ನೀವು ದೇವರ ಮೇಲೆ ಭರವಸೆಯಿಡಬಲ್ಲಿರಿ
ದೇವರ ಮೇಲೆ ಮತ್ತು ಆತನ ವಾಕ್ಯವಾದ ಬೈಬಲಿನ ಮೇಲೆ ನೀವು ಸಂಪೂರ್ಣವಾಗಿ ಭರವಸೆಯಿಡಬಲ್ಲಿರಿ. ಜೀವಮಾನದಲ್ಲಿ ದೇವರ ಮೇಲೆ ಭರವಸೆಯಿಟ್ಟ ಬಳಿಕ, 100 ವರ್ಷ ವಯಸ್ಸು ದಾಟಿರುವ ಒಬ್ಬ ಮನುಷ್ಯನು ತನ್ನ ವಿಶ್ವಾಸಕ್ಕಾಗಿ ಈ ಕಾರಣವನ್ನು ಕೊಟ್ಟನು: “ಇಗೋ!” ಅವನು ಹೇಳಿದ್ದು, “ನಾನು ಇಂದು ಭೂಲೋಕದವರೆಲ್ಲರೂ ಹೋಗುವ ಮಾರ್ಗದಲ್ಲಿ ಹೋಗುತ್ತಿದ್ದೇನೆ, ಮತ್ತು ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದಿರುವ ಎಲ್ಲಾ ಒಳ್ಳೆಯ ನುಡಿಗಳಲ್ಲಿ ಒಂದೂ ವ್ಯರ್ಥವಾಗಿಲ್ಲ ಎಂದು ನಿಮ್ಮ ಸಂಪೂರ್ಣ ಹೃದಯಗಳಿಂದಲೂ ನಿಮ್ಮ ಸಂಪೂರ್ಣ ಪ್ರಾಣಗಳಿಂದಲೂ ನೀವು ಚೆನ್ನಾಗಿ ತಿಳಿದಿದ್ದೀರಿ. ಅವೆಲ್ಲವೂ ನಿಮಗೋಸ್ಕರ ನೆರವೇರಿದವು. ಅವುಗಳಲ್ಲಿ ಒಂದೂ ವ್ಯರ್ಥವಾಗಿಲ್ಲ.”—ಯೆಹೋಶುವ 23:14, NW.
ಪುರಾತನ ಇಸ್ರಾಯೇಲ್ನ ಒಬ್ಬ ಮುಖಂಡನಾದ ಈ ಮನುಷ್ಯ ಯೆಹೋಶುವನು, ದೇವರ ಮತ್ತು ಆತನ ವಾಕ್ಯದ ಪೂರ್ಣವಾದ ವಿಶ್ವಾಸಾರ್ಹತೆಯನ್ನು ಅನುಭವಿಸಿದನು. ದೇವರು ಇಸ್ರಾಯೇಲಿಗೆ ವಾಗ್ದಾನಿಸಿದ್ದೆಲ್ಲವೂ ನೆರವೇರಿತು. ಸೃಷ್ಟಿಕರ್ತನ ಮತ್ತು ಆತನ ವಾಕ್ಯದ ಕುರಿತಾಗಿ ಹೆಚ್ಚು ವಿಷಯಗಳನ್ನು ನೀವು ತಿಳಿದುಕೊಳ್ಳುವಲ್ಲಿ, ನೀವು ತದ್ರೀತಿಯ ಭರವಸೆಯನ್ನು ವಿಕಸಿಸಿಕೊಳ್ಳಬಲ್ಲಿರಿ. ತದನಂತರದ ದೇವರ ಆರಾಧಕನೊಬ್ಬನಾದ ರಾಜ ದಾವೀದನು ಅದನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದನು: “ಯೆಹೋವನೇ, ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು; ಯಾಕಂದರೆ ನಿನ್ನ ಮರೆಹೊಗುವವರನ್ನು ನೀನು ಕೈಬಿಡುವವನಲ್ಲ.”—ಕೀರ್ತನೆ 9:10.
