ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 12/8 ಪು. 19-20
  • ಕಲೆ ಎಂದರೇನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕಲೆ ಎಂದರೇನು?
  • ಎಚ್ಚರ!—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕಲೆಯ ಅರ್ಥ ವಿವರಿಸುವುದು
  • ಕಲಾ ಕೌಶಲದ ಹಿಂದಿರುವ ಆ ಕಲಾಕಾರ
  • ನಮ್ಮ ಕಾಲದ ಅತ್ಯಂತ ಉಪೇಕ್ಷಿತ ಕಲಾಕಾರ
    ಎಚ್ಚರ!—1995
  • ನಿಮ್ಮ ಕಲ್ಪನಾಶಕ್ತಿಯನ್ನು ಸರಿಯಾಗಿ ಬಳಸುತ್ತಿದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಮಹಾ ಚಿತ್ರಕಾರನಾದ ಯೆಹೋವ
    ಕಾವಲಿನಬುರುಜು—1990
  • ನಮ್ಮ ಸುತ್ತಲಿನ ಸೌಂದರ್ಯವನ್ನು ನೋಡುವ ವಿಧ
    ಎಚ್ಚರ!—1995
ಇನ್ನಷ್ಟು
ಎಚ್ಚರ!—1995
g95 12/8 ಪು. 19-20

ಕಲೆ ಎಂದರೇನು?

ಸ್ಪೆಯ್ನ್‌ನ ಎಚ್ಚರ! ಸುದ್ದಿಗಾರರಿಂದ

ನೀವೆಂದಾದರೂ ನೋಡಿರುವ ಅತ್ಯಂತ ಸುಂದರವಾದ ದೃಶ್ಯವು ಯಾವುದು? ಅದು ಉಷ್ಣವಲಯದ ಸೂರ್ಯಾಸ್ತಮಾನವೂ, ಹಿಮದಿಂದಾವೃತವಾದ ಪರ್ವತ ಶ್ರೇಣಿಯೋ, ಮರುಭೂಮಿಯಲ್ಲಿ ಹೊರಸೂಸುವ ಒಂದು ಪುಷ್ಪಮಂಜರಿಯೋ, ವರ್ಷದ ಶರತ್ಕಾಲದಲ್ಲಿ ಒಂದು ಅರಣ್ಯದ ವೈಭವಯುಕ್ತ ಬಣ್ಣಗಳೋ?

ಭೂಮಿಯ ಸೌಂದರ್ಯದಿಂದ ಮುಗ್ಧರಾಗಿಹೋದ ಯಾವುದೋ ವಿಶೇಷ ಕ್ಷಣವನ್ನು ನಮ್ಮಲ್ಲಿ ಅಧಿಕಾಂಶ ಮಂದಿ ನೆಚ್ಚುತ್ತೇವೆ. ನಮಗೆ ಸಾಧ್ಯವಿದ್ದರೆ, ನಮ್ಮಲ್ಲಿ ಹೆಚ್ಚಿನವರು ಪ್ರಮೋದವನ್ಯ ಪರಿಸರಗಳಲ್ಲಿ ನಮ್ಮ ರಜೆಗಳನ್ನು ಕಳೆಯಲು ಬಯಸುತ್ತೇವೆ, ಮತ್ತು ಅತ್ಯಂತ ಸ್ಮರಣೀಯ ದೃಶ್ಯಗಳನ್ನು ಛಾಯಾಚಿತ್ರದಲ್ಲಿ ಸೆರೆಹಿಡಿಯಲು ನಾವು ಪ್ರಯತ್ನಿಸುತ್ತೇವೆ.

