ಯುವ ಜನರು ಪ್ರಶ್ನಿಸುವುದು . . .
ನಾನು ಕ್ರೀಡೆಗಳ ತಂಡವೊಂದನ್ನು ಸೇರಬೇಕೊ?
“ಒಂದು ತಂಡದಲ್ಲಿರುವುದು ಅದೇನು ಮಹಾ ವಿಷಯ?” ಎಂದು ಸೆವೆನ್ಟೀನ್ ಪತ್ರಿಕೆಯಲ್ಲಿನ ಲೇಖನವೊಂದು ಕೇಳಿತು. ಉತ್ತರವಾಗಿ ಆ ಲೇಖನವು ಹೇಳಿದ್ದು: “ನೀವು ಒಂದು ಸಾಮಾನ್ಯ ಗುರಿಯ ಕಡೆಗೆ ಒಟ್ಟಾಗಿ ಕಾರ್ಯನಡಿಸುತ್ತಿದ್ದೀರಿ, ಆದುದರಿಂದ ನೀವು ನಿಜವಾಗಿಯೂ ಆಪ್ತ ಸ್ನೇಹಿತರಾಗಿ ಪರಿಣಮಿಸುತ್ತೀರಿ. ಒಂದು ಗುಂಪಿನೊಂದಿಗೆ ಸಮಸ್ಯೆಗಳನ್ನು ಹೇಗೆ ಬಗೆಹರಿಸುವುದು, ಮಣಿಯುವವರೂ ಪರಿಗಣನೆ ತೋರಿಸುವವರೂ ಆಗಿರುವುದು ಹೇಗೆ, ಮತ್ತು ಹೇಗೆ ಸಂಧಾನ ಮಾಡಿಕೊಳ್ಳುವುದು ಎಂಬಂತಹ, ಜನ ಕೌಶಲಗಳನ್ನು ಸಹ ನೀವು ಕಲಿಯುತ್ತೀರಿ.”
ಹೀಗೆ, ಸಂಘಟಿತ ಕ್ರೀಡೆಗಳನ್ನು ಆಡುವುದು ಪ್ರಯೋಜನಗಳನ್ನು—ಇವುಗಳಲ್ಲಿ ವಿನೋದ ಮತ್ತು ವ್ಯಾಯಾಮವು ಅಪ್ರಮುಖವಲ್ಲ—ಹೊಂದಿರುವಂತೆ ತೋರಿಬರುತ್ತದೆ.a ತಂಡ ಕ್ರೀಡೆಗಳನ್ನು ಆಡುವುದು, ಒಬ್ಬನಿಗೆ ನೈತಿಕ ಬಲವನ್ನು ವಿಕಸಿಸಿಕೊಳ್ಳಲು ಸಹಾಯ ಮಾಡುತ್ತದೆಂದೂ ಕೆಲವರು ಪ್ರತಿಪಾದಿಸುತ್ತಾರೆ. ಹೀಗೆ ಒಂದು ಯುವಜನರ ಬೇಸ್ಬಾಲ್ ಸಂಘವು “ನೈತಿಕ ಬಲ, ಧೈರ್ಯ, ನಿಷ್ಠೆ” ಎಂಬ ಆದರ್ಶಸೂತ್ರವನ್ನು ಹೊಂದಿದೆ.
ಸಂಘಟಿತ ಕ್ರೀಡೆಗಳು ಯಾವಾಗಲೂ ಅಂತಹ ಉದಾತ್ತ ಕಲ್ಪನೆಗಳಿಗನುಸಾರವಾಗಿ ಕಾರ್ಯನಡಿಸದಿರುವುದೇ ಸಮಸ್ಯೆಯಾಗಿದೆ. ಕಿಡ್ಸ್ಪೋರ್ಟ್ಸ್ ಎಂಬ ಪುಸ್ತಕವು ಹೇಳುವುದು: “ಕೆಲವು ವಿದ್ಯಮಾನಗಳಲ್ಲಿ ಸುಲಭವಾಗಿ ಪರಿಣಾಮಕ್ಕೊಳಗಾಗುವ ಯುವಜನರು ಶಪಿಸಲು, ವಂಚಿಸಲು, ಜಗಳವಾಡಲು, ಹೆದರಿಸಲು ಮತ್ತು ಇತರರಿಗೆ ನೋವನ್ನುಂಟುಮಾಡಲು ಕಲಿಯುತ್ತಾರೆ.”
ಏನೇ ಆಗಲಿ ಗೆಲ್ಲಬೇಕೊ?
