ಸಾಲಕ್ಕೆ ಈಡಾಗುವುದು ಪ್ರಯೋಜನಕಾರಿಯಾಗಿದೆಯೋ?
“ಹಣವನ್ನು ನೀವು ಹೊಂದಿರುವ ಮುನ್ನ ಅದನ್ನು ಎಂದೂ ವ್ಯಯಿಸದಿರಿ.” ಸಾಲಕ್ಕೆ ಈಡಾಗುವುದು ಅನೇಕ ಜನರಿಗೆ ಇಂದಿನ ಜೀವನದ ಒಂದು ವೈಶಿಷ್ಟ್ಯವಾಗಿರುವ ಕಾರಣ, ಅಮೆರಿಕದ ರಾಷ್ಟ್ರಪತಿ ಥಾಮಸ್ ಜೆಫರ್ಸನ್ರವರಿಂದ ನೀಡಲ್ಪಟ್ಟ ಈ ಬುದ್ಧಿವಾದವು ಹಳೆಯ ಮಾದರಿಯದ್ದಾಗಿ ಧ್ವನಿಸುತ್ತದೋ?
ಅನೇಕ ದೇಶಗಳಲ್ಲಿ ದರಗಳಿಗೆ ಅನುರೂಪದಲ್ಲಿ ವೇತನವು ಕಡಿಮೆಯಾಗಿ ಉಳಿಯುತ್ತದೆ, ಮತ್ತು ಹಣದ ಉಬ್ಬರವು ಉಳಿತಾಯಗಳನ್ನು ಕಬಳಿಸಿ ಬಿಡುತ್ತದೆ. ಅಷ್ಟುಮಾತ್ರವಲ್ಲದೆ, ಆರ್ಥಿಕ ಸ್ಥಿತಿಗತಿಯು ಜನರ ಮೌಲ್ಯಗಳ ಪ್ರಜ್ಞೆಯನ್ನು ಬಾಧಿಸುತ್ತದೆ. ಆದರೂ, ಪ್ರಾಮಾಣಿಕತೆಯು ಪ್ರಾಮುಖ್ಯವಾಗಿದೆ. ತೆರಿಗೆಗಳ ಮೇಲೆ ವಂಚನೆ ಮತ್ತು ಸಾಲಗಳನ್ನು ಮರುಪಾವತಿ ಮಾಡಲು ತಪ್ಪುವಂಥ ವಿಷಯಗಳು ವ್ಯಾಪಕವಾಗಿರುವ ಕಾರಣ, ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವುದು ಖಂಡಿತವಾಗಿಯೂ ಒಂದು ಪಂಥಾಹ್ವಾನವಾಗಿದೆ. ಆರ್ಥಿಕ ಆಡಳಿತವು ಅನೇಕ ಬಾರಿ ದಿನದ ಮುಖ್ಯ ಚರ್ಚೆಯಾಗಿದೆ, ಮತ್ತು ಆರ್ಥಿಕತೆಯ ಜಟಿಲತೆಗಳೊಂದಿಗೆ ಹೇಗೆ ವ್ಯವಹರಿಸಲು ನಿರ್ಧರಿಸಬೇಕೆಂದು ಜನರು ಪ್ರಯತ್ನಿಸುವಾಗ, ವೃತ್ತಪತ್ರಕೆಗಳು ಮತ್ತು ಪತ್ರಿಕೆಗಳು ಹಾಗೂ ದೂರದರ್ಶನವು ಉಳಿತಾಯದ ಅಥವಾ ಹಣ ಗಳಿಕೆಯ ಮೇಲಿನ ಸಲಹೆಗಳಿಂದ ತುಂಬಿವೆ. ಅದೇ ಸಮಯದಲ್ಲಿ, ಸ್ವತಃ ನಿಮಗೆ ಮತ್ತು ನಿಮ್ಮ ಕುಟುಂಬಕ್ಕಾಗಿ ಹೇಗೆ ಒದಗಿಸಬೇಕೆಂಬುದರ ಕುರಿತು ನೀವು ಯೋಗ್ಯವಾಗಿಯೇ ಚಿಂತಿತರಾಗಿರುತ್ತೀರಿ.—1 ತಿಮೊಥೆಯ 5:8.
