ಫ್ಲಾರಿಡದ ಎವರ್ಗ್ಲೇಡ್ಸ್ ಜೌಗು ಪ್ರದೇಶ—ಅರಣ್ಯದಿಂದ ಹತಾಶ ಭಾವನೆಯ ಕರೆ
ಬೆರಗುಗೊಳಿಸುವ ಈ ಉಷ್ಣವಲಯದ ಪ್ರಮೋದವನಕ್ಕೆ, ಪ್ರತಿ ವರುಷ ಸುಮಾರು ಹತ್ತು ಲಕ್ಷ ಭೇಟಿಕಾರರು, ಮಹಾ ಸೃಷ್ಟಿಕರ್ತನ ಕೈಕೆಲಸದ ವಿಸ್ಮಯಕರ ಅದ್ಭುತಗಳನ್ನು ನೋಡಲು ಬರುತ್ತಾರೆ. ಇಲ್ಲಿ ಭಯಭಕ್ತಿ ಹುಟ್ಟಿಸುವ, ಮೈಲುಗಳಷ್ಟು ಆಳವಾಗಿರುವ ಕಮರಿಗಳಾಗಲಿ, ಆಕಾಶದಷ್ಟು ಎತ್ತರಕ್ಕಿರುವ ಕಡಿದಾದ ಬಂಡೆಗಳಾಗಲಿ ಇಲ್ಲ, ಫೋಟೋ ಹಿಡಿಯಲು ಮಹಾ ಜಲಪಾತಗಳಿಲ್ಲ, ಸುರಕ್ಷಿತವಾಗಿರುವಷ್ಟು ದೂರದಿಂದ ಪ್ರಶಂಸಿಸಲು, ಅಲೆದಾಡುವ ಕಡವೆ (ಮೂಸ್)ಯಾಗಲಿ, ಒಯ್ಯಾರದಿಂದ ನಡೆಯುವ ಬೂದು ಕರಡಿಗಳಾಗಲಿ ಇಲ್ಲ. ಬದಲಿಗೆ, ಎವರ್ಗ್ಲೇಡ್ಸ್ ನ್ಯಾಷನಲ್ ಪಾರ್ಕ್, ಅದರ ಆಶ್ಚರ್ಯಚಕಿತಗೊಳಿಸುವ ದೃಶ್ಯಗಳಿಗಾಗಿ ಅಲ್ಲ, ಬದಲಾಗಿ ಜೀವಶಾಸ್ತ್ರೀಯ ಪುಷ್ಕಳತೆಗಾಗಿ ಸ್ಥಾಪಿಸಲ್ಪಟ್ಟ ಲೋಕದ ಪ್ರಥಮ ರಾಷ್ಟ್ರೀಯ ವನವಾಗಿದೆ.
ಆಂಶಿಕವಾಗಿ ಹುಲ್ಲುಗಾವಲು, ಆಂಶಿಕವಾಗಿ ಉಷ್ಣವಲಯ ಜೌಗು ಪ್ರದೇಶವಾಗಿರುವ ಇದನ್ನು, “ಹುಲ್ಲಿನ ನದಿ” ಎಂದು ಕರೆಯಲಾಗಿದೆ. ಅದರಲ್ಲಿರುವ ಪ್ರಾಣಿ ಹಾಗೂ ಸಸ್ಯಗಳ ಜೀವವು, ಶತಮಾನಗಳಲ್ಲಿ ಮುಂದುವರಿದಿರುವಂತೆ ಸಾಗುತ್ತ ಇದೆ. ಮೂರು ಮೀಟರ್ಗಳಷ್ಟು ಉದ್ದದ ಮೊಸಳೆಗಳು, ಬಿಸಿಲಿನಲ್ಲಿ ಮತ್ತು ಹಬೆಯ ಕಾವಿನಲ್ಲಿ ಹಾಯಾಗಿ ಮಲಗಿರುತ್ತ, ಒಂದು ಕಣ್ಣನ್ನು ತಮ್ಮ ಮುಂದಿನ ಆಹಾರಕ್ಕಾಗಿ ಹೊಂಚುಹಾಕಲು ತೆರೆದಿಟ್ಟಿರುತ್ತವೆ. ರಾತ್ರಿಯಲ್ಲಿ ಆ ಜೌಗು ಪ್ರದೇಶವು ಅವುಗಳ ಅಬ್ಬರವನ್ನು ಪ್ರತಿಧ್ವನಿಸುತ್ತದೆ ಮತ್ತು ಅವುಗಳು ಕೂಡು ಸಂಸ್ಕಾರಗಳಲ್ಲಿ ಭಾಗವಹಿಸುವಾಗ ನೆಲವು ಕಂಪಿಸುತ್ತದೆ. ಒಗೆತೊಟ್ಟಿ ಗಾತ್ರದ ಆಮೆಗಳು, ಆಹಾರವನ್ನು ಹುಡುಕುತ್ತ ಹುಲ್ಲನ್ನು ವಿಭಾಗಿಸುತ್ತವೆ. ಓಡಿಯಾಡುತ್ತಿರುವ ವಿನೋದ ಪ್ರವೃತ್ತಿಯ ನದೀ ನೀರುನಾಯಿಗಳು ಅದೇ ಪ್ರದೇಶದಲ್ಲಿ ಕೂಡಿ ವಾಸಿಸುತ್ತವೆ. ಫ್ಲಾರಿಡ ಚಿರತೆಗಳು ಬೇಟೆಯನ್ನು ಹುಡುಕುತ್ತಿವೆಯೆಂದು ತೋರಿಸುವ ಹಸಿ ಹೆಜ್ಜೆಗುರುತುಗಳನ್ನು, ನಯವಾದ ಕೆಸರಿನಲ್ಲಿ ನೋಡಸಾಧ್ಯವಿದೆ. ಬಿಳಿ ಬಾಲದ ಜಿಂಕೆಯಾದರೊ, ಅತಿ ಜಾಗರೂಕತೆಯಿಂದಿರುವುದು ಅಗತ್ಯ, ಏಕೆಂದರೆ ಆ ಬೇಟೆಯ ಪ್ರಾಣಿಗಳಿಗೆ ಪ್ರತಿ ಸಂದರ್ಭದಲ್ಲಿಯೂ ಈ ಜಿಂಕೆಗಳೇ ಆಹಾರ. ಅನೇಕ ವೇಳೆ ಹತ್ತಿರದ ತೊರೆಗಳಲ್ಲಿ ತಮ್ಮ ಆಹಾರವನ್ನು ತೊಳೆಯುತ್ತಿರುವಂತೆ ಚಿತ್ರಿಸಲ್ಪಟ್ಟಿರುವ ರ್ಯಾಕೂನ್, ಎವರ್ಗ್ಲೇಡ್ಸ್ನಲ್ಲಿ, ಗ್ಲೇಡ್ಸ್ ಭಕ್ಷ್ಯಪಟ್ಟಿಯಿಂದ ನೇರವಾಗಿ ಬರುವ ಆಹಾರದ ಸಮೃದ್ಧಿಯ ಕಾರಣ ಹಾಯಾಗಿರುತ್ತದೆ.
