ಜಗತ್ತನ್ನು ಗಮನಿಸುವುದು
ಶುನಕ “ಆತ್ಮಹತ್ಯಗಳ” ರಹಸ್ಯ
ರೊಜಾರಿಯೊ, ಆರ್ಜೆಂಟೀನದ ಜನರು, ಆ ನಗರದಲ್ಲಿ ಶುನಕ “ಆತ್ಮಹತ್ಯಗಳ” ಪ್ರಯತ್ನದ ಒಂದು ಅಲೆಯೆಂದು ತೋರಿಬರುವ ಸಂಗತಿಗೆ ಒಂದು ವಿಶ್ವಾಸಾರ್ಹ ವಿವರಣೆಯನ್ನು ಹುಡುಕುತ್ತಿದ್ದಾರೆ. ರೊಜಾರಿಯೊದ ಜನಪ್ರಿಯ ಉದ್ಯಾನವನವಾದ ಪಾರ್ಕೆ ಡೆ ಎಸ್ಪಾನ್ಯದಲ್ಲಿ ಪ್ರಧಾನವಾಗಿ ಈ ಸಮಸ್ಯೆಯನ್ನು ಪ್ರೇಕ್ಷಿಸಲಾಗಿದೆ. ಆ ಉದ್ಯಾನದಲ್ಲಿ ಒಂದು ವಿಹಾರಪಥ ಪಾರನಾ ನದಿಯ ಮೇಲ್ಗಡೆ ಸುಮಾರು 27 ಮೀಟರ್ ಚಾಚಿರುತ್ತದೆ. ಒಂದು ವರ್ಷಕ್ಕೂ ಹೆಚ್ಚಿನ ಕಾಲಾವಧಿಯಲ್ಲಿ, ನಾಯಿಗಳು ಫಕ್ಕನೆ ತಮ್ಮ ಯಜಮಾನರಿಂದ ತಮ್ಮನ್ನು ಸೆಳೆದುಕೊಂಡು, ಆ ವಿಹಾರಪಥದ ಅಂಚಿಗೆ ಓಡಿ ಬಹುಮಟ್ಟಿಗೆ ನಿಶ್ಚಿತ ಮರಣಕ್ಕೆ ಹಾರಿದ ಸುಮಾರು 50 ಉದಾಹರಣೆಗಳಿವೆ. ಆದರೆ ಪರಿಣತರಿಗನುಸಾರ, ತಮ್ಮನ್ನು ಕೊಂದುಕೊಳ್ಳಲು ನಿಶ್ಚಯಿಸುವ ಸಾಮರ್ಥ್ಯ ನಾಯಿಗಳಿಗಿಲ್ಲ. ಬದಲಾಗಿ, ನಾಯಿಗಳು ಶಬ್ದಾತೀತಗಳಿಂದ ಅಥವಾ ನದಿಯಲ್ಲಿ ಪಕ್ಷಿಗಳ ಅಥವಾ ದೋಣಿಗಳ ಚಲನೆಯಿಂದ ಆಕರ್ಷಿಸಲ್ಪಡುತ್ತವೆ ಎಂದು ಪಶುಚಿಕಿತ್ಸರ ಅಭಿಪ್ರಾಯ. ಅವು ಅಂಚಿಗೆ ಧಾವಿಸುತ್ತವೆ, ಆದರೆ ಅದನ್ನು ಗ್ರಹಿಸುವ ಮೊದಲೇ ಬಿರುಕಿನೊಳಗೆ ಬಿದ್ದು ಬಿಡುತ್ತವೆ. (g95 2⁄22)
ವಾರಸುದಾರರಿಲ್ಲದ ಪ್ರಯಾಣಿಕರ ಸಾಮಾನುಗಳು
ಅಮೆರಿಕದ ದೊಡ್ಡ ವಿಮಾನ ಕಂಪೆನಿಗಳ ಸಂಗಡ ಬಿಟ್ಟುಹೋಗಿರುವ ವಾರಸುದಾರರಿಲ್ಲದ ಸಾಮಾನಿಗೆ ಏನು ಸಂಭವಿಸುತ್ತದೆ? ಅದನ್ನು ಅನ್‌ಕ್ಲೇಮ್ಡ್ ಬ್ಯಾಗೆಜ್ ಸೆಂಟರ್ ಎಂದು ಕರೆಯಲ್ಪಡುವ ಸ್ಕಾಟ್ಸ್‌ಬರ, ಅ್ಯಲಬಾಮ, ಕಂಪೆನಿಗೆ ಮಾರಲಾಗುತ್ತದೆ. ಅಲ್ಲಿ ಅದನ್ನು ತೆರೆದು, ಶುಚಿಮಾಡಿ, ಹಣವಿದೆಯೊ ಎಂದು ನೋಡಿ, ಬಳಿಕ ಸಾರ್ವಜನಿಕರಿಗೆ ಪುನಃ ಮಾರಲಾಗುತ್ತದೆ. ದ ವಾಲ್ ಸ್ಟ್ರೀಟ್ ಜರ್ನಲ್ ಹೇಳುವುದು: “ವಾರಸುದಾರರಿಲ್ಲದ ಸಾಮಾನಿನೊಳಗೆ ಹಾಕುವ ಒಂದು ನೋಟವು, ಅತಿ ಭರವಸೆಯ ವಿಮಾನ ಪ್ರಯಾಣಿಕನೂ ತಾನು ಸ್ವತಃ ಹೊತ್ತುಕೊಂಡು ಹೋಗುವ ಸಾಮಾನಿಗೆ ಅಂಟಿಕೊಳ್ಳಲು ಪರಿವರ್ತನೆ ಹೊಂದುವಂತೆ ಮಾಡಲು ಸಾಕಾಗುತ್ತದೆ. ನಾಲ್ಕು ಭಾರಿ ಗಾತ್ರದ ವ್ಯಾಪಾರ ಮಹಡಿಗಳಲ್ಲಿ ತುಪ್ಪುಳು ಕೋಟು ಮತ್ತು ಮೀನು ಹಿಡಿಯುವ ಗಾಳದಿಂದ ಹಿಡಿದು ಟಿ-ಷರ್ಟು ಮತ್ತು ಕ್ಯಾಮರದ ತನಕ ಸಕಲವೂ ಇವೆ. . . . ಟೋಸ್ಟರುಗಳು, ಶೃಂಗಾರ ಸಾಧನಗಳು, ಮೂಸ್ ಕಡವೆಯ ಕೊಂಬುಗಳು, ಹಂಗೆರಿಯನ್ ಜಾನಪದ ಗೀತೆಯ ಟೇಪುಗಳು ಮತ್ತು ಒಂದು ಹೆಣದ ಪೆಟ್ಟಿಗೆಯನ್ನು ಸಹ ನೀವು ಕಾಣಬಲ್ಲಿರಿ.” ವಿಮಾನ ಕಂಪೆನಿಗಳು ದಿನಕ್ಕೆ ಸುಮಾರು 20 ಲಕ್ಷ ಸಾಮಾನುಗಳನ್ನು ರವಾನಿಸುತ್ತವೆ, ಮತ್ತು ಅವರು ಅವುಗಳಲ್ಲಿ 10,000ದಿಂದ 20,000ವನ್ನು ತಪ್ಪು ಸ್ಥಳಗಳಿಗೆ ಕಳುಹಿಸಿ, ಯಾ ತಪ್ಪು ಸ್ಥಳದಲ್ಲಿಟ್ಟರೂ 200ಕ್ಕಿಂತಲೂ ಕಡಮೆ ಸಾಮಾನುಗಳು ಅವುಗಳ ಧಣಿಗಳಿಗೆ ಹೋಗಿ ಸೇರುವುದಿಲ್ಲ. ಪ್ರಯಾಣಿಕರು ತಮ್ಮ ಕಳೆದುಹೋದ ಸಾಮಾನನ್ನು ಕೇಳಿ ಪಡೆಯಲು ಅವರಿಗೆ ಮೂರು ತಿಂಗಳುಗಳನ್ನು ಕೊಡಲಾಗುತ್ತದೆ. ಇದಾದ ಬಳಿಕ ಅವುಗಳನ್ನು ವಾರಸುದಾರರಿಲ್ಲದ ಬ್ಯಾಗೆಜ್ ಸೆಂಟರಿಗೆ ಮಾರಲು ಕಳುಹಿಸಲಾಗುತ್ತದೆ. “ತಾವು ಸ್ಕಾಟ್ಸ್‌ಬರಕ್ಕೆ ಕಳುಹಿಸಿದ ಸಾಮಾನುಗಳ ಧಣಿಗಳನ್ನು ತಮಗೆ ಕಂಡುಹಿಡಿಯಸಾಧ್ಯವಾಗುವುದಿಲ್ಲವೆಂದು ವಿಮಾನ ಕಂಪೆನಿಗಳು ಹೇಳುವಾಗ, ತಾವು ಸಾಮಾನನ್ನು ಮಾರಲು ಹಾಕುವ ಮೊದಲು ಅದರಿಂದ ಹೆಸರು ಮತ್ತು ವಿಳಾಸಗಳನ್ನು ಸುಲಿದು, ಕೆರೆಯುವುದರಲ್ಲಿ ತಾಸುಗಳನ್ನು ಕಳೆಯುತ್ತೇವೆಂದು ಅಲ್ಲಿಯ ಕಾರಕೂನರು ಹೇಳುತ್ತಾರೆ,” ಎನ್ನುತ್ತದೆ ಜರ್ನಲ್. (g95 2⁄22)
ಬೇಸಾಯ ಮಾಡುವುದರಲ್ಲಿ ಆರೋಗ್ಯ ಅಪಾಯಗಳು