ದೇವರು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ
ನೀವು ‘ದೇವರ ಹೆಸರನ್ನು ತಿಳಿದು’ಕೊಂಡಂತೆ ಮತ್ತು ಆ ಹೆಸರು ಏನನ್ನು ಅರ್ಥೈಸುತ್ತದೆಂಬುದನ್ನು—ಆತನ ಉದ್ದೇಶಗಳು, ಚಟುವಟಿಕೆಗಳು, ಮತ್ತು ಗುಣಗಳು—ಹೆಚ್ಚು ತಿಳಿದುಕೊಂಡಂತೆ, ನೀವು ಹೆಚ್ಚಾಗಿ ಆತನ ಮೇಲೆ ಭರವಸೆಯಿಡುವಿರಿ. ಆತನು ಎಂದಿಗೂ ನಿಮ್ಮನ್ನು ಆಶಾಭಂಗಗೊಳಿಸದಿರುವ ಅಥವಾ ತನ್ನ ವಾಗ್ದಾನವನ್ನು ಕಾಪಾಡಿಕೊಳ್ಳಲು ಸೋತುಹೋಗದ, ವಿಶ್ವಾಸಪಾತ್ರ ಸ್ನೇಹಿತನಾಗಿದ್ದಾನೆ. ಮತ್ತು ಆತನ ಪ್ರತಿನಿಧಿಗಳಾಗಿದ್ದೇವೆಂದು ಪ್ರತಿಪಾದಿಸುವ, ಹಾಗೂ ತದನಂತರ ಇತರರೊಂದಿಗೆ ವಿಶ್ವಾಸದ್ರೋಹದಿಂದ ವ್ಯವಹರಿಸುವ ಕಪಟಿಗಳಿಂದ ನಿರಾಶೆಗೊಳ್ಳದಿರ್ರಿ. ಅಂತಹ ಜನರು ಬೈಬಲಿನಿಂದ ಅವಿಶ್ವಾಸಾರ್ಹರೋಪಾದಿ ಗುರುತಿಸಲ್ಪಡುತ್ತಾರೆ. ಧಾರ್ಮಿಕ ಕಪಟಿಗಳು ಹೇಳುವುದು ಒಂದು ವಿಷಯವಾದರೆ, ಮಾಡುವುದು ಅದರ ವಿರುದ್ಧವಾದ ವಿಷಯವನ್ನೇ. ಅಪೊಸ್ತಲ ಪೇತ್ರನು ಎಚ್ಚರಿಕೆ ನೀಡಿದಂತೆ, ಅವರು ತಮ್ಮ ಮಂದೆಗಳ ಶೋಷಣೆ ಮಾಡುತ್ತಾರೆ. ಪೇತ್ರನು ಬರೆದುದು: “ಅವರ ನಿಮಿತ್ತ ಸತ್ಯಮಾರ್ಗಕ್ಕೆ ದೂಷಣೆ ಉಂಟಾಗುವದು. ಅವರು ದ್ರವ್ಯಾಶೆಯುಳ್ಳವರಾಗಿ ಕಲ್ಪನೆಯ ಮಾತುಗಳನ್ನು ಹೇಳುತ್ತಾ ನಿಮ್ಮಿಂದ ಲಾಭವನ್ನು ಸಂಪಾದಿಸಬೇಕೆಂದಿರುವರು.”—2 ಪೇತ್ರ 2:2, 3.
ಅಂತಹ ಜನರು ದೇವರನ್ನು ಪ್ರತಿನಿಧಿಸುವುದಿಲ್ಲ. ಅವರು ಆತನ ವಾಕ್ಯಕ್ಕೆ ಅಪಕೀರ್ತಿ ತರುತ್ತಾರೆ. ಬೈಬಲಿನಲ್ಲಿ ಪ್ರಕಟಿಸಲ್ಪಟ್ಟಿರುವಂತೆ ದೇವರ ಸ್ವಂತ ದಾಖಲೆಯನ್ನು ಮತ್ತು ಸಾಕ್ಷ್ಯವನ್ನು ನೀವಾಗಿಯೇ ಯಾಕೆ ಪರಿಶೀಲಿಸಬಾರದು? ‘ಆದರೆ, ಇನ್ನಿತರ ಯಾವುದೇ ಪುಸ್ತಕಕ್ಕಿಂತ ನಾನು ಬೈಬಲಿನ ಮೇಲೆಯೇ ಯಾಕೆ ಭರವಸೆಯಿಡಬೇಕು?’ ಎಂದು ನೀವು ಕೇಳಬಹುದು. ಇತಿಹಾಸದಾದ್ಯಂತವಾಗಿ ಅಸಂಖ್ಯಾತ ಧಾರ್ಮಿಕ ಕೃತ್ರಿಮೋಪಾಯಗಳು ಇದ್ದವೆಂಬುದು ಸತ್ಯವಾಗಿರುವುದಾದರೂ, ಬೈಬಲು ವಿಭಿನ್ನವಾಗಿದೆ. ಬೈಬಲಿನ ಮೇಲೆ ಭರವಸೆಯಿಡುವುದಕ್ಕಾಗಿರುವ ಈ ಮುಂದಿನ ಕಾರಣಗಳನ್ನು ಪರಿಗಣಿಸಿರಿ.
