ಆಲದ ಮರ ಒಂದು ಮರವು ಒಂದು ಕಾಡಾಗಿ ಪರಿಣಮಿಸುತ್ತದೆ
ಭಾರತದ ಎಚ್ಚರ! ಸುದ್ದಿಗಾರರಿಂದ
ಒಂದು ಕಾಡು ಸಾಮಾನ್ಯವಾಗಿ ಅನೇಕ ಮರಗಳಿಂದ ರಚಿಸಲ್ಪಟ್ಟಿರುತ್ತದೆ. ಆದರೆ ಕೇವಲ ಒಂದೇ ಮರದಿಂದ ರಚಿಸಲ್ಪಟ್ಟಿರುವ ಕಾಡೊಂದಿದೆ. ಆಲದ ಮರವು ಅತಿ ಅಸಾಧಾರಣವಾದ ಮರವಾಗಿದೆ, ಅದು ಐದು ಎಕರೆಗಳಿಗಿಂತಲೂ ಹೆಚ್ಚಿನ ಕ್ಷೇತ್ರವನ್ನು ಆವರಿಸುವ ತನಕ ಹರಡಬಲ್ಲದು! ಅದು ಹೇಗೆ ಬೆಳೆಯಲು ತೊಡಗುತ್ತದೆ? ಅದು ನಿಜವಾಗಿಯೂ ಒಂದು ಕಾಡೆಂದು ಕರೆಯಲ್ಪಡಸಾಧ್ಯವಿರುವ ತನಕ ಹೇಗೆ ತನ್ನನ್ನು ವಿಸ್ತೃತಗೊಳಿಸುತ್ತಾ ಇರುತ್ತದೆ?
ಆಲದ ಮರವು ಅರ್ಟಿಕೇಲೀಸ್ ಎಂದು ಕರೆಯಲ್ಪಡುವ ಹೂಬಿಡುವ ಗಿಡಗಳ ಶ್ರೇಣಿಗೆ ಮತ್ತು ಮರೇಸೀಈ ಕುಟುಂಬ ಅಥವಾ ಉಪ್ಪುನೇರಿಳೆ ಕುಟುಂಬಕ್ಕೆ ಸೇರಿರುತ್ತದೆ, ಅದು ಅಂಜೂರದ ಗಿಡಗಳ ಸುಮಾರು 800 ಜಾತಿಗಳನ್ನು ಒಳಗೊಳ್ಳುತ್ತದೆ. ಆಲದ ಮರ ಅಥವಾ ಬಂಗಾಲ ಅಂಜೂರವು ತನ್ನ ದೀರ್ಘವಾದ ಜೀವನವನ್ನು, ಆಲದ ಮರದ ಹಣ್ಣನ್ನು ತಿಂದಿರುವ ಮಂಗಗಳು, ಹಕ್ಕಿಗಳು, ಅಥವಾ ಬಾವಲಿಗಳ ಹಿಕ್ಕೆಗಳಲ್ಲಿರುವ ಒಂದು ಬೀಜದಿಂದ ಆರಂಭಿಸುತ್ತದೆ.
ಆಶ್ರಯವಾದ ಒಂದು ಮರದ ಕೊಂಬೆಗಳಲ್ಲಿ ಬೀಜಗಳು ಅಂಕುರಿಸುತ್ತವೆ ಮತ್ತು ಬೇರುಗಳು ಬಿರುಕುಗಳಲ್ಲಿ ಶೇಖರಿಸಿರುವ ಕೊಳೆತುಹೋದ ಎಲೆಗಳಂತಹ ವಿಷಯಗಳಲ್ಲಿ ಹುಲುಸಾಗಿ ಬೆಳೆಯುತ್ತವೆ. ಆ ಹೊಸ ಮರದ ಬೇರುಗಳು ತೀವ್ರವಾಗಿ ಬೆಳೆಯುವಂತೆ ತೇವವುಳ್ಳ ಪರಿಸ್ಥಿತಿಗಳು ಸಹಾಯ ಮಾಡುತ್ತವೆ; ಅವು “ಬಲಿಯಾದ” ಮರದ ಕಾಂಡದ ಸುತ್ತಲೂ ದಟ್ಟವಾಗಿ, ಕೆಳಗೆ ನೆಲದೊಳಗೆ ಬೆಳೆಯುತ್ತವೆ. ಅವು ಬಲ ಹಾಗೂ ಗಾತ್ರದಲ್ಲಿ ವೃದ್ಧಿಯಾದಂತೆ, ಈ ರೀತಿಯ ಗಿಡಕ್ಕೆ ದಮನಮಾಡುವ ಅಂಜೂರಗಳೆಂಬ ಹೆಸರನ್ನು ಕೊಡುತ್ತಾ, ಅವು ಆಶ್ರಯ ನೀಡಿದ ಮರವನ್ನು ಉಸಿರು ಕಟ್ಟಿಸುತ್ತವೆ.
