ಒಂದು ನಾಗರಹಾವನ್ನು ಸಂಧಿಸಲು ನೀವು ಇಷ್ಟಪಡುವಿರೊ?
ಭಾರತದ ಎಚ್ಚರ! ಸುದ್ದಿಗಾರರಿಂದ
ಒಳ್ಳೇದು, ನೀವು ಇಷ್ಟಪಡುವಿರೊ? ಅಧಿಕಾಂಶ ವಯಸ್ಕರು ಇಲ್ಲ ಎಂದು ಉತ್ತರಿಸಬಹುದು. ಆದರೆ ಒಂದು ಮಗು ಹಾಗೆ ಹೇಳದು. ನಾಗರಹಾವನ್ನು ಒಳಗೊಂಡು, ಹಾವುಗಳ ಭಯವು ಎಳೆಯ ಮಕ್ಕಳಲ್ಲಿ ಅಥವಾ ಪ್ರಾಣಿಗಳಲ್ಲಿಯೂ ಸಹ ಒಂದು ಸಹಜ ಪ್ರವೃತ್ತಿಯ ಗುಣಲಕ್ಷಣವಾಗಿಲ್ಲ. ವಿಶ್ವಾಸಾರ್ಹವಲ್ಲದ ಸಮಾಚಾರದಿಂದ, ಅತಿಶಯಮಾಡಲ್ಪಟ್ಟ ಕಥೆಗಳು, ಪುರಾಣ ಕಥೆಗಳು, ಮತ್ತು ತಪ್ಪು ತಿಳಿವಳಿಕೆಗಳಿಂದ, ಹಾವುಗಳ ಕಡೆಗೆ ಹೇವರಿಕೆಯು ಉಂಟಾಗಸಾಧ್ಯವಿದೆ.
ಒಂದು ನಾಗರಹಾವನ್ನು ಸಂಧಿಸುವಂತೆ ನಿಮ್ಮನ್ನು ನಾವು ಆಮಂತ್ರಿಸುವಾಗ, ಸುರಕ್ಷಿತವಾದ ಒಂದು ಅಂತರದಿಂದ ಸಂಧಿಸುವುದನ್ನು ನಾವು ಅರ್ಥೈಸುತ್ತೇವೆಂಬುದು ನಿಶ್ಚಯ! ನಾಗರಹಾವುಗಳು ಬಹಳ ವಿಷಪೂರಿತವಾಗಿವೆ, ಮತ್ತು ಅವುಗಳಲ್ಲಿ ಒಂದರ ಬಳಿಗೆ ಹೋಗಿ, ಅದನ್ನು ನೇವರಿಸಲಿಕ್ಕಾಗಿ ನಮ್ಮ ಕೈಯನ್ನು ಹಾಕಲು ನಾವು ಬಯಸುವುದಿಲ್ಲ. ಇಲ್ಲವೆ ನಾಗರಹಾವು ನಮ್ಮನ್ನು ಅಭಿವಂದಿಸಲಿಕ್ಕಾಗಿ ಕಾಯುವ ಸಂಭವನೀಯತೆಯೂ ಇರುವುದಿಲ್ಲ; ನಮ್ಮ ಸಮೀಪಿಸುವಿಕೆಯನ್ನು ಕೇಳಿದ ಕೂಡಲೆ, ಸುರಕ್ಷಿತವಾದ ಅಡಗುವ ಸ್ಥಳಕ್ಕೆ ತ್ವರಿತವಾಗಿ ಅದು ಹರಿದುಹೋಗುತ್ತದೆ. ಆದುದರಿಂದ ಈ ಆಸಕ್ತಿಭರಿತವಾದ ಜೀವಿಯ ಕುರಿತಾದ ಕೆಲವು ಆಕರ್ಷಕ ವಾಸ್ತವಾಂಶಗಳನ್ನು ಕಲಿಯುವ ಮೂಲಕ ಮಾತ್ರ ನಾವು ನಾಗರಹಾವನ್ನು ಸಂಧಿಸುವುದರಲ್ಲಿ ಸಂತೃಪ್ತರಾಗಿರೋಣ.
ನಾಗರಹಾವುಗಳು ಸರ್ಪೆಂಟೀಸ್ ಉಪವರ್ಗದ ಮತ್ತು ಯಾವ ಹೆಸರು ಟೊಳ್ಳಾದ ಹಲ್ಲುಗಳಿರುವ ವಿಷದ ಹಾವುಗಳಿಗೆ ಕೊಡಲ್ಪಟ್ಟಿದೆಯೊ ಆ ಎಲಪಿಡೇ ಕುಟುಂಬಕ್ಕೆ ಸೇರಿದ ಉರಗಗಳಾಗಿವೆ. ನಾಗರಹಾವುಗಳ 12 ಜಾತಿಗಳು ಆಸ್ಟ್ರೇಲಿಯದಿಂದ ಏಷಿಯ ಮತ್ತು ಆಫ್ರಿಕದ ಉಷ್ಣವಲಯಗಳಿಂದ ಹಿಡಿದು ಅರೇಬಿಯ ಮತ್ತು ಸಮಶೀತೋಷ್ಣವಲಯದ ತನಕ ಹರಡಿವೆ. ನಾಗರಹಾವುಗಳಲ್ಲಿ ಅತ್ಯಂತ ಭಯೋತ್ಪಾದಕವಾದದ್ದು ಕಾಳಿಂಗ ನಾಗರ ಅಥವಾ ಹ್ಯಾಮಡ್ರೈಆ್ಯಡ್. ಮೂರರಿಂದ ಐದು ಮೀಟರ್ಗಳಷ್ಟು ಉದ್ದವಿರುವ ಇದು, ಜಗತ್ತಿನಲ್ಲಿ ಅತ್ಯಂತ ದೊಡ್ಡ ವಿಷಭರಿತ ಹಾವಾಗಿದೆ. ಕಾಡಿನ ದಟ್ಟವಾದ ಕುರುಚಲು ಅಥವಾ ವಿಪುಲವಾಗಿ ಮಳೆಬೀಳುವ ಜೌಗುನೆಲವನ್ನು ಇಷ್ಟಪಡುವ ಇದನ್ನು ದಕ್ಷಿಣ ಚೈನಾ, ಫಿಲಿಪ್ಪೀನ್ಸ್, ಇಂಡೊನೇಷಿಯ, ಮಲೇಷಿಯ, ಮ್ಯಾನ್ಮಾರ್ ಮತ್ತು ಭಾರತದ ಕೆಲವು ಭಾಗಗಳಲ್ಲಿ ಕಂಡುಕೊಳ್ಳಸಾಧ್ಯವಿದೆ. ಗಾಢ ಹೊಳಪುಕಪ್ಪು ಬಣ್ಣದ ಬಾಲ, ವಯಸ್ಸಾದಾಗ ಹಳದಿ ಕಂದಿಗೆ ತಿರುಗುವ ಹಸುರು ಮಿಶ್ರಿತ ಹಳದಿ ಬಣ್ಣದ ಪಟ್ಟೆಗಳಿರುವ ದೇಹ, ಅದರ ಹೆಡೆಯಲ್ಲಿ ಚಿಕ್ಕ ಚುಕ್ಕೆಗಳ ಗುಂಪುಗಳು, ಅದರ ತೋರಿಕೆಯನ್ನು ಅತಿ ಸುಂದರವಾಗಿಸುತ್ತವೆ.