ಬೈಬಲಿನ ಮೇಲೆ ಭರವಸೆಯಿಡುವುದಕ್ಕಾಗಿರುವ ಕಾರಣಗಳು
ಬೈಬಲಿನ ವಾಗ್ದಾನಗಳು ಮತ್ತು ಪ್ರವಾದನೆಗಳು ಯಾವಾಗಲೂ ನೆರವೇರುವುದರಿಂದ, ನೀವು ಅದರ ಮೇಲೆ ಭರವಸೆಯಿಡಬಲ್ಲಿರಿ. ಇಲ್ಲಿ ಕೇವಲ ಒಂದು ಉದಾಹರಣೆಯಿದೆ. ಬಂಧಿತ ಇಸ್ರಾಯೇಲಿಗೆ ಅದು ನಂಬಲಸಾಧ್ಯವಾದದ್ದಾಗಿ ಕಂಡುಬಂದಿದ್ದಿರಬಹುದಾದರೂ, ಅವರನ್ನು ಬಲಿಷ್ಠವಾದ ಬಾಬೆಲಿನ ಬಂದಿವಾಸದಿಂದ ಬಿಡುಗಡೆಗೊಳಿಸಿ, ತಾನು ಅವರನ್ನು ಯೆರೂಸಲೇಮಿಗೆ ಪುನಃ ಸ್ಥಾಪಿಸುವೆನೆಂದು ಬೈಬಲಿನ ಗ್ರಂಥಕರ್ತನಾದ ಯೆಹೋವ ದೇವರು ವಾಗ್ದಾನಿಸಿದ್ದನು. ಇದು ಅಸಂಭವನೀಯವಾದ ಒಂದು ನಿರೀಕ್ಷೆಯಾಗಿ ತೋರಿತು, ಯಾಕೆಂದರೆ ಬಾಬೆಲು ಆ ದಿನದ ಪ್ರಧಾನ ಲೋಕ ಶಕ್ತಿಯಾಗಿತ್ತು ಮತ್ತು ಯೆರೂಸಲೇಮನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿತ್ತು. ಆದರೆ ಸುಮಾರು ಇನ್ನೂರು ವರ್ಷಗಳ ಮುಂದಾಗಿಯೇ, ಬಾಬೆಲನ್ನು ಅಧಿಕಾರಚ್ಯುತಿಗೊಳಿಸುವ ಮತ್ತು ತನ್ನ ಜನರನ್ನು ಸ್ವತಂತ್ರಗೊಳಿಸುವ ಒಬ್ಬನೋಪಾದಿ ಪಾರಸಿಯ ಅರಸನಾದ ಕೋರೆಷನನ್ನು ಸಹ ಯೆಹೋವನು ಹೆಸರಿಸಿದ್ದನು ಮತ್ತು ಬಾಬೆಲಿನ ನದಿಯ ರಕ್ಷಣಾ ವ್ಯವಸ್ಥೆಗಳು ಹೇಗೆ ವಿಫಲಗೊಳ್ಳುವವು ಎಂಬುದನ್ನು ಸಹ ಮುಂತಿಳಿಸಿದನು. ನೀವು ಈ ವೃತ್ತಾಂತವನ್ನು ಯೆಶಾಯ 44:24–45:4ರಲ್ಲಿ ಓದಬಲ್ಲಿರಿ.
ಈ ವಾಗ್ದಾನವು ಹೇಗೆ ನೆರವೇರಿಸಲ್ಪಟ್ಟಿತು ಎಂಬುದನ್ನು, ರೀಸನಿಂಗ್ ಫ್ರಮ್ ದ ಸ್ಕ್ರಿಪ್ಚರ್ಸ್ ಪುಸ್ತಕವು ವಿವರಿಸುತ್ತದೆ: “ಪ್ರವಾದನೆಯು ಬರೆಯಲ್ಪಟ್ಟಾಗ ಕೋರೆಷನು ಇನ್ನೂ ಜನಿಸಿರಲಿಲ್ಲ. . . . ಪ್ರವಾದನೆಯು ಸವಿಸ್ತಾರವಾಗಿ ಸಾ.ಶ.ಪೂ. 539ರಲ್ಲಿ ಆರಂಭವಾಗಿ, ನೆರವೇರಿಸಲ್ಪಟ್ಟಿತು. ಕೋರೆಷನು ಯೂಫ್ರೇಟೀಸ್ ನದಿಯ ನೀರುಗಳನ್ನು ಕೃತಕ ಸರೋವರವೊಂದರ ಕಡೆಗೆ ತಿರುಗಿಸಿದನು, ಪಟ್ಟಣದಲ್ಲಿನ ಉತ್ಸವಾಸಕ್ತ ಸಮಯದಲ್ಲಿ ಬಾಬೆಲಿನ ನದಿ ದ್ವಾರಗಳು ನಿರ್ಲಕ್ಷ್ಯದಿಂದ ತೆರೆದಿಡಲ್ಪಟ್ಟಿದ್ದವು, ಮತ್ತು ಕೋರೆಷನ ನೇತೃತ್ವದ ಕೆಳಗೆ ಬಾಬೆಲು ಮೇದ್ಯಯ ಮತ್ತು ಪಾರಸಿಯರ ವಶವಾಯಿತು. ತದನಂತರ, ಕೋರೆಷನು ದೇಶಭ್ರಷ್ಟರಾಗಿದ್ದ ಯೆಹೂದ್ಯರನ್ನು ಬಿಡುಗಡೆಗೊಳಿಸಿ, ಯೆರೂಸಲೇಮಿನಲ್ಲಿ ಯೆಹೋವನ ಆಲಯವನ್ನು ಪುನಃ ನಿರ್ಮಿಸಲಿಕ್ಕಾಗಿ ಉಪದೇಶಗಳೊಂದಿಗೆ ಅವರನ್ನು ಅಲ್ಲಿಗೆ ಹಿಂದಿರುಗಿ ಕಳುಹಿಸಿದನು.”a ದೇವರಿಂದ ಮಾಡಲ್ಪಟ್ಟ ಈ ರೀತಿಯ ಪ್ರತಿಯೊಂದು ವಾಗ್ದಾನವು, ಬೈಬಲಿನಲ್ಲಿ ಒಳಗೊಂಡಿರುವ ಪ್ರತಿಯೊಂದು ಪ್ರವಾದನೆಯು, ತಪ್ಪದೇ ನೆರವೇರಿದೆ.
