ಅಲ್ಪಸಂಖ್ಯಾತ ವರ್ಗದವರಿಗೆ ವಿಜಯ ಏಕರೂಪತೆಯ ದೇಶದಲ್ಲಿ
ಜಪಾನಿನ ಎಚ್ಚರ! ಸುದ್ದಿಗಾರರಿಂದ
ಒಸಾಕ ಹೈಕೋರ್ಟ್ ಪ್ರೆಸ್ ಕ್ಲಬ್ನಲ್ಲಿ ಆ ಯುವ ವಾದಿಯು ಕಾಣಿಸಿಕೊಳ್ಳಲಿಕ್ಕಾಗಿ ಏಳು ಟೆಲಿವಿಷನ್ ಕ್ಯಾಮರಗಳು ಹಾಗೂ ಡಜನುಗಟ್ಟಲೆ ವರದಿಗಾರರು ಕಾಯುತ್ತಿದ್ದರು. ಆಗ ಹತ್ತೊಂಭತ್ತು ವಯಸ್ಸಿನ ಕುನೀಹೀಟೊ ಕೋಬಾಯಾಶೀ ಮತ್ತು ಅವನ ಹೆತ್ತವರು ತಮ್ಮ ಮುಖಗಳಲ್ಲಿ ದೊಡ್ಡ ನಗೆಗಳುಳ್ಳವರಾಗಿ ಆ ಸಂಮೇಳನ ಕೋಣೆಯನ್ನು ಪ್ರವೇಶಿಸಿದರು. ಅವರು ವರದಿಗಾರರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದಾಗ ಕ್ಯಾಮರ ಫಾಶ್ಲುಗಳು ಪದೇಪದೇ ಬೆಳಗಿದವು.
“ನನ್ನ ವ್ಯಾಜ್ಯದಲ್ಲಿ ನನಗೆ ನಿಷ್ಪಕ್ಷಪಾತದ ತೀರ್ಪು ದೊರಕಿದರ್ದಲ್ಲಿ ನಾನು ಸಂತುಷ್ಟನು,” ಎಂದನು ಕುನೀಹೀಟೊ. “ಯಾವನೂ ಅವನ ಅಥವಾ ಅವಳ ಧಾರ್ಮಿಕ ನಂಬಿಕೆ ಯಾವುದೇ ಆಗಿರಲಿ, ಯಾವ ಹೈಸ್ಕೂಲಿಗೂ ಸೇರಿಸಲ್ಪಡುವ, ಬಡತಿಯಾಗುವ, ಮತ್ತು ಪದವಿ ಪ್ರಾಪನ್ತಾಗುವ ಒಂದು ಜಗತ್ತನ್ನು ನಾನು ನೋಡಲು ಇಷ್ಟಪಡುತ್ತೇನೆ.”
ಒಸಾಕ ಹೈಕೋರ್ಟು ಕೋಬಿ ಡಿಸ್ಟ್ರಿಕ್ಟ್ ಕೆಳಕೋರ್ಟಿನ ನಿರ್ಣಯವನ್ನು ವಿಪರ್ಯಸ್ತವಾಗಿಸಿ, ಕುನೀಹೀಟೊ ಯಾವುದಕ್ಕಾಗಿ ಪ್ರಯತ್ನಿಸುತ್ತಿದ್ದನೊ ಅದನ್ನು, ಅಂದರೆ ಧಾರ್ವಿಕ ನಂಬಿಕೆಗಳು ಯಾವುದೇ ಆಗಿರಲಿ, ಶಿಕ್ಷಣ ಪಡೆಯುವ ಹಕ್ಕನ್ನು ಕೊಟ್ಟಿತ್ತು.
ವಿವಾದಾಂಶ
ಕುನೀಹೀಟೊ ಧಾರ್ಮಿಕ ಕಾರಣಗಳಿಗಾಗಿ ಕೆಂಡೊ (ಜಪಾನೀ ಖಡ್ಗನೈಪುಣ್ಯ) ಕವಾಯತುಗಳಲ್ಲಿ ಭಾಗವಹಿಸದೆ ಇದುದ್ದಕ್ಕಾಗಿ, ಕೋಬಿ ಮ್ಯುನಿಸಿಪಲ್ ಇಂಡಸ್ಟಿಯ್ರಲ್ ಟೆಕ್ನಿಕಲ್ ಕಾಲೆಜ್ (ಸಂಕ್ಷಿಪ್ತವಾಗಿ, ಕೋಬಿ ಟೆಕ್)ನಿಂದ ಹೊರಹಾಕಲ್ಪಟ್ಟದ್ದು, ಇದ್ದ ವಿವಾದಾಂಶವಾಗಿತ್ತು. ಅವನಿಗೆ ಬಡತಿಯನ್ನು ಅಲ್ಲಗಳೆದು ಬಳಿಕ ಅವನನ್ನು ಹೊರಹಾಕಿದ ಶಾಲೆಯ ಈ ವರ್ತನೆಗಳನ್ನು ರದ್ದುಮಾಡಿದ ಒಸಾಕ ಕೋರ್ಟಿನ ಈ ತೀರ್ಪನ್ನು ಅನುಸರಿಸಿ, ಕುನೀಹೀಟೊ ತನ್ನ ಇಲೆಕ್ಟಿಕ್ರಲ್ ಎಂಜಿನಿಯರ್ ವ್ಯಾಸಂಗವನ್ನು ಮತ್ತೆ ಆರಂಭಿಸುವ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದನು. ಈ ಐದು ವರ್ಷಗಳ ಕಾಲೆಜಿನ ಮೊದಲ ಮೂರು ವರ್ಷಗಳು ಹೈಸ್ಕೂಲಿನ ಮೂರು ವರ್ಷಗಳಿಗೆ ಸಮಾನವಾಗಿರುತ್ತವೆ.
ಕುನೀಹೀಟೊ ತನ್ನ ಶಾರೀರಿಕ ಶಿಕ್ಷಣದ ತರಗತಿಯ ಭಾಗವಾಗಿ ಕೆಂಡೊ ಕವಾಯತುಗಳನ್ನು ಕಲಿಯಬೇಕೆಂದು ಕೋಬಿ ಟೆಕ್ ಪಟ್ಟುಹಿಡಿದಿತ್ತು. ಆದರೆ, ಅವನು ಯೆಹೋವನ ಸಾಕ್ಷಿಯಾಗಿದ್ದ ಕಾರಣ, ಅವನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿ ಅವನು ಯುದ್ಧೋಚಿತ ಕಲಾ ಕವಾಯತುಗಳಲ್ಲಿ ಭಾಗವಹಿಸಲು ಅನುಮತಿಸಲಿಲ್ಲ. ಆ ಪತ್ರಿಕಾ ಗೋಷ್ಠಿಯಲ್ಲಿ ವರದಿಗಾರರಿಗೆ ಕುನೀಹೀಟೊ ತನ್ನ ಬೈಬಲನ್ನು ತೆರೆದು ತನ್ನ ನೆಲೆಯನ್ನು ವಿವರಿಸಿದನು: “ಅವರೋ . . . ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.”—ಯೆಶಾಯ 2:4.