ಎವರ್ಗ್ಲೇಡ್ಸ್ಗೆ ಬರುವ ಭೇಟಿಕಾರರಿಗೆ ಬಹುಮಟ್ಟಿಗೆ ಕಾಣದೆ ಹೋಗುವ ಜೀವದ ಪುಷ್ಕಳತೆಯೂ ಇಲ್ಲಿದೆ. ವಿವಿಧ ಬಗೆಗಳ ಕಪ್ಪೆಗಳು, ನೆಲದ ಮೇಲಿನ ಎಲೆಗಳ ಮೇಲೆ, ಲಿಲಿ ಎಲೆಗಳ ಮೇಲೆ ಮತ್ತು ಮನುಷ್ಯನಿರ್ಮಿತ ನಾಲೆಗಳ ಮೇಲಿರುವ ಸುಂದರವಾದ ಜಲ ಹೈಅಸಿಂತ್ ಪುಷ್ಪಗಳ ಮೇಲೆ ವೇಷಕಟ್ಟಿ ಕುಳಿತುಕೊಳ್ಳುತ್ತವೆ. ಜಲವಾಸಿ ಸಸ್ಯಗಳ ಮಧ್ಯೆ ನಿಜವಾಗಿಯೂ ಮಂದಗತಿಯಿಂದ ಆ್ಯಪ್ಲ್ ಬಸವನಹುಳುಗಳು—ಗಾಲ್ಫ್ ಚೆಂಡಿನ ಗಾತ್ರದ, ನೀರಿನೊಳಗೂ ಹೊರಗೂ ಉಸಿರಾಡುವಂತೆ ಸಾಧ್ಯಮಾಡುವ ಪುಪ್ಪುಸ ಮತ್ತು ಸರಳ ರೀತಿಯ ಶ್ವಾಸಕೋಶ ಸಜ್ಜಿತ ಮೃದ್ವಂಗಿಗಳು—ತೆವಳುತ್ತವೆ. ಆ ಆಳಕಡಮೆಯಾದ ನೀರು, ಚಿಕ್ಕ ಮುಳ್ಳುನಳ್ಳಿ, ಏಡಿಗಳು ಮತ್ತು ವಿವಿಧ ರೀತಿಯ ಮೀನುಗಳಿಂದ ಸಜೀವವಾಗಿದೆ. ಹಾವುಗಳೊ ಧಾರಾಳ ಮತ್ತು ಕೀಟಗಳೂ ಹರಿದಾಡುವ ಜೀವಿಗಳೂ ಹೇರಳವಾಗಿದ್ದು, ಎಲ್ಲವೂ ತಿನ್ನಲು ಅಥವಾ ತಿನ್ನಲ್ಪಡಲು ಕಾಯುತ್ತಿರುತ್ತವೆ.
ಹಾರಾಡುವ ಜೀವಿಗಳಲ್ಲಿ, ಸೊಗಸಾದ ಗುಲಾಬಿ ಬಣ್ಣದ ಸ್ಪೂನ್ಬಿಲ್ಗಳನ್ನು, ಬಿಳಿ ಐಬಿಸ್ಗಳನ್ನು, ಮತ್ತು ಜೊತೆಗಳು ಭಾವೀ ಮರಿಗಳಿರುವ ಮೊಟ್ಟೆಗಳಿಗೆ ಕಾವುಕೊಡಲು ಆಕಾಶವನ್ನು ತ್ಯಜಿಸಬಹುದಾಗಿರುವಾಗ, ಮೇಲಿನಿಂದ ಸುತ್ತುಸುತ್ತು ಹಾರಾಡುವ ಹಿಮ ಬಣ್ಣದ ಎಗ್ರೆಟ್ಗಳನ್ನು ನೋಡಬಹುದು. ಲೆಕ್ಕಿಸಲಿಕ್ಕಾಗದಷ್ಟು ವೇಗದಲ್ಲಿ ಹಾರಾಡುವ, ಆಕರ್ಷಕವಾದ ಗ್ರೇಟ್ ಬ್ಲೂ ಹೆರನ್ ಪಕ್ಷಿಗಳ ದೃಶ್ಯದ ನೆನಪು, ದೀರ್ಘಕಾಲ ಉಳಿಯುವುದು. ಕಡಲ ಕಾಗೆಗಳು, ಪೆಲಿಕನ್ಗಳು ಮತ್ತು ಪರ್ಪ್ಲ್ ಗ್ಯಾಲನೂಲ್ಗಳು, ಅಮೆರಿಕದ ರಾಷ್ಟ್ರೀಯ ಚಿಹ್ನೆಯಾದ ಠೀವಿಯ ಬಾಲ್ಡ್ ಈಗ್ಲ್ (ಗರುಡ)ನೊಂದಿಗೆ ಆಕಾಶವನ್ನು ಹಂಚಿಕೊಳ್ಳುತ್ತವೆ.
ಅಲ್ಲದೆ, ಉದ್ದ ಕತ್ತಿನ ಕಾರ್ಮರಂಟ್ ಮತ್ತು ಆ್ಯನ್ಹಿಂಗ ಅಥವಾ ಹಾವುಹಕ್ಕಿಯೂ ಅಲ್ಲಿದೆ. ಹಾವುಹಕ್ಕಿಯೆಂಬ ಹೆಸರು ಏಕೆಂದರೆ, ಅದು ತನ್ನ S-ಆಕಾರದ ಉದ್ದ ಕತ್ತನ್ನು ನೀರಿನಿಂದ ಮೇಲೆತ್ತುವಾಗ, ಅದು ಹಕ್ಕಿಗಿಂತ ಹೆಚ್ಚಾಗಿ ಹಾವಿನಂತೆ ಕಾಣುತ್ತದೆ. ಸ್ವಭಾವತಃ ಹೊಟ್ಟೆಬಾಕಗಳಾಗಿರುವ, ಎರಡೂ ವಿಧದ ಪಕ್ಷಿಗಳು, ಎವರ್ಗ್ಲೇಡ್ಸ್ನ ಆಳವಿಲ್ಲದ ನೀರಿನಲ್ಲಿ ಆಹಾರಕ್ಕಾಗಿ ಹೋರಾಡುತ್ತವೆ. ಅವು ಒದ್ದೆಯಾಗಿರುವಾಗ, ಈ ಎರಡು ಹಕ್ಕಿಗಳೂ ತಮ್ಮ ರೆಕ್ಕೆಗಳನ್ನು ಚಾಚಿ, ಬಾಲದ ಗರಿಗಳನ್ನು ವಿಸ್ತರಿಸುವಾಗ, ಅವು ಛಾಯಾಚಿತ್ರಕ್ಕಾಗಿ ಭಂಗಿಯನ್ನೊಡ್ಡುತ್ತಿವೆಯೋ ಎಂಬಂತೆ ಆಡಂಬರದ ಪ್ರದರ್ಶನವನ್ನು ಮಾಡುತ್ತವೆ. ಅವುಗಳ ಗರಿಗಳು ಪೂರ್ತಿ ಒಣಗಿದ ಮೇಲೆಯೇ ಆ ಹಕ್ಕಿಗಳಿಗೆ ಹಾರಲು ಸಾಧ್ಯವಾಗುತ್ತದೆ.