ನಾಗರಹಾವಿನ ಇತರ ಜಾತಿಗಳು ಉದ್ದದಲ್ಲಿ ಸಾಧಾರಣ ಒಂದರಿಂದ ಎರಡು ಮೀಟರ್ಗಳಷ್ಟಿವೆ. ಭಾರತಕ್ಕೆ ದೇಶೀಯವಾಗಿದ್ದು, ಅಲ್ಲಿ ವ್ಯಾಪಕವಾಗಿ ವಿತರಿತವಾಗಿರುವುದು, ಹೆಡೆಯಲ್ಲಿ ಒಂದು ಜೊತೆ ಕನ್ನಡಕವನ್ನು ಹೋಲುವ ಅಪೂರ್ವವಾದ ಗುರುತಿರುವ ಕನ್ನಡಕವಿರುವ ನಾಗರಹಾವಾಗಿದೆ. ಅಗಲವಾದ ಕರಿಯ ಕೊರಳಪಟ್ಟಿ ಮತ್ತು ಶರೀರದುದ್ದಕ್ಕೂ ಬಿಳಿ ಮಚ್ಚೆ ಮತ್ತು ಹಳದಿ ಪಟ್ಟೆಗಳುಳ್ಳ ಅದು ಕಪ್ಪು, ಗಾಢ ಕಂದು ಅಥವಾ ಹಳದಿ ಛಾಯೆಯ ಬಿಳಿಯ ಬಣ್ಣದ್ದಾಗಿರಸಾಧ್ಯವಿದೆ. ಶ್ರೀಲಂಕ ಹಾಗೂ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಕಾಣಸಿಗುವ ಒಕ್ಕಣ್ಣಡಕವಿರುವ ನಾಗರಹಾವು ಹೆಚ್ಚು ತೆಳುಬಣ್ಣದ್ದಾಗಿದ್ದು, ಯಾವುದು ಅದಕ್ಕೆ ಅದರ ಹೆಸರನ್ನು ಕೊಡುತ್ತದೊ ಆ ಒಂದೇ ಬಿಳಿಯ ವೃತ್ತವಿರುವ ಹೆಚ್ಚು ಚಿಕ್ಕದ್ದೂ ಹೆಚ್ಚು ಉರುಟೂ ಆದ ಹೆಡೆಯುಳ್ಳದ್ದಾಗಿದೆ. ವಾಯುವ್ಯ ಭಾರತ ಮತ್ತು ಪಾಕಿಸ್ತಾನಗಳಲ್ಲಿ, ಗಾಢ ಹೊಳಪುಕಪ್ಪು ಬಣ್ಣದ ನಾಗರಹಾವು ಕಂಡುಬರುತ್ತದೆ. ಆಫ್ರಿಕದಲ್ಲಿ ಬೇರೆ ಜಾತಿಗಳಲ್ಲದೆ, ರಿಂಗ್ಹ್ಯಾಲ್ಸ್ ಅಥವಾ ಉಗಿಯುವ ನಾಗರಹಾವು ಮತ್ತು ಈಜಿಪ್ಶನ್ ನಾಗರಹಾವುಗಳಿವೆ. ಈ ಕೊನೆಗೆ ಹೆಸರಿಸಿರುವ, ಕಪ್ಪಾದ ಮತ್ತು ಸಂಕುಚಿತ ಹೆಡೆಯ ಹಾವು, ರಾಣಿ ಕ್ಲಿಯಪ್ಯಾಟ್ರಳ ಮರಣಕ್ಕೆ ಕಾರಣಭೂತವಾಗಿದ್ದ ವಿಷಸರ್ಪವಾಗಿದ್ದಿರಸಾಧ್ಯವಿದೆ.
ಹಾವುಗಳು, ಒಂದು ಅಪೂರ್ವವಾದ ಕಸ್ತೂರಿ ವಾಸನೆಯಿಂದ ಆಕರ್ಷಿತವಾಗಿ, ತಮ್ಮ ಸ್ವಂತ ಜಾತಿಗಳೊಂದಿಗೆ ಮಾತ್ರ ಕೂಡುತ್ತವೆ. ನಾಗರಹಾವು, ಅನೇಕ ವೇಳೆ ಗಂಡು ಮತ್ತು ಹೆಣ್ಣು ಒಟ್ಟಿಗಿರುತ್ತ, ಇತರ ಹಾವುಗಳಿಗಿಂತ ಹೆಚ್ಚಿನ ಕುಟುಂಬ ಆಸಕ್ತಿಯನ್ನು ತೋರಿಸುತ್ತದೆ. ಹೆಣ್ಣು ಕಾಳಿಂಗ ಸರ್ಪವು ಹುತ್ತ ಕಟ್ಟುವುದಕ್ಕೆ ಜ್ಞಾತವಾಗಿರುವ ಕೆಲವೇ ಹಾವುಗಳಲ್ಲಿ ಒಂದಾಗಿದೆ. ಆಕೆ ಎಲೆಗಳನ್ನು ಕೆರೆದು ಸುಮಾರು 30 ಸೆಂಟಿಮೀಟರ್ ಎತ್ತರದ ದಿಬ್ಬವಾಗಿ ಕೂಡಿಸಿ ಅದರಲ್ಲಿ 20 ರಿಂದ 50 ಮೊಟ್ಟೆಗಳನ್ನು ಇಡುತ್ತಾಳೆ. ಬಳಿಕ ಆಕೆ ಆ ದಿಬ್ಬದ ಸುತ್ತಲೂ ತನ್ನ ದೇಹವನ್ನು ಸುರುಳಿಸುತ್ತಿ ಆಹಾರವಿಲ್ಲದೆ ಬಹುಮಟ್ಟಿಗೆ ಎರಡು ತಿಂಗಳುಗಳ ಕಾವಿಗೆ ಕುಳಿತು ಮರಿಮಾಡುವ ಕಾಲದ ತನಕ ಅಲ್ಲಿಯೇ ಕುಳಿತಿರುತ್ತಾಳೆ. ಆ ಸಮಯದಲ್ಲಿ ಗಂಡು ಕೂಡ ಅನೇಕ ವೇಳೆ ಅಲ್ಲಿಯೇ ಹತ್ತಿರದಲ್ಲಿರುತ್ತಾನೆ. ಇತರ ನಾಗರಹಾವುಗಳು, ಹುತ್ತವನ್ನು ತಯಾರುಮಾಡದೆ ತಮ್ಮ ಮೊಟ್ಟೆಗಳ ಸಮೀಪ ಅವುಗಳನ್ನು ಕಾಪಾಡಲಿಕ್ಕಾಗಿ ಇರುತ್ತವೆ.
ಮರಿ ಹಾವುಗಳು ಚಿಪ್ಪನ್ನು ಸೀಳಿ ತಮ್ಮನ್ನು ಬಿಡಿಸಿಕೊಳ್ಳಲಿಕ್ಕಾಗಿ ಕೊನೆಗೆ ಬಿದ್ದುಹೋಗುವ ಒಂದು ಮೊಟ್ಟೆಹಲ್ಲನ್ನು ಬಳಸುತ್ತವೆ. ಹೊರಗೆ ಬರುತ್ತಿರುವಾಗ ಪೂರ್ಣ ಬೆಳೆದಿರುವ ವಿಷಗ್ರಂಥಿಗಳು ಮತ್ತು ವಿಷಹಲ್ಲುಗಳ ಸಮೇತ ಅವು ಪೂರ್ತಿ ಸ್ವತಂತ್ರವಾಗಿರುತ್ತವೆ. ಅವು ತಮ್ಮ ನಾಲಗೆಗಳನ್ನು ಪದೇ ಪದೇ ಹೊರಹಾರಿಸುತ್ತ, ಸುತ್ತುಗಟ್ಟುಗಳ ರುಚಿನೋಡಿ, ಅದರ ಬಾಯಿಯ ಅಂಗುಳಿನಲ್ಲಿರುವ ಜೇಕಬ್ಸನ್ಸ್ ಆರ್ಗನ್ ಎಂದು ಹೆಸರಿರುವ ಅಂಗಕ್ಕೆ ರಾಸಾಯನಿಕ ಮಾಹಿತಿಯನ್ನು ರವಾನಿಸುತ್ತವೆ. ಇದು ಘ್ರಾಣ ಪ್ರಜ್ಞೆಗೆ ಸಂಬಂಧಿಸಿದೆ; ರುಚಿ ಮತ್ತು ಘ್ರಾಣದ ಸಂಯೋಗವು, ಹಾವು ತನ್ನ ಆಹಾರವನ್ನು ಹುಡುಕುವಂತೆ, ತನ್ನ ಸಂಗಾತಿಯನ್ನು ಕಂಡುಕೊಳ್ಳುವಂತೆ ಅಥವಾ ಬೇಟೆಯಾಡುವ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವಂತೆ ಹಾವಿಗೆ ಸಹಾಯ ನೀಡುತ್ತದೆ.