ಹಾಗಾದರೆ, ಒಬ್ಬ ಯುವ ವಿದ್ಯಾರ್ಥಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣ ಹಕ್ಕನ್ನು ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಏಕೆ ಹೋಗಬೇಕಾಯಿತು? ಟ್ಸುಕೂಬ ವಿಶ್ವವಿದ್ಯಾಲಯದ ಪ್ರೊಫೆಸರ್ ಕೋಜಿ ಟೋನಾಮಿ ಗಮನಿಸಿದ್ದು: “ಉದಾಸೀನತೆ ಮತ್ತು ಗ್ರಹಿಕೆಯ ಕೊರತೆಯ ಪರಿಣಾಮವಾಗಿ ವಿಶ್ವಾಸಿಗಳ ನಂಬಿಕೆಯ ಮೇಲೆ ಅನಿರೀಕ್ಷಿತ ನಿರ್ಬಂಧಗಳು ಹಾಕಲ್ಪಡಬಲ್ಲವು.” ಸರಕಾರ ಅಥವಾ ಸಮಾಜವು ಒಂದು ಧರ್ಮವನ್ನು ಇಚ್ಛಾಪೂರ್ವಕವಾಗಿ ಶೋಷಿಸಲಿಕ್ಕಿಲ್ಲವಾದರೂ, ಧರ್ಮವು ಉದ್ದೇಶಪೂರ್ವಕವಲ್ಲದೆ ನಿರೋಧಿಸಲ್ಪಡಸಾಧ್ಯವಿರುವ ವಿದ್ಯಮಾನಗಳಿರಬಹುದು.
ಅಲ್ಪಸಂಖ್ಯಾತ ವರ್ಗದವರ ಮೇಲೆ ಇಂತಹ “ಅನಿರೀಕ್ಷಿತ ನಿರ್ಬಂಧಗಳು” ಹೊರಿಸಲಾದದ್ದು ಏಕೆ? “ಏಕೆಂದರೆ ಜಪಾನೀಯ ಸಮಾಜವು, ಅಲ್ಪಸಂಖ್ಯಾತ ವರ್ಗದವರು ಬಹುಪಕ್ಷದವರನ್ನು ಅನುವರ್ತಿಸುವಂತೆ ಬಲಾತ್ಕರಿಸುವ ಸಾಮಾಜಿಕ ವ್ಯವಸ್ಥೆಯನ್ನು ಗೌರವಿಸಿದೆ,” ಎಂದು ಆಓಮ ಗಾಕೂಇನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಹೆಟೋಶಿ ಸೆರೀಸಾವ ಉತ್ತರಿಸುತ್ತಾರೆ. ಸಮಾಜಕ್ಕೆ ಹೊಂದಿಕೊಳ್ಳಬೇಕೆಂಬ ಒತ್ತಡವು ಜಪಾನ್ನಲ್ಲಿ ಮೊತ್ತದಲ್ಲಿ ಬಹಳ ಬಲವಾಗಿದೆ.
ಪ್ರತ್ಯೇಕರಾಗಿರುವವರನ್ನು ಹೊರಹಾಕುವ ಶಾಲಾ ಪದ್ಧತಿಯೊಂದರಲ್ಲಿರುವುದು ಎಳೆಯರಿಗೆ ಸುಲಭವಲ್ಲ. ಆದರೆ ಇದು ಒಂದು ಧಾರ್ಮಿಕ ಅಲ್ಪಸಂಖ್ಯಾತ ವರ್ಗಕ್ಕೆ ಮಾತ್ರ ಚಿಂತೆಯ ವಿಷಯವಲ್ಲ. ನಾವು ಈ ವ್ಯಾಜ್ಯವನ್ನು ಆರಂಭದಿಂದ ಅನುಸರಿಸುತ್ತಾ, ಯಾವುದು ವಿವಾದಾಂಶವಾಗಿತ್ತೆಂದೂ ಈ ತೀರ್ಮಾನವು ಸಾಮಾನ್ಯ ಸಾರ್ವಜನಿಕರನ್ನು ಹೇಗೆ ಬಾಧಿಸುತ್ತದೆಂದೂ ನೋಡೋಣ.
ಅಲ್ಪಸಂಖ್ಯಾತ ವರ್ಗದವರ ಹಕ್ಕನ್ನು ಸ್ಥಾಪಿಸುವುದು
1990ರ ತನಕ ತನ್ನ ವಿದ್ಯಾರ್ಥಿಗಳು ಯುದ್ಧೋಚಿತ ಕವಾಯತನ್ನು ಕಲಿಯಬೇಕೆಂದು ಕೋಬಿ ಟೆಕ್ ಅಪೇಕ್ಷಿಸಲಿಲ್ಲ. ಆದರೆ ಒಂದು ಯುದ್ಧೋಚಿತ ಕಲೆಗಳ ಕವಾಯತು ಅಂಗಣವಿದ್ದ ವ್ಯಾಯಾಮ ಶಾಲೆಯನ್ನು ಕಟ್ಟಿ ಮುಗಿಸಿದ ಮೇಲೆ, ಶಾಲೆಯು ತನ್ನ ವಿದ್ಯಾರ್ಥಿಗಳಿಂದ ಕೆಂಡೊ ಕವಾಯತುಗಳನ್ನು ಅಪೇಕ್ಷಿಸಿತು. 1990ರಲ್ಲಿ ಶಾಲೆಯ ಶಾರೀರಿಕ ಶಿಕ್ಷಣ ಶಾಖೆಯು, 16 ವರ್ಷ ಪ್ರಾಯದಲ್ಲಿ ಕೋಬಿ ಟೆಕ್ ಶಾಲೆಗೆ ಸೇರಿದ ಯೆಹೋವನ ಸಾಕ್ಷಿಗಳ ಕಡೆಗೆ ಬಿಗಿಯಾದ ಸ್ಥಾನವನ್ನು ತೆಗೆದುಕೊಂಡಿತು. ಕೆಂಡೊ ಕವಾಯತುಗಳಿಂದ ವಿನಾಯಿತಿ ಬೇಕೆಂಬ ಅವರ ಬೇಡಿಕೆಗೆ ಒಬ್ಬ ಉಪಾಧ್ಯಾಯರು ಹೇಳಿದ್ದು: “ಮಾಡಬೇಕೆಂದು ಶಾಲೆ ಹೇಳಿದ್ದನ್ನು ನಿಮಗೆ ಮಾಡಲಾಗದಿದ್ದರೆ, ಶಾಲೆಯನ್ನು ಬಿಟ್ಟುಹೋಗಿ!”
ತಮ್ಮ ನಂಬಿಕೆಗಾಗಿ ಸ್ಥಿರ ನಿಂತವರಿಗೊ, ಮುಂದಿನ ದರ್ಜೆಗೆ ಬಡತಿಯಾಗುವ ಪ್ರತೀಕ್ಷೆಯು ಮಬ್ಬಾಗಿತ್ತು. ಇನ್ನೊಬ್ಬ ಉಪಾಧ್ಯಾಯರು ಹೇಳಿದ್ದು: “ನೀವು [ಶಾರೀರಿಕ ಶಿಕ್ಷಣದ] ಬೇರೆ ವ್ಯಾಯಾಮಗಳಲ್ಲಿ ಶ್ರಮಪಟ್ಟು ಕೆಲಸಮಾಡಿದರೂ ನಿಮಗೆ ಯಾವ ಪ್ರಶಸ್ತಿಯೂ ದೊರೆಯದು.” ಐವರು ವಿದ್ಯಾರ್ಥಿಗಳು ಬೈಬಲ್ ಬೋಧನೆಗಳಲ್ಲಿ ತಮಗಿರುವ ನಂಬಿಕೆಗೆ ಅಂಟಿಕೊಂಡು ನಿಂತರು. ಖಡ್ಗವು ಬಿದಿರಿನಿಂದ ಮಾಡಿದ್ದಾಗಿದ್ದರೂ ಅವರು ಅದನ್ನು ತೆಗೆದುಕೊಳ್ಳಲಿಲ್ಲ. ಅವರಲ್ಲಿ ಮೂವರು ದೀಕ್ಷಾಸ್ನಾತ ಸಾಕ್ಷಿಗಳಾಗಿದ್ದರು ಮತ್ತು ಇಬ್ಬರು ಅದೀಕ್ಷಾಸ್ನಾತರಾಗಿದ್ದರೂ, ಅವರೆಲ್ಲ ಬೈಬಲಿನಲ್ಲಿ ತಮ್ಮ ನಂಬಿಕೆಯನ್ನು ದೃಢೀಕರಿಸಿದರು. ತಮ್ಮಿಂದ ಉಪಾಧ್ಯಾಯರು ಇನ್ನಾವ ಅನ್ಯರೀತಿಯ ಚಟುವಟಿಕೆಗಳನ್ನಾದರೂ ಅವಶ್ಯಪಡುವಲ್ಲಿ ಅವರು ಅದಕ್ಕೆ ಒಪ್ಪಲು ಸಿದ್ಧರಾಗಿದ್ದರು.