ತನ್ನನ್ನು ಅಲಕ್ಷಿಸಬಾರದೆಂಬಂತೆ, ಕೊಕ್ಕರೆಯಂತಹ ಲಿಂಪ್ಕಿನ್ ಪಕ್ಷಿ ತನ್ನ ಅರಚುವ ಕೂಗುಗಳಿಂದ ಭೇಟಿಕಾರರನ್ನು ಬೆಚ್ಚಿಬೀಳಿಸುತ್ತದೆ. ಈ ದೊಡ್ಡ ಕಂದು ಮತ್ತು ಬಿಳಿ ಮಚ್ಚೆಗಳುಳ್ಳ ಹಕ್ಕಿಯನ್ನು, ಅಳುವ ಪಕ್ಷಿಯೆಂದು ಕರೆಯಲಾಗಿದೆ, ಏಕೆಂದರೆ ಅದರ ಸದ್ದು ವ್ಯಥಿತ ಮಾನವನು ಹತಾಶೆಯಿಂದ ಅಳುತ್ತಿರುವಂತೆ ಕೇಳಿಸುತ್ತದೆ. ಕಾಗೆಗಾತ್ರದ ಹಿಂಸ್ರಕ ಪಕ್ಷಿಯಾದ, ವಿರಳವೂ ನಿರ್ಮೂಲವಾಗುವ ಅಪಾಯವೂ ಉಳ್ಳ ಎವರ್ಗ್ಲೇಡ್ಸ್ ಹದ್ದು, ಪಕ್ಷಿ ವೀಕ್ಷಕರಿಗೆ ಒಂದು ಸ್ಮರಣೀಯ ದೃಶ್ಯವಾಗಿದೆ. ಆದರೆ ಅದರ ಬದುಕಿ ಉಳಿಯುವಿಕೆಯು, ಆ್ಯಪ್ಲ್ ಬಸವನಹುಳುವಿನ ಲಭ್ಯತೆಯ ಮೇಲೆಯೇ ಹೊಂದಿಕೊಂಡಿದೆ. ಭೇಟಿಕಾರರು ಮೇಲೆ ನೋಡುವಾಗ, ಹೊರಹೊಳಪಿನ ಹಸುರು ಎಲೆಗಳಿಂದ ಮತ್ತು ಸ್ಪ್ಯಾನಿಷ್ ಪಾಚಿಯ ಎಳೆಗಳಿಂದ ಮೆರಗುಕೊಡಲ್ಪಟ್ಟಿರುವ ಘನಗಂಭೀರವಾದ ಲೈವೋಕ್ ವೃಕ್ಷಗಳ ಮೇಲಿನ ಕೂಡುಸ್ಥಳದಲ್ಲಿರುವ ಮಹಾ ಪಕ್ಷಿಸಮೂಹವನ್ನು ನೋಡಿ ಬೆರಗಾಗುತ್ತಾರೆ. ಮರಗಳಿಗೆ ಸುತ್ತಿಕೊಂಡಿರುವ ನವಿರಾದ ಬಳ್ಳಿಗಳಿಂದ ನೇತಾಡುವ ಹಸುರು ಮತ್ತು ಕೆಂಪು ಹೂಗೊಂಚಲುಗಳು, ಪಕ್ಷಿಗಳ ಬಣ್ಣಗಳೊಂದಿಗೆ ಒಂದುಗೂಡುತ್ತವೆ. ಇಲ್ಲಿ, ಭೇಟಿಕಾರರು ತಾವು ಯಾವ ದೇಶದಲ್ಲಿ ಮತ್ತು ಯಾವ ಭೂಖಂಡದಲ್ಲಿದ್ದೇವೆಂಬುದನ್ನು ಮರೆಯಬಹುದು. ಹೌದು, ಅದರದ್ದೇ ಆದ ಒಂದು ಜಗತ್ತು, ವಾಸ್ತವಪ್ರಾಯವಾದ, ಕೃತಕವಲ್ಲದ, ಸುಂದರವಾದ ಒಂದು ಪ್ರಮೋದವನವು ಇಲ್ಲಿದೆ.
ಕೊನೆಯದಾಗಿ, ಆಳಕಡಮೆಯಾದ ನೀರು ಮತ್ತು ಗೋಲ್ಡನ್ ಸಾ ಹುಲ್ಲು—ಎವರ್ಗ್ಲೇಡ್ಸ್ನ ತಪ್ಪಿಸಲಾಗದ ಲಕ್ಷಣವಾಗಿವೆ. ಕಣ್ಣಿಗೆ ನೋಡಲು ಸಾಧ್ಯವಿರುವಷ್ಟು ದೂರ, ಈ ಮಿನುಗುವ, ಥಳಥಳಿಸುವ ಮೌನವಾದ ಹುಲ್ಲುನದಿಯಿದೆ. ಇದು ತೀರ ಚಪ್ಪಟೆಯಾಗಿದ್ದು, ಒಂದು ಕಿಲೊಮೀಟರಿಗೆ ನಾಲ್ಕಕ್ಕೂ ಕಡಮೆ ಸೆಂಟಿಮೀಟರು ದಕ್ಷಿಣಾಭಿಮುಖವಾಗಿ ಇಳುಕಲಾಗಿ ಕಾಣುತ್ತದೆ. ಅಗೋಚರವಾಗಿ, ಗಮನಿಸಸಾಧ್ಯವಿರುವ ಸೆಳೆತವಿಲ್ಲದೆ, ಅದರ ನೀರು ಸದಾ ಸಮುದ್ರದ ಕಡೆಗೆ ನಿಧಾನವಾಗಿ ಹರಿಯುತ್ತದೆ. ಅದು ಎವರ್ಗ್ಲೇಡ್ಸ್ನ ಸಾಕ್ಷಾತ್ ಜೀವಾಧಾರ; ಅದಿಲ್ಲದಿರುವಲ್ಲಿ ಗ್ಲೇಡ್ಸ್ಗಳು ಸಾಯುವುವು.