ಈ ಎಳೆಯ ಹಾವು ಶೀಘ್ರವಾಗಿ ಬೆಳೆದು, ಸ್ವಲ್ಪಕಾಲದೊಳಗೆ ತೀರ ಬಿಗಿಯಾಗಿ ಪರಿಣಮಿಸಿರುವ ತನ್ನ ಹೊರಚರ್ಮವನ್ನು ಕಳಚುತ್ತದೆ. ನಾಗರಹಾವು ತನ್ನ ಜೀವಮಾನವಿಡೀ—20ಕ್ಕೂ ಹೆಚ್ಚು ವರ್ಷಗಳಾಗಿರಸಾಧ್ಯವಿದೆ—ಬೆಳೆಯುತ್ತಿರುವುದರಿಂದ ಈ ಅಸಾಮಾನ್ಯ ಘಟನೆಯು ಕ್ರಮವಾಗಿ ಪುನರಾವೃತ್ತಿಸಲ್ಪಡುತ್ತದೆ. ಚರ್ಮ ಕಳಚುವ ಒಂದೆರಡು ವಾರಗಳಿಗೆ ಮೊದಲು ಹಾವು ಜಡತೆಯುಳ್ಳದ್ದಾಗಿ ಪರಿಣಮಿಸುತ್ತದೆ, ಅದರ ಚರ್ಮವು ಕಳೆಗುಂದುತ್ತದೆ, ಮತ್ತು ಅದರ ಕಣ್ಣುಗಳು ಹಾಲುನೀಲ ಬಣ್ಣಕ್ಕೆ ತಿರುಗುತ್ತವೆ. ಬಳಿಕ ಒಡನೆ, ಕಣ್ಣುಗಳು ಶುಭ್ರವಾಗುತ್ತವೆ, ಮತ್ತು ತನ್ನ ತಲೆಯನ್ನು ಕಲ್ಲುಗಳ ಮೇಲೆ ತಿಕ್ಕುವ ಮೂಲಕ ಹಾವು ತನ್ನ ಬಾಯಿಯ ಹಳೆಯ ಚರ್ಮವನ್ನು ಸೀಳಿಹಾಕುತ್ತದೆ. ಈಗ ಅದು ತನ್ನ ಚರ್ಮವನ್ನು, ಕಣ್ಣುಗಳ ಮೇಲಿನ ಪಾರದರ್ಶಕ ಟೋಪಿಯಿಂದ ಹಿಡಿದು ಬಾಲದ ತನಕ ಒಳಗು ಹೊರಗಾಗುವಂತೆ ತಿರುವಿಹಾಕಿ, ಅಕ್ಷರಾರ್ಥವಾಗಿ ತನ್ನ ಚರ್ಮದೊಳಗಿಂದ ನುಸುಳಿಕೊಂಡು ಬರುತ್ತದೆ. ಈಗ ಚೈತನ್ಯಭರಿತವಾದ, ಹೊಳೆಯುವ, ಹೊಸದಾಗಿ ಕಾಣುವ ಹಾವೊಂದು ತನ್ನ ವಾಡಿಕೆಯ ಚಟುವಟಿಕೆಯಲ್ಲಿ ಮುಂದೆ ಹೋಗಲು ಸಿದ್ಧವಾಗಿರುತ್ತದೆ.
ವಾಯು ತಾಪಮಾನವು ನಾಗರಹಾವುಗಳನ್ನು ಬಹಳ ಬಾಧಿಸುತ್ತದೆ. ಹವಾಮಾನವು ತಣ್ಣಗಾದಂತೆ, ಅವು ನಿಧಾನಿಸುತ್ತ ಸುಪ್ತಾವಸ್ಥೆಗೂ ಬಂದು, ತಾಪಮಾನ ಏರಿದಾಗ ಮಾತ್ರ ಚಲಿಸತೊಡಗುತ್ತವೆ. ತೀರ ಹೆಚ್ಚು ಶಾಖವು ಅವುಗಳನ್ನು ಕೊಲ್ಲಬಲ್ಲದು. ಹಾವುಗಳನ್ನು ತಿನ್ನುವ ಕಾಳಿಂಗ ಸರ್ಪವನ್ನು ಬಿಟ್ಟರೆ, ಅವುಗಳ ಆಹಾರವು ಇಲಿಗಳು, ಹೆಗ್ಗಣಗಳು, ಕಪ್ಪೆಗಳು, ಹಲ್ಲಿಗಳು, ಪಕ್ಷಿಗಳು ಮತ್ತು ಇತರ ಚಿಕ್ಕ ಪ್ರಾಣಿಗಳು. ಬೇಟೆಯ ಬಲಿ ಸಿಕ್ಕಿಬಿದ್ದಾಗ, ಒಂದು ವಿಷ ಸೂಜಿಯು ಅದನ್ನು ನಿಶ್ಚಲವಾಗಿ ಮಾಡುತ್ತದೆ. ನಾಗರಹಾವು ಆಹಾರವನ್ನು ಅಗಿಯಲು ಸಜ್ಜಿತವಾಗಿ ಇಲ್ಲದಿರುವುದರಿಂದ, ಅದು ಇಡೀ ದೇಹವನ್ನು ಹೊಟ್ಟೆಗೆ ಹೊಗಿಸುತ್ತದೆ. ಚರ್ಮದ ಸ್ಥಿತಿಸ್ಥಾಪಕ ಗುಣ ಮತ್ತು ದವಡೆಯ ನಮ್ಯತೆಯು, ನಾಗರಹಾವು ತನ್ನ ಸ್ವಂತ ತಲೆಗಿಂತ ಎರಡು ಅಥವಾ ಮೂರು ಪಟ್ಟು ದೊಡ್ಡದಾಗಿರುವ ಒಂದು ಪ್ರಾಣಿಯನ್ನು ನುಂಗುವಂತೆ ಅನುಮತಿಸುತ್ತದೆ. ಬಾಯಿಯು ಆಹುತಿಯಿಂದ ಪೂರ್ತಿಯಾಗಿ ತಡೆಗಟ್ಟಲ್ಪಟ್ಟಿರುವಾಗ, ಆ ಹಾವು, ಈಜುವವನು ಒಂದು ಸ್ನಾರ್ಕೆಲನ್ನು ಬಳಸುವಂತೆ, ತನ್ನ ಶ್ವಾಸನಾಳದ ದ್ವಾರವನ್ನು ಆ ತಡೆಯಿಂದಾಚೆಗೆ ಮುಂದಕ್ಕೆ ಎಳೆದುಕೊಂಡು ಉಸಿರಾಡುತ್ತದೆ. ಈಗ ಹಿಂದೆ ಬಾಗಿರುವ ಹಲ್ಲುಗಳ ಸಾಲುಗಳು ಆ ಆಹುತಿಯನ್ನು ಹಾವಿನ ಶರೀರದೊಳಕ್ಕೆ ದೂಡುತ್ತವೆ. ಅದು ಆಹಾರವನ್ನು ಜೀರ್ಣಿಸಲಿಕ್ಕಾಗಿ ಒಂದು ಏಕಾಂತ ಸ್ಥಳಕ್ಕೆ ವಿಶ್ರಾಂತಿಸಲು ಹೋಗುತ್ತದೆ, ಪ್ರಾಯಶಃ ಅನೇಕ ದಿನಗಳ ವರೆಗೆ ಪುನಃ ತಿನ್ನದಿರುತ್ತದೆ. ನಾಗರಹಾವು, ತನ್ನ ಶರೀರದಲ್ಲಿ ಶೇಖರವಾಗಿರುವ ಕೊಬ್ಬನ್ನು ಹೀರಿಕೊಳ್ಳುತ್ತ ಅನೇಕ ತಿಂಗಳುಗಳ ವರೆಗೆ ಆಹಾರವನ್ನು ತಿನ್ನದೆಯೇ ಜೀವಿಸಬಲ್ಲದು.
ಹಾವುಗಳು ಮುಂಜಾಗ್ರತೆಯ ಸ್ವಭಾವದವುಗಳು. (ನೋಡಿ ಮತ್ತಾಯ 10:16.) ನಾಗರಹಾವಿನ ಸ್ವರಕ್ಷಣೆ, ಒಂದೇ ಪಲಾಯನದಲ್ಲಿ—ಪ್ರಾಯಶಃ ಒಂದು ಬಂಡೆಯ ಅಡಿಗೆ ಅಥವಾ ತನ್ನ ಮೂಷಕ ಬಿಲನಿವಾಸದೊಳಕ್ಕೆ ಹರಿದಾಡುತ್ತ ಹೋಗಿ—ಇಲ್ಲವೆ ಸುಳಿವನ್ನು ತಪ್ಪಿಸಲು ನಿಶ್ಶಬ್ದವಾಗಿರುವುದರಲ್ಲಿದೆ. ಎದುರುಬದುರಾಗಿ ಸಂಧಿಸಲ್ಪಟ್ಟಲ್ಲಿ, ವೈರಿಯನ್ನು ಹೆದರಿಸಲು, ಅದು ಎದ್ದುನಿಂತು, ತನ್ನ ಹೆಡೆ ತೆರೆದು ಹಿಸ್ಸೆನ್ನುವುದು. ಕಚ್ಚುವುದು ಕೊನೆಯ ಉಪಾಯವಾಗಿದೆ.