ನೆರವೇರಿರುವ ಪ್ರವಾದನೆಯ ಇನ್ನೊಂದು ಉದಾಹರಣೆಯು, ನಮ್ಮ ಶತಮಾನದಲ್ಲಿ ಭರವಸೆಯು ಕಡಿಮೆಯಾಗಿರುವ ವಾಸ್ತವಾಂಶವೇ ಆಗಿದೆ. ಬೈಬಲು ಇದನ್ನು ನಾವು ಜೀವಿಸುತ್ತಿರುವ ಸಮಯದ ಒಂದು ವೈಶಿಷ್ಟ್ಯದೋಪಾದಿ ಮುಂತಿಳಿಸಿದೆ, ಏಕೆಂದರೆ ಇದು 1914ರಲ್ಲಿ Iನೆಯ ಲೋಕ ಯುದ್ಧದೊಂದಿಗೆ ಆರಂಭವಾದ ಶಕವನ್ನು “ಕಡೆಯ ದಿವಸಗಳು” ಎಂದು ಸಂಬೋಧಿಸುತ್ತದೆ ಮತ್ತು ಅವು “ನಿಭಾಯಿಸಲು ಕಷ್ಟಕರವಾಗಿರುವ ಕಠಿನ ಕಾಲಗಳ”ನ್ನು ತರುವವು ಎಂದು ಹೇಳುತ್ತದೆ. ನಮ್ಮ ದಿನದಲ್ಲಿ ಜನರು “ಸ್ವಪ್ರಿಯರು, . . . ಸ್ವಪ್ರತಿಷ್ಠೆಯುಳ್ಳವರು, ಅಹಂಕಾರಿಗಳು, . . . ಕೃತಘ್ನರು, ನಿಷ್ಠೆಯಿಲ್ಲದವರು, ಸ್ವಾಭಾವಿಕವಾದ ಮಮತೆಯಿಲ್ಲದವರು, ಯಾವ ಕರಾರಿಗೂ ಒಪ್ಪದವರು, ಚಾಡಿಹೇಳುವವರು, . . . ವಿಶ್ವಾಸಘಾತುಕರು, ಹಠಮಾರಿಗಳು, ಹೆಮ್ಮೆಯಿಂದ ಉಬ್ಬಿಕೊಂಡವರು” ಆಗಿರುವರೆಂದು ಅದು ತಿಳಿಯಪಡಿಸಿತ್ತು. ಮತ್ತು ಅದು ಇನ್ನೂ ಮುಂತಿಳಿಸಿದ್ದು: “ದುಷ್ಟರೂ ವಂಚಕರೂ . . . ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.” (2 ತಿಮೊಥೆಯ 3:1-4, 13, NW) ಅದನ್ನೇ ನಾವು ನಮ್ಮ ಸಮಯದಲ್ಲಿ ನೋಡಿದ್ದೇವೆ.
ಬೈಬಲು ಸಂಪೂರ್ಣವಾಗಿ ವಿಶ್ವಾಸಾರ್ಹವಾಗಿರುವುದರಿಂದ ನೀವು ಅದರ ಮೇಲೆ ಭರವಸೆಯಿಡಬಲ್ಲಿರಿ. ಯಾರೊಬ್ಬರೂ ಎಂದೂ ಬೈಬಲಿನ ವಿಶ್ವಾಸಾರ್ಹತೆಯನ್ನು ಯಶಸ್ವಿಕರವಾಗಿ ಪಂಥಾಹ್ವಾನಿಸಿದ್ದಿಲ್ಲ. ಪ್ರಖ್ಯಾತ ವಿಜ್ಞಾನಿಯಾದ ಸರ್ ಐಸಕ್ ನ್ಯೂಟನ್ ಹೇಳಿದ್ದು: “ಯಾವುದೇ ಲೌಕಿಕ ಇತಿಹಾಸದಲ್ಲಿರುವುದಕ್ಕಿಂತಲೂ, ಬೈಬಲಿನಲ್ಲಿ ವಿಶ್ವಾಸಾರ್ಹತೆಯ ಹೆಚ್ಚು ನಿಶ್ಚಿತ ಗುರುತುಗಳನ್ನು ನಾನು ಕಂಡುಕೊಳ್ಳುತ್ತೇನೆ.” ಹಿಟ್ಲರನ “ದಿನಚರಿಗಳ” ಹಾಗೆ ಇಲ್ಲಿ ಮೋಸಗೊಳಿಸುವಿಕೆಯು ಇಲ್ಲ! ಮತ್ತು ಇತರ ಪ್ರಾಚೀನ ಬರಹಗಳೊಂದಿಗೆ ಬೈಬಲು ಹೇಗೆ ಹೋಲುತ್ತದೆ? ದ ಬೈಬಲ್ ಫ್ರಮ್ ದ ಬಿಗಿನಿಂಗ್ ಎಂಬ ಪುಸ್ತಕವು ಹೇಳುವುದು: “ಬರಹವೊಂದರ ದೃಢೀಕರಣದ ಅನೇಕ ಪುರಾತನ ಎಂಎಸ್ಎಸ್. [ಹಸ್ತಪ್ರತಿಗಳು]ಗಳಲ್ಲಿ, ಮತ್ತು ಮೂಲ ಬರಹ ಹಾಗೂ ದೃಢೀಕರಿಸಲ್ಪಟ್ಟ ಎಂಎಸ್ಎಸ್.ನ ನಡುವೆ ಗತಿಸಿಹೋದ ಅನೇಕ ವರ್ಷಗಳಲ್ಲಿ, ಪ್ರಾಚೀನ ಸಾಹಿತ್ಯ ಬರಹ [ಹೋಮರ್, ಪ್ಲೆಟೊ, ಇನ್ನು ಮುಂತಾದವುಗಳು]ಗಳಿಗಿಂತ ಬೈಬಲು ಒಂದು ನಿರ್ಧರಿತ ಪ್ರಯೋಜನವನ್ನು ಅನುಭೋಗಿಸುತ್ತದೆ. . . . ಬೈಬಲ್ ಸಂಬಂಧಿತ ಹಸ್ತಪ್ರತಿಗಳಿಗೆ ಹೋಲಿಸುವಾಗ, ಒಟ್ಟಿಗೆ ಪ್ರಾಚೀನ ಸಾಹಿತ್ಯಗಳ ಎಂಎಸ್ಎಸ್. ಸ್ವಲ್ಪವೇ ಇವೆ. ಯಾವುದೇ ಪುರಾತನ ಪುಸ್ತಕವು ಬೈಬಲಿನಷ್ಟು ಚೆನ್ನಾಗಿ ದೃಢೀಕರಿಸಲ್ಪಟ್ಟಿರುವುದಿಲ್ಲ.” ಬೈಬಲಿನ ಕುರಿತಾದ ಎಲ್ಲಾ ವಿಷಯವು, ಅದು ಸಮಗ್ರವಾಗಿ ನೈಜವಾಗಿರುವುದರ ಕಡೆಗೆ ನಿರ್ದೇಶಿಸುತ್ತದೆ.
ಬೈಬಲು ತನ್ನ ಎಲ್ಲಾ ಹೇಳಿಕೆಗಳಲ್ಲಿ ಸಂಪೂರ್ಣವಾಗಿ ನಿಷ್ಕೃಷ್ಟವಾಗಿರುವುದರಿಂದ ನೀವು ಅದರ ಮೇಲೆ ಭರವಸೆಯಿಡಬಲ್ಲಿರಿ. ದೇವರು “ಶೂನ್ಯದ ಮೇಲೆ [ಆಕಾಶದ] ಉತ್ತರ ದಿಕ್ಕನ್ನು ವಿಸ್ತರಿಸಿ ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗಹಾಕಿದ್ದಾನೆ” ಎಂದು ಬೈಬಲು ಹೇಳುತ್ತದೆ. (ಯೋಬ 26:7) ಭೂಮಿಯು ಆನೆಗಳಿಂದ ಆಧಾರಿಸಲ್ಪಡುತ್ತಿದೆ ಎಂಬಂತಹ, ಆ ಸಮಯದಲ್ಲಿ ಪ್ರಚಲಿತವಾಗಿದ್ದ ಕಾಲ್ಪನಿಕ ಸಿದ್ಧಾಂತಗಳನ್ನು ಪುನರಾವರ್ತಿಸುವುದಕ್ಕೆ ಬದಲಾಗಿ, ಭೂಮಿಯು ಶೂನ್ಯದ ಮೇಲೆ ‘ತೂಗಾಡು’ತ್ತಿದೆ ಎಂದು ಯಾವುದು ಅನಂತರದಲ್ಲಿ ವೈಜ್ಞಾನಿಕ ಸತ್ಯದೋಪಾದಿ ಸ್ಥಾಪಿತವಾಯಿತೋ ಅದನ್ನು ಬೈಬಲು ನಮೂದಿಸಿತು. ಇದಕ್ಕೆ ಕೂಡಿಸಿ, ಕೊಲಂಬಸ್ನ ಸಮಯಕ್ಕೆ ಎರಡು ಸಾವಿರ ವರ್ಷಗಳ ಮೊದಲೇ, ಭೂಮಿಯು ಗೋಳಾಕಾರದಲ್ಲಿದೆ ಎಂದು ಬೈಬಲು ಸ್ಪಷ್ಟವಾಗಿ ನಮೂದಿಸಿತು.—ಯೆಶಾಯ 40:22.
ಬೈಬಲಿನ ಪ್ರಾಮಾಣಿಕತೆ ಮತ್ತು ನಿಷ್ಕಾಪಟ್ಯದ ಕಾರಣದಿಂದಾಗಿ ನೀವು ಅದರ ಮೇಲೆ ಭರವಸೆಯಿಡಬಲ್ಲಿರಿ. ಬೈಬಲಿನ ಬರಹಗಾರರು ಯಾವುದನ್ನೂ ತಪ್ಪಾಗಿ ನಿರೂಪಿಸಲಿಲ್ಲ. ಅವರು ಏನನ್ನು ಹೇಳಿದರೋ ಅದು, ಸ್ವತಃ ಅವರ ಮೇಲೆ, ಅವರ ಸ್ವದೇಶಸ್ಥರ ಮೇಲೆ, ಮತ್ತು ಅವರ ಅಧಿಕಾರಿಗಳ ಮೇಲೆ ಕೆಟ್ಟದ್ದಾಗಿ ಪ್ರತಿಫಲಿಸಿದಾಗ್ಯೂ, ಅವರು ಆ ವಾಸ್ತವಾಂಶಗಳನ್ನು ಪ್ರಾಮಾಣಿಕತೆಯಿಂದ ವರದಿಸಿದರು. ಉದಾಹರಣೆಗಾಗಿ, ಆಗಿಂದಾಗ್ಗೆ ಯೇಸು ಕ್ರಿಸ್ತನ ಅಪೊಸ್ತಲರು ನಂಬಿಕೆಯ ಕೊರತೆಯನ್ನು ತೋರಿಸಿದರು, ಪ್ರಾಧಾನ್ಯಕ್ಕಾಗಿ ತಮ್ಮಲ್ಲೇ ಕಾದಾಡಿದರು, ಮತ್ತು ಯೇಸುವು ಬಂಧಿಸಲ್ಪಟ್ಟಾಗಲೂ ಅವನನ್ನು ತ್ಯಜಿಸಿದರೆಂದು ಅಪೊಸ್ತಲನಾದ ಮತ್ತಾಯನು ತನ್ನ ಸುವಾರ್ತೆಯಲ್ಲಿ ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡನು.—ಮತ್ತಾಯ 17:18-20; 20:20-28; 26:56.