ಈ ಶತಮಾನದ ಆದಿಭಾಗದಲ್ಲಿ, ಎವರ್ಗ್ಲೇಡ್ಸ್ಗಳು ಅಷ್ಟು ಘೋರವಾಗಿ ಮನುಷ್ಯರಿಂದ ಹಾನಿಗೊಳಗಾಗಿ, ಕಚ್ಚುಕಚ್ಚಾಗುವ ಮೊದಲು, ಈ ಹುಲ್ಲುಸಮುದ್ರವು ಪೂರ್ವದಿಂದ ಪಶ್ಚಿಮಕ್ಕೆ 80 ಕಿಲೊಮೀಟರುಗಳಷ್ಟು ಅಳತೆಯುಳ್ಳದ್ದಾಗಿದ್ದು, ಕಿಸಿಮೀ ನದಿಯಿಂದ ಫ್ಲಾರಿಡ ಕೊಲ್ಲಿಯ ವರೆಗೆ, 500 ಕಿಲೊಮೀಟರುಗಳಷ್ಟು ಹರಡಿತ್ತು. ಸಾಮಾನ್ಯ ಗಾತ್ರದ ಒಬ್ಬ ಮನುಷ್ಯನು ಈ ದೂರವನ್ನು, ಹೆಗಲು ಒದ್ದೆಯಾಗದೇ ದಾಟಬಲ್ಲನು. ಗಾಳಿದೋಣಿಗಳು ಆಳಕಡಮೆಯಾದ ಈ ನೀರನ್ನು ಸವರಿಕೊಂಡು, ಈ ಎತ್ತರವಾದ ಗೋಲ್ಡನ್ ಸಾ ಹುಲ್ಲಿನ ಮಧ್ಯೆ ತುಂಬ ಹೆಚ್ಚು ವೇಗಗಳಲ್ಲಿ ಚಲಿಸಿ, ಗಾಳಿಯ ಹೊಡೆತಕ್ಕೆ ಸಿಕ್ಕಿರುವ ಪ್ರವಾಸಿಗಳಿಗೆ ಒಂದು ಸ್ಮರಣೀಯ ಹಾಗೂ ರೋಮಾಂಚಕ ಅನುಭವವನ್ನು ಕೊಡಬಲ್ಲವು. ತಲೆಮೊರೆಗಳಲ್ಲಿ ಮಾಡಿರುವಂತೆಯೇ, ಗಾಳಗಾರರು, ಬಾಸ್ ಮೀನು ಮತ್ತು ಇತರ ಸಿಹಿ ಮತ್ತು ಉಪ್ಪುನೀರಿನ ಮೀನುಗಳನ್ನು ಹಿಡಿಯಲು ಬರುತ್ತಾರೆ.
ಸಹಾಯಕ್ಕಾಗಿ ಹತಾಶ ಭಾವನೆಯ ಕರೆ
ಈ ಶತಮಾನವು ಆರಂಭಗೊಳ್ಳುತ್ತಿದ್ದಾಗ, ಫ್ಲಾರಿಡದ ರಾಜಕಾರಣಿಗಳು ಮತ್ತು ವ್ಯಾಪಾರ ವ್ಯವಸ್ಥಾಪಕರು, ಎವರ್ಗ್ಲೇಡ್ಸನ್ನು, ಅದೊಂದು ಅನಪೇಕ್ಷಣೀಯ ಜೀವಿಗಳಿರುವ ಜೌಗು ಪ್ರದೇಶವೆಂದೆಣಿಸಿ, ಸ್ಥಿರಾಸ್ತಿಯ ಪ್ರವರ್ತನೆಗಾಗಿ, ನಗರೀಕರಣಕ್ಕಾಗಿ ಮತ್ತು ವ್ಯವಸಾಯ ಅಭಿವೃದ್ಧಿಗಾಗಿ ಅದನ್ನು ತೆಗೆದುಬಿಡಲು ಯೋಚಿಸಿದರು. “ಅಣೆಕಟ್ಟು ಕಟ್ಟಿ, ಅಡ್ಡಗಟ್ಟೆ ಹಾಕಿ, ಬರಿದುಮಾಡಿ, ತಿರುಗಿಸಿ ಬಿಡಿ” ಎಂಬುದು ಅವರ ಗುರಿನುಡಿಯಾಯಿತು. 1905ರಲ್ಲಿ, ತಾವು ಫ್ಲಾರಿಡದ ರಾಜ್ಯಪಾಲರಾಗಿ ಚುನಾಯಿಸಲ್ಪಡುವ ಮೊದಲು, ಎನ್. ಬಿ. ಬ್ರಾವರ್ಡ್ ಎಂಬವರು ಆ “ಅಂಟುರೋಗಭರಿತ” ಜೌಗು ಪ್ರದೇಶದಿಂದ ನೀರಿನ ಕೊನೆಯ ತೊಟ್ಟನ್ನು ಹಿಂಡಿಬಿಡುವ ಪ್ರತಿಜ್ಞೆಯನ್ನು ಮಾಡಿದರು.
ಅವು ಬರಿಯ ವಾಗ್ದಾನಗಳಾಗಿರಲಿಲ್ಲ. ದೈತ್ಯಾಕಾರದ ಮಣ್ಣು ಸಾಗಿಸುವ ಮತ್ತು ಹೂಳೆತ್ತುವ ಯಂತ್ರಗಳನ್ನು ತರಲಾಯಿತು. ಅಮೆರಿಕದ ಆರ್ಮಿ ಕೋರ್ ಆಫ್ ಇಂಜಿನಿಯರ್ಸ್ನ ಮೇಲ್ವಿಚಾರಣೆಯಲ್ಲಿ, 9 ಮೀಟರ್ಗಳಷ್ಟು ಆಳದ, 90 ಕಿಲೊಮೀಟರ್ಗಳಷ್ಟು ಉದ್ದದ ಕಾಲುವೆಗಳನ್ನು ಅಗೆಯಲಾಯಿತು. ಈ ವಿಧಾನದಿಂದಾಗಿ ಹತ್ತು ಲಕ್ಷ ಚದರ ಮೀಟರುಗಳಿಗಿಂತಲೂ ಹೆಚ್ಚಾದ ತರಿ ಜಮೀನು ನಾಶವಾಯಿತು. ದೊಡ್ಡ ಅಣೆಕಟ್ಟುಗಳು, ಅಡ್ಡಗಟ್ಟೆಗಳು ಮತ್ತು ಪಂಪುಮಾಡುವ ಕಟ್ಟೆಗಳು ಕಟ್ಟಲ್ಪಟ್ಟವು. ಮತ್ತು ಇನ್ನೂ ಹೆಚ್ಚು ಕಾಲುವೆಗಳು ಮತ್ತು ರಸ್ತೆಗಳು ಎವರ್ಗ್ಲೇಡ್ಸನ್ನು ಅಡ್ಡಡ್ಡಲಾಗಿ ಸುತ್ತಿದವು. ಈ ಜೀವಭರಿತ ಪ್ರದೇಶದಿಂದ ಅಮೂಲ್ಯವಾದ ಜೀವದಾಯಕ ನೀರನ್ನು, ದೊಡ್ಡದಾದ, ಹೊಸದಾಗಿ ತಯಾರಿಸಿದ ಹೊಲಪ್ರದೇಶಗಳನ್ನು ಪೋಷಿಸಲು ತಿರುಗಿಸಿಬಿಡಲಾಯಿತು. ಕರಾವಳಿ ನಗರಗಳು ಸಹ ಪಶ್ಚಿಮಾಭಿಮುಖವಾಗಿ ವಿಸ್ತರಿಸಿದಾಗ, ಮಹಾ ವಸತಿ ಸಮುದಾಯಗಳು, ವೇಗವಾಗಿ ಸಾಗುವ ಹೆದ್ದಾರಿಗಳು, ಷಾಪಿಂಗ್ ಸೆಂಟರುಗಳು ಮತ್ತು ಗಾಲ್ಫ್ ಕೋರ್ಸುಗಳು, ಎವರ್ಗ್ಲೇಡ್ಸ್ನ ಇನ್ನೂ ಹೆಚ್ಚಿನ ಭಾಗವನ್ನು ಕಬಳಿಸಿಬಿಟ್ಟವು.
