ಲೋಕಾರೋಗ್ಯ ಪರಿಸ್ಥಿತಿ—ಬೆಳೆಯುತ್ತಿರುವ ಒಂದು ಅಂತರ
ಬ್ರೆಸಿಲ್ನ ಎಚ್ಚರ! ಸುದ್ದಿಗಾರರಿಂದ
1977ರಲ್ಲಿ, ಸೊಮಾಲಿಯದಲ್ಲಿ ಆಲಿ ಮಾವೂ ಮಾಲೀನ್ ಸಿಡುಬು ರೋಗಕ್ಕೆ ಗುರಿಯಾದಾಗ, ಅದು ಅವನನ್ನು ಆಸ್ಪತ್ರೆಗೆ ಮುಟ್ಟಿಸಿತು ಮತ್ತು ಜೊತೆಗೆ ಅವನ ಹೆಸರು ಶಿರೋನಾಮಗಳಲ್ಲಿರುವಂತೆ ಮಾಡಿತು. ಅವನಿಗೆ ಚಿಕಿತ್ಸೆಯಾಗಿ, ಗುಣಹೊಂದಿದ ನಂತರ, ಶತಮಾನಗಳ ವರೆಗೆ ಲಕ್ಷಾಂತರ ಜನರನ್ನು ಹಾಳುಗೆಡವಿದ ಬಳಿಕ, ಸಿಡುಬು ರೋಗವು ಭೂಮುಖದಿಂದ ನಿರ್ಮೂಲ ಮಾಡಲ್ಪಟ್ಟಿದೆ ಎಂದು 1980ರಲ್ಲಿ ಡಬ್ಲ್ಯುಏಚ್ಓ (ಲೋಕಾರೋಗ್ಯ ಸಂಸ್ಥೆ) ಪ್ರಕಟಿಸಿತು. ಆಲಿಯು ಲೋಕದ ಕಡೆಯ ಬಲಿಪಶುವಾಗಿದ್ದನೆಂದು ಹೇಳಲಾಗಿತ್ತು.
1992ರಲ್ಲಿ, ಇತರ ಆರೋಗ್ಯ ಸಾಧನೆಗಳನ್ನು ಡಬ್ಲ್ಯುಏಚ್ಓ ವರದಿಸಿತು: 1980ಗಳಲ್ಲಿ, ವರ್ಧಿಷ್ಣು ಲೋಕದಲ್ಲಿರುವ ಹೆಚ್ಚಿನ ಜನರು ಸುರಕ್ಷಿತವಾದ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಕರ್ಯಗಳಿಗೆ ಅವಕಾಶವನ್ನು ಪಡೆದುಕೊಂಡರು. ಇದರ ಜೊತೆಗೆ, ಅತ್ಯಂತ ಕಡಿಮೆ ವಿಕಾಸ ಹೊಂದಿರುವ ದೇಶಗಳಲ್ಲಿ ಜನಸಂಖ್ಯೆಯ ಅತ್ಯಧಿಕ ಪ್ರಮಾಣವು, ಸ್ಥಳೀಯ ಆರೋಗ್ಯ ಇಲಾಖೆಯ ಅವಕಾಶವನ್ನು ಪಡೆಯಿತು. ಫಲಿತಾಂಶವಾಗಿ, ಕಳೆದ ದಶಕದಲ್ಲಿ ಬಾಲ್ಯಾವಸ್ಥೆಯ ಮರಣಗಳು ಕೆಲವು ಸ್ಥಳಗಳಲ್ಲಿ ಕಡಿಮೆಯಾಯಿತು.
ದಿಗಿಲುಗೊಳಿಸುವ ವಾಸ್ತವಾಂಶಗಳು
ಆದರೂ, ಈ ಸಾಧನೆಗಳನ್ನು ನಷ್ಟಗಳು ನಿಷ್ಪ್ರಯೋಜನಗೊಳಿಸುತ್ತವೆ ಮತ್ತು ಅಸ್ಪಷ್ಟವಾಗಿದ ಬೆದರಿಕೆಗಳು ಮರೆಸುತ್ತವೆ. ದಿಗಿಲುಗೊಳಿಸುವ ಕೆಲವು ವಾಸ್ತವಾಂಶಗಳನ್ನು ಪರಿಗಣಿಸಿರಿ.