ತುಲನಾತ್ಮಕವಾಗಿ ಕೆಲವೇ ಜನರು ಆರ್ಥಿಕ ಸ್ಥಿರತೆಯನ್ನು ಅನುಭವಿಸುವ ಕಾರಣ, ನಿಮ್ಮ ಕುಟುಂಬವು ತೊಂದರೆಗಳಿಂದ ದೂರವಿರುವಂತೆ ನೀವೇನು ಮಾಡಬಲ್ಲಿರಿ? ಒಂದು ವಿಷಯವೇನೆಂದರೆ, ಮನಸ್ಸಿನಲ್ಲಿಡಲು ಒಂದು ಅತಿ ಪ್ರಾಮುಖ್ಯವಾದ ಪಾಠವಿದೆ.
ವಿಪರೀತ ಸಾಲದಿಂದ ದೂರವಿರಿ
ಕೆಲವರು ಸಾಲಕ್ಕೆ ಏಕೆ ಈಡಾಗುತ್ತಾರೆ? ಕಡ ಮಾಡುವುದು ಯಾವಾಗಲೂ ಕಾಯಿಲೆಯಂಥ ತುರ್ತಾದ ಪರಿಸ್ಥಿತಿಯ ಕಾರಣವಾಗಿರುವುದಿಲ್ಲ. ನಿರ್ದಿಷ್ಟವಾದ ಪ್ರಾಪಂಚಿಕ ವಿಷಯಗಳನ್ನು ಪಡೆಯುವ ಆಸೆಯು ತುಂಬ ಬಲವಾಗಿರಬಹುದು. ಮತ್ತೊಂದು ಕಡೆಯಲ್ಲಿ, ಸಾಲಕ್ಕೆ ಈಡಾಗುವ ಪ್ರೇರಣೆಯು ತಾನೇ ತಪ್ಪಾಗಿರಲಾರದು. ವಾಸ್ತವದಲ್ಲಿ, ಒಂದು ಮನೆಗೆ ಬಾಡಿಗೆಯನ್ನು ಕೊಡುವ ಬದಲು ಭೋಗ್ಯವನ್ನು ಮಾಡುವುದು ಉತ್ತಮವಾಗಿರಬಹುದು, ಅಥವಾ ಕಾರೊಂದನ್ನು ಖರೀದಿಸುವ ಆವಶ್ಯಕತೆಯಿರಬಹುದು. ಒಬ್ಬ ಸಂಸಾರ ನಿರ್ವಾಹಕನು ತನ್ನ ಕುಟುಂಬವು ಸಂತೋಷವಾಗಿರಬೇಕೆಂದು ಅಪೇಕ್ಷಿಸುತ್ತಾನೆ. ಒಬ್ಬ ಪತಿ ಮತ್ತು ತಂದೆಯೋಪಾದಿ ಸಫಲತೆಯನ್ನು ಹೊಂದಬೇಕೆಂದು ಆತನು ಅಪೇಕ್ಷಿಸುತ್ತಾನೆ. ಅಂತೆಯೇ, ಇತರರು ಪಡೆದಿರುವ ಅನೇಕ ಪ್ರಾಪಂಚಿಕ ವಿಷಯಗಳನ್ನು ತನ್ನ ಕುಟುಂಬವು ಪಡೆಯುವ ಅಧಿಕಾರವನ್ನು ಹೊಂದಿದೆ ಎಂಬುದು ಆತನ ಅನಿಸಿಕೆಯಾಗಿರುತ್ತದೆ.