ಆಲದ ಮರವು ಈಗ ವಿಸ್ತರಿಸಲು ಸಿದ್ಧವಾಗಿದೆ. ಬೇರುಗಳು ಮೂಲ ಕಾಂಡದ ತಳದಿಂದ ಹರಡುತ್ತವೆ ಮಾತ್ರವಲ್ಲ ಕೊಂಬೆಗಳು ಲಂಬವಾಗಿ ಬೆಳೆದಂತೆ, ಜೋಲಾಡುವ ಬೇರುಗಳು ಅವುಗಳಿಂದ ನೆಲದ ಕಡೆಗೆ ಬೀಳುತ್ತವೆ ಮತ್ತು ತಮ್ಮನ್ನು ಮಣ್ಣಿನಲ್ಲಿ ಆಧರಿಸಿಕೊಳ್ಳುತ್ತವೆ. ಒಂದು ಕಾಡಿನ ರಚನೆಯು ಆರಂಭಿಸಿದೆ.
ಉಷ್ಣವಲಯದ ಆಫ್ರಿಕ ಮತ್ತು ಭಾರತದಲ್ಲಿ ಕಂಡುಕೊಳ್ಳಲ್ಪಡುವ ಆಲದ ಮರವು, ಅದರ ದೊಡ್ಡ, ಚಪ್ಪಟೆಯಾದ ಎಲೆಗಳೊಂದಿಗೆ ಮಾನವರಿಗೆ ಹಾಗೂ ಪ್ರಾಣಿಗಳಿಗೆ ನೆರಳಿನ ಕೊಡೆಯೋಪಾದಿ ಕಾರ್ಯಮಾಡುತ್ತದೆ. ಭಾರತದಲ್ಲಿರುವ ಒಂದು ಮರವು ಎಷ್ಟು ವಿಶಾಲವಾಗಿದೆಯೆಂದರೆ, 20,000ಕ್ಕಿಂತಲೂ ಹೆಚ್ಚಿನ ಜನರಿಗೆ ಆಶ್ರಯ ನೀಡಲು ಅದು ಶಕ್ತವಾಗಿದೆ ಎಂಬುದಾಗಿ ಹೇಳಲಾಗಿದೆ! ಹಣ್ಣು ಮಾನವ ಬಳಕೆಗೆ ಉತ್ತಮವಾಗಿರುವುದಿಲ್ಲ, ಮತ್ತು ಆಲದ ಮರದ ಕಟ್ಟಿಗೆಯು ಮೃದುವಾಗಿಯೂ ಸಣ್ಣ ರಂಧ್ರಗಳಿಂದ ತುಂಬಿರುವಂತಹದ್ದೂ ಆಗಿದೆ; ಹಾಗಿದ್ದರೂ, ಕಟ್ಟಿಗೆಯಿಂದ ಬರುವ, ಹಕ್ಕಿಯಂಟು ಎಂಬುದಾಗಿ ಕರೆಯಲ್ಪಡುವ ಒಂದು ಬಿಳಿಯ, ಅಂಟಂಟಾದ ವಸ್ತು, ಹಕ್ಕಿಗಳನ್ನು ಸೆರೆಹಿಡಿಯಲು ಉಪಯೋಗಿಸಲ್ಪಡುತ್ತದೆ.
ಆಲದ ಮರವು ಎಷ್ಟು ದೀರ್ಘಕಾಲ ಜೀವಿಸುತ್ತದೆ? ಆಂಧ್ರ ಪ್ರದೇಶದ ರಾಜ್ಯದಲ್ಲಿರುವ ಒಂದು ಮರವು, 600ಕ್ಕಿಂತಲೂ ಹೆಚ್ಚು ವರ್ಷಗಳ ಪ್ರಾಯದ್ದಾಗಿದೆಯೆಂದು ಅಂದಾಜುಮಾಡಲಾಗಿದೆ; ಇತರ ಗಮನಾರ್ಹವಾದ, ಸಂರಕ್ಷಿತ ಮರಗಳು 250ಕ್ಕಿಂತಲೂ ಹೆಚ್ಚಿನ ವರ್ಷಗಳ ಪ್ರಾಯದ್ದಾಗಿವೆ. ಮತ್ತು ಆಲದ ಮರದ ಬೆಳವಣಿಗೆ ಹಾಗೂ ಹಬ್ಬುವಿಕೆಯು ಅನಿಶ್ಚಿತವಾಗಿ ಮುಂದುವರಿಯುತ್ತದೆ.