ಏಚ್ಐವಿ⁄ಏಯ್ಡ್ಸ್—ಏಯ್ಡ್ಸ್ ರೋಗವನ್ನು ಉಂಟುಮಾಡುವ ಏಚ್ಐವಿ ವೈರಸ್ನಿಂದ, ಲೋಕವ್ಯಾಪಕವಾಗಿ 1,70,00,000ಕ್ಕಿಂತಲೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಇತ್ತೀಚೆಗಿನ ಒಂದು ವರ್ಷದಲ್ಲಿ, ದಿನವೊಂದಕ್ಕೆ ಹೆಚ್ಚುಕಡಿಮೆ 8,000 ಮಂದಿಯಂತೆ, ಸುಮಾರು 30,00,000 ಜನರು ಬಾಧಿತರಾದರು. ಹತ್ತು ಲಕ್ಷಕ್ಕಿಂತಲೂ ಹೆಚ್ಚಿನ ಮಕ್ಕಳು ಏಚ್ಐವಿಯನ್ನು ಹತ್ತಿಸಿಕೊಂಡಿದ್ದಾರೆ. ಮಕ್ಕಳಲ್ಲಿ ಏಯ್ಡ್ಸ್ನಿಂದ ಉಂಟಾದ ಮರಣಗಳು, ಇತ್ತೀಚೆಗಿನ ದಶಕಗಳಲ್ಲಿ ಮಗುವಿನ ಪಾರಾಗುವಿಕೆಯಲ್ಲಿನ ಯಾವುದೇ ಪ್ರಗತಿಗಿಂತ ಎಷ್ಟೋ ಹೆಚ್ಚು ನಷ್ಟವನ್ನುಂಟುಮಾಡಬಹುದು. ಮತ್ತು ಏಷಿಯದಲ್ಲಿರುವಂತೆ, ಅನೇಕ ಸ್ಥಳಗಳಲ್ಲಿ ಏಯ್ಡ್ಸ್ ಸಾಂಕ್ರಾಮಿಕ ರೋಗವು ಈಗ ತಾನೇ ಆರಂಭದ ಸ್ಫೋಟಕ ಸ್ಥಿತಿಯೊಳಗೆ ಚಲಿಸುತ್ತಿದೆ. ಏಚ್ಐವಿಗೆ ಆಹುತಿಯಾದವರೆಲ್ಲರಲ್ಲಿ 80 ಪ್ರತಿಶತಕ್ಕಿಂತ ಹೆಚ್ಚಿನ ಜನರು ವರ್ಧಿಷ್ಣು ದೇಶಗಳಲ್ಲಿ ಜೀವಿಸುತ್ತಾರೆ ಎಂದು ಏಯ್ಡ್ಸ್ ಆ್ಯಂಡ್ ಡೆವಲಪ್ಮೆಂಟ್ ಹೇಳುತ್ತದೆ.
ಕ್ಷಯ ರೋಗ (ಟಿಬಿ)—ಕಳೆದ ಎರಡು ದಶಕಗಳ ವರೆಗೆ ಬಹು ಮಟ್ಟಿಗೆ ಅಲಕ್ಷ್ಯ ಮಾಡಲ್ಪಟ್ಟಿರುವಾಗ್ಯೂ, ಸಾಂಕ್ರಾಮಿಕ ರೋಗಗಳಲ್ಲಿ ಲೋಕದ ಅತ್ಯಂತ ಪ್ರಮುಖ ಮಾರಕ ರೋಗವನ್ನಾಗಿ ಮಾಡುತ್ತಾ, ಪ್ರತಿ ವರ್ಷ 30 ಲಕ್ಷ ಜನರನ್ನು ಕೊಲ್ಲುವ ಮೂಲಕ ಟಿಬಿಯು ಪುನಃ ಒಮ್ಮೆ ಲೋಕವನ್ನು ಬಾಧಿಸುತ್ತಿದೆ. ಆ ಮರಣಗಳಲ್ಲಿ 98 ಪ್ರತಿಶತಕ್ಕಿಂತ ಹೆಚ್ಚು ಮರಣಗಳು ವರ್ಧಿಷ್ಣು ದೇಶಗಳಲ್ಲಿ ಸಂಭವಿಸಿದವು. ಕೆಟ್ಟ ಪರಿಸ್ಥಿತಿಯನ್ನು ಇನ್ನೂ ಕೆಟ್ಟದ್ದಾಗಿ ಮಾಡುವಂತೆ, ಟಿಬಿ ರೋಗಾಣುವು ಏಚ್ಐವಿಯೊಂದಿಗೆ ಜೊತೆಗೂಡಿದ್ದು, ವಿನಾಶಕ ಫಲಿತಾಂಶಗಳೊಂದಿಗೆ ಮಾರಕ ಸಂಬಂಧವನ್ನು ರಚಿಸಿದೆ. 2000 ವರ್ಷದಷ್ಟಕ್ಕೆ, ಏಚ್ಐವಿಯಿಂದ ಬಾಧಿತರಾದ ಹತ್ತು ಲಕ್ಷ ಜನರು ಪ್ರತಿ ವರ್ಷ ಟಿಬಿಯಿಂದ ಸಾಯುವರೆಂದು ನಿರೀಕ್ಷಿಸಲಾಗುತ್ತದೆ.