ಅಣಬೆನಾಶಕ, ಮೂಲಿಕೆನಾಶಕ ಮತ್ತು ಕೀಟನಾಶಕಗಳು ಬೇಸಾಯಗಾರರು ತಮ್ಮ ಬೆಳೆಗಳ ನಷ್ಟವನ್ನು ಕಡಮೆಮಾಡುವಂತೆ ಸಹಾಯ ಮಾಡಿವೆ. ಆದರೆ ಅಂತಾರಾಷ್ಟ್ರೀಯ ಶ್ರಮಿಕ ಸಂಘದ ಒಂದು ವರದಿ ಹೇಳುವುದೇನಂದರೆ, ವ್ಯಾವಸಾಯಿಕ ರಸಾಯನ ವಸ್ತುಗಳು ಪ್ರತಿ ವರ್ಷ ಸುಮಾರು 40,000 ಬೇಸಾಯದ ಕೆಲಸಗಾರರ ಮರಣಕ್ಕೆ ನೇರವಾಗಿ ಕಾರಣವಾಗುತ್ತವೆ. ಈ ರಾಸಾಯನಿಕಗಳು ಇನ್ನು 35ರಿಂದ 50 ಲಕ್ಷ ವ್ಯಕ್ತಿಗಳ ಆರೋಗ್ಯವನ್ನು ಗುರುತರವಾಗಿ ಬಾಧಿಸುತ್ತವೆ ಎಂದು ಅಂದಾಜು ಮಾಡಲಾಗುತ್ತದೆ. (g95 2⁄22)
ಭೌಗೋಳಿಕ ಅಸುರಕ್ಷಿತತೆ
ಮಾರ್ಚ್ 1995ರಲ್ಲಿ ಬರಲಿರುವ ಸಾಮಾಜಿಕ ವಿಕಸನಗಳ ಜಾಗತಿಕ ಶೃಂಗ ಸಭೆಯ ಸಂಬಂಧದಲ್ಲಿ ಯುಎನ್‌ಡಿಪಿ (ಸಂಯುಕ್ತ ರಾಷ್ಟ್ರಗಳ ವಿಕಸನ ಕಾರ್ಯಕ್ರಮ) ಮಾನವ ಸುರಕ್ಷಿತತೆಯ ಕುರಿತು ಚಿಂತೆಯನ್ನು ವ್ಯಕ್ತಪಡಿಸುವ ಒಂದು ವಾರ್ತಾಪತ್ರವನ್ನು ಹೊರಡಿಸಿತು. ಈ ವಾರ್ತಾಪತ್ರವು, ಹ್ಯೂಮನ್ ಡೆವಲಪ್‌ಮೆಂಟ್ ರಿಪೋರ್ಟ್ 1994 ಎಂಬುದರ ಮೇಲೆ ತನ್ನ ವರದಿಯನ್ನು ಆಧಾರಿಸುತ್ತಾ ಗಮನಿಸುವುದು: “ಈ ಶತಮಾನದ ಆದಿಯಲ್ಲಿ ಯುದ್ಧಗಳ ಸಾವುನೋವುಗಳಲ್ಲಿ ಸುಮಾರು 90 ಪ್ರತಿಶತ ಯೋಧರದ್ದಾಗಿತ್ತು. ಇಂದು, ಸುಮಾರು 90 ಪ್ರತಿಶತ, ಅಯೋಧರದ್ದು—ಸಮತೂಕದಲ್ಲಿ ವಿಪತ್ಕಾರಕ ಬದಲಾವಣೆ.” ನೀವು ಎಲಿಯ್ಲೇ ಬದುಕಿರಿ, ಮಾನವ ಸುರಕ್ಷೆಯು ಬೆದರಿಕೆಗೊಳಗಾಗಿದೆ ಎಂಬುದನ್ನು ಯುಎನ್‌ಡಿಪಿ ಒಪ್ಪಿಕೊಳ್ಳುತ್ತದೆ. ಹ್ಯೂಮನ್ ಡೆವಲಪ್‌ಮೆಂಟ್ ರಿಪೋರ್ಟ್ ಕೂಡಿಸಿ ಹೇಳುವುದು: “ಬರಗಳು, ಜಾತೀಯ ಘರ್ಷಣೆಗಳು, ಸಾಮಾಜಿಕ ಛಿನ್ನಭಿನ್ನತೆ, ಭಯವಾದ, ಮಾಲಿನ್ಯ ಮತ್ತು ಅಮಲೌಷಧ ವ್ಯಾಪಾರ—ಇವುಗಳು ರಾಷ್ಟ್ರೀಯ ಮೇರೆಗಳೊಳಗೆ ಯಾವಾಗಲೊ ಒಮ್ಮೆ ಆಗುವ ವಿಷಯಗಳಲ್ಲ. ಅವುಗಳ ಪರಿಣಾಮಗಳು ಭೂಗೋಳವನ್ನು ಸುತ್ತುತ್ತವೆ.” (g95 2⁄22)