ವಿದಿತವಾಗಿರುವ ಅತ್ಯಂತ ದೊಡ್ಡದಾದ ಆಲದ ಮರವೆಂದು ಹೇಳಲ್ಪಟ್ಟಿರುವ ಆಲದ ಮರವು, ಶ್ರೀ ಲಂಕದಲ್ಲಿದೆ. ಏಕೈಕ ಮೂಲ ಮರಕ್ಕೆ ಅಂಟಿಕೊಂಡಿರುವ 350 ದೊಡ್ಡ ಕಾಂಡಗಳು ಮತ್ತು 3,000ಕ್ಕಿಂತಲೂ ಹೆಚ್ಚಿನ ಚಿಕ್ಕದಾದ ಕಾಂಡಗಳು ಅದಕ್ಕಿವೆ. ಭಾರತದಲ್ಲಿ 1,100 ಆಸರೆಕೊಡುವ ಬೇರುಗಳು ಮತ್ತು ಐದು ಎಕರೆಗಳಿಗಿಂತಲೂ ಹೆಚ್ಚಾದ ಮೇಲ್ಚಪ್ಪರದ ಆವರಣವಿರುವ ಒಂದು ಮರವು, ಇತ್ತೀಚೆಗೆ ಅಳೆಯಲ್ಪಟ್ಟಿತು ಮತ್ತು ಆ ದೇಶದಲ್ಲಿನ ಅತ್ಯಂತ ದೊಡ್ಡದಾದ ಮರವಾಗಿ ಕಂಡುಕೊಳ್ಳಲ್ಪಟ್ಟಿತು. ಅದನ್ನು ಹಾನಿಯಿಂದ ಸಂರಕ್ಷಿಸುವ ಸಲುವಾಗಿ, ಅದು ಸತತವಾಗಿ ನಾಲ್ಕು ಶಸ್ತ್ರಸಜ್ಜಿತ ಪುರುಷರಿಂದ ಕಾಪಿಡಲ್ಪಟ್ಟಿದೆ. ಭಾರತದಲ್ಲಿರುವ ಇತರ ಹೆಸರುವಾಸಿ ಆಲದ ಮರಗಳಲ್ಲಿ, ಮೂರು ಎಕರೆಗಳನ್ನು ಆವರಿಸುವ ಮತ್ತು ನಗರದ ನಿವಾಸಿಗಳಿಗೆ ಅಚ್ಚುಮೆಚ್ಚಿನ ಪಿಕ್ನಿಕ್ ಸ್ಥಳವಾಗಿರುವ ಬೆಂಗಳೂರಿನ ಹತ್ತಿರವಿರುವ ಒಂದು ಮರವು ಸೇರಿದೆ. ಆಮೇಲೆ ರನ್ತಂಬೋರ್ ವನ್ಯಜೀವಿ ಉದ್ಯಾನವನದಲ್ಲಿರುವ ಭಯಚಕಿತಗೊಳಿಸುವ ಮತ್ತೊಂದು ಮರವೂ ಇದೆ. 500 ವರ್ಷಗಳ ಹಿಂದೆ ಒಬ್ಬ ಮೊಗಲ್ ಸಮ್ರಾಟನ ಬರಹಗಳಲ್ಲಿ ಉಲ್ಲೇಖಿಸಲ್ಪಟ್ಟಂತೆ, ಈ ಮರವು ಹಕ್ಕಿಗಳು, ಬಾವಲಿಗಳು, ಹಾವುಗಳು, ಅಳಿಲುಗಳು, ಮತ್ತು ಸಣ್ಣ ಪ್ರಾಣಿಗಳು ಹಾಗೂ ಕೀಟಗಳ ದೊಡ್ಡ ಸಮೂಹಕ್ಕೆ ನೆರಳನ್ನು ಒದಗಿಸುವುದಲ್ಲದೆ, ಹುಲಿಗಳಿಗೆ ಹಾಗೂ ಉದ್ಯಾನವನದಲ್ಲಿರುವ ಇತರ ಮಾಂಸಾಹಾರಿ ಪ್ರಾಣಿಗಳಿಗೆ ಆಟದ ಬಯಲೂ, ಬೇಟೆಯಾಡುವ ನೆಲವೂ ಆಗಿರುತ್ತದೆ.