ಬೈಬಲಿನ ಮೇಲೆ ಭರವಸೆಯಿಡಲಿಕ್ಕಾಗಿರುವ ಇನ್ನೊಂದು ಪ್ರಮುಖವಾದ ಕಾರಣವು, ಜನರು ಬೈಬಲನ್ನು ಅನ್ವಯಿಸಿಕೊಳ್ಳಲಿಕ್ಕಾಗಿ ಅದರ ಮೇಲೆ ಸಾಕಷ್ಟು ಭರವಸೆಯಿಟ್ಟಾಗಲೆಲ್ಲಾ, ಅದರ ಬುದ್ಧಿವಾದವು ಯಾವಾಗಲೂ ಪ್ರಾಯೋಗಿಕವೂ ಪ್ರಯೋಜನಕರವೂ ಆದದ್ದಾಗಿ ಪರಿಣಮಿಸಿದೆ. (ಜ್ಞಾನೋಕ್ತಿ 2:1-9) ಜೀವಿತದ ಸಮಸ್ಯೆಗಳೊಂದಿಗೆ ನಿಭಾಯಿಸುವುದರ ಕುರಿತಾಗಿ ಅನೇಕವೇಳೆ “ಪರಿಣತರಿಂದ” ಕೊಡಲ್ಪಡುವ ಚಂಚಲ ಬುದ್ಧಿವಾದದೊಂದಿಗೆ, ಬೈಬಲಿನ ಬುದ್ಧಿವಾದವು ಕೌತುಕ ರೀತಿಯಲ್ಲಿ ವ್ಯತಿರಿಕ್ತವಾಗಿದೆ. ಅನೇಕ ರಾಷ್ಟ್ರೀಯ ವಾರ್ತಾಪತ್ರಿಕೆಗಳಲ್ಲಿ ಅಂತಹ ಬುದ್ಧಿವಾದವನ್ನು ಕೊಡುವ ಅಂಕಣಕಾರರ ಕುರಿತಾಗಿ, ಲಂಡನ್ನ ದ ಸಂಡೇ ಟೈಮ್ಸ್ ಕೇಳುವುದು: “ನಿಜವಾಗಿಯೂ ಮುಂದಾಲೋಚನೆಯಿಲ್ಲದೆ ಬುದ್ಧಿವಾದವನ್ನು ನೀಡುತ್ತಿರುವ ಈ ಪ್ರತಿಭಾಶಾಲಿಗಳಾದ ಅಂಕಣಕಾರರಿಗೆ, ಪ್ರತಿ ವರ್ಷ ಸಾವಿರಾರು ಜನರು ತಮ್ಮ ಆಂತರಿಕ ಭಾವನೆಗಳನ್ನು ಮತ್ತು ಅನಿಸಿಕೆಗಳನ್ನು ಹೇಳುತ್ತಿದ್ದಾರೊ?” ಬೈಬಲಿನ ಬರಹಗಾರರು ಮುಂದಾಲೋಚನೆಯಿಲ್ಲದೆ ಬುದ್ಧಿವಾದವನ್ನು ನೀಡಲಿಲ್ಲ. ಅವರು ಭರವಸಾರ್ಹವಾದ, ಇತಿಹಾಸದಾದ್ಯಂತ ವಿಶ್ವಾಸಾರ್ಹವಾಗಿ ರುಜುವಾಗಿರುವ ದೇವ-ಪ್ರೇರಿತವಾದ ಬುದ್ಧಿವಾದವನ್ನು ದಾಖಲಿಸಿದರು.—2 ತಿಮೊಥೆಯ 3:16, 17.
“ಬೈಬಲಿನ ಬುದ್ಧಿವಾದವು, ನನ್ನ ಜೀವಿತವನ್ನು ಹಾಳುಮಾಡಸಾಧ್ಯವಿದ್ದ ದಿಕ್ಕಿನಿಂದ ನನ್ನನ್ನು ಸಂರಕ್ಷಿಸಿತು” ಎಂದು, ಈಗ ತನ್ನ 30ಗಳ ಹರೆಯದಲ್ಲಿರುವ, ಸಂತೋಷಭರಿತವಾಗಿ ವಿವಾಹಿತಳಾಗಿರುವ ಎಲೆನ್ ಹೇಳುತ್ತಾಳೆ. “ವಿಚ್ಛೇದಿತರಾಗಿದ್ದ ನನ್ನ ಹೆತ್ತವರು, ವಿವಾಹದ ಏರ್ಪಾಡಿನಲ್ಲಿ ನಂಬಿಕೆಯನ್ನು ತೋರಿಸಲಿಲ್ಲ, ಮತ್ತು ವಾಸ್ತವವಾಗಿ ಯಾರನ್ನಾದರೂ ವಿವಾಹವಾಗುವುದಕ್ಕೆ ಬದಲಾಗಿ ಅವನೊಂದಿಗೆ ಕೇವಲ ಜೀವಿಸುವಂತೆ ಅವರು ನನ್ನನ್ನು ಉತ್ತೇಜಿಸಿದರು. ಬೈಬಲಿನ ಮೂಲತತ್ವಗಳನ್ನು ಹಿಂಬಾಲಿಸುವುದು ನನ್ನ ಜೀವಿತಕ್ಕೆ ಕೊಟ್ಟಿರುವ ಸ್ಥಿರತೆಯ ಕುರಿತಾಗಿ ನಾನು ಆಲೋಚಿಸುವಾಗ, ನನ್ನ ಸ್ವಂತ ಹೆತ್ತವರ ಬುದ್ಧಿವಾದವನ್ನೂ ಮೀರಿ ನಾನು ಬೈಬಲಿನ ಮೇಲೆ ಭರವಸೆಯಿಟ್ಟದ್ದಕ್ಕಾಗಿ ಸಂತೋಷಿತಳಾಗಿದ್ದೇನೆ.”—ನೋಡಿರಿ ಎಫೆಸ 5:22-31; ಇಬ್ರಿಯ 13:4.
