ನಮ್ಮ ವಾಚಕರಿಂದ
ಇಡೀ ಪತ್ರಿಕೆಯನ್ನು ಓದುತ್ತಾಳೆ ನಾನು ಯಾವಾಗಲೂ ಎಚ್ಚರ! ಪತ್ರಿಕೆಯನ್ನು ಇಷ್ಟಪಟ್ಟಿದ್ದೇನೆ. ಆದರೆ ನನ್ನ ಗಮನವನ್ನು ಸೆಳೆದಂತಹ ಲೇಖನಗಳನ್ನು ಮಾತ್ರ ನಾನು ಓದುತ್ತಿದ್ದೆ. ಈಗ ನಾನು ಇಡೀ ಪತ್ರಿಕೆಯನ್ನು ಓದುತ್ತೇನೆ ಮತ್ತು ಇದು ನಾನು ಈ ಮುಂಚೆ ಬಿಟ್ಟುಬಿಡುತ್ತಿದ್ದ ವಿಷಯಗಳನ್ನು ಇಷ್ಟಪಡುವುದರಲ್ಲಿ ಪರಿಣಮಿಸಿದೆ. ಉದಾಹರಣೆಗಾಗಿ, ನಾನು ಈಗತಾನೇ, “ಒಂದು ಪುರಾತನ ಅಮೆರಿಕನ್ ಇಂಡಿಯನ್ ಸಂಪ್ರದಾಯ” (ಮಾರ್ಚ್ 8, 1996, ಇಂಗ್ಲಿಷ್) ಎಂಬ ಲೇಖನವನ್ನು ಓದಿ ಮುಗಿಸಿದ್ದೇನೆ. ಮತ್ತು ನಾನು ಅದರಲ್ಲಿ ತುಂಬ ಆನಂದಿಸಿದೆ!
ಇ. ಎ. ಎಸ್., ಬ್ರೆಸಿಲ್
ಇತರರ ಮನನೋಯಿಸುವುದು “ಬೈಬಲಿನ ದೃಷ್ಟಿಕೋನ: ನೀವು ಇತರರ ಮನನೋಯಿಸುವಾಗ ಮಾಡಬೇಕಾದ ವಿಷಯಗಳು” (ಮಾರ್ಚ್ 8, 1996) ಎಂಬ ಲೇಖನವು ಸರಿಯಾದ ಸಮಯದಲ್ಲಿ ಬಂತು. ಒಬ್ಬ ಕ್ರೈಸ್ತ ಸಹೋದರಿಯು ಒಮ್ಮೆಲೆ ನನ್ನೊಂದಿಗೆ ಮಾತಾಡುವುದನ್ನು ನಿಲ್ಲಿಸಿದಳು. ನಾನು ಅವಳ ಮನನೋಯಿಸುವಂತಹ ಯಾವುದಾದರೂ ವಿಷಯವನ್ನು ಮಾಡಿದ್ದೇನೊ ಎಂದು ಅವಳಿಗೆ ಕೇಳಿ, ಕ್ಷಮೆಯಾಚಿಸಿದೆ. ಆದರೆ ಇದು ಅವಳ ಮನೋಭಾವವನ್ನು ಬದಲಾಯಿಸಲಿಲ್ಲ. ನಾನು ಇದರಿಂದ ತೀವ್ರವಾಗಿ ನೋಯಿಸಲ್ಪಟ್ಟೆ ಮತ್ತು ಯೆಹೋವನಿಗೆ ನನ್ನ ಸೇವೆಯು ಸ್ವೀಕಾರಾರ್ಹವಲ್ಲವೆಂದು ಯೋಚಿಸಲಾರಂಭಿಸಿದೆ. ಆ ಲೇಖನದ ಕೊನೆಯ ಪ್ಯಾರಗ್ರಾಫನ್ನು ಓದಿದಾಗ ನನಗೆಷ್ಟು ಸಾಂತ್ವನವಾಯಿತು! “ಒಮ್ಮೆ ನೀವು ಮತ್ತೆ ಸ್ನೇಹ ಬೆಳೆಸಿಕೊಳ್ಳಲು ನಿಮ್ಮನ್ನು ವಿನಿಯೋಗಿಸಿಕೊಂಡಿರುವಲ್ಲಿ, ನಿಮ್ಮ ಆರಾಧನೆಯನ್ನು ಸ್ವೀಕರಿಸಲು ಯೆಹೋವನು ಸಂತೋಷಿಸುವನೆಂಬ ಭರವಸೆ ನಿಮಗಿರಬಲ್ಲದು” ಎಂದು ಅದು ಹೇಳಿತು.