ಅವರ ನೆಲೆಯ ಪರಿಣಾಮವಾಗಿ, ಮುಂದಿನ ದರ್ಜೆಗೆ ಅವರಿಗೆ ಬಡತಿಯು ನಿರಾಕರಿಸಲ್ಪಟ್ಟಿತು. 1991ರಲ್ಲಿ ಮುಂದಿನ ಶಾಲಾವರ್ಷ ಆರಂಭಗೊಂಡಾಗ, ಶಾರೀರಿಕ ಶಿಕ್ಷಣ ಶಿಕ್ಷಕರು ಕೆಂಡೊ ಕವಾಯತುಗಳಲ್ಲಿ ಭಾಗವಹಿಸಲು ನಿರಾಕರಿಸಿದ ಆ ಐವರು ವಿದ್ಯಾರ್ಥಿಗಳನ್ನೂ ಅದೇ ನಂಬಿಕೆಯಿದ್ದ ಬೇರೆ ಒಂಬತ್ತು ಹೊಸ ವಿದ್ಯಾರ್ಥಿಗಳನ್ನೂ ಒಟ್ಟುಗೂಡಿಸಿ ಹೇಳಿದ್ದು: “ನಿಮಗೆ ಮುಂದಿನ ದರ್ಜೆಗೆ ಬಡತಿಯಾಗಬೇಕಾದರೆ ಹಾಸ್ಯಾಸ್ಪದವಾಗುವಷ್ಟು ಹೆಚ್ಚು ಅಂಕಗಳನ್ನು ಪಡೆಯಬೇಕಾದೀತು. ನಿಮ್ಮಲ್ಲಿ ಯಾರೂ ಅಷ್ಟು ಅಂಕಗಳನ್ನು ಪಡೆಯರು.” ಆ ಉಪಾಧ್ಯಾಯರುಗಳು ಇನ್ನೂ ಅವರಿಗೆ ಹೇಳಿದ್ದು: “ಇದು ಕಡ್ಡಾಯ ಶಿಕ್ಷಣವಲ್ಲ. [ಜಪಾನಿನಲ್ಲಿ ಕಡ್ಡಾಯ ಶಿಕ್ಷಣವು ಒಂದರಿಂದ ಒಂಬತ್ತನೆಯ ದರ್ಜೆಯ ವರೆಗಿದೆ.] ‘ಇಲ್ಲಿಂದ ಹೊರಡಿರಿ,’ ಎಂದು ನಾವು ನಿಮಗೆ ಹೇಳಸಾಧ್ಯವಿದೆ.”
ಆ ಐವರು ವಿದ್ಯಾರ್ಥಿಗಳು ಕೋಬಿ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ದಾವೆ ಹೂಡಿದರು. ಶಾಲೆಯ ಕ್ರಮವು ಆರಾಧನಾ ಸ್ವಾತಂತ್ರ್ಯದ ಮತ್ತು ವಿದ್ಯೆ ಪಡೆಯುವ ತಮ್ಮ ಸಂವಿಧಾನೀಯ ಹಕ್ಕುಗಳನ್ನು ಅತಿಕ್ರಮಿಸುತ್ತದೆಯೆಂದು ಅವರು ವಾದಿಸಿದರು. ಅದೇ ಸಮಯದಲ್ಲಿ, ಆ ಐವರು ವಿದ್ಯಾರ್ಥಿಗಳು ಕೋಬಿ ಡಿಸ್ಟ್ರಿಕ್ಟ್ ಕೋರ್ಟಿಗೂ, ಆ ಬಳಿಕ ಒಸಾಕ ಹೈ ಕೋರ್ಟಿಗೂ ಮನವಿ ಹಾಕಿ, ತಮ್ಮ ಮೊಕದ್ದಮೆಯ ವಿಚಾರಣೆ ನಡೆಯುವ ಸಮಯದಲ್ಲಿ ತಾವು ಪಾಠಗಳಿಗೆ ಹೋಗಲಾಗುವಂತೆ ತಮಗೆ ಬಡತಿಯನ್ನು ನಿರಾಕರಿಸುವ ಶಾಲೆಯ ನಿರ್ಣಯವನ್ನು ನಿಲ್ಲಿಸಬೇಕೆಂದು ಹೇಳಿದರು. ಆದರೆ, ಈ ಮನವಿಗಳನ್ನು ಎರಡೂ ಕೋರ್ಟುಗಳು ನಿರಾಕರಿಸಿದವು.
ಆ ಐವರು ವಿದ್ಯಾರ್ಥಿಗಳಲ್ಲಿ ಇಬ್ಬರಿಗೆ ಮುಂದಿನ ಶಾಲಾವರ್ಷದಲ್ಲಿ ಶಾರೀರಿಕ ಶಿಕ್ಷಣಕ್ಕೆ ಅವರ ಪ್ರಶಸ್ತಿಗಳು ಪುನಃ ನಿರಾಕರಿಸಲಾದವು ಮತ್ತು ಅವರನ್ನು ಹೊರಹಾಕುವ ಬೆದರಿಕೆ ನೀಡಲ್ಪಟ್ಟಿತು. ಇದರ ಪರಿಣಾಮವಾಗಿ, ಅವರಲ್ಲೊಬ್ಬನು ಶಾಲೆಯ ಮನವೊಪ್ಪಿಸುವಿಕೆಯ ಕಾರಣ ಶಾಲೆಯನ್ನು ಬಿಟ್ಟನು. ಇನ್ನೊಬ್ಬನು, ಅವನು ಬಿಡಬೇಕೆಂಬ ಶಾಲೆಯ ಸೂಚನೆಗೆ ಒಪ್ಪಲು ನಿರಾಕರಿಸಿದನು. ಆ ವಿದ್ಯಾರ್ಥಿಯಾದ ಕುನೀಹೀಟೊ ಕೋಬಯಾಶೀಯನ್ನು ಶಾಲೆಯಿಂದ ಹೊರಹಾಕಲಾಯಿತು.
ಒಂದು ದರ್ಜೆಯಿಂದ ಎರಡು ಬಾರಿ ತೇರ್ಗಡೆ ಹೊಂದದ ಒಬ್ಬ ವಿದ್ಯಾರ್ಥಿಯು, “ಕಲಿಕೆಯಲ್ಲಿ ಕೆಳಮಟ್ಟದವನು, ಪದವಿ ಪಡೆಯುವ ಪ್ರತೀಕ್ಷೆಯೇ ಇಲ್ಲದವನು,” ಎಂಬುದಾಗಿ ಒಡನೆ ಹೊರಹಾಕಲ್ಪಡಲು ಯೋಗ್ಯನು ಎಂದು ಶಾಲಾ ನಿಯಮಗಳು ಹೇಳಿದವು. ಆದರೆ ಕುನೀಹೀಟೊ “ಕಲಿಕೆಯಲ್ಲಿ ಕೆಳಮಟ್ಟದವನು” ಆಗಿದ್ದನೊ? ಯಾವುದರಲ್ಲಿ ಕೆಂಡೊ ವಿವಾದಾಂಶದಿಂದಾಗಿ ಅವನು 100ರಲ್ಲಿ 48 ಪಾಯಿಂಟುಗಳನ್ನು ಪಡೆದ ಕಾರಣ ಅವನು ತೇರ್ಗಡೆ ಹೊಂದಲಿಲ್ಲವೊ ಆ ಶಾರೀರಿಕ ಶಿಕ್ಷಣವನ್ನೂ ಸೇರಿಸಿ, ಎಲ್ಲ ಪಾಠಗಳಲ್ಲಿ ಅವನ ಸರಾಸರಿಯು 90.2 ಪಾಯಿಂಟುಗಳಾಗಿದ್ದವು. ಅವನು ತನ್ನ ಕ್ಲಾಸಿನ 42 ಮಂದಿ ವಿದ್ಯಾರ್ಥಿಗಳಲ್ಲಿ ಪ್ರಪ್ರಥಮನಾಗಿದ್ದನು! ಅವನು ಸ್ವದರ್ತನೆಯವನೂ ಕಲಿಯಲು ಸಿದ್ಧಮನಸ್ಸಿನವನೂ ಆಗಿದ್ದನು.