ಜ್ಯಾಕ್‌ಪಾಟ್ ಬಹುಮಾನ ಹಣದ ಪುಣ್ಯಕ್ಷೇತ್ರ
ದಕ್ಷಿಣ ಜಪಾನಿನಲ್ಲಿ ಸಾಪೇಕ್ಷವಾಗಿ ಅಜ್ಞಾತವಾಗಿದ್ದ ಒಂದು ಚಿಕ್ಕ ದ್ವೀಪ, ಸ್ಥಳಿಕ ಶಿಂಟೊ ಪುಣ್ಯಕ್ಷೇತ್ರದ ಹೆಸರಿನ ಫಲವಾಗಿ ಥಟ್ಟನೆ ಪ್ರಸಿದ್ಧವಾಗಿದೆ. ಹೋಟೊ ಎಂಬ ಅದರ ಹೆಸರಿನ ಅರ್ಥವು “ನಿಧಿಯನ್ನು ಕಂಡುಹಿಡಿ” ಎಂದಾಗಿದೆ ಮತ್ತು ಒಂದು ಪೌರ ಉತ್ತೇಜನ ಗುಂಪು ಇದನ್ನು ಉಪಯೋಗಿಸುತ್ತ ತಮ್ಮ ಅತ್ಯಂತ ಮಹಾ ನಿರೀಕ್ಷಣೆಗಳಿಗಿಂತಲೂ ಹೆಚ್ಚಿನ ಫಲಿತಾಂಶಗಳನ್ನು ಪಡೆದಿದೆ. ಆ ಪುಣ್ಯಕ್ಷೇತ್ರವು, ಜನರು ತಮ್ಮ ಲಾಟರಿ ಟಿಕೆಟುಗಳನ್ನು ಹಾಕಲು ಚೀಲಗಳನ್ನು ಮಾರುವಂತೆ ಅವರು ಏರ್ಪಡಿಸಿದರು. ಈ ಪುಣ್ಯಕ್ಷೇತ್ರದಲ್ಲಿ ಕೊಂಡುಕೊಳ್ಳಲಾಗುವ “ಅದೃಷ್ಟದ ಚೀಲಗಳು” ಲಾಟರಿಯಲ್ಲಿ ಭಾಗ್ಯದ ಖಾತರಿಯನ್ನು ಕೊಡುತ್ತವೆ ಎಂದು ಅವರು ಹೇಳಿದರು. ಅಂದಿನಿಂದ, “ಲಾಟರಿಯಲ್ಲಿ ಹೆಚ್ಚು ಹಣ ಗಳಿಸಲಿಕ್ಕಾಗಿ ಜನರು ದೊಡ್ಡ ಗುಂಪುಗಳಾಗಿ ಈ ಹೋಟೊ ಪುಣ್ಯಕ್ಷೇತ್ರಕ್ಕೆ ಇಳಿದು ಬರುತ್ತಿದ್ದಾರೆ,” ಎನ್ನುತ್ತದೆ ಆಸಾಹಿ ಈವ್ನಿಂಗ್ ನ್ಯೂಸ್. ಆದರೆ ಜ್ಯಾಕ್‌ಪಾಟ್ ಬಹುಮಾನದ ಹಣವನ್ನು ಪಡೆದಿರುವವರು ಈ “ಗುಂಪುಗಳು” ಅಲ್ಲ, ಬದಲಾಗಿ ಪ್ರತಿಯೊಂದು ಚೀಲವನ್ನು 10 ಮತ್ತು 30 ಡಾಲರುಗಳಿಗೆ ಮಾರುವ ಪುಣ್ಯಕ್ಷೇತ್ರವೇ. (g95 2⁄22)
ಅತ್ಯಂತ ಹಳೆಯ ನೆಲಗಟ್ಟಿನ ದಾರಿ ಈಜಿಪ್ಟ್‌ನಲ್ಲಿ
ಸಂಶೋಧಕ ಭೂವಿಜ್ಞಾನಿಗಳು ಕೈರೋ ನಗರದ 69 ಕಿಲೊಮೀಟರ್‌ಗಳಷ್ಟು ನೈರುತ್ಯಕ್ಕೆ ಮರುಭೂಮಿಯ ಆಚೆಕಡೆ 12 ಕಿಲೊಮೀಟರ್ ನೆಲಗಟ್ಟಿನ ದಾರಿಯನ್ನು ಪತ್ತೆಮಾಡಿದ್ದಾರೆ. ಈ ಹಳೆಯ ದಾರಿಯು, ಸುಣ್ಣುಕಲ್ಲು, ಮರಳುಗಲ್ಲು, ಮತ್ತು ಕಲ್ಲಾಗಿಸಿದ ಮರದ ಚಪ್ಪಡಿಯಿಂದ ನೆಲಗಟ್ಟು ಮಾಡಲ್ಪಟ್ಟಿದ್ದು, ಸುಮಾರು ಸಾ.