ಆದರೂ, ಭಾರತದಲ್ಲಿರುವ ಅತಿ ಪ್ರಸಿದ್ಧವಾದ ಆಲದ ಮರವು ಬಹುಶಃ, ಕಲ್ಕತ್ತಾದಲ್ಲಿರುವ ನ್ಯಾಷನಲ್ ಬೊಟ್ಯಾನಿಕಲ್ ಗಾರ್ಡನ್ಸ್ನಲ್ಲಿರುವ 240 ವರ್ಷ ಪ್ರಾಯದ ಮರವಾಗಿದೆ. 24.5 ಮೀಟರಿಗಿಂತಲೂ ಉದ್ದವಾಗಿದ್ದು, ಅದು ಮೂರು ಎಕರೆಗಳ ಕ್ಷೇತ್ರವನ್ನು ಆವರಿಸುತ್ತದೆ ಮತ್ತು 1,800ಕ್ಕಿಂತಲೂ ಹೆಚ್ಚು ಜೋಲಾಡುವ ಬೇರುಗಳಿವೆ ಮತ್ತು 420 ಮೀಟರುಗಳಷ್ಟು ಸುತ್ತಳತೆಯ ಒಂದು ವಿಶಾಲವಾದ ಮುಕುಟವಿದೆ. ಒಂದು ಸಾಕ್ಷಾತ್ತಾದ ಕಾಡು!
ಧರ್ಮ ಮತ್ತು ಆಲದ ಮರ
ಪ್ರಾಚೀನ ಸಮಯದಿಂದಲೂ ಜನರು ಮರಗಳನ್ನು ಪೂಜಿಸಿದ್ದಾರೆ. ಆಲದ ಮರವು ಇದಕ್ಕೆ ಹೊರತಾಗಿಲ್ಲ; ಅದು ಇಂದಿಗೂ ಭಾರತದಲ್ಲಿ ಪವಿತ್ರವೆಂದು ಎಣಿಸಲ್ಪಟ್ಟಿದೆ. ಪವಿತ್ರ ಮರಗಳು ವಿಶೇಷವಾದ ದೇವತೆಗಳನ್ನು ಪ್ರತಿನಿಧಿಸುವುದಾಗಿ ಭಾವಿಸಲಾಗುತ್ತದೆ—ಆಲದ ಮರದ ವಿಷಯದಲ್ಲಿ, ದೇವನಾದ ವಿಷ್ಣು. ಒಂದು ಮರವು ನೆಡಲ್ಪಟ್ಟು, ನೀರೆರೆಯಲ್ಪಟ್ಟು, ಪೋಷಿಸಲ್ಪಡುವಾಗ ಅದು ಆ ಮರದ ದೇವನಿಗೆ ಸಲ್ಲಿಸುವ ಪೂಜೆಯಂತೆ ವೀಕ್ಷಿಸಲಾಗುತ್ತದೆ.
ಪ್ರಾಚೀನ ಪಾಲಿನೇಷಿಯನ್ ಸಮಾಜಗಳಲ್ಲಿಯೂ ಆಲದ ಮರವು ಪವಿತ್ರವೆಂದು ಎಣಿಸಲ್ಪಡುತ್ತಿತ್ತು. ಯಾವುದರ ಸುತ್ತಲೂ ಮನೆಗಳು ಕಟ್ಟಲ್ಪಟ್ಟಿದ್ದವೊ, ಆ ಆಯಾಕಾರದ ಪೇಟೆ (ಪ್ಲಾಸ) ಅಥವಾ ಟೊಹೂಅದಲ್ಲಿ ಧಾರ್ಮಿಕ ವ್ರತಾಚರಣೆಗಳು ನಡೆದವು. ಪೇಟೆಯ ಒಂದು ಕೊನೆಯಲ್ಲಿ ಸಾಮಾನ್ಯವಾಗಿ ಒಂದು ಪವಿತ್ರ ಆಲದ ಮರವಿರುವ ದೇವಾಲಯವು ಕಂಡುಕೊಳ್ಳಲ್ಪಡುತ್ತಿತ್ತು, ಅದರ ಕೊಂಬೆಗಳ ಮೇಲೆ ಸತ್ತುಹೋಗಿದ್ದ ಗೋತ್ರದ ಪ್ರಧಾನ ಸದಸ್ಯರ ಎಲುಬುಗಳ ಗಂಟುಗಳು ತೂಗುಹಾಕಲ್ಪಟ್ಟಿದ್ದವು.