ಈ ಹೊರದಬ್ಬುವ ಕಾರ್ಯವನ್ನು ಜಾರಿಗೆ ತರುವುದನ್ನು ನಿಲ್ಲಿಸಲಿಕ್ಕಾಗಿ ಕೋಬಿ ಡಿಸ್ಟ್ರಿಕ್ಟ್ ಕೋರ್ಟು ಮತ್ತು ಆ ಬಳಿಕ ಒಸಾಕ ಹೈಕೋರ್ಟಿಗೆ ಮನವಿಗಳನ್ನು ಸಲ್ಲಿಸಲಾಯಿತು. ಎರಡೂ ಕೋರ್ಟುಗಳು ಆ ಮನವಿಯನ್ನು ನಿರಾಕರಿಸಿದವು.
ಡಿಸ್ಟ್ರಿಕ್ಟ್ ಕೋರ್ಟಿನ ತೀರ್ಮಾನ
ಫೆಬ್ರವರಿ 22, 1993ರಲ್ಲಿ, ಆ ಐವರು ವಿದ್ಯಾರ್ಥಿಗಳು ವ್ಯಾಜ್ಯ ಹೂಡಿ ಬಹು ತರ ಎರಡು ವರ್ಷಗಳ ಬಳಿಕ, ಕೋಬಿ ಡಿಸ್ಟ್ರಿಕ್ಟ್ ಕೋರ್ಟು ಶಾಲೆಗೆ ಅನುಕೂಲವಾದ ತೀರ್ಪನ್ನು ಕೊಟ್ಟಿತು. “ಕೆಂಡೊ ಕವಾಯತುಗಳಲ್ಲಿ ಭಾಗವಹಿಸಬೇಕೆಂಬ ಶಾಲೆಯ ಕಡ್ಡಾಯವು, ವಾದಿಯ ಆರಾಧನಾ ಸ್ವಾತಂತ್ರ್ಯವನ್ನು ತುಸು ನಿರ್ಬಂಧಕ್ಕೊಳಪಡಿಸಿತು ಎಂಬುದನ್ನು ಅಲ್ಲಗಳೆಯಸಾಧ್ಯವಿಲ್ಲ,” ಎಂದು ಅಧ್ಯಕ್ಷ ನ್ಯಾಯಾಧೀಶ ಟಾಡಾವೊ ಟ್ಸುಜೀ ಒಪ್ಪಿದರು. ಆದರೆ ಅವರು ತೀರ್ಮಾನಿಸಿದ್ದು: “ಶಾಲೆಯು ಕೈಕೊಂಡ ಕ್ರಮಗಳು ಸಂವಿಧಾನವನ್ನು ಉಲ್ಲಂಘಿಸಿರುವುದಿಲ್ಲ.”
ವಿದ್ಯಾರ್ಥಿಗಳು ಒಡನೆ ಒಸಾಕ ಹೈಕೋರ್ಟಿಗೆ ಅಪ್ಪೀಲು ಮಾಡಿದರು. ಆದರೆ ಡಿಸ್ಟ್ರಿಕ್ಟ್ ಕೋರ್ಟಿನ ತೀರ್ಮಾನವು ಅನೇಕ ಆಲೋಚನಾಶಕ್ತಿಯುಳ್ಳವರನ್ನು ಕಾಡಿಸಿತು. ಒಬ್ಬ ವ್ಯಕ್ತಿಯು ಮೈನೀಚಿ ಶೀಂಬೂನ್ ವಾರ್ತಾಪತ್ರದ ಓದುಗರ ಅಂಕಣದಲ್ಲಿ ತನ್ನನ್ನು ಹೀಗೆ ವ್ಯಕ್ತಪಡಿಸಿಕೊಂಡನು: “ಈ ಬಾರಿಯ ನಿರ್ಣಯವು, ‘ಧಾರ್ಮಿಕ ಆಧಾರಗಳ ಮೇರೆಗೆ ಕೆಂಡೊ ಪಾಠಗಳಲ್ಲಿ ಭಾಗವಹಿಸದಿರುವಿಕೆಯನ್ನು ಸಹಿಸಿಕೊಳ್ಳುವುದು ಧಾರ್ಮಿಕ ತಾಟಸ್ಥ್ಯವನ್ನು ಅತಿಕ್ರಮಿಸುತ್ತದೆ’ ಎಂಬ ತೀರ್ಪಿನ ಸುತ್ತ ಕೇಂದ್ರೀಕರಿಸುತ್ತದೆ. ಆದರೂ ತಾಟಸ್ಥ್ಯವೆಂದರೆ ವಿವಾದದಲ್ಲಿರುವ ಇಬ್ಬದಿಗಳ ಪಕ್ಷವನ್ನೂ ವಹಿಸದಿರುವುದೆಂದರ್ಥ. ಮತ್ತು ಧಾರ್ಮಿಕ ತಾಟಸ್ಥ್ಯದ ವಿಷಯದಲ್ಲಿ, ಇರುವ ವಿವಾದಾಂಶವು ಬಹುಸಂಖ್ಯಾತರ ಎದುರಾಗಿ ಅಲ್ಪಸಂಖ್ಯಾತ ವರ್ಗದವರ ನಂಬಿಕೆಯನ್ನು ಸಂರಕ್ಷಿಸುವುದೇ. ಆದಕಾರಣ, ಈ ತೀರ್ಮಾನವು ಕಾರ್ಯತಃ ಧರ್ಮ ಸ್ವಾತಂತ್ರ್ಯವನ್ನು ಅಲ್ಲಗಳೆಯುತ್ತದೆ, ಮತ್ತು ಕೋರ್ಟು ತಾನೇ ಧಾರ್ಮಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸಿದೆ.”
