ಬೈಬಲಿನ ದೃಷ್ಟಿಕೋನ
ದೇವರ ಮಟ್ಟಗಳು ತಲಪಲು ತೀರ ಕಷ್ಟಕರವಾಗಿವೆಯೋ?
“ಇಂಚುಗಳ ಮೂಲಕ ದೇವರು ಮನುಷ್ಯರ ಮೌಲ್ಯ ನಿರ್ಣಯ ಮಾಡುವುದಿಲ್ಲ.”—ಪುರಾತನ ಸ್ಕಾಟಿಷ್ ಗಾದೆ.
ಶಾಲೆಯ ಟೆಸ್ಟ್ಗಳು, ಉದ್ಯೋಗ ಸಂದರ್ಶನಗಳು, ಮತ್ತು ವೈದ್ಯಕೀಯ ಪರೀಕ್ಷೆಗಳು ವ್ಯಕ್ತಿಯೊಬ್ಬನ ಮೌಲ್ಯ ನಿರ್ಣಯಿಸಲ್ಪಡುವ ಜೀವನದ ಉತ್ಕಟ ಸಮಯಗಳಲ್ಲಿ ಕೇವಲ ಕೆಲವಾಗಿವೆ. ಆದರೆ, ದೇವರ ಮಟ್ಟಗಳಿಗನುಸಾರ ದಿನನಿತ್ಯವೂ ಜೀವಿಸುವ ಸಂಬಂಧದಲ್ಲಿ, ಅನೇಕ ಜನರಿಗೆ ಅವುಗಳನ್ನು ತಲಪಲು ಯಾವ ರೀತಿಯಲ್ಲಿಯಾದರೂ ತಾವು ವಿಫಲರಾಗಬಹುದೆಂದು ಅನಿಸಬಹುದು. ನಿಮ್ಮ ನಂಬಿಕೆಯೂ ಅದೇ ಆಗಿದೆಯೋ? ನೀವು ದೇವರ ಮಟ್ಟಗಳನ್ನು ತಲಪಬಲ್ಲಿರೋ?
ಉತ್ತರಕ್ಕಾಗಿ, ದೇವರು ತನ್ನ ಆರಾಧಕರಿಗಾಗಿ ಇಟ್ಟಿರುವ ಮಟ್ಟಗಳನ್ನು ಮೊದಲಾಗಿ ನಾವು ನೋಡೋಣ. ಬೈಬಲು, ಜೀವನದಲ್ಲಿ ನಾವು ನಡೆಯಬೇಕಾದ ಮಾರ್ಗದ ಮೇಲೆ ಪ್ರಕಾಶವನ್ನು ಬೀರುತ್ತದೆ. (ಕೀರ್ತನೆ 119:105) “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು”ವುದೇ ಮನುಷ್ಯನ “ಕರ್ತವ್ಯವು” ಎಂಬುದಾಗಿ ಬೈಬಲ್ ಲೇಖಕ, ಜ್ಞಾನಿಯಾದ ಅರಸ ಸೊಲೊಮೋನನು ತೀರ್ಮಾನಿಸಿದನು. (ಪ್ರಸಂಗಿ 12:13) ಪ್ರವಾದಿಯಾದ ಮೀಕನು ಅವಲೋಕಿಸಿದ್ದು: “ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?”—ಮೀಕ 6:8.
“ನಿನ್ನ ದೇವರಾದ ಕರ್ತನನ್ನು [“ಯೆಹೋವನನ್ನು,” NW] ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು” ಮತ್ತು “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ಆಜ್ಞೆಗಳಿಗಿಂತ ಅತಿ ದೊಡ್ಡದಾದ ಆಜ್ಞೆಗಳಿಲ್ಲವೆಂಬುದಾಗಿ ದೇವರ ಸ್ವಪುತ್ರನಾದ ಯೇಸು ಕ್ರಿಸ್ತನು ಘೋಷಿಸಿದನು. (ಮಾರ್ಕ 12:30, 31) ಇದಕ್ಕೆ ಕೂಡಿಸಿ, ಆತನ ಎಲ್ಲಾ ಆಜೆಗ್ಞಳಿಗೆ ವಿಧೇಯರಾಗುವ ಮೂಲಕ ದೇವರನ್ನು ಪ್ರೀತಿಸುತ್ತೇವೆಂಬುದನ್ನು ನಾವು ತೋರಿಸುತ್ತೇವೆ.—1 ಯೋಹಾನ 5:3.