ಈ ದೊಡ್ಡ ಆಕಾರದ ಮರದ ಹೆಸರು ಮೂಲಭೂತವಾಗಿ ಯೂರೋಪಿಯನರಿಂದ ಕೊಡಲಾಗಿತ್ತು. ಪರ್ಷಿಯದ ಖಾರಿ ಮತ್ತು ಭಾರತದಲ್ಲಿ, ವಿಶಾಲವಾದ ಕೊಡೆಯಂತಹ ಈ ಮರದ ಮೇಲ್ಚಪ್ಪರವು ನೆರಳನ್ನು ಒದಗಿಸಿತೆಂಬುದನ್ನು, ಮತ್ತು ವ್ಯಾಪಾರಿಗಳು ತಮ್ಮ ಸರಕುಗಳನ್ನು ಸೂರ್ಯನ ಸುಡುವ ತಾಪದಿಂದ ರಕ್ಷಿಸಲು ಅದರ ಕೆಳಗೆ ಸರಕುಗಳನ್ನು ಹರಡಿದರೆಂಬುದನ್ನು ಆದಿಯ ಯೂರೋಪಿಯನ್ ಸಂಚಾರಿಗಳು ನೋಡಿದರು. ಹಿಂದೂ ಜಾತಿಯ ವ್ಯವಸ್ಥೆಯಲ್ಲಿ, ವ್ಯಾಪಾರಿಗಳು ವೈಶ್ಯ ಎಂದು ಕರೆಯಲ್ಪಡುವ ಪ್ರಧಾನ ವರ್ಗದಿಂದ ಬಂದರು, ಮತ್ತು ಒಂದು ಉಪಜಾತಿಯಾದ ಬನಿಯರು, ಧಾನ್ಯ ಮತ್ತು ಇತರ ಕಿರಾಣಿ ಸಾಮಾನುಗಳ ಗಮನಾರ್ಹ ವರ್ತಕರಾಗಿದ್ದರು. ಒಬ್ಬ ಬನಿಯನು ತನ್ನ ಸರಕುಗಳನ್ನು ನೆರಳಿರುವ ಆ ಮರದ ಕೆಳಗೆ ಮಾರುತ್ತಿರುವನೆಂಬುದನ್ನು ಗಮನಿಸುವುದು, ಆ ಮರವನ್ನು ವಿದೇಶಿಯರು ಬ್ಯಾನಿಯನ್ (ಆಲದ) ಮರವೆಂದು ಕರೆಯುವುದಕ್ಕೆ ನಡೆಸಿತು.
ಆ ದಿನಗಳಲ್ಲಿ, ಬನಿಯರು ಸಾಮಾನ್ಯವಾಗಿ ತಮ್ಮ ಹಣಕ್ಕಾಗಿ ಗುಪ್ತ ಜೇಬುಗಳಿರುವ ಹತ್ತಿ ಬಟ್ಟೆಯ ಒಂದು ನಡುವಂಗಿಯನ್ನು ಧರಿಸಿದರು. ತಂಪಾಗಿದ್ದು, ಮತ್ತು ಒಗೆಯಲು ಸುಲಭವಾಗಿರುತ್ತಾ, ಆ ನಡುವಂಗಿ ಬನಿಯ ವ್ಯಾಪಾರಿಗಳ ವಿಷಯದಲ್ಲಿ ಎಷ್ಟು ಸಾಮಾನ್ಯವಾಗಿತ್ತೆಂದರೆ, ಬನೀನು ಎಂಬ ಹೆಸರು ಆ ಉಡುಪಿಗೆ ಕೊಡಲಾಯಿತು ಮತ್ತು ತದನಂತರ ಆ ಹೆಸರು ಪುರುಷನ ಯಾವುದೇ ನಡುವಂಗಿ ಅಥವಾ ಒಳಅಂಗಿಗೆ ಉಪಯೋಗಿಸಲಾಯಿತು. ಭಾರತದಲ್ಲಿ ಪುರುಷನ ಒಳಅಂಗಿಗೆ ಈ ಹೆಸರು ಇನ್ನೂ ಉಪಯೋಗಿಸಲ್ಪಟ್ಟಿದೆ, ಮತ್ತು ಕೆಲಸಮಾಡುವಾಗ ಈ ರೀತಿಯ ಉಡುಪನ್ನು ಧರಿಸುವ ಬನಿಯರ ಹವ್ಯಾಸವು ಇಂದಿನ ವರೆಗೂ ಉಳಿದಿದೆ.
