ಬೈಬಲಿನ ದೃಷ್ಟಿಕೋನ
ನೀವು ಇತರರ ಮನನೋಯಿಸುವಾಗ ಮಾಡಬೇಕಾದ ವಿಷಯಗಳು
ಏನೋ ತಪ್ಪಿದೆ. ನಿಮಗದು ಖಂಡಿತವಾಗಿ ಗೊತ್ತಿದೆ. ನಿಮ್ಮ ಕ್ರೈಸ್ತ ಸಹೋದರನು ನಿಮ್ಮನ್ನು ಉದ್ದೇಶಪೂರ್ವಕವಾಗಿ ವರ್ಜಿಸುತ್ತಿದ್ದಾನೆ. ಅವನನ್ನು ಕಾಡುತ್ತಿರುವುದು ಏನೆಂದು ಅವನು ಹೇಳಿರುವುದಿಲ್ಲ, ಆದರೆ ಅವನು ಬರಿ ಹೆಲೊ ಹೇಳುತ್ತಾನೆ—ಅದೂ ನೀವು ಅವನನ್ನು ಮೊದಲು ವಂದಿಸಿದರೆ ಮಾತ್ರ! ಏನು ತಪ್ಪಿದೆಯೆಂಬುದನ್ನು ಕಂಡುಹಿಡಿಯಲು ನೀವು ಅವನನ್ನು ಸಮೀಪಿಸಬೇಕೊ?
‘ಅದು ಅವನ ಸಮಸ್ಯೆ,’ ಎಂದು ನೀವು ಯೋಚಿಸಬಹುದು. ‘ಅವನಿಗೆ ನನ್ನ ವಿರುದ್ಧ ಏನಾದರೂ ಇದ್ದರೆ, ಅವನು ಬಂದು ಅದರ ಕುರಿತು ನನ್ನೊಂದಿಗೆ ಮಾತಾಡಬೇಕು.’ ನಿಶ್ಚಯವಾಗಿ, ಮನನೋಯಿಸಲ್ಪಟ್ಟ ವ್ಯಕ್ತಿಯು ತನ್ನ ಸಹೋದರನೊಂದಿಗೆ ಶಾಂತಿಯನ್ನು ಸ್ಥಾಪಿಸಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಬೇಕೆಂದು ಬೈಬಲು ಉತ್ತೇಜಿಸುತ್ತದೆ. (ಹೋಲಿಸಿ ಮತ್ತಾಯ 18:15-17.) ಆದರೆ ಮನನೋಯಿಸಿದವನ ಕುರಿತೇನು? ಯಾವ ಹೊಣೆಯು—ಯಾವುದಾದರೂ ಇರುವಲ್ಲಿ—ಅವನ ಮೇಲಿದೆ?
ತನ್ನ ಪರ್ವತ ಪ್ರಸಂಗದಲ್ಲಿ ಯೇಸು ಹೇಳಿದ್ದು: “ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು [“ಮತ್ತೆ ಸ್ನೇಹ ಬೆಳೆಸು,” NW]; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.” (ಮತ್ತಾಯ 5:23, 24) ಯೇಸುವಿನ ಮಾತುಗಳು, ಇಲ್ಲಿ ಮನನೋಯಿಸಿದವನ ಕಡೆಗೆ ಉದ್ದೇಶಿಸಲ್ಪಟ್ಟಿವೆ ಎಂಬುದನ್ನು ಗಮನಿಸಿರಿ. ವಿಷಯವನ್ನು ಬಗೆಹರಿಸುವ ಯಾವ ಹೊಣೆ ಅವನಿಗಿದೆ? ಅದನ್ನು ಉತ್ತರಿಸಲು, ಯೇಸುವಿನ ಮಾತುಗಳು ತನ್ನ ಪ್ರಥಮ ಶತಮಾನದ ಯೆಹೂದಿ ಕೇಳುಗರಿಗೆ ಏನನ್ನು ಅರ್ಥೈಸಿದವೆಂಬುದನ್ನು ನಾವು ಪರಿಗಣಿಸೋಣ.
“ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತರಕ್ಕೆ ತಂದಾಗ”
ಯೇಸು ಇಲ್ಲಿ ಸ್ಪಷ್ಟವಾದ ಒಂದು ವಿವರಣೆಯನ್ನು ಕೊಡುತ್ತಾನೆ: ಒಬ್ಬ ಯೆಹೂದಿ ಆರಾಧಕನು ಯೆರೂಸಲೇಮಿಗೆ, ವಾರ್ಷಿಕ ಹಬ್ಬಗಳಲ್ಲಿ ಒಂದಕ್ಕೆ ಬಂದಿದ್ದಾನೆ. ಯೆಹೋವನಿಗೆ ಅರ್ಪಿಸಲು, ಅವನಲ್ಲಿ ಒಂದು ಕೊಡುಗೆ—ಬಹುಶಃ ಒಂದು ಪ್ರಾಣಿ—ಇದೆ.a ಒಂದು ಬಲಿಯನ್ನು ಅರ್ಪಿಸುವುದು, ಖಂಡಿತವಾಗಿಯೂ ಒಂದು ಅರ್ಥರಹಿತ ಸಂಸ್ಕಾರವಾಗಿರಲಿಲ್ಲ. ಯೆಹೂದ್ಯಮತ—ಆಚರಣೆ ಮತ್ತು ವಿಶ್ವಾಸ (ಇಂಗ್ಲಿಷ್) ಎಂಬ ಪುಸ್ತಕವು ವಿವರಿಸುವುದು: “ಕೊಬ್ಬಿದ, ಕಳಂಕರಹಿತ ಬಲಿಪಶುಗಳನ್ನು ಆರಿಸಿಕೊಳ್ಳುವುದು, ಪರಿಣತರ ಮೂಲಕ ಅವುಗಳು ಪರೀಕ್ಷಿಸಲ್ಪಡುವುದನ್ನು ನೋಡುವುದು, ಸುಡುತ್ತಿರುವ ಬಲಿಪೀಠದ ಕೆಲವು ಗಜಗಳ ತನಕ ಅವುಗಳೊಂದಿಗೆ ನಡೆಯುವುದು, ಅವುಗಳನ್ನು ಒಪ್ಪಿಸುವುದು, ತಲೆಯ ಮೇಲೆ ಕೈಗಳನ್ನು ಇಡುವುದು, ಅಶುದ್ಧತೆ ಅಥವಾ ದೋಷದ ಪಾಪನಿವೇದನೆ ಮಾಡುವುದು, ಇಲ್ಲದಿದ್ದರೆ ಪ್ರಾಣಿಯನ್ನು ಸಮರ್ಪಿಸುವುದು, ಅದರ ಕತ್ತನ್ನು ಕೊಯ್ಯುವುದು, ಅಥವಾ ಕೇವಲ ಅದನ್ನು ಹಿಡಿದುಕೊಂಡಿರುವುದೂ—ಇವು ಆ ಕ್ಷಣದ ಅರ್ಥವತ್ತತೆ ಮತ್ತು ಗಂಭೀರತೆಯನ್ನು ಖಾತ್ರಿಪಡಿಸಿದವು. . . . ಇಡೀ ಸೇವೆಯನ್ನು ದೇವರು ಆಜ್ಞಾಪಿಸಿದ್ದನೆಂದು ನಂಬಿದ ಯಾರೊಬ್ಬನೂ . . . ಅದರಲ್ಲಿ ಭಾವನಾತ್ಮಕವಾಗಿ ಒಳಗೊಳ್ಳದೆ ಅದನ್ನು ಮುಗಿಸಲು ಸಾಧ್ಯವಿರುತ್ತಿರಲಿಲ್ಲ.”