ಸರಳವಾಗಿ ವ್ಯಕ್ತಪಡಿಸುವುದಾದರೆ, ಮಾನವರು ದೇವರನ್ನು ಪ್ರೀತಿಸಿ ಗೌರವಿಸಬೇಕು, ಆತನ ಆಜೆಗ್ಞಳಿಗೆ ವಿಧೇಯಯರಾಗಿರಬೇಕು, ನಿಷ್ಪಕ್ಷಪಾತರಾಗಿ ನಡೆಯಬೇಕು, ಎಲ್ಲರೊಂದಿಗೆ ದಯಾಪರರಾಗಿರಬೇಕು, ಮತ್ತು ಅಹಂಕಾರವನ್ನು ತ್ಯಜಿಸಬೇಕು. ಅಂಥ ಮಟ್ಟಗಳು ನಮಗೆ ಸುಲಭಲಭ್ಯವಾಗಿರುವುದಿಲ್ಲವೋ?
ದೇವರು ಪರಿಗಣನೆಗೆ ತೆಗೆದುಕೊಳ್ಳುತ್ತಾನೆ
ತನ್ನ ಮಟ್ಟಗಳನ್ನು ಮಾನವರು ತಲಪುವಂತೆ ಯುಕ್ತವಾಗಿಯೇ ದೇವರು ನಿರೀಕ್ಷಿಸುತ್ತಾನೆ. ಆದರೆ, ಪ್ರಾಮಾಣಿಕವಾಗಿ ಹೇಳುವಲ್ಲಿ, ಯಾವ ಮನುಷ್ಯನಾದರೂ ಎಲ್ಲಾ ಸಮಯದಲ್ಲಿ ಈ ಮಟ್ಟಗಳಿಗೆ ಪರಿಪೂರ್ಣವಾಗಿ ಅನುವರ್ತಿಸುತ್ತಾನೋ? ಇಲ್ಲವೆಂಬುದು ವ್ಯಕ್ತ, ಏಕೆಂದರೆ ನಮ್ಮ ಪೂರ್ವಜನಾದ ಆದಾಮನಿಂದ ನಾವು ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದಿದ್ದೇವೆ. (ರೋಮಾಪುರ 5:12) ಹೀಗೆ, ನಾವು ತಪ್ಪು ಮಾಡುವ ಪ್ರವೃತ್ತಿಯುಳ್ಳವರಾಗಿದ್ದೇವೆ. ಆದರೂ ಇದು ಸ್ವೀಕಾರಾರ್ಹವಾಗಿ ದೇವರನ್ನು ಸೇವಿಸುವುದರಿಂದ ನಮ್ಮನ್ನು ಅನರ್ಹಗೊಳಿಸುವುದಿಲ್ಲ.