ಮುಂದಿನ ಸಲ ನೀವು ಹಾಳುಗೊಂಡಿರದ ಈ ವೈಭವವನ್ನು ಎವೆಯಿಕ್ಕದೆ ನೋಡುವಾಗ, ನೀವು ಪರಿಗಣಿಸಬಹುದಾದ ಪ್ರಶ್ನೆಗಳಿವೆ. ಕಲಾಕೃತಿಗಳ ಪ್ರದರ್ಶನಾಲಯದಲ್ಲಿ ಪ್ರತಿಯೊಂದು ವರ್ಣಚಿತ್ರವು “ಅನಾಮಧೇಯ” ಎಂದು ಗುರುತಿಸಲ್ಪಟ್ಟಲ್ಲಿ, ಏನೋ ಕಾಣೆಯಾಗಿರುವ ಭಾವನೆ ನಿಮಗಾಗದಿರುವುದೇ? ಒಂದು ಪ್ರದರ್ಶನದಲ್ಲಿ ವರ್ಣಚಿತ್ರಗಳ ಗುಣಮಟ್ಟ ಮತ್ತು ಸೌಂದರ್ಯದಿಂದ ನೀವು ಆಳವಾಗಿ ಪ್ರೇರೇಪಿಸಲ್ಪಟ್ಟಲ್ಲಿ, ಆ ಕಲಾಕಾರನಾರು ಎಂದು ತಿಳಿಯಲು ನೀವು ಬಯಸಲಾರಿರೇ? ಭೂಮಿಯ ಸೌಂದರ್ಯಭರಿತ ಅದ್ಭುತಗಳ ಅವಲೋಕನೆಯಲ್ಲಿ ಸಂತೃಪ್ತಿಯನ್ನು ಪಡೆದೂ, ಅವುಗಳನ್ನು ನಿರ್ಮಿಸಿದ ಕಲಾಕಾರನನ್ನು ನಾವು ದುರ್ಲಕ್ಷಿಸಬೇಕೋ?

ನಿಸರ್ಗದಲ್ಲಿ ಕಲೆಯೆಂಬ ಒಂದು ವಿಷಯವಿಲ್ಲ—ಕಲೆಗೆ ಮಾನವ ರಚನಾತ್ಮಕ ಕೌಶಲ ಮತ್ತು ಅರ್ಥವಿವರಣೆ ಆವಶ್ಯಕ ಎಂದು ವಾದಿಸುವವರಿದ್ದಾರೆ ನಿಜ. ಕಲೆಯ ಇಂತಹ ಅರ್ಥವಿವರಣೆಯಾದರೋ, ಬಹುಶಃ ತೀರ ಸೀಮಿತವಾಗಿದೆ. ನಿಖರವಾಗಿ, ಕಲೆ ಎಂದರೇನು?

ಕಲೆಯ ಅರ್ಥ ವಿವರಿಸುವುದು

ಪ್ರತಿಯೊಬ್ಬನನ್ನು ತೃಪ್ತಿಪಡಿಸುವಂತಹ ಕಲೆಯ ಒಂದು ಅರ್ಥ ವಿವರಣೆಯನ್ನು ಮಾಡುವುದು ಪ್ರಾಯಶಃ ಅಶಕ್ಯ. ಆದರೆ ಅದರ ತಕ್ಕಷ್ಟು ಒಳ್ಳೆಯ ಅರ್ಥ ವಿವರಣೆಯು, ವೆಬ್ಸ್‌ಟರ್ಸ್‌ ನೈನ್ತ್‌ ನ್ಯೂ ಕಲೀಜಿಯೆಟ್‌ ಡಿಕ್‌ಷನರಿಯಲ್ಲಿ ಕಂಡುಬರುತ್ತದೆ. ಅದು, ಕಲೆಯನ್ನು “ಕೌಶಲ ಮತ್ತು ರಚನಾತ್ಮಕ ಕಲ್ಪನೆಯ, ವಿಶೇಷವಾಗಿ ಸೌಂದರ್ಯಕ್ಕೆ ಸಂಬಂಧಿಸಿದ ವಸ್ತುಗಳ ಉತ್ಪಾದನೆಯಲ್ಲಿ ಪ್ರಜ್ಞಾಪೂರ್ವಕವಾದ ಬಳಸುವಿಕೆ”ಯಾಗಿದೆ ಎಂದು ಹೇಳುತ್ತದೆ. ಇದರ ಆಧಾರದಲ್ಲಿ, ಒಬ್ಬ ಕಲಾಕಾರನಿಗೆ ಕುಶಲತೆ ಮತ್ತು ರಚನಾತ್ಮಕ ಕಲ್ಪನಾಶಕ್ತಿ ಎರಡೂ ಅಗತ್ಯವೆಂದು ನಾವು ಹೇಳಬಲ್ಲೆವು. ಅವನು ಆ ಎರಡು ಸಾಮರ್ಥ್ಯಗಳನ್ನು ಕ್ರಿಯೆಯಲ್ಲಿ ಹಾಕುವಾಗ, ಇತರರಿಗೆ ಮನೋಹರವಾಗಿ ಅಥವಾ ಆಕರ್ಷಕವಾಗಿ ಕಾಣುವ ಒಂದು ವಿಷಯವನ್ನು ಅವನು ಉತ್ಪಾದಿಸಬಲ್ಲನು.