ಒಂದು ಆಲದ ಮರವನ್ನು ನಾವು ಹತ್ತೋಣ
ಆಲದ ಮರದ ಮಧ್ಯಕ್ಕೆ ಹತ್ತಲು ನೀವು ಇಷ್ಟಪಡುವಿರೊ? ದಕ್ಷಿಣ ಭಾರತದಲ್ಲಿನ ಹೈದರಾಬಾದ್ ನಗರವನ್ನು ನೀವು ಎಂದಾದರೂ ಸಂದರ್ಶಿಸಿದರೆ ನೀವು ಹಾಗೆ ಮಾಡಸಾಧ್ಯವಿದೆ. ಬೇಗಮ್ಪೇಟ್ ವಿಮಾನ ನಿಲ್ದಾಣದ ಹತ್ತಿರ, ಮತ್ತು ನಗರದ ಕೇಂದ್ರಸ್ಥಾನಕ್ಕೆ ನಿಕಟವಾಗಿ ಮಚ್ಚಾನ್—ಒಂದು ಆಲದ ಮರ ಹಾಗೂ ಅದರ ನೆರೆಯಲ್ಲಿರುವ ಪೀಪಲ್ ಮರದ—ಅದೂ ಒಂದು ಅಂಜೂರವೇ—ಬಲಿಷ್ಠವಾದ ಕೊಂಬೆಗಳೊಳಗೆ ಕಟ್ಟಲ್ಪಟ್ಟ ಮರದಮೇಲಿನ ಒಂದು ಹೋಟೆಲಾಗಿದೆ. ಅಂತರಗಳಲ್ಲಿ ಸ್ಥಾಪಿಸಲ್ಪಟ್ಟ ವೇದಿಕೆಗಳ ಆಚೆ ದಟ್ಟವಾದ ಹಗ್ಗದ ಏಣಿಯನ್ನು ಹತ್ತಿರಿ. ನೀವು ಯಾವುದರ ಮೇಲೆ ನಿಂತಿದ್ದೀರೊ ಆ ರಚನೆಯು, ಬಿದಿರು, ತೆಂಗಿನ ಎಲೆಗಳು, ಮತ್ತು ಹಗ್ಗಗಳಿಂದ ಮಾಡಲಾಗಿದೆ. ವಿಭಿನ್ನ ಮಟ್ಟಗಳಲ್ಲಿ ಸ್ಥಾಪಿಸಲ್ಪಟ್ಟ ಎರಡು ಊಟಮಾಡುವ ಕೋಣೆಗಳಲ್ಲಿ ಎತ್ತರವಾದ ಕೋಣೆಯನ್ನು ನೀವು ಪ್ರವೇಶಿಸಿದಂತೆ, ಗೋಪುರಾಕೃತಿಯ ಬಿದಿರಿನ ಚಾವಣಿಯು ನಿಮ್ಮನ್ನು ಸೂರ್ಯ ಹಾಗೂ ಮಳೆಯಿಂದ ರಕ್ಷಿಸುತ್ತದೆ. ಈಗ ನೀವು ನೆಲದಿಂದ ಒಂಬತ್ತು ಮೀಟರುಗಳ ಎತ್ತರದಲ್ಲಿದ್ದೀರಿ. ಸುಂದರವಾದ ಬಿದಿರಿನ ಪೀಠೋಪಕರಣಗಳು ಮತ್ತು ಗೋಡೆಯ ಮೇಲೆ ತೂಗುಹಾಕಲ್ಪಟ್ಟಿರುವ ಗೋತ್ರ ಸಂಬಂಧಿತ ಚಿತ್ರಗಳು ಕಾಡಿನ ಅನಿಸಿಕೆಗೆ ಕೂಡಿಸುತ್ತವೆ.