ಸೆವೆನ್ಟೀನ್ ಪತ್ರಿಕೆಯಲ್ಲಿ ಒಂದು ಲೇಖನವು ಒಪ್ಪಿಕೊಂಡದ್ದು: “ಜನರು ಗೆಲ್ಲುವುದರ ಮೇಲೆ ಭಯಂಕರ ಮೌಲ್ಯವನ್ನು ಹಾಕುವ ದೋಷಯುಕ್ತವಾದ ಕೆಡುಕುಗಳಿವೆ.” ಇದು ಬೈಬಲಿನ ಮಾತುಗಳಿಗೆ ನೇರವಾಗಿ ವ್ಯತಿರಿಕ್ತವಾಗಿದೆ: “ನಾವು ಪರಸ್ಪರ ಸ್ವರ್ಧೆಯನ್ನು ಕೆರಳಿಸುವವರಾಗಿ, ಪರಸ್ಪರ ಅಸೂಯೆಪಡುವವರಾಗಿ, ಆತ್ಮ ದುರಭಿಮಾನಿಗಳಾಗದೆ ಇರೋಣ.” (ಗಲಾತ್ಯ 5:26, NW) ಮಿತ್ರಭಾವದ ಸ್ಪರ್ಧೆಯ ಒಂದು ಮೃದು ಮಿಶ್ರಣವು ಒಂದು ಆಟಕ್ಕೆ ಆಸಕ್ತಿ ಮತ್ತು ಆಹ್ಲಾದವನ್ನು ಕೂಡಿಸಬಲ್ಲದಾದರೂ ವಿಪರೀತವಾದ ಸ್ಪರ್ಧಾತ್ಮಕ ಆತ್ಮವು ವೈರತ್ವವನ್ನು ಹುಟ್ಟಿಸಿ, ಆಟವಾಡುವುದರಿಂದ ವಿನೋದವನ್ನು ಅಪಹರಿಸಬಹುದು.
ಮಾಜಿ ಹೈಸ್ಕೂಲ್ ಫುಟ್ಬಾಲ್ ಆಟಗಾರನಾದ ಜಾನ್ ಜ್ಞಾಪಿಸಿಕೊಳ್ಳುವುದು: “ಪಕ್ಕಾ ಉನ್ಮತ್ತನಾದ ಈ ಕೋಚ್ ನಮಗಿದ್ದ; ಅವನು ಸದಾ ನಮ್ಮ ಕಡೆ ಕಿರಿಚಾಡಿ ಚೀರಾಡುವವನಾಗಿದ್ದ. . . . ನಾನು ಪ್ರ್ಯಾಕ್ಟಿಸಿಗೆ ಹೋಗಲು ಭಯಪಡುತ್ತಿದ್ದೆ. . . . ನಾನೊಂದು ಕೂಟಶಿಬಿರದಲ್ಲಿದ್ದೇನೆಂಬ ಅನಿಸಿಕೆ ನನಗಾಯಿತು.” ಎಲ್ಲ ಕೋಚ್ಗಳು ದೂಷಿಸುವವರಾಗಿರದಿದ್ದರೂ, ಅನೇಕರು ಗೆಲ್ಲುವುದರ ಮೇಲೆ ವಿಪರೀತವಾದ ಒತ್ತನ್ನು ಹಾಕುತ್ತಾರೆ. ಒಬ್ಬ ಲೇಖಕನು ತೀರ್ಮಾನಿಸಿದ್ದು: “ಅನೇಕ ಕ್ರೀಡಾಪಟುಗಳು, . . . ಸ್ಪರ್ಧಿಸುವ ಆನಂದವು, ಜಯಗಳಿಸುವ ತಡೆಯಲಸಾಧ್ಯವಾದ ಹೊರೆಗೆ ದಾರಿಮಾಡಿಕೊಡುವ ಬಿಂದುವನ್ನು ತಲಪುತ್ತಾರೆ.” ಪರಿಣಾಮವೇನಾಗಬಲ್ಲದು?
ಕಾಲೇಜಿನ ಫುಟ್ಬಾಲ್ ಮತ್ತು ಬಾಸ್ಕೆಟ್ಬಾಲ್ ಆಟಗಾರರ ನಡುವೆ, “12 ಪ್ರತಿಶತ, ಮನೋವೈಜ್ಞಾನಿಕ ಸಂಕಟ, ಶಾರೀರಿಕ ಸಂಕಟ, ಅಮಲೌಷಧ ಅಥವಾ ಮದ್ಯದಿಂದ ದೂರವಿರುವುದು ಕಷ್ಟ, ಮಾನಸಿಕ ಹಾಗೂ ಶಾರೀರಿಕ ಅಪಪ್ರಯೋಗ, ಮತ್ತು ನ್ಯೂನವಾದ ಶೈಕ್ಷಣಿಕ ನಿರ್ವಹಣೆ ಎಂಬ ಐದು ಕ್ಷೇತ್ರಗಳಲ್ಲಿ ಕಡಮೆ ಪಕ್ಷ ಎರಡರಲ್ಲಿಯಾದರೂ ಸಮಸ್ಯೆಗಳನ್ನು ವರದಿಸಿದರು” ಎಂಬುದನ್ನು ಸೈಎನ್ಸ್ ನ್ಯೂಸ್ ಸಮೀಕ್ಷೆಯೊಂದರಲ್ಲಿ ಪ್ರಕಟಪಡಿಸಿತು. ಅದೇ ಸರಣಿಯಲ್ಲಿ, ಆನ್ ದ ಮಾರ್ಕ್ ಎಂಬ ಪುಸ್ತಕವು ವರದಿಸುವುದು: “ಸಂಘಟಿತ ಕ್ರೀಡೆಗಳಿಗೆ ಸಂಬಂಧಪಟ್ಟ ಹೆಚ್ಚುಕಡಮೆ ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಪ್ರತಿಯೊಂದು ಮಟ್ಟದಲ್ಲಿಯೂ ಅಮಲೌಷಧ ದುರುಪಯೋಗದ ದೊಡ್ಡ ಸಮಸ್ಯೆಯಿದೆಯೆಂದು ಒಪ್ಪುತ್ತಾರೆ.”