ಕ್ಯಾನ್ಸರ್—ವಿಕಾಸಗೊಂಡ ದೇಶಗಳಿಗಿಂತಲೂ ವರ್ಧಿಷ್ಣು ದೇಶಗಳಲ್ಲಿ ಈಗ ಕ್ಯಾನ್ಸರ್ ಕೇಸುಗಳ ಸಂಖ್ಯೆಯು ಹೆಚ್ಚು ಮಹತ್ತರವಾಗಿದೆ.
ಹೃದ್ರೋಗ—“ನಾವು ಪರಿಧಮನಿಯ ಭೌಗೋಲಿಕ ಮಹಾದುರಂತವೊಂದಕ್ಕೆ ಸಮೀಪವಾಗಿದ್ದೇವೆ” ಎಂದು ಡಬ್ಲ್ಯುಏಚ್ಓನ ಡಾ. ಈವಾನ್ ಡ್ಯಾರ್ಫಸ್ ಎಚ್ಚರಿಸುತ್ತಾರೆ. ಹೃದ್ರೋಗವು ಇನ್ನು ಮುಂದೆ ಕೇವಲ ಉದ್ಯೋಗಶೀಲ ರಾಷ್ಟ್ರಗಳ ವ್ಯಾಧಿಯಾಗಿರುವುದಿಲ್ಲ. ಉದಾಹರಣೆಗಾಗಿ, ಲ್ಯಾಟಿನ್ ಅಮೆರಿಕದಲ್ಲಿ, ಸಾಂಕ್ರಾಮಿಕ ರೋಗಗಳಿಗಿಂತಲೂ ಎರಡರಿಂದ ಮೂರು ಪಟ್ಟು ಅಧಿಕವಾಗಿ ಜನರು ಹೃದ್ರೋಗದಿಂದ ಸಾಯುವರು. ಕೆಲವೊಂದು ವರ್ಷಗಳೊಳಗೆ, ಪರಿಧಮನಿಯ ಪ್ರತಿಬಂಧಗಳು ಮತ್ತು ಮಿದುಳು ಲಕ್ವಗಳು, ವರ್ಧಿಷ್ಣು ದೇಶಗಳಾದ್ಯಂತವಾಗಿ ಮರಣಕ್ಕೆ ಮುಖ್ಯವಾದ ಕಾರಣವಾಗಲಿವೆ.
