ನಾವೆತ್ತ ಸಾಗುತ್ತಿದ್ದೇವೆ?
ನೀವು ಈ ಹಿಂದೆ ಎಂದೂ ನೋಡಿರದ ಒಂದು ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದೀರೆಂದು ಭಾವಿಸಿಕೊಳ್ಳಿರಿ. ಇಷ್ಟರೊಳಗೆ ನೀವು ಗಮ್ಯಸ್ಥಾನವನ್ನು ತಲಪಿರಬೇಕಾಗಿತ್ತು, ಆದರೆ ರಸ್ತೆಯ ಸೂಚನೆಗಳು, ಊರಿನ ಹೆಸರುಗಳು, ಮತ್ತು ಸೀಮೆಯ ಗುರುತುಗಳು, ನೀವು ನಿರೀಕ್ಷಿಸಿದಂತಹವುಗಳಾಗಿರುವುದಿಲ್ಲ. ‘ನಾನು ಎಲ್ಲಿದ್ದೇನೆ?’ ಎಂದು ನೀವು ಕುತೂಹಲಪಡುತ್ತೀರಿ. ‘ನಾನು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದೇನೋ?’
ಇಂದಿನ ಲೋಕವು ತದ್ರೀತಿಯ ಒಂದು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಈ ಹಿಂದೆ ಎಂದೂ ನೋಡಿರದ ಪ್ರಮಾಣದಲ್ಲಿ ಸಮಾಜವು ಅವನತಿ ಹೊಂದುತ್ತಿರುವುದನ್ನು ತಾನು ಗಮನಿಸುತ್ತಿರುವಾಗ ಮನುಷ್ಯನು ಅಪರಿಚಿತವಾದ ಪ್ರದೇಶದಲ್ಲಿ ಇದ್ದಾನೆ. ವಿಜ್ಞಾನ ಮತ್ತು ಯಂತ್ರಕಲಾಶಾಸ್ತ್ರದಲ್ಲಿ ಎಲ್ಲಾ ಅಭಿವೃದ್ಧಿಗಳಿಂದಾಗಿ, ಇಷ್ಟರಲ್ಲೇ ನಾವು ಹೆಚ್ಚು ಉತ್ತಮವಾದ ಒಂದು ಲೋಕದಲ್ಲಿ ಇರಬೇಕಾಗಿತ್ತು ಎಂಬಂತೆ ಭಾಸವಾಗಬಹುದು. 20ನೆಯ ಶತಮಾನದಲ್ಲಿ ಮಾತ್ರವೇ “ಒಂದು ಭೌಗೋಲಿಕ ಸಹೋದರತ್ವದ ಆದರ್ಶ ಧ್ಯೇಯವು ಪ್ರಾಯೋಗಿಕ ಸಾಧ್ಯತೆಯಾಗಿ ಪರಿಣಮಿಸಿದೆ” ಎಂದು ಗ್ರೇಟ್ ಏಜಸ್ ಆಫ್ ಮ್ಯಾನ್ನಲ್ಲಿ, ಸಂಪಾದಕರಾದ ರಸಲ್ ಬೋಅರ್ನ್ ಗಮನಿಸುತ್ತಾರೆ.
ಆದರೂ, ಆ ಗಮ್ಯಸ್ಥಾನವಾದ, “ಒಂದು ಭೌಗೋಲಿಕ ಸಹೋದರತ್ವ”ವು ತಪ್ಪಿಹೋಗಿದೆ. ಆರ್ಥಿಕ ಭದ್ರತೆ, ಸಾಕಷ್ಟು ಆಹಾರ, ಉತ್ತಮವಾದ ಆರೋಗ್ಯ, ಮತ್ತು ಸಂತೋಷವುಳ್ಳ ಕುಟುಂಬ ಜೀವನದ ವಾಗ್ದಾನಿತ ಹೆಗ್ಗುರುತುಗಳು ಎಲ್ಲಿಯೂ ಕಂಡುಬರುತ್ತಿಲ್ಲ. “ಅನೇಕ ವಿಧಗಳಲ್ಲಿ ವೈಜ್ಞಾನಿಕ ಅಭಿವೃದ್ಧಿಯು ನೇರವಾಗಿ ವಿನಾಶ ಮತ್ತು ಕ್ರೌರ್ಯಕ್ಕೆ ಅಡಿಯಾಳಾಗಿಸಲ್ಪಟ್ಟಿದೆ” ಎಂದು ಮೈಲ್ಸ್ಟೋನ್ಸ್ ಆಫ್ ಹಿಸ್ಟರಿ ಪುಸ್ತಕವು ಗಮನಿಸುತ್ತದೆ.
ಹೌದು, ಇಂದು ಮಾನವಕುಲವು ಅಪೇಕ್ಷಿತ ದಿಕ್ಕಿನಿಂದ ವಿಪಥವಾಗಿ, ಈ ಶತಮಾನದ ಆರಂಭದಲ್ಲಿ ಚಿತ್ರಿಸಿಕೊಂಡಿದ್ದ ಶಾಂತಿ ಮತ್ತು ಭದ್ರತೆಯಿಂದ ಬಹಳ ದೂರವಾಗಿ, ಅಪರಿಚಿತ ಪ್ರದೇಶದಲ್ಲಿ ತಪ್ಪಿಹೋಗಿದೆ. ಹೀಗೆ, ಇಂದು ಅನೇಕರು ಮಾರ್ಗದರ್ಶನಗಳಿಗಾಗಿ ಕೇಳಿಕೊಳ್ಳುತ್ತಿದ್ದಾರೆ: “ನಾವು ಹೇಗೆ ಈ ಪರಿಸ್ಥಿತಿಯೊಳಗೆ ಬಂದೆವು? ಈ ಲೋಕವು ಎತ್ತ ಸಾಗುತ್ತಿದೆ? ನಾವು ಕಡೆಯ ದಿವಸಗಳಲ್ಲಿ ಜೀವಿಸುತ್ತಿದ್ದೇವೋ?”