ನೈತಿಕ ಸಂಧಾನಗಳು
ಗೆಲ್ಲಲಿಕ್ಕಿರುವ ಒತ್ತಡವು ಸಹ ಒಬ್ಬ ಯುವ ಆಟಗಾರನು ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕತೆಗಿರುವ ನ್ಯಾಯಸಮ್ಮತವಾದ ಮಟ್ಟಗಳಲ್ಲಿ ಸಂಧಾನ ಮಾಡಿಕೊಳ್ಳುವಂತೆ ಮಾಡಬಲ್ಲದು. ಯುವರ್ ಚೈಲ್ಡ್ ಇನ್ ಸ್ಪೋರ್ಟ್ಸ್ ಗಮನಿಸುವುದು: “ಕ್ರೀಡೆಯ ಆಧುನಿಕ ಜಗತ್ತಿನಲ್ಲಿ, ಗೆಲ್ಲುವುದು ಕೇವಲ ಉತ್ತಮವಲ್ಲ; ಅದೊಂದೇ ಸ್ವೀಕಾರಾರ್ಹವಾದ ಸಂಗತಿ. ಸೋಲುವುದು ಕೆಟ್ಟದಷ್ಟೇ ಅಲ್ಲ, ಅದು ಅಕ್ಷಮ್ಯವೂ ಆಗಿದೆ.”
ಇನ್ನೊಂದು ಕಠಿನ ಸತ್ಯ: ಕೋಚ್ಗಳು ಅನೇಕ ವೇಳೆ ಆಟಗಾರರನ್ನು ಅವರು ತಮ್ಮ ವಿರೋಧಿಗಳಿಗೆ ಹಾನಿ ಮಾಡುವಂತೆ ಭಯಂಕರವಾದ ಒತ್ತಡಕ್ಕೆ ಒಳಪಡಿಸುತ್ತಾರೆ. ಸೈಖಾಲಜಿ ಟುಡೇಯಲ್ಲಿನ ಒಂದು ಲೇಖನವು ಹೇಳಿದ್ದು: “ಕ್ರೀಡೆಗಳಲ್ಲಿ ಉತ್ತಮರಾಗಿರಲು ನೀವು ಕೆಟ್ಟವರಾಗಿರಲೇ ಬೇಕು. ಅಥವಾ ಅನೇಕ ಕ್ರೀಡಾಪಟುಗಳು, ಕೋಚ್ಗಳು ಮತ್ತು ಕ್ರೀಡಾಸಕ್ತರು ಅದನ್ನೇ ನಂಬುತ್ತಾರೆ.” ಒಬ್ಬ ವೃತ್ತಿಪರ ಫುಟ್ಬಾಲ್ ಆಟಗಾರನು ತನ್ನ ಪ್ರತಿದಿನದ ಸ್ವಭಾವವನ್ನು, “ಮೃದುಭಾಷಿ, ವಿಚಾರಪರ ಮತ್ತು ಸ್ನೇಹಪರ”ವಾಗಿರುವುದೆಂದು ಹೇಳುತ್ತಾನೆ. ಆದರೆ ಆಟದ ಬಯಲಲ್ಲಿ ಅವನು ದ್ವಂದ್ವಸ್ವರೂಪದ ರೂಪಾಂತರವನ್ನು ಹೊಂದುತ್ತಾನೆ. ತನ್ನ ಬಯಲಿನ ವ್ಯಕ್ತಿತ್ವವನ್ನು ವರ್ಣಿಸುತ್ತ ಅವನು ಹೇಳುವುದು: “ಆಗ ನಾನು ತುಚ್ಛ ಮತ್ತು ದುಸ್ಸ್ವಭಾವಿ. . . . ಎಷ್ಟೋ ನೀಚ. ನಾನು ಹೊಡೆಯಲು ಹೋಗುತ್ತಿರುವ ವ್ಯಕ್ತಿಯ ಕಡೆಗೆ ನನಗೆ ಪೂರ್ತಿ ಅಗೌರವವಿದೆ.” ಕೋಚ್ಗಳು ಅನೇಕ ವೇಳೆ ಅಂತಹ ಒಂದು ಮನೋವೃತ್ತಿಯನ್ನು ಪ್ರೋತ್ಸಾಹಿಸುತ್ತಾರೆ.