ಇದು ಬಯಸಿದ ಆದರೆ ಆವಶ್ಯಕವಲ್ಲದ ವಸ್ತುವೊಂದನ್ನು ಕೊಳ್ಳಲು ಹಣವನ್ನು ಕಡವಾಗಿ ಪಡೆಯುವಂತೆ ಇದು ಪ್ರೇರೇಪಿಸಬಹುದೆಂಬುದು ಒಪ್ಪತಕ್ಕ ವಿಷಯ. ವಸ್ತುಗಳನ್ನು ಪಡೆಯುವುದು ಒಬ್ಬರನ್ನು ಸಂತೋಷವುಳ್ಳವರನ್ನಾಗಿ ಮಾಡುವುದಿಲ್ಲವೋ? ಒಂದು ಸೊಗಸಾದ ಉಡುಪನ್ನು, ಒಂದು ನವೀನ ಪಾದರಕ್ಷೆಯ ಜೋಡಿಯನ್ನು, ಅಥವಾ ಹೊಚ್ಚಹೊಸತಾದ ಕಾರೊಂದನ್ನು ಕೂಡ ಯಾರು ಆನಂದಿಸುವುದಿಲ್ಲ? ಮತ್ತು ಒಂದು ಅತಿ ಮನೋಹರವಾದ ಮನೆಯನ್ನು ಹೊಂದಲು ಯಾರು ಇಚ್ಛಿಸುವುದಿಲ್ಲ? ಆದರೂ ಎಚ್ಚರಿಕೆ! ವ್ಯಾಪಾರಸ್ಥರು ಒಲಿಸುವವರಾಗಿರಬಲ್ಲರು, ಮತ್ತು ಯಾರಿಗೆ ಅವುಗಳ ಅಗತ್ಯವಿಲ್ಲವೋ ಮತ್ತು ಅವನ್ನು ಪಡೆಯಲು ಸಮರ್ಥರಿಲ್ಲವೋ, ಆ ಜನರಿಗೆ ವಸ್ತುಗಳನ್ನು ಮಾರುವ ಮೂಲಕ ಬಹಳ ಹಣವನ್ನು ಮಾಡಲಾಗುತ್ತದೆ.
ಕ್ರಮವಾಗಿ ಸಾಲವನ್ನು ಪಾವತಿ ಮಾಡುತ್ತಿರುವುದು ಕುಟುಂಬ ಸಂಬಂಧಗಳ ಮೇಲೆ ಉದ್ವೇಗವನ್ನು ಹೇರಬಲ್ಲದು ಎಂಬುದು ಜ್ಞಾಪಕವಿರಲಿ. ಭಿನ್ನಾಭಿಪ್ರಾಯ ಮತ್ತು ವೈಮನಸ್ಯ ಫಲಿಸಬಹುದು. ನಾಟಕಕಾರ ಹೆನ್ರೀಕ್ ಇಬ್ಸೆನ್ ಹೇಳಿದ್ದು ಸರಿಯಾಗಿತ್ತು: “ಕಡ ಮತ್ತು ಸಾಲ ಪಡೆಯುವುದರಲ್ಲಿ ನೆಲೆಯೂರಿದ ಕೂಡಲೇ ಗೃಹ ಜೀವನದ ಸ್ವಾತಂತ್ರ್ಯವೂ ಸೌಂದರ್ಯವೂ ಅಂತ್ಯಗೊಳ್ಳುತ್ತದೆ.” ಸರಿಯಾದ ಸಮಯದಲ್ಲಿ ನೀವು ಪಾವತಿಗಳನ್ನು ಮಾಡದಿರುವುದಾದರೆ, ನಿಮ್ಮ ಕೀರ್ತಿಗೆ ಕಳಂಕ ಬರಬಹುದು. ಕಡ ಪಡೆದ ಹಣವನ್ನು ಬಡ್ಡಿ ಸಹಿತ ಹಿಂದಿರುಗಿಸುವದಕ್ಕಿಂತ, ವ್ಯಯಿಸುವುದು ಹೆಚ್ಚು ಸುಲಭವಾಗಿರುವ ಕಾರಣ, ತಾವು ಯಾವುದನ್ನು ಖರೀದಿಸಿದರೋ ಅದು ಅವರು ನಿರೀಕ್ಷಿಸಿದ ಆನಂದವನ್ನು ತರುವುದಿಲ್ಲವೆಂದು ಅನೇಕರು ಕಂಡುಕೊಳ್ಳುತ್ತಾರೆ.