ದೃಷ್ಟಾಂತಕ್ಕಾಗಿ, ಕಾರೊಂದನ್ನು ಚಲಾಯಿಸಲಿಕ್ಕೆ ಕಲಿಯುವುದರ ಸಮಸ್ಯೆಗಳನ್ನು ಪರಿಗಣಿಸಿರಿ. ಡ್ರೈವಿಂಗ್ ಪರೀಕೆಯ್ಷೊಂದನ್ನು ಉತ್ತೀರ್ಣರಾಗುವಷ್ಟು ಉತ್ತಮವಾಗಿ ಚಲಾಯಿಸಲು, ಅದು ನಿರಂತರ ಎಚ್ಚರಿಕೆಯನ್ನು ಮತ್ತು ಸಮಯವನ್ನು ತೆಗೆದುಕೊಳ್ಳುತ್ತದೆ. ನಿಶ್ಚಯವಾಗಿಯೂ, ಒಂದು ಲೈಸನ್ಸನ್ನು ಪಡೆದಾದ ನಂತರವೂ ಚೆನ್ನಾಗಿ ಚಲಾಯಿಸಲು ನಾವು ಇನ್ನೂ ಕಾರ್ಯನಡೆಸಬೇಕು. ನಾವು ಅನುಭವವನ್ನು ಗಳಿಸಿದ ಹಾಗೆ, ನಮ್ಮ ಕೌಶಲ್ಯಗಳನ್ನು ನಾವು ಹರಿತಗೊಳಿಸುತ್ತೇವೆ. ಆದರೆ ಪರಿಪೂರ್ಣ ಚಾಲಕರ್ಯಾರೂ ಇಲ್ಲ!
ಸಂತೋಷಕರವಾಗಿ, ನಮ್ಮ ಕುಂದುಗಳಿಗೆ ದೇವರು ಪರಿಗಣನೆಯನ್ನು ತೋರಿಸುತ್ತಾನೆ. ನಾವು ಏನನ್ನು ಕೊಡಲಸಾಧ್ಯವೋ ಅದನ್ನು ಕೇಳುವ ಮೂಲಕ ಆತನು ಪರಿಜ್ಞಾನವಿಲ್ಲದವನಾಗಿರುವುದಿಲ್ಲ, ಇಲ್ಲವೇ ಆತನು ತಪ್ಪನ್ನು ಕಂಡುಹಿಡಿಯುತ್ತಾ ಇರುವುದಿಲ್ಲ. ನಮ್ಮ ದೋಷಗಳನ್ನು ಮತ್ತು ದೌರ್ಬಲ್ಯಗಳನ್ನು ಆತನು ಅರ್ಥಮಾಡಿಕೊಳ್ಳುತ್ತಾನೆ. ಗಂಭೀರವಾಗಿ ಪಾಪವನ್ನು ಮಾಡಿದ ಅರಸ ದಾವೀದನು ನಿವೇದಿಸಿದ್ದು: “ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ.” ಯಾವ ಕಾರಣಕ್ಕಾಗಿ? “ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ.” ನಾವು ಪಾಪ ಮಾಡುತ್ತೇವೆಂದು ಯೆಹೋವನಿಗೆ ತಿಳಿದಿರುವುದಾದರೂ ಕೂಡ, ನಮ್ಮ ಅತಿಕ್ರಮಿಸುವಿಕೆಗಳನ್ನು “ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ . . . ಅಷ್ಟು ದೂರ” ಮಾಡಲು ಆತನು ತಯಾರಾಗಿದ್ದಾನೆ.—ಕೀರ್ತನೆ 103:10-14.
ಬಿಟ್ಟು ಕೊಡದಿರ್ರಿ
ದೇವರ ಒಬ್ಬ ಪ್ರಾಮಾಣಿಕ ಆರಾಧಕನು ವಿವರಿಸುವುದು, “ನಾನು ಖಿನ್ನನಾಗಿರುವಾಗ, ದೇವರ ಮಟ್ಟಗಳಿಗನುಸಾರ ಜೀವಿಸಲು ನಾನು ಎಂದೂ ಸಫಲನಾಗೆನು ಎಂಬುದಾಗಿ ಕೆಲವೊಮ್ಮೆ ತೀರ್ಮಾನಿಸುತ್ತೇನೆ. ಆದರೆ ಒಂದು ಹೆಚ್ಚಿನ ಸಕಾರಾತ್ಮಕ ಹೊರನೋಟವನ್ನು ನಾನು ಬೆಳೆಸಿಕೊಂಡಾಗ, ನಾನು ಯಾವ ರೀತಿಯಲ್ಲಿ ಜೀವಿಸಬೇಕೆಂದು ದೇವರು ಅಪೇಕ್ಷಿಸುತ್ತಾನೋ, ಆ ರೀತಿಯಲ್ಲಿ ಜೀವಿಸುವುದನ್ನು ನಾನು ನಿರ್ವಹಿಸಬಲ್ಲೆನೆಂಬ ಅನಿಸಿಕೆ ನನಗಿದೆ. ಆದರೆ ಅದೆಲ್ಲವೂ ಸುಲಭಸಾಧ್ಯವಾಗಿರುವುದಿಲ್ಲ!” ಈ ರೀತಿಯಲ್ಲಿ ನಿಮಗೆ ಅನಿಸುವುದಾದರೆ, ನಿರುತ್ತೇಜಿತರಾಗದಿರ್ರಿ. ಅಂಥ ಭಾವಾವೇಶಗಳನ್ನು ಹೊಂದಿರಲು ನೀವು ಮೊದಲಿಗರು ಇಲ್ಲವೇ ಕೊನೆಯವರು ಆಗಿರುವುದಿಲ್ಲ.