ಹಾವುಕಡಿತ
ಗ್ರಾಮೀಣ ಆಫ್ರಿಕ ಮತ್ತು ಏಷಿಯದಲ್ಲಿ ಹಾವುಕಡಿತವು ಅನೇಕ ವೇಳೆ ವರದಿಸಲ್ಪಡದೆ ಹೋಗುವುದಾದರೂ ಲೋಕವ್ಯಾಪಕವಾಗಿ ವಿಷದ ಹಾವುಗಳಿಂದ ಪ್ರತಿ ವರುಷ ಸುಮಾರು ಹತ್ತು ಲಕ್ಷ ಜನರು ಕಡಿಯಲ್ಪಡುತ್ತಾರೆಂದು ಕಂಡುಬರುತ್ತದೆ. ಅತಿ ಹೆಚ್ಚು ಮರಣಗಳಲ್ಲಿ—ಒಂದು ವರುಷಕ್ಕೆ ಸುಮಾರು 10,000—ಭಾರತಕ್ಕೆ ಅನತಿಶಯವಾದ ದಾಖಲೆಯಿದೆ. ಪ್ರಾಯಶಃ ಹೆಚ್ಚಿನ ಮರಣಗಳು ಕನ್ನಡಕದ ನಾಗರಹಾವಿನಿಂದಾಗುತ್ತವೆ. ನಾಗರಹಾವಿನ ಕಡಿತಗಳಲ್ಲಿ ಸುಮಾರು 10 ಪ್ರತಿಶತ ಮರಣದಲ್ಲಿ ಪರಿಣಮಿಸುತ್ತವೆ.
ನಾಗರಹಾವು ಅನೇಕ ಹಾವುಗಳಿಗಿಂತ ನಿಧಾನಿ; ಅದರ ಪ್ರಧಾನ ಶತ್ರುಗಳಲ್ಲಿ ಒಂದಾದ, ಚುರುಕಾದ ಮುಂಗುಸಿ ಅದನ್ನು ಸೋಲಿಸಬಲ್ಲದು. ಹಾವಿನ ಕಡೆ ಹಾರಿ, ಬಳಿಕ ಆಕ್ರಮಣದ ಹೊಡೆತವನ್ನು ಮತ್ತೆ ಮತ್ತೆ ತಪ್ಪಿಸಿಕೊಳ್ಳುತ್ತ, ಮುಂಗುಸಿಯು ನಾಗರಹಾವನ್ನು ಎದೆಗುಂದಿಸಿ ಹಿಂಜರಿಯುವಂತೆ ಮಾಡುತ್ತದೆ. ಹೆಡೆಯ ಹಿಂಬದಿಯಿಂದ ಆಕ್ರಮಿಸುತ್ತ ಅದು ನಾಗರಹಾವಿನ ಕತ್ತನ್ನು ಮುರಿಯುತ್ತದೆ. ಅನೇಕ ಹಾವುಗಳು ಸುರುಳಿ ಸುತ್ತಿದ ಸ್ಥಾನದಿಂದ ಅವುಗಳ ವ್ಯಾಪ್ತಿಯನ್ನು ತಿಳಿಯುವುದನ್ನು ಕಷ್ಟಕರವಾಗಿ ಮಾಡುತ್ತ ಹೊಡೆಯುತ್ತವಾದರೂ, ನಾಗರಹಾವು ತನ್ನ ದೇಹವನ್ನು ಮೇಲೆತ್ತಿ ನೇರವಾಗಿ ಕೆಳಗೆ ಹೊಡೆಯುತ್ತದೆ. ಇರುವ ದೂರವನ್ನು ನಿರ್ಣಯಿಸುವುದು ಸಾಧ್ಯ, ಮತ್ತು ಒಬ್ಬ ವ್ಯಕ್ತಿಯು ಸಂಬಂಧಸೂಚಕವಾಗಿ ನಿಧಾನ ಚಲನೆಯ ಆ ಹರವಿನಿಂದ ದೂರ ಸರಿಯಬಲ್ಲನು.
ರಿಂಗ್ಹ್ಯಾಲ್ಗಳು, ದಕ್ಷಿಣ ಆಫ್ರಿಕದ ಕರಿಕತ್ತಿನ ನಾಗರಹಾವುಗಳು, ಮತ್ತು ಈಶಾನ್ಯ ಭಾರತದ ನಾಗರಹಾವುಗಳಂತಹ ಕೆಲವು ನಾಗರಹಾವುಗಳು, ಉಗಿಯುವ ಮೂಲಕ ತಮ್ಮನ್ನು ಸಂರಕ್ಷಿಸಿಕೊಳ್ಳುತ್ತವೆ. ನೆಟ್ಟಗೆ ನಿಂತು, ತನ್ನ ವಿಷಹಲ್ಲುಗಳನ್ನು ಆಹುತಿಯ ಕಡೆ ತೋರಿಸುತ್ತ, ಆ ಹಾವು ಹೊರದೂಡಿದ ಗಾಳಿಯ ಮೂಲಕ ವಿಷದ ಎರಡು ಸೂಕ್ಷ್ಮ ತುಂತುರುಗಳನ್ನು ಎರಡು ಮೀಟರುಗಳಿಗೂ ಜಾಸ್ತಿ ದೂರ ಹಾರಿಸಬಲ್ಲದು. ಚರ್ಮದ ಮೇಲೆ ಇದು ಯಾವ ಹಾನಿಯನ್ನು ಮಾಡದಿದ್ದರೂ, ಅದು ಕಣ್ಣುಗಳನ್ನು ಪ್ರವೇಶಿಸುವಲ್ಲಿ, ತಾತ್ಕಾಲಿಕ ಅಂಧತೆಯನ್ನು ಮತ್ತು ಬೇಗನೆ ತೊಳೆಯದಿರುವಲ್ಲಿ ಶಾಶ್ವತವಾದ ಅಂಧತೆಯನ್ನು ಉಂಟುಮಾಡಬಲ್ಲದು. ವಿಚಿತ್ರವೇನಂದರೆ, ಆ ಹಾವು ಕಣ್ಣುಗಳ ಕಡೆಗೆ ಗುರಿಯಿಡಲು ಶಕ್ತವಾಗಿರುವಂತೆ ತೋರುತ್ತದೆ.
ಒಂದು ನಾಗರಹಾವು ನಿಮ್ಮನ್ನು ಕಚ್ಚುವಲ್ಲಿ ನೀವೇನು ಮಾಡಬೇಕು? ಹಾವಿನ ಗಲ್ಲದಲ್ಲಿರುವ ವಿಷಚೀಲಗಳಿಂದ ಹಾವಿನ ದವಡೆಯ ಮುಂಭಾಗದಲ್ಲಿರುವ ಎರಡು ಗಿಡ್ಡವಾದ ಟೊಳ್ಳು ಸ್ಥಿರಹಲ್ಲುಗಳ ಮೂಲಕ ವಿಷವು ಒತ್ತಲಾಗುತ್ತದೆ. ಈ ಹಲ್ಲುಗಳು ಚರ್ಮವನ್ನು ಚುಚ್ಚಿ, ಚುಚ್ಚುಗೊಳವೆಯು ಮಾಡುವ ವಿಧದಲ್ಲಿ ವಿಷವನ್ನು ಒಳಸೇರಿಸುತ್ತವೆ. ಹಾವುಕಡಿತಕ್ಕಿರುವ ಒಂದೇ ಖಾತರಿ ಚಿಕಿತ್ಸೆಯು, ನಾಲ್ಕು ವಿಷದ ಹಾವುಗಳ ವಿಷದಿಂದ ತಯಾರಿಸಿದ ವಿಷಹಾರಿಯೇ. 20ನೆಯ ಶತಮಾನದ ಆದಿಯಲ್ಲಿ ವಿಷಹಾರಿಯನ್ನು ವ್ಯಾಪಕವಾಗಿ ಉಪಯೋಗಿಸಿದ ಪ್ರಥಮ ದೇಶವು ಭಾರತವಾಗಿತ್ತು. ವಿಷಹಾರಿ ಪುಡಿಯು ಶೈತ್ಯರಹಿತವಾಗಿ ಐದು ವರುಷಗಳ ವರೆಗೆ ಪರಿಣಾಮಕಾರಿಯಾಗಿದೆ; ಪುನರ್ಜೋಡಿಸಿದ ರೂಪದಲ್ಲಿ ಇದನ್ನು ಚುಚ್ಚಿ ಒಳಹೊಗಿಸಲಾಗುತ್ತದೆ.