ಉಷ್ಣವಲಯದ ರೋಗಗಳು—ಡಬ್ಲ್ಯುಏಚ್ಓ ಎಚ್ಚರಿಸುವುದು: “ಅಮೆರಿಕಕ್ಕೆ ವಾಂತಿಭೇದಿ (ಕಾಲರ) ಹರಡುವುದರೊಂದಿಗೆ . . . , ಪೀತ ಜ್ವರ ಮತ್ತು ಡೆಂಗಿ ಸಾಂಕ್ರಾಮಿಕ ರೋಗಗಳು ಅತ್ಯಧಿಕ ಸಂಖ್ಯೆಯಲ್ಲಿ ಜನರನ್ನು ಬಾಧಿಸುತ್ತಿವೆ, ಮತ್ತು ಮಲೇರಿಯ ಸನ್ನಿವೇಶವು ಕೆಟ್ಟುಹೋಗುತ್ತಿದ್ದು, ಉಷ್ಣವಲಯದ ರೋಗಗಳು ಅತಿಯಾಗಿ ಹಬ್ಬಿರುವಂತೆ ತೋರುತ್ತದೆ.” ಟೈಮ್ ಪತ್ರಿಕೆಯು ಹೇಳುವುದು: “ಲೋಕದ ಹೆಚ್ಚು ಬಡ ದೇಶಗಳಲ್ಲಿ, ಸಾಂಕ್ರಾಮಿಕ ರೋಗದ ವಿರುದ್ಧವಾದ ಹೋರಾಟವು ಈಗಾಗಲೇ ಒಂದು ವಿಪತ್ತಾಗಿದೆ.” ಮಲೇರಿಯ ರೋಗವೊಂದರಿಂದಲೇ ಮೃತಿ ಹೊಂದುತ್ತಿರುವ ಜನರ ಸಂಖ್ಯೆಯು ಈಗ ಒಂದು ವರ್ಷಕ್ಕೆ ಸುಮಾರು 20 ಲಕ್ಷವಾಗಿದೆ, ಮತ್ತು ಸುಮಾರು 40 ವರ್ಷಗಳ ಹಿಂದೆಯೇ ಬಹುಮಟ್ಟಿಗೆ ಅದನ್ನು ನಿರ್ಮೂಲಮಾಡಲಾಗಿತ್ತೆಂದು ಅಭಿಪ್ರಯಿಸಲ್ಪಟ್ಟ ತದನಂತರದ ಪರಿಸ್ಥಿತಿಯು ಇದಾಗಿದೆ.
ಅತಿಭೇದಿಯ ರೋಗಗಳು—ವರ್ಧಿಷ್ಣು ದೇಶಗಳಲ್ಲಿ ಎಳೆಯರ ನಡುವೆ ಮರಣ ಪಡುತ್ತಿರುವವರ ಸಂಖ್ಯೆಯು ಆಘಾತಗೊಳಿಸುವಂತಹದ್ದಾಗಿದೆ. ಸೋಂಕು ಅಥವಾ ನ್ಯೂನ ಪೋಷಣೆಯ ಫಲಿತಾಂಶವಾಗಿ ಪ್ರತಿ ದಿನ ಹೆಚ್ಚುಕಡಿಮೆ 40,000 ಮಕ್ಕಳು ಸಾಯುತ್ತಾರೆ; ಅತಿಭೇದಿಯ ರೋಗಗಳಿಂದಲೇ ಪ್ರತಿ ಎಂಟು ಸೆಕಂಡುಗಳಿಗೆ ಒಂದು ಮಗುವು ಸಾಯುತ್ತದೆ.
ಆರೋಗ್ಯ ಮತ್ತು ಬಡತನ—ಒಂದು ಸಂಬಂಧ
ಈ ಆರೋಗ್ಯ ಚಿತ್ರಣವು ನಮಗೆ ಏನನ್ನು ಹೇಳುತ್ತಿದೆ? “ವರ್ಧಿಷ್ಣು ದೇಶಗಳು ಇಮ್ಮಡಿ ಹೊಡೆತದಿಂದ ಹೊಡೆಯಲ್ಪಡುತ್ತಿವೆ” ಎಂದು ಆರೋಗ್ಯ ಪರಿಣತನೊಬ್ಬನು ಹೇಳುತ್ತಾನೆ. “ಅವು ಈಗ ತಲೆದೋರುತ್ತಿರುವ ಆಧುನಿಕ ಅಸ್ಥಿಗತ ರೋಗಗಳಿಂದ ಬಾಧಿಸಲ್ಪಡುತ್ತಿದ್ದು, ಇನ್ನೂ ಅಸ್ತಿತ್ವದಲ್ಲಿರುವ ಉಷ್ಣವಲಯದ ರೋಗಗಳಿಂದಲೂ ಬಾಧಿಸಲ್ಪಡುತ್ತಿವೆ.” ಫಲಿತಾಂಶವೇನು? ಆತಂಕವನ್ನುಂಟುಮಾಡುವ ಒಂದು “ಭೂಗೋಳಶಾಸ್ತ್ರದ ಬಿರುಕು” ಸುವ್ಯಕ್ತವಾಗಿದೆ ಎಂದು ಅಚೀವಿಂಗ್ ಹೆಲ್ತ್ ಫಾರ್ ಆಲ್ ಬೈ ದ ಯಿಯರ್ 2000 ಎಂಬ ಪುಸ್ತಕವು ಗಮನಿಸುತ್ತದೆ. ಹೀಗೆ, ಆಫ್ರಿಕ ಮತ್ತು ಏಷಿಯದ ಸುಮಾರು 40 ದೇಶಗಳಲ್ಲಿ ಆರೋಗ್ಯಾರೈಕೆಯು “ಲೋಕದ ಉಳಿದ ದೇಶಗಳೊಂದಿಗೆ ಸರಿಸಮನಾಗಿ ಮುಂದುವರಿಯುತ್ತಿಲ್ಲ.” ಆರೋಗ್ಯದ ಅಂತರವು ಬಹು ವಿಸ್ತಾರವಾಗಿದೆ ಮತ್ತು ಬೆಳೆಯುತ್ತಿದೆ.
