಮಕ್ಕಳು ಬುದ್ಧಿಶಕ್ತಿಯಲ್ಲಿ ಸರಾಸರಿಯಿಂದ ಹಿಡಿದು ಸರಾಸರಿಗಿಂತ ಮೇಲ್ದರ್ಜೆಯಲ್ಲಿರುವುದು ಏಕೆಂಬುದನ್ನು ಇದು ವಿವರಿಸುತ್ತದೆ; ಕೆಲವರು ತೀರ ತೀಕ್ಷ್ಣಮತಿಗಳೂ ಹೌದು. ಅನೇಕ ವೇಳೆ ಡಾಕ್ಟರರನ್ನು ಒಂದು ಕಲಿಯುವ ಅಸಾಮರ್ಥ್ಯವಿರಬಹುದೆಂಬುದಕ್ಕೆ ಜಾಗೃತರನ್ನಾಗಿ ಮಾಡುವುದು ಈ ವಿರೋಧಾಭಾಸವೇ. ನನ್ನ ಮಗು ಶಾಲೆಯಲ್ಲಿ ಏಕೆ ತೊಂದರೆಗೊಳಗಾಗುತ್ತಿದೆ? (ಇಂಗ್ಲಿಷ್) ಎಂಬ ಪುಸ್ತಕವು ವಿವರಿಸುವುದು: “ಕಲಿಯುವ ಅಸಾಮರ್ಥ್ಯವಿರುವ ಒಬ್ಬ ಹುಡುಗನು ತನ್ನ ವಯಸ್ಸಿಗೆ ನಿರೀಕ್ಷಿಸಲ್ಪಡುವ ಮಟ್ಟಕ್ಕಿಂತ ಮತ್ತು ತನ್ನ ಗೊತ್ತುಮಾಡಲ್ಪಟ್ಟ ಬುದ್ಧಿಸೂಕ್ಷ್ಮತೆಯ ಭಾಗಲಬ್ಧಕ್ಕಿಂತ ಎರಡೊ ಹೆಚ್ಚೊ ವರ್ಷಗಳ ಕೆಳಮಟ್ಟದಲ್ಲಿ ಕೆಲಸ ನಡಿಸುತ್ತಿದ್ದಾನೆ.” ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಸಮಸ್ಯೆಯು ಹುಡುಗನಿಗೆ ತನ್ನ ಸಮಾನಸ್ಥರ ಮಟ್ಟದಲ್ಲಿರಲು ಕೇವಲ ಕಷ್ಟವಾಗುತ್ತದೆಂಬುದಲ್ಲ, ಅವನ ನಿರ್ವಹಣೆಯು ತನ್ನ ಸ್ವಂತ ಸಾಮರ್ಥ್ಯಕ್ಕೆ ಸಮನಾಗಿಲ್ಲ ಎಂಬುದೇ.
ಬೇಕಾಗಿರುವ ಸಹಾಯವನ್ನು ಒದಗಿಸುವುದು
ಒಂದು ಕಲಿಯುವ ಅಸಾಮರ್ಥ್ಯದ ಭಾವಾತ್ಮಕ ಪರಿಣಾಮಗಳು ಈ ಸಮಸ್ಯೆಯನ್ನು ಅನೇಕ ವೇಳೆ ಜಟಿಲಗೊಳಿಸುತ್ತವೆ. ಕಲಿಯುವ ಅಸಾಮರ್ಥ್ಯವಿರುವ ಮಕ್ಕಳು ಶಾಲೆಯಲ್ಲಿ ಕಡಮೆ ಅಂಕವನ್ನು ಪಡೆಯುವಾಗ, ಅವರು ತಮ್ಮ ಅಧ್ಯಾಪಕರು ಮತ್ತು ಸಮಾನಸ್ಥರಿಂದ—ಪ್ರಾಯಶಃ, ತಮ್ಮ ಸ್ವಂತ ಕುಟುಂಬದಿಂದಲೂ—ವಿಫಲರೆಂದು ನೋಡಲ್ಪಡಬಹುದು. ದುಃಖಕರವಾಗಿ, ಅಂತಹ ಅನೇಕ ಮಕ್ಕಳು, ಅವರು ಬೆಳೆಯುವಾಗ ಸದಾ ಪಟ್ಟುಹಿಡಿಯುವ ನೇತ್ಯಾತ್ಮಕ ಆತ್ಮಸ್ವರೂಪವನ್ನು ಬೆಳೆಸಿಕೊಳ್ಳುತ್ತಾರೆ. ಇದು ನ್ಯಾಯಸಮ್ಮತವಾದ ಚಿಂತೆಯಾಗಿದೆ, ಏಕೆಂದರೆ ಕಲಿಯುವ ಅಸಾಮರ್ಥ್ಯಗಳು ಸಾಮಾನ್ಯವಾಗಿ ನಿವಾರಣೆಯಾಗಿ ಹೋಗಿಬಿಡುವುದಿಲ್ಲ.b ಡಾ. ಲ್ಯಾರಿ ಬಿ. ಸಿಲ್ವರ್ ಬರೆಯುವುದು: “ಕಲಿಯುವ ಅಸಾಮರ್ಥ್ಯಗಳು ಜೀವಪರ್ಯಂತದ ಅಸಾಮರ್ಥ್ಯಗಳು. ವಾಚನ, ಬರೆವಣಿಗೆ ಮತ್ತು ಅಂಕಗಣಿತಕ್ಕೆ ಅಡ್ಡಬರುವ ಅವೇ ಅಸಾಮರ್ಥ್ಯಗಳು ಪಂದ್ಯಾಟ ಮತ್ತು ಇತರ ಚಟುವಟಿಕೆಗಳು, ಕುಟುಂಬ ಜೀವನ ಮತ್ತು ಮಿತ್ರರೊಂದಿಗೆ ಹೊಂದಿಕೊಂಡು ಹೋಗುವಾಗಲೂ ಅಡ್ಡಬರುತ್ತವೆ.”
ಆದಕಾರಣ, ಕಲಿಯುವ ಅಸಾಮರ್ಥ್ಯಗಳಿರುವ ಮಕ್ಕಳು ಹೆತ್ತವರಿಂದ ಬೆಂಬಲವನ್ನು ಪಡೆದುಕೊಳ್ಳುವುದು ಅತ್ಯಾವಶ್ಯಕ. “ತಮ್ಮ ಹೆತ್ತವರು ತಮ್ಮ ಬಲವಾದ ಪಕ್ಷವಾದಿಗಳು ಎಂದು ತಿಳಿದಿರುವ ಮಕ್ಕಳಿಗೆ, ದಕ್ಷತೆಯ ಮತ್ತು ಆತ್ಮಗೌರವದ ಪ್ರಜ್ಞೆಯನ್ನು ಬೆಳೆಸಲು ಆಧಾರವಿರುತ್ತದೆ,” ಎನ್ನುತ್ತದೆ ಕಲಿಯುವ ಅಸಾಮರ್ಥ್ಯವಿರುವ ಮಗುವನ್ನು ಪಾಲಿಸುವುದು (ಇಂಗ್ಲಿಷ್) ಎಂಬ ಪುಸ್ತಕ.
ಆದರೆ ಪಕ್ಷವಾದಿಗಳಾಗಿರಲು, ಹೆತ್ತವರು ಪ್ರಥಮವಾಗಿ ತಮ್ಮ ಸ್ವಂತ ಅನಿಸಿಕೆಗಳನ್ನು ಪರೀಕ್ಷಿಸಿಕೊಳ್ಳಬೇಕು. ಕೆಲವು ಹೆತ್ತವರು, ಮಗುವಿನ ಸ್ಥಿತಿಗೆ ತಾವೇ ಕಾರಣರೊ ಎಂಬಂತೆ, ದೋಷಿ ಮನಸ್ಸುಳ್ಳವರಾಗುತ್ತಾರೆ. ಇತರರು, ತಮ್ಮ ಮುಂದೆ ಇಡಲ್ಪಟ್ಟಿರುವ ಪಂಥಾಹ್ವಾನಗಳಿಂದ ಮುಳುಗಿಹೋಗುತ್ತ, ಭಯಭೀತರಾಗುತ್ತಾರೆ. ಆದರೆ ಇವೆರಡೂ ಪ್ರತಿಕ್ರಿಯೆಗಳು ಅಸಹಾಯಕರವಾಗಿವೆ. ಅವು ಹೆತ್ತವರನ್ನು ಮುಂದೆಹೋಗದಂತೆ ತಡೆದು, ಮಗನಿಗೆ ಬೇಕಾದ ಸಹಾಯವು ದೊರೆಯುವುದನ್ನು ತಡೆಗಟ್ಟುತ್ತದೆ.