ಎಮ್. ಆರ್., ಅರ್ಜೆಂಟೀನ
ನಾಗರಹಾವು “ಒಂದು ನಾಗರಹಾವನ್ನು ಸಂಧಿಸಲು ನೀವು ಇಷ್ಟಪಡುವಿರೊ?” (ಎಪ್ರಿಲ್ 8, 1996) ಎಂಬ ಲೇಖನವು ತುಂಬ ಆಸಕ್ತಿಕರವಾಗಿತ್ತು. ಆದರೆ ಪುಟ 12ರಲ್ಲಿರುವ ಒಂದು ಚಿತ್ರಬರಹವು ಹೀಗೆ ಹೇಳುತ್ತದೆ: “ಒಂದು ಕರಿಯ ನಾಗರಹಾವು ಬೆಚ್ಚಗಿನ ಬಂಡೆಯೊಂದರ ಮೇಲೆ ಸ್ವತಃ ಬಿಸಿಲು ಕಾಯಿಸಿಕೊಳ್ಳುತ್ತಿರುವಾಗ, ತನ್ನ ಹೆಡೆಯನ್ನು ತೆರೆಯುತ್ತದೆ.” ನನಗೆ ತಿಳಿದಿರುವ ಮಟ್ಟಿಗೆ, ನಾಗರಹಾವು ಅಪಾಯವಿದೆಯೆಂಬುದನ್ನು ಗ್ರಹಿಸುವಾಗ ಅಥವಾ ಅದು ಕಿರಿಕಿರಿಗೊಂಡಿರುವಾಗ ಮಾತ್ರ ತನ್ನ ಹೆಡೆಯನ್ನು ತೆರೆಯುತ್ತದೆ.
ಆರ್. ಎಫ್., ಜರ್ಮನಿ
ಇದನ್ನು ಆ ಲೇಖನದ ಪುಟ 14ರಲ್ಲಿ, ಪ್ಯಾರಗ್ರಾಫ್ 1 ಮತ್ತು ಪುಟ 16ರಲ್ಲಿ, ಪ್ಯಾರಗ್ರಾಫ್ 2ರಲ್ಲಿ ವಿವರಿಸಲಾಗಿತ್ತು. ಭಾರತದಲ್ಲಿನ ನಮ್ಮ ಸುದ್ದಿಗಾರನು ಹೇಳುವುದೇನೆಂದರೆ, ನಾಗರಹಾವು, ಛಾಯಾಗ್ರಾಹಕನ ಸಹಾಯಕನಿಂದ ಉದ್ರೇಕಿಸಲ್ಪಟ್ಟದ್ದಕ್ಕಾಗಿ ಪ್ರತಿಕ್ರಿಯಿಸುತ್ತಿತ್ತು.—ಸಂಪಾ.