ನಾಗರಹಾವಿನ ಕಡಿತದ ರೋಗಸೂಚನೆಗಳು ಯಾವುವೆಂದರೆ, ಕಚ್ಚಿದ ಸ್ಥಳದಲ್ಲಿ ನೋವು ಮತ್ತು ಉಬ್ಬುವಿಕೆ, ಅಸ್ಪಷ್ಟ ದೃಷ್ಟಿ, ಅಸ್ಥಿರತೆ, ದನಿಪೆಟ್ಟಿಗೆಯ ನಿಸ್ಸತ್ವತೆ ಮತ್ತು ನಿಧಾನಗತಿಯ ಉಸಿರಾಟ, ಇವೇ. ವಿಷವು ದೊಡ್ಡ ಪ್ರಮಾಣದಲ್ಲಿ ಒಳಹೊಗಿಸಲ್ಪಟ್ಟಿರುವಲ್ಲಿ ಮತ್ತು ಯಾವ ಚಿಕಿತ್ಸೆಯೂ ಕೊಡಲ್ಪಡದಿರುವಲ್ಲಿ ಸುಮಾರು ಎರಡು ತಾಸುಗಳಲ್ಲಿ ಮರಣ ಸಂಭವಿಸುತ್ತದೆ.
ಹಾವಾಡಿಗ
ಹಾವಾಡಿಸುವುದು ಮನೋರಂಜನೆಯ ಒಂದು ಅತಿ ಹಳೆಯ ರೂಪ. ಹೆಚ್ಚಾಗಿ ಪೂರ್ವ ದೇಶಗಳಲ್ಲಿ ಅಭ್ಯಸಿಸಲ್ಪಡುತ್ತಿರುವ ಇದನ್ನು, ಕೆಲವು ಪಾಶ್ಚಾತ್ಯ ಸರ್ಕಸುಗಳು ತಮ್ಮ ಸರಕುಗಳಲ್ಲಿ ಸಂಘಟಿಸಿವೆ. ಕನ್ನಡಕದ ನಾಗರಹಾವು, ಅದರ ಅಸಾಧಾರಣವಾದ ಹೆಡೆ ಮತ್ತು ಉದ್ವಿಗ್ನ ಪ್ರಕೃತಿಯ ಕಾರಣ, ಬಳಸಲ್ಪಡುವ ಅತಿ ಜನಪ್ರಿಯ ಹಾವಾಗಿದೆಯಾದರೂ ರಾಯಲ್ ಸ್ನೇಕ್ ಮತ್ತು ರೆಡ್ ಸ್ಯಾಂಡ್ ಬೋಆಗಳಂತಹ ಬೇರೆ ಆಕರ್ಷಕ ತೋರಿಕೆಯ ಹಾವುಗಳನ್ನೂ ಬಳಸಲಾಗುತ್ತದೆ. ನಿಪುಣ ಪ್ರದರ್ಶಕನಾದ ಆಡಿಗನು ತನ್ನ ಕೊಳಲನ್ನು ಊದಲಾಗಿ, ನಾಗರಹಾವು ತನ್ನ ಬುಟ್ಟಿಯಿಂದ ಮೇಲೆದ್ದು ಅದರ ಸಾಮಾನ್ಯವಾದ ಸ್ವರಕ್ಷಣಾ ಭಂಗಿಯಲ್ಲಿ ಅದರ ಹೆಡೆಯನ್ನು ತೆರೆಯುತ್ತದೆ. ಹಾವಾಡಿಗನ ಚಲನೆಯು, ಹಾವು ಅವನ ಮೇಲೆ ಕಣ್ಣಿಟ್ಟು ಸದಾ ಆಕ್ರಮಣಮಾಡಲು ಸಿದ್ಧವಾಗಿರುವಾಗ, ಅದರಲ್ಲಿ ಒಂದು ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಹಾವಾಡಿಗರಿಂದ ಉಪಯೋಗಿಸಲ್ಪಡುವ ಅಧಿಕಾಂಶ ನಾಗರಹಾವುಗಳ ವಿಷಹಲ್ಲುಗಳು ತೆಗೆಯಲ್ಪಟ್ಟಿರುವುದಾದರೂ, ಕೆಲವು ಹಾವಾಡಿಗರು ತಮ್ಮನ್ನು ವಿಷದ ಹಾವುಗಳೊಂದಿಗೆ ಕೆಲಸಮಾಡುವ ಅಪಾಯಕ್ಕೊಳಪಡಿಸಿಕೊಳ್ಳುತ್ತಾರೆ.
ಪ್ರಾಚೀನ ಭಾರತದಲ್ಲಿ ಸಂಚಾರೀ ಹಾವಾಡಿಗನು ಧಾರ್ಮಿಕ ಕಲ್ಪನೆ ಮತ್ತು ಪುರಾಣ ಕಥೆಗಳನ್ನು ಕಥನ ಮಾಡುವವನೂ ಆಗಿದ್ದನು; ಇದು ಅವನಿಗೆ ಜನಪ್ರಿಯ ಆಕರ್ಷಣೆಯನ್ನು ಕೊಟ್ಟಿತು. ಇಂದು ಕ್ಯಾಮರ ಸಂತುಷ್ಟ ಪ್ರವಾಸಿಗಳು ಪದೇ ಪದೇ ಹೋಗುತ್ತಿರುವ ಹೊಟೇಲುಗಳ ಮುಂದೆ ಮಾಡುವ ಪ್ರದರ್ಶನವು ಹೆಚ್ಚು ಲಾಭಕರ. ಕೆಲವು ಹಾವಾಡಿಗರು ಮನೆಗಳಿಗೆ ಭೇಟಿನೀಡುತ್ತ ಮನೆಯ ಒಡೆಯನೊಡನೆ, ಅವನ ದೊಡ್ಡ ತೋಟವು ಹಾವುಗಳಿರುವ ಸ್ಥಳವಾಗಿರುವುದು ಸಂಭಾವ್ಯವೆಂದು ಹೇಳುತ್ತಾರೆ. ಒಂದು ಉಭಯಸಮ್ಮತ ಮೊತ್ತವನ್ನು ಕೊಡುವಲ್ಲಿ ಅವುಗಳನ್ನು ಹಿಡಿಯಲು ಸಿದ್ಧನೆಂದು ಅವನು ಹೇಳುತ್ತಾನೆ. ಅವನು ಪೊದೆಗಳ ಮಧ್ಯೆ ಕಾಣೆಯಾಗಿ, ಯಾವ ಸಮಯದಲ್ಲಿ ಅವನ ಕೊಳಲುಗಳ ಧ್ವನಿ ಕೇಳಿಬರುತ್ತದೊ, ಆ ಸಮಯ ಕಳೆದ ಬಳಿಕ ಅವನು ಒಂದು ಚೀಲದ ತುಂಬ ಹಾವುಗಳೊಂದಿಗೆ ಹಿಂದಿರುಗಿ ಬರುತ್ತಾನೆ. ಮನೆಯವನು ಅವನ ಉಸ್ತುವಾರಿ ನೋಡಿಕೊಳ್ಳುತ್ತಿದ್ದರೆ ಅಥವಾ ಕಡಮೆ ಪಕ್ಷ, ಅವನು ತನ್ನೊಂದಿಗೆ ಒಂದು ಚೀಲದ ತುಂಬ ಹಾವುಗಳನ್ನು ತಂದಿದ್ದನೊ ಎಂದು ಪರೀಕ್ಷೆ ಮಾಡುತ್ತಿದ್ದರೆ ಅದು ಬುದ್ಧಿವಂತಿಕೆಯದ್ದು ಆಗುತ್ತಿತ್ತೆಂಬುದೇನೊ ನಿಶ್ಚಯ!