ಬೆಳೆಯುತ್ತಿರುವ ಈ ಅಂತರಕ್ಕೆ ಅನೇಕ ಕಾರಣಗಳು ಇದ್ದಾಗ್ಯೂ, ನ್ಯೂನ ಆರೋಗ್ಯದ ಒಂದು ಪ್ರಮುಖ ಕಾರಣವು “ಬಡತನವಾಗಿದೆ” ಎಂದು ವರ್ಲ್ಡ್ ಹೆಲ್ತ್ ಪತ್ರಿಕೆ ಹೇಳುತ್ತದೆ. (ಹೋಲಿಸಿ ಜ್ಞಾನೋಕ್ತಿ 10:15.) ಅನೇಕವೇಳೆ ಬಡತನವು, ನೈರ್ಮಲ್ಯದ ಕೊರತೆ, ಸುರಕ್ಷಿತವಾದ ಮತ್ತು ಸಾಕಷ್ಟು ನೀರಿನ ಕೊರತೆ, ಮತ್ತು ವಿಪರೀತ ಸಂದಣಿಯ, ಇಕ್ಕಟ್ಟಿನ ಜೀವಿಸುವ ಪರಿಸ್ಥಿತಿಗಳಿಂದ ಗುರುತಿಸಲ್ಪಡುವ ಅಸಮರ್ಪಕವಾದ ವಸತಿಗೆ ಜನರನ್ನು ಗುರಿಮಾಡುತ್ತದೆ. ಈ ಮೂರು ಅಂಶಗಳು ಆರೋಗ್ಯವನ್ನು ಪ್ರತಿಬಂಧಿಸುತ್ತವೆ ಮಾತ್ರವಲ್ಲ, ವಾಸ್ತವವಾಗಿ ರೋಗವನ್ನು ಪ್ರವರ್ಧಿಸುತ್ತವೆ. ಇದರೊಂದಿಗೆ ಅಸ್ವಸ್ಥತೆಯ ವಿರುದ್ಧವಾದ ದೇಹದ ರಕ್ಷಣಾ ವ್ಯವಸ್ಥೆಗಳನ್ನು ದುರ್ಬಲಗೊಳಿಸುವ ನ್ಯೂನ ಪೋಷಣೆಯು ಇರುವುದಾದರೆ, ಮರಕ್ಕೆ ಗೆದ್ದಲುಗಳಿರುವಂತೆ ಆರೋಗ್ಯಕ್ಕೆ ಬಡತನವು ಹಾನಿಕರವಾಗಿರುವುದರ ಕಾರಣವನ್ನು ನೀವು ಅವಲೋಕಿಸಬಲ್ಲಿರಿ.