ಬೈಬಲು ಕ್ರೈಸ್ತರನ್ನು ಪ್ರೋತ್ಸಾಹಿಸುವುದು: “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.” (ಕೊಲೊಸ್ಸೆ 3:12) ನೀವು ಪ್ರತಿದಿನ ನಿಮ್ಮ ಎದುರಾಳಿಗಳನ್ನು ನೋಯಿಸಿರಿ, ಜಜ್ಜಿರಿ ಮತ್ತು ಶಕ್ತಿಗುಂದಿಸಿರಿ ಎಂದು ಪ್ರೋತ್ಸಾಹಿಸುವ ಉತ್ತೇಜಕ ಭಾಷಣಗಳನ್ನು ಪಡೆಯುವುದಾದರೆ ನೀವು ಅಂತಹ ಗುಣಗಳನ್ನು ಬೆಳೆಸಿಕೊಳ್ಳಬಲ್ಲಿರೊ? ಹದಿನಾರು ವರ್ಷ ಪ್ರಾಯದ ರಾಬರ್ಟ್ ಒಪ್ಪಿಕೊಳ್ಳುವುದು: “ನಾನು ಸಂಘಟಿತ ಕ್ರೀಡೆಗಳನ್ನಾಡಿದ್ದೇನೆ. ನೀವು ಗೆಲ್ಲುವಲ್ಲಿ, ಯಾರಿಗೆ ನೋವನ್ನುಂಟುಮಾಡುತ್ತೀರಿ ಎಂಬುದರ ಕುರಿತಾಗಿ ನೀವು ಚಿಂತಿಸುವುದಿಲ್ಲ.” ಈಗ ಅವನು ಸ್ನಾತ ಕ್ರೈಸ್ತನಾಗಿರುವುದರಿಂದ, ಅವನ ವೀಕ್ಷಣಗಳು ಪರಿವರ್ತನೆ ಹೊಂದಿವೆ. “ನಾನು ಅದಕ್ಕೆ ಎಂದಿಗೂ ಹಿಂದಿರುಗಿ ಹೋಗುವುದಿಲ್ಲ,” ಎನ್ನುತ್ತಾನೆ ಅವನು.
ಶಾರೀರಿಕ ತರಬೇತೊ ಶಾರೀರಿಕ ಹಾನಿಯೊ?
ಶಾರೀರಿಕ ಅಪಾಯಗಳೂ ಅಲಕ್ಷಿಸಲ್ಪಡಬಾರದಾದ ವಿಷಯಗಳಾಗಿವೆ. ಕ್ರೀಡೆಗಳು ಮಿತ್ರರೊಂದಿಗೆ ಕಟ್ಟುನಿಟ್ಟಾಗಿ ವಿನೋದಕ್ಕಾಗಿ ಆಡಲ್ಪಡುವುದಾದರೂ, ಅವುಗಳು ಅಪಾಯಗಳನ್ನು ಒಳಗೊಂಡಿವೆ ಎಂಬುದು ನಿಜ. ಆದರೆ ಯುವಜನರು ಸುಮಾರು ವೃತ್ತಿಪರ ಮಟ್ಟಗಳಲ್ಲಿ ಆಡಪ್ರಯತ್ನಿಸಲು ತರಬೇತುಗೊಳಿಸಲ್ಪಡುವಾಗ, ಅಪಾಯಗಳು ಬಹಳವಾಗಿ ವೃದ್ಧಿಯಾಗುತ್ತವೆ.
ಯುವರ್ ಚೈಲ್ಡ್ ಇನ್ ಸ್ಪೋರ್ಟ್ಸ್ ಎಂಬ ಪುಸ್ತಕವು ಗಮನಿಸುವುದು: “ವೃತ್ತಿಪರ ಆಟಗಾರರಿಗೆ ಪೆಟ್ಟು ತಗಲಸಾಧ್ಯವಿದೆ. ಆದರೆ ಅವರು ಅಪಾಯಸಂಭವಕ್ಕೆ ತಮ್ಮನ್ನು ಈಡುಮಾಡಿಕೊಂಡು ಅದಕ್ಕಾಗಿ ಉತ್ತಮ ವೇತನವನ್ನು ಪಡೆಯುವ ತುಂಬ ಕೌಶಲವಿರುವ, ಶಾರೀರಿಕವಾಗಿ ಅರ್ಹರಾಗಿರುವ ಪಕ್ವತೆಯ ಪ್ರಾಪ್ತವಯಸ್ಕರಾಗಿದ್ದಾರೆ. ಇದಲ್ಲದೆ, ಅವರಿಗೆ ಸಾಮಾನ್ಯವಾಗಿ ಅತ್ಯುತ್ತಮವಾದ, ಅತ್ಯಂತ ಪರಿಣತ ರೀತಿಯ ತರಬೇತು, ಅತ್ಯುತ್ತಮ ಸಲಕರಣೆ, ಮತ್ತು ತೀರ ನಿಕಟವಾದ, ಮೇಲ್ಮಟ್ಟದ ವೈದ್ಯಕೀಯ ಆರೈಕೆಯು ದೊರೆಯುತ್ತದೆ. . . . ಶಾಲಾಮಕ್ಕಳಿಗೆ ಇಂತಹ ಸೌಕರ್ಯಗಳಿಲ್ಲ.” ಕ್ರೈಸ್ತರಿಗೆ ಅವರು, ‘ತಮ್ಮ ದೇಹಗಳನ್ನು ತ್ಯಾಗ ಜೀವನವಾಗಿ, ಪವಿತ್ರವಾಗಿ, ದೇವರಿಗೆ ಸ್ವೀಕಾರಯೋಗ್ಯವಾಗಿ ಅರ್ಪಿಸಬೇಕು,’ ಎಂದು ಹೇಳಲಾಗಿದೆ. (ರೋಮಾಪುರ 12:1, NW) ನಿಮ್ಮ ದೇಹವನ್ನು ಅನಾವಶ್ಯಕವಾದ ಅಥವಾ ಅಸಮಂಜಸವಾದ ಅಪಾಯಕ್ಕೊಡ್ಡುವ ವಿಷಯವನ್ನು ನೀವು ಜಾಗ್ರತೆಯಿಂದ ಪರಿಗಣಿಸಬಾರದೊ?
ಪರಿಗಣಿಸಲಿಕ್ಕಿರುವ ಇತರ ವಿಷಯಗಳು
ಆರೋಗ್ಯಾಪಾಯಗಳು ಕನಿಷ್ಠವಾಗಿರುವಂತೆ ಕಾಣುವಾಗಲೂ, ಸಂಘಟಿತ ಕ್ರೀಡೆಗಳು ಇನ್ನೂ ಕಾಲವನ್ನು ಕಬಳಿಸುವುವಗಳಾಗಿವೆ. ಅಭ್ಯಾಸ ಕಾಲಾವಧಿಗಳು ನಿಮ್ಮ ಸಾಮಾಜಿಕ ಜೀವನವನ್ನು ತುಂಡರಿಸಬಹುದು ಮಾತ್ರವಲ್ಲ, ಅಧ್ಯಯನಕ್ಕೆ ಮತ್ತು ಮನೆಗೆಲಸಕ್ಕೆ ಬದಿಗಿಡಬೇಕಾದ ಸಮಯದಿಂದಲೂ ಒಂದು ದೊಡ್ಡ ತುತ್ತನ್ನು ಕಚ್ಚಿ ತೆಗೆಯಬಹುದು. ಪಾಠಕ್ರಮದಿಂದ ಹೊರತಾದ ಚಟುವಟಿಕೆಗಳಲ್ಲಿ ಭಾಗವಹಿಸಿದ ಇತರ ವಿದ್ಯಾರ್ಥಿಗಳಿಗಿಂತ ಕಾಲೇಜಿನ ಕ್ರೀಡಾಪಟುಗಳು “ತುಸು ಕನಿಷ್ಠ ದರ್ಜೆಗಳನ್ನು” ಪಡೆಯುವ ಪ್ರವೃತ್ತಿಯುಳ್ಳವರಾದರೆಂದು ಸೈಎನ್ಸ್ ನ್ಯೂಸ್ ವರದಿಸಿತು. ಹೆಚ್ಚು ಪ್ರಾಮುಖ್ಯವಾಗಿ, ಒಂದು ತಂಡದಲ್ಲಿ ಆಟವಾಡುತ್ತಿರುವುದು, ಬೈಬಲು ಯಾವುದನ್ನು “ಹೆಚ್ಚು ಪ್ರಮುಖವಾದ ವಿಷಯಗಳು”—ಆತ್ಮಿಕಾಭಿರುಚಿಗಳು—ಎಂದು ಕರೆಯುತ್ತದೊ ಅದನ್ನು ಬೆನ್ನಟ್ಟುವುದನ್ನು ಕಷ್ಟಕರವನ್ನಾಗಿ ಮಾಡುತ್ತದೆ. (ಫಿಲಿಪ್ಪಿ 1:10, NW) ನಿಮ್ಮನ್ನು ಹೀಗೆ ಕೇಳಿಕೊಳ್ಳಿರಿ, ‘ತಂಡದಲ್ಲಿ ಸೇರುವಿಕೆಯು ನಾನು ಕ್ರೈಸ್ತ ಕೂಟಗಳಿಗೆ ತಪ್ಪುವಂತೆ ಅವಶ್ಯಪಡಿಸೀತೊ, ಅಥವಾ ಅದು ಸಾರುವ ಕೆಲಸದಲ್ಲಿ ನನಗಿರುವ ಭಾಗವನ್ನು ಸೀಮಿತಗೊಳಿಸೀತೊ?’