ಹಾವು ವನಗಳು ಕಲಿಸುತ್ತವೆ
ಹಾವು ವನಗಳು ಉರಗಗಳಲ್ಲಿ ಆಸಕ್ತಿಯನ್ನು ಪ್ರೋತ್ಸಾಹಿಸುತ್ತವೆ. ಅವು ಸಂಶೋಧನೆಯನ್ನು ಪ್ರಾಯೋಜಿಸಿ, ಹಾವು ಕಡಿತ ನಿರೋಧ ಮತ್ತು ಚಿಕಿತ್ಸೆಯ ಕುರಿತು ಕಲಿಸಿ, ಮನುಷ್ಯನ ಲೋಭ ಮತ್ತು ಅಜ್ಞಾನದಿಂದ ಹಾವುಗಳ ರಕ್ಷಣೆಗೆ ಕೆಲಸ ಮಾಡುತ್ತವೆ. ನಾಗರಹಾವುಗಳ ಸೊಗಸಾದ ಚರ್ಮಕ್ಕಾಗಿ ಅವುಗಳು ಕೊಲ್ಲಲ್ಪಟ್ಟಿವೆ. ಚರ್ಮಗಳಿಂದ ಬೆಲ್ಟುಗಳು, ಪರ್ಸ್ಗಳು, ಪಾದರಕ್ಷೆಗಳು ಮತ್ತು ಬೇರೆ ಭೋಗವಸ್ತುಗಳನ್ನು ಮಾಡಲಾಗುತ್ತದೆ. ಭಾರತದಲ್ಲಿ ಒಂದು ವರುಷದಲ್ಲಿ ಚರ್ಮ ಉದ್ಯಮಕ್ಕಾಗಿ ಒಂದು ಕೋಟಿಗೂ ಹೆಚ್ಚು ಹಾವುಗಳು ಕೊಲ್ಲಲ್ಪಟ್ಟವು. ಹಾವುಗಳನ್ನು ಕೊಂದು ಒಡನೆ ಚರ್ಮ ಸುಲಿಯಲಾಗುತ್ತದೆ. ಭಾರತದಲ್ಲಿ ಚರ್ಮ ಬಣ್ಣವನ್ನು ಕೊಡಲು ಸಸ್ಯವರ್ಣವನ್ನು ಉಪಯೋಗಿಸಲಾಗುತ್ತದೆ, ಮತ್ತು ಅದು ಹೊಳೆಯುವಂತೆ ಮತ್ತು ಜಲವಿಕರ್ಷಕವಾಗಿರುವಂತೆ ಮಾಡಲು ಅದಕ್ಕೆ ಗ್ಲಾಸ್ಪಾಲಿಷನ್ನು ಕೊಡಲಾಗುತ್ತದೆ ಮತ್ತು ಕೆಲವು ಬಾರಿ ಮೆರುಗೆಣ್ಣೆಯನ್ನು ಸ್ಪ್ರೇ ಮಾಡಲಾಗುತ್ತದೆ.
ನಾಗರಹಾವಿನ ಬೆಲೆಯನ್ನು ಹೆಚ್ಚು ಅಂದಾಜು ಮಾಡಸಾಧ್ಯವಿಲ್ಲ. ಇಲಿಗಳನ್ನು ಮತ್ತು ಇತರ ಹಾನಿಕರವಾದ ಜಂತುಗಳನ್ನು ಕೊಂದು ಅದು ಟನ್ನುಗಳಷ್ಟು ಧಾನ್ಯಗಳನ್ನು ಉಳಿಸುತ್ತದೆ. ಅದರ ವಿಷವು ವಿಷಹಾರಿಗಳನ್ನು, ವೇದನಹಾರಿಗಳನ್ನು ಮತ್ತು ಇತರ ಔಷಧಗಳನ್ನು ಒದಗಿಸುತ್ತದೆ. ಮುಂಬೈಯ ಟಾಟಾ ಮೆಮೋರಿಯಲ್ ಇನ್ಸ್ಟಿಟ್ಯೂಟ್, ಕ್ಯಾನ್ಸರ್ ಕಣಗಳ ಮೇಲಿನ ನಾಗರಹಾವಿನ ವಿಷದ ಪರಿಣಾಮವನ್ನು ಅಭ್ಯಸಿಸುತ್ತಿದೆ.
ನಾಗರಹಾವನ್ನು ಭೇಟಿ ಮಾಡಿದುದರಲ್ಲಿ ನೀವು ಆನಂದಿಸಿದ್ದೀರೊ? ಸೊಗಸು, ಉಪಯುಕ್ತ, ಮುಂಜಾಗ್ರತೆ, ಸ್ವತಃ ರಕ್ಷಿಸಿಕೊಳ್ಳಲು ಸುಸಜ್ಜಿತ. ಅದರ ಸುಪರಿಚಯವನ್ನು ಮಾಡಿಕೊಳ್ಳುವುದು ಪ್ರಾಣಿರಾಜ್ಯದ ಅಧಿಕ ದೂಷಿತ ಸದಸ್ಯನೊಬ್ಬನನ್ನು ಹೆಚ್ಚು ಮಾನ್ಯಮಾಡುವಂತೆ ಸಹಾಯಮಾಡಬಲ್ಲದು.
[ಪುಟ 26 ರಲ್ಲಿರುವ ಚೌಕ]
ನಾಗರಹಾವಿನ ಆರಾಧನೆ ಮತ್ತು ಅಂಧವಿಶ್ವಾಸ
ನಾಗರಹಾವಿನ ಆರಾಧನೆ ಪುರಾತನ ಕಾಲಗಳಿಂದಲೂ ಅಸ್ತಿತ್ವದಲ್ಲಿದೆ. ಪ್ರಾಕ್ತನ ಶಾಸ್ತ್ರಜ್ಞರಿಂದ ಅಗೆಯಲ್ಪಟ್ಟ ಅತಿ ಹಳೆಯ ನಾಗರಿಕತೆಗಳಲ್ಲಿ ಒಂದಾದ ಮೊಹೆಂಜೊದಾರೊವಿನಲ್ಲಿ ನಾಗರಹಾವಿನ ಮೂಲಾಶಯಗಳು ಮುದ್ರೆಗಳಲ್ಲಿ ಕಂಡುಹಿಡಿಯಲ್ಪಟ್ಟಿವೆ. ಸಾ.ಶ.ಪೂ. ಮೂರನೆಯ ಸಹಸ್ರವರ್ಷಗಳಿಂದ ಹಿಡಿದು ಇಂದಿನ ವರೆಗೆ ಭಾರತದಲ್ಲಿ ಕೋಟಿಗಟ್ಟಲೆ ಜನರು ನಾಗರಹಾವುಗಳನ್ನು ಮೂಢ ನಂಬಿಕೆಯ ಪೂಜ್ಯಭಾವದಿಂದ ನೋಡಿದ್ದಾರೆ. ರಸಕರವಾಗಿ, ಅನೇಕ ನಾಗರಹಾವಿನ ಕಥೆಗಳನ್ನು, ಅವು ವಾಸ್ತವವಾದ ಐತಿಹಾಸಿಕ ಘಟನೆಗಳ ಸುತ್ತಲೂ ಹೆಣೆಯಲ್ಪಟ್ಟಿರುವ ವಿಕೃತ ಮಿಥ್ಯೆಗಳೆಂದು ಗುರುತಿಸಸಾಧ್ಯವಿದೆ.