ಸಾಮಾನ್ಯವಾಗಿ, ತಮ್ಮ ಬಡ್ಡಿಯ ಪಾವತಿಗಳನ್ನು ಹೆಚ್ಚಿಸುತ್ತಾ, ಸರಕಾರಗಳು ಹೆಚ್ಚೆಚ್ಚು ಕಡ ಪಡೆಯುವುದರಲ್ಲಿ ಪಟ್ಟುಹಿಡಿಯುತ್ತವೆ. ಇದು ಸಹಜವಾಗಿರುವುದಾದರೂ, ಸಾಲದಿಂದ ಅತಿಯಾಗಿ ತುಂಬಿರುವ ರಾಷ್ಟ್ರಗಳನ್ನು ಏಕೆ ಅನುಕರಿಸಬೇಕು? ಜನರಿಗೆ ಐಶ್ವರ್ಯವನ್ನು ಉಂಟುಮಾಡುವ ಬದಲು, ವಿಪರೀತವಾದ ಸಾಲ ದಾರಿದ್ರ್ಯವನ್ನು ಮತ್ತು ಅಭದ್ರತೆಯನ್ನು ಹೆಚ್ಚಿಸಬಲ್ಲದು. ಡೇನಿಷ್ ಭಾಷೆಯ ಒಂದು ನಾಣ್ಣುಡಿಯು ಹೇಳುವಂತೆ, “ತಿನ್ನಲ್ಪಟ್ಟಿರುವ ರೊಟ್ಟಿಗಾಗಿ ಹಣ ತೆರುವುದು ಕ್ಲಿಷ್ಟಕರ.”
ಸಂತೋಷಕರವಾಗಿ, ನೀವು ವಿವೇಕಯುಕ್ತವಾಗಿ ವ್ಯಯಿಸಲು ಕಲಿಯುವಾಗ ಸಾಲದ ಹೊರೆಯಿಂದ ಉಂಟಾಗುವ ಒತ್ತಡವು ಮಹತ್ತಾಗಿ ಕಡಿಮೆಗೊಳ್ಳುತ್ತದೆ. ಆದುದರಿಂದ, ಕಡ ಪಡೆಯಲಿರುವ ಒತ್ತಡದಿಂದ ದೂರವಿರಲು ನಿಮ್ಮ ಕೊಳ್ಳಿಕೆಯನ್ನು ಜಾಗರೂಕವಾಗಿ ಯೋಜಿಸಲು ಸಮಯವನ್ನು ತೆಗೆದುಕೊಳ್ಳಿರಿ. ಅತಿಯಾದ ಹಣದ ಉಬ್ಬರದೊಂದಿಗಿರುವ ದೇಶಗಳಲ್ಲಿ ಕೂಡ, ಅಗವ್ಗಾಗಿ ಕೊಳ್ಳುವುದರ, ಮತ್ತು ಕೇವಲ ಆವಶ್ಯಕತೆಗಳನ್ನು ಖರೀದಿಸುವ ಮೂಲಕ ಹಣವನ್ನು ಉಳಿತಾಯ ಮಾಡುವ ವಿಧಗಳಿವೆ. ತಾಳುವುದಕ್ಕೆ ಸಿದ್ಧಮನಸ್ಸುಳ್ಳವರಾಗಿ ಅಥವಾ ಬಯಸಿದ ವಿಷಯವಿಲ್ಲದೆ, ನಿಮ್ಮ ಆದಾಯಗಳೊಳಗೆ ಜೀವಿಸುವುದನ್ನು ಇದು ಕೇಳಿಕೊಳ್ಳುತ್ತದೆ.
ನಿಮ್ಮನ್ನು ಕೇಳಿಕೊಳ್ಳಿರಿ: ನಾನು ಸಾಲಕ್ಕೆ ಈಡಾಗುವುದು ನನ್ನ ಕುಟುಂಬಕ್ಕೆ ತೊಂದರೆಯನ್ನು ಉಂಟುಮಾಡೀತೋ? ಸಾಲವನ್ನು ಮರುಪಾವತಿ ಮಾಡಲು ನನಗೆ ಅಸಾಧ್ಯವಾಗುವುದಾದರೆ ನನ್ನ ಒಳ್ಳೆಯ ಹೆಸರಿನ ಕುರಿತಾಗಿ ಏನು? ಪುನಃ ಭರವಸೆಯೋಗ್ಯನಾಗಲಿಕ್ಕೆ ಬಹಳ ಸಮಯವು ತಗಲಬಹುದು! ಈ ಸಂಬಂಧದಲ್ಲಿ, ಪ್ರಾಯೋಗಿಕವಾದ, ದೃಢವಾದ ಸಲಹೆ ಲಭ್ಯವಿದೆ. ಸಾಲದ ವಿಷಯದೊಂದಿಗೆ ವ್ಯವಹರಿಸಲಿಕ್ಕೆ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಬೈಬಲ್ ಸಹಾಯ ಮಾಡಬಲ್ಲದೋ ಎಂದು ನೋಡಲು ಅದನ್ನು ಏಕೆ ಪರಿಶೀಲಿಸಬಾರದು?