ನೀತಿಶಿಕ್ಷೆಗಳ, ನಿರ್ಮಲವಾದ ಮಾತಿನ ಅಥವಾ ಸ್ಪರ್ಧೆಯ ವಿಷಯದಲ್ಲಿ ನಿಮ್ಮ ವೀಕ್ಷಣಗಳಲ್ಲಿ ಭಾಗಿಗಳಾಗದ ಯುವ ಜನರೊಂದಿಗೆ ಮತ್ತು ಪ್ರಾಪ್ತ ವಯಸ್ಕರೊಂದಿಗೆ ದೀರ್ಘ ತಾಸುಗಳನ್ನು ಕಳೆಯುವುದರ ಸಂಭವನೀಯ ಫಲಿತಾಂಶಗಳನ್ನು ಸಹ ಜಾಗ್ರತೆಯಿಂದ ತೂಗಿ ನೋಡಿರಿ. ಅಂತೂ, “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ” ಎಂದು ಬೈಬಲು ನಿಶ್ಚಯವಾಗಿ ಹೇಳುತ್ತದೆ. (1 ಕೊರಿಂಥ 15:33) ಉದಾಹರಣೆಗೆ, ದ ನ್ಯೂ ಯಾರ್ಕ್ ಟೈಮ್ಸ್ನ ವಿಶೇಷ ಪುಟದಲ್ಲಿ ಬಂದ ಒಂದು ಲೇಖನವನ್ನು ಪರಿಗಣಿಸಿರಿ: “ಬಟ್ಟೆ ಬದಲಾಯಿಸುವ ಕೋಣೆಯು . . . ಪುರುಷರು ಸ್ತ್ರೀಯರ ದೇಹವನ್ನು ಲೈಂಗಿಕ ಪರಿಭಾಷೆಯಲ್ಲಿ ವರ್ಣಿಸುವ, ‘ಜಯ ಗಳಿಸಿದ್ದರ’ ವಿಷಯವಾಗಿ ಕೊಚ್ಚಿಕೊಳ್ಳುವ ಮತ್ತು ಸ್ತ್ರೀಯರನ್ನು ಹೊಡೆಯುವ ವಿಷಯದಲ್ಲಿ ಗೇಲಿಮಾಡುವ ಒಂದು ಸ್ಥಳವಾಗಿದೆ.” ಅಂತಹ ಒಂದು ಪರಿಸರದಲ್ಲಿರಲು ನೀವು ಆಯ್ದುಕೊಳ್ಳುವುದಾದರೆ ಆತ್ಮಿಕವಾಗಿ ನೀವು ಹೇಗಿರುವಿರಿ?—ಹೋಲಿಸಿ ಯಾಕೋಬ 3:18.
ವಿವೇಕವುಳ್ಳ ನಿರ್ಣಯವನ್ನು ಮಾಡುವುದು
ಒಂದು ಕ್ರೀಡಾ ತಂಡವನ್ನು ಸೇರಿಕೊಳ್ಳಲು ನೀವು ಯೋಚಿಸುತ್ತಿದ್ದಿರೊ? ಹಾಗಿದ್ದರೆ ಪ್ರಾಯಶಃ ಈ ಮೇಲೆ ಹೇಳಿದ ವಿಷಯಗಳು ಹಾಗೆ ಸೇರುವುದರ ವೆಚ್ಚವನ್ನು ಲೆಕ್ಕಿಸುವಂತೆ ನಿಮಗೆ ಸಹಾಯ ಮಾಡುವುವು. ನಿಮ್ಮ ನಿರ್ಣಯವನ್ನು ಮಾಡುವಾಗ, ಇತರರ ಮನಸ್ಸಾಕ್ಷಿಗಳನ್ನು ಎಣಿಕೆಗೆ ತೆಗೆದುಕೊಳ್ಳಿರಿ. (1 ಕೊರಿಂಥ 10:24, 29, 32) ಲೋಕಾದ್ಯಂತ ಪರಿಸ್ಥಿತಿಗಳು ಭಿನ್ನವಾಗಿರುವುದರಿಂದ ಯಾವುದೇ ಕಟ್ಟುನಿಟ್ಟಿನ ನಿಯಮಗಳನ್ನು ಮಾಡಸಾಧ್ಯವಿಲ್ಲವೆಂಬುದು ನಿಶ್ಚಯ. ಕೆಲವು ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಲೇಬೇಕಾಗಿ ಬಂದೀತು. ಆದರೆ ನಿಮಗೆ ಸಂಶಯವಿರುವುದಾದರೆ, ನಿಮ್ಮ ಹೆತ್ತವರೊಂದಿಗೆ ಇಲ್ಲವೆ ಒಬ್ಬ ಪಕ್ವತೆಯ ಕ್ರೈಸ್ತನೊಂದಿಗೆ ಮಾತುಕತೆ ನಡೆಸಿರಿ.