ವಿಶ್ವದಲ್ಲಿ ಬೆಳಕೇ ಇದ್ದಿರದ ಒಂದು ಸಮಯದ ಕುರಿತು ಸೃಷ್ಟಿಯ ಒಂದು “ಕಥೆ” ಹೇಳುತ್ತದೆ. ಬ್ರಹ್ಮಾಂಡದ ಅಂಧಕಾರದ ಜಲಗಳಿಂದ ಉಜ್ವಲ ದೇವನಾದ ವಿಷ್ಣುವನ್ನು ಪ್ರಥಮವಾಗಿ, ಆ ಬಳಿಕ ಆಕಾಶ, ಭೂಮಿ ಮತ್ತು ಅಧೋಲೋಕವನ್ನು ಸೃಷ್ಟಿಸಲಾಯಿತು. ಬಾಕಿ ಉಳಿದ ವಸ್ತುವಿನಿಂದ, ಶೇಷ (ಉಳಿದ ಭಾಗವೆಂದರ್ಥ) ಎಂದು ಕರೆಯಲ್ಪಟ್ಟ ಒಂದು ಬೃಹದಾಕಾರದ ನಾಗರಹಾವನ್ನು ಸೃಷ್ಟಿಸಲಾಯಿತು. ಮಿಥ್ಯೆಯು 5ರಿಂದ 1,000 ತಲೆಗಳಿರುವ ಶೇಷನಿಗೆ ಮನ್ನಣೆಯನ್ನು ಕೊಡುತ್ತದೆ, ಮತ್ತು ವಿಗ್ರಹಗಳು ವಿಷ್ಣುವನ್ನು ಸುರುಳಿ ಸುತ್ತಿರುವ ಶೇಷನ ಮೇಲೆ ಒರಗಿರುವುದನ್ನೂ, ಶೇಷನ ಅನೇಕ ತಲೆಗಳ ತೆರೆದ ಹೆಡೆಗಳಿಂದ ಅವನು ಆಶ್ರಯಿಸಲ್ಪಟ್ಟಿರುವುದನ್ನೂ ಚಿತ್ರಿಸುತ್ತವೆ. ಭೂಕಂಪಗಳು ಶೇಷನ ಆಕಳಿಕೆಯೆಂದು ಅಧ್ಯಾರೋಪಿಸಲ್ಪಡುತ್ತವೆ, ಮತ್ತು ಅವನ ಬಾಯಿಂದ ಬರುವ ಬೆಂಕಿ ಅಥವಾ ಅವನ ವಿಷವು ಒಂದು ಯುಗಾಂತ್ಯದಲ್ಲಿ ಜಗತ್ತನ್ನು ನಾಶಗೊಳಿಸುತ್ತದೆ.
ಹಿಂದೂ ಪುರಾಣವು, ಅಧೋಲೋಕ, ನಾಗಲೋಕ ಅಥವಾ ಪಾತಾಳದಲ್ಲಿ ವಾಸಿಸುವ ನಾಗಗಳೆಂಬ ನಾಗರಹಾವು ಕುಲವನ್ನು ವರ್ಣಿಸುತ್ತದೆ. ವಾನರ ದೇವನಾದ ಹನುಮಾನನು, “ಪರಿಪೂರ್ಣ ಯುಗ”ದಲ್ಲಿ ಸರ್ವ ಜನರು ಭಕ್ತರಾಗಿದ್ದರೆಂದೂ, ಒಂದೇ ಒಂದು ಧರ್ಮವಿತ್ತೆಂದೂ, ದೆವ್ವಗಳಾಗಲಿ ನಾಗಗಳಾಗಲಿ ಇದ್ದಿರಲಿಲ್ಲವೆಂದೂ ವಾದಿಸುತ್ತಾನೆ. ಸರ್ಪಗಳು ಭೂಸಂಪತ್ತಿನ ಪಾಲಕರಾದವು ಮತ್ತು ಮಹಾ ಜ್ಞಾನವನ್ನೂ ಮಾಯಾಶಕ್ತಿಗಳನ್ನೂ ಹೊಂದಿದ್ದವು. ಕೆಲವೊಮ್ಮೆ ವಾಸುಕಿಯೆಂದೂ ಕರೆಯಲ್ಪಡುವ ಶೇಷನನ್ನು, ದೇವತೆಗಳು, ಅವನು ಅಮರತ್ವವನ್ನು ಕೊಡುವ ಮಕರಂದವಾದ ಅಮೃತವನ್ನು ಉತ್ಪಾದಿಸಲಿಕ್ಕಾಗಿ ಒಂದು ಕ್ಷೀರ ಸಮುದ್ರವನ್ನು ಮಥಿಸುವಂತೆ ಉಪಯೋಗಿಸಿದರು. ನಾಗರಿಂದ ಆಳಲ್ಪಡುವ ಅಧೋಲೋಕವು ತೀರ ಅಪೇಕ್ಷಣೀಯವಾದ ಸ್ಥಳವಾಗಿ ಚಿತ್ರಿಸಲ್ಪಡುತ್ತದೆ; ಯುದ್ಧದಲ್ಲಿ ಮಡಿಯುವ ವೀರರಿಗೆ ಅಲ್ಲಿ ಕಲ್ಪನಾತೀತವಾದ ಸುಖಗಳನ್ನು ವಾಗ್ದಾನಿಸಲಾಗುತ್ತದೆ.
ಆದರೂ, ಎಲ್ಲ ಕಾಲ್ಪನಿಕ ನಾಗರಹಾವುಗಳು ದಯಾಮಯವಾಗಿ ಪರಿಗಣಿಸಲ್ಪಡುವುದಿಲ್ಲ. ಒಂದು “ಕಥೆ”ಯು ವಿಷ್ಣುವಿನ ಅವತಾರವಾದ ಕೃಷ್ಣ ಮತ್ತು ಒಂದು ಮಹಾ, ಕೇಡುಕಾರಕ ದೆವ್ವ-ನಾಗರಹಾವಾದ ಕಾಳಿಯದ ಮಧ್ಯೆ ನಡೆದ ಒಂದು ಹೋರಾಟವನ್ನು ಕಥಿಸುತ್ತದೆ. ತನ್ನ ಪಾದವನ್ನು ಆ ಮಹಾ ಸರ್ಪನ ತಲೆಯ ಮೇಲೆ ಇಟ್ಟಿರುವ ವಿಜಯಿಯಾದ ಕೃಷ್ಣನನ್ನು ಪ್ರತಿಮೆಗಳು ತೋರಿಸುತ್ತವೆ.
ನಾಗರ ರಾಣಿಯಾದ ಮನಸಾ ಅಥವಾ ದುರ್ಗಮ್ಮಳನ್ನು ಸ್ತ್ರೀಯರು ತಮ್ಮ ಮಕ್ಕಳನ್ನು ಹಾವುಕಡಿತದಿಂದ ಕಾಪಾಡುವಂತೆ ಆರಾಧಿಸುತ್ತಾರೆ. ನಾಗಪಂಚಮಿ ಹಬ್ಬದಂದು ಹಾವು ಭಕ್ತರು ನಾಗರಹಾವುಗಳ ವಿಗ್ರಹಗಳ ಮೇಲೆ ಮತ್ತು ಹಾವಿನ ಬಿಳಗಳೊಳಗೆ ಹಾಲನ್ನು ಮತ್ತು ರಕ್ತವನ್ನೂ ಸುರಿಯುತ್ತಾರೆ. ಗಂಡು ಮಗುವಾಗಲು ನಿರೀಕ್ಷಿಸುವ ಸ್ತ್ರೀಯರಿಂದ, ಶಿಲೆಯ ಅಥವಾ ಬೆಳ್ಳಿಯ ನಾಗರಹಾವುಗಳ ವಿಗ್ರಹಗಳು ದೇವಾಲಯಗಳಲ್ಲಿ ಆರಾಧಿಸಲ್ಪಟ್ಟು, ಅರ್ಪಣೆ ಮಾಡಲ್ಪಡುತ್ತವೆ.