ಮಾರಕ ರೋಗಗಳು ವಾಸದ ಸ್ಥಳಗಳನ್ನು ಕಲುಷಿತಗೊಳಿಸಿ, ದೇಹಗಳನ್ನು ಅಂಗವಿಕಲಗೊಳಿಸಿ, ಮಕ್ಕಳನ್ನು ಕೊಲ್ಲುವಾಗ, ಬಡವರು ಅತ್ಯಂತ ಕಠಿನವಾದ ಹೊಡೆತವನ್ನು ಅನುಭವಿಸುತ್ತಾರೆ. ಕೆಲವು ಉದಾಹರಣೆಗಳನ್ನು ಗಮನಿಸಿರಿ. ದಕ್ಷಿಣ ಆಫ್ರಿಕದ ಬಡ ವಿಭಾಗಗಳಲ್ಲಿ ಕ್ಷಯ ರೋಗದ ಆಪಾತವು, ಅದೇ ರಾಷ್ಟ್ರದ ಉತ್ತಮ ಆದಾಯದ ಕ್ಷೇತ್ರಗಳಲ್ಲಿ ಇರುವುದಕ್ಕಿಂತಲೂ ಒಂದು ನೂರು ಪಾಲು ಹೆಚ್ಚು ಅಧಿಕವಾಗಿದೆ. ಬ್ರೆಸಿಲ್ನ ದರಿದ್ರ ಕ್ಷೇತ್ರಗಳಲ್ಲಿ, ಗಡಿನಾಡಿನ ಹೆಚ್ಚು ಶ್ರೀಮಂತ ನೆರೆಹೊರೆಗಳಿಗಿಂತಲೂ ಆರು ಪಾಲು ಹೆಚ್ಚು ಜನರು ನ್ಯುಮೋನಿಯ ಮತ್ತು ಇನ್ಫ್ಲುಯೆನ್ಸದಿಂದ ಸಾಯುತ್ತಿದ್ದಾರೆ. ಮತ್ತು ಭಾರತದ ಅತ್ಯಂತ ಧನಿಕ ಕುಟುಂಬಗಳ ಮಧ್ಯೆ ಸಾಯುತ್ತಿರುವ ಶಿಶುಗಳ ಸಂಖ್ಯೆಗಿಂತಲೂ, ಭಾರತದ ನಿರ್ಗತಿಕ ಕುಟುಂಬಗಳ ನಡುವೆ ಸಾಯುತ್ತಿರುವ ಶಿಶುಗಳ ಸಂಖ್ಯೆಯು ಹತ್ತು ಪಾಲು ಅಧಿಕವಾಗಿದೆ. ವೇದನಾಭರಿತ ವಾಸ್ತವಾಂಶವು ಹೆಚ್ಚು ವ್ಯಕ್ತವಾಗಿದೆ: ‘ಬಡತನವು ನಿಮ್ಮ ಆರೋಗ್ಯಕ್ಕೆ ಹಾನಿಕರ!’
100 ಕೋಟಿಗಿಂತಲೂ ಹೆಚ್ಚು ಭೌಗೋಲಿಕ ಹೊಲಸು ಕೇರಿ ನಿವಾಸಿಗಳು ಹತಾಶೆಯ ಭಾವನೆಯೊಂದಿಗೆ ಬಿಡಲ್ಪಟ್ಟಿರುವುದರಲ್ಲಿ ಆಶ್ಚರ್ಯವಿಲ್ಲ. ಬಡತನದ ಮೂಲಭೂತ ಕಾರಣಗಳು ಅವರ ಹತೋಟಿಯನ್ನು ಮೀರಿವೆ, ಮತ್ತು ಅಸ್ವಸ್ಥತೆಯ ಪರಿಣಾಮಗಳು ಅವರ ಜೀವನಗಳನ್ನು ಆಳುತ್ತವೆ. ಬಡತನದ ಅನಾರೋಗ್ಯಕರ ಪರಿಣಾಮಗಳನ್ನು ನೀವು ಅನುಭವಿಸುತ್ತಿರುವುದಾದರೆ, ಆರೋಗ್ಯ ಅಂತರದ ದುಃಖಾರ್ತ ಪಾರ್ಶ್ವದಲ್ಲಿ ಆಶಾರಹಿತವಾಗಿ ಸಿಕ್ಕಿಕೊಂಡಿರುವಂತೆ ನಿಮಗೂ ಅನಿಸಬಹುದು. ಆದರೂ, ಬಡವರಾಗಿರಲಿ ಇಲ್ಲದಿರಲಿ, ನಿಮ್ಮ ಮತ್ತು ಹಾಗೆಯೇ ನಿಮ್ಮ ಮಕ್ಕಳ ಆರೋಗ್ಯವನ್ನು ಸಂರಕ್ಷಿಸಲಿಕ್ಕಾಗಿ ನೀವು ತೆಗೆದುಕೊಳ್ಳಬಲ್ಲ ಕೆಲವು ಸೂಕ್ತ ಕ್ರಮಗಳಿವೆ. ಆ ಸೂಕ್ತಕ್ರಮಗಳು ಯಾವುವು? ಮುಂದಿನ ಲೇಖನವು ಕೆಲವು ಸಲಹೆಗಳನ್ನು ಒದಗಿಸುತ್ತದೆ.