ಬೈಬಲ್ ನಿಮಗೆ ಸಹಾಯ ಮಾಡಬಲ್ಲದೋ?
ಅತಿ ಪ್ರಾಮುಖ್ಯವಾಗಿ, ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನು ಬೆಳೆಸಲು ಬೈಬಲ್ ನಮಗೆಲ್ಲರಿಗೂ ಸಹಾಯ ಮಾಡಬಲ್ಲದು. ಈ “ನಿಭಾಯಿಸಲು ಕಷ್ಟಕರವಾಗಿರುವ ಸಮಯಗಳ”ಲ್ಲಿ ಖಂಡಿತವಾಗಿ ನಮಗೆ ಸಹಾಯವು ಅಗತ್ಯವಿದೆ. (2 ತಿಮೊಥೆಯ 3:1, NW) “ದ್ರವ್ಯಾಶೆಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ. ಆದದರಿಂದ—ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು? ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು” ಎಂಬ ಬುದ್ಧಿವಾದವು ನಮಗೆ ನೀಡಲ್ಪಟ್ಟಿದೆ. (ಇಬ್ರಿಯ 13:5, 6) ಒದಗಿಸುವಾತನಾದ ನಮ್ಮ ದೇವರಲ್ಲಿ ಬಲವಾದ ನಂಬಿಕೆಯನ್ನು ವರ್ಧಿಸುವುದು ಎಷ್ಟೊಂದು ಮುಖ್ಯವಾಗಿದೆ!
ಪ್ರತಿ ವ್ಯಕ್ತಿಯು ಹೇಗೆ ಜೀವನ ಮಾಡಬೇಕೆಂದು ಬೈಬಲ್ ಹೇಳುವುದಿಲ್ಲವಾದರೂ, ಅದು ದೋಷಮುಕ್ತವಾದ ಮಾರ್ಗದರ್ಶನದ ರೂಪರೇಖೆಗಳನ್ನು ಒದಗಿಸುತ್ತದೆ. ಪ್ರಥಮವಾಗಿ ತಮ್ಮ ಆತ್ಮಿಕತೆಯ ಕುರಿತು ಕಾಳಜಿ ವಹಿಸಬೇಕೆಂದು ಯೇಸು ಕ್ರಿಸ್ತನು ತನ್ನ ಕೇಳುಗರಿಗೆ ಪ್ರೇರೇಪಿಸಿದನು: “ತಮ್ಮ ಆತ್ಮಿಕ ಅಗತ್ಯತೆಯ ಅರಿವುಳ್ಳವರು ಧನ್ಯರು.” (ಮತ್ತಾಯ 5:3, NW) ಗುರಿಗಳನ್ನು ಇಡುವಂತೆ ಸಹ ನಮಗೆ ಹೇಳಲ್ಪಟ್ಟಿದೆ: “ಇದಲ್ಲದೆ ನಾನು ನಿಮಗೆ ಆಜ್ಞೆಕೊಟ್ಟ ಪ್ರಕಾರ ನೀವು ಮತ್ತೊಬ್ಬರ ಕಾರ್ಯದಲ್ಲಿ ತಲೆಹಾಕದೆ ಸುಮ್ಮಗಿದ್ದು ಸ್ವಂತ ಕಾರ್ಯವನ್ನೇ ನಡಿಸಿಕೊಂಡು ಕೈಯಾರೆ ಕೆಲಸಮಾಡುವದೇ ಮಾನವೆಂದೆಣಿಸಿರಿ. ಹೀಗಿದ್ದರೆ ನೀವು ಹೊರಗಿನವರ ಎದುರಿನಲ್ಲಿ ಸಜ್ಜನರಾಗಿ ನಡೆದುಕೊಳ್ಳುವಿರಿ, ಮತ್ತು ನಿಮಗೆ ಯಾವದಕ್ಕೂ ಕೊರತೆಯಿರುವದಿಲ್ಲ.” (1 ಥೆಸಲೊನೀಕ 4:11, 12) ಸುಮ್ಮನೆ ಜೀವಿಸುವುದು ಮತ್ತು ಮಿತವಾದೊಂದು ನೆಮ್ಮದಿಯನ್ನು ಅನುಭವಿಸುವುದು ಅನ್ನುವಾಗ, ನಮ್ಮ ಆದಾಯಗಳಲ್ಲೆ ಜೀವಿಸಬೇಕೆಂಬುದನ್ನು ಇದು ಕೇಳಿಕೊಳ್ಳುವುದಿಲ್ಲವೋ?