ಅಂಗವಿಕಲ ಚಾಲಕ “ಅಂಗವಿಕಲ—ಆದರೂ ವಾಹನ ಚಲಾಯಿಸಲು ಶಕ್ತನು” (ಜೂನ್ 8, 1996) ಎಂಬ ಲೇಖನವು ಸರಿಯಾದ ಸಮಯದಲ್ಲಿ ಆಗಮಿಸಿತು. ಒಬ್ಬ ಅಂಗವಿಕಲೆಯೋಪಾದಿ, ನನ್ನ ಕ್ರೈಸ್ತ ಶುಶ್ರೂಷೆಯು ತುಂಬ ಸೀಮಿತವಾಗಿದೆಯೆಂದು ನಾನು ಕಂಡುಕೊಳ್ಳುತ್ತೇನೆ. ಈಗ ನನಗೆ ನನ್ನ ಸ್ವಂತ ಮಾರ್ಪಡಿಸಲ್ಪಟ್ಟ ಕಾರ್ ಇದೆ. ಇದಕ್ಕಾಗಿ ಯೆಹೋವನಿಗೆ ಉಪಕಾರ. ಮತ್ತು ಈ ಲೇಖನವು, ನಾನು ನನ್ನ ಶುಶ್ರೂಷೆಯನ್ನು ಹೆಚ್ಚಿಸುವಂತೆ ನನ್ನನ್ನು ಪ್ರಚೋದಿಸಿದೆ.
ಎ. ಎ. ವಿ., ಬ್ರೆಸಿಲ್
ನೃತ್ಯ ಬಿಡುವಿನ ಸಮಯದ ಚಟುವಟಿಕೆಯೋಪಾದಿ ನಾನು, ಶಾಸ್ತ್ರೀಯ, ಲ್ಯಾಟಿನ್ ಮತ್ತು ಜನಪ್ರಿಯವಾದ ಮಂಜುಲ ಸಂಗೀತದ ತಾಳಕ್ಕೆ ನರ್ತಿಸುವುದರಲ್ಲಿ ಆನಂದಿಸುತ್ತೇನೆ. “ಬೈಬಲಿನ ದೃಷ್ಟಿಕೋನ: ನರ್ತಿಸುವುದು ಕ್ರೈಸ್ತರಿಗಾಗಿದೆಯೊ?” (ಜೂನ್ 8, 1996) ಎಂಬ ಲೇಖನವನ್ನು ನಾನು ನಿಜವಾಗಿಯೂ ಗಣ್ಯಮಾಡಿದೆ. ಈ ವಿಧದ ಮನೋರಂಜನೆಯನ್ನು ಹೆಚ್ಚು ಕಟ್ಟುನಿಟ್ಟಾಗಿ ಪರೀಕ್ಷಿಸುವಂತೆ ಇದು ನನಗೆ ಸಹಾಯ ಮಾಡಿತು. ನೀವು ಎಬ್ಬಿಸಿದ, ಮನಸ್ಸಾಕ್ಷಿಯನ್ನು ಪರಿಶೀಲಿಸುವಂತಹ ಆ ಪ್ರಶ್ನೆಗಳು, ನಾನು ನಿರ್ದೋಷಿಯಾಗಿಯೂ, ನನಗೆ “ಪ್ರಪಂಚದ ದೋಷವು ಹತ್ತದಂತೆ”ಯೂ ಇರಲು ಸಹಾಯ ಮಾಡುವವು.—ಯಾಕೋಬ 1:27.
ಡಿ. ಡಿ. ಜಿ., ಟ್ರಿನಿಡಾಡ್
ನಾನು 15 ವರ್ಷ ಪ್ರಾಯದವಳು, ಮತ್ತು ನೃತ್ಯದ ವಿಷಯದಲ್ಲಿ ಯಾವುದು ಯೋಗ್ಯ, ಯಾವುದು ಅಯೋಗ್ಯವೆಂಬುದನ್ನು ನಿರ್ಣಯಿಸುವುದನ್ನು ಕಠಿನವೆಂದು ಕಂಡುಕೊಂಡಿದ್ದೇನೆ. ಈ ಲೇಖನವು—ಬೈಬಲಿನಿಂದ ಉದ್ಧರಿಸಲ್ಪಟ್ಟಿರುವ ಶಾಸ್ತ್ರವಚನಗಳೊಂದಿಗೆ—ಒದಗಿಸಿದ ಮಾರ್ಗದರ್ಶನವನ್ನು ಉಪಯೋಗಿಸಿ, ಯಾವುದು ಯೋಗ್ಯವಾಗಿದೆಯೆಂಬುದನ್ನು ನಾನು ಈಗ ನಿರ್ಣಯಿಸಸಾಧ್ಯವಿದೆ.