ಕೌಶಲ ಮತ್ತು ಕಲ್ಪನೆಗಳ ಅಭಿವ್ಯಕ್ತಿಗಳು ಮಾನವ ಕಲಾಕೃತಿಗಳಿಗೆ ಮಾತ್ರ ಪರಿಮಿತವಾಗಿವೆಯೇ? ಅಥವಾ ನಮ್ಮ ಸುತ್ತುಮುತ್ತಲಿನ ಪ್ರಾಕೃತಿಕ ಜಗತ್ತಿನಲ್ಲೂ ಅವು ತೋರಿಬರುತ್ತವೋ?

ಕ್ಯಾಲಿಫೋರ್ನಿಯದ ಉನ್ನತವಾದ ಮಂಜತ್ತಿಮರಗಳು, ಶಾಂತಸಾಗರದ ವಿಸ್ತಾರವಾದ ಹವಳಗಲ್ಲುಗಳ ಸಾಲುಗಳು, ಮಳೇಕಾಡುಗಳ ಭವ್ಯವಾದ ಜಲಪಾತಗಳು, ಮತ್ತು ಆಫ್ರಿಕನ್‌ ಹುಲ್ಲುಗಾಡುಗಳ ಶೋಭಾಯಮಾನವಾದ ಮಂದೆಗಳು, ವಿವಿಧ ರೀತಿಗಳಲ್ಲಿ, ಮಾನವ ಕುಲಕ್ಕೆ “ಮೋನ ಲೀಸ”ಕ್ಕಿಂತ ಹೆಚ್ಚು ಬೆಲೆಯುಳ್ಳದ್ದಾಗಿವೆ. ಆ ಕಾರಣಕ್ಕಾಗಿ, ಯುನೆಸ್ಕೊ (ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಮತ್ತು ಸಾಂಸ್ಕೃತಿಕ ಸಂಸ್ಥೆ) ರೆಡ್‌ವುಡ್‌ ನ್ಯಾಷನಲ್‌ ಪಾರ್ಕ್‌, ಅಮೆರಿಕ; ಈಗಸ್ವೂ ಫಾಲ್ಸ್‌, ಆರ್ಜೆಂಟೀನಾ/ಬ್ರೆಸಿಲ್‌; ದ ಗ್ರೇಟ್‌ ಬ್ಯಾರಿಯರ್‌ ರೀಫ್‌, ಆಸ್ಟ್ರೇಲಿಯ; ಮತ್ತು ಸೆರಂಗೆಟೀ ನ್ಯಾಷನಲ್‌ ಪಾರ್ಕ್‌, ಟಾನ್ಸೆನೀಯವನ್ನು “ಮಾನವ ಕುಲದ ಪರಂಪರೆ”ಯ ಭಾಗವಾಗಿ ನಿರೂಪಿಸಿದೆ.

ಈ ನೈಸರ್ಗಿಕ ನಿಕ್ಷೇಪಗಳು ಮಾನವ ನಿರ್ಮಿತ ಸ್ಮಾರಕಗಳ ಜೊತೆಯಲ್ಲಿ ಸೇರಿಕೊಂಡಿವೆ. ಯಾಕೆ? ಯಾವುದಕ್ಕೆ “ಅಸಾಧಾರಣವಾದ ಸಾರ್ವತ್ರಿಕ ಮೌಲ್ಯ”ವಿದೆಯೇ ಅದನ್ನು ಕಾಪಾಡುವ ಹೇತುವಿನಿಂದಲೇ. ಅದು ಭಾರತದ ತಾಜ್‌ಮಹಲ್‌ನ, ಇಲ್ಲವೇ ಅಮೆರಿಕದ ಗ್ರ್ಯಾಂಡ್‌ ಕ್ಯಾನ್ಯನ್‌ನ ಸೌಂದರ್ಯವಾಗಿರಲಿ, ಮುಂದಿನ ಸಂತತಿಗಳ ಸಲುವಾಗಿ ಕಾಪಾಡಲ್ಪಡಲು ಅದು ಅರ್ಹವಾಗಿದೆ.