ನಮ್ಮ ಆಲೋಚನೆಯನ್ನು ಸಮನ್ವಯಗೊಳಿಸಲು ದೇವರ ವಾಕ್ಯವು ನಮಗೆ ಸಹಾಯ ಮಾಡಬಲ್ಲದು. ಜ್ಞಾನೋಕ್ತಿಯ ಬರಹಗಾರನು ದೇವರನ್ನು ಹೀಗೆ ಕೇಳಿಕೊಳ್ಳುವ ಮೂಲಕ ಒಂದು ಸಮತೆಯ ದೃಷ್ಟಿಕೋನವನ್ನು ತೋರಿಸಿದನು: “ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡದೆ ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು. ಹಾಗಾಗದೆ ಹೊಟ್ಟೆತುಂಬಿದವನಾದರೆ ಕರ್ತನು [ಯೆಹೋವ, NW] ಯಾರೋ ಎಂದು ನಿನ್ನನ್ನು ತಿರಸ್ಕರಿಸೇನು; ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೇನು.” (ಜ್ಞಾನೋಕ್ತಿ 30:8, 9) ಆದುದರಿಂದ ನೀವು ಸ್ವಲ್ಪ ಕಡಿಮೆಯಲ್ಲಿಯೇ ಜೀವನ ನಡೆಸಬೇಕಾಗಿದ್ದರೆ ಲಜ್ಜಿತರಾಗಬೇಡಿರಿ, ಕಡಿಮೆ ಪಕ್ಷ ತಾತ್ಕಾಲಿಕವಾಗಿಯಾದರೂ. ಅನೇಕರು ಮಾಡುವಂತೆ, ಇತರರೊಂದಿಗೆ ಹೋಲಿಸುತ್ತಾ ಅಥವಾ ಪ್ರಾಪಂಚಿಕ ಸಂಪತ್ತಿನ ಕುರಿತು ಅತಿಯಾಗಿ ಚಿಂತಿಸುತ್ತಾ, ನಿಮ್ಮ ಸಂತೋಷವು ಪ್ರಾಪಂಚಿಕ ವಿಷಯಗಳ ಮೇಲೆ ಆತುಕೊಳ್ಳುವಂತೆ ಎಂದೂ ಬಿಡದಿರಿ.—ಮತ್ತಾಯ 6:31-33.
ಇದಕ್ಕೆ ಕೂಡಿಸಿ, ಒಳ್ಳೆಯ ಅಭ್ಯಾಸಗಳನ್ನು ಹಸನುಗೊಳಿಸಲು ಬೈಬಲ್ ನಿಮಗೆ ಸಹಾಯಮಾಡಬಲ್ಲದು. ನೀವು ಪಡೆಯಶಕ್ತನಾದ ವಸ್ತುಗಳಲ್ಲಿ ತೃಪ್ತಿಯನ್ನು ಕಂಡುಕೊಳ್ಳುತ್ತಾ, ಜಿಪುಣರಾಗಿರದೆ ಮಿತ ವ್ಯಯವನ್ನು ಕಲಿಯಿರಿ. ನೀವು ಒಬ್ಬ ಯುವ ವ್ಯಕ್ತಿಯಾಗಿರುವುದಾದರೆ, ವಯಸ್ಕರು ಏನನ್ನು ಅನೇಕ ವರ್ಷಗಳ ಶ್ರಮದಿಂದ ಪಡೆದಿದ್ದಾರೋ, ಅದನ್ನು ತತ್ಕ್ಷಣವೇ ಪಡೆಯಬೇಕೆಂಬುದಾಗಿ ನಿರೀಕ್ಷಿಸದಿರಿ. ಪ್ರಾಪಂಚಿಕತೆಯ ಅಡಿಯಾಳಾಗಿರುವುದರಿಂದ ದೂರವಿರಿ. ಬೈಬಲ್ ನಮಗೆ ಹಣದ ಕುರಿತಾಗಿ ಅಲ್ಲ, ಬದಲಿಗೆ ‘ಹಣದಾಸೆಯ’ ಕುರಿತಾಗಿ ಹೇಳುತ್ತಾ ಎಚ್ಚರಿಸುವುದು ಉಚಿತವಾಗಿದೆ: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ. ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.” (1 ತಿಮೊಥೆಯ 6:9, 10) ನಿಮಗೆ ನಿಜವಾಗಿಯೂ ಏನು ಅಗತ್ಯವಿದೆ ಮತ್ತು ನಿಮ್ಮ ಕೇವಲ ಬಯಕೆ ಏನಾಗಿದೆ ಎಂಬುದರ ನಡುವೆ ಇರುವ ವ್ಯತ್ಯಾಸವನ್ನು ನೀವು ಗ್ರಹಿಸುವುದು ಎಷ್ಟೊಂದು ಆವಶ್ಯಕ!