ಎವರ್ಗ್ಲೇಡ್ಸ್ನ ಒಂದು ಭಾಗವನ್ನು, 1947ರಲ್ಲಿ ರಾಷ್ಟ್ರೀಯ ವನವಾಗಿ ಘೋಷಿಸಲಾಯಿತಾದರೂ, ನೀರಿನ ಬರಿದುಮಾಡುವಿಕೆ ಮತ್ತು ತಿರುಗಿಸಿಬಿಡುವಿಕೆಯು ಧ್ವಂಸಕಾರಕ ಗತಿಯಲ್ಲಿ ಮುಂದುವರಿಯಿತು. ಎವರ್ಗ್ಲೇಡ್ಸ್ನ ಬರಿದುಮಾಡುವಿಕೆ ಮತ್ತು ಹಾಗೆ ಮಾಡಲು ಕೋಟಿಗಟ್ಟಲೆ ಡಾಲರುಗಳನ್ನು ವ್ಯಯಿಸಿದ್ದು, ಅತ್ಯಂತ ದೊಡ್ಡ ತಪ್ಪಾಗಿತ್ತೆಂದು ಪರಿಸರವಾದಿಗಳು ಒಪ್ಪಿಕೊಳ್ಳುತ್ತಾರೆ. ನೀರಿನ ಹರಿವಿಗೆ ಭಂಗ ತರುವುದು, ಎವರ್ಗ್ಲೇಡ್ಸ್ನ ಜೀವಿಗಳ ಮೇಲೆ ಧ್ವಂಸಕಾರಕ ಪರಿಣಾಮವನ್ನು ತರುವುದೆಂಬುದನ್ನು ಕೆಲವರೇ ಗ್ರಹಿಸಿದರು. ಆದ ಹಾನಿಯು ತೋರಿಬರಲು ದಶಕಗಳು ಹಿಡಿದವು.
ಆದರೂ, 1980ಗಳ ಮಧ್ಯದಷ್ಟಕ್ಕೆ, ಪರಿಸರವಾದಿಗಳು ಮತ್ತು ಜೀವಶಾಸ್ತ್ರಜ್ಞರು, ಎವರ್ಗ್ಲೇಡ್ಸ್ ಪ್ರದೇಶವು ಸಾಯುತ್ತಿದೆ ಎಂಬ ಅಪಾಯಸೂಚನೆಯನ್ನು ಧ್ವನಿಸುತ್ತಿದ್ದರು. ಅಲ್ಲಿರುವ ಪ್ರತಿಯೊಂದು ಜೀವಿಯು, ಗೋಳಾಡುತ್ತ, ಸಹಾಯಕ್ಕಾಗಿ ಕೂಗುತ್ತಿದೆಯೊ ಎಂಬಂತೆ ತೋರಿತು. ಮೊಸಳೆಗಳು ಜೀವಿಸುತ್ತಿದ್ದ ನೀರುಗಂಡಿಗಳು ಅನಾವೃಷ್ಟಿಗಳಲ್ಲಿ ಬತ್ತಿಹೋಗಲಾರಂಭಿಸಿದವು. ಮಳೆ ಬಿದ್ದು, ಪ್ರದೇಶದಲ್ಲಿ ನೆರೆ ತುಂಬಿದಾಗ, ಅವುಗಳ ಗೂಡುಗಳು ಮತ್ತು ಮೊಟ್ಟೆಗಳು ಕೊಚ್ಚಿಹೋದವು. ಈಗ ಅವುಗಳ ಸಂಖ್ಯೆಗಳು ತೀಕ್ಷ್ಣವಾಗಿ ಕಡಮೆಯಾಗುತ್ತಿವೆ. ಅವು ತಮ್ಮ ಮರಿಗಳನ್ನು ಭಕ್ಷಿಸತೊಡಗಿವೆಯೆಂದು ವರದಿಗಳು ತಿಳಿಸುತ್ತವೆ. ಆ ಪ್ರದೇಶದಲ್ಲಿ ಒಮ್ಮೆ ಹತ್ತು ಲಕ್ಷಗಳಿಗೂ ಜಾಸ್ತಿಯಾಗಿದ್ದ, ಅಸಾಮಾನ್ಯ ಶೈಲಿಯ ಕಾಲನಡಗೆಯ ನೀರಹಕ್ಕಿಗಳು, ಸಾವಿರಗಳಿಗೆ ಇಳಿದಿವೆ—90 ಪ್ರತಿಶತ ಇಳಿಮುಖ. ಒಂದು ಕಾಲದಲ್ಲಿ ತಮ್ಮ ಕೂಡುಸ್ಥಳಗಳಿಗೆ ಹಿಂದೆ ಬರುವಾಗ ಆಕಾಶವನ್ನು ಕರಿದಾಗಿಸಿದ, ಸುಂದರವಾದ ಗುಲಾಬಿ ಬಣ್ಣದ ರೋಸಿಯೆಟ್ ಸ್ಪೂನ್ಬಿಲ್ಗಳಿಗೆ ಹೋಲಿಸುವಾಗ, ಈಗ ಅವುಗಳ ಸಂಖ್ಯೆ ತೀರ ಕಡಮೆಯಾಗಿದೆ. 1960ಗಳಿಂದ, ಪಕ್ಷಿ ಜಾತಿಗೆ ಅಪಾಯವನ್ನುಂಟುಮಾಡುತ್ತಾ, ವುಡ್ ಸ್ಟಾರ್ಕ್ ಅರಣ್ಯ ಕೊಕ್ಕರೆಗಳು, ಗೂಡುಕಟ್ಟುವ 6,000 ಪಕ್ಷಿಗಳಿಂದ ಈಗ ಕೇವಲ 500ಕ್ಕೆ ಇಳಿದಿವೆ. ರಾಜ್ಯದ ಚಿಪ್ಪುಮೀನು ಉದ್ಯಮಕ್ಕಾಗಿರುವ ಫ್ಲಾರಿಡ ಬೇ ನರ್ಸರಿ ಅಭಿವರ್ಧಕ ಸ್ಥಳಗಳೂ ಅಪಾಯಕ್ಕೊಳಗಾಗಿವೆ. ಇತರ ಎಲ್ಲ ಕಶೇರುಕಗಳ—ಜಿಂಕೆಯಿಂದ ಆಮೆಗಳ ವರೆಗೆ—ಸಂಖ್ಯೆಯು, 75ರಿಂದ 95 ಪ್ರತಿಶತ ಕಡಮೆಯಾಗಿದೆ ಎಂದು ವರದಿಮಾಡಿತು ಒಂದು ಮೂಲ.