ಆದರೆ ರಚನಾತ್ಮಕ ಕೌಶಲವನ್ನು ಅವಲೋಕಿಸಲು ನಿಮಗೆ ಒಂದು ನ್ಯಾಷನಲ್‌ ಪಾರ್ಕಿಗೆ ಪ್ರಯಾಣಿಸುವ ಅಗತ್ಯವಿಲ್ಲ. ಅತ್ಯುತ್ಕೃಷ್ಟ ಮಾದರಿಯು ನಿಮ್ಮ ಸ್ವಂತ ದೇಹವಾಗಿದೆ. ಪುರಾತನ ಗ್ರೀಸಿನ ಶಿಲ್ಪಿಗಳು ಮನುಷ್ಯ ರೂಪವನ್ನು ಕಲಾತ್ಮಕ ಉತ್ಕೃಷ್ಟತೆಯ ಸಾರವಾಗಿ ವೀಕ್ಷಿಸಿದರು, ಮತ್ತು ಅದನ್ನು ಆದಷ್ಟು ಪರಿಪೂರ್ಣವಾಗಿ ಚಿತ್ರಿಸಲು ಪ್ರಯಾಸಪಟ್ಟರು. ಶರೀರದ ಕ್ರಿಯೆಗಳ ಸದ್ಯದ ನಮ್ಮ ಜ್ಞಾನದಿಂದ, ಅದರ ನಿರ್ಮಾಣ ಮತ್ತು ರಚನೆಗೆ ಆವಶ್ಯಕವಾದ ಸಾಮರ್ಥ್ಯವನ್ನು ಇನ್ನೂ ಹೆಚ್ಚಾಗಿ ನಾವು ಗಣ್ಯಮಾಡಬಲ್ಲೆವು.

ರಚನಾತ್ಮಕ ಕಲ್ಪನಾಶಕ್ತಿಯ ಕುರಿತೇನು? ನವಿಲಿನ ಕಂಪಿಸುವ ತೋಕೆಯ ಮೇಲಣ ಉತ್ಕೃಷ್ಟ ನಮೂನೆಗಳನ್ನು, ಗುಲಾಬಿ ಹೂವಿನ ಕೋಮಲವಾದ ಅರಳನ್ನು, ಅಥವಾ ಹಮಿಂಗ್‌ಬರ್ಡ್‌ (ಝೇಂಕಾರದ ಹಕ್ಕಿ)ನ ಅತಿವೇಗದ ಬ್ಯಾಲೆ ನರ್ತನವನ್ನು ಅವಲೋಕಿಸಿರಿ. ನಿಶ್ಚಯವಾಗಿಯೂ ಅಂತಹ ಕಲಾಕೃತಿಯು, ಕ್ಯಾನ್ವಸ್‌ನಲ್ಲಿ ಅಥವಾ ಛಾಯಾಚಿತ್ರದಲ್ಲಿ ಸೆರೆಹಿಡಿಯಲ್ಪಡುವ ಮುಂಚೆಯೂ, ಕಲೆಯಾಗಿತ್ತು ನಿಶ್ಚಯ. ಒಬ್ಬ ನ್ಯಾಷನಲ್‌ ಜಿಯೊಗ್ರಾಫಿಕ್‌ ಲೇಖಕನು, ಟ್ಯಾಕ ಕರಿಯ ಲಿಲಿ ಹೂವಿನ ಲ್ಯಾವೆಂಡರ್‌ ತಂತುಗಳಿಂದ ಪ್ರಭಾವಿತನಾಗಿ, ಅವು ಯಾವ ಉದ್ದೇಶಕ್ಕಾಗಿ ಇವೆಯೆಂದು ಒಬ್ಬ ಯುವ ವಿಜ್ಞಾನಿಯನ್ನು ಕೇಳಿದನು. ಅವನ ಸರಳವಾದ ಉತ್ತರ: “ಅವು ದೇವರ ಕಲ್ಪನಾಶಕ್ತಿಯನ್ನು ಪ್ರಕಟಿಸುತ್ತವೆ.”