ಹಾಗಿರುವುದಾದರೂ, ನಿಮ್ಮ ಆದಾಯವು ಅತಿ ಕಡಿಮೆ ಎಂದು ನೀವು ನೆನಸುತ್ತೀರೋ? ಹತಾಶವಾಗದೆ ಅಭಾವಗಳನ್ನು ಸೈರಿಸಿಕೊಳ್ಳುವದು ಸುಲಭವಲ್ಲವೆಂಬುದು ನಿಜ. ಆದರೂ, ನಿಮಗೆ ಅಧಿಕ ಹೊರೆಯನ್ನು ಮತ್ತು ಹಣಕಾಸಿನ ನಷ್ಟವನ್ನು ಕೂಡ ಉಂಟುಮಾಡಬಹುದಾದ ಆವಶ್ಯಕವಲ್ಲದ ವಿಷಯಗಳಿಗಾಗಿ ಸಾಲಕ್ಕೆ ಈಡಾಗುವ ಬದಲು ಕೆಲವು ಆವಶ್ಯಕವಲ್ಲದವುಗಳಿಲದ್ಲೆ ನಿರ್ವಹಿಸಲು ಮನಸ್ಸುಳ್ಳವರಾಗಿರ್ರಿ. ಜಾಗರೂಕವಾಗಿ ಯೋಜಿಸಿರಿ, ಮತ್ತು ಮಿತವ್ಯಯಿಯಾಗಿರಿ. ಒಬ್ಬ ಅನುಭವಸ್ಥ ಮಿತ್ರನೊಂದಿಗೆ ಮಾತಾಡುವ ಮೂಲಕ ಪ್ರಾಯೋಗಿಕ ಸಲಹೆಗಳನ್ನು ನೀವು ಪಡೆಯಬಹುದು. ಒಂದು ನವೀನವಾದ ಕೌಶಲವನ್ನು ಕಲಿಯುವುದು ಸಹಾಯಮಾಡಬಹುದೋ? ಜ್ಞಾಪಕವಿರಲಿ: ಸಂದರ್ಭಗಳು ಏನೇ ಆಗಿರಲಿ, ಬೈಬಲ್ ತತ್ವಗಳನ್ನು ಅನುಸರಿಸುವುದು, ಆತ್ಮಿಕ ವಿಷಯಗಳನ್ನು ಮೊದಲಾಗಿ ಇಡುವುದು, ಮತ್ತು ಯೆಹೋವನಲ್ಲಿ ಪೂರ್ಣ ಭರವಸೆಯಿಡುವುದು ಅತಿ ಪ್ರಾಮುಖ್ಯವಾಗಿವೆ.—ಫಿಲಿಪ್ಪಿ 4:11-13.