ಆದಕಾರಣ, ಒಬ್ಬ ನಿಪುಣ ವಿಶೇಷಜ್ಞನು, ನಿಮ್ಮ ಮಗನಿಗೆ ಕಲಿಯುವ ಅಸಾಮರ್ಥ್ಯವಿದೆಯೆಂದು ನಿರ್ಣಯಿಸುವಲ್ಲಿ, ಎದೆಗುಂದಬೇಡಿ. ಕಲಿಯುವ ಅಸಾಮರ್ಥ್ಯಗಳಿರುವ ಮಕ್ಕಳಿಗೆ ಒಂದು ನಿರ್ದಿಷ್ಟ ಕಲಿಯುವ ಕೌಶಲದಲ್ಲಿ ಕೇವಲ ಹೆಚ್ಚು ಬೆಂಬಲವು ಬೇಕೆಂಬುದು ಜ್ಞಾಪಕದಲ್ಲಿರಲಿ. ಕಲಿಯುವ ಅಸಾಮರ್ಥ್ಯವಿರುವ ಮಕ್ಕಳಿಗಾಗಿ ನಿಮ್ಮ ಕ್ಷೇತ್ರದಲ್ಲಿ ದೊರೆಯುವ ಯಾವುದೇ ಕಾರ್ಯಕ್ರಮಗಳ ಪರಿಚಯವನ್ನು ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಿರಿ. ಅನೇಕ ಶಾಲೆಗಳು ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲು, ಈಗ, ಹಿಂದಿನ ವರುಷಗಳಿಗಿಂತ ಎಷ್ಟೋ ಹೆಚ್ಚು ಸುಸಜ್ಜಿತವಾಗಿವೆ.
ನಿಮ್ಮ ಮಕ್ಕಳ ಯಾವುದೇ ಸಾಧನೆಗಳನ್ನು, ಅವು ಎಷ್ಟು ಚಿಕ್ಕವೇ ಆಗಿರಲಿ, ಶ್ಲಾಘಿಸಬೇಕೆಂದು ಪರಿಣತರು ಒತ್ತಿಹೇಳುತ್ತಾರೆ. ಶ್ಲಾಘನೆಯಲ್ಲಿ ಉದಾರಿಗಳಾಗಿರಿ. ಅದೇ ಸಮಯದಲ್ಲಿ, ಶಿಸ್ತನ್ನು ಅಸಡ್ಡೆಮಾಡಬೇಡಿರಿ. ಮಕ್ಕಳಿಗೆ ಒಂದು ನಿರ್ದಿಷ್ಟ ವ್ಯವಸ್ಥಾಪನಾ ಏರ್ಪಾಡು ಅಗತ್ಯ, ಮತ್ತು ಕಲಿಯುವ ಅಸಾಮರ್ಥ್ಯವುಳ್ಳವರಿಗಾದರೋ ಇದು ಇನ್ನೂ ಹೆಚ್ಚು ಅಗತ್ಯ. ನೀವೇನನ್ನು ನಿರೀಕ್ಷಿಸುತ್ತೀರೆಂದು ನಿಮ್ಮ ಮಗನಿಗೆ ತಿಳಿದಿರಲಿ, ಮತ್ತು ನೀವು ಇಟ್ಟಿರುವ ಮಟ್ಟಗಳಿಗೆ ಅಂಟಿಕೊಳ್ಳಿರಿ.