ಅನೇಕರು ಗಾಬರಿಗೊಂಡು ತಮ್ಮ ಅಭಿಪ್ರಾಯವನ್ನು ಕೊಡುವಂತೆ ಪ್ರಚೋದಿಸಲ್ಪಟ್ಟರು. ನಾನ್ಸಾನ್ ವಿಶ್ವವಿದ್ಯಾಲಯದ ಸಂವಿಧಾನ ಶಾಸ್ತ್ರದ ಪ್ರೊಫೆಸರ್ ಟಾಕೀಶಿ ಕೋಬಾಯಾಶಿ, ಈ ಮೊಕದ್ದಮೆಯ ಮೇಲಿನ ತನ್ನ ಅಭಿಪ್ರಾಯವನ್ನು ಒಸಾಕ ಹೈಕೋರ್ಟಿಗೆ ಕಳುಹಿಸಿ ಹೀಗೆಂದರು: “ವಿವಾದದಲ್ಲಿರುವ ಈ ಮೊಕದ್ದಮೆಯು ನಮ್ಮ ದೇಶದ ಕೋರ್ಟುಗಳನ್ನು, ಅಲ್ಪಸಂಖ್ಯಾತ ವರ್ಗದವರ ಹಕ್ಕುಗಳನ್ನು ಸಂರಕ್ಷಿಸುವ ಪಂಥಾಹ್ವಾನವನ್ನು ಅವು ಹೇಗೆ ನಿರ್ವಹಿಸುವುವೆಂದು ನಿಶ್ಚಯವಾಗಿಯೂ ಪ್ರಶ್ನಿಸುತ್ತಿವೆ. . . . ಆ ಕಾಲೆಜು, ಧರ್ಮ ಮತ್ತು ಸರಕಾರದ ಪ್ರತ್ಯೇಕತೆ ಹಾಗೂ ಸಾರ್ವಜನಿಕ ಶಿಕ್ಷಣದ ತಾಟಸ್ಥ್ಯದ ಸೋಗಿನಿಂದ, ಬಹುಸಂಖ್ಯಾತರ ಸಾಮಾನ್ಯ ವೀಕ್ಷಣದ ಆಧಾರದ ಮೇರೆಗೆ ಅಲ್ಪಸಂಖ್ಯಾತ ವರ್ಗದವರ ಧಾರ್ಮಿಕ ನೆಲೆಯನ್ನು ಸಹಿಸಿಕೊಳ್ಳಲು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿತು. ಕೆಳ ಕೋರ್ಟಿನ ತೀರ್ಪು ಇಂತಹ ಕಾರ್ಯಗಳನ್ನು ಶಾಸನಸಮ್ಮತವೂ ಸಾಂವಿಧಾನಿಕವೂ ಆಗಿವೆಯೆಂದು ಆಶೀರ್ವದಿಸಿತು. ಆದರೂ, ಅಲ್ಪಸಂಖ್ಯಾತ ವರ್ಗದವರ ನಂಬಿಕೆಗಳು, ಧಾರ್ಮಿಕವೆಂದು ಸಾಮಾನ್ಯವಾಗಿ ಅಂಗೀಕರಿಸಲ್ಪಡುವ ವಿಷಯಗಳ ವೀಕ್ಷಣದಿಂದ ಅರ್ಥಮಾಡಿಕೊಳ್ಳಲ್ಪಡದೆ ಇರಬಹುದಾದರೂ, ಅಂತಹ ನಂಬಿಕೆಗಳು ಯಥಾರ್ಥವಾಗಿರುವಲ್ಲಿ ಅವನ್ನು ಗೌರವಿಸತಕ್ಕದ್ದು. ಕೋರ್ಟು, ತಾನು ಅಲ್ಪಸಂಖ್ಯಾತ ವರ್ಗದ ಅಂತಿಮ ಸಂರಕ್ಷಕನೆಂಬ ಪ್ರಜ್ಞೆಯಿಂದ ತೀರ್ಪುಕೊಡುವುದು ವಿಶೇಷವಾಗಿ ಆವಶ್ಯಕವಾಗಿದೆ.”
ಇನ್ನೊಬ್ಬ ಕಾನೂನು ವಿಶೇಷಜ್ಞ, ಟ್ಸುಕೂಬ ವಿಶ್ವವಿದ್ಯಾಲಯದ ಪ್ರೊಫೆಸರ್ ಟೆಟ್ಸೂಓ ಶೀಮೋಮುರಾ ಹೇಳಿದ್ದು: “ಈ ಮೊಕದ್ದಮೆಯಲ್ಲಿ ಯಾವುದು ಅಪಾಯಸೂಚಕವೆಂದರೆ, ಶಾಲೆಯ ಮಟ್ಟಿಗೆ ಇನ್ನೂ ಆಳವಾಗಿ ಬೇರೂರಿರುವ ಪೀಡಕ ಪ್ರವೃತ್ತಿಗಳೇ.” ಒಂದು ಟೆಲಿವಿಷನ್ ಸಂದರ್ಶನದಲ್ಲಿ ಅವರು ಹೇಳಿದ್ದೇನಂದರೆ, ಒಬ್ಬ ವಿದ್ಯಾರ್ಥಿಗೆ ಅನ್ಯಮಾರ್ಗಗಳನ್ನು ಕೊಡದೇ ಅವನನ್ನು ಹೊರಹಾಕುವುದು ಶಿಕ್ಷಕರ ವತಿಯಿಂದ ದೋಷವನ್ನು ತಿಳಿಯಪಡಿಸುತ್ತದೆ ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮದ ಕುರಿತು ಚಿಂತನೆಯ ಕೊರತೆಯನ್ನು ತೋರಿಸುತ್ತದೆ.
ಫೆಬ್ರವರಿ 22, 1994ರಂದು, ಕೋಬಿ ನ್ಯಾಯವಾದಿ ಸಂಘವು ಕುನೀಹೀಟೊನನ್ನು ಹಿಂದೆ ತೆಗೆದುಕೊಳ್ಳಲು ಕೋಬಿ ಟೆಕ್ನ ಪ್ರಾಂಶುಪಾಲರಿಗೆ ಒಂದು ಅಧಿಕೃತ ಶಿಫಾರಸ್ಸನ್ನು ಮಾಡಿತು. ಕುನೀಹೀಟೊನಿಗೆ ಬಡತಿ ನಿರಾಕರಣೆ ಮಾಡಿದ ಮತ್ತು ಅವನನ್ನು ಹೊರದಬ್ಬಿದ ಆ ಶಾಲೆಯ ಕೃತ್ಯವು ಅವನ ಆರಾಧನಾ ಸ್ವಾತಂತ್ರ್ಯದ ಮತ್ತು ವಿದ್ಯೆ ಪಡೆಯಲು ಅವನಿಗಿರುವ ಹಕ್ಕಿನ ಅತಿಕ್ರಮಣವೆಂದು ಅದು ಘೋಷಿಸಿತು.
ನಿಷ್ಪಕ್ಷಪಾತದ ನಿರ್ಣಯ
ಈ ಅಪ್ಪೀಲ್ ವಿಚಾರಣೆಗಳು ಮುಂದುವರಿಯುತ್ತಿದ್ದಾಗ, ಕುನೀಹೀಟೊನನ್ನು ಬಿಟ್ಟು ಉಳಿದ ನಾಲ್ವರು ವಾದಿಗಳು ತಮ್ಮ ವ್ಯಾಜ್ಯಗಳನ್ನು ರದ್ದುಮಾಡಲು ನಿರ್ಣಯಿಸಿದರು. ಇದಕ್ಕೆ ಕಾರಣವು, ಮೂವರನ್ನು ಆಗಲೇ ಮುಂದಿನ ದರ್ಜೆಗೆ ಬಡತಿ ಮಾಡಲಾಗಿತ್ತು ಮತ್ತು ಒಬ್ಬನನ್ನು ಶಾಲೆ ಬಿಡುವಂತೆ ಒತ್ತಾಯಿಸಲಾಗಿತ್ತು. ಇದು, ಶಾಲೆಯು ಕುನೀಹೀಟೊನೊಂದಿಗೆ ಹೇಗೆ ವ್ಯವಹರಿಸಿತೊ ಅದರ ಮೇಲೆ ವಿವಾದದ ವಿಷಯವು ಕೇಂದ್ರೀಕರಿಸುವಂತೆ ಮಾಡಿತು.