ನೀವು ಕುಳಿತುಕೊಂಡಂತೆ, ಮೋಗ್ಲಿ—ದ ಜಂಗಲ್ ಬುಕ್ನಲ್ಲಿರುವ ರಡ್ಯಾರ್ಡ್ ಕ್ಲಿಪಿಂಗ್ ಅವರ ಕಥೆಗಳ ಓದುಗರಿಗೆ ಚಿರಪರಿಚಿತವಾದ ಒಂದು ಹೆಸರು—ಎಂಬುದಾಗಿ ಕರೆಯಲ್ಪಡುವ ಭಕ್ಷ್ಯಗಳ ಪಟ್ಟಿಯು (ಮೆನು ಕಾರ್ಡ್) ನಿಮಗೆ ಕೊಡಲ್ಪಡುತ್ತದೆ. ಇದು ಸಹ ಕಾಡಿನ ವಾತಾವರಣಕ್ಕೆ ಕೂಡಿಸುತ್ತದೆ. ಈಗ ಒಂದು ಆಲದ ಮರದ ಮಧ್ಯದಲ್ಲಿ ಊಟಮಾಡುವುದರ ಅಪೂರ್ವವಾದ ಅನುಭವಕ್ಕೆ ಸಿದ್ಧರಾಗಿರಿ. ಯಾವುದಕ್ಕಾಗಿ ಹೈದರಾಬಾದ್ ಜನಪ್ರಿಯವಾಗಿದೆಯೊ, ಆ ಮಸಾಲೆಯಿಂದ ಕೂಡಿದ ಬಿರ್ಯಾನಿ, ಕಬಾಬ್ಗಳು ಮತ್ತು ಇತರ ಭಕ್ಷ್ಯಗಳ ವಿವಿಧತೆಗಳಂತಹ ಕೆಲವೊಂದು ಭಾರತೀಯ ಸ್ವಾದಿಷ್ಟಗಳನ್ನು ಆನಂದಿಸಿರಿ.
ನಿಮ್ಮ ಊಟವು ಮುಗಿದ ನಂತರ, ಹಗ್ಗದ ಏಣಿಯಿಂದ ಜಾಗರೂಕವಾಗಿ ಕೆಳಗಿಳಿಯಿರಿ, ಚಿಕ್ಕ ಜಲಪಾತ ಮತ್ತು ತಾವರೆಯ ಕೊಳವನ್ನು ನೋಡಿರಿ, ಮತ್ತು ಆಲದ ಮರದ—ಒಂದು ಮರವು ಒಂದು ಕಾಡಾಗಿ ಪರಿಣಮಿಸಿರುವ ತನಕ ಹರಡುತ್ತಾ, ಹರಡುತ್ತಾ ಇರಬಲ್ಲ ಒಂದು ಮರದ—ವಿಶಾಲವಾದ ಮೇಲ್ಚಪ್ಪರದಲ್ಲಿ ನೆಲಸಿರುವ ಈ ಅಪೂರ್ವವಾದ ಮರದ ಮೇಲಿರುವ ಹೋಟೆಲಿನಿಂದ ಹೊರಗೆ ಬನ್ನಿ.
[ಪುಟ 26 ರಲ್ಲಿರುವ ಚಿತ್ರಗಳು]
ಒಂದು ಆಲದ ಮರವು ಒಂದು ಕಾಡಾಗಿ ಪರಿಣಮಿಸಲು ಬೆಳೆದಿದೆ
ಮೇಲೆ: ಕಲ್ಕತ್ತಾದ ನ್ಯಾಷನಲ್ ಬೊಟ್ಯಾನಿಕಲ್ ಗಾರ್ಡನ್ಸ್ನೊಳಗೆ, ಒಂದು ಆಲದ ಮರದ ನಿಕಟ ನೋಟ
[ಪುಟ 27 ರಲ್ಲಿರುವ ಚಿತ್ರ]
ಕಲ್ಕತ್ತಾದ ನ್ಯಾಷನಲ್ ಬೊಟ್ಯಾನಿಕಲ್ ಗಾರ್ಡನ್ಸ್ನೊಳಗಿರುವ ಆಲದ ಮರ
[ಪುಟ 27 ರಲ್ಲಿರುವ ಚಿತ್ರ]
ಒಂದು ಆಲದ ಮರದೊಳಗಿರುವ ಮಚ್ಚಾನ್ ಹೋಟೆಲು, ಹೈದರಾಬಾದ್