ಹೀಗೆ ಮತ್ತಾಯ5: 23, 24 ರಲ್ಲಿರುವ ಯೇಸುವಿನ ಮಾತುಗಳು ತನ್ನ ಕೇಳುಗರನ್ನು, ಒಬ್ಬ ಯೆಹೂದಿ ಆರಾಧಕನಿಗೆ ಅರ್ಥ ಮತ್ತು ಭಯಭಕ್ತಿಯಿಂದ ತುಂಬಿದ್ದ ಒಂದು ಗಳಿಗೆಗೆ ವರ್ಗಾಯಿಸುತ್ತವೆ. ಒಬ್ಬ ಬೈಬಲ್ ಪಂಡಿತನು, ದೃಶ್ಯವನ್ನು ಈ ರೀತಿಯಲ್ಲಿ ವರ್ಣಿಸುತ್ತಾನೆ: “ಆರಾಧಕನು ಆಲಯವನ್ನು ಪ್ರವೇಶಿಸಿದ್ದಾನೆ; ಅದರ ಅಂಗಳಗಳ ಶ್ರೇಣಿಯನ್ನು—ಅನ್ಯಜನಾಂಗಗಳ ಅಂಗಳ, ಸ್ತ್ರೀಯರ ಅಂಗಳ, ಪುರುಷರ ಅಂಗಳವನ್ನು—ಅವನು ದಾಟಿದ್ದಾನೆ. ಅದರ ಆಚೆ, ಸಾಮಾನ್ಯ ಮನುಷ್ಯನು ಹೋಗಸಾಧ್ಯವಿರದ ಯಾಜಕರ ಅಂಗಳವು ಇತ್ತು. ಆರಾಧಕನು ಅಡ್ಡಪಟ್ಟಿಯ ಬಳಿ, ಯಾಜಕನಿಗೆ ತನ್ನ ಬಲಿಪಶುವನ್ನು ಒಪ್ಪಿಸಲು ಸಿದ್ಧನಾಗಿ ನಿಂತಿದ್ದಾನೆ; ಅವನ ಕೈಗಳು ಪಾಪನಿವೇದನೆ ಮಾಡಲು [ಪ್ರಾಣಿಯ ತಲೆಯ] ಮೇಲಿವೆ.”
ಆ ನಿರ್ಧಾರಕ ಗಳಿಗೆಯಲ್ಲಿ, ತನ್ನ ಸಹೋದರನಿಗೆ ತನ್ನ ವಿರುದ್ಧ ಏನೋ ಇದೆಯೆಂದು ಆರಾಧಕನು ಜ್ಞಾಪಿಸಿಕೊಳ್ಳುತ್ತಾನೆ. ತನ್ನ ಸ್ವಂತ ಮನಸ್ಸಾಕ್ಷಿಯು ಇದನ್ನು ಅವನಿಗೆ ಹೇಳುತ್ತಿರಬಹುದು, ಅಥವಾ ತನ್ನ ಕಡೆಗೆ ತನ್ನ ಸಹೋದರನ ಮನೋಭಾವದಿಂದ, ನೊಂದ ಮನಸ್ಸಿನ ಯಾವುದೊ ಅನಿಸಿಕೆ ಇದೆಯೆಂದು ಅವನು ಗ್ರಹಿಸಿದ್ದಿರಬಹುದು. ಅವನು ಏನನ್ನು ಮಾಡಬೇಕು?
‘ನಿನ್ನ ಕಾಣಿಕೆಯನ್ನು . . . ಬಿಟ್ಟುಹೋಗು’
‘ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗು’ ಎಂದು ಯೇಸು ವಿವರಿಸುತ್ತಾನೆ. ಏಕೆ? ಆ ಗಳಿಗೆಯಲ್ಲಿ ಯೆಹೋವನಿಗೆ ಒಂದು ಯಜ್ಞವನ್ನು ಅರ್ಪಿಸುವುದಕ್ಕಿಂತ ಯಾವುದು ಹೆಚ್ಚು ಪ್ರಾಮುಖ್ಯವಾಗಿರಸಾಧ್ಯವಿದೆ? “ಮೊದಲು ನಿನ್ನ ಸಹೋದರನ ಸಂಗಡ ಮತ್ತೆ ಸ್ನೇಹ ಬೆಳೆಸು,” ಎಂದು ಯೇಸು ಮುಂದೆ ವಿವರಿಸುತ್ತಾನೆ, “ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.” ಆದುದರಿಂದ ಆರಾಧಕನು ತನ್ನ ಅರ್ಪಣೆಯನ್ನು ಸಜೀವವಾಗಿ ಸರ್ವಾಂಗ ಹೋಮದ ವೇದಿಯ ಬಳಿಯಲ್ಲಿ ಬಿಟ್ಟು, ಮನನೋಯಿಸಲ್ಪಟ್ಟ ತನ್ನ ಸಹೋದರನನ್ನು ಹುಡುಕಲು ಹೋಗುತ್ತಾನೆ.