ಕುನೀಹೀಟೊವಿನ ನಾಲ್ವರು ಮಾಜಿ ಸಹಪಾಠಿಗಳಾದರೋ ವಿಚಾರಣೆಯ ಸಮಯದಲ್ಲಿ ಸದಾ ಉಪಸ್ಥಿತರಿರಲು ಪ್ರಯತ್ನಿಸುವ ಮೂಲಕ ಅವನಿಗೆ ನೈತಿಕ ಬೆಂಬಲವನ್ನು ಕೊಟ್ಟರು. ತನ್ನ ಅಂಶಕಾಲಿಕ ಉದ್ಯೋಗದ ಅತ್ಯಲ್ಪ ಸಂಪಾದನೆಯಿಂದ ಉಳಿತಾಯಮಾಡುತ್ತ, ಶಾಲೆಯನ್ನು ಬಿಡುವಂತೆ ಬಲಾತ್ಕರಿಸಲ್ಪಟ್ಟ ಆ ವಿದ್ಯಾರ್ಥಿಯು, ಕುನೀಹೀಟೊ ಆ ನ್ಯಾಯಹೋರಾಟವನ್ನು ಮುಂದುವರಿಸುವಂತೆ ಒಟ್ಟು 1,00,000 ಯೆನ್ ಸಹಾಯವನ್ನು ಕೊಟ್ಟನು.
ಡಿಸೆಂಬರ್ 22, 1994ರಂದು, ಕುನೀಹೀಟೊ, ಆ ಇತರ ವಿದ್ಯಾರ್ಥಿಗಳೊಂದಿಗೆ ಒಸಾಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ರೇಸುಕೀ ಶೀಮೇಡೆ ಅವರ ಮಾತುಗಳಿಗಾಗಿ ಕಾದನು.
“ಆದ್ಯ ನಿರ್ಣಯವು ರದ್ದು ಮಾಡಲ್ಪಟ್ಟಿದೆ,” ಎಂದು ನ್ಯಾಯಾಧೀಶ ಶೀಮೇಡೆ ತೀರ್ಪುಕೊಟ್ಟರು.
ನ್ಯಾಯಾಧೀಶ ಶೀಮೇಡೆ ತನ್ನ ತೀರ ಗಮನಾರ್ಹ ನಿರ್ಣಯದಲ್ಲಿ, ಕೆಂಡೊ ಕವಾಯತುಗಳನ್ನು ನಿರಾಕರಿಸಿದುದರಲ್ಲಿ ಕುನೀಹೀಟೊಗಿದ್ದ ಕಾರಣವು ಯಥಾರ್ಥವಾದುದಾಗಿತ್ತು ಎಂದು ತೀರ್ಮಾನಿಸಿದರು. ಸಾರ್ವಜನಿಕರಿಗಾಗಿದ್ದ ಶಿಕ್ಷಣ ಸಂಸ್ಥೆಯಾಗಿದುದ್ದರಿಂದ ಕೋಬಿ ಟೆಕ್ಗೆ ತನ್ನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಗಣನೆಯನ್ನು ಕೊಡುವ ಹಂಗಿದೆಯೆಂದು ನ್ಯಾಯಾಧೀಶರು ಹೇಳಿದರು. ಕೆಂಡೊ ಕವಾಯತುಗಳನ್ನು ನಿರಾಕರಿಸಿದ್ದಕ್ಕೆ ಕುನೀಹೀಟೊಗಾಗಿದ್ದ ನಷ್ಟವು ತೀರ ದೊಡ್ಡದಾಗಿತ್ತೆಂದೂ, ಅವನನ್ನು ಹೊರಹಾಕಲು ತೆಗೆದುಕೊಂಡ ಕ್ರಮವು ವಿದ್ಯೆ ಪಡೆಯುವ ಅವನ ಸಕಲ ಸಂದರ್ಭಗಳನ್ನು ಅಪಹರಿಸುವುದಲ್ಲದೆ ಮತ್ತೇನೂ ಅಲ್ಲವೆಂದೂ ಅವರು ಹೇಳಿದರು.
ಶಾಲೆಯು ಅನ್ಯಮಾರ್ಗಗಳನ್ನು ಒದಗಿಸಬೇಕೆಂದು ನ್ಯಾಯಾಧೀಶ ಶೀಮೇಡೆ ತೀರ್ಪುಕೊಟ್ಟರು. ಇಂತಹ ಅನ್ಯಮಾರ್ಗಗಳನ್ನು ಒದಗಿಸುವುದು, ಯಾವ ರೀತಿಯಲ್ಲಿಯೂ ಮೇಲ್ಮನವೆಗಾರನ ಧರ್ಮವನ್ನು ಪ್ರವರ್ಧಿಸುವುದಾಗಲಿ, ಅದಕ್ಕೆ ನೆರವಾಗುವುದಾಗಲಿ ಇಲ್ಲ, ಅಥವಾ ಅದು ಇತರ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ನಡಿಸುವುದೂ ಇಲ್ಲ. “ಯಾರ ವಿರುದ್ಧವಾಗಿ ಮೇಲ್ಮನವೆಯಾಗಿದೆಯೊ ಅದು [ಶಾಲೆ] ಅನ್ಯಮಾರ್ಗಗಳನ್ನು ಜಾಗರೂಕತೆಯಿಂದ ಪರಿಗಣಿಸಿದೆ ಎಂಬುದಕ್ಕೆ ಯಾವ ಸಾಕ್ಷ್ಯವೂ ಇಲ್ಲ,” ಎಂದರು ಆ ನ್ಯಾಯಾಧೀಶರು. “ಬದಲಿಗೆ, . . . ಆ ಶಾಲೆ, ಕೆಂಡೊ ಕವಾಯತುಗಳ ನಿರಾಕರಣೆಯನ್ನು ಸಹಿಸದಿರುವ ಕಾರ್ಯನೀತಿಯನ್ನು ಹಟದಿಂದ ಉಳಿಸಿಕೊಂಡಿತು ಮತ್ತು ಅನ್ಯಮಾರ್ಗಗಳನ್ನು ಒದಗಿಸುವ ಸಾಧ್ಯತೆಯನ್ನು ಪರಿಗಣಿಸಲು ಆರಂಭಿಸಲೂ ಇಲ್ಲ.”
ಆ ತೀರ್ಮಾನ ನಿಮ್ಮ ಮೇಲೆ ಪರಿಣಾಮ ಬೀರುವ ವಿಧ
ಅಲ್ಪಸಂಖ್ಯಾತ ವರ್ಗದವರ ಗುಂಪಿಗೆ ಸೇರಿದ ಈ ಯುವಕನ ವಿಜಯದಲ್ಲಿ ನೀವೇಕೆ ಆಸ್ತಕರಾಗಿರಬೇಕು? ನ್ಯಾಯಾಲಯ ಮತ್ತು ಸಂವಿಧಾನ (ಇಂಗ್ಲಿಷ್), ಎಂಬ ತನ್ನ ಪುಸ್ತಕದಲ್ಲಿ, ಮಾಜಿ ವಾಟ್ಗರೇಟ್ ವಿಶೇಷ ನ್ಯಾಯವಾದಿ, ಆರ್ಚಿಬಾಲ್ಡ್ ಕಾಕ್ಸ್, ಅಮೆರಿಕದಲ್ಲಿ ಧ್ವಜ ವಂದನೆಯ ವಿವಾದಾಂಶದಲ್ಲಿ ಯೆಹೋವನ ಸಾಕ್ಷಿಗಳ ಕುರಿತು ಅದೇ ರೀತಿಯ ಒಂದು ಪ್ರಶ್ನೆಯನ್ನು ಕೇಳಿದರು: “ಆ ಚಿಕ್ಕ ಅಲ್ಪಸಂಖ್ಯಾತ ವರ್ಗದವರ ಆತ್ಮಿಕ ಸ್ವಾತಂತ್ರ್ಯದ ಕುರಿತು ನಾವೇಕೆ ಚಿಂತಿಸಬೇಕು?”