ಕ್ರೈಸ್ತ ಅಪೊಸ್ತಲ ಪೌಲನು ಮುಚ್ಚು ಮರೆಯಿಲ್ಲದೆ ಒಪ್ಪಿಕೊಂಡದ್ದು: “ಒಳ್ಳೇದನ್ನು ಮಾಡಬೇಕೆಂದಿರುವ ನನಗೆ ಕೆಟ್ಟದ್ದೇ ಸಿದ್ಧವಾಗಿದೆಯೆಂಬ ನಿಯಮ ನನಗೆ ಕಾಣಬರುತ್ತದೆ. ಅಂತರಾತ್ಮದೊಳಗೆ ದೇವರ ನಿಯಮದಲ್ಲಿ ಆನಂದಪಡುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮ ಉಂಟೆಂದು ನೋಡುತ್ತೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು . . . ಪಾಪದ ನಿಯಮಕ್ಕೆ ವಶಮಾಡುವಂಥದಾಗಿದೆ. ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು!” ಆದರೂ ದೇವರು ಏನನ್ನು ನಿರೀಕ್ಷಿಸಿದನೋ, ಅದು ಬಹಳ ಕಷ್ಟಕರವಾದದ್ದೆಂದು ಅವನು ತೀರ್ಮಾನಿಸಲಿಲ್ಲ, ಏಕೆಂದರೆ ಅವನು ಕೂಡಿಸಿದ್ದು: “ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು? ಬಿಡಿಸುವವನು ಇದ್ದಾನೆಂಬದಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ. ಹೀಗಿರಲಾಗಿ ನನ್ನಷ್ಟಕ್ಕೆ ನಾನೇ ಮನಸ್ಸಿನಿಂದ ದೇವರ ನಿಯಮಕ್ಕೆ ಆಳಾಗಿಯೂ ಶರೀರಭಾವದಿಂದ ಪಾಪವೆಂಬ ನಿಯಮಕ್ಕೆ ಆಳಾಗಿಯೂ ನಡಕೊಳ್ಳುವವನಾಗಿದ್ದೇನೆ.” (ರೋಮಾಪುರ 7:21-25) ಹೀಗೆ, ಒಬ್ಬ ಪಾಪಿಯಾಗಿದ್ದರೂ ಅವನು ದೇವರನ್ನು ಪ್ರಸನ್ನಗೊಳಿಸಶಕ್ತನೆಂಬ ಅನಿಸಿಕೆಯುಳ್ಳವನಾದನು.