ಶ.ಪೂ. 2600ರಿಂದ 2200ಕ್ಕೆ ಸೇರಿದ್ದೆಂದು ಹಳೆಯ ರಾಜ್ಯದ ಕಾಲಾವಧಿಯಲ್ಲಿ ಕಾಲನಿರ್ದೇಶ ಮಾಡಲಾಗಿತ್ತು. ಅದು ಸರಾಸರಿ ಎರಡು ಮೀಟರ್‌ಗಳಷ್ಟು ಅಗಲವಿದೆ. ಒಂದು ದೊಡ್ಡ ಬಾಸ್ಟಾಲ್ (ಅಗ್ನಿಶಿಲೆ) ಕಲ್ಲು ಗಣಿಯಿಂದ, ಪ್ರವಾಹದ ಮಟ್ಟದ ಬಳಿ ನೈಲ್ ನದಿಗೆ ಸೇರಿಕೊಂಡಿದ್ದ ಪುರಾತನ ಸರೋವರದ ತೀರದ ವರೆಗೆ ಭಾರವಾದ ಕಲ್ಲುಗಳ ಸಾಗಣೆಯನ್ನು ಸರಾಗ ಮಾಡಲಿಕ್ಕಾಗಿ ಈ ದಾರಿಯು ನಿರ್ಮಿಸಲ್ಪಟ್ಟಿತ್ತು. ಸರೋವರವು ಈಗ ಅಸ್ತಿತ್ವದಲ್ಲಿಲ್ಲ. ಕಪ್ಪು ಶಿಲೆಗಳು ಐಗುಪ್ತದ ಪುರಾತನ ಅರಸರಿಂದ ಅವರ ಕಲ್ಲಿನ ಶವ ಸಂಪುಟಗಳಿಗಾಗಿ ಮತ್ತು ಗಿಜಾ ಶವಸ್ಥಾಪನೆಯ ದೇವಾಲಯಗಳೊಳಗೆ ನೆಲಗಟ್ಟು ಮಾಡಲಿಕ್ಕಾಗಿ ಮೆಚ್ಚಲ್ಪಟ್ಟವು. “ಪುರಾತನ ಐಗುಪ್ತ್ಯಕ್ಕೆ ಸೇರಿದ್ದೆಂದು ನೀವು ಹೇಳಬಲ್ಲ ಈ ನೆಲಗಟ್ಟಿನ ದಾರಿಯು ಯಂತ್ರ ಕಲಾಶಾಸ್ತ್ರದ ಇನ್ನೊಂದು ವಿಜಯವಾಗಿದೆ” ಎಂದು ಭೂವಿಜ್ಞಾನದ ಪ್ರೊಫೆಸರರಾದ ಡಾ. ಜೇಮ್ಸ್ ಎ. ಹಾರೆಲ್ ಹೇಳಿದರು. ಕ್ರೀಟ್‌ನಲ್ಲಿರುವ ಕಲ್ಲುಚಪ್ಪಡಿಯ ದಾರಿಯೊಂದು, ಸಾ.ಶ.ಪೂ. 2000ಕ್ಕಿಂತಲೂ ಹಿಂದಿನದ್ದೆಂದು ಕಾಲನಿರ್ದೇಶ ಮಾಡಲಾಗಿದ್ದು, ಪೂರ್ವದ ಅತ್ಯಂತ ಹಳೆಯ ನೆಲಗಟ್ಟಿನ ದಾರಿಯಾಗಿ ಪ್ರಸಿದ್ಧವಾಗಿತ್ತು. (g95 2⁄22)
ಆಶೀರ್ವಾದಗಳು ಮಾರಾಟಕ್ಕಿವೆ
ನಿಧಿಗಳ ತೀವ್ರವಾದ ಕೊರತೆಯನ್ನು ಎದುರಿಸುತ್ತಿರುವುದರಿಂದ, ರಷ್ಯನ್ ಆರ್ತೊಡಾಕ್ಸ್ ಚರ್ಚಿನ ಅನೇಕ ಪಾದ್ರಿಗಳು ಆಶೀರ್ವಾದಗಳನ್ನು ಮಾರಲು ತೊಡಗಿದ್ದಾರೆ, ಆದರೂ ಈ ವ್ಯಾಪಾರದ ಬಹಿರಂಗ ಸ್ಥಿತಿಯೊಂದಿಗೆ ಎಲ್ಲ ಪಾದ್ರಿಗಳು ಸಮ್ಮತಿಸುವುದಿಲ್ಲ. ರಷ್ಯನ್ ಆರ್ತೊಡಾಕ್ಸ್ ಪಾದ್ರಿಯೊಬ್ಬನು ಹೀಗೆ ಹೇಳುವುದನ್ನು ದ ಮಾಸ್ಕೊ ಟೈಮ್ಸ್ ಉದ್ಧರಿಸುತ್ತದೆ: “ಜೀರ್ಣೋದ್ಧಾರ ಕಾರ್ಯಕ್ಕಾಗಿ ಅನೇಕ ಚರ್ಚುಗಳಿಗೆ ಹಣವು ಬಹಳ ಅಗತ್ಯವಾಗಿ ಬೇಕಾಗಿದೆ.” ಆದುದರಿಂದ ಅಂಗಡಿಗಳು, ವಾಸದ ಮಹಡಿಗಳು, ಬಾರ್‌ಗಳು ಮತ್ತು ವಿನೋದ ಮಂದಿರಗಳನ್ನು ಆಶೀರ್ವದಿಸಲಿಕ್ಕಾಗಿ ಪಾದ್ರಿಗಳು ಹಣವನ್ನು ಕೇಳುತ್ತಾರೆ. ಆಶೀರ್ವಾದಗಳನ್ನು ಪಡೆದುಕೊಳ್ಳಲು ಕಾರ್‌ಗಳು ಸಹ ಬರುತ್ತವೆ. ಬಳಸಿದ ಕಾರ್‌ಗಳ ಮಾರುಕಟ್ಟೆಯ ಬಳಿ ಕೆಲಸ ಮಾಡುತ್ತಾ, ಪಾದ್ರಿಯೊಬ್ಬನು, ಕಾರ್‌ನ ಬ್ರ್ಯಾಂಡ್‌ನ ಮೇಲೆ ಆಧಾರಿಸಿ, ಪ್ರಾರ್ಥನೆಗಳು, ಧೂಪಹಾಕುವಿಕೆ, ಮತ್ತು “ಪವಿತ್ರ ಜಲ”ದ ಚಿಮುಕಿಸುವಿಕೆಯನ್ನು ಒಳಗೂಡುವ ಆಶೀರ್ವಾದಗಳಿಗಾಗಿ, 30,000ದಿಂದ 50,000 ರೂಬಲ್‌ಗಳ ವರೆಗೆ ಚಾರ್ಜ್ ಮಾಡುತ್ತಾನೆ. (g95 3⁄8)
ಪ್ರಾಣಿಗಳು ಅವನತಿಹೊಂದುತ್ತಿವೆ
ಪ್ರಪಂಚದಲ್ಲಿಯೆ ಕಪ್ಪು ಖಡ್ಗಮೃಗಗಳನ್ನು ಅತ್ಯಧಿಕ ಸಂಖ್ಯೆಯಲ್ಲಿ ಹೊಂದಿದೆಯೆಂದು ಜಿಂಬಾಬ್ವೆ ಒಂದು ಕಾಲದಲ್ಲಿ ಹೆಮ್ಮೆಪಡುತ್ತಿತ್ತು. ಆದರೆ ಆ ಸಂಖ್ಯೆಯು 1980ರಲ್ಲಿ ಸುಮಾರು 3,000ದಿಂದ ಈಗ ಹೆಚ್ಚುಕಡಿಮೆ 300ರ ವರೆಗೆ ಕಡಿಮೆಯಾಗಿದೆ ಎಂದು ಜೊಹಾನೆಸ್‌ಬರ್ಗ್‌ನ ವಾರ್ತಾಪತ್ರಿಕೆಯಾದ ದ ಸ್ಟಾರ್ ವರದಿ ಮಾಡುತ್ತದೆ. ಕಳ್ಳ ಬೇಟೆಗಾರರು ಅವುಗಳ ಅಮೂಲ್ಯ ಕೋಡುಗಳಿಗಾಗಿ ಆ ಪ್ರಾಣಿಗಳ ಬೇಟೆಯಾಡುವುದನ್ನು ಮುಂದುವರಿಸುತ್ತಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ, ಕಳ್ಳ ಬೇಟೆಗಾರರನ್ನು ಕೊಲ್ಲುವಂತಹ ಅಧಿಕಾರವನ್ನು ಉದ್ಯಾನವನಗಳ ಇಲಾಖೆಯ ಅಧಿಕಾರಿಗಳಿಗೆ ಕೊಟ್ಟಂತಹ ಕಟ್ಟುನಿಟ್ಟಿನ ಕಾನೂನನ್ನು ಸರಕಾರವು ಆಚರಣೆಗೆ ತಂದಿತು. ಸಮಸ್ಯೆ ಏನೆಂದರೆ, ಖಡ್ಗಮೃಗಗಳ ಪ್ರದೇಶಗಳ ಪರಿಣಾಮಕಾರಿಯಾದ ಕಾವಲಿಗಾಗಿ ರಾಷ್ಟ್ರೀಯ ಉದ್ಯಾನವನಗಳಿಗೆ ಮತ್ತು ವನ್ಯಜೀವಿ ಇಲಾಖೆಗೆ ಸಾಕಷ್ಟು ನಿಧಿಯನ್ನು ಸರಬರಾಯಿ ಮಾಡಲು ಸರಕಾರವು ಅಶಕ್ತವಾಗಿರುವುದೇ. ಕದ್ದು ಬೇಟೆಯಾಡುವುದರಿಂದ “ಕಳೆದ ದಶಕದಲ್ಲಿ ಜಿಂಬಾಬೆಯ್ವ ಆನೆ ಸಂಖ್ಯೆಯು 80000ದಿಂದ ಸುಮಾರು 60000ಕ್ಕೆ [ಇಳಿದಿದೆ]” ಎಂದು ದ ಸ್ಟಾರ್ ವರದಿ ಮಾಡುತ್ತದೆ. (g95 3⁄8)
ವರ್ಲ್ಡ್ ಕಪ್ ಮತ್ತು ದೇವರು
“[ಬ್ರೆಜಿಲ್]ನ ನಾಲ್ಕನೇ [ಕಾಲ್ಚೆಂಡಾಟ] ವರ್ಲ್ಡ್ ಕಪ್ಪನ್ನು ಗೆಲ್ಲುವ ಹೋರಾಟದಲ್ಲಿ, ಎಲ್ಲ ರೀತಿಯ ಧಾರ್ಮಿಕ ಪ್ರದರ್ಶನಗಳು ನ್ಯಾಯಸಮ್ಮತವೆಂದೆಣಿಸಲ್ಪಡುತ್ತವೆ” ಎಂದು ಜಾರ್ನೆಲ್ ಡಾ ಟಾರ್ಡ ವರದಿ ಮಾಡುತ್ತದೆ. “ಸ್ಪರ್ಧೆಗಳ ಮೊದಲು, ಸ್ಪರ್ಧೆಗಳ ಸಮಯದಲ್ಲಿ, ಮತ್ತು ಬಳಿಕ ಮತಸಂಸ್ಕಾರಗಳು ಆಚರಿಸಲ್ಪಡುತ್ತವೆ.” ಬ್ರೆಜಿಲ್‌ನ ಬೆಬೆಟೊ ಪ್ರತಿಪಾದಿಸಿದ್ದು: “ಈ ವರ್ಲ್ಡ್ ಕಪ್‌ನಲ್ಲಿ [ದೇವರು] ಬ್ರೆಜಿಲ್‌ನ ತಂಡಕ್ಕೆ ಅನುಗ್ರಹ ನೀಡುವನೆಂದು ನನಗೆ ಖಾತ್ರಿ ಇದೆ.” ಪಂದ್ಯದ ಬಳಿಕ, ಆಟಗಾರರು ವಿಜಯಕ್ಕೆ ದೇವರು ಕಾರಣನೆಂದು ಹೇಳಿದ್ದನ್ನು ಗಮನಿಸುತ್ತಾ, ಕಾರ್ಡಿನಲ್ ಡಾಮ್ ಲೂಕಾಸ್ ಮೊರೇರ ನೆವೆಸ್ ಬರೆದದ್ದು: “ಅನೇಕ ಜನರಿಗೆ, ವರ್ಲ್ಡ್ ಕಪ್‌ನ ಗೆಲ್ಲುವಿಕೆಯು ವೈಯಕ್ತಿಕ, ಕೌಟುಂಬಿಕ, ಅಥವಾ ಸಾಮಾಜಿಕ ಮೌಲ್ಯವನ್ನು ಹೊಂದಿರಬಹುದು . . . .; ಆತ್ಮಾಭಿಮಾನದ ಮತ್ತು ಆತ್ಮ ವಿಶ್ವಾಸದ ಪುನರುಜ್ಜೀವನವಾಗಿರಬಹುದು; ಅನೇಕ ವೇದನೆಗಳ ಮಧ್ಯೆ ಸಂತೈಸುವಿಕೆಯಾಗಿರಬಹುದು; ಮತ್ತು ನಿರ್ಜನಗೊಂಡ ದೇಶವೊಂದಕ್ಕೆ ವಿರೇಚನ [ಶುದ್ಧಿಮಾಡುವಿಕೆ]ವಾಗಿರಲೂ ಬಹುದು.” ಆದರೂ ಆಸಕ್ತಿಭರಿತವಾಗಿಯೆ, ಕಾಲ್ಚೆಂಡಾಟದ ಸ್ಟಾರ್ ಮೌರು ಸಿಲ್ವ ಹೇಳಿದ್ದು: “ಬ್ರೆಜಿಲ್‌ನ ತಂಡದ ಕೆಲವು ಆಟಗಾರರಿಗೆ ವ್ಯತಿರಿಕ್ತವಾಗಿ, ವರ್ಲ್ಡ್ ಚ್ಯಾಂಪಿಯನ್ ಪಟ್ಟವನ್ನು ನಾವು ಗೆಲ್ಲಲಿಕ್ಕಾಗಿ ದೇವರು ಸಹಾಯ ಮಾಡಿದನೆಂದು ನಾನು ನಂಬುವುದಿಲ್ಲ. ದೇವರು ಪಕ್ಷಪಾತಿಯಲ್ಲ, ಮತ್ತು ಕಾಲ್ಚೆಂಡಾಟದ ಕುರಿತು ಸಹ ಆತನು ಕಡಿಮೆ ಹಿತಾಸಕ್ತಿಯುಳ್ಳವನಾಗಿದ್ದಾನೆ.” (g95 3⁄8)