“ವಿಷಯಗಳ ಕುರಿತಾಗಿ ಬೈಬಲು ಹೇಳಿದ ವಿಚಾರಗಳನ್ನು ನಾನು ಕಲಿಯಲಾರಂಭಿಸಿದಾಗ, ನಾನು ಕೇವಲ 14 ವರ್ಷ ಪ್ರಾಯದವಳಾಗಿದ್ದೆ” ಎಂದು ಫ್ಲಾರೆನ್ಸ್ ಹೇಳುತ್ತಾಳೆ. “ನಾನು 1960ಗಳ ಕುರಿತು ಮತ್ತು ನನ್ನ ಸಮಾನಸ್ಕಂಧರು ಆ ಸಮಯದ ಮೌಲ್ಯಗಳನ್ನು ಮತ್ತು ನೈತಿಕತೆಗಳನ್ನು ಅನುಸರಿಸುವ ಮೂಲಕ ಸ್ವತಃ ಅವರು ಉಂಟುಮಾಡಿಕೊಂಡ ತೊಂದರೆಯ ಕುರಿತಾಗಿ ಈಗ ಹಿಂದಾಲೋಚನೆ ಮಾಡುವಾಗ, ಒಬ್ಬ ಯುವ, ಅನನುಭವಿ ಸ್ತ್ರೀಯೋಪಾದಿ ಬೈಬಲಿನ ಬುದ್ಧಿವಾದವು ನನಗೆ ಒದಗಿಸಿದಂತಹ ಸಂರಕ್ಷಣೆಗಾಗಿ ನಾನು ಬಹಳ ಕೃತಜ್ಞಳು.”—ನೋಡಿರಿ 1 ಕೊರಿಂಥ 6:9-11.
“ನನ್ನ ವಿದ್ಯಮಾನದಲ್ಲಿ, ನಾನು ಜೂಜಾಟ, ಧೂಮಪಾನ, ಮತ್ತು ಕುಡಿತದ ಚಟುವಟಿಕೆಯಲ್ಲಿ ಒಳಗೊಂಡಿದ್ದೆ” ಎಂದು ಜೇಮ್ಸ್ ಹೇಳುತ್ತಾನೆ. ಅವನು ಮುಂದುವರಿಸುವುದು: “ಇದು ಅನೇಕ ಜನರಿಗೆ ಮತ್ತು ಅವರ ಕುಟುಂಬಗಳಿಗೆ ಉಂಟುಮಾಡಿರುವ ಹಾನಿಯು ನನಗೆ ತಿಳಿದಿದೆ. ಆರಂಭದಲ್ಲಿ ನನ್ನ ಸಮಸ್ಯೆಗಳಿಗೆ ಬೈಬಲಿನ ಸುಸಂಬದ್ಧತೆಯನ್ನು ನಾನು ವಿವೇಚಿಸಲಾರದವನಾಗಿದ್ದೆ. ಆದರೆ ಈಗ ಅದು ಒಳ್ಳೆಯದಕ್ಕಾಗಿ ನನ್ನ ಆಲೋಚನೆಯನ್ನು ಹೇಗೆ ಪ್ರಭಾವಿಸಿತು ಮತ್ತು ಹೆಚ್ಚು ಆರೋಗ್ಯಕರವಾದ ಜೀವನ ಶೈಲಿಯನ್ನು ಕಾಪಾಡಿಕೊಳ್ಳಲು ಅದು ನನಗೆ ಸಹಾಯ ಮಾಡಿತು ಎಂಬುದನ್ನು ನಾನು ಸ್ಪಷ್ಟವಾಗಿ ಅವಲೋಕಿಸುತ್ತೇನೆ.”—ನೋಡಿರಿ 2 ಕೊರಿಂಥ 7:1.
ತೊಂದರೆಭರಿತ ಹಿನ್ನೆಲೆಯಿಂದ ಬೇರೂರುವ ಜೀವಿತದ ಒತ್ತಡಗಳು ಮತ್ತು ಭಾವನಾತ್ಮಕ ಕಷ್ಟಗಳ ಕಾರಣದಿಂದ, ಮೇರಿ ಆ್ಯನ್ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದಳು. “ಆ ಸಮಯದಲ್ಲಿ ಆತ್ಮಹತ್ಯೆಯು ಏಕಮಾತ್ರ ಪರಿಹಾರವಾಗಿ ತೋರಿತು” ಎಂದು ಅವಳು ಹೇಳುತ್ತಾಳೆ. “ಆದರೆ ಬೈಬಲು ನನ್ನ ಅಭಿಪ್ರಾಯವನ್ನು ಕ್ರಮಪಡಿಸಿತು. ನಾನು ಬೈಬಲಿನಲ್ಲಿ ಏನು ಓದಿದೆನೋ ಅದರ ಕಾರಣದಿಂದಾಗಿಯೇ, ನಾನು ಆತ್ಮಹತ್ಯೆಯನ್ನು ಮಾಡಿಕೊಳ್ಳಲಿಲ್ಲ.”—ನೋಡಿರಿ ಫಿಲಿಪ್ಪಿ 4:4-8.