ನಮ್ಮ ಪ್ರೀತಿಪೂರ್ವಕ ಸೃಷ್ಟಿಕರ್ತನಾದ, ಯೆಹೋವನು, ತನ್ನ ಪ್ರಿಯ ಪುತ್ರನಾದ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಅರ್ಹತೆಯ ಮುಖಾಂತರ ನಮ್ಮ ತಪ್ಪುಗಳನ್ನು ಮತ್ತು ಕುಂದುಗಳನ್ನು ಕ್ಷಮಿಸುತ್ತಾನೆ. “ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ. ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ,” ಎಂದು ಅಪೊಸ್ತಲ ಯೋಹಾನನು ಬರೆದನು. (1 ಯೋಹಾನ 2:1, 2) ಪಾಪವು ತಡೆಗಟ್ಟುವ ಮತ್ತು ಮಿತ್ರತ್ವಕ್ಕಾಗಿರುವ ದೇವರ ಮಟ್ಟವನ್ನು ನಾವು ತಲಪದಂತೆ ತಡೆಯುವ ಪ್ರತಿಬಂಧಕವು, ಕ್ರಿಸ್ತನ ಯಜ್ಞದ ಶಕ್ತಿಯ ಮೂಲಕ ನಿವಾರಿಸಲ್ಪಡುತ್ತದೆ ಅಥವಾ ಮುರಿಯಲ್ಪಡುತ್ತದೆ. ಹೀಗೆ ದೇವರೊಂದಿಗಿನ ಸಖ್ಯವು ಪುನಃಸ್ಥಾಪಿಸಲ್ಪಡುತ್ತದೆ.
ಈ ಪ್ರೀತಿಪರ ಏರ್ಪಾಡನ್ನು ನಮ್ರರಾಗಿ ಅಂಗೀಕರಿಸುವುದು ಕ್ಷಮಾಪಣೆಯನ್ನು ತರುತ್ತದೆ, ಏಕೆಂದರೆ, “ಜಜ್ಜಿಹೋದ ದೀನಮನದೊಂದಿಗೆ” ದೇವರು ವಾಸಿಸುತ್ತಾನೆ. (ಯೆಶಾಯ 57:15) ನಮ್ಮ ಆತ್ಮಗಳನ್ನು ಉಜ್ಜೀವಿಸಿಕೊಳ್ಳಲು ನಾವು ಆತನ ಮೇಲೆ ಆತುಕೊಳ್ಳಬಲ್ಲೆವು. ‘ದೀನರನ್ನು ಧೂಳಿಯಿಂದ ಎಬ್ಬಿಸುವನೆಂದು’ ಆತನು ವಾಗ್ದಾನಿಸುತ್ತಾನೆ. ದೇವರಿಗೆ ಪರಿಪೂರ್ಣರಾಗಿ ವಿಧೇಯರಾಗಲು ನಾವು ತಪ್ಪುವಾಗ ಇನ್ನು ಮುಂದೆ ಖಿನ್ನರಾಗಿ ಉಳಿಯುವ ಅಗತ್ಯವಿರುವುದಿಲ್ಲ. ಬದಲಾಗಿ, ಆತನ ಮಟ್ಟಗಳಿಗನುಸಾರ ಜೀವಿಸಲಿಕ್ಕೆ ನಾವು ಮಾಡುವ ಪ್ರಯತ್ನಗಳನ್ನು ದೇವರು ಎಂದೂ ಅಲಕ್ಷಿಸುವುದಿಲ್ಲವೆಂಬುದಾಗಿ ನಾವು ಭರವಸೆಯಿಂದಿರಬಲ್ಲೆವು.—ಕೀರ್ತನೆ 113:7; ಇಬ್ರಿಯ 6:10-12.