ಟ್ರಕ್ಕಿನವರಿಂದ ಏಯ್ಡ್ಸ್‌ನ ಹಬ್ಬಿಗೆ
ಭಾರತದಲ್ಲಿ ಟ್ರಕ್ ಡ್ರೈವರ್‌ಗಳು ಏಯ್ಡ್ಸ್ ರೋಗಾಣು (ಏಚ್‌ಐವಿ)ವನ್ನು ತಗಲಿಸಿಕೊಳ್ಳುವ ಅತ್ಯಂತ ಅಪಾಯಕರ ಗುಂಪಾಗಿ ಪರಿಗಣಿಸಲ್ಪಡುತ್ತಾರೆ. ತಮ್ಮ ಕುಟುಂಬಗಳಿಂದ ದೀರ್ಘಕಾಲಾವಧಿಗಳನ್ನು ಹೊರಗೆ ಕಳೆಯುತ್ತಾ, ಸಾವಿರಾರು ಡ್ರೈವರ್‌ಗಳು ಮುಂಬಯಿಯ ವೇಶ್ಯಾಗೃಹಗಳಿಗೆ ಆಗಿಂದಾಗ್ಗೆ ಹೋಗುತ್ತಿದ್ದು, ಅಲ್ಲಿ ಕೆಲಸ ಮಾಡುವ 80,000 ವೇಶ್ಯೆಯರಲ್ಲಿ ಸುಮಾರು 50ರಿಂದ 60 ಪ್ರತಿಶತ ಮಂದಿ ಏಚ್‌ಐವಿ ಪಾಸಿಟಿವ್ ರೋಗಾಣುವನ್ನು ಹೊಂದಿರಬಹುದೆಂದು ಅಂದಾಜು ಸಂಖ್ಯೆಗಳು ಸೂಚಿಸುತ್ತವೆ. ಮುಂಬಯಿಯಿಂದ ಟ್ರಕ್ಕಿನವರು ಇಡೀ ದೇಶವನ್ನು ಆವರಿಸುತ್ತಾರೆ. ಹೆದ್ದಾರಿಗಳ ಸಮೀಪದ ಕೆಲವು ಹಳ್ಳಿಗಳು, ಅಲ್ಲಿ ಹಳ್ಳಿಯ ಹುಡುಗಿಯರು ಟ್ರಕ್ ಡ್ರೈವರ್‌ಗಳೊಂದಿಗೆ ಲೈಂಗಿಕತೆಯನ್ನು ನಡೆಸಿ ಹಣವನ್ನು ಸಂಪಾದಿಸುವ ಗುಡಿಸಿಲುಗಳ ಸಾಲುಗಳನ್ನು ಒದಗಿಸುತ್ತವೆ. ಇವೇ ಕ್ಷೇತ್ರಗಳು ಸಮೀಪದ ನಗರಗಳ ಐಶ್ವರ್ಯವಂತರಾದ ಯೌವನಸ್ಥರಿಂದಲೂ ಆಗಿಂದಾಗ್ಗೆ ಭೇಟಿಮಾಡಲ್ಪಡುತ್ತವೆ ಮತ್ತು ದ ಟೈಮ್ಸ್ ಆಫ್ ಇಂಡಿಯದಲ್ಲಿ ಹೇಳಲ್ಪಟ್ಟಿರುವಂತೆ, ಇದು “ಸೋಂಕುವಾಹಕಗಳ ಜಟಿಲವಾದ ಮತ್ತು ಕಂಡುಹಿಡಿಯಲಸಾಧ್ಯವಾದ ಸರಣಿಯನ್ನು ಸ್ಥಾಪಿಸುತ್ತದೆ.” ಸಮಸ್ಯೆಯನ್ನು ವರ್ಧಿಸುತ್ತಾ, ಅಧಿಕ ಉಷ್ಟಾಂಶಗಳಲ್ಲಿ ದೀರ್ಘ ತಾಸುಗಳ ವರೆಗೆ ವಾಹನವನ್ನು ನಡೆಸುವಾಗ, ತಮ್ಮ ದೇಹಗಳನ್ನು ತಂಪಾಗಿರಿಸಲಿಕ್ಕಾಗಿ ಲೈಂಗಿಕತೆಯ ಅಗತ್ಯವಿದೆ ಎಂದು ಅನೇಕ ಟ್ರಕ್ ಡ್ರೈವರ್‌ಗಳು ಮೂಢನಂಬಿಕೆಯಿಂದ ನಂಬುತ್ತಾರೆ. (g95 3⁄8)