ಈ ಎಲ್ಲಾ ಜನರಿಗೆ ಸಹಾಯ ಮಾಡಿದ ವಿಷಯವು ಯಾವುದಾಗಿತ್ತು? ಅವರು ದೇವರಲ್ಲಿ ಮತ್ತು ಆತನ ವಾಕ್ಯವಾದ ಬೈಬಲಿನಲ್ಲಿ ಸಂಪೂರ್ಣ ಭರವಸೆಯನ್ನು ವಿಕಸಿಸಿದರು. ದೇವರು, ಕಷ್ಟದ ಸಮಯಗಳಲ್ಲಿ ಅವರ ಕಿವಿಗಳೊಳಗೆ ಬುದ್ಧಿವಾದವನ್ನು ಪಿಸುಗುಟ್ಟಿದ ಒಬ್ಬ ಭರವಸಾರ್ಹ, ಪ್ರಿಯ ಮಿತ್ರನಂತಾದನು. (ಹೋಲಿಸಿ ಯೆಶಾಯ 30:21.) ಜೀವಿತದ ಒತ್ತಡಗಳು ಮತ್ತು ಸಮಸ್ಯೆಗಳೊಂದಿಗೆ ನಿಭಾಯಿಸುವಂತೆ ಅವರಿಗೆ ಸಹಾಯ ಮಾಡಿದ ಬೈಬಲ್ ಮೂಲತತ್ವಗಳನ್ನು ಅವರು ಕಲಿತರು. ಮತ್ತು ಸುಳ್ಳಾಡಸಾಧ್ಯವಿರದ ದೇವರಿಂದ ಕೊಡಲ್ಪಟ್ಟ—ಮೋಸ, ಸುಳ್ಳುಗಳು, ಮತ್ತು ಶೋಷಣೆ ಮಾಡುವಿಕೆಯಿಂದ ಸ್ವತಂತ್ರವಾದ, ಮತ್ತು ದುಃಖ, ಅಸ್ವಸ್ಥತೆ, ಮತ್ತು ಮರಣದಿಂದ ಸಹ ಸ್ವತಂತ್ರವಾದ, ಒಂದು ಸುಂದರ “ನೂತನಭೂಮಂಡಲ”ದ ಕುರಿತಾದ ವಾಗ್ದಾನದಂತಹ—ಅದ್ಭುತಕರವಾದ ವಾಗ್ದಾನಗಳ ಮೇಲೆ ಭರವಸೆಯಿಡಲು ಅವರು ಕಲಿತರು!—2 ಪೇತ್ರ 3:13; ಕೀರ್ತನೆ 37:11, 29; ಪ್ರಕಟನೆ 21:4, 5.
ನೀವು ಅದೇ ರೀತಿಯ ಭರವಸೆಯನ್ನು ವಿಕಸಿಸಿಕೊಳ್ಳಬಲ್ಲಿರಿ. ಇಂದು ಲೋಕವು ನಿಮ್ಮ ಭರವಸೆಯನ್ನು ವಿಶ್ವಾಸಘಾತಗೊಳಿಸಬಹುದಾದರೂ, ದೇವರಲ್ಲಿನ ಮತ್ತು ಆತನ ವಾಕ್ಯದಲ್ಲಿನ ನಿಮ್ಮ ಭರವಸೆಯು ಎಂದಿಗೂ ಅತಿಕ್ರಮಣ ಮಾಡಲ್ಪಡುವುದಿಲ್ಲ ಎಂಬುದಾಗಿ ನೀವು ದೃಢತೆಯಿಂದಿರಸಾಧ್ಯವಿದೆ. ದೇವರನ್ನು ಮತ್ತು ಆತನ ವಾಕ್ಯವಾದ ಬೈಬಲನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುವಂತೆ ನಿಮಗೆ ಸಹಾಯ ಮಾಡಲಿಕ್ಕಾಗಿ, ಈ ಪತ್ರಿಕೆಯ ಪ್ರಕಾಶಕರು ಯಾರನ್ನಾದರೂ ಏರ್ಪಡಿಸಲು ಸಂತೋಷಿಸುವರು.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 9 ರಲ್ಲಿರುವ ಚಿತ್ರ]
ಸುಮಾರು 200 ವರ್ಷಗಳ ಮುಂದಾಗಿಯೇ, ಬಾಬೆಲು ಹೇಗೆ ಅಧಿಕಾರಚ್ಯುತಿಗೊಳಿಸಲ್ಪಡುವುದೆಂದು ದೇವರ ಪ್ರವಾದಿಯು ಮುಂತಿಳಿಸಿದ್ದನು
[ಪುಟ 0 ರಲ್ಲಿರುವ ಚಿತ್ರ]
ಸರ್ ಐಸಕ್ ನ್ಯೂಟನ್ ಬೈಬಲನ್ನು ಭರವಸಾರ್ಹವಾದದ್ದಾಗಿ ಕಂಡುಕೊಂಡನು