ಕೌಶಲ ಮತ್ತು ರಚನಾತ್ಮಕ ಕಲ್ಪನಾಶಕ್ತಿಯು, ನೈಸರ್ಗಿಕ ಜಗತ್ತಿನಲ್ಲಿ ಸಮೃದ್ಧವಾಗಿ ಇದೆ ಮಾತ್ರವಲ್ಲ ಅದು ಮಾನವ ಕಲಾಕಾರರಿಗೆ ಸದಾ ಸ್ಫೂರ್ತಿಯ ಮೂಲವಾಗಿಯೂ ಇದೆ. ಪ್ರಖ್ಯಾತ ಫ್ರೆಂಚ್‌ ಶಿಲ್ಪಿಯಾದ ಆಗೂಸ್ಟ ರೋಡನ್‌ ಹೇಳಿದ್ದು: “ಕಲಾಕಾರನು ನಿಸರ್ಗದ ಆಪ್ತಮಿತ್ರನು. ಪುಷ್ಪಗಳು ತಮ್ಮ ದಿಂಡುಗಳನ್ನು ಒಯ್ಯಾರದಿಂದ ಬಾಗಿಸುವ ಮೂಲಕ ಮತ್ತು ತಮ್ಮ ಹೂಗೊಂಚಲುಗಳ ಸಾಮರಸ್ಯದ ರಂಗಿನ ಸೂಕ್ಷ್ಮ ವ್ಯತ್ಯಾಸಗಳ ಮೂಲಕ, ಅವನೊಂದಿಗೆ ಸಂವಾದಗಳನ್ನು ನಡೆಸುತ್ತವೆ.”

ನೈಸರ್ಗಿಕ ಸೌಂದರ್ಯವನ್ನು ಅನುಸರಿಸಲು ಪ್ರಯತ್ನಿಸುವಾಗ ಕೆಲವು ಕಲಾಕಾರರು ತಮ್ಮ ಸೀಮಿತಗಳನ್ನು ಬಹಿರಂಗವಾಗಿ ಅಂಗೀಕರಿಸಿದರು. “ನೈಜ ಕಲಾಕೃತಿಯು, ದೈವಿಕ ಪರಿಪೂರ್ಣತೆಯ ಕೇವಲ ಒಂದು ಛಾಯೆ,” ಎಂದು ಪರಿಗಣಿಸಿದನು ಸರ್ವಕಾಲದ ಅತ್ಯಂತ ಮಹಾನ್‌ ಕಲಾಕಾರರಲ್ಲಿ ಒಬ್ಬನಾಗಿ ಪರಿಗಣಿಸಲ್ಪಟ್ಟ ಮೈಕಲ್ಯಾಂಜಲೊ.

ವಿಜ್ಞಾನಿಗಳು ಹಾಗೂ ಕಲಾಕಾರರು ಪ್ರಾಕೃತಿಕ ಜಗತ್ತಿನ ಸೌಂದರ್ಯದಿಂದ ಭಾವಪರವಶರಾಗಿ ಹೋದಾರು. ಗಣಿತ ಭೌತವಿಜ್ಞಾನದ ಪ್ರೊಫೆಸರರಾದ ಪೌಲ್‌ ಡೇವಿಸ್‌, ದ ಮೈಂಡ್‌ ಆಫ್‌ ಗಾಡ್‌ ಎಂಬ ತಮ್ಮ ಪುಸ್ತಕದಲ್ಲಿ ವಿವರಿಸುವುದೇನಂದರೆ, “ಭಾವಾತಿರೇಕಶೂನ್ಯರಾದ ನಾಸ್ತಿಕರಿಗೆ ಸಹ ನಿಸರ್ಗದೆಡೆಗೆ ಆಗಿಂದಾಗ್ಗೆ ಇರುವ ಪೂಜ್ಯ ಭಾವನೆ, ಅದರ ಅಗಾಧತೆ, ಸೌಂದರ್ಯ, ಮತ್ತು ಸೂಕ್ಷ್ಮತೆಯ ಬಗ್ಗೆ ಅವರಿಗಿರುವ ಮೋಹಕತೆ ಮತ್ತು ಗೌರವ ಇದೆ, ಇದು ಧಾರ್ಮಿಕ ಭಯಭಕ್ತಿಗೆ ಸರಿಸಮಾನವಾಗಿದೆ.” ಇದು ನಮಗೆ ಏನನ್ನು ಕಲಿಸಬೇಕು?