ನಾವೆಲ್ಲಿದ್ದೀವೆಂಬುದನ್ನು ಕಂಡುಹಿಡಿಯಲಿಕ್ಕಾಗಿ, ನಾವು ಪ್ರಸ್ತುತ ಎಲ್ಲಿ ಇದ್ದೇವೆಂದು ಮೊದಲು ಖಚಿತಪಡಿಸಿಕೊಳ್ಳಬೇಕು. ನಾವು ಹೊಸ ಲೋಕ ವ್ಯವಸ್ಥೆಯೊಂದರ ಅಂಚಿನಲ್ಲಿದ್ದೇವೆಂದು ಕೆಲವರು ಹೇಳುತ್ತಾರೆ; ಇತರರು ನಾವು ನಾಶನದ ಅಂಚಿನಲ್ಲಿದ್ದೇವೆಂದು ಹೇಳುತ್ತಾರೆ. ಒಂದು ಹಾದಿ ನಕ್ಷೆಯೋಪಾದಿ ಬೈಬಲು, ನಿಖರವಾಗಿ ನಾವು ಎಲ್ಲಿದ್ದೇವೆ ಮತ್ತು ನಾವೆತ್ತ ಸಾಗುತ್ತಿದ್ದೇವೆ ಎಂಬುದನ್ನು ಅವಲೋಕಿಸಲು ನಮಗೆ ಸಹಾಯ ಮಾಡುತ್ತದೆ.
ನೀವು ಪ್ರಯಾಣಿಸುತ್ತಿರುವಾಗ, ನಿಮ್ಮ ಸ್ಥಳವನ್ನು ಗುರುತಿಸುವ ಸೂಚನೆಗಳಿಗಾಗಿ ಎಚ್ಚರಿಕೆಯಿಂದ ಗಮನಿಸುವುದು ಪ್ರಾಮುಖ್ಯ. ತದ್ರೀತಿಯಲ್ಲಿ, ‘ಕಡೆಯ ದಿವಸಗಳು’ ಎಂದು ಕರೆಯಲ್ಪಡುವ, ಇತಿಹಾಸದ ಒಂದು ಕಾಲಾವಧಿಯನ್ನು ವೈಶಿಷ್ಟ್ಯಗೊಳಿಸಸಾಧ್ಯವಿರುವ ಪ್ರಧಾನ ಲಕ್ಷಣ—ಲೋಕ ಸನ್ನಿವೇಶಗಳು ಮತ್ತು ಮನೋಭಾವಗಳು—ಗಳನ್ನು ಬೈಬಲು ವರ್ಣಿಸುತ್ತದೆ. (2 ತಿಮೊಥೆಯ 3:1-5) ‘ಕಡೆಯ ದಿವಸಗಳು’ ಎಂಬ ಈ ಅಭಿವ್ಯಕ್ತಿಯು, ಅಕ್ಷರಶಃ ಪರಲೋಕ ಮತ್ತು ಭೂಮಿಯ ಅಂತ್ಯಕ್ಕೆ ನಿರ್ದೇಶಿಸುವುದಿಲ್ಲ. ಬದಲಾಗಿ, ಒಂದು ಬೈಬಲ್ ಭಾಷಾಂತರವು ಅದನ್ನು ಹೇಳುವಂತೆ, ಅದು “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಅಥವಾ “ಯುಗಾಂತ್ಯ”ವನ್ನು ಸೂಚಿಸುತ್ತದೆ.—ಮತ್ತಾಯ 24:3; ಟುಡೇಸ್ ಇಂಗ್ಲಿಷ್ ವರ್ಷನ್.
“ಕಡೆಯ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾಗಿರುವ ಕಠಿನ ಕಾಲಗಳು ಇಲ್ಲಿರುವುವು” ಎಂದು ಕ್ರೈಸ್ತ ಅಪೊಸ್ತಲ ಪೌಲನು ಬರೆದನು. (2 ತಿಮೊಥೆಯ 3:1, NW) ವಾಸ್ತವವಾಗಿ, ಇದು ಇತಿಹಾಸದಲ್ಲಿ ಇತರ ಕಾಲಾವಧಿಗಳಿಗೆ ಅನ್ವಯಿಸಸಾಧ್ಯವಿರುವಂತೆ ಭಾಸವಾಗಬಹುದು. ನಿಶ್ಚಯವಾಗಿ ಪ್ರತಿ ಯುಗವು ಕಷ್ಟಾನುಭವದ ತನ್ನ ಪಾಲನ್ನು ಹೊಂದಿತ್ತು.
ಹಾಗಾದರೆ, ಈ ಮಾತುಗಳು ನಮ್ಮ ದಿವಸವನ್ನು ಗುರುತಿಸುತ್ತವೆಂಬುದನ್ನು ನಂಬಲಿಕ್ಕಾಗಿ ಯಾವ ಕಾರಣವಿದೆ?
[ಪುಟ 4 ರಲ್ಲಿರುವ ಚಿತ್ರ ಕೃಪೆ]
Tom Haley/Sipa Press