ಹೌದು, ಸಾಲಕ್ಕೆ ಈಡಾಗುವುದು ಪ್ರಯೋಜನಕಾರಿಯಾಗಿರದಿರಬಹುದು. ಹೀಗೆ ಹೇಳಲ್ಪಟ್ಟಿದೆ: “ಸಾಲ ಮಾಡಿರುವ ಒಬ್ಬ ಮನುಷ್ಯ ಒಂದು ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಮನುಷ್ಯ.” ಸಾಲದ ಹೊರೆಯು ಕುಟುಂಬ ಜೀವನವನ್ನು, ಆರೋಗ್ಯವನ್ನು, ಮತ್ತು ಆತ್ಮಿಕತೆಯನ್ನು ಹಾನಿಗೊಳಿಸಸಾಧ್ಯವಿದೆ. ಸಾಲವು, ಕಡ ಪಡೆಯುವವನನ್ನು ಕೂಡ ಹೆಚ್ಚು ದರಿದ್ರನನ್ನಾಗಿ ಮಾಡಬಹುದು. ಜ್ಞಾನೋಕ್ತಿ 22:7 ಹೇಳುವದು: “ಬಲ್ಲಿದನು ಬಡವನಿಗೆ ಒಡೆಯ; ಸಾಲಗಾರನು ಸಾಲಕೊಟ್ಟವನಿಗೆ ಸೇವಕ.” ಆದಕಾರಣ, ಅನಾವಶ್ಯಕವಾದ ಸಾಲದಿಂದ ದೂರವಿರಿ. ಅಪೊಸ್ತಲ ಪೌಲನು ಕ್ರೈಸ್ತರಿಗೆ ಏನನ್ನು ಶಿಫಾರಸ್ಸು ಮಾಡಿದನೋ, ಅದರಲ್ಲಿ ಒಳಗೊಂಡಿದ್ದ ತತ್ವದಿಂದ ನಾವು ಇನ್ನೂ ಪ್ರಯೋಜನವನ್ನು ಪಡೆಯಬಲ್ಲೆವು: “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರಬಾರದು. ಮತ್ತೊಬ್ಬರನ್ನು ಪ್ರೀತಿಸುವವನು ಧರ್ಮಪ್ರಮಾಣವನ್ನೆಲ್ಲಾ ನೆರವೇರಿಸಿದ್ದಾನೆ.”—ರೋಮಾಪುರ 13:8.
ನಿಮ್ಮ ದೇಶದ ಆರ್ಥಿಕ ಸ್ಥಿತಿಯು ಏನೇ ಆಗಿರಲಿ, ದೇವರ ಹೊಸ ಲೋಕಕ್ಕಾಗಿ ಭರವಸೆಯಿಂದ ಎದುರು ನೋಡಿರಿ. ಬಲು ಬೇಗನೆ ಮಾನವಕುಲವು ಇನ್ನು ಮುಂದೆ, ಕಡ ಕೊಡುವವರು ಮತ್ತು ಕಡ ತೆಗೆದುಕೊಳ್ಳುವವರಾಗಿ ವಿಭಜಿತಗೊಳ್ಳದು. ದೇವರ ರಾಜ್ಯದ ಕೆಳಗೆ ಯಾರೊಬ್ಬರು ಬಡವರಾಗಿರಲಾರರು. ಯೆಹೋವನ ವಾಗ್ದಾನವು ಸತ್ಯವಾಗಲಿರುವುದು: “ಯಾಕಂದರೆ ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು.” (ಕೀರ್ತನೆ 72:12, 13) ಕೇವಲ ಬದುಕಿ ಉಳಿಯಲು ಹೋರಾಡುವ ಬದಲು, ಆಗ ಭೂನಿವಾಸಿಗಳು “ಪುಷ್ಕಳವಾದ ಶಾಂತಿಯಲ್ಲಿ ತಮ್ಮ ಮನೋಜ್ಞವಾದ ಹರ್ಷವನ್ನು ಕಂಡುಕೊಳ್ಳು”ವರು.—ಕೀರ್ತನೆ 37:11, NW.
[ಪುಟ 36 ರಲ್ಲಿರುವ ಚಿತ್ರ]
ಥಾಮಸ್ ಜೆಫರ್ಸನ್
[ಕೃಪೆ]
Painting by Gilbert Stuart. Courtesy Bowdoin College Museum of Art/Dictionary of American Portraits/Dover
[ಪುಟ 37 ರಲ್ಲಿರುವ ಚಿತ್ರ]
ಅಧಿಕವಾದ ಸಾಲಕ್ಕೆ ಈಡಾಗುವುದು ನಿಮ್ಮ ವಿವಾಹದ ಮೇಲೆ ಒತ್ತಡವನ್ನು ಹಾಕಬಲ್ಲದು