ಈ ಪ್ರಶ್ನೆಯನ್ನು ಉತ್ತರಿಸುತ್ತ, ಕಾಕ್ಸ್ ಹೇಳಿದ್ದು: “ಇದಕ್ಕೆ ಆಂಶಿಕ ಉತ್ತರವು, ನಮ್ಮ ಸಮಾಜವು ಯಾವುದರ ಮೇಲೆ ಆಧಾರಗೊಂಡಿದೆಯೊ ಆ ವೈಯಕ್ತಿಕ ಘನತೆಯ, ಸಂಪ್ರದಾಯವಾದಿಗಳಿಗೂ ಅಸಂಪ್ರದಾಯವಾದಿಗಳಿಗೂ ಸೇರಿರುವ ಘನತೆಯ ಪೂರ್ವಾನುಮಾನದಲ್ಲಿದೆ. ಉತ್ತರದ ಒಂದು ಅಂಶವು, ಸರಕಾರವು ಯೆಹೋವನ ಸಾಕ್ಷಿಗಳನ್ನು ಮೌನಗೊಳಿಸಬಹುದಾಗಿರುವಲ್ಲಿ . . . , ಮುಂದೆ ನಮ್ಮದನ್ನೂ ಮೌನಗೊಳಿಸಬಹುದು.”
ರೀವುಕೋಕು ವಿಶ್ವವಿದ್ಯಾಲಯದ ಪ್ರೊಫೆಸರ್ ಟಾಕೇಶಿ ಹೀರಾನೊ, ಹೀಗೆ ಹೇಳಿ ಕೆಂಡೊ ಮೊಕದ್ದಮೆಯ ಕುರಿತು ಕಾಕ್ಸ್ನೊಂದಿಗೆ ಸಮ್ಮತಿಸಿದರು: “ಅಮೆರಿಕದಲ್ಲಿ ಈಗ ಅನುಭವಿಸಲ್ಪಡುತ್ತಿರುವ ಆರಾಧನಾ ಸ್ವಾತಂತ್ರ್ಯಕ್ಕೆ, ಅನೇಕ ಕೋರ್ಟು ಮೊಕದ್ದಮೆಗಳಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡಿರುವ ಯೆಹೋವನ ಸಾಕ್ಷಿಗಳಿಗೆ ತಾವು ಋಣಿಗಳಾಗಿದ್ದೇವೆಂದು ವಿಚಾರವಂತರು ಎಣಿಸುತ್ತಾರೆ. ನಮ್ಮ ದೇಶ [ಜಪಾನ್]ದಲ್ಲಿಯೂ ಇಂತಹ ಮೊಕದ್ದಮೆಗಳ ಮೂಲಕ ಆರಾಧನಾ ಸ್ವಾತಂತ್ರ್ಯವು ಸ್ಥಾಪಿಸಲ್ಪಟ್ಟು ವರ್ಧಿಸಲ್ಪಡುವುದು ಎಂದು ನಿರೀಕ್ಷಿಸಲಾಗುತ್ತದೆ.”
ತಮ್ಮ ನಂಬಿಕೆಗಳನ್ನು ಶಾಸನಬದ್ಧವಾಗಿ ಸಮರ್ಥನೆ ಮಾಡುವುದರಲ್ಲಿ ಯೆಹೋವನ ಸಾಕ್ಷಿಗಳು ಸಕಲ ಪ್ರಯತ್ನಗಳನ್ನೂ ಮಾಡಿರುತ್ತಾರೆ, ಮತ್ತು 20ನೆಯ ಶತಮಾನದಲ್ಲಿ ಮೂಲ ಮಾನವ ಹಕ್ಕುಗಳ ಸ್ಥಾಪನೆಗೆ ಅವರು ಮಹತ್ತಾದ ಸಹಾಯವನ್ನು ಮಾಡಿದ್ದಾರೆ. ಅನೇಕ ದೇಶಗಳಲ್ಲಿ ಯೆಹೋವನ ಸಾಕ್ಷಿಗಳು, ತಿಳಿವಳಿಕೆಯ ಆಯ್ಕೆಗೆ ರೋಗಿಗಳಿಗಿರುವ ಹಕ್ಕು, ರಾಷ್ಟ್ರೀಯ ಧ್ವಜಕ್ಕೆ ಹೇಗೆ ಗೌರವ ತೋರಿಸಬೇಕೆಂಬುದರಲ್ಲಿ ಜನತೆಗಿರುವ ಹಕ್ಕು ಮತ್ತು ಸ್ವಂತ ನಂಬಿಕೆಗಳನ್ನು ಇತರರಿಗೆ ತಿಳಿಸಲು ಒಬ್ಬನಿಗಿರುವ ಹಕ್ಕು—ಇಂತಹ ನ್ಯಾಯದ ಹೋರಾಟಗಳಲ್ಲಿ ಮುಮ್ಮೊನೆಯಾಗಿದ್ದಾರೆ. ಒಸಾಕ ಹೈಕೋರ್ಟಿನ ವಿಜಯವು ಅಲ್ಪಸಂಖ್ಯಾತ ವರ್ಗದವರ ಹಕ್ಕುಗಳ ಸ್ಥಾಪನೆಯ ಕುರಿತ ಯೆಹೋವನ ಸಾಕ್ಷಿಗಳ ಕೊಡುಗೆಗಳ ದಾಖಲೆಗೆ ಇನ್ನೊಂದು ಅಧ್ಯಾಯವನ್ನು ಸೇರಿಸುತ್ತದೆ.
ವಿಭಿನ್ನ ಮೌಲ್ಯಗಳುಳ್ಳ ಇತರರನ್ನು ಗೌರವಿಸುವುದು
ಮಾನವ ಹಕ್ಕುಗಳನ್ನು ಪ್ರವರ್ಧಿಸುವ ಪ್ರಯೋಜನಕ್ಕೆ ಸೇರಿಸಿ, ಅಲ್ಪಸಂಖ್ಯಾತ ವರ್ಗದವರ ನಂಬಿಕೆಗಳನ್ನು ಸಹಿಸಿಕೊಳ್ಳುವ ವಿವಾದಾಂಶಕ್ಕೆ ನಿಮ್ಮ ಜೀವನದೊಂದಿಗೆ ಇನ್ನೊಂದು ಸಂಬಂಧವಿದೆ. ಕೋಮಾಸಾವಾ ಮಹಿಳಾ ವಿಶ್ವವಿದ್ಯಾಲಯದ ಪ್ರೊಫೆಸರ್ ಕಾನಾಮೇ ಸಾರುಯಾ ಈ ಮೊಕದ್ದಮೆಯನ್ನು ಸೂಚಿಸಿ ಹೇಳಿದ್ದು: “ಸಂವಿಧಾನವು ಅಂಗೀಕರಿಸಿರುವ ಆರಾಧನಾ ಸ್ವಾತಂತ್ರ್ಯವು, [ವಿದ್ಯಾರ್ಥಿಯು] ವಿಜಾತೀಯನಾದ ಕಾರಣ ಅಲಕ್ಷಿಸಲ್ಪಟ್ಟಿತು. ಯಾವುದು ವಿಜಾತೀಯವಾಗಿದೆಯೋ ಅದನ್ನು ಹೊರಹಾಕುವುದು ಜಪಾನಿನಲ್ಲಿ ವ್ಯಾಪಕವಾಗಿದೆ.”