ವ್ಯವಸಾಯ ಮತ್ತು ಇತರ ಮಾನವ ಚಟುವಟಿಕೆಗಳ ಒಂದೇ ಸಮನೆಯ ಅತಿಕ್ರಮಣದಿಂದ, ಜಮೀನು ಮತ್ತು ನೀರನ್ನು ನಿಧಾನವಾಗಿ ಕೆಡಿಸಿದ, ಕೃತಕ ಗೊಬ್ಬರದ ಮಲಿನ ಪದಾರ್ಥಗಳು ಮತ್ತು ಕೀಟನಾಶಕ ಹರಿವುಗಳು ಬಂದವು. ಆಹಾರ ಸರಪಣಿಯ ಎಲ್ಲ ಹಂತಗಳಲ್ಲಿ—ಜೌಗು ಪ್ರದೇಶದ ಮೀನಿನಿಂದ ಹಿಡಿದು, ರ್ಯಾಕೂನ್, ಮೊಸಳೆಗಳು ಮತ್ತು ಆಮೆಗಳ ವರೆಗೆ—ಪಾದರಸದ ಉನ್ನತ ಮಟ್ಟಗಳನ್ನು ಗುರುತಿಸಲಾಗಿದೆ. ಮಣ್ಣಿನಿಂದ ತೂರಿದ ಪಾದರಸವು ಮಿಶ್ರಗೊಂಡಿರುವ ಕೆಲವು ನೀರುಗಳಲ್ಲಿ ಹಿಡಿಯಲ್ಪಡುವ, ಬಾಸ್ ಮೀನು ಹಾಗೂ ಕ್ಯಾಟ್ಫಿಷ್ ಮೀನುಗಳನ್ನು ತಿನ್ನಬಾರದೆಂದು ಬೆಸ್ತರಿಗೆ ತಿಳಿಯಪಡಿಸಲಾಗಿದೆ. ಚಿರತೆಗಳೂ ಮನುಷ್ಯಾಕ್ರಮಣದ ಬಲಿಗಳಾಗಿವೆ. ಪಾದರಸ ವಿಷದ ಮೂಲಕವಾಗಿಯೇ ಅಲ್ಲ, ಕಳ್ಳಬೇಟೆಗಾರರ ಮೂಲಕವಾಗಿಯೂ ಅವು ಕೊಲ್ಲಲ್ಪಡುತ್ತಿವೆ. ಈ ಪ್ರಾಣಿಯು ಎಷ್ಟು ಅಪಾಯದಲ್ಲಿದೆಯೆಂದರೆ, ಇಡೀ ರಾಜ್ಯದಲ್ಲಿ ಅವುಗಳ ಸಂಖ್ಯೆ 30ಕ್ಕೂ ಕಡಮೆಯೆಂದೂ, ವನದಲ್ಲಿ ಕೇವಲ 10 ಎಂದೂ ನಂಬಲಾಗಿದೆ. ಎವರ್ಗ್ಲೇಡ್ಸ್ನ ಅನೇಕ ನಾಡಿಗ ಸಸ್ಯಗಳೂ ನಾಮಾವಶೇಷದ ಅಂಚಿನಲ್ಲಿವೆ.
ಕೆಲವು ವೀಕ್ಷಕರು ಮತ್ತು ಪರಿಸರವಾದಿಗಳು, ಎವರ್ಗ್ಲೇಡ್ಸ್ ಚೇತರಿಸಿಕೊಳ್ಳುವ ಆಶೆಯನ್ನು ಬಿಟ್ಟುಬಿಡುವ ಸ್ಥಿತಿಯನ್ನು ತಲಪಿರಬಹುದೆಂದು ನಂಬುತ್ತಾರೆ. ಆದರೂ, ಸರಕಾರದ ಅಧಿಕಾರಿಗಳು ಮತ್ತು ವನಾಧಿಕಾರಿಗಳು ಹಾಗೂ ಅನೇಕ ಪರಿಸರವಾದಿಗಳು ನಂಬುವುದೇನಂದರೆ, ನಿಧಿಯ ಒದಗಿಸುವಿಕೆ ಹಾಗೂ ಸ್ಟೇಟ್ ಮತ್ತು ಫೆಡರಲ್ ಏಜನ್ಸಿಗಳ ವತಿಯಿಂದ ಕೈಕೊಳ್ಳಲ್ಪಡುವ ಕ್ಷಿಪ್ರ ಕ್ರಮದ ಮೂಲಕ ಎವರ್ಗ್ಲೇಡ್ಸನ್ನು ರಕ್ಷಿಸಸಾಧ್ಯವಿದೆ. “ಇಷ್ಟು ದೊಡ್ಡದಾದ ಮತ್ತು ಸಂಕೀರ್ಣವಾದ ಒಂದು ಸಂಗತಿಯು ಚೇತರಿಸಿಕೊಳ್ಳಲು ಸಾಧ್ಯವಿಲ್ಲದಿರುವ ಸ್ಥಿತಿಯನ್ನು ಯಾವಾಗ ತಲಪುವುದೆಂದು ನಿಜವಾಗಿಯೂ ಯಾವನಿಗೂ ತಿಳಿದಿಲ್ಲ,” ಎಂದನು ಒಬ್ಬ ಅಧಿಕಾರಿ. “ಅದು ಈಗಾಗಲೇ ಸಂಭವಿಸಿರಬಹುದು.” ಎವರ್ಗ್ಲೇಡ್ಸನ್ನು ಉದ್ಧಾರ ಮಾಡುವ ಸಾಧ್ಯತೆಯು ಆಶಾಜನಕವಲ್ಲವೆಂದು, ಜೀವಶಾಸ್ತ್ರಜ್ಞ ಜಾನ್ ಆಗ್ಡೆನ್ ಒಪ್ಪಿಕೊಂಡರೂ, ಅವರು ಆಶಾವಾದಿಗಳಾಗಿದ್ದಾರೆ. ಅವರು ಹೇಳುವುದು: “ನಾನು ಆಶಾವಾದಿಯಾಗಿರಲೇಬೇಕು. ಏಕೆಂದರೆ ಅನ್ಯಮಾರ್ಗವು, ಇಲ್ಲಿ ಕೆಲವೇ ಮೊಸಳೆಗಳಿರುವ ಮತ್ತು ಅಲ್ಲಿ ಕೆಲವೇ ಹಕ್ಕಿಗೂಡುಗಳಿರುವ ವನದ ಒಂದು ಭಾಗ ಮತ್ತು ಮುಖ್ಯಾಕರ್ಷಣೆಯಾಗಿ, ತುಂಬಿಸಿ ಆಕಾರ ಕೊಡಲ್ಪಟ್ಟ ಚಿರತೆಯಿರುವ ಒಂದು ಒಳ್ಳೆಯ ವಸ್ತು ಸಂಗ್ರಹಾಲಯವನ್ನು ಬಿಟ್ಟರೆ, ಜೀವಶಾಸ್ತ್ರೀಯ ಮರುಭೂಮಿಯೇ.”