ಇದೊಂದು ಹೋರಾಟವಾಗಿರುವುದಾದರೂ, ದೇವರನ್ನು ಪ್ರಸನ್ನಗೊಳಿಸುವ ವಿಷಯವನ್ನು ಮಾಡುವುದರಲ್ಲಿ ನೀವು ಹೆಚ್ಚು ಸಂತೋಷಿತರಾಗಿದ್ದೀರಿ ಎಂಬುದನ್ನು ನೀವು ಅವಲೋಕಿಸುವಿರಿ. ದೇವರಿಗೆ ತೋರಿಸುವ ಭಕ್ತಿಯು ಜೀವನವನ್ನು ನಿಮಗೆ ಮತ್ತು ನಿಮ್ಮ ಸುತ್ತಲಿರುವವರಿಗೆ ಹೆಚ್ಚು ಸಹ್ಯವುಳ್ಳದ್ದಾಗಿ ಮಾಡಬಲ್ಲದು. ಹಾಗೂ ಭವಿಷ್ಯತ್ತಿನ ಕುರಿತು ಆಲೋಚಿಸಿರಿ. ಈಗ ದೇವರ ಮಟ್ಟಗಳಿಗನುಸಾರ ಜೀವಿಸಲು ಪ್ರಯತ್ನಿಸುವುದು, ಪ್ರಮೋದವನ ಪರಿಸ್ಥಿತಿಗಳ ಕೆಳಗೆ ಅನಂತ ಜೀವನದ ಪ್ರತೀಕ್ಷೆಯನ್ನು ತರುವುದು.—ಯೆಶಾಯ 48:17; ರೋಮಾಪುರ 6:23; 1 ತಿಮೊಥೆಯ 4:8.
ನುರಿತ ಪರ್ವತಾರೋಹಿಗಳು ಶಿಖರದಲ್ಲಿ ಬಂದು ತಲಪಿದರೂ, ತಾವು ಕೇವಲ ಅರ್ಧದಾರಿಯಲ್ಲಿದ್ದೇವೆ ಎಂಬುದನ್ನು ಗ್ರಹಿಸುತ್ತಾರೆ. ಅವರಿಗೆ ಸುರಕ್ಷಿತವಾಗಿ ಇನ್ನೂ ಕೆಳಗೆ ಇಳಿಯಲಿಕ್ಕಿದೆ. ತದ್ರೀತಿಯಲ್ಲಿ, ದೇವರಿಗೆ ಭಯಪಡುವವರಿಗೆ, ದೇವರ ಮಟ್ಟಗಳನ್ನು ತಲಪುವುದು ಮತ್ತು ಅನಂತರ ಅದಕ್ಕನುಸಾರವಾಗಿ ಜೀವಿಸುವುದರಲ್ಲಿ ಪಟ್ಟುಹಿಡಿಯುವುದು—ಎರಡೂ—ಅಗತ್ಯವಿದೆ.—ಲೂಕ 21:19; ಯಾಕೋಬ 1:4.
ದೇವರ ಮಟ್ಟಗಳು ತಲಪಲು ಅತಿ ಕಷ್ಟಕರವಾಗಿಲವ್ಲೆಂಬ ಜ್ಞಾನದಿಂದ ಸಾಂತ್ವನವನ್ನು ಪಡೆದುಕೊಳ್ಳಿರಿ. ನೀವು ಯಾವಾಗಲಾದರೂ ಅವುಗಳಿಗೆ ಪರಿಪೂರ್ಣವಾಗಿ ಅನುವರ್ತಿಸಲು ತಪ್ಪಿಹೋಗುವಾಗ, ಆತನ ಕ್ಷಮಾಪಣೆಯನ್ನು ಯಾಚಿಸಿರಿ. ಆತನ ಪ್ರೀತಿಪರ ಬೆಂಬಲದ ಮೇಲೆ ಆತುಕೊಳ್ಳಿರಿ. (ಕೀರ್ತನೆ 86:5) ಹೀಗೆ, ಯೆಹೋವನನ್ನು ಮತ್ತು ಆತನ ಪುತ್ರನನ್ನು ನಿಮ್ಮ ಸಹಾಯಕರನ್ನಾಗಿ ಮಾಡಿಕೊಳ್ಳುವ ಮೂಲಕ, ನೀವು ದೇವರ ಮಟ್ಟಗಳಿಗನುಸಾರವಾಗಿ ಜೀವಿಸಬಲ್ಲಿರಿ ಮತ್ತು ಆತನ ಮೆಚ್ಚುಗೆಯನ್ನು ಪಡೆಯುವಿರಿ.—ಜ್ಞಾನೋಕ್ತಿ 12:2.