ಕಲಾ ಕೌಶಲದ ಹಿಂದಿರುವ ಆ ಕಲಾಕಾರ

ಒಬ್ಬ ಕಲಾ ವಿದ್ಯಾರ್ಥಿಯು ಕಲಾಕಾರನ ಕಲೆಯನ್ನು ತಿಳಿದುಕೊಳ್ಳಲಿಕ್ಕಾಗಿ ಮತ್ತು ಗಣ್ಯಮಾಡಲಿಕ್ಕಾಗಿ ಅವನ ಕುರಿತು ಕಲಿಯುತ್ತಾನೆ. ಕಲಾಕಾರನ ಕಲಾಕೃತಿಯು ಆ ವ್ಯಕ್ತಿಯ ಒಂದು ಪ್ರತಿಫಲನವೆಂದು ಅವನು ಅಥವಾ ಅವಳು ಗ್ರಹಿಸುತ್ತಾರೆ. ನಿಸರ್ಗದ ಕಲೆಯು ಪ್ರಕೃತಿಯ ಮೂಲನಾದ ಸರ್ವಶಕ್ತನಾದ ದೇವರ ವ್ಯಕ್ತಿತ್ವವನ್ನು ಸಹ ಪ್ರತಿಬಿಂಬಿಸುತ್ತದೆ. “ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು . . . ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ,” ಎಂದು ಅಪೊಸ್ತಲ ಪೌಲನು ವಿವರಿಸಿದನು. (ರೋಮಾಪುರ 1:20) ಅದಲ್ಲದೆ, ಭೂಮಿಯ ನಿರ್ಮಾಣಿಕನು ಎಷ್ಟು ಮಾತ್ರಕ್ಕೂ ಅನಾಮಧೇಯನಲ್ಲ. ಪೌಲನು ತನ್ನ ಕಾಲದ ಅಥೇನ್ಯದ ತತ್ವಜ್ಞಾನಿಗಳಿಗೆ ಹೇಳಿದ ಪ್ರಕಾರ, “[ದೇವರು] ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.”—ಅ. ಕೃತ್ಯಗಳು 17:27.

ದೇವರ ಸೃಷ್ಟಿಯಲ್ಲಿರುವ ಕಲಾಕೃತಿಯು ಉದ್ದೇಶರಹಿತವಾದುದಲ್ಲ ಅಥವಾ ಅದು ಅಕಾಸ್ಮಾತ್‌ ಸಂಭವಿಸಲೂ ಇಲ್ಲ. ಅದು ನಮ್ಮ ಜೀವಿತಗಳನ್ನು ಸಮೃದ್ಧಗೊಳಿಸುತ್ತದಲ್ಲದೆ, ಅತ್ಯಂತ ಮಹಾ ಕಲಾಕಾರನೂ ವಿಶ್ವವನ್ನು ರೂಪಿಸಿದವನೂ ಆದ ಯೆಹೋವ ದೇವರ ಕೌಶಲಗಳನ್ನು, ಕಲ್ಪನಾಶಕ್ತಿಯನ್ನು, ಮತ್ತು ಮಹಾ ವೈಭವವನ್ನು ಪ್ರಕಟಪಡಿಸುತ್ತದೆ. ಆ ಸರ್ವ ಶ್ರೇಷ್ಠ ಕಲಾಕಾರನನ್ನು ಹೆಚ್ಚು ಉತ್ತಮವಾಗಿ ತಿಳಿಯುವಂತೆ ಈ ಕಲೆಯು ನಮಗೆ ಹೇಗೆ ಸಹಾಯ ಮಾಡಬಲ್ಲದೆಂಬುದನ್ನು ಮುಂದಿನ ಲೇಖನವು ಪರಿಗಣಿಸುವುದು.

[ಪುಟ 20 ರಲ್ಲಿರುವ ಚಿತ್ರ ಕೃಪೆ]

Musei Capitolini, Roma

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