ಅನೇಕ ಕ್ರೈಸ್ತ ಯುವ ಜನರು ತಂಡ ಕ್ರೀಡೆಗಳನ್ನು ಆಡುವುದಿಲ್ಲವೆಂಬ ಕಠಿನವಾದ ನಿರ್ಣಯವನ್ನು ಮಾಡಿದ್ದಾರೆ. ನೀವು ಕ್ರೀಡಾಪಟುಗಳೂ ಕ್ರೀಡೆಗಳಲ್ಲಿ ನಿಜವಾಗಿಯೂ ಆನಂದಿಸುವವರೂ ಆಗಿದ್ದರೆ ಇದು ಸುಲಭವಾಗಿರುವುದಿಲ್ಲ! ಅಧ್ಯಾಪಕರು, ಕೋಚ್ಗಳು ಮತ್ತು ಹೆತ್ತವರಿಂದ ಬರುವ ಒತ್ತಡವು ಹತಾಶೆಗೆ ಕೂಡಿಸಸಾಧ್ಯವಿದೆ. ಯುವ ಜಿಮಿ ಒಪ್ಪಿಕೊಳ್ಳುವುದು: “ಆಡದಿರುವುದು ನನ್ನೊಳಗೆ ಹೋರಾಟವನ್ನುಂಟುಮಾಡುತ್ತದೆಂದು ನಾನು ಕಂಡುಕೊಳ್ಳುತ್ತೇನೆ. ನನ್ನ ಅವಿಶ್ವಾಸಿಯಾದ ತಂದೆ ತಮ್ಮ ಹೈಸ್ಕೂಲ್ ದಿನಗಳಲ್ಲಿ ಒಬ್ಬ ಮಹಾ ಕ್ರೀಡಾಪಟುವಾಗಿದ್ದರು. ಒಂದು ತಂಡಕ್ಕೆ ಸೇರದಿರುವ ವಿಷಯವು ಕೆಲವು ಬಾರಿ ನನಗೆ ಕಠಿನವೆನಿಸುತ್ತದೆ.” ಹಾಗಿದ್ದರೂ, ವಿಶ್ವಾಸಿಗಳಾದ ಹೆತ್ತವರಿಂದ ಮತ್ತು ಸಭೆಯಲ್ಲಿರುವ ಪಕ್ವತೆಯ ಕ್ರೈಸ್ತರಿಂದ ಬರುವ ಬೆಂಬಲವು ನೀವು ನಿಮ್ಮ ನಿರ್ಧಾರಕ್ಕೆ ಅಂಟಿಕೊಳ್ಳುವಂತೆ ಸಹಾಯಮಾಡುವುದರಲ್ಲಿ ಬಹಳಷ್ಟನ್ನು ಮಾಡಬಲ್ಲದು. ಜಿಮಿ ಹೇಳುವುದು: “ನಾನು ನನ್ನ ಅಮ್ಮನಿಗೆ ಕೃತಜ್ಞನು. ಕೆಲವು ವೇಳೆ ಕ್ರೀಡೆಯನ್ನಾಡುವ ಒತ್ತಡದಿಂದ ನಾನು ಖಿನ್ನನಾಗುತ್ತೇನೆ. ಆದರೆ ಜೀವಿತದಲ್ಲಿನ ನನ್ನ ನಿಜ ಗುರಿಗಳನ್ನು ನನಗೆ ಜ್ಞಾಪಿಸಿಕೊಡಲು ಅವರು ಸದಾ ಹತ್ತಿರವಿದ್ದಾರೆ.”