ಫ್ಲಾರಿಡದ ಅಧಿಕಾರಿಗಳು, ಜೀವಶಾಸ್ತ್ರಜ್ಞರು ಮತ್ತು ಪರಿಸರವಾದಿಗಳು ರಾಷ್ಟ್ರಾದ್ಯಂತ ಮಾಡಿದ ಗಲಾಟೆಯು, ವಾಷಿಂಗ್ಟನ್ನ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ—ಅಮೆರಿಕದ ರಾಷ್ಟ್ರಾಧ್ಯಕ್ಷ ಮತ್ತು ಉಪಾಧ್ಯಕ್ಷರೂ ಸೇರಿ—ಕೇಳಿಬಂದಿದೆ. ಈಗ ಅದು ಯಾರ ಪೂರ್ವಾಧಿಕಾರಿಗಳು ಕೆಲಸವನ್ನು ಕೆಡಿಸಿದರೊ, ಆ ಅಮೆರಿಕದ ಆರ್ಮಿ ಕೋರ್ ಆಫ್ ಇಂಜಿನಿಯರ್ಸ್ ಅವರ ರೇಖನ ಫಲಕಕ್ಕೆ ಹಿಂದಿರುಗಿದೆ. ಅವರ ಅತ್ಯಂತ ಹೊಸ ದರ್ಶನವು, ಎವರ್ಗ್ಲೇಡ್ಸನ್ನು ಬರಿದುಮಾಡಿ, ಅಣೆಕಟ್ಟು ಕಟ್ಟಿ, ತಿರುಗಿಸಿ ಬಿಡುವ ಬದಲಿಗೆ, ಅದನ್ನೂ ಅದರಲ್ಲಿರುವ ಜೀವಿಗಳನ್ನೂ ರಕ್ಷಿಸುವುದೇ ಆಗಿದೆ.
ಮುಖ್ಯಾಂಶವು ನೀರೆಂಬುದು ಸ್ಪಷ್ಟ. ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಬರೆದುದು: “ಯಶಸ್ಸಿಗಿರುವ ನಿರ್ಧಾರಕ ಸಂಗತಿಯು, ಹೆಚ್ಚು ಶುದ್ಧವಾದ, ಧಾರಾಳವಾಗಿರುವ ನೀರೇ. ಅದು ವ್ಯವಸಾಯ ಮತ್ತು ನಗರೀಕರಣದ ವಿರುದ್ಧವಾಗಿ ಕೆಲಸಮಾಡುವಲ್ಲಿ ಮಾತ್ರ ಬರಬಲ್ಲದು. ದಕ್ಷಿಣ ಫ್ಲಾರಿಡದ ಸಕ್ಕರೆ ಬೆಳೆಯ ತೋಟಗಳು ಮತ್ತು ತರಕಾರಿ ಹೊಲಗಳು, ಅತಿ ಸಂಭವನೀಯ ಗುರಿಹಲಗೆಗಳು.” ಎವರ್ಗ್ಲೇಡ್ಸ್ ಪಾರ್ಕ್ ಸೂಪರಿಂಟೆಂಡೆಂಟ್ ರಾಬರ್ಟ್ ಚ್ಯಾಂಡ್ಲರ್ ಪ್ರಕಟಿಸಿದ್ದು: “ನೀರನ್ನು ಪಾಲುಮಾಡುವುದು ಬಿಗುಪಾದ ಸಂಗತಿ. ಆದರೆ ನಾವು ಸಾಕಷ್ಟು ಕೊಟ್ಟಿದ್ದೇವೆ, ಇನ್ನು ಮುಂದೆ ಕೊಡಸಾಧ್ಯವಿಲ್ಲ.” “ಇತರರಿಂದ ಜಾಗರೂಕತೆಯ ಕಾಪಾಟವಾಗಲೇಬೇಕು” ಎಂದರವರು. ಎವರ್ಗ್ಲೇಡ್ಸ್ ಪುನರುದ್ಧಾರ ಪ್ರಸ್ತಾಪದ ಪ್ರತಿಪಾದಕರು, ಈ ಯೋಜನೆಯ ವಿರುದ್ಧವಾದ ತಮ್ಮ ಅತಿ ಮಹಾ ಹೋರಾಟವು, ಎವರ್ಗ್ಲೇಡ್ಸ್ನಲ್ಲಿ ದೊಡ್ಡ ಜಮೀನುಗಳಿರುವ ಫ್ಲಾರಿಡದ ಕಬ್ಬು ಕೃಷಿಕರಿಂದ ಮತ್ತು ರೈತರಿಂದ ಬರುವುದೆಂದು ಭಯಪಡುತ್ತಾರೆ. ಅವರ ಅಗತ್ಯಗಳನ್ನು ಪೂರೈಸಲಿಕ್ಕಾಗಿ, ಗ್ಲೇಡ್ಸ್ನ ಜೀವಿಗಳಿಗೆ ಅಪಾಯ ಬರುವಂತಹ ರೀತಿಯಲ್ಲಿ ಭಾರಿ ಪ್ರಮಾಣದ ನೀರು ಹೀರಲ್ಪಡುತ್ತದೆ.
ಎವರ್ಗ್ಲೇಡ್ಸನ್ನು ಪುನರುದ್ಧರಿಸಿ, ರಕ್ಷಿಸುವುದು, ಇತಿಹಾಸದ ಅತ್ಯಂತ ಸಾಹಸಮಯವಾದ ಮತ್ತು ಅತ್ಯಂತ ವೆಚ್ಚದ ಪುನಸ್ಸ್ಥಾಪನಾ ಯೋಜನೆಯಾಗಿರುವುದು. “ನಾವು ತುಂಬ ಹಣ, ತುಂಬ ಜಮೀನಿನ ವಿಷಯವಾಗಿ ಮಾತಾಡುತ್ತಿದ್ದೇವೆ, ಮತ್ತು ನಾವು ಜಗತ್ತಿನಲ್ಲಿ ಹಿಂದೆಂದೂ ನೋಡಿರದ ಪ್ರಮಾಣದಲ್ಲಿ ಜೀವಿಪರಿಸ್ಥಿತಿ ವ್ಯವಸ್ಥೆಯ ಪುನಸ್ಸ್ಥಾಪನೆಯ ಕುರಿತು ಮಾತಾಡುತ್ತಿದ್ದೇವೆ,” ಎಂದರು ಲೋಕ ವನ್ಯಜೀವಿ ನಿಧಿಯಲ್ಲಿನ ಎವರ್ಗ್ಲೇಡ್ಸ್ ಯೋಜನೆಯ ಅಧಿಕಾರಿಗಳು. ಸೈಅನ್ಸ್ ಪತ್ರಿಕೆ ವಿವರಿಸಿದ್ದು: “ಮುಂದಿನ 15ರಿಂದ 20 ವರುಷಗಳಲ್ಲಿ, ಸುಮಾರು 200 ಕೋಟಿ ಡಾಲರುಗಳ ವೆಚ್ಚದಲ್ಲಿ, ಕೋರ್, ರಾಜ್ಯ ಮತ್ತು ಇತರ ಫೆಡರಲ್ ಏಜನ್ಸಿಗಳು, ಇಡೀ ಫ್ಲಾರಿಡ ಜೀವಿಪರಿಸ್ಥಿತಿ ವ್ಯವಸ್ಥೆ—14,000 ಚದರ ಕಿಲೊಮೀಟರ್ಗಳ [5,400 ಚದರ ಮೈಲುಗಳು]ಷ್ಟು ತರಿ ಜಮೀನು ಮತ್ತು ರಚಿಸಲ್ಪಟ್ಟ ಕಾಲುವೆಗಳು ಸೇರಿ—ಯನ್ನು ಪುನಃ ದುರಸ್ತುಮಾಡಲು ಯೋಜಿಸುತ್ತವೆ.”