ಅದು ಹಬ್ಬವಾಗಿರುವುದಿಂದ, ಯೆರೂಸಲೇಮಿನಲ್ಲಿ ಒಟ್ಟುಗೂಡಿರುವ ಯಾತ್ರಿಕರ ನಡುವೆ ಮನನೋಯಿಸಲ್ಪಟ್ಟ ಸಹೋದರನು ನಿಸ್ಸಂದೇಹವಾಗಿ ಇದ್ದಾನೆ. ಇಕ್ಕಟ್ಟಾದ ರಸ್ತೆಗಳು ಮತ್ತು ಒಟ್ಟಿಗೆ ನಿಕಟವಾಗಿ ಗುಂಪುಕೂಡಿಸಲ್ಪಟ್ಟ ಮನೆಗಳೊಂದಿಗೆ, ಯೆರೂಸಲೇಮ್ ದೊಡ್ಡ ಗಾತ್ರದ ಜನಸಂಖ್ಯೆಯನ್ನು ಹೊಂದಿದೆ. ಆದರೆ ಇದೊಂದು ಹಬ್ಬವಾಗಿದೆ ಮತ್ತು ನಗರವು ಭೇಟಿಕಾರರಿಂದ ತುಂಬಿದೆ.b
ಒಂದೇ ಪಟ್ಟಣದಿಂದ ಬಂದ ಜನರು ಒಟ್ಟಿಗೆ ಸಂಚರಿಸಿ, ಬೀಡು ಬಿಟ್ಟರೂ, ಯಾರಾದರೊಬ್ಬರನ್ನು ಕಂಡುಹಿಡಿಯಲು ಕಿಕ್ಕಿರಿದ ನಗರದೊಳಗೆ ಸುತ್ತಾಡುವುದು ಒಂದಿಷ್ಟು ಪ್ರಯತ್ನವನ್ನು ಕೇಳಿಕೊಳ್ಳುವುದು. ಉದಾಹರಣೆಗೆ, ಪರ್ಣಶಾಲೆಗಳ ಹಬ್ಬದ ಸಮಯದಲ್ಲಿ, ಭೇಟಿಕಾರರು ನಗರದ ಎಲ್ಲೆಡೆಯೂ ಮತ್ತು ಯೆರೂಸಲೇಮಿನ ಸುತ್ತಲೂ, ರಸ್ತೆಗಳು ಮತ್ತು ತೋಟಗಳಲ್ಲಿ ಪರ್ಣಶಾಲೆಗಳನ್ನು ಸ್ಥಾಪಿಸಿದರು. (ಯಾಜಕಕಾಂಡ 23:34, 42, 43) ಆದರೂ, ಅವನನ್ನು ಕಂಡುಕೊಳ್ಳುವ ತನಕ ಯೆಹೂದಿ ಆರಾಧಕನು ತನ್ನ ಮನನೋಯಿಸಲ್ಪಟ್ಟ ಸಹೋದರನಿಗಾಗಿ ಹುಡುಕಬೇಕು. ಅನಂತರ ಏನು?
“ನಿನ್ನ ಸಹೋದರನ ಸಂಗಡ ಮತ್ತೆ ಸ್ನೇಹ ಬೆಳೆಸು,” ಎಂದು ಯೇಸು ಹೇಳುತ್ತಾನೆ. “ಮತ್ತೆ ಸ್ನೇಹ ಬೆಳೆಸು,” ಎಂಬುದಾಗಿ ತರ್ಜುಮೆ ಮಾಡಲ್ಪಟ್ಟ ಗ್ರೀಕ್ ಅಭಿವ್ಯಕ್ತಿಯು, ಕ್ರಿಯಾಪದವಾದ (ಡಿಆ್ಯಆಲ್ಲಾಸ್ಸೊ) ಇಂದ ಬರುತ್ತದೆ, ಇದು “‘ಒಂದು ಮಾರ್ಪಾಟು, ವಿನಿಮಯವನ್ನು ಜಾರಿಗೆ ತರಲು,’ ಮತ್ತು ಹೀಗೆ ‘ಸಂಧಾನಮಾಡು’”ವುದನ್ನು ಅರ್ಥೈಸುತ್ತದೆ. ಮನನೋಯಿಸಲ್ಪಟ್ಟ ತನ್ನ ಸಹೋದರನನ್ನು ಕಂಡುಹಿಡಿಯಲು ಗಣನೀಯ ಪ್ರಯತ್ನವನ್ನು ಮಾಡಿಯಾದ ಬಳಿಕ, ಯೆಹೂದಿ ಆರಾಧಕನು ಅವನೊಂದಿಗೆ ಮತ್ತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾನೆ. ಆ ಮೇಲೆ, ಅವನು ಆಲಯಕ್ಕೆ ಹಿಂದಿರುಗಿ ತನ್ನ ಕೊಡುಗೆಯನ್ನು ಅರ್ಪಿಸಬಹುದೆಂದು ಯೇಸು ಹೇಳುತ್ತಾನೆ, ಏಕೆಂದರೆ ದೇವರು ಈಗ ಅದನ್ನು ಸ್ವೀಕರಿಸುವನು.