ಚಲನಚಿತ್ರಗಳಲ್ಲಿ ನಾಗರಹಾವುಗಳು
ಪುರಾಣದ ನಾಗರಹಾವು ಭಾರತದಲ್ಲಿ ಮಾಡಲಾಗುವ ಚಲನಚಿತ್ರಗಳಲ್ಲಿ ಬಹು ಜನಪ್ರಿಯ ಮುಖ್ಯವಿಷಯ—1928ರಿಂದ 40ಕ್ಕಿಂತಲೂ ಹೆಚ್ಚು ಚಿತ್ರಗಳನ್ನು ತಯಾರಿಸಲಾಗಿದೆ. ಸಾಮಾನ್ಯವಾಗಿ ನಾಗರಹಾವನ್ನು ಸೌಜನ್ಯದ ಪಾಲಕನಾಗಿ, ಅದರ ಭಕ್ತರ ಸಹಾಯಕನಾಗಿ ಮತ್ತು ದುಷ್ಟರ ನಾಶಕನಾಗಿ ಚಿತ್ರಿಸಲಾಗಿದೆ. ಮಾನವ ರೂಪವನ್ನು ತಾಳಲು ಶಕ್ತಿಯಿದೆಯೆಂದು ಹೇಳಲಾಗುವ ಇಚ್ಛಾದಾರಿ ನಾಗರಹಾವುಗಳ ಮಿಥ್ಯೆಯು ಜನಪ್ರಿಯವಾಗಿದೆ. ಅವುಗಳಿಗೆ ದೃಢನಿಷ್ಠೆಯುಳ್ಳ, ಒಂದೇ ಸಂಗಾತಿ ಇದೆಯೆಂದು ಹೇಳಲಾಗುತ್ತದೆ. ಆ ಸಂಗಾತಿಯು ಕೊಲ್ಲಲ್ಪಟ್ಟರೆ, ಆ ಕೊಲ್ಲಲ್ಪಟ್ಟ ಹಾವಿನ ಕಣ್ಣುಗಳಲ್ಲಿ ನಾಗರಹಾವಿಗೆ ಕೊಂದವನ ರೂಪವನ್ನು ಕಾಣುವ ಸಾಮರ್ಥ್ಯವಿರುತ್ತದೆ ಮತ್ತು ಅದು ಪ್ರತೀಕಾರವನ್ನು ಹುಡುಕುತ್ತ ಹೋಗುತ್ತದೆ. ಇದು ಅನೇಕ ಚಲನಚಿತ್ರಗಳಿಗೆ ಸ್ವಾರಸ್ಯಕರವಾದ ಆಧಾರವಾಗಿ ಪರಿಣಮಿಸುತ್ತದೆ. ಕಥೆಯಲ್ಲಿ ಹಾವು ನೃತ್ಯಗಳು ಪ್ರಮುಖವಾಗಿರುತ್ತವೆ; ಸಂಗೀತವು ಹಾವಾಡಿಗನ ಕೊಳಲ ಗಾನದಂತಿರುತ್ತದೆ, ನರ್ತಕರು ಹಾವಿನ ಚಲನೆಯನ್ನು—ನೆಲದ ಮೇಲೆ ಹರಿದಾಡುವುದನ್ನೂ—ಅನುಕರಿಸುತ್ತಾರೆ.
ಭಾರತದ ರಾಜಸ್ತಾನದ ಒಂದು ಉತ್ಸವದಲ್ಲಿ, ಶಕ್ತಿ ಎಂಬ ಸಾಕ್ಷ್ಯಚಿತ್ರವನ್ನು ತೆಗೆಯಲಾಯಿತು. ಇಲ್ಲಿ ಮರುಭೂಮಿಯಲ್ಲಿ ಪ್ರತಿ ಆಗಸ್ಟ್ ತಿಂಗಳಿನಲ್ಲಿ ನೂರಾರು ಸಾವಿರ ಮಂದಿ ಹಾವಿನ ಆರಾಧಕರು ಸಂಧಿಸುತ್ತಾರೆ. ಸುಡುತ್ತಿರುವ ಸೂರ್ಯನ ಕೆಳಗೆ ಮತ್ತು 50 ಡಿಗ್ರಿ ಸೆಲ್ಸಿಯಸ್ಗಳಿಗೂ ಹೆಚ್ಚಾಗುವ ತಾಪಮಾನದಲ್ಲಿ, ಅವರು ಕಬ್ಬಿಣದ ಸರಳುಗಳಿಂದ ಕಶಾ ಪ್ರಹಾರಮಾಡಿಕೊಂಡು, ಆ ಸುಡುವ ಮರಳಿನಲ್ಲಿ ಎರಡು ಕಿಲೊಮೀಟರುಗಳಿಗೂ ಹೆಚ್ಚು ದೂರ ತಮ್ಮ ಹೊಟ್ಟೆಯ ಮೇಲೆ ಹರಿದಾಡುತ್ತಾ ಗೋಘ ಎಂಬ ಒಂದು ಹಾವು ದೇವತೆಯ ದೇವಸ್ಥಾನಕ್ಕೆ ಹೋಗುತ್ತಾರೆ. ಸಾ.ಶ. ಹತ್ತನೆಯ ಶತಮಾನದ ಒಬ್ಬ ಐತಿಹಾಸಿಕ ಅರಸನಾದ ಗೋಘನು ತನ್ನ ಜನರನ್ನು ಮುಸ್ಲಿಮ್ ಆಕ್ರಮಣಕಾರರಿಂದ, ಶತ್ರುವನ್ನು ಹಾವುಭರಿತ ಪ್ರದೇಶಕ್ಕೆ ನಡೆಸಿ ಅಲ್ಲಿ ಆ ಸೈನ್ಯವು ಹಾವುಕಡಿತಗಳಿಂದ ನಿರ್ನಾಮವಾಗುವಂತೆ ಮಾಡಿ ರಕ್ಷಿಸಿದನೆಂದು ಹೇಳಲಾಗುತ್ತದೆ.
[ಪುಟ 27 ರಲ್ಲಿರುವ ಚೌಕ]
ನಾಗರಹಾವಿನಿಂದ ಕಾಪಾಡಲ್ಪಟ್ಟದ್ದು
ಭಾರತದ ಸಾಸ್ತುರ್ ಹಳ್ಳಿಯ ಎರಡು ಕುಟುಂಬಗಳು, ನಾಗರಹಾವೊಂದಕ್ಕೆ ಕೃತಜ್ಞವಾಗಿರಲು ಕಾರಣವನ್ನು ಹೊಂದಿವೆ. 1993, ಸೆಪ್ಟೆಂಬರ್ 30ರಂದು ಬೆಳಗ್ಗೆ ಸುಮಾರು 3:50ಕ್ಕೆ, ತಮ್ಮ ಮನೆಯಿಂದ ಹರಿದಾಡಿಕೊಂಡುಹೊರಟ ನಾಗರಹಾವೊಂದರ ಗಟ್ಟಿಯಾದ ಬುಸುಗುಟ್ಟುವಿಕೆಯಿಂದ ಅವರು ಎಚ್ಚರಗೊಳಿಸಲ್ಪಟ್ಟರು. ಅದನ್ನು ಕೊಲ್ಲಲಿಕ್ಕಾಗಿ ಅವರು ಅದನ್ನು ಹೊಲಗಳೊಳಗೆ ಓಡಿಸಿಕೊಂಡುಹೋದರು. ಬೆಳಗ್ಗೆ 4:00ಕ್ಕೆ ಮಧ್ಯ ಭಾರತದಲ್ಲಿನ ಭೀಕರವಾದ ಭೂಕಂಪವು, ಬಹುಮಟ್ಟಿಗೆ ಪ್ರತಿಯೊಬ್ಬರನ್ನೂ ಕೊಲ್ಲುತ್ತಾ ಅವರ ಹಳ್ಳಿಯನ್ನು ನೆಲಸಮಗೊಳಿಸಿತು. ಆ ನಾಗರಹಾವಿನ ಮುನ್ನೆಚ್ಚರಿಕೆಯ ವ್ಯವಸ್ಥೆಯ ಫಲವಾಗಿ, ಆ ಎರಡು ಕುಟುಂಬಗಳು ಬದುಕಿ ಉಳಿದವು!
[Pictures on page 12, 13]
ಏಷಿಯದ ನಾಗರಹಾವಿನ ಹಿಂಭಾಗ ಮತ್ತು ಮುಂಭಾಗದ ನೋಟಗಳು
ಒಳಸೇರಿಕೆ: ಒಂದು ಕರಿಯ ನಾಗರಹಾವು ಬೆಚ್ಚಗಿನ ಬಂಡೆಯೊಂದರ ಮೇಲೆ ಸ್ವತಃ ಬಿಸಿಲು ಕಾಯಿಸಿಕೊಳ್ಳುತ್ತಿರುವಾಗ, ತನ್ನ ಹೆಡೆಯನ್ನು ತೆರೆಯುತ್ತದೆ
[ಕೃಪೆ]
Pictures on pages 12, to 16: A. N. Jagannatha Rao, Trustee, Madras Snake Park Trust
[ಪುಟ 25 ರಲ್ಲಿರುವ ಚಿತ್ರಗಳು]
ಒಂದು ಕರಿಯ ನಾಗರಹಾವಿನ ಮುಂಭಾಗ ಮತ್ತು ಹಿಂಭಾಗದ ನೋಟಗಳು