ಎಮ್. ಆರ್., ಅಮೆರಿಕ
ಶ್ರವಣಶಕ್ತಿ ದುರ್ಬಲವಾಗಿರುವವರಿಗಾಗಿ ಒದಗಿಸುವಿಕೆಗಳು ನಾನು ಕಿವುಡಿಯೂ ಕುರುಡಿಯೂ ಆಗಿದ್ದೇನೆ. “ಸಂಕೇತಮಾಡುವ ಕೈಗಳೊಂದಿಗೆ ಎಟುಕಿಸಿಕೊಳ್ಳುವುದು” (ಎಪ್ರಿಲ್ 8, 1996, ಇಂಗ್ಲಿಷ್) ಎಂಬ ಲೇಖನಕ್ಕಾಗಿ ನಾನು ನಿಮಗೆ ಉಪಕಾರ ಹೇಳಲು ಬಯಸುತ್ತೇನೆ. ಅಮೆರಿಕನ್ ಸಂಕೇತ ಭಾಷೆಯಲ್ಲಿ ನಡೆಸಲ್ಪಟ್ಟ, “ಹರ್ಷಭರಿತ ಸ್ತುತಿಗಾರರು” ಎಂಬ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಗಳ ಕುರಿತಾಗಿ ಅದು ತಿಳಿಸಿತು. ಕುರುಡರೂ ಕಿವುಡರೂ ಆಗಿರುವ ಅನೇಕರು ಅಲ್ಲಿದ್ದರೆಂಬುದನ್ನು ತಿಳಿಯುವುದು ನನಗೆ ತುಂಬ ಉತ್ತೇಜನದಾಯಕವಾಗಿತ್ತು. ಇಲ್ಲಿ ಡಿಸೆಂಬರ್ 1995ರಲ್ಲಿ ನಮ್ಮ ಅಧಿವೇಶನವಿದ್ದಾಗ, ಅಧಿವೇಶನದ ಕಾರ್ಯಕ್ರಮವನ್ನು ನನಗಾಗಿ ಅರ್ಥವಿವರಣೆ ಮಾಡಿದವರಿಗಾಗಿ ನಾನು ತುಂಬ ಆಭಾರಿಯಾಗಿದ್ದೇನೆ. ನಾನು ಬ್ರೇಲ್ ಭಾಷೆಯನ್ನು ಎಂದೂ ಕಲಿತಿಲ್ಲ. ಆದುದರಿಂದ ಇತರರಿಗೆ ಸಾರಲಾಗುವಂತೆ ನಾನು 121 ಬೈಬಲ್ ವಚನಗಳನ್ನು ಬಾಯಿಪಾಠ ಮಾಡಿಕೊಂಡಿದ್ದೇನೆ. ಕಿವುಡರ ಕಿವಿ ಕೇಳಿಸುವ ಮತ್ತು ಮೂಕರು ಮಾತಾಡುವುದರ ಕುರಿತಾಗಿ ತಿಳಿಸುವ ಯೆಶಾಯ 35:5, 6ರಲ್ಲಿರುವ ದೇವರ ವಾಗ್ದಾನದ ನೆರವೇರಿಕೆಯನ್ನು ನೋಡುವುದು ನನ್ನ ಬಯಕೆಯಾಗಿದೆ. ಬರಲಿರುವ ಪ್ರಮೋದವನದಲ್ಲಿ ನಾನು ಯೆಹೋವನಿಗೆ ಸ್ತುತಿಗಳನ್ನು ಹಾಡಲು ಶಕ್ತಳಾಗಿರುವುದನ್ನು ಬಯಸುತ್ತೇನೆ!
ಎ. ಎಫ್. ಎ., ಅರ್ಜೆಂಟೀನ