ತಂಡ ಕ್ರೀಡೆಗಳು ಆಟಗಾರರಿಗೆ ಸಹಕಾರ ಮತ್ತು ಸಮಸ್ಯೆ ಪರಿಹಾರದ ಕುರಿತು ಕಲಿಸಬಹುದು. ಆದರೆ ಇಂತಹ ವಿಷಯಗಳನ್ನು ಕ್ರೈಸ್ತ ಸಭೆಯಲ್ಲಿ ಕೆಲಸ ಮಾಡುವ ಮೂಲಕ ಕಲಿಯಲು ಹೇರಳವಾದ ಸಂದರ್ಭವಿದೆ. (ಹೋಲಿಸಿ ಎಫೆಸ 4:16.) ತಂಡ ಕ್ರೀಡೆಗಳು ವಿನೋದವಾಗಿರಲೂಬಹುದು, ಆದರೆ ಅವುಗಳನ್ನು ಅನುಭೋಗಿಸಲು ನೀವು ಒಂದು ತಂಡದಲ್ಲಿರಬೇಕೆಂದಿಲ್ಲ. ಕೆಲವು ಕ್ರೀಡೆಗಳನ್ನು ಹಿತ್ತಿಲಲ್ಲಿ ಅಥವಾ ಸ್ಥಳಿಕ ವಿಹಾರವನದಲ್ಲಿ ಕ್ರೈಸ್ತ ಸ್ನೇಹಿತರೊಂದಿಗೆ ಆನಂದಿಸಸಾಧ್ಯವಿದೆ. ಕುಟುಂಬ ಕ್ರೀಡಾವಿಹಾರವು ಹಿತಕರವಾದ ಆಟಕ್ಕೆ ಇನ್ನೂ ಹೆಚ್ಚಿನ ಸಂದರ್ಭಗಳನ್ನು ಒದಗಿಸೀತು. “ನಿಮ್ಮ ಸಭೆಯ ಇತರರೊಂದಿಗೆ ಆಡುವುದು ಎಷ್ಟೋ ಉತ್ತಮ” ಎಂದು 16 ವರ್ಷ ಪ್ರಾಯದ ಗ್ರೆಗ್ ಹೇಳುತ್ತಾನೆ. “ಅದು ಕೇವಲ ವಿನೋದಕ್ಕಾಗಿ ಮತ್ತು ನೀವು ನಿಮ್ಮ ಸ್ನೇಹಿತರೊಂದಿಗಿದ್ದೀರಿ!”
ವಿಜಯ ಗಳಿಸುವ ತಂಡದಲ್ಲಿರುವಂತಹದ್ದೇ ಪುಳಕವನ್ನು ಹಿತ್ತಿಲಿನ ಆಟವು ಪ್ರಾಯಶಃ ಎಂದಿಗೂ ಕೊಡಲಿಕ್ಕಿಲ್ಲವೆಂಬುದು ನಿಜ. ಆದರೆ ಹೆಚ್ಚೆಂದರೆ, “ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ, ಭಕ್ತಿ [“ದಿವ್ಯ ಭಕ್ತಿ,” NW]ಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು,” ಎಂಬುದನ್ನು ಎಂದಿಗೂ ಮರೆಯದಿರಿ. (1 ತಿಮೊಥೆಯ 4:8) ದಿವ್ಯ ಭಕ್ತಿಯನ್ನು ಬೆಳೆಸಿಕೊಳ್ಳಿರಿ ಮತ್ತು ನೀವು ದೇವರ ದೃಷ್ಟಿಯಲ್ಲಿ ನಿಜವಾಗಿಯೂ ಒಬ್ಬ ವಿಜಯಿಯಾಗಿರುವಿರಿ!
[ಪಾದಟಿಪ್ಪಣಿ]
a ಮಾರ್ಚ್ 8, 1996ರ ಸಂಚಿಕೆಯಲ್ಲಿ ಕಂಡುಬರುವ, “ಯುವ ಜನರು ಪ್ರಶ್ನಿಸುವುದು . . . ತಂಡ ಕ್ರೀಡೆಗಳು—ಅವು ನನಗೆ ಉಚಿತವಾಗಿವೆಯೊ?” ಎಂಬ ಲೇಖನವನ್ನು ನೋಡಿರಿ.
[ಪುಟ 34 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಪಕ್ಕಾ ಉನ್ಮತ್ತನಾಗಿದ್ದ ಈ ಕೋಚ್ ನಮಗಿದ್ದ; ಅವನು ಸದಾ ನಮ್ಮ ಕಡೆ ಕಿರಿಚಾಡಿ, ಚೀರಾಡುವವನಾಗಿದ್ದ . . . ನಾನು ಪ್ರ್ಯಾಕ್ಟಿಸಿಗೆ ಹೋಗಲು ಭಯಪಡುತ್ತಿದ್ದೆ”
[ಪುಟ 35 ರಲ್ಲಿರುವ ಚಿತ್ರ]
ಅನೇಕ ವೇಳೆ ಕೋಚ್ಗಳು ಗೆಲ್ಲುವುದಕ್ಕೆ—ಅದು ಇತರರಿಗೆ ನೋವನ್ನುಂಟುಮಾಡುವ ಅರ್ಥದಲ್ಲಿದ್ದರೂ—ಮಹತ್ವವನ್ನು ಕೊಡುತ್ತಾರೆ