ಇಂದಿನ ಸಮಾಜದಲ್ಲಿ ವಿಜಾತೀಯವಾಗಿರುವುದನ್ನು ಅಥವಾ ರೂಢಿಗಿಂತ ಪ್ರತ್ಯೇಕವಾಗಿರುವುದನ್ನು ಕಿತ್ತೊಗೆಯಲು ಒತ್ತಡವು ಅತಿ ಬಲಾಢ್ಯವಾಗಿದೆ. ಜಪಾನಿನ ಹಾಗೂ ಇತರ ದೇಶಗಳ ಶಾಲೆಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ಗೋಳುಗುಟ್ಟಿಸುವಿಕೆಯು, ವಿಭಿನ್ನವಾಗಿರುವುದನ್ನು ಸಮಾಜದಿಂದ ಬಹಿಷ್ಕರಿಸುವ ಈ ಪ್ರವೃತ್ತಿಯ ಒಂದು ದೃಷ್ಟಾಂತವಾಗಿದೆ. ಶಾಲಾ ಪೀಡಕರ ಸಮಸ್ಯೆಯ ಕುರಿತು ಮಾತಾಡುತ್ತ, ಟೋಕಿಯೊ ಮೆಟ್ರಪಾಲಿಟನ್ ಪೊಲೀಸಿನ ಸೂಪರಿಂಟೆಂಡೆಂಟ್-ಜನರಲ್ ಹೀರೋಷೀ ಯೋಷೀನೊ ಹೇಳಿದ್ದು, ನ್ಯಾಷನಲ್ ರೀಸರ್ಚ್ ಇನ್ಸ್ಟಿಟ್ಯೂಟ್ ಆಫ್ ಪೊಲೀಸ್ ಸೈಎನ್ಸ್ ನಡೆಸಿದ ಒಂದು ಸಮೀಕ್ಷೆಗನುಸಾರ, ಗೋಳುಗುಟ್ಟಿಸುವವರ ಪಕ್ಷದಲ್ಲಿ, ಗೋಳುಗುಟ್ಟಿಸುವುದಕ್ಕಿರುವ ಕಾರಣಗಳಲ್ಲಿ ಹೆಚ್ಚಿನ ಪ್ರಮಾಣವು ಪೀಡಿಸಲ್ಪಟ್ಟವರ ವ್ಯಕ್ತಿತ್ವ ಮತ್ತು ವರ್ತನೆಗಳು ಪ್ರತ್ಯೇಕ ರೀತಿಯದ್ದನ್ನು ಒಳಗೊಂಡಿತ್ತು. ಅವರು ಮುಕ್ತಾಯಗೊಳಿಸಿದ್ದು: “ಜಪಾನೀಯ ಸಮಾಜದಲ್ಲಿ ಆಳವಾಗಿ ಅಡಗಿರುವ, ವ್ಯಕ್ತಿ ವೈಲಕ್ಷಣ್ಯಗಳನ್ನು ಅಥವಾ ಶಾರೀರಿಕವಾಗಿಯೂ ಮಾನಸಿಕವಾಗಿಯೂ ವಿಜಾತೀಯವಾಗಿರುವುದನ್ನು ತಳ್ಳಿಹಾಕುವ ರೋಗಸೂಚಕ ಅಂಶವು ಈಗ ಚಿಮ್ಮಿ ಬರುತ್ತದೆಂದು ನನ್ನ ಯೋಚನೆ.”
ಭಿನ್ನವಾಗಿರುವುದನ್ನು ಹೊರದಬ್ಬುವ ಪ್ರವೃತ್ತಿಯು ಜಪಾನಿನಲ್ಲಿ ಮಾತ್ರವಲ್ಲ, ಎಲ್ಲೆಲ್ಲಿಯೂ ಕಾಣಸಿಗುತ್ತದೆ. ಆದರೂ ವಿಭಿನ್ನ ಮೌಲ್ಯಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯವೇ ಶಾಂತಿಯ ಸಹಬಾಳೆಗ್ವೆ ಕೀಲಿ ಕೈ. ಈ ಸಂಬಂಧದಲ್ಲಿ ಆಸಾಹೀ ಶೀಂಬುನ್ ಪತ್ರಿಕೆಯ ಒಂದು ಸಂಪಾದಕೀಯವು, ಕೋಬಿ ಡಿಸ್ಟ್ರಿಕ್ಟ್ ಕೋರ್ಟ್ ಮತ್ತು ಒಸಾಕ ಹೈಕೋರ್ಟಿನ ತೀರ್ಮಾನಗಳು “ತೀರ ವೈದೃಶ್ಯವನ್ನು ಉಂಟುಮಾಡಿದವು,” ಎಂದು ಹೇಳಿತು. ಆ ವಾರ್ತಾಪತ್ರವು ಹೇಳಿದ್ದು: “ಎರಡು ನಿರ್ಣಯಗಳು ಎರಡು ಬಗೆಯ ಯೋಚನಾವಿಧಗಳನ್ನು ಸಂಕೇತಿಸುವಂತೆ ತೋರುತ್ತದೆ,” ನಿರ್ವಾಹಕ ಮಂಡಲಿ ನಿರ್ದೇಶಿತ ಪೀಡನೆಯು, ಒಂದು ವಿಭಿನ್ನ ಮೌಲ್ಯಗಳನ್ನು ಸಹಿಸಿಕೊಳ್ಳುವುದು ಇನ್ನೊಂದು.
ನೀವು ವಿಭಿನ್ನ ಮೌಲ್ಯಗಳನ್ನು ಸಹಿಸಿಕೊಳ್ಳಲು ಸಿದ್ಧರಾಗಿದ್ದೀರೊ? ಇತರರ ನೆಲೆಯ ಸಮಂಜಸತೆಯನ್ನು ಪರೀಕ್ಷಿಸಲು ನೀವು ಇಚ್ಛಿತರೊ? ರಸಕರವಾಗಿ, ಈ ಲೇಖನದಲ್ಲಿ ಈ ಮೊದಲು ಹೇಳಲಾಗಿರುವ ಆರ್ಚಿಬಾಲ್ಡ್ ಕಾಕ್ಸ್, ಅಲ್ಪಸಂಖ್ಯಾತ ವರ್ಗದವರ ಕುರಿತ ಚಿಂತೆಗೆ ಇನ್ನೊಂದು ಕಾರಣವನ್ನು ಕೂಡಿಸಿದರು: “ಆಂಶಿಕ ಉತ್ತರವು ಯಾವುದೊ ವಿಚಿತ್ರ ಅಲ್ಪಸಂಖ್ಯಾತ ವರ್ಗವು ಒಂದು ಸತ್ಯವನ್ನು—ಅದನ್ನು ನಿಗ್ರಹಿಸಿರುವ ಕಾರಣ ಮುಂದಕ್ಕೆ ತಳ್ಳಿರುವ ಅಥವಾ ಸದಾಕಾಲಕ್ಕೆ ಕಳೆದುಹೋಗಿರುವ ಸತ್ಯವನ್ನು—ಕಂಡುಹಿಡಿದೀತು ಎಂಬ ಪ್ರಜ್ಞೆಯಲ್ಲಿದೆ.”
ಕೋಬಿ ಟೆಕ್ನವರು ತಾವು ನಿಗ್ರಹಿಸಿರಬಹುದಾದ ಸತ್ಯದಲ್ಲಿ ಆಸ್ತಕರಲ್ಲವೆಂಬುದು ಸ್ಪಷ್ಟ. ಅವರು ಸಹನೆಯ ವೀಕ್ಷಣವನ್ನು ತೋರಿಸಿದ್ದೂ ಇಲ್ಲ. ಬದಲಾಗಿ, ಅವರು ಜಪಾನಿನ ಶ್ರೇಷ್ಠ ನ್ಯಾಯಾಲಯಕ್ಕೆ ಅಪ್ಪೀಲು ಮಾಡಿದ್ದಾರೆ. ಈ ಮೊಕದ್ದಮೆಯ ಮೇಲೆ ಶ್ರೇಷ್ಠ ನ್ಯಾಯಾಲಯವು ಹೇಗೆ ತೀರ್ಪು ಕೊಟ್ಟೀತು? ನಾವು ಕಾದು ನೋಡಬೇಕು.
Picture on page 22]
ಕುನೀಹೀಟೊ (ಮಧ್ಯದಲ್ಲಿ) ಮತ್ತು ಆರಂಭದ ನಾಲ್ವರು ಇತರ ವಾದಿಗಳು