ಹೀಗೆ, ಮತ್ತಾಯ 5:23, 24ರಲ್ಲಿರುವ ಯೇಸುವಿನ ಮಾತುಗಳು ಒಂದು ನಿರ್ಧಾರಕ ಪಾಠವನ್ನು ಕಲಿಸುತ್ತವೆ: ಸಂಧಾನ, ಅಥವಾ ಶಾಂತಿ, ಯಜ್ಞದ ಮೊದಲು ಬರುತ್ತದೆ. ನಮ್ಮ ಜೊತೆ ಆರಾಧಕರನ್ನು ನಾವು ಉಪಚರಿಸುವ ವಿಧವು ದೇವರೊಂದಿಗಿನ ನಮ್ಮ ಸಂಬಂಧದ ಮೇಲೆ ನೇರವಾದ ಪ್ರಭಾವವನ್ನು ಹೊಂದಿದೆ.—1 ಯೋಹಾನ 4:20.
ನೀವು ಇತರರ ಮನನೋಯಿಸಿದಾಗ ಮಾಡಬೇಕಾದ ವಿಷಯಗಳು
ಹಾಗಾದರೆ, ಈ ಲೇಖನದ ಆರಂಭದಲ್ಲಿ ವರ್ಣಿಸಲಾದ ಸನ್ನಿವೇಶದಲ್ಲಿ ನೀವು ನಿಮ್ಮನ್ನು ಕಂಡುಕೊಂಡರೆ—ಒಬ್ಬ ಜೊತೆ ಆರಾಧಕನ ಮನನೋಯಿಸಿದ್ದೀರೆಂದು ನೀವು ಗ್ರಹಿಸಿದರೆ, ಆಗೇನು? ನೀವು ಏನು ಮಾಡಬೇಕು?
ಯೇಸುವಿನ ಸಲಹೆಯನ್ನು ಅನ್ವಯಿಸುತ್ತಾ, ನಿಮ್ಮ ಸಹೋದರನನ್ನು ಸಮೀಪಿಸಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಿರಿ. ಯಾವ ಉದ್ದೇಶದಿಂದ? ಮನನೋಯಿಸಲ್ಪಡುವ ಯಾವ ಕಾರಣವೂ ಇರುವುದಿಲ್ಲವೆಂಬುದನ್ನು ಅವನಿಗೆ ಮನಗಾಣಿಸಲಿಕ್ಕೊ? ಖಂಡಿತವಾಗಿಯೂ ಇಲ್ಲ! ಸಮಸ್ಯೆಯು ಸಾಧಾರಣವಾದ ಅಪಾರ್ಥಕ್ಕಿಂತ ಹೆಚ್ಚಾಗಿರಬಹುದು. “ಮತ್ತೆ ಸ್ನೇಹ ಬೆಳೆಸು,” ಎಂದು ಯೇಸು ಹೇಳಿದನು. ಸಾಧ್ಯವಿರುವಲ್ಲಿ, ಅವನ ಹೃದಯದಿಂದ ದ್ವೇಷವನ್ನು ತೆಗೆದುಹಾಕಿರಿ. (ರೋಮಾಪುರ 14:19) ಅದನ್ನು ಸಾಧಿಸಲು, ನಿಮಗೆ ಅವನ ನೊಂದ ಭಾವನೆಗಳನ್ನು ನಿರಾಕರಿಸುವುದಲ್ಲ, ಅಂಗೀಕರಿಸಬೇಕಾಗಬಹುದು. ನೀವು ಹೀಗೆ ಕೇಳಿಕೊಳ್ಳುವ ಅಗತ್ಯವೂ ಇರಬಹುದು, ‘ತಿದ್ದುಪಡಿಗಳನ್ನು ಮಾಡಲು ನಾನೇನು ಮಾಡಬಲ್ಲೆ?’ ಅನೇಕ ವೇಳೆ, ಅಗತ್ಯವಾಗಿರುವಂತಹದ್ದು ಒಂದು ಪ್ರಾಮಾಣಿಕವಾದ ಕ್ಷಮಾಯಾಚನೆಯೇ. ಆದರೆ, ಕೆಲವು ವಿದ್ಯಮಾನಗಳಲ್ಲಿ, ತನ್ನ ಅನಿಸಿಕೆಗಳನ್ನು ವಿಶ್ಲೇಷಿಸಲು ಮನನೋಯಿಸಲ್ಪಟ್ಟ ವ್ಯಕ್ತಿಗೆ ಒಂದಿಷ್ಟು ಸಮಯವು ಬೇಕಾಗಬಹುದು.
ಆದರೆ, ಸತತ ಪ್ರಯತ್ನಗಳ ಹೊರತೂ ನೀವು ಒಂದು ಸಂಧಾನವನ್ನು ಜಾರಿಗೆ ತರಲು ಅಶಕ್ತರಾಗಿರುವಲ್ಲಿ ಆಗೇನು? ರೋಮಾಪುರ 12:18 ಹೇಳುವುದು: “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.” ಹೀಗೆ ಒಮ್ಮೆ ನೀವು ಮತ್ತೆ ಸ್ನೇಹ ಬೆಳೆಸಲು ನಿಮ್ಮನ್ನು ವಿನಿಯೋಗಿಸಿಕೊಂಡಿರುವಲ್ಲಿ, ನಿಮ್ಮ ಆರಾಧನೆಯನ್ನು ಸ್ವೀಕರಿಸಲು ಯೆಹೋವನು ಸಂತೋಷಿಸುವನೆಂಬ ಭರವಸೆ ನಿಮಗಿರಬಲ್ಲದು.
[ಅಧ್ಯಯನ ಪ್ರಶ್ನೆಗಳು]
a ಯಜ್ಞಾರ್ಪಿತ ಅರ್ಪಣೆಗಳನ್ನು ತರುವ ಸಾಮಾನ್ಯ ಸಮಯವು, ಮೂರು ಕಾಲಿಕ ಹಬ್ಬಗಳ—ಪಸ್ಕ, ಪಂಚಾಶತ್ತಮ, ಮತ್ತು ಪರ್ಣಶಾಲೆಗಳು—ಸಮಯದಲ್ಲಾಗಿತ್ತು.—ಧರ್ಮೋಪದೇಶಕಾಂಡ 16:16, 17.
b ಹಬ್ಬಗಳಿಗಾಗಿ ಪುರಾತನ ಯೆರೂಸಲೇಮಿಗೆ ಹಿಂಡು ಹಿಂಡಾಗಿ ಬಂದ ಯಾತ್ರಿಕರ ಸಂಖ್ಯೆಗಳ ವಿಷಯದಲ್ಲಿ ಅಂದಾಜುಗಳು ವಿಭಿನ್ನವಾಗಿವೆ. ಬಹುಮಟ್ಟಿಗೆ 30 ಲಕ್ಷ ಯೆಹೂದ್ಯರು ಪಸ್ಕ ಹಬ್ಬಕ್ಕೆ ಹಾಜರಿದ್ದರೆಂದು, ಪ್ರಥಮ ಶತಮಾನದ ಯೆಹೂದಿ ಇತಿಹಾಸಗಾರನಾದ ಜೋಸೀಫಸ್ ಅಂದಾಜು ಮಾಡಿದನು.—ದ ಜೂವಿಷ್ ವಾರ್, II, 280 (xiv, 3); VI, 425 (ix, 3).