ಕೊನೆಯದಾಗಿ, ನಿಮ್ಮ ಸನ್ನಿವೇಶವನ್ನು ವಸ್ತುಸತ್ಯತೆಯಿಂದ ನೋಡಲು ಕಲಿಯಿರಿ. ಕಲಿಯುವ ಅಸಾಮರ್ಥ್ಯವಿರುವ ಮಗುವನ್ನು ಪಾಲಿಸುವುದು ಎಂಬ ಪುಸ್ತಕವು ಇದನ್ನು ಹೀಗೆ ಚಿತ್ರಿಸುತ್ತದೆ: “ನಿಮ್ಮ ಅಚ್ಚುಮೆಚ್ಚಿನ ಹೊಟೇಲಿಗೆ ಹೋಗಿ ನೀವು ತಂದೂರಿ ಚಿಕನ್ ಆರ್ಡರ್ ಮಾಡುತ್ತೀರೆಂದು ಭಾವಿಸಿ. ವೆಯ್ಟರನು ನಿಮ್ಮ ಮುಂದೆ ಪ್ಲೇಟನ್ನಿಡುವಾಗ ನಿಮಗೆ ಮಟನ್ ಚಾಪ್ ಬಂದಿದೆಯೆಂದು ನೀವು ಕಂಡುಹಿಡಿಯುತ್ತೀರಿ. ಅವೆರಡೂ ರಸವತ್ತಾದ ಆಹಾರಗಳು, ಆದರೆ ನೀವಾಗ ಸಿದ್ಧರಾಗಿದ್ದುದು ತಂದೂರಿ ಚಿಕನ್ಗಾಗಿ. ಅನೇಕ ಹೆತ್ತವರು ತಮ್ಮ ಆಲೋಚನೆಯಲ್ಲಿ ಮಾನಸಿಕ ಬದಲಾವಣೆಯನ್ನು ಮಾಡಿಕೊಳ್ಳುವುದು ಅಗತ್ಯ. ನೀವು ಮಟನ್ಗಾಗಿ ಸಿದ್ಧರಾಗಿದ್ದಿಲ್ಲದಿರಬಹುದಾದರೂ, ಅದು ಸ್ವಾದವುಳ್ಳದ್ದು ಎಂದು ಕಂಡುಕೊಳ್ಳುತ್ತೀರಿ. ವಿಶೇಷ ಆವಶ್ಯಕತೆಗಳಿರುವ ಮಕ್ಕಳನ್ನು ನೀವು ಬೆಳೆಸುವಾಗಲೂ ಹೀಗೆಯೇ ಇರುತ್ತದೆ.”
[ಅಧ್ಯಯನ ಪ್ರಶ್ನೆಗಳು]
a ಕೆಲವು ಅಧ್ಯಯನಗಳು, ಕಲಿಯುವ ಅಸಾಮರ್ಥ್ಯಗಳಿಗೆ ತಳಿಶಾಸ್ತ್ರೀಯ ಅಂಗಭಾಗವಿರಬಹುದೆಂದು ಅಥವಾ ಸೀಸ ವಿಷಪ್ರಯೋಗ ಅಥವಾ ಗರ್ಭಧಾರಣೆಯ ಅವಧಿಯಲ್ಲಿ ಅಮಲೌಷಧ ಅಥವಾ ಮದ್ಯಸೇವನೆಯಂತಹ ಪರಿಸರೀಯ ಅಂಶಗಳು ಕಾರಣವಾಗಿರಬಹುದೆಂದು ಸೂಚಿಸುತ್ತವೆ. ಆದರೆ ಇನ್ನೂ ನಿಷ್ಕೃಷ್ಟವಾದ ಕಾರಣ ಅಥವಾ ಕಾರಣಗಳು ಅಜ್ಞಾತವಾಗಿವೆ.
b ಕೆಲವು ಸಂದರ್ಭಗಳಲ್ಲಿ ಮಕ್ಕಳು, ತಮ್ಮ ಬೆಳವಣಿಗೆಯು ಯಾವುದೊ ಒಂದು ಕ್ಷೇತ್ರದಲ್ಲಿ ವಿಳಂಬಿಸುವ ಕಾರಣ ತಾತ್ಕಾಲಿಕ ಕಲಿಯುವ ಅಸಾಮರ್ಥ್ಯವನ್ನು ತೋರಿಸುತ್ತಾರೆ. ಸಕಾಲದಲ್ಲಿ, ಇಂತಹ ಮಕ್ಕಳು ಆ ಲಕ್ಷಣಗಳನ್ನು ಕಳೆದುಕೊಳ್ಳುತ್ತಾರೆ.