ಕೂಡಿಕೆಯಾಗಿ, ಲೇಕ್ ಓಕೀಚೋಬೀಯ ಹತ್ತಿರ 100,000 ಎಕ್ರೆಗಳಷ್ಟು ಹೊಲಪ್ರದೇಶವನ್ನು ಖರೀದಿಸಿ, ಉಳಿದಿರುವ ಹೊಲಪ್ರದೇಶದಿಂದ ಬರುವ ಮಲಿನಕಾರಕ ಪದಾರ್ಥವನ್ನು ಶೋಧಿಸಲಿಕ್ಕಾಗಿ ಅದನ್ನು ಜೌಗು ಪ್ರದೇಶವಾಗಿ ಪರಿವರ್ತಿಸುವುದನ್ನು ಆ ಯೋಜನೆಯು ಕೇಳಿಕೊಳ್ಳುತ್ತದೆ. ಎವರ್ಗ್ಲೇಡ್ಸನ್ನು ಶುಚಿಗೊಳಿಸಲಿಕ್ಕಾಗಿ, ಹೆಚ್ಚುವರಿಯ ಹಣವನ್ನು ಒಟ್ಟುಗೂಡಿಸಲು ಪ್ರಸ್ತಾಪಿಸಲಾಗಿರುವ ಉದ್ಯಮದ ಫೆಡರಲ್ ಸಹಾಯಧನವನ್ನು, ಪ್ರತಿ ಕಿಲೊಗ್ರಾಮ್ಗೆ 75 ಪೈಸೆಯಷ್ಟು ಕಡಮೆ ಮಾಡುವ ಪ್ರಸ್ತಾಪವನ್ನು ಕಬ್ಬು ಕೃಷಿಕರು ಕೋಪದಿಂದ ಪ್ರತಿಭಟಿಸುತ್ತಾರೆ. ಯುಎಸ್ಎ ಟುಡೇ ವಾರ್ತಾಪತ್ರವು ಸಂಪಾದಕೀಯವಾಗಿ ಹೇಳಿದ್ದು: “ಎವರ್ಗ್ಲೇಡ್ಸನ್ನು ನಾಶಮಾಡಿದ್ದರಿಂದ ಅತ್ಯಧಿಕ ಲಾಭವು ಯಾರಿಗೆ ಸಿಕ್ಕಿದೆಯೊ ಅವರು, ಪುನರುದ್ಧಾರದ ಖರ್ಚನ್ನು ಕೊಡಬೇಕು: ಫ್ಲಾರಿಡದ ಸಕ್ಕರೆ ಕೃಷಿಕರು ಮತ್ತು ಪರಿವರ್ತನಕಾರರು.” ಫ್ಲಾರಿಡ ಸಕ್ಕರೆಯ ಮೇಲಿನ, ಕಿಲೊಗ್ರಾಮ್ಗೆ 75 ಪೈಸೆಗಳ ತೆರಿಗೆ ನಿರ್ಧಾರಣೆಯು, ಒಂದು ವರುಷಕ್ಕೆ 3.5 ಕೋಟಿ ಡಾಲರುಗಳನ್ನು ಉತ್ಪಾದಿಸುವುದೆಂದು ಅಂದಾಜುಮಾಡಲಾಗುತ್ತದೆ.
ರೈತರು ಮತ್ತು ಕಬ್ಬು ಕೃಷಿಕರ ಎದುರಾಗಿ, ಜೀವಶಾಸ್ತ್ರಜ್ಞರು, ಪರಿಸರವಾದಿಗಳು ಮತ್ತು ನಿಸರ್ಗ ಪ್ರೇಮಿಗಳ ಈ ಹೋರಾಟವು, ಅಮೆರಿಕದ ಇತರ ಭಾಗಗಳಲ್ಲಿ ಆಗುತ್ತಿರುವಂತೆಯೇ ಮುಂದುವರಿಯುವುದೆಂದು ನಿರೀಕ್ಷಿಸಲಾಗುತ್ತದೆ. ಅಲ್ಲಿಯೂ ಇವೇ ಪಂಗಡಗಳು ಪರಸ್ಪರ ಎದುರಾಳಿಗಳಾಗಿವೆ. ಉಪಾಧ್ಯಕ್ಷ ಗೋರ್ ಸಹಕಾರಕ್ಕಾಗಿ ಕೇಳಿಕೊಂಡರು. ಅವರು ಹೇಳಿದ್ದು: “ಕೂಡಿ ಕೆಲಸ ಮಾಡುವ ಮೂಲಕ ನಾವು ಈ ವಿಭಾಗವನ್ನು ದುರಸ್ತುಪಡಿಸಿ, ಒಂದು ಆರೋಗ್ಯಕರವಾದ ಪರಿಸರ ಮತ್ತು ಸ್ಪಂದಕವಾದ ಆರ್ಥಿಕತೆಯ ಭರವಸೆಯನ್ನು ಕೊಡಬಲ್ಲೆವು. ಆದರೆ ಕ್ರಮಕೈಕೊಳ್ಳುವ ಸಮಯವು ಇದೇ. ಏಕೆಂದರೆ ಜಗತ್ತಿನಲ್ಲಿ ಇನ್ನೊಂದು ಎವರ್ಗ್ಲೇಡ್ಸ್ ಇರುವುದಿಲ್ಲ.”
[ಪುಟ 24 ರಲ್ಲಿರುವ ಚಿತ್ರ]
ಮೊಸಳೆ
[ಕೃಪೆ]
USDA Forest Service
[ಪುಟ 25 ರಲ್ಲಿರುವ ಚಿತ್ರ]
ಬಾಲ್ಡ್ ಈಗ್ಲ್
[ಪುಟ 26 ರಲ್ಲಿರುವ ಚಿತ್ರ]
ವೈಟ್ ಐಬಿಸ್
[ಪುಟ 26 ರಲ್ಲಿರುವ ಚಿತ್ರ]
ಗೂಡುಕಟ್ಟುತ್ತಿರುವ ಒಂದು ಜೊತೆ ಆ್ಯನ್ಹಿಂಗಗಳು, ಅಥವಾ ಹಾವುಹಕ್ಕಿಗಳು
[ಪುಟ 27 ರಲ್ಲಿರುವ ಚಿತ್ರ]
ದಾಟಿಹೋಗುತ್ತಿರುವ ರ್ಯಾಕೂನ್ ತ್ರಯಗಳು
[ಪುಟ 27 ರಲ್ಲಿರುವ ಚಿತ್ರ]
ಎಗ್ರೆಟ್
[ಪುಟ 28 ರಲ್ಲಿರುವ ಚಿತ್ರ]
ಲಿಂಪ್ಕಿನ್, ಅಳುವ ಪಕ್ಷಿಯೆಂದೂ ಕರೆಯಲ್ಪಡುತ್ತದೆ
[ಪುಟ 28 ರಲ್ಲಿರುವ ಚಿತ್ರ]
ಗ್ರೇಟ್ ಬ್ಲೂ ಹೆರನ್
[ಪುಟ 28 ರಲ್ಲಿರುವ ಚಿತ್ರ]
ಕಾರ್ಮರಂಟ್ ಮರಿಗಳು